Saturday, June 06, 2020
Tuesday, May 12, 2020
ಕೊರೋನಾ ಹೇರ್ ಕಟಿಂಗ್ ಪ್ರಹಸನ...
ಈ ಕೊರೋನಾ ವೈರಸ್ ಹೇರಿದ ವರ್ಕಿಂಗ್ ಫ್ರಮ್ ಹೋಮ್ ಕಟ್ಟಳೆಯನ್ನು ಆಚರಿಸುತ್ತಾ ನಾನೂ ಋಷಿ ಮುನಿಗಳ ಹಾಗೆ ಉದ್ದ ಕೂದಲನ್ನೂ ಹಾಗೇ ಗಡ್ಡವನ್ನೂ ಬಿಟ್ಟು ಎಂಟು ವಾರಗಳಾಗಿತ್ತು. ಮತ್ತೆ ನಮ್ಮ ಆಫೀಸಿನಲ್ಲಿ ವಿಡಿಯೋ ಕಾನ್‌ಫರೆನ್ಸ್‌ಗಳು ಹೆಚ್ಚಾಗ ತೊಡಗಿ, ನಾನೂ ಕೂದಲು ಕತ್ತರಿಸಿಕೊಳ್ಳೋದು ಅನಿವಾರ್ಯವಾಯಿತು.
ತಲೆಯ ಮೇಲೆ ಕೂದಲು ಕಡಿಮೆ ಇದ್ದವರದ್ದು ಒಂದು ರೀತಿಯ ಸಂಕಟವಾದರೆ, ನನ್ನಂತಹವರಿಗೆ ಹುಲುಸಾಗಿ ಕೂದಲು ಬೆಳೆಯುವುದು ಇನ್ನೊಂದು ರೀತಿಯ ಸಂಕಟ. ಸರಿಯಾಗಿ ಮೂರು ಹೆಚ್ಚೆಂದರೆ ನಾಲ್ಕು ವಾರಗಳಲ್ಲಿ ಕೂದಲು ಕತ್ತರಿಸದಿದ್ದರೆ ತಲೆಯ ಮೇಲೆ ಒಂದು ಕಿರೀಟ ಬಂದ ಹಾಗಿರುತ್ತದೆ. ಹಾಗಿರುವಾಗ, ನಾನೂ ಏಕೆ ಪ್ರಯತ್ನ ಮಾಡಬಾರದು ಎಂದು ಕಳೆದ ಶನಿವಾರ ಮನೆಯಲ್ಲಿದ್ದ ಹತ್ಯಾರಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಬಚ್ಚಲು ಮನೆಯಲ್ಲಿ ಉಪಸ್ಥಿತನಾದೆ.
ಇಲ್ಲೇ ಯಡವಟ್ಟಾಗಿದ್ದು, ನೋಡಿ! ನಮ್ಮ ಕೂದಲನ್ನು ನಾವೇ ಕತ್ತರಿಸುವುದು ನಾನು ಅಂದುಕೊಂಡಷ್ಟು ಸುಲಭದ ಮಾತಾಗಿರಲಿಲ್ಲ. ಮೊದಲು ಕಿವಿಯ ಅಕ್ಕ-ಪಕ್ಕ ಒಂದು ಕಡೆಯಿಂದ ಟ್ರಿಮ್ಮರ್ ಹಿಡಿದುಕೊಂಡು ಕತ್ತರಿಸಲು ಶುರುಮಾಡಿದ ನನಗೆ ಸ್ವಲ್ಪ ಸಮಯದ ನಂತರ ಮೆಟ್ಟಿಲು-ಮೆಟ್ಟಿಲಿನ ಹಾಗೆ ಕೂದಲು ಕತ್ತರಿಸಿಕೊಂಡು ಅಲ್ಲಲ್ಲಿ ಸ್ಟೆಪ್ಪುಗಳಾದವು. ಒಮ್ಮೊಮ್ಮೆ ಸ್ವಲ್ಪ ಒತ್ತಿ ತೆಗೆದಿದ್ದಕ್ಕೋ ಏನೋ ಕೆಲವು ಕಡೆ ಬುರುಡೆ ಕಾಣುವಷ್ಟು ಸಣ್ಣಕೂ ಅದರ ಪಕ್ಕದಲ್ಲಿ ಸ್ವಲ್ಪ ಉದ್ದಕೂ ಬಿಟ್ಟುಕೊಂಡು ಹೋಯಿತು. ಸೈಡು ಮತ್ತೆ ಮುಂದೇನೋ ಸರಿ, ಆದರೆ ಹಿಂದಿನ ಭಾಗವನ್ನು ಹೇಗೆ ಕತ್ತರಿಸೋದು? ಅದರಲ್ಲೂ ಮಿರರ್ ಇಮೇಜ್ ನೋಡಿಕೊಂಡು? ಸ್ವಲ್ಪ ಹೊತ್ತಿನ ನಂತರ ಕೈ ಮತ್ತು ಬೆರಳುಗಳೂ ಕೂಡ ನೋವು ಕೊಡತೊಡಗಿದವು. ಕೊನೆಗೆ ಅರ್ಧ ಘಂಟೆಯ ಹೊತ್ತಿಗೆಲ್ಲ ಸುಮಾರು ಒಂದು ಪೌಂಡ್ ಅಷ್ಟು ಕೂದಲು ನೆಲದ ಮೇಲೆ ಕರಿಮುಗಿಲು ಕವುಚಿಕೊಂಡ ಹಾಗೆ ಬಿದ್ದುಕೊಂಡಿತ್ತು!
ಇಷ್ಟು ಹೊತ್ತಿಗಾಗಲೇ ನಮ್ಮ ಮನೆಯವರಿಗೆಲ್ಲ ನಾನು ಹಾಸ್ಯದ ವಸ್ತುವಾಗಿದ್ದೆ. ತಲೆಯ ಹಿಂದಿನ ಭಾಗವಷ್ಟೇ ಏನೂ ಪೂರ್ಣ ತಲೆಯನ್ನೇ ನನ್ನ ಹನ್ನೊಂದು ವರ್ಷದ ಮಗನಿಗೂ ಮತ್ತು ಹೆಂಡತಿಗೂ ವಹಿಸಿ (ಏನು ಬೇಕಾದರೂ ಮಾಡಿ, ಆದರೆ ಇದಕ್ಕಿಂತ ಕೆಟ್ಟದಾಗಿ ಮಾಡಬೇಡಿ), ಆರ್ತನಾಗಿ ಒಪ್ಪಿಸಿಕೊಂಡ ಮೇಲೆ ನನಗೆ ಸಮಾಧಾನವಾಗುವ ಮಟ್ಟವನ್ನು ತಲುಪಿದೆ. ಒಟ್ಟು ನಲವತ್ತೈದು ನಿಮಿಷಗಳ ನಂತರ ತಲೆ ಹಗುರವಾಗಿ ಸ್ನಾನ ಮಾಡಿ ಹೊರಬಂದೆ. ಅದಕ್ಕಿಂತ ಮುಂಚೆ, ಹತ್ತು ನಿಮಿಷ ಇಡೀ ಬಚ್ಚಲುಮನೆಯನ್ನು ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛ ಮಾಡಿದ್ದೂ ಸಹ ತುಸು ಹೆಚ್ಚೇ ಕೆಲಸವೆನಿಸಿತು.
ಸ್ನಾನ ಮಾಡಿ ಎಂದಿನಂತೆ ತಲೆ ಬಾಚಿ ನೋಡಿದರೆ, ಕೆಲವು ಕಡೆ ಕಡಿಮೆ, ಕೆಲವು ಕಡೆ ಹೆಚ್ಚು ಕೂದಲು ಇದ್ದ ನಾನು ಎಲ್ಲೋ ಇಲಿಗಳು ಭತ್ತದ ಚೀಲವನ್ನು ತಿಂದು ಹಾಕಿ ಧ್ವಂಸಮಾಡಿದ ವಿಷಯವನ್ನು ನೆನಪಿಗೆ ತಂದವು. ಮೊದಲೆಲ್ಲ ಸ್ಟೆಪ್ಪುಗಳಾಗಿ ಕೆಟ್ಟದಾಗಿ ಕಾಣುತ್ತಿದ್ದ ಬದಿಯ ಕೂದಲು, ಈಗ ಯಾವುದೋ ಪುರಾತನ ದೇವಸ್ಥಾನದ ಅವಶೇಷದಂತೆ ಕಂಡುಬಂದು, ನಗುಬಂದಿತು. ಅಲ್ಲದೇ, ಒಂದು ಬದಿಯ ಕೋನದಲ್ಲಿ ನೋಡಿದಾಗ ನನ್ನ ತಲೆ, ಮಾಗಿದ ಉತ್ತುತ್ತಿಯಂತೆ ಕಂಡುಬಂತು!
