Showing posts with label ಹರಟೆ. Show all posts
Showing posts with label ಹರಟೆ. Show all posts

Sunday, February 04, 2024

ಸ್ಥಳಾಂತರ

ಒಂದು ಶುಭ್ರವಾದ ಮಧ್ಯಾಹ್ನ ಎಲ್ಲರೂ ಸುಧಾ ಹೋಟ್ಲು ಸರ್ಕಲ್ ಹತ್ರ ಸೇರಿದ್ರು. ಅದು ಸರ್ಕಲ್ ಅಂದ್ರೆ ನಾಲ್ಕು ರಸ್ತೆ ಕೂಡೋ ಜಾಗಾನೇ ಅಂತ ಆಗಬೇಕಿಲ್ಲ.  ಅದೊಂದು ಸಣ್ಣ ವ್ಯಾಪಾರದ ಸ್ಥಳ. ಒಂದು ಮುಖ್ಯ ರಸ್ತೆ, ಅದಕ್ಕೆ ಲಂಭವಾಗಿ ಹೊರಟಿರೋ ಮತ್ತೊಂದು ರಸ್ತೆ ಅನ್ನಬೇಕು ಅಷ್ಟೇ. ಈ ಊರಿನ ಮುಖ್ಯವಾದ ಸ್ಥಳಕ್ಕೆ ಯಾವ ಒಬ್ಬ ಮಹಾತ್ಮರ ಹೆಸರೂ ಇನ್ನೂ ಯಾರೂ ಏಕೆ ಇಟ್ಟಿಲ್ಲ ಅನ್ನೋದು ಒಳ್ಳೆಯ ಪ್ರಶ್ನೆ.

ಹೀಗಿರೋ ಸ್ಥಳ, ಬೆಳಿಗ್ಗೆ ಮತ್ತು ಸಂಜೆ ಹೂವು ತರಕಾರಿ ಮಾರೋ ಜನರಿಂದ ಮತ್ತು ಅವನ್ನು ಖರೀದಿ ಮಾಡೋ ಗ್ರಾಹಕರಿಂದ ಒಂದು ರೀತಿ ಗಿಜುಗುಟ್ಟುತ್ತಾ ಇರೋದನ್ನ ಬಿಟ್ರೆ, ಮಧ್ಯಾಹ್ನ ಊಟದ ಸಮಯವೊಂದನ್ನು ಬಿಟ್ಟು ಉಳಿದೆಲ್ಲ ಸಮಯ ತಣ್ಣಗೇ ಇರೋದು ಅಂತ ಹೇಳ್‌ಬಹುದು.

ಈ ಮೂರು ರಸ್ತೆಗಳು ಕೂಡುವಂತ ಸ್ಥಳದಲ್ಲಿ ಇರೋದು ಸುಧಾ ಹೋಟ್ಲು. ಘಟ್ಟದ ಕೆಳಗಿಂದ ದಶಕಗಳ ಹಿಂದೆ ಬಂದು, ಈ ಊರಿನಲ್ಲಿ ನೆಲೆನಿಂತ ಒಂದು ಸಣ್ಣ ಭಟ್ಟರ ಹೋಟೆಲ್. ಅಂದು ಅವರ ಹಿರಿಯ ಮಗಳ ಹೆಸರಿನಿಂದ ಆರಂಭವಾಗಿದ್ದು, ಇವತ್ತಿಗೂ ಇನ್ನೂ ಮುಂದುವರೆಯುತ್ತಿದೆ. ಭಟ್ಟರು ಕಾಲವಾಗಿ ಅದೆಷ್ಟೋ ವರ್ಷಗಳು ಸಂದಿವೆ. ಅವರ ಹೆಂಡತಿ ಇನ್ನೂ ತಮ್ಮ ಎಂಬತ್ತರ ಪ್ರಾಯದಲ್ಲಿ ಇದ್ದರೂ, ಆಗಾಗ್ಗೆ ಹೋಟೆಲ್ ಹಿಂದೆ ಮುಂದೆ ಸುಳಿಯುತ್ತಾರಾದರೂ, ಅವರು ಹಾಕಿಕೊಟ್ಟ ರೆಸಿಪಿ ಅಲ್ಲಿನ ಜನರ ಬಾಯಿ ರುಚಿಯಲ್ಲಿ ಗಾಢವಾಗಿ ನಿಂತು ಬಿಟ್ಟಿದೆ.

ದಿನ ಬೆಳಗ್ಗೆ ತಿಂಡಿಗೆ ಜನ ಅಷ್ಟೊಂದು ಬರ್ತಿರಲಿಲ್ಲ, ಆದ್ರೆ, ಮಧ್ಯಾಹ್ನ ಊಟದ ಹೊತ್ತಿಗೆ ಮಾತ್ರ ಜನ ದಂಡಿಯಾಗಿ ಅದೆಲ್ಲೆಲ್ಲಿಂದಲೋ ಬರೋರು. ಅಮ್ಮನ ಕೈ ರುಚಿ - ಅಂತಲೇ ಫ಼ೇಮಸ್ಸಾಗಿರೋ ಘಮಘಮಿಸೋ ಉಪ್ಪಿಟ್ಟು, ಚಿತ್ರಾನ್ನ, ಪುಳಿಯೋಗರೆ, ಅನ್ನ-ಸಾಂಬಾರ್ ಜೊತೆ ಜೊತೆಗೆ ಕೀರು-ಪಾಯಸ ಅಂತಾ ಏನಾದ್ರೂ ಸಿಹಿ ಪ್ರತಿದಿನ ಸಿಕ್ಕೇ ಸಿಗೋದು. ಈ ಬೆಲೆ ಏರಿಕೆ ದಿನಗಳಲ್ಲಿ ಕಡಿಮೆ ಬೆಲೆಗೆ ಪುಷ್ಕಳ ಭೋಜನ ಅನ್ನೋ ಮನೆ ಮಾತಿನ ಹಿನ್ನೆಲೆಯಲ್ಲಿ ನಮ್ಮೂರಿಗೆ ಬಂದೋರೆಲ್ಲ ಸುಧಾ ಹೋಟ್ಲಲ್ಲೇ ಊಟ ಮಾಡೋದಕ್ಕೆ ಖಾಯಸ್ ಮಾಡ್ತಿದ್ರು ಅನ್ನಬಹುದು.

ಎಲ್ಲರ ಬಾಯಲ್ಲಿ "ಸುಧಾ ಹೋಟ್ಲು" ಅಂತ ಇದ್ದುದ್ದಕ್ಕೆ, ಭಟ್ಟರ ಮಗ "ಹೋಟೇಲ್ ಸುಧಾ" ಎಂದು ಇಂಗ್ಲೀಷಿನಲ್ಲಿ ಬರೆಸಿ ದಪ್ಪ ಅಕ್ಷರಗಳಲ್ಲಿ ಬೋರ್ಡು ಹಾಕಿದ ದಿನವೇ ನಮ್ಮೂರಿಗೆ ಆಧುನಿಕತೆ ಬಂದಿದ್ದೂ ಅಂತ ಅನ್ಸುತ್ತೆ. ಯಾರು ಏನ್ ಬೇಕಾದ್ರೂ ಬೋರ್ಡ್ ಹಾಕ್ಕೊಳ್ಳಿ, ಜನ್ರ ಬಾಯಲ್ಲಿ ಅದು ಸುಧಾ ಹೋಟ್ಲು, ಕೆಲವೊಮ್ಮೆ ಓಟ್ಲು ಆಗಿದ್ದು, ಮತ್ತೆ ಹಾಗೇ ಎಲ್ಲ ಕಡೆಗೂ ಹೇಳಿ-ಕೇಳೀ ಬರ್ತಾ ಇದ್ದದ್ದು ನಮ್ಮೂರಿನ ಒಂದು ಅಂಗವಾಗಿದ್ದಂತೂ ನಿಜ.

ಕಾಲ ಕ್ರಮೇಣ ಎಲ್ಲರೂ ಎಲ್ಲ ಕಡೆಗಳಲ್ಲಿ ವಲಸೆ ಹೋಗಿ ನೆಲೆ ನಿಂತ ಮೇಲೆ, ಭಟ್ಟರ ಕೊನೇ ಮಗ ಕೊಟ್ರೇಶಿ ಹೋಟ್ಲನ್ನ ಇನ್ನೂ ನಡೆಸಿಕೊಂಡು ಬರ್ತಾ ಇರೋದನ್ನ ಎಂಬತ್ತರ ಗಡಿ ದಾಟಿ ನಿಂತು, ಟೊಂಕ ಬಗ್ಗಿದ್ದರೂ ಮೈ ಬಗ್ಗದೇ ಇನ್ನೂ ಗಟ್ಟಿಯಾಗೇ ಇರೋ ಅಮ್ಮ, ಇವತ್ತಿಗೂ ತನ್ನ ಕೈ ರುಚಿ ಹೋಟೆಲಿನ ಗ್ರಾಹಕರಿಗೆ ತಪ್ಪದಂತೆ ಜತನದಿಂದ ನೋಡಿಕೊಂಡಿರುವುದು ನಮ್ಮೂರಿನ ಮೂರು ತಲೆಮಾರುಗಳ ಬಾಯಿ ರುಚಿ ಆಗಿ ಹೋಗಿದೆ ಎನ್ನಬಹುದು.

***

ಬಾಯಲ್ಲಿ ಮುಂಡು ಬೀಡಿ ಇಟ್ಟುಕೊಂಡು, ಮುಂಡಾಸ ಕಟ್ಟಿಕೊಂಡು ಅಡ್ಡಪಂಚೆಯನ್ನು ಗಂಟು ಹಾಕಿ ಗಟ್ಟಿಗೊಳಿಸಿದ ದಾಂಡಿಗರು ಓಡಾಡುವ ನಮ್ಮೂರಿನ ಬೀದಿಗಳಲ್ಲಿ ಕ್ರಮೇಣ ಪ್ಯಾಂಟು-ಶರಟುಗಳು ಓಡಾಡಲಾರಂಭಿಸಿದವು. ಅದೆಲ್ಲೋ ಒಂದು ಫ಼್ಯಾಕ್ಟರಿ ತೆಗೆದರು ಎನ್ನುವ ಹೆಸರಿನಲ್ಲಿಯೋ, ಅಥವಾ ನಮ್ಮೂರಿನಿಂದ ಕೆಲವೇ ಮೈಲುಗಳ ದೂರದಲ್ಲಿ ಹಾದು ಹೋಗುವ ಹೆದ್ದಾರಿಯ ದೆಸೆಯಿಂದ ನಮ್ಮೂರಿನಲ್ಲಿ ಆಗಂತುಕರ ಮತ್ತು ಅಪರಿಚಿತರ ಲವಲವಿಕೆಗಳು ಜೋರಾಗತೊಡಗಿದವು. ಊರಿಗೆ ನಾಲ್ಕು ಲ್ಯಾಂಡ್ ಲೈನುಗಳ ದೂರವಾಣಿ ಇದ್ದಂತಹ ಊರಿನಲ್ಲಿ ದಿಢೀರನೆ ಎಲ್ಲೆಂದರಲ್ಲಿ ಜಂಗಮವಾಣಿಗಳು ಬಂದವೆಂದರೆ? ಅವೇ ರಸ್ತೆಗಳು, ಅವು-ಅವೇ ಊರುಗಳು. ಆದರೆ, ಜನರು ನಿಂತಲ್ಲಿ ನಿಲ್ಲಲಾರರಾದರು. ಹೆಚ್ಚು ಹೆಚ್ಚು ಓಡಾಡುವುದೇ ಉದ್ದೇಶವೆಂಬಂತೆ ಎಲ್ಲರೂ ಎಲ್ಲ ಕಡೆಗೂ ಎಲ್ಲ ಕಾಲಗಳಲ್ಲಿ ಹರಡಿಕೊಳ್ಳುತ್ತಾ ಹೋದರು. ಒಂದು ಕಾಲದಲ್ಲಿ ದುಡ್ಡು ತೆಗೆದುಕೊಂಡು ಊಟ ಕೊಡುವ ಹೋಟೆಲಿನವರೂ ಸಹ, ತಮ್ಮಲ್ಲಿ ಬಂದು ತಿಂದು ಹೋಗುತ್ತಿದ್ದವರನ್ನು ತಮ್ಮ ಮನೆಯವರಂತೆಯೇ ವಿಚಾರಿಸಿಕೊಂಡು, ಅವರ ಹಿಂದು-ಮುಂದುಗಳನ್ನು ಅರಿತುಕೊಂಡಿರುತ್ತಿದ್ದರು. ಸುಧಾ ಹೋಟ್ಲು ಎನ್ನುವ ವೇದಿಕೆಯೊಂದರಲ್ಲೇ ಅನೇಕ ಆಗು-ಹೋಗುಗಳ ಬಗ್ಗೆ ವ್ಯಾಖ್ಯಾನಿಸಲಾಗುತ್ತಿತ್ತು. ಇನ್ನು ಊರಿನಲ್ಲಿದ್ದ ಸೆಲೂನುಗಳೂ, ಬೀಡಾ ಅಂಗಡಿಗಳೂ, ಕಿರಾಣಿ ಗುರಾಣಗಳೂ, ಹಿಟ್ಟಿನ ಮಿಲ್ಲುಗಳೂ ಇನ್ನೆಲ್ಲವನ್ನೂ ಒಟ್ಟು ಹಾಕಿ ನೋಡಿದರೆ, ಯಾವೊಂದು ಸಂವಹನದ ಸಮರ್ಪಕ ವ್ಯವಸ್ಥೆಯಿಲ್ಲದಿದ್ದರೂ ಎಲ್ಲವೂ ಸಮರ್ಪಕವಾಗೇ ನಡೆದುಕೊಂಡು ಹೋಗುತ್ತಿತ್ತು. ಊರಿರುವಲ್ಲಿ ಪೋಸ್ಟ್ ಆಫ಼ೀಸು ಇರುವಷ್ಟೇ ಸಹಜವಾಗಿ ಒಮ್ಮೊಮ್ಮೆ ಹೊಡೆದಾಟಗಳೂ, ರೋಧನಗಳೂ, ಒ.ಸಿ. ನಂಬರುಗಳ ಎಕ್ಸ್ ಚೇಂಜುಗಳೂ, ಚುನಾವಣಾ ಪ್ರಣಾಳಿಕೆ ಮತ್ತು ಷಡ್ಯಂತ್ರಗಳೂ ಮೊದಲಾಗಿ ಎಲ್ಲವೂ ಇಂತಹ ಪಬ್ಲಿಕ್ ಸ್ಥಳಗಳಲ್ಲೇ ನಡೆಯುತ್ತಿದ್ದವೆಂದರೆ?

ಈ ಸಂಬಂಧವಾಗೇ ನಮ್ಮ ಹಿರಿಯರು ಹೇಳಿದ್ದಿರಬಹುದು - ನಾಲ್ಕು ಜನ ನಂಬುವಂತೆ ಬದುಕು ಮಗಾ! ಎಂಬುದಾಗಿ.

***

ಇತ್ತೀಚೆಗಂತೂ ನಮ್ಮೂರಿನ ರಸ್ತೆಗಳಲ್ಲಿ ಹೊರಗಿನವರದೇ ಆಟಾಟೋಪ. ಮಿರಿಮಿರಿ ಮಿಂಚುವ ಕಾರಿನಿಂದ ಇಳಿದು ರಸ್ತೆಗೆ ಓಡುವ ಮಕ್ಕಳಿಗೆ ಅವರ ಹಿಂದೆ ಮುಂದೆ ಯಾವ ವಾಹನಗಳು ಬಂದರೂ ಕಾಣವು. ಇಂತಹ ಮಕ್ಕಳನ್ನೇ ತಮ್ಮ ವೃತ್ತದ ಕೇಂದ್ರದಲ್ಲಿಟ್ಟುಕೊಂಡು ಸುತ್ತುವ ಪೋಷಕರಿಗೆ ಯಾವಾಗಲೂ ಅವುಗಳ ಸುತ್ತ ಸುತ್ತುವುದೇ ಕಾಯಕವಾಗಿ ಪರಿಣಮಿಸಿದೆ. ಗ್ರಾಹಕರ ಸಂತುಷ್ಟಿಯೇ ನಮ್ಮ ಖುಷಿ, ಎಂದು, ಒಂದಕ್ಕೆರಡು ರೇಟ್ ಹಾಕಿ ಸಾಮಾನ್ಯ ಗೃಹಬಳಕೆ ವಸ್ತುಗಳನ್ನೇ ಬಿಂಕ ಬಿನ್ನಾಣದಿಂದ ಮಾರಾಟ ಮಾಡುವ ಅಂಗಡಿಯ ಹುಡುಗಿಯರು ಊರಿನ ಸೇಲ್ಸ್ ಅನ್ನು ಅದ್ಯಾವಾಗಲೋ ಹೆಚ್ಚಿಸಿಯಾಗಿದೆ. ಅದೇನೇ ಆಗಲಿ, ಬಿಡಲಿ ಇವತ್ತಿಗೂ ಸುಧಾ ಹೋಟ್ಲಿಗೆ ಹೋಗುವ ಗ್ರಾಹಕರ ಸಂಖ್ಯೆಯಲ್ಲಾಗಲೀ, ಆ ಹೋಟೆಲಿನ ಆಯ-ವ್ಯಯದಲ್ಲಾಗಲೀ ಯಾವ ವ್ಯತ್ಯಾಸವೂ ಆದಂತಿಲ್ಲ... ಎಂದುಕೊಳ್ಳುವ ಹೊತ್ತಿಗೆ...

ಒಂದು ದಿನ ಒಳ್ಳೆಯ ನಾಜೂಕಾದ ಬಟ್ಟೆ ಧರಿಸಿದ ಯುವಕರು ದಿಢೀರನೇ ಕಾರಿನಲ್ಲಿ ಬಂದರು. ಆ ಮೂರು ರಸ್ತೆಗಳು ಕೂಡುವ ಕೇಂದ್ರದಲ್ಲಿ, ಸುಧಾ ಹೋಟ್ಲು ಇರುವ ಮೂಲೆಯಲ್ಲಿ ಹೊಸ ಬೈಕ್ ಶೋ ರೂಮ್ ಒಂದು ಆರಂಭವಾಗುವ ಸೂಚನೆಗಳನ್ನು ನೀಡಿ, ತಣ್ಣಗಿದ್ದ ಊರಿನಲ್ಲಿ, ಹೊಸ ಕಲರವವನ್ನು ಹುಟ್ಟು ಹಾಕುವ ಹಾಗೆ, ನೀರಿನಲ್ಲಿ ಕಲ್ಲು ಎಸೆದು ಹೋದಂತೆ ಮಾಡಿ ಹೋದರು.

ಶೋ ರೂಮ್ ತೆರೆದ ಮೊದಲ ವಾರ ಬೈಕ್ ಶೋ ರೂಮಿಗೆ ಬರುವ ಗ್ರಾಹಕರನ್ನು, ಲಲನೆಯರು ಹೂವಿನ ಪಕಳೆಗಳನ್ನು ಅವರು ನಡೆದು ಬರುವ ದಾರಿಯಲ್ಲಿ ಎರಚಿ ಸ್ವಾಗತಿಸುತ್ತಾರಂತೆ ಎನ್ನುವ ಸುದ್ದಿ ನಮ್ಮೂರಿನಲ್ಲಿ ಸದ್ದು ಮಾಡತೊಡಗಿತು. ಆದರೆ, ಒಂದು ಕಡೆ ಚಂಬಣ್ಣನವರ ಕಿರಾಣಿ ಅಂಗಡಿ, ಅದರ ಪಕ್ಕ ರಾಜೂ ಇಟ್ಟಿರುವ ಇಸ್ತ್ರಿ ಅಂಗಡಿ, ಅದರ ಪಕ್ಕದಲ್ಲಿ ಸೇಟ್ ಇಟ್ಟುಕೊಂಡ ಸೆಲೂನನ್ನು ಬಿಟ್ಟರೆ,. ಆ ಸರ್ಕಲ್‌ನಲ್ಲಿ ಇದ್ದದ್ದು ಸುಧಾ ಹೋಟ್ಲು ಮಾತ್ರವೇ! ಈ ಬೈಕ್ ಶೋ ರೋಮ್ ಅನ್ನು ಕಟ್ಟಲು, ಬೆಳೆಸಲು ಯಾವುದನ್ನ ಆಹುತಿ ತೆಗೆದುಕೊಳ್ಳುತ್ತಾರೋ ಎಂದು ಎಲ್ಲರೂ ಮಾತನಾಡಿಕೊಳ್ಳುವಂತಾಯಿತು.

ಬೆಳೆಯುವ ಊರಿಗೆ ಬೈಕುಗಳು ಬೇಕು ನಿಜ... ಆದರೆ, ಕಿರಾಣಿ ಅಂಗಡಿ, ಇಸ್ತ್ರಿ ಅಂಗಡಿ, ಕಟಿಂಗ್ ಶಾಪು ಮತ್ತು ಎಲ್ಲರ ನೆಚ್ಚಿನ ಹೋಟೆಲ್ಲು... ಯಾರು ಯಾರಿಗೆ ಬೇಕು  ಯಾರು ಯಾರಿಗೆ ಬೇಡ? ಹೀಗಿರುವಾಗ ಆ ಒಂದು ಕರಾಳ ದಿನವೂ ಬಂದೇ ಬಿಟ್ಟಿತು.

ಸುಮಾರು ಐದಾರು ಕಾರುಗಳಲ್ಲಿ ಬಂದಿಳಿದ ದಾಂಡಿಗರು, ಹೊಟೇಲಿನ ಕಡೆಗೆ ಧಾವಿಸಿದರು. ಇವರೆಲ್ಲ ಗುಂಪಾಗಿ ಒಟ್ಟಿಗೆ ಬಂದ ರಭಸವನ್ನು ಕಂಡು, ಗಲ್ಲಾ ಪೆಟ್ಟಿಗೆ ಮುಂದೆ ಕುಳಿತಿದ್ದ ಕೊಟ್ರೇಶಿ, ’ಪರವಾಗಿಲ್ಲ ಇವತ್ತು ಜನ ಮುಂಜಾನೆ ಹನ್ನೊಂದೂವರೆಗೇ ಊಟಕ್ಕೆ ಬರೋಕೆ ಶುರು ಮಾಡಿದ್ದಾರೆ...’ ಎಂದು ಕಣ್ಣರಳಿಸಿ ನೋಡುತ್ತಿರುವ ಹೊತ್ತಿಗೆ ಅದೇನೇನೋ ಮಾತುಗಳು ಕೇಳ ತೊಡಗಿದವು. ಬಂದ ದಾಂಢಿಗರು ಗಡ್ಡ ಧಾರಿಗಳು, ಅದೆಲ್ಲೋ ದೂರದ ಪಂಜಾಬಿನ ಲೂಧಿಯಾನದವರಂತೆ... ಅವರಲ್ಲಿ ಕೆಲವರು ದಷ್ಟಪುಷ್ಟರೂ, ಕೈಗೆ ವಿಷ್ಣುವರ್ಧನ್ ಬಳೆ ಧರಿಸಿದವರೂ ಇದ್ದರು. ಇಂಗ್ಲೀಷು, ಹಿಂದಿಗಳಲ್ಲಿ ಮಾತನಾಡುತ್ತಿದ್ದ ಜನರು ಹೋಟೇಲಿನಲ್ಲಿ ಒಮ್ಮೆಲೇ ಕೋಲಾಹಲ ನಡೆಸತೊಡಗಿದರು. ಅವರ ಮಾತಿನ ಸಾರಾಂಶದಂತೆ ಸುಧಾ ಹೋಟ್ಲು ಜಾಗದ ಸಮೇತ ಮಾರಾಟವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಬೈಕ್ ಶೋ ರೂಮ್ ಆಗಿ ಪರಿವರ್ತನೆಗೊಳ್ಳಲಿದೆ. ಈ ಆಸ್ತಿಯ ವ್ಯಾಪಾರವನ್ನೆಲ್ಲ ಕೊಟ್ರೇಶಿಯ ಅಣ್ಣ, ಆನಂದನೇ ಬೆಂಗಳೂರಿನಲ್ಲಿ ಕುಳಿತು ಮಾಡಿದ್ದಾನಂತೆ. ಅವನ ಹೆಂಡತಿಗೂ ಕೊಟ್ರೇಶಿಗೂ ಅಷ್ಟಾಗಿ ಆಗಿ ಬರದಿದ್ದರಿಂದ ಅಣ್ಣ ತಮ್ಮಂದಿರಲ್ಲಿ ಯಾವೊಂದು ಬಾಂಧವ್ಯವೂ ಉಳಿಯದೇ, ಕೊಟ್ರೇಶಿ ಈ ರೀತಿ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವ ಸ್ಥಿತಿ ಬಂದೊದಗಿತಂತೆ.

ಈ ದಾಂಡಿಗರೆಲ್ಲ ಬಂದು ಬೆಂಚು-ಮೇಜುಗಳನ್ನು ಎಳೆದಾಡಿ ಒಂದು ಕಡೆಗೆ ಗುಂಪು ಹಾಕುವ ಹೊತ್ತಿಗೆ ಅಲ್ಲಿ ಕಣ್ಣೀರಿಡುವ ದೃಶ್ಯ ಭಟ್ಟರ ಹೆಂಡತಿಯದು...’ನಾನು ಸಾಯುವ ಮುಂಚೆ ಇಂತದ್ದನ್ನು ನೋಡಬೇಕಿತ್ತಾ? ದೇವರೇ, ನನ್ನನ್ಯಾಕೆ ಇನ್ನೂ ಜೀವಂತವಾಗಿಟ್ಟಿದ್ದೀಯ?’ ಎಂದು ಪ್ರಲಾಪಿಸಿ ಆರ್ತತೆಯಲ್ಲೂ ಇರುವಿಕೆಯನ್ನು ದೂರಿ, ಸುತ್ತಲಿನವರಿಂದ ಸಂತಾಪವನ್ನು ಗಳಿಸಿಕೊಳ್ಳುವುದರಲ್ಲೇನೋ ಶಕ್ತಳಾದ ಹೆಂಗಸು, ತನ್ನ ಹೋಟಲನ್ನು ಉಳಿಸಿಕೊಳ್ಳಲು ಅಸಹಾಯಕಳಾಗೇ ಕಂಡಳು.

ಹೋಟೆಲಿನ ನೈಋತ್ಯ ಮೂಲೆಯಲ್ಲಿ ಇನ್ನೂ ಈಗಷ್ಟೆ ಕತ್ತರಿಸಿಟ್ಟ ಕೊತ್ತುಬರಿ ಸೊಪ್ಪು ಮತ್ತು ಸಬ್ಸಿಗೆ ಸೊಪ್ಪುಗಳು ಚಟ್ಟಂಬಡೆಯಾಗಿ ಹೊರಬರುವ ಹುನ್ನಾರದಲ್ಲಿ ಕಲಿಸಿದ ಹಿಟ್ಟಿನೊಂದಿಗೆ ಒಡನಾಟವನ್ನು ಬೆಳೆಸುವ ಆಲೋಚನೆಯಲ್ಲಿದ್ದವು. ಗ್ಯಾಸ್ ಒಲೆಯ ಮೇಲೆ ದೊಡ್ಡ ಬಾಂಡಲೆಯೊಂದು ತನ್ನ ಹಿನ್ನೆಲೆಯನ್ನು ಕೆನ್ನಾಲಗೆಗಳಿಗೆ ಒಡ್ಡಿಕೊಂಡಿದ್ದರೂ ಶಾಂತ ಚಿತ್ತನಾಗಿ ತನ್ನೊಳಗೆ ಹುದುಕಿಕೊಂಡಿದ್ದ ಎಣ್ಣೆಯೊಳಗೆ ಒಂದು ಗುಳ್ಳೆಯೂ ಬಾರದಂತೆ ನೋಡಿಕೊಂಡಿತ್ತು. ಇನ್ನು ಕೆಲವೇ ನಿಮಿಷಗಳಲ್ಲಿ ಒಕ್ಕರಿಸುವ ಹಸಿದ ಗ್ರಾಹಕರ ದಣಿವಾರಿಸಲು ಎಲ್ಲ ಸ್ಟೀಲಿನ ನೀರಿನ ಜಗ್ಗುಗಳೂ ತಮ್ಮೊಳಗೆ ತುಂಬಿಕೊಂಡಿದ್ದ ನೀರಿನ ಅಂತರಂಗದ ಶಕ್ತಿಯ ಫಲದಿಂದ ತಮ್ಮ ಹೊರ ಮೇಲ್ಮೈಯಲ್ಲಿಯೂ ಸಣ್ಣ ನೀರಿನ ಹನಿಗಳನ್ನು ಪ್ರಚುರ ಪಡಿಸತೊಡಗಿದ್ದವು.  ಮೇಲೆ ಇದ್ದ ಕರಿ ಬಣ್ಣದ ಮಂಗಳೂರು ಹಂಚಿನ ಸೂರಿನ ನಡುವೆ ಒಂದೇ ಒಂದು ಅಡ್ಡ ಪಟ್ಟಿಯ ಸಹವಾಸಕ್ಕೆ ಅಂಟಿಕೊಂಡಿದ್ದ ಫ಼್ಯಾನು, ತಾನು ನಿಧಾನವಾಗಿ ತಿರುಗುತ್ತ, ಗಾಳಿ ಬೀಸುವುದಿರಲಿ, ತನ್ನ ಸುತ್ತಲಿನ ಜೇಡರ ಬಲೆಗಳಿಗೆ, ’ಹತ್ತಿರ ಬಂದೀರಿ ಜೋಕೆ!’ ಎಂದು ಸೂಚನೆ ನೀಡುತ್ತಿದ್ದಂತಿತ್ತು.

ಹೊಟ್ಟೆ, ಮೈ-ಕೈ ತುಂಬಿ ಕೊಂಡ ದಾಂಡಿಗರಿಗೆ ಹಸಿದವರ ಸಂಕಟಗಳು ಅರ್ಥವಾಗುವುದಾದರೂ ಹೇಗೆ? 'ಇವತ್ತಿನಿಂದ ಹೋಟೆಲ್ ಬಂದ್!' ಎಂದು ದೊಡ್ಡ ದರ್ಪದ ಧ್ವನಿಯಲ್ಲಿ ಹೇಳಿ ಬಿಟ್ಟರೆ ಸಾಕೆ? ಒಂದು ಊರಿನ ಹೃದಯ ಭಾಗದಲ್ಲಿ ಮೂರು ತಲೆಮಾರುಗಳಿಂದ ಜನರನ್ನು ಸಂತೈಸಿಕೊಂಡು ಬಂದ ಅನ್ನಪೂರ್ಣೇಶ್ವರಿಯ ಅಪರಾವತಾರ ಸುಧಾ ಹೋಟೇಲಿನ ಆಂತರ್ಯದ ಆಳ ಕೇವಲ ಇಷ್ಟೆಯೇ?

ಈಗಾಗಲೇ ಮಧ್ಯಾಹ್ನದ ಊಟದ ಹೊತ್ತಾಗುತ್ತಿದ್ದರಿಂದ, ಕೊಟ್ರೇಶಿ ತನ್ನ ಹರುಕು ಮುರುಕು ಹಿಂದಿಯಲ್ಲಿ ಒಳ ನುಗ್ಗಿದ ದಾಂಡಿಗರಿಗೆ ಒಂದೆರಡು ಗಂಟೆ ಸಮಯಾವಕಾಶಕ್ಕಾಗಿ ಕಾಡಿ ಬೇಡಿದ ಮೇಲೆ, ಅವರು ಒಪ್ಪಿಕೊಂಡರು. ಬಂದ ಜನರೆಲ್ಲ ಮುಗಿ ಬಿದ್ದು ಊಟ ಮಾಡುವುದರ ಜೊತೆಗೆ, ಇನ್ನು ನಾಳೆಯಿಂದ ಎಲ್ಲಿಗೆ ಹೋಗೋದು ಎಂದು ಯೋಚಿಸ ತೊಡಗಿದರು. ಸರ್ಕಲ್ಲಿನಲ್ಲಿ ಹೊಸದಾಗಿ ಸಂಜೆಗೆ ಸೇರಿಕೊಂಡ ಪಾನೀಪೂರಿ ತಳ್ಳುಗಾಡಿಗಳಿಂದ ಎಂದಾದರೂ ಹೊಟ್ಟೆ ತುಂಬುವುದುಂಟೇ? ಒಂದು ವೇಳೆ ಹೊಟ್ಟೆ ತುಂಬಿದರೂ, ಅಮ್ಮನ ಕೈ ರುಚಿಯ ಅಡುಗೆ ಎಂದಾದರೂ ಸಿಗುವುದೇ? "ಛೇ, ಈ ಊರಿಗೆ ಈ ರೀತಿ ಕಲಿಗಾಲ ಬರಬಾರದಿತ್ತಪ್ಪಾ...’ ಎಂದು ಎಲ್ಲರೂ ಮಮ್ಮಲ ಮರುಗುವವರೇ!

***

ಇನ್ನೇನು ಮಧ್ಯಾಹ್ನದ ಊಟವಾದರೂ ಬಂದ ಜನ ಹೋಗಲೊಲ್ಲರು. ಇಷ್ಟರಲ್ಲೇ ಒಂದಿಷ್ಟು ಮಂದಿ ಊರಿನ ಹಿರಿಯರಾದ ಜರ್ಮಲೆ ಚಂದ್ರಣ್ಣನವರನ್ನು ಕರೆತಂದರು. ಕೊಟ್ರೇಶಿ ತನ್ನ ಪೋನಿನಿಂದ ತನ್ನ ಅಣ್ಣ ಆನಂದನಿಗೆ ಡಯಲ್ ಮಾಡಿ, ಚಂದ್ರಣ್ಣನಿಗೆ ಫೋನು ಕೊಟ್ಟ. ಚಂದ್ರಣ್ಣ ಅದ್ಯಾವ ಕಾರಣಕ್ಕೆ ಸ್ಫೀಕರಿನಲ್ಲಿ ಹಾಕಿದರೋ ಗೊತ್ತಿಲ್ಲ,... ಆ ಕಡೆಯಿಂದ ಆನಂದ, "ಚಂದ್ರಣ್ಣಾ... ನೀವು ಊರಿಗೆ ದೊಡ್ಡ ಮನುಷ್ಯರು... ನಾನು ನಿಮ್ಮ ಉಸಾಬರಿಗೆ ಬರಲ್ಲ... ನಿಮ್ಮ ಮೇಲಿನ ಗೌರವದಿಂದ ಹೇಳ್ತೀನಿ, ನಾನು ನನ್ನ ಹೆಸರಿನಲ್ಲಿರೋ ಪ್ರಾಪರ್ಟಿ ಯಾರಿಗಾದ್ರೂ ಮಾರ್ತೀನಿ, ಹೆಂಗಾದರೂ ಇರ್ತೀನಿ... ನಿಮ್ಮ ಕೆಲ್ಸ ನೀವ್ ನೋಡೋದು ಒಳ್ಳೇದು..." ಎಂದು, ಚಂದ್ರಣ್ಣನ ಮಾತೂ ಕೇಳದೇ ಆ ಕಡೆ ಫ಼ೋನು ಇಟ್ಟುಬಿಟ್ಟ. ಕೆಟ್ಟು ಪಟ್ಟಣ ಸೇರು ಅಂತಾರೆ ನಿಜ. ಆದರೆ, ಒಳ್ಳೆಯವನಾಗೇ ಇದ್ದ ಆನಂದನಿಗೆ ಈ ನಮನಿ ದಾರ್ಷ್ಯ ಬರಬಾರದಾಗಿತ್ತು... ಎಂದು ಎಲ್ಲರೂ ಅಂದುಕೊಳ್ಳುವ ಹೊತ್ತಿಗೆ, ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಂಡ ಮನಸ್ಥಿತಿ ಚಂದ್ರಣ್ಣನದಾಗಿತ್ತು. ಅವರ ಮುಂದೆ ಆಟಾಡಿಕೊಂಡು ಬೆಳೆದು, ದೂರದ ಬೆಂಗಳೂರಿನ ನೀರು ಕುಡಿದ ಆನಂದನೇ ಇಷ್ಟು ಮಾಡಿರುವಾಗ ಸುತ್ತಲಿನ ಹತ್ತು ಕೆರೆಗಳಿಂದ ನೀರು ಕುಡಿದ ಚಂದ್ರಣ್ಣ ಸುಮ್ಮನೆ ಇರುವುದಾದರೂ ಹೇಗೆ?!

ಊರಿಗೆ ಹಿರೀ ಜನ ಅಂತ ಇರ್ತಾರಲ್ಲ, ಅವ್ರದ್ದೂ ಒಂದು ಮಾತು ಅಂತ ಇರತ್ತೆ ಊರಲ್ಲಿ. ತಕ್ಷಣ ಚಂದ್ರಣ್ಣ, ಹತ್ತಿರದ ಪೋಲೀಸ್ ಸ್ಟೇಷನ್ನಿಗೆ ಫ಼ೋನ್‌ ಮಾಡಿ, ದಫ಼ೇದಾರರ ಹತ್ರ ಅವರ ಸಾಹೇಬ್ರು ಜೊತೆ ತಕ್ಷಣ ಬರಬೇಕು ಎಂದು ತಾಕೀತು ಮಾಡಿದರು. ನಂತರ ಅಲ್ಲಿಗೆ ದೌಡಾಯಿಸಿದ ಪೋಲೀಸರಿಗೆ, ’ನಾನು ಹೇಳುವವರೆಗೂ ಇಲ್ಲೇನೂ ಕದಲದಂತೆ ನೋಡಿಕೊಳ್ಳಿ’ ಎಂದು ಹುಕುಂ ಹಾಕಿ ಹೊರಟು ಹೋದರು.

***

ಒಂದು ರೀತಿ ಚಲನ ಚಿತ್ರ ನೋಡಿದ ರೀತಿಯಲ್ಲಿ, ಬೈಕ್ ಶೋ ರೂಮ್ ಆರಂಭವಾಗುವ ಸೂಚನಾ ಫಲಕಗಳೂ, ಬ್ಯಾನರ್‌ಗಳೂ, ಕಲರ್ ಪೇಪರ್‌ಗಳೂ ಇದ್ದಕ್ಕಿದ್ದ ಹಾಗೆ ಸದ್ದಡಗಿದಂತೆ ನಿಶ್ಶಬ್ಧಗೊಂಡವು. ಊರಿನ ಮಂಡಲ ಪ್ರಧಾನರೂ, ಹಲವು ರಾಜಕೀಯ ಮುಖಂಡರೂ, ಹೋಟೇಲಿನ ಮುಂದೆ ನಿಂತು ಹಿಂದಿಯಲ್ಲಿ, ಬಂದಿದ್ದ ದಾಂಡಿಗರಿಗೆ ಹುಕುಂ ಕೊಡಲು, ಅವರೆಲ್ಲ ಯಾವುದೋ ದೊಡ್ಡ ಕೋರ್ಟಿನಿಂದ ಸ್ಟೇ ಆರ್ಡರು ಬಂದಂತೆ ಸ್ತಬ್ಧವಾಗಿ, ಬಂದ ದಾರಿಗೆ ಹಿಂತಿರುಗಿದರು. ಊರಿನ ಆಸ್ತಿಯ ಒಂದು ಭಾಗವಾಗಿರುವ ಸುಧಾ ಹೋಟಲ್ಲನ್ನು ಸ್ಥಳಾಂತರ ಮತ್ತು ಸ್ಥಳ ಪಲ್ಲಟಗೊಳಿಸಲು ಯಾರೂ ಅಕ್ಕಪಕ್ಕದವರು ಒಪ್ಪದಿದ್ದರಿಂದ ಈಗಾಗಲೇ ಕೊನೇ ಹಂತದವರೆಗೆ ಬಂದ ಆಸ್ತಿಯ ಲೇವಾದೇವಿಯನ್ನು ರದ್ದುಗೊಳಿಸಿದಂತೆ ಪಂಚಾಯತಿಯವರು ಪರವಾನಗಿ ಹೊಡಿಸಿದರು. ಯಾರು ಏನೇ ಅಂದರೂ ಪಟ್ಟಣ ಪಂಚಾಯಿತಿಯ ಅನುಮತಿ ಇಲ್ಲದೇ ಯಾವ ಮಾರಾಟವೂ ಇತ್ಯರ್ಥಗೊಳ್ಳದ್ದರಿಂದ ಎಲ್ಲರೂ ನಿರುಮ್ಮಳರಾಗುವಂತಾಯಿತು.

ಕೊಟ್ರೇಶಿ ತನ್ನ ಕಾಯಕವನ್ನು ಹಾಗೇ ಮುಂದುವರೆಸಿಕೊಂಡು ಹೋಗುತ್ತಿದ್ದಾನೆ... ಆದರೆ, ಇವತ್ತಿನವರೆಗೂ ಆನಂದನ ಪತ್ತೆ ಯಾರಿಗೂ ನಮ್ಮೂರಿನ ಸುತ್ತುಮುತ್ತಲೂ ಎಲ್ಲೂ ಆದಂತಿಲ್ಲ! ಅಮ್ಮ ಕಾಲದಲ್ಲಿ ಲೀನವಾಗೇನೋ ಇದ್ದಾರೆ, ಆದರೆ ಅಮ್ಮನ ಕೈ ರುಚಿ ಈಗ ಮುಂದಿನ ತಲೆಮಾರನ್ನೂ ತಬ್ಬಿಕೊಳ್ಳುತ್ತಿದೆಯಂತೆ.

