... ಡಾಲರ್ರು, ಪೌಂಡುಗಳಿಂದ್ಲೇ ಇಡೀ ಪ್ರಪಂಚಾ ಹಾಳಾಗ್ತಿರದು ಇವತ್ತು!
ಶನಿವಾರ ಬೆಳಗ್ಗೆ ತಡವಾಗಿ ಎದ್ರೂ ನಡೆಯುತ್ತೇ ಎಂದು ಮಹದಾಸೆ ಇಟ್ಟುಕೊಂಡು ಮಲಗಿದ್ದ ನನ್ನನ್ನು ಅದ್ಯಾವುದೋ ಬ್ರಹ್ಮಲೋಕದಲ್ಲಿ ಸುಬ್ಬ ಜೋರು ಜೋರಾಗಿ ಮಾತನಾಡಿಕೊಳ್ಳುತ್ತಿರುವುದು ಕೇಳಿಬಂದು ನಿದ್ದೆಯಿಂದ ಎಚ್ಚರವಾದದ್ದೂ ಅಲ್ಲದೇ ಅವನು ಯಾರ ಹತ್ತಿರ ಅದೇನು ಮಾತನಾಡುತ್ತಿದ್ದಾನೆ ಎಂದು ಕಲ್ಪಿಸಿಕೊಳ್ಳುವಷ್ಟರ ಮಟ್ಟಿಗೆ ನನ್ನ ನಿದ್ರೆ ದೂರವಾಗಿ ಹೋಗಿದ್ದರಿಂದ ನನಗರಿವಿಲ್ಲದಂತೆ, 'ಥೂ ಇವನೊಬ್ಬ, ಸದ್ಯ ಇಂಡಿಯಾದವರ ಹತ್ತಿರ ಮಾತನಾಡಿದ್ರೆ ಹೀಗೆ ಅರಚಿಕೊಳ್ತಾನೆ, ಇನ್ನು ಮಂಗಳಗ್ರಹದವರ ಹತ್ತಿರ ಮಾತನಾಡಿದ್ರೆ ಹೆಂಗೋ!' ಬೈಗಳ ಹೊರಗೆ ಬಿತ್ತು. ಅದರಲ್ಲೂ ಸುಬ್ಬ ಫೋನ್ ಬಳಸುವ ಪರಿಯನ್ನು ನೋಡಿದರೆ ಅವನ ಧ್ವನಿಯ ಆವೇಶದಲ್ಲಿಯೇ ಆ ಕಡೆ ಇರುವವರ ದೂರವನ್ನು ಗುರುತುಹಿಡಿಯಬಹುದು, ದೂರ ಹೆಚ್ಚಾದಷ್ಟೂ ಅಬ್ಬರ ಹೆಚ್ಚು ಎನ್ನುವಂತೆ.
ಇಂಥವನೊಬ್ಬ ನಮ್ ಆಫೀಸಿನಲ್ಲಿ ಇರಬೇಕಿತ್ತು, ದಿನವೂ ಕ್ಯಾಲಿಫೋರ್ನಿಯಾದವರಿಗೆ ಕರೆ ಮಾಡಿದಾಗಲೆಲ್ಲ ಕಿರುಚಾಡುವುದನ್ನು ನೋಡಿ ಮಜಾ ತೆಗೆದುಕೊಳ್ಳಬಹುದಿತ್ತು ಎನ್ನುವ ಕುಹಕ ಮನದಲ್ಲಿಯೇ ಸುಳಿದು ಅಲ್ಲೇ ನಿಂತಿತು.
ಕೆಳಗಿನಿಂದ ಬೇಡವೆಂದರೂ ಸುಬ್ಬನ ಮಾತುಗಳು ಕಿವಿಗೆ ಬಂದು ರಾಚುತ್ತಿದ್ದವು, ಒನ್ ವೇ ಮಾತುಗಳನ್ನು ಕೇಳಲಿಕ್ಕೆ ಕೆಲವೊಮ್ಮೆ ಎಷ್ಟೋ ಸರ್ತಿ ಚೆನ್ನಾಗಿರುತ್ತೇ ಅಂತ ಅನ್ಸಿದ್ದೇ ನಾನು ಸುಬ್ಬನ ಮಾತುಗಳಿಗೆ ಕಿವಿಕೊಟ್ಟಮೇಲೆ,
'ನಾನ್ ಬಡಕಂಡೆ ಕೇಳ್ತೀರಾ ನನ್ ಮಾತು, ಈಗ ಅನುಭವಿಸಿ'.
