Wednesday, May 10, 2006

Mind what you hate!

ನಾನು ಕನ್ನಡವನ್ನ ಪ್ರೀತಿಸತೊಡಗಿದ್ದು ಕರ್ನಾಟಕವನ್ನು ಬಿಟ್ಟ ಮೇಲೆಯೇ ಎಂದೇ ಹೇಳಬಹುದು, ಏಕೆಂದರೆ ನಾನು ಕರ್ನಾಟಕದಲ್ಲಿದ್ದಾಗ ನಮ್ಮವರ ನಡುವೆ ಇರುವ ಬೆಲೆ ಏನೆಂದು ನನಗೆ ಗೊತ್ತಾಗಿದ್ದೇ ನಮ್ಮವರನ್ನು ಬಿಟ್ಟು ದೂರಕ್ಕೆ ಹೋದಮೇಲೆ. ಇದು ಒಂದು ರೀತಿಯ ವಿಪರ್ಯಾಸವೇ ಅಲ್ಲವೇ - ಯಾವುದಾದರೂ ಒಂದು ವಸ್ತು ಅಥವಾ ವಿಷಯದ ನಿಜವಾದ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಅದರಿಂದ ದೂರವಿರಬೇಕಾದದ್ದು!

***

೧) ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು - ಒಂದು ದಿನ ಹೀಗೇ ತರಗತಿಗಳನ್ನು ಮುಗಿಸಿ ಎಲ್.ಬಿ.ಕಾಲೇಜಿನ ಮುಂದೆ ಬಸ್ಸಿಗೆ ಕಾಯುತ್ತಿದ್ದೆವು, ಅದ್ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀಧರನಾಯ್ಕ ಮತ್ತು ಜಗದೀಶಗೌಡ ಇಬ್ಬರು ಬಂದು ನನ್ನನ್ನು ಅದೇನನ್ನೋ ಕೇಳಿದರು - ನಾನು ನನಗೇ ಅರಿವಿಲ್ಲದಂತೆ 'ತೆರಿಯಾದು' ಎಂದು ಬಿಟ್ಟೆ, ನಾನು ಹೇಳಿದ್ದು ಅವರಿಗೆ ಅರ್ಥವಾಯಿತೋ ಬಿಟ್ಟಿತೋ, ಆದರೆ ನಾನು ಹೀಗೇಕೆ ಅಂದೆನೆಂದು ಬಹಳಷ್ಟು ಯೋಚಿಸಿದರೂ ನನ್ನ ಮನಸ್ಸಿನೊಳಗಿನ ಈ ಪದದ ಮೂಲ ನನಗೆ ಇವತ್ತಿಗೂ ತಿಳಿದಿಲ್ಲ. ನಾನು ತಿಳಿದಂತೆ ನನಗೆ ಯಾವ ರೀತಿಯ ತಮಿಳಿನ ಇನ್‌ಫ್ಲೂಯೆನ್ಸ್ ಇಲ್ಲದಿದ್ದರೂ ಆ ಪದವನ್ನು ಆ ಸಮಯದಲ್ಲಿ ನಾನು ಹೇಗೆ ಉಪಯೋಗಿಸಿದೆನೆಂಬುದು ಸೋಜಿಗದ ವಿಷಯವೇ. ಮುಂದೆ ಮೈಸೂರು ಶಿವಮೊಗ್ಗಗಳಲ್ಲಿ ನನ್ನ ತಿಳುವಳಿಕೆಯ ವ್ಯಾಪ್ತಿಯನ್ನು ವಿಸ್ತರಿಸಿದಂತೆ ತಮಿಳನ್ನು, ತಮಿಳು ಮಾತನಾಡುವವರನ್ನು ಬಹಳಷ್ಟು ದ್ವೇಷಿಸಲಾರಂಭಿಸಿದೆ - ಆ ದ್ವೇಷಕ್ಕೆ ಪ್ರತೀಕಾರವೆಂಬಂತೆ ನನಗೆ ಮೊದಲು ಕೆಲಸ ಸಿಕ್ಕಿದ್ದು ಮದ್ರಾಸಿನಲ್ಲಿಯೇ, ಅಲ್ಲಿ ಸುಮಾರು ಹನ್ನೆರಡು ತಿಂಗಳು ಇದ್ದು ಅನ್ನ-ನೀರಿನ ಋಣವನ್ನು ತೀರಿಸಿದ್ದೂ ಅಲ್ಲದೇ ನನಗೆ ಬಹಳವಾಗಿ ಬೇಕಾಗುವ ಸ್ನೇಹಿತರಲ್ಲಿ ಹಾಗೂ ಇವತ್ತಿಗೆ ನಾನೂ ಒಬ್ಬ ಮನುಷ್ಯನೆಂದು ಆಗಿರುವುದರ ಹಿಂದೆ ಇರುವವರಲ್ಲಿ ಹೆಚ್ಚಿವರು ತಮಿಳರೇ. ಆದರೆ ತಮಿಳಿನ ಮೇಲೆ ಇದ್ದಷ್ಟೆ ದ್ವೇಷಕ್ಕೆ ಪ್ರತಿಯಾಗಿ ಕನ್ನಡದ ಮೇಲೆ ಇಮ್ಮಡಿ ಪ್ರೀತಿ ಇಟ್ಟುಕೊಂಡರೂ ಇವತ್ತಿಗೂ ಒಂದು ದಿನವೂ ಸಹ ನಾನು ಬೆಂಗಳೂರಿನಲ್ಲಾಗಲೀ-ಕರ್ನಾಟಕದಲ್ಲಾಗಲೀ, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ಕೆಲಸವನ್ನೂ ಮಾಡಿಲ್ಲ!

