ನೀನಾ ಭಗವಂತ
ಚಿತ್ರ: ತ್ರಿವೇಣಿ (1972)
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ: ಎಚ್. ಜಿ. ಗಂಗರಾಜು (ಹಂಸಲೇಖ)
ಗಾಯಕ: ಜಿ. ಬಾಲಕೃಷ್ಣ
ಈ ಕೊರೋನಾ ಸಂಕಷ್ಟದಲ್ಲಿರುವ ನಾವೆಲ್ಲರೂ ದೇವರನ್ನು "ನೀನಾ ಭಗವಂತ?" ಎಂದು ಕೇಳುವ ಹಾಗಿದೆ, ಈ ಹಾಡು. 48 ವರ್ಷಗಳ ಹಿಂದೆ ಬರೆದ ಹಂಸಲೇಖರ ಇದು ಮೊದಲನೆಯ ಹಾಡಗಿಯೂ ಇದ್ದಿರಬಹುದು.
***
ದೇವಸ್ಥಾನದ ಘಂಟೆಯ ಧ್ವನಿ, ಕೊಳಲಿನ ನಾದದ ಹಿನ್ನೆಲೆಯಲ್ಲಿ ಮಧುರ ಸಂಗೀತ ಮೂಡಿ ಬರುತ್ತಿದ್ದಂತೆ, ದೇವಸ್ಥಾನದ ಮುಂದೆ ಸರತಿ ಸಾಲಿನಲ್ಲಿ ಕುಳಿತ ಬಿಕ್ಷುಕರ ಸಾಲು ಕಾಣಸಿಗುತ್ತದೆ. ಅವರಿಗೆಲ್ಲ ಯಾರೋ ಒಬ್ಬರು ಪುಣ್ಯಾತ್ಮರು ಪ್ರಸಾದವನ್ನೋ ಅಥವಾ ಕಾಸನ್ನೋ ಹಂಚುತ್ತಿರುವ ಸನ್ನಿವೇಶ. ಮುಂದಿನ ಚಿತ್ರದಲ್ಲಿ ಊರುಗೋಲು ಹಿಡಿದು ಕುಂಟುತ್ತಿರುವವನಿಗೆ ಆಸರೆಯಾಗಿ ಒಬ್ಬರು ಸಹಾಯ ಮಾಡುವ ದೃಶ್ಯ.
"
ಅಮ್ಮಾ ಸ್ವಾಮಿ, ತಾಯಿ, ಸ್ವಾಮಿ, ಭಗವಂತ ಧರ್ಮಾ ಮಾಡಿ, ಭಗವಂತ ಧರ್ಮಾ ಮಾಡಿ" ಎನ್ನುವ ಮೊರೆತ.
ಆತ "
ಭಗವಂತಾ, ಭಗವಂತಾ" ಎಂದು ಅಟ್ಟಹಾಸದಿ ನಕ್ಕು, "
ಜಗತ್ತಿನಲ್ಲಿ ನಡೀತಾ ಇರೋ ಅನ್ಯಾಯಗಳನ್ನೆಲ್ಲ ನೋಡ್ತಾ ಇರೋ ಕಲ್ಲು ಮೂರ್ತಿಗಳೆಲ್ಲ ಭಗವಂತಾನಾ?"
"
ಏ ಭಗವಂತಾ, ನೀನಾ ಭಗವಂತಾ?" ಎನ್ನುವಲ್ಲಿ ಹಾಡು ಆರಂಭವಾಗುತ್ತದೆ. ಮತ್ತೆ ಕೊಳಲು ಹಾಗೂ ಘಂಟಾ ನಿನಾದ, ಜಾತ್ರೆ-ತೇರಿಗೆ ಸೇರಿದ ಭಾರೀ ಜನಜಂಗುಳಿಯ ದೃಶ್ಯ.
ದೂರದಲ್ಲಿ ದೇವಸ್ಥಾನದ ಗೋಪುರ ಹಾಗೂ ಅದಕ್ಕೆ ಹೊಂದಿಕೊಂಡ ಕಲ್ಲಿನ ಕಟ್ಟೆಯ ಕೆಳಗೆ ಬಿದ್ದಿರುವ ಸಣ್ಣ ಕಲ್ಲಿನ ಮೇಲೆ ಒಂದು ಕಾಲನ್ನು ಇಟ್ಟುಕೊಂಡು ನಿಂತು, ಒಂದು ಕೈಯಲ್ಲಿ ಊರುಗೋಲನ್ನು ಹಿಡಿದು ಆಧಾರ ಮಾಡಿಕೊಂಡು, ಮತ್ತೊಂದು ಕೈಯಿಂದ ಗೋಪುರಕ್ಕೆ ತೋರಿ, ದಿಟ್ಟತನದಿಂದ ಕೇಳುವ ಮಾತು:
ನೀನಾ ಭಗವಂತ?
