Wednesday, October 31, 2007

ಒಂದು ವ್ಯವಸ್ಥೆಯ ಕುರಿ

ಅಮೇರಿಕದಲ್ಲಿ ಎಲ್ಲರೂ ಅದೆಷ್ಟು ಚೆನ್ನಾಗಿ ರೂಲ್ಸುಗಳನ್ನು ಫಾಲ್ಲೋ ಮಾಡ್ತಾರೆ, ಆದರೆ ಭಾರತದಲ್ಲಿ ಹಾಗೇಕೆ ಮಾಡೋಲ್ಲ ಎನ್ನೋ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಒಂದಲ್ಲ ಒಂದು ಸಾರಿ ಬಂದೇ ಬಂದಿರುತ್ತೆ. ಹಾಗೆ ಆಗೋದಕ್ಕೆ ಏನು ಕಾರಣ, ಪ್ರಪಂಚದಲ್ಲಿರೋ ಜನರೆಲ್ಲ ಒಂದೇ ಅಥವಾ ಬೇರೆ-ಬೇರೆ ಎಂದು ವಾದ ಮಾಡಬಹುದೋ ಅಥವಾ ಇಲ್ಲಿನ ವ್ಯವಸ್ಥೆಯ ಬಗ್ಗೆ ಹೇಳಬಹುದೋ ಗೊತ್ತಿಲ್ಲ.

ಅಮೇರಿಕದ ವ್ಯವಸ್ಥೆ ಕಂಪ್ಯೂಟರ್ ನೆಟ್‌ವರ್ಕ್, ಡೇಟಾಬೇಸುಗಳಿಂದ ತುಂಬಿರುವಂಥ ಒಂದು ಜಾಲ. ಈ ಜಾಲದಲ್ಲಿ ನಮ್ಮನ್ನು ಸಿಕ್ಕಿ ಹಾಕಿಕೊಳ್ಳುವ ಹಾಗೆ ಮಾಡುವ ಬಂಧನಗಳು ಹಲವಾರು - ಅವುಗಳಲ್ಲಿ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್, ಡ್ರೈವರ್ಸ್ ಲೈಸನ್ಸ್, ಕ್ರೆಡಿಟ್ ಕಾರ್ಡ್, ಟ್ಯಾಕ್ಸ್ ಐಡಿ, ಬ್ಯಾಂಕ್ ಅಕೌಂಟುಗಳು ಇತ್ಯಾದಿ. ಇಲ್ಲಿಗೆ ಬಂದು ಜೀವಿಸುವವರಲ್ಲಿ ಎರಡು ಯಾವಾಗಲೂ ಇದ್ದೇ ಇರುತ್ತವೆ, ಒಂದು ಸಾಲ ಮತ್ತೊಂದು ಥರಾವರಿ ಕಾರ್ಡುಗಳು. ಹೀಗೆ ನಿಮಗೆ ಬೇಕೋ ಬೇಡವೋ ಜಾಲದಲ್ಲಿ ಮೊದಲ ದಿನದಿಂದಲೇ ಗೊತ್ತಿರದೇ ಸೇರಿಕೊಳ್ಳುತ್ತೀರಿ. ಭಾರತದಲ್ಲಿ ಎಷ್ಟೋ ಜನ ಸಂಸಾರ ಬಂಧನವನ್ನು ಬಿಟ್ಟು ಯೋಗಿಗಳಾಗಿ ಹೇಳಲೂ ಹೆಸರೂ ಇಲ್ಲದೇ ಯಾವುದೋ ನದಿ ತೀರದಲ್ಲಿ, ತಪ್ಪಲಿನಲ್ಲಿ ಇವತ್ತಿಗೂ ಬದುಕೋದಿಲ್ಲವೇ? ಹಾಗೋಗೋದು ಇಲ್ಲಿ ಹೋಮ್‌ಲೆಸ್ ಜನರಿಗೆ ಮಾತ್ರ (ಅವರಿಗೋ ಒಂದೆರಡು ಐಡಿ ಗಳಾದರೂ ಇರುತ್ತವೆ).

ಈ ವ್ಯವಸ್ಥೆ - ಕಾರ್ಡು, ಐಡಿ ಗಳಿಂದ ಕೂಡಿದ ಜಾಲ - ಇದೇ ನಿಮ್ಮನ್ನು ಕಟ್ಟಿ ಹಾಕುವುದು. ಅವುಗಳ ತೂಕ ಎಷ್ಟರ ಮಟ್ಟಿಗೆ ಇರುತ್ತದೆಯೆಂದರೆ ಭಾರತದಲ್ಲಿದ್ದರೆ ಹತ್ತು ಲಕ್ಷ ಜನ್ಮಗಳ ನಂತರವಾದರೂ ಮೋಕ್ಷ ದೊರಕೀತು, ಆದರೆ ಇಲ್ಲಿ ಅದಕ್ಕೂ ಆಸ್ಪದವಿಲ್ಲ. ನನ್ನ ಪ್ರಕಾರ ಅಮೇರಿಕದಲ್ಲಿರುವ ಆತ್ಮಗಳಿಗೆ ಮೋಕ್ಷವೆಂಬುದೇ ಇಲ್ಲ!

***
ನಿಮ್ಮ ಟೆಲಿಫೋನ್ ಸಂಪರ್ಕದಿಂದ ಹಿಡಿದು ಕ್ರೆಡಿಟ್ ಕಾರ್ಡುಗಳವರೆಗೆ, ಟ್ಯಾಕ್ಸ್ ಕಟ್ಟುವುದರಿಂದ ಹಿಡಿದು ನಿಮ್ಮ ಹೆಲ್ತ್ ಇನ್ಷೂರೆನ್ಸ್‌ವರೆಗೆ ಪ್ರತಿಯೊಂದಕ್ಕೂ ನೀವು ಒಂದು ವ್ಯವಸ್ಥೆಗೆ ತಲೆ ಬಾಗಲೇ ಬೇಕು. ನಿಮ್ಮ ಜೀವನದ ಅತ್ತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೂ ಈ ವ್ಯವಸ್ಥೆ ನಿಮ್ಮ ಬೆನ್ನ ಹಿಂದೆ ಬಿದ್ದಿರುತ್ತದೆ. ಉದಾಹರಣೆಗೆ, ಭಾರತದಲ್ಲಿ ಮದುವೆಯಾಗುವವರೆಲ್ಲರೂ, ಹುಟ್ಟಿದ ಮಕ್ಕಳೆಲ್ಲರನ್ನೂ ಕಡ್ಡಾಯವಾಗಿ ನೋಂದಾಯಿಸಲೇ ಬೇಕು ಎಂಬ ಕಾನೂನೂ ಇಲ್ಲ, ಹಾಗೆ ಮಾಡದೇ ಇರುವುದರಿಂದಾಗುವ ಪರಿಣಾಮಗಳೂ ಅಷ್ಟೇನು ದೊಡ್ಡದಲ್ಲ. ಆದರೆ ಇಲ್ಲಿ ಹುಟ್ಟುವ ಮಗುವಿಗೆ ಆಸ್ಪತ್ರೆಯವರೇ ಹೆಸರನ್ನು ನೋಂದಾಯಿಸಿ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್ ಅನ್ನು ತೆಗೆದುಕೊಡುತ್ತಾರೆ, ಜೊತೆಗೆ ಜನ್ಮ ಪ್ರಮಾಣ ಪತ್ರವೂ ದೊರಕಿಸಿಕೊಳ್ಳಬೇಕಾದುದು ಅನಿವಾರ್ಯ.

