Showing posts with label ಕಾಡುವ ಹಾಡು. Show all posts
Showing posts with label ಕಾಡುವ ಹಾಡು. Show all posts

Wednesday, January 31, 2024

ಕಾಡುವ ಹಾಡು: ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಕಾಡುವ ಹಾಡು: ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ (ಅನಂತ ಪ್ರಣಯ)

ಕವಿ: ದ.ರಾ. ಬೇಂದ್ರೆ

ಚಿತ್ರ: ಶರಪಂಜರ

ನಿರ್ದೇಶಕ: ಕಣಗಾಲ್ ಪುಟ್ಟಣ್ಣ

ಸಂಗೀತ: ವಿಜಯ ಭಾಸ್ಕರ್

ಗಾಯಕರು: ಪಿ.ಬಿ. ಶ್ರೀನಿವಾಸ್, ಪಿ. ಸುಶೀಲ

ನಟನೆ: ಗಂಗಾಧರ್, ಕಲ್ಪನ

ಚಿತ್ರ ಬಿಡುಗಡೆಯಾದ ವರ್ಷ: 1971

ಚಿತ್ರಕತೆ, ಕಾದಂಬರಿ: ತ್ರಿವೇಣಿ

ಶರಪಂಜರ, ಕನ್ನಡದ ಒಂದು ಶ್ರೇಷ್ಠ ಸಿನಿಮಾಗಳಲ್ಲೊಂದು. ಕತೆ, ನಟ, ನಟಿ, ನಿರ್ದೇಶಕ, ಸಹ ನಟರು ಹೀಗೆ ಎಲ್ಲ ಕಾರಣಗಳಿಂದಲೂ ಮನಸ್ಸಿಗೆ ಹತ್ತಿರವಾಗುವ ಈ ಸಿನಿಮಾ, ಇದರ ಪ್ರತಿಯೊಂದು ಹಾಡುಗಳೂ ಕೂಡ ಕನ್ನಡಿಗರ ಮನದಲ್ಲಿ ಇಂದಿಗೂ ಗುನುಗುವಷ್ಟರ ಮಟ್ಟಿಗೆ ಪ್ರಸಿದ್ದಿಯನ್ನು ಪಡೆದಿವೆ. ಈ ಚಿತ್ರದಲ್ಲಿ ವಿಜಯ್ ಭಾಸ್ಕರ್ ಅವರ ಸಂಗೀತ, ಮತ್ತು ಪಿ.ಬಿ. ಶ್ರೀನಿವಾಸ್-ಪಿ. ಸುಶೀಲ ಅವರ ಗಾಯನವನ್ನು ನಾವು ಮರೆಯಲು ಸಾಧ್ಯವೇ ಇಲ್ಲ.

ಈ ವಿವರಣೆಯನ್ನು ಓದಿದ ಮೇಲೆ, ಕೇವಲ ಮೂರು ನಿಮಿಷ 33 ಸೆಕೆಂಡುಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲು ಆಗ ಅವರಿಗೆ ಅದೆಷ್ಟು ಕಷ್ಟವಾಗಿದ್ದಿರಬಹುದು ಎಂದು ಊಹಿಸಬಹುದು.


ಅನಂತ ಪ್ರಣಯ

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಚುಂಬಕ ಗಾಳಿಯು ಬೀಸುತಿದೆ 

ಸೂರ್ಯನ ಬಿಂಬಕೆ ಚಂದ್ರನ ಬಿಂಬವು

ರಂಜಿಸಿ ನಗೆಯಲಿ ಮೀಸುತಿದೆ|


ಭೂರಂಗಕೆ ಅಭಿಸಾರಕೆ ಕರೆಯುತ

ತಿಂಗಳು ತಿಂಗಳು ನವೆಯುತಿದೆ

ತುಂಬುತ ತುಳುಕುತ ತೀರುತ ತನ್ನೊಳು

ತಾನೇ ಸವಿಯನು ಸವಿಯುತಿದೆ|


ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ

ಕೋಟಿ ಕೋಟಿ ಸಲ ಹೊಸೆಯಿಸಿತು

ಮಿತ್ರನ ಮೈತ್ರಿಯ ಒಸಗೆ ಮಸಗದಿದೆ

ಮರುಕದ ಧಾರೆಯ ಮಸೆಯಿಸಿತು|


ಅಕ್ಷಿನಿಮೀಲನ ಮಾಡದೆ ನಕ್ಷತ್ರದ

ಗಣ ಗಗನದಿ ಹಾರದಿದೆ

ಬಿದಿಗೆಯ ಬಿಂಬಾಧರದಲಿ ಇಂದಿಗು

ಮಿಲನದ ಚಿಹ್ನವು ತೋರದಿದೆ|

****

ಹಾಡಿನ ಆರಂಭದಲ್ಲಿ ಸೂರ್ಯಾಸ್ತಮಾನದ ಚಿತ್ರಣ, ನಾಯಕಿ ಮತ್ತು ನಾಯಕ ಒಂದು ಬೆಟ್ಟದ ತುದಿಯಲ್ಲಿ ಕುಳಿತು ಮುಳುಗುತ್ತಿರುವ ಸೂರ್ಯನತ್ತ ಕೈ ಚಾಚಿಕೊಂಡು ಹಾಡುವರು:

"ಓಹೋಹೋ....ಓ ಓ ಓ..."

"ಆಹ ಹಹಾ...... ಆ ಆ ಆ..."


ಉತ್ತರಧ್ರುವದಿಂ ದಕ್ಷಿಣಧ್ರುವಕೂ ಚುಂಬಕ ಗಾಳಿಯು ಬೀಸುತಿದೆ

ಸೂರ್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ ನಗೆಯಲಿ ಮೀಸುತಿದೆ!

ಹೀಗೇ ಹೇಳುತ್ತಾ ನಾಯಕಿ ತನ್ನ ಕೈಯನ್ನು ಅಲೆಗಳೋಪಾದಿಯಲ್ಲಿ ಆಡಿಸುತ್ತಾಳೆ. ಈ ಮೂರು ನಿಮಿಷಗಳ ಹಾಡಿನ ಚಿತ್ರಣವನ್ನು ಯಾವ ಯಾವ ರೀತಿಯಲ್ಲಿ ಮಾಡಬಹುದಿತ್ತು ಎನ್ನುವುದನ್ನು ತಂತ್ರಜ್ಞ್ನರಿಗೆ ಬಿಟ್ಟರೆ, ಐವತ್ತು ವರ್ಷಗಳಿಗಿಂತ ಮೊದಲು ತಮ್ಮಲ್ಲಿರುವ ಕ್ಯಾಮರಾಗಳನ್ನು ಬಳಸಿ ಒಂದು ಸುಂದರವಾದ ರಸಕಾವ್ಯವನ್ನು ಕಟ್ಟಲು ಪ್ರಯತ್ನಿಸಿದ್ದಾರೆ ಎನ್ನಬಹುದು. ಸೂರ್ಯಾಸ್ತಮಾನದಿಂದ ಆರಂಭವಾಗಿ ಸೂರ್ಯಾಸ್ತಮಾನದಲ್ಲಿ ಕೊನೆಯಾಗುವ ಹಾಡು, ತನ್ನೊಡಲಾಳದಲ್ಲಿ ಅದೇನೋ ರಹಸ್ಯವನ್ನು ಬಚ್ಚಿಟ್ಟುಕೊಂಡ ಅನುಭವವಾಗುತ್ತದೆ!


"ಅನಂತ ಪ್ರಣಯ"ದ ಈ ಎರಡು ಸಾಲುಗಳಲ್ಲಿ ಕವಿ, ಸೂರ್ಯಮಂಡಲ, ಭೂಮಿ, ಸೌರವ್ಯೂಹ ಇವೆಲ್ಲದರ ಆಂತರಿಕ ಸತ್ಯವಾದ ಚುಂಬಕತೆ (magnetism) ಬಗ್ಗೆ ಸೂಕ್ಷ್ಮವಾಗಿ ಹೇಳುತ್ತಾರೆ. ಇದನ್ನು ಪ್ರಣಯ ಎಂದುಕೊಳ್ಳಬಹುದು, ಆಕರ್ಷಣೆ ಎಂದು ಕೂಡ ಅಂದುಕೊಳ್ಳಬಹುದು. ಆದರೆ, ಚುಂಬಕತೆಯಲ್ಲಿ ಪರಸ್ಪರ ವಿರುದ್ಧ ಧ್ರುವಗಳು ಆಕರ್ಷಣೆಗೊಳಗಾಗುವುದು ಎಂದಿಗೂ ಸತ್ಯವಾದ ಅಂಶ. ಆದರೆ, ಈ ವೈಜ್ಞಾನಿಕ ಸತ್ಯವನ್ನ ಕವಿ ತನ್ನದೇ ಆದ ದಾರ್ಶನಿಕತೆಗೆ ಒಳಪಡಿಸಿ, ಸುಂದರವಾದ ಅನೇಕ ಉಪಮೆ-ಉಪಮಾನಗಳೊಂದಿಗೆ ಪ್ರಸ್ತುತ ಪಡಿಸುವುದೇ ಅನಂತ ಪ್ರಣಯ. ಈ ವ್ಯವಸ್ಥಿತವಾದ ಕಥನವನ್ನ ಅಷ್ಟೇ ಸುಂದರವಾಗಿ ಕಲ್ಪಿಸಿಕೊಂಡು ಚಿತ್ರದಲ್ಲಿ ಮೂಡಿಸಿರುವ ಹಿರಿಮೆ ನಟ-ನಟಿ-ನಿರ್ದೇಶಕರದ್ದು.  ಮೂಲ ಭಾವಗೀತೆಗೆ ಎಲ್ಲಿಯೂ ಚ್ಯುತಿ ಬರದೆ, ಕಷ್ಟವಾದ ಸಾಹಿತ್ಯವನ್ನ ಮನದಟ್ಟು ಮಾಡಿಕೊಂಡು ಹಾಡಿದ ಹಿರಿಮೆ ಗಾಯಕರದ್ದು.

ಭೂಮಿ ಮತ್ತು ಭೂಮಂಡಲ ವ್ಯವಸ್ಥೆಯಲ್ಲಿ ಕೇವಲ ಸೂರ್ಯನೊಬ್ಬನಷ್ಟೇ ಅಲ್ಲ, ಅಲ್ಲಿ ಚಂದ್ರನ ಪಾತ್ರವೂ ಇದೆ. ಭೂಮಿ-ಸೂರ್ಯ-ಚಂದ್ರರ ನಡುವೆ ಇರುವ ಬಾಂಧ್ಯವದ ಹಂಬಲವೇ ಮುಂದಿನ ಸಾಲು. 

ಸೂರ್ಯನ ಬಿಂಬಕೆ ಚಂದ್ರನ ಬಿಂಬವು ಎನ್ನುವಲ್ಲಿ ಚಂದ್ರನಿಗೆ ಸ್ವಯಂ ಪ್ರಕಾಶವಿಲ್ಲ ಚಂದ್ರನೇನೋ ಬಿಂಬಿಯಾಗಿದ್ದಾನೆ, ಆದರೂ ಸೂರ್ಯನನ್ನು ಬಿಂಬವೆಂದೇಕೆ ಕರೆದರು? ಇರಲಿ, ಇವರಿಬ್ಬರ ಬಿಂಬಗಳು ಒಬ್ಬರನೊಬ್ಬರು ರಂಬಿಸಿ (ರಮಿಸಿ, ಸಮಾಧಾನ ಪಡಿಸಿ, ಸಂತೈಸಿ) ನಗೆಯಲಿ ಮೀಸುತಿದೆ (ಸ್ನಾನ ಮಾಡಿಸು, ಮುಳುಗೇಳಿಸು).

ಸೂರ್ಯ-ಭೂಮಿಯರ ನಡುವಿನ ಅವಿನಾಭಾವ ಸಂಬಂಧ ಎಂದಿಗೂ ಇರುವುದೇ, ಆದರೆ, ಭೂಮಿಯ ಮೇಲಿನ ಚಂದ್ರನ ಹಂಬಲ ಹೇಗೆ ವಿಶೇಷವಾದದ್ದು, ಎನ್ನುವುದನ್ನು ಮುಂದಿನ ಸಾಲಿನಲ್ಲಿ ಕವಿ ವಿವರಿಸಿದ್ದಾರೆ:

ಭೂರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ

ತುಂಬುತ ತುಳುಕುತ ತೀರುತ ತನ್ನೊಳು ತಾನೇ ಸವಿಯನು ಸವಿಯುತಿದೆ.

ಭೂರಂಗಕೆ, ಅಭಿಸಾರಕೆ (ಪ್ರಿಯರ ಭೇಟಿಗಾಗಿ ಸಂಕೇತ ಸ್ಥಾನಕ್ಕೆ ಹೋಗುವ ಕ್ರಿಯೆ) ಕರೆಯುತ ತಿಂಗಳು (ಚಂದ್ರ), ತಿಂಗಳು ನವೆಯುತ್ತಾನೆ (ಕ್ಷೀಣಿಸುತ್ತಾನೆ ಮತ್ತೆ ಮೈ ತುಂಬಿಕೊಳ್ಳುತ್ತಾನೆ). ತಾನು ಮೈ ತುಂಬಿಕೊಂಡಾಗ ತನ್ನನ್ನು ಭೂಮಿ ಸೇರಬಹುದು ಎಂದು ಆಸೆಯನ್ನು ತಿಂಗಳ ಬೆಳಕಿನ ಮೂಲಕ ವ್ಯಕ್ತಪಡಿಸುತ್ತಾನೆ. ಈ ರೀತಿಯಾದ ನವಿರಾದ ಆಲೋಚನೆಗಳನ್ನ ಪ್ರತಿ ತಿಂಗಳು ತುಂಬುತ, ತುಳುಕುತ, ತೀರುತ ತನ್ನೊಳಗೆ ತಾನೇ ಸವಿಯನ್ನು ಸವಿಯುತ್ತಿದ್ದಾನೆ. ತುಳುಕುವುದು ಎಂದರೆ, ಬಿಂದಿಗೆಯಲ್ಲಿರುವ ನೀರು ತುಳುಕುವ ಹಾಗೆ, ಈ ಚಂದ್ರನ ವರ್ತನೆಯಿಂದ (ಕ್ಷೀಣಿಸುವುದು ಮತ್ತು ಮೈ ತುಂಬಿಕೊಳ್ಳುವುದು), ಭೂಮಿಯ ಮೇಲಿನ ನೀರಿನಲ್ಲಿ ಅಲೆಗಳು ತುಂಬಿ ತುಳುಕುವ ಹಾಗಿರಬಹುದು.

ಚಂದ್ರನ ಪರಿಸ್ಥಿತಿ ತಿಂಗಳಿಗೊಮ್ಮೆ ಹೀಗಿರುವಾಗ, ಭೂಮಿಯ ಪರಿಸ್ಥಿತಿ ಹೇಗಿರಬಹುದು ನೋಡಿ (ಭೂಮಿಯ ಸಂಬಂಧ ಸೂರ್ಯನ ಜೊತೆಯೂ ಇದೆ ಎನ್ನುವುದು ನೆನಪಿನಲ್ಲಿರಲಿ):

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸಯಿಸಿತು

ಮಿತ್ರನ ಮೈತ್ರಿಯ ಒಸಗೆ ಮಸಗದಿದೆ ಮರುಕದ ಧಾರೆಯ ಮಸೆಯಿಸಿತು.

ಭೂಮಿಯ ಚಲನೆಯಲ್ಲಿ ಏನು ವ್ಯತ್ಯಾಸ. ಚಂದ್ರನಂತೆ ಭೂಮಿ ತಿಂಗಳಿಗೆರಡು ಬಾರಿ ಬದಲಾಗಲಾರಳು.  ಭೂಮಿಯ ಚಲನೆಯಿಂದಾಗಿ ಆರು ಋತುಗಳು ನಿರ್ಮಾಣಗೊಳ್ಳುತ್ತವೆ - ವಸಂತ, ಗ್ರೀಷ್ಮ, ವರ್ಷ, ಶರತಿ, ಹೇಮಂತ್ , ಮತ್ತು ಶಿಶಿರ.

ಭೂಮಿಯ ಮೇಲಿನ ವನ - ಭೂವನ, ಕುಸುಮಿಸಿ, ಹೂವಾಗಿ ಅರಳಿ, ಪುಲಕಿಸಿ, ಪುಲಕಗೊಂಡು, ಮರಳಿಸಿ - ಹೀಗೆ ಕೋಟ್ಯಾಂತರ ವರ್ಷಗಳಿಂದ ಈ ಪ್ರಕ್ರಿಯೆ ನಡೆದಿದೆ. ಇಲ್ಲಿ ಹೊಸೆಯಿಸಿ, ಎಂದರೆ ಹೊಸತನ ಪಡೆದು ಎಂದೂ, ತಮ್ಮೊಳಗೊಂದಾಗಿ ಹೊಸೆದು-ಬೆಸೆದುಕೊಂಡೂ ಎಂದೂ ಅರ್ಥ ಮಾಡಿಕೊಳ್ಳಬಹುದು. ಭೂಮಿಯ ಮೇಲಿನ ಈ ಬದಲಾವಣೆ ಎಲ್ಲವೂ ಸೂರ್ಯನ ಕಿರಣಗಳ ದಯೆಯಿಂದ ಆದದ್ದು. ಭೂಮಿ, ಸೂರ್ಯನಿಂದ ಎಷ್ಟು ದೂರದಲ್ಲಿ, ಯಾವ ಕೋನದಲ್ಲಿ ತಿರುಗುತ್ತಿದ್ದಾಳೆ ಎನ್ನುವುದರ ಮೇಲೆ ಇಲ್ಲಿನ ಎಲ್ಲ ಋತುಮಾನಗಳು ಆಗುವುದಲ್ಲವೇ?

ಆದರೆ, ಈ ಭೂಮಿಯ ಈ ಮಹತ್ತರವಾದ ಬದಲಾವಣೆಗೆ ಸೂರ್ಯನ ಅನಿಸಿಕೆ ಏನಿರಬಹುದು? ಮಿತ್ರನ (ಸೂರ್ಯ) ಮೈತ್ರಿಯ (ಕೂಡುವಿಕೆ, ಬಂಧನ), ಒಸಗೆ (ಸಂದೇಶ) ಮಸಗದಿದೆ (ಇನ್ನೂ ಕಳೆಗುಂದದಿರುವುದು), ಮರುಕದ (ಕರುಣೆಯ) ಧಾರೆಯನ್ನ (ನೀರು ಸುರಿಯುವುದು, ನೀರು ಎರೆದು ಕೊಡುವ ದಾನ, ಮದುವೆಯ ಒಂದು ವಿಧಿ) ಮಸೆಯಿಸಿತು (ಕಳೆಗುಂದದೇ ಇನ್ನೂ ಹೆಚ್ಚಾಗುತ್ತಲೇ ಇರುವುದು).

ಒಂದೊಂದು ಪದವನ್ನೂ ಸಹ ವ್ಯವಸ್ಥಿತವಾಗಿ ಪೋಣಿಸಿ ಒಂದು ಪ್ರಣಯದ ಎರಡು ಮುಖಗಳನ್ನು ಸಂಪೂರ್ಣವಾಗಿ ಚಿತ್ರಿಸಿಕೊಡುವ ಕವಿಯ ಜಾಣತನವನ್ನು ಇಲ್ಲಿ ಗುರುತಿಸಬಹುದು.

ಬೇಂದ್ರೆಯವರ ಒಂದು ಉಪಮೆ - ಗಿಡಗಂಟೆಗಳ ಕೊರಳೊಳಗಿಂದ ಹೊರಟಿತು, ಹಕ್ಕಿಗಳಾ ಹಾಡು - ಇದನ್ನು ಮೂಡಲ ಮನೆಯ ಪದ್ಯವನ್ನು ಓದಿದವರಿಗೆ ನೆನಪಿರುತ್ತದೆ. ಈ ರೀತಿಯ ಉಪಮೆಯು, ಕನ್ನಡವನ್ನು ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿಯೂ ನೋಡಲು, ಕೇಳಲು ಸಿಗಲಾರದು ಎನ್ನುವುದು ನನ್ನ ನಂಬಿಕೆ. ಅಂತಹದೇ ಇನ್ನೊಂದು ಉಪಮೆ ಮುಂದಿನ ಚರಣದಲ್ಲಿ ನೋಡಿ:

ಅಕ್ಷಿನಿಮೀಲನ ಮಾಡದ ನಕ್ಷತ್ರದ ಗಣ ಗಗನದಿ ಹಾರದಿದೆ

ಬಿದಿಗೆಯ ಬಿಂಬಾಧರನಲಿ ಇಂದಿಗು ಮಿಲನದ ಚಿಹ್ನವು ತೋರದಿದೆ.