Monday, May 18, 2020

ಹುಲು ಮಾನವರು ಹೊರಗಡೆ ಬರುತ್ತಿದ್ದಾರೆ, ಹುಷಾರ್!


... ಹೀಗನಿಸಿದ್ದು, ನಮ್ಮ ಹಿತ್ತಲಿನ ಹಿಂಬಾಗದಲ್ಲಿ ಮೇಯುತ್ತಿದ್ದ ಎರಡು ಜಿಂಕೆಗಳು ಹಟಾತ್ತನೆ ಹೊರಗೆ ಬಂದ ನನ್ನನ್ನು ನೋಡಿ ಓಡಿ ಹೋಗಿದ್ದನ್ನು ಕಂಡು.  ಸುಮಾರು ಎಂಟು ವಾರಗಳ ಕಾಲ ನಾವೆಲ್ಲ ನಮ್ಮ ಚಲನವಲನಗಳನ್ನು ಮನೆಯ ಒಳಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೆವು.  ಈ ಎರಡು ತಿಂಗಳುಗಳಲ್ಲಿ ಹೆಚ್ಚೆಂದರೆ ಇಪ್ಪತ್ತು ಮೈಲುಗಳ ದೂರವನ್ನು ಕಾರಿನಲ್ಲಿ ಕ್ರಮಿಸಿರಬಹುದು, ಅದೂ ಸಹ ಮನೆಯ ಹತ್ತಿರದ ಸೂಪರ್ ಮಾರ್ಕೆಟ್‌ಗೆ ಹೋಗಿ ಬರುವುದಕ್ಕೆ ಮಾತ್ರ.  ಎರಡು ತಿಂಗಳು ಆರಾಮಾಗಿ ಓಡಾಡಿಕೊಂಡಿದ್ದ ಪ್ರಾಣಿ-ಪಕ್ಷಿಗಳು ಮತ್ತೆ ಈ ಮಾನವ ಪ್ರಾಣಿಯ ಸಹವಾಸಕ್ಕೆ ಮರು-ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆಯೋ, ಏನೋ?

ಕೊರೋನಾ ವೈರಸ್ ಹಲವಾರು ತೊಂದರೆಗಳನ್ನು ಮನುಕುಲಕ್ಕೆ ಬಳುವಳಿಯಾಗಿ ಕೊಟ್ಟರೂ ಸಹ, ಅದು ನಿಸರ್ಗಕ್ಕೆ ಒಳ್ಳೆಯದನ್ನೇ ಮಾಡಿದೆ. ಗಾಳಿಯಲ್ಲಿ  ಪೊಲ್ಯೂಷನ್ ಲೆವೆಲ್‌ಗಳು ಕಡಿಮೆಯಾಗಿರುವುದು, ಸಮುದ್ರದಲ್ಲಿ ಮತ್ಸ್ಯ ಸಂತತಿ ಹೆಚ್ಚಾಗಿರುವುದು, ಅಲ್ಲಲ್ಲಿ ಎಸೆಯುವ ಕಸ-ಪ್ಲಾಸ್ಟಿಕ್‌ಗಳ ಕಡಿಮೆಯಾಗಿರುವುದು, ವಾಹನಗಳ ಸಂಚಾರವಿಲ್ಲದೆ ಇಂಧನ ಉಳಿತಾಯವಾಗಿರುವುದು... ಹೀಗೆ ಅನೇಕಾನೇಕ ಅನುಕೂಲಗಳಾಗಿವೆ.

ಆದರೆ, ಈ ಪ್ರಶ್ನೆ ಆಗಾಗ್ಗೆ ಎದ್ದು ನಿಲ್ಲುತ್ತದೆ - ನಮ್ಮ ನಡವಳಿಕೆಯಲ್ಲಿ ಇನ್ನು ಮುಂದಾದರೂ ಬದಲಾವಣೆಗಳನ್ನು ಕಾಣುತ್ತೇವೆಯೋ ಅಥವಾ ಎರಡು ತಿಂಗಳ ನಂತರ ಏನೂ ಆಗಿರದವರಂತೆ ಮೈ ಕೊಡವಿಕೊಂಡು ಮತ್ತೆ ನಮ್ಮ ನಮ್ಮ ಜೀವನಕ್ರಮದಲ್ಲಿ ತೊಡಗಿಕೊಳ್ಳುತ್ತೇವೆಯೋ? ಈ ಕೊರೋನಾ ವೈರಸ್ ಸುದ್ದಿ ಹೆಚ್ಚು ಮಾಡಿತೇ ವಿನಾ, ಹಿಂದಿನ ಮಹಾಮಾರಿಗಳಿಗೆ ಹೋಲಿಸಿದರೆ ಇದರ ಪರಿಣಾಮ ಕಡಿಮೆ ಎಂದೇ ಹೇಳಬೇಕು.  ಹದಿನಾರು ವರ್ಷಗಳ ಹಿಂದೆ ಸುನಾಮಿ ಬಂದಾಗ ಇಷ್ಟೇ ಜನ ಸತ್ತು ಹೋಗಿದ್ದ ನೆನಪು... ಆದರೆ, ಆ ನೆನಪು ನಮ್ಮ ಅವಶೇಷಗಳ ಅಡಿಯಲ್ಲಿ ಅದೆಂದೋ ಸಿಕ್ಕಿ ನಲುಗಿ ಹೋಗಿದೆ. ಅಂತೆಯೇ, ಈ ಕೊರೋನಾ ವೈರಸ್ಸಿನ ಸಾಹಸವೂ ಕೂಡ.   ಕೇವಲ ಮೂರು ಲಕ್ಷ ಜನರು ವಿಶ್ವದಾದ್ಯಂತ ಸತ್ತು ಹೋದರಲ್ಲ ಎಂದು ಸಾಡಿಸ್ಟ್ ಆಗಿ ಈ ಮಾತನ್ನು ಹೇಳುತ್ತಿಲ್ಲ... ಸಾವು ಯಾವತ್ತಿದ್ದರೂ ನೋವಿನ ವಿಚಾರವೇ, ಆದರೆ ನಾವು ಈ ಮಹಾಮಾರಿಯಿಂದೇನೂ ಒಳ್ಳೆಯದನ್ನು ಕಲಿಯದೇ ಇರುವಂತಾದರೆ, ಅದು ನಮ್ಮ ದುರ್ದೈವ ಅಷ್ಟೇ.



ಈ ಕೋವಿಡ್‌ನಿಂದಾಗಿ ವಾಹನ ಅಪಘಾತಗಳು ಕಡಿಮೆಯಾಗಿವೆ.  ತುರ್ತಾಗಿ ಬೇಕಾಗಿಲ್ಲದ ಶಸ್ತ್ರ ಚಿಕಿತ್ಸೆಗಳು ಮುಂದೂಡಲ್ಪಟ್ಟಿವೆ.  ಅನಗತ್ಯವಾಗಿ ಆಸ್ಪತ್ರೆಗಳನ್ನು ಸುತ್ತುವವರ ಸಂಖ್ಯೆ ಕಡಿಮೆ ಆಗಿದೆ.  ಅಂಥವರನ್ನು ಸುಲಿಯುವ ಬಿಸಿನೆಸ್ ಮೈಂಡೆಡ್ ನರ್ಸಿಂಗ್ ಹೋಮ್‌ಗಳು ಬಾಗಿಲು ಹಾಕಿ ಸುಮ್ಮನಿದ್ದವು.  ಎಲ್ಲದಕ್ಕಿಂತ ಮುಖ್ಯ ಅನಗತ್ಯ ಖರ್ಚುಗಳು ಕಡಿಮೆ ಆಗಿದ್ದವು.  ಹೊರಗಡೆಯ ಚಟುವಟಿಕೆಳೆಲ್ಲ ಕಡಿಮೆಯಾದ್ದರಿಂದ ಜೇಬಿಗೂ ಒಂದಿಷ್ಟು ಹೊರೆ ಕಡಿಮೆ ಎನಿಸಿತ್ತು.

ಇದೀಗ ತಾನೆ ಹೊರಬರುತ್ತಿರುವ ನಮ್ಮನ್ನೆಲ್ಲ ನೋಡಿ - ಹುಲುಮಾನವರು ಹೊರಗೆ ಬರುತ್ತಿದ್ದಾರೆ, ಹುಷಾರ್! ಎಂದು ನಮ್ಮ ಸುತ್ತಲಿನ ಎಲ್ಲ ಜೀವಿಗಳೂ ಸಹ ಒಂದು ಕ್ಷಣ ದಂಗಾಗಿರಬಹುದಲ್ಲವೇ?

Saturday, May 16, 2020

ಹಾಲು-ನೀರಿನ ಅನ್ಯೋನ್ಯತೆ!

"ಕಾಯದಿದ್ರೆ ಕೆನೆ ಕಟ್ಟೋದಿಲ್ಲ!" ಎಂದು ಎನಿಸಿದ್ದು ಇವತ್ತು ಚಹಾ ಮಾಡೋದಕ್ಕೋಸ್ಕರ ಹಾಲು ಕಾಯಿಸುತ್ತಿರುವಾಗ.  ನಾವು ನಮ್ಮ ದೈನಂದಿನ ಜೀವನದಲ್ಲಿ ಅದೆಷ್ಟು ಸಲ ನೀರು ಅಥವಾ ಹಾಲನ್ನು ಬಿಸಿ ಮಾಡಿರೋದಿಲ್ಲ?  ಕೆಲವೊಮ್ಮೆ ಈ ಗೊತ್ತಿರುವ ವಿಷಯಗಳನ್ನೂ ಗಹನವಾಗಿ ನೋಡಿದಾಗ, ಅವುಗಳಲ್ಲಿನ ಜೀವನ ಸೂಕ್ಷ್ಮ ನಮಗೆ ಗೊತ್ತಾಗುತ್ತದೆ.  ಈ ವಿಚಾರದಲ್ಲಿ ನಿಸರ್ಗ ನಮಗೆಲ್ಲರಿಗೂ ಕಲಿಸೋ ಪಾಠಗಳು ಜೀವನ ಪರ್ಯಂತ ಅನೇಕಾನೇಕ ಇದ್ದೇ ಇರುತ್ತವೆ, ನಾವು ನೋಡಬೇಕು, ಗಮನಿಸಬೇಕು ಅಷ್ಟೇ.

ನಮ್ಮ ಕಡೆ ನೀರು ಕುದ್ದು (ಕುದಿದು) ಮರಳುತ್ತದೆ ಎನ್ನುತ್ತಾರೆ... ಅದನ್ನು ಇಂಗ್ಲೀಷಿನಲ್ಲಿ rolling boil ಅಂತಲೂ ಹೇಳ್ತಾರೆ.  ಕಾಯುವ, ಕುದಿಯುವ ಪ್ರಕ್ರಿಯೆ ಬಹಳ ಸುಲಭವಾದದ್ದು.  ನಾವು ಒಲೆ/ಸ್ಟೋವ್ ಮೇಲೆ ನೀರನ್ನು ಕಾಯಲು ಇಟ್ಟಾಗ ಅದರ ತಳ ಬೆಂಕಿಯಿಂದ ಬಿಸಿಯಾಗಿ ತಳಕ್ಕೆ ಹತ್ತಿರವಿರುವ ನೀರಿನ ಅಣುಗಳು ಬಿಸಿಯನ್ನು ತಗುಲಿಕೊಂಡು ಮೇಲೆ ಬರುತ್ತವೆ.  ಅವುಗಳು ಮೇಲೆ ಬಂದಂತೆಲ್ಲ, ಮೇಲಿನ ತಂಪಾಗಿರುವ (relatively) ಅಣುಗಳು ಕೆಳಗೆ ಹೋಗುತ್ತವೆ.  ಹೀಗೆ ನೀರು ಕುದಿಯುವ ಮಟ್ಟವನ್ನು ತಲುಪಿದ ಹಾಗೆ, ಈ ನೀರಿನ ಅಣುಗಳು, ಕೆಳಗೆ ಹೋದವು, ಮತ್ತೆ "ಮರಳು"ವ ಹೊತ್ತಿಗೆ ಅವುಗಳ ವೇಗ ಹೆಚ್ಚಾಗುತ್ತದೆ... ನಂತರ ನೀರು ಕೊತ ಕೊತ ಕುದಿಯತೊಡಗುತ್ತದೆ.

ಆದರೆ, ಹಾಲನ್ನು ಬಿಸಿ ಮಾಡಿದಾಗ ಅದೇ ರೀತಿ ಹಾಲಿನ ಕಣಗಳು ಮೇಲೆ ಕೆಳಗೆ ಹೋಗುತ್ತಿದ್ದರೂ ಸಹ, ಹಾಲು ಬಿಸಿ ಆದಂತೆಲ್ಲ, ಅದರ ಮೇಲ್ಮೈ ಮೇಲೆ ಒಂದು ತೆಳುವಾದ ಕೆನೆಯ ಪರದೆ ಹುಟ್ಟಲು ಆರಂಭವಾಗುತ್ತದೆ.  ಹಾಲು ನೀರಿಗಿಂತ ಸ್ವಲ್ಪ "ದಪ್ಪ"ನಾದ ದ್ರವ ಪದಾರ್ಥವಾದರೂ ಕೂಡ, ಹಾಲಿನ boiling point ನೀರಿಗಿಂತ ಹೆಚ್ಚೇನೂ ಭಿನ್ನವಾಗಿರೋದಿಲ್ಲ, ಆದರೆ ಈ ಎರಡೂ ದ್ರವ ಪದಾರ್ಥಗಳು ಕುದಿಯುವ ಹೊರಮುಖ ಬೇರೆ ಬೇರೆ ಅಷ್ಟೇ.

ಹಾಲು ಕುದಿಯುತ್ತಾ ಹೋದಂತೆಲ್ಲ ಅದರ ಮೇಲ್ಮೈಯಲ್ಲಿರುವ ಕೆನೆಯ ದಪ್ಪ ಹೆಚ್ಚಾಗುತ್ತಾ ಹೋಗುತ್ತದೆ.  ಪಾತ್ರೆಯ ಬುಡದಲ್ಲಿ ಬಿಸಿ ಎಲ್ಲ ರೀತಿಯಲ್ಲೂ ಒಂದೇ ಸಮನಾಗಿ ಇದೆಯೆಂದು ಭಾವಿಸಿದರೆ, ಹಾಲು ಕುದಿಯುವ ಮಟ್ಟವನ್ನು ತಲುಪಿದಾಗ, ಅದರ ಮೇಲ್ಮೈಯಲ್ಲಿ ಕಟ್ಟಿರುವ ಕೆನೆಯ ಪರದೆ ಒಡೆದು ಒಂದೇ ಸಮನೆ ಮೇಲೆ ಉಕ್ಕಲು ಆರಂಭಿಸುತ್ತದೆ.  ಆದರೆ ನೀರು ಹೀಗು ಕುದ್ದು ಉಕ್ಕೋದಿಲ್ಲ.


ಇದನ್ನು ಇಬ್ಬರು ಗೆಳೆಯರ ಅನಾಲಜಿಯನ್ನು ಉಪಯೋಗಿಸಿಯೂ ವಿವರಿಸಬಹುದು!  ಹಾಲು ಮತ್ತು ನೀರು ಇಬ್ಬರೂ ಜೀವದ ಗೆಳೆಯರು. ಹಾಲಿನಲ್ಲಿ ಸಾಮಾನ್ಯವಾಗಿ ನೀರನ್ನು ಮಿಶ್ರ ಮಾಡಿರುತ್ತಾರೆ, ಅಥವಾ ನೀರಿನ ಪ್ರಮಾಣ ಇದ್ದೇ ಇರುತ್ತದೆ. ಹಾಲು ಕುದಿಯುತ್ತಾ ಬಂದ ಹಾಗೆ ನಿಧಾನವಾಗಿ ಹಬೆಯಾಡತೊಡಗುತ್ತದೆ... ಅಂದರೆ, ಅದರಲ್ಲಿನ ನೀರು ಆವಿಯಾಗಲು ತೊಡಗುತ್ತದೆ... ಅಂದರೆ, ಹಾಲಿನ ಸ್ನೇಹಿತ ನಿಧಾನವಾಗಿ ಹೊರಗಡೆ ಹೋಗುತ್ತಾನೆ.  ಆದರೆ, ತನ್ನ ಸ್ನೇಹಿತ ನೀರು ಇನ್ನೇನು ಪೂರ್ಣ ಪ್ರಮಾಣದಲ್ಲಿ ಆವಿಯಾಗಿ ಹೋಗೇ ಬಿಟ್ಟಿತು ಎಂದು ಹೆದರಿಕೆಯಿಂದ ಹಾಲೂ ಸಹ "ನೀನು ಹೋದಲ್ಲಿಗೆ ನಾನೂ ಬರುತ್ತೇನೆ!" ಎಂದು ಹಠ ಹಿಡಿದು ಉಕ್ಕುತ್ತಾನಂತೆ.  ಅದೇ ಸಮಯಕ್ಕೆ ನೀವು ಸ್ವಲ್ಪ ನೀರನ್ನು ಪಾತ್ರೆಯ ಮೇಲೆ ಚಿಮುಕಿಸಿದರೆ ಉಕ್ಕುವ ಹಾಲು ಸುಮ್ಮನಾಗುತ್ತಾನಂತೆ!

ಹೀಗೆ, ಈ ದಿನ ಚಹಾ ಮಾಡಲು ಹೋಗಿ, ಹಾಲು-ನೀರಿನ ಜೋಡಿಗಳನ್ನು ಬೆಂಕಿಯ ಸಹವಾಸದಲ್ಲಿ ಕುದಿಯುವಂತೆ ಮಾಡಿದ್ದು, ಅವುಗಳ ಅನ್ಯೋನ್ಯ ಗೆಳೆತನವನ್ನು ಪರೀಕ್ಷೆಗೆ ಒಡ್ಡಿ ಹತ್ತಿರದಿಂದ ನೋಡಿದ್ದು ಕೋವಿಡ್ ಕವಿದು ಮನೆಯಲ್ಲೇ ಮುದುರಿಕೊಂಡಿರುವ ನಮ್ಮಂತಹವರು ಮಾಡಿದ ದೊಡ್ಡ ಕಾರ್ಯ!

Tuesday, May 12, 2020

ಕೊರೋನಾ ಹೇರ್ ಕಟಿಂಗ್ ಪ್ರಹಸನ...

ಹತ್ತು ವರ್ಷಗಳ ಹಿಂದೆ ಪೋಸ್ಟ್ ಡಾಕ್ ಕೆಲಸಕ್ಕೋಸ್ಕರ ಜರ್ಮನಿಯಲ್ಲಿ ಕೆಲವು ತಿಂಗಳು ಶ್ರಮಿಸಬೇಕಾಗಿದ್ದ ಡಾ. ಪೆರುಮಾಳ್‌ಗೆ ಅಲ್ಲಿನ ಭಾಷಾ ಸಮಸ್ಯೆಗಿಂತ ಹೆಚ್ಚಾಗಿ, ತಲೆ ಕೂದಲು ಕತ್ತರಿಸಿಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿತ್ತಂತೆ!  ಮೊದಲೇ ತಲೆಯಲ್ಲಿ ಕೂದಲು ವಿರಳವಾಗಿದ್ದ ಮನುಷ್ಯ, ಮತ್ತು ತಾನು ಹೇಳಿದ್ದೊಂದು, ಕತ್ತರಿಸುವಾತ/ಕತ್ತರಿಸುವಾಕೆ ಮತ್ತೊಂದನ್ನು ಮಾಡಿ ಬಿಟ್ಟರೆ? ಅದಕ್ಕೆ ತನ್ನಷ್ಟಕ್ಕೆ ತಾನೇ ತನ್ನ ಕೂದಲನ್ನು ಕತ್ತರಿಸುವುದನ್ನು ಕಲಿತುಕೊಂಡಿದ್ದರಂತೆ.  ಮೊದ ಮೊದಲು ಕಷ್ಟವಾಗುತ್ತಿತ್ತಾದರೂ ಕೊನೆಗೆ ಅದೇ ಅಭ್ಯಾಸವಾಗಿ, ಈ ಜರ್ಮನಿಯವರ ದೆಸೆಯಿಂದ ಜೀವನ ಪರ್ಯಂತ ತನ್ನ ಕೂದಲನ್ನು ತಾನೇ ಕತ್ತರಿಸುವುದಕ್ಕೆ ಎಷ್ಟು ಬೇಕೋ ಅಷ್ಟು ಸ್ಕಿಲ್ಸ್ ಸಿಕ್ಕಂತಾಗಿತ್ತಂತೆ!

ಈ ಕೊರೋನಾ ವೈರಸ್ ಹೇರಿದ ವರ್ಕಿಂಗ್ ಫ್ರಮ್ ಹೋಮ್ ಕಟ್ಟಳೆಯನ್ನು ಆಚರಿಸುತ್ತಾ ನಾನೂ ಋಷಿ ಮುನಿಗಳ ಹಾಗೆ ಉದ್ದ ಕೂದಲನ್ನೂ ಹಾಗೇ ಗಡ್ಡವನ್ನೂ ಬಿಟ್ಟು ಎಂಟು ವಾರಗಳಾಗಿತ್ತು.  ಮತ್ತೆ ನಮ್ಮ ಆಫೀಸಿನಲ್ಲಿ ವಿಡಿಯೋ ಕಾನ್‌ಫರೆನ್ಸ್‌ಗಳು ಹೆಚ್ಚಾಗ ತೊಡಗಿ, ನಾನೂ ಕೂದಲು ಕತ್ತರಿಸಿಕೊಳ್ಳೋದು ಅನಿವಾರ್ಯವಾಯಿತು.

ತಲೆಯ ಮೇಲೆ ಕೂದಲು ಕಡಿಮೆ ಇದ್ದವರದ್ದು ಒಂದು ರೀತಿಯ ಸಂಕಟವಾದರೆ, ನನ್ನಂತಹವರಿಗೆ ಹುಲುಸಾಗಿ ಕೂದಲು ಬೆಳೆಯುವುದು ಇನ್ನೊಂದು ರೀತಿಯ ಸಂಕಟ.  ಸರಿಯಾಗಿ ಮೂರು ಹೆಚ್ಚೆಂದರೆ ನಾಲ್ಕು ವಾರಗಳಲ್ಲಿ ಕೂದಲು ಕತ್ತರಿಸದಿದ್ದರೆ ತಲೆಯ ಮೇಲೆ ಒಂದು ಕಿರೀಟ ಬಂದ ಹಾಗಿರುತ್ತದೆ.  ಹಾಗಿರುವಾಗ, ನಾನೂ ಏಕೆ ಪ್ರಯತ್ನ ಮಾಡಬಾರದು ಎಂದು ಕಳೆದ ಶನಿವಾರ ಮನೆಯಲ್ಲಿದ್ದ ಹತ್ಯಾರಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಬಚ್ಚಲು ಮನೆಯಲ್ಲಿ ಉಪಸ್ಥಿತನಾದೆ.

ಇಲ್ಲೇ ಯಡವಟ್ಟಾಗಿದ್ದು, ನೋಡಿ!  ನಮ್ಮ ಕೂದಲನ್ನು ನಾವೇ ಕತ್ತರಿಸುವುದು ನಾನು ಅಂದುಕೊಂಡಷ್ಟು ಸುಲಭದ ಮಾತಾಗಿರಲಿಲ್ಲ.  ಮೊದಲು ಕಿವಿಯ ಅಕ್ಕ-ಪಕ್ಕ ಒಂದು ಕಡೆಯಿಂದ ಟ್ರಿಮ್ಮರ್ ಹಿಡಿದುಕೊಂಡು ಕತ್ತರಿಸಲು ಶುರುಮಾಡಿದ ನನಗೆ ಸ್ವಲ್ಪ ಸಮಯದ ನಂತರ ಮೆಟ್ಟಿಲು-ಮೆಟ್ಟಿಲಿನ ಹಾಗೆ ಕೂದಲು ಕತ್ತರಿಸಿಕೊಂಡು ಅಲ್ಲಲ್ಲಿ ಸ್ಟೆಪ್ಪುಗಳಾದವು.  ಒಮ್ಮೊಮ್ಮೆ ಸ್ವಲ್ಪ ಒತ್ತಿ ತೆಗೆದಿದ್ದಕ್ಕೋ ಏನೋ ಕೆಲವು ಕಡೆ ಬುರುಡೆ ಕಾಣುವಷ್ಟು ಸಣ್ಣಕೂ ಅದರ ಪಕ್ಕದಲ್ಲಿ ಸ್ವಲ್ಪ ಉದ್ದಕೂ ಬಿಟ್ಟುಕೊಂಡು ಹೋಯಿತು.  ಸೈಡು ಮತ್ತೆ ಮುಂದೇನೋ ಸರಿ, ಆದರೆ ಹಿಂದಿನ ಭಾಗವನ್ನು ಹೇಗೆ ಕತ್ತರಿಸೋದು?  ಅದರಲ್ಲೂ ಮಿರರ್ ಇಮೇಜ್ ನೋಡಿಕೊಂಡು?  ಸ್ವಲ್ಪ ಹೊತ್ತಿನ ನಂತರ ಕೈ ಮತ್ತು ಬೆರಳುಗಳೂ ಕೂಡ ನೋವು ಕೊಡತೊಡಗಿದವು.  ಕೊನೆಗೆ ಅರ್ಧ ಘಂಟೆಯ ಹೊತ್ತಿಗೆಲ್ಲ ಸುಮಾರು ಒಂದು ಪೌಂಡ್ ಅಷ್ಟು ಕೂದಲು ನೆಲದ ಮೇಲೆ ಕರಿಮುಗಿಲು ಕವುಚಿಕೊಂಡ ಹಾಗೆ ಬಿದ್ದುಕೊಂಡಿತ್ತು!

ಇಷ್ಟು ಹೊತ್ತಿಗಾಗಲೇ ನಮ್ಮ ಮನೆಯವರಿಗೆಲ್ಲ ನಾನು ಹಾಸ್ಯದ ವಸ್ತುವಾಗಿದ್ದೆ.  ತಲೆಯ ಹಿಂದಿನ ಭಾಗವಷ್ಟೇ ಏನೂ ಪೂರ್ಣ ತಲೆಯನ್ನೇ ನನ್ನ ಹನ್ನೊಂದು ವರ್ಷದ ಮಗನಿಗೂ ಮತ್ತು ಹೆಂಡತಿಗೂ ವಹಿಸಿ (ಏನು ಬೇಕಾದರೂ ಮಾಡಿ, ಆದರೆ ಇದಕ್ಕಿಂತ ಕೆಟ್ಟದಾಗಿ ಮಾಡಬೇಡಿ), ಆರ್ತನಾಗಿ ಒಪ್ಪಿಸಿಕೊಂಡ ಮೇಲೆ ನನಗೆ ಸಮಾಧಾನವಾಗುವ ಮಟ್ಟವನ್ನು ತಲುಪಿದೆ.  ಒಟ್ಟು ನಲವತ್ತೈದು ನಿಮಿಷಗಳ ನಂತರ ತಲೆ ಹಗುರವಾಗಿ ಸ್ನಾನ ಮಾಡಿ ಹೊರಬಂದೆ.  ಅದಕ್ಕಿಂತ ಮುಂಚೆ, ಹತ್ತು ನಿಮಿಷ ಇಡೀ ಬಚ್ಚಲುಮನೆಯನ್ನು ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛ ಮಾಡಿದ್ದೂ ಸಹ ತುಸು ಹೆಚ್ಚೇ ಕೆಲಸವೆನಿಸಿತು.

ಸ್ನಾನ ಮಾಡಿ ಎಂದಿನಂತೆ ತಲೆ ಬಾಚಿ ನೋಡಿದರೆ, ಕೆಲವು ಕಡೆ ಕಡಿಮೆ, ಕೆಲವು ಕಡೆ ಹೆಚ್ಚು ಕೂದಲು ಇದ್ದ ನಾನು ಎಲ್ಲೋ ಇಲಿಗಳು ಭತ್ತದ ಚೀಲವನ್ನು ತಿಂದು ಹಾಕಿ ಧ್ವಂಸಮಾಡಿದ ವಿಷಯವನ್ನು ನೆನಪಿಗೆ ತಂದವು.  ಮೊದಲೆಲ್ಲ ಸ್ಟೆಪ್ಪುಗಳಾಗಿ ಕೆಟ್ಟದಾಗಿ ಕಾಣುತ್ತಿದ್ದ ಬದಿಯ ಕೂದಲು, ಈಗ ಯಾವುದೋ ಪುರಾತನ ದೇವಸ್ಥಾನದ ಅವಶೇಷದಂತೆ ಕಂಡುಬಂದು, ನಗುಬಂದಿತು.  ಅಲ್ಲದೇ, ಒಂದು ಬದಿಯ ಕೋನದಲ್ಲಿ ನೋಡಿದಾಗ ನನ್ನ ತಲೆ, ಮಾಗಿದ ಉತ್ತುತ್ತಿಯಂತೆ ಕಂಡುಬಂತು!

ಆದರೆ ಕೊರೋನಾ ಮಹಿಮೆ ಇಲ್ಲಿಗೇ ಮುಗಿಯಲಿಲ್ಲ... ಹೇರ್ ಕಟ್ ಕೆಟ್ಟದಾಗಿರಲಿ, ಬಿಡಲಿ... ಇನ್ನೆರಡು ವಾರಗಳಲ್ಲಿ ಮತ್ತೆ ಪ್ರಯತ್ನಿಸುವ ಛಲವಂತೂ ಹುಟ್ಟಿದೆ!  ದಿನೇದಿನೇ ನೋಡುವ ಮನೆಮಂದಿಗೆ ಇದೀಗ ಕೆಟ್ಟ ಹೇರ್ ಕಟ್ಟೂ ಸಹ ಒಗ್ಗಿ ಹೋಗಿ ಅದೇ ಒಂದು ಸ್ಟೈಲ್ ಆಗಿದೆ!  ಇನ್ನೆರಡು ವಾರಗಳಲ್ಲಿ ಒಂದಿಷ್ಟು ಒಳ್ಳೆಯ ಟ್ರಿಮ್ಮರ್ ಮೇಲೆ ಹಣ ಹೂಡಿದರೆ, ಜೀವಮಾನ ಪರ್ಯಂತ ಹೊರಗೆ ಕೂದಲು ಕತ್ತರಿಸುವ ಪ್ರಸಂಗ ಬರದೆಯೂ ಇರಬಹುದು! ಯಾರು ಬಲ್ಲರು?

Monday, May 11, 2020

ಕೊರೋನಾ ಕೃಪೆ: ಸಾಲುಗಟ್ಟಿದ To-do list

ನಿಮಗೂ ಹೀಗೆ ಅನಿಸಿರಬಹುದು... ಈ ಕೊರೋನಾ ವೈರಸ್ಸಿನ ಉಪಟಳ ಬಹಳ ಹೆಚ್ಚಾಗಿದೆ, ಅದರ ಉಪದ್ರವಕ್ಕಿಂತ ಉಪಟಳವೇ ಹೆಚ್ಚು!

ಕಳೆದ ಎಂಟು ವಾರಗಳಿಂದ ಮನೆಯಲ್ಲೇ ಕುಳಿತ ನಮಗೆ ನಿಧಾನವಾಗಿ ನಮ್ಮೆಲ್ಲ ಚಟುವಟಿಕೆಗಳು online ಮಾಧ್ಯಮದಲ್ಲಿ ಹೊರಹೊಮ್ಮತೊಡಗಿದವು.  ಆಫೀಸಿನ ಕಾನ್‌ಫರೆನ್ಸ್‌ಗೆಂದು ಅಣಿವಾಗಿದ್ದ ಟೂಲ್‍ಗಳೆಲ್ಲ ಏಕ್‌ದಂ ಮನರಂಜನಾ ಮಾಧ್ಯಮಗಳಾಗಿ ಬದಲಾದವು.  ಮಾಹಿತಿ, ಮನರಂಜನೆ, ಕಮ್ಯೂನಿಟಿ ಚಟುವಟಿಕೆ, ಆಟ-ಪಾಠ, ದೇಣಿಗೆ, ಚಾರಿಟಿ... ಮೊದಲಾದ ವಿಷಯಗಳೆಲ್ಲ ಈ ಆನ್‌ಲೈನ್ ಮಾಧ್ಯಮಗಳಲ್ಲೇ ಆಗತೊಡಗಿ ಒಂದು ತಲೆ ಚಿಟ್ಟು ಹಿಡಿದಂತಾಗಿದೆ.

ವಾರದ ಉದ್ದಕ್ಕೂ ಆಫೀಸಿನ ಕಾಲ್‌ಗಳು.  ವಾರಾಂತ್ಯ ಹತ್ತಿರ ಬರುತ್ತಿದ್ದಂತೆ ಕಮ್ಯುನಿಟಿಗೆ ಸಂಬಂಧಿಸಿದ Zoom, WebEx, Group ಮೀಟಿಂಗ್‍ಗಳು.  ಇವೆಲ್ಲದರ ಮಧ್ಯೆ ನೋಡ(ಲೇ) ಬೇಕಾದ ಅದೆಷ್ಟೋ ಸಿನಿಮಾಗಳು, ಓದಬೇಕಾದ ಅದೆಷ್ಟೋ ಪುಸ್ತಕಗಳು, ತೆಗೆದುಕೊಳ್ಳಬಹುದಾದ ಅದೆಷ್ಟೋ ಟ್ರೈನಿಂಗ್‌ಗಳು, ಮಾತನಾಡಿಸಬೇಕಾದ ಅದೆಷ್ಟೋ ನೆಂಟರು-ಇಷ್ಟರುಗಳು, ಕೇಳಬೇಕಾದ ಹಾಡುಗಳು, ಪಾಡ್‌ಕ್ಯಾಸ್ಟ್‌ಗಳು, ಸಂಶೋಧಿಸ ಬೇಕಾದ ವಿಷಯಗಳು, ಕ್ಲೀನ್ ಮಾಡಬಹುದಾದ ಕ್ಲಾಸೆಟ್ಟುಗಳು, ಹೇಳಬಹುದಾದ ಅದೆಷ್ಟೋ ಹಾಡುಗಳು, ಕೇಳಬೇಕಾದ ಪ್ರವಚನಗಳು... ಹೀಗೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ.  ಈ ಪಟ್ಟಿಗೆ ತಿಲಕ ಪ್ರಾಯವಾಗಿ ಮಾಡಬಹುದಾದ ಮೆಡಿಟೇಷನ್‍ ಅನ್ನು ಸೇರಿಸಿ ಬಿಟ್ಟರೆ, ದಿನದ 24 ಘಂಟೆಗಳು ನಿಜವಾಗಿಯೂ ಸಾಲವು ಎಂದೆನಿಸೋದಿಲ್ಲವೇ?

ಹೀಗೆ ದೊಡ್ಡದಾಗುವ ಹಳವಂಡಗಳ ಪಟ್ಟಿ ನನಗೊಬ್ಬನಿಗೆ ಮಾತ್ರ ಸೀಮಿತವಲ್ಲ ಎಂದು ಖಂಡಿತವಾಗಿ ಹೇಳಬಹುದು.  ಮೊದಲೇ "ಓಡುವುದೇ ಗುರಿ"ಯಾಗಿದ್ದ ನಮಗೆ, ಇದು ಮನೆಯಲ್ಲೇ ಕುಳಿತು ಸದಾ ಓಡುತ್ತಲೇ ಇರಿ ಎಂದು ಒಂದು ರೀತಿಯಲ್ಲಿ ಟ್ರೆಡ್‌ಮಿಲ್ ಹತ್ತಿಸಿ ಕುಳಿತಂತಿದೆ.

ಏನೇ ಹೇಳಲಿ, ಈಗಿನ ತಂತ್ರಜ್ಞಾನದ ಪ್ರಕಾರ ಜನರು 4K videoಗೆ ಹೆಚ್ಚು ಆದ್ಯತೆ ಕೊಟ್ಟರೇ ವಿನಾ, ಈ ಗ್ರೂಪ್‌ ಮೀಟಿಂಗುಗಳ ಆಡಿಯೋ ಕ್ವಾಲಿಟಿ ಸ್ವಲ್ಪವೂ ಚೆನ್ನಾಗಿರೋದಿಲ್ಲ... ಅದರಲ್ಲೂ ನಮ್ಮನೆಯ ಸೊರಗಿದ ಇಂಟರ್‌ನೆಟ್ ವೇಗದ ಮುಂದೆ ಗಂಟಲು ಕೊಸರಿಕೊಂಡು ಮಾನೋ ಟ್ಯೂನ್‌ನಲ್ಲಿ ಹಾಡುಗಳು ಕೇಳಿಸುವಂತೆ ಅನುಭವವಾಗುತ್ತವೆ.

ನಿಮ್ಮ (catch up ಮಾಡುತ್ತಿರುವ) ಹಳವಂಡಗಳ ಪಟ್ಟಿ ಉದ್ದವಿದೆಯೇ? ಅದನ್ನು ಇಲ್ಲಿ ಹಂಚಿಕೊಳ್ಳಬಹುದಲ್ಲ?

Thursday, May 07, 2020

ಏರ್‌ಪ್ಲೇನುಗಳು ಹಾರಲು ಅದು ಹೇಗೆ ಸಾಧ್ಯ?

ನಾನು ಮೊಟ್ಟ ಮೊದಲನೇ ಸಾರಿ ಬಾಂಬೆ ಏರ್‌ಪೋರ್ಟ್‌ನಲ್ಲಿ ದೊಡ್ಡ ಜೆಂಬೋ ಜೆಟ್ ವಿಮಾನವನ್ನು ನೋಡಿದಾಗ, ಏರ್‌ಪೋರ್ಟಿನಲ್ಲಿಯೇ ನನ್ನ ಸಹ ಪ್ರಯಾಣಿಗರೊಂದಿಗೆ ಇದು ಅಷ್ಟು ವೇಗವಾಗಿ ಎತ್ತರದಲ್ಲಿ ಹಾರಾಡಲು ಹೇಗೆ ಸಾಧ್ಯ?  ಏರೋಡೈನಮಿಕ್ಕು ಅಂತೆಲ್ಲಾ ಅವರೇನೇನೋ ಸಮಾಧಾನ ಹೇಳಿದರೂ, ನನಗೆ ಅದರ ಒಳಗೆ ಕುಳಿತು ಅದು ವೇಗವಾಗಿ ಓಡಿ, ಅಂತರದಲ್ಲಿ ತೇಲತೊಡಗಿದಾಗಲೇ ನನಗೆ ಹೊರಗೆ ನೋಡಿದಾಗ ನಂಬಬೇಕೋ ಬಿಡಬೇಕೋ ಗೊತ್ತಾಗಿರಲಿಲ್ಲ!
ನಮ್ಮ ಸೈನ್ಸ್, ಫಿಸಿಕ್ಸ್ ತರಗತಿಯಲ್ಲಿ ಮನಸಿಟ್ಟು ಕೇಳುತ್ತಿದ್ದೆವೋ ಇಲ್ಲವೋ ಗೊತ್ತಿಲ್ಲ, ಆಗೆಲ್ಲ ಗಾಳಿಯಿಂದ ಪೇಪರ್ ಎದ್ದು ಹಾರಾಡುವುದೇ ಏರೋ ಡೈನಮಿಕ್ ಫೋರ್ಸ್ ಎಂದು ನಂಬಿಕೊಂಡ ದಿನಗಳು.  ಅಂತಹ ಹಳ್ಳಿಯ ಎಡಬಿಡಂಗಿ ಜಗಮೊಂಡನನ್ನು ತೆಗೆದುಕೊಂಡು ಏಕ್‌ದಂ ಮೊಟ್ಟ ಮೊದಲನೇ ಪ್ರಯಾಣವೇ ಇಂಟರ್‌ನ್ಯಾಷನಲ್ ಪ್ರಯಾಣವಾಗಿರುವಂತಾದಾಗ ಯಾರು ತಾನೆ ಹೇಗೆ ನಂಬ ಬಲ್ಲರು?

