Showing posts with label ದೇಶ-ವಿದೇಶ. Show all posts
Showing posts with label ದೇಶ-ವಿದೇಶ. Show all posts

Friday, November 13, 2009

ಗೆಲುವಾಗೆಲೆ ಅನಿವಾಸಿ ಮನ…

ಅನಿವಾಸಿ(ಗಳ) ಮನದಲ್ಲೇನಿರುತ್ತೆ, ಅದರ ಆಳ-ವಿಸ್ತಾರವೇನು? ಅದರ ಮಿತಿಗಳೇನು ಎಂದು ಯೋಚಿಸುತ್ತಾ ಹೋದರೆ ಅದೊಂದು ಅಪರಿಮಿತ ಆವರಣವನ್ನೇ ಹೊರಹಾಕಿ ಬಿಡುತ್ತೆ.   ಅನಿವಾಸಿತನ ಅನ್ನೋದು ಲೋಕಲ್ ಆಗಿದ್ದವರಿಗೆ ಗ್ಲೋಬಲ್ ಪರಿಜ್ಞಾನ ಮೂಡಿಸುತ್ತೆ, ಜಾಗತೀಕರಣ, ಉದಾರೀಕರಣ ಅದೂ-ಇದೂ ಅನ್ನೋ ಹೊಸ ಕಾಯಕಲ್ಪಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡುತ್ತೆ, ಜೊತೆಗೆ ಬೇಡವಾದ ಹಲವನ್ನು ತಂದು ತಲೆಯೊಳಗೆ ತುಂಬುತ್ತೆ.

 

ಅನಿವಾಸಿತನದ ಇತಿ-ಮಿತಿಗಳು ವ್ಯಕ್ತಿಗತವಾದವುಗಳು, ನನ್ನ ಮಟ್ಟಿಗೆ ಹಳೆಯ ಜೀಪ್ ಒಂದಕ್ಕೆ ಎತ್ತರದ ಹೊಸ ಚಕ್ರಗಳನ್ನು ಕೂರಿಸಿ ಕುದುರೆ ಸವಾ ಮಾಡಿಸಿದಂತೆ ಒಮ್ಮೊಮ್ಮೆ ನನ್ನ ಚಿಕ್ಕತನವನ್ನು ದೊಡ್ಡ ಪ್ರಮಾಣದಲ್ಲಿ ಅಳತೆ ಮಾಡಲಾಗಿದೆ.  ಇಷ್ಟು ವರ್ಷ ಇದ್ದು ಅದ್ಯಾವ ಸಂಗೀತ/ಹಾಡುಗಳನ್ನು ಅದೆಷ್ಟೇ ಬಾರಿ ಕೇಳಿ ನೋಡಿದರೂ ನಮ್ಮ ನೆಚ್ಚಿನ ಭಾವಗೀತೆಗಳು ನಮ್ಮನ್ನು ಜೀವನ ಪರ್ಯಂತ  ಕೂಡಿಕೊಳ್ಳುವ ಹಾಗೆ, ನಮ್ಮ ನೆಚ್ಚಿನ ಜಾನಪದಗೀತೆಗಳು ಹಳೆಯ ಸ್ನೇಹಿತರಾದ ಹಾಗೆ, ಎಷ್ಟೇ ಹೊಸ ಚಿತ್ರಗಳು ಬಂದರೂ ಹಳೆಯ ಗೀತೆಗಳು ನೆನಪಿನಲ್ಲಿ ಉಳಿಯುವ ಹಾಗೆ ಈ ಇಂಗ್ಲೀಷ್ ಸಾಹಿತ್ಯವಾಗಲೀ, ಸಂಗೀತವಾಗಲೀ ಉಳಿಯೋದೇ ಇಲ್ಲ.  ಮೊದಲ ಜನರೇಷನ್ನಿನ ನನಗೆ ಮಾತ್ರ ಹೀಗಾಗಬಹುದು, ಇಲ್ಲಿಯೇ ಹುಟ್ಟಿ ಬೆಳೆದ ನಂತರದ ಜನರೇಷನ್ನಿನ ಅಭಿರುಚಿಗಳು ಬೇರೆ ಇರಬಹುದು.

 

ಆಫೀಸಿನಲ್ಲಿನ ಸಹೋದ್ಯೋಗಿಗಳ ಸಂಖ್ಯೆ ನಮ್ಮ ಸ್ನೇಹಿತರ ಗುಂಪನ್ನು ಸೇರಲಾರದು, ಕೆಲಸದ ವಿಚಾರವನ್ನು ಹೊರತು ಪಡಿಸಿ ಆಟೋಟದ ವಿಚಾರದಲ್ಲಾಗಲೀ, ಹೊರಗಡೆಯ ಇನ್ಯಾವುದೇ ವಿಷಯದಲ್ಲಾಗಲೀ ನಮ್ಮನ್ನು ನಾವು ಕನೆಕ್ಟ್ ಮಾಡಿಕೊಳ್ಳಲಾರದಾಗುತ್ತೇವೆ.  ನಾವೂ ನೋಡಿದ, ನೋಡುವ ಟಿವಿ ಕಾರ್ಯಕ್ರಮಗಳು ಯಾವಾಗಲೂ ಕ್ಯಾಚ್ ಅಪ್ ಮೋಡ್‌ನಲ್ಲೇ ಇರುತ್ತವೆ.  ಯಾರು ಯಾವ ಆಟದಲ್ಲಿ ಗೆದ್ದರೇನು, ಬಿಟ್ಟರೇನು ಇಲ್ಲಿನ ಸ್ಥಳೀಯ ಸುದ್ದಿಯ ಮುಂದೆ ಪ್ರಜಾವಾಣಿಯ ಮುಖಪುಟದಲ್ಲಿ ಕರ್ನಾಟಕದವರು ಉತ್ತರ ಪ್ರದೇಶದ ಮೇಲೆ ರಣಜಿ ಕಪ್‌ನಲ್ಲಿ ಗೆದ್ದರು ಎಂಬುದು ಇವತ್ತಿಗೂ ಅಪ್ಯಾಯಮಾನವಾಗುತ್ತದೆ.  ಇತ್ತೀಚಿನ ಟ್ವೆಂಟಿ-ಟ್ವೆಂಟಿ ಪ್ರಂದ್ಯಗಳನ್ನು ನಾನು ಫಾಲ್ಲೋ ಮಾಡುತ್ತಿಲ್ಲವಾದರೂ ಅದರ ಸುತ್ತಲಿನ ಸುದ್ದಿಗಳಲ್ಲಿ ಭಾರತ ತಂಡದ ಹೆಸರನ್ನು ಕಣ್ಣುಗಳು ಗೊತ್ತೋ ಗೊತ್ತಿರದೆಯೋ ಹುಡುಕುತ್ತಿರುತ್ತವೆ.

