Saturday, May 27, 2006

ಬಂಕಸಾಣ-ಬೆಲ್‌ಮಾರ್‌ಗಳಲ್ಲಿ ಕಲಿತ ಪಾಠ

ಮೊನ್ನೆ ಸೂಪ್ ಲೇಖನ ಬರೆದ ಮೇಲೆ ಸಾವಿನ ಬಗ್ಗೆ ಮತ್ತೆ-ಮತ್ತೆ ಯೋಚಿಸತೊಡಗಿದಾಗ ನಾನು ಸಾವಿಗೆ ಅತ್ಯಂತ ಹತ್ತಿರ ಬಂದು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದು ಎರಡು ಬಾರಿ ಅನ್ನುವ ವಿಷಯ ಹೊಳೆಯಿತು. ೧೯೮೫ ರಲ್ಲಿ ಒಮ್ಮೆ ಆನವಟ್ಟಿಯ ಸಮೀಪವಿರುವ ವರದಾನದಿಯಲ್ಲಿ ಒಮ್ಮೆ ಪಾರಾಗಿದ್ದರೆ, ೧೯೯೯ ರಲ್ಲಿ ನ್ಯೂ ಜೆರ್ಸಿಯ ಬೆಲ್‌ಮಾರ್‌ನಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ ಎರಡನೆಯ ಬಾರಿ ಪಾರಾಗಿದ್ದೆ. ಬಂಕಸಾಣದಲ್ಲಿ ನನಗೆ ಅಷ್ಟೊಂದು ಸೋಜಿಗವೂ ಹೆದರಿಕೆಯೂ ಆಗಿರಲಿಲ್ಲ, ಆದರೆ ಬೆಲ್‌ಮಾರ್‍‌ನಲ್ಲಿ ಆದ ಅಸಾಧ್ಯ ಹೆದರಿಕೆ, ಭಯ ಎರಡೂ ನನ್ನನ್ನು ಬಹಳ ದಿನಗಳವರೆಗೆ ಬಾಧಿಸಿದ್ದವು. ಅಂದಿನಿಂದ ನೀರಿನೊಡನೆ ಸರಸ ಸಲ್ಲಾಪ ಅಷ್ಟೊಂದು ಇಟ್ಟುಕೊಂಡಿಲ್ಲ, ಇಟ್ಟುಕೊಂಡರೂ ಎಷ್ಟು ಸಾಧ್ಯವೋ ಅಷ್ಟು ಜಾಗೃತನಾಗಿರುತ್ತೇನೆ.

***

ಆನವಟ್ಟಿಯಿಂದ ಕಾಲುದಾರಿಯಲ್ಲಿ ನಡೆದರೆ ವರದಾನದಿಯ ಪಾತ್ರದಲ್ಲಿ ಇರುವ ಒಂದು ಚಿಕ್ಕ ಹಳ್ಳಿ ಬಂಕಸಾಣದಲ್ಲಿ ನೀರಿನಲ್ಲಿ ಮುಳುಗಿಕೊಂಡಿರುವ ಹೊಳೆಲಿಂಗೇಶ್ವರನ ಸಾನಿಧ್ಯವಿದೆ. ಮಳೆಗಾಲದಲ್ಲಿ ಶಿವಲಿಂಗ ಹಾಗೂ ಗರ್ಭಗುಡಿ (ಲಿಂಗದ ಸುತ್ತಲೂ ಅಳಿದುಳಿದ ಕಲ್ಲುಗಳ ಒಂದು ಕಟ್ಟೆ ಎನ್ನಬಹುದು) ಸಂಪೂರ್ಣ ಮುಚ್ಚಿಹೋಗುತ್ತದೆ, ಆದರೆ ಬೇಸಿಗೆಯ ಸಮಯದಲ್ಲಿ ನದಿಯನ್ನು ನಡೆದೇ ದಾಟಬಹುದಾದ್ದರಿಂದ ಲಿಂಗದ ದರ್ಶನ ಹಲವಾರು ತಿಂಗಳುಗಳವರೆಗೆ ಆಗುತ್ತದೆ. ಇಲ್ಲಿ ಪ್ರತಿ ಜನವರಿ ೧೪ ರಂದು ಮಕರ ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ಜಾತ್ರೆ ನಡೆಯುತ್ತದೆ, ಆನವಟ್ಟಿ, ಜಡೆ ಹೋಬಳಿ ಹಾಗೂ ದೂರದೂರದ ಹಳ್ಳಿ ಪಟ್ಟಣಗಳಿಂದ ಸಾಕಷ್ಟು ಜನರು ಬಂದು ಸೇರುತ್ತಾರೆ. ನಮ್ಮೂರಿನಲ್ಲಿ ಮನೆಗೊಬ್ಬರಾದರೂ ಜಾತ್ರೆಗೆ ಹೋಗಿ ಹಣ್ಣು-ಕಾಯಿ ಮಾಡಿಸಿಕೊಂಡು ಬರುವ ಪದ್ಧತಿ ಇದೆ, ಅಲ್ಲದೇ ಶಾಲಾ-ಕಾಲೇಜುಗಳಿಂದಲೂ ಪಿಕ್‌ನಿಕ್ ಹೆಸರಿನಲ್ಲಿ ಬೇಕಾದಷ್ಟು ಜನರು ಹೋಗುತ್ತಾರೆ. ಮೊದಲೆಲ್ಲಾ ವರದಾನದಿಗೆ ಅಡ್ಡವಾಗಿ ಸೇತುವೆ ಇರಲಿಲ್ಲ, ಇತ್ತೀಚೆಗೆ (ಹತ್ತು ವರ್ಷವಾಗಿರಬಹುದು) ಸೇತುವೆಯನ್ನೂ ಕಟ್ಟಿದ್ದಾರೆ. ಇದೇ ಬಂಕಸಾಣಕ್ಕೆ ಬಸ್ ಹೋಗುವ ಹಾದಿಯಲ್ಲಿ ಹೋದರೆ ಸುಮಾರು ೧೦ ಕಿ.ಮೀ. ಆಗಬಹುದು. ಆದರೆ, ಕುಬಟೂರು ಕೆರೆ ಏರಿ, ಲಕ್ಕವಳ್ಳಿ ಜಮೀನುಗಳ ಮಧ್ಯೆ ಇರುವ ಕಾಲ್ದಾರಿಗಳೆಲ್ಲವೂ ನನಗೆ ಚಿರಪರಿಚಿತವಾಗಿರುವುದರಿಂದ ಐದು ಕಿ.ಮೀ. ಇರುವ ಹಾದಿಯಲ್ಲಿ ಒಂದು ಘಂಟೆಯ ಒಳಗೆ ನಡೆದೇ ತಲುಪಬಹುದಾಗಿತ್ತು, ಅಥವಾ ಎಲ್ಲಾದರೂ ಬಾಡಿಗೆಗೆ ಸೈಕಲ್ ತೆಗೆದುಕೊಂಡರೆ ಎಲ್ಲವೂ ಸುಲಭವಾಗುತ್ತಿತ್ತು.