ಕ್ರೆಡಿಟ್ ಕಾರ್ಡ್ ಬಿಲ್ಲ್ ಅನ್ನು ಮೂವತ್ತು ದಿನಗಳ ಒಳಗೆ ಕೊಡದೇ ಹೋದರೆ ದಂಡ ವಿಧಿಸಲಾಗುತ್ತದೆ, ಅವರವರ ಜಾತಕಗಳನ್ನು ಜಾಗರೂಕತೆಯಿಂದ ಕಾಪಾಡಿಕೊಂಡು ಆಗಾಗ್ಗೆ ಅಪ್‌ಡೇಟ್ ಮಾಡುವ ಕ್ರೆಡಿಟ್ ರೇಟಿಂಗ್‌ಗಳನ್ನು ಕಾಯ್ದುಕೊಂಡು ವರದಿ ಒಪ್ಪಿಸುವ ಸಂಸ್ಥೆಗಳಿಗೆ ನಿಮ್ಮ ತಪ್ಪನ್ನು ತೋರಿಸಿ ನಿಮ್ಮ "ಒಳ್ಳೆಯ ದಾಖಲೆಗೆ" ಮಸಿ ಬಳಿಯಲಾಗುತ್ತದೆ. ಮುಂದೆ ಹುಟ್ಟುವ ಲೋನ್‌ಗಳಿಗೆ ಹೆಚ್ಚು ಬಡ್ಡಿ ದರವನ್ನು ಕೊಡಬೇಕಾಗಬಹುದು. ಹಾಗೆಯೇ ನಿಮ್ಮ ಮನೆಗೆ ಬಂದು ಬೀಳುವ ಟ್ರಾಫಿಕ್ ಅಥವಾ ಪಾರ್ಕಿಂಗ್ ವಯಲೇಷನ್ ಟಿಕೇಟುಗಳ ಹಿಂದೆ ಅಥವಾ ಕೆಳಗೆ ನೀವು ಸರಿಯಾದ ಸಮಯಕ್ಕೆ ದಂಡ ಕಟ್ಟದಿದ್ದಲ್ಲಿ ನಿಮ್ಮನ್ನು ಅರೆಷ್ಟು ಮಾಡಬಹುದು ಅಥವಾ ನಿಮ್ಮ ಡ್ರೈವಿಂಗ್ ಪ್ರಿವಿಲೇಜನ್ ತೆಗೆದು ಹಾಕಬಹುದು ಎಂದು ಬರೆದಿರುತ್ತದೆ. ಇವು ಕೇವಲ ಸ್ಯಾಂಪಲ್ಲ್ ಅಷ್ಟೇ - ಈ ಸಾಲಿಗೆ ಸೇರಬೇಕಾದವುಗಳು ಅನೇಕಾನೇಕ ಇವೆ. ಇಂಥ ಒಂದು ವ್ಯವಸ್ಥೆಯಲ್ಲಿ ಯಾರು ತಾನೇ ಸರಿಯಾಗಿ ನಡೆದುಕೊಳ್ಳದೇ ಇರುವುದು ಸಾಧ್ಯ? ಬರೀ ರೂಲ್ಸ್‌ಗಳು ಇದ್ದರಷ್ಟೇ ಸಾಲದು, ಅವುಗಳನ್ನು ಇಂಪ್ಲಿಮೆಂಟ್ ಮಾಡುವ ಶುದ್ಧ ವ್ಯವಸ್ಥೆಯೂ ಇರಬೇಕು ಎನ್ನುವುದನ್ನು ನಾನೂ ಒಂದು ಕಾಲದಲ್ಲಿ ಬೆನ್ನು ತಟ್ಟುತ್ತಿದ್ದೆ, ಆದರೆ ಈಗ ಅದು ಹರ್ಯಾಸ್‌ಮೆಂಟ್ ಆಗಿ ತೋರುತ್ತದೆ.

ಇಲ್ಲಿನ ಒಂದು ದೊಡ್ಡ ಬ್ಯಾಂಕ್ ಒಂದರಲ್ಲಿ ಅವರು ಮಾಡಿದ ತಪ್ಪಿನ ಸಲುವಾಗಿ ನನ್ನ ಯಾವತ್ತೂ ಉಪಯೋಗಿಸದ ಕ್ರೆಡಿಟ್ ಕಾರ್ಡ್ ಒಂದಕ್ಕೆ $1.50 ಚಾರ್ಜ್ ಮಾಡಿಕೊಂಡಿದ್ದರು. ನಾನು ಬ್ಯಾಂಕಿನ ಕಷ್ಟಮರ್ ಸರ್ವೀಸ್‌ಗೆ ಫೋನ್ ಮಾಡಿ ಹತ್ತು-ಹದಿನೈದು ನಿಮಿಷಗಳ ಮಾತುಕಥೆಯ ನಂತರ ಆ ತುದಿಯಲ್ಲಿದ್ದ ಲಲನಾಮಣಿ ’ಆಗಲಿ ಸರ್, ಎಲ್ಲ ಸರಿ ಹೋಗುತ್ತದೆ’ ಎಂದ ಮಾತ್ರಕ್ಕೆ ಅದು ಸರಿ ಎಂದು ನಂಬಿಕೊಂಡು ಸುಮ್ಮನಿದ್ದೆ. ಆದರೆ ಇಪ್ಪತ್ತೈದು ದಿನಗಳ ಬಳಿಕ ನನಗೊಂದು ಬಿಲ್ ಬಂತು, ಅದರಲ್ಲಿ ಬ್ಯಾಲೆನ್ಸ್ $1.50 ಇನ್ನೂ ಹಾಗೇ ಇದೆ! ಇನ್ನೆರಡು ದಿನಗಳಲ್ಲಿ ಕಟ್ಟದಿದ್ದರೆ 148% (no kidding) ಬಡ್ಡಿ ಹಾಕುತ್ತೇವೆ ಎಂಬ ಹೇಳಿಕೆ ಬೇರೆ. ಒಡನೆಯೇ ನನಗೆ ಇನ್ನೇನನ್ನೂ ಮಾಡಲು ತೋಚದೆ, ಕೂಡಲೇ ಲಾಗಿನ್ ಆಗಿ ಒಂದೂವರೆ ಡಾಲರ್ ಅನ್ನು ಕಟ್ಟಿದೆ, ಎಲ್ಲವೂ ಸರಿ ಹೋಯಿತು. ನಾನು ಬ್ಯಾಂಕಿಗೆ ಹೋಗಿ (ಅರ್ಧ ದಿನದ ಕೆಲಸ), ಅಥವಾ ಕಷ್ಟಮರ್ ಸರ್ವೀಸ್ ಅನ್ನು ಮತ್ತೆ ಸಂಪರ್ಕಿಸಿ (ಅರ್ಧ ಘಂಟೆಯ ಕೆಲಸ) ’ಇದು ನಿಮ್ಮದೇ ತಪ್ಪು, ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ’ ಎಂದು ಕೂಗಬಹುದಿತ್ತು. ಆ ಕಡೆಯಲ್ಲಿರುವ ಮತ್ತಿನ್ಯಾವುದೋ ಕಷ್ಟಮರ್ ಸರ್ವೀಸ್ ರೆಪ್ರೆಸೆಂಟೇಟಿವ್‌ಗೆ ನನ್ನ ಮೇಲೆ ಕರುಣೆ ಇದೆ ಎಂದುಕೊಳ್ಳಲೇ? ಆಕೆಗೆ ಬೈದರೆ ನಾವೇ ಮೂರ್ಖರು - she has nothing to lose - ನಾವು ಇಲ್ಲಿ ಒಂದು ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೇವೆಯೇ ವಿನಾ ಆಕೆಯ ವಿರುದ್ಧವಲ್ಲ. ಆಕೆಗೆ ನೀವು ಒರಟಾಗಿ ನಡೆದುಕೊಂಡರೆ ಆಕೆ ಕೆಲಸ ಮಾಡುವುದೇ ಇಲ್ಲ, ಏನು ಮಾಡುತ್ತೀರಿ? (ಹಿಂದೆ ದೊಡ್ಡ ಬ್ಯಾಂಕ್ ಒಂದರಲ್ಲಿ ಹೀಗೆ ನನಗೆ ಅನುಭವವೂ ಆಗಿದೆ, ಅಲ್ಲಿನ ಮ್ಯಾನೇಜರುಗಳು ಅಪಾಲಜಿ ಪತ್ರವನ್ನು ಕಳಿಸುವ ಮಟ್ಟಿಗೆ). So, ಪುರುಸೊತ್ತಿಲ್ಲದ ನಾನು ಇತ್ತೀಚೆಗೆ - pick your battles ಅಂಥಾರಲ್ಲ ಹಾಗೆ ಮೆತ್ತಗಾಗಿ ಹೋಗಿದ್ದೇನೆ. ನನ್ನ ಬಳಿ ಅರ್ಧ ದಿನವಿರಲಿ, ಅರ್ಧ ಘಂಟೆಯೂ ಇಲ್ಲ ಇವರ ವಿರುದ್ಧ ಹೋರಾಡಲು ಅದಕ್ಕೋಸ್ಕರವೇ ಒಂದೂವರೆ ಡಾಲರನ್ನು ದಾನ ಮಾಡಿದ್ದು.