'...'
'ಅಲ್ಲಮ್ಮಾ, ಅವಳಿಗೆ ಸ್ವಲ್ಪಾ ಬುದ್ಧೀ ಅನ್ನದ್ ಬ್ಯಾಡಾ, ನಾನು ವಿದೇಶಿ ಕಂಪ್ನಿಗಳಿಗೆ ದುಡಿತೀನೀ ಅಂತ ಒಂದೇ ಸಮಾ ಉರೀತಾ ಇದ್ಲು, ಈಗ ನೋಡ್ರಿ ಹೆಂಗಾತು.'
'...'
'ಸಮಾಧಾನ ಮಾಡ್ಕಳ್ರಿ, ಎಲ್ಲ್ ಹೋಗ್ತಾಳೇ ಬಂದೆ ಬರ್ತಾಳೆ...ಇನ್ನೊಂದ್ ಅರ್ಧಾ ಘಂಟೇ ಬಿಟ್ಟು ನಾನೇ ಫೋನ್ ಮಾಡ್ತೀನಿ, ಇಡ್ಲಾ ಹಂಗಾರೆ'...ಎಂದು ಫೋನ್ ಇಟ್ಟ ಹಾಗೆ ಸದ್ದು ಕೇಳಿಸಿತು.
ಏನ್ ಅವಾಂತರ ಆಗಿದೆ ನೋಡೇ ಬಿಡೋಣ, ಈ ವೀರಾವೇಶಕ್ಕೇನಾದ್ರೂ ಕಾರ್ಣ ಇರ್ಲೇ ಬೇಕು ಎಂದುಕೊಂಡು ಮುಖಕ್ಕೊಂದಿಷ್ಟು ನೀರು ತೋರಿಸಿದಂತೆ ಮಾಡಿ, ಕೆಳಗೆ ಬಂದೆ. ಸುಬ್ಬನ ಮುಖ ಸಿಟ್ಟಿನಿಂದ ದುಮುಗುಡುತ್ತಿತ್ತು, ನಾನು ಇವನ ಸಿಟ್ಟಿಗೆ ಆಹಾರವಾಗದಿದ್ದರೆ ಸಾಕು ಎನ್ನುವ ದೂರಾಲೋಚನೆಯಲ್ಲಿ 'ಸುಮ್ಮನಿರು' ಎಂದು ಮನಸ್ಸು ಹೇಳುತ್ತಿದ್ದರೂ, ಅದಕ್ಕೆ ವಿರುದ್ಧವಾಗಿ ನಾಲಿಗೆ, 'ಏನಯ್ಯಾ, ಏನ್ ಸಮಾಚಾರ?' ಎಂದು ಕೇಳೇಬಿಟ್ಟಿತು.
'ನಮ್ಮ್ ಅಕ್ಕನ ಮಗಳು ಸುಶೀಲು ಇಷ್ಟೊತ್ತಾದ್ರೂ ಇನ್ನೂ ಮನೆಗೆ ಬಂದಿಲ್ಲವಂತೆ, ರಾತ್ರಿ ಕೆಲಸಕ್ಕ್ ಹೋದೋಳು ಬೆಳಿಗ್ಗೆಯೆಲ್ಲಾ ಬಂದಿರೋಳು, ಆದ್ರೆ ಈಗ ನೋಡು ಘಂಟೇ ಎಂಟಾದ್ರೂ ಇನ್ನೂ ಬಂದಿಲ್ಲ ಅಂತ ಎಲ್ಲರೂ ತಲೆಕೆಡಿಸಿಕೊಂಡು ಕುಂತವರಂತೆ'.