ಅಕ್ಷಿ ನಿಮೀಲನ ಮಾಡದ ನಕ್ಷತ್ರದ ಗಣ, ಅಕ್ಷಿ ನಿಮೀಲನ ಎಂದರೆ ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿರುವುದು, ಎವೆಯಿಕ್ಕಿ ನೋಡುವುದು, ಆದರೆ, ನಡುವೆ ರೆಪ್ಪೆಗಳು ಪಟಪಟನೆ ಹೊಡೆದುಕೊಳ್ಳುವ ಹಾಗೆ, ನಕ್ಷತ್ರಗಳನ್ನ ನೋಡಿದ ಕವಿಗೆ ಹೀಗನ್ನಿಸಿತು. ಈ ಅನಂತ ಪ್ರಣಯದಲ್ಲಿ ಕೇವಲ ಭೂಮಿ, ಚಂದ್ರ, ಸೂರ್ಯರನ್ನು ಮಾತ್ರ ಉಲ್ಲೇಖಿಸಿದರೆ ಸಾಕೆ? ನಕ್ಷತ್ರಗಳೂ, ನಕ್ಷತ್ರಪುಂಜಗಳೂ ಬೇಕಲ್ಲ? ಅವುಗಳ ಗತಿಯೇನು? ಅವುಗಳ ಕತೆ ಏನು?

ಈ ಅನಂತ ಪ್ರಣಯಕ್ಕೆ ಸಾಕ್ಷಿಯಾಗಿ ದೇವತೆಗಳ ಗಣಗಳು ನಕ್ಷತ್ರಗಳಾಗಿ ತೋರುತ್ತಿರಬಹುದು. ಮಾಡದ (ಮಾಡದೇ ಇರುವ, ಮಾಡ ಎಂದರೆ ಛಾವಣಿ, ಛಾವಣಿ ಮೇಲಿರುವ) ನಕ್ಷತ್ರಗಳ ಗಣ (ಗುಂಪು) ಗಗನದಿ ಹಾರದಿದೆ (ಹಾರುತ್ತಿವೆ, ಹಾರದೆ ಇವೆ, ಹೂವಿನ ಹಾರದಂತೆ ತೋರುತ್ತಿವೆ). ಹೀಗೆ ಒಂದೊಂದು ಪದದಲ್ಲಿ ಎರಡೆರಡು ಅರ್ಥಗಳು ಬರುವಂತೆ ಇರುವ ಬಿಗಿಯಾದ ಹೆಣಿಗೆ ಇದು.  ಹೀಗಿರುವಾಗ ಬಿದಿಗೆಯ ಬಿಂಬ (ಚಂದ್ರನ ಸಣ್ಣ ಗೆರೆ, ಆದರೆ ಬಿದಿಗೆಯ ಚಂದ್ರ ಮುಂದೆ ದೊಡ್ಡದಾಗಿ ಬೆಳೆಯುವ ಆಸೆಯನ್ನು ಇಟ್ಟುಕೊಂಡವನು), ಇಂದಿಗೂ ತನ್ನ ಆಸೆಯನ್ನು ಜೀವಂತವಾಗಿ ಇಟ್ಟುಕೊಂಡವನು. ಈ ಬಿದಿಗೆಯ ಚಂದ್ರನ ಬಿಂಬ ಮಿಲನದ ಚಿಹ್ನೆ (ಸೂಚನೆ) ಯಾಗಿ ತೋರುತ್ತಿದೆ.

ಹೀಗೆ ಭೂಮಿ-ಚಂದ್ರ-ಸೂರ್ಯ-ನಕ್ಷತ್ರ ಗಣಗಳ ಸಮೇತ ನಡೆಯುತ್ತಿರುವ ಈ ನಿರಂತರ ಬದಲಾವಣೆಯೇ ಕವಿಯ ಕಲ್ಪನೆಯಲ್ಲಿ ಅನಂತ ಪ್ರಣಯವಾಗಿ ಕಂಡುಬಂದಿರುವುದು. ಪದದಿಂದ ಪದಕ್ಕೆ, ಅನೇಕ ಉಪಮೆ-ಉಪಮಾನಗಳ ಸಹಾಯದಿಂದ ಪರಿಸರದಲ್ಲಿನ ದೈನಿಕ-ಮಾಸಿಕ ಬದಲಾವಣೆಗಳನ್ನು ಎಷ್ಟು ಸೂಕ್ಷ್ಮವಾಗಿ ಸೆರೆಹಿಡಿದ್ದಾರೆಂದರೆ, ಈ ಕವನವನ್ನು ಮತ್ತೆ ಮತ್ತೆ ಓದಿದಂತೆಲ್ಲ ಹೆಚ್ಚು ಹೆಚ್ಚು ಕೋನಗಳಿಂದ ಅರ್ಥವಾಗುವುದು.

ಈ ಹಾಡನ್ನುಇಲ್ಲಿ ನೋಡಬಹುದು.

Friday, February 25, 2022

ಕಾಡುವ ಹಾಡು: ಕಾಣದ ಕಡಲಿಗೆ

ಹಾಡು: ಕಾಣದ ಕಡಲಿಗೆ

ಕವಿ: ಜಿ. ಎಸ್. ಶಿವರುದ್ರಪ್ಪ, ಚೆಲುವು-ಒಲವು ಕವನ ಸಂಕಲನ (1951-52)

ಕವನದ ಶೀರ್ಷಿಕೆ: ತೊರೆಯ ಹಂಬಲ

ಗಾಯನ ಮತ್ತು ಸಂಗೀತ ಸಂಯೋಜನೆ: ಸಿ. ಅಶ್ವಥ್

ಈ ಹಾಡು ಕನ್ನಡಿಗರಿಗೆ ಬಹಳ ವಿಶೇಷವಾದ ಮೆಲೋಡಿಗಳಲ್ಲೊಂದು.  ಭಾವಗೀತೆಗಳ ಯಾದಿಯಲ್ಲಿ ಒಂದು ರೀತಿಯ ತನ್ಮಯತೆ ಮತ್ತು ತನ್ನದೇ ಆದ ಗಾಢತೆಯನ್ನು ಒಳಗೊಂಡಿರುವ ಈ ಕವನವನ್ನು ಸಿ. ಅಶ್ವಥ್ ಅವರು ಮನೋಜ್ಞವಾಗಿ ಹಾಡಿದ್ದಾರೆ.  ಹಾಡಿನುದ್ದಕ್ಕೂ ಬಳಸಿರುವ ಇನ್ಸ್ಟ್ರುಮೆಂಟ್‌ಗಳು ಒಂದಕ್ಕಿಂದ ಒಂದರಂತೆ ತಮ್ಮ ಕರ್ತವ್ಯವನ್ನು ನಿಭಾಯಿಸಿ ಕೇಳುಗರ ಮನಸ್ಸನ್ನ ಸೂರೆಗೊಂಡಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ!

ಹಾಡಿನ ಉದ್ದಕ್ಕೂ "ಕಾಣದ ಕಡಲಿನ" ಮಹತ್ವವನ್ನು first person ಉದ್ದೇಶದಲ್ಲಿ ವಿವರಿಸಿರುವುದರಿಂದ ಈ ಹಾಡಿನ ಮೂಲ ವ್ಯಕ್ತಿಯನ್ನಾಗಿ ನಾವು "ತೊರೆ" ಯನ್ನು ಕಾಣಬಹುದು. ಕಡಲಿನ ಒಂದು ಭಾಗವಾಗಿ ಕಡಲನ್ನು ಸೇರುವ ತವಕದಲ್ಲಿರುವ ಈ ಮಹಾ ಹಂಬಲದ ಸೂಕ್ಷ್ಮ "ನೀರಿಗೆ" ಅಲ್ಲದೇ ಮತ್ತಿನ್ಯಾರಿಗೆ ಬರಬೇಕು.  ಈ ಲೇಖನದ ಉದ್ದಕ್ಕೂ "ತೊರೆ" ಅನ್ನು ಕುರಿತೇ ಮಾತನಾಡೋಣ.

***

ಒಂದು ರೀತಿ ಪಂಚಮಿ ಹಬ್ಬದ ಜೋಕಾಲಿಯಂತೆ ತೂಗುವ ಕೊಳಲಿನ ಗಾನದೊಂದಿಗೆ ಆರಂಭವಾಗುವ ಈ ಹಾಡಿಗೆ, ಕೇವಲ ಹತ್ತು ಸೆಂಕೆಂಡುಗಳಲ್ಲಿ ನೂರು ವಯಲಿನ್‌ಗಳು ತಮ್ಮ ಮೊರೆತವನ್ನು ಪ್ರಚುರ ಪಡಿಸುವುದರ ಮೂಲಕ ತಮ್ಮ ಇರುವಿಕೆಯನ್ನು ತೋರ್ಪಡಿಸುವುದರ ಜೊತೆಗೆ ಜರಡಿಯಲ್ಲಿ ಜೊಳ್ಳನ್ನು ಕೆಳಗೆ ತೂರಿ ಕೇವಲ ಗಟ್ಟಿಯಾದುದನ್ನು ಮಾತ್ರ ಮೇಲೆ ಇರಿಸಿಕೊಳ್ಳುವ ಹಾಗೆ ನಮ್ಮ ಮನಸ್ಸನ್ನು ಮುಂದಿನ ಸವಾಲಿಗೆ ತಯಾರು ಮಾಡಲು ಪ್ರಯತ್ನಿಸುತ್ತವೆ. ಈ ಹತ್ತು ಸೆಕೆಂಡುಗಳ ವಯಲಿನ್ ಸಹವಾಸದ ನಂತರ ಮತ್ತೆ ಸಮಾಧಾನದ ದನಿಯಲ್ಲಿ ಕೊಳಲು ಪ್ರತ್ಯಕ್ಷವಾಗುತ್ತಿದ್ದಂತೆ ಹಾಡು ಆರಂಭವಾಗುತ್ತದೆ.

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣಬಲ್ಲೆನೆ ಒಂದು ದಿನ 

ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣಬಲ್ಲೆನೆ ಒಂದು ದಿನ

ಕಡಲನು ಕೂಡಬಲ್ಲೆನೆ ಒಂದು ದಿನ 

ಕಾಣದ ಕಡಲಿಗೆ ಹಂಬಲಿಸಿದೆ ಮನ ||

ಅಶ್ವಥ್ ಅವರ ಧ್ವನಿ ಎಂದಿಗಿಂತಲೂ ಗಂಭೀರವಾಗಿ, ಕಾಣದ ಕಡಲನ್ನು ಒತ್ತರಿಸಿ ಹೇಳುವಾಗ, ಅವರ ಹಾಡಿನ ಭಾವದಲ್ಲಿ ಇದು ಯಾರು ಹಾಕಿರಬಹುದಾದ ಪ್ರಶ್ನೆ ಎನ್ನುವುದು ವ್ಯಕ್ತವಾಗುತ್ತದೆ.  ಕಡಲನ್ನು ಕೂಡಬಹುದಾದ "ನೀರು" ಅಥವಾ ನೀರಿನ ವಿಶೇಷ ರೂಪ ಈ ಪ್ರಶ್ನೆಗಳನ್ನು ಕೇಳುತ್ತಿದೆ ಎಂದು ಮೇಲ್ಮೈಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ.  ಆದರೆ, ಆಂತರ್ಯದಲ್ಲಿ ಒಂದು ರೀತಿಯ ಗಾಢವಾದ ಏಕತಾನತೆ, ಜೊತೆಗೆ ಆಂತರ್ಯವನ್ನು ಕಲಕುವ ದುಃಖದ ಅರಿವೂ ಎದುರುಗೊಳ್ಳುತ್ತದೆ.

ಪಲ್ಲವಿ ಮುಗಿಯುತ್ತಿದ್ದ ಹಾಗೆ ನಮ್ಮ ಕೆಲಸ ಈಗಷ್ಟೇ ಶುರುವಾಗಿದೆ, ಎಂದು ಮತ್ತೆ ವಯಲಿನ್‌ಗಳು ಮೊರೆಯಿಟ್ಟು ಶಾಂತವಾದ ವೇಣುವಾದನವನ್ನು ಬದಿಗೊತ್ತುತ್ತವೆ.  ಒಂದು ಶಾಂತವಾದ ವೇಣುವಾದನವನ್ನು ಸಂಬಾಳಿಸಲು ಅದೆಷ್ಟು ವಯಲಿನ್‍ಗಳು ಸಾಂಗತ್ಯದಲ್ಲಿ ದುಡಿಯಬೇಕು ನೋಡಿ!  ಹೀಗೆ ಕೊಳಲು ಸಮಾಧಾನ ಪಡಿಸುವ ವಯಲಿನ್‌ಗಳ ಮೊರೆತಕ್ಕೆ ಮುಂದೆ ವೀಣಾವಾದನವು ಸೇರಿಕೊಳ್ಳುವ ಹೊತ್ತಿನಲ್ಲಿ, ಅಂತರಂಗದ ಪ್ರಶ್ನೆಗಳನ್ನು ಬಾಹಿರ ಪಡಿಸಿದ "ತೊರೆ" ತನ್ನನ್ನು ತಾನೇ ಸಮಾಧಾನ ಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಕಾಣದ ಕಡಲಿನ ಮೊರೆತ ಒಂದು ಜೋಗುಳವಾಗಬಲ್ಲದೇ? ಇಲ್ಲಿ ಕಡಲಿಗೆ ಮೊರೆತವಿರುವುದನ್ನು ಎಷ್ಟು ದೃಷ್ಟೀಕರಣ ಮಾಡಲಾಗಿದೆಯೋ ಅಷ್ಟೇ ವಿಶೇಷವಾಗಿ "ನೀರಿನ" ಭಾವನೆಯನ್ನು ಒಂದು ಮಗುವಿನ ಮುಗ್ಧತೆಗೆ ಹೋಲಿಸಲಾಗಿದೆ.  ಈ ಜೋಗುಳ "ತೊರೆಯ" ಕಲ್ಪನೆಯಾದರೂ ಅದು ಅದರ ನೇರ ಕಿವಿಗೆ ಬಿದ್ದಿರದೆ ಒಳಗಿವಿಗೆ ಕೇಳುತ್ತಿರುವುದು ವಿಶೇಷ.  ಇಂತಹ ವಿಶೇಷ ಕಲ್ಪನೆಗಳನ್ನು ಹೆಣೆಯಬಲ್ಲ "ತೊರೆ" ತನ್ನ ಕಲ್ಪನೆಯು ಕಡಲನ್ನು ಚಿತ್ರಿಸಿ, ಚಿಂತಿಸಿ ಸುಯ್ಯುತಿರುವುದರ ಬಗ್ಗೆಯೂ ಆಲೋಚಿಸಿಸುವುದನ್ನು ನಾವು ಕಾಣಬಹುದು. (ಸುಯ್ಯುವುದು = ಉಸಿರಾಡುವ, ನಿಟ್ಟುಸಿರಿಡುವ, air of breath, sigh).

ಕಾಣದ ಕಡಲಿನ ಮೊರೆತದ ಜೋಗುಳ 

ಒಳಗಿವಿಗಿಂದು ಕೇಳುತಿದೆ 

ಕಾಣದ ಕಡಲಿನ ಮೊರೆತದ ಜೋಗುಳ 

ಒಳಗಿವಿಗಿಂದು ಕೇಳುತಿದೆ 

ನನ್ನ ಕಲ್ಪನೆಯು ತನ್ನ ಕಡಲನೆ 

ಚಿತ್ರಿಸಿ ಚಿಂತಿಸಿ ಸುಯ್ಯುತಿದೆ 

"ತೊರೆ"ಯ ಸ್ಯುಯ್ಯುತ್ತಿರುವ ಕಲ್ಪನೆಯ ಕಡಲು - ಹೀಗಿರಬಹುದು, ಹಾಗಿರಬಹುದು ಎಂದು ಊಹಿಸಿಕೊಳ್ಳುತ್ತಲೇ, ಅದು ಎಲ್ಲಿರುವುದೋ, ಎಂತಿರುವುದೋ ಎಂದು ಆಶ್ಚರ್ಯವನ್ನು ಹೊರಹಾಕುತ್ತಾ ಮತ್ತೆ ಮೊದಲಿನ ಪ್ರಶ್ನೆಗಳಾದ "ಕಾಣಬಲ್ಲೆನೆ, ಕೂಡಬಲ್ಲೆನೆ ಒಂದು ದಿನ?!" ಎಂದು ತನ್ನ ಹಂಬಲಿಕೆಯನ್ನು ಮುಂದುವರೆಸುತ್ತದೆ.

ಎಲ್ಲಿರುವುದೋ ಅದು ಎಂತಿರುವುದೋ ಅದು 

ನೋಡಬಲ್ಲೆನೆ ಒಂದು ದಿನ 

ಕಡಲನು ಕೂಡಬಲ್ಲೆನೆ ಒಂದು ದಿನ ॥೧॥

ಕಾಣದ ಕಡಲಿಗೆ ಹಂಬಲಿಸಿದೆ ಮನ.

ಈ ಮೇಲಿನ ಪ್ಯಾರಾದ ಉದ್ದಕ್ಕೂ ಕೇವಲ ಹಿನ್ನೆಲೆಯಲ್ಲಿ ತೊಟ್ಟಿಲನ್ನು ತೂಗಿ ಮಗುವನ್ನು ನಿದ್ರೆ ಮಾಡಿಸುವ ತಾಯಿಯ ಸೂಕ್ಷ್ಮ ಕೋಮಲತೆಯ ಸಂಗೀತವಾಗಿದ್ದ ವಯಲಿನ್‌ಗಳು, ಮತ್ತೆ ಜೀವ ತಳೆದು ಮೇಲಿನ ಕಲ್ಪನೆಗಳಿಗೆ, ಊಹಾಪೋಹಗಳಿಗೆ ದನಿಯಾಗುವ ಹಾಗೆ ಒಂದು ಗಂಭೀರತೆಯನ್ನು ತಂದುಕೊಡುತ್ತವೆ. ಇನ್ನೇನು ಕೊಳಲು ತನ್ನನ್ನು ಈ ಗೊಂದಲದಲ್ಲಿ ತನ್ನನ್ನು ಎಲ್ಲೋ ಕಳೆದುಕೊಂಡು ಬಿಟ್ಟಿತಲ್ಲವೇ ಎಂದು ಯೋಚಿಸುತ್ತಿದ್ದ ಹಾಗೆ, ಸಮಾಧಾನದ ಕೊಳಲು ತುಸು ಉನ್ಮತ್ತತೆಯಿಂದ ತನ್ನ ಇರುವನ್ನು ಪ್ರಕಟಿಸುತ್ತದೆ.

ಇಲ್ಲಿಂದ ಮುಂದೆ, ಮೊದಲಿನ ತವಕ, ಉನ್ಮಾದವಾಗಿ ಪ್ರಕಟಗೊಳ್ಳುತ್ತಾ ಅನೇಕ ಕಡಲಿನ ರೂಪಕಗಳನ್ನು ಮನಸ್ಸಿಗೆ ತಂದುಕೊಳ್ಳುತ್ತದೆ. ಸಾವಿರ ಹೊಳೆಗಳು ತುಂಬಿ ಹರಿದರೂ ಅದು ಒಂದೇ ಸಮನಾಗಿರುವುದಾದರೂ ಹೇಗೆ? ಸುನೀಲವಾದ, ವಿಸ್ತಾರವಾದ, ತರಂಗಗಳಿಂದ ಶೂಭಿತಗೊಂಡ ಗಂಭೀರವಾಗಿರುವ ಅಂಬುಧಿ! ಮುನ್ನೀರಂತೆ, ಅಪಾರವಂತೆ.... ಹೀಗೆ ಅನೇಕ ರೂಪಕಗಳು ಮನದಲ್ಲಿ ಮೂಡುತ್ತಾ ಹೋಗುವುದರ ಜೊತೆಜೊತೆಗೆ ಮತ್ತೆ ಅವೇ ಪ್ರಶ್ನೆಗಳು ಎದುರಾಗುತ್ತವೆ. ಈ ವರೆಗೆ, ಕಾಣಬಲ್ಲೆನೆ ಒಂದು ದಿನ ಎಂದು ಯಾವ ಗರ್ವವಿಲ್ಲದೇ, ವಿನಮ್ರವಾಗಿ ಕೇಳುತ್ತಿದ್ದ ಪ್ರಶ್ನೆಗಳು ಸ್ವಲ್ಪ ಮುಂದೆ ಹೋಗಿ ಬಹಳ ವಿಸ್ತಾರವಾಗಿರುವ ಗಂಭೀರವಾಗಿರುವುದನ್ನು ಚಿತ್ರಿಸಿಕೊಂಡು ಒಂದು ರೂಪಕೊಟ್ಟುಕೊಳ್ಳುವುದರ ಜೊತೆಗೆ "ಅದರೊಳು ಕರಗಲಾರೆನೆ ಒಂದು ದಿನ!" ಎನ್ನುವ ಮಟ್ಟಿಗೆ, ನಾವು ಮೊದಲೇ ಊಹಿಸಿದಂತೆ ಇದು ನೀರಿನದೇ ಪ್ರಶ್ನೆ ಎಂದು ನಿಶ್ಚಿತವಾಗುತ್ತದೆ.