ಈ ಬಂಕಸಾಣ ಜಾತ್ರೆಗೆ ನಾನು ನನ್ನ ಸ್ನೇಹಿತರ ಜೊತೆಗೆ ಹೋಗಿದ್ದಕ್ಕಿಂತಲೂ ನನ್ನ ದೊಡ್ಡ ಅಣ್ಣ ಹಾಗೂ ಅವನ ಸ್ನೇಹಿತರ ಜೊತೆಗೆ ಹೋದದ್ದೇ ಹೆಚ್ಚು. ನನ್ನ ಅಣ್ಣ ಅವನ ಸ್ನೇಹಿತರಾದ ಗೋಪಿ, ಕಿತ್ತ, ಉಮೇಶ, ಪ್ರಕಾಶ ಮುಂತಾದವರ ಜೊತೆ ಪ್ರತೀವರ್ಷವೂ ಎಂಬಂತೆ ಹೋಗುತ್ತಿದ್ದ, ಅಲ್ಲಿ ಹೋದ ಮೇಲೆ ನೀರಿನಲ್ಲಿ ತೂರ್‌ಚೆಂಡು ಆದುವುದೇನು, ಆ ದಡದಿಂದ ಈ ದಡಕ್ಕೆ ಹೆಚ್ಚು ಆಳ ಇರುವಲ್ಲಿಯೇ ಹೋಗುವುದು ಎಂದರೇನು? ಅವರೆಲ್ಲರ ಜೊತೆಯಲ್ಲಿ ಹತ್ತರ ಜೊತೆ ಹನ್ನೊಂದು ಅನ್ನೋ ಹಾಗೇ ನಾನೂ ಒಬ್ಬ ಹಾಲುಂಡಿ. ನನ್ನ ಅಣ್ಣ ಒಳ್ಳೇ ಈಜುಗಾರ, ಅವನು ಜೋಗಾದಲ್ಲಿರೋ ಸ್ವಿಮ್ಮಿಂಗ್ ಪೂಲಿನ ಅತ್ಯಂತ ಎತ್ತರದ ಮೆಟ್ಟಿಲಿನಿಂದ (ಸುಮಾರು ಐವತ್ತು ಅಡಿ ಎತ್ತರವಿರಬಹುದು) ಡೈವ್ ಮಾಡಿದ್ದನ್ನೂ, ಕಂಡ-ಕಂಡ ಹೊಳೆ-ಬಾವಿಗಳಲ್ಲಿ ಲೀಲಾಜಾಲವಾಗಿ ಈಜೋದನ್ನೂ ಹಲವಾರು ಬಾರಿ ನೋಡಿ ಕಣ್ಣನ್ನು ತುಂಬಿಕೊಂಡಿದ್ದೇನೆಯೇ ಹೊರತು ಮೈಸೂರಿಗೆ ಹೋಗುವವರೆಗೆ ನನಗೆ ಈಜಿನ ಗಂಧವೂ ಬಾರದು. ಅವನಿಗಾದರೆ ಯಾವುದೇ ಕೆರೆ-ಬಾವಿ-ಹೊಳೆಗಳಲ್ಲಿ ಈಜು ಹೊಡೆಯುವುದಕ್ಕೆ, ಅಥವಾ ಯಾವುದೋ ತುಡುಗು ಕುದುರೆಗೆ ಮನೆಯಲ್ಲಿನ ಲೋಹದ ಹ್ಯಾಂಗರು-ಹಗ್ಗ-ಟವಲ್ಲನ್ನು ಬಳಸಿ ಲಗಾಮು ಹಾಕಿ ಸವಾರಿ ಮಾಡುವುದಕ್ಕೆ ಅಪ್ಪ-ಅಮ್ಮನಿಂದ ಆರಾಮವಾಗಿ ಪರ್ಮಿಷನ್ನು ಸಿಗುತ್ತಿತ್ತು, ಆದರೆ ನನಗೆ ಮಾತ್ರ ದನದ ಕೊಟ್ಟಿಗೆಯ ಸಮೀಪವೂ ಹೋಗಲು ಬಿಡುತ್ತಿರಲಿಲ್ಲ, ಹಾಲು ಕರೆಯುವ ಮಾತು ಹಾಗಿರಲಿ. ಇಂಥಾ ರೋಲ್‌ಮಾಡೆಲ್ ಅಣ್ಣನನ್ನು ಮನಸ್ಸಿನಲ್ಲಿ ವೈಭವೀಕರಿಸಿಕೊಂಡು ನನಗೆ ಕಷ್ಟ ಬಂದಾಗಲೆಲ್ಲ ಅವನೇನಾದರೂ ಇಲ್ಲಿದ್ದರೆ ಎಂದು ಇವತ್ತಿಗೂ ಅವನನ್ನು ಮಿಸ್ ಮಾಡಿಕೊಳ್ಳುತ್ತೇನೆ, ಅವನು ಹದಿನೈದು ವರ್ಷದ ಹಿಂದೆ ಬಾವಿಯಿಂದ ಎರಡೂ ಕೈಯಲ್ಲಿ ಎರಡು ದೊಡ್ಡ ದೊಡ್ಡ ಬಕೇಟುಗಳಲ್ಲಿ ನೀರು ತಂದು ಹಾಕುತ್ತಿದ್ದವನು, ನನಗೆ ಇವತ್ತಿಗೂ ಎರಡೂ ಕೈ ಸೇರಿದರೆ ಒಂದೇ ಬಕೇಟು ಎತ್ತುವುದಕ್ಕೆ ಆಗುವುದು ಎಂದು ಹೇಳಿದರೆ ಅಣ್ಣನ ಚಿತ್ರಣಕ್ಕೆ ಸರಿಯಾದ ನ್ಯಾಯ ಸಿಕ್ಕೀತು.

