Showing posts with label ಹಾಸ್ಯ. Show all posts
Showing posts with label ಹಾಸ್ಯ. Show all posts

Thursday, May 21, 2020

ಕುಮರೇಸನ್-ಮೈಕ್ರೋವೇವ್ ಮೊಟ್ಟ ಮೊದಲ ಮುಖಾಮುಖಿ

ನಾವು ತೊಂಭತ್ತರ ದಶಕದ ಕೊನೆಯ ದಿನಗಳಲ್ಲಿ ನಮ್ಮ ಗ್ರಹಚಾರ ನೆಟ್ಟಗಿದ್ದುದರಿಂದ ಒಂದು ರೀತಿಯಲ್ಲಿ ಕೆಂಪು ಬಸ್ಸಿಗೆ ಕೈ ಮಾಡಿ ಹತ್ತಿ ಸಾರಾಸಗಟು Technology ಎನ್ನುವ ರೋಲರ್ ಕೋಸ್ಟರ್ ರೈಡ್ ಮಾಡಿ ಬಂದಂಥವರು.  ನಮಗೆಲ್ಲ ಆಗ ಬಹಳ ಡಿಮ್ಯಾಂಡು!  ನಮಗೆಲ್ಲ ನಮ್ಮ ಜೇಬುಗಳಲ್ಲಿ ಕನಿಷ್ಠವೆಂದರೆ ಮೂರು ಸಾವಿರ ಡಾಲರ್‌ಗಳಷ್ಟು ಮೊತ್ತದ ಟ್ರಾವೆಲರ್ಸ್ ಚೆಕ್ ಅನ್ನು ಕೊಟ್ಟು ಕಳಿಸುವುದರ ಜೊತೆಗೆ ಏರ್‌ಪೊರ್ಟ್‌ನಲ್ಲಿ ಪಿಕ್‌ಅಪ್ ಮಾಡೋದರಿಂದ ಹಿಡಿದು ನಮಗೆಲ್ಲ ತಲೆಗೊಂದರಂತೆ Homestead village ನಲ್ಲಿ ರೂಮ್ ಸಹ ಬುಕ್ ಮಾಡಿದ್ದರು.  ಆ ಸಮಯದಲ್ಲಿ ಯಾವುದೇ ಬ್ರಾಂಚ್‌ನ ಇಂಜಿನಿಯರುಗಳಾದರೂ ಇಲ್ಲಿ ಬರಬಹುದಿತ್ತು... ನಮ್ಮ ಜೊತೆಯಲ್ಲಿ ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್ ಇಂಜಿನಿಯರ್ಸ್ ಸಹ ಇದ್ದರು.

ಬಾಂಬೆಯ ಡೇಟಾಮ್ಯಾಟಿಕ್ಸ್ ಕಂಪನಿಯಿಂದ ಒಂದು ವಿಮಾನದಲ್ಲಿ ಒಟ್ಟಿಗೆ ಬಂದವರೆಂದರೆ: ಮಹಾರಾಷ್ಟ್ರದಿಂದ ಶ್ರೀನಿವಾಸ, ತಮಿಳುನಾಡಿನಿಂದ ಕುಮರೇಸನ್ ಮತ್ತು ಕರ್ನಾಟಕದಿಂದ ನಾನು!

ಇದು ನಮ್ಮ ಮೊದಲ ವಿಮಾನ ಪ್ರಯಾಣವೂ, ಮೊದಲ ಅಂತಾರಾಷ್ಟ್ರೀಯ ಪ್ರಯಾಣವೂ ಆದ್ದರಿಂದ ನಮಗೆಲ್ಲ ನಮ್ಮದೇ "ತಲೆಬಿಸಿ"ಯಾಗಿತ್ತು.  ನಮ್ಮ ಸೂಟ್‌ಕೇಸ್‌ಗಳಲ್ಲಿ ಅನೇಕಾನೇಕ ವಸ್ತುಗಳನ್ನು ತಂದಿದ್ದೆವು.  ನಮ್ಮ ಕುಮರೇಸನ್ ಅಂಥವರು ಮೂರು ಕೆ.ಜಿ. ಅಕ್ಕಿ ತಂದಿದ್ದೂ ನನಗಿನ್ನೂ ಚೆನ್ನಾಗಿ ನೆನಪಿದೆ.

"ಅಂತಾರಾಷ್ಟ್ರೀಯ ಪ್ರಯಾಣ ಮಾಡಿ ಸುಸ್ತಾಗಿದೆ, ಎಲ್ಲರೂ ಚೆನ್ನಾಗಿ ರೆಸ್ಟ್ ತೆಗೆದುಕೊಳ್ಳಿ, ಸೋಮವಾರದಿಂದ ಕ್ಲೈಂಟ್ ಇಂಟರ್‌ವ್ಯೂಗಳು ಶುರುವಾಗುತ್ತೆ" ಅಂತ ಹೇಳಿ ನಮ್ಮಷ್ಟಕ್ಕೆ ನಮ್ಮನ್ನು ನಮ್ಮ ಮೊದಲ ವಾರಾಂತ್ಯದಲ್ಲಿ ಬಿಟ್ಟಿದ್ದರು.  ನಮಗೆಲ್ಲ ಬಾತ್‌ರೂಮಿನಲ್ಲಿ ತಿರುಗಿಸಿದರೆ ಹೇಗೆ ಬಿಸಿನೀರು ಬರುತ್ತದೆ.  ಆಟ್ಯಾಚ್ಡ್ ಅಡುಗೆ ಮನೆಯಲ್ಲಿರುವ ಮಿಷನ್ನುಗಳನ್ನು ಹೇಗೆ ಬಳಸೋದು? ಕಾಫಿ ಹೇಗೆ ಮಾಡುವುದು.  ಪ್ರಿಜ್ ಇಷ್ಟು ದೊಡ್ದದು ಇರುತ್ತದೆಯೇ? ಹೀಗೆ ಅನೇಕ ಸೋಜಿಗಗಳು ಎದುರಾಗುತ್ತಿದ್ದವು.  ನಾನೂ ಶ್ರೀನಿವಾಸನೂ ನಮಗೆ ಗೊತ್ತಿರದ ಮಿಷೀನುಗಳ ಉಸಾಬರಿ ಬೇಡ ಎಂದು ಹೊರಗಿನಿಂದ ತಂದ ಊಟವನ್ನು ತಿನ್ನುತ್ತಿದ್ದೆವು.  ಹೆಚ್ಚೆಂದರೆ, ಕಾಫಿಮೇಕರ್‌ನಲ್ಲಿ ಕಾಫಿ ಮಾಡಿಕೊಳ್ಳುತ್ತಿದ್ದೆವು.  ಆದರೆ, ಅದರಿಂದ ಹೊರಬಂದ ಕಪ್ಪು ಬಣ್ಣದ ಕಾಫಿ ನಮ್ಮ ಕಡೆಯ ಡಿಕಾಕ್ಷನ್‌ನಂತೆಯೂ ಬಳಸಲಾಗದೇ, ಈ ಕಡೆ ನೇರವಾಗಿ ಅದನ್ನೇ ಹಾಲು-ಸಕ್ಕರೆಯನ್ನು ಹಾಕಿ ಕುಡಿಯಲಾಗದೇ ಬಳಲಾಡಿದ್ದೆವು... ಹೊರಗಿನ ಸ್ಟಾರ್‌ಬಕ್ಸ್ ಅಂತಹ ಅಂಗಡಿಯಲ್ಲಿ ದೊರೆತ ಕಾಫಿಯೂ ನಮ್ಮ ಕಾಫಿಯ ದಾಹವನ್ನು ನೀಗಿಸಿರಲಿಲ್ಲ... ಇಲ್ಲಿಗೆ ಬಂದ ಎರಡೇ ದಿನಗಳಲ್ಲಿ ನಾಲಿಗೆ ರುಚಿಯನ್ನು ಗುರುತಿಸಲಾರದಷ್ಟು ಕೆಟ್ಟು ಹೋಗಿತ್ತು.

ನಾವು ಮೂರು ಜನರಿಗೆ ಮೂರು ರೂಮುಗಳನ್ನು ಕೊಟ್ಟಿದ್ದರೂ, ನಾವೆಲ್ಲರೂ ದಿನದ ಹೆಚ್ಚು ಪಾಲು ಯಾವುದಾದರೊಂದು ರೂಮಿನಲ್ಲಿ ಇರುತ್ತಿದ್ದುದೇ ಹೆಚ್ಚು.  ಇಂತಹ ಸಂದರ್ಭದಲ್ಲಿ ಕುಮರೇಸನ್ ಸ್ಥಳೀಯ ಸೂಪರ್ ಮಾರ್ಕೆಟ್‌ಗೆ ಹೋಗಿ ತರಾವರಿ ಸಾಮಾನುಗಳನ್ನು ತಂದು ಎಕ್ಸ್‌ಪೆರಿಮೆಂಟ್ ಮಾಡುವ ಹುನ್ನಾರದಲ್ಲಿದ್ದನು.  ನಾನು ಮತ್ತು ಶ್ರೀನಿವಾಸನು ಬೇಡವೆಂದರೂ ಅವನದ್ದು ಒಂದೇ ಹಠ.  ಎಷ್ಟೇ ಅಂದರೂ ಇಂಜಿನಿಯರ್ ಅಲ್ಲವೇ? ಟಿವಿ ಚಾನೆಲ್ಲುಗಳನ್ನು ಒಂದು ಕಡೆಯಿಂದ ಹಾಕಿಕೊಂಡು ಬರುವುದು.  ಸ್ಟೋವ್‌ನಲ್ಲಿ ಎಲ್ಲ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ? ಇಲ್ಲಿ ಕುಕಿಂಗ್ ಗ್ಯಾಸ್ ಹೇಗೆ ಪೈಪುಗಳಲ್ಲಿ ಎಲ್ಲಿಂದ ಬರುತ್ತದೆ?  ಕಾಫಿ ಪುಡಿ ಪ್ಯಾಕೆಟ್ ಒಡೆದು ನೋಡಿದರೆ ಹೇಗಿರುತ್ತದೆ? ಇವರ ಪುಡಿಯನ್ನು ಬಳಸಿ ನಾವು ಡಿಕಾಕ್ಷನ್ ಯಾಕೆ ಮಾಡಬಾರದು?  ಮೈಕ್ರೋವೇವ್ ಹೇಗೆ ಕೆಲಸ ಮಾಡುತ್ತದೆ? ಇತ್ಯಾದಿ ಇತ್ಯಾದಿ.

ಹೀಗಿದ್ದವನು, ಒಂದಿಷ್ಟು ಸಾಮಾನುಗಳನ್ನು ತೆಗೆದುಕೊಂಡು ಬಂದು ಫ್ರಿಜ್ ತುಂಬ ತುಂಬಿಸಿಕೊಂಡ... ನಾವು ಅವನ ಜೊತೆ ಕೈ ಜೋಡಿಸಿ ಒಂದಿಷ್ಟು ಪ್ರಯೋಗಳಿಗೆ ಸಾತ್ ಕೊಡತೊಡಗಿದೆವು.

ಹೀಗಿರುವಾಗ... ಕುಮರೇಸನ್‌ ಒಂದು ದಿನ ಅಭೂತಪೂರ್ವ ಐಡಿಯಾವೊಂದನ್ನು ಕಂಡು ಹಿಡಿದವನಂತೆ ನನ್ನ ರೂಮಿಗೆ ಓಡಿಬಂದ... "ನಿನಗ್ಗೊತ್ತಾ ಮೈಕ್ರೋವೇವ್‌ನಲ್ಲಿ ಮೊಟ್ಟೆ ಬಿಸಿಮಾಡಬಹುದು!"  ನಾನೂ-ಶ್ರೀನಿವಾಸನೂ ಅಂಗಾಲಾಚಿದೆವು... ನಮಗಿಬ್ಬರಿಗೂ ಸಹ ಮೊಟ್ಟೆಯ ಮೇಲಾಗಲೀ ಕೋಳಿಗಳ ಮೇಲಾಗಲಿ ವಿಶೇಷವಾದ ಅಸ್ತೆ ಏನೂ ಇಲ್ಲವಾದ್ದರಿಂದ ನಾವು ಗಲಿಬಿಲಿಗೊಂಡು ಎಂದಿನಂತೆ ನಮ್ಮ risk averse ಭಾಷೆಯಲ್ಲಿ "ಬೇಡ, ಗುರೂ!" ಎಂದು ಹೇಳಿದರೂ ಅವನು ಸುಮ್ಮನಾಗಲಿಲ್ಲ... ಮರಾಠಿಗರಿಗೆ, ಕನ್ನಡಿಗರಿಗೆ ಇಲ್ಲದ ಮೊಂಡು ಧೈರ್ಯ ತಮಿಳಿಗರಿಗೆ ಎಂದು ಅವತ್ತೇ ಗೊತ್ತಾಗಿದ್ದು!

ಅವನು ಮೈಕ್ರೋವೇವ್‌ನ ಒಳಗೆ ಒಂದು ಪಿಂಗಾಣಿ ಪಾತ್ರೆಯಲ್ಲಿ ಮೊಟ್ಟೆಯನ್ನು ಇಟ್ಟನೋ, ಅಥವಾ ಸುಮ್ಮನೇ ಒಳಗೇ ತಿರುಗುವ ಗ್ಲಾಸ್‌ ಮೇಲೆ ಇಟ್ಟನೋ ಗೊತ್ತಿಲ್ಲ... ಆದರೆ, ಅದರ ಸ್ವಿಚ್ ಅನ್ನು ತಿರುಗಿಸಿ ಡುರ್‌ರ್ ಎಂದು ಸೌಂಡು ದೊಡ್ಡದಾಗಿ ಬರುವಂತೆ ಏನೇನೋ ಬಟನ್ನುಗಳನ್ನು ಒತ್ತುತ್ತಿದ್ದ.  ಜೊತೆಗೆ ತನ್ನ ತಲೆಯನ್ನು ಅತ್ತಿಂದಿತ್ತ ಅಲ್ಲಾಡಿಸುತ್ತಾ ಒಳಗೇನಾಗುತ್ತಿದೆ ಎಂದು ನೋಡ ತೊಡಗಿದ್ದ... ನಮಗೆ ಆಗಲೇ ಗೊತ್ತಾಗಿದ್ದು... ಈ ಮೈಕ್ರೋವೇವ್-ಅವನ್ ಒಳಗೆ ನೇರವಾಗಿ ನೋಡಿದರೆ ಅದರ ಬಾಗಿಲಿನ ಮುಖೇನ ಸರಿಯಾಗಿ ಕಾಣದಿದ್ದುದು ಆ ಕಡೆ-ಈ ಕಡೆ ತಲೆಯನ್ನು ಅಲ್ಲಾಡಿಸುತ್ತಾ ನೋಡಿದರೆ ಸರಿಯಾಗಿ ಕಾಣುತ್ತದೆ ಎಂದು.

ಇವನದ್ದು ಯಾವಾಗಲೂ ಒಂದು ಕಥೆ ಇದ್ದೇ ಇರುತ್ತೆ... ಎಂದು ನಾನೂ-ಶ್ರೀನಿವಾಸನೂ HBO ಚಾನೆಲ್‌ ನಲ್ಲಿ ಯಾವುದೋ ಸಿನಿಮಾವನ್ನು ನೋಡುವುದರಲ್ಲಿ ಮಗ್ನರಾದೆವು.  ಒಂದೈದು ನಿಮಿಷವಾಗುವುದರ ಒಳಗೆ ಕುಮರೇಸನ್ ಹೌಹಾರಿ ಬೀಳುವಂತೆ ಮೈಕ್ರೋವೇವ್ ಡಬ್ ಎಂದು ಜೋರಾಗಿ ಸದ್ದು ಮಾಡಿ ಅದರ ಬಾಗಿಲು ಒಳಗಿನ ಪ್ರೆಶರ್‌ನಿಂದ ಜೋರಾಗಿ ತೆಗೆದುಕೊಂಡು ಕುಮರೇಸನ್ ಹಣೆಗೆ ಬಂದು ಬಡಿಯಿತು... ಒಳಗಡೆ ಕುದಿಯುತ್ತಿದ್ದ ಮೊಟ್ಟೆ ಪೀಸುಪೀಸಾಗಿ ಎಲ್ಲ ಕಡೆಗೆ ಹಾರಿ ಹರಡಿಕೊಂಡಿತು... ಇಡೀ ರೂಮೆಲ್ಲ ಒಂದು ರೀತಿಯ ಹೈಡ್ರೋಜನ್ ಸಲ್ಫೈಡ್ ವಾಸನೆ ಹರಡುತ್ತಾ ಕೆಮಿಸ್ಠ್ರಿ ಲ್ಯಾಬ್ ಅನ್ನು ನೆನಪಿಗೆ ಬಂದಿತು.

ಇಲ್ಲೇ ನೋಡಿ ನನಗೆ ಮಾನವತೆಯ ಮೂಲ ಮಂತ್ರವಾದ ಸಹಾಯ ಮನೋಭಾವನೆಯ ಬಗ್ಗೆ ಮರುಕಬಂದಿದ್ದು!  ಕುಮರೇಸನ್ ಹಣೆಗೆ ಬಾಗಿಲು ಅಪ್ಪಳಿಸಿ ಅಲ್ಲಿ ಅರ್ಧ ಮೊಟ್ಟೆಯ ಗಾತ್ರದ ಉಬ್ಬು ಬಂದಿತ್ತು... ನಾನೂ-ಶ್ರೀನಿವಾಸನೂ ಸೋಫಾದಿಂದ ಒಮ್ಮೆ ಹಾರಿ ಕುಳಿತು ಇವನ ಅವಾಂತರವನ್ನು ನೋಡಿ ಜೋರಾಗಿ ನಗತೊಡಗಿದೆವು... ಮನುಷ್ಯನ ಆಳವಾದ ಮನಸ್ಸಿನಲ್ಲಿ ಅದೇನು ತಳಮಳಗಳಿರುತ್ತವೆಯೋ ಯಾರು ಬಲ್ಲರು? ಇಲ್ಲವಾದರೆ ಒಬ್ಬರ ಸಂಕಷ್ಟ ಮತ್ತೊಬ್ಬರಿಗೆ ಅದು ಹೇಗೆ ನಗು ತರಿಸಲು ಸಾಧ್ಯ?

ಕುಮರೇಸನ್ ಪರಿಸ್ಥಿತಿ ಗಂಭೀರವಾಗಿತ್ತು - ಗಂಡ ಸತ್ತ ದುಃಖ ಒಂದು ಕಡೆ, ಬಡ್ ಕೂಪಿನ ಉರಿ ಮತ್ತೊಂದು ಕಡೆ ಎಂದು ಹೇಳುತ್ತಾರಲ್ಲ, ಹಾಗೆ.  ಈ ಕಡೆ ಮೊಟ್ಟೆ ಬೇಯಲಿಲ್ಲ, ಹಣೆ ಮೇಲೆ ಉಬ್ಬು ಬಂದು ಕುಳಿತಿದೆ... ರೂಮೆಲ್ಲಾ ಮೆಸ್ ಆಗಿದೆ, ಎಲ್ಲಾ ಕಡೆ ಸೀದು ಹೋದ ವಾಸನೆ ಬೇರೆ ಬರುತ್ತಿದೆ... ಇದನ್ನೆಲ್ಲ ಕ್ಲೀನು ಮಾಡುವುದು ಹೇಗೆ, ಯಾವಾಗ? ಇನ್ಯಾವತ್ತೂ ಈ ಮೈಕ್ರೋವೇವಿನ ಸಹವಾಸ ಬೇಡಪ್ಪಾ ಎನ್ನುವ ದಯನೀಯ ಸ್ಥಿತಿ ಅವನದಾಗಿತ್ತು... ಮೂರೂ ಜನ ಸೇರಿ ರೂಮನ್ನು ಕ್ಲೀನು ಮಾಡಿದರೂ, ಮಾರನೇ ದಿನ ಕ್ಲೀನಿಂಗ್ ಕ್ರೂ ಬಂದು ಕ್ಲೀನ್ ಮಾಡಿದರೂ ಒಂದು ವಾರದ ಮಟ್ಟಿಗಾದರೂ ಆ ವಾಸನೆ ಇತ್ತು... ವಾಸನೆಯ ನೆನಪು ಹಾಗಿರಲಿ, ಈ ಪ್ರಕರಣವನ್ನು ನೆನೆಸಿಕೊಂಡರೆ ಇಪ್ಪತ್ತು ವರ್ಷಗಳ ನಂತರವೂ ನಗು ಉಕ್ಕಿ ಬರುತ್ತದೆ!