ಸಾವಿರ ಹೊಳೆಗಳು ತುಂಬಿ ಹರಿದರೂ 

ಒಂದೇ ಸಮನಾಗಿಹುದಂತೆ

ಸಾವಿರ ಹೊಳೆಗಳು ತುಂಬಿ ಹರಿದರೂ 

ಒಂದೇ ಸಮನಾಗಿಹುದಂತೆ

ಸುನೀಲ ವಿಸ್ತರ ತರಂಗ ಶೋಭಿತ 

ಗಂಭೀರಾಂಬುಧಿ ತಾನಂತೆ 

ಮುನ್ನೀರಂತೆ, ಅಪಾರವಂತೆ,

ಕಾಣಬಲ್ಲೆನೆ ಒಂದು ದಿನ 

ಅದರೊಳು ಕರಗಲಾರೆನೆ ಒಂದು ದಿನ  ॥೨॥


ಕಾಣದ ಕಡಲಿಗೆ ಹಂಬಲಿಸಿದೆ ಮನ.

ಈ ಪ್ಯಾರಾ ಮುಗಿಯುವಷ್ಟರಲ್ಲಿ, ಮೊರೆಯುವ ವಯಲಿನ್‌ಗಳು ಒಂದು ರೀತಿಯ ಸಮಾಧಾನವನ್ನು ಮೈವೆತ್ತಿಕೊಂಡು, ಮುಂದಿನ ಮುಂದಿನ ಸಾಲುಗಳಲ್ಲಿ "ತೊರೆಯ" ರೋಧನೆ ಇನ್ನಷ್ಟು ಗಾಢವಾಗುವುದನ್ನು ದುಃಖದ ಜೊತೆಗೆ ಕರುಣಾರಸವನ್ನು ಸ್ಫುರಿಸುವುದರ ಮೂಲಕ ಸೂಕ್ಷ್ಮವಾಗಿ ತಿಳಿಸುತ್ತವೆ.  "ನಾನು ಈಗಾಗಲೇ ಹೇಳಿರಲಿಲ್ಲ, ಹೀಗಾಗುತ್ತದೆ ಎಂದು?!" ಎನ್ನುವ ಧ್ವನಿ ವಯಲಿನ್ ನಂತರ ಬರುವ ಕೊಳಲಿನದು.

ಇಲ್ಲಿ "ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು..." ಎಂದಾಗ ಟಟಟಟಟ ಎಂದು ಸಮಯೋಚಿತವಾಗಿ ಕಡ್ಡಿಯ ಬಡಿತ ಕೇಳುತ್ತದೆ.  ಎರಡನೇ ಬಾರಿ ಇದೇ ಸಾಲನ್ನು ಹಾಡಿದಾಗ "ನೀನು ಹೇಳುತ್ತಿರುವುದು ಸರಿ..." ಎಂದು ತಲೆದೂಗಿಸಿ ಮಧ್ಯದಲ್ಲಿ ವಯಲಿನ್‌ಗಳು ಗಾಯಕನ ಧ್ವನಿಯ ಜೊತೆಗೆ ಸಾತ್ ನೀಡುತ್ತವೆ.

ಇಲ್ಲಿ ಜಟಿಲ ಕಾನನದ ಕುಟಿಲ ಪಥಗಳಲ್ಲಿ ಹರಿಯುವ ದಕ್ಷಿಣ ಭಾರತದ ಯಾವುದೇ ತೊರೆಗಳನ್ನಾದರೂ ನಾವು ಊಹಿಸಿಕೊಳ್ಳಬಹುದು.  ಆದರೆ, ಉತ್ತರದ ಗಂಗಾ-ಯಮುನಾ ನದಿಗಳ ಹರಿವು, ಆಳ ಮತ್ತು ವಿಸ್ತಾರಗಳೇ ಬೇರೆ.  ನಮ್ಮ ದಕ್ಷಿಣ ಭಾರತದ ನದಿಗಳು ಕಾನನದ ಕುಟಿಲ ಪಥಗಳಲ್ಲಿ ಸಣ್ಣ ತೊರೆಯಾಗಿ ಹರಿಯುವುದನ್ನು ನಾವು ಊಹಿಸಿದ ಹಾಗೆ, ವರ್ಷವಿಡೀ ತುಂಬ ನೀರಿನಿಂದ ಗಂಭೀರವಾಗಿ ಹರಿಯುವ ಗಂಗಾನದಿಯನ್ನು ನೀವು ನೋಡಿರದಿದ್ದರೆ ನಿಮ್ಮ ಊಹೆಗೂ ನಿಲುಕದ ಕಲ್ಪನೆ ಅದು.  ಇಲ್ಲಿ "ತೊರೆ"ಯ ವಿನಮ್ರತೆಯ ಜೊತೆಜೊತೆಗೆ ಅದರ ಬಗೆಗಿನ ಸ್ವಾಭಾವಿಕವಾದ ಅರಿವು ಕೂಡ ಸ್ಪಷ್ಠವಾಗುತ್ತದೆ.  ಹೀಗಿರುವ ನಾನು, ಹಾಗಾಗಬಲ್ಲೆನೇ? ಎನ್ನುವ ಪ್ರಶ್ನೆ ಈ ಕೆಳಗಿನ ಸಾಲುಗಳಲ್ಲಿ ವಿಶೇಷವಾಗಿ ಮೂಡಿ ಬಂದಿದೆ.  ಎಂದಿಗಾದರೂ ನನ್ನ ಗುರಿಯನ್ನು ತಲುಪಬಲ್ಲೆನೇ? ಕಡಲ ನೀಲಿಯೊಳಗೆ ಒಂದಾಗ ಬಲ್ಲೆನೇ? ಅದರೊಳಗೆ ಕರಗಬಹುದೇ? ಎನ್ನುವ ಸೂಕ್ಷ್ಮ ಪ್ರಶ್ನೆಗಳನ್ನು "ನೀರು" ಅಭಿವ್ಯಕ್ತಗೊಳಿಸುತ್ತಾ ಹೋಗುತ್ತದೆ.  ಸೇರುವುದು ಮತ್ತು ಕರಗುವುದರಲ್ಲಿ ಬಹಳ ವ್ಯತ್ಯಾಸವಿದೆ.  ನೀರಿನಲ್ಲಿ ಉಪ್ಪು ಅಥವಾ ಸಕ್ಕರೆ ಕರಗುತ್ತದೆ, ಆದರೆ ಮರಳು ಸೇರುತ್ತದೆ.  ಕಡಲಿನ ಕಣಕಣಗಳಲ್ಲಿ ತನ್ನನ್ನು ತಾನು ಅಡಕಗೊಳಿಸುವಿಕೆಯನ್ನು "ಕರಗುವುದು" ಎಂದು ಕರೆಯುವುದಾದರೆ, ಕಡಲಿರುವಲ್ಲಿ ಹೋಗುವುದನ್ನು "ಸೇರುವುದು" ಎನ್ನಬಹುದು.

ಜಟಿಲ ಕಾನನದ ಕುಟಿಲ ಪಥಗಳಲಿ 

ಹರಿವ ತೊರೆಯು ನಾನು 

ಎಂದಿಗಾದರು, ಎಂದಿಗಾದರು, ಎಂದಿಗಾದರೂ 

ಕಾಣದ ಕಡಲನು ಸೇರಬಲ್ಲೆನೇನು

ಜಟಿಲ ಕಾನನದ ಕುಟಿಲ ಪಥಗಳಲಿ 

ಹರಿವ ತೊರೆಯು ನಾನು

ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು

ಸೇರಬಹುದೇ ನಾನು, ಕಡಲ ನೀಲಿಯೊಳು ಕರಗಬಹುದೆ ನಾನು 

ಕರಗಬಹುದೆ ನಾನು, ಕರಗಬಹುದೆ ನಾನು  ॥೩॥

ಕೊನೆಗೆ ಮೂರು ಬಾರಿ "ಕರಗಬಹುದೆ ನಾನು" ಎನ್ನುವುದನ್ನು ಮೂರು ರೀತಿಯ ಭಾವನೆಗಳಲ್ಲಿ ಹಾಡಿರುವುದನ್ನು ನೀವು ಗಮನಿಸಬಹುದು.

ಈ "ತೊರೆ"ಯ ತುಮುಲವನ್ನು ಕೇಳಿದಾಗ, ತಾನು ಈಗಾಗಲೇ ಆ "ಮಹಾನೀರಿನ" ತಾನೂ ಒಂದು ಭಾಗವಾಗಿದ್ದೇನೆ ಎಂದು ಗೊತ್ತಿಲ್ಲವಲ್ಲ ಎಂದು ಸೋಜಿಗವಾಗುತ್ತದೆ.  ಆ ಮಹಾ ನೀರನ್ನು ತಲುಪುವುದೇ ಗುರಿ ಎಂದು ತೋರಿಸಿಕೊಟ್ಟವರು ಯಾರು? ಆ ಮಹಾನೀರಿನ ಕುರಿತ ಕಲ್ಪನೆಗಳು, ರೂಪಕಗಳು ಇದರ ಮನಸ್ಸಿನಲ್ಲಿ ಹೇಗೆ ಹುಟ್ಟಿದವು?

"ಕಾಣದ ಕಡಲಿಗೆ..." ಹಾಡನ್ನು ನಾವು ಯಾವ ಸಂದರ್ಭದಲ್ಲಿ ಕೇಳಲು ಬಯಸುತ್ತೇವೆ, ಅಥವಾ ಯಾವ ಸಂದರ್ಭದಲ್ಲಿ ಈ ಹಾಡಿನ ಹಿನ್ನೆಲೆ ಬಹಳ ಉಚಿತ ಅಥವಾ ತಕ್ಕುದಾದುದು (apt) ಎನ್ನಿಸುತ್ತದೆ?

1951ರಲ್ಲಿ ಶಿವರುದ್ರಪ್ಪನವರು ಒಂದು "ತೊರೆಯ ಹಂಬಲ"ವನ್ನು ಎಷ್ಟು ಸರಳವಾದ ಪದಗಳಲ್ಲಿ ಎಷ್ಟು ಆಳವಾಗಿ ಚಿತ್ರಿಸಿದ್ದಾರೆನಿಸಿ ಅವರ ಮೇಲಿನ ಗೌರವ ಇಮ್ಮಡಿಯಾಗುತ್ತದೆ. 1926ರಲ್ಲಿ ಜನಿಸಿದ ಶಿವರುದ್ರಪ್ಪನವರಿಗೆ ಇಪ್ಪತ್ತೈದು ವರ್ಷವಾಗುವಷ್ಟರಲ್ಲಿ ಅದೆಂತಾ ಪ್ರಬುದ್ಧತೆ ಬೆಳೆದಿರಬಹುದು! ಒಬ್ಬ ಕವಿಯಾಗಿ ಸೂಕ್ಷ್ಮ ಸಂವೇದನೆಗಳನ್ನಷ್ಟೇ ಅಲ್ಲದೇ ಒಂದು ಮುಗ್ಧ ತೊರೆಯ ಹಂಬಲದ ಮುಖೇನ ಬಹಳ ದೊಡ್ಡ ಅರಿವನ್ನು ಈ ಕವನದಲ್ಲಿ ತೋರಿಸಿಕೊಟ್ಟಿದ್ದಾರೆ.  ಹುಟ್ಟಿದೆಲ್ಲ ತೊರೆಗಳೂ ಆ ಮಹಾಸಾಗರದ ಅಂಶವೇ.  ಎಲ್ಲ ತೊರೆಗಳೂ ಸಾಗರ ಮುಖಿಯಾಗಿ ಹರಿವ ಹಂಬಲವುಳ್ಳವುಗಳಾದರೂ, end is more important than the means ಎನ್ನುವಂತೆ ಕಾಣದ ಕಡಲಿನ ಕಡೆಗೆ ಹರಿಯುವವೇ.  ಒಮ್ಮೆ ಹರಿದು ಕಡಲನ್ನು ಸೇರಿದ ಮಾತ್ರಕ್ಕೆ ಅದು ಕೊನೆ ಎಂದು ಈ ಮುಗ್ಧ ತೊರೆಗಳು ಅಂದುಕೊಳ್ಳದಿದ್ದರೆ ಸಾಕು. ಅದು ಪ್ರತಿಯೊಂದರ ಕೊನೆಯೂ ಮತ್ತೊಂದರ ಹುಟ್ಟು ಎನ್ನುವಂತೆ, ಮತ್ತೆ ಕಡಲು ಆವಿಯಾಗಿ, ಮೋಡವಾಗಿ, ನೀರಾಗಿ ಹರಿದು ಮತ್ತೆ ಸೇರುತ್ತಲೇ ಇರಬೇಕು, ಎನ್ನುವ ಸಮಾಧಾನ ಈಗಷ್ಟೇ ಕಣ್ಣು ಬಿಟ್ಟು ಹುಟ್ಟಿ ಹರಿಯುತ್ತಿರುವ ತೊರೆಯ ಆಶಯವನ್ನು ಯಾವ ಕಾರಣಕ್ಕೂ ಬಗ್ಗು ಬಡಿಯಲಾರದು.  ಹರಿಯುವುದು ತೊರೆಯ ಸಹಜ ಧರ್ಮ, ಜೊತೆಯಲ್ಲಿ ಅಗಾಧವಾದ ಹಂಬಲವನ್ನು ಹೊತ್ತು ಸಾಗುತ್ತಿರುವುದು ಈ ತೊರೆಯ ವಿಶೇಷವಷ್ಟೇ!

ಈ ಹಾಡನ್ನು ಇಲ್ಲಿ ಕೇಳಬಹುದು.


Wednesday, April 29, 2020

ಅಕ್ಕಿ ಆರಿಸುವಾಗ...

ಅಕ್ಕಿ ಆರಿಸುವಾಗ...
ಕವಿ: ಕೆ. ಎಸ್. ನರಸಿಂಹ ಸ್ವಾಮಿ
ಸಂಗೀತ ಮತ್ತು ಗಾಯನ: ಸಿ. ಅಶ್ವಥ್


 ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ ಕವನ ಸಂಕಲನದಲ್ಲಿ ಮನಸ್ಸಿಗೆ ಹಿಡಿಸುವ ಕವನಗಳಲ್ಲಿ ಇದೂ ಒಂದು.  ಈ ಹಾಡನ್ನು ಸುಗಮ ಸಂಗೀತಕ್ಕೆ ಒಳಪಡಿಸಿದ ಸಿ. ಅಶ್ವಥ್ ಅವರು ಒಂದು ಬಡತನದ ವಾತಾವರಣದಲ್ಲಿ ಬೆಳೆದು ನಿಂತ ಹೆಣ್ಣುಮಗಳ ಮನದಾಳವನ್ನು ವಿಷದ ಪಡಿಸುವಲ್ಲಿ ನ್ಯಾಯ ಒದಗಿಸಿದ್ದಾರೆ ಎಂದು ಖಂಡಿತವಾಗಿ ಹೇಳಬಹುದು.  ಹೆಣ್ಣಿನ ಅಂತರಾಳದ ಒಳತೋಟಿಯನ್ನು ಹೊರಹೊಮ್ಮಿಸುವ ಗಾಯನಕ್ಕೆ ಗಂಡು ಧ್ವನಿ ಎಷ್ಟು ಹೊಂದೀತು ಎಂಬ ಪ್ರಶ್ನೆ ಪಲ್ಲವಿಯಲ್ಲಿ ನಮ್ಮ ಮನಸ್ಸಿನಲ್ಲಿ ಉದ್ಭಸಿದರೂ, ಹಾಡು ಮುಂದುವರಿದತೆಲ್ಲ ಅಶ್ವಥ್ ಅವರ ಗಾಯನ ಹೆಣ್ಣಿನ ನಿರ್ಲಿಪ್ತತೆಯನ್ನು ವರ್ಣಿಸುವುದರ ಮೂಲಕ ನಿರಾಯಾಸವಾಗಿ ಕೇಳುಗರನ್ನು ಕಟ್ಟಿ ಹಾಕುತ್ತದೆ.  ಇದು ಈ ಹಾಡಿನ ಮಹತ್ವದ ಅಂಶ ಎಂದರೆ ತಪ್ಪಾಗಲಾರದು.

ಹಾಡಿನ ಮೊದಲಿಗೆ ಕೆಲವು ಕ್ಷಣಗಳ ಕಾಲ ಕೇಳಿಸುವ ದನಕರುಗಳ ಕೂಗು, ಒಂದು ಕೊಟ್ಟಿಗೆಯ ಪರಿಸರವನ್ನು ಕೇಳುಗರಿಗೆ ಕಟ್ಟಿಕೊಡುತ್ತದೆ.  ನಿಧಾನವಾಗಿ ಒಂದು ಸರಳ ಸಂಭ್ರಮವನ್ನು ಸೂಚಿಸುವಂತೆ ಆರಂಭವಾಗುವ ಕೊಳಲಿನ ಧ್ವನಿ, ನಂತರ ಮುಂಬರುವ ವಯಲಿನ್‌ಗಳ ಮೊರೆತಕ್ಕೆ ಸೋತು ಹೋಗುವುದಕ್ಕೆ ಮೊದಲು ಭಾರವಾದಂತೆನಿಸಿ, ಈ ಹಾಡಿಗೆ ಒಂದು ಗಟ್ಟಿಯಾದ ತಳಹದಿಯನ್ನು ಒದಗಿಸುತ್ತದೆ.

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು


ಇತ್ತೀಚಿನ ಕಾಲದಲ್ಲಿ ಅಕ್ಕಿಯನ್ನು ಜನರು ಜರಡಿಯಾಡಿ, ಮೊರದಲ್ಲಿ ಆರಿಸುತ್ತಾರೋ ಇಲ್ಲವೋ, ಆದರೆ ಆಗಿನ ಕಾಲದ ಒಂದು ಹಳ್ಳಿಯ ಪರಿಸರದಲ್ಲಿ ಮೊರದಲ್ಲಿ ಅಕ್ಕಿಯನ್ನು ಗೇರಿ ಅಥವಾ ಜರಡಿ ಹಿಡಿದು, ನುಚ್ಚು ಮತ್ತು ಕಲ್ಲುಗಳನ್ನು ಬೇರ್ಪಡಿಸುವ ಕೆಲಸ ಪ್ರತಿನಿತ್ಯವೂ ನಮ್ಮ ಹೆಣ್ಣು ಮಕ್ಕಳು ಮಾಡುವಂಥದಾಗಿತ್ತು.  ಕವಿ ಈ ಹಾಡಿನಲ್ಲಿ ಬರೆದಂತೆ "ಅಕ್ಕಿ ಆರಿಸುವುದು" ಒಂದು ವಿಶೇಷ ಸೂಚಕ.     ಏಕೆಂದರೆ ಅಕ್ಕಿಯ ನಡುವೆ ಸಿಕ್ಕುವ ಕಲ್ಲು, ನುಚ್ಚನ್ನು ಆರಿಸುವ ಕೆಲಸಕ್ಕೂ ನಾವು "ಅಕ್ಕಿ ಆರಿಸುವುದು" ಎಂದೇ ಹೇಳುವುದು ಸಾಮಾನ್ಯ.  ಒಂದು ರೀತಿಯಲ್ಲಿ ಅಮೇರಿಕದಲ್ಲಿ ನಾವೆಲ್ಲ "hot water heater" ಎಂದು ಹೇಳುತ್ತೇವಲ್ಲ ಹಾಗೆ, ನಾವು ನಿಜವಾಗಿಯೂ cold water ಅನ್ನು heat ಮಾಡುತ್ತಿದ್ದರೂ, ಅದನ್ನು "hot water heater" ಎಂದೇ ಕರೆಯುತ್ತೇವೆ!  ಭತ್ತವನ್ನು ತೆಗೆದುಕೊಂಡು ಹೋಗಿ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿದಾಗ, ಅಕ್ಕಿಗೆ ಪಾಲೀಷ್ ಕೊಟ್ಟ ಮೇಲೆ ನುಚ್ಚು ಉತ್ಪಾದನೆ ಆಗುವುದು ಸಹಜ.  ಆದರೆ ಮಾಡಿದ ಅನ್ನ ಬಿಡಿ ಬಿಡಿಯಾಗಿ, ಉದುರಾಗಿ ಇರಬೇಕು ಎನ್ನುವುದಾದರೆ ಅದರಲ್ಲಿ ನುಚ್ಚು ಇರಬಾರದು.  ಅದು ಎಂಥಾ ನುಚ್ಚು? "ಚಿಕ್ಕ ನುಚ್ಚು", ಅದನ್ನು ಆರಿಸಿ, ಜೊತೆಗೆ ಕಲ್ಲನ್ನೆಲ್ಲ ಹೆಕ್ಕಿದ ಮೇಲೆ ಉಳಿದ ಬರೀ ಅಕ್ಕಿಯನ್ನು ಮಾತ್ರ ಅನ್ನ ಮತ್ತಿನ್ನ್ಯಾವುದೋ ಅಡುಗೆಗೆ ಬಳಸೋದು ವಾಡಿಕೆ.  ಇಂಥಾ ಚಿಕ್ಕ ನುಚ್ಚಿನ ನಡುವೆ ಹೋರಾಟಕ್ಕೆ ಇರುವುವು "ಬಂಗಾರವಿಲ್ಲದ ಬೆರಳು"ಗಳು.  ಕವಿ ಬಂಗಾರವಿಲ್ಲದ ಬೆರಳು ಎನ್ನುವಾಗ ಅದೇ ಹಳ್ಳಿಯ ಪರಿಸರದ ಲೇಪಕ್ಕೆ ಮತ್ತೆ ಬಡತನದ ವಾತಾವರಣದ ಕಳೆಯನ್ನು ಕಟ್ಟುತ್ತಾರೆ.  ಎಷ್ಟೇ ಶ್ರೀಮಂತರಿದ್ದರೂ, ಅಕ್ಕಿ ಆರಿಸುವಾಗ ಅಂದರೆ ಮನೆ ಕೆಲಸ ಮಾಡುವಾಗ ಬಂಗಾರ ಧರಿಸುವುದು ಸಹಜವಲ್ಲ.  ಒಂದು ವೇಳೆ ಮನೆಯಲ್ಲಿದ್ದಾಗಲೂ ಬಂಗಾರವನ್ನು ಧರಿಸಿಯೇ ಇರುತ್ತಾರೆಂದರೆ ಅವರು ಬಡತನದ ವಾತಾವರಣವನ್ನು ಮೀರಿದವರಾಗಿರುತ್ತಾರೆ ಎನ್ನುವುದು ವಾಡಿಕೆ.  ಇಲ್ಲಿ ಕವಿ ಬಂಗಾರವಿಲ್ಲದ ಬೆರಳನ್ನು (ಬೆರಳುಗಳನ್ನು), ಒಂದು ರೀತಿಯ ದೈನಂದಿನ ಹೋರಾಟದ ಸಿಪಾಯಿಗಳನ್ನಾಗಿ ಬಿಂಬಿಸಿದ್ದಾರೆ. ಹಾಗೂ ಅದೇ ಸಾಲನ್ನು ಸುಗಮ ಸಂಗೀತದ ಗಾಯಕರು ಪ್ರತಿ ಪ್ಯಾರಾದ ನಂತರ ಹಾಡಿ ಅದನ್ನೇ ಒಂದು ಚುಟುಕು ಪಲ್ಲವಿಯನ್ನಾಗಿಸುವುದುರ ಮೂಲಕ ಈ ಸಿಪಾಯಿಗಳಿಗೆ ಮತ್ತಷ್ಟು ಹೆಚ್ಚಿನ ಜವಾಬ್ದಾರಿಯನ್ನು ಹೊರೆಸಿದಂತೆ ಕಾಣುತ್ತದೆ.