***
ಆಗಿನ ಎಂಭತ್ತರ ದಶಕದಲ್ಲಿ ಏರ್‌ಪ್ಲೇನಿನ ಸಹವಾಸ ಮಾಡುವವರು, ಮಾಡುತ್ತಿದ್ದವರು ಬಹಳ ಧನಿಕರಾಗಿರುತ್ತಿದ್ದರು.  ನಮ್ಮೂರಿನ ಬಸ್ಸು-ಲಾರಿಗಳನ್ನು ಮತ್ತು ಅಪರೂಪಕ್ಕೊಮ್ಮೆ ಕಾರುಗಳನ್ನು ರಸ್ತೆ ಮೇಲೆ ಓಡುವುದನ್ನ ನೋಡುತ್ತಿದ್ದ ನಾವು ಅನಂತರ ಅಂತರ ರಾಜ್ಯ ಪ್ರಯಾಣಕ್ಕೆ ರೈಲಿನಲ್ಲಿ ಹೋಗಿದ್ದನ್ನು ಬಿಟ್ಟರೆ, ಉಳಿದೆಲ್ಲ ರೀತಿಯ ಪ್ರಯಾಣ ಅಂದರೆ ದೊಡ್ಡ ಹಡಗು ಅಥವಾ ವಿಮಾನದಲ್ಲಿ ಓಡಾಡುವುದು ಕನಸೇ ಆಗಿತ್ತು.  ಅಪರೂಪಕ್ಕೊಮ್ಮೆ, ರಾತ್ರಿ ಎಲ್ಲಾದರೂ ಓಡಾಡುತ್ತಿದ್ದಾಗ ನಿರಾಳವಾದ ಆಕಾಶವನ್ನು ನೋಡುತ್ತಿದ್ದರೆ, ಅವುಗಳ ಸದ್ದೂ ಸಹ ಕೇಳದಷ್ಟು ಅನತಿ ದೂರದಲ್ಲಿ, ಮಿಣಿಮಿಣಿ ದೀಪ ಹಾಕಿಕೊಂಡು ಹಾರುತ್ತಿರುವ ವಿಮಾನಗಳು ನಮಗೆ ಗಗನ ಚುಕ್ಕಿಗಳೇ ಆಗಿದ್ದವು.  ಅಂತಹ ಒಂದು "ವಿಮಾನ"ದ ಕಲ್ಪನೆ ಬಹಳ ವಿಚಿತ್ರವಾಗಿರುತ್ತದೆ: ಅವುಗಳ ಕಿಟಕಿ-ಬಾಗಿಲುಗಳು ಹೀಗಿರಬಹುದು/ಹಾಗಿರಬಹುದು!  ಅವುಗಳಲ್ಲಿ ಗಗನಸಖಿಯರು ಎಷ್ಟೆಲ್ಲ ಸುಂದರಿಯರಿರುತ್ತಾರೆ! ಪ್ರಯಾಣಿಕರೆಲ್ಲ ಒಳ್ಳೊಳ್ಳೆಯ ಉಡುಪುಗಳನ್ನು ಧರಿಸಿಕೊಂಡೋ, ಸೂಟು ಬೂಟಿನಲ್ಲಿರುತ್ತಾರೆ!  ಇತ್ಯಾದಿ, ಇತ್ಯಾದಿ... ಇದು ನಿಜವಾಗಿಯೂ "ಮೇಲ್" ದರ್ಜೆಯ ಪ್ರಯಾಣದ ವಿಧಿ ವಿಧಾನ ಎಂದು ನನಗೆ ಗ್ಯಾರಂಟಿಯಾಗಿತ್ತು.  ಆದರೆ, ನನ್ನ ಮೊದಲ ಅನುಭವದಲ್ಲಿಯೇ, ಈ ಎಲ್ಲ ಅನುಭೂತಿಗಳು ಸಂಪೂರ್ಣ ಯಾವತ್ತಿಗೋ ನಶಿಸಿಹೋದವು!

ವಿಮಾನಗಳ ಕಿಟಕಿಗಳು ಬಹಳ ಚಿಕ್ಕವು.  ಬಸ್ಸು ರೈಲಿನ ಕಿಟಕಿಗಳ ಹಾಗೆ ಅವುಗಳಲ್ಲಿ ಓಪನ್/ಕ್ಲೋಸ್ ಎಂದು ನೆಗೋಟೀಯೇಟ್ ಮಾಡೋ ಅಂತದ್ದು ಏನೂ ಇರಲ್ಲ.  ಬರೀ ಅವುಗಳ ಕವರನ್ನು ಮುಚ್ಚಬೇಕು, ಇಲ್ಲ ತೆರೆದಿರಬೇಕು, ಅಷ್ಟೇ.  ಇನ್ನು ಈಗಿನ ಏರ್‌ಪ್ಲೇನುಗಳ ಸೀಟುಗಳೋ ಆ ದೇವರಿಗೇ ಪ್ರೀತಿ.  ನಮ್ಮೂರಿನ ಸೆಮಿ ಲಕ್ಸುರಿ ಬಸ್ಸುಗಳ ಸೀಟುಗಳು ಇದಕ್ಕಿಂತ ಚೆನ್ನಾಗಿದ್ದವು.  ಅವರು ಕೊಡೋ ಊಟ, ಅದನ್ನು ನಾವು ಸಮಯವಲ್ಲದ ಸಮಯದಲ್ಲಿ ಲಘುಬಗೆಯಿಂದ ತಿಂದಂತೆ ಮಾಡಿ, ಪೇಪರಿಗೆ ಕೈ ಒರೆಸಿ ದೂರವಿಡುವುದು!  ಅಲ್ಲದೇ ಸಹ ಪ್ರಯಾಣಿಕರ್‍ಯಾರೂ ಸೂಟು-ಬೂಟಿನಲ್ಲಿ ಇದ್ದಂತಿಲ್ಲ... ಯಾವುದೋ ತೇಪೆ ಹಾಕಿದ ಜೀನ್ಸ್ ಅನ್ನು ಹಾಕಿಕೊಂಡವರೂ ಇದ್ದರೂ.  ಒಮ್ಮೆ ಕುಳಿತುಕೊಂಡರೆ ಗಂಟೆಗಟ್ಟಲೆ ಕುಳಿತೇ ಇರಬೇಕು, ಅಲ್ಲಿಲ್ಲಿ ಓಡಾಡುವಂತಿಲ್ಲ, ಆಕಡೆ ತಿರುಗುವಂತಿಲ್ಲ, ಈ ಕಡೆ ತಿರುಗುವಂತಿಲ್ಲ. ಆಮೇಲೆ ಏಕತಾನತೆಯ ಒಂದೇ ಒಂದು ಸ್ವರದ ಕರ್ಕಶ ನಾದ... ಜೊತೆಯಲ್ಲಿ ಬೇರೆ ಟೊಂಕಕ್ಕೆ ಸೀಟುಬೆಲ್ಟ್ ಅನ್ನು ಕಟ್ಟಿಕೊಂಡಿರಬೇಕು. ಇನ್ನು ಗಗನ ಸಖಿಯರೆಲ್ಲ "ಕ್ಯಾಬಿನ್ ಕ್ರೂ"ಗಳಾಗಿದ್ದರು, ಅವರೂ ಸಹ ನಮ್ಮಂತೆಯೇ ಸಹಜವಾಗಿ ಕಂಡುಬಂದರು.  ಅಬ್ಬಾ, ಮೊಟ್ಟ ಮೊದಲ ಬಾರಿ ಯೂರೋಪನ್ನು ದಾಟಿ ಅಮೇರಿಕಕ್ಕೆ ಬರುವುದೆಂದರೆ, ಪ್ರಾಣವನ್ನು ಕೈಯಲ್ಲಿ ಜೋಪಾನವಾಗಿ ಹಿಡಿದುಕೊಂಡು ಬಂದಂತಾಗಿತ್ತು.  ಆದರೂ ಏನೆಲ್ಲ ಕನಸುಗಳು, ಹಾಗೆ-ಹೀಗೆ ಎನ್ನುವ ಮಾತುಗಳು... ನಮ್ಮ ಸೂಟ್‌ಕೇಸ್‌ಗಳಲ್ಲಿ ಇನ್ನೆಂದಿಗೂ ಸಾಕಾಗುವಷ್ಟು ಮಸಾಲೆ ಪದಾರ್ಥಗಳು, ಚಟ್ಣಿಪುಡಿಗಳು... (ನಮ್ಮ ಜೊತೆಗೆ ಬಂದ ಕುಮರೇಸನ್ ಒಂದು ಮೂಟೆ ಅಕ್ಕಿಯನ್ನೂ ತಂದಿದ್ದ!)... ಒಂದು ರೀತಿ ಭಾರತವನ್ನು ಬಿಟ್ಟು ಅಮೇರಿಕಕ್ಕೆ ಬರುವಾಗ ಒಂದು ರೀತಿಯ ನೋವು ಆಗಿದ್ದು ಸಹಜ... ಆದರೆ, ನಾವು ಬಂದದ್ದು H1B ವೀಸಾದಲ್ಲಿ, ಕೇವಲ ಮೂರೇ ಮೂರು ವರ್ಷಗಳ ತರುವಾಯ ವಾಪಾಸು ಹೋಗುತ್ತೇವಲ್ಲ, ಮತ್ತೇನು ತಲೆಬಿಸಿ!

***

ಕೆಲವೊಮ್ಮೆ ಹೀಗೆಯೇ ಆಗುತ್ತದೆ... ನಾವು ಊಹಿಸಿಕೊಂಡ ತತ್ವಗಳು ನಮ್ಮ ಕಲ್ಪನೆಯನ್ನು ಮೀರಿ ಬೆಳೆಯುತ್ತವೆ.  ಆದರೆ, ಆ ಬೆಳೆದ ಊಹೆಗಳು ನಮ್ಮ ಬುದ್ಧಿಗೆ ಮೀರಿ ಪ್ರಬುದ್ಧವಾಗಿರುತ್ತವೆ.  ಒಂದು ವಿಮಾನದ ಅಗಲ-ಉದ್ದ, ಇಷ್ಟಿಷ್ಟೇ ಇರಬೇಕು ಎಂದು ಇಂಜಿನಿಯರುಗಳು ಡಿಸೈನ್ ಮಾಡಿರುತ್ತಾರಲ್ಲ?  25 ಕೆಜಿ. ಸೂಟ್‌ಕೇಸ್ ಒಂದು ಗಗನದಲ್ಲಿ ಹಾರಾಡಲು ಸಾಧ್ಯವೇ? ಇಲ್ಲ.  ಆದರೆ, ಅದನ್ನು 78,000 ಕೆಜಿ, ಜೆಂಬೋ ಜೆಟ್‌ನಲ್ಲಿ ಇಟ್ಟು ಅದನ್ನು ಗಂಟೆಗೆ 920 ಕಿಲೋಮೀಟರ್ ವೇಗದಲ್ಲಿ ನೆಲದಿಂದ 11  ಕಿಲೋಮೀಟರ್ ಎತ್ತರದಲ್ಲಿ ಹಾರಿಸಿ ನೋಡಿ ಅಂತಹ ವಿಮಾನ ಬರೀ ಒಂದು ಸೂಟ್‌ಕೇಸ್ ಮಾತ್ರ ಏಕೆ 250 ಟನ್ ಭಾರವನ್ನೂ ಎತ್ತಿಕೊಂಡು ಹೋಗಬಲ್ಲದು!  ಇದನ್ನು ನಾವು ನಮ್ಮ ಹುಲುಮಾನವರ ಮನದಲ್ಲಿ ಹೇಗೆ ಊಹಿಸಲು ಸಾಧ್ಯವಿಲ್ಲವೋ ಅದೇ ರೀತಿ, ಪ್ರಪಂಚದ ಅನೇಕಾನೇಕ ಸೂಕ್ಷ್ಮಗಳು ನಮ್ಮನ್ನು ಮೀರಿದವಾಗಿರುತ್ತವೆ.  ಇಂತಹ ವಿಸ್ಮಯಗಳನ್ನು ನೋಡಿ, ಸವೆದು, ತನು-ಮನ ತಣಿಸಿಕೊಳ್ಳಲು ಎಷ್ಟು ಆಲೋಚಿಸದರೂ ಸಾಲದು ಎನ್ನುವುದು ಈ ಹೊತ್ತಿನ ತತ್ವವಾಗುತ್ತದೆ.

ನಮ್ಮ ಸುತ್ತಲಿನ ಪ್ರತಿಯೊಂದರಲ್ಲೂ ಈ ರೀತಿಯ ವಿಶ್ವರೂಪ ದರ್ಶದನ ಅವಕಾಶಗಳಿವೆ... ಅವುಗಳನ್ನು ನೋಡಲು ಕಣ್ಣುಗಳಿರಬೇಕಷ್ಟೆ!

Thursday, April 30, 2020

ಬರಹದತ್ತ ಮುಖ ಮಾಡಿಸಿದ ಕೋವಿಡ್

ಇವತ್ತಿಗೆ ಬರೋಬ್ಬರಿ ಏಳು ವಾರವಾಯಿತು... ನನ್ನಂಥವರು ಮನೆಯಿಂದಲೇ ಕೆಲಸ ಮಾಡಲು ಶುರು ಮಾಡಿ.  ಈ ಕೋವಿಡ್‌ನಿಂದ ಯಾರು ಯಾರಿಗೆ ಏನೇನು ಅನುಕೂಲ-ಅನಾನುಕೂಲವಾಗಿದೆಯೋ, ನನಗಂತೂ ಇದು ಬರಹ-ಓದು-ಸಂಭಾಷಣೆಗಳಲ್ಲಿ ತೊಡಗಿಸಿದೆ.

ಏನೇನು ಹೊಸತುಗಳು ಈ ಏಳು ವಾರದಲ್ಲಿ ಶುರುವಾದವು ಎಂದು ಪಟ್ಟಿ ಮಾಡುತ್ತಾ ಹೋದಾಗ ಈ ಕೆಳಗಿನವು ಕಂಡು ಬಂದವು:
- ಮೂರು ಹೊತ್ತೂ ಮನೆ ಊಟ ನಮಗೆ ಬೇಕಾದಂತೆ ಮಾಡಿಕೊಳ್ಳುವ ಸಲುವಾಗಿ ಇತ್ತೀಚೆಗೆ ಕುಕಿಂಗ್ ಶೋಗಳನ್ನು ನೋಡಲು ಶುರು ಮಾಡಿದ್ದು, ಜೊತೆಗೆ ರೆಸಿಪಿಗಳನ್ನು ಹುಡುಕಿದ್ದು
- ಮನೆಯಲ್ಲೇ ಇದ್ದುದರಿಂದ ನಾಲ್ಕೈದು ಜೊತೆ ಬಟ್ಟೆಗಳನ್ನೇ ಪುನರಾವರ್ತನೆಯಾಗಿ ಬಳಸಿದ್ದು
- ಈ ವರೆಗೆ ಮರೆತು ಹೋಗಿದ್ದ ಅನೇಕ ಬ್ಲಾಗುಗಳನ್ನು ತೆರೆದು ಓದಿದ್ದು
- ಈ ವರೆಗೆ ಮರೆತಂತಿದ್ದ "ಅಂತರಂಗ"ದ ಬಾಗಿಲು ತೆಗೆದು ಮತ್ತೆ ಬರೆಯಲು ಶುರು ಮಾಡಿದ್ದು (ಏಪ್ರಿಲ್ ತಿಂಗಳಿನಲ್ಲಿ ದಿನಕ್ಕೊಂದು ಲೇಖನವನ್ನು ಹಾಕಿದ್ದು)
- ಸ್ನೇಹಿತರ ಬಳಿ ಒಳ್ಳೆಯ ಸಿನಿಮಾಗಳ ರೆಕಮೆಂಡೇಷನ್ ಅನ್ನು ಕೇಳಿ ಸಿನಿಮಾ ನೋಡಿದ್ದು
- ಬಂಧುಗಳ ಜೊತೆ, ಸ್ನೇಹಿತರ ಜೊತೆ ದೀರ್ಘಕಾಲ ಮಾತನಾಡಿದ್ದು
- ವಾರದಲ್ಲಿ ಒಂದು ನಿಮಿಷವೂ ಕೂಡ ಕಾರಿನಲ್ಲಿ  ಪ್ರಯಾಣಿಸದೇ ಇದ್ದದ್ದು
- ಬಂದಂತ ವಾಟ್ಸಾಪ್ ಮೆಸ್ಸೇಜುಗಳನ್ನೆಲ್ಲ ನೋಡಿದ್ದು
- ವೀಕೆಂಡ್ ದಿನಗಳನ್ನು ಹೇಗೆ ಕಳೆಯುವುದಪ್ಪಾ ಎಂದು ಚಿಂತಿಸಿದ್ದು
- ನಮ್ಮ ಪಕ್ಕದ ಮನೆಯವರ ಜೊತೆ ವೆಬೆಕ್ಸ್ ಕಾನ್‌ಫರೆನ್ಸಿನಲ್ಲಿ ಮಾತನಾಡಿದ್ದು
- ಮನೆಯ ಮೂಲೆ ಮೂಲೆಯನ್ನೂ (ಸ್ಟೆಪ್ಸ್ ಕೌಂಟ್ ಆಗಲೆಂದು) ತಿರುಗಿದ್ದು
- (ಅನೇಕ ವರ್ಷಗಳ ನಂತರ) ಮನೆಯನ್ನು ವ್ಯಾಕ್ಯೂಮ್ ಕ್ಲೀನ್ ಮಾಡಿದ್ದು

ಇವೆಲ್ಲ ಏನೋ ದೊಡ್ಡ ವಿಷಯ ಎಂದು ಮೇಲ್ನೋಟಕ್ಕೆ ಅನ್ನಿಸದೇ ಇರಬಹುದು.  ಆದರೆ, ಎರಡು ತಿಂಗಳ ಹಿಂದಿನ (ವ್ಯವಸ್ಥಿತ) ವ್ಯಸ್ತ ಜೀವನ ಇಂದು ಅವ್ಯಸ್ತವಾಗಿದೆ ಎಂದು ಹೇಳಲು ಬಾರದು.  ಆದರೆ, ನಮ್ಮೆಲ್ಲರಿಗೂ ಸಿಗುವುದು ಇಂತಿಷ್ಟೇ ಸಮಯವಾದರೂ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರಲ್ಲಿ ನಮ್ಮ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ.  ನಾವು ನಮ್ಮ ಬದುಕಿನಲ್ಲಿ ಸಾಧಿಸಿರುವುದು ಒಂದು ಸಾಸಿವೆ ಕಾಳು ಗಾತ್ರದಷ್ಟು ಮಾತ್ರ ಎನ್ನುವ ಭಾವನೆ ಮೂಡಲು ಗುರು ಶಂಕರಾಚಾರ್ಯರು ಕೇವಲ 32 ವರ್ಷದ ಅವರ ಜೀವಿತದಲ್ಲಿ ಎಷ್ಟೊಂದನ್ನು ಸಾಧಿಸಿದ್ದಾರೆ ಎಂದು ನೋಡಿದರೆ ಗೊತ್ತಾಗುತ್ತದೆ.  ಆಗಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ, ಭರತ ಖಂಡದ ಉದ್ದಕ್ಕೂ ಅಲೆದಾಡಿ ಅದೆಷ್ಟು ಸಾಧನೆಗಳನ್ನು ಮಾಡಿದ್ದಾರೆ ಎಂದು ಆಶ್ಚರ್ಯವಾಗುತ್ತದೆ.


***
ಈ ಕೋವಿಡ್‌ ದಯೆಯಿಂದ ನಿಮ್ಮ ನಿಮ್ಮ ಹೊಸ ಅನುಭವಗಳೇನೇನಿವೆ? ಹಂಚಿಕೊಳ್ಳಬಹುದೇ?

Friday, April 24, 2020

ಗಂಡಾಂತರ

ಕನ್ನಡಿಗರು ಬಹಳ ಬುದ್ಧಿವಂತರು! ಹೀಗೆಂದು ಅನ್ನಿಸಿದ್ದು, ಮೊನ್ನೆ ನಾನು ರಿಸ್ಕ್ ಎನ್ನುವ ಪದಕ್ಕೆ ಕನ್ನಡದಲ್ಲಿ ಸಮನಾರ್ಥಕ ಪದವನ್ನು ಹುಡುಕುತ್ತಿದ್ದಾಗ.  ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಎಂತೆಂತ ರಿಸ್ಕ್‌ಗಳನ್ನು ತೆಗೆದುಕೊಳ್ಳುತ್ತಾರೋ ಇಲ್ಲವೋ, ಆದರೆ ನಾವು ಇಲ್ಲಿನ ಕ್ಯಾಪಿಟಲಿಸ್ಟ್ ವ್ಯವಸ್ಥೆಯಲ್ಲಿ ದಿನೇದಿನೇ ಅನೇಕ ರಿಸ್ಕ್‌ಗಳನ್ನು ತೆಗೆದುಕೊಳ್ಳುವುದೂ ಅಲ್ಲದೇ ಅವುಗಳನ್ನು ಮಿಟಿಗೇಟ್ ಹಾಗೂ ಮ್ಯಾನೇಜ್ ಮಾಡಬೇಕಾಗಿ ಬರುತ್ತದೆ.  ರಿಸ್ಕ್ ಮ್ಯಾನೇಜ್‌ಮೆಂಟ್ ಎನ್ನುವುದು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಿನ್ನ ದೊಡ್ಡದೊಂದು ಭಾಗ.  ನಾವು ಬರೆಯುವ ಡಾಕ್ಯುಮೆಂಟ್‌ಗಳಲ್ಲಿ ರಿಸ್ಕ್ ಎನ್ನುವ ಪದ ಬಂದಾಗಲೆಲ್ಲ ನಾವು ಅದನ್ನು ತೊಂದರೆಅಥವಾ ಅವಗಢ ಎಂದುಕೊಳ್ಳದೇ ನಮ್ಮ ಕಾರ್ಯದಲ್ಲಿ ಸಹಜವಾಗಿ ಬರುವ ಸಂಕಷ್ಟಗಳು ಎಂದುಕೊಂಡು ಅದನ್ನು ಎದುರಿಸುತ್ತೇವೆ ಹಾಗೂ ಉಪಶಮನ (mitigate) ಗೊಳಿಸುತ್ತೇವೆ.



"ರಿಸ್ಕ್" ಎನ್ನುವ ಪದಗಳಿಗೆ ಇಂಗ್ಲೀಷಿನಲ್ಲಿ a situation involving exposure to danger, ಎನ್ನುವ ನಾಮ ಪದವಾಗಿ ಅಥವಾ exposing oneself to danger or harm ಎನ್ನುವ ಕ್ರಿಯಾಪದವಾಗಿಯೂ ಬಳಸುವುದನ್ನು ನೋಡುತ್ತೇವೆ.  ಮಾಮೂಲಿ ವ್ಯಾಖ್ಯೆಯಲ್ಲಿ ರಿಸ್ಕ್ ಎನ್ನುವ ಪದ ಕೆಟ್ಟದ್ದನ್ನು ಸೂಚಿಸುತ್ತದೆಯಾದರೂ, ನಾವು ನಮ್ಮ ದಿನನಿತ್ಯದ ಪ್ರಾಜೆಕ್ಟಿನಲ್ಲಿ ಬರುವ ಆಡಚಣೆಗಳನ್ನು ಹಾಗೂ ವ್ಯವಹಾರದಲ್ಲಿ ಆಗಬಹುದಾದ ಲಾಭ ಮತ್ತು ನಷ್ಟವನ್ನೂ ಸಹ ರಿಸ್ಕ್ ಅಥವಾ ರಿಸ್ಕ್ ತೆಗೆದುಕೊಂಡಿದ್ದರ ಫಲಿತಾಂಶ ಎಂದೇ ಕರೆಯುತ್ತೇವೆ.  ಇನ್ನು ರಿಸ್ಕ್ ಸೀಕಿಂಗ್ (risk seeking) ಹಾಗೂ ರಿಸ್ಕ್ ಅವರ್ಸ್ (risk averse) ಜನರೂ ಸಹ ನಮ್ಮ ಮಧ್ಯೆ ಕಾಣಸಿಗುತ್ತಾರೆ.  ರಿಸ್ಕ್ ಸೀಕಿಂಗ್ ಎಂದರೆ ತಮ್ಮನ್ನು ತಾವು ಪದೇಪದೇ ಗಂಡಾಂತರಕ್ಕೆ ಒಡ್ಡಿಕೊಳ್ಳುವವರು ಎಂದು ಭಾಷಾಂತರ ಮಾಡಲಾಗದು.

ಕನ್ನಡ ನಿಘಂಟಿನಲ್ಲಿ ರಿಸ್ಕ್ ಎನ್ನುವ ಪದಕ್ಕೆ ಅಪಾಯ, ಗಂಡಾಂತರ, ಕೇಡು, ನಷ್ಟ, ಹಾನಿ, ತೊಂದರೆ, ಮುಂದೆ ಸಂಭವಿಸಬಹುದಾದ ತೊಂದರೆ, ಕಷ್ಟ, ಕುತ್ತು ಎನ್ನುವ ಪದಗಳು ಸಿಗುತ್ತವೆ.  ಆದರೆ, ನಮ್ಮ ಇಂಗ್ಲೀಷಿನ ಪರಿಭಾಷೆಯಲ್ಲಿ ಹೇಳುವಂತೆ take risk ಎಂದು ನಾವು ಯಾರಿಗೂ ಕನ್ನಡದಲ್ಲಿ ಹೇಳೋದಿಲ್ಲ.  "ಮುಂದೆ ಗಂಡಾಂತರ ಬಂದೀತು, ಎಚ್ಚರ!" ಎಂದು ಹೇಳಿದರೂ "ಸುಮ್ಮನೇ ಅಪಶಕುನ ನುಡಿಯಬೇಡ!" ಎಂದು ಯಾರಾದರೂ ಗದರಿಸಿಬಿಟ್ಟಾರು!  ರಿಸ್ಕ್ ತೆಗೆದುಕೊಳ್ಳುವುದನ್ನು ನಾವು ಕನ್ನಡಿಗರು ತುಂಬಾ ನೆಗೆಟಿವ್ ಆಗಿ ನೋಡುವುದರಿಂದಲೇ ಏನೋ, ನಾವು ಎಂದೂ ಎಲ್ಲೂ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೋಗುವುದೇ ಇಲ್ಲ, ಅದೇ ನೋಡಿ ನಮ್ಮ ಜಾಯಮಾನ...ಅದಕ್ಕೇ ನಾವು ಕನ್ನಡಿಗರು ಬಹಳ ಬುದ್ಧಿವಂತರು ಎಂದು ಆರಂಭದಲ್ಲಿ ಬರೆದಿದ್ದು.
ನಮ್ಮ ಕನ್ನಡಿಗರಿಗೆ ಒಂದು ಕೆಲಸವನ್ನು ಬಿಟ್ಟು ಮತ್ತೊಂದು ಹುಡುಕುವುದಕ್ಕಾಗಲೀ, ಒಂದು ಮನೆಯನ್ನು ಬದಲಾಯಿಸಿ ಮತ್ತೊಂದಕ್ಕೆ ಹೋಗುವುದಕ್ಕಾಗಲೀ, ಈಗಿನ ಸ್ಥಿತಿಯಿಂದ ಮತ್ತೊಂದು ಸ್ಥಿತಿಯ ಬಗ್ಗೆ ಆಲೋಚಿಸುವುದರಲ್ಲಾಗಲೀ ಎಲ್ಲೂ ಮನಸ್ಸೇ ನಿಲ್ಲೋದಿಲ್ಲ.  "ದಿನ ದಿನ ಗಂಡಾಂತರವನ್ನು ತೆಗೆದುಕೊಳ್ಳುವವರಿಗೆ ನೂರು ವರ್ಷ ಆಯಸ್ಸು" ಇದೆಯೆಂದು ಸಾರುವ ತೆಲುಗಿನ ನಾಣ್ಣುಡಿಯನ್ನು ನಮ್ಮ ಆಫೀಸಿನಲ್ಲಿ ಕೆಲಸ ಮಾಡುವ ತೆಲುಗು ಪರಂಪರೆಯವರು ಹಾಗೆಂದು ಉದ್ಧರಿಸುವುದಷ್ಟೇ ಅಲ, ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ ಕೂಡ.  ಆದರೆ, ಅದೇ ನಮ್ಮ ಕನ್ನಡಿಗರ ವಿಷಯಕ್ಕೆ ಬಂದರೆ ಬದಲಾವಣೆಗಳ ರಿಸ್ಕ್ ನಮಗೆ ಬಹಳ ದೊಡ್ಡದಾಗಿ ಕಾಣುತ್ತದೆ.  ಎಲ್ಲವೂ ಚೆನ್ನಾಗಿಯೇ ನಡೆಯುತ್ತಿರುವಾಗ ಏನನ್ನಾದರೂ ಏಕೆ ಬದಲಿಸಬೇಕು, ನೀವೇ ಹೇಳಿ!?

ನಾವು ಕನ್ನಡಿಗರು ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಮೊದಲಿಗರಲ್ಲ.  ಎಲ್ಲಿ ನಾವು ಮೊದಲಿಗರಾಗಲು ಹಿಂಜರಿಯುತ್ತೇವೆಯೋ ಅಲ್ಲಿ ನಾವು ಲೀಡರುಗಳಾಗೋದಿಲ್ಲ.  ಎಲ್ಲಿ ನಮ್ಮ ಹಿರಿತನವಿರುವುದಿಲ್ಲವೋ ಅಲ್ಲಿನ ಕಾರ್ಯವೈಖರಿಗಳು ನಮ್ಮ ಆಲೋಚನೆಯಂತೆ ನಡೆಯುವುದಿಲ್ಲ.  ಎಲ್ಲಿ ನಮ್ಮ ನಿರೀಕ್ಷೆಯಂತೆ ಕೆಲಸ ಕಾರ್ಯಗಳು ನಡೆಯುವುದಿಲ್ಲವೋ ಅಲ್ಲಿ ನಾವು ಯಾವಾಗಲೂ ಹೊರಗಿನವರಾಗಿರುತ್ತೇವೆ, ಅಲ್ಲದೇ ಅಲ್ಲಿ ಬೇರೊಬ್ಬರ, ಬೇರೆಯವರ ಆಲೋಚನೆಗಳಿಗೆ ಆಸ್ಪದ ಸಿಗುತ್ತದೆ.  ಇವುಗಳೆಲ್ಲದರಿಂದಾಗಿ ನಮ್ಮತನ ದೂರವಾಗಿ ನಮ್ಮನ್ನು ಮತ್ಯಾನ್ಯಾರೋ ದುಡಿಸಿಕೊಳ್ಳಲು ತೊಡಗುತ್ತಾರೆ, ಹೀಗೆ ದುಡಿದುಕೊಂಡು ಬೆಳೆಯುವ ಜೀವಕ್ಕೆ ಕರ್ಮಠತನ ಲಭಿಸುತ್ತದೆ.  ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿ ವ್ಯಸ್ತವಾಗಿರುವ ಕರ್ಮಠತನದ ಮನಸ್ಸಿಗೆ ಬದಲಾವಣೆ ಬೇಕೆಂದು ಅನ್ನಿಸದೇ ಅದು ಯಥಾಸ್ಥಿತಿಗೆ (status quo) ಶರಣಾಗಿ ವಿಷವರ್ತುಲಕ್ಕೆ (vicious circle) ಸಿಕ್ಕು ವಿಲವಿಲ ಒದ್ದಾಡುವಂತಾಗುತ್ತದೆ.

ಇವುಗಳೆಲ್ಲದರಿಂದ ಮುಕ್ತಿ ಬೇಕೆಂದಾದಲ್ಲಿ, ರಿಸ್ಕ್ ತೆಗೆದುಕೊಳ್ಳಲೇ ಬೇಕಾಗುತ್ತದೆ.  ರಿಸ್ಕ್ ಅನ್ನುವ ಪದವನ್ನು ನಾವು ಕನ್ನಡಿಗರು ಅಪಾಯ ಅಥವಾ ಗಂಡಾಂತರ ಎನ್ನುವ ಅರ್ಥದಲ್ಲಿ ಬಳಸುವ ಬದಲು, ರಿಸ್ಕ್ ಅನ್ನು ಬದಲಾವಣೆಯ ಕೈಪಿಡಿಯನ್ನಾಗಿ ಸ್ವೀಕರಿಸಿ ಅದಕ್ಕೊಂದು ಸಾಹಸೀ ಪರಿಭಾಷೆಯನ್ನು ಕೊಡಬೇಕಾಗುವುದು, ಇಂದಿನ ದಿನಗಳ ಮಹಾ ಅಗತ್ಯಗಳಲ್ಲೊಂದು.
ಎದ್ದೇಳಿ, ಇನ್ನಾದರೂ ಸ್ವಲ್ಪ ರಿಸ್ಕ್ ತಗೊಳ್ಳಿ, ತೊಂದರೆ ಏನೋ ಆಗೋದಿಲ್ಲ, ಕನ್ನಡಿಗರು ರಿಸ್ಕ್ ತೆಗೆದುಕೊಳ್ಳಲಿಲ್ಲ ಎಂದರೇನೇ, ತೊಂದರೆ!

***

Risk ಅನ್ನುವುದಕ್ಕೆ ಮತ್ತಿನ್ನೇನು ಪದಗಳನ್ನು ಕನ್ನಡದಲ್ಲಿ ಬಳಸಬಹುದು?

Thursday, April 23, 2020

ಬಂಡವಾಳಶಾಹಿ ವಚನಗಳು!

ನಾವು ಕರ್ನಾಟಕದ ಹಳ್ಳಿಯ ಶಾಲೆಗಳಿಂದ ಬಂದವರು.  ನಾವೆಲ್ಲ ವಚನಕಾರರ ಹೆಸರುಗಳು ಗೊತ್ತಿಲ್ಲದೇ ಅದೆಷ್ಟೋ ವಚನಗಳನ್ನು ಜಾನಪದ ಗೀತೆಗಳಂತೆ ಕಲಿಯುತ್ತಿದ್ದೆವು, ಅವುಗಳನ್ನು ಪ್ರಾರ್ಥನೆಯಾಗಿ ಹಾಡುತ್ತಿದ್ದೆವು...ಕರ್ನಾಟಕದ ಇತಿಹಾಸದಲ್ಲಿ ಹನ್ನೊಂದು-ಹನ್ನೆರಡನೇ ಶತಮಾನದಲ್ಲಿ ಜನಿಸಿದ ವಚನಕಾರರು, ಅವರ ಸಾಹಿತ್ಯ, ಅವರ ಜೀವನ ಶೈಲಿ, ಅವರ ಪರಂಪರೆ ಇವೆಲ್ಲವೂ ನಮ್ಮನ್ನು ಭಾರತದ ಸಾಮಾಜಿಕ ಪ್ರಗತಿಯ ಪಥದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುತ್ತವೆ.  ಈ ಹಿನ್ನೆಲೆಯಲ್ಲಿ ಬೆಳೆದು ಬಂದ ನಾವು ನಮ್ಮ "ವಚನ" ಶೈಲಿಯನ್ನು ಇಂದಿನ ಕ್ಯಾಪಿಟಲಿಸ್ಟಿಕ್ (ಬಂಡವಾಳಶಾಹಿ) ವ್ಯವಸ್ಥೆಯಲ್ಲಿ ಹೇಗೆ ಬದಲಾಯಿಸಿಕೊಳ್ಳುತ್ತೇವೆ ಎಂಬುದನ್ನು ಕುರಿತು ಒಂದು ವಿಡಂಬನಾತ್ಮಕ ಬರಹ - ವಚನಕಾರರ ಕ್ಷಮೆಯನ್ನು ಕೋರಿ!

***

Twice a year, during performance review time...
ಕಳಬೇಕು
ಕೊಲಬೇಕು
ಹುಸಿಯ ನುಡಿಯಲು ಬೇಕು
ಮುನಿಯಬೇಕು
ತನ್ನ ಬಣ್ಣಿಸ ಬೇಕು
ಇದಿರ ಹಳಿಯಲು ಬೇಕು
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ (ಬಾಸ್ ಎಂಬ) ಕ್ಯಾಪಿಟಲಿಸ್ಟಿಕ್
ದೇವನ ಒಲಿಸುವ ಪರಿ.

End of year, around Ratings & Rankings
ಸ್ಕಿಲ್ ಇದ್ದವರು ಕೋಡ್ ಅನ್ನು ಬರೆಯುವರು
ನಾನೇನು ಮಾಡಲಯ್ಯ ಬಡವನಯ್ಯಾ
ನಾನು ಆಫೀಸಿಗೆ ಬರುವುದೇ ಹೆಚ್ಚು,
ಬಂದು ಕಾಲ ಕಳೆಯುವುದೇ ದೊಡ್ಡದು,
ನನ್ನ ಇರುವಿಕೆಯೇ ಹೊನ್ನ ಕಳಸವಯ್ಯಾ,
ಎಲಾ ಬಾಸ್ ಕೇಳಾ,
ನಿಂತೋರಿಗೆ ಸುಖವಿಲ್ಲ, ಹಾರಾಡಿದವರಿಗೆ ಹಸಿವಿಲ್ಲ.

When promotions are few and far between
ಕೆಲ್ಸವಿದ್ದು ಫಲವೇನು? ಗ್ರೋತ್ ಇಲ್ಲದನ್ನಕ?
ಗ್ರೋತ್ ಇದ್ದು ಫಲವೇನು? ದುಡ್ಡಿಲ್ಲದನ್ನಕ?
ದುಡ್ಡಿದ್ದು ಫಲವೇನು? ಟೈಟಲ್ ಇಲ್ಲದನ್ನಕ?

When all else fail...
ಮೋಕ್ಷಕ್ಕೆ ಹೋರಾಡುವಣ್ಣಗಳಿರಾ, ಒಂದು ಹೆಜ್ಜೆ ಮುಂದೆ ಹೋದರೆ
ಮೋಕ್ಷಕ್ಕೆ ನೀವೇ ನಿಚ್ಚಣಿಗೆ
ಮೋಕ್ಷಕ್ಕೋಸ್ಕರ ಹೋರಾಡಿ ಮುಂದೆ ಹೋಗದಿರ್ದೆಡೆ
ಆ ಹರನಿಲ್ಲನೆಂದನಂಬಿಗ ಚೌಡಯ್ಯ.

During training time
ಮೂರ್ಖಂಗೆ ಯಾರು ಬುದ್ದಿ ಹೇಳಿದರೂ
ಗೋರ್ಕಲ್ಲ ಮೇಲೆ ನೂರ್ಕಾಲ ಮಳೆಕರೆದಂತೆ ಸರ್ವಜ್ಞ.


When deliverables are not delivered on time...
ರಿಸೋರ್ಸುಗಳನು ಕೊಂಬಾಗ ಹಾಲೋಗರ ಉಂಡಂತೆ
ಕ್ಲೈಂಟುಗಳು ಬಂದು ಎಳೆವಾಗ, ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ.

When deliverables fail to function as per requirements...
ಹೊಸ ಹೊಸ ಟೆಕ್ನಾಲಜಿಯನು ಬಳಸಿಕೊಂಡು
ವೆಬ್ ಸೈಟು ವರ್ಕ್ ಆಗದಿರೆ ಎಂತಯ್ಯ?
ಹೊಸ ಹೊಸ ಕೆಲಸದವರನ್ನು ಸೇರ್ಸಿಕೊಂಡು
ಕೆಲಸ ಪೂರ್ತಿ ಮಾಡದೇ ಇದ್ದರೆ ಎಂತಯ್ಯ?
ಓಪನ್ ವರ್ಕ್ ಸ್ಪೇಸ್ ಎಂದು ಕೊಂಡು
ಗದ್ದಲಕೆ ನಾಚಿದೊಡೆ ಎಂತಯ್ಯ?
ಟೆಕ್ನಾಲಜಿ ಕೆಲಸಗಾರನಾದ ಮೇಲೆ
ಸ್ತುತಿ-ನಿಂದೆಗಳು ಬಂದರೆ ಸಮಾಧಾನಿಯಾಗಿರಬೇಕು.

Monday, April 20, 2020

ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್! (ಭಾಗ-೨)


ಸುಮಾರು 14 ವರ್ಷಗಳ "ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್!" ಎಂಬ ಲೇಖನ ಬರೆದಿದ್ದೆ.  ಅದರಲ್ಲಿ ನನ್ನೊಬ್ಬ ಸ್ನೇಹಿತನಿಗೆ ಕೊಟ್ಟ ನಾಲ್ಕು ಲಕ್ಷ ರೂಪಾಯಿಗಳು ದೊಡ್ಡವಾಗಿ ಕಂಡಿದ್ದವು.  ಆದರೆ, ಹದಿನಾಲ್ಕು ವರ್ಷಗಳ ನಂತರ ಅವರವರ ಪ್ರಬುದ್ಧತೆಯ ಬೆಳವಣಿಗೆಯಂತೆ, ಅನೇಕ ಲಕ್ಷಗಳು ಬಂದಿರಬಹುದು, ಹೋಗಿರಬಹುದು.  ಮಾನವೀಯತೆಯೊಂದೇ ಕೊನೆಗೆ ಉಳಿಯುವುದು ಗ್ಯಾರಂಟಿ.  ಆದರೆ, ಪ್ರಸ್ತುತ ಹಣಕಾಸಿನ ಪರಿಸ್ಥಿತಿ ಇದ್ದ ಹಾಗೆ ಅವರವರ ಪ್ರತಿಕ್ರಿಯೆ ಇರುತ್ತದೆ.  ಒಮ್ಮೆ ನಾಲ್ಕು ಲಕ್ಷ ರೂಪಾಯಿಗಳೇ ದೊಡ್ಡವಾಗಿ ಕಂಡರೆ, ಮತ್ತೊಮ್ಮೆ ಅದು ನಗಣ್ಯವಾದೀತು.

ಈ ಲೇಖನ ಬರೆಯುವ ಹೊತ್ತಿಗೆ ಆಗಾಗ್ಗೆ ಜಗದೀಶನಂತವರು ಏಕೆ ಹೀಗೆ ಮಾಡಿದರು, ಏಕೆ ಹೀಗಾದರೂ ಎಂದೆಲ್ಲ ಯೋಚಿಸಬೇಕಾಗುತ್ತದೆ.  ಕೊನೆಗೆ ವಿಧಿಯ ಲೀಲೆ ಹೇಗಿರುತ್ತದೆ ಎಂಬುದನ್ನು ಊಹಿಸಿದರೆ, ನಿಜಕ್ಕೂ ಜೀವನದ ಬಗ್ಗೆ ಬೇಸರ ಬಂದೀತು.