Monday, May 11, 2020

ಕೊರೋನಾ ಕೃಪೆ: ಸಾಲುಗಟ್ಟಿದ To-do list

ನಿಮಗೂ ಹೀಗೆ ಅನಿಸಿರಬಹುದು... ಈ ಕೊರೋನಾ ವೈರಸ್ಸಿನ ಉಪಟಳ ಬಹಳ ಹೆಚ್ಚಾಗಿದೆ, ಅದರ ಉಪದ್ರವಕ್ಕಿಂತ ಉಪಟಳವೇ ಹೆಚ್ಚು!

ಕಳೆದ ಎಂಟು ವಾರಗಳಿಂದ ಮನೆಯಲ್ಲೇ ಕುಳಿತ ನಮಗೆ ನಿಧಾನವಾಗಿ ನಮ್ಮೆಲ್ಲ ಚಟುವಟಿಕೆಗಳು online ಮಾಧ್ಯಮದಲ್ಲಿ ಹೊರಹೊಮ್ಮತೊಡಗಿದವು.  ಆಫೀಸಿನ ಕಾನ್‌ಫರೆನ್ಸ್‌ಗೆಂದು ಅಣಿವಾಗಿದ್ದ ಟೂಲ್‍ಗಳೆಲ್ಲ ಏಕ್‌ದಂ ಮನರಂಜನಾ ಮಾಧ್ಯಮಗಳಾಗಿ ಬದಲಾದವು.  ಮಾಹಿತಿ, ಮನರಂಜನೆ, ಕಮ್ಯೂನಿಟಿ ಚಟುವಟಿಕೆ, ಆಟ-ಪಾಠ, ದೇಣಿಗೆ, ಚಾರಿಟಿ... ಮೊದಲಾದ ವಿಷಯಗಳೆಲ್ಲ ಈ ಆನ್‌ಲೈನ್ ಮಾಧ್ಯಮಗಳಲ್ಲೇ ಆಗತೊಡಗಿ ಒಂದು ತಲೆ ಚಿಟ್ಟು ಹಿಡಿದಂತಾಗಿದೆ.

ವಾರದ ಉದ್ದಕ್ಕೂ ಆಫೀಸಿನ ಕಾಲ್‌ಗಳು.  ವಾರಾಂತ್ಯ ಹತ್ತಿರ ಬರುತ್ತಿದ್ದಂತೆ ಕಮ್ಯುನಿಟಿಗೆ ಸಂಬಂಧಿಸಿದ Zoom, WebEx, Group ಮೀಟಿಂಗ್‍ಗಳು.  ಇವೆಲ್ಲದರ ಮಧ್ಯೆ ನೋಡ(ಲೇ) ಬೇಕಾದ ಅದೆಷ್ಟೋ ಸಿನಿಮಾಗಳು, ಓದಬೇಕಾದ ಅದೆಷ್ಟೋ ಪುಸ್ತಕಗಳು, ತೆಗೆದುಕೊಳ್ಳಬಹುದಾದ ಅದೆಷ್ಟೋ ಟ್ರೈನಿಂಗ್‌ಗಳು, ಮಾತನಾಡಿಸಬೇಕಾದ ಅದೆಷ್ಟೋ ನೆಂಟರು-ಇಷ್ಟರುಗಳು, ಕೇಳಬೇಕಾದ ಹಾಡುಗಳು, ಪಾಡ್‌ಕ್ಯಾಸ್ಟ್‌ಗಳು, ಸಂಶೋಧಿಸ ಬೇಕಾದ ವಿಷಯಗಳು, ಕ್ಲೀನ್ ಮಾಡಬಹುದಾದ ಕ್ಲಾಸೆಟ್ಟುಗಳು, ಹೇಳಬಹುದಾದ ಅದೆಷ್ಟೋ ಹಾಡುಗಳು, ಕೇಳಬೇಕಾದ ಪ್ರವಚನಗಳು... ಹೀಗೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ.  ಈ ಪಟ್ಟಿಗೆ ತಿಲಕ ಪ್ರಾಯವಾಗಿ ಮಾಡಬಹುದಾದ ಮೆಡಿಟೇಷನ್‍ ಅನ್ನು ಸೇರಿಸಿ ಬಿಟ್ಟರೆ, ದಿನದ 24 ಘಂಟೆಗಳು ನಿಜವಾಗಿಯೂ ಸಾಲವು ಎಂದೆನಿಸೋದಿಲ್ಲವೇ?

ಹೀಗೆ ದೊಡ್ಡದಾಗುವ ಹಳವಂಡಗಳ ಪಟ್ಟಿ ನನಗೊಬ್ಬನಿಗೆ ಮಾತ್ರ ಸೀಮಿತವಲ್ಲ ಎಂದು ಖಂಡಿತವಾಗಿ ಹೇಳಬಹುದು.  ಮೊದಲೇ "ಓಡುವುದೇ ಗುರಿ"ಯಾಗಿದ್ದ ನಮಗೆ, ಇದು ಮನೆಯಲ್ಲೇ ಕುಳಿತು ಸದಾ ಓಡುತ್ತಲೇ ಇರಿ ಎಂದು ಒಂದು ರೀತಿಯಲ್ಲಿ ಟ್ರೆಡ್‌ಮಿಲ್ ಹತ್ತಿಸಿ ಕುಳಿತಂತಿದೆ.

ಏನೇ ಹೇಳಲಿ, ಈಗಿನ ತಂತ್ರಜ್ಞಾನದ ಪ್ರಕಾರ ಜನರು 4K videoಗೆ ಹೆಚ್ಚು ಆದ್ಯತೆ ಕೊಟ್ಟರೇ ವಿನಾ, ಈ ಗ್ರೂಪ್‌ ಮೀಟಿಂಗುಗಳ ಆಡಿಯೋ ಕ್ವಾಲಿಟಿ ಸ್ವಲ್ಪವೂ ಚೆನ್ನಾಗಿರೋದಿಲ್ಲ... ಅದರಲ್ಲೂ ನಮ್ಮನೆಯ ಸೊರಗಿದ ಇಂಟರ್‌ನೆಟ್ ವೇಗದ ಮುಂದೆ ಗಂಟಲು ಕೊಸರಿಕೊಂಡು ಮಾನೋ ಟ್ಯೂನ್‌ನಲ್ಲಿ ಹಾಡುಗಳು ಕೇಳಿಸುವಂತೆ ಅನುಭವವಾಗುತ್ತವೆ.

ನಿಮ್ಮ (catch up ಮಾಡುತ್ತಿರುವ) ಹಳವಂಡಗಳ ಪಟ್ಟಿ ಉದ್ದವಿದೆಯೇ? ಅದನ್ನು ಇಲ್ಲಿ ಹಂಚಿಕೊಳ್ಳಬಹುದಲ್ಲ?

Wednesday, May 06, 2020

ಗೌಡರು ಚಹಾ ಪುಡಿ ಕದ್ದ ಪ್ರಸಂಗವು...

ಇದು ಮೂರು ದಶಕಗಳ ಹಳೆಯ ಕಥೆಯಾದರೂ ಇವತ್ತಿಗೂ ನಮ್ಮನೆಯಲ್ಲಿ ನಗೆ ಉಕ್ಕಿಸುತ್ತದೆ.  ಮೊನ್ನೆ ಕೊರೋನಾ ವೈರಸ್ ಸ್ಪೆಷಲ್ ಎಂದು ನಮ್ಮ ಹಳವಂಡಗಳನ್ನೆಲ್ಲ ಹರಡಿಕೊಂಡು ಅಕ್ಕ-ತಮ್ಮ ಮಾತನಾಡುತ್ತಿದ್ದಾಗ, ಅಲ್ಲಿಯೂ ನುಸುಳಿತು, ಈ ಚಹಾ ಪುಡಿಯ ಕಥೆ... ಇದನ್ನು ನೆನಪಿಸಿಕೊಂಡಾಗಲೆಲ್ಲ ಇವತ್ತಿಗೂ ನಮ್ಮಲ್ಲಿ ನಗೆ ಉಕ್ಕಿಸುವುದು ಖಂಡಿತ.

***

ನನ್ನ ಅಕ್ಕ ಆನವಟ್ಟಿಯಿಂದ ಹನ್ನೆರೆಡು ಕಿಲೋ ಮೀಟರ್ ದೂರದ ಜಡೆ ಗ್ರಾಮದಲ್ಲಿ ಟೀಚರ್ ಆಗಿ ನೇಮಕಗೊಂಡಾಗ, ಪ್ರತಿನಿತ್ಯವೂ ಬಸ್ಸಿನಲ್ಲಿ ಹೋಗಿ ಬರುವ ಕಷ್ಟವೇಕೆ ಎಂದು ಅಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡು ಇದ್ದಳು.  ಆಗೆಲ್ಲಾ ಬಸ್ಸುಗಳ ಅನುಕೂಲ ಅಷ್ಟು ಇರಲಿಲ್ಲ.  ಬಸ್ಸುಗಳ ಅನುಕೂಲವಿದ್ದರೂ ಹನ್ನೆರಡು ಕಿಲೋಮೀಟರ್ ಅನ್ನು ಕಾಲುನಡಿಗೆಯಲ್ಲಿ ಎರಡೂ ಕಾಲು ಘಂಟೆಯೊಳಗೆ ಕ್ರಮಿಸಬಹುದಿತ್ತು, ಅದೇ ದೂರಕ್ಕೆ ಬಸ್ಸಿನಲ್ಲಿ ಮೂರು ಘಂಟೆಗಳ ಕಾಲ ತೆಗೆದುಕೊಳ್ಳುತ್ತಿತ್ತು.  ಅಲ್ಲದೇ ಎರಡು ಬಸ್ಸುಗಳನ್ನು ಬದಲಾಯಿಸಬೇಕಾಗಿತ್ತು: ಆನವಟ್ಟಿಯಿಂದ ತವನಂದಿಗೆ ಒಂದು, ತವನಂದಿಯಿಂದ ಜಡೆಗೆ ಹೋಗುವ ಬಸ್ಸು ಮತ್ತೊಂದು.

ಮನೆ ಅಂದ ಮೇಲೆ ಒಂದಿಷ್ಟು ಪಾತ್ರೆ-ಪಡಗ ಇವೆಲ್ಲ ಇರಬೇಕಾದ್ದೆ.  ಅಡುಗೆ ಮಾಡಿಕೊಳ್ಳುತ್ತೇವೆ ಎಂದ ಮೇಲೆ, ಎಲ್ಲ ಸೌಲಭ್ಯಗಳ ಜೊತೆಗೆ ಕಾಫಿ-ಟೀ ಮಾಡಿಕೊಳ್ಳುವುದಕ್ಕೂ ಅನುಕೂಲವಿಲ್ಲದಿದ್ದರೆ ಹೇಗೆ? ಈ ರೀತಿ, ನನ್ನ ಅಕ್ಕ ಒಂದು ಸಣ್ಣ ಕುಟುಂಬಕ್ಕೆ ಎಷ್ಟು ಬೇಕೋ ಅಷ್ಟು ಸಾಮಾನುಗಳ ಜೊತೆಗೆ ಒಂದು ಸಣ್ಣ ವ್ಯವಸ್ಥಿತ ಕುಟುಂಬಕ್ಕೆ ಏನೇನು ಬೇಕೋ ಅಷ್ಟನ್ನೂ ಹೊಂದಿಸಿಕೊಂಡು ನೆಮ್ಮದಿಯಿಂದ ಇದ್ದಳು.

ಹೀಗಿರುವಾಗ ಒಂದು ಸಣ್ಣ ತೊಂದರೆ ಕಾಣಿಸಿಕೊಳ್ಳತೊಡಗಿತು.  ಆಗಿನ ಕಾಲದಲ್ಲಿ ಕಾಫಿ ಪುಡಿ, ಟೀ-ಪುಡಿಯನ್ನು ಬಹಳಷ್ಟು ದಾಸ್ತಾನು ಮಾಡಿ ಯಾರೂ ಇಟ್ಟುಕೊಳ್ಳುತ್ತಿರಲಿಲ್ಲವೆನಿಸುತ್ತದೆ.  ಅಕ್ಕ ತಂದಿಟ್ಟುಕೊಂಡ ಚಾಪುಡಿ ಡಬ್ಬದಲ್ಲಿ ದಿನೇದಿನೇ ಪುಡಿಯ ಪ್ರಮಾಣ ಕಡಿಮೆ ಆಗುವುದನ್ನು ಇವಳು ಗಮನಿಸಿದಳು.  ಇವಳು ಬಿಟ್ಟರೆ ಮತ್ತೆ ಬೇರೆ ಯಾರೂ ಇರದ ಮನೆಯಲ್ಲಿ ಅದು ಖಾಲಿ ಆಗಲು ಹೇಗೆ ತಾನೆ ಸಾಧ್ಯ? ಅದರೂ ಇರಲಿ ಎಂದು ಡಬ್ಬದಲ್ಲಿ ಒಂದು ಗುರುತು ಮಾಡಿ ಮರುದಿನ ಶಾಲೆಗೆ ಹೋಗಿ ಬಂದು ನೋಡುತ್ತಾಳೆ ಮತ್ತೆ ಕಡಿಮೆ ಆಗಿದೆ.  ಇದು ಏನೇ ಕಿತಾಪತಿ ಇದ್ದರೂ ಪಕ್ಕದ ಮನೆ ಗೌಡರ ಕಿತಾಪತಿಯೇ ಸೈ ಎಂದು, ಇವರಿಗೆ ಬುದ್ಧಿ ಕಲಿಸಬೇಕೆಂದು ಯೋಚನೆ ಮಾಡಿದಳು.

ಒಂದು ಪೋರ್ಶನ್ ಮನೆಯಲ್ಲಿ ಎರಡು ಕುಟುಂಬಗಳು ವಾಸಿಸೋದು ಸಹಜ.  ಬಾಡಿಗೆ ಕೊಡುವ ಮುಖೇನ ಅರ್ಧ ಮನೆಯನ್ನು ಇನ್ನೊಬ್ಬರಿಗೆ ವಾಸಿಸಲಿಕ್ಕೆ ಕೊಟ್ಟು ಅದರಿಂದ ಒಂದು ನಿರ್ದಿಷ್ಟ ಆದಾಯ ಪಡೆಯುವುದು ಎಲ್ಲರೂ ಬಲ್ಲ ವಾಡಿಕೆ.  ಆದರೆ, ಈ ರೀತಿ ಬಾಡಿಗೆ ಮನೆ ಕೊಟ್ಟವರು, ಟೀ ಪುಡಿಯನ್ನು ಕದಿಯುತ್ತಾರೆ ಎಂದು ಯಾರು ತಾನೇ ಯೋಚಿಸಲಿಕ್ಕೆ ಸಾಧ್ಯ?

ನನ್ನ ಅಕ್ಕ ಅಂದಿನಿಂದ ಟೀ ಮಾಡಿ ಉಪಯೋಗಿಸಿದ್ದ ಪುಡಿಯನ್ನು ಸಂಗ್ರಹಿಸಿ ಇಡಲಾರಂಭಿಸಿದಳು.  ಅದು ಸುಮಾರು ಒಂದು ಡಬ್ಬ ತುಂಬುವ ಪ್ರಮಾಣ ಬರುತ್ತಲೇ, ಅದನ್ನು ಒಟ್ಟು ಗೂಡಿಸಿ, ಎರಡು ಮೂರು ಸಾರಿ ಚೆನ್ನಾಗಿ ಕುದಿಸಿ ಅದರಲ್ಲಿದ್ದ ಚಹಾದ ಗುಣವನ್ನೆಲ್ಲಾ ತೆಗೆದುಬಿಟ್ಟು, ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿ ಹಾಕಿದಳು.  ಅದು ಚೆನ್ನಾಗಿ ಒಣಗಿದ ನಂತರ, ಮೇಲ್ನೋಟಕ್ಕೆ ಕಪ್ಪು ಚಹಾಪುಡಿಯಂತೆ ಕಂಡು ಬಂದರೂ ಅದರಲ್ಲಿ ಚಹಾದ ಒಂದು ಲವಲೇಶ ಅಂಶವೂ ಇದ್ದಿರಲಿಲ್ಲ.  ನಂತರ ಆ ಪುಡಿಯನ್ನೆಲ್ಲ ತನ್ನ ಚಹಾಪುಡಿ ಡಬ್ಬದಲ್ಲಿ ಹಾಕಿಟ್ಟು ಕಳ್ಳ ಬಂದು ಕದಿಯುವುದನ್ನು ನಿರೀಕ್ಷಿಸಿದಳು.

ಒಂದೆರಡು ದಿನದಲ್ಲಿ ಕಳ್ಳ ಬಂದು ಟೀಪುಡಿಯನ್ನು ಕದ್ದಿದ್ದಾಯಿತು.  ಆದರೆ, ಪಕ್ಕದ ಮನೆಯಲ್ಲಿ ಟೀ ಕುದಿಸುತ್ತಿದ್ದವರು ಬೈಯುವುದು ಕೇಳಿ ಬಂದು ಇವಳಿಗೆ ನಗುತಡೆಯದಾಯಿತು.  ಇವಳ ಮನೆಯಿಂದ ಕದ್ದ ಟೀ ಪುಡಿಯಲ್ಲಿ ಟೀ ಅಂಶ ಇದ್ದರೆ ತಾನೆ ಅದು ತನ್ನ ಗುಣವನ್ನು ತೋರಿಸುವುದು.  ಅಂದಿನಿಂದ ಇವಳ ಮನೆಯಲ್ಲಿ ಟೀ ಪುಡಿ ಕಳ್ಳತನವಾಗುವುದು ನಿಂತು ಹೋಯಿತಂತೆ!

Thursday, April 23, 2020

ಬಂಡವಾಳಶಾಹಿ ವಚನಗಳು!

ನಾವು ಕರ್ನಾಟಕದ ಹಳ್ಳಿಯ ಶಾಲೆಗಳಿಂದ ಬಂದವರು.  ನಾವೆಲ್ಲ ವಚನಕಾರರ ಹೆಸರುಗಳು ಗೊತ್ತಿಲ್ಲದೇ ಅದೆಷ್ಟೋ ವಚನಗಳನ್ನು ಜಾನಪದ ಗೀತೆಗಳಂತೆ ಕಲಿಯುತ್ತಿದ್ದೆವು, ಅವುಗಳನ್ನು ಪ್ರಾರ್ಥನೆಯಾಗಿ ಹಾಡುತ್ತಿದ್ದೆವು...ಕರ್ನಾಟಕದ ಇತಿಹಾಸದಲ್ಲಿ ಹನ್ನೊಂದು-ಹನ್ನೆರಡನೇ ಶತಮಾನದಲ್ಲಿ ಜನಿಸಿದ ವಚನಕಾರರು, ಅವರ ಸಾಹಿತ್ಯ, ಅವರ ಜೀವನ ಶೈಲಿ, ಅವರ ಪರಂಪರೆ ಇವೆಲ್ಲವೂ ನಮ್ಮನ್ನು ಭಾರತದ ಸಾಮಾಜಿಕ ಪ್ರಗತಿಯ ಪಥದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುತ್ತವೆ.  ಈ ಹಿನ್ನೆಲೆಯಲ್ಲಿ ಬೆಳೆದು ಬಂದ ನಾವು ನಮ್ಮ "ವಚನ" ಶೈಲಿಯನ್ನು ಇಂದಿನ ಕ್ಯಾಪಿಟಲಿಸ್ಟಿಕ್ (ಬಂಡವಾಳಶಾಹಿ) ವ್ಯವಸ್ಥೆಯಲ್ಲಿ ಹೇಗೆ ಬದಲಾಯಿಸಿಕೊಳ್ಳುತ್ತೇವೆ ಎಂಬುದನ್ನು ಕುರಿತು ಒಂದು ವಿಡಂಬನಾತ್ಮಕ ಬರಹ - ವಚನಕಾರರ ಕ್ಷಮೆಯನ್ನು ಕೋರಿ!

***

Twice a year, during performance review time...
ಕಳಬೇಕು
ಕೊಲಬೇಕು
ಹುಸಿಯ ನುಡಿಯಲು ಬೇಕು
ಮುನಿಯಬೇಕು
ತನ್ನ ಬಣ್ಣಿಸ ಬೇಕು
ಇದಿರ ಹಳಿಯಲು ಬೇಕು
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ (ಬಾಸ್ ಎಂಬ) ಕ್ಯಾಪಿಟಲಿಸ್ಟಿಕ್
ದೇವನ ಒಲಿಸುವ ಪರಿ.

End of year, around Ratings & Rankings
ಸ್ಕಿಲ್ ಇದ್ದವರು ಕೋಡ್ ಅನ್ನು ಬರೆಯುವರು
ನಾನೇನು ಮಾಡಲಯ್ಯ ಬಡವನಯ್ಯಾ
ನಾನು ಆಫೀಸಿಗೆ ಬರುವುದೇ ಹೆಚ್ಚು,
ಬಂದು ಕಾಲ ಕಳೆಯುವುದೇ ದೊಡ್ಡದು,
ನನ್ನ ಇರುವಿಕೆಯೇ ಹೊನ್ನ ಕಳಸವಯ್ಯಾ,
ಎಲಾ ಬಾಸ್ ಕೇಳಾ,
ನಿಂತೋರಿಗೆ ಸುಖವಿಲ್ಲ, ಹಾರಾಡಿದವರಿಗೆ ಹಸಿವಿಲ್ಲ.