'ಎಲ್ಲಿ ಕೆಲ್ಸಾ ಮಾಡ್ತಾ ಇದಾಳವಳೂ?'
'ನನಗೆ ವಿವರ ಎಲ್ಲ್ಲಾ ಗೊತ್ತಿಲ್ಲ, ಅದ್ಯಾವುದೋ ಕಾಲ್‌ಸೆಂಟರ್‌ನಲ್ಲಿ ಆರೇಳ್ ತಿಂಗಳಿಂದ ಇದಾಳೆ ಅಂತ ಸುದ್ದಿ'.
'ನಿಮ್ಮನೆಯವರಿಗೆ ಕಾಲ್‌ಸೆಂಟರ್ ಫೋನ್ ನಂಬರ್ ತಗೊಂಡು ಫೋನ್ ಮಾಡಿ ಕೇಳೋಕ್ ಹೇಳು, ಸಾಮಾನ್ಯವಾಗಿ ಅವರದ್ದೇ ಕಂಪನಿ ಗಾಡಿ ಇರುತ್ತೇ, ಅದರಲ್ಲೇ ಓಡಾಡೋದ್ ತಾನೆ' ಎಂದೆ.
'ಅವರಪ್ಪಾ ಅಮ್ಮನ್ ಹತ್ರ ನಂಬರ್ ಇಲ್ಲವಂತೆ, ನಮ್ ಮಾವನ್ ಮಗ ನೋಡ್ಕಂಬರೋಕ್ ಹೋಗಿದ್ದಾನೆ' ಎಂದ ಕಷ್ಟಪಟ್ಟು.
'ಲೋ, ಇದೊಳ್ಳೇ ಕಥೆಯಾಯ್ತಲ್ಲೋ' ಎಂದು ಬುದ್ಧಿವಾದ ಹೇಳುವ ಟೋನ್‌ನಲ್ಲಿ ನಾನು ಮುಂದುವರೆಸಿದೆ, 'ಮಗಳು ಎಲ್ಲಿ ಕೆಲ್ಸಾ ಮಾಡ್ತಾಳೇ ಏನೂ ಅಂತ ಹ್ಯಾಗೆ ತಿಳಿದುಕೊಳ್ಳದೇ ಇರ್ತಾರೋ ಜನ?'
'ಸುಮ್ನಿರೋ ನಿಂದೊಳ್ಳೋ ಆಯ್ತು. ಹಂಗಾರೆ ಈಗ ನೀನು ಅದ್ಯಾವುದೋ ಕಂಪನಿಗೆ ದುಡೀತಿ ಅಂತ ನಿಮ್ಮನೆಯವರ ಹತ್ರ ಆ ಕಂಪನಿ ವಿವರಾ ಎಲ್ಲಾ ಇದೆಯಾ? ಕೆಲವೊಂದು ಮಾತು ಆಡೋಕಷ್ಟೇ ಚೆನ್ನಾ, ಸ್ವಲ್ಪ ಯೋಚ್ನೆ ಮಾಡ್ಭೇಕು ಮಾತು ಅನ್ನಬೇಕಾದ್ರೆ' ಎಂದು ನನ್ನನ್ನೇ ತಿವಿಯಲು ನೋಡಿದ.
'ಅದು ಹಾಗಲ್ಲಾ, ನಾನಿಲ್ಲಿ ಕೆಲ್ಸಾ ಮಾಡೋದು...' ಎಂದು ಸಮಜಾಯಿಷಿ ನೀಡಲು ಹೊರಟಿದ್ದ ನನ್ನನ್ನು ತಡೆದು, 'ಅಲ್ಲಿಗೊಂದು, ಇಲ್ಲಿಗೊಂದು ನ್ಯಾಯಾ ಅಂತಲ್ಲ, ನಿಮ್ ಮನೆಯವರಿಗೆ ನೀನು ಎಲ್ಲಿದ್ದೀ, ಹೇಗಿದ್ದೀ ಅಂತ ಗೊತ್ತಿರಬೇಕು, ಎಲ್ಲಾ ನೆಟ್ಟಗಿದ್ದಾಗ ಅದರ ಬೆಲೆ ಗೊತ್ತಾಗಂಗಿಲ್ಲ, ಇಂಥಾ ಸಮಯದಾಗ ಉಪಯೋಗಕ್ಕೆ ಬರತತಿ ನೋಡು.'