***

ಸೋಶಿಯಲಿಸ್ಟ್ ದೇಶಗಳಲ್ಲಿ ಆಗದ ಒಂದು ಮಹಾನ್ ಸಾಧನೆಯನ್ನು ಕ್ಯಾಪಿಟಲಿಸ್ಟ್ ವ್ಯವಸ್ಥೆಯಲ್ಲಿ ಮಾಡಬಹುದು - ಅದು ಏನೆಂದರೆ, ನಿಮ್ಮ ಹೂಡಿಕೆ ಯನ್ನು ದ್ವಿಗುಣವೇಕೆ, ಅನೇಕ ಗುಣಗಳ ಮಟ್ಟಿಗೆ ರಾತ್ರೋ ರಾತ್ರಿ ಹೆಚ್ಚಿಸಿಕೊಳ್ಳಬಹುದು, ಹಾಗೆಯೇ ಕಡಿಮೆ ಮಾಡಿಕೊಳ್ಳಬಹುದು!  ಸೂಕ್ಷ್ಮವಾಗಿ ಹೇಳುವುದಾದರೆ, ಇದು ಒಂದು ಹಣವನ್ನು ಪ್ರಿಂಟ್ ಮಾಡುವ ವ್ಯವಸ್ಥೆಯೇ ಸರಿ.  ನಿಮ್ಮ ಹೂಡಿಕೆಗಳು, ನಿಮ್ಮ ಕಂಪನಿಗಳು, ನಿಮ್ಮ ನೆಟ್ ವರ್ತ್ ಮೊದಲಾದವು - ನಿಮ್ಮ ಹಣೇಬರಹ ನೆಟ್ಟಗಿದ್ದರೆ, ರಾತ್ರೋರಾತ್ರಿ ಬೆಳೆಯಬಲ್ಲವು ಹಾಗೂ ಕುಗ್ಗ ಬಲ್ಲವು.

ಇಂದು, ಅಮೇಜ಼ಾನ್ ಕಂಪನಿಯ ಒಂದು ಸ್ಟಾಕ್ ಇವತ್ತಿಗೆ ಎರಡು ಸಾವಿರ ಡಾಲರ್‌ಗೂ ಅಧಿಕವಾಗಿದ್ದು, ಅದು ಒಂದು ಕಾಲದಲ್ಲಿ ಒಂದು ಡಾಲರ್‌ನ ಆಸುಪಾಸು ಇತ್ತು. ಇದು ಅನೇಕ ವರ್ಷಗಳಲ್ಲಿ ಆದ ಬೆಳವಣಿಗೆ.  ಅದೇ ರೀತಿ,   ನನ್ನ ಕಣ್ಣ ಮುಂದೆಯೇ ಅನೇಕ ಕಂಪನಿಗಳು, ಒಂದೇ ದಿನದಲ್ಲಿ ನೂರು ಅಥವಾ ಸಾವಿರ ಪರ್ಸೆಂಟ್ ಮೇಲೆ ಹೋಗಿದ್ದನ್ನು ಮತ್ತೆ ಕೆಳಗೆ  ಬಿದ್ದಿದ್ದನ್ನ ನಾನು ನೋಡಿದ್ದೇನೆ.  2008-2009ರ ಮಾರ್ಕೆಟ್ ಕ್ರಾಷ್ ಆದಾಗ ಬಿಲಿಯನ್ ಡಾಲರ್‌ಗಟ್ಟಲೆ ಹಣವನ್ನು ಅನೇಕ ಹೆಡ್ಜ್‌ಫಂಡ್ ಮ್ಯಾನೇಜರುಗಳು ಕಳೆದುಕೊಂಡಿದ್ದಾರೆ, ಅಂತೆಯೇ ಮಾರ್ಕೆಟ್ ಮೇಲೆ ಹೋದಾಗ ದುಡಿದಿದ್ದಾರೆ ಕೂಡ.

ಈ ಚಿಕ್ಕ ಮಾರ್ಕೆಟ್ ಕಾಮೆಂಟರಿಯ ಉದ್ದೇಶವೆಂದರೆ - ಯಾರು ಬೇಕಾದರೂ ಹಣವನ್ನು ಗಳಿಸಬಹುದು, ಅಥವಾ ಕಳೆದುಕೊಳ್ಳಬಹುದು... ಅಂತಹುದರಲ್ಲಿ, ಒಂದು ಕಾಲದಲ್ಲಿ ಒಂದು ಡಾಲರ್ ಅನ್ನೋದು 36 ರೂಪಾಯಿಗಳು ಇದ್ದುದು, ಇವತ್ತಿಗೆ ಒಂದು ಡಾಲರ್ ಎನ್ನುವುದು 75 ರೂಪಾಯಿಗಳಾದಾಗ, ನಮ್ಮ ಹಳೆಯ ಒಂದು ಲಕ್ಷದ ಮೊತ್ತ ಇವತ್ತಿಗೆ ಬಹಳ ಕಡಿಮೆಯಾಗಿ ಕಾಣುತ್ತದೆ.  ಅದನ್ನ ಇನ್‌ಫ್ಲೇಶನ್‌ಗೆ ಅಡ್ಜಸ್ಟ್ ಮಾಡಿ ನೋಡಿದರೂ ಸಹ, ಈ ಕರೆನ್ಸಿ ಕನ್ವರ್ಷನ್‌ನಲ್ಲಿ ಅಂದಿನ ಒಂದು ಲಕ್ಷ ರುಪಾಯಿ, ಇಂದಿಗೆ ಏನೇನೂ ಸಾಕಾಗುವುದಿಲ್ಲ.

(ಅದು ಹೇಗೆ ಭಾರತದಲ್ಲಿ ಜನ ಜೀವನವನ್ನು ಸಾಗಿಸುತ್ತಾರೋ ಇಷ್ಟೊಂದು ಇನ್‌ಪ್ಲೇಶನ್ ಇಟ್ಟುಕೊಂಡು!  ಅದು ಇನ್ನೊಂದು ದಿನದ ಬರಹವಾದೀತು!)

***

ಅಂದು ದುಡ್ಡು ತೆಗೆದುಕೊಂಡ ಗೆಳೆಯರ ಸುಳಿವಿಲ್ಲ.  ಆದರೆ, ಇಂದಿಗೆ ಒಂದಂತೂ ಜ್ಞಾನೋದಯವಾಗಿದೆ... ಯಾರಿಗಾದರೂ ಹಣಕೊಟ್ಟರೆ ಅದು ಹಿಂದೆ ಬರುತ್ತದೆ ಎಂಬ ನಂಬಿಕೆಯನ್ನೇ ಬಿಟ್ಟು ಬಿಡುವಂತಾಗಿದೆ.  ಅದರ ಅರ್ಥ, ನಮ್ಮ ಕೈಯಲ್ಲಿ ಎಷ್ಟನ್ನು ಕಳೆದುಕೊಂಡರೆ ಅದು ದೊಡ್ಡದೆನಿಸುವುದಿಲ್ಲವೋ ಅಷ್ಟನ್ನು ಮಾತ್ರ ಕೊಡಲು ಸಮರ್ಥರಾಗಿದ್ದರೆ ಸಾಕು ಎನಿಸುತ್ತದೆ.  ಈ ಒಂದು ಮನೋಧರ್ಮದಿಂದ, ನಮಗೆ ಯಾವ ನಷ್ಟವೂ ಇಲ್ಲ (ಕೊಟ್ಟ ದುಡ್ಡೊಂದನ್ನು ಹೊರತು ಪಡಿಸಿ), ಯಾವ ಮನೋವ್ಯಾಧಿಯೂ ಅಂಟೋದಿಲ್ಲ.  ನಮ್ಮ ಬಂಧು-ಮಿತ್ರರ ಜೊತೆಗೆ ನಿಷ್ಟೂರವಂತೂ ಆಗೋ ಮಾತೇ ಇಲ್ಲ... ಎಲ್ಲವನ್ನೂ ದಾನವಾಗಿ ಕಂಡು ಕೊಂಡರೆ.

ಈ ಹೊತ್ತಿನಲ್ಲಿ, ಇನ್ನೂ ಒಂದು ತತ್ವ ಹೊಮ್ಮುತ್ತದೆ - ಎಲ್ಲವನ್ನು ಕರ್ಮದ ಫಲವನ್ನಾಗಿ ನೋಡುವುದು... ನಾವು ಯಾವ ಜನ್ಮದಲ್ಲಿ ಅವರಿಂದ ಉದಾರಕ್ಕೆ ಪಡೆದಿದ್ದೆವೋ ಇಂದು ಅದನ್ನು ಹಿಂತಿರುಗಿಸಿದೆವು ಎಂದು ನಿರುಮ್ಮಳವಾಗಿರುವುದು!

ಹಣವನ್ನು ಕೊಡುವ-ತೆಗೆದುಕೊಳ್ಳುವ ವಿಚಾರದಲ್ಲಿ ನನ್ನ ಹಾಗೆ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆ ಎನ್ನುವ ಮಹಾಸಾಗರದಲ್ಲಿದ್ದುಕೊಂಡು, ಅದರಲ್ಲಿ ಸೋಶಿಯಲಿಸ್ಟ್ ಮೌಲ್ಯದ ಹಾಯಿ ದೋಣಿಯನ್ನು ಚಲಾಯಿಸುವ ಈ ಸಾಧನೆ ನನ್ನಂಥವರನ್ನು ಬಹುದೂರ ಕೊಂಡೊಯ್ಯಲಾರದು, ಎನ್ನುವುದು ಈ ಹೊತ್ತಿನ ನಂಬಿಕೆ!

Friday, April 17, 2020

ಚಿತ್ರಗಳ ನೆನಪು

ಈ ಕೋವಿಡ್ ವೈರಸ್ಸಿನ ದೆಸೆಯಿಂದ ನಾವೆಲ್ಲರೂ "ಗೃಹಬಂಧನ"ದಲ್ಲಿ ಇದ್ದ ಪರಿಣಾಮದಿಂದಾಗಿ ಮೊನ್ನೆ ಒಂದಿಷ್ಟು ಹೊತ್ತು ಹಳೇ ಫೋಟೋಗಳನ್ನು ಹರವಿಹಾಕಿ ಕುಳಿತುಕೊಂಡೆ.  ಹಿಂದಿನ ಚಿತ್ರಗಳನ್ನು ಅವಲೋಕಿಸುತ್ತಾ ಇದ್ದ ಹಾಗೆ ಅದರ ಜೊತೆಗೆ ಒಂದು ನನ್ನ ಮನಪಟಲದಲ್ಲಿ ಹೊಸದೊಂದು ಪ್ರಪಂಚವೇ ತೆರೆದುಕೊಂಡಿತು.  ಪರಾಪರ ಕಾರ್ಯಗಳಲ್ಲಿ ತೆಗೆದ ಅನೇಕ ಚಿತ್ರಗಳು ಯಾವೊಂದು ಭಾವನೆಗಳ ಉನ್ಮಾದತೆಯನ್ನೂ ಹೊರತರಲಿಲ್ಲ, ಬದಲಿಗೆ ಎಲ್ಲ ಚಿತ್ರಣಗಳ ಮೂಕ ರಾಯಭಾರಿಗಳಾಗಿ ತಮ್ಮನ್ನು ತಾವು ತೆರೆದುಕೊಂಡವು.  ಅವುಗಳು, ಹಳೆಯದ್ದೆಲ್ಲ ಒಳಿತು ಎಂದು ಹೇಳುವ ಮರ್ಮವನ್ನೂ ಸೂಚಿಸಲಿಲ್ಲ, ಬದಲಿಗೆ ಹಳೆಯದು ಹೀಗಿತ್ತು ಎಂಬ ವಸ್ತುನಿಷ್ಠ ಪ್ರತಿಕ್ರಿಯೆಯನ್ನು ಮೂಡಿಸಿದವು.  ಹೀಗೆ ಹಳೆಯ ಫೋಟೋಗಳನ್ನು ನೋಡುತ್ತಾ ಹೋದ ಹಾಗೆ, ನಾವೆಲ್ಲ ವಾರಗಳು, ವರ್ಷಗಳು, ದಶಗಳನ್ನು ಕಳೆದು ನಮ್ಮ ಮನಸ್ಸಿನ ಹೊರಗೆ ಭೌತಿಕವಾಗಿ ಅನೇಕ ಚಿತ್ರಗಳನ್ನು ಗುಡ್ಡೆಹಾಕಿಕೊಳ್ಳುವ ಪ್ರಕ್ರಿಯೆ ಒಂದು ನಮ್ಮನ್ನೇ ಮೀರಿ ಬೆಳೆದು ನಿಂತರೆ ಎಂದು ಸೋಜಿಗವೂ ಆಯಿತು!

***
ನಮ್ಮ ಹಳೆ ಕ್ಯಾಮೆರಾಗಳನ್ನು ಈಗ ಯಾರೂ ಕೇಳೋದೂ ಇಲ್ಲ, ನೋಡೋದೂ ಇಲ್ಲ.  ನಮ್ಮೆಲ್ಲರ ಮನೆಗಳಲ್ಲಿ ಕ್ಯಾಮೆರಾಗಳದ್ದೇ ಒಂದು ಸೆಕ್ಷನ್ ಅಂತ ಹುಟ್ಟುಹಾಕಿದರೆ ಅದೇ ಒಂದು ಮ್ಯೂಸಿಯಮ್ ಆಗಿ ಬಿಡಬಹುದೇನೋ ಎಂದು ಒಮ್ಮೊಮ್ಮೆ ಹೆದರಿಕೆ ಆಗುತ್ತೆ.  ಏಕೇ ಅಂದ್ರೆ, ಹತ್ತು ವರ್ಷಗಳ ಹಿಂದಿನ ಟೆಕ್ನಾಲಜಿ, ಅಂದಿನ ಕ್ಯಾಮೆರಾಗಳು ಹತ್ತು ವರ್ಷಗಳ ನಂತರ ಯಾವ ಪ್ರಯೋಜನಕ್ಕೂ ಬಾರದೇ ಹೋಗುವಂತಾಗಿ ಹೋಗೋದು.  ಹತ್ತು ವರ್ಷ ಬಹಳ ಹೆಚ್ಚೇ ಆಯಿತು, ಈ ಮೊಬೈಲು ಫೋನುಗಳಲ್ಲಿ ಕ್ಯಾಮೆರಾಗಳು ಬಂದ ಮೇಲಂತೂ ಪ್ರತೀ ಎರಡೆರಡು ವರ್ಷಗಳಿಗೊಮ್ಮೆ ಕ್ಯಾಮೆರಾಗಳಲ್ಲಿ ಹೊಸತೇನಾದರೊಂದು ಬಂದೇ ಬಂದಿರುತ್ತದೆ.  ಒಮ್ಮೆ ಈ ಹೊಸ ಕ್ಯಾಮೆರಾಗಳಿರೋ ಮೊಬೈಲು ಫೋನುಗಳನ್ನು ಬಳಸಿದರೆಂದರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲ!

ಕ್ಯಾಮೆರಾಗಳು ಎಂದಾಕ್ಷಣ, ಅವು ಉತ್ಪಾದಿಸುವ ಫೋಟೋಗಳು ಮತ್ತು ವಿಡಿಯೋಗಳು ನೆನಪಿಗೆ ಬರುತ್ತವೆ.  ಆದರೆ ನಾವು ತೆಗೆಯುವ ಹೆಚ್ಚಿನ ಮಟ್ಟಿನ ಫೋಟೋಗಳು ಮತ್ತು ವಿಡಿಯೋಗಳನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡುತ್ತೇವೆಯೋ, ಅವುಗಳನ್ನು ಪರಿಶೀಲಿಸುತ್ತೇವೆಯೇ, ಅವುಗಳನ್ನು ಹಂಚಿಕೊಳ್ಳುತ್ತೇವೆಯೇ ಎಂದು ಕೇಳಿಕೊಂಡಾಗ ನಮ್ಮೆಲ್ಲರ ಅಸಲಿ ಫೋಟೋ/ವಿಡಿಯೋಗಳ ಮೋಹ ಗೊತ್ತಾಗುತ್ತದೆ.  ನಮ್ಮ ಸುತ್ತ ಮುತ್ತಲಿನಲ್ಲಿ ಎಲ್ಲ ಥರದ ಜನರೂ ಕಾಣಸಿಗುತ್ತಾರೆ - ವಿರಳವಾಗಿ ಫೋಟೋ ತೆಗೆಯುವವರಿಂದ ಹಿಡಿದು, ಕಂಡದ್ದನ್ನೆಲ್ಲ ಫೋನಿನ ಕ್ಯಾಮೆರಾದಲ್ಲಿ ಗೋಚಿಕೊಳ್ಳುವವರವರೆಗೆ.   ಆದರೂ, ಕಾಯದೇ ಕೆನೆಕಟ್ಟಲಿ ಎನ್ನುವ ಇಂದಿನ ವೇಗದ ತಲೆಮಾರಿಗೆ ತಕ್ಕಂತೆ ಇಂದಿನ ಕ್ಯಾಮೆರಾಗಳು ಕೂಡ ಒಗ್ಗಿಕೊಂಡಿವೆ.  ಹಾಗಂತ ಇಂದಿನ ಫೋನಿನ ಕ್ಯಾಮೆರಾಗಳನ್ನು ತೆಗಳುವಂತಿಲ್ಲ, ಎಂತಹ ಅತಿರಥ ಮಹಾರಥರು ಬಳಸುವಂತ ಘನಂದಾರಿ ಕ್ಯಾಮೆರಾಗಳಿಗಿಂತ ಈ ಚಿಕ್ಕ ಹಾಗೂ ಚೊಕ್ಕ ಕ್ಯಾಮರಾಗಳು ಮಾಡುವ ಕೆಲಸದಲ್ಲಿ ಒಂದು ರೀತಿಯ ತಲ್ಲೀನತೆ ಇದೆ, ಕಂಡಿದ್ದನ್ನು ಕಂಡ ಹಾಗೆ ಹೇಳುವ ಜಾಣ್ಮೆ ಇದೆ.

ಆದ್ಯಾವ ಕ್ಯಾಮೆರವೇ ತೆಗೆದ ಚಿತ್ರವಿರಲಿ, ಅಂತಹ ಸಹಸ್ರಾರು ಚಿತ್ರಗಳನ್ನು ನೀವು ಅದೆಷ್ಟೋ ದೊಡ್ಡ ಸ್ಟೋರೇಜಿನಲ್ಲಿ ಇಟ್ಟಿರಲಿ, ಆ ಚಿತ್ರವನ್ನು ಅಲ್ಲಿಂದ ಹೊರತೆಗೆದು ಅದರ ವಿವರಗಳನ್ನು ಪಟ್ಟಂತ ಹೇಳುವಲ್ಲಿ ನೀವು ಸೋತು ಹೋಗುತ್ತೀರಿ.  ಆದರೆ, ಅದೇ ನಮ್ಮ ನೆನಪಿನಲ್ಲಿ ಮೂಡಿ ಅಲ್ಲೇ ವಾಸ್ತವ್ಯ ಹೂಡಿದ ಚಿತ್ರಗಳಾಗಲೀ, ನೆನಪುಗಳಾಗಲೀ, ಕೆಲವೊಂದು ವಿಶೇಷ ವಾಸನೆಗಳಾಗಲೀ ಎಂದೆಂದೂ ನಾವು ಕರೆದಾಗ ಕ್ಷಣಾರ್ಧದಲ್ಲಿ ಬರುತ್ತವೆ!  ಇಷ್ಟು ಒಳ್ಳೆಯ ಎಫಿಷಿಯನ್ಸಿಯಲ್ಲಿ ಕೆಲಸ ಮಾಡುವ ನಮ್ಮ ಮಿದುಳು ಪ್ರಪಂಚದ ಎಲ್ಲ ಸೂಪರ್ ಕಂಪ್ಯೂಟರಿಗಿಂತಲೂ ಹೆಚ್ಚಿನದ್ದು ಎಂದು ಖುಷಿಯಾಯಿತು.  ಅಬ್ಬಾ, ಅದೇಷ್ಟು ಬಗೆಯ ವಿವರಗಳು, ಎಷ್ಟು ಬೇಗನೆ ಬಂದುಬಿಡುತ್ತವೆ.  ಉದಾಹರಣೆಗೆ: ಮಲ್ಲಿಗೆಯ ಸುವಾಸನೆ, ನಿಮಗೆ ಬೇಕಾದವರ ನೆನಪುಗಳು, ನೀವು ಹಿಂದೆ ವಾಸವಾಗಿದ್ದ ಮನೆ, ನಿಮ್ಮ ಅಚ್ಚು ಮೆಚ್ಚಿನ ಪುಸ್ತಕ, ಪೆನ್ನು, ಗೆಳೆಯ, ಗೆಳತಿ, ನಿಮ್ಮ ಊರಿನ ರಸ್ತೆಗಳು, ನಿಮ್ಮ ಊರಿನ ಅಕ್ಕ-ಪಕ್ಕದ ಊರುಗಳು, ದೇವಸ್ಥಾನ, ಜಾತ್ರೆ, ನಿಮ್ಮ ಸಹಪಾಠಿಗಳು....ಹೀಗೆ ಪಟ್ಟಿ ಮುಂದುವರೆಯುತ್ತಾ ಹೋದಂತೆ, ಎಲ್ಲವೂ ಏಕಕಾಲಕ್ಕೆ ನಿಮ್ಮ ಮನ ಪಟಲದಲ್ಲಿ ಮೂಡುವುದನ್ನು ನೀವು ಕಾಣಬಹುದು.  ಹಾಗೆಯೇ, ಈ ಮನಸ್ಸಿನ್ನ ಓಟಕ್ಕೆ ಯಾವ ಮಿತಿಗಳೂ ಇಲ್ಲ, ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ನೆಗೆಯುವುದರಲ್ಲಿ ಈ ಮನಸ್ಸು ನಿಸ್ಸೀಮ.

ನಮ್ಮ ಮನಸ್ಸು ಮತ್ತು ಮಿದುಳು ಅದು ಹೇಗೆ ಚಿತ್ರಗಳನ್ನು ಆರ್ಗನೈಜ್ ಮಾಡುತ್ತವೆಯೋ, ಆದರೆ ನಾವು ಈ ಮೊಬೈಲು ಫೋನುಗಳಲ್ಲಿ ತೆಗೆದ ಚಿತ್ರಗಳನ್ನು ಹಾಗೂ ಅವರಿವರು ನಮ್ಮ ಜೊತೆ ಹಂಚಿಕೊಂಡ ಚಿತ್ರಗಳನ್ನು ಆರ್ಗನೈಜ್ ಮಾಡಿಟ್ಟುಕೊಳ್ಳುವಲ್ಲಿ ಹೊಸದೊಂದು ವ್ಯವಸ್ಥೆಯೇ ಬೇಕಾಗುತ್ತದೆ.  ಅಕಸ್ಮಾತ್, ಈ ಚಿತ್ರಗಳೇನು ಮಹಾ ಎಂದು ಹಾಗೆಯೇ ಬಿಟ್ಟರೆ ’ಎಲ್ಲವೂ ಇದ್ದೂ, ಏನೂ ಇಲ್ಲದ ಪರಿಸ್ಥಿತಿ’ ಎದುರಾಗುತ್ತದೆ.  ಬೇಕಾದ ಮುಖ್ಯ ವಿಷಯ ಅಥವಾ ವಸ್ತು ಬೇಡವಾದಾಗ ಸಿಗುತ್ತದೆ.  ನಮ್ಮ ನಿಜವಾದ      ಬುದ್ಧಿಮತ್ತೆಗೆ ಮಿಗಿಲಾದ ಈ ಚಿತ್ರಗಳ ಸಂಸ್ಕರಣೆ ಇನ್ನು ಕೃತಕವಾದ ಬುದ್ಧಿಮತ್ತೆ (artificial intelligence) ಇಂದಲೇನಾದರೂ ಬದಲಾಗುತ್ತದೆಯೇನೋ ಎಂದು ಕಾದು ನೋಡಬೇಕಾಗಿದೆ.  ’ನನಗೆ ಈ ರೀತಿಯ ಚಿತ್ರಬೇಕಾಗಿದೆ, ಹುಡುಕು’ ಎಂದು ಹೇಳಿದಾಕ್ಷಣ ಆ ಚಿತ್ರ ನಮ್ಮ ಫೋನು ಅಥವಾ ಕಂಪ್ಯೂಟರ್ ಪರದೆ ಮೇಲೆ ಬಂದು ನಿಲ್ಲುವ ಕಾಲವೇನೂ ದೂರವಿದ್ದಂತಿಲ್ಲ.

ಬೂಮರ್ಸ್ ಜನರೇಷನ್‌ನ ಹಿರಿಯರಿಂದ ಹಿಡಿದು ಇಂದಿನ ಜನರೇಷನ್-Z ವರೆಗೆಇನ ಮಕ್ಕಳು ಸಹಾ ಫೋಟೋಗಳನ್ನು ಕ್ಲಿಕ್ಕಿಸುತ್ತಲೇ ಇದ್ದಾರೆ, ದಿನೇ-ದಿನೇ ಅವುಗಳ ಸಂಖ್ಯೆ ಬೆಳೆಯುತ್ತಿದೆ.  ಹತ್ತಿರವಿದ್ದೂ ದೂರ ನಿಲ್ಲುವ ನಮ್ಮತನ ಒಂಟಿಯಾಗದಿರುವಂತೆ ನಾವು ನಾವು ಚಿತ್ರಗಳನ್ನು ನೆನಪಿಸಿಕೊಳ್ಳುತ್ತೇವೆ.  ಕೆಲವರು ನೆನಪಿಗೋಸ್ಕರ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಾರೆ, ಇನ್ನು ಕೆಲವರು ಚಿತ್ರಕ್ಕೋಸ್ಕರ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾರೆ.  ಒಟ್ಟಿನಲ್ಲಿ, ಈ ಮೊಬೈಲು ಫೋನುಗಳ ದೆಸೆಯಿಂದ ಅಂತಹ ಚಿತ್ರಗಳಿಗೇನೂ ಕಡಿಮೆ ಇಲ್ಲ, ಆದರೆ ಈ ಚಿತ್ರಗಳ ಓವರ್‌ಲೋಡಿನಿಂದ ನಿಜವಾದ ನೆನಪಿನ ಪ್ರಮಾಣ ಕುಗ್ಗುತ್ತಿದೆಯೇನೋ ಎಂದು ಭಾಸವಾಗುತ್ತದೆ!



Thursday, April 16, 2020

God is great!

ದಿನವಿಡೀ ಕಂಪ್ಯೂಟರ್ ಬಳಸುವ ನಮ್ಮಂತಹವರಿಗೆ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಆಗುವ ಬೆಳವಣಿಗೆಗಳು ಕೆಲವೊಮ್ಮೆ ತಲೆನೋವಾಗಿ ಪರಿಣಮಿಸುತ್ತವೆ.  ಸೆಕ್ಯೂರಿಟಿಯ ಹೆಸರಿನಲ್ಲಿ ಅಥವಾ ಹೊಸದಾಗಿ ಹುಟ್ಟಿರುವ ತಂತ್ರಜ್ಞಾನದ ಹೆಸರಿನಲ್ಲಿ ಆಗುವ ಒಂದಲ್ಲಾ ಒಂದು ಆವಿಷ್ಕಾರಗಳು ನಮ್ಮ ಲರ್ನಿಂಗ್ ಕರ್ವ್ ಅನ್ನು ಟೆಸ್ಟ್ ಮಾಡುತ್ತವೆ; ಕೆಲವೊಮ್ಮೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತವೆ.  ಇಂತಹದರ ಉದಾಹರಣೆಗಳಲ್ಲಿ ನಮ್ಮ ಕಂಪನಿಯ ಕಂಪ್ಯೂಟರ್ ಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಲವಂತವಾಗಿ ಬದಲಾಯಿಸುವ ಪಾಸ್ವರ್ಡ್ ನಿಯಮಗಳನ್ನು ಹೆಸರಿಸಲೇ ಬೇಕು.  ಮೊದಮೊದಲು ಸಹಜ ಎನ್ನುವಂತಿದ್ದ ಪಾಸ್ವರ್ಡ್ ಪಾಲಿಸಿಗಳು ಈಗ ತಲೆನೋವುಗಳಾಗುತ್ತಿವೆ (ಅಥವಾ ಈ ಒಂದು ಭಾವನೆ ನಮಲ್ಲರಿಗೂ ವಯಸ್ಸಾಗುತ್ತಿದೆ ಎಂಬುದರ ಸೂಚಕವೂ ಇರಬಹುದು!).

ಅಯ್ಯೋ ಪಾಸ್ವರ್ಡ್ ಅಂದರೆ ಅದೇನು ದೊಡ್ಡ ವಿಷಯ ಎಂದು ಮೂಗೆಳೆದುಬಿಟ್ಟೀರಾ - ಪ್ರತಿ ಐದು-ಹತ್ತು ನಿಮಿಷಗಳಿಗೊಮ್ಮೆ ಆಕ್ಟಿವಿಟಿ ಇಲ್ಲದಿದ್ದರೆ ತಮ್ಮಷ್ಟಕ್ಕೆ ತಾವೇ ಲಾಕ್ ಆಗುವ ಕಂಪ್ಯೂಟರುಗಳಿಗೆ ಪಾಸ್ವರ್ಡ್ ಪದೇಪದೇ ಹಾಕುತ್ತಲೇ ಇರಬೇಕು.  ಅಷ್ಟೇ ಅಲ್ಲ, ಒಮ್ಮೆ ಲಾಗಿನ್ ಆದ ಮೇಲೆ, ಮತ್ತೆ ನಾವು ಬಳಸುವ ಪ್ರತಿಯೊಂದು ಸಿಸ್ಟಮ್ಗೂ ಕೂಡ ಈ ಪಾಸ್ವರ್ಡ್ ಅನ್ನು ಹಾಕುತ್ತಲೇ ಇರಬೇಕು.  ಒಟ್ಟಿನಲ್ಲಿ, ದಿನಕ್ಕೆ ಏನಿಲ್ಲವೆಂದರೂ ಒಂದು ಇಪ್ಪತ್ತೈದು ಬಾರಿಯಾದರೂ ಬಳಸುವ ಈ ಪಾಸ್ವರ್ಡ್ ಬಹಳ ದುಬಾರಿಯಾದ ಕಮಾಡಿಟಿ ಎಂದರೆ ತಪ್ಪಿಲ್ಲ.  ಅಕಸ್ಮಾತ್, ಎಲ್ಲಾದರೂ ಮರೆತು ಬಿಟ್ಟರೆ, ಅಂತಹ ದೊಡ್ಡ ಉಪಟಳ ಇನ್ನೊಂದಿಲ್ಲ!  ಒಟ್ಟಿನಲ್ಲಿ, ನಾವು-ನಮ್ಮ ಕೆಲಸದ ನಡುವೆ ಅವಿನಾಭಾವ ಸಂಬಂಧವನ್ನು ಬೆರೆಸುವ ಈ ಪಾಸ್ವರ್ಡ್ ಗಳಿಗೆ ದೊಡ್ಡ ಸ್ಥಾನವನ್ನು ಕೊಡಲೇಬೇಕಾಗುತ್ತದೆ!

ಪ್ರತಿ ಮೂರು ತಿಂಗಳಿಗೊಮ್ಮೆ ಪಾಸ್ವರ್ಡ್ ಅನ್ನು ಕಡ್ಡಾಯವಾಗಿ ಬದಲಾಯಿಸುವುದು ಬಹಳ ವರ್ಷಗಳಿಂದ ನಡೆದುಬಂದಿದೆ, ಅದರಲ್ಲೇನೂ ವಿಶೇಷವಿಲ್ಲ.  ಆದರೆ ಮೊದಲೆಲ್ಲಾ, ಪಾಸ್ವರ್ಡ್ ಪಾಲಿಸಿಗಳು ನಮ್ಮ ಉಗ್ರಾಣದೊಳಗಿರುವ ನಾಲ್ಕೈದು ಪಾಸ್ವರ್ಡ್ಗಳನ್ನು ಒಂದಾದನಂತರ ಒಂದನ್ನಾಗಿ ಬಳಸಲು ಬಿಡುತ್ತಿದ್ದವು.  ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಪಾಸ್ವರ್ಡ್ನಂತೆ ವರ್ಷಕ್ಕೆ ನಾಲ್ಕು ಪಾಸ್ವರ್ಡ್ಗಳಿದ್ದರೆ ಆಯಿತು.  ಮತ್ತೆ ಅದನ್ನೇ ರೀಸೈಕಲ್ ಮಾಡಿದ್ದರೆ ರಗಳೆ ಇರುತ್ತಿರಲಿಲ್ಲ.  ಆದರೆ, ಇತ್ತೀಚೆಗೆ ಮತ್ತೊಂದು ಪಾಲಿಸಿಯನ್ನು ಸೇರಿಸಿಬಿಟ್ಟರು - ಒಮ್ಮೆ ಬಳಸಿದ ಪಾಸ್ವರ್ಡ್ ಅನ್ನು ಮತ್ತೆ ಹನ್ನೆರಡು ಸಲ ಪಾಸ್ವರ್ಡ್ ಬದಲಾಯಿಸುವವರೆಗೂ ಬಳಸುವಂತಿಲ್ಲ!  ಅಂದರೆ, ಇಂದು ಬಳಸುವ ಪಾಸ್ವರ್ಡ್ ಇನ್ನು ಮೂವತ್ತಾರು ತಿಂಗಳ ನಂತರವೇ ಬಳಸಲು ಸಾಧ್ಯ!  ಅಂದರೆ ಮೂರು ವರ್ಷಗಳ ನಂತರ... ಇದನ್ನು ನೋಡಿ God is great! ಎನ್ನುವ ಉದ್ಗಾರ ತನ್ನಷ್ಟಕ್ಕೆ ತಾನೇ ಹೊರಗೆ ಬಂತು.  ನಾನೇ ಹನ್ನೆರಡು ಬಾರಿ ಪಾಸ್ವರ್ಡ್ ಅನ್ನು ಒಂದೇ ದಿನದಲ್ಲಿ ಬದಲಾಯಿಸಿ ಮತ್ತೆ ಅದೇ ಪಾಸ್ವರ್ಡ್ ಅನ್ನು ಉಪಯೋಗಿಸಿದರೆ ಹೇಗೆ ಎನ್ನುವ ಯೋಚನೆ ತಕ್ಷಣಕ್ಕೆ ಬಂತಾದರೂ, ಅದು ಸೆಕ್ಯೂರಿಟಿಯ ಉದ್ದೇಶವನ್ನು ಡಿಫೀಟ್ ಮಾಡುತ್ತದೆ ಎನ್ನುವ ಕಾರಣಕ್ಕೆ ಹಾಗೆ ಮಾಡಲಿಲ್ಲ, ಅದರ   ಬದಲಿಗೆ ’God is great! ಎನ್ನುವ ಪಾಸ್ವರ್ಡ್ ಅನ್ನೇ ಬಳಸಿದರೆ ಹೇಗೆ ಎನ್ನುವ ನಿರ್ಧಾರಕ್ಕೆ ಬಂದೆ.  ಆದರೆ, ನಮ್ಮ ಪಾಸ್ವರ್ಡ್ನಲ್ಲಿ  upper case ಅಕ್ಷರಗಳಿರಬೇಕು, ಅಂಕಿಗಳಿರಬೇಕು ಎಂದೆಲ್ಲ ನಿಯಮಗಳಿವೆ.  ಅದನ್ನೆಲ್ಲ ಸೇರಿಸಿ, God is great! ಅನ್ನು ಬಳಸಿ ಒಂದು ಹೊಸ ಪಾಸ್ವರ್ಡ್ ಸೃಷ್ಟಿಸಿದೆ.  ಆದರೆ, ಈ ಪಾಪ್ಯುಲರ್ ಹೇಳಿಕೆಯಂಥ ಪಾಸ್ವರ್ಡ್ ಅನ್ನು ಪದೇಪದೇ ಟೈಪ್ ಮಾಡುವಾಗಲೂ ಒಂದಲ್ಲ ಒಂದು ಸಂವೇದನೆಗಳು ನನ್ನ ಮನಪಟಲದಲ್ಲಿ ಹಾದು ಹೋಗುತ್ತಿದ್ದವು.  God is great! ಅನ್ನುವುದನ್ನು ಅನೇಕ ಭಾವನೆಗಳಲ್ಲಿ ಈ ಮೂರು ತಿಂಗಳಲ್ಲಿ ಹೇಳಿಕೊಂಡಿದ್ದೇನೆ!

***
ಕನ್ನಡ ವ್ಯಾಕರಣ ತರಗತಿಯಲ್ಲಿ ನನಗೆ ಇಷ್ಟವಾಗುವ ವಿಷಯ ವಸ್ತುಗಳಲ್ಲಿ ವಿಭಕ್ತಿ-ಪ್ರತ್ಯಯಗಳೂ ಒಂದು.  ಪ್ರಥಮ-ಉ, ದ್ವಿತೀಯ-ಅನ್ನು, ತೃತೀಯ-ಇಂದ, ಚತುರ್ಥಿ-ಗೆ, ಇಗೆ, ಅಕ್ಕೆ, ಪಂಚಮಿ-ದೆಸೆಯಿಂದ, ಷಷ್ಟಿ-ನನ್ನ, ನಮ್ಮ, ಸಪ್ತಮಿ-ಲ್ಲಿ, ಒಳಗೆ, ಇತ್ಯಾದಿ...

ಇಂಗ್ಲೀಷ್ ನಲ್ಲಿ ಅನೇಕ ಪದಗಳಿವೆ ನಿಜ.  ಆದರೆ, ಈ ವಿಭಕ್ತಿ-ಪ್ರತ್ಯಯಗಳ ದೆಸೆಯಿಂದ ಭಾರತೀಯ ಭಾಷೆಗಳ ಪದಗಳು ಅನೇಕ ರೀತಿಯಲ್ಲಿ ಉಲ್ಭಣಗೊಳ್ಳುತ್ತವೆ, ಬದಲಾವಣೆಗೊಳಗಾಗುತ್ತವೆ ಮತ್ತು ಭಾಷೆಯನ್ನು ಶ್ರೀಮಂತಗೊಳಿಸುತ್ತವೆ.

ಉದಾಹರಣೆಗೆ: "ಬಾಳೇ ಪ್ರೇಮಗೀತೆ", "ಬಾಳೂ ಬೆಳಕಾಯಿತು", "ಬಾಳಿನ ದಾರಿಯಲಿ", "ಬಾಳಿನಿಂದ ಬಾಳಿಗೆ", "ಬಾಳಿನ ದೆಸೆಯಿಂದ", "ಬಾಳನ್ನು ಬದುಕಿ", "ಬಾಳೇ ಹಾಳಾಯಿತು"... ಹೀಗೆ ’ಬಾಳು’ ಎನ್ನುವ ಪದ ಅನೇಕ ಬೆಳವಣಿಗೆಗಳನ್ನು ಪಡೆಯುತ್ತದೆ. ಇವೆಲ್ಲವನ್ನೂ ಇಂಗ್ಲೀಷಿಗೆ ಅಷ್ಟು ಸುಲಭವಾಗಿ ತರ್ಜುಮೆ ಮಾಡಲಾಗದು.

ಹೀಗೆ ಯೋಚಿಸುತ್ತಿರುವಾಗ, ನನ್ನ ಪಾಸ್ವರ್ಡ್ "God is great!" ಅನ್ನು ತೆಗೆದುಕೊಂಡು ಈ ಮೂರು ಪದಗಳಲ್ಲಿ ಎಷ್ಟೊಂದು ಕಾಂಬಿನೇಷನ್ ಮಾಡಬಹುದು ಎಂದು ಯೋಚಿಸಿದಾಗ ನನಗೆ ಈ ಕೆಳಗಿನ ವಾಕ್ಯಗಳು ಹೊಳೆದವು ಆಷ್ಟೇ!