ಆದರೆ ಕೊರೋನಾ ಮಹಿಮೆ ಇಲ್ಲಿಗೇ ಮುಗಿಯಲಿಲ್ಲ... ಹೇರ್ ಕಟ್ ಕೆಟ್ಟದಾಗಿರಲಿ, ಬಿಡಲಿ... ಇನ್ನೆರಡು ವಾರಗಳಲ್ಲಿ ಮತ್ತೆ ಪ್ರಯತ್ನಿಸುವ ಛಲವಂತೂ ಹುಟ್ಟಿದೆ! ದಿನೇದಿನೇ ನೋಡುವ ಮನೆಮಂದಿಗೆ ಇದೀಗ ಕೆಟ್ಟ ಹೇರ್ ಕಟ್ಟೂ ಸಹ ಒಗ್ಗಿ ಹೋಗಿ ಅದೇ ಒಂದು ಸ್ಟೈಲ್ ಆಗಿದೆ! ಇನ್ನೆರಡು ವಾರಗಳಲ್ಲಿ ಒಂದಿಷ್ಟು ಒಳ್ಳೆಯ ಟ್ರಿಮ್ಮರ್ ಮೇಲೆ ಹಣ ಹೂಡಿದರೆ, ಜೀವಮಾನ ಪರ್ಯಂತ ಹೊರಗೆ ಕೂದಲು ಕತ್ತರಿಸುವ ಪ್ರಸಂಗ ಬರದೆಯೂ ಇರಬಹುದು! ಯಾರು ಬಲ್ಲರು?
Posted by Satish at 10:19 PM 1 comments
Saturday, April 25, 2020
ಎಲ್ಲಾ ಕಸಮಯವೋ!
ದಿನೇ-ದಿನೇ ಬೃಹದಾಕಾರವಾಗಿ ಬೆಳೆಯುವ ಕಸದ ಪ್ರಮಾಣ ಒಂದು ದಿನ ಇಡೀ ಪ್ರಪಂಚದ ಪ್ರಗತಿಗೇ ಮಾರಕವಾಗಬಹುದೇ ಎಂಬ ಕೊರಗು ಇತ್ತೀಚೆಗೆ ಬಲವಾಗಿ ಕಾಡುತ್ತಿದೆ.
***
ನಮ್ಮ ಆಧುನಿಕ ಬದುಕಿನಲ್ಲಿ ನಾವೇ ಉತ್ಪಾದಿಸಿದ ಸಮಸ್ಯೆಗಳಲ್ಲಿ ಈ ಕಸವೂ ಒಂದು. ಇದನ್ನ ಕಸ ಅನ್ನಿ, ಟ್ರ್ಯಾಶ್ ಅನ್ನಿ, ಅಥವಾ ರಬ್ಬಿಶ್ ಅನ್ನಿ, ತ್ಯಾಜ್ಯ ಅನ್ನಿ, ಕಲ್ಮಷ ಅನ್ನಿ - ಎಲ್ಲವೂ ಒಂದೇ. ಎಲ್ಲ ದೇಶಗಳಲ್ಲೂ ಈ ಸಮಸ್ಯೆ ಇದ್ದೇ ಇದೆ, ಆದರೆ ಭಾರತದಲ್ಲಿ ಇದು ಅತಿ ಹೆಚ್ಚು ಎನ್ನಬಹುದು. ಈಗಿನ ಎಲ್ಲೆಲ್ಲೂ ಕಸವೇ ಕಸ ಎನ್ನುವ ಅಂತಿಮ ಹಂತವನ್ನು ತಲುಪುವಲ್ಲಿ ಸಹಾಯ ಹಸ್ತ ನೀಡಿದ ಪೆಡಂಭೂತಗಳಲ್ಲಿ ಮುಖ್ಯವಾದುವು: ಯದ್ವಾತದ್ವಾ ಬೆಳೆದ ಜನಸಂಖ್ಯೆ, ಎಂಥ ಸಮಸ್ಯೆಗಳನ್ನೂ ಉಲ್ಬಣಗೊಳಿಸಬಲ್ಲ ಜನಸಾಂದ್ರಂತೆ, ಇವೆಲ್ಲಕ್ಕೂ ಮೂಲಭೂತ ಕಾರಣವಾದ ಪ್ಲಾನಿಂಗ್ (ಅಥವಾ ಪ್ಲಾನಿಂಗ್ ಇರದೇ ಇರುವ ಸ್ಥಿತಿ), ಎಂಥ ಸಂದರ್ಭವನ್ನೂ ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳುವ ರಾಜಕೀಯ ಮುತ್ಸದ್ದಿತನ ಹಾಗೂ ಲಂಚ ಲಂಪಟತನ.
ಭಾರತದವೆಂದರೆ ಬೆಂಗಳೂರೊಂದೇ ಅಲ್ಲ, ಆದರೆ ನಮ್ಮ ಬೆಂಗಳೂರಿಗೆ ಈ ಗತಿ ಬಂದಿರುವಾಗ ಇನ್ನುಳಿದ ನಗರಗಳ ಪಾಲು ಹೇಗಿರಬೇಡ. ಏಳು (೨೦೧೧) ವರ್ಷಗಳ ಹಿಂದೆ ೮೫ ಲಕ್ಷ ಜನಸಂಖ್ಯೆ ಇದ್ದ ಬೆಂಗಳೂರು ಇಂದು ೧೨೫ ಲಕ್ಷ (೨೦೧೭) ತಲುಪಿದೆ. ಇಲ್ಲಿ ನೂರಕ್ಕೆ ತೊಂಭತ್ತು ಜನ ಅಕ್ಷರಕುಕ್ಷಿಗಳಿದ್ದರೂ ಸಹ, ಇಡೀ ನಗರ ಅನಾಗರೀಕರ ಬೀಡಾಗಿದೆ. ತಮ್ಮ ಮನೆಯ ಒಳಗನ್ನು ಬೆಳಗಿಕೊಳ್ಳುವ ಜನ, ಹೊರಗನ್ನು ಅದೆಷ್ಟು ಕೊಳಕಾಗಿಟ್ಟುಕೊಂಡಿದ್ದಾರೆಂದರೆ ಅದರ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ, ಆದ್ದರಿಂದ ಎಲ್ಲರಿಗೂ ಅದು ’ಒಪ್ಪಿಕೊಂಡ’ ಅಥವಾ ’ಒಗ್ಗಿಕೊಂಡ" ವಿಷಯವಾಗಿದೆ.
ಒಂದು ನಗರ ನಿರ್ಮಲೀಕರಣಗೊಳ್ಳ ಬೇಕಾದರೆ ಅಲ್ಲಿನ ಒಳಚರಂಡಿ ವ್ಯವಸ್ಥೆ ಚೆನ್ನಾಗಿರಬೇಕು. ಅಲ್ಲಿ ಬಳಕೆಯಾಗುವ ನೀರನ್ನು ಪರಿಷ್ಕರಿಸಿ ತ್ಯಾಜ್ಯ ಪದಾರ್ಥಗಳನ್ನು ಬೇರ್ಪಡಿಸಿಬೇಕು. ಇದೇ ರೀತಿ ಕಸವನ್ನು ಸಹ ಪರಿಷ್ಕರಿಸಿ, ರಿಸೈಕಲ್ ಮಾಡಬಹುದಾದವುಗಳನ್ನು ಬೇರ್ಪಡಿಸಿ ರಿಸೈಕಲ್ ಮಾಡಬೇಕು. ಇವೆಲ್ಲಕ್ಕೂ ವ್ಯವಸ್ಥಿತವಾದ ಸಾಮಾಜಿಕ ಕಾಳಜಿ ಇರಬೇಕು. ನಗರೀಕರಣ, ಅತಿ ಜನಸಾಂದ್ರತೆಯಿಂದ ನಮ್ಮ ಸಮಸ್ಯೆಗಳು ಹೆಚ್ಚಿ ನಮ್ಮ ಪರಿಸ್ಥಿತಿ ಹೀಗಾಗಿದೆ ಎಂದು ತಳ್ಳಿ ಹಾಕುವಂತಿಲ್ಲ. ಉದಾಹರಣೆಗೆ, ೯೦ ಲಕ್ಷ ಜನಸಂಖ್ಯೆ ಇರುವ ನ್ಯೂ ಯಾರ್ಕ್ ನಗರ, ಇದಕ್ಕಿಂತಲೂ ನಾಲ್ಕು ಪಟ್ಟು ಜನಸಾಂದ್ರತೆ ಇರುವ ಟೋಕ್ಯೋದಲ್ಲಿ ಜನರು ಬದುಕುತ್ತಿಲ್ಲವೇ? ಅಲ್ಲಿಯೂ ಕಸದ ಸಮಸ್ಯೆ ಇದೆಯೇ ಎಂದು ಯೋಚಿಸಬೇಕಾಗುತ್ತದೆ.