೨) ನನಗೆ ಹಿಡಿಸದ ಮತ್ತೊಂದು ಭಾಷೆಯೆಂದರೆ ಇಂಗ್ಲೀಷು - ನಾನು ಐದನೆ ತರಗತಿಯಿಂದ ಇಂಗ್ಲೀಷನ್ನು ಕಲಿತವನು, ಹಾಗೂ ಹತ್ತನೇ ತರಗತಿಯವವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದವನು - ಆದರೆ ಕಾಲೇಜು ಮುಗಿಸಿ, ಮುಂದೆ ಕೆಲಸಕ್ಕೆ ಸೇರುವವರೆಗೂ ಇಂಗ್ಲೀಷು ನನ್ನನ್ನು ಅತಿಯಾಗಿ ಹೆದರಿಸಿದೆ. ಹೈಸ್ಕೂಲು, ಮಿಡ್ಲುಸ್ಕೂಲುಗಳಲ್ಲಿ ನಾಮಕಾವಸ್ತೆಗೆ ಪಾಠವೆನ್ನುವಂತೆ ಇಂಗ್ಲೀಷಿನ ಪಾಠಗಳನ್ನು ಮಾಡುತ್ತಿದ್ದರು, ಆಗೆಲ್ಲ ಇಂಗ್ಲೀಷ್ Detail, Non-Detail ಎಂಬ ಎರಡು ಪಠ್ಯಪುಸ್ತಕಗಳಿರುತ್ತಿದ್ದವು. ಯಾವುದೇ ಇಂಗ್ಲೀಷ್ ಪದ್ಯವೇ ಇರಲಿ, ಗದ್ಯವೇ ಇರಲಿ - ಡಿಕ್ಷನರಿ ನೋಡಿ, ಕ್ಲಿಷ್ಟಕರವಾದ ಪದಗಳ ಮೇಲೆ ಕನ್ನಡದಲ್ಲಿ ಅವುಗಳ ಅರ್ಥಗಳನ್ನು ಬರೆದು - ಆ ಸಾಲುಗಳಲ್ಲಿ ತೋರಿಸಿರುವ ಯಾವುದೋ ಅರ್ಥವನ್ನು ತಿಳಿದುಕೊಳ್ಳುವ ಹವಣಿಕೆ ನಡೆಯುತ್ತಿತ್ತು. ನಮ್ಮಲ್ಲಿನ ಇಂಗ್ಲೀಷ್ ಮೇಷ್ಟ್ರುಗಳಿಗೆ ಮೋಕ್ಷ ತೋರಿಸಿದ ಶೆಲ್ಲಿ, ಕೀಟ್ಸ್, ವರ್ಡ್ಸ್‌ವರ್ಥ್ ಗಳಿರಲಿ, ಕೊನೆಗೆ ರಾಮಾನುಜನ್‌ರ "The rich will make temple for siva, what shall I a poor man do..." ("ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಯ್ಯಾ, ಬಡವನಯ್ಯಾ..." ವಚನದ ಅನುವಾದ) ಪದ್ಯವೂ ಕಷ್ಟವನ್ನು ಕೊಡುತ್ತಿತ್ತು! ಹೀಗೆ ಇಂಗ್ಲೀಷ್ ಮೇಲೆ ಅತಿಯಾದ ಹೆದರಿಕೆ, ಅದರಿಂದ ಹುಟ್ಟಿದ ದ್ವೇಷ ಹಾಗೂ ತಿರಸ್ಕಾರಗಳ ನಡುವೆ ಬೆಳೆದು ಬಂದವನಿಗೆ, ನೋಡಿ, ಎಲ್ಲಿ ಬಂದು ಯಾರ ಮಧ್ಯೆ ಬದುಕಬೇಕಾದ ಸಂಕಷ್ಟ ಒದಗಿ ಬಂದಿದೆ!