ನೀನಾ ಭಗವಂತ?
ಈ ಚಿತ್ರದಲ್ಲಿ ಈ ಹಾಡು ಮೂಡಿ ಬರುವವರೆಗೆ ಕನ್ನಡ ಸಾಹಿತ್ಯದಲ್ಲಿ ಈ ರೀತಿ ದೇವರನ್ನು ಸಿನಿಮಾ ಹಾಡು-ದೃಶ್ಯಗಳ ಮೂಲಕ ಪ್ರಶ್ನಿಸಿದವರು ಇರಲಾರರು. ಕಷ್ಟದ ಸಂದರ್ಭಗಳಲ್ಲಿ ದೇವರಿಗೇ ತಿರುಗಿ ಬೀಳುವ ಕೆಲವು ಸನ್ನಿವೇಶಗಳು ದಾಖಲಾಗಿದ್ದರೂ, ಹಿನ್ನೆಲೆಯಲ್ಲಿ ಹಾಡನ್ನು ಹಾಡಿದ ಬಾಲಕೃಷ್ಣ ಅವರ ಧ್ವನಿ ಅಧಿಕಾರವಾಣಿಯಾಗಿ ಮೂಡಿ ಬಂದಿದ್ದು, ಈ ಚಿತ್ರದ ಪಾತ್ರಧಾರಿ ಉದಯ್‌ಕುಮಾರ್ ಅವರಿಗೆ ಬಹಳ ಚೆನ್ನಾಗಿ ಹಿಡಿಸಿದೆ. ಅದಕ್ಕೆ ತಕ್ಕಂತೆ ಉದಯ್‌ಕುಮಾರ್ ಅವರ ವೇಶಭೂಷಣ ಹಾಗೂ ನಟನೆ ಕೂಡ ಅಷ್ಟೇ ಸಹಜವಾಗಿ ಮೂಡಿಬಂದಿದೆ.
ಜಗಕುಪಕರಿಸಿ ನನಗಪಕರಿಸೋ
ಜಗದೋದ್ಧಾರಕ ನೀನೇನಾ?
ತನಗೆ ಅಪಕಾರ, ಅನ್ಯಾಯವಾಗಿರುವುದರ ಬಗ್ಗೆ ಒಂದೇ ಸಾಲಿನಲ್ಲಿ ತನ್ನ ಬೇಗುದಿಯನ್ನು ತೋಡಿಕೊಳ್ಳುವ ಕವಿ, ಈ ಸಾಲಿನಲ್ಲಿ ದೇವರ ಉದ್ದೇಶವನ್ನು ಪ್ರಶ್ನಿಸುತ್ತಾ, ನೀನಾ ಭಗವಂತ ಎನ್ನುವಲ್ಲಿ ಎರಡು ವೇರಿಯೇಶನ್ನುಗಳನ್ನು ತೋರಿಸಿದ್ದಾರೆ. "ಜಗದೋದ್ಧಾರಕ ನೀನೇನಾ" ಎಂದಾಗ ಪಾತ್ರಧಾರಿ ಒಂದು ಕ್ಷಣ ನಿಂತು, ಹಿಂದಕ್ಕೆ ತಿರುಗದೆಯೇ ಗೋಪುರದ ಕಡೆಗೆ ಕೈ ಮಾಡಿ ಪ್ರಶ್ನಿಸುವುದು ಮಾರ್ಮಿಕವಾಗಿ ಮೂಡಿಬಂದಿದೆ.
ನೀನೇನಾ?
ನೀನಾ ಭಗವಂತ?
ಈ ಪ್ರಶ್ನೆಗಳ ಯಾದಿಯ ಉದ್ದಕ್ಕೂ ದೇವರ ಮೂರ್ತಿಗಳಿಗೆ ಅಭಿಷೇಕ, ಅರ್ಚನೆ ಮುಂದುವರೆಯುತ್ತಲೇ ಇರುವುದನ್ನೂ ತೋರಿಸಲಾಗಿದೆ. ಯಾರು ಪ್ರಶ್ನಿಸಲಿ ಬಿಡಲಿ, ಅದರ ಕೆಲಸಗಳು ಹಾಗೆ ಮುಂದುವರೆಯುತ್ತವೆ ಎಂದು ಸೂಚ್ಯವಾಗಿ ಹೇಳುವಂತೆ.
ಗೋರ್ಕಲ್ಲಿಗೆ ಗುಡಿ ಮಂದಿರ ನೂರು ಮಾಡಿದ ನರನಿಗೆ ನೆಲೆಯಿಲ್ಲ
ಹೂ ಸೌಗಂಧವ ಲೇಪಿಸಿ ಹಾಡಿ, ಕರೆದರು ಕರುಣಿಸೆ ಕೃಪೆಯಿಲ್ಲ
ನೀನಾ ಭಗವಂತ?