 

ನಾನು ಈವರೆಗೆ ಕಾಲಿಡದ ಎಷ್ಟೋ ಅಂಗಡಿಗಳು ಇಲ್ಲಿವೆ, ಇಲ್ಲಿನವರ ದಿನಬಳಕೆಯ ಅದೆಷ್ಟೋ ಪದಾರ್ಥಗಳು ನನಗೆ ಪರಿಚಯವೇ ಇಲ್ಲವಾಗಿದೆ.  ಹಾಡು, ಸಿನಿಮಾ, ಸಂಸ್ಕೃತಿ, ಸಂಭ್ರಮಗಳನ್ನು ಒಂದಕ್ಕೊಂದು ಕನೆಕ್ಟ್ ಮಾಡಿಕೊಳ್ಳದೇ ಪರದಾಡಿದ್ದಿದೆ.  ನನ್ನಂಥ ಅನಿವಾಸಿಗಳಿಗೆ ಯಾರಾದರೂ “ನೀವು ಕೆಲಸಕ್ಕ ಹೋಗಬೇಡಿ, ಮನೆಯಲ್ಲೇ ಇರಿ ನಿಮಗೆ ಅಷ್ಟೇ ಸಂಬಳವನ್ನು ಕೊಡುತ್ತೇವೆ”, ಎಂದರೆ ಇನ್ನೇನನ್ನೂ ಮಾಡಲಿಕ್ಕಾಗೇ ಹುಚ್ಚೇ ಹಿಡಿಯುವ ಪ್ರಸಂಗ ಬಂದರೂ ಬರಬಹುದು.

 

****

 

ಮನೆ ಬಿಟ್ಟು, ದೇಶ ಬಿಟ್ಟು, ಭಾಷೆ ಬಿಟ್ಟು, ರೂಢಿ ಬಿಟ್ಟು ಮತ್ತೊಂದು ಕಡೆಗೆ ಹೋಗೋದೆಲ್ಲ ಕೆಟ್ಟದೇನಲ್ಲ.  ಅಲ್ಲಿ-ಇಲ್ಲಿ ಒಂದಿಷ್ಟು ಹೋಗಿ ನೋಡಿದರೆ ತಾನೆ ಗೊತ್ತಾಗೋದು?  ಈ ಬಂದು ಹೋಗುವ ಬದುಕಿಗೆ ಯಾವುದು ತಾತ್ಕಾಲಿಕ, ಯಾವುದು ಶಾಶ್ವತ? ಜಗತ್ತಿನ ಏನೇನೆಲ್ಲ ಸಂಸ್ಕೃತಿಗಳನ್ನೆಲ್ಲ ವಿಸ್ತರಿಸಿ ಕೊನೆಗೆ ಯಾವುದಕ್ಕೆ  ಬೇಕಾದರೂ ತಗುಲಿಕೊಳ್ಳಬಹುದು ತಾನೆ?  ನಮಗೆ ಗೊತ್ತಿರುವ ಒಂದೇ ನೆಲೆಗಟ್ಟಿಗೆ ಅಂಟಿಕೊಂಡೇ ತೊಳಲಾಡುವುದರಲ್ಲಿ ಯಾವ ದೊಡ್ಡಸ್ತಿಕೆ ಇದೆ ಹೇಳಿ?  ನಾವು ನಮ್ಮದನ್ನು ಬಿಟ್ಟು ಹೋಗದಿರುವ ಮನಸ್ಥಿತಿಗೂ ಕಾಂಪ್ಲಸೆನ್ಸಿಗೂ ಏನು ವ್ಯತ್ಯಾಸ್

 

ಏನು ಬೇಕಾದರೂ ಇರಲಿ ಇಲ್ಲದಿರಲಿ, ನಮ್ಮ ಕೆಲಸಗಳನ್ನೆಲ್ಲ ನಾವೇ ಮಾಡಿಕೊಳ್ಳುವ ಪರಿಪಾಟಲೆಗೆ ರೂಢಿ ಮಾಡಿಕೊಂಡಿರೋದು ಹಾಗೂ ನಮ್ಮ ನಮ್ಮ ಸಣ್ಣ ಪ್ರಪಂಚಗಳಲ್ಲೇ ಯಾರ ಉಸಾಬರಿಯೂ ಬೇಡವೆಂದು ನಿರ್ವಂಚನೆಯಿಂದ ಬದುಕೋದು ಅನಿವಾಸಿ ಜೀವನದ ಅವಿಭಾಜ್ಯ ಅಂಗ.  ಎಕ್ಸ್ಟೆಂಡೆಡ್ ಫ್ಯಾಮಿಲಿ ಇರುವವರದ್ದು ಒಂದು ರೀತಿಯ ಬದುಕಾದರೆ ನಮ್ಮ ನ್ಯೂಕ್ಲಿಯರ್ ಕುಟುಂಬಗಳದ್ದು ಮತ್ತೊಂದು ರೀತಿಯ ಬದುಕು.  ಭಾರತದಲ್ಲಿ ಬೆಳೆದು ಬಂದ ಪರಿಣಾಮವಾಗಿ ನಾವು ಹೋಗಿ ಬಂದಲ್ಲೆಲ್ಲ ನಾವು ಕೆಲಸ ಮಾಡುವಲ್ಲೆಲ್ಲ ಅವಕಾಶವಾದಿಗಳಾಗಿ ಕಂಡು ಬರುತ್ತೇವೆ.  ಸ್ಥಳೀಯ ಡಿ.ಎಮ್.ವಿ. ಲೈನ್‌ಗಳು ಇರುಲಿ, ಇಂಡಿಯನ್ ಎಂಬಸಿ ನೂಕು ನುಗ್ಗಲಾಗಲೀ ನಮಗ್ಯಾರೀಗೂ ಹೊಸತು ಎನ್ನಿಸುವುದಿಲ್ಲ.  ಟ್ರಾಫಿಕ್ ಜಾಮ್ ಆದಾಗಲೆಲ್ಲ ಮನಸ್ಸು ಅಡ್ಡ ದಾರಿ ಹುಡುಕುತ್ತಲೇ ಇರುತ್ತದೆ.  ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಬೆಳೆದು ಬಂದ ಪರಿಣಾಮ ಎಷ್ಟೇ ಇದ್ದರೂ ಕಡಿಮೆಯಲ್ಲೇ ಬದುಕುವುದು ಅಭ್ಯಾಸವಾಗಿ ಬಿಡುತ್ತದೆ.  ಹಾಸಿಗೆ ಇದ್ದಷ್ಟೇ ಕಾಲು ಚಾಚು ಅಂದವರಿಗೆ ನಾವು ಏಕೆ ಎಂದು ಕೇಳಲೇ ಇಲ್ಲ, ನನಗೆ ಇಷ್ಟ ಬಂದಲ್ಲಿ ಮಲಗುತ್ತೇನೆ ಎನ್ನುವುದು ಯಾವತ್ತೂ ಒಂದು ಆಪ್ಷನ್ನ್ ಆಗಿರಲೇ ಇಲ್ಲ.