ನಾನು ಇನ್ನೇನು ಹೇಳುವುದೆಂದು ಸುಮ್ಮನಿದ್ದೆ, ಸುಬ್ಬ ತನ್ನ ಮಾತನ್ನು ಮುಂದುವರೆಸಿದ.
'ಇದೆಲ್ಲಾ ಹಾಳಾದೋರ್ ಸಂಸ್ಕೃತಿ! ಇಂಥಾ ಮನೇಹಾಳ್ ಜನರಿಂದ್ಲೇ ನಮ್ಮನೇ ನಮ್ಮ್ ಊರ್ ಹುಡುಗಾ-ಹುಡುಗೀರೆಲ್ಲ ರಾತ್ರೀ ಎಲ್ಲಾ ದುಡಿಯಂಗಾಗಿದ್ದು!' ಎಂದು ಒಂದು ಮಹಾನ್ ಬಾಂಬ್ ಎಸೆದು ಸುಮ್ಮನಾದ. ಅವನಷ್ಟಕ್ಕೇನಾದ್ರೂ ಹೇಳ್‌ಕೊಳ್ಲೀ ನಾನು ಸುಮ್ನೇ ಇದ್ರೇ ಹೆಂಗೆ ಅಂತ ಒಮ್ಮೆ ಯೋಚ್ನೇ ಬಂದ್ರೂ, ಇವನ ಮಾತನ್ನು ಕೇಳಿ ಸುಮ್ಮನಿದ್ರೆ ಇವನ ರೀತಿ-ನೀತಿಗಳಿಗೆ ಎಲ್ಲಿ ಒಪ್ಪಿದ ಹಾಗಾಗುತ್ತೋ ಎನ್ನುವ ಹಂಬನೀತಿಯ ಹಿನ್ನೆಲೆಯಲ್ಲಿ ಅವನನ್ನೇ ದಬಾಯಿಸಿದೆ.
'ಮೂವತ್ತು ವರ್ಷಾ ಮೇಷ್ಟ್ರಾಗಿ ದುಡಿದು ರಿಟೈರ್ ಆದೋರು ಮನೆಗೆ ತರೋ ದುಡ್ಡನ್ನ ಈ ಹುಡುಗಾ-ಹುಡುಗೀರು ಒಂದೇ ವರ್ಷದಲ್ಲಿ ದುಡಿಯೋ ದುಡ್ಡನ್ನ ಎಣಿಸೋವಾಗ ಈ ಸಂಸ್ಕೃತಿ ವಿಷ್ಯಾ ತಲೇಗ್ ಬರೋದಿಲ್ಲಂತೇನು?' ಎಂದೆ ಸ್ವಲ್ಪ ಖಾರವಾಗಿ.
ಅವನೂ ಅಷ್ಟೇ ಜೋರಾಗಿ, 'ಓಹೋಹೋ, ಯಾವನಿಗ್ ಬೇಕಿತ್ತು ಈ ಚಾಕರಿ... ನಾವೇನು ನಿಮ್ಮಲ್ಲಿದ್ದ ಬಿಸಿನೆಸ್ ಪ್ರಾಸೆಸ್ಸುಗಳನ್ನೆಲ್ಲ ಹಾಳುಬಡಿಸಿ ತಂದ್ ಹಾಕಿ ಎಂದು ಮಡಿಲು ಒಡ್ಡಿ ಹೋಗಿದ್ವೇನು ಇವರ ಹತ್ರ? ತಮ್ ದೇಶದಲ್ಲಿ ಕೂಲಿ ಕೊಟ್ಟು ಸುಧಾರಸ್ಕಾಗಲ್ಲ ಅಂತ ಇಡೀ ಪ್ರಪಂಚವನ್ನೇ ಹಾಳ್ ಮಾಡ್ತಾ ಇದಾರೆ ನನ್ ಮಕ್ಳು. ಇಂಥಾ ಬಂಡ್ ಗೆಟ್ಟೋರ್ ಎಣಿಸೋ ಯೂರೋ, ಡಾಲರ್ರು, ಪೌಂಡುಗಳಿಂದ್ಲೇ ಇಡೀ ಪ್ರಪಂಚಾ ಹಾಳಾಗ್ತಿರದು ಇವತ್ತು!' ಎಂದು ಅವಾಜ್ ಹಾಕಿದ.