God is great
Is God great
Great is God

God is great! ಅನ್ನು ಕನ್ನಡಕ್ಕೆ ತರ್ಜುಮೆ ಮಾಡಿದಾಗ "ದೇವರು ದೊಡ್ಡವನು" ಎಂದು ಯೋಚಿಸಿದೆ... ಈ ಎರಡೇ ಪದಗಳನ್ನು ಎಷ್ಟು ರೀತಿಯಲ್ಲಿ ಬದಲಾವಣೆ ಮಾಡಿ ಹೊಸ ಹೊಸ ಅರ್ಥಗಳನ್ನು ಹುಡುಕಬಹುದು ಎಂದು ಯೋಚಿಸಿದಾಗ ಈ ಕೆಳಗಿನ ಸಾಲುಗಳು ಹೊಳೆದವು:

ದೇವರು ದೊಡ್ಡವನು
ದೊಡ್ಡವನು ದೇವರು
ದೇವರೇ ದೊಡ್ಡವನು
ದೊಡ್ಡವನೇ ದೇವರು
ದೇವರು ದೊಡ್ಡವನೇ
ದೊಡ್ಡವನು ದೇವರೇ
ದೇವರೇ ದೊಡ್ಡವನೇ
ದೊಡ್ಡವನೇ ದೇವರೇ
ದೇವರೂ ದೊಡ್ಡವನು
ದೊಡ್ಡವನೂ ದೇವರು

ಈ ಮೇಲಿನವನ್ನು ಹೇಳುವಾಗಿನ ಇಂಟೋನೇಷನ್, ಅದಕ್ಕೆ ಸಂಬಂಧಿಸಿದ ಸಂದರ್ಭ ಹಾಗೂ ಅವುಗಳಿಗೆ ಜೋಡಿಸುವ ಭಾವನೆಗಳನ್ನು ಬಳಸಿ ಅನೇಕ ಕಾಂಬಿನೇಷನ್ನುಗಳನ್ನು ಮಾಡಬಹುದು.  ಇವುಗಳನ್ನು ಅಷ್ಟು ಸುಲಭವಾಗಿ ಇಂಗ್ಲೀಷಿಗೆ ತರ್ಜುಮೆ ಮಾಡಲಾಗುವುದಿಲ್ಲ.  ಕೇವಲ ಎರಡೇ ಪದಗಳಲ್ಲಿ ಈ ಲಾಲಿತ್ಯವಿರುವ ನಮ್ಮ ಭಾಷೆಯನ್ನು ಒಂದು ದೇಶೀಯ (native) ಪರಿಸರದಲ್ಲಿ ಇದ್ದು ಕಲಿಯದಿದ್ದರೆ, ಅಷ್ಟು ಸಹಜವಾಗಿ ಮನಮುಟ್ಟುವುದಿಲ್ಲ.  ಉತ್ತರ ಅಮೇರಿಕದಲ್ಲಿ ನಾವು ಮಕ್ಕಳಿಗೆ ಕನ್ನಡ ಹೇಳಿಕೊಡುವಾಗ ಈ ಸೂಕ್ಷ್ಮಗಳನ್ನು ಹೇಳಿಕೊಡಲಾಗದು.  ಎಲ್ಲರೂ ವ್ಯಾಕರಣವನ್ನು ಕಲಿಯದಿದ್ದರೂ ದಿನನಿತ್ಯದ ನಮ್ಮ ಮಾತುಕತೆ, ಬರವಣಿಗೆಗಳಲ್ಲಿ ನಾವು ಅದೆಷ್ಟು ರೀತಿಯಲ್ಲಿ ಈ ವಿಭಕ್ತಿ-ಪ್ರತ್ಯಯಗಳನ್ನು ಬಳಸುತ್ತೇವೆ ಎಂದು ಯೋಚಿಸಿದಾಗ ಆಶ್ಚರ್ಯವೆನಿಸುತ್ತದೆ.
ನೋಡಿ, ಹೀಗೆ ಈ ಪಾಸ್ವರ್ಡ್ ಬದಲಾಯಿಸುವ ದೆಸೆಯಿಂದ ನಮ್ಮ ಕನ್ನಡ ಭಾಷೆಯ ಹಿರಿಮೆಯನ್ನು ಕೊಂಡಾಡುವಂತಾಯ್ತು!

Saturday, April 04, 2020

ಹವ್ಯಾಸ-ದೇವರು-ಸ್ವಾತಂತ್ರ್ಯ

ಯಾವುದೇ ಒಂದು ಹವ್ಯಾಸ ಬೆಳೆಯ ಬೇಕಾದರೂ ಕನಿಷ್ಠ ಮೂರು ವಾರಗಳ ಕಾಲ ಬೇಕಾಗುತ್ತದೆ ಎಂಬುದು ಹಲವರ ಅನುಭವ.  ಈ ಕಳೆದ ಮೂರು ವಾರಗಳಲ್ಲಿ (ಮನೆಯಲ್ಲಿಯೇ ಕುಳಿತು) ಮನೆಯಿಂದಲೇ ಕೆಲಸ ಮಾಡುವ ನನ್ನಂಥ ಎಷ್ಟೋ ಜನ ಟೆಕ್ನಾಲಜಿ ಮ್ಯಾನೇಜರುಗಳು ಈ ಹೊಸ ಪರಿಯ ಕೆಲಸಕ್ಕೆ ರೂಢಿಯಾಗಿಲ್ಲ?  ಆದರೆ, ಮನೆಯಲ್ಲಿಯೇ ಅಥವಾ ಮನೆಯಿಂದಲೇ ಕೆಲಸ ಮಾಡುವ ಜನರಿಗೆಲ್ಲ ’ಅಂತರಂಗ’ದ ಹೇಳಲೇ ಬೇಕಾದ ಕಿವಿ ಮಾತೊಂದಿದೆ: ಮನೆಯಿಂದಲೇ ಕುಳಿತು ಕೆಲಸ ಮಾಡುವುದೆಂದರೆ ಬೊಕ್ಕ ತಲೆಯ ವ್ಯಕ್ತಿ ಮುಖ ತೊಳೆದ ಹಾಗೆ!  ಎಲ್ಲಿ ಶುರು ಮಾಡಿ ಎಲ್ಲಿ ನಿಲ್ಲಿಸಬೇಕು ಎಂಬುದು ಅಷ್ಟು ಸುಲಭವಾಗಿ ತಿಳಿಯದು.  ಘಂಟೆಗೊಂದರಂತೆ ಟ್ಯಾಸ್ಕುಗಳು ನಮ್ಮ ತಲೆ ಏರಿ ಕುಳಿತಿರುವಾಗ, ಕೊನೆಯಿಲ್ಲದ ಹಾಗೆ ಇ-ಮೇಲ್‌ಗಳು ಇನ್‌ಬಾಕ್ಸ್‌ನಲ್ಲಿ ಬಂದು ಇಳಿಯುತ್ತಿರುವಾಗ, ಕಂಪನಿಯಲ್ಲಿದ್ದವರೆಲ್ಲ ನಾಳೆಯೇ ಪ್ರಪಂಚದ ಕೊನೆಯೆಂಬಂತೆ ಇನ್ಸ್ಟಂಟ್ ಮೆಸೇಜುಗಳಲ್ಲಿ ತಮ್ಮ ಕಥನಗಳನ್ನೇ ಹೆಣೆಯುತ್ತಿರುವಾಗ - ಎಲ್ಲಿಂದ ಆರಂಭಿಸುವುದು, ಎಲ್ಲಿ ನಿಲ್ಲಿಸುವುದು?  ಆಫೀಸಿನಲ್ಲಿದ್ದವರಾದರೆ ಮನೆಗೆ ಹೋಗುತ್ತೇವೆಂದಾದರೂ, ಕಾಫಿ-ಟೀ-ಲಂಚ್ ಬ್ರೇಕ್‌ಗಳನ್ನು ತೆಗೆದುಕೊಳ್ಳುತ್ತೇವೆಂದಾದರೂ ಅತ್ತಿಂದಿತ್ತ ಓಡಾಡುತ್ತಿದ್ದೆವು.  ಈಗ ಹಾಗಿಲ್ಲ.  ಡೆಸ್ಕ್ ಅನ್ನು ಬಿಟ್ಟು ಬದಿಗೆ ಬಂದರೆ, ಯಾರದ್ದಾದರೊಬ್ಬರದ್ದು ಕಾಟ ತಪ್ಪಿದ್ದಲ್ಲ.  ಮನೆಯೇ ಆಫೀಸು, ಆಫೀಸಿನ ಪಕ್ಕದಲ್ಲೇ ಅಡುಗೆ ಮನೆ, ಅದರ ಮಗ್ಗುಲಲ್ಲೇ ಬಾತ್‌ರೂಮು... ಹೀಗೆ ಗೂಟಕ್ಕೆ ಕಟ್ಟಿ ಹಾಕಿದ ಘೂಳಿಯಂತಾದ ಮನಸ್ಸು ಇದ್ದ ಸಣ್ಣ ಆವರಣದಲ್ಲೇ ಸದಾ ಗಿರಕಿ ಹೊಡೆಯುತ್ತಿರುತ್ತದೆ.  ಮೊನ್ನೆ ಯಾವುದೇ ಕಾರಣಕ್ಕೋ ಏನೋ ಚಪ್ಪಲಿ ಇಡುವ ಕ್ಲಾಸೆಟ್ಟಿನ ಬಾಗಿಲು ತೆಗೆದು ನೋಡಿದರೆ, ಅಲ್ಲಿ ನಾನು ಹಾಕುವ ಡ್ರೆಸ್ ಶೂ‌ಗಳು, ಹಳೆಯ ಕಸ್ಟಮರ್‌ ಅನ್ನು ನಕ್ಕು ಸ್ವಾಗತಿಸುವ ಗೂಡು ಅಂಗಡಿಯ ಮಾಲಿಕನಂತೆ ಕಂಡುಬಂದವು.  ನಾನು ಅವುಗಳನ್ನು ಮುಟ್ಟಿಯೂ ಸಹ ನೋಡಲಿಲ್ಲವಲ್ಲ ಎನ್ನುವ ಕಳಕಳಿಯಲ್ಲಿಯೇ ಕ್ಲಾಸೆಟ್ ಬಾಗಿಲು ಹಾಕುತ್ತಿದ್ದಂತೆ ಅನ್‌ಲೈನ್ ಅಡ್ವರ್‌ಟೈಸ್‌ಮೆಂಟ್‌‍ನಲ್ಲಿ ಬಂದು ಹೋಗುವ ಮುಖಗಳಾಗಿ ಮಾಯವಾದವು॒!  ಇನ್ನು ಬಾಗಿಲ ಬಳಿಯೇ ಬಿಡುವ ಶೂಗಳ ಕಥೆ ಇದಾದರೆ, ಮೇಲೆ ಕೊಂಡೊಯ್ದು (ಅಚ್ಚುಕಟ್ಟಾಗಿ) ಇಟ್ಟಿದ್ದ ಕೋಟು-ಸೂಟುಗಳು, ನಾನು ಇನ್ಯಾರದೋ ಮನೆಯನ್ನು ಹೊಕ್ಕೆನೇನೋ ಎಂಬ ಆಶ್ಚರ್ಯ ಸೂಚಕ ಭಾವನೆಯನ್ನು ನನ್ನ ಮುಖದ ಮೇಲೆ ಹೊರಡಿಸಿದವು.  ಕಳೆದ ಮೂರು ವಾರಗಳಲ್ಲಿ ನಾವು ಬಳಸಿದ ಸಂಪನ್ಮೂಲಗಳನ್ನು ನೆನೆದುಕೊಂಡರೆ "ಸಮರಸದ ಬಾಳುವೆಗೆ ಸರಳ ಜೀವನವೇ ಕಾರಣ॒!" ಎಂಬ ಪುಸ್ತಕವನ್ನು ಬರೆಯುವಷ್ಟು ಮಟೀರಿಯಲ್ ಸಿಗುವುದಂತೂ ಖಂಡಿತ!


***
ಈ ಕೋರೋನಾ ವೈರಸ್ಸಿನ ದೆಸೆಯಿಂದ ನಮ್ಮ ದೇವರುಗಳಿಗೆ ಒಂದು ಹೊಸದಾದ ಪ್ರೌಢಿಮೆ ಬಂದಿದೆ.  ಸಂಕಟಕಾಲದಲ್ಲಿ ವೆಂಕಟರಮಣ ಎನ್ನುವಂತೆ ಎಲ್ಲ ಮಾನವ ಆತ್ಮಗಳೂ ಸಹ ಅವುಗಳ ನೆಚ್ಚಿನ ದೇವರನ್ನು ನೆನೆಯುತ್ತಿರುವಾಗ, ನಮ್ಮೆಲ್ಲರ ಮೊರೆಯನ್ನು ಏಕ ಕಾಲದಲ್ಲಿ ದೇವರುಗಳನ್ನು ತಲುಪಿಸುತ್ತಿರುವ  ಕಮ್ಯುನಿಕೇಷನ್ ನೆಟ್‌ವರ್ಕ್‌ನಲ್ಲಿಯೂ ಸಹ ಕಂಜೆಷನ್ ಇರುವುದರಿಂದ, ಬ್ಯಾಂಡ್‌ವಿಡ್ತ್ ಸಮಸ್ಯೆಗಳು ಖಂಡಿತ ಇರಬಹುದು.  ಅಂತೆಯೇ ವಿಶ್ವದ ಏಳೂ ಮುಕ್ಕಾಲು ಬಿಲಿಯನ್ ಮಾನವ ರೂಪದಲ್ಲಿನ ಆತ್ಮಗಳು ಅರ್ಧ ಸತ್ತ (ಅಥವಾ ಅರ್ಧ ಬದುಕಿರಬಹುದಾದ) ಜೀವಿಯ ವಿರುದ್ಧ ರಕ್ಷಿಸು ಎಂದು ಮೊರೆ ಹೊತ್ತಿರುವಾಗ, ದಶಾವತಾರದ ನಂತರ ಮುಂದಿನ ಅವತಾರ ಏನಾಗಬಹುದು ಎಂದು ದೇವರೂ ಯೋಚಿಸಬೇಕಾಗುತ್ತದೆ.

೧. ಮೀನಾಗಿ ಬಂದವನು ಪ್ರಳಯದಿಂದ ರಕ್ಷಿಸಿದ
೨. ಆಮೆಯಾಗಿ ಬಂದವನು ಸಮುದ್ರ ಮಂಥನದ ಭಾರವನ್ನು ಹೊತ್ತ
೩. ಹಂದಿಯಾಗಿ ಬಂದವನು ಹಿರಣ್ಯಾಕ್ಷನಿಂದ ಭೂಮಿಯನ್ನು ರಕ್ಷಿಸಿದ
೪. ನರಸಿಂಹನಾಗಿ ಬಂದವನು ಸಾವೇ ಇಲ್ಲದ ಹಿರಣ್ಯಕಷ್ಯಪುವನ್ನು ಸಂಹರಿಸಿದ
೫. ಕುಳ್ಳನಾಗಿ ಬಂದವನು ಬಲಿಯನ್ನು ಪಾತಾಳಕ್ಕೆ ತಳ್ಳಿದ
೬. ಕೊಡಲಿ ರಾಮನಾಗಿ ಬಂದು ಕ್ಷತ್ರಿಯ ಸಂಹಾರಕ್ಕೆ ಇಳಿದು, ಮಹೇಂದ್ರಗಿರಿಯಲ್ಲಿ ಚಿರಂಜೀವಿಯಾಗಿ ನೆಲೆಸಿದ
೭. ರಾಮನಾಗಿ ರಾವಣ ಸಂಹಾರ ಮಾಡಿದ
೮. ಕೃಷ್ಣನಾಗಿ ಕೌರವ ಸಂಹಾರ ಮಾಡಿದ (ಬಲರಾಮನ ಶೇಷನ ಅವತಾರವೂ ಇದೇ ಅವಧಿಯಲ್ಲಿ ಸೇರುತ್ತದೆ)
೯.  ಬುದ್ಧನಾಗಿ ಎಲ್ಲರಿಗೂ ಬೋಧಿಸಿದ
೧೦. ಕಲ್ಕಿಯಾಗಿ ಬಿಳಿಯ ಕುದುರೆಯನ್ನೇರಿ ಕಲಿಯುಗದ ಉದ್ದಕ್ಕೂ ಉಲ್ಕಾಪಾತವಾಗಿ ತಿರುಗುತ್ತಿದ್ದಾನೆ... ಕಲಿಯುಗದಲ್ಲಿ ಅಧರ್ಮ ತಾಂಡವವಾಡಿದರೆ ಮತ್ತೆ ಬಂದೇ ಬಿಟ್ಟಾನು, ಉಲ್ಕೆಯಾಗಿ ಅಪ್ಪಳಿಸುವ ಮುಖೇನ ಪ್ರಜ್ವಲಿಸಿಬಿಟ್ಟಾನು!

ಪ್ರಭೂ! ಈ ಕಣ್ಣಿಗೆ ಕಾಣದ ಜೀವಿಯಿಂದ ನಮ್ಮೆಲ್ಲರ ರಕ್ಷಣೆ ಹೇಗೆ ಸಾಧ್ಯ? ನೀನೇನಾದರೂ ವಿಶೇಷ ವಿಕಿರಣಗಳನ್ನು ಹೊರಸೂಸಿ ಗಾಳಿಯಲ್ಲಿನ ಈ ಅಣುಜೀವಿಗಳನ್ನು ಮಾತ್ರ ನಾಶಪಡಿಸಿದರೆ ಆಗಬಹುದು! (ಮಾನವನಿಂದ ನಿರ್ನಾಮವಾಗುತ್ತಿರುವ ಜೀವಿಗಳ ಮೊರೆಯನ್ನೇಕೆ ನೀನು ಆಲಿಸುತ್ತಿಲ್ಲ? ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ, ಅದೇಕೆ? ಮಾನವರಲ್ಲದ ಜೀವಿಗಳು ನಿನ್ನ ಮಕ್ಕಳಲ್ಲವೇನು?)

***
ಒಂದು ವಸ್ತು ಇಲ್ಲದಾಗಲೇ ಅದರ ಬೆಲೆ ಗೊತ್ತಾಗುವುದಂತೆ.  ಈ "ವಸ್ತು"ಗಳ ಪಟ್ಟಿಯಲ್ಲಿ ನಮ್ಮ "ಸ್ವಾತಂತ್ರ್ಯ"ವೂ ಸೇರಿದೆ.  ನಾವೆಲ್ಲ ಸಂಘಜೀವಿಗಳು.  ನಮ್ಮ ನಮ್ಮ ಮನೆಗಳಲ್ಲಿ ನಮಗೆ ಬೇಕಾದ ಐಶಾರಾಮ, ಭೌತಿಕವಸ್ತುಗಳು, ನಮ್ಮವರು, ಮುಖ್ಯವಾಗಿ ಸಮಯ, ಇವೆಲ್ಲ ಇದ್ದಾಗಲೂ ಕೂಡ ನಮ್ಮಲ್ಲಿ ಏನೋ ಒಂದು ಅಪರಿಪೂರ್ಣ ಭಾವನೆ ತುಂಬಿಕೊಳ್ಳೋದಿಲ್ಲವೇ? ಹಾಗೆ. ಈ ಆಯ್ಕೆಯನ್ನು -  ಸ್ವಾತಂತ್ರ್ಯ, ಮುಕ್ತಿ, ತೆರವು, ಬಿಡುಗಡೆ, ಅನಿರ್ಬಂಧಿತ ಸ್ಥಿತಿ, ವಿಮೋಚನೆ, ಸ್ವಚ್ಛಂದತೆ, ಸ್ವತಂತ್ರತೆ - ಎನ್ನುವ ಅನೇಕ ಪದಗಳಲ್ಲಿ ನಾವು ಅಳೆದರೂ ಅದರ ಮಹತ್ವವನ್ನು ಅಷ್ಟು ಸುಲಭವಾಗಿ ಸಾರಲಾಗುವುದಿಲ್ಲ.  ಚಿಕ್ಕ-ದೊಡ್ಡ ಸ್ಕ್ರೀನುಗಳಲ್ಲಿರುವ ಯಾವುದೇ ಮಾಹಿತಿ-ಮನರಂಜನೆಯನ್ನು ನೋಡಿದರೂ ಮನ ತುಂಬದು.  ಅದೇ, ಅಪರೂಪಕ್ಕೊಮ್ಮೆ ಕರೆ ಮಾಡುವ ಹಳೆಯ ಸ್ನೇಹಿತರನ್ನು ಯಾವಾಗ ಬೇಕಾದರೂ ಆಗ ಕರೆ ಮಾಡಿ ಮಾತನಾಡಿ, ನಿಮಗೆ ಗೊತ್ತಿಲ್ಲದಂತೆ ಒಂದು ಘಂಟೆ ಆರಾಮವಾಗಿ ಕಳೆದುಹೋಗುತ್ತದೆ.  ನಮ್ಮ ನಮ್ಮ ಗೂಡುಗಳಲ್ಲಿ ನಮ್ಮನ್ನು ಕಟ್ಟಿ ಹಾಕಿದ್ದರೂ ಸಹ, ಈ ಕೋವಿಡ್ ದೆಸೆಯಿಂದ ನಾವೆಲ್ಲರೂ ದೂರವಿದ್ದೂ ಹತ್ತಿರವಾಗಿದ್ದೇವೆ ಎನ್ನಬಹುದು.  ಆಯ್ಕೆ, ಸ್ವಾತಂತ್ರ್ಯ, ಸಹಬಾಳ್ವೆಯ ಸಮತೋಲನದಲ್ಲಿ ನಮಗೆಲ್ಲ ಬದುಕಿನ ಗಂಭೀರ ಮುಖವನ್ನು ದರ್ಶನ ಮಾಡಿಸಿದ ಕೋವಿಡ್‌ಗೆ ಜೈ॒!

Thursday, April 26, 2018

ಚಿತ್ರಗಳ ನೆನಪು

ನಮ್ಮ ಹಳೆ ಕ್ಯಾಮೆರಾಗಳನ್ನು ಈಗ ಯಾರೂ ಕೇಳೋದೂ ಇಲ್ಲ, ನೋಡೋದೂ ಇಲ್ಲ.  ನಮ್ಮೆಲ್ಲರ ಮನೆಗಳಲ್ಲಿ ಕ್ಯಾಮೆರಾಗಳದ್ದೇ ಒಂದು ಸೆಕ್ಷನ್ ಅಂತ ಹುಟ್ಟುಹಾಕಿದರೆ ಅದೇ ಒಂದು ಮ್ಯೂಸಿಯಮ್ ಆಗಿ ಬಿಡಬಹುದೇನೋ ಎಂದು ಒಮ್ಮೊಮ್ಮೆ ಹೆದರಿಕೆ ಆಗುತ್ತೆ.  ಏಕೇ ಅಂದ್ರೆ, ಹತ್ತು ವರ್ಷಗಳ ಹಿಂದಿನ ಟೆಕ್ನಾಲಜಿ, ಅಂದಿನ ಕ್ಯಾಮೆರಾಗಳು ಹತ್ತು ವರ್ಷಗಳ ನಂತರ ಯಾವ ಪ್ರಯೋಜನಕ್ಕೂ ಬಾರದೇ ಹೋಗುವಂತಾಗಿ ಹೋಗೋದು.  ಹತ್ತು ವರ್ಷ ಬಹಳ ಹೆಚ್ಚೇ ಆಯಿತು, ಈ ಮೊಬೈಲು ಫೋನುಗಳಲ್ಲಿ ಕ್ಯಾಮೆರಾಗಳು ಬಂದ ಮೇಲಂತೂ ಪ್ರತೀ ಎರಡೆರಡು ವರ್ಷಗಳಿಗೊಮ್ಮೆ ಕ್ಯಾಮೆರಾಗಳಲ್ಲಿ ಹೊಸತೇನಾದರೊಂದು ಬಂದೇ ಬಂದಿರುತ್ತದೆ.  ಒಮ್ಮೆ ಈ ಹೊಸ ಕ್ಯಾಮೆರಾಗಳಿರೋ ಮೊಬೈಲು ಫೋನುಗಳನ್ನು ಬಳಸಿದರೆಂದರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲ!

ಕ್ಯಾಮೆರಾಗಳು ಎಂದಾಕ್ಷಣ, ಅವು ಉತ್ಪಾದಿಸುವ ಫೋಟೋಗಳು ಮತ್ತು ವಿಡಿಯೋಗಳು ನೆನಪಿಗೆ ಬರುತ್ತವೆ.  ಆದರೆ ನಾವು ತೆಗೆಯುವ ಹೆಚ್ಚಿನ ಮಟ್ಟಿನ ಫೋಟೋಗಳು ಮತ್ತು ವಿಡಿಯೋಗಳನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡುತ್ತೇವೆಯೋ, ಅವುಗಳನ್ನು ಪರಿಶೀಲಿಸುತ್ತೇವೆಯೇ, ಅವುಗಳನ್ನು ಹಂಚಿಕೊಳ್ಳುತ್ತೇವೆಯೇ ಎಂದು ಕೇಳಿಕೊಂಡಾಗ ನಮ್ಮೆಲ್ಲರ ಅಸಲಿ ಫೋಟೋ/ವಿಡಿಯೋಗಳ ಮೋಹ ಗೊತ್ತಾಗುತ್ತದೆ.  ನಮ್ಮ ಸುತ್ತ ಮುತ್ತಲಿನಲ್ಲಿ ಎಲ್ಲ ಥರದ ಜನರೂ ಕಾಣಸಿಗುತ್ತಾರೆ - ವಿರಳವಾಗಿ ಫೋಟೋ ತೆಗೆಯುವವರಿಂದ ಹಿಡಿದು, ಕಂಡದ್ದನ್ನೆಲ್ಲ ಫೋನಿನ ಕ್ಯಾಮೆರಾದಲ್ಲಿ ಗೋಚಿಕೊಳ್ಳುವವರವರೆಗೆ.   ಆದರೂ, ಕಾಯದೇ ಕೆನೆಕಟ್ಟಲಿ ಎನ್ನುವ ಇಂದಿನ ವೇಗದ ತಲೆಮಾರಿಗೆ ತಕ್ಕಂತೆ ಇಂದಿನ ಕ್ಯಾಮೆರಾಗಳು ಕೂಡ ಒಗ್ಗಿಕೊಂಡಿವೆ.  ಹಾಗಂತ ಇಂದಿನ ಫೋನಿನ ಕ್ಯಾಮೆರಾಗಳನ್ನು ತೆಗಳುವಂತಿಲ್ಲ, ಎಂತಹ ಅತಿರಥ ಮಹಾರಥರು ಬಳಸುವಂತ ಘನಂದಾರಿ ಕ್ಯಾಮೆರಾಗಳಿಗಿಂತ ಈ ಚಿಕ್ಕ ಹಾಗೂ ಚೊಕ್ಕ ಕ್ಯಾಮರಾಗಳು ಮಾಡುವ ಕೆಲಸದಲ್ಲಿ ಒಂದು ರೀತಿಯ ತಲ್ಲೀನತೆ ಇದೆ, ಕಂಡಿದ್ದನ್ನು ಕಂಡ ಹಾಗೆ ಹೇಳುವ ಜಾಣ್ಮೆ ಇದೆ.

ಮೊನ್ನೆ ಒಂದಿಷ್ಟು ಹೊತ್ತು ಹಳೇ ಫೋಟೋಗಳನ್ನು ಹರವಿಹಾಕಿ ಕುಳಿತುಕೊಂಡು ಹಿಂದಿನ ಚಿತ್ರಗಳನ್ನು ಅವಲೋಕಿಸುತ್ತಾ ಇದ್ದ ಹಾಗೆ ಅದರ ಜೊತೆಗೆ ಒಂದು ನನ್ನ ಮನಪಟಲದಲ್ಲಿ ಹೊಸದೊಂದು ಪ್ರಪಂಚವೇ ತೆರೆದುಕೊಂಡಿತು.  ಪರಾಪರ ಕಾರ್ಯಗಳಲ್ಲಿ ತೆಗೆದ ಅನೇಕ ಚಿತ್ರಗಳು ಯಾವೊಂದು ಭಾವನೆಗಳ ಉನ್ಮಾದತೆಯನ್ನೂ ಹೊರತರಲಿಲ್ಲ, ಬದಲಿಗೆ ಎಲ್ಲ ಚಿತ್ರಣಗಳ ಮೂಕ ರಾಯಭಾರಿಗಳಾಗಿ ತಮ್ಮನ್ನು ತಾವು ತೆರೆದುಕೊಂಡವು.  ಅವುಗಳು, ಹಳೆಯದ್ದೆಲ್ಲ ಒಳಿತು ಎಂದು ಹೇಳುವ ಮರ್ಮವನ್ನೂ ಸೂಚಿಸಲಿಲ್ಲ, ಬದಲಿಗೆ ಹಳೆಯದು ಹೀಗಿತ್ತು ಎಂಬ ವಸ್ತುನಿಷ್ಠ ಪ್ರತಿಕ್ರಿಯೆಯನ್ನು ಮೂಡಿಸಿದವು.  ಹೀಗೆ ಹಳೆಯ ಫೋಟೋಗಳನ್ನು ನೋಡುತ್ತಾ ಹೋದ ಹಾಗೆ, ನಾವೆಲ್ಲ ವಾರಗಳು, ವರ್ಷಗಳು, ದಶಗಳನ್ನು ಕಳೆದು ನಮ್ಮ ಮನಸ್ಸಿನ ಹೊರಗೆ ಭೌತಿಕವಾಗಿ ಅನೇಕ ಚಿತ್ರಗಳನ್ನು ಗುಡ್ಡೆಹಾಕಿಕೊಳ್ಳುವ ಪ್ರಕ್ರಿಯೆ ಒಂದು ನಮ್ಮನ್ನೇ ಮೀರಿ ಬೆಳೆದು ನಿಂತರೆ ಎಂದು ಸೋಜಿಗವೂ ಆಯಿತು!

ಆದ್ಯಾವ ಕ್ಯಾಮೆರವೇ ತೆಗೆದ ಚಿತ್ರವಿರಲಿ, ಅಂತಹ ಸಹಸ್ರಾರು ಚಿತ್ರಗಳನ್ನು ನೀವು ಅದೆಷ್ಟೋ ದೊಡ್ಡ ಸ್ಟೋರೇಜಿನಲ್ಲಿ ಇಟ್ಟಿರಲಿ, ಆ ಚಿತ್ರವನ್ನು ಅಲ್ಲಿಂದ ಹೊರತೆಗೆದು ಅದರ ವಿವರಗಳನ್ನು ಪಟ್ಟಂತ ಹೇಳುವಲ್ಲಿ ನೀವು ಸೋತು ಹೋಗುತ್ತೀರಿ.  ಆದರೆ, ಅದೇ ನಮ್ಮ ನೆನಪಿನಲ್ಲಿ ಮೂಡಿ ಅಲ್ಲೇ ವಾಸ್ತವ್ಯ ಹೂಡಿದ ಚಿತ್ರಗಳಾಗಲೀ, ನೆನಪುಗಳಾಗಲೀ, ಕೆಲವೊಂದು ವಿಶೇಷ ವಾಸನೆಗಳಾಗಲೀ ಎಂದೆಂದೂ ನಾವು ಕರೆದಾಗ ಕ್ಷಣಾರ್ಧದಲ್ಲಿ ಬರುತ್ತವೆ!  ಇಷ್ಟು ಒಳ್ಳೆಯ ಎಫಿಷಿಯನ್ಸಿಯಲ್ಲಿ ಕೆಲಸ ಮಾಡುವ ನಮ್ಮ ಮಿದುಳು ಪ್ರಪಂಚದ ಎಲ್ಲ ಸೂಪರ್ ಕಂಪ್ಯೂಟರಿಗಿಂತಲೂ ಹೆಚ್ಚಿನದ್ದು ಎಂದು ಖುಷಿಯಾಯಿತು.  ಅಬ್ಬಾ, ಅದೇಷ್ಟು ಬಗೆಯ ವಿವರಗಳು, ಎಷ್ಟು ಬೇಗನೆ ಬಂದುಬಿಡುತ್ತವೆ.  ಉದಾಹರಣೆಗೆ: ಮಲ್ಲಿಗೆಯ ಸುವಾಸನೆ, ನಿಮಗೆ ಬೇಕಾದವರ ನೆನಪುಗಳು, ನೀವು ಹಿಂದೆ ವಾಸವಾಗಿದ್ದ ಮನೆ, ನಿಮ್ಮ ಅಚ್ಚು ಮೆಚ್ಚಿನ ಪುಸ್ತಕ, ಪೆನ್ನು, ಗೆಳೆಯ, ಗೆಳತಿ, ನಿಮ್ಮ ಊರಿನ ರಸ್ತೆಗಳು, ನಿಮ್ಮ ಊರಿನ ಅಕ್ಕ-ಪಕ್ಕದ ಊರುಗಳು, ದೇವಸ್ಥಾನ, ಜಾತ್ರೆ, ನಿಮ್ಮ ಸಹಪಾಠಿಗಳು....ಹೀಗೆ ಪಟ್ಟಿ ಮುಂದುವರೆಯುತ್ತಾ ಹೋದಂತೆ, ಎಲ್ಲವೂ ಏಕಕಾಲಕ್ಕೆ ನಿಮ್ಮ ಮನ ಪಟಲದಲ್ಲಿ ಮೂಡುವುದನ್ನು ನೀವು ಕಾಣಬಹುದು.  ಹಾಗೆಯೇ, ಈ ಮನಸ್ಸಿನ್ನ ಓಟಕ್ಕೆ ಯಾವ ಮಿತಿಗಳೂ ಇಲ್ಲ, ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ನೆಗೆಯುವುದರಲ್ಲಿ ಈ ಮನಸ್ಸು ನಿಸ್ಸೀಮ.

ನಮ್ಮ ಮನಸ್ಸು ಮತ್ತು ಮಿದುಳು ಅದು ಹೇಗೆ ಚಿತ್ರಗಳನ್ನು ಆರ್ಗನೈಜ್ ಮಾಡುತ್ತವೆಯೋ, ಆದರೆ ನಾವು ಈ ಮೊಬೈಲು ಫೋನುಗಳಲ್ಲಿ ತೆಗೆದ ಚಿತ್ರಗಳನ್ನು ಹಾಗೂ ಅವರಿವರು ನಮ್ಮ ಜೊತೆ ಹಂಚಿಕೊಂಡ ಚಿತ್ರಗಳನ್ನು ಆರ್ಗನೈಜ್ ಮಾಡಿಟ್ಟುಕೊಳ್ಳುವಲ್ಲಿ ಹೊಸದೊಂದು ವ್ಯವಸ್ಥೆಯೇ ಬೇಕಾಗುತ್ತದೆ.  ಅಕಸ್ಮಾತ್, ಈ ಚಿತ್ರಗಳೇನು ಮಹಾ ಎಂದು ಹಾಗೆಯೇ ಬಿಟ್ಟರೆ ’ಎಲ್ಲವೂ ಇದ್ದೂ, ಏನೂ ಇಲ್ಲದ ಪರಿಸ್ಥಿತಿ’ ಎದುರಾಗುತ್ತದೆ.  ಬೇಕಾದ ಮುಖ್ಯ ವಿಷಯ ಅಥವಾ ವಸ್ತು ಬೇಡವಾದಾಗ ಸಿಗುತ್ತದೆ.  ನಮ್ಮ ನಿಜವಾದ ಬುದ್ಧಿಮತ್ತೆಗೆ ಮಿಗಿಲಾದ ಈ ಚಿತ್ರಗಳ ಸಂಸ್ಕರಣೆ ಇನ್ನು ಕೃತಕವಾದ ಬುದ್ಧಿಮತ್ತೆ (artificial intelligence) ಇಂದಲೇನಾದರೂ ಬದಲಾಗುತ್ತದೆಯೇನೋ ಎಂದು ಕಾದು ನೋಡಬೇಕಾಗಿದೆ.  ’ನನಗೆ ಈ ರೀತಿಯ ಚಿತ್ರಬೇಕಾಗಿದೆ, ಹುಡುಕು’ ಎಂದು ಹೇಳಿದಾಕ್ಷಣ ಆ ಚಿತ್ರ ನಮ್ಮ ಫೋನು ಅಥವಾ ಕಂಪ್ಯೂಟರ್ ಪರದೆ ಮೇಲೆ ಬಂದು ನಿಲ್ಲುವ ಕಾಲವೇನೂ ದೂರವಿದ್ದಂತಿಲ್ಲ.

ಬೂಮರ್ಸ್ ಜನರೇಷನ್‌ನ ಹಿರಿಯರಿಂದ ಹಿಡಿದು ಇಂದಿನ ಜನರೇಷನ್-Z ವರೆಗೆಇನ ಮಕ್ಕಳು ಸಹಾ ಫೋಟೋಗಳನ್ನು ಕ್ಲಿಕ್ಕಿಸುತ್ತಲೇ ಇದ್ದಾರೆ, ದಿನೇ-ದಿನೇ ಅವುಗಳ ಸಂಖ್ಯೆ ಬೆಳೆಯುತ್ತಿದೆ.  ಹತ್ತಿರವಿದ್ದೂ ದೂರ ನಿಲ್ಲುವ ನಮ್ಮತನ ಒಂಟಿಯಾಗದಿರುವಂತೆ ನಾವು ನಾವು ಚಿತ್ರಗಳನ್ನು ನೆನಪಿಸಿಕೊಳ್ಳುತ್ತೇವೆ.  ಕೆಲವರು ನೆನಪಿಗೋಸ್ಕರ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಾರೆ, ಇನ್ನು ಕೆಲವರು ಚಿತ್ರಕ್ಕೋಸ್ಕರ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾರೆ.  ಒಟ್ಟಿನಲ್ಲಿ, ಈ ಮೊಬೈಲು ಫೋನುಗಳ ದೆಸೆಯಿಂದ ಅಂತಹ ಚಿತ್ರಗಳಿಗೇನೂ ಕಡಿಮೆ ಇಲ್ಲ, ಆದರೆ ಈ ಚಿತ್ರಗಳ ಓವರ್‌ಲೋಡಿನಿಂದ ನಿಜವಾದ ನೆನಪಿನ ಪ್ರಮಾಣ ಕುಗ್ಗುತ್ತಿದೆಯೇನೋ ಎಂದು ಭಾಸವಾಗುತ್ತದೆ!

Friday, January 27, 2017

ಕಂಪನಿ ಹೆಸರು ಅಂದ್ರೆ...

S&P 500 ಕಂಪನಿಗಳ ಹೆಸರನ್ನು ಕುರಿತು ಸ್ವಲ್ಪ ಯೋಚಿಸತೊಡಗಿದರೆ ತಲೆ ಚಿಟ್ಟು ಹಿಡಿಯುತ್ತದೆ, ಅವುಗಳ ಹೆಸರಿನ ಮೂಲವೇನು, ಅವುಗಳನ್ನು ಎಲ್ಲೆಲ್ಲಿಂದ ಆಯ್ದು ತಂದಿರಬಹುದು ಎನ್ನುವುದು ಎಂಥವರನ್ನಾದರೂ ಆಳವಾಗಿ ಯೋಚಿಸುವಂತೆ ಮಾಡಬಹುದು.  ಉದಾಹರಣೆಗೆ Proctor & Gamble (P&G) ಕುರಿತು ಯೋಚಿಸಿದರೆ, Proctor ಎಂದರೆ ಎಕ್ಸಾಮಿನೇಷನ್ ಸೂಪರ್‌ವೈಸರ್, Gamble ಅಂದ್ರೆ ಜೂಜಾಡುವುದು ಅಂತ ಅರ್ಥ!  Johnson & Johnson (J&J) ಕುರಿತು ಯೋಚಿಸಿದರೆ, ಒಂದೇ ಹೆಸರನ್ನು ಎರಡು ಸರ್ತಿ ಏಕಾದ್ರೂ ತೋರಿಸ್ತಾರಪ್ಪಾ? ಸುಮ್ನೇ ಜಾಗ ವೇಸ್ಟ್ ಅನ್ನಿಸೋಲ್ಲ?  ಹೀಗೇ ಅನೇಕಾನೇಕ ಉದಾಹರಣೆಗಳು ನಿಮಗೆ ಸಿಗುತ್ತವೆ.

ಇನ್ನುGeneral ಎಂಬ ಸೀರೀಸ್‌ನಲ್ಲಿ ಶುರುವಾಗುವ ಕಂಪನಿಗಳ ಹೆಸರುಗಳೋ ಸಾಕಷ್ಟು ಸಿಗುತ್ತವೆ.  ಈ ಎಲ್ಲ ಕಂಪನಿಗಳು ತಯಾರಿಸುವುದು ಕೇವಲ "ಜೆನೆರಲ್" ಪ್ರಾಡಕ್ಟ್‌ಗಳನ್ನೋ ಅಥವಾ ಯಾವುದಾದರೂ ಸ್ಪೆಸಿಫಿಕ್ ಇವೆಯೋ ಎಂದು ಬೇಕಾದಷ್ಟು ಜನ ಸೈಂಟಿಸ್ಟುಗಳು ಈಗಾಗಲೇ ಸ್ಟಡಿ ಮಾಡಿರಬಹುದು.  ನಾವು ಯಾವುದೇ ಮೀಸಲಾತಿಗೆ ಸೇರಿರದ ಜನ, ಬರೀ ಜನರಲ್ ಕಂಪನಿಗಳ ಪ್ರಾಡಕ್ಟುಗಳನ್ನು ಮಾತ್ರ ಬಳಸುತ್ತೇವೆ ಎಂದು ಮುಂದಿನ ಸಾರಿ ಭಾರತಕ್ಕೆ ಹೋದಾಗ ನೀವು ನಿಮ್ಮ ಸೆಕ್ಯುಲರಿಸಂ ಅನ್ನು ಮೆರೆದು ನಿಮ್ಮ "ಜನರಲ್" ತನವನ್ನು ಸಾಬೀತು ಪಡಿಸಬಹುದು.  ನಮ್ಮ ಮನೆಯ ಲೈಟು ಬಲ್ಬುಗಳನ್ನು ತಯಾರಿಸಿದ್ದು ಜೆನರಲ್ ಎಲೆಕ್ಟ್ರಿಕಲ್ ಕಂಪನಿ, ನಾವು ಮುಂಜಾನೆ ಜೆನರಲ್ ಮಿಲ್ಸ್ ಸೀರಿಯಲ್ ತಿಂತೀವಿ.  ಜನರಲ್ ಫುಡ್ಸ್ ಪ್ರಾಡಕ್ಟುಗಳನ್ನೇ ಊಟಕ್ಕೆ ಬಳಸುತ್ತೇವೆ. ಹಾಗೂ ನಮ್ಮ ರಕ್ಷಣೆಗೆ ಜನರಲ್ ಡೈನಮಿಕ್ಸ್ ಪ್ರಾಡಕ್ಟುಗಳನ್ನೇ ಬಳಸ್ತೀವಿ.  ಹೇಗಿದೆ ಎಲ್ಲ ಜನರಲ್ ಮಯ?