 

ನಮ್ಮ ಮನೆಯ ಕಸವನ್ನು ಸಂಸ್ಕರಿಸಬಹುದು, ನಮ್ಮ ಕಸ ಮತ್ತೊಬ್ಬರಿಗೆ ಮಾರಕ ಎನ್ನುವುದು ನಮ್ಮ ಕಲ್ಪನೆಯಲ್ಲೇ ಇಲ್ಲ, ಇವತ್ತಿಗೂ ಸಹ ಸ್ಥಳೀ ಟೌನ್‌ಶಿಪ್‌ನವರ್ ಮ್ಯಾಂಡೇಟರಿ ಗಾರ್‌ಬೇಜ್ ಕಲೆಕ್ಷನ್ ಮಾಡದೇ ಹೋದರೆ, ಅದಕ್ಕೆ ತಕ್ಕ ದುಡ್ಡನ್ನು ತೆಗೆದುಕೊಳ್ಳುವುದು ಆಫ್ಷನಲ್ ಆದರೆ ನಾವೆಲ್ಲ ನಮ್ಮ ಗಾರ್‌ಬೇಜ್ ಅನ್ನು ಏನು ಮಾಡುತ್ತಿದ್ದೆವೋ ಎಂದು ಹೆದರಿಕೆಯಾಗುತ್ತದೆ.  ಎಲ್ಲರೂ ಕಸವನ್ನು ತೆಗೆದು ಕನ್ಸರ್‌ವೆನ್ಸಿಗೆ ಸುರಿದು ಕೈ ಕೊಡಗಿ ಕೊಂಡರೆ ಕನ್ಸರ್‌ವೆನ್ಸಿ ಕ್ಲೀನ್ ಮಾಡುವವರಾರು? ಸಾವಿರಾರು ವರ್ಷಗಳಿಂದ ಲಂಚಕೋರತನ ಇದ್ದರೂ, ಲಂಚ ನಿರ್ಮೂಲನ ಎನ್ನುವುದು ಯಾವ ಪೊಲಿಟಿಕಲ್ ಅಜೆಂಡಾದಲ್ಲಿ ಇದೆ ಎಂದು ಮಸೂರವನ್ನು ಇಟ್ಟು ನೋಡಬೇಕಾಗಿದೆ.  ಅದು ಎಂತಹ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿ ಸಿಕ್ಕುಬಿದ್ದು ಕೋರ್ಟಿನಲ್ಲಿ ಸಾಭೀತಾದರೂ ಅಂಥವರು ಮತ್ತೆ ಗೆದ್ದು ಬರುವ ಪದ್ಧತಿ ಹಾಗೂ ರೂಢಿ ಇದೆ.  ಇವುಗಳನ್ನು ಭಿನ್ನ ನೆಲೆಯಲ್ಲಿ ನೋಡುವ ದೃಷ್ಟಿಕೋನ ಪರಕೀಯವಾಗುತ್ತದೆ.

 

ಹೀಗೆ ಸರಿ-ತಪ್ಪು, ಅಲ್ಲಿ-ಇಲ್ಲಿ, ಹಾಗೆ-ಹೀಗೆ, ಚಿಕ್ಕದು-ದೊಡ್ಡದು ಎನ್ನುವ ಅನೇಕಾನೇಕ ವಿರೋಧಾಭಾಸಗಳ ಜೊತೆ ಏಗುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡು ಬದುಕಿನ ಕರ್ಮ ಜೀವನವನ್ನು ನೂಕುವ ಅನಿವಾಸಿ ಮನಕ್ಕೆ ಗೆಲುವಾಗಲಿ!

Sunday, September 14, 2008

ನಿಮ್ standard ನಿಮಗೆ, ನಮ್ standard ನಮಿಗೆ

ಸಾರ್‍, ನೀವಾದ್ರೂ ಒಂದಿಷ್ಟ್ ಸಹಾಯಾ ಮಾಡ್ತೀರಾ? ನಾನು ನಮ್ ದೇಶದಲ್ಲಿರೋ ಕಂಪನಿಗಳ ಬಗ್ಗೆ, ಶಾಲೆಗಳ ಬಗ್ಗೆ ಅವರ ವೆಬ್‌ಸೈಟ್‌ನಲ್ಲಿ ಓದಿದ ಹಾಗೆಲ್ಲ ಎಲ್ರೂ ’State of the art', 'Best in class', 'Best of the breed' ಮುಂತಾಗಿ ದೊಡ್ಡ ದೊಡ್ಡ ಹೇಳಿಕೆಗಳನ್ನ ಹೇಳ್ಕೋತಾರಲ್ಲ, ಇವುಗಳನ್ನೆಲ್ಲ ಅದರ ಫೇಸ್‌ ವ್ಯಾಲ್ಯೂ ಅಂತ ತೆಗೊಂಡ್ರೆ ಹೇಗೆ? ತೆಗೊಳ್ಳೋ ಬೇಡವೋ ಅನ್ನೋ ಸಂಕಷ್ಟ ನನ್ನದು.

State of the art - ಅಂತ ಇವ್ರಿಗೆಲ್ಲ ಯಾರು ಬಿರ್ದು ಕೊಟ್ಟೋರು? ನನ್ನ ತಲೇಲೀ ಬರೀ ಪ್ರಶ್ನೆಗಳೇ ತುಂಬಿ ಬರ್ತವೆ ನೋಡಿ - ಭಾರತದ ಕಂಪ್ನಿಗಳು-ಶಾಲೆಗಳೆಲ್ಲ ಸ್ಟೇಟ್ ಆಫ್ ದಿ ಆರ್ಟ್ ಆದ್ರೆ, ಭಾರತ ಯಾಕೆ ಇನ್ನೂ ಬಿದ್ದು ಕೊಳೀತಾನೇ ಇರೋದೂ ಅಂತ?