ಇಲ್ಲಿ ಚಿಪ್ಸ್ ಮಾಡಿ ಮಾರುವುದರಿಂದ ಹಿಡಿದು ಸಗಣಿ ಮಾರುವವರ ವರೆಗೆ ಎಲ್ಲರೂ ಒಂದು ಕಾರ್ಪೋರೇಷನ್ನುಗಳು, ಈ ಕಾರ್ಪೋರೇಷನ್ನುಗಳ ಬೆನ್ನೆಲುಬಾಗಿ "ವ್ಯವಸ್ಥೆ"ಗಳಿವೆ, ಪ್ರಾಸೆಸ್ಸುಗಳಿವೆ. ಕಾರ್ಪೋರೇಷನ್ನಿನಲ್ಲಿ ಇಬ್ಬರೇ ಎಂಪ್ಲಾಯಿಗಳು ಇದ್ದರೂ ಅವರು ದುಡ್ಡನ್ನು ಹೀಗೇ ಖರ್ಚು ಮಾಡಬೇಕು, ಬಿಡಬೇಕು ಎಂಬ ಕಟ್ಟಲೆಗಳಿವೆ. ಹೆಚ್ಚು ಬುದ್ಧಿವಂತ ಜನರಿರುವ ಪ್ರಪಂಚದಲ್ಲಿ ಹೆಚ್ಚು-ಹೆಚ್ಚು ಪ್ರಾಸೆಸ್ಸುಗಳು ಹುಟ್ಟಿಕೊಂಡಿವೆ. ವ್ಯವಸ್ಥೆ ದಿನದಿಂದ ದಿನಕ್ಕೆ ಬಹಳೇ ಬದಲಾಗುತ್ತಿದೆ. ಏರ್‍‌ಪೋರ್ಟಿನಲ್ಲಿ ಪ್ರತಿಯೊಬ್ಬರ ಶೂ-ಚಪ್ಪಲಿ ಕಳಚಬೇಕು ಎಂಬ ನಿಯಮ ಇನ್ನೂ ಎರಡು ವರ್ಷ ತುಂಬದ ನನ್ನ ಮಗಳಿಗೂ ಅನ್ವಯವಾಗುತ್ತದೆ. ಎಲ್ಲಿ ಹೋದರೂ ನಿಯಮ, ಕಾನೂನು, ಪ್ರಾಸೆಸ್ಸು, ವ್ಯವಸ್ಥೆ - ಇವೇ ನಮ್ಮನ್ನು ಹೆಚ್ಚು ಸ್ಟ್ರೆಸ್‌ಗೆ ಒಳಪಡಿಸುವುದು ಹಾಗೂ ಅವುಗಳಿಂದ ಬಿಡುಗಡೆ ಎಂಬುದೇ ಇಲ್ಲವೇನೋ ಎಂದು ಪದೇ ಪದೇ ಅನ್ನಿಸುವುದು.

ಹಾಗಂತ ನಾನು ಶಿಲಾಯುಗದ ಬದುಕನ್ನು ಸಮರ್ಪಿಸುವವನಲ್ಲ. ಒಂದು ಕಾಲದಲ್ಲಿ ಬಕಪಕ್ಷಿಯಂತೆ ಕ್ರೆಡಿಟ್ ಕಾರ್ಡುಗಳು ಸಿಗುವುದನ್ನು ಕಾತರದಿಂದ ನೋಡುತ್ತಿದ್ದವನಿಗೆ, ಹಾಗೆ ಸಿಕ್ಕ ಮೊಟ್ಟ ಮೊದಲ ಕಾರ್ಡ್‌ನಲ್ಲಿ ನನ್ನನ್ನು ಊಟಕ್ಕೆ ಕರೆದುಕೊಂಡು ಹೋಗು ಎಂದು ತಾಕೀತು ಮಾಡಿದ ನನ್ನ ರೂಮ್‌ಮೇಟ್ ಒತ್ತಾಯಕ್ಕೆ ಬಾಗಿ ಸಂಭ್ರಮಿಸಿದವನಿಗೆ ಇಂದು ಕ್ರೆಡಿಟ್ಟು ಕಾರ್ಡುಗಳನ್ನು ಉಪಯೋಗಿಸಲು ಮನಸೇ ಬಾರದಾಗಿದೆ. ಅವರು ಕೊಡುವ ಫ್ರೀ ಮೈಲುಗಳಾಗಲೀ, ಡಿವಿಡೆಂಡು ಡಾಲರುಗಳಾಗಲೀ, ಪಾಯಿಂಟುಗಳಾಗಲೀ ಬೇಡವೇ ಬೇಡ ಎನ್ನಿಸಿದೆ. ನನ್ನ ಡೆಬಿಟ್ಟ್ ಕಾರ್ಡ್ ಅನ್ನು ಉಪಯೋಗಿಸಿ ಕಾಲು ಇರುವಷ್ಟೇ ಹಾಸಿಗೆ ಚಾಚಿದರೆ ಸಾಕೆ? ಎಂದು ಕೇಳಿಕೊಂಡು ಹಾಗೇ ಅನುಸರಿಸಿಕೊಂಡು ಬಂದಿದ್ದೇನೆ. ಆದರೆ, ಏಳೆಂಟು ಕ್ರೆಡಿಟ್ ಕಾರ್ಡ್ ಇರುವ ನಾನು ಪ್ರತಿ ತಿಂಗಳಿಗೊಮ್ಮೆ ಇಂಟರ್‌ನೆಟ್ ನಲ್ಲಿ ಅವುಗಳ ಬಿಲ್ ಬ್ಯಾಲೆನ್ಸ್ ಅನ್ನು ಪರೀಕ್ಷಿಸದೇ ಇರುವ ಹಾಗಿಲ್ಲ. ಪೇಪರ್ ಸ್ಟೇಟ್‌ಮೆಂಟ್ ಕಳಿಸಲು ಏರ್ಪಾಟು ಮಾಡಿದರೆ ಪ್ರತಿ ದಿನಕ್ಕೆ ಕಂತೆಗಟ್ಟಲೆ ಬರುವ ಪೋಷ್ಟಲ್ ಮೇಲ್‌ಗಳನ್ನು ಓದುವ ವ್ಯವಧಾನವಿಲ್ಲ, ಹಾಗೆ ಮಾಡುವುದು ಬೇಡವೆಂದರೆ ಆನ್‌ಲೈನ್ ನಲ್ಲಿ ಬಿಲ್ ಬ್ಯಾಲೆನ್ಸ್ ನೋಡದೇ ವಿಧಿ ಇಲ್ಲ. ಒಂದು ತಿಂಗಳು ಅವರೇನಾದರೂ ತಪ್ಪು ಚಾರ್ಜು ಉಜ್ಜಿಕೊಂಡರೂ ಅದರ ಫಲಾನುಭವಿ ನಾನೇ!

ಹೀಗೆ ದಿನೇದಿನೇ ಮನಸ್ಸು ಈ ವ್ಯವಸ್ಥೆಯಿಂದ ದೂರವಾಗ ಬಯಸುತ್ತದೆ, ಯಾವ ವ್ಯವಸ್ಥೆಗೂ ಬಗ್ಗದ ನಮ್ಮೂರು ಮೊದಮೊದಲು ತಡೆಯಲಸಾಧ್ಯವೆಂದೆನಿಸಿದರೂ ಅಲ್ಲಿ ಮಾನಸಿಕವಾಗಿ ನೆಮ್ಮದಿ ಇರುತ್ತದೆ. ಇಲ್ಲಿನ ವ್ಯವಸ್ಥೆ ತರುವ ಭಾಗ್ಯಗಳಲ್ಲಿ ರಸ್ತೆಯಲ್ಲಿ ಅಪಘಾತ-ಅವಘಡ ಸಂಭವಿಸಿದರೆ ಸಿಗುವ ತುರ್ತು ಚಿಕಿತ್ಸೆಯೂ ಒಂದು, ಆದರೆ ಹಾಗೆ ಎಂದೋ ಆಗಬಹುದಾದಂತಹ ಅಪಘಾತದ ಫಲಾನುಭವಕ್ಕೆ ಇಡೀ ಜೀವನವನ್ನೇ ಸ್ಟ್ರೆಸ್‌ನಲ್ಲಿ ಕಳೆಯಲಾಗುತ್ತದೆಯೇ? ಅಥವಾ ’ಸಾಯೋ(ರಿ)ದಿದ್ದರೆ ಎಲ್ಲಿದ್ದರೇನು?’ ಎಂದು ಕೇಳಿಕೊಳ್ಳುವ ನಮ್ಮೂರಿನ ಜಾಣ್ಣುಡಿ ಅಪ್ಯಾಯಮಾನವಾಗುತ್ತದೆಯೇ?