ಬಂಕಸಾಣದ ಹೊಳೆಯಲ್ಲಿ ಅಣ್ಣ ಮತ್ತು ಅವನ ಸ್ನೇಹಿತರು ಹೋಗೋದು ಪೂಜೆ ಮಾಡಿಸೋದು ಎನ್ನುವ ನೆಪಕ್ಕೆ ಮಾತ್ರ, ಆದರೆ ಅವರು ಅಲ್ಲಿ ನೀರಿನಲ್ಲಿ ಮನದಣಿಯೆ ಆಡಿ ಮನೆಗೆ ಹೊರಡುವಾಗ ಒಂದಿಷ್ಟು ಮಂಡಕ್ಕಿ, ಕಾರಸೇವು, ಬೆಂಡು ಬತ್ತಾಸುಗಳನ್ನು ತೆಗೆದುಕೊಂಡು ಹೋಗುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ಅವರೆಲ್ಲರೂ ನೀರಿನಲ್ಲಿ ಇಳಿದರೆಂದರೆ ನಾನೂ ನೀರಿನಲ್ಲಿ ಇಳಿಯುತ್ತಿದ್ದೆ, ಆದರೆ ಈಜುಬಾರದ ನನಗೆ ಅಣ್ಣ ದೊಡ್ಡ ಕಣ್ಣು ಮಾಡಿ 'ಈ ಜಾಗ ಬಿಟ್ಟು ಎಲ್ಲೂ ಹೋಗಬೇಡ' ಎಂದು ಹೆದರಿಸಿ ಹೋಗುತ್ತಿದ್ದುದರಿಂದ ಅವರಿಗೆಲ್ಲ ಇದ್ದ ನೀರಿನ ವ್ಯಾಪ್ತಿ ನನಗಿರದೇ ಹೋಗಿತ್ತು, ಅದರೂ ಮೊಣಕಾಲು, ಸೊಂಟ, ಕೊನೆಗೆ ಎದೆ ಮಟ್ಟಕ್ಕೆ ನೀರಿನಲ್ಲಿ ಬಂದು, ತಲೆಯನ್ನು ಕಷ್ಟ ಪಟ್ಟು ಮೂರು ನಾಲ್ಕು ಸಾರಿ ನೀರಿನಲ್ಲಿ ಮುಳುಗಿಸಿ ಮತ್ತೆ ಕಡಿಮೆ ನೀರಿರುವ ಕಡೆಗೆ ಹೋದರೆ ನನ್ನ ಆಟವೆಲ್ಲ ಮುಗಿದುಹೋಗುತ್ತಿತ್ತು. ಆದರೆ, ಆ ಬಾರಿ ನನಗೆ ಅದೇನು ಅನಿಸಿತೋ ಬಿಟ್ಟಿತೋ ಗೊತ್ತಿಲ್ಲ, ಎದೆ ಮಟ್ಟದ ನೀರಿನಿಂದ ಕುತ್ತಿಗೆಯ ಮಟ್ಟಕ್ಕೆ ಹೋಗೋಣವೆನಿಸಿತು, ನಾನು ಹಾಗೆ ಹೋದಾಗ ನನ್ನ ಅಣ್ಣ ಮತ್ತು ಅವನ ಸ್ನೇಹಿತರು ತೂರ್‌ಚೆಂಡು ಆಡುತ್ತಿದ್ದುದನ್ನು ನೋಡುತ್ತಾ ಹೋದವನಿಗೆ ಏಕ್‌ದಂ ನೀರಿನಲ್ಲಿ ಕುತ್ತಿಗೆ ಮೀರಿ ಬಾಯಿಯವರೆಗೂ ನೀರು ಬಂದಿದ್ದು ದಿಗಿಲಾಗಿ ಕೈ-ಕಾಲು ಬಡಿದುಕೊಳ್ಳಲಾರಂಭಿಸಿದೆ, ಮೊಟ್ಟ ಮೊದಲು ಎಲ್ಲಕ್ಕಿಂತ ಮುಖ್ಯವಾಗಿ ಜೀವದ ಬೆಲೆ ಗೊತ್ತಾಗಿಹೋಯಿತೆಂದು ಹೃದಯ ಜೋರಾಗಿ ಹೊಡೆದುಕೊಳ್ಳಲಾರಂಭಿಸಿತು. ಚಿಕ್ಕವರು ಮುಳುಗಲು ಹೆಚ್ಚು ನೀರು ಬೇಕಾಗೋದಿಲ್ಲ, ಅಲ್ಲದೇ ಮುಳುಗಿದವರು ಕಷ್ಟಪಟ್ಟು ಮೇಲೆ ಬರುವ ಪ್ರಯತ್ನ ಹಾಗೂ ಸಾಯುವ ಭಯ ಇವೆರಡೂ ಮುಳುಗುವವನಿಗೆ ಸಹಾಯ ಮಾಡುವ ಸಾಧ್ಯತೆ ಕಡಿಮೆ - ಅಂದು ನನಗೂ ಹೀಗೇ ಆಗಿತ್ತು. ಆದರೆ ಅವರ ಆಟದ ಮಧ್ಯದಲ್ಲೇ ಚೆಂಡು ನನ್ನ ಕಡೆಗೆ ಬಂದಿತೆಂದು ಗೋಪಿ ನನ್ನ ಕಡೆಗೆ ಬಂದವನೇ 'ಇಲ್ಲೇನ್ ಮಾಡ್ತಾ ಇದ್ದೀಯೋ?' ಎಂದು ನನ್ನನ್ನು ಸಲೀಸಾಗಿ ಕೈ ಹಿಡಿದು ಎಳೆದು ಕಡಿಮೆ ನೀರಿರುವಲ್ಲಿ ತಂದು ಬಿಟ್ಟ! ಅವನು ಬರುವುದು ಒಂದು ನಿಮಿಷ ತಡವಾಗಿ ಹೋಗಿದ್ದರೂ ನನ್ನ ಕಥೆ ಮುಗಿದೇ ಹೋಗುತ್ತಿತ್ತು - ನಾನು ಈ ವಿಷಯವನ್ನೂ ಈ ವರೆಗೂ ಯಾರಲ್ಲೂ ಹೇಳಿಲ್ಲ, ಗೋಪಿಗೂ ನನ್ನನ್ನು ಆ ದಿನ ಜೀವದಿಂದುಳಿಸಿದೆ ಎನ್ನಿಸಲು ಇಲ್ಲ, ಅವನು ನನ್ನ ಕೈ ಹಿಡಿದು ಎಳೆದು ತಂದದ್ದು, ನಾನು ಭಯದಿಂದ ಸುಧಾರಿಸಿಕೊಂಡದ್ದೂ, ಮನೆಗೆ ಬರುವವರೆಗೆ, ಬಂದ ಮೇಲೆ ಇಲ್ಲೀವರೆಗೂ ಯಾರಲ್ಲೂ ಹೇಳದೇ ಸುಮ್ಮನಿದ್ದದ್ದೂ ಎಲ್ಲವೂ ಒಂದು ನಾಟಕದ ಅಂಕದಂತೆ ಸರಿದು ಹೋಗಿದೆಯೇ ವಿನಾ, ಮತ್ತಿನ್ನೇನೂ ಆಗಲಿಲ್ಲ, ಪ್ರತಿಯೊಂದರಿಂದ ಪಾಠ ಕಲಿಯಬೇಕಂತೆ, ಹಾಗಾದಿದ್ದುದೇ ನಾನು ಬೆಲ್‌ಮಾರ್ ಬೀಚ್‌ನಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿಹೋಗಿ ಜೀವಂತ ವಾಪಾಸು ಬಂದಿದ್ದು!