ನಾನೆಂದೆ, 'ಹೌದು, ಎಲ್ಲೋ ಬೀಡುಬೀಸಾಗಿದ್ದ ಕಂಪನಿಗಳು ಬಿಲಿಯನ್ನ್ ಎಣಿಸೋಕ್ ಶುರುಮಾಡಿದ್ದೇ ಇಂಥಾ ಉದ್ಯಮದಿಂದ...ನೀವ್ ಅಲ್ದಿದ್ರೆ ಇನ್ಯಾವಾನಾದ್ರೂ ಮಾಡ್ತಾನೆ, ಅಷ್ಟು ದಮ್ಮಿದ್ರೆ ಈ ಕಾಲ್ ಸೆಂಟರುಗಳನ್ನೆಲ್ಲ ಇವತ್ತೇ ಮುಚ್ಚಿಕಳ್ರಿ ನೋಡಾಣಾ'.
'ಅದೇನೋ ಅಂತಾರಲ್ಲ, ಊರ ಕೊಳ್ಳೇ ಹೊಡೆದ ಮೇಲೇ ದಿಡ್ಡೀ ಬಾಗಿಲು ಹಾಕಿದ್ರಂತೆ ಅಂತ ಹಂಗಾಯ್ತು...ನಮ್ ಯುವ ಜನತೆ ಸಾಯ್ತಾ ಐತೆ ಕಣಯ್ಯಾ. ಅವರು ತರೋ ದುಡ್ಡಲ್ಲ ಮುಖ್ಯ, ನಮ್ಮಲ್ಲಿನ ಪದವೀಧರರನ್ನ ಅವರಿಗೆ ಬೇಕೋ ಬ್ಯಾಡ್ವೋ ಯಾವುದೋ ದೇಶದ ಯಾವ್ದೋ ಹೆಸರನ್ನ ಕಟ್ಟಿ ಯಾರ್ದೋ ರಾಗದಲ್ಲಿ ಹಾಡು, ಯಾವ್ದೋ ತಾಳಕ್ಕೆ ಕುಣೀ ಅಂತಾ ಅಂದ್ರೆ, ಹಗಲ್ ಮಲಗಿ ರಾತ್ರೀ ಒದ್ದಾಡೋ ಇಂಥಾ ನಿಶಾಚರರಿಂದ ಯಾವ್ ಲೋಕ ಉದ್ಧಾರಾಗುತ್ತೇ ನೀನೇ ಹೇಳು?'
'ಅಂದ್ರೇ ನೀನ್ ಹೇಳೋದರ ಅರ್ಥ, ಈ ಕಾಲ್‌ಸೆಂಟರುಗಳು ಬರೋಕ್ ಮುಂಚೆ ರಾತ್ರೋ ರಾತ್ರಿ ಏನೂ ಕೆಲ್ಸಗಳೇ ಆಗ್ತಿರಲಿಲ್ಲಾ ಅಂತಲೇ?'