Sunday, October 28, 2007

"ಇಲ್ಲಿ" ಬಹಳ ಚೀಪ್, "ಅಲ್ಲಿ" ಬಹಳ ದುಬಾರಿ

ಕಾರ್ಪೋರೇಷನ್ನುಗಳ ಜಗತ್ತಾದ ಅಮೇರಿಕದ ಬಗ್ಗೆ, ಇಲ್ಲಿನ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಪ್ರಪಂಚದ ಯಾವ ಮೂಲೆಗೆ ಹೋದರೂ ಅಮೇರಿಕದ ದೊಡ್ಡ ಕಂಪನಿಗಳನ್ನು, ಅವುಗಳ ಲಾಭಗಳನ್ನು ಕಂಡು ಅಸೂಯೆಯಿಂದ ಜನ ನೋಡುವುದನ್ನು ಬೇಕಾದಷ್ಟು ಕಡೆ ಗಮನಿಸಬಹುದು. ಅಮೇರಿಕದ ಅರ್ಥ ವ್ಯವಸ್ಥೆಯ ಜೀವಾಳವೇ ಈ ದೊಡ್ಡ ಕಂಪನಿಗಳು ಆಯಿಲ್ಲಿನಿಂದ ಹಿಡಿದು ಸಾಫ್ಟ್‌ವೇರುಗಳವರೆಗೆ, ಫ್ಯಾಷನ್ ಉದ್ಯಮದಿಂದ ಹಿಡಿದು ಹೋಟೇಲ್ ಉದ್ಯಮಗಳವರೆಗೆ ಪ್ರತಿಯೊಂದೂ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ತನ್ನದೇ ಆದ ಅಸ್ತಿತ್ವವನ್ನು ಕಂಡುಕೊಂಡಿದೆ. ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಇಲ್ಲಿನ ಅರ್ಥ ವ್ಯವಸ್ಥೆ ಎಷ್ಟೋ ದೇಶಗಳಿಗೆ ಮಾದರಿ ಹಾಗೂ ಇಲ್ಲಿ ತುಸು ತೊಡಕಾದರೂ ಉಳಿದ ದೇಶಗಳ ವ್ಯವಸ್ಥೆ ಕುಸಿದು ಬೀಳುವ ಸಾಧ್ಯತೆ ಹೆಚ್ಚು. ಇಂಥಾ ಒಂದು ವ್ಯವಸ್ಥೆಯಲ್ಲಿ ಚೇತರಿಸಿಕೊಳ್ಳುತ್ತಿರುವುದು ಫಾರ್ಮಾಸ್ಯೂಟಿಕಲ್ಸ್ ಇಂಡಸ್ಟ್ರಿ - ಇಲ್ಲಿನ ಕಂಪನಿಗಳಲ್ಲಿ ಕೆಲಸ ಮಾಡುವ ನನ್ನಂಥವರೂ ಬೇಡವೆಂದರೂ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಒಂದಲ್ಲ ಒಂದು ರೀತಿಯಲ್ಲಿ ಪಾತ್ರಧಾರಿಗಳೇ ಆದ್ದರಿಂದ ನಾನು ಸಾಮಾನ್ಯವಾಗಿ ಕ್ಯಾಪಿಟಲಿಸ್ಟಿಕ್ ಪ್ರಪಂಚದ ಬಗ್ಗೆ ಬರೆಯುವುದು ಕಡಿಮೆ, ಆದರೆ ಈ ದಿನ ಸುಮ್ಮನೇ ಹಾಗೆ ಒಂದು ವಿಚಾರವನ್ನು ಹರಿಯಬಿಟ್ಟರೆ ಹೇಗೆ ಎಂದೆನಿಸಿತು.

ಫ್ಯಾಕ್ಟ್:
- ಗೂಗಲ್‌ನಂತಹ ಕಂಪನಿಯವರ ಮಾರ್ಕೇಟ್ ಕ್ಯಾಪಿಟಲ್ ಸುಮಾರು 210 ಬಿಲಿಯನ್ ಡಾಲರುಗಳು (ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ)
- ಎಕ್ಸಾನ್ ಮೋಬಿಲ್ ಕಂಪನಿ ಕಳೆದ ವರ್ಷ (2006) ರಲ್ಲಿ ಸುಮಾರು 40 ಬಿಲಿಯನ್ ಡಾಲರುಗಳ ವಾರ್ಷಿಕ ಆದಾಯವನ್ನು ದಾಖಲಿಸಿದೆ
- ಮೈಕ್ರೋಸಾಫ್ಟ್ ಕಂಪನಿಗೆ ಇತ್ತೀಚೆಗೆ (ಸೆಪ್ಟೆಂಬರ್) ಯೂರೋಪಿಯನ್ ಯೂನಿಯನ್‌ವರು 690 ಮಿಲಿಯನ್ ಡಾಲರುಗಳ ದಂಡವನ್ನು ವಿಧಿಸಿದ್ದಾರೆ
- ಮರ್ಕ್ ಕಂಪನಿಗೆ ಎರಡು ವರ್ಷಗಳ ಹಿಂದೆ (2005) ಟೆಕ್ಸಾಸ್ ಜ್ಯೂರಿ Vioxx ಮಾತ್ರೆಗಳನ್ನುಪಯೋಗಿಸಿ ಅಸುನೀಗಿದ ವ್ಯಕ್ತಿಯ ಕುಟುಂಬಕ್ಕೆ 253 ಮಿಲಿಯನ್ ಡಾಲರುಗಳ ದಂಡವನ್ನು ವಿಧಿಸಿದ್ದಾರೆ
- ಎನ್ರಾನ್ ಹಾಗೂ ಎಮ್‌ಸಿಐ ಕಂಪನಿಗಳಲ್ಲಿ ಹಣ ತೊಡಗಿಸಿ ಸಹಸ್ರಾರು ಜನ ಹಣವನ್ನು ಕಳೆದುಕೊಂಡರು


ಹೀಗೆ ಬರೆದುಕೊಂಡು ಹೋದರೆ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯ ಆಳ ಬಹು ದೊಡ್ಡದು. ಪ್ರಪಂಚದ ಎಲ್ಲರಿಗೂ ತಮ್ಮ ಅಂಕಿ-ಅಂಶಗಳನ್ನು ಮುಕ್ತವಾಗಿ ಹಂಚುತ್ತೇವೆ, ಕಂಪನಿಯಲ್ಲಿ ಹಣ ತೊಡಗಿಸಿದವರೇ ನಿಜವಾದ ಕಂಪನಿಯ ಓನರುಗಳು, ಎಲ್ಲರ ಒಳಿತಿಗಾಗೇ ನಾವು ದುಡಿಯುವುದು ಎಂದೇನೇನೆಲ್ಲ ಸಾರಿದರೂ ಪ್ರತಿಯೊಂದು ಕಂಪನಿಗೆ ಅವರವರದೇ ಆದ ರಹಸ್ಯಗಳಿವೆ. ಅದು ತಮ್ಮ ಕಂಪನಿ ಹುಟ್ಟು ಹಾಕಿದ ಪೇಟೆಂಟ್ ಇರಬಹುದು, ಕೆಮಿಕಲ್ ಫಾರ್ಮುಲಾ ಇರಬಹುದು ಅಥವಾ ಬಿಸಿನೆಸ್ ಸ್ಟ್ರಾಟೆಜಿ ಇರಬಹುದು. ಪ್ರತಿದಿನವೂ ತಮ್ಮ ಜೀವಂತಿಕೆಯನ್ನು ಜಗತ್ತಿಗೆ ಸಾರುವುದರ ಜೊತೆಗೆ ಪ್ರತಿಯೊಂದು ಕ್ವಾರ್ಟರ್‍ಗೂ ಅನಲಿಸ್ಟ್‌ಗಳ ಪ್ರಕಾರ ತಮ್ಮ ನಂಬರುಗಳನ್ನು ಹೊರಹಾಕಿ ಮಾರ್ಕೆಟ್ಟಿನ ಒತ್ತಡಕ್ಕೆ ಸಿಲುಕುವ ಸವಾಲೂ ಕೂಡ ಈ ಕಂಪನಿಗಳಿಗಿದೆ.