When promotions are few and far between
ಕೆಲ್ಸವಿದ್ದು ಫಲವೇನು? ಗ್ರೋತ್ ಇಲ್ಲದನ್ನಕ?
ಗ್ರೋತ್ ಇದ್ದು ಫಲವೇನು? ದುಡ್ಡಿಲ್ಲದನ್ನಕ?
ದುಡ್ಡಿದ್ದು ಫಲವೇನು? ಟೈಟಲ್ ಇಲ್ಲದನ್ನಕ?

When all else fail...
ಮೋಕ್ಷಕ್ಕೆ ಹೋರಾಡುವಣ್ಣಗಳಿರಾ, ಒಂದು ಹೆಜ್ಜೆ ಮುಂದೆ ಹೋದರೆ
ಮೋಕ್ಷಕ್ಕೆ ನೀವೇ ನಿಚ್ಚಣಿಗೆ
ಮೋಕ್ಷಕ್ಕೋಸ್ಕರ ಹೋರಾಡಿ ಮುಂದೆ ಹೋಗದಿರ್ದೆಡೆ
ಆ ಹರನಿಲ್ಲನೆಂದನಂಬಿಗ ಚೌಡಯ್ಯ.

During training time
ಮೂರ್ಖಂಗೆ ಯಾರು ಬುದ್ದಿ ಹೇಳಿದರೂ
ಗೋರ್ಕಲ್ಲ ಮೇಲೆ ನೂರ್ಕಾಲ ಮಳೆಕರೆದಂತೆ ಸರ್ವಜ್ಞ.


When deliverables are not delivered on time...
ರಿಸೋರ್ಸುಗಳನು ಕೊಂಬಾಗ ಹಾಲೋಗರ ಉಂಡಂತೆ
ಕ್ಲೈಂಟುಗಳು ಬಂದು ಎಳೆವಾಗ, ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ.

When deliverables fail to function as per requirements...
ಹೊಸ ಹೊಸ ಟೆಕ್ನಾಲಜಿಯನು ಬಳಸಿಕೊಂಡು
ವೆಬ್ ಸೈಟು ವರ್ಕ್ ಆಗದಿರೆ ಎಂತಯ್ಯ?
ಹೊಸ ಹೊಸ ಕೆಲಸದವರನ್ನು ಸೇರ್ಸಿಕೊಂಡು
ಕೆಲಸ ಪೂರ್ತಿ ಮಾಡದೇ ಇದ್ದರೆ ಎಂತಯ್ಯ?
ಓಪನ್ ವರ್ಕ್ ಸ್ಪೇಸ್ ಎಂದು ಕೊಂಡು
ಗದ್ದಲಕೆ ನಾಚಿದೊಡೆ ಎಂತಯ್ಯ?
ಟೆಕ್ನಾಲಜಿ ಕೆಲಸಗಾರನಾದ ಮೇಲೆ
ಸ್ತುತಿ-ನಿಂದೆಗಳು ಬಂದರೆ ಸಮಾಧಾನಿಯಾಗಿರಬೇಕು.

Friday, January 27, 2017

ಕಂಪನಿ ಹೆಸರು ಅಂದ್ರೆ...

S&P 500 ಕಂಪನಿಗಳ ಹೆಸರನ್ನು ಕುರಿತು ಸ್ವಲ್ಪ ಯೋಚಿಸತೊಡಗಿದರೆ ತಲೆ ಚಿಟ್ಟು ಹಿಡಿಯುತ್ತದೆ, ಅವುಗಳ ಹೆಸರಿನ ಮೂಲವೇನು, ಅವುಗಳನ್ನು ಎಲ್ಲೆಲ್ಲಿಂದ ಆಯ್ದು ತಂದಿರಬಹುದು ಎನ್ನುವುದು ಎಂಥವರನ್ನಾದರೂ ಆಳವಾಗಿ ಯೋಚಿಸುವಂತೆ ಮಾಡಬಹುದು.  ಉದಾಹರಣೆಗೆ Proctor & Gamble (P&G) ಕುರಿತು ಯೋಚಿಸಿದರೆ, Proctor ಎಂದರೆ ಎಕ್ಸಾಮಿನೇಷನ್ ಸೂಪರ್‌ವೈಸರ್, Gamble ಅಂದ್ರೆ ಜೂಜಾಡುವುದು ಅಂತ ಅರ್ಥ!  Johnson & Johnson (J&J) ಕುರಿತು ಯೋಚಿಸಿದರೆ, ಒಂದೇ ಹೆಸರನ್ನು ಎರಡು ಸರ್ತಿ ಏಕಾದ್ರೂ ತೋರಿಸ್ತಾರಪ್ಪಾ? ಸುಮ್ನೇ ಜಾಗ ವೇಸ್ಟ್ ಅನ್ನಿಸೋಲ್ಲ?  ಹೀಗೇ ಅನೇಕಾನೇಕ ಉದಾಹರಣೆಗಳು ನಿಮಗೆ ಸಿಗುತ್ತವೆ.

ಇನ್ನುGeneral ಎಂಬ ಸೀರೀಸ್‌ನಲ್ಲಿ ಶುರುವಾಗುವ ಕಂಪನಿಗಳ ಹೆಸರುಗಳೋ ಸಾಕಷ್ಟು ಸಿಗುತ್ತವೆ.  ಈ ಎಲ್ಲ ಕಂಪನಿಗಳು ತಯಾರಿಸುವುದು ಕೇವಲ "ಜೆನೆರಲ್" ಪ್ರಾಡಕ್ಟ್‌ಗಳನ್ನೋ ಅಥವಾ ಯಾವುದಾದರೂ ಸ್ಪೆಸಿಫಿಕ್ ಇವೆಯೋ ಎಂದು ಬೇಕಾದಷ್ಟು ಜನ ಸೈಂಟಿಸ್ಟುಗಳು ಈಗಾಗಲೇ ಸ್ಟಡಿ ಮಾಡಿರಬಹುದು.  ನಾವು ಯಾವುದೇ ಮೀಸಲಾತಿಗೆ ಸೇರಿರದ ಜನ, ಬರೀ ಜನರಲ್ ಕಂಪನಿಗಳ ಪ್ರಾಡಕ್ಟುಗಳನ್ನು ಮಾತ್ರ ಬಳಸುತ್ತೇವೆ ಎಂದು ಮುಂದಿನ ಸಾರಿ ಭಾರತಕ್ಕೆ ಹೋದಾಗ ನೀವು ನಿಮ್ಮ ಸೆಕ್ಯುಲರಿಸಂ ಅನ್ನು ಮೆರೆದು ನಿಮ್ಮ "ಜನರಲ್" ತನವನ್ನು ಸಾಬೀತು ಪಡಿಸಬಹುದು.  ನಮ್ಮ ಮನೆಯ ಲೈಟು ಬಲ್ಬುಗಳನ್ನು ತಯಾರಿಸಿದ್ದು ಜೆನರಲ್ ಎಲೆಕ್ಟ್ರಿಕಲ್ ಕಂಪನಿ, ನಾವು ಮುಂಜಾನೆ ಜೆನರಲ್ ಮಿಲ್ಸ್ ಸೀರಿಯಲ್ ತಿಂತೀವಿ.  ಜನರಲ್ ಫುಡ್ಸ್ ಪ್ರಾಡಕ್ಟುಗಳನ್ನೇ ಊಟಕ್ಕೆ ಬಳಸುತ್ತೇವೆ. ಹಾಗೂ ನಮ್ಮ ರಕ್ಷಣೆಗೆ ಜನರಲ್ ಡೈನಮಿಕ್ಸ್ ಪ್ರಾಡಕ್ಟುಗಳನ್ನೇ ಬಳಸ್ತೀವಿ.  ಹೇಗಿದೆ ಎಲ್ಲ ಜನರಲ್ ಮಯ?

ಮಣ್ಣಿನ ಮಡಕೆಯನ್ನು ಮಾಡಿ ಮಾರುವವ ಕುಂಬಾರ, ಹೂವನ್ನು ಮಾರುವವ ಹೂಗಾರನಾದರೆ, ಆಪಲ್‌ನ್ನ ಮಾರುವವ ಏನಾಗಬಹುದು? ಸೇಬುಗಾರ?!  ಕ್ಷಮಿಸಿ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನ್‌ಗಳಿಗೂ ಸೇಬು ಹಣ್ಣಿಗೂ ಎತ್ತಣಿಂದೆತ್ತ ಸಂಬಂಧ ನಮಗೆ ತಿಳಿಯದು...ಒಂದು ರೀತಿಯಲ್ಲಿ ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಇರುವ ಸಂಬಂಧದ ಹಾಗೆ ಏನಾದರೂ ನಿಗೂಢವಾದ ಸಂಬಂಧವಿದ್ದರೂ ಇರಬಹುದು... ನಮ್ಮ ಮನೆಯಲ್ಲೆಲ್ಲಾ ಆಪಲ್ ಮಯ... ದಿನಕ್ಕೊಂದು ಸೇಬು ಹಣ್ಣನ್ನು ತಿಂದು ದೂರವಿರುವ ಉಸಾಬರಿಯ ಸಹವಾಸವಲ್ಲವಿದು, ಜಾಗ್ರತೆ!  ಒಮ್ಮೆ ಮುಟ್ಟಿದರೆ ಮುಗಿಯಿತು, ಇನ್ನು ಸಾಯುವವರೆಗೂ ಮುಟ್ಟತ್ತಲೇ ಇರಬೇಕು... (ಅದು ಡಿವೈಸ್ ಆಗಿರಬಹುದು, ಅಥವಾ ವ್ಯಕ್ತಿಯಾಗಿರಬಹುದು, ಎರಡರಲ್ಲಿ ಒಂದು ಕೊನೆಯಾಗುವವರೆಗಿನ ಸಂಬಂಧವಿದು!)... ಎಂಥಾ ಗಾಢವಾದ ಸಂಬಂಧವಿರಬಹುದಿದು?  Only death can part this relationship!

ಇನ್ನು ಸೇಬುಹಣ್ಣಿನ (Apple) ಸಂಬಂಧ ಚಾಲ್ತಿಯಲ್ಲಿರುವಾಗಲೇ ನಮಗೆ ಹಳೆಯ Microsoftನ ಸಂಬಂಧ ನೆನಪಿಗೆ ಬರುತ್ತದೆ.  ನಮ್ಮ ಮನೆಯ ಕಿಟಕಿಗಳನ್ನು ಮಾಡಿದ್ದು ಈ ಮೈಕ್ರೋ ಸಾಫ್ಟ್ ಕಂಪನಿಯವರಲ್ಲದಿದ್ದರೂ ನಮ್ಮ ಕಂಪ್ಯೂಟರುಗಳಲ್ಲಿ ಹಲವಾರು ಕಿಟಕಿಗಳು ಸದಾ ತೆರೆದೇ ಇರುತ್ತವೆ.  ಇವು ಗಾಳಿ-ಬೆಳಕು ಬರುವ ಕಿಟಕಿಗಳಲ್ಲ...ಕಂಪ್ಯೂಟರ್ ಪ್ರಪಂಚಕ್ಕೆ ಸೂಕ್ಷ್ಮವಾಗಿ ಸಂಬಂಧ ಬೆರೆಸುವ ಕಿಂಡಿಗಳು.  ಆ ಕನಕದಾಸರ ಕಾಲದಲ್ಲಿ ’ಕನಕನ ಕಿಂಡಿ" ತೆರೆದ ಹಾಗೆ, ನಮ್ಮ ಕಾಲದಲ್ಲಿ ಮೈಕ್ರೋಸಾಫ್ಟ್ ಕಿಟಕಿಗಳು ಸದಾ ತೆರೆದೇ ಇರುತ್ತವೆ!

ಇನ್ನು ದಕ್ಷಿಣ ಅಮೇರಿಕಾದ ಮಹಾ ಕಾಡನ್ನು ನೆನಪಿಸುವ ಅಮೇಜಾನು. ತನ್ನ ಮಧ್ಯೆ ಅಸಂಖ್ಯಾತ ಸೊನ್ನೆಗಳನ್ನು ತನ್ನಷ್ಟಕ್ಕೆ ತಾನೇ ಸೃಷ್ಟಿಸಿಕೊಂಡು ಪ್ರತಿ ಶೋಧದ ಪುಟದ ಬುಡದಲ್ಲಿಯೂ ಉದ್ದಕ್ಕೆ ತನ್ನನ್ನು ತಾನು ಆವರಿಸಿಕೊಳ್ಳುವ ಗೂಗಲ್ಲು.  ಎಲ್ಲರ ಹಣೆಬರಹವನ್ನು ಅವರಿಂದಲೇ ಹೊರಸೂಸುವಂತೆ ಮಾಡಿ ಜನರು ಸೋಷಿಯಲ್ ಮೀಡಿಯಾ ಎಂಬ ನಾಮಪದದ ನೆಪದಲ್ಲಿ ಶುದ್ಧ ಸೋಂಬೇರಿಗಳಾಗುವಂತೆ ಮಾಡುವ ಫೇಸ್‌ಬುಕ್ಕು.  ತನ್ನ ಒಡಲಿನಲ್ಲಿ ಜಗತ್ತಿನ ದೊಡ್ಡ ಸೂಪರ್ ಕಂಫ್ಯೂಟರ್ರನ್ನು ಇರಿಸಿಕೊಂಡು ಸಂಭ್ರಮಿಸುವ ಐಬಿಎಮ್ಮು...  ಹೀಗೇ ಅನೇಕಾನೇಕ ಹೆಸರುಗಳು ನೆನಪಿಗೆ ಬರುತ್ತಲೇ ಹೋಗುತ್ತವೆ.  ನಿಮಗೆ ಬೇಕಾದ ಸೆಕ್ಟರುಗಳಲ್ಲಿ ಒಂದಲ್ಲ ಒಂದು ಕಂಪನಿಗಳು ಚಿರಪರಿಚಿತವೇ....ಬ್ಯಾಂಕು, ಇನ್ವೆಸ್ಟ್‌ಮೆಂಟು, ಟೆಲಿಕಾಮ್, ಹೆಲ್ತ್‌ಕೇರು, ಟ್ರಾನ್ಸ್‌ಪೋರ್ಟೇಷನ್ನು,    ಟೆಕ್ನಾಲಜಿ, ಎನರ್ಜಿ, ಇತ್ಯಾದಿ, ಇತ್ಯಾದಿ.  ಆದರೆ ಈ ಎಲ್ಲ ಹೆಸರುಗಳ ವಿಶೇಷವೇನು ಗೊತ್ತೇ?  ಒಂದರ ಹೆಸರಿನ ಹಾಗೆ ಮತ್ತೊಂದಿಲ್ಲ ಎಲ್ಲವೂ ಬೇರೆ ಬೇರೆಯವೇ... ಒಂದು ರೀತಿಯಲ್ಲಿ ನಮ್ಮ ಮಹಾಭಾರತ ಹಾಗೂ ರಾಮಾಯಣದ ಕಥೆಗಳಲ್ಲಿ ಬರುವ ಪಾತ್ರಗಳ ಹಾಗೆ!  ನಿಮಗೆ ಎಂದಾದರೂ ಅನ್ನಿಸಿತ್ತೇ... ನಮ್ಮ ಪೂರ್ವಜರು ಅದ್ಯಾವ ಹೆಸರಿನ ಡೇಟಾಬೇಸನ್ನು ಉಪಯೋಗಿಸುತ್ತಿದ್ದರು ಅಂತ?  ಒಂದು ಮಹಾಕಾವ್ಯ, ಮಹಾಕಥೆಯಿಂದ ಮತ್ತೊಂದು ಮಹಾಕಥೆಗೆ ಯುಗಗಳ ಅಂತ್ಯವಿದ್ದರೂ ಎಲ್ಲ ಪಾತ್ರಗಳ ಹೆಸರೂ ಬೇರೆ ಬೇರೆಯವು, ಒಂದು ಕೂಡ ಕಾಮನ್ ಆಗಿಲ್ಲ!

ಇನ್ನು ಅಮೇರಿಕದಲ್ಲಿ ಚಾಲ್ತಿ ಇರೋ ಬ್ರ್ಯಾಂಡ್ ಹೆಸರುಗಳನ್ನು ಭಾರತದಲ್ಲಿ ಇಟ್ಟರೆ ಖಂಡಿತಾ ಕಷ್ಟವಾಗುತ್ತೆ ಅನ್ನೋದಕ್ಕೆ ಈ ಉದಾಹರಣೆ ನೋಡಿ.  ಅಮೇರಿಕದಲ್ಲಿ ಜನರಲ್ ಮೋಟಾರ್ಸ್‌ನವರು ಉತ್ಪಾದಿಸೋ ಸ್ಯಾಟರ್ನ್ (ಶನಿ) ಕಾರು ಬಹಳ ವರ್ಷಗಳಿಂದ ಪ್ರಚಲಿತವಾದುದು.  ಇದೇ ಕಾರನ್ನ ಭಾರತದ ಮಾರುಕಟ್ಟೆಯಲ್ಲಿ - ಶನಿ ಯಾಗಿ - ಉತ್ಪಾದಿಸಿದರೆ, ಯಾರು ತಾನೆ ಖರೀದಿಸುತ್ತಾರೆ ನೀವೇ ಹೇಳಿ?!  ಶನಿಗ್ರಹ ಎಲ್ಲರಿಗೂ ಬೇಕು ಹಾಗೂ ಯಾರಿಗೂ ಬೇಡವಾಗಿರುವ ಗ್ರಹ... ಬುಧ (Mercury) ಆದರೆ ಪರವಾಗಿಲ್ಲ, ಗುರು (Jupitor) ಆದರೆ ಓಕೆ, ಆದರೆ Olds Mobile ಮಾತ್ರ ಬೇಡಾ ಸ್ವಾಮಿ... ಈ ಹೆಸರನ್ನು ಇಟ್ಟವರಿಗೆ ನೊಬೆಲ್ ಪಾರಿತೋಷಕವೇನಾದರೂ ಸಿಕ್ಕಿದೆಯೇ? ಈ ಹೆಸರನ್ನು ಸೂಚಿಸಿದವರ ಕೈಗೆ ಕಡಗ ತೊಡಿಸಬೇಕು!  ಈ ಮಿಲೆನಿಯಲ್ಲ್ ಯುಗದಲ್ಲಿ ಓಲ್ಡ್ಸ್ ಮೊಬೈಲ್ ಅನ್ನುವ ಹೆಸರಿನ ಕಾರನ್ನು ಮೂವತ್ತು ವರ್ಷಗಳಿಗಿಂತ ಕೆಳವಯಸ್ಸಿನವರು ಹೇಗೆ ತಾನೇ ಖರೀದಿಸಬೇಕು?  ಪ್ರಪಂಚದಲ್ಲಿ ಜನರು ತಮ್ಮ ಕಳೆದು ಹೋದ ಯೌವನವನ್ನು ಮತ್ತೆ ಹುಟ್ಟು ಹಾಕಲು ಬಿಲಿಯನ್‌ಗಟ್ಟಲೆ ಹಣವನ್ನು ಸುರಿಯುತ್ತಿರುವಾಗ ನಮ್ಮ ಕಾರಿನ ಹೆಸರು ಓಲ್ಡ್ಸ್ ಮೊಬೈಲು ಹೇಗಾದೀತು?

ನಮ್ಮ ಭಾರತದಲ್ಲಾದರೂ ಗೋದ್ರೇಜ್, ಟಾಟಾ, ಬಿರ್ಲಾ, ವಿಪ್ರೋ, ಬಜಾಜ್, ಇನ್ಫೋಸಿಸ್ ಮುಂತಾದ ಕಂಪನಿಗಳು ತಲೆ ಎತ್ತಿದ್ದರೂ ಇದುವರೆಗೂ "ಪಟೇಲ್" ಎಂಬ ಬ್ರ್ಯಾಂಡ್ ಏಕೆ ತಲೆ ಎತ್ತಿಲ್ಲ ಎಂದು ಸೋಜಿಗವಾಗುತ್ತದೆ.  ಮಿಲಿಯನ್‌ಗಟ್ಟಲೆ ಪಟೇಲ್ ಜನರ ಪರಂಪರೆ ತಮ್ಮ ವಂಶಪಾರಂಪರ್ಯದವರವನ್ನು ವಿದೇಶಗಳಿಗೆ ರವಾನಿಸೋದರಲ್ಲೇ ಅವರ ಇನ್ನೋವೇಶನ್ ಸೀಮಿತವಾಗಿ ಹೋಯಿತೋ ಎಂದು ಸಂಶಯವಾಗುವುದಿಲ್ಲವೇ?