***

೧೯೯೯ ರಲ್ಲಿ ನಾನು ಇನ್ನೂ ಕನ್ಸಲ್‌ಟಂಟ್ ಆಗಿ ಪ್ರುಡೆಂಟಿಯಲ್‌ನಲ್ಲಿ ಕೆಲಸ ಮಾಡುತ್ತಿದ್ದೆ, ಆಗ ನನ್ನ ಜೊತೆಯಿದ್ದ ಕನ್ನಡಿಗ ರೂಮ್‌ಮೇಟ್‌ಗಳಾದ ರಾಮಮೂರ್ತಿ, ರವಿ ಯೂ ಹಾಗೂ ಆಫೀಸಿನಲ್ಲಿ ಸ್ನೇಹಿತರಾದ ಕೆನ್, ಜೆನ್ನಿಫರ್, ರಾಬರ್ಟ್ ಹಾಗೂ ಮ್ಯಾನೇಜರ್ ಜ್ಯಾಕ್ ಅವರನ್ನೆಲ್ಲ ಜೀವಮಾನ ಪರ್ಯಂತ ಮರೆಯುವುದಿಲ್ಲ, ಆಗಿನ ದಿನಗಳಲ್ಲ ಬಹಳ ಒಳ್ಳೆಯ ದಿನಗಳು - ಏಕೆ ಹಾಗೆ ಹೇಳುತ್ತಿದ್ದೇನೆಂದರೆ, ಬೇಕಾದಷ್ಟು ಸಂಬಳ ಬರುತ್ತಿತ್ತು, ರೂಮ್‌ಮೇಟ್‌ಗಳ ದಸೆಯಿಂದ ಕಡಿಮೆ ಮನೆ ಬಾಡಿಗೆಯೂ ಹಾಗೂ ನನ್ನ ಸರಳ ಜೀವನಕ್ರಮದಿಂದ ಬಹಳ ಕಡಿಮೆ ಹಣವೂ ಖರ್ಚಾಗಿ ಬೇಕಾದಷ್ಟು ಹಣ ಬೇಡವೆಂದರೂ ಕೂಡಿಕೊಳ್ಳುತ್ತಿತ್ತು. ಆಗ ನಾನು ಹಗಲಿನ ಕೆಲಸ ಮುಗಿಸಿ ಎಷ್ಟೋ ಕಡೆ ರಾತ್ರಿ ಪಾಳಿಯಲ್ಲಿ ಮತ್ತೊಂದು ಪ್ರಾಜೆಕ್ಟಿನಲ್ಲಿ ಕೆಲವು ಕಡೆ ಕೆಲಸ ಮಾಡುತ್ತಿದ್ದುರಿಂದಲೂ, ನನ್ನ ಕಂಪನಿಯವರು ನನ್ನನ್ನು ಇಂಟರ್‌ವ್ಯೂವ್ ಮಾಡಲು ಬಳಸಿ ಮಾಡಿದ ಪ್ರತಿ ಇಂಟರ್‌ವ್ಯೂವ್‌ಗೆ ಇಷ್ಟು ಎಂದು ಹಣವನ್ನು ಕೊಡುತ್ತಿದ್ದುದರಿಂದಲೂ, ಹಾಗೂ ನನ್ನ ಸ್ನೇಹಿತರ ನೆಟ್‌ವರ್ಕ್‌ನಲ್ಲಿ ಅವರನ್ನು-ಇವರನ್ನು ರೆಫರ್ ಮಾಡಿದ್ದಕ್ಕೆ ರೆಫರಲ್ ಹಣವೆಂತಲು ಬಂದು ಸಾಕಷ್ಟು ಹಣ ಸಂಗ್ರಹಣೆಯಾಗುತ್ತಿತ್ತು. ಜೊತೆಯಲ್ಲಿ ಹೇಳಿ-ಕೇಳಿ ಸಿಂಗಲ್ ಬದುಕು, ಯಾರಿಗುಂಟು ಯಾರಿಗಿಲ್ಲ, ಅವು ಬಹಳ ಸ್ವೇಚ್ಚೆಯಿಂದ ಇರಬಹುದಾದ ದಿನಗಳಾಗಿದ್ದವು.

ಹೀಗೇ ಒಂದು ದಿನ ಇನ್ನೇನು ಮಾರ್ಚ್ ಮುಗಿದು ವಸಂತ ಋತು ಬಂದು ಹೊರಗೆಲ್ಲ ವಾತಾವರಣ ಮೈ ಛಳಿಯನ್ನು ಕಳೆದುಕೊಳ್ಳುತ್ತಿರುವಾಗ, ನನಗೆ ವರ್ಷಕ್ಕೆ ಆರು ಸಿಕ್ ಲೀವ್ ತೆಗೆದುಕೊಳ್ಳಬಹುದಾದ ಪ್ರಾವಿಜನ್ ಇರೋದರಿಂದ ಒಂದು ಶುಕ್ರವಾರವನ್ನು ರಜೆ ತೆಗೆದುಕೊಂಡು ಒಬ್ಬನೇ ಬೀಚ್‌ಗೆ ಹೋದರೆ ಹೇಗೆ ಎಂದು ಅನ್ನಿಸಿದ ತಕ್ಷಣವೇ ಗುರುವಾರ ಮಧ್ಯಾಹ್ನ ಮ್ಯಾನೇಜರ್ ಜಾಕ್‌ಗೆ 'ನನಗೆ ನಾಳೆ ಹುಷಾರಿರೋದಿಲ್ಲ!' ಎಂದು ಇ-ಮೈಲ್‌ನ್ನು ಗೀಚಿದೆ, ಜಾಕ್ ಆ ವಿಷಯವನ್ನು ಟೀಮಿನ ಎಲ್ಲರಿಗೂ ಕಳಿಸಿ ಅವರು ನನ್ನನ್ನು ತಮಾಷೆ ಮಾಡುತ್ತಿದ್ದಾಗ 'ನನ್ನ ಕಂಪನಿಗೆ ಮಾತ್ರ ಹೇಳಬೇಡಿ, ಏನು ಬೇಕಾದರೂ ಮಾಡಿ' ಎಂದು ತೋಡಿಕೊಂಡೆ.