***

’ಓಹ್, ಇಂಡಿಯಾದಲ್ಲಾದರೆ ಈ ಮಾತ್ರೆಗಳನ್ನು ಮುಕ್ತವಾಗಿ ಎಲ್ಲರಿಗೂ ಫ್ರೀ ಆಗಿ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಘಟಕಗಳಲ್ಲೂ ಹಂಚುತ್ತಾರೆ, ಆದರೆ ಆಮೇರಿಕದಲ್ಲೇಕೆ ಇಷ್ಟೊಂದು ಬೆಲೆ?’ ಎನ್ನುವುದು ಇಲ್ಲಿಗೆ ಬಂದ ಹಲವರ ಸಹಜವಾದ ಪ್ರಶ್ನೆ. ಅವರು ಹೇಳುವ ಮಾತೂ ನಿಜ: ಮಾಲಾ-ಡಿ ಅಂತಹ ಸಂತಾನ ನಿರೋಧಕ ಮಾತ್ರೆಗಳಾಗಲೀ, ಸೆಪ್ಟ್ರಾನ್‌ನಂತಹ ಲಘು ಆಂಟಿಬಯಾಟಿಕ್‌ಗಳಾಗಲೀ ಬಹಳ ಕಡಿಮೆ ಬೆಲೆಗೆ ಅಲ್ಲಿ ಸಿಕ್ಕೀತು, ಆದರೆ ಅವುಗಳ ಬೆಲೆ ಇಲ್ಲಿ ಖಂಡಿತ ದುಬಾರಿ - ಏನಿಲ್ಲವೆಂದರೂ ಒಂದು ಡೋಸ್ ಮಾತ್ರೆಗೆ ಕನಿಷ್ಟ 25 ಡಾಲರ್ ಆಗಬಹುದು, ಅಂದರೆ ಭಾರತೀಯ ರುಪಾಯಿಯಲ್ಲಿ ಸಾವಿರವಾದೀತು. ಇಲ್ಲಿನ ವ್ಯವಸ್ಥೆ ಸರಿ ಇಲ್ಲ, ಎಲ್ಲ ಕಡೆ ಚೀಪ್ ಆಗಿ ಸಿಗುವ ಮಾತ್ರೆಗಳ ಬೆಲೆಯನ್ನು ಇಲ್ಲಿನವರು ಹೆಚ್ಚಿಸಿ ದುಡ್ಡು ಮಾಡುತ್ತಾರೆ ಆದ್ದರಿಂದಲೇ ಈ ಫಾರ್ಮಾಸ್ಯೂಟಿಕಲ್ ಕಂಪನಿಗಳು ಹಣ ಮಾಡಿ ಮುಂದುಬರುವುದು ಎಂದು ಏಕ್‌ದಂ ನಿರ್ಧಾರಕ್ಕೆ ಬಂದು ಬಿಟ್ಟೀರಿ, ಇಲ್ಲಿನ ವ್ಯವಸ್ಥೆಯನ್ನು ಪೂರ್ತಿ ಅರಿಯುವವರೆಗೆ ಆ ರೀತಿ ತೆಗೆದುಕೊಂಡ ನಿರ್ಣಯಗಳಲ್ಲಿ ಯಾವ ಹುರುಳೂ ಇಲ್ಲ. ಹತ್ತು ವರ್ಷದ ಹಿಂದೆ ಫಾರ್ಮಾ ಕಂಪನಿಗಳು ಹತ್ತಿರಹತ್ತಿರ ವರ್ಷಕ್ಕೆ 10-15 ಬಿಲಿಯನ್ ಡಾಲರುಗಳನ್ನು R&D Spending ಗಾಗಿ ಬಳಸುತ್ತಿದ್ದವು, ಆದರೆ ಇಂದು ಏನಿಲ್ಲವೆಂದರೂ ವರ್ಷಕ್ಕೆ 40 ಬಿಲಿಯನ್‌ಗಿಂತಲೂ ಹೆಚ್ಚು ಖರ್ಚು ಮಾಡುತ್ತಿವೆ (Source: Economist), ಹಾಗೆಯೇ ಒಂದು ನೋವು ನಿವಾರಕ ಮಾತ್ರೆಯಾಗಲೀ, ಕೊಲೆಷ್ಟರಾಲ್ ಕಡಿಮೆ ಆಗುವ ಮಾತ್ರೆಗಳಾಗಲೀ ಮಾರುಕಟ್ಟೆಗೆ ಬರಲು ಕಂಪನಿಯವರು ಸುಮಾರು 600-800 ಮಿಲಿಯನ್ ಡಾಲರುಗಳನ್ನು ಖರ್ಚು ಮಾಡುತ್ತಾರೆ. ಒಮ್ಮೆ ಹಾಗೆ ಮಾರುಕಟ್ಟೆಗೆ ಬಂದ ಮೇಲೂ ಈ ಔಷಧಿ-ಮಾತ್ರೆಗಳು ತುಂಬಾ ಕಂಟ್ರೋಲ್ಡ್ ಆಗಿ ಬಳಸಲ್ಪಡುತ್ತವೆ ಜೊತೆಗೆ ತುಂಬಾ ರೆಗ್ಯುಲೇಟೆಡ್ ವ್ಯವಸ್ಥೆಯಲ್ಲಿಯೇ ವ್ಯವಹಾರ ಮುಂದುವರೆಯುತ್ತದೆ.

ಪ್ರತಿಯೊಂದು ದೇಶ-ಖಂಡದಲ್ಲಿಯೂ ಅದರದ್ದೇ ಆದ ಒಂದು ಫಾರ್ಮಾಸ್ಯೂಟಿಕಲ್ ವ್ಯವಸ್ಥೆ ಇರುತ್ತದೆ. ಕೆಲವು ದೇಶಗಳಲ್ಲಿ ಮುಕ್ತ ಸಂಶೋಧನೆಗೆ ಅವಕಾಶ ಇದ್ದರೆ ಇನ್ನು ಕೆಲವು ದೇಶಗಳಲ್ಲಿ ಮುಕ್ತ ಮಾರುಕಟ್ಟೆ ಇದ್ದಿರಬಹುದು. ಅಫಘಾನಿಸ್ತಾನದಂತಹ ದೇಶಗಳಲ್ಲಿ ಮನೆಮನೆಯಲ್ಲಿ ಅಫೀಮು/ಗಾಂಜಾ ಬೆಳೆದರೆ ಇನ್ನು ಕೆಲವು ದೇಶಗಳಲ್ಲಿ ಹಾಗೆ ಇಟ್ಟುಕೊಳ್ಳುವುದು ಕಾನೂನು ಬಾಹಿರವಾಗಬಹುದು. ಹೀಗೆ ಹಲವು ಸೂತ್ರಗಳಿಗೆ ಕುಣಿಯುವ ಔಷಧಿ ಮಾರುಕಟ್ಟೆ ಹಾಗೂ ಮಾತ್ರೆಗಳನ್ನು ಕೇವಲ ಎರಡು ಕರೆನ್ಸಿಗಳಲ್ಲಿ ಅಳೆದು ನೋಡಿ ಅಲ್ಲಿ ತುಂಬಾ ಸಸ್ತಾ ಇಲ್ಲಿ ತುಂಬಾ ದುಭಾರಿ ಎನ್ನಲಾದೀತೆ? ಜೊತೆಗೆ ಇಲ್ಲಿ ಒಂದು ಮಾತ್ರೆಯನ್ನು ಸೇವಿಸಿ - ಸೇವಿಸಿದವನದೇ ತಪ್ಪು ಇದ್ದರೂ - ಆತ ಕಂಪನಿಯ ಮೇಲೆ ಮಿಲಿಯನ್ ಡಾಲರುಗಳ ಲಾ ಸೂಟ್ ಹಾಕುವ ಹೆದರಿಕೆ ಇದೆ, ಮತ್ತೊಂದು ಕಡೆ ಸತ್ತವರು ಹೇಗೆ ಸತ್ತರು ಎಂದು ಕೇಳುವ/ಹೇಳುವ ವ್ಯವಸ್ಥೆಯೂ ಇದ್ದಿರಲಾರದು. ಯಾವುದೇ ಒಂದು ಉತ್ಪನ್ನದಲ್ಲಿ ಏನಾದರೂ ಹೆಚ್ಚು-ಕಡಿಮೆ ಕಾಣಿಸಿಕೊಂಡರೆ ಇಲ್ಲಿ ಅಂತಹ ಉತ್ಪನ್ನವನ್ನು ರೀಕಾಲ್ ಮಾಡುವ ವ್ಯವಸ್ಥೆ ಇದೆ, ಉದಾಹರಣೆಗೆ ಎರಡು ವರ್ಷಗಳ ಹಿಂದೆ ನಾನೇ ಕೊಂಡು ಉಪಯೋಗಿಸಿದ ಮಕ್ಕಳಿಗೆ ಹಾಕುವ ಬಿಬ್ ಒಂದನ್ನು ಮೊನ್ನೆ ಟಿವಿಯ ವರದಿಯಲ್ಲಿ ತೋರಿಸಿದರೆಂದು - ಅದರಲ್ಲಿ ಲೆಡ್ ಪೇಂಟ್ ಇರಬಹುದಾದ ಬಗ್ಗೆ -ಇನ್ಯಾವುದೋ ಅಂಗಡಿಯೊಂದಕ್ಕೆ ತೆಗೆದುಕೊಂಡು ಹೋಗಿ ಕೊಟ್ಟರೆ ಅದರ ಪೂರ್ಣ ಬೆಲೆಯನ್ನು ಒಂದೂ ಪ್ರಶ್ನೆಯನ್ನು ಕೇಳದೇ ಹಿಂತಿರುಗಿಸಿದರು. ಹೀಗೆ ಒಂದು ಉತ್ಪನ್ನವನ್ನು ಅದೇ ಕೆಮಿಕಲ್ ಕಂಪೋಸಿಷನ್ ಇದ್ದ ಮಾತ್ರಕ್ಕೆ ಎರಡು ದೇಶಗಳ ಬೇರೆ ಬೇರೆ ವ್ಯವಸ್ಥೆಯಲ್ಲಿ ತೂಗಿ ನೋಡಲು ಬರೋದಿಲ್ಲ ಎನ್ನುವುದು ನನ್ನ ಅನಿಸಿಕೆ. ಇನ್ಯಾರಾದರೂ ನಿಮಗೆ ಭಾರತದಲ್ಲಿ ತಲೆ ನೋವಿನ ಮಾತ್ರೆ ರೂಪಾಯಿಗೆ ಒಂದು ಸಿಗುತ್ತದೆ ಎಂದು ಹೇಳಿದರೆ ನೀವು ಅವರಿಗೆ ಇಲ್ಲಿ ಗ್ಯಾಸೋಲಿನ್ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಮರು ಉತ್ತರ ಕೊಡಬಹುದು!