ಈ ಹೆಸರುಗಳೇ ಬ್ರ್ಯಾಂಡ್‌ಗಳಾಗುತ್ತವೆ... ಒಂದು ರೀತಿಯಲ್ಲಿ "ಹಮಾರಾ ಬಜಾಜ್" ಆದ ಹಾಗೆ!  ಅಫಘಾನಿಸ್ತಾನದಲ್ಲೂ ಪ್ರಚಲಿತವಾದ ಬ್ರ್ಯಾಂಡ್ ಎಂದರೆ ಕೋಕಾಕೋಲಾ ಹಾಗೂ ಮರ್ಸಿಡಿಸ್ ಬೆಂಜ್ ಮಾತ್ರ ಎಂಬುದು ಮತ್ತೊಂದು ಸಮೀಕ್ಷೆಯ ವರದಿ!  ಹೀಗೇ ನಿಮ್ಮ ಬ್ರ್ಯಾಂಡ್ ನಿಮ್ಮನ್ನು ನೀವೂ ಡಿಫೈನ್ ಮಾಡಿ, ಮಾರ್ಕೇಟ್ ಮಾಡಿ, ಅದನ್ನೂ ಎತ್ತರದಿಂದೆತ್ತರಕ್ಕೆ ಕೊಂಡೊಯ್ಯಬಹುದು...ಪ್ರಯತ್ನ ಮಾಡಿನೋಡಿ.


Saturday, April 30, 2016

ಶಾಂತವಕ್ಕನ ಸಡಗರ

ಇನ್ನೇನು ಶ್ರಾವಣ ಮಾಸ ಹತ್ರ ಬಂತು ಅಂತ ಊರಿನ ಹೆಂಗಳೆಯರೆಲ್ಲ ಮನೆ ಜಗಲಿ, ಅಂಗಳ ಸಾರ್ಸಿ ಶುಭ್ರವಾಗಿಟ್ಟುಕೊಂಡಿದ್ರು.  ಎವರೆಡಿ ಶೆಲ್ಲಿನ ಒಳಗಿನಾಗಿರೋ ಕರ್ರಗಿನ ಪೌಡರ್ರ್ ಹಾಕಿ ತಿಕ್ಕಿಂದ್ರಿಂದ್ಲೋ ಏನೋ ಕೆಲವರ ಮನಿ ಮುಂದಿನ ಅಂಗಳ ಟಾರ್ ರಸ್ತೆಗಿಂತ ಕಪ್ಪಗಿತ್ತು ನೋಡ್ರಿ.  ಇತ್ಲಾಗೆ ಶಾಲೇಗ್ ಹೋಗೋ ಮಕ್ಳು ಸಧ್ಯ ಛಳೀ ಹೊಂಟೋಯ್ತು ಅಂತ ತಮ್ಮ ತಮ್ಮ ಚಿಕ್ಕ ಚಿಕ್ಕ ಯೂನೀಫಾರ್ಮಿನೊಳಗೆ ತಮ್ಮನ್ನ ತುರುಕಿಕೊಂಡಿದ್ರು, ಮೇಲ್ನಿಂದ ಕೊರೆಯೋ ಮಳೆಗೋ ಬಿಸಿಲಿಗೋ ರಕ್ಷಣೆ ಇರ್ಲೀ ಅಂತ ಹೆಂಗಳೆಯರಲ್ಲಿ ಕೆಲವ್ರು ಆಶ್ಚರ್ಯ ಸೂಚಕ ಮಾರ್ಕಿನಂಗಿರೋ ಛತ್ರಿ ಹಿಡಕೊಂಡು ಓಡಾಡ್ತಿದ್ರು.  ಕೆಲವೊಮ್ಮೆ ಪುಷ್ಯಾ ಮಳಿಯಿಂದ ತಪ್ಪಿಸಿಕೊಂಡ್ರೂ ಆರ್ದ್ರೀ ಮಳಿ ಬಿಡ್ಲಿಲ್ಲಾ ಅನ್ನೋ ಹಂಗೆ ಜಿಟಿಪಿಟಿ ಮಳೆ ಎಷ್ಟೊತ್ತಿಗೆ ಬರುತ್ತೆ ಅಂತ ಹೇಳೋಕಾಗ್ದಿದ್ರೂ, ಅದರ ಪರಿಣಾಮ ಅನ್ನೋ ಹಂಗೆ ಕೆಂಪನೆ ಕಿಚಿಪಿಚಿ ಕೆಸರು ಕಾಲು-ಪ್ಯಾಂಟುಗಳಿಗೆ ಅಂಟೋದು ಗ್ಯಾರಂಟಿ ಆಗಿತ್ತು.

ಇದೇ ಹೊತ್ತಲ್ಲಿ ಊರ್‌ನಾಗಿರೋ ಬ್ರಾಂಬ್ರ ಓಣಿಯಲ್ಲಿ ಏನೋ ಒಂಥರ ಸಂಭ್ರಮ.  ಅದೇ ಮಗ್ಗಲ ಮನಿ ಶಾಂತವ್ವಕ್ಕ ಇದಾಳಲ್ಲ ಅಕಿ ನೂರಾ ನಾಕನೇ ವರ್ಷಕ್ಕೆ ಕಾಲಿಟ್ಟ ಸಂಬಂಧ ಊರ್‌ನಾಗಿನ ಮುಖಂಡ್ರು ಎಲ್ಲಾ ಸೇರಿ ಹುಟ್ಟಿದ ಹಬ್ಬಾನ ದೊಡ್ಡದಾಗಿ ಆಚರ್‌ಸಬೇಕು ಅಂತ ಒಂದು ಕಾರ್ಯಕ್ರಮ ಹಮ್ಮಿಕೊಂಡಾರಂತ.  ಭಾನುವಾರ ಮಟಮಟ ಮಧ್ಯಾಹ್ನ ಎರಡು ಘಂಟಿಗೆ ಶುರುವಾಗೋ ಕಾರ್ಯಕ್ರಮ ಇನ್ನೂ ಸ್ಥಳೀಯ ಎಮ್ಮೆಲ್ಲೆ ಬರ್ಲಿ ಅಂತ ಕಾಯ್ಕೊಂಡ್ ಕುಂತು ಘಂಟೆ ಮೂರ್ ಆದ್ರೂ ಶುರೂ ಆಗೋ ಭಾಗ್ಯ ಬಂದಂಗಿರ್ಲಿಲ್ಲ.  ಆದ್ರೂ ರಗಡು ಮಂದಿ ಸೇರಿದ್ರು.  ಎಲ್ಲೆಲ್ಲಿಂದಾನೋ ಬಂದಿದ್ರು.  ಅವರಾಗೆ ಬಾಳ ಮುಖ್ಯ ಅಂದ್ರ, ಶಾಂತವಕ್ಕನ್ನ ಗಿರಿಮಗಳು ಮೋಹಿನಿ - ದೂರ ದೇಶ ಅಮೇರಿಕಾದಾಗೆ ಅದೇನೋ ಕಾಯ್ಕ ಮಾಡ್ಕಂಡು ಅಲ್ಲೇ ಇದಾರಂತೆ, ಅದ್ರೂ ಅತ್ಯಂತ ಮುತುವರ್ಜಿ ವಹಿಸಿ ಶಾಂತವಕ್ಕನ್ನ ಬರ್ತ್‌ಡೇ ಆಚರಿಸಾಕ ಹದಿಮೂರು ಸಾವಿರ ಕಿಲೋಮೀಟರ್ ದೂರದಿಂದ ಬಂದಿರೋದು ನಮ್ಮೂರಿಗೆ ಹೆಚ್ಚೇ ಬಿಡ್ರಿ.  ಆದ್ರೂ ಅವನವ್ವನ, ಇದೇ ತಾಲೂಕಿನಾಗೆ ಬಿದ್ದು ಎದ್ದು ಸಾಯೋ ಈ ಎಮ್ಮೆಲ್ಲೆ ಮಂದಿಗೆ ಏನ್ ಅಂತಾದ್ ಬಂದೀತು? ಇನ್ನೂ ಸುದ್ದೀನೇ ಇಲ್ಲಲ!

ಹಂಗೂ ಮಾಡಿ ಶಾಂತವ್ವಕ್ಕನ ವಯಸ್ಸು ಇಷ್ಟೇ ಹಿಂಗೇ ಎಂದು ಯಾರೂ ಬರ್ದಿಟ್ಟಂಗಿದ್ದಿದ್ದು ಯಾರಿಗೂ ನೆನಪಿಲ್ಲ ನೋಡ್ರಿ.  ಅದರಾಗೂ ಒಂದ್ ಸರ್ತಿ ನೂರರ ಹತ್ರಾ ಹೋದ್ರಿ ಅಂದ್ರ ನಿಮ್ಮ ಜೀವಮಾನದಾಗೆ ಬಂದ್ ಹೋಗಿರೋ ಮುಕ್ಕಾಲ್ ಜನ ಆಗ್ಲೇ ಟಿಕೇಟ್ ತಗೊಂಡಂಗೇ ಲೆಕ್ಕ!  ಅದ್ರಾಗೂ ನೂರ್ ವರ್ಷದ ಹಿಂದೇ ಜಾತ್ಕಾ ಪಾತ್ಕಾ ಬರೀತಿದ್ರೋ ಏನೋ ಆದ್ರೂ, ಜನನಪತ್ರಿಕೆ ಮರಣ ಪತ್ರಿಕೆ ಅಂಥಾ ಯಾರೂ ಪ್ರಿಂಟ್ ಹಾಕಿದ್ದು ನಾನಂತೂ ಕಂಡಿಲ್ಲ.  ಅದೂ ಹೋಗೀ ಹೋಗಿ ಬ್ರಿಟೀಷ್ ಸರಕಾರದಾಗ ಹುಟ್ಟಿರೋ ಮುದುಕಿ ಒಂಥರಾ ಬ್ರಿಟೀಷರ ಹಂಗಾ ಗರ್ವದಾಕಿ ಬಿಡ್ರಿ.  ಶಾಂತವ್ವಕ್ಕ ಈಗ್ಲೇ ಇಷ್ಟು ಉರೀತಾಳೆ, ಆಗ ಹೆಂಗಿದ್ಲೋ ಅಂತ ಕೆಲವು ಹೆಣ್ ಮಕ್ಳು ಕೈ ಮುರ್ದು ಲಟಗಿ ತಗೊಂಡಿದ್ದಂತೂ ನಿಜ.  ಒಂದ್ ಹತ್ತ್ ವರ್ಷದ ಹಿಂದಿನ್ ವರೆಗೂ ಈ ಮುದುಕಿ ಕಡಿಮೀ ಏನ್ ಇರ್ಲಿಲ್ಲ.  ದಿನಾ ಅಗಸೀ ಬಾಗ್ಲು ಮಟಾ ನಡ್ದು ಬಾವೀ ನೀರ್ ಸೇದಿ ತರೋದೇನೋ, ಬಾಗ್ಲೂ ಬಳ್ದು, ರಂಗೋಲಿ ಹಾಕಿದ್ದಷ್ಟೇ ಅಲ್ದೇ, ಒಂದೇ ಒಂಚೂರು ಬಿಡದೇ ದೊಡ್ಡ ಹಿತ್ಲು ಗುಡುಸ್ತಿತ್ತ್ ನೋಡ್ರಿ ಈ ಮುದುಕಿ.  ದರ್ಲೆ ತೆಗೆದು ಒಲೀ ಮ್ಯಾಲೆ ದನಗಳಿಗೆ ಬಾಯಾರು ಬಿಸಿಮಾಡಿ ಕೊಟ್ಟು, ಕೊಟಗಿ ಶುದ್ದಾ ಮಾಡಿ ಹಾಲ್ ಕರಕಂಡ್ ಬಂದು ಸುರ್ ಅಂತಾ ಒಂದು ಲೋಟಾ ಕಾಪೀ ಹೀರೋದ್ರೊಳಗೆ ಹತ್ತ್ ಘಂಟ್ ಆಗಿತ್ತು.  ನಾವ್ ಇವತ್ತಿನ ದಿನಾ ವಾರಕ್ಕ ನಲವತ್ತು ಘಂಟಿ ಅಂತ ಏನ್ ಕೆಲ್ಸಾ ಮಾಡ್ತೀವಿ, ಈ ವಮ್ಮ, ಭಾನುವಾರದಿಂದ ಮಂಗಳವಾರದೊಳಗೇ ನಲವತ್ತೇನು ಐವತ್ತು ಘಂಟಿ ದುಡಿಯೋದ್ ನೋಡ್ರಿ.  ಜಿಮ್ಮು-ಗಿಮ್ಮು ಅಂತ ಒಂದ್ ದಿನ ಅದರ ಬಗ್ಗೆ ಕೇಳದಿದ್ರೂ ಮೈಯಾಗೆ ಒಂದು ಚೂರು ನೆಣಾ ಅಂತ ಇದ್ದಂಗಿಲ್ಲ ನೋಡ್ರಿ, ಯಾವತ್ತಿದ್ರೂ ಒಂದೇ ಒಂದ್ ಲಕ್ಷಣಾ.  ಇಂದಿನ ಕಾಲದ ಹೆಣ್ಣ್ ಮಕ್ಳು ಒಂದೊಂದು ಹಡದು ಹತ್ತು ವರ್ಷ ಹಳೇದಾದ ಎಸ್.ಟಿ. ಬಸ್ಸಿನ ಹಂಗೆ ನಡೆಯೋದಾದ್ರೆ ಈವಮ್ಮ ಎಂಟು ಮಕ್ಳನ್ನ ಹಡದು ಅದೆಷ್ಟೋ ಬಾಣಂತನಾನ ಮಾಡಿ ಇನ್ನೂ ಒಂಚೂರೂ ಬೆನ್ನ್ ಬಾಗಿಸದೇ ನಡೀತಾಳ ಅಂದ್ರ ಅದೊಂದು ದೊಡ್ಡ ಪವಾಡನೇ ಬಿಡ್ರಿ.  ಈ ವಮ್ಮನ ಗಂಡಾ ಅದ್ಯಾವಾಗೆ ಟಿಕೇಟ್ ತೆಗೆಂಡು ಹೋದನೋ ನನಗೆ ಗೊತಿಲ್ಲಾ, ಅದ್ರೂ ಈವಮ್ಮ ಮರೆ-ಮೈಲಿಗೆ-ಮಡಿ ಅಂತಾ ಇಡೀ ಊರಿಗೆ ಫೇಮ್ಮಸ್ಸು ನೋಡ್ರಿ.  ಶಾಂತವಕ್ಕನ ಉಪ್ಪಿನಕಾಯಿ, ಹಪ್ಪಳಾ, ಸಂಡಿಗೆ ಅವರ ಸಂಬಂಧಿಕರ ದೆಸೆಯಿಂದ ಎಲ್ಲೆಲ್ಲೋ ಹೊಗ್ತಿತ್ತು.  ಆಕಿ ಕೈ ರುಚೀನೇ ಬ್ಯಾರೆ.  ಆರು ತಿಂಗಳೇನು, ಅರು ವರ್ಷಾ ಅದ್ರೂ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಕಡದ್ರ ಇನ್ನೂ ಕಟುಂ ಅನ್ನೋದು ನೋಡ್ರಿ!

ಕೊನೀಗೂ ಎಮ್ಮೆಲ್ಲೆ ಸಾಹೇಬ್ರು ಬಂದ್ರೂ ಅಂತ ಕಾರ್ಯಕ್ರಮ ಶುರೂ ಆಗೂ ಹಂಗ ಕಾಣಸ್ತು.  ಶಾಂತವಕ್ಕನ ಮನಿ ಮುಂದೆ ನಾಲ್ಕು ಅಡಕೆ ಮರದ ಕಂಬಾ ನೆಟ್ಟು ಒಂದು ಸಣ್ಣ ಚಪ್ರ ಕಟ್ಟಿದ್ರು.  ಅದರ ಮ್ಯಾಲೆ ಸ್ವಲ್ಪಾನೂ ಬಿಸಿಲು ಬರದೇ ಇರ್ಲಿ ಅಂತ ತೆಂಗಿನ ಮಡ್ಲು ಹೆಣೆದು ಕಟ್ಟಿದ್ರು.  ಮದುವೀ ಮನೆ ಅಷ್ಟು ದೊಡ್ಡು ಚಪ್ರಾ ಅಲ್ದಿದ್ರೂ ಮೂರು ಜನ ಕೂರೋ ಹಂಗ ಅನುಕೂಲ ಮಾಡಿದ್ರು.  ಮಧ್ಯ ಶಾಂತವ್ವಕ್ಕ, ಅಕಿ ಬಗಲಿಗೆ ಊರಿನ ಮಹಿಳಾ ಕಲ್ಯಾಣ ಇಲಾಖೆ ಸೂಪರ್‌ವೈಸರ್ರು ಸುಶೀಲಮ್ಮೋರು, ಮತ್ತೊಂದು ಕಡೆ ಎಮ್ಮೆಲ್ಲೆ ಮಹಾಂತೇಶಪ್ಪೋರು ಕುಂತಿದ್ರು.  ನೂರಾ ನಾಲ್ಕು ಮುಟ್ಟಿರೋ ಶಾಂತವಕ್ಕ ತನ್ನ ಬಗಲಿಗೆ ಕುಂತೋರಿಗಿಂತಲೂ ನೆಟ್ಟಗೆ ಬೆನ್ನ ಮಾಡಿ ಕುಂತಿದ್ಲು.  ಅವಳು ಉಟ್ಟಿರೋ ಅದೆಷ್ಟೋ ವರ್ಷದಿಂದ ಹಳೇ ಟ್ರಂಕಿನಾಗಿರೋ ಕಂದು ಬಣ್ಣದ ಪಟ್ಟೇ ಸೀರೇ ಇವತ್ತು-ನಿನ್ನೇ ಅಂಗಡಿಯಿಂದ ತಂದ ಹಾಗೆ ಮಡಿಕೇನೂ ಮುರೀದೇ ತನ್ನ ಮೈ ಮೇಲೆ ಗೆರೆಗಳನ್ನ ಹಂಗೇ ಜೋಪಾನವಾಗಿ ಉಳಿಸಿಕೊಂಡಿತ್ತು.

ಊರಿನ ಕಾರ್ಯಕ್ರಮ, ಆದ್ರೆ ಬಂದೋರಿಗೆ ತಿಂಡೀ-ಗಿಂಡೀ ಮಾಡೋರು ಯಾರು? ಅದ್ಯಾವ್ದೋ ಸೊರಬದ ಬೇಕ್ರಿ ಇಂದ ಸುಮಾರು ದೊಡ್ಡ ಕೇಕ್ ತರಸ್ಯಾರಂತ, ಅದು ಬಿಸಲಿಗೆ ಕರಗೀತು ಅಂತ ಇನ್ನೂ ಒಳಗೇ ಇಟ್ಟಿದ್ರು.  ಮೈಕೂ ಪೈಕೂ ಏನೂ ಬ್ಯಾಡ, ಸುಮ್ನೇ ದುಡ್ಡು ಖರ್ಚು ಅಂತ ಹಂಗೇ ಸುತ್ಲೂ ಸೇರಿರೋ ಜನ್ರನ್ನ ಕುರುತು ಮೊದಲಿಗೆ ಸುಶೀಲಮ್ಮೋರು ಮಾತಾಡಿದ್ರು.  ಇವತ್ತಿನ ದಿನಾ ನೂರೇನು ಎಪ್ಪತ್ತು ವರ್ಷ ನೋಡೋ ಮಂದಿ ಭಾಳಾ ಇಲ್ಲ, ಅಂತಾದ್ರಾಗೆ ನಮ್ಮೂರಿನ ಶಾಂತವ್ವಕ್ಕ ನೂರಾ ನಾಕು ಮುಟ್ಟೈತಿ ಅಂದ್ರ ಅದೊಂದು ರಾಜ್ಯದ ವಿದ್ಯಮಾನ ಅಂತ ಭಾಳ ಚೊಲೋ ಭಾಷ್ಣ ಮಾಡಿದ್ರು.  ಅವರ ನಂತ್ರ ಮಹಾಂತೇಶಪ್ಪೋರು ನಾನು ವಿಧಾನ ಸಭೆ ಕಾರ್ಯಕಲಾಪದಾಗ ಈ ಸಂಬಂಧ ಚರ್ಚೇ ಮಾಡ್ಸಿ, ಶಾಂತವಕ್ಕಂಗ ಒಂದ್ ಅವಾರ್ಡ್ ಕೊಡಸ್ತೀನಿ ಅಂತ ಆಶೋತ್ತರ ಮೂಡಿಸಿ ಆಸೆ ತೋರ್ಸಿದ ಕೂಡ್ಲೇ ಅವರ ಚೇಲಾಗಳೆಲ್ಲ ದೊಡ್ಡದಾಗಿ ಚಪ್ಪಾಳೆ ಹೊಡ್ದಿದ್ದು ನೋಡಿ ನಾವೂ ಹೊಡದ್ವಿ.  ಅಮ್ಯಾಲೆ ಶಾಂತವಕ್ಕನ ಮನೆ ಮಂದೀ ಎಲ್ಲ ಬಂದೂ ಅರತೀ ಮಾಡಿದ್ರು.  ಅವರ ಮನೇ ಮಂದೀನೇ ಸುಮಾರು ನೂರು ಜನ ಇದ್ದಂಗಿದ್ರು ನೋಡ್ರಿ.  ಎಲ್ಲ ಮಕ್ಳೂ, ಮೊಮ್ಮಕ್ಳು, ಮರಿಮಕ್ಳು, ಗಿರಿಮಕ್ಳು ಇವರ್ದ್ರೆಲ್ಲಾ ಲೆಕ್ಕಾ ಹಾಕ್ಕೊಂಡಿರೋರು ಯಾರು? ಕುದ್ದು ಶಾಂತವಕ್ಕಂಗೇ ಇವರೆಲ್ಲ ನೆನಪಿದಾರೋ ಇಲ್ವೋ!  ಶಾಂತವ್ವಕ್ಕಾ ನೀನೂ ಒಂದಿಷ್ಟು ಮಾತಾಡು ಅಂದ್ರು.  "ನನ್ದೇನೂ ಬ್ಯಾಡಾ, ಎಲ್ಲಾ ಚೆನ್ನಾಗಿರ್ರಿ!" ಅಂತ ಅದ್ರಾಗೂ ಬಿನ್ನಾಣ ತೋರಿಸ್ತು ಮುದುಕಿ.