ನನ್ ಸ್ನೇಹಿತ್ರ ಹತ್ರ ಹೇಳಿದ್ರೆ ನಿನಗೆ ತಲೆ ಸಮ ಇದೆಯಾ ಅಂತ ನಂಗೇ ಬೈತಾರೆ! ಅದ್ಯಾವ್ದೋ ISO ಅಂತ ಸ್ಟ್ಯಾಂಡರ್ಡ್ ಹೇಳಿ ತಲೆ ತಿಂತಾರೆ. ISO-CMM ಅವೆಲ್ಲಾ ನಮ್ ದೇಶದ ಸ್ಟ್ಯಾಂಡರ್ಡುಗಳಲ್ಲ ಕಣ್ರೋ, ನಮಿಗೆ ನಮ್ ದೇಶದ ಸ್ಟ್ಯಾಂಡರ್ಡೇ ಚೆಂದ, ಆ ಅಳತೇ ಕೋಲಿನಲ್ಲಿ ಅಳೆಯೋದೇನಾದ್ರೂ ಇದ್ರೆ ಹೇಳ್ರಿ ಅಂತಂದ್ರೆ ಬೆಬ್ಬೆಬ್ಬೆ ಅಂತಾರೆ. ನಮ್ಮನ್ನ ಅಳೆಯೋದಿಕೆ ಮಂದೀ ಕೋಲ್ಯಾಕೆ? ಮಂದೀ ಕೋಲಿನ್ಯಾಗ್ ನಮ್ಮನ್ ಅಳಕೊಂಡು ನಾವು ಯಾರನ್ನ ಹೆಂಗ್ ಕಂಪೇರ್ ಮಾಡೋದು ಅಂತ ಯೋಚ್ಸೀ ಯೋಚ್ಸೀ ತಲೆ ನುಣ್ಣಗಾತೇ ಹೊರತು ಅವರಪ್ಪನಾಣೆ ಇವತ್ತಿಗೂ ಉತ್ರಾ ಹೋಳೆದಿಲ್ಲಾ ನೋಡ್ರಿ.

ನಮ್ ದೇಶದಾಗೋ ನೂರು ಕೋಟಿ ಭರ್ತಿ ಜನಾ ಸಾರ್. ನೂರು ಕೋಟಿ ಜನಕ್ಕೆ ಸಾವಿರ ಕೋಟಿ ಮನಸು ಕೊಟ್ಟಾನೆ ಆ ದೇವ್ರು. ಅಂತರದಾಗೆ ನಾನು ಅದೆಲ್ಲೋ ಕುತಗಂಡು ಈ ಇಂಟರ್ನೆಟ್ಟು ಅನ್ನೋ ಪ್ರಪಂಚದೊಳಗಿಂದ ಇಣಕಿ ಹಾಕಿ ನೋಡಿದ್ರೆ ಈ ವೆಬ್‌ಸೈಟ್‌ಗಳನ್ನ ಬರೆಯೋರು ಬರೆಸೋರಿಗೆ ಒಂದಿಷ್ಟು ಕಾಮನ್ ಸೆನ್ಸ್ ಬ್ಯಾಡಾ? ತಮಿಗೆ ಏನೇನು ಬೇಕೋ ಅವನ್ನೆಲ್ಲ ಬರಕಂಡವರೆ ಅದರ ಪ್ರಕಾರ ಎಲ್ಲರ ಶಾಲೀನೂ ಬೆಸ್ಟ್ ರೀ. ಎಲ್ಲರ ಹತ್ರನೂ ’ದ ಬೆಸ್ಟ್’ ಟೀಚರ್ಸ್ ಇದಾರ್ ರೀ. ಎಲ್ಲಾ ಕಂಪನೀ ಒಳಗೂ ’ದ ಬೆಸ್ಟ್’ ಎಂಪ್ಲಾಯೀಸ್ ಇರೋರ್ ರೀ. ಹಿಂಗೆಲ್ಲಾ ಅಂದೂ ಅಂದೂ (ಬರೆದೂ ಬರೆದೂ) ಮೂಗಿಗೆ ತುಪ್ಪಾ ಸವರೋದ್ರಲ್ಲಿ ಶ್ಯಾಣ್ಯಾರ್ ನೋಡ್ರಿ ನಮ್ ಜನ. ನನ್ ಕೇಳಿದ್ರೆ ಈ ವೆಬ್‌ಸೈಟ್‌ಗಳ ಕಂಟೆಂಟ್ ಸ್ಕ್ರೂಟಿನಿ ಮಾಡೋಕ್ ಒಂದಿಷ್ಟ್ ಜನ ಇರಬೇಕ್ರಿ ಅಪ್ಪಾ. ಹಂಗೇನಾರಾ ಸುಳ್ಳೂ-ಪಳ್ಳೂ ಬರಕೊಂಡೋರನ್ನ ಇರಾಕ್-ಇರಾನ್‌ನ್ಯಾಗೆ ಹೊಡೆದು ಕೊಂದಂಗೆ ಕಲ್‌ನ್ಯಾಗ್ ಹೊಡೀಬಕು ಅಂತೀನಿ.

ಯಾರ್ ಹತ್ರ ದ ಬೆಸ್ಟ್ ಪ್ರಾಸೆಸ್ಸ್ ಇದಾವ್ರೀ? ಮನ್ಷಾ ಆದೋನು ಭೂಮಿಯಿಂದ ಚಂದ್ರಂಗೆ ರಾಕೇಟ್ ಕಳ್ಸಿ ಆರಾಮಾಗಿ ವಾಪಾಸ್ ತರಸೋದನ್ನ ಬಲ್ಲ, ಆದ್ರೆ ನೆಟ್ಟಗೆ ಸಾಫ್ಟ್‌ವೇರ್ ಡೆವಲಪ್ ಮಾಡೋದ್ ಕಲೀಲಿಲ್ಲ ಅಂತೀನಿ. ಎಲ್ಲೆಲ್ಲಿ ಕೋಡ್ ಮಾಡ್ತಾರೋ ಅಲ್ಲಲ್ಲಿ ಬಗ್‌ಗಳು ಇರ್ತಾವೆ, ಎಲ್ಲೆಲ್ಲಿ ಬಗ್‌ಗಳು ಇರ್ತಾವೋ ಅಲ್ಲಲ್ಲಿ ಬ್ರೇಕ್‌ಗಳು ಇರ್ತಾವೆ. ಇವೆಲ್ಲ ಮನುಜಕುಲ ಅನ್ನೋದು ತಮ್ಮ ಜಾಬ್ ಸೆಕ್ಯೂರಿಟಿಗೆ ಮಾಡಿಕೊಂಡಿರೋ ಒಂದು ವ್ಯವಸ್ಥೆ ಅನ್ಸೋಲ್ಲ? ನನ್ ಕೇಳಿದ್ರೆ ನೆಟ್ಟಗೆ ಒಂದು ತುಣುಕು ಕೋಡ್ ಬರೀದಿರೋ ಜನಕ್ಕೆ ಇನ್ನೇನು ಬಂದೀತು? ಇವತ್ತೇನಾದ್ರೂ ಇದೇ ಜನ ಪಿರಮಿಡ್ಡುಗಳನ್ನ ಕಟ್ಟಿದ್ರೆ ಇಷ್ಟೊತ್ತಿನ ಮಳೀಗೆ ಆ ಸೂರು ಸೋರಿ ಹೋಗ್ತಿತ್ತೋ ಏನೋ ಯಾರಿಗ್ ಗೊತ್ತು?