ನಮ್ಮ ಕಸದ ಸಮಸ್ಯೆಗೆ ನಾವು ಏನು ಮಾಡಬೇಕು? ಈ ಹಿಂದೆ ವ್ಯವಸ್ಥಿತವಾದ ಪ್ಲಾನ್ ಇಲ್ಲದೇ ಅಡ್ಡಾದಿಡ್ಡಿಯಾಗಿ ಬೆಳೆದ ನಗರಗಳ ಕನಿಷ್ಠ ಇನ್‌ಫ್ರಾಸ್ಟ್ರಕ್ಚರ್ ಅನ್ನು ಬೆಳೆಸುವುದರ ಜೊತೆಗೆ, ಅಲ್ಲಿ ಎಲ್ಲೆಲ್ಲಿಂದಲೋ ವಲಸೆ ಬಂದು ಸೇರಿಕೊಂಡ ಜನರ ತಿಳುವಳಿಕೆಯನ್ನು ಹೆಚ್ಚಿಸಬೇಕು. ಜೊತೆಗೆ ತಿರಸ್ಕೃತ ತ್ಯಾಜ್ಯವನ್ನು ಬೇರ್ಪಡಿಸಿ ಅದನ್ನು ಸರಿಯಾಗಿ "ವಿನಿಯೋಗಿಸುವ" ಉದ್ಯಮಗಳು ಹಾಗೂ ಅದಕ್ಕೆ ಸೂಕ್ತವಾದ ಟೆಕ್ನಾಲಜಿ ಮತ್ತು ಮಷೀನುಗಳ ಸಹಾಯದಿಂದ ಕಸದ ಪೆಡಂಭೂತವನ್ನು ನಿಯಂತ್ರಿಸಬಹುದು. ನಾನು ನೋಡಿದಂತೆ ಬೆಂಗಳೂರಿನ ಬಹುಭಾಗದಲ್ಲಿ ಈಗ ಚಾಲ್ತಿಯಲ್ಲಿರುವ ವ್ಯವಸ್ಥೆ ಕಲೆಕ್ಟ್ ಎಂಡ್ ಡಂಪ್. ಇದು ಹೀಗೇ ಮುಂದುವರೆದರೆ ಇಡೀ ನಗರವೇ ತಿಪ್ಪೇಗುಂಡಿಯಾಗುವುದು ಗ್ಯಾರಂಟಿ.
ಕಸವನ್ನು ಕಲೆಕ್ಟ್ ಮಾಡಿ, ಅದನ್ನು ಸರಿಯಾಗಿ ಬೇರ್ಪಡಿಸಿ, ರಿಸೈಕಲ್ ಮಾಡುವವನ್ನು ಸರಿಯಾದ ಜಾಗಕ್ಕೆ ತಲುಪಿಸಿ, ಕೊಳೆಯುವುದನ್ನು ಕಾಂಪೋಸ್ಟ್ ಆಗಿ ಪರಿವರ್ತಿಸಿ ಮತ್ತೆ ಅವೇ ರಿಸೋರ್ಸುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆ ಆಗುವಂತೆ ನೋಡಿಕೊಳ್ಳುವುದು ತ್ಯಾಜ್ಯವನ್ನು ಪರಿಷ್ಕರಿಸಲು ಇರುವ ಒಂದು ಸಾಲಿನ ಸೂತ್ರ. ಮೊದಲೆಲ್ಲ ನಮ್ಮಲ್ಲಿ ಪ್ಲಾಸ್ಟಿಕ್ಕುಗಳು ಬಳಕೆಯಾಗುತ್ತಿರಲಿಲ್ಲ. ಮನೆಗೊಂದು ತಿಪ್ಪೇಗುಂಡಿ ಇರುತ್ತಿತ್ತು, ಅಲ್ಲಿ ದಿನಬಳಕೆಯ ತ್ಯಾಜ್ಯ ಕೊಳೆತು ಗೊಬ್ಬರವಾಗುತ್ತಿತ್ತು. ಹಳೆಯ ಟೂತ್‌ಪೇಸ್ಟ್ ಟ್ಯೂಬುಗಳಿಂದ ಹಿಡಿದು, ಒಡೆದ ಪ್ಲಾಸ್ಟಿಕ್ ಕೊಡಪಾನಗಳ ತುಂಡುಗಳನ್ನು, ಖಾಲಿ ಬಾಟಲುಗಳನ್ನು, ರದ್ದಿ ಪೇಪರುಗಳನ್ನು ದುಡ್ಡು ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದರು. ಇದಿಷ್ಟೇ ಅಲ್ಲ, ಹಳೆಯ ಪಾತ್ರೆಗಳನ್ನೂ, ರೇಷ್ಮೆ ಬಟ್ಟೆ ಮೊದಲಾದವುಗಳನ್ನೂ ಸಹ ನಮಗೆ ಗೊತ್ತಾದ ರೀತಿಯಲ್ಲಿ ’ರಿಸೈಕಲ್’ ಮಾಡುತ್ತಿದ್ದೆವು.
ಇಂದಿನ ಆಧುನಿಕ ಜನತೆಗೆ ತಮ್ಮ ತ್ಯಾಜ್ಯವನ್ನು ವಿನಿಯೋಗಿಸಲು ತಾವು ಹಣವನ್ನೇಕೆ ಖರ್ಚು ಮಾಡಬೇಕು ಎಂಬ ಸರಳ ಸತ್ಯ ತಿಳಿಯುತ್ತಿಲ್ಲ? ನಿಮ್ಮ ಮನೆಯ ಮುಸುರೆಯನ್ನು ತೊಳೆಯುವವರಿಗೆ ದುಡ್ಡು ಕೊಡುವುದಿಲ್ಲವೇ? ಹಾಗೇ ತ್ಯಾಜ್ಯ ತೆಗೆದು ಪರಿಷ್ಕರಿಸಲು ಕೂಡ ಹಣ ತೆರಬೇಕಾಗುತ್ತದೆ. ಅಲ್ಲದೇ ತ್ಯಾಜ್ಯವನ್ನು ಪರಿಷ್ಕರಿಸುವ ಉದ್ಯಮ/ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಅವರನ್ನು ಒಂದು ವ್ಯವಸ್ಥೆಯ ಮುಖ್ಯ ಅಂಗವನ್ನಾಗಿ ಪರಿಗಣಿಸಬೇಕಾಗುತ್ತದೆ. ನನ್ನ ಅನಿಸಿಕೆಯ ಪ್ರಕಾರ, ನಾವು ಸೇವಿಸುವ ಆಹಾರಕ್ಕೆಷ್ಟು ಪ್ರಾಮುಖ್ಯತೆ ನೀಡುತ್ತೇವೆ ಅದರ ಕಾಲು ಪಟ್ಟಾದರೂ ತ್ಯಾಜ್ಯ ಸಂಸ್ಕರಣೆಗೆ ಮನ್ನಣೆ ನೀಡಬೇಕಾಗುತ್ತದೆ. ಇಲ್ಲವೆಂದಾದಲ್ಲಿ ಇಂದು ನಾವು ಬೆಲೆ ತೆರದೆಯೇ ಕಸವನ್ನು ಎಲ್ಲಿ ಬೇಕಂದಲ್ಲಿ ಎಸೆದು ಮುಂದೆ ಅದು ಎಲ್ಲವನ್ನು ಮೀರಿ ಬೆಳೆತು ಅನೇಕ ಅನಾಹುತಗಳು, ಹಾನಿಗಳೂ ಸಂಭವಿಸುವಾಗ ತುಂಬಾ ನಿಧಾನವಾಗಿರುತ್ತದೆ.