'ಹಂಗಲ್ಲ, ವಾಚ್‌ಮನ್, ಫ್ಯಾಕ್ಟರಿ ಶಿಫ್ಟ್ ಕೆಲಗಳೆಲ್ಲ ಯಾವತ್ತಿನಿಂದ್ಲೋ ಇರೋವೇಯಾ, ಆದರೆ ಈ ಕಾಲ್‌ಸೆಂಟರುಗಳಿಂದ ಸಮಾಜಕ್ಕೆ ಬಹಳಷ್ಟು ದೊಡ್ಡ ಹೊಡೆತಾ ಇದೇ ನೋಡು, ಇವತ್ತಲ್ಲ ನಾಳೆ ಅದು ನಿಜವಾಗುತ್ತೆ - ನಮ್ಮ್ ಸಿಟಿಗಳು ಈಗಾಗ್ಲೇ ರಾತ್ರೀ-ಬೆಳಗೂ ದುಡದೂ ದುಡದೂ ಸಪ್ಪಗಾಗ್‌ಹೋಗಿರೋದು. ವೇಗಾ ಅನ್ನೋದು ಸಹಜವಾಗಿರ್ಬೇಕು, ಅದನ್ನ ಬಿಟ್ಟು ಸೈಕಲ್ ಟಯರ್ ಹಾಕ್ಕೊಂಡು ಐವತ್ತ್ ಮೈಲಿ ಸ್ಪೀಡ್ ಹೋಗಾಗ್ ಬರೋದಿಲ್ಲ ತಿಳಕೋ'.
'ನೋಡೋ, ಆರ್ಥಿಕವಾಗಿ ದೇಶ ಬೆಳೀತಾ ಇದೆ, ಅದು ಮುಖ್ಯ. ಮೊದಲೆಲ್ಲ ಕೆಲಸ ಇಲ್ಲದೇ ಅಲೀತಿದ್ದ ಪುಡುಪೋಕರಿಗಳಿಗೆ ಈಗ ಕೆಲ್ಸಾ ಅನೋದೊಂದಿದೆ, ಅದು ಮುಖ್ಯ. ಬದಲಾವಣೆಗೆ ನಾವು ಈಗ ಕಣ್ಣು ಮುಚ್ಚಿ ಕುಳಿತುಕೊಂಡಿದ್ರೆ, ಕೊನೇಗಷ್ಟೇ - ಚಿಂಕುಗಳು ನಮ್ಮನ್ನು ಹಿಂದಕ್ ಹಾಕಿ ಒಂದಲ್ಲ ಒಂದು ದಿನ ಮುಂದ್ ಹೋಗೇ ಹೋಗ್ತಾರೆ...ಆಗ ಬಾಯಿಮೇಲೆ ಬೆರಳಿಟ್ಟುಕೊಂಡು ನಮ್ಮ ಐದಾರು ಸಾವಿರವರ್ಷದ ಸಂಸ್ಕೃತಿಯನ್ನ ಉಪ್ಪಿನಕಾಯಿ ಹಾಕ್ಕೂಂಡು ನೆಕ್ಕೋಣಂತೆ'.
'ನೀನು ಏನಂದ್ರೂ ನಾನ್ ಒಪ್ಪಲ್ಲಪ್ಪಾ...' ತನ್ನ ಅಲ್ಟಿಮೇಟಮ್ಮ್ ಅನ್ನು ಮುಂದಿಟ್ಟ, '...ನಮ್ಮ್ ಸಂಸ್ಕೃತಿ ನಮಗೆ ದೊಡ್ದು, ರಾತ್ರೀ-ಹಗಲೂ ದುಡಿದು ಸುಖವನ್ನು ಕಂಡೆವು ಎನ್ನೋ ಮರೀಚಿಕೆಯನ್ನು ಸವಾರಿ ಮಾಡೋ ಸರದಾರರು ನಮಗೆ ಬ್ಯಾಡಾ'.
ನಾನು, 'ಸರಿ ನಿನ್ನಿಷ್ಟ...' ಎನ್ನುವಷ್ಟರಲ್ಲಿ ಫೋನ್ ರಿಂಗ್ ಆದದ್ದರಿಂದ ಇಂಡಿಯಾದಿಂದ ಬಂದಿರಬಹ್ದು ಎಂದು ಸುಬ್ಬ ಓಡಲುತೊಡಗಿದ್ದನ್ನು ನೋಡಿದರೆ ಅವನು ನಿಜವಾಗಿಯೂ ಚಿಂತಿತನಾದಂತೆ ಕಂಡುಬಂತು.