ನಂಗ್ ಗೊತ್ತು ನಾನೊಬ್ಬ ಹುಂಬಾ ಅಂತಂದು. ಎಲ್ರೂ ಒಳ್ಳೊಳ್ಳೇ ಪೊಗದಸ್ತಾದ ವೆಬ್‍ಸೈಟುಗಳನ್ನ ಕಟ್ಟಿಕೊಂಡು ಅದು ಹೇಗಿದೆಯೋ ಹಾಗೇ ನಾವಿದ್ದೇವೆ ಅಂತ ನಂಬಿಸೊದಕ್ಕೆ ಹೋಗ್ತಿದ್ದಾರೆ ಆದ್ರೆ ನಾನು ಅದನ್ನೆಲ್ಲ ನಂಬೋಲ್ಲ ಅಂತ. ಚರ್ಮದ ಕೆಳಗೆ ಅದೆಷ್ಟರ ಮಟ್ಟಿಗೆ ಇವರಿವರ ತರ್ಕ ಇಳಿದಿದೆ ಅಂತ ಕೆರೆದು ನೋಡಬೇಕು ಅನ್ಸುತ್ತೆ, ಆದ್ರೆ ಏನ್ ಮಾಡ್ಲಿ ವೆಬ್ ಸೈಟಿಗೆ ಚರ್ಮಾ ಅನ್ನೋದೇ ಇಲ್ವೇ? ಚರ್ಮ ಅಂತಿಲ್ಲದ ವೆಬ್‌ಸೈಟಿನ ಮೂಲ್ಕ ಜನರನ್ನ ನಂಬಿಸಿ ಆಕರ್ಷಿಸಿ ಬಿಸಿನೆಸ್ಸು ಮಾಡೋ ಇವರಿಗೆಲ್ಲ ನನ್ನಂಥ ದಡ್ರು ಗಿರಾಕಿಗಳ್ಯಾಕ್ ಆಗ್ಬೇಕು. ಈ ಬುದ್ಧಿವಂತ ಕಂಪ್ನಿಗಳಿಗೆ ಶಾಲೆಗಳಿಗೆ ಬುದ್ಧಿವಂತ ಕಷ್ಟಮರುಗಳೇ ಇರ್ಲಿ, ನಮ್ಮಂತ ದಡ್ಡರೆಲ್ಲ ಇನ್ಯಾವ್ದೋ ಮೂಲೆ ಸೇರ್ಲಿ ಏನಂತೀರಿ?

ನಿಮ್ standard ಏನೋ ಎಂತೋ, ನಮ್‌ದಂತೂ ಫೈವ್ ಸ್ಟಾರೂ ಅಲ್ಲ, ಸ್ಟೇಟ್ ಆಫ್ ದಿ ಆರ್ಟ್ ಇರ್ಲಿ ಕಾಮರ್ಸೂ ಅಲ್ಲ. ಅದಿರ್ಲಿ ಈ best of the class ಅನ್ನೋದಕ್ಕೆ state of the science ಅನ್ನೋದನ್ನ ಬಿಟ್ಟು art ಅಂತ ಯಾಕ್ ಅಂತಾರೆ? ನಾವು ಯಾವ್ದೂ ಜರ್ಮನ್ನೂ-ಜಪಾನರ ISO ಗೂ ತಲೆ ತೂಗೋಲ್ಲ. ನಮಿಗೆ ಬದುಕನ್ನ ಕಲ್ಸೋ ಪಾಠಗಳನ್ನ ಹೇಳ್ಕೊಡೋ ಬೇಸಿಕ್ ಎಜುಕೇಶನ್ ಇರ್ಲಿ ಅಂತ ಗುರುಕುಲದ ಕಥೆ ಹೇಳ್ತಿಲ್ಲ ನಾನು, ಇದ್ದಿದ್ದರಲ್ಲಿ ತಮ್ಮ ತಮ್ಮ ವೆಬ್‌ಸೈಟುಗಳಲ್ಲಿ ’ನಮ್ ಎಂಪ್ಲಾಯಿಗಳು ಹಂಗೆ-ಹಿಂಗೆ’ ಅಂತ ನಿಜವನ್ನಾದ್ರೂ ಹೇಳ್ಲಿ ಅಂತ ಅಷ್ಟೇ. ಕಪ್ಪೆಗಳನ್ನ ತಕ್ಕಡಿಯಲ್ಲಿಟ್ಟು ತೂಕಾ ಮಾಡೋರ್ ಹಾಗೆ ಎಂಪ್ಲಾಯಿಗಳನ್ನ ಹೈರು-ಫೈರು ಮಾಡೋ ಕಂಪನಿಗಳಲ್ಲಿ ಬಿಸಿನೆಸ್ಸು ಪ್ರಾಸೆಸ್ಸುಗಳು ಹೇಗೆ ನೆಲೆ ನಿಲ್ಲುತ್ವೆ? ಎಲ್ಲಿ ಬಿಸಿನೆಸ್ಸ್ ನೆಟ್ಟಗೆ ಗೊತ್ತಿರಲ್ವೋ ಅಲ್ಲಿ ತುಂಬಿ ತುಳುಕೋ ಟೆಕ್ನಾಲಜಿ ತಗೊಂಡು ಯಾವನ್ ಉದ್ದಾರಾಗಿದಾನೆ ನೀವೇ ಹೇಳಿ.