ತಗ್ಗಿರುವ ಕೊರಳಿನ ಸುತ್ತ ಕರಿಮಣಿ ಒಂದೇ
ಸಿಂಗಾರ ಕಾಣದ ಹೆರಳು
ಬಂಗಾರವಿಲ್ಲದ ಬೆರಳೂ|

ಯಾವುದೇ ಭಂಗಿಯಲ್ಲಿ ಕುಳಿತರೂ ಮೊರದಲ್ಲಿ ಅಕ್ಕಿಯನ್ನು ಆರಿಸುವಾಗ ಕೊರಳು ತಗ್ಗಿರುತ್ತದೆ.  ಅಂತಹ ಕೊರಳಿನ ಸುತ್ತ ಕರಿಮಣಿ ಒಂದೇ ಇರುವುದು ಮತ್ತ್ಯಾವ ಬಂಗಾರದ ಆಭರಣಗಳೂ ಇಲ್ಲದಿರುವುದನ್ನು ಸೂಚಿಸಿ ಮತ್ತೆ ಬಡತನದ ವಾತಾವರಣದ ಪ್ರತಿಮೆಯನ್ನು ಕೇಳುಗರ ಮನಸ್ಸಿನಲ್ಲಿ ನಿಲ್ಲಿಸುತ್ತವೆ. ಕರಿಮಣಿ ಒಂದೆ ಎನ್ನುವುದು ಕರಿಮಣಿ ಸರದ ರೂಪಕ, ಅದರಲ್ಲಿ ಅನೇಕ ಕಪ್ಪು ಮಣಿಗಳಿದ್ದರೂ ಅದನ್ನು ಕರಿಮಣಿ ಎಂದೇ ಕರೆಯುವುದು ರೂಢಿ. ಈ ಬಡತನದ ಚಿತ್ರಣದ ಜೊತೆ ಜೊತೆಗೆ ಸಿಂಗಾರ ಕಾಣದ ಹೆರಳು ಹೊಸತಾಗಿ ಈ ಹೆಣ್ಣಿನ ಅಂತರಂಗದ ಅಭಿವ್ಯಕ್ತಿಯನ್ನು ಸಾಬೀತು ಮಾಡಲು ಪ್ರಯತ್ನಿಸುತ್ತದೆ.  ಮನೆಯಲ್ಲೇ ಕೆಲಸದ ನಡುವೆ ಇರುವವರು ಸಾಮಾನ್ಯವಾಗಿ ಹೆರಳನ್ನು ಸಿಂಗರಿಸಿಕೊಳ್ಳದಿದ್ದರೂ ಒಂದಿಷ್ಟು ಮೇಲು ಬಾಚಣಿಕೆಯನ್ನು ಮಾಡಿಕೊಂಡು ಅಚ್ಚುಕಟ್ಟಾಗಿಟ್ಟುಕೊಳ್ಳುವುದು ವಾಡಿಕೆ, ಆದರೆ ಇಲ್ಲಿ ಈ ಹೆಣ್ಣಿನ ಅಂಗ-ಭಂಗಿಗಳ ಮೂಲಕ ಮನದಾಳದಲ್ಲಿ ಹುದುಗಿದ ಅವ್ಯಕ್ತ ಯಾತನೆ ಅಥವಾ ತವಕವನ್ನು ಹೊರಕಾಕುವ ಕವಿಯ ಚಾಕಚಕ್ಯತೆ ಎದ್ದು ಕಾಣುತ್ತದೆ.  ಮತ್ತೆ ಹೊರ ಹೊಮ್ಮುವ "ಬಂಗಾರವಿಲ್ಲದ ಬೆರಳು" ಮೇಲಿನ ಅಂಶಗಳಿಗೆ ಪುಷ್ಠಿಕೊಡುತ್ತದೆ.


ಹೆರಳಿನಾ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳೂ|

ಸಿಂಗಾರ ಕಾಣದ ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆ ಕಥಾನಾಯಕಿಯ ಯೌವನವನ್ನು ಪ್ರಚುರಪಡಿಸುತ್ತದೆ, ಸುಮಾರು ಹದಿನಾರು ವರ್ಷದ ಆಸುಪಾಸು ಇರಬಹುದಾದ ವಯಸ್ಸು, ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಬೇಗನೆ ಲಗ್ನ ಮಾಡುತ್ತಿದ್ದರಾದ್ದರಿಂದ ಹದಿನಾರು ವರ್ಷಕ್ಕೆಲ್ಲ ಸಾಕಷ್ಟು ಪ್ರಬುದ್ಧತೆ ಈ ಹೆಣ್ಣು ಮಕ್ಕಳಿಗೆ ಇರುತ್ತಿದ್ದುದು ಸಹಜ.  ಎರಡು ಬಾರಿ ಹಾಡಿದ ದೀಪದಂತೆ ಅರಳಿದ ಸಿರಿಗಣ್ಣ ಸನ್ನೆ ಏನನ್ನೋ ನೆನಪಿಸಿಕೊಳ್ಳುತ್ತವೆಯೇನೋ ಎಂದು ಕೊಂಡರೆ ನಿಲ್ಲದ ಮುಂಗಾರಿನಲ್ಲಿ ತುಂಬಿ ಹರಿಯುವ ಹೊಳೆಯ ರೀತಿಯಲ್ಲಿರುವ ಮುಂಗುರಳನ್ನು ನೆನಪಿಗೆ ತರುತ್ತವೆ.  ತಲೆ ಹಾಗೂ ಕಣ್ಣು ಅತ್ತಿತ್ತ ಚಲಿಸಿದಂತೆಲ್ಲ ಮುಖದೊಂದಿಗೆ ಆಟವಾಡುವ ಈ ಮುಂಗುರುಳು ಒಮ್ಮೊಮ್ಮೆ ಕಾಡುವ ಮಳೆಯಂತಾಗಿರುವುದನ್ನು ಇಲ್ಲಿ ಗಮನಿಸಬಹುದು. ಮತ್ತೆ ಬಂಗಾರವಿಲ್ಲದ ಬೆರಳನ್ನು ಪುನರಾವರ್ತಿಸಿ ಗಾಯಕ ಎಂದಿನಂತೆ ತಮ್ಮ ಕಾರ್ಯದಲ್ಲಿ ತೊಡಗಿರುವ ಮನಸ್ಸನ್ನು ಅಭಿವ್ಯಕ್ತಗೊಳಿಸಿದ್ದಾರೆ.

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನುವ ಬಳೆಯ ಸದ್ದು

ನಿಮಗೆ ಗೊತ್ತಿರುವಂತೆ ನಮಗೆ ಭಾರತದಲ್ಲಿ ಟ್ರ್ಯಾಷ್ ಎಸೆಯೋದಕ್ಕೆ ಮನೆಯ ಒಳಗೆ ಒಂದು ನಿಖರವಾದ ಜಾಗ ಅಂತೇನು  ಇರುತ್ತಿರಲಿಲ್ಲ.  ಅದರಲ್ಲೂ ಅಕ್ಕಿಯಲ್ಲಿ ಸಿಗುವ ಕಲ್ಲನ್ನು ಇಂತಲ್ಲೇ ಎಸೆಯಬೇಕು ಎಂಬ ನಿಯಮವೇನೂ ಇರಲಿಲ್ಲ.  ಆದರೆ ಮನೆಯನ್ನು ದಿನಕ್ಕೆರಡು ಬಾರಿಯಾದರೂ ಗುಡಿಸಿ-ಒರೆಸಿ ಇಟ್ಟುಕೊಂಡಿರುವಾಗ ಅಕ್ಕಿಯಲ್ಲಿ ಆರಿಸಿದ ಕಲ್ಲು ಗೌಣವಾಗುತ್ತಿತ್ತು.  ಅದು ಎಲ್ಲ ಕಸದ ಜೊತೆಗೆ ತಿಪ್ಪೆ ಸೇರುತ್ತಿತ್ತು.  ಆದರೆ ಇಲ್ಲಿ, ಕಲ್ಲ ಹರಳನು ಹುಡುಕಿ ತೆಗೆದ ಕೈಗಳಿಗೆ ಪೂರ್ಣ ಸ್ವಾತಂತ್ರ್ಯವಿದೆ, ಅದನ್ನು ಇಂತಲ್ಲಿಗೆ ಎಸೆಯಬೇಕು ಎಂಬ ನಿಯಮವೇನೂ ಇಲ್ಲ, ಜೊತೆಗೆ ಕಲ್ಲು ಅಕ್ಕಿಯಿಂದ ಬೇರ್ಪಡುವ ಪ್ರಕ್ರಿಯೆಗೆ ಮಾತ್ರ ಪ್ರಾಮುಖ್ಯತೆ ಇದೆ, ಕಲ್ಲು ಹೊರ ಹೋಗುವಾಗ ಎಲ್ಲಿಗೆ ಬೇಕಾದರೂ ಹೋಗಬಹುದು.  ಇಂಥ ಸಂದರ್ಭದಲ್ಲಿ ಪೂರ್ಣ ನಿಶ್ಶಬ್ದ ಆವರಿಸಿರುತ್ತದೆ, ಆದರೆ ಆ ಕಲ್ಲನ್ನು ಎಸೆದ ಕೈಗಳಲ್ಲಿದ್ದ ಬಳೆಗಳು ಝಲ್ಲೆಂದು ಸದ್ದು ಮಾಡುವುದು ಸ್ವಾಭಾವಿಕ... ಆದರೆ ಇಲ್ಲಿ ಝಲ್ಲೆಂದು ಸದ್ದು ಮಾಡುವ ಬಳೆಗಳು ಗಾಜಿನ ಬಳೆಗಳು, ಮತ್ತೆ ಬಡತನದ ವಾತವರಣವನ್ನು ಶ್ರೋತೃಗಳ ಗಮನಕ್ಕೆ ತರುತ್ತವೆ.


ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣು ಬಿತ್ತು
ಬಂಗಾರವಿಲ್ಲದ ಬೆರಳೂ|

ಸಾಮಾನ್ಯವಾಗಿ ಮನೆಯ ಜಗುಲಿ ಅಥವಾ ಮುಂಗಟ್ಟುಗಳಲ್ಲಿ ಕುಳಿತು ಅಕ್ಕಿ ಆರಿಸುವುದು ಸಹಜ.  ಒಳಮನೆ ಹಾಗೂ ಆಡುಗೆ  ಮನೆಗಳಲ್ಲಿ ಅಷ್ಟೊಂದು ಬೆಳಕಿಲ್ಲದಿರಬಹುದು, ಅಲ್ಲದೇ ಹಿತ್ತಲ ಬಾಗಿಲನ್ನು ಈ ರೀತಿಯ ಕೆಲಸಗಳಿಗೆ ಹೆಚ್ಚಿನ ಜನರು ಆಯ್ಕೆ ಮಾಡಿಕೊಂಡಿರಲಾರರು.  ಈ ನಿರ್ಲಿಪ್ತತೆಯಲ್ಲಿ ಕಾರ್ಯತತ್ಪರವಾಗಿರುವ ಹೆಣ್ಣಿಗೆ ಊರಿನ ಬೀದಿಯಲ್ಲಿ ಆ ಕಡೆ ಈ ಕಡೆ ಜನರು ಓಡಾಡಿದ ದೃಶ್ಯ ಅರಿವಿಗೆ ಬರುತ್ತದೆ.  ಅವರು ಹೋದಕಡೆ, ಬಂದಕಡೆಗೆಲ್ಲ ಕಣ್ಣು ಬೀಳುವುದು ಮತ್ತೆ ಯಾವುದೋ ದುಗುಡವನ್ನು ಹೊತ್ತು ಕೊಂಡ ಭಾರದ ಮನಸ್ಸಿನ ಹೆಣ್ಣಿನ ಚಿತ್ರಣವನ್ನು ಸಾಬೀತು ಮಾಡುತ್ತವೆ.  ಕೊನೆಯಲ್ಲಿ ಬರುವ "ಬಂಗಾರವಿಲ್ಲದ ಬೆರಳು" ಈ ಬಾರಿ ಚಂಚಲ ಮನಸ್ಸು ಮತ್ತೆ ಕಾರ್ಯಮಗ್ನವಾಗುವುದನ್ನು ಬಿಂಬಿಸುತ್ತದೆ.

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು

ಇಲ್ಲಿ ಮನಸ್ಸಿನ ಭಾರದ ಭಾವಕ್ಕೆ ಕಾರಣವೇನೋ ಎನ್ನುವಂತೆ ಬೆಟ್ಟದಷ್ಟಿರುವ ಮನೆಕೆಲಸವನ್ನು ಕವಿ ಸೂಕ್ಷ್ಮವಾಗಿ ಹೊರಹೊಮ್ಮಿಸುತ್ತಾರೆ. ಹಾಗಿದ್ದರೂ ಕೂಡ ಶೀಘ್ರವಾಗಿ ಹಿಡಿದ ಕೆಲಸವನ್ನು ಮುಂದುವರೆಸಬೇಕು ಎನ್ನುವ ಯೋಚನೆಯಿಲ್ಲದೆ, ನಿಶ್ಚಲವಾಗಿ ತನ್ನ ಕಾರ್ಯದಲ್ಲಿ ತೊಡಗಿದ್ದರೂ ಚಿತ್ರದಲ್ಲಿರುವ ಬೊಂಬೆಯಂತೆ ಇರುವ ಹೆಣ್ಣಿನ ವರ್ಣನೆಯಲ್ಲಿ ಉದಾಸೀನತೆ ಹೊರಹೊಮ್ಮುತ್ತದೆ.  ಮನೆಕೆಲಸ ಬೆಟ್ಟದಷ್ಟಿವೆ, ಎನ್ನುವ ಮಾತು ಸಾಮಾನ್ಯವಾಗಿ ಬಳಕೆಯಲ್ಲಿರುವುದೇ ಆದರೂ, ಸುಮ್ಮನೆ ಇರುವ ಇವಳು, ಅದನ್ನು ಗೌಣವಾಗಿಸುತ್ತಾಳೆ.

ಬೇಸರಿಯ ಕಿರಿಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು
ಬಂಗಾರವಿಲ್ಲದ ಬೆರಳೂ|

ಈ ಕಥಾನಾಯಕಿಯ ಬೇಸರಿಕೆಯನ್ನು ಮುಚ್ಚಿಡುವಂತೆ ಈ ಬಾರಿ ಎಲ್ಲಾ ಹತ್ತು ಬೆರಳುಗಳೂ ಶ್ರಮಿಸುತ್ತವೆ ಎನ್ನುವ ಮಾತು ಒಂದು ರೀತಿಯಲ್ಲಿ ನಿರಂತರವಾಗಿ ತನ್ನ ಕೆಲಸದಲ್ಲಿ ತೊಡಗಿದ ಹೆಣ್ಣಿನ ಚಿತ್ರಣವನ್ನು ಮುಂದುವರೆಸುತ್ತದೆ, ಮತ್ತೊಂದು ರೀತಿಯಲ್ಲಿ   ಅಕ್ಕಿಯಲ್ಲಿರುವ ಕಲ್ಲನ್ನು ಹುಡುಕುವುದು, ಅದೇ ಅಕ್ಕಿಯ ನುಚ್ಚಿನಲ್ಲಿ ಅದೇನನ್ನೋ ಮುಚ್ಚಿಡುವಂತೆ ಕಾಣಿಸುವುದು ವಿಶೇಷ.  ಮತ್ತೆ ಕೊನೆಯಲ್ಲಿ ಬರುವ ಬಂಗಾರವಿಲ್ಲದ ಬೆರಳು ಈ ಬಾರಿ ಬಡತನವನ್ನು ಮೀರಿ ಸಹಜತೆಗೆ ಒತ್ತು ಕೊಡುತ್ತದೆ.  ಕೊನೆಗೂ ಈ ಕಥಾ ನಾಯಕಿಯ ಬೇಸರಕ್ಕೆ ಇಂಥದೇ ಕಾರಣವೆಂಬುದು ವ್ಯಕ್ತವಾಗದಿದ್ದರೂ ಆಕೆಯ ಮನಸ್ಥಿತಿಯನ್ನು ಅವಳ ಭಾವ-ಭಂಗಿಗಳಿಂದ ವ್ಯಕ್ತಪಡಿಸಲು ಪ್ರಯತ್ನಿಸಲಾಗಿದೆ.  ಅಕ್ಕಿ ಆರಿಸುವ ಈಕೆ ಚಿಕ್ಕ ನುಚ್ಚಿನ ಜೊತೆಗೆ ತನ್ನ ಮನಸ್ಸಿನ ತಳಮಳವನ್ನು ಅವ್ಯಕ್ತವಾಗಿ ಹಂಚಿಕೊಳ್ಳುತ್ತಿದ್ದಾಳೇನೋ ಎನ್ನಿಸಿ, ನಡು ನಡುವೆ ಅಕ್ಕಿಯಲ್ಲಿ ಸಿಗುವ ಚಿಕ್ಕ ಕಲ್ಲುಗಳು ಅವಳ ಕಷ್ಟ ಅಥವಾ ಬೇಸರಿಕೆಯ ಕುರುಹಾಗಿ ಎತ್ತಲೋ ಎಸೆಯುವುದರ ಮೂಲಕ ಹೊರಹಾಕಲ್ಪಡುತ್ತವೆ.  ಹಾಡಿನ ಕೊನೆಯಲ್ಲಿ ಕೊಳಲು ಮತ್ತೆ ಹಾಡಿನಲ್ಲಿ ವ್ಯಕ್ತವಾದ ಭಾವನೆಗಳನ್ನೇ ಮುಂದುವರೆಸುವುದು ವಿಶೇಷ.

ಈ ಹಾಡನ್ನು ನೀವು ಇಲ್ಲಿ ನೋಡಬಹುದು/ಕೇಳಬಹುದು.