ಇನ್ನೇನು ಕೇಕ್ ಕಟ್ ಮಾಡೋಣ ಅಂತ ಎಲ್ರೂ ಅಂದ್ರೂ.  ಅಷ್ಟ್ರೊಳಗ ಶಾಂತವಕ್ಕನ ಅಮೇರಿಕದಿಂದ ಬಂದ ಗಿರಿಮಗಳು ಮೋಹಿನಿ, ಅದೇನೋ ಇಂಗ್ಲೀಷ್ನಾಗೆ ಅಂದ್ಲು, ಅದರ ಪ್ರಕಾರ ಶಾಂತವಕ್ಕನ್ನೂ ಒತ್ತಾಯ ಮಾಡಿ ಸ್ವಲ್ಪ ಮಾತಾಡಕ್ ಬಿಟ್ರು ನೋಡ್ರಿ.  ಶಾಂತವಕ್ಕ ಹೆಚ್ಗೆ ಏನೂ ಹೇಳ್ಲಿಲ್ಲ,  "ಎಲ್ರೂ ಸುಖವಾಗಿರ್ರಿ, ಜಗಳಾಪಗಳಾ ಮಾಡಬೇಡ್ರಿ.  ಮನಸು ಚೆನ್ನಾಗಿದ್ರೆ ದೇಹ ಚೆನ್ನಾಗಿರ್ತತಿ.  ವ್ಯಾಯಾಮಾ ಪಾಯಾಮಾ ಎನೂ ಬ್ಯಾಡ, ನೀವ್ ಏನ್ ತಿಂತೀರಿ, ಎಷ್ಟು ತಿಂತೀರಿ ಮತ್ತ ಯಾವಾಗ ತಿಂತೀರಿ ಅನ್ನೋದರ ಬಗ್ಗೆ ನಿಗಾ ಇರ್ಲಿ" ಅಂದ್ಲು.  ಎಲ್ರೂ ಮತ್ತೆ ದೊಡ್ಡ ಚಪ್ಪಾಳೆ ಹೊಡೆದ್ರು.  ಮೋಹಿನಿ ತನ್ನ ಅಮ್ಮನ ಹತ್ರ ಅದೇನೋ ಇಂಗ್ಲೀಷಿನಾಗೆ ಅಂದ್ಲು.  ಅದನ್ನ ಅವರಮ್ಮ ತರ್ಜುಮೆ ಮಾಡಿ -"ಶಾಂತವಕ್ಕ, ನಿನ್ನ್ ಜೀವನದಾಗೆ ಇದೂವರೆಗೆ ಕಂಡಿರೋ ಮಹಾ ಅವಿಷ್ಕಾರ ಅಂದ್ರೆ ಯಾವ್ದು?" ಅಂತ ದೊಡ್ಡದಾಗಿ ಕೇಳಿದ್ರು.  ಅವರು ಹೇಳೋದನ್ನ ಮೋಹಿನಿ ತನ್ನ ಬಂಗಾರ ಬಣ್ಣದ ಐಫೋನಿನ್ಯಾಗೆ ರೆಕಾರ್ಡ್ ಮಾಡಿಕೊಂತಿದ್ಲು.

ಶಾಂತವಕ್ಕ ಒಂದ್ ಸರ್ತಿ "ಹ್ಞೂ..." ಅಂತ ದೊಡ್ಡದಾಗಿ ಉಸಿರು ಎಳಕೊಂಡು ಒಂದು ಹತ್ತು ಸೆಕೆಂಡು ಯೋಚ್ನೇ ಮಾಡಿದ್ಲು.  ನಾವೆಲ್ಲ ಕಂಪ್ಯೂಟರ್ರೋ, ಫೋನೋ, ಸಿನಿಮಾನೋ, ಮೋಟಾರೋ-ರೈಲೋ ಅಂತಾಳೆ ಅಂದುಕೊಂಡು ಖಾತರದಿಂದ ನೋಡ್ತಾ ಇದ್ವಿ.  ಮೋಹಿನಿನೂ ತನಗೆ ಕನ್ನಡ ಬರುತ್ತೆ ಅಂತ ತೋರಿಸ್ ಬೇಕು ಅಂತ "ನನ್ ಕಡೇ ನೋಡು..., ಹೇಳಜ್ಜಿ ಹೇಳು..." ಅಂತಾ ಜೋಗಕ್ಕೆ ಬರೋ ಬಿಳಿ ಟೂರಿಸ್ಟ್‌ಗಳ ಧ್ವನಿಯಲ್ಲಿ ದೊಂಬಾಲು ಹಾಕಿದ್ಲು.  ಶಾಂತವಕ್ಕ ಒಂಥರಾ ಟಿವಿ ನೈನಿನ ರಿಪೋರ್ಟರುಗಳು ಕ್ಯಾಮೆರಾ ನೋಡಿಕೊಂಡೇ ಮಾತಾಡ್ತಾವಲ್ಲ ಹಂಗೆ ಕ್ಯಾಮೆರಾನ ದಿಟ್ಟಿಸಿ ನೋಡಿ, "ನಮ್ಮೂರಿಗೆ...     ಕರೆಂಟ್ ಬಂತು ನೋಡ್ರಿ, ಎಲ್ಲಕ್ಕಿಂತ ಅದೇ ದೊಡ್ದು!  ಅದ್ಯಾವ ಪುಣ್ಯಾತ್ಮ ಕರೆಂಟ್ ಕಂಡ್ ಹಿಡಿದ್ನೋ ಅದೇ ದೊಡ್ಡ ವಿಷ್ಯಾ, ಕರೆಂಟ್ ಇಲ್ಲಾ ಅಂತಂದ್ರೆ ನಿಮ್ಮ ಆಟ ಏನೂ ನಡೆಯಂಗಿಲ್ಲ!" ಅಂದು ಬಿಡ್ತು.

ತನ್ನ್ ಐಫೋನೇ ದೊಡ್ಡು ಅಂತ ಅಂದಕಂಡಿದ್ದ ಮೋಹಿನಿ ಮುಖಾ ಸಪ್ಪಗಾಯ್ತು.  ಎಮ್ಮೆಲ್ಲೆ ಸಾಹೇಬ್ರು ಮುಖದ ಮ್ಯಾಲೆ ಇದುವರೆಗೆ ತೇಲಾಡ್ತಿದ್ದ ತೆಳು ನಗೆ ಒಂದು ಕ್ಷಣಾ ನಿಲ್ತು.  ಸೇರಿದ್ದ ಜನ ಭೂತ ನೋಡಿದ್ರೇನೋ ಅನ್ನೋ ಹಂಗೆ ಒಂಥರಾ ಸ್ತಂಭೀಭೂತರಾದ್ರು.  ಇಷ್ಟರಾಗೆ ಸುಧಾರಿಸಿಕೊಂಡ ಸುಶೀಲಮ್ಮ ಚಪ್ಪಾಳೆ ಹೊಡ್ದು, "ಭಾಳಾ ಸತ್ಯವಾದ ಮಾತು..., ಸತ್ಯವಾದ ಮಾತು" ಅಂದು, ಮುಂದೆ "...ಕೇಕ್ ಕಟ್ ಮಾಡ್ರಿ?..." ಅಂತ ಆದೇಶ ಕೊಟ್ರು.  ಈ ಜನಗಳ ಈ ಪ್ರತಿಕ್ರಿಯೆಯನ್ನ ನಿರೀಕ್ಷೆ ಮಾಡಿರದ ಶಾಂತವಕ್ಕ ತನ್ನ ಮನಸ್ಸಿನೊಳಗೇ - "ಇವೆಲ್ಲ ನಿಮಗೆ ಈ ಜನಮದಾಗ ತಿಳಿಯಂಗಿಲ್ಲ ಬಿಡ್ರಿ" ಅಂದುಕೊಂಡ ಹಂಗಾಯ್ತು.

***
ಈ ಲೇಖನ ಏಪ್ರಿಲ್ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.

Sunday, April 03, 2016

...ಸಂಡಾಸ್ ರೂಮ್ ನೋಡೀರೇನು?

ನಾವು ದೋಡ್ಡೋರ್ ಆದ ಮ್ಯಾಲೆ ನಮ್ಮನಿ ಚಿಕ್ಕ್ ಮಕ್ಕಳಿಗೆ "ಹಂಗ್ ಮ್ಯಾಡಬ್ಯಾಡs", "ಹಿಂಗ್ ಮಾಡ್‌ಬ್ಯಾಡಾs" ಅಂತ ಭಾರೀ ಉಪದೇಶ ಏನೋ ಮಾಡ್ತೀವಿ.  ಆದ್ರ, ನಾವು ಚಿಕ್ಕೋರಾಗಿದ್ದಾಗ ಮಾಡಿದ ಚ್ಯಾಷ್ಟೇ-ಕುಚೇಷ್ಟೇಗಳಿಗೆ ಲೆಕ್ಕ ಇಟ್ಟೋರಾರು ಅಂತ ಒಂದ್ ಸರ್ತೀನಾರ್ದೂ ಯೋಚ್ನೇ ಮಾಡೇವೇನು?

"ಹಂಗ್ ಮಾಡಬ್ಯಾಡೋ ತಮ್ಮಾ..." ಅಂತ ನಮ್ಮನಿ ಮಕ್ಕಳಿಗೆ ಈಗ ಹೇಳೋದೇನೋ ಭಾಳ ಐತ್ರಿ, ಆದ್ರ ನಾವ್ ಆಗಿನ್ ಕಾಲದಾಗ ಮಾಡಿದ್ದು ಒಂದೊಂದ್ ಅಲ್ಲ, ಅವನ್ನೆಲ್ಲ ನೆನೆಸಿಕೊಂಡ್ರೆ ಈಗ್ಲೂ ನಗೂ ಬರ್ತತ್ ನೋಡ್ರಿ.
ನಮ್ ಪಾಳ್ಯಾದೊಳಗ ಗಿರಿ ನಮ್ ಲೀಡರ್ರು. ಅವನ ಹಿಂಬಾಲಕರಾಗಿ ನಾವು ನಾಲ್ಕು ಮಂದಿ: ಸುನೀಲ, ರಮೇಶ, ಸುರೇಶ ಮತ್ತ ಹಸುವಿನ ಪ್ರತಿರೂಪ ಅನ್ನೋ ಹಂಗs ನಾನೂ, ಒಂಥರ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾರಲ್ಲ ಹಂಗs.  ಗಿರಿ ಆಗಿನ ಕಾಲದ ಬ್ರೇಕ್ ಥ್ರೂ ಮನುಷ್ಯಾ ರೀ.  ಬ್ರೇಕ್ ಥ್ರೂ ಅಂದ್ರ ಬ್ರೇಕೂ ಹೌದು ಥ್ರೂ ನೂ ಹೌದು!  ಅವನ್ದೆಲ್ಲಾ ಕಪಿಚೇಷ್ಟೆಗಿಂತ ಅದರ ಅಪ್ಪನ್ನದ್ದು ಅಂತಾರಲ್ಲ ಹಂಗs.  ಅವನ ಚೇಷ್ಟಿ ಒಳಗ ಕೆಲವೊಂದಿಷ್ಟು ಫಸ್ಟ್ ಕ್ಲಾಸು, ಇನ್ನು ಕೆಲವೊಂದು ಥರ್ಡ್ ಕ್ಲಾಸು.  ಮಂಗ್ಯಾನಂಗ್ ಆಡಬ್ಯಾಡ ಅಂಥಾ ನೀವ್ ಏನ್ ಕರೀತಿರಿ ಅವೆಲ್ಲ ಫಸ್ಟ್ ಕ್ಲಾಸು, ಅವನ ಚೇಷ್ಟೀ ಇಂದ ಯಾವನಾರಾs ಅಳಂಗ್ ಆದ್ರೆ, ಅದು ಥರ್ಡ್ ಕ್ಲಾಸು.  ಇನ್ನು ನಾವಂತೂ ಎಂದೂ ಸೆಕೆಂಡ್ ಕ್ಲಾಸ್ ಚೇಷ್ಟೇ ಅಂದ್ರ ಏನು ಅಂತ ಯಾವತ್ತೂ ಯಾರ್‌ನೂ ಕೇಳಿದ್ದಿಲ್ಲ!

ಗಿರಿ ಮತ್ತು ಅವನ ಗ್ಯಾಂಗಿನ ಕುತಂತ್ರಗಳಿಗೆ ಬಲಿ ಬೀಳದ ನಮ್ಮೂರಿನಾಗ ಜನರೇ ಇಲ್ಲ ಅನ್ನಬಕು. ನೀವು ನಮ್ ಬಂಡ್ ಭಾಳ್ವಿಗಿ ಸಾಕ್ಷಿ ಆಗಿಲ್ಲ ಅಂದ್ರs ಒಂಥರಾ ನಮ್ಮೂರಿನ ಸಿಟಿಜನ್‌ಶಿಪ್ ಪರೀಕ್ಷಾದಾಗ ಫೇಲ್ ಆದಂಗ್ ನೋಡ್ರಿ!  ಒಂದ್ ಊರು ಅಂದ್ರ ಎಲ್ಲಾ ಥರದ ಮಂದಿ ಇರ್ತಾರ, ಆದ್ರ ನಮ್ ಗಿರಿ ಅಂಥಾ ಮನ್ಶ್ಯಾರು ಬಾಳ್ ಮಂದಿ ಇದ್ದಂಗಿಲ್ಲ ಅನ್ನೋದು ನಮ್ ಅಂಬೋಣ.

ನಿಮಗೂ ನಮ್ಮ ತಂಡಕ್ಕೂ ಯಾವತ್ತಾದ್ರೂ ಮುನಿಸಾತು ಅಂದ್ರ, ನಿಮ್ಮ ಮನ್ಯಾಗ ಸೈಕಲ್ಲೋ ಲೂನಾನೋ ಟಿವಿಎಸ್ಸೋ ಇದ್ರs, ಅದ್ರ ಚಕ್ರದಾಗಿನ ಹವಾ ಟುಸ್ಸ್ ಅಂದಂಗs ಅಂಥ ತಿಳಕೊಳ್ರಿ.  ಅದ್ಯಾವ ಮಾಯದಾಗ ಗಿರಿ ಬರ್ತಿದ್ನೋ... ನಿಮ್ಮನಿ ಮುಂದ ನಿಲ್ಸಿರೋ ಟೂ ವ್ಹೀಲರಿನ ಹವಾ ಇದ್ದಕ್ಕಿದ್ದಂಗ ನಾಪತ್ತೆ ನೋಡ್ರಿ!  ಈ ಟೂ ವ್ಹೀಲರ್ ಹವಾ ಕಳೆದುಕೊಂಡ ಮ್ಯಾಲೆ ಅದನ್ನ ತಳ್ಳೋದು ಎಷ್ಟು ಕಷ್ಟ ಅಂಥ ನಿಮಗ ಗೊತ್ತಿರಲಿಕ್ಕಿಲ್ಲ, ಯಾವತ್ತರ ಟ್ರೈ ಮಾಡಿ ನೋಡ್ರಿ.  ಹವಾ ಕಳಕೊಂಡ ಅದರ ಟ್ಯೂಬಿನೊಳಗೆ ವಾಷರ್ ಒಡೆದು ಹೋಗಿರೋ ಸೈಕಲ್ ಪಂಪ್ ಬಳಸಿ, ಪೆಚ್ಚ್ ಮೋರೇ ಹಾಕ್ಕೊಂಡು, ಹವಾ ತುಂಬೋದು ಅಂದ್ರs ಅದರ ಪಜೀತಿ ಯಾವ ವೈರಿಗೂ ಬ್ಯಾಡ.  ಹವಾ ಹೊಡ್ದೂ ಹೊಡ್ದೂ ಕೈ ಮೈ ನೋವ್ ಬಂದಂಗs.
ಯಾರ್ದಾರೂ ಮನಿ ಹಿತ್ಲಾಗ ಬಾಳೆ ಗೊನಿ ಇನ್ನೇನು ಕಟಾವಿಗೆ ಬಂತೂ ಅಂದ್ರ, ಅದು ಅದರ ಹಿಂದಿನ್ ದಿನಾ ಅದು ಮಂಗ್ ಮಾಯಾ ನೋಡ್ರಿ! ನಮ್ ಗಿರಿ ಹತ್ರ ಯಾರ್ ಹಿತ್ಲಾಗ್ ಯಾವ್ ಫಲ ಎಷ್ಟು ದಿನದಾಗ ಕಟಾವಿಗೆ ಬರ್ತತಿ ಅನ್ನೋದರ ಮಾಹಿತಿ ಭಾಳ್ ಛೊಲೋ ಇತ್ ನೋಡ್ರಿ. ಅವನ ತಲೀ ಒಡೋದೇ ಹಂಗs.  ಮಾವಿನ್ ತೋಪ್‌ನ್ಯಾಗೆ ಕಾಯೋರು ನಮ್ಮನ್ನ ನೋಡ್ರಿದ್ರೆ ದೇವ್ರು ಬಂದೋರಂಗ ಆಡೋರು!  ಎಲ್ಲಾರೂ ಗುರಿ ಇಟ್ಟ್ ಕಲ್ ಹೋಡ್ದು ಒಂದು ಫಲ ಉದುರಿಸಿದ್ರೆ, ನಮ್ಮ್ ತಂಡ ಇಡೀ ಮರಾನೇ ಖಾಲೀ ಮಾಡೋದು... ಮರಾ ಒಂದೇ ಅಲ್ಲ್ ಇರ್ತಿತ್ತು, ಯಾಕಂದ್ರ ಮತ್ತ್ ಮುಂದಿನ ವರ್ಷಕ್ಕ್ ಬೇಕ್ ಅಲ?
ಅಷ್ಟೂ ಮಾಡಿ ನಮಗೆಲ್ಲಾ ಅವಾಗ ಛಾಟೀ ಬಿಲ್ಲಿನ ಹುಚ್ಚು ರೀ.  ಅದರೊಳಗ ಪರಿಣಿತ ಅಂದ್ರ ನಮ್ ಗಿರಿ.  ಅವನ ಗುರಿ ಭಾಳಾ ನಿಖರ.  ನಮ್ ಶಾಲೀ ಕಟ್ಟೀ ಮುಂದ ಧ್ವಜಾ ಹಾರ್ಸೋ ಕಂಬಕ್ಕ ಸುಮಾರು ಐವತ್ತ್ ಏನು, ನೂರ್ ಅಡೀ ದೂರ್ದಿಂದ ಗುರಿ ಇಡೋನ್ ರೀ. ಅದು ಒಂದಿನಾನು ತಪ್ಪಿದ್ದು ನಾ ನೋಡಿಲ್ಲ.  ಅಷ್ಟೂ ಮಾಡಿ ನಿಮಗ ಏನಾರಾ ಗಿರಿ ಕಂಡ್ರ ಆಗಂಗಿಲ್ಲ ಅಂದ್ರ, ನಿಮಗೂ ಛಾಟೀ ಬಿಲ್ಲಿನ ಕಲ್ಲಿನ ಏಟು ಕುಂಡೀ ಮ್ಯಾಲ ಬಿತ್ತೂ ಅಂತಾನs ಲೆಕ್ಕ.