***
ನಮ್ಮಲ್ಲಿ ತಂತ್ರಜ್ಞಾನ, ಅವಿಷ್ಕಾರ ಬೇರೆ ಎಲ್ಲ ದೇಶಗಳಿಗೆ ಸೆಡ್ಡು ಹೊಡೆಯುವಂತೆ ಬೆಳೆಯುತ್ತಿದೆ ಎಂದು ಎದೆತಟ್ಟಿ ಹೇಳಿಕೊಳ್ಳಲು ಸಂತೋಷವಾಗುತ್ತದೆ. ವಿಶ್ವದ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತ ಆರನೇ ಸಾಲಿನಲ್ಲಿದೆ ಎಂದು ಓದಿದಾಗ ಖುಷಿಯಾಗುತ್ತದೆ. ನಮ್ಮಲ್ಲಿ ಅನೇಕ ಉದ್ಯಮಗಳು ಬೆಳೆಯುತ್ತಿವೆ, ನಾವು ಅತಿ ಹೆಚ್ಚು ಇಂಜಿನಿಯರುಗಳನ್ನು ಹೊರತರುತ್ತೇವೆ ಎಂದು ಜಂಭ ಕೊಚ್ಚಿಕೊಳ್ಳುತ್ತೇವೆ. ಆದರೆ, ಈವರೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿರುವುದನ್ನು ನೋಡಿಯೂ ನೋಡದೇ ಇರುವಂತಿರುವುದು ಏಕೆ? ಎಂದು ಯೋಚಿಸಿದರೆ ಉತ್ತರ ದೊರೆಯುವುದಿಲ್ಲ.
ಅಮೇರಿಕದಲ್ಲಿ ವೇಷ್ಟ್ ಮ್ಯಾನೇಜ್‌ಮೆಂಟ್ ಕಂಪನಿಯಂಥವುಗಳು ಪಬ್ಲಿಕ್ ಟ್ರೇಡಿಂಗ್ ಕಂಪನಿಗಳಾಗಿ ಬೆಳೆದು ತಮ್ಮ ಗ್ರಾಹಕರಿಗೆ, ಬಳಕೆದಾರರಿಗೆ ಸೇವೆಯನ್ನು ಸಲ್ಲಿಸುತ್ತಿಲ್ಲವೇ? ಹಾಗೆಯೇ ನಮ್ಮಲ್ಲೂ ಸಹ ಈ ಸಮಸ್ಯೆಗೆ ಇದುವರೆಗೆ ಯಾರೂ ಉತ್ತರವನ್ನೇ ಕಂಡು ಹಿಡಿಯದಂಥ ಅಸಹಾಯಕ ಪರಿಸ್ಥಿತಿ ಬಂದಿದೆಯೇ?
ಮುಂದೆ ಇದೇ ಬೆಂಗಳೂರಿನ ಜನಸಂಖ್ಯೆ ದ್ವಿಗುಣವಾದಾಗ, ಈ ಕಸದ ಮಹಾತ್ಮೆ ಏನಾಗಿರಬೇಡ? ಮನೆಯ ದಿನನಿತ್ಯದ ಕಸದ ಜೊತೆಗೆ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಉತ್ಪನ್ನಗಳೂ, ಲಿಥಿಯಂ ಬ್ಯಾಟರಿಗಳೂ ಸೇರಿಕೊಂಡು, ನೀರು-ಮಣ್ಣು ಎರಡೂ ಪಾದರಸ, ಆರ್ಸೆನಿಕ್, ಮೊದಲಾದ ವಿಷ ಪದಾರ್ಥಗಳಿಂದ ಕೂಡಿಕೊಂಡರೆ ಯಾರಿಗೆ ಹಾನಿ ಎಂದು ಎಲ್ಲರೂ ಯೋಚಿಸಬೇಕಾದ ವಿಚಾರ. ಎಲ್ಲಾ ಕಡೆ ಕಸಮಯವಾಗಿದೆ. ಇನ್ನೂ ನಾವು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗದಿದ್ದರೆ, ನಿಸರ್ಗ ಎಂದಿನಂತೆ ತನ್ನನ್ನು ತಾನು ನೋಡಿಕೊಳ್ಳುತ್ತದೆ, ಅದಕ್ಕೆಲ್ಲ ಬೆಲೆ ತೆರಬೇಕಾದವರು ನಾವೇ!
Monday, April 20, 2020
ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್! (ಭಾಗ-೨)
ಸುಮಾರು 14 ವರ್ಷಗಳ "ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್!" ಎಂಬ ಲೇಖನ ಬರೆದಿದ್ದೆ. ಅದರಲ್ಲಿ ನನ್ನೊಬ್ಬ ಸ್ನೇಹಿತನಿಗೆ ಕೊಟ್ಟ ನಾಲ್ಕು ಲಕ್ಷ ರೂಪಾಯಿಗಳು ದೊಡ್ಡವಾಗಿ ಕಂಡಿದ್ದವು. ಆದರೆ, ಹದಿನಾಲ್ಕು ವರ್ಷಗಳ ನಂತರ ಅವರವರ ಪ್ರಬುದ್ಧತೆಯ ಬೆಳವಣಿಗೆಯಂತೆ, ಅನೇಕ ಲಕ್ಷಗಳು ಬಂದಿರಬಹುದು, ಹೋಗಿರಬಹುದು. ಮಾನವೀಯತೆಯೊಂದೇ ಕೊನೆಗೆ ಉಳಿಯುವುದು ಗ್ಯಾರಂಟಿ. ಆದರೆ, ಪ್ರಸ್ತುತ ಹಣಕಾಸಿನ ಪರಿಸ್ಥಿತಿ ಇದ್ದ ಹಾಗೆ ಅವರವರ ಪ್ರತಿಕ್ರಿಯೆ ಇರುತ್ತದೆ. ಒಮ್ಮೆ ನಾಲ್ಕು ಲಕ್ಷ ರೂಪಾಯಿಗಳೇ ದೊಡ್ಡವಾಗಿ ಕಂಡರೆ, ಮತ್ತೊಮ್ಮೆ ಅದು ನಗಣ್ಯವಾದೀತು.
ಈ ಲೇಖನ ಬರೆಯುವ ಹೊತ್ತಿಗೆ ಆಗಾಗ್ಗೆ ಜಗದೀಶನಂತವರು ಏಕೆ ಹೀಗೆ ಮಾಡಿದರು, ಏಕೆ ಹೀಗಾದರೂ ಎಂದೆಲ್ಲ ಯೋಚಿಸಬೇಕಾಗುತ್ತದೆ. ಕೊನೆಗೆ ವಿಧಿಯ ಲೀಲೆ ಹೇಗಿರುತ್ತದೆ ಎಂಬುದನ್ನು ಊಹಿಸಿದರೆ, ನಿಜಕ್ಕೂ ಜೀವನದ ಬಗ್ಗೆ ಬೇಸರ ಬಂದೀತು.
***
ಸೋಶಿಯಲಿಸ್ಟ್ ದೇಶಗಳಲ್ಲಿ ಆಗದ ಒಂದು ಮಹಾನ್ ಸಾಧನೆಯನ್ನು ಕ್ಯಾಪಿಟಲಿಸ್ಟ್ ವ್ಯವಸ್ಥೆಯಲ್ಲಿ ಮಾಡಬಹುದು - ಅದು ಏನೆಂದರೆ, ನಿಮ್ಮ ಹೂಡಿಕೆ ಯನ್ನು ದ್ವಿಗುಣವೇಕೆ, ಅನೇಕ ಗುಣಗಳ ಮಟ್ಟಿಗೆ ರಾತ್ರೋ ರಾತ್ರಿ ಹೆಚ್ಚಿಸಿಕೊಳ್ಳಬಹುದು, ಹಾಗೆಯೇ ಕಡಿಮೆ ಮಾಡಿಕೊಳ್ಳಬಹುದು! ಸೂಕ್ಷ್ಮವಾಗಿ ಹೇಳುವುದಾದರೆ, ಇದು ಒಂದು ಹಣವನ್ನು ಪ್ರಿಂಟ್ ಮಾಡುವ ವ್ಯವಸ್ಥೆಯೇ ಸರಿ. ನಿಮ್ಮ ಹೂಡಿಕೆಗಳು, ನಿಮ್ಮ ಕಂಪನಿಗಳು, ನಿಮ್ಮ ನೆಟ್ ವರ್ತ್ ಮೊದಲಾದವು - ನಿಮ್ಮ ಹಣೇಬರಹ ನೆಟ್ಟಗಿದ್ದರೆ, ರಾತ್ರೋರಾತ್ರಿ ಬೆಳೆಯಬಲ್ಲವು ಹಾಗೂ ಕುಗ್ಗ ಬಲ್ಲವು.