Monday, April 27, 2020

ಮೊದಲ ದಿನ ಮೌನ

ಮೊದಲ ದಿನ ಮೌನ
ಕವಿ: ಕೆ. ಎಸ್. ನರಸಿಂಹ ಸ್ವಾಮಿ



ಮೊದಲ ದಿನ ಮೌನ... ಮೈಸೂರ ಮಲ್ಲಿಗೆಯ ಈ ಹಾಡನ್ನು ಕೇಳಿದಾಗೆಲ್ಲ ಹೊಸದಾಗಿ ಮದುವೆಯಾಗಿ ಗಂಡನ ಮನೆಯನ್ನು ಪ್ರವೇಶಿಸಿದ ಹೆಣ್ಣುಮಗಳ ತಳಮಳ ಅರಿವಾಗುತ್ತದೆ.  ಆಗಿನ ಕಾಲದಲ್ಲಿ ತವರು ಮನೆ ತೊರೆದು ಮತ್ತು ಗಂಡನ ಮನೆಯನ್ನು ಸೇರಿ  ಅಲ್ಲಿ ಅವಿಭಕ್ತ ಕುಟುಂಬದಲ್ಲಿ ಹೊಸ ಜೀವನವನ್ನು ಸಾಗಿಸುವುದು ಪ್ರತಿ ಹೆಣ್ಣುಮಗಳ ಬದುಕಿನಲ್ಲಿ ಮಹತ್ವದ ಬದಲಾವಣೆಯೇ ಸರಿ.  ಈ ಹಾಡಿನ ಉದ್ದಕ್ಕೂ ಬರುವ ಅಲಂಕಾರಗಳು ಒಂದೊಂದು ಹಂತದಲ್ಲಿಯೂ ಹೊಸತನ್ನೇನೋ ಸಾರುತ್ತಿವೆ ಎನ್ನಿಸುತ್ತದೆ.  ಕನ್ನಡ ಸಾಹಿತ್ಯದಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಗಳ ಮನದ ತಲ್ಲಣವನ್ನು ಮೈಸೂರ ಮಲ್ಲಿಗೆಯ ಈ ಕವನ ಅತ್ಯಂತ ಸೂಕ್ಷ್ಮವಾಗಿ ಗಮನಿಸುವುದರ ಜೊತೆಗೆ, ಈ ಮೂರು ದಿನಗಳ ಪರಿವರ್ತನೆಯ ಸಮಯದಲ್ಲಿ ಸಾಂದರ್ಭಿಕವಾಗಿ ಆಕೆಯ ಒಳತೋಟಿಯನ್ನು ಇಣುಕಿ ನೋಡುತ್ತದೆ.  ಹಲವು ದಶಕಗಳ ಹಿಂದೆ ಎಲ್ಲರೂ ಸಹಜವಾಗಿ ಗಮನಿಸಬಹುದಾದ ಭಾವನೆಯೇನೋ ಎನ್ನುವಂತಿದ್ದ ಕಾಲದಲ್ಲಿ ಈ ಹಾಡು ಜನಮಾನಸದಲ್ಲಿ ಅದರ ಸ್ಥಾನವನ್ನು ಪಡೆದುಕೊಂಡಿದ್ದಿರಬಹುದು, ಆದರೆ ಈ ಹಾಡಿನ ಭಾವನೆಗಳ ಸಾಂದ್ರತೆಯ ವಸ್ತುನಿಷ್ಠತೆ ಇಂದಿನ ಆಧುನಿಕ ಯುಗದಲ್ಲೂ ಕೇಳುಗರನ್ನು ತನ್ನೊಳಗೆ ತಲ್ಲೀನಗೊಳಿಸಿಕೊಂಡು ಒಂದು ಕ್ಷಣ ಈ  ಹಾಡಿನಲ್ಲಿ ಅಡಗಿದ ಭಾವನೆಗಳ ಕೋಟಲೆಗಳೊಳಗೆ ಒಂದು ಮಾಡಿ ಬಿಡುತ್ತದೆ.

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ 
ಚಿಂತೆ ಬಿಡಿ ಹೂವ ಮುಡಿದಂತೆ 

ಗಂಡನ ಮನೆ ಸೇರಿದ ಮೊದಲ ದಿನ ಹೆಚ್ಚೂ ಕಡಿಮೆ ಮೌನದಲ್ಲೇ ಕಳೆದು ಹೋಗುತ್ತದೆ.  ಗುರುತು ಪರಿಚಯವಿಲ್ಲದ ಊರು,  ಮನೆಯಲ್ಲಿ ಮದುಮಗಳು ಅಲಂಕಾರಕ್ಕಿಟ್ಟ ಬೊಂಬೆಯೇನೋ ಎನ್ನುವಂತೆ ಎಲ್ಲರೂ ನೋಡುವವರೇ.  ಕುಳಿತರೂ ಕಷ್ಟ, ನಿಂತರೂ ಕಷ್ಟ.  ನಡುನಡುವೆ ತವರಿನ ಜ್ಞಾಪಕದಿಂದ ಕಣ್ಣು ಹನಿಗೂಡುತ್ತವೆ.  ಅಳು ತುಟಿಗೆ ಬರುತ್ತದೆ, ಆದರೆ ಗಟ್ಟಿಯಾಗಿ ಅಳಲಾಗದು.  ಚಿಂತೆ ಬಿಡಿ ಹೂವು ಮುಡಿದಂತೆ ಸಣ್ಣಗೆ ಇದ್ದರೂ ಇಲ್ಲದಂತೆ ತಲೆ ಏರಿ ಕುಳಿತಿರುತ್ತದೆ.

ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ 
ಜೀವದಲಿ ಜಾತ್ರೆ ಮುಗಿದಂತೆ|

ನೆರೆ ಹೊರೆಯವರು ಹಾಗೂ ಮನೆ ಮಂದಿ ಎಲ್ಲರೂ ಬಂದು ನೋಡುವವರೇ.  ನವ ವಧು ಹೇಗಿದ್ದಾಳೆ? ಏನು ಮಾಡುತ್ತಿದ್ದಾಳೆ ಎನ್ನುವ ಕುತೂಹಲ ಚಿಕ್ಕವರಿಂದ ದೊಡ್ಡವರ ವರೆಗೆ.  ಎಲ್ಲ ಕಡೆಯಿಂದ ಇಣುಕಿ ನೋಡುವ ಕಣ್ಣುಗಳು ಸಣ್ಣಗೆ ದೀಪ ಉರಿದಂತೆ ಕಂಡರೆ, ತಳಮಳದ ಜೀವದಲ್ಲಿ ಜಾತ್ರೆ ಮುಗಿದಂತೆನಿಸುತ್ತದೆ.  ಜಾತ್ರೆ ಮುಗಿದಾಗ ಏನೇನಾಗಬಹುದು... ಜಾತ್ರೆಗೆಂದು ತಲೆ ಎತ್ತಿದ್ದ ಅಂಗಡಿ ಮುಗ್ಗಟ್ಟುಗಳು ತಮ್ಮ ಟೆಂಟನ್ನು ಕಿತ್ತು ಗಂಟು ಮೂಟೆ ಕಟ್ಟುವುದು, ಅಲ್ಲಲ್ಲಿ ನಿಲ್ಲಿಸಿದ ಎತ್ತಿನ ಬಂಡಿ ಜಾನುವಾರುಗಳು ಪುನಃ ಮನೆ ಕಡೆಗೆ ದಾರಿ ಹಿಡಿವುದು, ಇಷ್ಟೊಂದು ಹೊತ್ತು ಗಿಜುಗಿಟ್ಟುತ್ತಿದ್ದ ಬೀದಿ-ವಠಾರಗಳು ನಿಧಾನವಾಗಿ ಖಾಲಿ ಆಗುವುದು.  ಊರಿನ ತೇರು ಆಗಲೇ ಗುಡಿ ಸೇರಿ ಜನರು ದೇವಸ್ಥಾನದಿಂದ ಪುನಃ ಮನೆಗೆ ಮರಳುವುದು.  ಜನಜಂಗುಳಿಯಿಂದ ಮೇಲೆದ್ದಿದ್ದ ಧೂಳು ನಿಧಾನವಾಗಿ ತಿಳಿಯಾಗುವುದು...ಹೀಗೆ ಒಂದು ಸಂಭ್ರಮದ ಕ್ಷಣ ಸಹಜವಾಗಿ ಮುಂದಿನ ಗತಿಯಲ್ಲಿ ಲೀನವಾಗುವುದರ ಚಿತ್ರಣದ ಮೂಲಕ ಈ ಸಾಲುಗಳು ಅನೇಕ ನೆನಪುಗಳನ್ನು ಹಲವು ರೂಪಕಗಳ ಮುಖೇನ ಕಣ್ಣಿಗೆ ಕಟ್ಟಿಕೊಡುತ್ತದೆ.

ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು 
ಮೂಗುತಿಯ ಮಿಂಚು ಒಳಹೊರಗೆ 
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು 
ಬೇಲಿಯಲಿ ಹಾವು ಹರಿದಂತೆ|

ಅಂತೂ ಕಷ್ಟದ ಮೊದಲ ದಿನ ಮುಗಿದು ಎರಡನೆಯ ದಿನ ಸ್ವಲ್ಪ ಚೇತರಿಕೆ ಶುರುವಾಗುತ್ತದೆ.  ಎರಡನೆಯ ಹಗಲು ಎಂದು ಶುರುವಾಗುವ ಸಾಲುಗಳು ಬಹಳ ನಿಧಾನವಾಗಿ ಸಾಗುವ ಉದ್ದದ ದಿನಗಳನ್ನು ತೋರಿಸುತ್ತವೆ.  ಸುತ್ತಲಿನ ಪರಿಸರ ನಿನ್ನೆಯಷ್ಟು ಹೊಸತೆನಿಸುವುದಿಲ್ಲ, ಆದ್ದರಿಂದ ಇಳಿ ಮುಖವಿರದೆ ಸ್ವಲ್ಪ ಕೊರಗು ಕಡಿಮೆಯಾದಂತೆನಿಸುತ್ತದೆ.  ಮನೆಯ ಒಳ ಹೊರಗೆ ಓಡಾಡಿದಂತೆಲ್ಲ ಹೊಸ ಮೂಗುತಿಯ ಮಿಂಚು ಅಲ್ಲಲ್ಲಿ ಕಾಣಸಿಗುತ್ತದೆ.  ಆದರೂ ಅವರಿವರ ಮಾತುಗಳಲ್ಲಿ ಅಷ್ಟೊಂದು ಸ್ಪಷ್ಟತೆ ಇಲ್ಲ, ಈ ಕಡೆ ಮಾತನಾಡಿದಂತೆಯೂ ಇರಬೇಕು, ಆಡದಂತೆಯೂ ಇರಬೇಕು.  ತೆಳುವಾದ ದುಃಖದ ಗುಂಗಿನಲ್ಲಿ ತೇಲುವ ಮನಸಿಗೆ ಆಡಿದ ಮಾತುಗಳು ಬರೀ ತುಟಿಯ ಚಲನೆಯಂತೆ ಕಂಡು ಬರಬಹುದು.  ಈ ಸಂದರ್ಭಗಳಲ್ಲಿ ಸಮಯ ಬಹಳ ನಿಧಾನವಾಗಿ ಚಲಿಸುತ್ತದೆ.  ಬೇಲಿಯಲ್ಲಿ ಹಾವು ಸರಿದಂತೆ ಎನ್ನುವ ರೂಪಕ ತವರು ಮತ್ತು ಗಂಡನ ಮನೆಯ ಎರಡು ಕಡೆಗಳಲ್ಲಿ ಹರಿದಾಡುವ ಮನಸ್ಸಿನ ಪ್ರತೀಕವಿರಬಹುದು.  ಜೊತೆಗೆ ಬೇಲಿಯಲ್ಲಿ ಹರಿದಾಡುವ ಹಾವು ಜೊತೆಗೆ ಅಲ್ಲಿ ಹರಡಿದ ಹೂವು-ಮುಳ್ಳುಗಳ ಜೊತೆಗೆ ಸಹ ಪರಿಸರದಲ್ಲಿ ಹೊಂದಿಕೊಂಡಿರುವುದನ್ನು ಕಣ್ಣಿಗೆ ಕಟ್ಟುತ್ತದೆ.

ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ 
ಹೂವಿಗೂ ಜೀವ ಬಂದಂತೆ 
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ 
ಹುಣ್ಣಿಮೆಯ ಹಾಲು ಹರಿದಂತೆ|

ಇನ್ನು ಮೂರನೆ ದಿನ ನಿಜವಾಗಿಯೂ ಚೇತರಿಕೆಯ ದಿನ.  ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ಕೈಗೂಡಿಸಿ ಮನೆಯವರೊಂದಿಗೆ ಸೇರಿಕೊಳ್ಳುವ ಪರಿ.  ಅತ್ತೆ, ಮಾವ, ಗಂಡ, ನಾದಿನಿ, ಮೈದುನರನ್ನೆಲ್ಲ ಸಂಬಾಳಿಸಿಕೊಂಡು ಹೋಗುವ ಪರಿ.  ಹೆರಳಿನ ತುಂಬಾ ಹೂ ಮುಡಿದಂತೆ ಆ ಹೂವಿಗೂ ಜೀವ ಬಂದಂತೆ ಎನ್ನುವ ಸಾಲುಗಳು ತಾಜಾ ಹೂಗಳು ಗುಂಪಾಗಿ ದಂಡೆಯ ರೂಪದಲ್ಲಿ ಸಂಭ್ರಮಿಸುವುದನ್ನು ನೋಡಬಹುದು, ಕೇವಲ ಮೂರೇ ದಿನಗಳಲ್ಲಿ ಇದು ಬಿಡಿ ಹೂವಿನ ಚಿಂತೆಯಿಂದ ಬಹಳ ದೂರ ಬಂದ ಮನಸ್ಸಿನ ಪರಿವರ್ತನೆಯನ್ನು ತೋರಿಸುತ್ತದೆ.  ಮೂರನೆಯ ಸಂಜೆ ಎಂದು ಆರಂಭವಾಗುವ ಪದಗಳು ಎರಡನೆಯ ಭಾರವಾದ ಹಗಲಿನಿಂದ ಬಹಳಷ್ಟು ಮುಂದೆ ಬಂದ ಸೂಚನೆಯನ್ನು ಕೊಡುತ್ತದೆ.  ಜೊತೆಗೆ ರಾತ್ರಿ ಇಳಿದಂತೆ ಕತ್ತಲಾದರೂ ಇಡೀ ಬಾನನ್ನು ಆವರಿಸುವ ಹುಣ್ಣಿಮೆಯ ಹಾಲು   ಬೆಳದಿಂಗಳ ಕೊರಗುವ ಕತ್ತಲಿನಿಂದ ಮನಸ್ಸು ದೂರಸರಿದಿರುವುದನ್ನು ಪ್ರತಿಬಿಂಬಿಸುತ್ತದೆ.

ಈ ಹಾಡನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು/ಕೇಳಬಹುದು.

Tuesday, April 21, 2020

ನೀನಾ ಭಗವಂತ?!

ನೀನಾ ಭಗವಂತ
ಚಿತ್ರ: ತ್ರಿವೇಣಿ (1972)
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ: ಎಚ್. ಜಿ. ಗಂಗರಾಜು (ಹಂಸಲೇಖ)
ಗಾಯಕ: ಜಿ. ಬಾಲಕೃಷ್ಣ 



ಕೊರೋನಾ ಸಂಕಷ್ಟದಲ್ಲಿರುವ ನಾವೆಲ್ಲರೂ ದೇವರನ್ನು "ನೀನಾ ಭಗವಂತ?" ಎಂದು ಕೇಳುವ ಹಾಗಿದೆ, ಈ ಹಾಡು. 48 ವರ್ಷಗಳ ಹಿಂದೆ ಬರೆದ ಹಂಸಲೇಖರ ಇದು ಮೊದಲನೆಯ ಹಾಡಗಿಯೂ ಇದ್ದಿರಬಹುದು.

***
ದೇವಸ್ಥಾನದ ಘಂಟೆಯ ಧ್ವನಿ, ಕೊಳಲಿನ ನಾದದ ಹಿನ್ನೆಲೆಯಲ್ಲಿ ಮಧುರ ಸಂಗೀತ ಮೂಡಿ ಬರುತ್ತಿದ್ದಂತೆ, ದೇವಸ್ಥಾನದ ಮುಂದೆ ಸರತಿ ಸಾಲಿನಲ್ಲಿ ಕುಳಿತ ಬಿಕ್ಷುಕರ ಸಾಲು ಕಾಣಸಿಗುತ್ತದೆ.  ಅವರಿಗೆಲ್ಲ ಯಾರೋ ಒಬ್ಬರು ಪುಣ್ಯಾತ್ಮರು ಪ್ರಸಾದವನ್ನೋ ಅಥವಾ ಕಾಸನ್ನೋ ಹಂಚುತ್ತಿರುವ ಸನ್ನಿವೇಶ.  ಮುಂದಿನ ಚಿತ್ರದಲ್ಲಿ ಊರುಗೋಲು ಹಿಡಿದು ಕುಂಟುತ್ತಿರುವವನಿಗೆ ಆಸರೆಯಾಗಿ ಒಬ್ಬರು ಸಹಾಯ ಮಾಡುವ ದೃಶ್ಯ.

"ಅಮ್ಮಾ ಸ್ವಾಮಿ, ತಾಯಿ, ಸ್ವಾಮಿ, ಭಗವಂತ ಧರ್ಮಾ ಮಾಡಿ, ಭಗವಂತ ಧರ್ಮಾ ಮಾಡಿ" ಎನ್ನುವ ಮೊರೆತ.

ಆತ "ಭಗವಂತಾ, ಭಗವಂತಾ" ಎಂದು ಅಟ್ಟಹಾಸದಿ ನಕ್ಕು, "ಜಗತ್ತಿನಲ್ಲಿ ನಡೀತಾ ಇರೋ ಅನ್ಯಾಯಗಳನ್ನೆಲ್ಲ ನೋಡ್ತಾ ಇರೋ ಕಲ್ಲು ಮೂರ್ತಿಗಳೆಲ್ಲ ಭಗವಂತಾನಾ?"

"ಏ ಭಗವಂತಾ, ನೀನಾ ಭಗವಂತಾ?" ಎನ್ನುವಲ್ಲಿ ಹಾಡು ಆರಂಭವಾಗುತ್ತದೆ.  ಮತ್ತೆ ಕೊಳಲು ಹಾಗೂ ಘಂಟಾ ನಿನಾದ, ಜಾತ್ರೆ-ತೇರಿಗೆ ಸೇರಿದ ಭಾರೀ ಜನಜಂಗುಳಿಯ ದೃಶ್ಯ.

ದೂರದಲ್ಲಿ ದೇವಸ್ಥಾನದ ಗೋಪುರ ಹಾಗೂ ಅದಕ್ಕೆ ಹೊಂದಿಕೊಂಡ ಕಲ್ಲಿನ ಕಟ್ಟೆಯ ಕೆಳಗೆ ಬಿದ್ದಿರುವ ಸಣ್ಣ ಕಲ್ಲಿನ ಮೇಲೆ ಒಂದು ಕಾಲನ್ನು ಇಟ್ಟುಕೊಂಡು ನಿಂತು, ಒಂದು ಕೈಯಲ್ಲಿ ಊರುಗೋಲನ್ನು ಹಿಡಿದು ಆಧಾರ ಮಾಡಿಕೊಂಡು, ಮತ್ತೊಂದು ಕೈಯಿಂದ ಗೋಪುರಕ್ಕೆ ತೋರಿ, ದಿಟ್ಟತನದಿಂದ ಕೇಳುವ ಮಾತು:

ನೀನಾ ಭಗವಂತ?
ನೀನಾ ಭಗವಂತ?




ಈ ಚಿತ್ರದಲ್ಲಿ ಈ ಹಾಡು ಮೂಡಿ ಬರುವವರೆಗೆ ಕನ್ನಡ ಸಾಹಿತ್ಯದಲ್ಲಿ ಈ ರೀತಿ ದೇವರನ್ನು ಸಿನಿಮಾ ಹಾಡು-ದೃಶ್ಯಗಳ ಮೂಲಕ ಪ್ರಶ್ನಿಸಿದವರು ಇರಲಾರರು.  ಕಷ್ಟದ ಸಂದರ್ಭಗಳಲ್ಲಿ ದೇವರಿಗೇ ತಿರುಗಿ ಬೀಳುವ ಕೆಲವು ಸನ್ನಿವೇಶಗಳು ದಾಖಲಾಗಿದ್ದರೂ, ಹಿನ್ನೆಲೆಯಲ್ಲಿ ಹಾಡನ್ನು ಹಾಡಿದ ಬಾಲಕೃಷ್ಣ ಅವರ ಧ್ವನಿ ಅಧಿಕಾರವಾಣಿಯಾಗಿ ಮೂಡಿ ಬಂದಿದ್ದು, ಈ ಚಿತ್ರದ ಪಾತ್ರಧಾರಿ ಉದಯ್‌ಕುಮಾರ್ ಅವರಿಗೆ ಬಹಳ ಚೆನ್ನಾಗಿ ಹಿಡಿಸಿದೆ.  ಅದಕ್ಕೆ ತಕ್ಕಂತೆ ಉದಯ್‌ಕುಮಾರ್ ಅವರ ವೇಶಭೂಷಣ ಹಾಗೂ ನಟನೆ ಕೂಡ ಅಷ್ಟೇ ಸಹಜವಾಗಿ ಮೂಡಿಬಂದಿದೆ.

ಜಗಕುಪಕರಿಸಿ ನನಗಪಕರಿಸೋ
ಜಗದೋದ್ಧಾರಕ ನೀನೇನಾ?


ತನಗೆ ಅಪಕಾರ, ಅನ್ಯಾಯವಾಗಿರುವುದರ ಬಗ್ಗೆ ಒಂದೇ ಸಾಲಿನಲ್ಲಿ ತನ್ನ ಬೇಗುದಿಯನ್ನು ತೋಡಿಕೊಳ್ಳುವ ಕವಿ, ಈ ಸಾಲಿನಲ್ಲಿ ದೇವರ ಉದ್ದೇಶವನ್ನು ಪ್ರಶ್ನಿಸುತ್ತಾ, ನೀನಾ ಭಗವಂತ ಎನ್ನುವಲ್ಲಿ ಎರಡು ವೇರಿಯೇಶನ್ನುಗಳನ್ನು ತೋರಿಸಿದ್ದಾರೆ.  "ಜಗದೋದ್ಧಾರಕ ನೀನೇನಾ" ಎಂದಾಗ ಪಾತ್ರಧಾರಿ ಒಂದು ಕ್ಷಣ ನಿಂತು, ಹಿಂದಕ್ಕೆ ತಿರುಗದೆಯೇ ಗೋಪುರದ ಕಡೆಗೆ ಕೈ ಮಾಡಿ ಪ್ರಶ್ನಿಸುವುದು ಮಾರ್ಮಿಕವಾಗಿ ಮೂಡಿಬಂದಿದೆ.