ಎಲ್ರೂ ಊಟಕ್ಕೆ ಕುತ್ವಿ ಅಂದ್ರ ಇವ ನಿಂತೇ ಇರ್ತೀನಿ ಅನ್ನೋವ.  ಅವನೇನಾರ ಲಿಂಬಿ ಹಣ್ಣು, ಟೊಮೇಟೋ, ಮುಸಂಬಿ ಹಣ್ಣು ತಿಂತಾನೇ ಅಂದ್ರ ಅವನ ಅಕ್ಕಾ-ಪಕ್ಕಾ ಯಾರೂ ಇರಂಗಿಲ್ಲ ನೋಡ್ರಿ.  ಅವರ ಪಾಡು ದೇವ್ರಿಗೆ ಪ್ರೀತಿ.  ಅವರ ಕಣ್ಣಿನಾಗೆ ಗ್ಯಾರಂಟಿ ಲಿಂಬೀ ಹಣ್ಣಿನ್ ರಸಾ ಬೀಳೋದೆ.  ಈ ಹಣ್ಣಿನ್ ರಸಾ ಎಲ್ಲಾ ಕಡೆ ಒಸರೋ ಹಂಗ, ಹಣ್ಣನ್ನ ಹಿಚುಕಿ-ಹಿಚುಕಿ ಎಲ್ಲಾ ರಸಾ ಮಾಡ್‌ಕ್ಯಂಡ್ ಒಂದ್ ಕಡೆ ತೂತ್ ಮಾಡಿ ಅದನ್ನ ತನ್ನ ಗುರಿಗೆ ಹಿಡಿದು ಮುಖ ಮಾಡಿ ತಿನ್ನೋದರಲ್ಲಿ ನಮ್ ಗಿರಿ ನಿಸ್ಸೀಮ ರೀ.

ಯಾರ್ದಾರ ಮದ್ವೀ ನಡದ್ರ ನಮಗ್ಯಾರೂ ಬರ್ರೀ ಅಂತ ಕರೀದಿದ್ರೂ ನಾವಾs ಹೋಗ್ತಿದ್ವಿ.  ನಮ್ಮೂರಿನಾಗೆ ಮದ್ವಿ ಮುಂಜೀ ಅಂದ್ರ ಒಂಥರ ನಮ್ಮೂರಿನ ಹಬ್ಬಗಳು ಇದ್ದಂಗ, ಅದಕ್ಯಾರು ಬರಬ್ಯಾಡಾ ಹೋಗಬ್ಯಾಡ ಅನ್ನೋರು?  ಅಲ್ಲಿ ವಾಲಗಾ ಊದೋರ ಮುಂದ ನಾವು ಎಳೇ ಹುಣಸೀ ಕಾಯಿ ತಿಂತಿದ್ವಿ, ಅವರು ನಮ್ಮುನ್ನ ಓಡಿಸಿಕ್ಯಂಡ್ ಬರೋರು.  ಹಿಂಗs, ನಮ್ ಮಜಾ ನಡೀತಿತ್ತ್ ನೋಡ್ರಿ.

ಮದ್ವಿ ಅಂದ ಮ್ಯಾಲ ನೆನಪಾತು. ನಮ್ಮೂರಿನ ನಡುಮನಿ ಈರಪ್ಪನ ಮಗಳ ಮದವ್ಯಾಗ ನಮ್ ಗಿರಿ ಮಾಡಿದ ಪರಾಕ್ರಮ ನೆನಸಿಕೊಂಡ್ ಇವತ್ತಿಗೂ ನಗು ಬರ್ತತಿ ನೋಡ್ರಿ.  ನಡುಮನಿ ಈರಪ್ಪ ಅಂಥ ಸಾವ್ಕಾರ ಏನಲ್ಲ, ಆದ್ರೂ ಇದ್ದೊಬ್ಬ ಮಗಳ ಲಗ್ನಾನ ಅಚ್ಚುಕಟ್ಟಾಗಿ ಮಾಡಬಕು ಅಂತ ಮನಿ ಮುಂದ ಬ್ಯಾಡ,
ಊರಿನ ಛತ್ರದಾಗ ಇಟ್ಟುಗೊಣೂನು ಅಂತ, ಅಲ್ಲೇ ಎಲ್ಲಾ ಫಿಕ್ಸ್ ಮಾಡಿದ್ದ ರೀ.  ಹಿರೇಕೇರೂರು ಸಂಬಂಧ, ಅಂಥಾ ದೂರೇನೂ ಇಲ್ಲ, ಆದ್ರ ಮುಂಜಾನೆ ಬೇಗ ಲಗ್ನ ಮಹೂರ್ತ ಐತಿ ಅಂತ ಎಲ್ರೂ ಹಿಂದಿನ್ ದಿನಾನೇ ಬಂದು ಚೌಳ್ಟ್ರಿ ಸೇರಿಕೊಂಡಿದ್ರು ರೀ.  ನಾವು ನಮ್ಮ ತಂಡದ ಸಮೇತ ಈ ಅತಿಥಿಗಳನ್ನ ಮುಗುಳ್ನಕ್ಕು ಬರಮಾಡಿಕೊಂಡಿದ್ವಿ.  ಯಾರು, ಹೆಂಗಾs ಅಂಥ ಗೊತ್ತಾಗಬೇಕಲ? ಅದಕ್ಕಾ.  ರಾತ್ರೀ ಎಲ್ಲಾರು ಸೇರಿ ಸಮಾ ಹರಟಿ ಹೊಡದ್ವಿ...ಅದು ಯಾವಾಗ ಮಲಗಿದ್ವೋ ಅದು ಯಾವನಿಗ್ ಗೊತ್ತು!

ಮರುದಿನ, ಮುಂಜಾನೆ ಒಂಭತ್ತ್ ಘಂಟಿ ಅಭಿಜಿನ್ ಮಹೂರ್ತ ಅಂಥಾ ಕಾಣ್ತತಿ.  ಮದ್ವೀ ಮನಿ ಅಂದ್ರ ಗಡಿಬಿಡಿ, ಗಿಜಿಬಿಜಿ ಇದ್ದದ್ದ.  ಎಲ್ರೂ ಹೊಸ ಬಟ್ಟಿ ಹಾಕ್ಕೊಂಡಾರ.  ಎಲ್ಲಾ ಕಡಿ ಹೂ ಹಣ್ಣು ಕಾಣ್ಸಕ್ ಹತ್ಯಾವ. ಆದ್ರ ಒಂದಾs ಒಂದ್ ಪ್ರಾಬ್ಲಮ್ಮ್ ರೀ.
ಸುಮಾರು ಎಂಟೂವರಿಯಿಂದ ಎಲ್ಲ್ ಹುಡುಕಿದ್ರೂ ಮದುವೀ ಗಂಡಾ ಕಾಣಸಂಗಿಲ್ಲ!  ಕೆಲವೊಂದಿಷ್ಟು ಮಂದಿ ಹುಡುಗಾ ಓಡಿ-ಗೀಡಿ ಹೋಗ್ಯಾನೇನೋ ಅಂತ ಸಂಶಯಾ ವ್ಯಕ್ತಪಡಿಸಿದ್ರು.  ಕೆಲವೊಂದಿಷ್ಟು ಮಂದಿ ಹುಡುಗನ್ ಅಪ್ಪ-ಅಮ್ಮನಿಗಿ ಜೋರ್ ಮಾಡಕ್ ಹಿಡುದ್ರು.  ಒಂದಿಷ್ಟು ಹೆಣ್ ಮಕ್ಳು ಒಂದ್ ಕಡಿ ಅಳಾಕ್ ಹತ್ಯಾವ!  ಒಂಥರಾ ಕಿಲಕಿಲಾ ಅಂಥ ನಕ್ಕೊಂಡಿದ್ ಛತ್ರ ಹೊಟ್ಟಿ ಬ್ಯಾನಿ ಬಂದ್ ರೋಧ್ನ ಮಾಡೋ ಮಗೂ ಹಂಗ ಅಳಾಕ್ ಹತ್ತೈತಿ! ಯಾರೂ ಪೋಲೀಸ್-ಗಿಲೀಸ್ ಅಂದಂಗಿದ್ದಿಲ್ಲ.  ನಡುಮನಿ ಈರಪ್ಪನ ಮರ್ಯಾದೆ ಪ್ರಶ್ನೆ ನೋಡ್ರಿ.  ಅವ ಏನ್ ಮಾಡ್ತಾನ? ಅತ್ಲಾಗಿಂದ್ ಇತ್ಲಾಗ, ಇತ್ಲಾಗಿಂದ್ ಅತ್ಲಾಗ್ ಒಂಥರಾ ಬೋನ್‌ನಾಗಿರೋ ಹುಲೀ ಮರೀ ಮಾಡ್ದಂಗ ಒಡಾಡ್‌ಕೊಂಡ್ ಬುಸುಗುಡಾಕ್ ಹತ್ತಿದ್ದ.  ವಾಲಗದೋರ್ ಅವರ ಕೆಲ್ಸಾ ನಡ್ಸ್ಯಾರ.  ಮೈಕ್ ಸೆಟ್ ರುದ್ರ, ಅದ್ಯಾವ್ದೋ ಬಭ್ರುವಾಹನ ಸಿನಿಮಾ ಹಾಡ್ ಜೋರಾಗ್ ಹಾಕ್ಯಾನ.  ಭೋಜನಶಾಲೆ ಅಡಿಗಿ ಮನೀ ಒಳಗಿಂದ ಶಾವ್ಗೀ ಪಾಯ್ಸದ ವಾಸ್ನಿ ಗಮ್ಮ್ ಅನ್ನಾಕ್ ಹತ್ತಿತ್ತು.  ಒಂದಿಷ್ಟು ಮಂದೀ ನಮಗೇನೂ ಗೊತ್ತೇ ಇಲ್ಲ ಅನ್ನೋ ಹಂಗ ಮದ್ವೀ ಮಂಟಪದ ಮುಂದ ಜಮಖಾನದ ಮ್ಯಾಲೆ ಕುಂತೂ ಹರಟೀ ಹೊಡ್ಯೋದ್ರಾಗ ತಲ್ಲೀನ ಆಗಿದ್ರು.  ಕೆಲವು ಕಡೆ ಒಂಥರ ಕುಮುಟು ಬೆವ್ರು ವಾಸ್ನಿ ಬೇರೆ!

ಇನ್ನೇನು ಲಗ್ನದ ಮಹೂರ್ತ ಬಂತು, ಹತ್ರಾ ಬಂದೇ ಬಿಡ್ತು, ಆದ್ರೂ ಎಲ್ಲಿ ನೋಡ್ರಿದ್ರೂ ಮದ್ವಿ ಗಂಡಿನ ಸುಳಿವೇ ಇಲ್ಲ!  ಹುಡುಗನ ಅಪ್ಪಾ ಅಮ್ಮಾ ಕಂಗಾಲು.  ಜೋಬ್ನಾಗೆ ಹತ್ತ್ ಪೈಸಾ ಇರದಿದ್ರು ನಮ್ಮ್ ಮಂದಿ ಮರ್ಯಾದೆಗೆ ಹೆದ್ರೋ ಜನಾ ನೋಡ್ರಿ.  ಅಷ್ಟೊತ್ತಿಗ್ ಆಗ್ಲೆ ಅವರ ಮುಖಾ ಕಪ್ಪ್ ಹಿಡದ ಕರಟಾ ಆಗಿತ್ತು.  ಹುಡುಗನ್ ಕಡಿ ಬಾಳ ಮಂದಿ ಇದ್ದಂಗಿರ್ಲಿಲ್ಲಾ ಆದ್ರೂ ಪಾಪ ಅವರಿಗೆ ಊರ್ ಹೊಸತು, ಏನ್ ಮಾಡ್ತಾರ, ಏನ್ ಬಿಡ್ತಾರ?

ನಮ್ ತಂಡ ಅಲ್ಲೇ ಇತ್ತು, ನಾವೂ ಹಂಗಾ ಚ್ಯಾಷ್ಟೀ ಮಾಡ್‌ಕೊಂಡು ಹಾಡ್ ಕೇಳ್ತಾ ನಿಂತಿದ್ವಿ.  ಅಷ್ಟ್ರಾಗ ಯಾರೋ ಒಬ್ರು "ಹೇ, ಗಿರಿ, ಸಾಯಾ ಮಾಡ್ರಪ್ಪಾ, ವರಾ ಎಲ್ಲೂ ಕಾಣಸ್ತಾನೇ ಇಲ್ಲ, ಮದ್ವೀ ನಿಂತ್ ಹೋಗೋ ಪರಿಸ್ಥಿತಿ ಬಂದೈತಿ!" ಅಂದ್ರು.  ನಮ್ ಗಿರಿ ಇದ್ದೋನು, "ಅಲ್ರೀ, ಎಲ್ಲಾ ಕಡೆ ನೋಡೀರೇನು? ಅತ್ಲಾಗ್ ಸಂಡಾಸ್ ರೂಮ್ ನೋಡೀರೇನು?" ಅಂದ.
"ಬಚ್ಚಲ್ ಮನಿ ನೋಡ್ರಿ, ಬಚ್ಚಲ್ ಮನಿ ನೋಡ್ರಿ" ಅಂತ ಯಾರ್ ಯಾರೋ ಕೂಗಿದ್ರು, ಕೊನೀಗ್ ನೋಡಿದ್ರ ಹೊಟ್ ಬ್ಯಾನೀನೋ, ಏನ್ ಕರ್ಮಾನೋ ಅಂದಂಗ ಮದ್ವಿ ಗಂಡ್ ಸಂಡಾಸ್ ರೂಮ್‌ನಾಗೆ ಬಾಗ್ಲ್ ಹಾಕ್ಕೊಂಡು ಕುಂತಾನಾ!  ಯಾರೂ ನೋಡೇ ಇಲ್ಲ!  ಕೊನೀಗೂ ಸಿಕ್ಕಿದಾ ಅಂತ ಎರ್ಲೂ ಸಮಾಧಾನ್ ಮಾಡ್‌ಕೊಂಡು ಅವನ್ನ ಎಷ್ಟು ಲಗೂನಾ ಅತೋ ಅಷ್ಟು ಲಗೂ ಕರ್ಕೊಂಡ್ ಬಂದ್, ಕೊನೀಗೆ ಮಹೂರ್ತ ಮೀರೋದ್ರೊಳಗ ತಾಳೀನೂ ಕಟ್ಸ್ ಬಿಟ್ರು ನೋಡ್ರಿ.  ಎಲ್ರೂ ಸಮಾಧಾನ ಪಟ್ರು, ನಡುಮನಿ ಕುಟುಂಬ ಒಂದ್ ದೀಡ್ ಕಡ್ದು ಹಾಕಿದ ಕೆಲ್ಸ ಮಾಡ್ದಂಗ್ ನಿಟ್ಟುಸಿರು ಬಿಡ್ತು.  ಈರಪ್ಪ ಅದ್ಯಾವ್ ದೇವ್ರಿಗೆ ಅದೇನೇನ್ ಹರಿಕಿ ಹೊತ್ತಾ ಅಂತಾ ಕೇಳಬಕು, ಆ ಸ್ಥಿತಿ!

ಅಷ್ಟೂ ಮಾಡಿ, ಮದ್ವಿ ಗಂಡು ಯಾಕ್ ಅಲ್ಲಿ ಹೊಕ್ಕೊಂಡು ಕುಂತಿದ್ದ ಅಂತ ಯಾರೋ ಕೇಳ್ಲಿಲ್ಲ, ಯಾರೂ ಹೇಳ್ಲಿಲ್ಲ! ನಮಗೊಂದಿಷ್ಟು ಮಂದಿಗೆ ಮಾತ್ರ ಗಿರಿ ಹೇಳಿದ ಮ್ಯಾಲೆ ಗೊತ್ತಾತು: ಮದ್ವಿ ಗಂಡು ಎಂಟ್ ಘಂಟಿ ಅಷ್ಟೊತ್ತಿಗೆ ಸಂಡಾಸ್ ರೂಮಿನ್ ಕಡೀಗೆ ಹೋಗೋದನ್ನ ನೋಡಿ, ಗಿರಿ ಅವನ ಫಾಲೋ ಮಾಡಿದ್ನಂತ.  ಆ ಹುಡುಗ, ತನ್ನ ಬಿಳೀ ಪಂಚಿ ಬಿಚ್ಚಿ, ಸಂಡಾಸ್ ರೂಮ್ ಬಾಗ್ಲ್ ಮ್ಯಾಲ ಇಟ್ಟು, ತನ್ನ ಕೆಲ್ಸ ಮುಂದುವರೆಸ್ಯಾನಂತ.  ಅಷ್ಟೊತ್ತಿಗೆ, ಗಿರಿ ಹೋಗಿ ಅವನ ವಸ್ತ್ರ ಅಪಹರಣ ಮಾಡಿ ಮತ್ತೊಂದು ರೂಮಿನಾಗೆ ಇಟ್ಟನಂತ.  ಯಾವ್ದೋ ಊರಿಂದ ಯಾವ್ದೋ ಊರಿಗೆ ಬಂದು, ಸಂಕೋಚದ ಅಪರಾವತರ ಅನ್ನೋ ಹಂಗ್ ಇದ್ದ ಹುಡುಗಾ ಕೂಗೋಕೂ ಆಗ್ದೇ ಹೊರಾಗ್ ಬರೋಕೂ ಅಗ್ದೇ ಅಲ್ಲೇ ಕುಂತಿದ್ನಂತೆ ನೋಡ್ರಿ!

ಇವೆಲ್ಲ ಆಗಿದ್ದು ನಮ್ ಗಿರಿ ಮತ್ತು ಅವರ ತಂಡದ ಕೃಪೆ ಅಂತ ಯಾರಿಗಾದ್ರೂ ಗೊತ್ತಾಗಿದ್ರ ನಮ್ ಪರಿಸ್ತಿತಿ ದಯನೀಯ ಆಗ್ ಹೋಗ್ತಿತ್ತು, ಆ ಸಂಕೋಚದ ಪ್ರವೃತ್ತಿ ಹುಡುಗನ ದೆಸೆಯಿಂದ ನಾವೆಲ್ಲ ಇವತ್ತು ಕೈಕಾಲು ನೆಟ್ಟಗೆ ಇಟಗೊಂಡಿರೋ ಹಂಗಾತು ಅಂತ ನೆನೆದು ಇವತ್ತೂ ನಾವ್ ನಗತೀವ್ ನೋಡ್ರಿ.  ನೀವೇನಾರಾ ನಮ್ಮೂರಿಗೆ ಹೋಗ್ತೀವಂದ್ರ ನಮ್ಮ್ ಗಿರಿ ಕಂಡು ಕುದ್ದ್ ಮಾತಾಕ್ಯಂಬರ್ರಿ, ಅವ ಹಿಂದ್ ಇದ್ದಂಗ್ ಈಗಿಲ್ಲ, ಆದ್ರೂ ಸ್ವಲ್ಪ ಹುಶಾರ್ ಇರ್ರಿ!


***
ಈ ಲೇಖನ ಮಾರ್ಚ್ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.

Friday, November 21, 2008

ದೇವ್ರು ಇಲ್ಲಾ ಅಂತ ಅಂದೋರು ಯಾರು

ನಾವೆಲ್ಲಾ ಚಿಕ್ಕವರಿದ್ದಾಗ ದೇವ್ರು-ದೆವ್ವಗಳು ಇದ್ದಾವೋ ಇಲ್ಲವೋ ಅಂತ ಚಿಂತೆ-ಚಿಂತನೆ ನಡ್ಸಿ ನಡ್ಸಿ ಬಹಳ ಟೈಮು ಕಳೀತಿದ್ವಿ, ನಮ್ಮ ನಮ್ಮ ಮಟ್ಟಿನ ತತ್ವಗಳು ತರ್ಕಗಳು ನಮ್ಮನ್ನು ವಾದ-ವಿವಾದಗಳಲ್ಲಿ ತೊಡಗಿಸಿ ಕೆಲವೊಂದು ಕಥೆಗಳನ್ನು ಬಹಳ ರೋಚಕಗೊಳಿಸಿ (ಅಂದ್ರೆ ಮಸಾಲೆ ಸೇರಿಸಿ) ಹೇಳಿ ಹಂಚಿಕೊಳ್ಳುತ್ತಿದ್ದೆವು. ಪ್ರಪಂಚದಲ್ಲಿ ಇದ್ದ ಇಲ್ಲದ ದೆವ್ವ ಭೂತಗಳು, ಕೊಳ್ಳಿ ದೆವ್ವಗಳು ಇವೆಲ್ಲಾ ನಮ್ಮ ತಂಡದ ಅನುಪಸ್ಥಿತ ಸದಸ್ಯರಾಗಿದ್ದವು. ನಮ್ಮ ನಮ್ಮ ದೇವರುಗಳ ಜೊತೆಗೆ ನಮ್ಮೂರಿನ ಶ್ಮಶಾನದಲ್ಲಿದ್ದ ದೆವ್ವಗಳು ಹಾಗೂ ಅವುಗಳ ಕಥೆಗಳು ನಮ್ಮ ಜೊತೆಗೆ ಅಮೇರಿಕಕ್ಕೆ ಹೇಗೆ ಬಂದ್ವು, ಅವುಗಳಿಗೆ ವೀಸಾ ಕೊಟ್ಟೋರು ಯಾರು ಅನ್ನೋ ಪ್ರಶ್ನೆಗಳು ಇನ್ನು ಪ್ರಶ್ನೆಗಳಾಗೇ ಉಳಿದಿವೆ ಬಿಡಿ.