Tuesday, August 12, 2008

ಎದೆಕರಗದ ದೇಶಭಕ್ತಿ, ನೋವಿರದ ನಾಗರಿಕತೆ

ಬೀಜಿಂಗ್ ಓಲಂಪಿಕ್ಸ್ ಪಂದ್ಯಾವಳಿಗಳು ವಿಶ್ವದ ಉದ್ದಗಲದ ಆಟೋಟಗಳನ್ನು ಅಮೇರಿಕನ್ ಟಿವಿ ಪರದೆಯ ಮೇಲೆ ಮೂಡಿಸುತ್ತವೆ ಎಂದೇ ಹೇಳಬೇಕು. ನನಗೆ ಆಶ್ಚರ್ಯವಾಗುವ ಹಾಗೆ ಕೆಲವು ಕಡೆ ಸಾಕರ್ ಎನ್ನುವ ಬದಲು ಫುಟ್‌ಬಾಲ್ ಎಂದು ಮಾಧ್ಯಮಗಳು ಬಳಸುವುದನ್ನು ನೋಡಿ ಸೋಜಿಗವಾಗಿತ್ತು. ಇನ್ನೂರಕ್ಕೂ ಹೆಚ್ಚು ದೇಶಗಳು ಭಾಗವಹಿಸುವ ಈ ಅವಕಾಶ ಈ ಹಿಂದೆ ಎಂದೂ ಬಂದಿರಲಾರದು. ಅಲ್ಲಲ್ಲಿ ಭಾರತೀಯ ಕ್ರೀಡಾಳುಗಳು ಭಾಗವಹಿಸಿದ ತುಣುಕುಗಳನ್ನು ಬಿಟ್ಟರೆ ಇಲ್ಲಿನ ಪ್ರೈಮ್ ಟೈಮ್‌ನಲ್ಲಿ ನನಗೆ ಸಿಗುತ್ತಿರುವುದು ಅಮೇರಿಕನ್ ತಂಡಗಳು ಭಾಗವಹಿಸಿದ ಸ್ಪರ್ಧೆಗಳು ಮಾತ್ರ.

ಆಟವನ್ನು ನೋಡುವುದೂ ಒಂದು ರೀತಿಯ ಮನೋರಂಜನೆಯಂತೆ, ಯಾವೊಂದು ಟೀಮ್ ಇವೆಂಟ್ ಅನ್ನು ನೋಡಿದರೂ ವೀಕ್ಷಕನ ಮನಸ್ಸಿನಲ್ಲಿ ಒಂದಲ್ಲ ಒಂದು ತಂಡ ಅಥವಾ ಸ್ಪರ್ಧಿಯ ಪರವಾಗಿ ಆಲೋಚಿಸದೆ ಇರುವುದು ಕಷ್ಟ. ನಾನು ಇಲ್ಲಿಯವರೆಗಿನ ಕ್ರೀಡೆಗಳನ್ನು ನೋಡಿದಂತೆ ಮನಸ್ಸು ಒಂದಲ್ಲ ಒಂದು ಸ್ಪರ್ಧಿಯನ್ನು ಬೆಂಬಲಿಸತೊಡಗುತ್ತದೆ, ಕೆಲವೊಮ್ಮೆ ಅವರು ನನಗೆ ಈವರೆಗೆ ತಿಳಿಯದ ಯಾವುದೋ ದೇಶದವರೂ ಆಗಿರಬಹುದು. ಅದೇ ಭಾರತೀಯರು ಸ್ಪರ್ಧಿಸುವ ಕ್ರೀಡೆಗಳಲ್ಲಿ ನನ್ನ ಮೈಮಸ್ಸುಗಳೆಲ್ಲ ಭಾರತೀಯರ ಪರವೇ.

1932 ರ ಲಾಸ್ ಎಂಜಲೀಸ್ ಒಲಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಅಮೇರಿಕವನ್ನು 24-1 ಗೋಲುಗಳಿಂದ ಸೋಲಿಸಿದ ಕ್ಷಣಗಳು ಮತ್ತೆ ಮರುಕಳಿಸಲಾರವು. ಹಾಗೆ ಏನಾದರೂ ಭಾರತೀಯ ತಂಡ ಅಮೇರಿಕನ್ ತಂಡವನ್ನು ಎದುರಿಸಿ ಆಡುತ್ತಿದೆಯೆಂದರೆ ನನ್ನೊಳಗಿನ ನೋಡುಗ ಯಾವ ದೇಶವನ್ನು ಪ್ರತಿಬಿಂಬಿಸುತ್ತಾನೆ, ಯಾವ ದೇಶವನ್ನು ಪ್ರೋತ್ಸಾಹಿಸುತ್ತಾನೆ ಎಂದು ಊಹಿಸಿಕೊಂಡಾಕ್ಷಣ ನಮ್ಮಂತಹವರು ವಲಸೆ ಬಂದು ಮತ್ತೊಂದು ದೇಶದ ನಾಗರಿಕತೆಯನ್ನು ಒಪ್ಪಿಕೊಂಡಿದ್ದೇ ಆದಲ್ಲಿ ಅದು ಒಂದು ಪಾಸ್‌ಪೋರ್ಟ್ ಕೊಟ್ಟು ಮತ್ತೊಂದು ಪಾಸ್‌ಪೋರ್ಟ್ ಅನ್ನು ಪಡೆದಷ್ಟು ಸುಲಭವಂತೂ ಅಲ್ಲ ಎನ್ನಿಸಿತು. ನಾವು ಹುಟ್ಟಿ ಬೆಳೆದ ದೇಶ, ನಮ್ಮಲ್ಲಿ ಹುದುಗಿದ ನಮ್ಮ ದೇಶದ ಇತಿಹಾಸ, ಪರಂಪರೆ ಇವುಗಳನ್ನೆಲ್ಲ ಒಂದೇ ಉಸಿರಿನಲ್ಲಿ ಬದಿಗೊತ್ತಲು ಪಾಸ್‌ಪೋರ್ಟ್ ಅಂತಹ ಪುಸ್ತಕಗಳಿಗೆ ಸಾಧ್ಯವಿರಲಾರದು.