ನೀನೇನಾ?
ನೀನಾ ಭಗವಂತ?


ಈ ಪ್ರಶ್ನೆಗಳ ಯಾದಿಯ ಉದ್ದಕ್ಕೂ ದೇವರ ಮೂರ್ತಿಗಳಿಗೆ ಅಭಿಷೇಕ, ಅರ್ಚನೆ ಮುಂದುವರೆಯುತ್ತಲೇ ಇರುವುದನ್ನೂ ತೋರಿಸಲಾಗಿದೆ.  ಯಾರು ಪ್ರಶ್ನಿಸಲಿ ಬಿಡಲಿ, ಅದರ ಕೆಲಸಗಳು ಹಾಗೆ ಮುಂದುವರೆಯುತ್ತವೆ ಎಂದು ಸೂಚ್ಯವಾಗಿ ಹೇಳುವಂತೆ.

ಗೋರ್ಕಲ್ಲಿಗೆ ಗುಡಿ ಮಂದಿರ ನೂರು ಮಾಡಿದ ನರನಿಗೆ ನೆಲೆಯಿಲ್ಲ
ಹೂ ಸೌಗಂಧವ ಲೇಪಿಸಿ ಹಾಡಿ, ಕರೆದರು ಕರುಣಿಸೆ ಕೃಪೆಯಿಲ್ಲ
ನೀನಾ ಭಗವಂತ?


ಮೊರೆಯುವ ವಯಲ್ಲಿನ್ನುಗಳ ಹಿನ್ನೆಲೆ ಸಂಗೀತದಲ್ಲಿ, ಒಂದು ಕಾಲನ್ನು ಎಳೆದುಕೊಂಡು ಕುಂಟುತ್ತಲೇ ವೇಗವಾಗಿ ಸಾಗಿ ಒಂದು ಕಲ್ಲಿನ ಮಂಟಪ ಅಥವಾ ಬಸದಿಯನ್ನು ಸೇರಿ ಪಾತ್ರಧಾರಿ ಮತ್ತೆ ಮುಂದುವರೆಸುತ್ತಾನೆ.  ದೇವರ ಮೂರ್ತಿಯನ್ನು ಹಿನ್ನೆಲೆಯಲ್ಲಿ ತೋರಿಸುತ್ತಿದ್ದಂತೆ, ಅವುಗಳನ್ನು ಗೋರ್ಕಲ್ಲಿಗೆ ಹೋಲಿಸಿ, ಅಂತಹ ವಿಗ್ರಹಗಳಿಗೆ ನೂರಾರು ಮಂದಿರಗಳನ್ನು ಕಟ್ಟಿದ ಜನರಿಗೆ ತಲೆಯ ಮೇಲೆ ಸೂರಿಲ್ಲದೇ ಮರದ ನೆರಳಿನಲ್ಲಿ ಬದುಕುವ ವಿಪರ್ಯಾಸವನ್ನು ಕವಿ ತೋರಿಸುತ್ತಾರೆ.  ಹೀಗಿದ್ದೂ, ದೇವರನ್ನು ಒಲಿಸಲೆಂದು ಹೂವು, ಸೌಗಂಧವನ್ನು ಲೇಪಿಸಿ ಹಾಡಿ, ಕರೆದರೂ ಕೂಡ ಕರುಣಿಸುವ ನೀನು ಭಗವಂತನೇ?  ಇದೇ ಸಂದರ್ಭದಲ್ಲಿ ಹಿನ್ನೆಲೆ ಸಂಗೀತ ವಯಲಿನ್ನುಗಳು ಮೊರೆಯುತ್ತಿದ್ದಂತೆ ಮತ್ತೆ ಜನಜಂಗುಳಿಯನ್ನು ತೋರಿಸಲಾಗುತ್ತದೆ.

ನಂದನ ಬದುಕು ನರಕ ಮಾಡಿದರೂ
ಸ್ವರ್ಗಕೆ ಒಯ್ಯುವ ಮನಸಿಲ್ಲ
ಹಾಲಾಹಲದ ವಾನಲ ದೂಡಿ
ನಶಿಸಿದರೂ ನೀ ಕಂಡಿಲ್ಲ
ನೀನಾ? ಭಗವಂತ?


ಮುಂದಿನ ದೃಶ್ಯ ಬರುವಲ್ಲಿ, ನಾಯಕ ಒಂದು ಒಣಗಿದ ಮರದ ಕೆಳಗೆ ಆಸರೆಯಲ್ಲಿ ನಿಂತು ಹಾಡು ಮುಂದುವರೆಯುತ್ತದೆ.  ಇದು ನಾಯಕನ ಉತ್ತಮವಾದ ಬದುಕು ಕಾರಣಾಂತರಗಳಿಂದ ನರಕಸದೃಶ ರೀತಿಯನ್ನು ಪಡೆದಿದ್ದಕ್ಕೆ ದೇವರನ್ನು ದೂಷಿಸುತ್ತಲೇ, ನನಗೇಕೆ ಈ ಬೇಗೆಗಳಿಂದ ಮುಕ್ತಿ ನೀಡುತ್ತಿಲ್ಲ ಎಂದು ದೈರ್ಯದಿಂದ ಪ್ರಶ್ನಿಸುತ್ತಾನೆ.  ದೇವರು ನೀಡುತ್ತಿರುವ ಈ ಕಷ್ಟಕಾರ್ಪಣ್ಯಗಳನ್ನು ಹಾಲಾಹಲದ ವಾನಲಕ್ಕೆ ಹೋಲಿಸಿ, ಅದರಿಂದ ನಾಶವಾದರೂ ಭಗವಂತನ ಕಣ್ಣಿಗೇಕೆ ಕಾಣುತ್ತಿಲ್ಲ ಎಂದು ಪ್ರತಿಪಾದಿಸುತ್ತ, ಅವೆಲ್ಲ ಬರೀ ಕಲ್ಲಿನ ಮೂರ್ತಿಗಳು ಎಂಬುದಕ್ಕೆ ಒತ್ತುಕೊಡುತ್ತಾನೆ.

ನಶ್ವರ ಭೋಗದ ಆಸೆ ಕಡಲಲಿ ತೇಲಿಸಿ ಮುಳುಗಿಸಲೇಕಯ್ಯ
ಅಂತರ ತಿಳಿಯದೆ ಪಾಲಿಸುವವಗೆ ದೈವೋತ್ತಮ ಬಿರುದೇಕಯ್ಯ
ದೈವೋತ್ತಮ ಬಿರುದೇಕಯ್ಯ
ನೀನಾ ಭಗವಂತ?


ಈ ಮುಂದಿನ ಸಾಲುಗಳಲ್ಲಿ ಮನುಷ್ಯನಿಗೆ ಕಷ್ಟಕಾರ್ಪಣ್ಯಗಳು ಬರುವುದೇ ನಿಜವಾದಲ್ಲಿ, ನಶ್ವರವಾದ ಭೋಗದ ಆಸೆ ಲೋಲುಪ್ತತೆಗಳನ್ನು ಯಾಕಾದರೂ ಕೊಡಬೇಕು? ಅಲ್ಲದೇ ಈ ಅಂತರ ತಿಳಿಯದೆ ಇರುವವನಿಗೆ ದೈವೋತ್ತಮ ಎನ್ನುವ ಬಿರುದಾದರೂ ಏಕೆ? ಎಂದು ದೇವರ ಅಸ್ತಿತ್ವವನ್ನೇ ಕೆಣಕುತ್ತಾನೆ.  ಈ ಹಾಡಿನ ದೃಷ್ಯೀಕರಣದ ಉದ್ದಕ್ಕೂ ಮಾರುತಿ ಹಾಗೂ ವೆಂಕಟೇಶ್ವರನ ಮೂರ್ತಿಗಳನ್ನು ವಿಶೇಷವಾಗಿ ತೋರಿಸಲಾಗಿದೆ.

ನೀನಾ ಭಗವಂತ?
ಜಗಕುಪಕರಿಸಿ ನನಗಪಕರಿಸೋ
ಜಗದೋದ್ಧಾರಕ ನೀನೇನಾ? ನೀನೇನಾ?



ಮತ್ತೆ ಜಗಕುಪಕರಿಸಿ ನನಗಪಕರಿಸುವ ಜಗದೋದ್ದಾರಕ ನೀನೇನಾ ಎಂದು ಒಂದು ಮರದ ನೆರಳಿನಲ್ಲಿ ಒರಗುತ್ತಿದ್ದಂತೆಯೇ, ಹಾಡಿನ ಮುಂದಿನ ಭಾಗ "ಸಿರಿನಂದನ ಏನಕೇಳಲೆ ನಾ" ಎನ್ನುವ ಬೇರೊಂದು ಗೀತೆ ಎಚ್.ಪಿ. ಗೀತ ಅವರ ದ್ವನಿಯಲ್ಲಿ ಆರಂಭವಾಗುತ್ತದೆ.

1972ರ ಹೊತ್ತಿಗೆ ಈ ಹಾಡನ್ನು ಬರೆದು ತಮ್ಮದೇ ವೈಯಕ್ತಿಕ ಜೀವನದ ತುಮುಲಗಳನ್ನೇ ಈ ಹಾಡಿನ ಮೂಲಕ ಹಂಸಲೇಖ ಅವರು ಹೇಳಿಸಿರಬಹುದು ಎನ್ನುವ ಮಾತು ಕೂಡ ಓದಲು ಸಿಗುತ್ತದೆ. ನಂತರ ಸುಮಾರು ಒಂಭತ್ತು ವರ್ಷಗಳ ತರುವಾಯ ಹಂಸಲೇಖ ಅವರು ಅದ್ಯಾವ ತಪಸ್ಸಿನಲ್ಲಿ ತೊಡಗಿದ್ದರೋ ಗೊತ್ತಿಲ್ಲ.  1981ರಲ್ಲಿ ರವಿಚಂದ್ರನ್ ಅವರು ಹುಡುಕಿ ಆರಿಸಿದ ಮಾಣಿಕ್ಯದಂತೆ ತಮ್ಮ "ಪ್ರೇಮಲೋಕ"ದ ಚಿತ್ರದಲ್ಲಿ ಹಾಡು ಹಾಗೂ ಸಂಭಾಷಣೆಯಲ್ಲಿ ಹಂಸಲೇಖರನ್ನು ತೊಡಗಿಸಿಕೊಂಡ ನಂತರ ಅವರು ಇನ್ನೆಂದೂ "ನೀನಾ ಭಗವಂತಾ?" ಎಂದು ಕೇಳಿರಲಾರರು!

ನೀವು ಈ ಹಾಡನ್ನು ಇಲ್ಲಿ ಕೇಳಬಹುದು/ನೋಡಬಹುದು.

Sunday, April 19, 2020

ನಗುನಗುತಾ ನಲಿ

ಹಾಡು: ನಗುನಗುತಾ ನಲಿ 

ಚಿತ್ರ: ಬಂಗಾರದ ಮನುಷ್ಯ, 1972
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ.ಕೆ ವೆಂಕಟೇಶ್
ಗಾಯನ: ಪಿ.ಬಿ.ಶ್ರೀನಿವಾಸ್



ಎಪ್ಪತ್ತರ ದಶಕದ ಸೂಪರ್ ಹಿಟ್ ಮೂವಿಯೆಂದು ನಾವೆಲ್ಲ ಅದೆಷ್ಟು ಬಾರಿ ನೋಡಿ ನಲಿದ ಬಂಗಾರದ ಮನುಷ್ಯ ಚಿತ್ರದ ಈ ಹಾಡು ಎಂದೂ ಯಾರನ್ನೂ ಮೋಡಿ ಮಾಡುವ ಹಾಡು.  ಹುಣಸೂರು ಕೃಷ್ಣಮೂರ್ತಿಯವರು ಮುತ್ತು ಪೋಣಿಸಿದಂತೆ ಅಕ್ಷರಗಳನ್ನು ರಚಿಸಿ, ಒಬ್ಬ ಮನುಷ್ಯನ ಜೀವಿತಾವಧಿಯ ಮಹತ್ವದ ಹಂತಗಳನ್ನು ಅದೆಷ್ಟು ಸರಳವಾಗಿ ಈ ಹಾಡಿನಲ್ಲಿ ವರ್ಣಿಸಿದ್ದಾರೆ ಎಂದು ಖಂಡಿತ ಅನ್ನಿಸುತ್ತದೆ. ಅದಕ್ಕೆ ತಕ್ಕನಾಗಿ ಜಿ.ಕೆ.ವೆಂಕಟೇಶರ ಹಿನ್ನೆಲೆ ಸಂಗೀತ ಹಾಗೂ ಪಿ.ಬಿ. ಶ್ರೀನಿವಾಸ್ ಅವರ ಕಂಠ ಮಾಧುರ್ಯ, ನಿಮ್ಮನ್ನು ಎಂದೆಂದೂ ಈ ಹಾಡನ್ನು ಕೇಳುವಂತೆ ಮಾಡುತ್ತದೆ.


ಹಾಡಿನ ಮೊದಲಿನಲ್ಲಿ ರಾಜ್‌ಕುಮಾರ್ ಕೆಂಪು ಅಂಗಿ ಮತ್ತು ಬಿಳಿ ಪ್ಯಾಂಟು ತೊಟ್ಟು ರೈಲಿನ ಬೋಗಿಯಿಂದ ಹೊರಕ್ಕೆ ಇಣುಕುತ್ತಿದ್ದಂತೆ ಆಗಿನ ಚಿತ್ರ ಪ್ರೇಮಿಗಳು ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದಿರಬಹುದು.  ಏಳು ನಿಮಿಷದ ಈ ಹಾಡಿನಲ್ಲಿ ಮೊದಲ ಒಂದು ನಿಮಿಷದ ಇಂಟ್ರೋ ಮ್ಯೂಸಿಕ್‌ನಲ್ಲಿ ಹೀರೋ ತನ್ನ ಸುತ್ತಲಿನ ರಮಣೀಯ ಸೌಂದರ್ಯವನ್ನು  ಹೊಸ ಸ್ಥಳವನ್ನು ನೋಡಿದ ಸಹಜವಾದ ಉತ್ಸಾಹದಲ್ಲಿ ಕುಣಿದು ಕುಪ್ಪಳಿಸುವುದನ್ನು ಸುಂದರವಾಗಿ ಚಿತ್ರೀಕರಿಸಲಾಗಿದೆ.  ’ಆಹಾಹಾ’ ಎನ್ನುವ ಮೊದಲ ಸಾಲಿನ ಆಲಾಪನೆಯನ್ನು ಎಲ್ಲ ಕೋನಗಳಿಂದ ಚಿತ್ರಿಸಿ, ಆ ಧ್ವನಿ ಪ್ರತಿಧ್ವನಿಸುವುದನ್ನು ತೋರಿಸಲಾಗಿದೆ.

ಆಹಾಹಾ.... ಆಹಾಹಾ....ಆಹಾಆಹಾಆಹಾ....
ಬೆಟ್ಟದ ಮಗ್ಗುಲಿನಲ್ಲಿ ನಾಯಕ ಓಡಿ ಬಂದು ದಿಢೀರನೆ ನಿಂತು ಹೊರಳುವ ದೃಶ್ಯ ಹಾಗೂ ಹಾಡಿನ ವೇಗ ಕೇಳುಗರ ಹೃದಯ ಬಡಿತವನ್ನು ಹೆಚ್ಚುವಂತೆ ಮಾಡುತ್ತದೆ.  ಇಲ್ಲಿಯವರೆಗೆ ಇಷ್ಟೊಂದು ವೇಗವಾಗಿ ಹಾಡಿನ ಪಲ್ಲವಿ ಮೂಡಿ ಮರೆಯಾಯಿತೇ ಎಂದು ನೀವು ಎಣಿಸುವುದರೊಳಗೆ, ಜೀವನದ ಮಹತ್ವವಾದ ಸಂದೇಶವನ್ನು ಕವಿ ಸಾರುತ್ತಾರೆ, ಅದಕ್ಕೆ ತಕ್ಕನಾಗಿ ನೂರಕ್ಕೆ ನೂರು ಪಟ್ಟು ಹಿನ್ನೆಲೆ ಸಂಗೀತ, ಗಾಯನ ಹಾಗೂ ನಟನೆ ಸಾಥ್ ನೀಡುವುದರ ಸಂಗಮವನ್ನು ನೀವು ಬರಿ ಪಲ್ಲವಿಯಲ್ಲೇ ಕಾಣಬಹುದು.

ನಗುನಗುತಾ ನಲಿ ನಲಿ
ಎಲ್ಲಾ ದೇವನ ಕಲೆಯೆಂದೇ ನೀ ತಿಳಿ
ಅದರಿಂದ ನೀ ಕಲಿ
ನಗುನಗುತಾ ನಲಿ ನಲಿ
ಏನೇ ಆಗಲಿ.


ಈ ಹಾಡಿನ ಉದ್ದಕ್ಕೂ ರಾಜ್‌ಕುಮಾರ್ ಅವರ ನಟನಾ ಕೌಶಲ್ಯದ ಜೊತೆಗೆ ಅವರ ವೇಗವಾಗಿ ಓಡುವ, ಕುಣಿಯುವ, ಹಾರುವ ದೃಶ್ಯಗಳನ್ನು ಜೋಡಿಸಲಾಗಿದೆ.  ಒಂದು ತೆರೆದ ಬಯಲಿನಲ್ಲಿ ಈ ಹಾಡನ್ನು ಚಿತ್ರೀಕರಿಸಲು, ಹಾಗೂ ಹಾಡಿನ ಉದ್ದಕ್ಕೂ ತನ್ನ ಉತ್ಸಾಹ, ವೇಗವನ್ನು ಕಾಯ್ದುಕೊಂಡಿರಲು ಚಿತ್ರದ ತಂಡ ಅದೆಷ್ಟು ಕಷ್ಟಪಟ್ಟಿರಬೇಡ?  ರಾಜ್‌ಕುಮಾರ್ ಅವರ ಉತ್ಸಾಹದ ಸೆಲೆಯೇ ಈ ಹಾಡಿನ ಚಿತ್ರೀಕರಣದ ಜೀವಾಳ.  ಈ ಹಾಡಿನ ನಂತರ, ಈ ರೀತಿ ಅದೆಷ್ಟೇ ಹಾಡುಗಳು ಬಂದಿದ್ದರೂ ಕೂಡ, ಇದು ಎಂದೂ ಮುಂಚೂಣಿಯಲ್ಲಿ ನಿಲ್ಲುತ್ತದೆ.

ಜಗವಿದು ಜಾಣ ಚೆಲುವಿನ ತಾಣ
ಎಲ್ಲೆಲ್ಲೂ ರಸದೌತಣ
ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ
ಹೂಗಳು ಬಿರಿದಾಗ.


ಮುಂದಿನ ಪಂಕ್ತಿಗಳಲ್ಲಿ ಜೀವನದ ಮಹತ್ವದ ಘಟ್ಟಗಳನ್ನು ವರ್ಣಿಸುವುದಕ್ಕೆ ಮೊದಲು, ಸುತ್ತಲಿನ ಹಸಿರು ಹಾಗೂ ತರು-ಲತೆಗಳ ಹಿನ್ನೆಲೆಯಲ್ಲಿ ಜಗವನ್ನು ಚೆಲುವಿನ ತಾಣವೆಂದು ವರ್ಣಿಸಿ, ಮುಂದಿನ ಚಿತ್ರಗಳನ್ನು ಹಾಡಿಗೆ ತಕ್ಕಂತೆ ಬದಲಾಗಿಸಲಾಗಿರುವುದನ್ನು ಗಮನಿಸಬಹುದು.  ಹಸಿರು ಪರಿಸರ ಕಾಂಕ್ರೀಟು, ಕಲ್ಲು ಕ್ವಾರಿಯ ಹಿನ್ನೆಲೆಗೆ ನಾಟಕೀಯವಾಗಿ ಬದಲಾಗುವುದನ್ನೂ, ಜೊತೆಯಲ್ಲಿ ಒಂದು ಚಿಕ್ಕ ಬೆತ್ತಲೆ ಮಗು ಅಳುತ್ತಾ ಹಸಿದು ಅಮ್ಮನ್ನನ್ನು ಹುಡುಕಿಕೊಂಡು ಬರುವುದನ್ನೂ, ಆ ಮಗುವಿಗೆ ತಾಯಿ ಹಾಲುಕುಡಿಸುವ ದೃಶ್ಯವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ.

ನಗುನಗುತಾ ನಲಿ ನಲಿ ಏನೇ ಆಗಲಿ.
ತಾಯಿ ಒಡಲಿನ ಕುಡಿಯಾಗಿ ಜೀವನ
ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿಬಂದು ಚೇತನ ತಾಳಲೆಂದು ಅನುದಿನ
ಮೂಡಿಬಂದು ಚೇತನ ತಾಳಲೆಂದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ.