ನಾನು ಆ ಶುಕ್ರವಾರ ಮಧ್ಯಾಹ್ನ ಮೂರು-ಮೂರೂವರೆ ಅಷ್ಟೊತ್ತಿಗೆ ಬೆಲ್‌ಮಾರ್ ಬೀಚಿಗೆ ಹೋದದಕ್ಕೆ ಹಲವಾರು ಕಾರಣಗಳಿದ್ದರೂ, ಮುಖ್ಯವಾಗಿ ನಾನು ಎಸ್.ಎಲ್. ಭೈರಪ್ಪನವರನ್ನೇ ದೂರೋದು! ನನ್ನ ಮ್ಯಾನೇಜರ್ ಜ್ಯಾಕ್ ಅಸಮಾನ್ಯ ಈಜುಗಾರ ಹಾಗೂ ಸ್ಕೀ ಮಾಡುವ ಮನುಷ್ಯ, ಅವನು ಬೇಸಿಗೆಯಲ್ಲಿ ಬೆಲ್‌ಮಾರ್‌ಗೆ ಬೇಕಾದಷ್ಟು ಸಾರಿ ಹೋಗಿ ಮನಪೂರ್ತಿ ಈಜಿ ಬರುತ್ತಿದ್ದ, ಛಳಿಗಾಲದಲ್ಲಿ ಬೀಚ್ ಪಟ್ರ್‍ಓಲ್ ಆಗಿ ಪೋಕೋನೋ ಬೆಟ್ಟಗಳಲ್ಲಿ ಹವ್ಯಾಸಿಯಾಗಿ ಕೆಲಸ ಮಾಡುತ್ತಿದ್ದವ. ಅವನು ತನ್ನ ಈಜಿನ ಹಾಗೂ ಸ್ಕೀ ಅನುಭವಗಳನ್ನು ಪದೇ-ಪದೇ ನಮ್ಮೊಡನೆ ಹಂಚಿಕೊಳ್ಳುತಿದ್ದುದರಿಂದ ಅವನ ದೆಸೆಯಿಂದಾಗಿ ನಾನು ಗಾರ್ಡನ್ ಸ್ಟೇಟ್ ಪಾರ್ಕ್ ವೇ ಯಲ್ಲಿ ಸಿಗುವ ಉಳಿದೆಲ್ಲ ಬೀಚುಗಳಲ್ಲಿ ಬೆಲ್‌ಮಾರ್ ಅನ್ನೇ ಆರಿಸಿಕೊಂಡೆ. ಭೈರಪ್ಪನವರೇ ಮುಖ್ಯ ಕಾರ್‍ಅಣ ಅಂದದ್ದು ಏಕೆಂದರೆ ನಾನು ಆಗಷ್ಟೇ ಬಿಡುಗಡೆ ಹೊಂದಿದ್ದ 'ಸಾರ್ಥ'ವನ್ನು ಅದಾಗಲೇ ಎರಡು ಸಾರಿ ಓದಿದ್ದರೂ ವಿಶ್ವಕರ್ಮ ಸ್ಥಪತಿಯ ಪಾತ್ರ ಚಿತ್ರಣ, ಮಂಡನ ಮಿಶ್ರರು ಯತಿಯೊಡನೆ ವಾದದಲ್ಲಿ ಸೋತ ಪ್ರಸಂಗ ಹಾಗೂ ನಾಗಭಟ್ಟನ ಥರಾವರಿ ಅವತಾರಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವ ಹಂಬಲ ಇವುಗಳೆಲ್ಲವನ್ನೂ ಅಜೆಂಡಾದಲ್ಲಿ ಇಟ್ಟುಕೊಂಡು ಒಂದು ನೋಟ್‌ಪ್ಯಾಡೂ, ಕೂಲರ್ ತುಂಬಾ ತರಾವರಿ ಜ್ಯೂಸು, ಚಿಪ್ಸು, ನೀರು, ಹಾಗು ಹಣ್ಣುಗಳನ್ನು ತುಂಬಿಕೊಂಡು, ಬೀಚ್ ಚೇರು, ಸನ್ ಸ್ಕ್ರೀನು ಲೋಷನ್, ಟವೆಲ್‌ಗಳು ಹಾಗೂ ನೀರಿಗಿಳಿಯಬಹುದಾದ ಈಜುಡುಗೆಗಳನ್ನು ತೆಗೆದುಕೊಂಡು ಮನೆಯಿಂದ ಒಬ್ಬನೇ ಹೊರಟೆ. ಮಧ್ಯಾಹ್ನವಾದ್ದರಿಂದ ಎಲ್ಲಿಯೂ ಯಾವ ತೊಂದರೆಯೂ ಆಗದೆ ನಾಲ್ಕು ಘಂಟೆಯ ಹತ್ತಿರ ಹತ್ತಿರವಾದರೂ ಸೂರ್ಯ ಸುಡುತ್ತಲಿದ್ದರೂ, ನಾನೊಬ್ಬನೆ ಒಂದು ಒಳ್ಳೆಯ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ಬೀಚಿಗೆ ಬಂದೆ. ಅಲ್ಲಲ್ಲಿ ಆಗಾಗ್ಗೆ ಸ್ವಲ್ಪ ಗಾಳಿಯಿತ್ತು, ಆದರೂ ಉಷ್ಣತೆ ಸುಮಾರು ಎಪ್ಪತ್ತು ಡಿಗ್ರಿ ಹತ್ತಿರ ಹತ್ತಿರ ಇದ್ದರೂ, ಶುಕ್ರವಾರ ಮಧ್ಯಾಹ್ನದ ಸಮಯವಾದರೂ ನನ್ನ ಕಾಣುವಷ್ಟು ದೂರ ಬೀಚಿನ ಎರಡೂ ಕಡೆಗಳಲ್ಲಿ ಯಾರೂ ಇರಲಿಲ್ಲ. ಯಾರು ಇದ್ದರೆ ಇರಲಿ, ಬಿಡಲಿ ಎಂದುಕೊಂಡು ಒಂದು ಸ್ಥಳವನ್ನು ಆರಿಸಿಕೊಂಡು ಅಲ್ಲಿ ನನ್ನ್ ಬೀಚು ಚೇರನ್ನು ಪ್ರತಿಷ್ಠಾಪಿಸಿ, ಮೈ ತುಂಬಾ ಸನ್ ಸ್ಕ್ರೀನನ್ನು ಹಚ್ಚಿಕೊಂಡು ಈಜುಡುಗೆಯಲ್ಲಿ ಕುಳಿತು, ತಲೆಗೊಂದು ಬೇಸ್ ಬಾಲ್ ಟೋಪಿ ಹಾಗೂ ಕಾರಿನಲ್ಲಿ ಡ್ರೈವ್ ಮಾಡಲು ಇಟ್ಟುಕೊಂಡ ಕಪ್ಪು ಕನ್ನಡಕವನ್ನು ಹಾಕಿಕೊಂಡು ಏನನ್ನೋ ಬರೆಯುತ್ತಾ ಕುಳಿತೆ. ಸ್ವಲ್ಪ ಹೊತ್ತು ಬರೆದು, ಮತ್ತು ಸ್ವಲ್ಪ ಹೊತ್ತು ಸಾರ್ಥವನ್ನು ಓದಿ ಹೀಗೆ ಒಂದು ಮೂವತ್ತು ನಲವತ್ತು ನಿಮಿಷಗಳಾಗಿರುವಾಗ ಒಮ್ಮೆ ನೀರಿಗಿಳಿದರೆ ಹೇಗೆ ಎನ್ನಿಸಿತೆಂದು ನಿಧಾನವಾಗಿ ನೀರಿನ ಕಡೆಗೆ ನಡೆಯತೊಡಗಿದೆ. ಅಲೆಗಳು ಕಾಲನ್ನು ಸೋಕಿದ ಕೂಡಲೇ ಹೊರಗಿನ ಉಷ್ಣತೆಗಿಂತ ನೀರಿನ ಉಷ್ಣತೆ ಕಡಿಮೆ ಇರುವುದು ಅರಿವಿಗೆ ಬಂದಿತಾದರೂ ಪ್ರತೀ ಸಾರಿ ಬೀಚಿಗೆ ಹೋದಾಗಲೂ ಮೊದಲ ಬಾರಿ ನೀರು ಮುಟ್ಟಿದಾಗ ಛಳಿ ಅನುಭವವಾಗೋದು ಸಹಜವೆಂದುಕೊಂಡು, ಪಾದ ತೋಯಿಸಿಕೊಂಡವನು, ಮೊಳಕಾಲುದ್ದಕ್ಕೂ, ಮೊಳಕಾಲು ಮುಳುಗಿಸಿಕೊಂಡವನು ಸೊಂಟದ ಮಟ್ಟಕ್ಕೂ ನಿಧಾನವಾಗಿ ಮುಂದೆ-ಮುಂದೆ ಹೋಗತೊಡಗಿದೆ. ಬಾಬರೀ ಮಸೀದಿ ಉರುಳಿದ ವರ್ಷ ನಾನು ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ ಒಂದು ತಿಂಗಳು ಪ್ರತಿದಿನವೂ ತಪ್ಪದೇ ಕಲಿತದ್ದರಿಂದ ನೀರೆಂದರೆ ಮೊದಲಿದ್ದಷ್ಟು ಭಯವೆನೂ ಇರಲಿಲ್ಲ, ಆದರೆ ಈಜುಕೊಳಕ್ಕೂ, ಮಹಾಸಾಗರದ ಅಲೆಗಳ ಹೊಡೆತಕ್ಕೂ ಬಹಳ ವ್ಯತ್ಯಾಸವಿದೆಯೆನ್ನೋದನ್ನು ನಾನು ಕೆಟ್ಟ ಅನುಭವದ ಮೂಲಕ ಕಲಿತಿರೋದರಿಂದ ಹೇಗೆ ತಾನೆ ಮರೆಯಲಿಕ್ಕೆ ಸಾಧ್ಯ?