ನಾವು ಇದ್ದಲ್ಲಿ ಹೋದಲ್ಲಿ ನಮ್ಮತನವನ್ನು ಉಳಿಸಿ-ಬೆಳೆಸಿಕೊಳ್ಳುವುದು ದೇಶದ್ರೋಹಿತನವಂತೂ ಅಲ್ಲ. ನಾವು ನಮ್ಮಲ್ಲಿಯ ಕ್ರೀಡೆ-ಕೌಶಲ್ಯಗಳನ್ನು ಆಡಿ ಅರಿತಂತೆ ಇಲ್ಲಿಯ ಕ್ರೀಡೆ ಅವುಗಳ ರೀತಿ ನೀತಿಯನ್ನು ಬಲ್ಲವರಲ್ಲ. ನಮಗೆ ಗೊತ್ತಿರುವ ಕ್ರಿಕೇಟ್ ಪಂದ್ಯಗಳ ನಿಯಮಗಳಷ್ಟು ಸುಲಭವಾಗಿ ಇಲ್ಲಿಯ ಬೇಸ್‌ಬಾಲ್ ಸೂತ್ರಗಳು ನಮ್ಮನ್ನು ಸುತ್ತುವರಿಯಲಾರವು. ನಮಗೆ ನಮದೇ ಆದ ಬ್ಯಾಸ್ಕೆಟ್ ಬಾಲ್, ಅಮೇರಿಕನ್ ಫುಟ್‌ಬಾಲ್ ಹಾಗೂ ಬೇಸ್‌ಬಾಲ್‌ಗಳ ಆಟಗಾರ ಪ್ರತಿಭೆಗಳ ಪಟ್ಟಿ ಇದ್ದರೂ ನಮ್ಮ ಕ್ರಿಕೆಟ್ ಆಟಗಾರರ ಹೆಸರುಗಳಷ್ಟು ಉದ್ದ ಪಟ್ಟಿ ಬೆಳೆಯಲಾರದು - ಪಟೌಡಿ, ಬೇಡಿ, ಮದನ್‌ಲಾಲ್, ಕಿರ್ಮಾನಿ, ಚಂದ್ರಶೇಖರ್, ಗವಾಸ್ಕರ್ ಅಲ್ಲಿಂದ ಹಿಡಿದು ತೆಂಡೂಲ್ಕರ್, ಧೋನಿ, ದ್ರಾವಿಡ್‌, ಕುಂಬ್ಳೆವರೆಗೆ ಬೆಳೆಯಲಾರದು, ಕ್ರಿಕೆಟ್ ಆಡುವ ಇತರೆ ಅಂತಾರಾಷ್ಟ್ರೀಯ ದೇಶಗಳ ಪೈಕಿ ಪ್ರತಿಯೊಂದು ದೇಶದ ಕೊನೆಪಕ್ಷ ಐದು ಆಟಗಾರರನ್ನು ಗುರುತಿಸುವ ನೆನಪು ಅಮೇರಿಕನ್ ಆಟಗಾರರ ಹೆಸರುಗಳನ್ನು ಉಳಿಸಿಕೊಳ್ಳಲಾರದು. ಮೊನ್ನೆ ಯಾರೋ ದಾನಕ್ಕೆ ಕೊಟ್ಟರೆಂದು ನ್ಯೂ ಯಾರ್ಕ್ Knicks ಬ್ಯಾಸ್ಕೆಟ್ ಬಾಲ್ ತಂಡದ ಟೋಪಿಯೊಂದನ್ನು ಹಾಕಿಕೊಂಡು ನ್ಯೂ ಯಾರ್ಕ್ ಸಿಟಿಯಲ್ಲಿ ತಿರುಗುತ್ತಿರುವಾಗ ಯಾರಾದರೂ ’Knicks ತಂಡದಲ್ಲಿ ನಿನ್ನ ಫೇವರೈಟ್ ಆಟಗಾರ ಯಾರು?’ ಎಂದು ಪ್ರಶ್ನಿಸಿದರೆ ಏನು ಉತ್ತರ ಹೇಳೋಣ ಎನ್ನಿಸಿ ಒಮ್ಮೆ ಹೆದರಿಕೆಯಾಗಿದ್ದಂತೂ ನಿಜ!

ಪೌರತ್ವ ಅನ್ನೋದು not just a status, rather it is status of mind. ಈ ವಾಕ್ಯವನ್ನು ಬೇಕಾದಷ್ಟು ರೀತಿಯಲ್ಲಿ ವಿವರಿಸಿಕೊಳ್ಳಬಹುದು. ನಾವು ಎಲ್ಲಿದ್ದರೇನು ಹೇಗಿದ್ದರೇನು ಭಾರತೀಯರಾಗಿಯೇ ಇರುತ್ತೇವೆ ಎನ್ನುವುದು ಒಂದು ಬಗೆಯಾದರೆ, ಒಮ್ಮೆ ಪೌರತ್ವದ ಸ್ಟೇಟಸ್ ಒಮ್ಮೆ ಬದಲಾದ ಮೇಲೆ ಅಫಿಷಿಯಲ್ ಆಗಿ ಹೊಸ ದೇಶವನ್ನು ಬೆಂಬಲಿಸೋದೇ ಅವರವರ ಕರ್ತವ್ಯ, ಹೀಗೆ ವಿಧವಿಧವಾಗಿ ನೋಡಬಹುದು. ಉದ್ಯೋಗ ಅನ್ನ-ನೀರು ಕೊಡುವ ದೇಶವೆಂದು ಅಮೇರಿಕವನ್ನು ಪ್ರೀತಿಸಿ ಗೌರವಿಸುವ ನನ್ನತನ ಅದೇ ಅಮೇರಿಕನ್ ಕ್ರೀಡಾಳುಗಳನ್ನು ಅಷ್ಟೇ ವಿಶ್ವಾಸದಿಂದ ನೋಡೋದಿಲ್ಲ, ಅವರನ್ನು ಹುರಿದುಂಬಿಸೋದಿಲ್ಲ. ಭಯೋತ್ಪಾದಕತನ-ದೇಶದ್ರೋಹ ಮೊದಲಾದ ಕಟ್ಟು ನಿಟ್ಟಾದ ಪದಗಳಿಗೆ ಸಿಗದ ವಿಶೇಷ ನಿಲುವು ನಮ್ಮಂತಹವರದ್ದು - ಜೊತೆಗೆ ನಾವು ಯಾರಿಗೂ ಯಾವ ತೊಂದರೆಯನ್ನೂ ಕೊಡೋದಿಲ್ಲ ಎನ್ನುವುದೂ ಮುಖ್ಯ. ಒಲಂಪಿಕ್ಸ್ ಪಂದ್ಯಗಳಲ್ಲಿ ಯಾವುದೋ ಬಡದೇಶದ ಸ್ಪರ್ಧಿ ವಿಶ್ವದ ಬಲಾಢ್ಯ ರಾಷ್ಟ್ರಗಳ ಎದುರು ಸೆಣೆಸಿ ಚಿನ್ನವನ್ನು ಪಡೆದಾಗ ಆ ಸ್ಪರ್ಧಿ ಹಾಗೂ ಆತನ ದೇಶವನ್ನು ನಾನು ಬೆಂಬಲಿಸೋದು ಅಮೇರಿಕದ ವಿರೋಧಿ ನಿಲುವುಗಳಿಂದಲಂತೂ ಅಲ್ಲವೇ ಅಲ್ಲ. ಅಮೇರಿಕದಂತಹ ಮುಂದುವರೆದ ದೇಶಗಳಲ್ಲಿ ಪ್ರತಿಭೆ ಇದ್ದವರಿಗೆ ಕ್ರೀಡೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಯಾವ ರೀತಿಯ ಬೆಲೆ, ಬೆಂಬಲ, ಅವಕಾಶಗಳು ದೊರಕುತ್ತವೆ ಎನ್ನುವುದು ಎಲ್ಲರಿಗೂ ಗೊತ್ತು, ಅದೇ ಬಡದೇಶಗಳಲ್ಲಿ ಅಷ್ಟೊಂದು ಕೊರತೆಗಳ ನಡುವೆ ಒಬ್ಬ ಸ್ಪರ್ಧಿ ಎಲ್ಲರನ್ನೂ ಮೀರಿಸಿ ಮುಂದೆ ಬರುವುದು ನಿಜವಾಗಿಯೂ ದೊಡ್ಡದು ಎನ್ನುವ ಕಾರಣದಿಂದ ಅದು ಮನಸ್ಸಿಗೆ ಹತ್ತಿರವಾಗುತ್ತದೆ. ಈವರೆಗೆ ಭಾರತ ಗಳಿಸಿದ ಒಂದೇ ಒಂದು ಸ್ವರ್ಣ ಪದಕ ಅದಕ್ಕೆ ಸಂಬಂಧಿಸಿದ ಸುದ್ದಿ-ಚಿತ್ರಗಳು ನಮ್ಮವರು ಎಷ್ಟೋ ವರ್ಷಗಳ ನಂತರ ಗೆದ್ದರಲ್ಲ ಎನ್ನುವ ರೋಮಾಂಚನ ಉಂಟು ಮಾಡುತ್ತದೆ, ಈ ಮಾನಸಿಕ ನೆಲೆಗಟ್ಟಿಗೆ ಹೋಲಿಸಿದ್ದಲ್ಲಿ ಅಮೇರಿಕದವರು ಮೇಲಿಂದ ಮೇಲೆ ಗೆಲ್ಲುತ್ತಲೇ ಇರುವ ಪದಕಗಳು ಗೌಣವಾಗುತ್ತವೆ.