೩) ಸುಮಾರು ಆರೇಳು-ವರ್ಷಗಳ ಹಿಂದೆ, ಅಮೇರಿಕದಲ್ಲಿ ನನ್ನ ರೂಮ್ಮೇಟ್‌ಗಳಾದ ರಾಮಮೂರ್ತಿ, ರವಿ ಗೆ ಸಿಟ್ಟುಬಂದಾಗಲೆಲ್ಲ - 'ನಿನಗೆ ಬೆಂಗಳೂರಿನ ಹೆಣ್ಣು ಸಿಗಲಿ' - ಎಂದು ಶಾಪ ಹಾಕುತ್ತಿದ್ದೆ. ಆಗೆಲ್ಲ ನಗೆಚಾಟಲಿಗೆ ಹೇಳುತ್ತಿದ್ದ ಮಾತದು, ಆದರೂ ನನಗೆ, ಬೆಂಗಳೂರಿನಲ್ಲಿ ಹುಟ್ಟಿ-ಬೆಳೆದೂ 'I don't know Kannada' ಎಂದು ವಯ್ಯಾರದಿಂದ ಮಾತನಾಡುವವರನ್ನು ಕಂಡರೆ ಒಳಗೊಳಗೇ ಮೈಯುರಿಯುತ್ತದೆ. ಒಂದು ಸಭೆಯಲ್ಲಿ ಶಿವರುದ್ರಪ್ಪನವರು ಹೇಳಿದಂತೆ ಅವರಿಗೆಲ್ಲ ಮೊದಮೊದಲು ಬೇಂದ್ರೆಯವರ 'ನೀ ಹೀಂಗs ನೋಡಬ್ಯಾಡಾ ನನ್ನ' ಎಂದರೆ ಏನು ಎಂಬುದೇ ಅರ್ಥವಾಗುತ್ತಿರಲಿಲ್ಲವಂತೆ! (ಈ ಮಾತನ್ನು ಕೇಳಿಸಿಕೊಂಡು ಬಹಳ ದಿನಗಳವರೆಗೆ ಶಿವರುದ್ರಪ್ಪನವರನ್ನೂ ನಾನು 'ಬೆಂಗಳೂರಿನ ಕನ್ನಡಿಗ'ರನ್ನಾಗಿ ಮಾಡಿಬಿಟ್ಟಿದ್ದೆ). ಇನ್ನು ಸಾಮಾನ್ಯವಾಗಿ ಪೇಟೆಯವರು, ಅದರಲ್ಲಿ ಬೆಂಗಳೂರಿನವರು ಹೇಳುವಂತಾ 'ನಮ್ಮ ಬದರ್ರು, ನಮ್ಮ ಸಿಸ್ಟರ್ರು, ಮಮ್ಮೀ, ಡ್ಯಾಡೀ...' ಮುಂತಾದ ಪದಗಳು ಇಂದಿಗೂ ಬಹಳ ಮುಜುಗರವನ್ನುಂಟುಮಾಡುತ್ತವೆ. ಒಟ್ಟಿನಲ್ಲಿ, ಇಂದಿಗೂ ಸಹ ಎಲ್ಲಾದರೂ ನನಗೆ ಬೆಂಗಳೂರಿನವರೆಂದು ಯಾರಾದರೂ ಪರಿಚಯಿಸಿಕೊಂಡರೆ ಪಕ್ಕನೆ ಕನ್ನಡದಲ್ಲಿ ಮಾತನಾಡಲೂ ಹಿಂದೆ-ಮುಂದೆ ನೋಡುತ್ತೇನೆ - ಅವರು ಕನ್ನಡೇತರು ಎಂದಲ್ಲ, ಕನ್ನಡಿಗರೇ ಕನ್ನಡವನ್ನು ಮಾತನಾಡದವರು ಎಂಬ ಭಾವನೆಯಿಂದ. ಹೀಗೆ ರಾಮಮೂರ್ತಿ-ರವಿಗೆ ಶಾಪ ಹಾಕಿದ್ದು ಹೆಚ್ಚಾಯಿತೋ ಎನ್ನುವಂತೆ ಕೊನೆಗೆ ನಾನು ಮದುವೆಯಾಗಿದ್ದೂ ಒಬ್ಬ ಬೆಂಗಳೂರಿನ ಹುಡುಗಿಯನ್ನೇ! (ಪಾಪ, ನನ್ನ ಹೆಂಡತಿಗೆ ಚೆನ್ನಾಗೆ ಕನ್ನಡ ಬರುತ್ತೆ, ಅದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ, ಆದರೆ ಆಕೆ ಬೆಂಗಳೂರಿನವಳೆಂಬುದು ಮಾತ್ರ ಸತ್ಯ).