ಹೀಗೆ ನಿಧಾನವಾಗಿ ನೀರಿನಲ್ಲಿ ಮುಂದೆ-ಮುಂದೆ ಹೋಗುತ್ತಿದ್ದವನಿಗೆ ದಡದಲ್ಲಿ ಇಟ್ಟಿದ್ದ ಕುರ್ಚಿ, ಹರವಿದ್ದ ಟವಲ್‌ಗಳು ದೀಪಸ್ತಂಭದಂತೆ ಡೈರೆಕ್ಷನ್ ನೀಡುತ್ತಿದ್ದವು, ಆದರೂ ಲಘುವಾಗಿ ಗಾಳಿ ಬೀಸುತ್ತಿದ್ದುರಿಂದ ಮುಂದೆ ಹೋಗಿ ಹಿಂದೆ ಬರುವ ಅಲೆಗಳ ರಭಸಕ್ಕೆ ನಾನು ಕ್ರಮೇಣ ಡೈಯಾಗನಲಿ ಶಿಫ್ಟ್ ಆಗುತ್ತಿದ್ದದ್ದು ನನ್ನ ಗಮನಕ್ಕೆ ಬರುವಾಗ ತುಂಬ ತಡವಾಗಿ ಹೋಗಿತ್ತು. ಇದ್ದಕಿದ್ದ ಹಾಗೇ ಅಲೆಯೊಂದು ಬಂದು ಅಪ್ಪಳಿಸಿತು, ನಾನು ನೀರಿನಲ್ಲಿ ಮುಳುಗಿ ಮತ್ತೆ ಮೇಲೆ ಎದ್ದೆ, ಆದರೆ ಸುತ್ತಲೂ ಎಲ್ಲವೂ ಬ್ರೈಟ್ ಆಗಿ ಕಾಣತೊಡಗಿತು, ಅದಾದ ಸ್ವಲ್ಪ ಹೊತ್ತಿನ ನಂತರವೇ ನನ್ನ ಕಪ್ಪು ಕನ್ನಡಕ ನೀರಿನಲ್ಲಿ ತೊಳೆದು ಹೋದದ್ದು ನನ್ನ ಅರಿವಿಗೆ ಬಂದಿದ್ದು! ನಾನು ಬೇಕೆಂದು ಕೇಳಿರದ ಡೈಯಾಗನಲ್ ಶಿಪ್ಟ್ ನನ್ನನ್ನು ನಿಧಾನವಾಗಿ ಆಳಕ್ಕೆ ಕರೆದುಕೊಂಡು ಹೋಗಿತ್ತು, ಮತ್ತೆ ಮುಂದಿನ ಅಲೆಯೊಂದು ಬಂದ ಹೊಡೆತಕ್ಕೆ ನನಗೆ ನೀರಿನಲ್ಲಿ ನೆಲದ ಆಸರೆ ತಪ್ಪಿ ಹೋಗಿತ್ತು, ನೆಲದ ಆಸರೆ ತಪ್ಪಿದ ತಕ್ಷಣ ನನ್ನ ಅಸ್ತಿತ್ವ ಪದೇ-ಪದೇ ಬಂದು ಹೊಡೆದು ಮತ್ತು ಅಷ್ಟೇ ಬಲದಿಂದ ಹಿಂದೆ ತಳ್ಳಿಕೊಂಡು ಹೋಗುತ್ತಿದ್ದ ಅಲೆಗಳ ಕೃಪೆಗೆ ಒಳಗಾಯಿತು. ನನ್ನ ಪುಟ್ಟ ತಲೆಗೆ ಪರಿಸ್ಥಿತಿ ಅರಿವಿಗೆ ಬರುವಾಗ ಎಲ್ಲವೂ ಕೈ ಮೀರಿ ಹೋಗಿತ್ತು, ಜೀವ ಭಯ ಬಹಳವಾಗಿ ಕಾಡತೊಡಗಿತ್ತು, ಆ ದಿನ ಕುಡಿದಷ್ಟು ಉಪ್ಪು ನೀರನ್ನು ನಾನು ಜೀವಮಾನದಲ್ಲಿ ಎಲ್ಲೂ ಕುಡಿದಿಲ್ಲ! ನಾನು ಮುಂದೆ (ದಡದ ಕಡೆಗೆ) ಬರಬೇಕೆಂಬ ಮಹತ್ವಾಕಾಂಕ್ಷೆಯಿಂದ ಎಷ್ಟೇ ಕಷ್ಟ ಪಟ್ಟು ಈಜಿದರೂ, ಹತ್ತು ಆಡಿ ಮುಂದೆ ಬಂದರೆ ಹನ್ನೊಂದು ಅಡಿ ಹಿಂದೆ ಹೋಗುತ್ತಿದ್ದೆ, ಹೀಗೆ ಒಂದೈದು ನಿಮಿಷಗಳಾಗಿದ್ದೇ ತಡ ಕಣ್ಣುರಿ ಬಂದಿತು, ಹೊಟ್ಟೆ ತೊಳಸ ತೊಡಗಿತು, ಕೈ-ಕಾಲುಗಳು ಪ್ರಯತ್ನಕ್ಕಿಂತಲೂ ಜೀವ ಭಯದಿಂದ ಸೋತು ಹೋದವು, ಕೂಗೋಣವೆಂದರೆ ಅಲ್ಲಿ ಯಾರೂ ಇಲ್ಲ, ಕೂಗಬೇಕಂದರೂ ಧ್ವನಿಯೂ ಬರಲಿಲ್ಲ. ಕೊನೆಗೆ ಸಾಗರ ದೇವ(ವಿ)ಗೆ ಏನನ್ನಿಸಿತೋ ಏನೋ, ಬಡಪಾಯಿ ಬದುಕಿಕೊಳ್ಳಲಿ ಎಂದು ಗಾಳಿ ಸ್ವಲ್ಪ ಹಗುರವಾದೊಡನೆ ನಾನು ಮತ್ತೆ-ಮತ್ತೆ ಪ್ರಯತ್ನ ಮಾಡಿ ಕೊನೆಗೂ ದಡವನ್ನು ತೆವಳುತ್ತಲೇ ತಲುಪಿ ಬದುಕಿದೆಯಾ ಬಡಜೀವವೇ ಎಂದುಕೊಂಡೆ!