ಮಣ್ಣಿನ ಮಡಕೆಯನ್ನು ಮಾಡಿ ಮಾರುವವ ಕುಂಬಾರ, ಹೂವನ್ನು ಮಾರುವವ ಹೂಗಾರನಾದರೆ, ಆಪಲ್‌ನ್ನ ಮಾರುವವ ಏನಾಗಬಹುದು? ಸೇಬುಗಾರ?!  ಕ್ಷಮಿಸಿ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನ್‌ಗಳಿಗೂ ಸೇಬು ಹಣ್ಣಿಗೂ ಎತ್ತಣಿಂದೆತ್ತ ಸಂಬಂಧ ನಮಗೆ ತಿಳಿಯದು...ಒಂದು ರೀತಿಯಲ್ಲಿ ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಇರುವ ಸಂಬಂಧದ ಹಾಗೆ ಏನಾದರೂ ನಿಗೂಢವಾದ ಸಂಬಂಧವಿದ್ದರೂ ಇರಬಹುದು... ನಮ್ಮ ಮನೆಯಲ್ಲೆಲ್ಲಾ ಆಪಲ್ ಮಯ... ದಿನಕ್ಕೊಂದು ಸೇಬು ಹಣ್ಣನ್ನು ತಿಂದು ದೂರವಿರುವ ಉಸಾಬರಿಯ ಸಹವಾಸವಲ್ಲವಿದು, ಜಾಗ್ರತೆ!  ಒಮ್ಮೆ ಮುಟ್ಟಿದರೆ ಮುಗಿಯಿತು, ಇನ್ನು ಸಾಯುವವರೆಗೂ ಮುಟ್ಟತ್ತಲೇ ಇರಬೇಕು... (ಅದು ಡಿವೈಸ್ ಆಗಿರಬಹುದು, ಅಥವಾ ವ್ಯಕ್ತಿಯಾಗಿರಬಹುದು, ಎರಡರಲ್ಲಿ ಒಂದು ಕೊನೆಯಾಗುವವರೆಗಿನ ಸಂಬಂಧವಿದು!)... ಎಂಥಾ ಗಾಢವಾದ ಸಂಬಂಧವಿರಬಹುದಿದು?  Only death can part this relationship!

ಇನ್ನು ಸೇಬುಹಣ್ಣಿನ (Apple) ಸಂಬಂಧ ಚಾಲ್ತಿಯಲ್ಲಿರುವಾಗಲೇ ನಮಗೆ ಹಳೆಯ Microsoftನ ಸಂಬಂಧ ನೆನಪಿಗೆ ಬರುತ್ತದೆ.  ನಮ್ಮ ಮನೆಯ ಕಿಟಕಿಗಳನ್ನು ಮಾಡಿದ್ದು ಈ ಮೈಕ್ರೋ ಸಾಫ್ಟ್ ಕಂಪನಿಯವರಲ್ಲದಿದ್ದರೂ ನಮ್ಮ ಕಂಪ್ಯೂಟರುಗಳಲ್ಲಿ ಹಲವಾರು ಕಿಟಕಿಗಳು ಸದಾ ತೆರೆದೇ ಇರುತ್ತವೆ.  ಇವು ಗಾಳಿ-ಬೆಳಕು ಬರುವ ಕಿಟಕಿಗಳಲ್ಲ...ಕಂಪ್ಯೂಟರ್ ಪ್ರಪಂಚಕ್ಕೆ ಸೂಕ್ಷ್ಮವಾಗಿ ಸಂಬಂಧ ಬೆರೆಸುವ ಕಿಂಡಿಗಳು.  ಆ ಕನಕದಾಸರ ಕಾಲದಲ್ಲಿ ’ಕನಕನ ಕಿಂಡಿ" ತೆರೆದ ಹಾಗೆ, ನಮ್ಮ ಕಾಲದಲ್ಲಿ ಮೈಕ್ರೋಸಾಫ್ಟ್ ಕಿಟಕಿಗಳು ಸದಾ ತೆರೆದೇ ಇರುತ್ತವೆ!

ಇನ್ನು ದಕ್ಷಿಣ ಅಮೇರಿಕಾದ ಮಹಾ ಕಾಡನ್ನು ನೆನಪಿಸುವ ಅಮೇಜಾನು. ತನ್ನ ಮಧ್ಯೆ ಅಸಂಖ್ಯಾತ ಸೊನ್ನೆಗಳನ್ನು ತನ್ನಷ್ಟಕ್ಕೆ ತಾನೇ ಸೃಷ್ಟಿಸಿಕೊಂಡು ಪ್ರತಿ ಶೋಧದ ಪುಟದ ಬುಡದಲ್ಲಿಯೂ ಉದ್ದಕ್ಕೆ ತನ್ನನ್ನು ತಾನು ಆವರಿಸಿಕೊಳ್ಳುವ ಗೂಗಲ್ಲು.  ಎಲ್ಲರ ಹಣೆಬರಹವನ್ನು ಅವರಿಂದಲೇ ಹೊರಸೂಸುವಂತೆ ಮಾಡಿ ಜನರು ಸೋಷಿಯಲ್ ಮೀಡಿಯಾ ಎಂಬ ನಾಮಪದದ ನೆಪದಲ್ಲಿ ಶುದ್ಧ ಸೋಂಬೇರಿಗಳಾಗುವಂತೆ ಮಾಡುವ ಫೇಸ್‌ಬುಕ್ಕು.  ತನ್ನ ಒಡಲಿನಲ್ಲಿ ಜಗತ್ತಿನ ದೊಡ್ಡ ಸೂಪರ್ ಕಂಫ್ಯೂಟರ್ರನ್ನು ಇರಿಸಿಕೊಂಡು ಸಂಭ್ರಮಿಸುವ ಐಬಿಎಮ್ಮು...  ಹೀಗೇ ಅನೇಕಾನೇಕ ಹೆಸರುಗಳು ನೆನಪಿಗೆ ಬರುತ್ತಲೇ ಹೋಗುತ್ತವೆ.  ನಿಮಗೆ ಬೇಕಾದ ಸೆಕ್ಟರುಗಳಲ್ಲಿ ಒಂದಲ್ಲ ಒಂದು ಕಂಪನಿಗಳು ಚಿರಪರಿಚಿತವೇ....ಬ್ಯಾಂಕು, ಇನ್ವೆಸ್ಟ್‌ಮೆಂಟು, ಟೆಲಿಕಾಮ್, ಹೆಲ್ತ್‌ಕೇರು, ಟ್ರಾನ್ಸ್‌ಪೋರ್ಟೇಷನ್ನು,    ಟೆಕ್ನಾಲಜಿ, ಎನರ್ಜಿ, ಇತ್ಯಾದಿ, ಇತ್ಯಾದಿ.  ಆದರೆ ಈ ಎಲ್ಲ ಹೆಸರುಗಳ ವಿಶೇಷವೇನು ಗೊತ್ತೇ?  ಒಂದರ ಹೆಸರಿನ ಹಾಗೆ ಮತ್ತೊಂದಿಲ್ಲ ಎಲ್ಲವೂ ಬೇರೆ ಬೇರೆಯವೇ... ಒಂದು ರೀತಿಯಲ್ಲಿ ನಮ್ಮ ಮಹಾಭಾರತ ಹಾಗೂ ರಾಮಾಯಣದ ಕಥೆಗಳಲ್ಲಿ ಬರುವ ಪಾತ್ರಗಳ ಹಾಗೆ!  ನಿಮಗೆ ಎಂದಾದರೂ ಅನ್ನಿಸಿತ್ತೇ... ನಮ್ಮ ಪೂರ್ವಜರು ಅದ್ಯಾವ ಹೆಸರಿನ ಡೇಟಾಬೇಸನ್ನು ಉಪಯೋಗಿಸುತ್ತಿದ್ದರು ಅಂತ?  ಒಂದು ಮಹಾಕಾವ್ಯ, ಮಹಾಕಥೆಯಿಂದ ಮತ್ತೊಂದು ಮಹಾಕಥೆಗೆ ಯುಗಗಳ ಅಂತ್ಯವಿದ್ದರೂ ಎಲ್ಲ ಪಾತ್ರಗಳ ಹೆಸರೂ ಬೇರೆ ಬೇರೆಯವು, ಒಂದು ಕೂಡ ಕಾಮನ್ ಆಗಿಲ್ಲ!

ಇನ್ನು ಅಮೇರಿಕದಲ್ಲಿ ಚಾಲ್ತಿ ಇರೋ ಬ್ರ್ಯಾಂಡ್ ಹೆಸರುಗಳನ್ನು ಭಾರತದಲ್ಲಿ ಇಟ್ಟರೆ ಖಂಡಿತಾ ಕಷ್ಟವಾಗುತ್ತೆ ಅನ್ನೋದಕ್ಕೆ ಈ ಉದಾಹರಣೆ ನೋಡಿ.  ಅಮೇರಿಕದಲ್ಲಿ ಜನರಲ್ ಮೋಟಾರ್ಸ್‌ನವರು ಉತ್ಪಾದಿಸೋ ಸ್ಯಾಟರ್ನ್ (ಶನಿ) ಕಾರು ಬಹಳ ವರ್ಷಗಳಿಂದ ಪ್ರಚಲಿತವಾದುದು.  ಇದೇ ಕಾರನ್ನ ಭಾರತದ ಮಾರುಕಟ್ಟೆಯಲ್ಲಿ - ಶನಿ ಯಾಗಿ - ಉತ್ಪಾದಿಸಿದರೆ, ಯಾರು ತಾನೆ ಖರೀದಿಸುತ್ತಾರೆ ನೀವೇ ಹೇಳಿ?!  ಶನಿಗ್ರಹ ಎಲ್ಲರಿಗೂ ಬೇಕು ಹಾಗೂ ಯಾರಿಗೂ ಬೇಡವಾಗಿರುವ ಗ್ರಹ... ಬುಧ (Mercury) ಆದರೆ ಪರವಾಗಿಲ್ಲ, ಗುರು (Jupitor) ಆದರೆ ಓಕೆ, ಆದರೆ Olds Mobile ಮಾತ್ರ ಬೇಡಾ ಸ್ವಾಮಿ... ಈ ಹೆಸರನ್ನು ಇಟ್ಟವರಿಗೆ ನೊಬೆಲ್ ಪಾರಿತೋಷಕವೇನಾದರೂ ಸಿಕ್ಕಿದೆಯೇ? ಈ ಹೆಸರನ್ನು ಸೂಚಿಸಿದವರ ಕೈಗೆ ಕಡಗ ತೊಡಿಸಬೇಕು!  ಈ ಮಿಲೆನಿಯಲ್ಲ್ ಯುಗದಲ್ಲಿ ಓಲ್ಡ್ಸ್ ಮೊಬೈಲ್ ಅನ್ನುವ ಹೆಸರಿನ ಕಾರನ್ನು ಮೂವತ್ತು ವರ್ಷಗಳಿಗಿಂತ ಕೆಳವಯಸ್ಸಿನವರು ಹೇಗೆ ತಾನೇ ಖರೀದಿಸಬೇಕು?  ಪ್ರಪಂಚದಲ್ಲಿ ಜನರು ತಮ್ಮ ಕಳೆದು ಹೋದ ಯೌವನವನ್ನು ಮತ್ತೆ ಹುಟ್ಟು ಹಾಕಲು ಬಿಲಿಯನ್‌ಗಟ್ಟಲೆ ಹಣವನ್ನು ಸುರಿಯುತ್ತಿರುವಾಗ ನಮ್ಮ ಕಾರಿನ ಹೆಸರು ಓಲ್ಡ್ಸ್ ಮೊಬೈಲು ಹೇಗಾದೀತು?

ನಮ್ಮ ಭಾರತದಲ್ಲಾದರೂ ಗೋದ್ರೇಜ್, ಟಾಟಾ, ಬಿರ್ಲಾ, ವಿಪ್ರೋ, ಬಜಾಜ್, ಇನ್ಫೋಸಿಸ್ ಮುಂತಾದ ಕಂಪನಿಗಳು ತಲೆ ಎತ್ತಿದ್ದರೂ ಇದುವರೆಗೂ "ಪಟೇಲ್" ಎಂಬ ಬ್ರ್ಯಾಂಡ್ ಏಕೆ ತಲೆ ಎತ್ತಿಲ್ಲ ಎಂದು ಸೋಜಿಗವಾಗುತ್ತದೆ.  ಮಿಲಿಯನ್‌ಗಟ್ಟಲೆ ಪಟೇಲ್ ಜನರ ಪರಂಪರೆ ತಮ್ಮ ವಂಶಪಾರಂಪರ್ಯದವರವನ್ನು ವಿದೇಶಗಳಿಗೆ ರವಾನಿಸೋದರಲ್ಲೇ ಅವರ ಇನ್ನೋವೇಶನ್ ಸೀಮಿತವಾಗಿ ಹೋಯಿತೋ ಎಂದು ಸಂಶಯವಾಗುವುದಿಲ್ಲವೇ?

ಈ ಹೆಸರುಗಳೇ ಬ್ರ್ಯಾಂಡ್‌ಗಳಾಗುತ್ತವೆ... ಒಂದು ರೀತಿಯಲ್ಲಿ "ಹಮಾರಾ ಬಜಾಜ್" ಆದ ಹಾಗೆ!  ಅಫಘಾನಿಸ್ತಾನದಲ್ಲೂ ಪ್ರಚಲಿತವಾದ ಬ್ರ್ಯಾಂಡ್ ಎಂದರೆ ಕೋಕಾಕೋಲಾ ಹಾಗೂ ಮರ್ಸಿಡಿಸ್ ಬೆಂಜ್ ಮಾತ್ರ ಎಂಬುದು ಮತ್ತೊಂದು ಸಮೀಕ್ಷೆಯ ವರದಿ!  ಹೀಗೇ ನಿಮ್ಮ ಬ್ರ್ಯಾಂಡ್ ನಿಮ್ಮನ್ನು ನೀವೂ ಡಿಫೈನ್ ಮಾಡಿ, ಮಾರ್ಕೇಟ್ ಮಾಡಿ, ಅದನ್ನೂ ಎತ್ತರದಿಂದೆತ್ತರಕ್ಕೆ ಕೊಂಡೊಯ್ಯಬಹುದು...ಪ್ರಯತ್ನ ಮಾಡಿನೋಡಿ.


Saturday, April 30, 2016

ಶಾಂತವಕ್ಕನ ಸಡಗರ

ಇನ್ನೇನು ಶ್ರಾವಣ ಮಾಸ ಹತ್ರ ಬಂತು ಅಂತ ಊರಿನ ಹೆಂಗಳೆಯರೆಲ್ಲ ಮನೆ ಜಗಲಿ, ಅಂಗಳ ಸಾರ್ಸಿ ಶುಭ್ರವಾಗಿಟ್ಟುಕೊಂಡಿದ್ರು.  ಎವರೆಡಿ ಶೆಲ್ಲಿನ ಒಳಗಿನಾಗಿರೋ ಕರ್ರಗಿನ ಪೌಡರ್ರ್ ಹಾಕಿ ತಿಕ್ಕಿಂದ್ರಿಂದ್ಲೋ ಏನೋ ಕೆಲವರ ಮನಿ ಮುಂದಿನ ಅಂಗಳ ಟಾರ್ ರಸ್ತೆಗಿಂತ ಕಪ್ಪಗಿತ್ತು ನೋಡ್ರಿ.  ಇತ್ಲಾಗೆ ಶಾಲೇಗ್ ಹೋಗೋ ಮಕ್ಳು ಸಧ್ಯ ಛಳೀ ಹೊಂಟೋಯ್ತು ಅಂತ ತಮ್ಮ ತಮ್ಮ ಚಿಕ್ಕ ಚಿಕ್ಕ ಯೂನೀಫಾರ್ಮಿನೊಳಗೆ ತಮ್ಮನ್ನ ತುರುಕಿಕೊಂಡಿದ್ರು, ಮೇಲ್ನಿಂದ ಕೊರೆಯೋ ಮಳೆಗೋ ಬಿಸಿಲಿಗೋ ರಕ್ಷಣೆ ಇರ್ಲೀ ಅಂತ ಹೆಂಗಳೆಯರಲ್ಲಿ ಕೆಲವ್ರು ಆಶ್ಚರ್ಯ ಸೂಚಕ ಮಾರ್ಕಿನಂಗಿರೋ ಛತ್ರಿ ಹಿಡಕೊಂಡು ಓಡಾಡ್ತಿದ್ರು.  ಕೆಲವೊಮ್ಮೆ ಪುಷ್ಯಾ ಮಳಿಯಿಂದ ತಪ್ಪಿಸಿಕೊಂಡ್ರೂ ಆರ್ದ್ರೀ ಮಳಿ ಬಿಡ್ಲಿಲ್ಲಾ ಅನ್ನೋ ಹಂಗೆ ಜಿಟಿಪಿಟಿ ಮಳೆ ಎಷ್ಟೊತ್ತಿಗೆ ಬರುತ್ತೆ ಅಂತ ಹೇಳೋಕಾಗ್ದಿದ್ರೂ, ಅದರ ಪರಿಣಾಮ ಅನ್ನೋ ಹಂಗೆ ಕೆಂಪನೆ ಕಿಚಿಪಿಚಿ ಕೆಸರು ಕಾಲು-ಪ್ಯಾಂಟುಗಳಿಗೆ ಅಂಟೋದು ಗ್ಯಾರಂಟಿ ಆಗಿತ್ತು.

ಇದೇ ಹೊತ್ತಲ್ಲಿ ಊರ್‌ನಾಗಿರೋ ಬ್ರಾಂಬ್ರ ಓಣಿಯಲ್ಲಿ ಏನೋ ಒಂಥರ ಸಂಭ್ರಮ.  ಅದೇ ಮಗ್ಗಲ ಮನಿ ಶಾಂತವ್ವಕ್ಕ ಇದಾಳಲ್ಲ ಅಕಿ ನೂರಾ ನಾಕನೇ ವರ್ಷಕ್ಕೆ ಕಾಲಿಟ್ಟ ಸಂಬಂಧ ಊರ್‌ನಾಗಿನ ಮುಖಂಡ್ರು ಎಲ್ಲಾ ಸೇರಿ ಹುಟ್ಟಿದ ಹಬ್ಬಾನ ದೊಡ್ಡದಾಗಿ ಆಚರ್‌ಸಬೇಕು ಅಂತ ಒಂದು ಕಾರ್ಯಕ್ರಮ ಹಮ್ಮಿಕೊಂಡಾರಂತ.  ಭಾನುವಾರ ಮಟಮಟ ಮಧ್ಯಾಹ್ನ ಎರಡು ಘಂಟಿಗೆ ಶುರುವಾಗೋ ಕಾರ್ಯಕ್ರಮ ಇನ್ನೂ ಸ್ಥಳೀಯ ಎಮ್ಮೆಲ್ಲೆ ಬರ್ಲಿ ಅಂತ ಕಾಯ್ಕೊಂಡ್ ಕುಂತು ಘಂಟೆ ಮೂರ್ ಆದ್ರೂ ಶುರೂ ಆಗೋ ಭಾಗ್ಯ ಬಂದಂಗಿರ್ಲಿಲ್ಲ.  ಆದ್ರೂ ರಗಡು ಮಂದಿ ಸೇರಿದ್ರು.  ಎಲ್ಲೆಲ್ಲಿಂದಾನೋ ಬಂದಿದ್ರು.  ಅವರಾಗೆ ಬಾಳ ಮುಖ್ಯ ಅಂದ್ರ, ಶಾಂತವಕ್ಕನ್ನ ಗಿರಿಮಗಳು ಮೋಹಿನಿ - ದೂರ ದೇಶ ಅಮೇರಿಕಾದಾಗೆ ಅದೇನೋ ಕಾಯ್ಕ ಮಾಡ್ಕಂಡು ಅಲ್ಲೇ ಇದಾರಂತೆ, ಅದ್ರೂ ಅತ್ಯಂತ ಮುತುವರ್ಜಿ ವಹಿಸಿ ಶಾಂತವಕ್ಕನ್ನ ಬರ್ತ್‌ಡೇ ಆಚರಿಸಾಕ ಹದಿಮೂರು ಸಾವಿರ ಕಿಲೋಮೀಟರ್ ದೂರದಿಂದ ಬಂದಿರೋದು ನಮ್ಮೂರಿಗೆ ಹೆಚ್ಚೇ ಬಿಡ್ರಿ.  ಆದ್ರೂ ಅವನವ್ವನ, ಇದೇ ತಾಲೂಕಿನಾಗೆ ಬಿದ್ದು ಎದ್ದು ಸಾಯೋ ಈ ಎಮ್ಮೆಲ್ಲೆ ಮಂದಿಗೆ ಏನ್ ಅಂತಾದ್ ಬಂದೀತು? ಇನ್ನೂ ಸುದ್ದೀನೇ ಇಲ್ಲಲ!

ಹಂಗೂ ಮಾಡಿ ಶಾಂತವ್ವಕ್ಕನ ವಯಸ್ಸು ಇಷ್ಟೇ ಹಿಂಗೇ ಎಂದು ಯಾರೂ ಬರ್ದಿಟ್ಟಂಗಿದ್ದಿದ್ದು ಯಾರಿಗೂ ನೆನಪಿಲ್ಲ ನೋಡ್ರಿ.  ಅದರಾಗೂ ಒಂದ್ ಸರ್ತಿ ನೂರರ ಹತ್ರಾ ಹೋದ್ರಿ ಅಂದ್ರ ನಿಮ್ಮ ಜೀವಮಾನದಾಗೆ ಬಂದ್ ಹೋಗಿರೋ ಮುಕ್ಕಾಲ್ ಜನ ಆಗ್ಲೇ ಟಿಕೇಟ್ ತಗೊಂಡಂಗೇ ಲೆಕ್ಕ!  ಅದ್ರಾಗೂ ನೂರ್ ವರ್ಷದ ಹಿಂದೇ ಜಾತ್ಕಾ ಪಾತ್ಕಾ ಬರೀತಿದ್ರೋ ಏನೋ ಆದ್ರೂ, ಜನನಪತ್ರಿಕೆ ಮರಣ ಪತ್ರಿಕೆ ಅಂಥಾ ಯಾರೂ ಪ್ರಿಂಟ್ ಹಾಕಿದ್ದು ನಾನಂತೂ ಕಂಡಿಲ್ಲ.  ಅದೂ ಹೋಗೀ ಹೋಗಿ ಬ್ರಿಟೀಷ್ ಸರಕಾರದಾಗ ಹುಟ್ಟಿರೋ ಮುದುಕಿ ಒಂಥರಾ ಬ್ರಿಟೀಷರ ಹಂಗಾ ಗರ್ವದಾಕಿ ಬಿಡ್ರಿ.  ಶಾಂತವ್ವಕ್ಕ ಈಗ್ಲೇ ಇಷ್ಟು ಉರೀತಾಳೆ, ಆಗ ಹೆಂಗಿದ್ಲೋ ಅಂತ ಕೆಲವು ಹೆಣ್ ಮಕ್ಳು ಕೈ ಮುರ್ದು ಲಟಗಿ ತಗೊಂಡಿದ್ದಂತೂ ನಿಜ.  ಒಂದ್ ಹತ್ತ್ ವರ್ಷದ ಹಿಂದಿನ್ ವರೆಗೂ ಈ ಮುದುಕಿ ಕಡಿಮೀ ಏನ್ ಇರ್ಲಿಲ್ಲ.  ದಿನಾ ಅಗಸೀ ಬಾಗ್ಲು ಮಟಾ ನಡ್ದು ಬಾವೀ ನೀರ್ ಸೇದಿ ತರೋದೇನೋ, ಬಾಗ್ಲೂ ಬಳ್ದು, ರಂಗೋಲಿ ಹಾಕಿದ್ದಷ್ಟೇ ಅಲ್ದೇ, ಒಂದೇ ಒಂಚೂರು ಬಿಡದೇ ದೊಡ್ಡ ಹಿತ್ಲು ಗುಡುಸ್ತಿತ್ತ್ ನೋಡ್ರಿ ಈ ಮುದುಕಿ.  ದರ್ಲೆ ತೆಗೆದು ಒಲೀ ಮ್ಯಾಲೆ ದನಗಳಿಗೆ ಬಾಯಾರು ಬಿಸಿಮಾಡಿ ಕೊಟ್ಟು, ಕೊಟಗಿ ಶುದ್ದಾ ಮಾಡಿ ಹಾಲ್ ಕರಕಂಡ್ ಬಂದು ಸುರ್ ಅಂತಾ ಒಂದು ಲೋಟಾ ಕಾಪೀ ಹೀರೋದ್ರೊಳಗೆ ಹತ್ತ್ ಘಂಟ್ ಆಗಿತ್ತು.  ನಾವ್ ಇವತ್ತಿನ ದಿನಾ ವಾರಕ್ಕ ನಲವತ್ತು ಘಂಟಿ ಅಂತ ಏನ್ ಕೆಲ್ಸಾ ಮಾಡ್ತೀವಿ, ಈ ವಮ್ಮ, ಭಾನುವಾರದಿಂದ ಮಂಗಳವಾರದೊಳಗೇ ನಲವತ್ತೇನು ಐವತ್ತು ಘಂಟಿ ದುಡಿಯೋದ್ ನೋಡ್ರಿ.  ಜಿಮ್ಮು-ಗಿಮ್ಮು ಅಂತ ಒಂದ್ ದಿನ ಅದರ ಬಗ್ಗೆ ಕೇಳದಿದ್ರೂ ಮೈಯಾಗೆ ಒಂದು ಚೂರು ನೆಣಾ ಅಂತ ಇದ್ದಂಗಿಲ್ಲ ನೋಡ್ರಿ, ಯಾವತ್ತಿದ್ರೂ ಒಂದೇ ಒಂದ್ ಲಕ್ಷಣಾ.  ಇಂದಿನ ಕಾಲದ ಹೆಣ್ಣ್ ಮಕ್ಳು ಒಂದೊಂದು ಹಡದು ಹತ್ತು ವರ್ಷ ಹಳೇದಾದ ಎಸ್.ಟಿ. ಬಸ್ಸಿನ ಹಂಗೆ ನಡೆಯೋದಾದ್ರೆ ಈವಮ್ಮ ಎಂಟು ಮಕ್ಳನ್ನ ಹಡದು ಅದೆಷ್ಟೋ ಬಾಣಂತನಾನ ಮಾಡಿ ಇನ್ನೂ ಒಂಚೂರೂ ಬೆನ್ನ್ ಬಾಗಿಸದೇ ನಡೀತಾಳ ಅಂದ್ರ ಅದೊಂದು ದೊಡ್ಡ ಪವಾಡನೇ ಬಿಡ್ರಿ.  ಈ ವಮ್ಮನ ಗಂಡಾ ಅದ್ಯಾವಾಗೆ ಟಿಕೇಟ್ ತೆಗೆಂಡು ಹೋದನೋ ನನಗೆ ಗೊತಿಲ್ಲಾ, ಅದ್ರೂ ಈವಮ್ಮ ಮರೆ-ಮೈಲಿಗೆ-ಮಡಿ ಅಂತಾ ಇಡೀ ಊರಿಗೆ ಫೇಮ್ಮಸ್ಸು ನೋಡ್ರಿ.  ಶಾಂತವಕ್ಕನ ಉಪ್ಪಿನಕಾಯಿ, ಹಪ್ಪಳಾ, ಸಂಡಿಗೆ ಅವರ ಸಂಬಂಧಿಕರ ದೆಸೆಯಿಂದ ಎಲ್ಲೆಲ್ಲೋ ಹೊಗ್ತಿತ್ತು.  ಆಕಿ ಕೈ ರುಚೀನೇ ಬ್ಯಾರೆ.  ಆರು ತಿಂಗಳೇನು, ಅರು ವರ್ಷಾ ಅದ್ರೂ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಕಡದ್ರ ಇನ್ನೂ ಕಟುಂ ಅನ್ನೋದು ನೋಡ್ರಿ!

ಕೊನೀಗೂ ಎಮ್ಮೆಲ್ಲೆ ಸಾಹೇಬ್ರು ಬಂದ್ರೂ ಅಂತ ಕಾರ್ಯಕ್ರಮ ಶುರೂ ಆಗೂ ಹಂಗ ಕಾಣಸ್ತು.  ಶಾಂತವಕ್ಕನ ಮನಿ ಮುಂದೆ ನಾಲ್ಕು ಅಡಕೆ ಮರದ ಕಂಬಾ ನೆಟ್ಟು ಒಂದು ಸಣ್ಣ ಚಪ್ರ ಕಟ್ಟಿದ್ರು.  ಅದರ ಮ್ಯಾಲೆ ಸ್ವಲ್ಪಾನೂ ಬಿಸಿಲು ಬರದೇ ಇರ್ಲಿ ಅಂತ ತೆಂಗಿನ ಮಡ್ಲು ಹೆಣೆದು ಕಟ್ಟಿದ್ರು.  ಮದುವೀ ಮನೆ ಅಷ್ಟು ದೊಡ್ಡು ಚಪ್ರಾ ಅಲ್ದಿದ್ರೂ ಮೂರು ಜನ ಕೂರೋ ಹಂಗ ಅನುಕೂಲ ಮಾಡಿದ್ರು.  ಮಧ್ಯ ಶಾಂತವ್ವಕ್ಕ, ಅಕಿ ಬಗಲಿಗೆ ಊರಿನ ಮಹಿಳಾ ಕಲ್ಯಾಣ ಇಲಾಖೆ ಸೂಪರ್‌ವೈಸರ್ರು ಸುಶೀಲಮ್ಮೋರು, ಮತ್ತೊಂದು ಕಡೆ ಎಮ್ಮೆಲ್ಲೆ ಮಹಾಂತೇಶಪ್ಪೋರು ಕುಂತಿದ್ರು.  ನೂರಾ ನಾಲ್ಕು ಮುಟ್ಟಿರೋ ಶಾಂತವಕ್ಕ ತನ್ನ ಬಗಲಿಗೆ ಕುಂತೋರಿಗಿಂತಲೂ ನೆಟ್ಟಗೆ ಬೆನ್ನ ಮಾಡಿ ಕುಂತಿದ್ಲು.  ಅವಳು ಉಟ್ಟಿರೋ ಅದೆಷ್ಟೋ ವರ್ಷದಿಂದ ಹಳೇ ಟ್ರಂಕಿನಾಗಿರೋ ಕಂದು ಬಣ್ಣದ ಪಟ್ಟೇ ಸೀರೇ ಇವತ್ತು-ನಿನ್ನೇ ಅಂಗಡಿಯಿಂದ ತಂದ ಹಾಗೆ ಮಡಿಕೇನೂ ಮುರೀದೇ ತನ್ನ ಮೈ ಮೇಲೆ ಗೆರೆಗಳನ್ನ ಹಂಗೇ ಜೋಪಾನವಾಗಿ ಉಳಿಸಿಕೊಂಡಿತ್ತು.

ಊರಿನ ಕಾರ್ಯಕ್ರಮ, ಆದ್ರೆ ಬಂದೋರಿಗೆ ತಿಂಡೀ-ಗಿಂಡೀ ಮಾಡೋರು ಯಾರು? ಅದ್ಯಾವ್ದೋ ಸೊರಬದ ಬೇಕ್ರಿ ಇಂದ ಸುಮಾರು ದೊಡ್ಡ ಕೇಕ್ ತರಸ್ಯಾರಂತ, ಅದು ಬಿಸಲಿಗೆ ಕರಗೀತು ಅಂತ ಇನ್ನೂ ಒಳಗೇ ಇಟ್ಟಿದ್ರು.  ಮೈಕೂ ಪೈಕೂ ಏನೂ ಬ್ಯಾಡ, ಸುಮ್ನೇ ದುಡ್ಡು ಖರ್ಚು ಅಂತ ಹಂಗೇ ಸುತ್ಲೂ ಸೇರಿರೋ ಜನ್ರನ್ನ ಕುರುತು ಮೊದಲಿಗೆ ಸುಶೀಲಮ್ಮೋರು ಮಾತಾಡಿದ್ರು.  ಇವತ್ತಿನ ದಿನಾ ನೂರೇನು ಎಪ್ಪತ್ತು ವರ್ಷ ನೋಡೋ ಮಂದಿ ಭಾಳಾ ಇಲ್ಲ, ಅಂತಾದ್ರಾಗೆ ನಮ್ಮೂರಿನ ಶಾಂತವ್ವಕ್ಕ ನೂರಾ ನಾಕು ಮುಟ್ಟೈತಿ ಅಂದ್ರ ಅದೊಂದು ರಾಜ್ಯದ ವಿದ್ಯಮಾನ ಅಂತ ಭಾಳ ಚೊಲೋ ಭಾಷ್ಣ ಮಾಡಿದ್ರು.  ಅವರ ನಂತ್ರ ಮಹಾಂತೇಶಪ್ಪೋರು ನಾನು ವಿಧಾನ ಸಭೆ ಕಾರ್ಯಕಲಾಪದಾಗ ಈ ಸಂಬಂಧ ಚರ್ಚೇ ಮಾಡ್ಸಿ, ಶಾಂತವಕ್ಕಂಗ ಒಂದ್ ಅವಾರ್ಡ್ ಕೊಡಸ್ತೀನಿ ಅಂತ ಆಶೋತ್ತರ ಮೂಡಿಸಿ ಆಸೆ ತೋರ್ಸಿದ ಕೂಡ್ಲೇ ಅವರ ಚೇಲಾಗಳೆಲ್ಲ ದೊಡ್ಡದಾಗಿ ಚಪ್ಪಾಳೆ ಹೊಡ್ದಿದ್ದು ನೋಡಿ ನಾವೂ ಹೊಡದ್ವಿ.  ಅಮ್ಯಾಲೆ ಶಾಂತವಕ್ಕನ ಮನೆ ಮಂದೀ ಎಲ್ಲ ಬಂದೂ ಅರತೀ ಮಾಡಿದ್ರು.  ಅವರ ಮನೇ ಮಂದೀನೇ ಸುಮಾರು ನೂರು ಜನ ಇದ್ದಂಗಿದ್ರು ನೋಡ್ರಿ.  ಎಲ್ಲ ಮಕ್ಳೂ, ಮೊಮ್ಮಕ್ಳು, ಮರಿಮಕ್ಳು, ಗಿರಿಮಕ್ಳು ಇವರ್ದ್ರೆಲ್ಲಾ ಲೆಕ್ಕಾ ಹಾಕ್ಕೊಂಡಿರೋರು ಯಾರು? ಕುದ್ದು ಶಾಂತವಕ್ಕಂಗೇ ಇವರೆಲ್ಲ ನೆನಪಿದಾರೋ ಇಲ್ವೋ!  ಶಾಂತವ್ವಕ್ಕಾ ನೀನೂ ಒಂದಿಷ್ಟು ಮಾತಾಡು ಅಂದ್ರು.  "ನನ್ದೇನೂ ಬ್ಯಾಡಾ, ಎಲ್ಲಾ ಚೆನ್ನಾಗಿರ್ರಿ!" ಅಂತ ಅದ್ರಾಗೂ ಬಿನ್ನಾಣ ತೋರಿಸ್ತು ಮುದುಕಿ.

ಇನ್ನೇನು ಕೇಕ್ ಕಟ್ ಮಾಡೋಣ ಅಂತ ಎಲ್ರೂ ಅಂದ್ರೂ.  ಅಷ್ಟ್ರೊಳಗ ಶಾಂತವಕ್ಕನ ಅಮೇರಿಕದಿಂದ ಬಂದ ಗಿರಿಮಗಳು ಮೋಹಿನಿ, ಅದೇನೋ ಇಂಗ್ಲೀಷ್ನಾಗೆ ಅಂದ್ಲು, ಅದರ ಪ್ರಕಾರ ಶಾಂತವಕ್ಕನ್ನೂ ಒತ್ತಾಯ ಮಾಡಿ ಸ್ವಲ್ಪ ಮಾತಾಡಕ್ ಬಿಟ್ರು ನೋಡ್ರಿ.  ಶಾಂತವಕ್ಕ ಹೆಚ್ಗೆ ಏನೂ ಹೇಳ್ಲಿಲ್ಲ,  "ಎಲ್ರೂ ಸುಖವಾಗಿರ್ರಿ, ಜಗಳಾಪಗಳಾ ಮಾಡಬೇಡ್ರಿ.  ಮನಸು ಚೆನ್ನಾಗಿದ್ರೆ ದೇಹ ಚೆನ್ನಾಗಿರ್ತತಿ.  ವ್ಯಾಯಾಮಾ ಪಾಯಾಮಾ ಎನೂ ಬ್ಯಾಡ, ನೀವ್ ಏನ್ ತಿಂತೀರಿ, ಎಷ್ಟು ತಿಂತೀರಿ ಮತ್ತ ಯಾವಾಗ ತಿಂತೀರಿ ಅನ್ನೋದರ ಬಗ್ಗೆ ನಿಗಾ ಇರ್ಲಿ" ಅಂದ್ಲು.  ಎಲ್ರೂ ಮತ್ತೆ ದೊಡ್ಡ ಚಪ್ಪಾಳೆ ಹೊಡೆದ್ರು.  ಮೋಹಿನಿ ತನ್ನ ಅಮ್ಮನ ಹತ್ರ ಅದೇನೋ ಇಂಗ್ಲೀಷಿನಾಗೆ ಅಂದ್ಲು.  ಅದನ್ನ ಅವರಮ್ಮ ತರ್ಜುಮೆ ಮಾಡಿ -"ಶಾಂತವಕ್ಕ, ನಿನ್ನ್ ಜೀವನದಾಗೆ ಇದೂವರೆಗೆ ಕಂಡಿರೋ ಮಹಾ ಅವಿಷ್ಕಾರ ಅಂದ್ರೆ ಯಾವ್ದು?" ಅಂತ ದೊಡ್ಡದಾಗಿ ಕೇಳಿದ್ರು.  ಅವರು ಹೇಳೋದನ್ನ ಮೋಹಿನಿ ತನ್ನ ಬಂಗಾರ ಬಣ್ಣದ ಐಫೋನಿನ್ಯಾಗೆ ರೆಕಾರ್ಡ್ ಮಾಡಿಕೊಂತಿದ್ಲು.

ಶಾಂತವಕ್ಕ ಒಂದ್ ಸರ್ತಿ "ಹ್ಞೂ..." ಅಂತ ದೊಡ್ಡದಾಗಿ ಉಸಿರು ಎಳಕೊಂಡು ಒಂದು ಹತ್ತು ಸೆಕೆಂಡು ಯೋಚ್ನೇ ಮಾಡಿದ್ಲು.  ನಾವೆಲ್ಲ ಕಂಪ್ಯೂಟರ್ರೋ, ಫೋನೋ, ಸಿನಿಮಾನೋ, ಮೋಟಾರೋ-ರೈಲೋ ಅಂತಾಳೆ ಅಂದುಕೊಂಡು ಖಾತರದಿಂದ ನೋಡ್ತಾ ಇದ್ವಿ.  ಮೋಹಿನಿನೂ ತನಗೆ ಕನ್ನಡ ಬರುತ್ತೆ ಅಂತ ತೋರಿಸ್ ಬೇಕು ಅಂತ "ನನ್ ಕಡೇ ನೋಡು..., ಹೇಳಜ್ಜಿ ಹೇಳು..." ಅಂತಾ ಜೋಗಕ್ಕೆ ಬರೋ ಬಿಳಿ ಟೂರಿಸ್ಟ್‌ಗಳ ಧ್ವನಿಯಲ್ಲಿ ದೊಂಬಾಲು ಹಾಕಿದ್ಲು.  ಶಾಂತವಕ್ಕ ಒಂಥರಾ ಟಿವಿ ನೈನಿನ ರಿಪೋರ್ಟರುಗಳು ಕ್ಯಾಮೆರಾ ನೋಡಿಕೊಂಡೇ ಮಾತಾಡ್ತಾವಲ್ಲ ಹಂಗೆ ಕ್ಯಾಮೆರಾನ ದಿಟ್ಟಿಸಿ ನೋಡಿ, "ನಮ್ಮೂರಿಗೆ...     ಕರೆಂಟ್ ಬಂತು ನೋಡ್ರಿ, ಎಲ್ಲಕ್ಕಿಂತ ಅದೇ ದೊಡ್ದು!  ಅದ್ಯಾವ ಪುಣ್ಯಾತ್ಮ ಕರೆಂಟ್ ಕಂಡ್ ಹಿಡಿದ್ನೋ ಅದೇ ದೊಡ್ಡ ವಿಷ್ಯಾ, ಕರೆಂಟ್ ಇಲ್ಲಾ ಅಂತಂದ್ರೆ ನಿಮ್ಮ ಆಟ ಏನೂ ನಡೆಯಂಗಿಲ್ಲ!" ಅಂದು ಬಿಡ್ತು.