ಫಾರ್ಮಾಸ್ಯೂಟಿಕಲ್ ಕಂಪನಿಗಳವರು ಏನೇನನ್ನಾದರೂ ಮಾಡಿ ತಮ್ಮ ತಮ್ಮ ಮಾತ್ರೆ-ಔಷಧಿಗಳನ್ನು ಹೊರತರಬಹುದು - ಆದರೂ ಅಮೇರಿಕನ್ ವ್ಯವಸ್ಥೆಯಲ್ಲಿ ಅವರು ಬಹಳ ಕಷ್ಟನಷ್ಟವನ್ನು ಅನುಭವಿಸೋದಂತೂ ನಿಜ. ಇಷ್ಟು ಕಷ್ಟಪಟ್ಟು ಹೊರಡಿಸಿದ ಉತ್ಪನ್ನವನ್ನು ಉದಾಹರಣೆ ಏಡ್ಸ್ ಔಷಧಿ/ಮಾತ್ರೆಗಳನ್ನು ಆಫ್ರಿಕಾ ಖಂಡದಲ್ಲಿ ಕಾಲು ಭಾಗ ಜನರಿಗೆ ಏಡ್ಸ್ ಇದೆಯೆಂದ ಮಾತ್ರಕ್ಕೆ ಅಲ್ಲಿ ಪುಕ್ಕಟೆ ಮಾತ್ರೆಗಳನ್ನು ಹಂಚಲು ಹೇಗೆ ಸಾಧ್ಯ?

***
ಈ ರೀತಿ ಜನರ ಮನಸ್ಸಿನಲ್ಲಿ ಆಲೋಚನೆಗಳು ಬರಲು ಬೇಕಾದಷ್ಟು ಕಾರಣಗಳಿವೆ. ಪ್ರಿನ್ಸೆಸ್ ಡಯಾನಾ ಸತ್ತಳೆಂದು ಭಾರತದ ವೃತ್ತಪತ್ರಿಕೆಗಳು ವರದಿ ಮಾಡುವಾಗ ಆಕೆ ಕುಳಿತಿದ್ದ ಕಾರು ಅತಿವೇಗದಿಂದ ಚಲಿಸುತ್ತಿತ್ತು ಎಂದು ಬರೆಯುತ್ತಾ ಆಕೆ ಕುಳಿತ ಕಾರು ಘಂಟೆಗೆ ನೂರಾ ಇಪ್ಪತ್ತು (ಅಂದಾಜು) ಕಿಲೋ ಮೀಟರ್ ಓಡುತ್ತಿತ್ತು ಎಂದು ಭಾರತದಲ್ಲಿ ಘಂಟೆಗೆ ಅರವತ್ತು ಕಿಲೋಮೀಟರ್ ವೇಗದಲ್ಲಿ ಓಡಾಡುವ ಜನರಿಗೆ ದಂಗುಬಡಿಸುತ್ತಾರೆ, ಆವರಣದಲ್ಲಿ ಅಲ್ಲಿನ ಸ್ಪೀಡ್‌ ಲಿಮಿಟ್ ಅನ್ನು ಕೊಟ್ಟರೆ ಏನಿಲ್ಲವೆಂದರೂ ಮುಂದುವರೆದ ದೇಶದ ಹೈವೇಗಳಲ್ಲಿ ಘಂಟೆಗೆ ನೂರು ಕಿಲೋಮೀಟರ್ ವೇಗದಲ್ಲಿ ಜನರು ಕಾರು ಚಲಿಸುವುದು ಸರ್ವೇ ಸಾಮಾನ್ಯ ಎನ್ನುವ ಅಂಶ ಓದುಗರಿಗೆ ಮನವರಿಕೆಯಾದೀತು. ಇತ್ತೀಚೆಗೆ ಒಂದು ಜನಪ್ರಿಯ ವಾರಪತ್ರಿಕೆಯೊಂದರಲ್ಲಿ ಒಬ್ಬ ಅಂಕಣಕಾರರು Al Gore ಗೆ ನೊಬೆಲ್ ಶಾಂತಿ ಪಾರಿತೋಷಕ ಬಂದಿದ್ದರ ಬಗ್ಗೆ ಬರೆಯುತ್ತಾ ಆಲ್ ಗೊರೆ ಎಂದು ಬರೆದಿದ್ದನ್ನು ನೋಡಿ ನಗು ಬಂತು. ನಾವೆಲ್ಲ ಶಾಲಾ ಕಾಲೇಜಿನಲ್ಲಿದ್ದ ದಿನಗಳಲ್ಲಿ ಬಿಬಿಸಿ ಅಥವಾ ಇತರ ಸುದ್ದಿಗಳನ್ನು ಕೇಳಿ ವಿದೇಶಿ ಹೆಸರುಗಳನ್ನು ಸರಿಯಾಗಿಯೇ ಉಚ್ಚರಿಸುತ್ತಿದ್ದೆವು. ಒಬ್ಬ ಅಂಕಣಕಾರ ’ಗೊರೆ’ ಎಂದು ಬರೆಯುತ್ತಾರೆಂದರೆ ಅವರು ರೆಫೆರೆನ್ಸ್ ಮಾಡಿರುವ ವಿಷಯ ಕೇವಲ ಇಂಟರ್‌ನೆಟ್‌ಗೆ ಮಾತ್ರ ಸೀಮಿತ ಎಂದು ಅನುಮಾನ ಬರುತ್ತದೆ. 1988 ರಲ್ಲಿ Seoul ನಲ್ಲಿ ಓಲಂಪಿಕ್ಸ್ ಆದಾಗ ಭಾರತದ ಮಾಧ್ಯಮಗಳು ಮೊದಮೊದಲು "ಸಿಯೋಲ್" ಎಂದು ವರದಿ ಮಾಡಿ ನಂತರ "ಸೋಲ್" ಎಂದು ತಿದ್ದಿಕೊಂಡಿದ್ದವು. ಹೆಸರಿನಲ್ಲೇನಿದೆ ಬಿಡಿ, ಅದು ನಾಮಪದ ಯಾರು ಹೇಗೆ ಬೇಕಾದರೂ ಉಚ್ಚರಿಸಬಹುದು ಬಳಸಬಹುದು, ಆದರೆ ನಮ್ಮ ವರದಿಗಾರರು ಅಲ್ಲಿಲ್ಲಿ ಕದ್ದು ವಿಷಯವನ್ನು ಪೂರ್ತಿ ಗ್ರಹಿಸದೇ ಮಾಡುವ ತಪ್ಪುಗಳಿಗೆ ಅಮಾಯಕ ಜನರು ಬಲಿಯಾಗಬೇಕಾಗುತ್ತದೆ ಎನ್ನುವುದು ನನ್ನ ಕಳಕಳಿ.