ಇಂದು, ಅಮೇಜ಼ಾನ್ ಕಂಪನಿಯ ಒಂದು ಸ್ಟಾಕ್ ಇವತ್ತಿಗೆ ಎರಡು ಸಾವಿರ ಡಾಲರ್‌ಗೂ ಅಧಿಕವಾಗಿದ್ದು, ಅದು ಒಂದು ಕಾಲದಲ್ಲಿ ಒಂದು ಡಾಲರ್‌ನ ಆಸುಪಾಸು ಇತ್ತು. ಇದು ಅನೇಕ ವರ್ಷಗಳಲ್ಲಿ ಆದ ಬೆಳವಣಿಗೆ. ಅದೇ ರೀತಿ, ನನ್ನ ಕಣ್ಣ ಮುಂದೆಯೇ ಅನೇಕ ಕಂಪನಿಗಳು, ಒಂದೇ ದಿನದಲ್ಲಿ ನೂರು ಅಥವಾ ಸಾವಿರ ಪರ್ಸೆಂಟ್ ಮೇಲೆ ಹೋಗಿದ್ದನ್ನು ಮತ್ತೆ ಕೆಳಗೆ ಬಿದ್ದಿದ್ದನ್ನ ನಾನು ನೋಡಿದ್ದೇನೆ. 2008-2009ರ ಮಾರ್ಕೆಟ್ ಕ್ರಾಷ್ ಆದಾಗ ಬಿಲಿಯನ್ ಡಾಲರ್‌ಗಟ್ಟಲೆ ಹಣವನ್ನು ಅನೇಕ ಹೆಡ್ಜ್‌ಫಂಡ್ ಮ್ಯಾನೇಜರುಗಳು ಕಳೆದುಕೊಂಡಿದ್ದಾರೆ, ಅಂತೆಯೇ ಮಾರ್ಕೆಟ್ ಮೇಲೆ ಹೋದಾಗ ದುಡಿದಿದ್ದಾರೆ ಕೂಡ.
ಈ ಚಿಕ್ಕ ಮಾರ್ಕೆಟ್ ಕಾಮೆಂಟರಿಯ ಉದ್ದೇಶವೆಂದರೆ - ಯಾರು ಬೇಕಾದರೂ ಹಣವನ್ನು ಗಳಿಸಬಹುದು, ಅಥವಾ ಕಳೆದುಕೊಳ್ಳಬಹುದು... ಅಂತಹುದರಲ್ಲಿ, ಒಂದು ಕಾಲದಲ್ಲಿ ಒಂದು ಡಾಲರ್ ಅನ್ನೋದು 36 ರೂಪಾಯಿಗಳು ಇದ್ದುದು, ಇವತ್ತಿಗೆ ಒಂದು ಡಾಲರ್ ಎನ್ನುವುದು 75 ರೂಪಾಯಿಗಳಾದಾಗ, ನಮ್ಮ ಹಳೆಯ ಒಂದು ಲಕ್ಷದ ಮೊತ್ತ ಇವತ್ತಿಗೆ ಬಹಳ ಕಡಿಮೆಯಾಗಿ ಕಾಣುತ್ತದೆ. ಅದನ್ನ ಇನ್‌ಫ್ಲೇಶನ್‌ಗೆ ಅಡ್ಜಸ್ಟ್ ಮಾಡಿ ನೋಡಿದರೂ ಸಹ, ಈ ಕರೆನ್ಸಿ ಕನ್ವರ್ಷನ್‌ನಲ್ಲಿ ಅಂದಿನ ಒಂದು ಲಕ್ಷ ರುಪಾಯಿ, ಇಂದಿಗೆ ಏನೇನೂ ಸಾಕಾಗುವುದಿಲ್ಲ.
(ಅದು ಹೇಗೆ ಭಾರತದಲ್ಲಿ ಜನ ಜೀವನವನ್ನು ಸಾಗಿಸುತ್ತಾರೋ ಇಷ್ಟೊಂದು ಇನ್‌ಪ್ಲೇಶನ್ ಇಟ್ಟುಕೊಂಡು! ಅದು ಇನ್ನೊಂದು ದಿನದ ಬರಹವಾದೀತು!)
***
ಅಂದು ದುಡ್ಡು ತೆಗೆದುಕೊಂಡ ಗೆಳೆಯರ ಸುಳಿವಿಲ್ಲ. ಆದರೆ, ಇಂದಿಗೆ ಒಂದಂತೂ ಜ್ಞಾನೋದಯವಾಗಿದೆ... ಯಾರಿಗಾದರೂ ಹಣಕೊಟ್ಟರೆ ಅದು ಹಿಂದೆ ಬರುತ್ತದೆ ಎಂಬ ನಂಬಿಕೆಯನ್ನೇ ಬಿಟ್ಟು ಬಿಡುವಂತಾಗಿದೆ. ಅದರ ಅರ್ಥ, ನಮ್ಮ ಕೈಯಲ್ಲಿ ಎಷ್ಟನ್ನು ಕಳೆದುಕೊಂಡರೆ ಅದು ದೊಡ್ಡದೆನಿಸುವುದಿಲ್ಲವೋ ಅಷ್ಟನ್ನು ಮಾತ್ರ ಕೊಡಲು ಸಮರ್ಥರಾಗಿದ್ದರೆ ಸಾಕು ಎನಿಸುತ್ತದೆ. ಈ ಒಂದು ಮನೋಧರ್ಮದಿಂದ, ನಮಗೆ ಯಾವ ನಷ್ಟವೂ ಇಲ್ಲ (ಕೊಟ್ಟ ದುಡ್ಡೊಂದನ್ನು ಹೊರತು ಪಡಿಸಿ), ಯಾವ ಮನೋವ್ಯಾಧಿಯೂ ಅಂಟೋದಿಲ್ಲ. ನಮ್ಮ ಬಂಧು-ಮಿತ್ರರ ಜೊತೆಗೆ ನಿಷ್ಟೂರವಂತೂ ಆಗೋ ಮಾತೇ ಇಲ್ಲ... ಎಲ್ಲವನ್ನೂ ದಾನವಾಗಿ ಕಂಡು ಕೊಂಡರೆ.
ಈ ಹೊತ್ತಿನಲ್ಲಿ, ಇನ್ನೂ ಒಂದು ತತ್ವ ಹೊಮ್ಮುತ್ತದೆ - ಎಲ್ಲವನ್ನು ಕರ್ಮದ ಫಲವನ್ನಾಗಿ ನೋಡುವುದು... ನಾವು ಯಾವ ಜನ್ಮದಲ್ಲಿ ಅವರಿಂದ ಉದಾರಕ್ಕೆ ಪಡೆದಿದ್ದೆವೋ ಇಂದು ಅದನ್ನು ಹಿಂತಿರುಗಿಸಿದೆವು ಎಂದು ನಿರುಮ್ಮಳವಾಗಿರುವುದು!
ಹಣವನ್ನು ಕೊಡುವ-ತೆಗೆದುಕೊಳ್ಳುವ ವಿಚಾರದಲ್ಲಿ ನನ್ನ ಹಾಗೆ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆ ಎನ್ನುವ ಮಹಾಸಾಗರದಲ್ಲಿದ್ದುಕೊಂಡು, ಅದರಲ್ಲಿ ಸೋಶಿಯಲಿಸ್ಟ್ ಮೌಲ್ಯದ ಹಾಯಿ ದೋಣಿಯನ್ನು ಚಲಾಯಿಸುವ ಈ ಸಾಧನೆ ನನ್ನಂಥವರನ್ನು ಬಹುದೂರ ಕೊಂಡೊಯ್ಯಲಾರದು, ಎನ್ನುವುದು ಈ ಹೊತ್ತಿನ ನಂಬಿಕೆ!
Posted by Satish at 10:31 PM 0 comments
Labels: ಕ್ಯಾಪಿಟಲಿಸಮ್, ಟೈಮ್ ಪಾಸ್, ಸಂವೇದನೆ, ಸ್ಥಿತಿಗತಿ, ಸ್ನೇಹ, ಹಣಕಾಸು, ಹರಟೆ
Tuesday, April 07, 2020
ಕೊರೋನಾ ವೈರಸ್ - ಚೈನಾದ ಅತಂತ್ರವೋ, ಕುತಂತ್ರವೋ?