ತನ್ನ್ ಐಫೋನೇ ದೊಡ್ಡು ಅಂತ ಅಂದಕಂಡಿದ್ದ ಮೋಹಿನಿ ಮುಖಾ ಸಪ್ಪಗಾಯ್ತು.  ಎಮ್ಮೆಲ್ಲೆ ಸಾಹೇಬ್ರು ಮುಖದ ಮ್ಯಾಲೆ ಇದುವರೆಗೆ ತೇಲಾಡ್ತಿದ್ದ ತೆಳು ನಗೆ ಒಂದು ಕ್ಷಣಾ ನಿಲ್ತು.  ಸೇರಿದ್ದ ಜನ ಭೂತ ನೋಡಿದ್ರೇನೋ ಅನ್ನೋ ಹಂಗೆ ಒಂಥರಾ ಸ್ತಂಭೀಭೂತರಾದ್ರು.  ಇಷ್ಟರಾಗೆ ಸುಧಾರಿಸಿಕೊಂಡ ಸುಶೀಲಮ್ಮ ಚಪ್ಪಾಳೆ ಹೊಡ್ದು, "ಭಾಳಾ ಸತ್ಯವಾದ ಮಾತು..., ಸತ್ಯವಾದ ಮಾತು" ಅಂದು, ಮುಂದೆ "...ಕೇಕ್ ಕಟ್ ಮಾಡ್ರಿ?..." ಅಂತ ಆದೇಶ ಕೊಟ್ರು.  ಈ ಜನಗಳ ಈ ಪ್ರತಿಕ್ರಿಯೆಯನ್ನ ನಿರೀಕ್ಷೆ ಮಾಡಿರದ ಶಾಂತವಕ್ಕ ತನ್ನ ಮನಸ್ಸಿನೊಳಗೇ - "ಇವೆಲ್ಲ ನಿಮಗೆ ಈ ಜನಮದಾಗ ತಿಳಿಯಂಗಿಲ್ಲ ಬಿಡ್ರಿ" ಅಂದುಕೊಂಡ ಹಂಗಾಯ್ತು.

***
ಈ ಲೇಖನ ಏಪ್ರಿಲ್ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.

Sunday, April 03, 2016

...ಸಂಡಾಸ್ ರೂಮ್ ನೋಡೀರೇನು?

ನಾವು ದೋಡ್ಡೋರ್ ಆದ ಮ್ಯಾಲೆ ನಮ್ಮನಿ ಚಿಕ್ಕ್ ಮಕ್ಕಳಿಗೆ "ಹಂಗ್ ಮ್ಯಾಡಬ್ಯಾಡs", "ಹಿಂಗ್ ಮಾಡ್‌ಬ್ಯಾಡಾs" ಅಂತ ಭಾರೀ ಉಪದೇಶ ಏನೋ ಮಾಡ್ತೀವಿ.  ಆದ್ರ, ನಾವು ಚಿಕ್ಕೋರಾಗಿದ್ದಾಗ ಮಾಡಿದ ಚ್ಯಾಷ್ಟೇ-ಕುಚೇಷ್ಟೇಗಳಿಗೆ ಲೆಕ್ಕ ಇಟ್ಟೋರಾರು ಅಂತ ಒಂದ್ ಸರ್ತೀನಾರ್ದೂ ಯೋಚ್ನೇ ಮಾಡೇವೇನು?

"ಹಂಗ್ ಮಾಡಬ್ಯಾಡೋ ತಮ್ಮಾ..." ಅಂತ ನಮ್ಮನಿ ಮಕ್ಕಳಿಗೆ ಈಗ ಹೇಳೋದೇನೋ ಭಾಳ ಐತ್ರಿ, ಆದ್ರ ನಾವ್ ಆಗಿನ್ ಕಾಲದಾಗ ಮಾಡಿದ್ದು ಒಂದೊಂದ್ ಅಲ್ಲ, ಅವನ್ನೆಲ್ಲ ನೆನೆಸಿಕೊಂಡ್ರೆ ಈಗ್ಲೂ ನಗೂ ಬರ್ತತ್ ನೋಡ್ರಿ.
ನಮ್ ಪಾಳ್ಯಾದೊಳಗ ಗಿರಿ ನಮ್ ಲೀಡರ್ರು. ಅವನ ಹಿಂಬಾಲಕರಾಗಿ ನಾವು ನಾಲ್ಕು ಮಂದಿ: ಸುನೀಲ, ರಮೇಶ, ಸುರೇಶ ಮತ್ತ ಹಸುವಿನ ಪ್ರತಿರೂಪ ಅನ್ನೋ ಹಂಗs ನಾನೂ, ಒಂಥರ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾರಲ್ಲ ಹಂಗs.  ಗಿರಿ ಆಗಿನ ಕಾಲದ ಬ್ರೇಕ್ ಥ್ರೂ ಮನುಷ್ಯಾ ರೀ.  ಬ್ರೇಕ್ ಥ್ರೂ ಅಂದ್ರ ಬ್ರೇಕೂ ಹೌದು ಥ್ರೂ ನೂ ಹೌದು!  ಅವನ್ದೆಲ್ಲಾ ಕಪಿಚೇಷ್ಟೆಗಿಂತ ಅದರ ಅಪ್ಪನ್ನದ್ದು ಅಂತಾರಲ್ಲ ಹಂಗs.  ಅವನ ಚೇಷ್ಟಿ ಒಳಗ ಕೆಲವೊಂದಿಷ್ಟು ಫಸ್ಟ್ ಕ್ಲಾಸು, ಇನ್ನು ಕೆಲವೊಂದು ಥರ್ಡ್ ಕ್ಲಾಸು.  ಮಂಗ್ಯಾನಂಗ್ ಆಡಬ್ಯಾಡ ಅಂಥಾ ನೀವ್ ಏನ್ ಕರೀತಿರಿ ಅವೆಲ್ಲ ಫಸ್ಟ್ ಕ್ಲಾಸು, ಅವನ ಚೇಷ್ಟೀ ಇಂದ ಯಾವನಾರಾs ಅಳಂಗ್ ಆದ್ರೆ, ಅದು ಥರ್ಡ್ ಕ್ಲಾಸು.  ಇನ್ನು ನಾವಂತೂ ಎಂದೂ ಸೆಕೆಂಡ್ ಕ್ಲಾಸ್ ಚೇಷ್ಟೇ ಅಂದ್ರ ಏನು ಅಂತ ಯಾವತ್ತೂ ಯಾರ್‌ನೂ ಕೇಳಿದ್ದಿಲ್ಲ!

ಗಿರಿ ಮತ್ತು ಅವನ ಗ್ಯಾಂಗಿನ ಕುತಂತ್ರಗಳಿಗೆ ಬಲಿ ಬೀಳದ ನಮ್ಮೂರಿನಾಗ ಜನರೇ ಇಲ್ಲ ಅನ್ನಬಕು. ನೀವು ನಮ್ ಬಂಡ್ ಭಾಳ್ವಿಗಿ ಸಾಕ್ಷಿ ಆಗಿಲ್ಲ ಅಂದ್ರs ಒಂಥರಾ ನಮ್ಮೂರಿನ ಸಿಟಿಜನ್‌ಶಿಪ್ ಪರೀಕ್ಷಾದಾಗ ಫೇಲ್ ಆದಂಗ್ ನೋಡ್ರಿ!  ಒಂದ್ ಊರು ಅಂದ್ರ ಎಲ್ಲಾ ಥರದ ಮಂದಿ ಇರ್ತಾರ, ಆದ್ರ ನಮ್ ಗಿರಿ ಅಂಥಾ ಮನ್ಶ್ಯಾರು ಬಾಳ್ ಮಂದಿ ಇದ್ದಂಗಿಲ್ಲ ಅನ್ನೋದು ನಮ್ ಅಂಬೋಣ.

ನಿಮಗೂ ನಮ್ಮ ತಂಡಕ್ಕೂ ಯಾವತ್ತಾದ್ರೂ ಮುನಿಸಾತು ಅಂದ್ರ, ನಿಮ್ಮ ಮನ್ಯಾಗ ಸೈಕಲ್ಲೋ ಲೂನಾನೋ ಟಿವಿಎಸ್ಸೋ ಇದ್ರs, ಅದ್ರ ಚಕ್ರದಾಗಿನ ಹವಾ ಟುಸ್ಸ್ ಅಂದಂಗs ಅಂಥ ತಿಳಕೊಳ್ರಿ.  ಅದ್ಯಾವ ಮಾಯದಾಗ ಗಿರಿ ಬರ್ತಿದ್ನೋ... ನಿಮ್ಮನಿ ಮುಂದ ನಿಲ್ಸಿರೋ ಟೂ ವ್ಹೀಲರಿನ ಹವಾ ಇದ್ದಕ್ಕಿದ್ದಂಗ ನಾಪತ್ತೆ ನೋಡ್ರಿ!  ಈ ಟೂ ವ್ಹೀಲರ್ ಹವಾ ಕಳೆದುಕೊಂಡ ಮ್ಯಾಲೆ ಅದನ್ನ ತಳ್ಳೋದು ಎಷ್ಟು ಕಷ್ಟ ಅಂಥ ನಿಮಗ ಗೊತ್ತಿರಲಿಕ್ಕಿಲ್ಲ, ಯಾವತ್ತರ ಟ್ರೈ ಮಾಡಿ ನೋಡ್ರಿ.  ಹವಾ ಕಳಕೊಂಡ ಅದರ ಟ್ಯೂಬಿನೊಳಗೆ ವಾಷರ್ ಒಡೆದು ಹೋಗಿರೋ ಸೈಕಲ್ ಪಂಪ್ ಬಳಸಿ, ಪೆಚ್ಚ್ ಮೋರೇ ಹಾಕ್ಕೊಂಡು, ಹವಾ ತುಂಬೋದು ಅಂದ್ರs ಅದರ ಪಜೀತಿ ಯಾವ ವೈರಿಗೂ ಬ್ಯಾಡ.  ಹವಾ ಹೊಡ್ದೂ ಹೊಡ್ದೂ ಕೈ ಮೈ ನೋವ್ ಬಂದಂಗs.
ಯಾರ್ದಾರೂ ಮನಿ ಹಿತ್ಲಾಗ ಬಾಳೆ ಗೊನಿ ಇನ್ನೇನು ಕಟಾವಿಗೆ ಬಂತೂ ಅಂದ್ರ, ಅದು ಅದರ ಹಿಂದಿನ್ ದಿನಾ ಅದು ಮಂಗ್ ಮಾಯಾ ನೋಡ್ರಿ! ನಮ್ ಗಿರಿ ಹತ್ರ ಯಾರ್ ಹಿತ್ಲಾಗ್ ಯಾವ್ ಫಲ ಎಷ್ಟು ದಿನದಾಗ ಕಟಾವಿಗೆ ಬರ್ತತಿ ಅನ್ನೋದರ ಮಾಹಿತಿ ಭಾಳ್ ಛೊಲೋ ಇತ್ ನೋಡ್ರಿ. ಅವನ ತಲೀ ಒಡೋದೇ ಹಂಗs.  ಮಾವಿನ್ ತೋಪ್‌ನ್ಯಾಗೆ ಕಾಯೋರು ನಮ್ಮನ್ನ ನೋಡ್ರಿದ್ರೆ ದೇವ್ರು ಬಂದೋರಂಗ ಆಡೋರು!  ಎಲ್ಲಾರೂ ಗುರಿ ಇಟ್ಟ್ ಕಲ್ ಹೋಡ್ದು ಒಂದು ಫಲ ಉದುರಿಸಿದ್ರೆ, ನಮ್ಮ್ ತಂಡ ಇಡೀ ಮರಾನೇ ಖಾಲೀ ಮಾಡೋದು... ಮರಾ ಒಂದೇ ಅಲ್ಲ್ ಇರ್ತಿತ್ತು, ಯಾಕಂದ್ರ ಮತ್ತ್ ಮುಂದಿನ ವರ್ಷಕ್ಕ್ ಬೇಕ್ ಅಲ?
ಅಷ್ಟೂ ಮಾಡಿ ನಮಗೆಲ್ಲಾ ಅವಾಗ ಛಾಟೀ ಬಿಲ್ಲಿನ ಹುಚ್ಚು ರೀ.  ಅದರೊಳಗ ಪರಿಣಿತ ಅಂದ್ರ ನಮ್ ಗಿರಿ.  ಅವನ ಗುರಿ ಭಾಳಾ ನಿಖರ.  ನಮ್ ಶಾಲೀ ಕಟ್ಟೀ ಮುಂದ ಧ್ವಜಾ ಹಾರ್ಸೋ ಕಂಬಕ್ಕ ಸುಮಾರು ಐವತ್ತ್ ಏನು, ನೂರ್ ಅಡೀ ದೂರ್ದಿಂದ ಗುರಿ ಇಡೋನ್ ರೀ. ಅದು ಒಂದಿನಾನು ತಪ್ಪಿದ್ದು ನಾ ನೋಡಿಲ್ಲ.  ಅಷ್ಟೂ ಮಾಡಿ ನಿಮಗ ಏನಾರಾ ಗಿರಿ ಕಂಡ್ರ ಆಗಂಗಿಲ್ಲ ಅಂದ್ರ, ನಿಮಗೂ ಛಾಟೀ ಬಿಲ್ಲಿನ ಕಲ್ಲಿನ ಏಟು ಕುಂಡೀ ಮ್ಯಾಲ ಬಿತ್ತೂ ಅಂತಾನs ಲೆಕ್ಕ.

ಎಲ್ರೂ ಊಟಕ್ಕೆ ಕುತ್ವಿ ಅಂದ್ರ ಇವ ನಿಂತೇ ಇರ್ತೀನಿ ಅನ್ನೋವ.  ಅವನೇನಾರ ಲಿಂಬಿ ಹಣ್ಣು, ಟೊಮೇಟೋ, ಮುಸಂಬಿ ಹಣ್ಣು ತಿಂತಾನೇ ಅಂದ್ರ ಅವನ ಅಕ್ಕಾ-ಪಕ್ಕಾ ಯಾರೂ ಇರಂಗಿಲ್ಲ ನೋಡ್ರಿ.  ಅವರ ಪಾಡು ದೇವ್ರಿಗೆ ಪ್ರೀತಿ.  ಅವರ ಕಣ್ಣಿನಾಗೆ ಗ್ಯಾರಂಟಿ ಲಿಂಬೀ ಹಣ್ಣಿನ್ ರಸಾ ಬೀಳೋದೆ.  ಈ ಹಣ್ಣಿನ್ ರಸಾ ಎಲ್ಲಾ ಕಡೆ ಒಸರೋ ಹಂಗ, ಹಣ್ಣನ್ನ ಹಿಚುಕಿ-ಹಿಚುಕಿ ಎಲ್ಲಾ ರಸಾ ಮಾಡ್‌ಕ್ಯಂಡ್ ಒಂದ್ ಕಡೆ ತೂತ್ ಮಾಡಿ ಅದನ್ನ ತನ್ನ ಗುರಿಗೆ ಹಿಡಿದು ಮುಖ ಮಾಡಿ ತಿನ್ನೋದರಲ್ಲಿ ನಮ್ ಗಿರಿ ನಿಸ್ಸೀಮ ರೀ.

ಯಾರ್ದಾರ ಮದ್ವೀ ನಡದ್ರ ನಮಗ್ಯಾರೂ ಬರ್ರೀ ಅಂತ ಕರೀದಿದ್ರೂ ನಾವಾs ಹೋಗ್ತಿದ್ವಿ.  ನಮ್ಮೂರಿನಾಗೆ ಮದ್ವಿ ಮುಂಜೀ ಅಂದ್ರ ಒಂಥರ ನಮ್ಮೂರಿನ ಹಬ್ಬಗಳು ಇದ್ದಂಗ, ಅದಕ್ಯಾರು ಬರಬ್ಯಾಡಾ ಹೋಗಬ್ಯಾಡ ಅನ್ನೋರು?  ಅಲ್ಲಿ ವಾಲಗಾ ಊದೋರ ಮುಂದ ನಾವು ಎಳೇ ಹುಣಸೀ ಕಾಯಿ ತಿಂತಿದ್ವಿ, ಅವರು ನಮ್ಮುನ್ನ ಓಡಿಸಿಕ್ಯಂಡ್ ಬರೋರು.  ಹಿಂಗs, ನಮ್ ಮಜಾ ನಡೀತಿತ್ತ್ ನೋಡ್ರಿ.

ಮದ್ವಿ ಅಂದ ಮ್ಯಾಲ ನೆನಪಾತು. ನಮ್ಮೂರಿನ ನಡುಮನಿ ಈರಪ್ಪನ ಮಗಳ ಮದವ್ಯಾಗ ನಮ್ ಗಿರಿ ಮಾಡಿದ ಪರಾಕ್ರಮ ನೆನಸಿಕೊಂಡ್ ಇವತ್ತಿಗೂ ನಗು ಬರ್ತತಿ ನೋಡ್ರಿ.  ನಡುಮನಿ ಈರಪ್ಪ ಅಂಥ ಸಾವ್ಕಾರ ಏನಲ್ಲ, ಆದ್ರೂ ಇದ್ದೊಬ್ಬ ಮಗಳ ಲಗ್ನಾನ ಅಚ್ಚುಕಟ್ಟಾಗಿ ಮಾಡಬಕು ಅಂತ ಮನಿ ಮುಂದ ಬ್ಯಾಡ,
ಊರಿನ ಛತ್ರದಾಗ ಇಟ್ಟುಗೊಣೂನು ಅಂತ, ಅಲ್ಲೇ ಎಲ್ಲಾ ಫಿಕ್ಸ್ ಮಾಡಿದ್ದ ರೀ.  ಹಿರೇಕೇರೂರು ಸಂಬಂಧ, ಅಂಥಾ ದೂರೇನೂ ಇಲ್ಲ, ಆದ್ರ ಮುಂಜಾನೆ ಬೇಗ ಲಗ್ನ ಮಹೂರ್ತ ಐತಿ ಅಂತ ಎಲ್ರೂ ಹಿಂದಿನ್ ದಿನಾನೇ ಬಂದು ಚೌಳ್ಟ್ರಿ ಸೇರಿಕೊಂಡಿದ್ರು ರೀ.  ನಾವು ನಮ್ಮ ತಂಡದ ಸಮೇತ ಈ ಅತಿಥಿಗಳನ್ನ ಮುಗುಳ್ನಕ್ಕು ಬರಮಾಡಿಕೊಂಡಿದ್ವಿ.  ಯಾರು, ಹೆಂಗಾs ಅಂಥ ಗೊತ್ತಾಗಬೇಕಲ? ಅದಕ್ಕಾ.  ರಾತ್ರೀ ಎಲ್ಲಾರು ಸೇರಿ ಸಮಾ ಹರಟಿ ಹೊಡದ್ವಿ...ಅದು ಯಾವಾಗ ಮಲಗಿದ್ವೋ ಅದು ಯಾವನಿಗ್ ಗೊತ್ತು!

ಮರುದಿನ, ಮುಂಜಾನೆ ಒಂಭತ್ತ್ ಘಂಟಿ ಅಭಿಜಿನ್ ಮಹೂರ್ತ ಅಂಥಾ ಕಾಣ್ತತಿ.  ಮದ್ವೀ ಮನಿ ಅಂದ್ರ ಗಡಿಬಿಡಿ, ಗಿಜಿಬಿಜಿ ಇದ್ದದ್ದ.  ಎಲ್ರೂ ಹೊಸ ಬಟ್ಟಿ ಹಾಕ್ಕೊಂಡಾರ.  ಎಲ್ಲಾ ಕಡಿ ಹೂ ಹಣ್ಣು ಕಾಣ್ಸಕ್ ಹತ್ಯಾವ. ಆದ್ರ ಒಂದಾs ಒಂದ್ ಪ್ರಾಬ್ಲಮ್ಮ್ ರೀ.
ಸುಮಾರು ಎಂಟೂವರಿಯಿಂದ ಎಲ್ಲ್ ಹುಡುಕಿದ್ರೂ ಮದುವೀ ಗಂಡಾ ಕಾಣಸಂಗಿಲ್ಲ!  ಕೆಲವೊಂದಿಷ್ಟು ಮಂದಿ ಹುಡುಗಾ ಓಡಿ-ಗೀಡಿ ಹೋಗ್ಯಾನೇನೋ ಅಂತ ಸಂಶಯಾ ವ್ಯಕ್ತಪಡಿಸಿದ್ರು.  ಕೆಲವೊಂದಿಷ್ಟು ಮಂದಿ ಹುಡುಗನ್ ಅಪ್ಪ-ಅಮ್ಮನಿಗಿ ಜೋರ್ ಮಾಡಕ್ ಹಿಡುದ್ರು.  ಒಂದಿಷ್ಟು ಹೆಣ್ ಮಕ್ಳು ಒಂದ್ ಕಡಿ ಅಳಾಕ್ ಹತ್ಯಾವ!  ಒಂಥರಾ ಕಿಲಕಿಲಾ ಅಂಥ ನಕ್ಕೊಂಡಿದ್ ಛತ್ರ ಹೊಟ್ಟಿ ಬ್ಯಾನಿ ಬಂದ್ ರೋಧ್ನ ಮಾಡೋ ಮಗೂ ಹಂಗ ಅಳಾಕ್ ಹತ್ತೈತಿ! ಯಾರೂ ಪೋಲೀಸ್-ಗಿಲೀಸ್ ಅಂದಂಗಿದ್ದಿಲ್ಲ.  ನಡುಮನಿ ಈರಪ್ಪನ ಮರ್ಯಾದೆ ಪ್ರಶ್ನೆ ನೋಡ್ರಿ.  ಅವ ಏನ್ ಮಾಡ್ತಾನ? ಅತ್ಲಾಗಿಂದ್ ಇತ್ಲಾಗ, ಇತ್ಲಾಗಿಂದ್ ಅತ್ಲಾಗ್ ಒಂಥರಾ ಬೋನ್‌ನಾಗಿರೋ ಹುಲೀ ಮರೀ ಮಾಡ್ದಂಗ ಒಡಾಡ್‌ಕೊಂಡ್ ಬುಸುಗುಡಾಕ್ ಹತ್ತಿದ್ದ.  ವಾಲಗದೋರ್ ಅವರ ಕೆಲ್ಸಾ ನಡ್ಸ್ಯಾರ.  ಮೈಕ್ ಸೆಟ್ ರುದ್ರ, ಅದ್ಯಾವ್ದೋ ಬಭ್ರುವಾಹನ ಸಿನಿಮಾ ಹಾಡ್ ಜೋರಾಗ್ ಹಾಕ್ಯಾನ.  ಭೋಜನಶಾಲೆ ಅಡಿಗಿ ಮನೀ ಒಳಗಿಂದ ಶಾವ್ಗೀ ಪಾಯ್ಸದ ವಾಸ್ನಿ ಗಮ್ಮ್ ಅನ್ನಾಕ್ ಹತ್ತಿತ್ತು.  ಒಂದಿಷ್ಟು ಮಂದೀ ನಮಗೇನೂ ಗೊತ್ತೇ ಇಲ್ಲ ಅನ್ನೋ ಹಂಗ ಮದ್ವೀ ಮಂಟಪದ ಮುಂದ ಜಮಖಾನದ ಮ್ಯಾಲೆ ಕುಂತೂ ಹರಟೀ ಹೊಡ್ಯೋದ್ರಾಗ ತಲ್ಲೀನ ಆಗಿದ್ರು.  ಕೆಲವು ಕಡೆ ಒಂಥರ ಕುಮುಟು ಬೆವ್ರು ವಾಸ್ನಿ ಬೇರೆ!

ಇನ್ನೇನು ಲಗ್ನದ ಮಹೂರ್ತ ಬಂತು, ಹತ್ರಾ ಬಂದೇ ಬಿಡ್ತು, ಆದ್ರೂ ಎಲ್ಲಿ ನೋಡ್ರಿದ್ರೂ ಮದ್ವಿ ಗಂಡಿನ ಸುಳಿವೇ ಇಲ್ಲ!  ಹುಡುಗನ ಅಪ್ಪಾ ಅಮ್ಮಾ ಕಂಗಾಲು.  ಜೋಬ್ನಾಗೆ ಹತ್ತ್ ಪೈಸಾ ಇರದಿದ್ರು ನಮ್ಮ್ ಮಂದಿ ಮರ್ಯಾದೆಗೆ ಹೆದ್ರೋ ಜನಾ ನೋಡ್ರಿ.  ಅಷ್ಟೊತ್ತಿಗ್ ಆಗ್ಲೆ ಅವರ ಮುಖಾ ಕಪ್ಪ್ ಹಿಡದ ಕರಟಾ ಆಗಿತ್ತು.  ಹುಡುಗನ್ ಕಡಿ ಬಾಳ ಮಂದಿ ಇದ್ದಂಗಿರ್ಲಿಲ್ಲಾ ಆದ್ರೂ ಪಾಪ ಅವರಿಗೆ ಊರ್ ಹೊಸತು, ಏನ್ ಮಾಡ್ತಾರ, ಏನ್ ಬಿಡ್ತಾರ?

ನಮ್ ತಂಡ ಅಲ್ಲೇ ಇತ್ತು, ನಾವೂ ಹಂಗಾ ಚ್ಯಾಷ್ಟೀ ಮಾಡ್‌ಕೊಂಡು ಹಾಡ್ ಕೇಳ್ತಾ ನಿಂತಿದ್ವಿ.  ಅಷ್ಟ್ರಾಗ ಯಾರೋ ಒಬ್ರು "ಹೇ, ಗಿರಿ, ಸಾಯಾ ಮಾಡ್ರಪ್ಪಾ, ವರಾ ಎಲ್ಲೂ ಕಾಣಸ್ತಾನೇ ಇಲ್ಲ, ಮದ್ವೀ ನಿಂತ್ ಹೋಗೋ ಪರಿಸ್ಥಿತಿ ಬಂದೈತಿ!" ಅಂದ್ರು.  ನಮ್ ಗಿರಿ ಇದ್ದೋನು, "ಅಲ್ರೀ, ಎಲ್ಲಾ ಕಡೆ ನೋಡೀರೇನು? ಅತ್ಲಾಗ್ ಸಂಡಾಸ್ ರೂಮ್ ನೋಡೀರೇನು?" ಅಂದ.
"ಬಚ್ಚಲ್ ಮನಿ ನೋಡ್ರಿ, ಬಚ್ಚಲ್ ಮನಿ ನೋಡ್ರಿ" ಅಂತ ಯಾರ್ ಯಾರೋ ಕೂಗಿದ್ರು, ಕೊನೀಗ್ ನೋಡಿದ್ರ ಹೊಟ್ ಬ್ಯಾನೀನೋ, ಏನ್ ಕರ್ಮಾನೋ ಅಂದಂಗ ಮದ್ವಿ ಗಂಡ್ ಸಂಡಾಸ್ ರೂಮ್‌ನಾಗೆ ಬಾಗ್ಲ್ ಹಾಕ್ಕೊಂಡು ಕುಂತಾನಾ!  ಯಾರೂ ನೋಡೇ ಇಲ್ಲ!  ಕೊನೀಗೂ ಸಿಕ್ಕಿದಾ ಅಂತ ಎರ್ಲೂ ಸಮಾಧಾನ್ ಮಾಡ್‌ಕೊಂಡು ಅವನ್ನ ಎಷ್ಟು ಲಗೂನಾ ಅತೋ ಅಷ್ಟು ಲಗೂ ಕರ್ಕೊಂಡ್ ಬಂದ್, ಕೊನೀಗೆ ಮಹೂರ್ತ ಮೀರೋದ್ರೊಳಗ ತಾಳೀನೂ ಕಟ್ಸ್ ಬಿಟ್ರು ನೋಡ್ರಿ.  ಎಲ್ರೂ ಸಮಾಧಾನ ಪಟ್ರು, ನಡುಮನಿ ಕುಟುಂಬ ಒಂದ್ ದೀಡ್ ಕಡ್ದು ಹಾಕಿದ ಕೆಲ್ಸ ಮಾಡ್ದಂಗ್ ನಿಟ್ಟುಸಿರು ಬಿಡ್ತು.  ಈರಪ್ಪ ಅದ್ಯಾವ್ ದೇವ್ರಿಗೆ ಅದೇನೇನ್ ಹರಿಕಿ ಹೊತ್ತಾ ಅಂತಾ ಕೇಳಬಕು, ಆ ಸ್ಥಿತಿ!

ಅಷ್ಟೂ ಮಾಡಿ, ಮದ್ವಿ ಗಂಡು ಯಾಕ್ ಅಲ್ಲಿ ಹೊಕ್ಕೊಂಡು ಕುಂತಿದ್ದ ಅಂತ ಯಾರೋ ಕೇಳ್ಲಿಲ್ಲ, ಯಾರೂ ಹೇಳ್ಲಿಲ್ಲ! ನಮಗೊಂದಿಷ್ಟು ಮಂದಿಗೆ ಮಾತ್ರ ಗಿರಿ ಹೇಳಿದ ಮ್ಯಾಲೆ ಗೊತ್ತಾತು: ಮದ್ವಿ ಗಂಡು ಎಂಟ್ ಘಂಟಿ ಅಷ್ಟೊತ್ತಿಗೆ ಸಂಡಾಸ್ ರೂಮಿನ್ ಕಡೀಗೆ ಹೋಗೋದನ್ನ ನೋಡಿ, ಗಿರಿ ಅವನ ಫಾಲೋ ಮಾಡಿದ್ನಂತ.  ಆ ಹುಡುಗ, ತನ್ನ ಬಿಳೀ ಪಂಚಿ ಬಿಚ್ಚಿ, ಸಂಡಾಸ್ ರೂಮ್ ಬಾಗ್ಲ್ ಮ್ಯಾಲ ಇಟ್ಟು, ತನ್ನ ಕೆಲ್ಸ ಮುಂದುವರೆಸ್ಯಾನಂತ.  ಅಷ್ಟೊತ್ತಿಗೆ, ಗಿರಿ ಹೋಗಿ ಅವನ ವಸ್ತ್ರ ಅಪಹರಣ ಮಾಡಿ ಮತ್ತೊಂದು ರೂಮಿನಾಗೆ ಇಟ್ಟನಂತ.  ಯಾವ್ದೋ ಊರಿಂದ ಯಾವ್ದೋ ಊರಿಗೆ ಬಂದು, ಸಂಕೋಚದ ಅಪರಾವತರ ಅನ್ನೋ ಹಂಗ್ ಇದ್ದ ಹುಡುಗಾ ಕೂಗೋಕೂ ಆಗ್ದೇ ಹೊರಾಗ್ ಬರೋಕೂ ಅಗ್ದೇ ಅಲ್ಲೇ ಕುಂತಿದ್ನಂತೆ ನೋಡ್ರಿ!

ಇವೆಲ್ಲ ಆಗಿದ್ದು ನಮ್ ಗಿರಿ ಮತ್ತು ಅವರ ತಂಡದ ಕೃಪೆ ಅಂತ ಯಾರಿಗಾದ್ರೂ ಗೊತ್ತಾಗಿದ್ರ ನಮ್ ಪರಿಸ್ತಿತಿ ದಯನೀಯ ಆಗ್ ಹೋಗ್ತಿತ್ತು, ಆ ಸಂಕೋಚದ ಪ್ರವೃತ್ತಿ ಹುಡುಗನ ದೆಸೆಯಿಂದ ನಾವೆಲ್ಲ ಇವತ್ತು ಕೈಕಾಲು ನೆಟ್ಟಗೆ ಇಟಗೊಂಡಿರೋ ಹಂಗಾತು ಅಂತ ನೆನೆದು ಇವತ್ತೂ ನಾವ್ ನಗತೀವ್ ನೋಡ್ರಿ.  ನೀವೇನಾರಾ ನಮ್ಮೂರಿಗೆ ಹೋಗ್ತೀವಂದ್ರ ನಮ್ಮ್ ಗಿರಿ ಕಂಡು ಕುದ್ದ್ ಮಾತಾಕ್ಯಂಬರ್ರಿ, ಅವ ಹಿಂದ್ ಇದ್ದಂಗ್ ಈಗಿಲ್ಲ, ಆದ್ರೂ ಸ್ವಲ್ಪ ಹುಶಾರ್ ಇರ್ರಿ!


***
ಈ ಲೇಖನ ಮಾರ್ಚ್ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.

Friday, October 30, 2015

ಕನ್ನಡಿಗನೊಬ್ಬನ ಪಿರಿಪಿರಿ...

ಅಮೇರಿಕಕ್ಕೆ ಬಂದ ಮೊದಲಲ್ಲಿ ಗೋಪಾಲಕೃಷ್ಣ ಅಡಿಗರ "ಅಳುವ ಕಡಲಲಿ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ" ಹಾಡನ್ನು ಕೇಳಿದಾಗಲೆಲ್ಲ ನನ್ನ ಮನದಲ್ಲಿ ಈ ಕ್ಯಾಪಿಟಲಿಸಮ್ ಅನ್ನೋ ದೊಡ್ಡೋ ಸಮುದ್ರದಲ್ಲಿ ನಮ್ಮತನವೆಂಬ ಚಿಕ್ಕ ಸೋಷಿಯಲಿಸ್ಟ್ ದೋಣಿಯನ್ನು ನಾವು ಹುಟ್ಟು ಹಾಕಿ ಚಲಿಸುತ್ತಿದ್ದೇವೆಯೇನೋ ಎಂಬ ಆಲೋಚನೆಗಳು ಬರುತ್ತಿದ್ದವು.  ನಮ್ಮ ಕನ್ನಡಿಗರ ಪರಂಪರೆಯೇ ಹಾಗೆ, ದೊಡ್ಡವರನ್ನು ಗೌರವಿಸಬೇಕು, ಯಾವತ್ತೂ ನೀನು ಎಷ್ಟು ಚಿಕ್ಕವನೆಂಬುದನ್ನು ಅರಿತುಕೊಂಡಿರು...ಇತ್ಯಾದಿ ಇತ್ಯಾದಿ ಮಾತುಗಳು ನಮ್ಮ ಮನದಾಳದಲ್ಲಿ "ಗೌರವ"ವನ್ನು ಉಲ್ಬಣಿಸುವುದರ ಬದಲು ಕೀಳರಿಮೆಯನ್ನು ಸೃಷ್ಟಿಸುತ್ತಿತ್ತೇನೋ ಎಂದು ಒಮ್ಮೊಮ್ಮೆ ಗಾಭರಿಯಾಗತ್ತದೆ.  ಉದಾಹರಣೆಗೆ ನಾವು ನಂಬಿಕೊಂಡ ಪದ್ಯಗಳನ್ನು ಈ ಕ್ಯಾಪಿಟಲಿಸಮ್ಮಿನ ದರ್ಬಾರಿನಲ್ಲಿ ದಿನನಿತ್ಯವೂ ನಡೆಯುವ ಆಫೀಸಿನ ರಾಜಕೀಯದ ಮುಂದೆ ಅನ್ವಯಿಸುವುದಾದರೂ ಹೇಗೆ?

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೇ
ಬೆಲ್ಲಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ|


ಈ ಮೇಲಿನ ಪದ್ಯವನ್ನು ಫಾಲೋ ಮಾಡುತ್ತಾ ಯಾವ ರೀತಿಯ ರಿಸ್ಕ್ ತೆಗೆದುಕೊಳ್ಳೋದು, ಯಾರನ್ನು ಎದುರು ಹಾಕಿಕೊಳ್ಳೋದು? ಅಥವಾ ಈ ವಚನವನ್ನು ನೋಡಿ:

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮ ದೇವನ ಒಲಿಸುವ ಪರಿ|


ಈ ವಾಕ್ಯಗಳನ್ನು ಫಾಲೋ ಮಾಡಿದ್ರೆ ನಮ್ಮ ಆಫೀಸಿನಲ್ಲಿ ನಿಮಗೆ ಪ್ರೊಮೋಷನ್ ಸಿಕ್ಕ ಹಾಗೇ ಅಂದುಕೊಳ್ಳಿ... ಸುಳ್ಳು ಮತ್ತು ಸತ್ಯದ ನಡುವೆ ತಿhiಣe ಟie ಅನ್ನೋದಿದೆಯಂತೆ ಅದಕ್ಕೆ ಕನ್ನಡದಲ್ಲಿ ಯಾವುದೇ ಪದಗಳು ಇದ್ದ ಹಾಗಿಲ್ಲ.  ಈ ಮೇಲಿನ ಮಾತುಗಳಿಗೆ ತದ್ವಿರುದ್ಧವಾಗೇ ನಮ್ಮ ಕಣ್ಣೆದೆರು ಎಷ್ಟೋ ಘಟನೆಗಳು ಆಫೀಸಿನಲ್ಲಿ ನಡೆಯುತ್ತವೆ.  ಕ್ಯಾಪಿಟಲಿಸಮ್ಮಿನ ಲೀಡರುಗಳು ಎತ್ತರದ ಆಳುಗಳು, ಗಟ್ಟಿಯಾಗಿ ಒದರುವ ಇವರುಗಳು "ನುಡಿದರೆ ಸ್ಪಟಿಕದ ಸಲಾಖೆಯಂತಿರಬೇಕು" ಎಂಬುದನ್ನು ಅಕ್ಷರಶಃ ಅರಿತು ಘಂಟೆ ಹೊಡೆದಂತೆ ಮಾತನಾಡುವವರು.  ಹಿರಿಯರು ಕಿರಿಯರು ಎನ್ನುವ ವಯೋ ಬೇಧಭಾವ ಇರೋದಿಲ್ಲ. ಹಿಡಿದ ಕೆಲಸದಲ್ಲಿ  ಕ್ವಾರ್ಟರ್ ಅಥವಾ ಅರ್ಧ ವರ್ಷ ಆದ ಮೇಲೆ ರಿಸಲ್ಟ್ ಅನ್ನು ತಂದು ತೋರಿಸಿಯೇ ಬಿಡುತ್ತಾರೆ.  ಯಾವುದೇ No ಅನ್ನುವ ಪದವನ್ನು ಸಹಿಸದವರು.  ಸದಾ ಕರ್ಮಠ ಸ್ವಭಾವದವರು.  ಅವರಿಂದ ಇವರಿಂದ ಕೆಲಸ ತೆಗೆಯುವವರು.  ರಾಜಕಾರಣಿಗಳು.  ಅಗತ್ಯ ಬಂದಾಗ ಗುಡುಗುವವರು ಮತ್ತು ನಿರ್ದಾಕ್ಷಿಣ್ಯವಾಗಿ ಹಿಂದೇಟನ್ನು ಹಾಕದೆ, "oh, it was a tough decision to make" ಎಂದು ನೂರಾರು ಕೆಲಸಗಾರರನ್ನು ಒಂದೇ ದಿನದಲ್ಲಿ ಮನೆಗಟ್ಟುವವರು, ಇತ್ಯಾದಿ, ಇತ್ಯಾದಿ.  "ನೀವು ಇಷ್ಟು ವರ್ಷ ಮಾಡಿದ್ದನ್ನ ಬಿಡಿ, ನಿಮ್ಮಿಂದ ಇನ್ನು ಮುಂದೆ ಏನೇನು ಮಾಡೋಕಾಗ್ತದೆ ಅನ್ನೋದನ್ನು ಒದರಿ ಹಾಗೂ ಸಾಬೀತು ಮಾಡಿ ತೋರಿಸಿ" ಅನ್ನೋ ಮಾತು ಯಾರು ಯಾವತ್ತು ಬೇಕಾದರೂ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ಹೇಳಬಹುದು ಹಾಗೂ ಕೇಳಬಹುದು.

ನಾವು ಡಾರ್ವಿನ್ನನ ಥಿಯರಿಯನ್ನು ಹಿಂದೆ ಓದುತ್ತಿದ್ದಾಗ struggle for existence ಅನ್ನೋದನ್ನ ಬೇರೆ ರೀತಿ ಅರ್ಥ ಮಾಡಿಕೊಳ್ತಿದ್ವಿ,  ಆದರೆ ಈಗ struggle ಮತ್ತು existence ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ.  ಒಂಥರಾ ಮೈಕ್ರೋ ಬಡ್ಡಿಯ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡ ಹಾಗೆ ಪ್ರತಿದಿನ ಪ್ರತಿಕ್ಷಣ ನಿಮ್ಮನ್ನ ನೀವು ಪ್ರೋವ್ ಮಾಡಿಕೊಳ್ತಲೇ ಇರಬೇಕು, ಅದೇ ನ್ಯಾಯ, ಅದೇ ನಿಯಮ.

ಇಂಥಾ ಕ್ಯಾಪಿಟಲಿಸಮ್ಮಿನ ಸಾಗರದಲ್ಲಿ, ನೀರಿನ ಗುಣವಿರುವ ನಾವು ಕನ್ನಡಿಗರು ನಮ್ಮ ಯಥೇಚ್ಛವಾದ ಸಾಹಿತ್ಯ, ಸಂಗೀತ ಹಾಗೂ ಸಂದೇಶಗಳ ಹಿನ್ನೆಲೆಯಿಂದ ಒಂದು ರೀತಿ ಬಡಪಾಯಿಗಳಾಗಿ ಬಿಟ್ಟೆವೆನೋ ಅನ್ನಿಸೋದಿಲ್ವಾ ನಿಮಗೆ? ಚಿಕ್ಕ ಚಿಕ್ಕ ರಾಜಕೀಯಗಳಲ್ಲಿ rat race ಹಾಗೂ ಮೈಕ್ರೋ ಮ್ಯಾನೇಜುಮೆಂಟುಗಳಲ್ಲಿ Ph. D., ಮಾಡಿರುವ ನಮಗೆ ನಮ್ಮ ಕಾರ್ಪೋರೇಟ್ ವಲಯದಲ್ಲಿ ಯಾರೂ ಯಾವತ್ತೂ ಕರೆದು ಲೀಡರ್‌ಶಿಪ್ ರೋಲ್ ಅನ್ನು ಕೊಟ್ಟಿದ್ದು ನೋಡಿಲ್ಲ ಬಿಡಿ.  ನಮ್ಮ ಕಣ್ಣೆದುರೇ ತೆಲುಗು, ತಮಿಳು ಹಾಗೂ ಉತ್ತರ ಭಾರತದವರು ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ಮುಂದೆ ಹೋದರೆ ನಾವು ಕನ್ನಡಿಗರು ಅವರಿಗೆ ಅಡಿಯಾಳುಗಳಾಗಿ ಕೆಲಸ ಮಾಡಿಕೊಂಡು ಅದನ್ನು "ಕಾಯಕವೇ ಕೈಲಾಸ" ಎಂದು ಕರೆದು ಹನ್ನೆರಡನೇ ಶತಮಾನದ ವಚನಕಾರರ ಜೊತೆ ಸಮನ್ವಯ ಬೆಳೆಸಿಕೊಂಡು ಬಿಡುತ್ತೇವೆ.  ಕನ್ನಡಿಗರು risk ತಗೊಳೋದಿಲ್ಲ ಬಿಡ್ರಿ.  ನೀವೆಲ್ಲ ಬರೀ ಪುಳಿಚಾರಿನ ಜನ ನಿಮ್ಮಿಂದೇನಾಗುತ್ತೇ? ಅನ್ನುವವರಿಗೆ ನಾವು ಏನು ಎಂಬುದನ್ನು ತೋರಿಸೋ ಕಾಲ ಬರೋದಾದ್ರೂ ಯಾವಾಗ?