"ಇಲ್ಲಿ" ಬಹಳ ಚೀಪ್, "ಅಲ್ಲಿ" ಬಹಳ ದುಬಾರಿ - ಆದ್ದರಿಂದ "ಆ ದೇಶ" ಸರಿ ಇಲ್ಲ - ಎನ್ನುವ ಮಾತುಗಳು ಇನ್ನಾದರೂ ಕಡಿಮೆಯಾಗಲಿ.

Saturday, October 27, 2007

ರಾಜ್ಯೋತ್ಸವದ ಆಚರಣೇ ಕೇವಲ ಒಂದೇ ದಿನ ಇರಲಿ

ಇನ್ನೇನು ಕನ್ನಡ ರಾಜ್ಯೋತ್ಸವ ಬಂದೇ ಬಿಡ್ತು, ಆದರೆ ಹೇಳಿಕೊಳ್ಳಲಿಕ್ಕೊಂದು ಸರ್ಕಾರವಿಲ್ಲ, ರಾಜ್ಯವನ್ನು ಮುನ್ನಡೆಸುವ ನಾಯಕರಿಲ್ಲ. ಐದು ವರ್ಷಗಳ ಆಡಳಿತ ನಡೆಸುವಂತೆ ಜನತೆ ಅಭಿಮತವಿತ್ತು ಶಾಸಕರನ್ನು ಆರಿಸಿದರೆ, ಇವರುಗಳು ತಮಗೆ ಬೇಕಾದ ರೀತಿಯಲ್ಲಿ ಒಡಂಬಡಿಕೆಗಳನ್ನು ಸೃಷ್ಟಿಸಿಕೊಂಡು ತಿಂಗಳುಗಳ ಸರ್ಕಾರವನ್ನು ಮುಂದಿಡುತ್ತಲೇ ಬಂದಿದ್ದಾರೆ. ಒಟ್ಟಿನಲ್ಲಿ ಎರಡೆರಡು ವರ್ಷಗಳಿಗೊಬ್ಬ ಮುಖ್ಯಮಂತ್ರಿ ಹಾಗೂ ಅವರ ಪರಿವಾರವನ್ನು ತೃಪ್ತಿ ಪಡೆಸುವುದಷ್ಟೇ ರಾಜ್ಯದ ಗುರಿಯಾಗಿ ಹೋಯಿತು. ನಮ್ಮ ಸಮಸ್ಯೆಗಳು ಸಮಸ್ಯೆಗಳಾಗೇ ಉಳಿದು ಬಿಟ್ಟವು.

ಗಡಿ ಸಮಸ್ಯೆಯ ಮಾತಂತೂ ಇತ್ತೀಚೆಗೆ ಬಹಳ ಕೇಳಿಬರುತ್ತಿದೆ. ಉತ್ತರದಲ್ಲಿ ಮಹಾರಾಷ್ಟ್ರ ಸರ್ಕಾರದ ಹುಕುಮತ್ತಿನಲ್ಲಿ ಬೆಳಗಾವಿ ಪ್ರಾಂತ್ಯವನ್ನು ಕಿತ್ತುಕೊಳ್ಳಲು ಹವಣಿಕೆ ನಡೆಯುತ್ತಿದ್ದರೆ ಪೂರ್ವ ಹಾಗೂ ದಕ್ಷಿಣದಲ್ಲಿ ಭಾಷಾ ಹೇರಿಕೆ ನಡೆಯುತ್ತಿದೆ. ಕನ್ನಡಿಗರ ಸೊಲ್ಲೇನಿದ್ದರೂ ಅಡಗಿ ಹೋಗಿ ಎಲ್ಲಿ ನೋಡಿದರೂ ಅನ್ಯ ಭಾಷೆಯವರಿಗೇ ಪ್ರಾತಿನಿಧ್ಯ ಕಾಣುತ್ತಿದೆ. ನಾವು ದಕ್ಷಿಣದಲ್ಲಿ ಉಳಿದವರಿಗೆ ಸರಿಸಮಾನವಾಗಿ ಬೆಳೆಯದೇ ಹೋಗಿ ಹಿಂದುಳಿಯುತ್ತಿದ್ದೇವೆಯೇ ಎನ್ನೋ ಸಂಶಯ ಕೂಡ ಹುಟ್ಟುತ್ತಿದೆ. ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸಬೇಕು ಎಂಬುದು ಇವತ್ತಿಗೂ ವಿಶ್ ಆಗಿ ಉಳಿಯಿತೇ ವಿನಾ ಎಷ್ಟೋ ಕಡೆ ಇನ್ನೂ ಚಾಲ್ತಿಗೆ ಬಂದ ಹಾಗಿಲ್ಲ.

ಪ್ರತಿಯೊಂದಕ್ಕೂ ಅಸ್ಥಿರ ರಾಜಕೀಯ ಸ್ಥಿತಿಗತಿಯನ್ನು ಬೆರಳು ಮಾಡಿ ತೋರಿಸಲಾಗದಿದ್ದರೂ ನಮ್ಮಲ್ಲಿನ ರಾಜಕೀಯ ಮುತ್ಸದ್ದಿತನದ ಕೊರತೆಯಿಂದಾಗಿ, ಮುಂದಾಳುಗಳಾಗಲೀ, ದಾರ್ಶನಿಕರಿಲ್ಲದೇ ಕೇಂದ್ರ ಎಷ್ಟೋ ಯೋಜನೆಗಳ ಪಾಲು ಕರ್ನಾಟಕಕ್ಕೆ ಸಿಗುವಲ್ಲಿ ಮಲತಾಯಿ ಧೋರಣೆಯ ಮಾತು ಅಲ್ಲಲ್ಲಿ ಕೇಳಿಬರುತ್ತದೆ. ರಾಜ್ಯಕ್ಕೆ ಹೊಸ ರೈಲು ನಿಲ್ದಾಣಗಳಾಗಲೀ, ಮಾರ್ಗಗಳಾಗಲಿ ಕೊಡುವಲ್ಲಿ ಕೇಂದ್ರದ ತಾರತಮ್ಯ ಎದ್ದು ತೋರುತ್ತದೆ. ಅದೇ ರೀತಿ ಅನೇಕ ಯೋಜನೆಗಳಿಗೂ ಸಹ ತಕ್ಕ ಮಾನ್ಯತೆ ಸಿಕ್ಕಂತೆ ಕಂಡು ಬಂದಿಲ್ಲ. ಕೇಂದ್ರದಲ್ಲಿ ಪ್ರಭಲ ಕಾಂಗ್ರೇಸ್ ರಾಜ್ಯದಲ್ಲಿನ ಕಾಂಗ್ರೇಸೇತರ ಸರ್ಕಾರಕ್ಕೆ ಸಹಾಯ ಮಾಡೀತು ಎಂದು ನಂಬುಕೊಳ್ಳುವುದು ಕಷ್ಟದ ಮಾತು. ತಮ್ಮ ತಮ್ಮ ಒಳಜಗಳಗಳನ್ನು ಪೂರೈಸಿಕೊಳ್ಳುವುದರಲ್ಲೇ ಕಾಲಹರಣ ಮಾಡುವ ಶಾಸಕಾಂಗದ ಸದಸ್ಯರು ಯಾವ ರೀತಿಯಲ್ಲಿ ಅವರವರ ಕ್ಷೇತ್ರಗಳನ್ನು ಪ್ರತಿನಿಧಿಸಿಯಾರು ಮತ್ತೆ ಇನ್ನೆರಡು ವರ್ಷಗಳಲ್ಲಿ ಚುನಾವಣೆ ನಡೆದರೆ ತಮ್ಮ ಕ್ಷೇತ್ರದ ಜನರನ್ನು ಹೇಗೆ ಮುಖಕೊಟ್ಟು ಮಾತನಾಡಿಸಿಯಾರು ಎಂಬ ಅನುಮಾನ ಬರುತ್ತದೆ. ಚುನಾವಣೆಗೆ ಮೊದಲಿನ ಪ್ರಸ್ತಾವನೆಗಳಲ್ಲಿ, ಪ್ರಣಾಲಿಕೆಗಳಲ್ಲಿ ಕೇವಲ ಹತ್ತು ಪರ್ಸೆಂಟ್ ಕೆಲಸವನ್ನಾದರೂ ಪ್ರತಿಯೊಬ್ಬ ಶಾಸಕರು ಮಾಡಿದ್ದರೆ ಅದು ನಿಜವಾಗಿಯೂ ತೃಪ್ತಿಕರ ಕಾರ್ಯ ಎಂದು ಒಪ್ಪಿಕೊಳ್ಳುವ ಸಂದಿಗ್ಧ ಬಂದಿದೆಯಷ್ಟೇ.