ನಮ್ಮಲ್ಲಿನ ಭಾರತೀಯತೆ ಎನ್ನೋದು ಬರೀ ಪಾಸ್‌ಪೋರ್ಟ್ ಎನ್ನುವ ಪುಸ್ತಕವಂತೂ ಅಲ್ಲ, ಅದಕ್ಕೂ ಮಿಗಿಲಾಗಿ ನಮ್ಮ ಚರ್ಮದ ಬಣ್ಣಕ್ಕಷ್ಟೇ ಸೀಮಿತವಾಗೂ ಇಲ್ಲ. ನಮ್ಮಲ್ಲಿನ ಸಂವೇದನೆಗಳು ಎಂದಿಗೂ ಭಾರತೀಯ ಸಂವೇದನೆಗಳು ಎನ್ನುವುದು ದೃಢವಾದಲ್ಲಿ ನಮ್ಮ ಸಂವಿಧಾನ ಬದ್ಧವಾದ ಗುರುತಿನ ಚೀಟಿ ಇದ್ದರೆಷ್ಟು ಬಿಟ್ಟರೆಷ್ಟು ಎನ್ನುವುದೂ ಮತ್ತೊಂದು ತರ್ಕವಾಗುತ್ತದೆ. ನಮ್ಮಲ್ಲಿನ ದೇಶಪ್ರೇಮ, ದೇಶಭಕ್ತಿ ಎನ್ನುವ ಭಾವನೆಗಳು, ತಳಮಳಗಳು ಅಮೇರಿಕದ ಪರ್ಲ್ ಹಾರ್ಬರ್ ನಂತಹ ಐತಿಹಾಸಿಕ ಘಟನೆಗಳಿಗೆ ಹೇಗಾದರೂ ಸ್ಪಂದಿಸಬಲ್ಲವು, ಅದೇ ಹತ್ತೊಂಭತ್ ನೂರಾ ಹತ್ತೊಂಭತ್ತರಲ್ಲಿ (1919) ಬ್ರಿಟೀಷ್ ಸರ್ಕಾರ ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ಎದೆ ನಡುಗುವಂತೆ ಮಾಡಿದ್ದನ್ನು ನಾವು ಮರೆಯುವುದಾರೂ ಹೇಗೆ?

ಯಾವ ನಾಗರಿಕತೆಯಲ್ಲಿ ನಾವು ನಮ್ಮನ್ನು ಕರಗಿಸಿಕೊಳ್ಳುವುದಿಲ್ಲವೋ, ಎಲ್ಲಿ ನೋವು-ನಲಿವುಗಳು ಐತಿಹಾಸಿಕವಾಗಿ ಒಬ್ಬನ ಮೈಮನಸ್ಸುಗಳಲ್ಲಿ ಹಾಸುಹೊಕ್ಕಾಗಿ ಸೇರಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅದು ಪುಸ್ತಕದ ಮಟ್ಟದಲ್ಲಿ ಮಾತ್ರ ಉಳಿಯುತ್ತದೆ. ಅದನ್ನು ಪೌರತ್ವ/ಸಿಟಿಜನ್‌ಶಿಪ್ ಎಂದೇನಾದರೂ ಕರೆದುಕೊಳ್ಳಿ ನಮ್ಮೊಳಗಿನ ಉಸಿರಿರುವವರೆಗೆ ’ವಂದೇ ಮಾತರಂ’ ಹಾಗೂ ’ಜನಗಣಮನ’ವನ್ನು ಮರೆಯದ ನಾವು ಮತ್ತೊಂದು ದೇಶದ ಹಕ್ಕು-ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸುವಷ್ಟರ ಮಟ್ಟಿಗೆ ಅಲ್ಲಿನ ಪೌರರಾಗುತ್ತೇವೆ ಎನ್ನುವುದು ನಿಜವೆನಿಸುತ್ತದೆ.