ನಗುನಗುತಾ ನಲಿ ನಲಿ ಏನೇ ಆಗಲಿ.

ಈ ಕೆಳಗಿನ ಪ್ರತಿಯೊಂದು ದೃಶ್ಯಾವಳಿಗಳಿಗೂ ಕಥಾ ನಾಯಕ ಮೊಟ್ಟ ಮೊದಲನೇ ಬಾರಿ ಇವನ್ನೆಲ್ಲ ನೋಡಿ ಅನುಭವಿಸಿರುವುದರ ಜೊತೆಗೆ, ದೃಶ್ಯಕ್ಕೆ ತಕ್ಕನಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವಂತೆ ಚಿತ್ರಿಸಲಾಗಿದೆ.  ಒಂದೊಂದು ಚಿತ್ರದಲ್ಲಿ ಜೀವನದ ಬೆಳವಣಿಗೆಯ ಹಂತಗಳನ್ನು, ನೋವು-ನಲಿವುಗಳನ್ನು ಸಮನಾಗಿ ತೋರಿಸುವ ಜಾಣ್ಮೆ ಮರೆದಿದ್ದಾರೆ.

ಕಳಸಾಪುರದ ಶಾಲೆಯಿಂದ ಮಕ್ಕಳು ಹೊರಗಡೆ ಓಡಿಬರುವ ದೃಶ್ಯ:

ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು


ಮದುವೆ ಮಂಟಪ, ಎತ್ತಿನ ಬಂಡಿಯಲ್ಲಿ ದಿಬ್ಬಣ ಹೋಗುವ ದೃಶ್ಯ:

ಮುಂದೆ ಯೌವನ ಮದುವೆ ಬಂಧನ...
ಎಲ್ಲೆಲ್ಲೂ ಹೊಸ ಜೀವನ
ಅಹ ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ಮೈಮನ ಮರೆತಾಗ.

ನಗುನಗುತಾ ನಲಿ ನಲಿ ಏನೇ ಆಗಲಿ.

ವೃದ್ದಾಪ್ಯದ ಎರಡು ದೃಶ್ಯಗಳು:

ಏರುಪೇರಿನ ಗತಿಯಲ್ಲಿ ಜೀವನ
ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ
ತಂದಿತಯ್ಯ ಮುದಿತನ
ಅದರೊಳು ಹೊಸದಾದ
ರುಚಿಯಿದೆ ಸವಿಮೋದ.


ನಗುನಗುತಾ ನಲಿ ನಲಿ ಏನೇ ಆಗಲಿ.

ನೀವು ಈ ಹಾಡನ್ನು ಇಲ್ಲಿ ಕೇಳಬಹುದು/ನೋಡಬಹುದು.

Tuesday, April 14, 2020

ಸವಿ ನೆನಪುಗಳು ಬೇಕು ಸವಿಯಲೀ ಬದುಕು

ಸವಿ ನೆನಪುಗಳು ಬೇಕು
ಕವಿ: ಪಿ.ಆರ್. ರಾಮದಾಸ್ ನಾಯ್ಡು
ಸಂಗೀತ: ಎಲ್. ವೈದ್ಯನಾಥನ್
ಗಾಯಕಿ: ವಾಣಿ ಜಯರಾಂ
ಚಿತ್ರ: ಅಪರಿಚಿತ (1978)




"ಸವಿ ನೆನಪುಗಳು ಬೇಕು" ಈ ಹಾಡನ್ನು ನಾನು ಬಹಳ ವರ್ಷಗಳಿಂದ ಕೇಳುತ್ತಾ ಬಂದಿದ್ದರೂ ನನಗೆ ಈ ಸಿನಿಮಾ ನೋಡಿದ ನೆನಪಿಲ್ಲ.  ದೂರದ ದೇಶಕ್ಕೆ ಬಂದು, ಇಂಟರ್ನೆಟ್ಟಿನಲ್ಲಿ ಹಳೆಯದ್ದನ್ನೆಲ್ಲ ಸೋಸಿ ಜಾಲಾಡುತ್ತಿದ್ದಾಗ ಈ ಹಾಡು ಗಮನಕ್ಕೆ ಬಂತು.  ಈ ಹಾಡಿನಲ್ಲಿ ಬಳಸಿದ ರಾಗ ಯಾವಾಗದರೊಮ್ಮೆ ನನ್ನನ್ನು ಕಾಡುತ್ತಿದ್ದುದೂ ಹೌದು... ಪ್ರತಿ ಸಾರಿ ನಾನು ಈ ಹಾಡಿನ ಸಾಲುಗಳನ್ನು ಕೇಳಿದಾಗ, ಈ ಹೆಣ್ಣಿನ ಪ್ರೀತಿ ಎಷ್ಟೊಂದು ತನ್ಮತೆಯಲ್ಲಿ ಇದ್ದಿರಬಹುದು, ಅದು ದೂರವಾಗಲು ಏನು ಕಾರಣವಿದ್ದಿರಬಹುದು ಅಥವಾ ಈ ಸಿನಿಮಾದ ಕೊನೆಯಲ್ಲಿ ಈ ವಿರಹ ಸುಖಾಂತವನ್ನು ಕಾಣುತ್ತದೆಯೇನೋ ಎಂದೆಲ್ಲ ಪ್ರಶ್ನೆಗಳು ಏಳುತ್ತಿದ್ದವು.  ಇತ್ತೀಚಿನ ಕಾಲದಲ್ಲಿ ದೊರಕದ ಪ್ರೇಮ, ಅಥವಾ ಕೈಗೆಟುಕದ ಪ್ರೀತಿ ಒಂದು ಕಮಾಡಿಟಿ ಇದ್ದಿರಬಹುದೋ ಏನೋ, ಆದರೆ ಈ ಹಾಡಿನ ಗುಂಗನ್ನು ನೋಡಿದರೆ ತನ್ನನ್ನು ಸಂಪೂರ್ಣವಾಗಿ ತನ್ನ ಪ್ರೀತಿಗೆ ಸಮರ್ಪಿಸಿಕೊಂಡು, ಅದು ಕೈಗೆಟುಗದ ಸನ್ನಿವೇಶದಲ್ಲಿ ಆ ನೆನಪುಗಳಿಂದಲೇ ಜೀವನ ತಳ್ಳುವ ನಿರ್ಭರತೆಯನ್ನು ಎದುರಿಸುತ್ತಿರುವ ಒಂದು ಹೆಣ್ಣು ಧ್ವನಿ ವಿಶೇಷವಾಗಿ ಕೇಳಿಬರುತ್ತದೆ.

ಎದೆಯಾಳದ ಆಲಾಪನೆಯೊಂದಿಗೆ ಆರಂಭಗೊಳ್ಳುವ ಈ ಹಾಡಿನ ಗಾಢ ಭಾವನೆ, "ಕಾಡುತಿದೆ ಮನವ" ಎಂಬಲ್ಲಿ ಪರ್ಯಾವಸಾನವಾಗುತ್ತದೆ.  ಆಲಾಪನೆಯ ತದನಂತರ ಅತ್ಯಂತ ಸೂಕ್ಷ್ಮವಾಗಿ ಹಲವಾರು ವಯಲಿನ್‌ಗಳು ನುಡಿದು, ಏನೋ ಒಂದು ರಹಸ್ಯ ಬೇಧನೆಯ ಸಂಕೇತವನ್ನು ನೀಡುತ್ತವೆ.  ಕಥಾನಾಯಕಿಯ ಮನದಾಳದಿಂದ ಬಂದಂಥ ಹಾಡಾದ್ದರಿಂದ, ಚಿತ್ರದ ನಾಯಕಿ ಹಾಡಿನ ಸಾಲಿಗೆ ತಕ್ಕಂತೆ ಯಾವುದೇ ತುಟಿ ಚಲನೆಯನ್ನು ಬಳಸದೇ, ಹಾಡಿನುದ್ದಕ್ಕೂ ಹಿನ್ನೆಲೇ ಸಂಗೀತವೇ ಕಥೆಯನ್ನು ಸುರಳೀತವಾಗಿ ಮುಂದೆಕೊಂಡೊಯ್ಯುವಂತೆ ಚಿತ್ರಣಗಳನ್ನು ಹೆಣೆಯಲಾಗಿದೆ.

ಸವಿ ನೆನಪುಗಳು ಬೇಕು ಸವಿಯಲೀ ಬದುಕು
ಕಹಿ ನೆನಪು ಸಾಕೊಂದು ಮಾಸಲೀ ಬದುಕು


ನಿಜ, ಸವಿ ನೆನಪುಗಳು ಖಂಡಿತ ಬೇಕು...’ಸವಿನೆನಪು" ಎಂದು ಬರೆಯುವಲ್ಲೇ ಕವಿ ಇದು ಸವಿ ನೆನಪಲ್ಲದೇ ಮತ್ತೇನನ್ನೋ ಒಳಗೊಂಡಿದೆ ಎಂಬ ಸೂಕ್ಷ್ಮವನ್ನು ಹೊರಹಾಕುತ್ತಾರೆ.  "ಸವಿಯಲೀ ಬದುಕು" ಎಂಬುದನ್ನು ಈ ಬದುಕನ್ನು ಸವಿಯಲು ಹಾಗೂ ಈ ಬದುಕನ್ನು ಸವೆಯಲೂ ಎಂದು ಅರ್ಥ ಮಾಡಿಕೊಳ್ಳಬಹುದು.  ಅದೇ ರೀತಿ, ಹಾಲಿನ ಪಾತ್ರೆಗೆ ಒಂದು ಹನಿ ಹುಳಿ ಹಿಂಡಿದಂತೆ, ಅಂತಹ ಸವಿಯಾದ ಬದುಕು ಮಾಸಲು ಒಂದೇ ಒಂದು "ಕಹಿ ನೆನಪು" ಸಾಕು...ಈ ಎರಡು ಸಾಲಿನಲ್ಲೇ ಕವಿ ಪೂರ್ಣ ಪದ್ಯದ ಆಳ ಹಾಗೂ ಅಂತಃಸತ್ವವನ್ನು ಹಂಚಿಕೊಂಡಿದ್ದಾರೆ ಎನ್ನಬಹುದು.

ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ....
ಕಾಡುತಿದೆ ಮನವ...|


ಒಮ್ಮೆ ಸವಿನೆನಪುಗಳು ಹುಟ್ಟಿದಾಗ ಅವು ಬೆಂಬತ್ತಿ ನಮ್ಮ ದಿನ ಹಾಗೂ ಜೀವಮಾನವನ್ನು ಕಾಡುತ್ತವೆಯೇನೋ ಗೊತ್ತಿಲ್ಲ, ಆದರೆ ಕಹಿ ನೆನಪಿನ ವಿಚಾರಕ್ಕೆ ಬಂದರೆ ಅದೇ ಅದೇ ಮರುಕಳಿಸಿ ಮನಸ್ಸನ್ನ ಕಾಡುವುದನ್ನ ಈ ಎರಡು ಸಾಲುಗಳಲ್ಲಿ ಮೂಡಿಸಲಾಗಿದೆ.  ಈ ಸಾಲಿನ ಕೊನೆಯಲ್ಲಿ ನೀರವ ರಾತ್ರಿಯ ನಿಶ್ಶಬ್ಧವನ್ನು ನೆನಪಿಸುವ ಎರಡು-ಮೂರು ಕ್ಷಣಗಳ ಮೌನ ಕೂಡ ಇದೆ.  ಜೊತೆಗೆ ಇದೇ ನೀರವತೆಯ ಶಬ್ದವನ್ನ ಇಡೀ ಹಾಡಿನ ಉದ್ದಕ್ಕೂ ಹಿನ್ನೆಲೆಯಲ್ಲಿ ಗಮನಿಸಬಹುದು.
ಸವಿ ನೆನಪುಗಳು ಬೇಕು ಸವಿಯಲೀ ಬದುಕು|

ಮತ್ತೊಮ್ಮೆ ಸವಿ ನೆನಪುಗಳ ಪ್ರಾಶಸ್ತ್ಯವನ್ನು ಪ್ರಸ್ಥಾಪಿಸುತ್ತ ಪಲ್ಲವಿ ಮುಗಿಯುತ್ತದೆ.

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನಾ ಎದೆಗೊರಗಿ ಆಸರೆಯ ಬೇಡಿ|
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ|


ಈ ಚರಣದ ಆರಂಭದಲ್ಲಿ ಪ್ಲೇಫುಲ್ ಹಿನ್ನೆಲೆ ಸಂಗೀತ ಮುಂಬರುವ ಹಳೆಯ ಚಿತ್ರಣಗಳಿಗೆ ನಾಂದಿ ಹಾಡುತ್ತದೆ...ಇದೇ ಸಂದರ್ಭದಲ್ಲಿ ’ಕುಕ್ಕುಕ್ಕುಕ್ಕು" ಎಂದು ಮತ್ತೆ ವಯಲಿನ್‌ಗಳು ಮೊರೆಯ ತೊಡಗಿ ಮತ್ತೇನು ಆತಂಕ ಕಾದಿದೆಯೋ ಎನ್ನುವ ಕಾತುರವನ್ನು ಕೇಳುಗರ ಮನಸ್ಸಿನಲ್ಲಿ ಮೂಡಿಸುತ್ತವೆ.  ಪ್ಲೇಬ್ಯಾಕ್ ಸನ್ನಿವೇಶಗಳಾದ್ದರಿಂದ ಅವೇ ವಯಲಿನ್ನ್‌ಗಳು ಮತ್ತೆ ಪ್ಲೇಫುಲ್ ಸಂಗೀತವನ್ನು ನುಡಿಸಿ, ಹಳೆಯ ಚಿತ್ರಗಳಿಗೆ ಪೂರಕವಾಗುತ್ತವೆ.

"ಪ್ರಿಯತಮನ ಒಲವಿಂದ ಕನಸುಗಳು ಮೂಡಿ" ಎಂದು ಕೇಳುವಾಗ ಓಹ್ ಇದೊಂದು ಸೋತ ಪ್ರೇಮದ ಕಥೆಯೇ ಸೈ ಎಂದು ಕೇಳುಗರು ಕನ್‌ಕ್ಲೂಷನ್‌ಗೆ ಬಂದು ಬಿಡಬಹುದಾದರೂ, ಮುಂದಿನ ಪ್ರಾಸದ ಸಾಲುಗಳು ಕೇಳುಗರ ಕಾತುರತೆಯನ್ನು ಇನ್ನೂ ಜಾಗೃತವಾಗೇ ಇರಿಸಿಕೊಳ್ಳುತ್ತವೆ.  ಆದರೆ, ’ಇನಿಯನಾ ಎದಗೊರಗಿ" ಎಂದು ಗಾಯಕಿ ಎಲ್ಲಿ ತಪ್ಪಾಗಿ ಹೇಳಿದರೇನೋ ಅನ್ನಿಸುವಷ್ಟರಲ್ಲಿ ಸರಸ-ಸವಿ, ವಿರಹ-ವಿಫಲದ ಸಾಲುಗಳು ಕೇಳುಗರನ್ನು ಮತ್ತೆ ಮೋಡಿಗೊಳಗಾಗಿಸಿಕೊಳ್ಳುತ್ತವೆ.  ಈ ಸಾಲುಗಳಲ್ಲಿ ಕವಿ, ಅಂತ್ಯ ಪ್ರಾಸಕ್ಕೆ ಬೆಲೆ ಕೊಡದೆ ಸರಸವನ್ನು ಬಯಸಿದ ಮನ, ವಿರಹಕ್ಕೆ ಕೊರಗುವುದನ್ನು ಎತ್ತಿ ತೋರಿಸಿದ್ದಾರೆ.  ಮತ್ತೆ ಈ ಎರಡು ಸಾಲುಗಳಲ್ಲಿ ಪೂರ್ಣ ಕಥೆಯನ್ನು ಹೆಣೆಯುವ ಚಾಕಚಕ್ಯತೆ!

ಇನಿಯನಾ ಎದೆ ಬಡಿತ ಗುಂಡಿನಾ ದನಿಗೆರೆದೂ
ಮಾಸುತಿದೆ ಕನಸು...|


ಇಲ್ಲಿಯವರೆಗೆ ಟಿಪಿಕಲ್ ಕನ್ನಡ ಪದ್ಯದಂತಿದ್ದದ್ದು, ಎದೆ ಬಡಿತವನ್ನು ಗುಂಡಿನ ದನಿಗೆ ಹೋಲಿಸಿ ಕ್ರಾಂತಿಕಾರಿ ದೇಶಗಳ ಸಾಹಿತ್ಯವನ್ನು ನೆನಪಿಗೆ ತಂದುಕೊಡುತ್ತದೆ.  ಈ ಪದ್ಯವನ್ನು ಅವರು ಈ ಸಿನಿಮಾಕ್ಕಾಗಿಯೇ ಬರೆದರೋ ಅಥವಾ ಭಾವಗೀತೆಯನ್ನು ಈ ಸಿನಿಮಾಕ್ಕೆ ಅಳವಡಿಸಿಕೊಳ್ಳಲಾಗಿದೆಯೋ ಗೊತ್ತಿಲ್ಲ, ಆದರೆ ೧೯೭೮ರ ಕಾಲಕ್ಕಾಗಲೇ ಸ್ವಾತಂತ್ರ್ಯ ಚಳುವಳಿಗಳು ಮುಗಿದು ಗುಂಡಿನ ದನಿ ಆಡಗಿ ದಶಕಗಳೇ ಕಳೆದುಹೋಗಿದ್ದ ಸಮಯ, ಕವಿಯ ಈ ವಿಶ್ಲೇಷಣೆಯನ್ನು ಫ್ರೆಂಚ್ ರೆವಲ್ಯೂಷನ್ ಬಂದ ಸಮಯದ ಸಾಹಿತ್ಯಕ್ಕೆ ಹೋಲಿಸಿದರೆ, ಅಥವಾ ವಿಶ್ವ ಯುದ್ಧಗಳಲ್ಲಿ ಭಾಗವಹಿಸಿದ ದೇಶಗಳಲ್ಲಿ ಗಣನೀಯವಾದ ಹೋಲಿಕೆಯಾದೀತೇ ವಿನಾ, ಆಗ ಕರ್ನಾಟಕಕ್ಕೆ ಇನ್ನೂ ಬಂದೂಕಿನ ಕಲ್ಚರ್ ಬಂದಿರಲಿಲ್ಲವಾದ್ದರಿಂದ, ಈ ಸಾಲುಗಳು ವಿಶೇಷವೆನಿಸುತ್ತವೆ...ಹಾಗೆ ಗುಂಡಿನಾ ದನಿಗೆರೆದಂತೆ ಧ್ವನಿಸುವ ಎದೆ ಬಡಿತ ಕನಸನ್ನು ಮಾಸುತ್ತದೆಯೇ ವಿನಾ ನೆನಪನ್ನಲ್ಲ.

ಸವಿ ನೆನಪುಗಳು ಬೇಕು ಸವಿಯಲೀ ಬದುಕು|

ಮತ್ತು ಆರಂಭವಾಗುವ ಪ್ಲೇಫುಲ್ ಸಂಗೀತ ಮಧುರವಾದ ಹಳೆಯ ನೆನಪುಗಳನ್ನು ಹೊತ್ತು ತರುವ ಬೆನ್ನಲ್ಲಿಯೇ ಭೋರ್ಗರೆಯುವ ವಯಲಿನ್‌ಗಳು ಕರಾಳ ಛಾಯೆಯನ್ನು ಹೊತ್ತು ತರುತ್ತವೆ.

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನಾ ಭೀತಿಯಲಿ ನಾ ಬಂಧಿಯಾಗಿ
ಮನಸೂ ಹೃದಯಾ ನೊಂದು ನೋವಾಗಿದೆ
ಒಲವೂ ನಲಿವೂ ಮೂಡಿ ಮಸಕಾಗಿದೆ|


ಮೇಲಿನ ನಾಲ್ಕು ಸಾಲುಗಳು ಕಾಡುವ ನೋವಿನ ಆಳವನ್ನು ತೋರುತ್ತವೆ, ತಂಗಾಳಿಯೇ ಬೀಸುತ್ತಿದ್ದರೂ ಅದು ಬಿಸಿಯಾಗಿ ಕಾಡುವಂತೆ, ತಮ್ಮ ನೆನಪುಗಳು ತರುವ ಮೌನ, ಒಂಟಿತನ ಹಾಗೂ ಅದರ ಒಂದು ಚೌಕಟ್ಟು ಜೈಲಿನ ಪರ್ಯಾಯ ಭಾವನೆಯನ್ನು ಖಂಡಿತ ಮೂಡಿಸಬಲ್ಲವು.  ಜೊತೆಗೆ ಇದು ಮನಸ್ಸಿನ ವಿಚಾರವಷ್ಟೇ ಅಲ್ಲ, ಹೃದಯದ ವಿಚಾರವೂ ಹೌದು, ಅವುಗಳು ನೊಂದು ನೋವಾಗಿದೆ.  ಎಲ್ಲಕ್ಕಿಂತ ಮುಖ್ಯವಾಗಿ, ಕೊನೆಯ ಸಾಲು ಮತ್ತೆ ಒಲವು-ನಲಿವನ್ನು ನೆನಪಿಸುತ್ತ, ಅದೇ ಸಾಲಿನಲ್ಲೇ ಅಷ್ಟೇ ಬೇಗ ಅವು ಮಸಕಾಗುವಂತೆ ಮಾಡುವಲ್ಲಿ ಮತ್ತೆ ಹಿನ್ನೆಲೆ ಸಂಗೀತದ ವಯಲಿನ್‌ಗಳ ಪಾತ್ರ ಹಿರಿದು.