ಊಟ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಟೀ ಕುಡುದ್ ಮೇಲೆ ಮತ್ತೆ ನಮ್ಮನ್ನು ನಾವೇ ಈ ಪ್ರಶ್ನೆ ಕೇಳಿಕೊಂಡು ಸಮಾಧಾನ ಮಾಡ್ಕೋಬಹುದು ಅಥವಾ ಮಾಡ್ಕೋತೀವಿ: in the grand schema of things, so what?  ನಮಗೆಲ್ಲಾ ಈಗ ಕಷ್ಟಾ ಆಗೋಲ್ಲ.  ಯಾವಾಗ ನಮ್ಮ ಮಕ್ಳು ಹೈ ಸ್ಕೂಲು ಮುಗಿಸಿ ಕಾಲೇಜು ಸೇರಿ ಮೊದಲ ಸಲ ಥ್ಯಾಂಕ್ಸ್ ಗಿವಿಂಗ್‌ಗೆ ಮನೆಗೆ ಬರ್ತಾರಲ್ಲ, ಅವಾಗ ನಮ್ಮ್ ಮುಸುಡಿ ನೋಡಿ ಕೇಳ್ತಾರ್ ನೋಡಿ, "ಓ, ನೀನು ಇನ್ನು ಅದೇ ಕೆಲ್ಸದಲ್ಲಿ, ಅದೇ ಲೆವಲ್‌ನಲ್ಲಿ ಇದಿಯಾ?" ಆಗ ನಿಜವಾಗ್ಲೂ ಗೊತ್ತಾಗುತ್ತೆ ನಾವು ಯಾರು ಅಂತ.  ಅಷ್ಟೊತ್ತಿಗೆ ಸುಮಾರು ತಲೆ ಕೂದ್ಲು ಹಣ್ಣಾಗಿರುತ್ತೆ, ಇಲ್ಲಾ ಉದುರಿರುತ್ತೆ.  ಉಪೇಂದ್ರ ಹೇಳಿದ ಹಾಗೆ ಮೀಲ್ ಬೆಗ್ಗರ್ ಸ್ಟೇಟಸ್‌ಗೆ ಹತ್ರಾ ಹತ್ರಾ ಹೋಗ್ತೀವಿ.   ಇಲ್ಲೇ ಹುಟ್ಟಿ ಬೆಳೆದ ನಮ್ ಅಮೇರಿಕನ್ ಮಕ್ಳಿಗೆ ನಾವು ಬೇಡವಾಗಿ ಹೋಗ್ತೀವಿ.  ಆಗ ನಾವು, ಇನ್ನೇನು ನಾಳೆ ಇಂದನೇ ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ, ಅದು ಮಾಡೋಣ, ಇದು ಮಾಡೋಣ ಅಂದುಕೊಂಡು ಕನಸು ಕಾಣೋ ಅಷ್ಟರಲ್ಲಿ ತೂಕಡಿಗೆ ಜೋರಾಗಿ, ನಿದ್ರೆ ಬಂದು ಹೋಗಿರುತ್ತೆ, ನೋಡ್ತಾ ಇರಿ!

Tuesday, March 29, 2011

ದದ್ದಾ, who made god?

ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ!

ಆದಿಯಲ್ಲಿ ನಿನ್ನ ಪೂಜೆ ಮಾಡಿದಂಥ ಧರ್ಮರಾಯ
ಸಾಧಿಸಿದ ಜಯ ಗಣನಾಥ, ಮೊದಲೊಂದಿಪೆ...

ಹಿಂದೆ ರಾವಣನನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲ್ಲಿ ಗಣನಾಥ, ಮೊದಲೊಂದಿಪೆ...

***

ಎಲ್ಲಾ ಈ ಗಣನಾಥನ ಕೃಪೆಯೇ...ನನ್ನನ್ನು ಈ ಸಂಕಷ್ಟಕ್ಕೆ ದೂಡಿರೋದು ಅಂತ ಅನ್ನಿಸಿದ್ದು ಇತ್ತೀಚೆಗಷ್ಟೇ.

ನಮ್ಮ ಮನೆಯಲ್ಲಿರೋ ಈ 5&2 client ಗಳ ಪ್ರಶ್ನೆಗಳಿಗೆ ಉತ್ತರ ಈ ಗಣನಾಥನೇ ಕೊಡಬೇಕು - 5&2 ಅಂದ್ರೆ ನನ್ನ ಐದು ಮತ್ತು ಎರಡು ವರ್ಷದ ಮಕ್ಕಳು ಅಂತ ಅರ್ಥ. ಅವರು ಕೇಳಿದಂತಾ ಪ್ರಶ್ನೆಗಳನ್ನು ನಾನು ಚಿಕ್ಕವನಾಗಿದ್ದಾಗಲೇನಾದರೂ ಕೇಳಿದ್ರೆ, ಆ ರಾವಣ ಗಣಪತಿ ತಲೆ ಮೇಲೆ ಗೋಕರ್ಣದಲ್ಲಿ ಕೊಟ್ಟನಲ್ಲ ಹಂಗೆ ನನಗೆ ಪ್ರತೀ ದಿನಾನೂ ಬೀಳೋದು ಅಂತ ಕಾಣ್ಸುತ್ತೆ... ನಾನು ಪ್ರಶ್ನೆಗಳನ್ನಂತೂ ಕೇಳೋವಾಗ ಕೇಳ್ಲಿಲ್ಲ, ಇನ್ನು ಅವುಗಳಿಗೆ ಉತ್ತರ ಎಲ್ಲಿಂದ ತರಲಿ ಹೇಳಿ.

ಈ ಮೆಲೆ ತೋರಿಸಿದ ಗಣನಾಥನ ಹಾಡಿನ ಕೆಲವು ಸಾಲುಗಳನ್ನೇ ನೋಡಿ, ಎಷ್ಟೊಂದು ಪ್ರಶ್ನೆಗಳನ್ನ ಹುಟ್ಟಿ ಹಾಕ್ಸುತ್ವೆ ಅಂತ, ನೀವು ಕೊಡೋ ಪ್ರತಿ ಒಂದು ಉತ್ತರಕ್ಕೂ ಒಂದೊಂದು sub-ಕಥೆ ಇರುತ್ತೆ, ಹಾಗೆ ನೀವು ಉತ್ತರ ಕೊಟ್ಟಂತೆಲ್ಲ, ಒಂದೊಂದು ಉತ್ತರಕ್ಕೆ ಐದೈದು WHY ಗಳು ಬಂದು ಸೇರಿಕೊಳ್ಳುತ್ವೆ, ಉದಾಹರಣೆ ಬೇಕಾ, ತೊಗೊಳ್ಳಿ:

ಪಲ್ಲವಿಯಲ್ಲಿ
- who is 'ga na nA tha'?
- why we have to worship him first ? (so you may use sub-story of kartikeya-ganesha race story, beware of more questions)
- why ganesha has so many names?
- what his friends call him?

You think these are easy questions? Be careful... and remember that classic joke about Johny?

Kid asks mom, "Mom, where am I from?"
Mom blinks her eyes and begin to answer the question starting from creation, birth, etc
Kid interrupts her, '...but Johny says he is from New Jersey..., where am I from?'

ನಮ್ಮ ಹಾಡುಗಳು ಒಂಥರಾ ಯಕ್ಷಗಾನ ಕಾರ್ಯಕ್ರಮ ಇದ್ದ ಹಾಗೆ, ಒಂದು ಪ್ಯಾರಾದಲ್ಲಿ ವರ್ತಮಾನ ಕಾಲದಲ್ಲಿರೋದು, ಮತ್ತೊಂದು ಪ್ಯಾರಾದಲ್ಲಿ ತ್ರೇತಾಯುಗಕ್ಕೆ ಹೋದ ಹಾಗೆ, ತ್ರೇತಾ ಯುಗದಿಂದ ದ್ವಾಪರ ಯುಗಕ್ಕೆ ಒಂದೆ ಕ್ಷಣದಲ್ಲಿ ಹಾರಿದ ಹಾಗೆ. ಅಥವಾ ಅತಳ, ಭೂತಳ, ಪಾತಾಳ, ಅಂತರಿಕ್ಷ, ಸ್ವರ್ಗ, ನರಕ, ಮತ್ಸ್ಯಲೋಕ, ಮೊದಲಾದವುಗಳನ್ನು ಒಂದೇ ಕ್ಷಣದಲ್ಲಿ ಬದಲಾಯಿಸಿದ ಹಾಗೆ... do you think I am joking? ನಿಮ್ಮ ಮಕ್ಕಳಿಗೆ ಬಭ್ರುವಾಹನ ಚಿತ್ರದ "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು..." ಹಾಡನ್ನು youtube ನಲ್ಲಿ ತೋರಿಸಿ ನೋಡಿ, ನಿಮಗೆ ಗೊತ್ತಾಗುತ್ತೆ ನನ್ನ ಕಷ್ಟ ಏನು ಅಂತ. (why did I watch or why they saw this song with me - that is a different and long story.... a topic in itself for some other day).

ಇನ್ನೂ ಪಲ್ಲವಿಯಲ್ಲೇ ಇದ್ದೇನೆ...
ಫಸ್ಟ್ ಪ್ಯಾರಾ:
-who is 'da r ma roya'?
- why that guy worship ganesha?
- what was he doing?
- how old was he?
- what is jaya? isn't that amma's friend's name? also your chikkamma has the same name?
- how does ganesh know who does pooja?
- why he helps?
- and then what happened? 'ಆ ಮೆಲೆ ಏನು?' (screaming because i don't answer the questions immediately).

ಸೆಕೆಂಡ್ ಪ್ಯಾರಾ:
-who is ravnaa?
-why he didn't do pooja? (his dad scold him?)
-why he died?
-who killed him? why?
-'rana' means what?

ಇನ್ನು ಪುರಂದರ-ಗಿರಂದರ ಅಂದ್ರೆ ಕಥೇನೇ ಮುಗೀತು, ಅದಕ್ಕೆ ಎರಡೇ ಪ್ಯಾರಾಕ್ಕೆ ಹಾಡು ಮೊಟಕು ಮಾಡಿದ್ದು.

***

ಹೀಗೆ ಪ್ರಶ್ನೆಗಳ ಯಾದಿ, ಅವುಗಳಿಗೆ ಉತ್ತರ, ಅವರದ್ದೇ ಆದ ತರ್ಕ, ಕಲ್ಪನೆ, ಕಲ್ಪನೆಯಿಂದ ಬೆಳೆಯೋ ಉತ್ತರ - ಇವೆಲ್ಲ ನಮ್ಮ ಮನೆಯಲ್ಲಿ ಬೆಳೀತಾನೇ ಇವೆ. ನಮ್ಮಮ್ಮನ್ನ "ನೀನು ಅಷ್ಟೊಂದು ಮಕ್ಳನ್ನ ಹೆಂಗ್ ಸಾಕ್ದೇ?" ಅಂತ ಕೇಳಿದ್ರೆ, ನಕ್ಕೊಂಡು "...ಈಗ ನಿಮ್ಮ ಸರದಿ, ಅನುಭವಿಸಿ!" ಅನ್ನೋ ಉತ್ರ ಕೊಡೋದೇ?

ನನಗೆ ಮೊಟ್ಟ ಮೊದಲನೇ ಬಾರಿಗೆ ಗಣೇಶನ ಕಥೆ Rated R ಅನ್ನಿಸಿದ್ದು... Youtube ನಲ್ಲಿರೋ ಗಣೇಶನ ಕಥೆ ಈಗ ಯಾಕಾದ್ರೂ ತೋರಿಸಿದ್ನೋ ಅನ್ನೋ ಹಾಗಿದೆ ನನ್ನ ಪರಿಸ್ಥಿತಿ.

Again the same series of "Why's"...

ಅದೂ ನಮ್ಮ ಗಣೇಶನ ಕಥೆಯಲ್ಲೇ ಎಷ್ಟೊಂದು ವರೈಟಿಗಳು. ಯಾಕೆ ಆನೆಯ ತಲೆಯನ್ನು ಇಟ್ರು ಅನ್ನೋದಕ್ಕೆ ಎಷ್ಟೊಂದು ಥರನ ಉತ್ತರಗಳು? ಗಜಾಸುರನೆಂಬ ರಾಕ್ಷಸನ ತಲೆಯೋ ಅಥವಾ ಉತ್ತರಕ್ಕೆ ತಲೆ ಹಾಕಿ ಮಲಗಿದ ಪ್ರಾಣಿಯ ಕತೆಯೋ? why that rAkShasa had elephant's head in the first place? (ಇವೆಲ್ಲ ನನ್ನ ಪ್ರಶ್ನೆಗಳು: isn't that head big for a small boy? who did the transplantation? ಅಷ್ಟೆಲ್ಲಾ ಮಂತ್ರಶಕ್ತಿ ಇರೋ ಶಿವನಿಗೆ ಹುಡುಗನ ಕಡಿದಿರೋ ತಲೆ ಹುಡುಕೋದಕ್ಕೆ ಆಗಲಿಲ್ಲವೇ? ಯಾಕೆ ಅಷ್ಟೊಂದು ಸಿಟ್ಟು? ತ್ರಿಶೂಲ ಹಿಡಿದಿರೋ ಶಿವನಿಗೆ ಆ ಬಾಲಕನ ಹತ್ತಿರ ನೆಗೋಶಿಯೇಟ್ ಮಾಡೋಕಾಗಲಿಲ್ವ?)

ನಿನ್ನೆ ರುದ್ರಾಭಿಷೇಕದ ಹೊತ್ತಿಗೆ ಬ್ರಿಜ್‌ವಾಟರ್ ದೇವಸ್ಥಾನದ ಅರ್ಚಕರು ತ್ರಿಶೂಲವನ್ನು ತೊಳೆದು ಶಿವನ ಬದಿಯಲ್ಲಿಟ್ಟಾಗ ನನ್ನ ಮಗಳು ಕೇಳಿಯೇ ಬಿಟ್ಟಳು: is this the same that shiva cut the boy's head?

ನಮ್ಮದೆಲ್ಲಾ ಸಂಕೀರ್ಣದೊಳಗಿನ ಸಂಕೀರ್ಣ ಅಂತ ಅನ್ನಿಸೋಲ್ವಾ? ಐದು ವರ್ಷದ ಮಕ್ಕಳಿಗೆ "ಏ, ನಿನಗೊತ್ತಾಗಲ್ಲ ಸುಮ್ಮನಿರು!" ಎಂದು ಗದ್ದರಿಸೋದನ್ನು ಬಿಟ್ಟು ನಿಧಾನವಾಗಿ ಇವನ್ನೆಲ್ಲ ತಿಳಿ ಹೇಳೋ ಉಪಾಯಗಳ ಜೊತೆಗೆ ಗಣೇಶನ ಬಗ್ಗೆ ಒಂದು comprehensive ಕಥೆ, ಅಥವಾ ಪುರಾಣವಾದರೂ ನಮ್ಮಲ್ಲಿದೆಯಾ? ಅದಕ್ಕೆ ಅದನ್ನ ಕಥೆ-ಪುರಾಣ ಅಂತ ಕರೆಯೋದಿರಬೇಕು. ಒಂಥರಾ ಇಂಡಿಯನ್ ಮಿಥಾಲಜಿ ಅಂದ್ರೆ ಇವತ್ತಿನ ವಿಕ್ಕಿಪೀಡಿಯಾ ಇದ್ದ ಹಾಗೆ, ಯಾರು ಹೇಗೆ ಬೇಕೋ ಹಾಗೆ ಎಡಿಟ್ ಮಾಡ್ಕೊಂಡು ಹೋದ್ರೆ ಆಯ್ತು, ಆದ್ರೆ, edit history ಅಥವಾ chronology ಮಾತ್ರಾ ಕೇಳ್ಬೇಡಿ.

her question - 'why ganesha's mommy want him to wait at the door? she could have locked the door herself'.

ಈ ಮಕ್ಕಳಿಗೆ ಕೃಷ್ಣ ಹೇಗೆ ಬೆಣ್ಣೆ ಕದೀತಿದ್ದ ಅಂತ ಕಥೆ ಹೇಳಿದ್ರೆ, "ಅಯ್ಯೋ ಯಾಕೆ? ಫ್ರಿಜ್ಜ್ ತೆಗೆದಿದ್ರೆ ಸಿಕ್ಕಿರೋದು" ಅಂತ ನಮಗೇ ಪ್ರಶ್ನೆ ಕೇಳ್ತಾರಲ್ಲ, ಅಲ್ಲಿಗೇ ನಿಲ್ಲದೇ, "Why they didn't have a ladder?" ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳೋ audience ಇರೋವಾಗ, ನಮ್ಮ ಕಥೆಗಳು ಇನ್ನಷ್ಟು ಸರಳವಾಗಿದ್ರೆ ಎಷ್ಟೊಂದು ಚೆನ್ನಾಗಿತ್ತು ಅಲ್ವಾ? ("why he eats just ಬೆನ್ನೆ? no bread! ವೂ, that is gross!") and more questions (why that ಬೆನ್ನೆ white, ours yellow)? and more questions... why ಬಲ್ ರಾಮಾ not blue, only krishna? (you want to try that?)


***

ಇವೆಲ್ಲ ಇರಲಿ, ಹೊಂಕಣ ಸುತ್ತಿ ಮೈಲಾರಕ್ಕೆ ಬಂದಾ ಅನ್ನೋ ಹಾಗೆ, ನನ್ನ ಹೆಡ್ಡಿಂಗ್‍ಗೆ ಬರ್ತೀನಿ:

ಮೊನ್ನೆ ಬೆಳಿಗೆ ಆಫೀಸಿಗೆ ಬರೋ ತರಾತುರಿಯಲ್ಲೇ ದೇವರಿಗೆ ದೀಪ ಹಚ್ಚಿ, ತಲೆಯಲ್ಲಿ ಬರೋ ನೂರಾ ಒಂದು ಆಲೋಚನೆಗಳ ಮಧ್ಯೆಯೇ ಪೂಜೆ ಮಾಡಿದ ಹಾಗೆ ಮಾಡಿ ಬರುತ್ತಿರುವಾಗ, ಆಗಷ್ಟೇ ಎದ್ದು ಕಣ್ಣು ಒರೆಸುತ್ತಿದ್ದ ನನ್ನ ಐದು ವರ್ಷದ ಮಗಳು ಕೇಳಿದಳು, "ದದ್ದಾ, who made god?" (and that is the first question, no idea, what was in her mind).

ಆಗ ಸಧ್ಯಕ್ಕೆ ನನಗೆ ಏನೂ ತಿಳಿಯದೇ ಒಂದು ಕ್ಷಣ ಕಣ್ಣು ಪಿಳಿಪಿಳಿ ಬಿಟ್ಟೆನಾದರೂ "god made god" ಎಂದು ಉತ್ತರ ಹೇಳಿದೆ, ಉಳಿದದ್ದನ್ನ ಸಾಯಂಕಾಲ ಹೇಳ್ತೀನಿ ಎಂದು ಬೀಸೋ ದೊಣ್ಣೆಯಿಂದ ಬಚಾವ್ ಆದೆ... ಆದರೂ ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಅನ್ನೋದಕ್ಕೆ ಇನ್ನೂ ಯೋಚಿಸ್ತಾನೇ ಇದ್ದೀನಿ. ಪ್ರಶ್ನೆಗೆ ಉತ್ತರ ಹೇಳಲೋ, ಅಥವಾ ಇನ್ನೊಂದಿಷ್ಟು ಪ್ರಶ್ನೆಯನ್ನೇ ಕೇಳಿ ಸಮಾಧಾನ ಮಾಡಿ ಉತ್ತರವನ್ನು ಅವರ ಕಲ್ಪನೆಗೆ ಬಿಡಲೋ? who do you think made god? why do you want to know? who asked you that question?

ನಮಗೆ ಇಲ್ಲಿ ಯಾರು ಬೇಕು ಅಂದ್ರೆ, "ಅತಿಥಿ ತುಮ್ ಕಬ್ ಜಾವೋಗೇ?" ಸಿನಿಮಾದ ಪರೇಶ್ ರಾವಲ್ ಅಂತ ಸಂಬಂಧಿಕರು! ಅಥವಾ ಮಕ್ಕಳ ಎಲ್ಲಾ ಚಿಕ್ಕ-ಪುಟ್ಟ ಪ್ರಶ್ನೆಗಳಿಗೂ ಸಮಾಧಾನ ಚಿತ್ತದಿಂದ ಸಾವಧಾನವಾಗಿ ಉತ್ತರಿಸುವ ತಿಳುವಳಿಕೆ ಹಾಗೂ ಮನಸ್ಥಿತಿ ಇರುವವರು. ಅವರ ಪ್ರಶ್ನೆಗಳಿಗೆ ಉತ್ತರಕೊಡುವುದರ ಬದಲಿಗೆ ಕೆಲವೊಮ್ಮೆ ನಾವು ನಮ್ಮ ಆಫೀಸಿನ ಸಂಕಷ್ಟಗಳನ್ನೆಲ್ಲ ಮಕ್ಕಳ ಎದುರಿಗೆ ಅವರನ್ನು ಬೈಯ್ಯೋದರ ಮೂಲಕ ಪ್ರದರ್ಶಿಸುತ್ತೇವೇನೋ ಎಂದು ಹೆದರಿಕೆ ಆಗೋದೂ ಇದೆ.

ಅದಕ್ಕೆ, ದದ್ದಾ, who made god? ಅನ್ನೋ ಶೀರ್ಷಿಕೆಯನ್ನು "...ಅರ್ಥಾಥ್ ಪ್ರಶ್ನೆಗಳಿಗೆ ಉತ್ತರ ಹೇಳೋ ಅಜ್ಜ-ಅಜ್ಜಿ ಬೇಕಾಗಿದ್ದಾರೆ", ಎಂದು ಬದಲಾಯಿಸಿದರೆ ಹೇಗೆ ಎಂಬ ಯೋಚನೆ ಕೂಡಾ ಬಂತು...

***
"ದೇವ್ರುನ್ನ ಯಾರಾದ್ರೂ ಮಾಡ್ಲಿ, ಬಿಡ್ಲಿ - ಸುಮ್ನೇ ಕೆಲ್ಸ ನೋಡ್ರೋ - ಹೋಗ್ರೋ" ಅಂತ ಗದರಿಸೋದು ನಮ್ಮ ಕಾಲಕ್ಕೆ ಆಯ್ತು, ಅಲ್ಲೇ ಇರ್ಲಿ ಅದು.

ನನಗ್ಗೊತ್ತು, ದೊಡ್ಡ ದೊಡ್ಡ ಮಕ್ಕಳಿದ್ದವರೆಲ್ಲ ಈ ಬರಹವನ್ನು ನೋಡಿ ನಗತಾರೆ ಅಂತ, ದೊಡ್ಡವರಿಗೆ ದೊಡ್ಡ ಕಷ್ಟಾ, ಆನೆ ಭಾರ ಆನೆಗೆ, ಇರುವ ಭಾರ ಇರುವೆಗೆ ಅಂಥಾರಲ್ಲ ಹಾಗೆ!

ದೇವ್ರೆ, ಇವತ್ತಿನ ಪ್ರಶ್ನೆಗಳ ಉತ್ತರ ಪತ್ರಿಕೆಯನ್ನು ದಯವಿಟ್ಟು ಬಹಿರಂಗ ಮಾಡಪ್ಪಾ ಅನ್ನೋದು "ಅಂತರಂಗ" ಈ ಹೊತ್ತಿನ ಆರ್ತ ಮೊರೆ ಅಷ್ಟೇ!

Friday, November 26, 2010

ಅಪರೂಪದ ಅತಿಥಿಯ ಆಗಮನ...

ನಿನ್ನೆ ಈ ವರ್ಷದ ಮೊಟ್ಟ ಮೊದಲ ಮಂಜಿನ ದರ್ಶನ, ವಾತಾವರಣ ತಂಪಾಗುತ್ತಾ ಸುಮಾರು ಮುವತ್ತು ಡಿಗ್ರಿ ತಲುಪುತ್ತಿದ್ದಂತೆಲ್ಲಾ ಯಾರೂ ಆಹ್ವಾನಿಸದ ಅತಿಥಿಯ ಹಾಗೆ ಈ ಮಂಜಿನ ಕಣಗಳು ಗುರುತ್ವಾಕರ್ಷಣ ಶಕ್ತಿಯ ಮಾಂತ್ರಿಕತೆಗೆ ಒಳಗಾದವರಂತೆ ನಿಧಾನವಾಗಿ ಬೀಳಲಾರಂಭಿಸುತ್ತವೆ. ಥರಥರನ ಸೈಜು ಶೇಪುಗಳಲ್ಲಿ ಅವತರಿಸಿಕೊಳ್ಳುವ ಇವು ನೆಲವನ್ನು ಮುತ್ತಿಕ್ಕುತ್ತ ಹಾಗೇ ನೀರಾಗಿ ಕರಗಿ ಹೋಗುತ್ತವೆ. ಇವುಗಳ ಸಹವಾಸದಿಂದ ಕೊಂಚ ಬಿಸಿಯಾದ ನೆಲವೂ ತೇವವಾಗಿ ಕೊನೆಗೆ ಶೀತಲ ಶಕ್ತಿಗೆ ಮಾರು ಹೋಗಿ ಈ ಮಂಜಿನ ಕಣಗಳನ್ನು ಶೇಖರಿಸಿಕೊಳ್ಳುವ ಹೊತ್ತಿಗೆಲ್ಲ ಎಲ್ಲ ಕಡೆಗೆ ಬಿಳಿಯ ಬಣ್ಣದ ಓಕುಳಿಯಾಗಿರುತ್ತದೆ. ನವೆಂಬರ್ ಕೊನೆಯ ಸೂರ್ಯನ ಕಿರಣಗಳೂ ಕೂಡ ಇಮ್ಮಡಿಯಾಗಿ ಪ್ರಜ್ವಲಿಸತೊಡಗುತ್ತವೆ.

ಭೂಗೋಳವನ್ನು ಕಲ್ಪಿಸಿಕೊಂಡು ಸಮಭಾಜಕವೃತ್ತದಿಂದ ಉತ್ತರಕ್ಕೆ ಎಷ್ಟೋ ದೂರವಿರುವ ಅಕ್ಷಾಂಶ-ರೇಖಾಂಶಗಳಲ್ಲಿ ನೆಲೆಸುವ ಉತ್ತರ ಅಮೇರಿಕ ಖಂಡದ ಉತ್ತರ ಭಾಗಕ್ಕೆ ಶೀತಲ ಮಾರುತ ಹೊಸತೇನಲ್ಲ, ಹಾಗೇ ಇಲ್ಲಿ ತಲತಲಾಂತರದಿಂದ ನೆಲೆಸಿರುವ ಜನರೂ ಸಹ ಬೆಟ್ಟದ ಮೇಲೆ ಮನೆಯ ಮಾಡಿ ಮೃಗಗಳಿಗೆ ಅಂಜದವರಂತೆ ಅವರ ವರ್ಷದ ಆರು ತಿಂಗಳುಗಳಲ್ಲಿ ಛಳಿ-ಹಿಮ-ಮಂಜಿಗೆ ಒಗ್ಗಿಹೋಗಿರುವಂತೆ ಪ್ರಕೃತಿ ಅವರನ್ನು ಹದಮಾಡಿದೆ. ಇಂತಹ ಪ್ರದೇಶಗಳಲ್ಲೇ ಯಾರೂ ಸಹ ತಲತಲಾಂತರದಿಂದ ವಾಸ ಮಾಡಿದ್ದೇ ನಿಜವಾದರೆ ಮುಂಬರುವ ಪೀಳಿಗೆಗಳಿಗೆ ಇಲ್ಲಿನ ವಾತಾವಾರಣ ಹಾಗೂ ಋತು ಚಕ್ರದ ಬದಲಾವಣೆ ಇವೆಲ್ಲ ಸಹಜವಾಗುತ್ತವೆ, ಹೊಂದಾಣಿಕೆ ತಾನೇ ತಾನಾಗಿ ಹುಟ್ಟಿಬರುತ್ತದೆ. ಆದರೆ ನಮ್ಮಂಥ ಮೊದಲ ಒಂದೆರಡು ತಲೆಮಾರುಗಳಿಗೆ ಮಾತ್ರ ಈ ಬದಲಾವಣೆಯನ್ನು ಅನುಭವಿಸಲೇ ಬೇಕಾದ ಅನಿವಾರ್ಯತೆ.

ನಮ್ಮ ದಕ್ಷಿಣ ಭಾರತದಲ್ಲಿ ನಾವು ಹುಟ್ಟಿದಾಗಿನಿಂದ ಕೇಳಿಬರದಿದ್ದ ವಿಟಮಿನ್ ಡಿ ಕೊರತೆ ಮೊದಲಾದವುಗಳು ಇಲ್ಲಿ ಸಾಮಾನ್ಯವಾಗುತ್ತವೆ. ಜೀವನ ಶೈಲಿಯಿಂದಲೋ, ಕೆಲಸದ ನೆಪದಿಂದಲೋ ಬೇಸಿಗೆಯ ಸೂರ್ಯನನ್ನು ಆಗಾಗ ದರ್ಶನ ಮಾಡದಿದ್ದರೆ, ಛಳಿಗಾಲದಲ್ಲಿ ನಿಧಾನವಾಗಿ ಒಂದೊಂದೇ ಎಲುಬು-ಕೀಲುಗಳು ಕಿರುಗುಟ್ಟತೊಡಗಬಹುದು, ಅಥವಾ ಮಂಡಿ-ಮೊಳಕೈ ಮೊದಲಾದವುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು, ಹೀಗೇ ದಿಢೀರನೇ ’ನಮಗೆಲ್ಲ ವಯಸ್ಸಾಯಿತು!’ ಎನ್ನುವಂತೆ ಕೈ-ಕಾಲುಗಳು ಅಲುಗಾಡಿಸಲೂ ಕಷ್ಟವೆನಿಸೀತು. ಇವೆಲ್ಲ ಇಲ್ಲಿ ಸಹಜ, ಅದಕ್ಕೆ ತಕ್ಕ ಪರಿಹಾರವನ್ನೂ ನಾವು ಹಲವಾರು ರೀತಿಯಲ್ಲಿ ಕಂಡುಕೊಳ್ಳುತ್ತೇವೆ - ಹಾಲಿನಲ್ಲಿ, ಸೀರಿಯಲ್ಲುಗಳಲ್ಲಿ, ಮೊದಲಾದ ದಿನನಿತ್ಯದ ತಿಂಡಿ-ತಿನಿಸುಗಳಲ್ಲಿ ವಿಟಮಿನ್ ಡಿ ಸ್ವಲ್ಪ ಪ್ರಮಾಣದಲ್ಲಾದರೂ ಇದ್ದು ಅದನ್ನು ಜೀರ್ಣಿಸಿ ರಕ್ತಗತ ಮಾಡಿಕೊಳ್ಳಬಲ್ಲಂತಹವರಿಗೆ ಕೊರತೆ ನೀಗುವಂತೆ ವ್ಯವಸ್ಥೆ ಇದೆ, ಆದರೆ ಇನ್ನು ಕೆಲವರಿಗೆ ಇದು ಕಡಿಮೆಯಾಗಿ ಹೊರಗಿನಿಂದ ಮಾತ್ರೆ ಮೊದಲಾದ ರೂಪದಲ್ಲಿ ವಿಟಮಿನ್ ಸಪ್ಲಿಮೆಂಟ್ ತೆಗೆದುಕೊಳ್ಳಬೇಕಾಗುತ್ತದೆ, ಕೆಲವೊಮ್ಮೆ ಜೀವನ ಪರ್ಯಂತ ಇದು ಅಗತ್ಯವಾಗುತ್ತದೆ.

***

ನಾವು ಅಲ್ಲಿನ ’ಅನಿವಾಸಿ’ಗಳು, ಇಲ್ಲಿ ’ನಿವಾಸಿ’ಗಳಾಗುತ್ತೇವೆ, ಕ್ರಮೇಣ ಇದೇ ನಮ್ಮ ಮನೆಯಾಗುತ್ತದೆ. ಅಲ್ಲಿನ ನೆನಪು ಮಾಸುತ್ತಾ ಬಂದ ಹಾಗೆಲ್ಲಾ ಒಂದು ಕಡೆ ಅದು ನಾಸ್ಟಾಲ್ಜಿಯಾದ ವರ್ಗಕ್ಕೆ ಸೇರಿಕೊಂಡು, ಮತ್ತೊಂದು ಕಡೆ ದಿನೇ-ದಿನೇ ಬದಲಾಗುವ ಅಲ್ಲಿನ ಪರಿಸರ ಇಲ್ಲಿ ಸಿಗುವ ಪ್ರತಿಯೊಂದು ಅನುಕೂಲ-ಸೌಲಭ್ಯವನ್ನೂ ಒಳಗೊಂಡು ಅಲ್ಲಿ-ಇಲ್ಲಿನ ವ್ಯತ್ಯಾಸಗಳು ಕಡಿಮೆ ಆಗುತ್ತಾ ಹೋಗುತ್ತವೆ. ಹಳೆಯ ಹುರುಪು ಕಡಿಮೆ ಆಗುತ್ತದೆ, ಸ್ನೇಹಿತರು ದೂರವಾಗಿ ಅದೆಷ್ಟೋ ಕಾಲವಾಗಿದೆ, ಸಂಬಂಧಿಗಳೂ ಸ್ನೇಹಿತರ ಹಾದಿ ಹಿಡಿದು ಹೋಗಿದ್ದಾರೆ - ನಾವು ಒಂದು ರೀತಿ ಈ ಮಂಜಿನ ಹನಿಗಳ ಹಾಗೆ ನಿಧಾನವಾಗಿ ಇಲ್ಲಿನ ನೆಲವನ್ನು ಸೇರಿ ಇಲ್ಲಿಯವರಾಗೇ ಹೋಗಿದ್ದೇವೆ.

ಮೊದಲೆಲ್ಲಾ ಕಾಲಿಂಗ್ ಕಾರ್ಡುಗಳನ್ನು ತೆಗೆದುಕೊಂಡು ಘಂಟೆಗಟ್ಟಲೆ ಭಾರತದವರೊಂದಿಗೆ ಘಂಟೆಗಟ್ಟಲೆ ಮಾತನಾಡುವ ವ್ಯವಧಾನವಿತ್ತು. ಒಂದು ತಿಂಗಳಿಗೆ ಸುಮಾರು ಐನೂರು-ಆರು ನೂರು ಡಾಲರುಗಳ ಇಂಟರ್‌ನ್ಯಾಷನಲ್ಲ್ ಕರೆಗೋಸ್ಕರ ಫೋನ್ ಬಿಲ್ಲ್ ಕಟ್ಟಿದ ದಿನಗಳಿದ್ದವು. ಇಂದು ದಿನದ ಇಪ್ಪತ್ತನ್ನಾಲ್ಕು ಘಂಟೆಯೂ ಮುಕ್ತವಾಗಿ ಸಿಗುವ ಇಂಟರ್‌ನ್ಯಾಷನಲ್ಲ್ ಫೋನ್ ಲೈನಿನಲ್ಲಿ ವಾರಕ್ಕೆ ಒಂದು ಘಂಟೆಯೂ ಮಾತನಾಡದೇ ಇರುವ ದಿನಗಳೂ ಇವೆ. ಮಾತನಾಡಲು ಬೇಕಾದ ಸಮಯ ಅನ್ನೋದಲ್ಲ, ಮಾತನಾಡಲು ಬೇಕಾದ ಉಳಿದ ಕಂಪೋನೆಂಟುಗಳು ದಿನೇ-ದಿನೇ ಕಡಿಮೆಯಾಗುತ್ತಿರುವುದು ನನ್ನ ಅನುಭವ. ಮೊದಲು ಫೋನ್ ಅನ್ನೋದು ಬಹಳ ಮುಖ್ಯವಾದ ಕಮ್ಮ್ಯುನಿಕೇಷನ್ನ್ ಸಾಮಗ್ರಿಯಾಗಿತ್ತು, ಈಗ ಅದರ ಬದಲಿಗೆ ಇ-ಮೇಲ್, ಟೆಕ್ಸ್ಟ್ ಮೆಸ್ಸೇಜುಗಳು ಬಂದಿವೆ, ಅವುಗಳಲ್ಲೇ ಹೆಚ್ಚು ಕೆಲಸ-ಕಾರ್ಯಗಳು ನಡೆದು ಹೋಗುತ್ತವೆ. ಎಲ್ಲರೊಡನೆ ಮಾತನಾಡಬೇಕಾದ ನಮ್ಮ ಧ್ವನಿ ನಾಟಕದ ಪಾತ್ರಧಾರಿಗಳು ಸ್ವಗತದಲ್ಲಿ ಹೇಳಿಕೊಳ್ಳುವಂತೆ ವಾಕ್ಯಗಳನ್ನು ಕಲ್ಪಿಸಿಕೊಳ್ಳುತ್ತವೆ - ಬಳಕೆ ಕುಗ್ಗಿದಂತೆ ಪದಗಳು ಕಡಿಮೆಯಾಗಿ, ಕೊನೆಕೊನೆಗೆ ಒಂದು ಕಾಲದಲ್ಲಿ ನಾವು ದಿನನಿತ್ಯ ಬಳಸಿದ ವಿಷಯ-ವಸ್ತುಗಳು ಇಂದು ಅನಾಥವಾಗಿ ಹೋಗುವಂತೆ ಅನಿಸುತ್ತದೆ.

***

ಹೀಗೆ ಇಂದು ನಿಧಾನವಾಗಿ ಬೀಳುವ ಮಂಜಿನ ಕಣಗಳು ಮುಂದೆ ದೊಡ್ಡವಾಗುತ್ತವೆ. ಮೊದಲೆಲ್ಲಾ ಸೌಮ್ಯವಾದ ನೆಲ ಇವುಗಳನ್ನು ಆಲಂಗಿಸಿ ಕರಗಿಸಿಕೊಂಡಂತೆ ಇನ್ನು ಮೇಲಾಗೋದಿಲ್ಲ, ಇನ್ನು ಮೇಲೇನಿದ್ದರೂ ಛಳಿಯಲ್ಲಿ ಕಠಿಣಗೊಂಡ ನೆಲದ ಮೇಲೆ ಇವುಗಳು ನಿಧಾನವಾಗಿ ಹರಡಿ ನೀರಿನ ಹಲವಾರು ರೂಪಗಳನ್ನು ತಾಳಿ ತಮ್ಮ ಬದುಕನ್ನು ನಡೆಸಿಕೊಂಡು ಹೋಗಬೇಕಷ್ಟೇ. ಪ್ರತೀವರ್ಷವೂ ಇವುಗಳ ದೆಸೆಯಿಂದ ಕ್ಷುಬ್ರವಾದ ಮರಗಿಡಗಳ ಮನಸ್ಸೂ ಸಹ ಈ ಮಂಜಿನ ಹನಿಗಳಿಗೆ ಯಾವುದೇ ವಿಶೇಷ ಆತಿಥ್ಯವನ್ನೇನೂ ತೋರೋದಿಲ್ಲ, ಬದಲಿಗೆ ಬೋಳಾದ ಅವುಗಳೂ ಸಹ ನಿಮ್ಮ ಸಹವಾಸವೇನಿದ್ದರೂ ನೆಲದೊಂದಿಗೆ ಎಂದು ಸುಮ್ಮನಾಗಿವೆ. ಆಗಾಗ್ಗೆ ಬೀಸುವ ಗಾಳಿ ಇವುಗಳನ್ನು ಒಂದಿಷ್ಟು ಮಟ್ಟಿಗೆ ಕದಲಿಸಿದಂತೆ ಕಂಡರೂ ಇವುಗಳ ಕೋಲ್ಡ್ ಮನಸ್ಥಿತಿಗೆ ವಾಯುವೂ ರೋಸಿ ಹೋಗಿದ್ದಾನೆ. ಹೀಗೆ ಈ ಮಂಜಿನ ಹನಿಗಳು ಮೇಲ್ಮೈಯಲ್ಲಿ ಎಲ್ಲವನ್ನೂ ಆವರಿಸಿದಂತೆ ಕಂಡು ಬಂದರೂ ಇವುಗಳ ಕೆಳಗೆ ಎಲ್ಲವೂ ಹಾಗೇ ಇವೆ, ಜೊತೆಗೆ ಒಂದು ಮೂರ್ನಾಲ್ಕು ತಿಂಗಳುಗಳ ನಂತರದ ಬಿಡುಗಡೆಗೆ ಕಾಯುತ್ತಲೂ ಇವೆ.