ಸ್ವಲ್ಪ ಹೊತ್ತು ತೆವಳಿದವನು, ಮತ್ತೆ ನಡೆದು ನಿಧಾನವಾಗಿ ನನ್ನ ಕುರ್ಚಿ ಇಟ್ಟ ಸ್ಥಳದಲ್ಲಿ ಬಂದು ನೋಡಿದರೆ ಗಾಳಿ ಬೀಸಿದ್ದಕ್ಕೆ ನನ್ನ ಕುರ್ಚಿ ಸುಮಾರಾಗಿ ಮರಳಿನಲ್ಲಿ ಮುಚ್ಚಿ ಹೋಗಿದ್ದು ಕಂಡು ಬಂತು, ನಿಧಾನವಾಗಿ ಎಲ್ಲ ಸಾಮಾನುಗಳನ್ನು ಅದು ಹೇಗೆ ತುಂಬಿದೆನೋ ಬಿಟ್ಟೆನೋ, ಅಲ್ಲಿಂದ ಆದಷ್ಟು ಬೇಗ ಜಾಗ ಖಾಲಿ ಮಾಡಬೇಕೆಂದು ಲಗುಬಗೆಯಿಂದ ಮನೆಯ ದಾರಿ ಹಿಡಿದೆ, ನನಗಾಶ್ಚರ್ಯವಾಗುವಂತೆ ನಾನು ಎಷ್ಟೊಂದು ಉಪ್ಪು ನೀರನ್ನು ಆದಿನ ಕುಡಿದಿದ್ದರೂ ಒಂದು ಹನಿಯನ್ನೂ ಕಕ್ಕಿಕೊಳ್ಳಲಿಲ್ಲ!

***

ಅಂದಿನಿಂದ ಇಂದಿನವರೆಗೆ ಆಳ ಗೊತ್ತಿರದ ನೀರಿಗೆ ನಾನು ಇಳಿಯುವುದಿಲ್ಲ, ಎಲ್ಲಿ ಬೇಕಾದಲ್ಲಿ ಭೈರಪ್ಪನನ್ನು ಓದುವುದಿಲ್ಲ ಹಾಗೂ ನಾನು ಯಾವ ದೇಶದಲ್ಲಿ ಹುಟ್ಟಿಲ್ಲವೋ ಅಲ್ಲಿ ಸಾಯಬಯಸುವುದಿಲ್ಲ!

7 comments:

Shrilatha Puthi said...

ಓ ನೀವೂ ನಮ್ಮದೇ ಪಕ್ಷ, ಅದೇ SLB Fan Association!! ನಾನು SLBಯವರ ಕಟ್ಟಾ ಅಭಿಮಾನಿ. ನೀವು ಗಮನಿಸಿರಬಹುದು, ಅವರ ಕಾದಂಬರಿಗಳಲ್ಲಿ ಮುಖ್ಯ ಗಂಡು ಪಾತ್ರಗಳು ಈಜುವ ವಿವರ ತುಂಬಾ ಸಲ ಬರುತ್ತದೆ. (ಪರ್ವದಲ್ಲಿ ಕರ್ಣ ಬೆಳಗ್ಗೆ ಬೇಗ ಎದ್ದು ನದಿಗೆ ಸ್ನಾನ ಮಾಡಲು ಹೋಗುವುದು, ಅಲ್ಲಿನ ಸ್ನಾನಘಟ್ಟಗಳ ವರ್ಣನೆ, ಎಲ್ಲಾ ತುಂಬಾ ಚೆನ್ನಾಗಿದೆ.)

ನಾನಿನ್ನೂ 'ಸಾರ್ಥ' ಓದಿಲ್ಲ, ಈ ಸಲ ಬೆಂಗಳೂರಿಗೆ ಹೋದಾಗ ತಗೊಂಡು ಬರಬೇಕು.

ಮತ್ತೆ ನಾನೂ SLB novels ಓದುವಾಗ pen/pencil ಹತ್ತಿರ ಇಟ್ಟುಕೊಂಡು ತುಂಬ ಇಷ್ಟವಾದ ವಾಕ್ಯಗಳಿಗೆ underline ಮಾಡುತ್ತೇನೆ.

Anonymous said...

'ಪ್ರಬುದ್ಧತೆ'ಯ ಇನ್ನೊಂದು ಸೋಪಾನವನ್ನು ಹತ್ತಿರುವ ಬರೆಹ. ಹೀಗೆಯೇ ಮುಂದುವರೆಸಿ.

Satish said...

ಶ್ರೀಲತಾ ಅವರೇ,

ಹೌದು ಗಮನಿಸಿದ್ದೇನೆ, ಯಾರೋ ಒಬ್ಬರು ಭೈರಪ್ಪನವರನ್ನು ಈ ಬಗ್ಗೆ ಬಾಂಬೆಯಲ್ಲೋ ಮತ್ತೆಲ್ಲೋ 'ಪ್ರಶ್ನೋತ್ತರ' ಸಂದರ್ಭದಲ್ಲಿ ಕೇಳಿದ್ದರು ಎಂದೂ ನೆನಪು, ಆದರೆ ಸರಿಯಾಗಿ ಗೊತ್ತಿಲ್ಲ.