ಈ ತಣ್ಣನೆ ಹೊತ್ತಿನಲ್ಲಿ ದೇವ್ರ ಬಗ್ಗೆ ನೆನೆಸಿಕೊಳ್ಳೋದಕ್ಕೆ ಏನು ಕಾರಣ ಅಂತ ನನಗೇ ಅನ್ಸಿ ಒಂದು ನಗು ಹೊರಗೆ ಬಂತು, ಅದರ ಹಿಂದೇನೇ ದೇವ್ರ ಹೆಸರನ್ನ ಹಿಡಿದು ಒಂದಿಷ್ಟು ಕೀಟಲೆ ಮಾಡೋಣ ಅಂತ್ಲೂ ಅಂದುಕೊಂಡೆ, after all ಯಾವ ದೇವ್ರ ತಂಡವೂ ನಮ್ಮನ್ನೇನು sue ಮಾಡೋಲ್ಲ ಅಲ್ವೇ?

***

Thanks to my three year old - ಪ್ರತಿಯೊಂದು ಆಲ್ಟರ್‌ನೇಟ್ ಪದ ಇಂಚರಳ ಬಾಯಿಯಿಂದ ಹೊರಡೋದು "Why?" (but why, ಮತ್ತೆ ಅದಕ್ಕೆ ಅಮೇರಿಕನ್ ಆಕ್ಸೆಂಟಿನ ಟಚ್ ಜೊತೆ ಹಲವಾರು ವೇರಿಯೇಷನ್ನುಗಳೂ ಇವೆ!). ಅವಳ ಪ್ರಶ್ನೆಗಳಿಗೆ ಉತ್ತರ ಕೊಡೋ ಹಿನ್ನೆಲೆ ಅಥವಾ ನೆಪದಲ್ಲಿ ಈ ಕೆಳಗಿನ ಪ್ರಶ್ನೆಗಳು ಅಷ್ಟೇ...(ತಮಾಷೆಗೆಂದು)

- ದೇವ್ರು ಬ್ಲಾಕೋ ವೈಟೋ ಅಥವಾ ಮಿಕ್ಸೋ? ಅಥ್ವಾ ಕಲರ್ಡ್ ಸ್ಕಿನ್ನೋ? ಹೌದೌದು, ರಾಮ-ಕೃಷ್ಣರ ಚಿತ್ರಗಳನ್ನು ನೋಡಿ ಸ್ವಲ್ಪ ನೀಲಿಯಾಗಿರುತ್ವೆ, ಶಿವನ ಕಂಠವೂ ಕೂಡಾ ನೀಲಿ.
- ಈ ಬ್ರಹ್ಮನ ತಲೆ ಕೂದಲನ್ನು ಕತ್ತರಿಸೋ ಪ್ರವೀಣ ಕಲಾವಿದ ಯಾರು? ಆ ನಾಲ್ಕು ತಲೆಗಳ ನಡುವೆ ಅವನ ಕತ್ತರಿ ಹೇಗೆ ಸಲೀಸಾಗಿ ಹರಿದಾಡುತ್ತೆ? ಯಾವ ಬಾಯಿಯಿಂದ ಹರಿಯೋ ಸಂವಾದಕ್ಕೆ ಆ ನಾಪಿತ ಯಾವ ಉತ್ತರ ಕೊಡ್ತಾನೆ?
- ಈ ನಾಲ್ಕು ಕೈ ಇರೋ ದೇವತೆಗಳಿಗೆ ಬಟ್ಟೆ ಹೊಲಿದು ಕೊಡೋರು (ಅಂದ್ರೆ ಡಿಸೈನರ್ಸ್) ಯಾರು?
- ಹತ್ತು ತಲೆ ಇರೋ ರಾವಣ ಯಾವ ಬಾಯಲ್ಲಿ ಅನ್ನಾ ಹಾಕ್ತಿದ್ದ?
- ಶಂಕರ ಕೋಪದಲ್ಲಿ ತ್ರಿಶೂಲದಿಂದ ಬಾಲಕನ ತಲೆಯನ್ನು ಕತ್ತರಿಸಿದ (why?), ಭಂಟರು ಹೋಗಿ ಉತ್ತರಕ್ಕೆ ತಲೆ ಹಾಕಿ ಮಲಗಿದ ಆನೆ ತಲೆಯನ್ನು ಕತ್ತರಿಸಿ ತಂದರು (why?), ಹಾರ್ಟು, ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡೋದನ್ನ ಕೇಳಿದ್ದೇವೆ, ಪ್ರಾಣಿಯಿಂದ ಮನುಷ್ಯನಿಗೆ ತಲೆ ಟ್ರಾನ್ಸ್‌ಪ್ಲಾಂಟ್ ಮಾಡಿದ್ದು ಯಾವ ಸರ್ಜನ್ನು? ಅನಸ್ತೇಷಿಯಾ ಕೊಟ್ಟೋರು ಯಾರು? ಆ ಬಾಲಕನ ಕಡಿದು ಹೋದ ತಲೆಯನ್ನೇ ಹುಡುಕಿ ಮತ್ತೇಕೆ ಜೋಡಿಸಲಿಲ್ಲ, ಆ ಆನೆಯ ಮುಂಡ ಏನಾಯ್ತು? ಇಡೀ ಬ್ರಹ್ಮಾಂಡದಲ್ಲಿ ಬರೀ ಅದೊಂದು ಬಡಪಾಯಿ ಆನೆ ಮಾತ್ರ ಉತ್ತರಕ್ಕೆ ತಲೆ ಹಾಕಿ ಮಲಗಿತ್ತೇ?
- ಈ ಕ್ಲೀನ್ ಶೇವನ್ನ್ ವಿಷ್ಣು ಬಳಸೋ ಬ್ಲೇಡ್ ಯಾವ್ದು? ಕೇವಲ ಶಿವ, ರಾಘವೇಂದ್ರ ಸ್ವಾಮಿ, ಹನುಮಂತ ಗಡ್ಡ ಬೆಳೆಸಿಕೊಂಡಿರೋ ಚಿತ್ರ ಮಾತ್ರ ನೋಡೋಕೆ ಯಾಕೆ ಸಿಗುತ್ತೆ?

ಈ ಮೇಲಿನ ಏನೆಲ್ಲ ಪ್ರಶ್ನೆಗಳು (ಹಾಗೂ ಅವುಗಳ ಉತ್ತರಗಳು) ಇದ್ರೂ ನಾವು ದೇವರನ್ನ ಘಟ್ಟಿಯಾಗಿ ನಂಬಿದವರೇ, ಪ್ರತಿನಿತ್ಯ ಶ್ರೀ ಗಣೇಶಾಯ ನಮಃ ಅಂದೇ ನಮ್ಮ ಜೀವನಗತಿಯನ್ನು ಆರಂಭಿಸುವವರೇ. ಈ ಪ್ರಶ್ನೆಗಳನ್ನ ನಾನು ಯಾವತ್ತೂ ಯಾರಿಗೂ ಕೇಳಿದ್ದಿಲ್ಲ (ಇಲ್ಲಿಯವರೆಗೆ), ಇವುಗಳೆಲ್ಲ ಹೀಗೆ ಬಾಲಿಶ ಅನ್ನಿಸಿದ್ರೂ ಪ್ರಶ್ನೆ ಕೇಳಬೇಕಾದ ವಯಸ್ಸಿನಲ್ಲಿ ಕೇಳಿದ್ರೆ ಉತ್ತರ ಕೊಡೋ ಬದಲು ’ಹೋಗೋ ತಲೆಹರಟೆ, ಅಧಿಕಪ್ರಸಂಗಿ...’ ಅಂತ ಯಾರಾದ್ರೂ ಬೈತಾರೆ ಅನ್ನೋ ಅವ್ಯಕ್ತ ಭಯವನ್ನು ಯಾರು ಹುಟ್ಟಿಹಾಕಿದ್ರೋ ಯಾರಿಗೆ ಗೊತ್ತು?

***

ಹೀಗೇ ಒಂದು ದಿನ ವರ್ಜೀನಿಯಾದ ಅಲೆಕ್ಸಾಂಡ್ರಿಯಾ ಮನೆಯಲ್ಲಿ ನಮ್ಮ ಮನೆಯ ಗೋಡೆಗಳಿಗೆ ಬಣ್ಣ ಹಚ್ಚೋಣ ಅನ್ನೋ ಆಲೋಚನೆ ಬಂದಿದ್ದೇ ತಡ ಬಣ್ಣ ಹಚ್ಚಲು ಬೇಕಾದ ಪರಿಕರಗಳನ್ನೆಲ್ಲ ಜೋಡಿಸಿಕೊಂಡು ಸುಸಜ್ಜಿತನಾದೆ, ಮೊದಮೊದಲು ಇದ್ದ ಉತ್ಸಾಹ ಕೆಲ್ಸಾ ಮಾಡ್ತಾ ಮಾಡ್ತಾ ಬತ್ತಿ ಹೋಗೋದರ ಜೊತೆಗೆ ದೊಡ್ಡ ತಲೆನೋವು ಇದು ಅನ್ನೋ ಭಾವನೆ ಬಲವಾಗಿ ಮುತ್ತಿಕೊಳ್ಳತೊಡಗಿತು. ದಿನಗಳೆದ ಮೇಲೆ ಇನ್ನೇನು ಸುಮಾರಾಗಿ ಎಲ್ಲ ಕೆಲ್ಸ ಮುಗಿದು ಫಯರ್ ಪ್ಲೇಸಿನ ಮೇಲೆ ಇದ್ದ ಗೋಡೆಯನ್ನು ಅರ್ಧ ಪೈಂಟ್ ಮಾಡುವ ಹೊತ್ತಿಗೆ ಅಚಾನಕ್ಕಾಗಿ ಏರ್‌ಪೋರ್ಟಿನಿಂದ ನನ್ನ ಸ್ನೇಹಿತನ ಕರೆ ಬಂತು.

’I am hungry, tired, jet lagged, cold - come and get me out of here!' ಅನ್ನೋ ಆಜ್ಞೆ. ನಮ್ಮ ಮನೆಯಿಂದ ಡಲ್ಲಸ್ ಏರ್‌ಪೋರ್ಟಿಗೆ ಕನಿಷ್ಠ ಒಂದು ಘಂಟೆ ದೂರ, ಮೊದಲೇ ಕೆಲಸ ಕಳ್ಳ ನಾನು (ಬಣ್ಣ ಹಚ್ಚೋ ಕೆಲಸ) ಒಂದು ನೆವ ಸಿಕ್ಕಿತೆಂದು ಕೆಲಸವನ್ನು ಅಲ್ಲೇ ಬಿಟ್ಟು ಏರ್‌ಪೋರ್ಟಿನ ಕಡೆ ಹೊರಟೆ. ನಾನು ಬರುವ ಹೊತ್ತಿಗೆ ಸುಮಾರು ಮೂರ್ನಾಲ್ಕು ಘಂಟೆ ಕಳೆದು ಹೋಗಿತ್ತು, ಟ್ರೇನಲ್ಲಿ ಇದ್ದ ಪೈಂಟೂ ಹಾಗೂ ನನ್ನ ರೋಲರ್ರುಗಳು, ಬ್ರಷ್ಷೂ ಇವೆಲ್ಲ ಒಣಗಿ ಹೋಗಿ ಉಪಯೋಗಕ್ಕೆ ಬಾರದವಾಗಿತ್ತು. ನೀರಿನಲ್ಲಿ ತೊಳೆದು ಅದೇನೇನು ಮಾಡಿದರೂ ಮೊದಲಿನ ಹಾಗೆ ಬಣ್ಣ ಹಚ್ಚಲು ಬಾರದವಾಗಿ ಹೋಗಿದ್ದವು. ಅದೇ ತಾನೆ ಮನೆಗೆ ಬಂದ ನನ್ನ ಸ್ನೇಹಿತನಿಗೆ ಸಹಸ್ರ ನಾಮ ಹಾಕುತ್ತಲೇ ಮತ್ತೆ ಇದ್ದ ಬದ್ದ ಒಣಗಿ ಕೃಶವಾದ ರೋಲರುಗಳಿಂದಲೇ ಬಣ್ಣ ಹಚ್ಚುವ ಬುದ್ಧಿವಂತ ಸಾಹಸಕ್ಕೆ ತೊಡಗಿದ್ದ ನನಗೆ ಬುದ್ಧಿ ಕಲಿಸುವ ಸಲುವಾಗಿ ಫೈಯರ್ ಪ್ಲೇಸಿನ ಮೇಲಿನ ಗೋಡೆಯ ಬಣ್ಣ ಬರೆಬರೆಯಾಗಿ ಹೋಯಿತು, ಮೊದಲು ಇದ್ದದ್ದಕ್ಕಿಂತಲೂ ಹಾಳಾಗಿ ಹೋಯಿತು. ಅದೂ ಸೆಮಿ ಗ್ಲಾಸ್ ಪೈಂಟು, ಅದರ ಸ್ಥಿತಿ ಇನ್ನೂ ಕಷ್ಟವಾಗಿ ಹೋಗಿದ್ದ ಹಿನ್ನೆಲೆಯಲ್ಲಿ ನನ್ನ ಎಲ್ಲ ಕರ್ಮಾಕರ್ಮಗಳನ್ನು ಹಳಿಯುತ್ತ ಇದನ್ನೆಲ್ಲ ಹೇಗೆ ಸರಿಪಡಿಸಲಿ ಎಂದು ಯೋಚಿಸುತ್ತಿದ್ದ ನನಗೆ ಮರುದಿನ ಬಹಳ ಆಶ್ಚರ್ಯವೊಂದು ಕಾದಿತ್ತು.

ನಮ್ಮ ಮಹಡಿಯ ಮನೆಯ ಮೇಲೆ ಆಟಿಕ್‌ನಲ್ಲಿ ಆ ವರ್ಷ ಇದ್ದ ಮಹಾನ್ ಛಳಿಯಲ್ಲಿ ನೀರಿನ ಪೈಪುಗಳು ಒಡೆದು ಹೋಗಿ ಒಂದೆರಡು ಮಹಡಿಗಳ ಮನೆಗಳಲ್ಲೆಲ್ಲಾ ನೀರು-ನೀರು ಹರಿದುಹೋಗಿತ್ತು. ಎರಡು ಮಹಡಿ ಕೆಳಗಿರುವ ನಮ್ಮ ಮನೆಯಲ್ಲೂ ನೀರಿನ ಪ್ರಭಾವ ಕಾಣುತ್ತಿತ್ತು. ವಿಶೇಷವೆಂದರೆ ನಮ್ಮ ಮನೆಯ ಎಲ್ಲಾ ಗೋಡೆಯನ್ನು ಹೊರತುಪಡಿಸಿ ಕೇವಲ ಆ ಫೈಯರ್ ಪ್ಲೇಸಿನ ಮೇಲೆ ನಾನು ಕೆಟ್ಟದಾಗಿ ಪೈಂಟ್ ಮಾಡಿದ್ದೆನಲ್ಲ, ಅಲ್ಲಿ ಮಾತ್ರ ನೀರಿನ ಕಲೆ ಬಿದ್ದಿತ್ತು! It is true, ನನ್ನ ಕಣ್ಣನ್ನೇ ನಾನು ನಂಬದ ನಿಜ!

Thanks to america, it is not my problem any more! ನಮ್ಮ ಕಾಂಡೋ ಅಸೋಸಿಯೇಷನ್ನಿನ್ನ ಇನ್ಷೂರೆನ್ಸ್ ಪಾಲಿಸಿಯ ದಯೆಯಿಂದ ಎಲ್ಲೆಲ್ಲಿ ನೀರಿನ ಡ್ಯಾಮೇಜ್ ಇತ್ತೋ ಅದನ್ನೆಲ್ಲ ಅಸೋಸಿಯೇಷನ್ನ್ ನವರು ಸರಿಮಾಡಿಸಿಕೊಟ್ಟರು, ನಮ್ಮ ಫಯರ್ ಪ್ಲೇಸಿನ ಗೋಡೆಯನ್ನೂ ಸೇರಿ! ಅವತ್ತೇ ಅಂದುಕೊಂಡಿದ್ದು ನಾನು, ನನ್ನ ಆಕ್ರಂದನ ಆದ್ಯಾವ ಮುಗಿಲು (celing) ಮುಟ್ಟಿತೋ ಆ ದೇವರು ಕಣ್ಣು ಬಿಟ್ಟು ನಮ್ಮ ಗೋಡೆಯ ಬಣ್ಣವನ್ನು ಸರಿ ಮಾಡಿಕೊಟ್ಟನಲ್ಲ ಎಂದು. ಅವತ್ತಿಂದ ಇವತ್ತಿನವರೆಗೆ ದೇವರು ಇದ್ದಾನೆ ಅಂತ್ಲೇ ಅಂದುಕೊಂಡಿರೋದು ನಾನು, ಆದ್ರೆ ಅವತ್ತಿನಿಂದ ಮುಗಿಲು ನೋಡಿ ಆರ್ತನಾಗಿ ಮೊರೆ ಇಡುವಾಗ ಮನೆಯಿಂದ ಹೊರಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇನೆ, the last thing you want is another broken water pipe in the middle of a winter - that is below freezing weather.

Sunday, August 31, 2008

ಲೈಫ್ ಅಂದ್ರೆ ಗೊಂದಲ ಅಲ್ದೇ ಮತ್ತಿನ್ನೇನು?

Even tea bags have instructions to follow! ಅಂತ ಅನ್ನಿಸಿದ್ದು ಇತ್ತೀಚೆಗೆ. ಲೈಫ್ ಅಂದ್ರೆ ಗೊಂದಲ ಅಲ್ದೇ ಮತ್ತಿನ್ನೇನು? ಬೆಳಕಿನ ಬಗ್ಗೆ ತಿಳಕೊಳ್ಳೋಣ ಅಂತ ಶಾಲೆ-ಕಾಲೇಜಿಗೆ ಹೋದ್ರೆ ಬೆಳಕು ಅಂದ್ರೆ ಪಾರ್ಟಿಕಲ್ಲೋ ವೇವೋ ಅಂತ ನಮ್ಮನ್ನೇ ಕನ್‌ಫ್ಯೂಸ್ ಮಾಡ್ತಾರೆ, ಕ್ಲಾಸಿಕಲ್ ಥಿಯರೀನೂ ಬೇಡಾ ಮಾಡರ್ನ್ ಸೈನ್ಸೂ ಬೇಡಾ ಅಂತಂದ್ರೆ ಯಾವಾಗ್ಲೂ ಕ್ವಾಂಟಮ್ ಮೆಕ್ಯಾನಿಕ್ಸ್ ಇದ್ದೇ ಇದೆ, ಆದ್ರೆ ನಮ್ಮ ಕಾಲೇಜು ಮೇಷ್ಟ್ರುಗಳು ಮಾಡೋ ಪಾಠವನ್ನು ಅರ್ಥ ಮಾಡ್ಕೋ ಬೇಕಾದ್ರೆ ವಿದ್ಯಾರ್ಥಿಗಳು ಬೆಳಕಿನ್ ವೇಗಕ್ಕಿಂತ್ಲೂ ಹೆಚ್ಚು ಚುರುಕಾಗಿರಬೇಕು. ಇನ್ನೇನು Heisenberg's Uncertainity Principle ತಲೆ ಒಳಗೆ ಹೊಕ್ಕಿರುತ್ತೋ ಇಲ್ವೋ ಅಷ್ಟೊತ್ತಿಗೆ ಎಕ್ಸಾಮ್ ಅಂತ ತಲೆ ತಿಂದು ಕಲಿ ಬೇಕಾದ್ದು ಕಲಿಯೋ ಹೊತ್ತಿಗೆ ಎಕ್ಸಾಮ್ ಪ್ರಿಪರೇಷನ್ನ್ ಎಕ್ಸಾಮ್ ಪ್ರಿಪರೇಷನ್ನ್ ಮಾಡೋ ಹೊತ್ತಿಗೆ ಕಲಿ ಬೇಕಾದ್ದು ಕಲಿಯೋ ಸಂದರ್ಭ ಬಂದಿದ್ದು ನನಗಂತೂ ಮೊದಲ್ನೇ ಸರ್ತಿ ಅಲ್ಲಾ ತಾನೆ?