ಮೊರೆಯುವ ವಯಲ್ಲಿನ್ನುಗಳ ಹಿನ್ನೆಲೆ ಸಂಗೀತದಲ್ಲಿ, ಒಂದು ಕಾಲನ್ನು ಎಳೆದುಕೊಂಡು ಕುಂಟುತ್ತಲೇ ವೇಗವಾಗಿ ಸಾಗಿ ಒಂದು ಕಲ್ಲಿನ ಮಂಟಪ ಅಥವಾ ಬಸದಿಯನ್ನು ಸೇರಿ ಪಾತ್ರಧಾರಿ ಮತ್ತೆ ಮುಂದುವರೆಸುತ್ತಾನೆ. ದೇವರ ಮೂರ್ತಿಯನ್ನು ಹಿನ್ನೆಲೆಯಲ್ಲಿ ತೋರಿಸುತ್ತಿದ್ದಂತೆ, ಅವುಗಳನ್ನು ಗೋರ್ಕಲ್ಲಿಗೆ ಹೋಲಿಸಿ, ಅಂತಹ ವಿಗ್ರಹಗಳಿಗೆ ನೂರಾರು ಮಂದಿರಗಳನ್ನು ಕಟ್ಟಿದ ಜನರಿಗೆ ತಲೆಯ ಮೇಲೆ ಸೂರಿಲ್ಲದೇ ಮರದ ನೆರಳಿನಲ್ಲಿ ಬದುಕುವ ವಿಪರ್ಯಾಸವನ್ನು ಕವಿ ತೋರಿಸುತ್ತಾರೆ. ಹೀಗಿದ್ದೂ, ದೇವರನ್ನು ಒಲಿಸಲೆಂದು ಹೂವು, ಸೌಗಂಧವನ್ನು ಲೇಪಿಸಿ ಹಾಡಿ, ಕರೆದರೂ ಕೂಡ ಕರುಣಿಸುವ ನೀನು ಭಗವಂತನೇ? ಇದೇ ಸಂದರ್ಭದಲ್ಲಿ ಹಿನ್ನೆಲೆ ಸಂಗೀತ ವಯಲಿನ್ನುಗಳು ಮೊರೆಯುತ್ತಿದ್ದಂತೆ ಮತ್ತೆ ಜನಜಂಗುಳಿಯನ್ನು ತೋರಿಸಲಾಗುತ್ತದೆ.
ನಂದನ ಬದುಕು ನರಕ ಮಾಡಿದರೂ
ಸ್ವರ್ಗಕೆ ಒಯ್ಯುವ ಮನಸಿಲ್ಲ
ಹಾಲಾಹಲದ ವಾನಲ ದೂಡಿ
ನಶಿಸಿದರೂ ನೀ ಕಂಡಿಲ್ಲ
ನೀನಾ? ಭಗವಂತ?
ಮುಂದಿನ ದೃಶ್ಯ ಬರುವಲ್ಲಿ, ನಾಯಕ ಒಂದು ಒಣಗಿದ ಮರದ ಕೆಳಗೆ ಆಸರೆಯಲ್ಲಿ ನಿಂತು ಹಾಡು ಮುಂದುವರೆಯುತ್ತದೆ. ಇದು ನಾಯಕನ ಉತ್ತಮವಾದ ಬದುಕು ಕಾರಣಾಂತರಗಳಿಂದ ನರಕಸದೃಶ ರೀತಿಯನ್ನು ಪಡೆದಿದ್ದಕ್ಕೆ ದೇವರನ್ನು ದೂಷಿಸುತ್ತಲೇ, ನನಗೇಕೆ ಈ ಬೇಗೆಗಳಿಂದ ಮುಕ್ತಿ ನೀಡುತ್ತಿಲ್ಲ ಎಂದು ದೈರ್ಯದಿಂದ ಪ್ರಶ್ನಿಸುತ್ತಾನೆ. ದೇವರು ನೀಡುತ್ತಿರುವ ಈ ಕಷ್ಟಕಾರ್ಪಣ್ಯಗಳನ್ನು ಹಾಲಾಹಲದ ವಾನಲಕ್ಕೆ ಹೋಲಿಸಿ, ಅದರಿಂದ ನಾಶವಾದರೂ ಭಗವಂತನ ಕಣ್ಣಿಗೇಕೆ ಕಾಣುತ್ತಿಲ್ಲ ಎಂದು ಪ್ರತಿಪಾದಿಸುತ್ತ, ಅವೆಲ್ಲ ಬರೀ ಕಲ್ಲಿನ ಮೂರ್ತಿಗಳು ಎಂಬುದಕ್ಕೆ ಒತ್ತುಕೊಡುತ್ತಾನೆ.