ಆದಷ್ಟು ಬೇಗ 'ಸಾರ್ಥ' ಓದಿಬಿಡಿ, ಕೆಲವರು 'ಗೃಹಭಂಗ', 'ಪರ್ವ'ದಷ್ಟು ಈ ಕೃತಿಯನ್ನು ಮೆಚ್ಚಿಕೊಂಡಿರಲಿಕ್ಕಿಲ್ಲ, ಆದರೂ ಇದರಲ್ಲಿ ಬರುವ ಕೆಲವು ಅಂಶಗಳ ಬಗ್ಗೆ ನಾನು ಸ್ವಲ್ಪ ತಲೆಕೆಡಿಸಿಕೊಂಡಿದ್ದೇನೆ. ನೋಡಲಿಕ್ಕೆ ಸಣ್ಣ ಪುಸ್ತಕವೆಂದು ಹೋದಲ್ಲೆಲ್ಲಾ ತೆಗೆದುಕೊಂಡು ಹೋಗುತ್ತಿದ್ದರೂ ಕೆಲವು ದೊಡ್ಡ ಪುಸ್ತಕಗಳ (ಉದಾಹರಣೆಗೆ 'ಮಂದ್ರ') ಮೇಲೆ ವ್ಯಯಿಸಿದ ಸಮಯಕ್ಕಿಂತಲೂ ಹೆಚ್ಚು ಈ ಪುಸ್ತಕವನ್ನು ಓದುವುದರಲ್ಲಿ ಕಳೆದಿದ್ದೇನೆ.

Satish said...

ಜೋಶಿ ಅವರೇ,

ಪ್ರಯತ್ನಿಸುತ್ತೇನೆ, 'ಎಲ್ಲಿಯವರೆಗೆ ಬರುತ್ತೋ ನೋಡೋಣ'.
ತುಂಬಾ ಥ್ಯಾಂಕ್ಸ್!

Anonymous said...

ಶ್ರೀಲತಾ ಅವರೇ, ನನ್ನನ್ನೂ ನಿಮ್ಮ "SLB Fan Association" ಗೆ ಸೇರಿಸಿಕೊಳ್ಳಿ :) ಬೈರಪ್ಪನವರ ಕಾದಂಬರಿಗಳಲ್ಲಿ, ಗಂಡು ಪಾತ್ರಗಳಷ್ಟೇ ಅಲ್ಲ, ಹೆಣ್ಣುಪಾತ್ರವೂ ಈಜಿಗಿಳಿಯುತ್ತದೆ. ಎಲ್ಲಿ ಅಂತ ಗೊತ್ತಾಗಲಿಲ್ವಾ? - ತಬ್ಬಲಿ ನೀನಾದೆ ಮಗನೆ - ಕಾಳಿಂಗನ ವಿದೇಶಿ ಹೆಂಡತಿ ದೇವಾಲಯದ ಕೊಳದಲ್ಲಿ ಈಜಿ, ಪೂಜಾರಿಗೆ ( ಚಿತ್ರದಲ್ಲಿ ನಾಸಿರುದ್ಧೀನ್ ಶಾ :) ) ಗೆ ಕಿರಿಕಿರಿ ಉಂಟು ಮಾಡುತ್ತಾಳೆ.

ಅಂತರಂಗಿಗೆ, "ಸಾರ್ಥ"ವನ್ನೂ ನಾನೂ ಓದಿಲ್ಲ. ನನಗೆ ನೀವು ಕಳಿಸಬೇಕಾದ ಪುಸ್ತಕಗಳ ಪಟ್ಟಿ ಬೆಳೆಯುತ್ತಾ ಹೋದೀತು,ಎಚ್ಚರಿಕೆ!!

Shrilatha Puthi said...

ಶ್.. association ಬಗ್ಗೆ ಜೋರಾಗಿ ಮಾತಾಡ್ಬೇಡಿ, URA ಕೇಳಿಸ್ಕೊಂಡ್ರೆ ಉರಿದುಬಿದ್ದಾರು.. :-)

ಹೌದು, 'ತಬ್ಬಲಿಯು ನೀನಾದೆ ಮಗನೆ' ಈಗ ನೆನಪಾಯ್ತು, ನಾನು ಅದನ್ನು ಓದಿದ್ದು ಒಂದೇ ಸಾರಿ, ಅದೂ ಬಹಳ ಹಿಂದೆ. ಓದಿ ಮುಗ್ಸಿದ್ಮೇಲೆ ಎಷ್ಟು tragic feeling ಆಗಿತ್ತಂದ್ರೆ ಇನ್ನೊಂದು ಸಲ ಈ ಪುಸ್ತಕ ಓದಲ್ಲ ಅಂತ decide ಮಾಡಿದ್ದೆ. ಈಗ ನನ್ನ 'to buy list'ಗೆ ಇದೂ ಸೇರುತ್ತೆ.

Sarathy said...

ಅಂತರಂಗಿಗಳೇ, ನೀವು ಸಾವಿನ ಕದ ತಟ್ಟಿ ಬಂದ ಘಟನೆಗಳನ್ನು ಬಹಳ ಮನೋಜ್ಞವಾಗಿ ಬರೆದಿದ್ದೀರಾ. ಪುರುಸೊತ್ತಿಲ್ಲದ ಕಾರಣಗಳೋ ಅಥವಾ ತಾಳ್ಮೆಯಿಲ್ಲದ ಕಾರಣವೋ ಏನೋ ನಾನು ಉದ್ದುದ್ದ ಲೇಖನಗಳನ್ನು ಹೆಚ್ಚಾಗಿ ಓದುವುದಕ್ಕೆ ಹೋಗುವುದಿಲ್ಲ. ಆದರೆ ನಿಮ್ಮ ಈ ಲೇಖನ ನನ್ನನ್ನು ಆರಂಭದಿಂದ ಅಂತ್ಯದವರೆಗೆ ಸೂಜಿಗಲ್ಲಿನಂತೆ ಹಿಡಿದಿಟ್ಟಿತು. ಏಕೆಂದರೆ ಇಂತಹ ಘಟನೆಗಳು ನಮ್ಮ ಜೀವನದಲ್ಲೂ ದೊಡ್ಡದಲ್ಲದಿದ್ದರೂ ಸಣ್ಣಪುಟ್ಟದಾಗಿ ಸಂಭವಿಸಿರುತ್ತವೆ.

ಒಟ್ಟಿನಲ್ಲಿ ಸುಲಲಿತವಾದ ಸಾಗುವ ನಿಮ್ಮ ನಿರೂಪಣೆಯು ಲೇಖನವನ್ನು ಹಿಡಿದಿಟ್ಟಿದೆ. ಧನ್ಯವಾದಗಳು..