ಅರಳುವಾ ಹೂವೊಂದು ಕಮರುವಾ ಭಯದಲೀ...
ಸಾಗುತಿದೆ ಬದುಕು|


ಅರಳಿದ ಹೂವು ಕಮರಲೇ ಬೇಕು, ಆದರೆ ಇಲ್ಲಿ ವ್ಯಕ್ತಪಡಿಸಿದ ನೋವಿನ ಹಿನ್ನೆಲೆಯಲ್ಲಿ, ಅರಳಿದ ಹೂವು ತಾನು ಕಮರುವ   ಭಯದಲ್ಲಿ, ತನ್ನ ಅಂತ್ಯವನ್ನು ಕಾಣುವುದೇ ಒಂದು ಪ್ರಯಾಣವಾಗುವ ಬದುಕು ಸಾಗುತ್ತಿದೆ ಎಂದು ಕವಿ ವೇದ್ಯವಾಗಿ ಹೇಳಿದ್ದಾರೆ.  "ಕಮರುವಾ ಭಯದಲೀ..." ಎಂದು ಎಳೆದಿರುವುದು ಆ ಕಥಾ ನಾಯಕಿಯ ನೋವು ಅದೆಷ್ಟು ಗಾಢವಾದದ್ದು ಎಂದು ಎಂಥವರೂ ಚಿಂತಿಸುವಂತೆ ಮಾಡುತ್ತದೆ.

ಸವಿ ನೆನಪುಗಳು ಬೇಕು ಸವಿಯಲೀ ಬದುಕು
ಕಹಿ ನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ
ಕಾಡುತಿದೆ ಮನವ...|


ಸವಿ ನೆನಪುಗಳು ಬೇಕು... ಸವಿಯಲೀ ಬದುಕು...'

ಕೇವಲ ನಾಲ್ಕೂವರೆ ನಿಮಿಷಗಳಲ್ಲಿ ಈ ಹಾಡಿನಲ್ಲಿ ಬಳಸಲಾದ ರಾಗ ನಿಮ್ಮ ಮನವನ್ನು ಮಣ ಭಾರ ಮಾಡಬಲ್ಲುದು.  ಸಾಹಿತ್ಯ ಮತ್ತು ಸಂಗೀತದ ಮೇಳ ಬಹಳ ಚೆನ್ನಾಗಿದ್ದು, ಹಿನ್ನೆಲೆಯಲ್ಲಿ ಮೂಡುತ್ತಲೇ ತೆರೆಯ ಮೇಲೆ ಬರುವ ಡಿಸ್ಕ್ರೀಟ್ ಚಿತ್ರಗಳಿಗೆ ಪೂರಕವಾಗಿವೆ.  ಈ ಹಾಡನ್ನು ನೀವು ಚಿತ್ರಗಳ ಸಹಾಯವಿಲ್ಲದೆಯೇ ಕೇಳಬಹುದು, ಅಲ್ಲದೇ ಮಧ್ಯೆ ಮಧ್ಯೆ ಕೇಳುವ ಕರಾಳ ರಾತ್ರಿಯ ಶಬ್ದ, ಆಗಾಗ ಮೊರೆಯುವ ವಯಲಿನ್ನುಗಳ ಟೆಕ್ನಿಕ್ ನಿಮ್ಮನ್ನ ಮಂತ್ರ ಮುಗ್ಧರನ್ನಾಗಿಸುವರಲ್ಲಿ ಸಂಶಯವಿಲ್ಲ.

ಈ ಹಾಡನ್ನು ನೀವು ಇಲ್ಲಿ ನೋಡಬಹುದು/ಕೇಳಬಹುದು.

Sunday, April 12, 2020

ಕಾಡುವ ಹಾಡು: ಕೆಂಪಾದವೋ...

ಕೆಂಪಾದವೋ ಎಲ್ಲ ಕೆಂಪಾದವೋ...
ಕವಿ: ಪಿ. ಲಂಕೇಶ್
ಸಂಗೀತ: ವಿಜಯ ಭಾಸ್ಕರ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್
ಚಿತ್ರ: ಎಲ್ಲಿಂದಲೋ ಬಂದವರು (೧೯೮೦)

ಅಕ್ಕ, ಅಬಚೂರಿನ ಪೋಸ್ಟ್ ಆಫೀಸು, ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ, ಟೀಕೆ-ಟಿಪ್ಪಣಿ, ನೀಲು...ಇತ್ಯಾದಿ ಬರಹಗಳಿಂದಾಗಿ ಕನ್ನಡಿಗರನ್ನು ಹಲವು ದಶಕಗಳ ಕಾಲ ಕಾಡಿದ ಹಾಗೂ ಇನ್ನೂ ಕಾಡುತ್ತಿರುವ ನಮ್ಮ ಮೇಷ್ಟ್ರು, ನಮ್ಮ ಮಲೆನಾಡಿನ ಮನೆಮಾತು, ಪಿ. ಲಂಕೇಶ್ ಅವರು ಬರೆದಿರುವ ಗೀತೆಗಳು ಬಹಳ ಕಡಿಮೆ.  ಅದರಲ್ಲೂ ಅವರದ್ದೇ ಆದ ಸಿನಿಮಾಗಳಿಗೆ ಅಳವಡಿಸಿದ ಎಲ್ಲ ಹಾಡುಗಳೂ ಕೂಡ ಕನ್ನಡಿಗರಿಗೆ ಎಂದೆಂದಿಗೂ ಚಿರಪರಿಚಿತವೆಂದೇ ಹೇಳಬೇಕು.  ’ಎಲ್ಲಿದ್ದೇ ಇಲ್ಲೀತನಕ, ಎಲ್ಲಿಂದ ಬಂದ್ಯವ್ವ..." ಮೊದಲಾದ ಹಾಡುಗಳು ನಮ್ಮನ್ನೆಲ್ಲ ಅವುಗಳ ಅಂತರಾಳದಲ್ಲಿ ಮುಳುಗಿಸಿಕೊಂಡು ಬಿಡುತ್ತವೆ.  ಈ ನಿಟ್ಟಿನಲ್ಲಿ ಒಂದು ಈ "ಕೆಂಪಾದವೋ..." ಹಾಡು ಕೂಡ ಒಂದು.

ಹಾಡಿನ ಚಿತ್ರಣ ಹಳ್ಳಿಯ ಚಿತ್ರಣ. ೮೦ರ ದಶದದಲ್ಲಿ ಹೊರಬಂದ ಈ ಚಿತ್ರ ಕಪ್ಪು-ಬೆಳಕಿನಲ್ಲಿ ಒಂದು ಪತ್ತೇದಾರಿಯ ಕಥೆಯನ್ನು ಹೊರಹಾಕಲು ಹವಣಿಸುತ್ತದೆ.  ಊರಿನಲ್ಲಿ  ಹತ್ತು  ಎಕರೆ ಜಮೀನಿನಲ್ಲಿ ಕಷ್ಟಗಳ ಕೋಟಲೆಗಳಲ್ಲಿ ಮುಳುಗಿಹೋಗಿರೋ ದಂಪತಿಗಳಿಗೆ ಆಕಸ್ಮಿಕವಾಗಿ ಕೆಲಸಗಾರನಾಗಿ ಸಿಕ್ಕ ಅತಿ ಕಡಿಮೆ ಮಾತಿನ ಬ್ಯಾಲನ ಹಿನ್ನೆಲೆಯನ್ನು ರಾತ್ರಿ ಚರ್ಚಿಸುತ್ತ ಇನ್ನೇನು ನಿದ್ದೆಗೆ ಹೋಗಬೇಕು ಎನ್ನುವ ಸಮಯದಲ್ಲಿ ಬ್ಯಾಲನ ಆಂತರಾಳದಿಂದ ಈ ಹಾಡು ಹುಟ್ಟುತ್ತದೆ.  ಜಗಲಿಯ ಕಂಬಕ್ಕೆ ಒರಗಿಕೊಂಡು ಅದೆತ್ತಲೋ ನಿರ್ವಿಣ್ಣನಾಗಿ ನೋಡುವ ಬ್ಯಾಲ "ಕೆಂಪಾದವೋ" ಎನ್ನುವುದನ್ನು ಆಗಷ್ಟೇ ಮುಗಿದ ಸೂರ್ಯಾಸ್ತವನ್ನು ಕುರಿತು ಹೇಳುತ್ತಾನೋ ಅಥವಾ ಮುಂಬರುವ ಸೂರ್ಯೋದಯವನ್ನು ಕುರಿತು ಹೇಳುತ್ತಾನೋ ಎಂಬ ಕುತೂಹಲ ನೋಡುಗರಲ್ಲಿ ಮೂಡುತ್ತದೆ. ಅಥವಾ ಬ್ಯಾಲನ ಮನದಲ್ಲಿ ದೊಡ್ಡದೊಂದು ಕ್ರಾಂತಿಯ ಸಂಘರ್ಷವೇ ನಡೆಯುತ್ತಿರಬಹುದು.

ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಕುಡಿಧ್ಹಾಂಗೆ ಕೆಂಪಾದವು.


ಈ ಎರಡು ಸಾಲುಗಳಲ್ಲಿ ಒಂದು ವಿಜೃಂಬಣೆಯ ಧೋರಣೆ ಇದೆ, ಸೂರ್ಯನಂತೆ ಅವನ ಕಾರ್ಯತಂತ್ರದಿಂದ ದಿನಕ್ಕೆರಡು ಬಾರಿ ಭೂಮಂಡಲವನ್ನೆಲ್ಲ ಕೆಂಪಿನಿಂದ ಆವರಿಸುವ ಶಕ್ತಿ ಇನ್ಯಾರಿಗಿದೆ?  ಆತನ ಈ ಶಕ್ತಿಯ ವಿಶೇಷತೆಯನ್ನು ಎಲ್ಲ ದೇಶಗಳಲ್ಲೂ ಕವಿಗಳು ಹಾಡಿ ಹೊಗಳಿದ್ದಾರೆ, ಹಾಗೂ ಇಲ್ಲೂ ಕೂಡ.  ಕೆಂಪು ಬಣ್ಣ ಯಾವುದರ ದ್ಯೋತಕ, ಇದು ಕ್ರಾಂತಿಕಾರಕವೋ ಅಲ್ಲವೋ ಎಂಬುದನ್ನು ಕೂಡ ಇಲ್ಲಿ ಚರ್ಚಿಸಬಹುದು.   ಹಾಗೇ ಕೇವಲ ಕೆಲವೇ ಕೆಲವು ವಸ್ತುಗಳನ್ನು ಹೆಸರಿಸಿ - ಹಸುರಾಗಿದ್ದ ಗಿಡಮರ, ಬೆಳ್ಳಗಿದ್ದ ಹೂವು - ಇವೆಲ್ಲವೂ ರಕ್ತವನ್ನು ಕುಡಿದ ಹಾಗೆ ಕೆಂಪಾದವು!  ನಾವು ನೆತ್ತರ ಎಂದು ಕನ್ನಡದಲ್ಲಿ ಬಳಸಿದಾಗ ಆ ಪದಕ್ಕೆ ಅಷ್ಟು ಕಟುವಾದ ಶಕ್ತಿ ಬರುವುದಿಲ್ಲ, ಅದು ಕ್ರಾಂತಿ ಎನ್ನಿಸುವುದಿಲ್ಲ, ಅದೇ ರಕ್ತ ಎಂದು ಬಳಸಿದಾಗ ಅದನ್ನು ಹಲವಾರು ಕ್ರಾಂತಿಕಾರಕ ವಿಚಾರಗಳಿಗೆ ಹೋಲಿಸಬಹುದು.  ಅದೇ ಇಲ್ಲಿ ಕವಿಯ ಹೆಗ್ಗಳಿಕೆ - ಹಗುರವಾದ ಪದಗಳನ್ನು ಬಳಸಿ ಸೂಕ್ತವಾದ ಅರ್ಥವನ್ನು ಕಟ್ಟುವುದು.

ಹುಲ್ಲೂ ಬಳ್ಳಿಗಳೆಲ್ಲ ಕೆಂಪಾದವೂ
ಊರು ಕಂದಮ್ಮಗಳು ಕೆಂಪಾದವೂ


ಹಸುರಿದ್ದ ಗಿಡಮರ ಬೆಳಗಿದ್ದ ಹೂವುಗಳು, ಅವುಗಳ ಜೊತೆಗೆ ಹುಲ್ಲೂಬಳ್ಳಿಗಳೆಲ್ಲ ಕೆಂಪಾಗೋದು ಸಹಜ.  ಅವುಗಳ ಜೊತೆಗೆ ಊರು ಕಂದಮ್ಮಗಳು ಕೆಂಪಾಗೋದು ಏಕೆ ಮತ್ತು ಹೇಗೆ ಅನ್ನಿಸೋಲ್ಲ?  ಇಲ್ಲಿ ಕವಿ ಊರಿನ ಜನಗಳಿಗೆಲ್ಲ ಒಟ್ಟಿನಲ್ಲಿ "ಕಂದಮ್ಮಗಳು" ಎಂದು ಸೂಚ್ಯವಾಗಿ ಹೇಳಿದ್ದಾರೆ.  ಊರಿನ ಕಂದಮ್ಮಗಳು ಎಂದರೆ ಬರೀ ಮನುಷ್ಯರಿಗೆ ಮೀಸಲಾಗಬೇಕು ಎಂದೇನು ಇಲ್ಲ, ಊರಿನಲ್ಲಿ ಉಸಿರಾಡುವ ಎಲ್ಲವೂ ಊರಿನ ಕಂದಮ್ಮಗಳೇ!

ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿದೂ ಹೋದಾಗ ಪಚ್ಯಾಯ ತೆನೆಯಂತ
ಭೂಮಿಯೂ ಎಲ್ಲಾನೂ ಕೆಂಪಾದವೋ


ಈ ಮೇಲಿನ ಸಾಲುಗಳಲ್ಲಿ ಸೂರ್ಯ-ಭೂಮಿಯ ಸಾಂಗತ್ಯವನ್ನು ಕವಿ ವರ್ಣಿಸುತ್ತಿದ್ದಾರೆಯೇ? ಅಪಾರವಾದ ಮುಗಿಲಿನ ನೀಲಿಯಲ್ಲಿ ನಲಿಯುವ, ಸಂಜೆಯಾದ ನಂತರ ರಾತ್ರಿಯಲ್ಲಿ ಕಪ್ಪಾಗುವ, ಸೂರ್ಯನ ಮಾಂತ್ರಿಕ ಶಕ್ತಿಯಿಂದ ಹಸಿರು ತೆನೆಯಂತೆ ಕಂಗೊಳಿಸುವ ಭೂಮಿಯೇ ಕೆಂಪಾದಂತೆ.  ಅಥವಾ...ಬ್ಯಾಲನ ಪಾತ್ರದ ಮನದಲ್ಲಿ ತನ್ನ ಪ್ರೇಯಸಿಯೊಡನೆ ಕಳೆದ ಒಡನಾಟದ ನೆನಪಿನ ಜೊತೆಜೊತೆಯ ನಡುಗೆಯೇ?  ಕಾಯುತ್ತ ಕುಳಿತಾಗ ಮೂಡುವ ಬೇಸರ ಅಥವಾ ವಿರಹವೇ ಅಥವಾ ಮತ್ತಿನ್ಯಾವ ಸೂಚ್ಯವಿರಬಹುದು?  ಈ  ಮೇಲಿನ ಸಾಲುಗಳನ್ನು ಹಲವಾರು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು, ಪಚ್ಚೆಯ ತೆನೆ ಎಂದರೆ ಹಸಿರು ತೆನೆ ಎಂದೋ ಅಥವಾ ಪಚ್ಯಾಯ ತೆನೆ ಎಂದರೆ ಏನಿರಬಹುದು ಎಂಬುದನ್ನು ಊಹಿಸಿಕೊಂಡಷ್ಟೂ ಗಹನವಾಗುತ್ತದೆ.

ನನಗಾಗ ಕೆಂಪಾದವೋ.
ಈ ಮೇಲಿನ ಉಪಮೆಗಳ ಪೂರಕಗಳ ಜೊತೆಗೆ ಕೊನೆಯ ಈ ಸಾಲು ಬಹಳ ಮುಖ್ಯವಾದುದು.  ದಿಢೀರನೆ ನೆನಪಿನಂಗಳದಿಂದ ಹೊರಬಂದ ಮನಸ್ಸು ’ನನಗಾಗ ಕೆಂಪಾದವೋ’ ಎಂದು, ನನಗೆ ಹಾಗನ್ನಿಸಿತು ಎಂದು ಹಂಚಿಕೊಂಡ ಹಾಗಿದೆ.  ಹೇಳುವುದನಲ್ಲೆವ ಹೇಳಿ ಅದು ನನ್ನ ಅಭಿಪ್ರಾಯ ಮಾತ್ರ ಎಂದೋ ಇಲ್ಲಾ ನನಗೆ ಆಗ ಕೆಂಪಾದವೋ ಎಂದು ಊಹಿಸಿಕೊಂಡಿರಲಿಕ್ಕೂ ಸಾಧ್ಯ.

ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ


ಈ ಹಾಡಿನ ಬಗ್ಗೆ ಯೋಚಿಸುತ್ತಿರುವಾಗ ಗೀತೆ ಎಲ್ಲೋ ಅಪೂರ್ಣವಾಯಿತೇನೋ ಎಂದು ಒಮ್ಮೆ ಅನ್ನಿಸಿತು.  ಈ ಪದ್ಯಕ್ಕೆ ಇನ್ನೊಂದು ಪ್ಯಾರಾವೂ ಇರಬಹುದು.  ಆದರೆ, ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚಿತ್ರದಲ್ಲಿ ಮುಂಬರುವ ನಿಗೂಢ ಕಥೆಯ ಸುಳಿವನ್ನು ನೀಡುವಂತೆ ಅರ್ಧದಲ್ಲೇ ಈ ಹಾಡನ್ನು ಉದ್ದೇಶ ಪೂರಕವಾಗಿ ಮೊಟಕುಗೊಳಿಸಿದ್ದಾರೆ ಅನ್ನಿಸುತ್ತದೆ.  ಹಾಡಿನುದ್ದಕ್ಕೂ ಅಪರೂಪಕೊಮ್ಮೆ ಸಂಸ್ಕೃತ ಪದಗಳನ್ನು ಬಳಸಿರುವುದನ್ನು ಬಿಟ್ಟರೆ ಮತ್ತೆಲ್ಲ ಗ್ರಾಮೀಣ ಅಚ್ಚ ಕನ್ನಡದ ಭಾಷೆಯಲ್ಲಿ ಮೂಡಿಬರುತ್ತದೆ.  ಚಿಕ್ಕ ಹಾಗೂ ಚೊಕ್ಕವಾದ ಸಾಹಿತ್ಯ ಅನೇಕ ನೆನಪಿನ ತರಂಗಗಳನ್ನು ನಿಮ್ಮ ಮನದಲ್ಲಿ ಮೂಡಿಸಬಹುದು.  ಪಾತ್ರಧಾರಿ ಬ್ಯಾಲಾ ’ಹ್ಮೂ’ ಗುಟ್ಟುತ್ತಲೇ ಮಂಡಿಯನ್ನು ಮಡಿಚಿದ ಕಾಲಿನಲ್ಲಿ ಸಣ್ಣಗೆ ತಾಳ ಹಾಕುತ್ತಾ ಹಾಡನ್ನು ಮುಗಿಸಿ ನಿಸ್ತೇಜನಾಗಿ ಬಿಟ್ಟಕಣ್ಣು ಬಿಡುತ್ತಲೇ ಕುಳಿತಿರುವುದರ ಮೂಲಕ ಹಾಡನ್ನು ಕೊನೆಯಾಗಿಸಿ ಬಹಳ ವಿಶೇಷವಾಗಿ ಸೆರೆಹಿಡಿಯಲಾಗಿದೆ.  ಈ ಹಾಡಿನ ಗುಂಗಲ್ಲೇ ನೀವು ಮುಂದುವರೆದು ’ಎಲ್ಲಿದ್ದೇ ಇಲ್ಲೀ ತನಕ, ಎಲ್ಲಿಂದ ಬಂದ್ಯವ್ವಾ..." ಹಾಡನ್ನು ನೋಡಿ, ಪೂರ್ತಿ ಸಿನಿಮಾವನ್ನೂ ನೋಡಿದಿರೆಂದರೆ ಒಮ್ಮೆ ೮೦ರ ದಶಕದ ಕರ್ನಾಟಕಕ್ಕೆ ಹೋಗಿಬಂದಾಗುವುದಂತೂ ಖಂಡಿತ!


ಈ ಹಾಡನ್ನು ನೀವು ಇಲ್ಲಿ ಕೇಳಬಹುದು ಹಾಗೂ ನೋಡಬಹುದು.