ಈ ಶತಮಾನದ ದೊಡ್ಡ ದುರಂತ, ಮಹಾವ್ಯಾಧಿ, ಸೋಂಕು, ಸಾಂಕ್ರಾಮಿಕ ರೋಗ, ಶಾಪ - ಇನ್ನೂ ಮೊದಲಾದ ಹೆಸರಿನಿಂದ ಕರೆಸಿಕೊಂಡು ತನ್ನ ಪರಿಣಾಮವನ್ನು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದುಕೊಂಡು, ಇನ್ನು ಇನ್ನೂರೈವತ್ತು ವರ್ಷವಾದರೂ, 2020ರ ಈ ಅನುಭವವನ್ನು ಜನರು ತಮ್ಮ ಹಾಡು-ಹಸೆಗಳಲ್ಲಿ ಮೆಲುಕುಹಾಕುವಂತೆ ಮಾಡುವ, ಚೈನಾದಿಂದ ಆರಂಭಿಸಿದ ಈ ಪ್ರಭಾವಿ ವೈರಸ್ಸಿನ ಅಭಿಯಾನವನ್ನು ಮಾನವ ನಿರ್ಮಿತ (ಕುತಂತ್ರ) ಎನ್ನೋಣವೋ ಅಥವಾ ಮಾನವನಿಗೆ ಮೀರಿದ (ಅತಂತ್ರ)ವೆಂದು ಕರೆಯೋಣವೋ? ಈಗ ನಮಗೆ ಲಭ್ಯವಿರುವ ವಿಚಾರಗಳ ವಿನಿಮಯವೇ ಈ ಬರಹ. ಕುತಂತ್ರವೋ-ಅತಂತ್ರವೋ ಎನ್ನುವ ತೀರ್ಮಾನ ನಿಮ್ಮದು!
***
ಅತಂತ್ರ: ಚೈನಾದವರು ಬಹುಪ್ರಾಣಿ ಭಕ್ಷಕರು - ಒಂದು ರೀತಿಯಲ್ಲಿ ಮಾಂಸ ಪ್ರಿಯರು, ಅದರಲ್ಲೂ ಅನೇಕ ಕಾಡು ಪ್ರಾಣಿಗಳನ್ನು ಫಾರ್ಮ್‌ಗಳಲ್ಲಿ ವ್ಯವಸ್ಥಿತವಾಗಿ ಅವುಗಳನ್ನು ಬೆಳೆಸಿ ತಮ್ಮ exotic cuisine ನಲ್ಲಿ ಬಳಸುವವರು. ಚಿಕ್ಕ ಇರುವೆಗಳಿಂದ ಹಿಡಿದು, ಹಾರುವ ಬಾವುಲಿಯವರೆಗೆ, ಮೀನುಗಳಿಂದ ಹಿಡಿದು ಸರೀಸೃಪಗಳವರೆಗೆ (ಇವರು ಮನುಷ್ಯರನ್ನು ಮಾತ್ರ ತಿಂದ ನಿದರ್ಶನಗಳು ಸಿಗವು), ಅಂದರೆ ಉಳಿದೆಲ್ಲ ಜೀವಿಗಳು ಮಿಲಿಯನ್ನುಗಟ್ಟಲೆ ಚೈನಾ ದೇಶದ ಜನರ ಉದರವನ್ನು ಪೋಷಿಸಿರುವುದಕ್ಕೆ ಬಹಳ ನಿದರ್ಶನಗಳು ಸಿಕ್ಕಾವು.
ನಾವು ಅಮೇರಿಕದಲ್ಲಿ ಇಂಡಿಯನ್ ಸ್ಟೋರು, ರೆಸ್ಟೋರಂಟುಗಳಿಗೆ ಹೋದಾಗ ಒಂದು ರೀತಿಯ (ಕಮಟು) ವಾಸನೆ ನಮಗೆ ಎದುರಾಗುತ್ತದೆ. ನಾವು ಭಾರತೀಯರಿಗೆ ಅದು ನಮಗೆ ಗೊತ್ತಾಗದಷ್ಟು ಹೊಂದಾಣಿಕೆಯಾಗಿರುತ್ತದೆ. (ನಮ್ಮ ಪಕೋಡಾ ಅಥವಾ ದೋಸೆ ವಾಸನೆ ನಮಗೆ ಪ್ರಿಯವಾಗಿರಬಹುದು, ಆದರೆ, ಅದು ಎಲ್ಲರಿಗೂ ಇಷ್ಟವಾಗಬೇಕು ಎಂದೇನೂ ಇಲ್ಲ). ಅದೇ ರೀತಿ ನಾವು ಕೊರಿಯನ್, ವಿಯಟ್‍ನಾಮೀಸ್, ಚೈನೀಸ್ ಅಂಗಡಿಗಳಿಗೆ ಹೋದಾಗ, ಇನ್ನೊಮ್ಮೆ ಇಲ್ಲಿ ಬರಬಾರದು ಎನ್ನುವಷ್ಟರ ಮಟ್ಟಿಗೆ ಅಲ್ಲಿ ಗಬ್ಬುನಾತ ಹೊಡೆಯುತ್ತಿರುತ್ತದೆ. ಇವರುಗಳು ಜೀವವೈವಿಧ್ಯವನ್ನು ನೋಡುವ ರೀತಿ ನಮಗಿಂತಲೂ ಭಿನ್ನ. ಕೊಳೆಯಾದ ಗಾಜಿನ ಅಕ್ವೇರಿಯಂನಲ್ಲಿ ತುಂಬಿಕೊಂಡು ದಯನೀಯ ಸ್ಥಿತಿಯಲ್ಲಿರುವ ಮೀನುಗಳು, ಏಡಿಗಳು, ಮೊದಲಾದ ಪ್ರಾಣಿಗಳನ್ನು ಅಲ್ಲಿ ನೋಡಿ ಖೇದವೆನಿಸುತ್ತದೆ. ಅದು ಅವರಿಗೆ ಸಹನೀಯವಾದದ್ದು, ಅವರ ಧರ್ಮದಲ್ಲಿ (ಜೀವನಕ್ರಮ) ಅದು ಯಾರಿಗೂ ದೊಡ್ಡದೆನಿಸುವುದಿಲ್ಲ. ಇಂತಹ ಸಂದರ್ಭದಲ್ಲಿ, ಚೈನಾದ ವುಹಾನ್‌ನ ಒಂದು ಮಾರುಕಟ್ಟೆಯಲ್ಲಿ ಒಂದರ ಮೇಲೂಂದು ಹೇರಿಸಿಟ್ಟ ಕೇಜುಗಳಲ್ಲಿ ಒಂದು ಪ್ರಾಣಿಯ ಎಂಜಲು-ಗಲೀಜು ಮತ್ತೊಂದು ಪ್ರಾಣಿಯ ಜೊತೆ ಸಂಘರ್ಷ ಉಂಟಾದಾಗ ಹುಟ್ಟಿದ್ದು ಈ ವಿಭಿನ್ನ ವೈರಸ್ ಎಂದು ಕೆಲವು ಕಡೆ ಹೇಳಲಾಗಿದೆ. ಅದೇ ರೀತಿ ಬಾವುಲಿಗಳನ್ನು (bats) ಕತ್ತರಿಸುವಾಗ ಅದರ ರಕ್ತದಲ್ಲಿ ಇದ್ದ ವೈರಸ್ಸು ಒಬ್ಬರಿಂದ ಮತ್ತೊಬ್ಬರಿಗೆ ತಗುಲು ಬೆಳೆಯಿತು ಎಂದೂ ಹೇಳಲಾಗುತ್ತದೆ.
ಒಮ್ಮೆ ಹೀಗೆ ಜನರಿಂದ ಜನರಿಗೆ ಬೆಳೆದ ವೈರಸ್ಸು ಡಿಸೆಂಬರ್‌ನಲ್ಲಿ ಸುದ್ದಿ ಮಾಡಿದರೂ ಚೈನಾ ಅದನ್ನು ತಕ್ಷಣ ದೊಡ್ಡದು ಮಾಡಲಿಲ್ಲ, ಅದು ಬೆಳೆದು ಪ್ರಕೋಪಕ್ಕೆ ತಿರುಗಿದ ನಂತರ ಎಲ್ಲ ಕಡೆಗೆ ಸುದ್ದಿಯಾಯಿತು. ವುಹಾನ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಯಿತು. ಜನರನ್ನು ಮನೆಗಳಲ್ಲಿ ಅಮಾನವೀಯ ರೀತಿಯಲ್ಲಿ ಕೂಡಿ ಹಾಕಲಾಯಿತು. ಇದು ಅವರ ಅತಂತ್ರ ಸ್ಥಿತಿಗೆ ಹಿಡಿದ ಕನ್ನಡಿ. ಕೊನೆಗೆ ಕಡಿಮೆ ಸಾವುಗಳನ್ನು ದಾಖಲಿಸಿ (ಸೋಂಕು ತಗುಲಿದವರ ಮತ್ತು ಸತ್ತವರ percentage ಪ್ರಕಾರ ನೋಡಿದರೆ), ಈಗ ಏನೂ ಆಗೇ ಇಲ್ಲವೆನ್ನುವಂತೆ ಮೊದಲೇ expression ಇರದ ಮುಖಗಳು ಈಗಂತೂ ಮುಖ ಗಂಟು ಹಾಕಿಕೊಂಡ ಹಾಗೆ ಎಲ್ಲ ಕಡೆ ಕಂಡು ಬರುತ್ತದೆ.