***

ಹೀಗೆ ಒಂದಲ್ಲ, ಎರಡಲ್ಲಾ, ಮೂರು ಮಹಾ ಉದಾಹರಣೆಗಳ ನಂತರ ನಾನು ಇವತ್ತಿಗೂ ಯಾವುದಾದರೊಂದನ್ನು ಅತಿಯಾಗಿ ದ್ವೇಷಿಸುವ ಮೊದಲು ಒಮ್ಮೆ ಯೋಚಿಸುತ್ತೇನೆ, ಒಂದುವೇಳೆ ಈ ಅತೀ ದ್ವೇಷವೇ ಅತೀ ಪ್ರೀತಿಯಾಗಿ ಮಾರ್ಪಾಟು ಹೊಂದಿಬಿಟ್ಟರೆ ಎಂದು ಕಸಿವಿಸಿಗೊಳ್ಳುತ್ತೇನೆ. ಇಂತಹ ದೊಂಬರಾಟದಲ್ಲಿ ಸಿಲುಕಿಕೊಂಡ ಮನಸ್ಸಿಗೆ ಯಾವುದನ್ನಾದರೂ 'ನನ್ನದೆಂದು' ಅತಿಯಾಗಿ ಪ್ರೀತಿಸುವುದಿರಲಿ, 'ನನ್ನದಲ್ಲದೆಂದು' ಸ್ವಲ್ಪವೂ ದ್ವೇಷಿಸುವ ಸ್ವಾತಂತ್ರ್ಯವೂ ಇಲ್ಲದಾಯಿತೇ, ಅಕಟಕಟಾ!

Pick your battle, but be ready to work for the enemy!

6 comments:

Anveshi said...

ನೀವೆಷ್ಟೇ ದೂರ ಹೋದರೂ ನ(ನಿ)ಮ್ಮವರೇ ಆಗಿಬಿಟ್ಟಿದ್ದೀರಲ್ಲ...

ಆದ್ರೆ ನಾವ್ನೋಡಿ.... ದೂರ ಬಂದ್ರೂ ಹೊರನಾಡಿಗರು ಆಗ್ಬಿಟ್ಟಿದ್ದೇವೆ.

Satish said...

ಅನ್ವೇಷಿಗಳೇ,

ಅಂತೂ ನಿಮ್ಮಲ್ಲೂ ಒಬ್ಬ 'ಪರದೇಸಿ' ಜೀವಂತವಾಗಿದ್ದಾನೆ ಅನ್ನಿ.

ಆ 'ತ.ತ.ನ' (ತಮಿಳು ತಲೆಗಳ ನಡುವೆ) ಬದುಕೋ ಕಷ್ಟಾ ಇದೇ ನೋಡಿ, ಅದು ಒಂಥರಾ double edged sword!

Enigma said...

i compleetly agree with u nimmava.
My collegues her (most of tehm0are tamilians and tehy get on my nerves. they go yank yank in tehir language.

nanage ille ge banda mele bhashabhimaana hechhagiddu :) "iruv dellava bittu iradudarede thuduvude jeevana" allava?

Ayo i hope i don't land up gettig married to a tamilian !!! i cannot stand them, even though i have few good frnds.

Anonymous said...

"ಅತಿಯಾಗಿ ಪ್ರೀತಿಸುವುದನ್ನೇ ದ್ವೇಷಿಸುವುದು" ಎಂಬುದನ್ನು ಕೇಳಿದ್ದೆ. ಆದರೆ ದ್ವೇಷಿಸುವುದನ್ನೇ ಪಡೆದುಕೊಳ್ಳುವುದೆಂದರೆ ಅದು ಅಸಹನೀಯವೇ.

ನನಗೆಂದೂ ಈ ರೀತಿಯ ಅನುಭವ ಆಗಿಲ್ಲ. ನಾನು ಪಡೆದಿರುವುದೆಲ್ಲ ನನಗೆ ಪ್ರಿಯವಾದದ್ದನ್ನೇ, ಕನ್ನಡವನ್ನೂ ಸೇರಿಸಿ. ಬೆಂಗಳೂರಿನಲ್ಲಿಯೂ ಕನ್ನಡವಿಲ್ಲವೆಂದು ಈ ಹಿಂದೆ ಅನ್ನಿಸಿರಲಿಲ್ಲ. ಈ ಬಾರಿ ಹೋದಾಗ ಮಾತ್ರ ಅಂತಹ ಅನುಭವವಾಗಿ, ಸ್ವಲ್ಪ ಅನಾಥಭಾವ ಅನುಭವಿಸಿದೆ.

Anonymous said...

Your are Excellent. And so is your site! Keep up the good work. Bookmarked.
»

Anonymous said...

Really amazing! Useful information. All the best.
»