ನಶ್ವರ ಭೋಗದ ಆಸೆ ಕಡಲಲಿ ತೇಲಿಸಿ ಮುಳುಗಿಸಲೇಕಯ್ಯ
ಅಂತರ ತಿಳಿಯದೆ ಪಾಲಿಸುವವಗೆ ದೈವೋತ್ತಮ ಬಿರುದೇಕಯ್ಯ
ದೈವೋತ್ತಮ ಬಿರುದೇಕಯ್ಯ
ನೀನಾ ಭಗವಂತ?
ಈ ಮುಂದಿನ ಸಾಲುಗಳಲ್ಲಿ ಮನುಷ್ಯನಿಗೆ ಕಷ್ಟಕಾರ್ಪಣ್ಯಗಳು ಬರುವುದೇ ನಿಜವಾದಲ್ಲಿ, ನಶ್ವರವಾದ ಭೋಗದ ಆಸೆ ಲೋಲುಪ್ತತೆಗಳನ್ನು ಯಾಕಾದರೂ ಕೊಡಬೇಕು? ಅಲ್ಲದೇ ಈ ಅಂತರ ತಿಳಿಯದೆ ಇರುವವನಿಗೆ ದೈವೋತ್ತಮ ಎನ್ನುವ ಬಿರುದಾದರೂ ಏಕೆ? ಎಂದು ದೇವರ ಅಸ್ತಿತ್ವವನ್ನೇ ಕೆಣಕುತ್ತಾನೆ. ಈ ಹಾಡಿನ ದೃಷ್ಯೀಕರಣದ ಉದ್ದಕ್ಕೂ ಮಾರುತಿ ಹಾಗೂ ವೆಂಕಟೇಶ್ವರನ ಮೂರ್ತಿಗಳನ್ನು ವಿಶೇಷವಾಗಿ ತೋರಿಸಲಾಗಿದೆ.
ನೀನಾ ಭಗವಂತ?
ಜಗಕುಪಕರಿಸಿ ನನಗಪಕರಿಸೋ
ಜಗದೋದ್ಧಾರಕ ನೀನೇನಾ? ನೀನೇನಾ?
ಮತ್ತೆ ಜಗಕುಪಕರಿಸಿ ನನಗಪಕರಿಸುವ ಜಗದೋದ್ದಾರಕ ನೀನೇನಾ ಎಂದು ಒಂದು ಮರದ ನೆರಳಿನಲ್ಲಿ ಒರಗುತ್ತಿದ್ದಂತೆಯೇ, ಹಾಡಿನ ಮುಂದಿನ ಭಾಗ "
ಸಿರಿನಂದನ ಏನಕೇಳಲೆ ನಾ" ಎನ್ನುವ ಬೇರೊಂದು ಗೀತೆ ಎಚ್.ಪಿ. ಗೀತ ಅವರ ದ್ವನಿಯಲ್ಲಿ ಆರಂಭವಾಗುತ್ತದೆ.
1972ರ ಹೊತ್ತಿಗೆ ಈ ಹಾಡನ್ನು ಬರೆದು ತಮ್ಮದೇ ವೈಯಕ್ತಿಕ ಜೀವನದ ತುಮುಲಗಳನ್ನೇ ಈ ಹಾಡಿನ ಮೂಲಕ ಹಂಸಲೇಖ ಅವರು ಹೇಳಿಸಿರಬಹುದು ಎನ್ನುವ ಮಾತು ಕೂಡ ಓದಲು ಸಿಗುತ್ತದೆ. ನಂತರ ಸುಮಾರು ಒಂಭತ್ತು ವರ್ಷಗಳ ತರುವಾಯ ಹಂಸಲೇಖ ಅವರು ಅದ್ಯಾವ ತಪಸ್ಸಿನಲ್ಲಿ ತೊಡಗಿದ್ದರೋ ಗೊತ್ತಿಲ್ಲ. 1981ರಲ್ಲಿ ರವಿಚಂದ್ರನ್ ಅವರು ಹುಡುಕಿ ಆರಿಸಿದ ಮಾಣಿಕ್ಯದಂತೆ ತಮ್ಮ "ಪ್ರೇಮಲೋಕ"ದ ಚಿತ್ರದಲ್ಲಿ ಹಾಡು ಹಾಗೂ ಸಂಭಾಷಣೆಯಲ್ಲಿ ಹಂಸಲೇಖರನ್ನು ತೊಡಗಿಸಿಕೊಂಡ ನಂತರ ಅವರು ಇನ್ನೆಂದೂ "
ನೀನಾ ಭಗವಂತಾ?" ಎಂದು ಕೇಳಿರಲಾರರು!
ನೀವು ಈ ಹಾಡನ್ನು
ಇಲ್ಲಿ ಕೇಳಬಹುದು/ನೋಡಬಹುದು.