ಕಳೆದ ಹತ್ತು ವರ್ಷಗಳಲ್ಲಿ ಸಾರ್ಸ್, H1-N1, ಹಕ್ಕಿ ಜ್ವರ ಮೊದಲಾದವುಗಳಿಂದ ಪೂರ್ವೋತ್ತರ ದೇಶಗಳು ಬಳಲಿದ್ದವು, ಅದರಿಂದಾಗಿ ಈ ಕೋವಿಡ್-19 ಅನ್ನು ಎದುರಿಸಲು ಅವೆಲ್ಲ ದೇಶಗಳು ಪರೋಕ್ಷವಾಗಿ ತಯಾರಾಗಿದ್ದವು. ಆದರೆ, ಕೆಲವು ಯೂರೋಪಿಯನ್ ದೇಶಗಳು ಮತ್ತು ಅಮೇರಿಕದಲ್ಲಿ ಈ ರೀತಿ ಹಿಂದೆಂದೂ ಆಗಿರದ ಕಾರಣದಿಂದ, ಮೊಟ್ಟ ಮೊದಲನೇ ಬಾರಿಗೆ ಇಲ್ಲಿಯ ಜನ (ಈ ಪ್ರಮಾಣದಲ್ಲಿ) ಸಂಕಷ್ಟವನ್ನು ಅನುಭವಿಸಬೇಕಾಗಿ ಬಂತು ಎನ್ನುವುದು ಅನೇಕರ ಅಂಬೋಣ.
***
ಕುತಂತ್ರ: ಚೈನಾದವರು ಮಹಾ ಬುದ್ದಿವಂತರು. ವುಹಾನ್ ಹತ್ತಿರದ ತಮ್ಮ ಮಿಲಿಟರಿ ಲ್ಯಾಬೋರೇಟರಿ ಒಂದರಲ್ಲಿ ಈ ಹೊಸ ವೈರಸ್ಸನ್ನು ಸೃಷ್ಟಿಸಿ ಜಗತ್ತಿಗೇ ಬಿಡುಗಡೆ ಮಾಡಿ ಜಗತ್ತನ್ನು ಆಳುವ ಯೋಚನೆ ಹೊಂದಿದ್ದರು. ಅಥವಾ ಲ್ಯಾಬ್‍ನಲ್ಲಿದ್ದ ವೈರಸ್ಸು ಯಾರದ್ದೋ ತಪ್ಪಿನಿಂದ ಹೊರಗೆ ಬಂದಿತೆಂದು ಅನೇಕ ಕಡೆ ಓದಲು ಸಿಗುತ್ತದೆ. ಹಾಗಾಗಿ, ಹುಬೈ ಪ್ರಾಂತ್ಯದಲ್ಲಿ ಮೊದಲು ಇದರ ಪರಿಚಯವಾಯಿತು. ಆದರೆ, ಇದರ ಪರಿಣಾಮ ಉಳಿದ ರಾಜ್ಯಗಳ ಮೇಲೆ ಅಷ್ಟೊಂದು ಆಗಲಿಲ್ಲ.
ನೀವೇ ಯೋಚಿಸಿ: ವುಹಾನ್ ನಿಂದ ಇಂಟರ್‌ನ್ಯಾಷನಲ್ ಪ್ರಯಾಣಿಕರ ಮುಖೇನ ಅನೇಕ ದೇಶಗಳಿಗೆ ಈ ಕೊರೋನಾ ವೈರಸ್ ಹರಡಿರುವಾಗ, ಆಂತರಿಕ ಚೈನಾದೊಳಗೇ ಇದು ಬೇರೆ ಕಡೆ ಏಕೆ ಹಬ್ಬಲಿಲ್ಲ? ಚೈನಾದ ಅಂಕಿ-ಅಂಶಗಳನ್ನು ನಂಬಬೇಕೋ ಬಿಡಬೇಕೋ ಗೊತ್ತಿಲ್ಲ, ಆದರೂ ಅವರು ಹೇಳುವ ಹಾಗೆ ಬರೀ ಹುಬೈ ಪ್ರಾಂತ್ಯದಲ್ಲಿ ಮಾತ್ರ ಸಾವುಗಳಾಗಿವೆಯೇ? ಒಂದೂವರೆ ಬಿಲಿಯನ್‌ನಷ್ಟು ಜನರಿರುವ ಚೈನಾದಲ್ಲಿ (ಈ ಲೇಖನ ಬರೆಯುವ ಹೊತ್ತಿಗೆ) ಕೇವಲ 81,802 ಜನರಿಗೆ ಸೋಂಕು ತಗಲಿದ್ದು, ಅವರಲ್ಲಿ ಕೇವಲ 3,333 ಜನರು ಮಾತ್ರ ಸಾವಿಗೆ ಈಡಾಗಿದ್ದಾರೆ ಎಂದರೆ ಹೇಗೆ ನಂಬುವುದು. ಸೋಂಕು ತಗುಲಿದವರ ಸಂಖ್ಯೆಯಲ್ಲಿ (330 ಮಿಲಿಯನ್ ಜನರಿರುವ) ಅಮೇರಿಕ 396,981 ಒಟ್ಟು ಕೇಸುಗಳನ್ನು ದಾಖಲಿಸಿ ಅವರಲ್ಲಿ 12,758 ಜನರು ಮರಣ ಹೊಂದಿರುವುದನ್ನು ಪ್ರಕಟಿಸಿರುವುದನ್ನು ನೀವೇ ನೋಡಬಹುದು. ಅಲ್ಲದೇ ಒಂದೂವರೆ ಬಿಲಿಯನ್ ಜನರಿರುವ ಚೈನಾ ಇವತ್ತಿಗೆ ಒಟ್ಟು ಕೇಸುಗಳಲ್ಲಿ ಉಳಿದ ರಾಷ್ಟ್ರಗಳಿಗೆ ಹೋಲಿಸಿದಾಗ ಐದನೇ ಸ್ಥಾನಕ್ಕೆ ಇಳಿದಿರುವುದನ್ನೂ ನೋಡಬಹುದು.
Image 1: COVID-19 World view (April 07, 2020 at 9:23 PM ET)
***
ಇದು ಚೈನಾದವರ ಅತಂತ್ರವೋ, ಕುತಂತ್ರವೋ... ಅದನ್ನು ನಿಮ್ಮ ತೀರ್ಮಾನ, ಅಭಿಪ್ರಾಯಗಳಿಗೇ ಬಿಡೋಣ. ಆದರೆ, ಇಷ್ಟಂತೂ ಖಂಡಿತ: ಇದರಿಂದಾಗಿ/ಇವರಿಂದಾಗಿ ವಿಶ್ವದಾದ್ಯಂತ ಅನೇಕ ವ್ಯಾಪಾರ ವಹಿವಾಟುಗಳು ನೆಲಕಚ್ಚಿದವು. ಅನೇಕರ ರಿಟೈರ್‌ಮೆಂಟ್ ಹಣ ಕೆಲವೇ ವಾರಗಳಲ್ಲಿ ಮಾಯವಾಯಿತು. ಎಷ್ಟೋ ಜನರು ಹಸಿವಿನಿಂದ ಬಳಲುವಂತಾಯ್ತು. ನಾವು ಇನ್ನಾರು ವಾರಗಳಲ್ಲಿ ಹೊರಗೆ ಹೊರಟರೂ ನಮ್ಮ ಅರ್ಥ ವ್ಯವಸ್ಥೆ ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಕೆಲವೇ ವರ್ಷಗಳೇ ಬೇಕಾಗುತ್ತದೆ.
ಇದು ಮಾನವನ ದೌರ್ಜ್ಯನ್ಯಕ್ಕೆ ನಿಸರ್ಗ ಕೊಟ್ಟ ಪೆಟ್ಟು ಎಂದು ಒಂದಿಷ್ಟು ಜನ ನಂಬಿಕೊಂಡಿದ್ದಾರೆ, ಇನ್ನು ಕೆಲವರು ಇದು ಮಾನವ ನಿರ್ಮಿತ ಹೊಗೆ ಬರದ ನ್ಯೂಕ್ಲಿಯರ್ ಬಾಂಬು ಎಂದು ಚೈನಾದವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ!
Saturday, January 24, 2009
ಆಹಾ, ಜನವರಿ!