ಇಂತಲ್ಲೇ ರಸ್ತೆ ದಾಟೀ ಅಂತ ಬಿಳಿ-ಗೆರೆಗಳನ್ನು ಎಳೆದಿರ್ತಾರೆ, ಅದನ್ನ ದಾಟೋದಕ್ಕಿಂತ ಮೊದ್ಲೇ zeebra crossing ಅಂತ ಹೇಳಿ ಕನ್‌ಫ್ಯೂಸ್ ಮಾಡ್ತಾರೆ. ಪೈಥಾಗೊರೋಸ್ ಥಿಯರಮ್ ಅಂತಾ ತಲೆ ತಿಂತಾರೆ, ಅದನ್ನು ಕಲಿತು ಮುಗೀತಿದ್ದ ಹಾಗೆ it is also known as Donkey's formula ಅಂತಾರೆ. ಝೀಬ್ರಾ ಕತ್ತೆ ಕುದುರೆಗಳಿಗೆ ಗೊತ್ತಿರೋ ಲಾಜಿಕ್ಕನ್ನ ತಿಳಕೊಳ್ಳೋದಕ್ಕೆ ನಾವ್ಯಾಕೆ ಶಾಲೆಗೆ ಹೋಗ್ಬೇಕು?

ನಮ್ ಕನ್ನಡಿಗರದ್ದು ಯಾವಾಗ್ಲೂ ಸಪ್ಪೆ ಸ್ವಭಾವ, ಯಾಕೆ ಅಂತೀರಾ? ಮತ್ತಿನ್ನೇನು, ನಾವೆಲ್ಲ ದೊಡ್ಡದಾಗಿ ’ನಮಸ್ಕಾರ, ಹೇಗಿದ್ದೀರಾ?’ ಅಂತ ಕೇಳ್ತೀವಲ್ಲ, ಈ ’ನಮಸ್ಕಾರ’ ಅನ್ನೋದರಲ್ಲಿ ಕಿಕ್ ಇಲ್ಲ, ಅದರಲ್ಲಿ ನಮಸ್ಕಾರಮ್, ವಣಕ್ಕುಮ್, ಸಲಾಮ್, Hey, Hi ಅನ್ನೋದರಲ್ಲಿರೋ ಗ್ಲಾಮರ್ ಇಲ್ಲ. ’ನಮಸ್ಕಾರ, ನಮಸ್ಕಾರ, ನಮಸ್ಕಾರ’ ಅಂತ ಹೇಳ್ಕೊಂಡು ಆ ಗಣೇಶನೇನೋ ಮುಂದೆ ಬಂದ, ಅದೇ ರೀತಿ ನೀವೇನಾದ್ರೂ ದಾರೀಲಿ ಹೋಗೋರ್ ಬರೋರಿಗೆ ’ನಮಸ್ಕಾರ ನಮಸ್ಕಾರ’ ಅಂದ್ರೆ ತಲೆ ಸರಿ ಇಲ್ಲ ಅಂದ್‌ಕೋತಾರೆ ಅಷ್ಟೇ. ಅದಕ್ಕೋಸ್ಕರನೇ ನಮ್ ಬಯಲ್ ಸೀಮೆಯಲ್ಲಿ ’ಅರಾಮಾ?’ ಅನ್ನೋದು ಅದು How're you doing? ಅನ್ನೋದರ ಯಥಾ ನಕಲೇ, ಆದ್ರೆ ಬಹಳ ಸಿಂಪಲ್ಲಾಗಿರೋದು. ಒಂದು ರೀತಿ ಅರ್ಧ ಪೇಜ್ ಬರೆದಿರೋ ಸ್ಪ್ಯಾನಿಷ್ ಡೈಲಾಗನ್ನು ಮೂರೇ ಮೂರು ಸಾಲು ಇಂಗ್ಲೀಷಿನಲ್ಲಿ ಹೇಳಿದ ಹಾಗೆ.

ಸಹ್ಯಾದ್ರಿ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಕ್ಲಾಸ್ ತಗೋತಿದ್ದೆ, ನಾನೋ ಟೈಮರನ್ನು ಒಡಲಾಳದಲ್ಲೇ ಇಟ್ಟುಕೊಂಡು ಹುಟ್ಟಿದ ಹಾಗೆ ಬಹಳ ಶಿಸ್ತಿನವನು. ಪಾಪ ಯಾವ್ದೋ ಹಳ್ಳಿ ವಿದ್ಯಾರ್ಥಿ ಒಂದೆರಡು ನಿಮಿಷ ಲೇಟ್ ಆಗಿ ಬಂದ, ’ಯಾಕೆ, ಕ್ಲಾಸ್ ಇರೋದ್ ಮರ್ತು ಹೋಯ್ತಾ?’ ಅಂದೆ (’ಊಟ ಮಾಡೋದ್ ಮರೆಯೋದಿಲ್ವಾ?’ ಅನ್ನೋದು ಫಾಲ್ಲೋ ಅಪ್ ಡೈಲಾಗು, ಪರಿಸ್ಥಿತಿ ಅಲ್ಲೀವರೆಗೆ ಹೋಗ್ಲಿಲ್ಲ), ಅವನು, ’ಇಲ್ಲಾ ಸಾರ್, ಈಗಷ್ಟೇ ಊರಿಂದ ಬಂದೆ?’ ಅಂದ. ನಾನು, ’ಹಾಗಾದ್ರೆ ನಾವೆಲ್ಲ ಕಾಡಿಂದ ಬರ್ತೀವೇನು?’ ಅಂದು ಸುಮ್ಮನಾದೆ, ಕ್ಲಾಸ್ ಎಲ್ಲ ನಗ್ತು, ಹುಡುಗನ ಮೋರೆ ಪೆಚ್ಚಗಾಗಿ ನನಗೆ ’ನೀನು ಅಮೇರಿಕದಲ್ಲಿ ಹೋಗಿ ಬೀಳು!’ ಅಂತ ಶಾಪಾ ಹಾಕ್ದಾ ಅನ್ಸತ್ತೆ, ಅದಕ್ಕೆ ಇಲ್ಲ್ ಬಂದ್ ಬಿದ್ದಿದ್ದೀನ್ ನೋಡಿ. ಇಲ್ಲೋ, ವಿದ್ಯಾರ್ಥಿಗಳು ಆನ್‌ಟೈಮ್ ಬರೋದಿರ್ಲಿ ಶಾಲೇಲಿ ಮೇಷ್ಟ್ರುಗಳ ಎದಿರು ವಿದ್ಯಾರ್ಥಿಗಳು ತಿಂಡಿ-ತೀರ್ಥ ತಿನ್ನಬಹುದು ಕುಡೀಬಹುದು. ನಾನು ಯಾವ್ದೋ ಡಾಕ್ಟ್ರು ಅಪಾಯಿಂಟ್‌ಮೆಂಟು ಅಂತ ಅವರು ಕೊಟ್ಟ ಟೈಮಿಗೆ ಹೋದ್ರೆ ಅವರು ಮೊದ್ಲು ದೊಡ್ಡ ರೂಮಿನಲ್ಲಿ ಕಾಯಿಸಿದ್ದು ಆಲ್ದೇ ಅದಕ್ಕಿಂತ ಸಣ್ಣ ರೂಮಿನಲ್ಲಿ ಮತ್ತೆ ಕಾಯಿಸ್ತಾರಲ್ಲ. ಇಲ್ಲಿಯವರಿಗೆ ಟೈಮ್ ಸೆನ್ಸೇ ಇಲ್ಲ, ನನ್ ಮೀಟಿಂಗ್‌ಗಳು ಆನ್‌ಟೈಮ್ ಶುರು ಆಗೋದಿರಲಿ, ಅವು ಸರಿಯಾದ ಟೈಮಿಗೆ ಮುಗಿಯೋದೂ ಇಲ್ಲ. ಯಾವ್ದೂ ಬೇಡಪ್ಪಾ ನ್ಯಾಸಾದ ಉಡಾವಣೆಗಳೇ ಸರಿಯಾದ ಸಮಯಕ್ಕೆ ಆಗೋದಿಲ್ಲ ಅಂದ್ರೆ, ಅಮೇರಿಕದಲ್ಲಿ ಟೈಮಿಗೆ ಎಲ್ಲಿ ಬೆಲೆ ಇದೆ ನೀವೇ ಹೇಳಿ? ನನ್ ತಂದೆ ತಾಯಿ ಮಾಡಿದ ಮೂವತ್ತೈದು ವರ್ಷ ಮೇಷ್ಟ್ರ ಸರ್ವೀಸ್‌ನಲ್ಲಿ ಪ್ರತಿದಿನ ಕೆಲ್ಸಕ್ಕೆ ಹೋಗೋವಾಗ್ಲೂ ಯಾವಾಗ್ಲೂ ಆನ್‌ಟೈಮ್ ಅವರು ಶುರು ಮಾಡುತ್ತಿದ್ದ ತರಗತಿಗಳು ಆನ್‌ಟೈಮ್, ಆದ್ರೆ ನಾನ್ ನೋಡಿ ನನ್ನ ಹದಿನೈದು ವರ್ಷದ ವೃತ್ತಿ ಜೀವನದಲ್ಲಿ ಒಂದ್ ದಿನಾನೂ ಮನೇನ ಆನ್‌ಟೈಮ್ ಬಿಟ್ಟಿದ್ದಿಲ್ಲ - ಎಲ್ಲಾ ಆ ಸಹ್ಯಾದ್ರಿ ಕಾಲೇಜ್ ಹುಡುಗನ್ದೇ ತಪ್ಪು!

ಇಷ್ಟು ಚಿಕ್ಕ ಮನುಷ್ಯ ನಾನು, ನನ್ನದೊಂದು ದೊಡ್ಡ ಮಾತಿದೆ - ಕನ್ನಡಿಗರಿಗೆ ಆತ್ಮಾಭಿಮಾನ ಕಮ್ಮಿ - ಅಂತ. ಬೇರೆ ಯಾವ್ ಭಾಷೇನೋರೂ ಆವರ ಮಾತುಕಥೆಯ ನಡುವೆ ಮತ್ತೊಬ್ಬ ಪರಭಾಷಿಯ ಆಗಮನವಾದ್ರೆ ತಮ್ ಮಾತೃಭಾಷೆಯಲ್ಲಿನ ಡೈಲಾಗನ್ನು ಬದಲಾಯಿಸೋದಿಲ್ಲ, ಕೇವಲ ಕನ್ನಡಿಗರು ಮಾತ್ರ ಒಂದೇ ಕಾಮನ್ ಲಾಂಗ್ವೇಜ್ ಇಂಗ್ಲೀಷಿಗೆ ಮೊರೆ ಹೋಕ್ತಾರೆ, ಇನ್ನೂ ವರ್ಸ್ಟ್ ಅಂದ್ರೆ ಆಗಮಿಸಿದ ಪರಭಾಷಿಯ ಭಾಷೆಯಲ್ಲಿ ತಮ್ಮ ಡೈಲಾಗನ್ನು ಕಂಟೀನ್ಯೂ ಮಾಡ್ತಾರೆ. ನನಗೆ ಹಾಗೆ ಆದಾಗ್ಲೆಲ್ಲ ಮೈ ಉರಿಯುತ್ತೆ ಅನ್ನೋದೇನೋ ನಿಜ, ಆದ್ರೆ ಏನ್ ಮಾಡ್ಲಿ ಹೇಳಿ? ಅದಕ್ಕೆ ಒಂದು ಹೊಸ ಫಾರ್ಮುಲಾ ಕಂಡ್ ಹಿಡಿದಿದ್ದೀನಿ. ನಿಮ್ಮ ಎದುರು ಯಾರಾದ್ರೂ ಕನ್ನಡಿಗರು ನನಗೆ ಆ ಭಾಷೆ ಬರುತ್ತೆ, ಈ ಭಾಷೆ ಬರುತ್ತೆ ಅಂತ ಕೊಚ್ಚಿಕೋತಾರೆ ನೋಡಿ, ಆಗ ಅವರಿಗೆ ಒಂದು ಸರಳ ಪ್ರಶ್ನೆ ಕೇಳಿ ಬಾಯಿ ಮುಚ್ಚಿಕೊಂಡು ಸುಮ್ಮನಿರ್ತಾರೆ. ನಮ್ಮ್ ಸೋದರಮಾವ ಹಾಗೆ ಭಾರತದಲ್ಲಿ ಅಲ್ಲಿ ಇಲ್ಲಿ ಇದ್ದು ಬಂದೋರು ಕನ್ನಡವೂ ಬರೋಲ್ಲ, ಉಳಿದ ಭಾಷೆಗಳೂ ಬರೋದಿಲ್ಲ ಅಂತಂದ್ರೇನೇ ಚೆನ್ನ. ಒಂದ್ ದಿನ ಅವರು ಕೊಚ್ಚಿ ಕೊಳ್ತಾ ಇದ್ರು, ನನಗೆ ತಮಿಳು ಬರುತ್ತೆ, ತೆಲುಗು ಬರುತ್ತೆ, ಮುಂತಾಗಿ ಒಟ್ಟು ಹನ್ನೊಂದೋ ಹನ್ನೆರಡೋ ಕೌಂಟು ಮಾಡುವಷ್ಟು. ನಾನೆಂದೆ ’ನಿಮಗೆ ತಮಿಳು ಬರುತ್ತಾ? ಹಾಗಾದ್ರೆ - ಆಧುನಿಕ ಭಾರತದಲ್ಲಿ ಜನಸಂಖ್ಯಾ ಸ್ಪೋಟದಿಂದ ಸಮಸ್ಯೆಗಳು ಉಲ್ಬಣಗೊಂಡಿವೆ - ಅನ್ನೋದನ್ನು ಆ ಭಾಷೆಯಲ್ಲಿ ಹೇಗೆ ಹೇಳ್ತೀರಿ?’ ನಮ್ಮ್ ಮಾವ ಬೆಬ್ಬೆಬ್ಬೆ ಆದ್ರು. ನಾನು ಹೇಳಿರೋ ಕನ್ನಡದ ವಾಕ್ಯದಲ್ಲಿ ಸಂಸ್ಕೃತ ಪದಗಳೇ ಇರಬಹುದು, ಆದ್ರೆ ನಾನು ಹೇಳಿದ್ದನ್ನ ಅವರು ಆಯಾ ಭಾಷೇನಲ್ಲಿ ಟ್ರಾನ್ಸ್‌ಲೇಟ್ ಮಾಡ್ದೇ ಹೋದ್ರೆ ಅವರಿಗೆ ಆ ಭಾಷೆ ಬರುತ್ತೇ ಅಂತ ಹೇಗ್ ಹೇಳ್ಲಿ, ಹೇಗೆ ಒಪ್ಪಿಕೊಳ್ಳಲಿ. ಸ್ವಲ್ಪ ವರ್ಷಗಳ ಮೇಲೆ ತಿಳೀತು, ನಾನು ಹೇಳಿದ ಕನ್ನಡದ ಸಾಲೇ ಅವರಿಗೆ ಅರ್ಥವಾಗಿರಲಿಲ್ಲ ಅಂತ!

ಗುರುದ್ವಾರ-ಗುದದ್ವಾರದ ಕಥೆ ಹೇಳಿ ನಿಮ್ಮನ್ನ ಬಿಟ್ಟು ಬಿಡ್ತೀನಿ, ನೈಜ ಘಟನೆ ಆದರೆ ಪಾತ್ರಗಳನ್ನು ಬದಲಾಯಿಸಿದ್ದೀನಿ ಅಷ್ಟೇ - ಆದ್ರೆ ಹೀಗೆ ಹೇಳ್ದೋನು ನಾನಂತೂ ಅಲ್ಲ!
ಒಂದು ದಿನ ನಮ್ಮ ಐಟಿ ಪ್ರಾಜೆಕ್ಟ್ ಟೀಮಿನ ಪ್ರೊಡಕ್ಷನ್ನ್ ಮೀಟಿಂಗ್ ನಡೀತಾ ಇತ್ತು, ವೀಕೆಂಡಿನಲ್ಲಿ ಯಾವ್ದೋ ಎಮರ್ಜನ್ಸಿ ಬಂದಿತ್ತಾದರಿಂದ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದ ಎಲ್ಲರನ್ನೂ ಪೇಜ್ ಮಾಡೀ ಮಾಡೀ ಕಾನ್‌ಫರನ್ಸ್ ಕಾಲ್‌ಗೆ ಸೇರಿಕೊಳ್ಳೋದಕ್ಕೆ ಹೇಳ್ತಾ ಇದ್ವಿ. ಐಟಿ ಟೀಮು ಅಂದ್ರೆ ಭಾರತೀಯರ ಸಮೂಹ - ಬರೀ ವರ್ಕರ್ ಬೀಸ್ ಮಾತ್ರ ಸಾರ್, ಮ್ಯಾನೇಜ್‌ಮೆಂಟ್ ಅಲ್ಲ - ಅದರಲ್ಲಿ ಸರ್ದಾರ್‌ಜಿಗಳು, ಸೌತ್ ಇಂಡಿಯನ್ಸೂ (ಕನ್ನಡಿಗರೂ ಸೇರಿ!) ಇರೋ ಅಂತದ್ದು. ನಾನು ರಾಮ್ ಸಿಂಗ್ ಇನ್ನೂ ಯಾಕೆ ಬಂದಿಲ್ಲ ಅಂತ ಯೋಚಿಸ್ತಾ ಇರೋವಾಗ ನನ್ನ ಕನ್ನಡ ಮಿತ್ರ ಅವನಿಗೆ ಪೇಜ್ ಮಾಡಿ, ಅವನ ಜೊತೆ ಫೋನ್‌ನಲ್ಲಿ ಮಾತನಾಡಿದ ನಂತರ ಬಂದು ಕಿವಿಯಲ್ಲಿ ಹೇಳಿದ - ’ರಾಮ್ ಸಿಂಗ್, ಗುದದ್ವಾರಕ್ಕೆ ಹೋಗಿದ್ದಾನೆ, ಇನ್ನೊಂದು ಅರ್ಧ ಘಂಟೆ ಬರೋಕೆ ತಡವಾಗುತ್ತಂತೆ!’ ಅಂತ. ನಾನು ಮುಖ ಕಿವುಚಿ, ’What?!’ ಅಂದ್ರೆ, ಮತ್ತೆ ’ಅವನು ಗುದದ್ವಾರದಲ್ಲಿದ್ದಾನೆ!’ ಅಂತ ಹೇಳ್ದ. ಅವನು ಇನ್ನೊಂದ್ ಸರ್ತಿ ಹಂಗೇ ಹೇಳಿದ್ರೆ ನಾನು ನಂಬ್‌ಕೊಂಡ್ ಬಿಡ್ತಿದ್ನೋ ಏನೋ, ನನಗಂತೂ ನಗು ತಡೆಯಲಾಗದೇ ಕಾನ್‌ಫರೆನ್ಸ್ ಕಾಲ್‌ನ ಮ್ಯೂಟ್ ಮಾಡಿ, ’Are you sure?' ಅಂದೆ, ಆದರೆ ನನ್ನ ಕನ್ನಡ ಮಿತ್ರನಿಗೆ ತಾನು ಏನು ಹೇಳಬೇಕಾಗಿತ್ತು ಏನು ಹೇಳ್ದೆ ಅನ್ನೋದೇ ಅರ್ಥ ಆಗ್ಲಿಲ್ಲ. ’ಗುರುದ್ವಾರ, ಗುದದ್ವಾರ ಎರಡೂ ಭಗವಂತನ ಸೃಷ್ಟಿಗಳೇ, ಸದ್ಯ ಅಲ್ಲಿಂದ ಬರ್ತಾನಲ್ಲ ಸಾಕು’ ಎಂದು ಸುಮ್ಮನಾದೆ. ಈ ವಿಷಯವನ್ನು ನೆನೆಸಿಕೊಂಡಾಗಲೆಲ್ಲ ಎಂತಹ ಕಷ್ಟದ ಸಮಯದಲ್ಲೂ ನನಗೆ ತಿಳಿ ನಗು ಬರುತ್ತೆ.

***
ಕೊಸರು: ಇಂಗ್ಲೀಷೇ ದೊಡ್ಡದು ಅಂತ ಹಾರಾಡಿ ಒದ್ದಾಡೋರಿಗೆಲ್ಲ ಒಂದು ಸವಾಲು, ಯಾವಾಗ್ಲೂ ’ಶಿಟ್-ಶಿಟ್’ ಅಂತ ಅನ್ನೋರು ದಯವಿಟ್ಟು ತಮ್ಮ ಮಾತಿನ ಮಧ್ಯೆ ಒಂದ್ ಸರ್ತೀನಾದ್ರೂ ಅದನ್ನ ಕನ್ನಡಕ್ಕೆ ತರ್ಜುಮೆ ಮಾಡಿ ಹೇಳಿ ನಿಮ್ಮ ಬಾಯಿ ಎಷ್ಟು ಕೊಳಕಾಗಿದೆ ಅಂತ ಎಲ್ಲರಿಗೆ ತೋರಿಸಬಾರದೇಕೆ?