ಓಹ್, ಈ ಜನವರಿಯಲ್ಲಿ ಅದೇನೇನೆಲ್ಲಾ ಆಗ್ತಾ ಇದೆ! ಓಬಾಮಾ ಪಬಾಮಾ ಪ್ರೆಸಿಡೆಂಟ್ ಆಗಿರೋ ಬಗ್ಗೆ ಬೇರೆ ಎಲ್ರೂ ಬರೀತಾ ಇರೋವಾಗ ನಾನೂ ಅದನ್ನೇ ಬರೆದ್ರೆ ಏನ್ ಪ್ರಯೋಜನ? ಈ ಜನವರಿಯ ಇಪ್ಪತ್ತನಾಲ್ಕು ದಿನಗಳಲ್ಲಿ ಆಗ್ಲೇ ಹನ್ನೊಂದು ಹನ್ನೆರಡು ಪರ್ಸೆಂಟ್ ಡೌನ್ ಆಗಿರೋ ನನ್ನ ಪೋರ್ಟ್‌ಫೋಲಿಯೋ ಬಗ್ಗೆ ಚಿಂತಿಸ್ಲೋ ಅಥವಾ ಇತ್ತೀಚೆಗೆ ನನ್ನ ಜೊತೆಯಾದ ಹೊಸ ಬಾಸ್ ಹಾಗೂ ಹೊಸ ಕೆಲಸಗಳ ಬಗ್ಗೆ ಕೊರೆದರೆ ಹೇಗೆ?
ಈ ಇಂಗ್ಲೀಷ್ ಕ್ಯಾಲೆಂಡರಿನ ಜನವರಿ ಅದೆಷ್ಟು ಹೊಸದನ್ನು ತಂದಿದೆ ಈ ವರ್ಷ - ಅಮೇರಿಕದ ಹೊಸ ಪ್ರೆಸಿಡೆಂಟ್ ಓಬಾಮ ಸಿಂಹಾಸನವನ್ನೇರಿದ್ದು, ಆ ಸಮಾರಂಭದಲ್ಲಿ ಸುಮಾರು ಇಪ್ಪತ್ತು ಲಕ್ಷ ಜನ ಸೇರಿದ್ರಂತಲ್ಲಪ್ಪ! ಅಬ್ಬಾ, ಅದೆಂತಾ ಪವರ್ ಇದ್ದಿರಬಹುದು?
’ಲೋ, ಸುಮ್ನಿರಯ್ಯಾ. ನಮ್ಮ್ ದೇವೇಗೌಡ್ರು ಮುಖ್ಯಮಂತ್ರಿ ಆದ ದಿನ ಇದಕ್ಕಿಂತ ಹೆಚ್ಚು ಜನಗಳನ್ನ ಸೇರಿಸಿರ್‌ಲಿಲ್ವಾ? ದಾವಣಗೆರೇಲಿ ಬಂಗಾರಪ್ಪ ಒಂದೇ ಸಮಾವೇಶಕ್ಕೆ ಹತ್ತು ಲಕ್ಷ ಜನ ಸೇರ್ಸಿದ್ ಮುಂದೆ ಅಮೇರಿಕದ ಮಿಲಿಯನ್ನು ಯಾವ ಲೆಕ್ಕ?’ ಎಂದು ಎಲ್ಲಿಂದಲೋ ಯಾವ್ದೋ ಧ್ವನಿ ಕೇಳಿದ ಹಾಗಾಯ್ತು, ಒಡನೇ ಸುಬ್ಬನ ಕಾಲ್ ಸ್ಪೀಕರ್ ಫೋನಿನಲ್ಲಿ ಬಂದ ಅನುಭವ, ಆದ್ರೆ ಇವೆಲ್ಲ ನನ್ನ ಭ್ರಮೆ ಅಂದ್‌ಕೊಂಡು ಮುಂದೆ ಯೋಚಿಸ್ತಾ ಹೋದೆ. ಆ ಪಾಟಿ ಜನ ವೋಟ್ ಹಾಕಿದ್ರಂತಲ್ಲ ಈ ಸರ್ತಿ, ಪಾಪ ಕರಿಯ ಮೇಲ್ ಬಂದವನೇ, ಮೊದಲ್ನೇ ಸರ್ತಿ ದಾಖಲೆ ನಿರ್ಮಿಸ್ಲಿ ಅಂತ ಇದ್ದಿರಬಹುದೋ ಏನೋ.
’ಯಾರ್ ಪ್ರೆಸಿಡೆಂಟ್ ಆದ್ರೆ ನಮಗೇನ್ ಸ್ವಾಮೀ? ದುಡಿಯೋ ಹೆಸರಿಗೆ ಬಂದ ಬಡ್ಡೀ ಹೈಕ್ಳು ನಾವು, ಅದೇ ನಮ್ ಕಾಯ್ಕ ನೋಡಿ!’ ಅಂತ ಮತ್ತೊಂದು ಧ್ವನಿ ಕೇಳಿಸ್ತು, ಈ ಸರ್ತಿ ನಿಜವಾಗ್ಲೂ ಯಾರೋ ನನ್ನ ತಲೆ ಒಳಗೆ ಸೇರಿಕೊಂಡು ನುಡಿದ ಅನುಭವ.
ಜನಗಳು ಅಂದ್ಕೊಂಡವರೆ, ಪ್ರೆಸಿಡೆಂಟ್ ಬದಲಾದ ಕೂಡ್ಲೆ ಎಲ್ಲವೂ ದಿಢೀರನೆ ಬದಲಾಗುತ್ತೆ ಅಂತ. ಡಿಸೆಂಬರ್ ಮುವತ್ತೊಂದರಿಂದ ಜನವರಿ ಒಂದರೊಳಗೆ ಏನೂ ಬದಲಾಗೋದಿಲ್ಲ, ಕ್ಯಾಲೆಂಡರ್ ಒಂದನ್ನು ಬಿಟ್ಟು. (ಅದೇ ಚೈತ್ರ ಮಾಸ ಶುರುವಾಗಲಿ ನೋಡಿ ಬೇಕಾದಷ್ಟು ಬದಲಾವಣೆಗಳು ನಿಮಗೆ ಅರಿವಿಗೆ ಬಂದೋ ಬರದೆಯೋ ನಡೆದೇ ಇರತ್ತೆ.)
ಸಾವಿರಾರು ಜನಗಳು ಕೆಲ್ಸ ಕಳೆದುಕೊಂಡ್ರು. ಭಾರತದಲ್ಲಿ ನಂಬರ್ ಮೂರನೇ ಕಂಪನಿಯ ಗುರುವಾಗಿದ್ದವರು ಶಾಪವಾದವರು. ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗವನ್ನು ಮೆರೆದವರು ಇಂದು ಇತಿಹಾಸವಾಗಿ ಹೋದರು. ಎಂಟು ವರ್ಷ ಆಳ್ವಿಕೆ ಮಾಡಿ ಹೊರಗೆ ಹೋದ ಬುಷ್ ಸರ್ಕಾರದ ಲೆಕ್ಕಾಚಾರವನ್ನು ಯಾರೂ ಯಾಕೆ ಮಾಡುತ್ತಿಲ್ಲ? ಅಂದು ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ಕೊಚ್ಚಿಕೊಂಡದ್ದರ ಲೆಕ್ಕವನ್ನು ಯಾರೂ ಯಾಕೆ ಕೇಳುತ್ತಿಲ್ಲ?
ಇನ್ನೇನು ಜನವರಿ ಮುಗಿಯುತ್ತಾ ಬಂದರೂ ಆರ್ಥಿಕ ಸ್ಥಿತಿಗತಿಯಲ್ಲಿ ವ್ಯತ್ಯಾಸವೇನೂ ಆಗಿಲ್ಲ. ಈಗ ಬಂದು ಹಾಗೆ ಹೋಗೋ ೨೦೦೯ ಇಸ್ವಿ ೨೦೦೮ ಕ್ಕಿಂತ ಕೆಟ್ಟದಾಗಿರುತ್ತೆ ನೋಡ್ತಾ ಇರಿ, ಅಂತ ಎಷ್ಟೋ ಜನ ಈಗಾಗ್ಲೇ ಹೆದರ್ಸಿರೋದ್ರಿಂದ್ಲೇ ಬಹಳಷ್ಟು ಜನ ಕನ್ಸರ್‌ವೇಟೀವ್ ಆಗಿ ಆಲೋಚಿಸ್ತಾ ಇರೋದು. ನೋಡೋಣ ಇನ್ನೇನು ಕಾದಿದೆ ಈ ವರ್ಷ ಅಂತ.
Posted by Satish at 11:18 PM 5 comments
Labels: ಅಲ್ಲಿ-ಇಲ್ಲಿ, ಸುತ್ತಮುತ್ತ, ಸ್ಥಿತಿಗತಿ