ಪ್ರತಿವರ್ಷ ಇಷ್ಟೊತ್ತಿಗಾಗಲೇ ಕೇಳಿ ಬರುತ್ತಿದ್ದ ಕಾವೇರಿ ನೀರಿನ ಕೂಗು ಇನ್ನು ಸ್ವಲ್ಪ ದಿನಗಳಲ್ಲೇ ಶುರುವಾಗಬಹುದು. ದಿನೇ ದಿನೇ ಬೇಸಿಗೆ ಏರಿದಂತೆ ನಿಯೋಗದ ಮೇಲೆ ನಿಯೋಗವನ್ನು ಕಳಿಸಿ ತಮ್ಮತನವನ್ನು ಸಾಧಿಸಿಕೊಳ್ಳುವ ಪಕ್ಕದ ರಾಜ್ಯದ ಸರ್ಕಾರದ ಮುಂದೆ ನಮ್ಮವರ ಆಟ ಈ ಸಲ ಹೇಗೆ ಬೇರೆಯಾಗುವುದೋ ನೋಡಬೇಕು. ಕಾವೇರಿ ನೀರಿನ ವಿಷಯ ರಾಜಕೀಯ ಪ್ರೇರಿತವಾದದ್ದು, ಅಲ್ಲದೇ ಕೇವಲ ಕೆಲವೇ ಕೆಲವು ಜಿಲ್ಲೆಯವರು ಪ್ರತಿನಿಧಿಸುವ ಅಂಶವಾಗಿರುವುದು ಮತ್ತೊಂದು ಬೆಳವಣಿಗೆ. ನಮ್ಮಲ್ಲಿಲ್ಲದ ಒಗ್ಗಟ್ಟೇ ನಮಗೆ ಮುಳುವಾದೀತು ಎಂದರೂ ತಪ್ಪಾಗಲಾರದು.

ಕನ್ನಡಿಗರು ಹೋಮ್‌ವರ್ಕ್ ಮಾಡೋದೇ ಇಲ್ಲವೇನೋ ಎನ್ನಿಸಿಬಿಡುತ್ತದೆ ಕೆಲವೊಮ್ಮೆ. ನಮ್ಮಲ್ಲಿನ ಸುದ್ದಿಗಳು ಇತ್ತೀಚೆಗಂತೂ ಕೇವಲ ರಾಜಕೀಯವನ್ನು ಮಾತ್ರ ಕವರ್ ಮಾಡುತ್ತಿವೆಯೇನೋ ಎನ್ನುವ ಅನುಮಾನವೂ ಹುಟ್ಟುತ್ತದೆ. ಒಂದು ದಿನ ಒಬ್ಬರನ್ನೊಬ್ಬರು ಬೈದುಕೊಳ್ಳುವ ರಾಜಕಾರಣಿಗಳು ಮರುದಿನ ಹಸ್ತಲಾಘವವನ್ನು ಕೊಟ್ಟುಕೊಳ್ಳುವುದನ್ನು ನೋಡಿದರೆ, ಪ್ರತಿಯೊಬ್ಬರ ಮುಖದಲ್ಲಿನ ಅಧಿಕಾರ ಲಾಲಸೆಯನ್ನು ಕಂಡರೆ ಹೇಸಿಗೆಯಾಗುತ್ತದೆ. ಇಂಥ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೋಡಿ ಹೇಸಿಗೆಯೂ ಬರುತ್ತದೆ. ನಿಜವಾಗಿಯೂ ಚುನಾಯಿತ ಪ್ರತಿನಿಧಿಗಳಿಗೆ ಹೇಳುವವರು ಕೇಳುವವರು ಎನ್ನುವವರು ಇದ್ದಾರೆಯೇ ಎನ್ನುವ ಸಂಶಯ ಮೂಡುತ್ತದೆ. ಸರ್ಕಾರ ಬಡವಾಗುತ್ತಾ ಹೋಗುತ್ತದೆ ಚುನಾಯಿತ ಪ್ರತಿನಿಧಿಗಳು ಅಲ್ಟ್ರಾ ಶ್ರೀಮಂತರಾಗುತ್ತಾ ಹೋಗುತ್ತಾರೆ, ಯಾರದೋ ಮನೆಯ ಸೊಸೆ ಸುಮಾರು ನೂರು ಕೋಟಿ ರೂಪಾಯಿಯನ್ನು ತೊಡಗಿಸಿ (೨೫ ಮಿಲಿಯನ್ ಡಾಲರ್) ಹೊಸ ಕನ್ನಡ ಟಿವಿ ಚಾನೆಲ್ ಒಂದನ್ನು ಹೊರತರುತ್ತಾರೆ, ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳು, ಅವರ ಕುಟುಂಬವೂ ಬಡತನದ ರೇಖೆಯಿಂದ ಬಹಳಷ್ಟು ದೂರವೆನೂ ಇರೋದಿಲ್ಲ. ಚುನಾವಣೆಗೆ ಕಣಕ್ಕಿಳಿಯುವ ಅಭ್ಯರ್ಥಿಗಳ ಬಲಾಬಲ ಅವರವರು ಭ್ರಷ್ಟಾಚಾರಕ್ಕೆ ಮೋಸಕ್ಕೆ ಬಳಸುವ ಹಣದ ಮೇಲೆ ತೀರ್ಮಾನವಾಗುತ್ತದೆ. ನಿಜವಾದ ಆದಾಯದಿಂದ ಬದುಕುವುದೇ ದುಸ್ತರವೆನ್ನಿಸಿ ಮಧ್ಯಮ ಹಾಗೂ ಕೆಳವರ್ಗದ ಜನರಿಗೆ ಗಿಂಬಳವನ್ನಾಧರಿಸಿ ಬದುಕುವುದೇ ಬದುಕಾಗುತ್ತದೆ. ದೇಶ್ದ ಹಣದುಬ್ಬರ, ಆರ್ಥಿಕ ಪರಿಸ್ಥಿತಿ ಮುಂತಾದವುಗಳನ್ನು ಸರಿಯಾಗಿ ನಿಭಾಯಿಸದೇ ಹೋಗಿ ಬಳಸುವ ಸಾಮಗ್ರಿಗಳ ಬೆಲೆ ಗಣನೀಯವಾಗಿ ಹೆಚ್ಚಾದಂತೆ ಪ್ರತಿಯೊಬ್ಬರ ತಲಾ ಆದಾಯ ಅಷ್ಟೇನು ಹೆಚ್ಚದೆ ಲಂಚ ಮೊದಲಾದವುಗಳಿಗೆ ಕುಮ್ಮಕ್ಕು ಸಿಗುತ್ತದೆ. ಭ್ರಷ್ಟರಾಗಿ ಬದುಕುವುದು, ಲಂಚದ ಕೂಪದಲ್ಲಿ ಸಿಲುಕುವುದು ಸಹಜವಾಗಿ ಹೋಗಿ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವವನು ಹಾಸ್ಯಾಸ್ಪದಕ್ಕೆ ಗುರಿಯಾಗಬೇಕಾಗುತ್ತದೆ. ಅಕಸ್ಮಾತ್ ಈಗಲ್ಲದಿದ್ದರೆ ಮುಂದೆಂದಾದರೂ ಚುನಾವಣೆ ನಡೆಯದಿದ್ದಲ್ಲಿ ಮತ್ತೆ ಯಾರಿಗೂ ನಿಚ್ಛಳ ಬಹುಮತ ಬಾರದೇ ಹೋಗಿ ದೋಸ್ತಿ ಸರಕಾರಗಳು ತಿರುಗಿ ಅಸ್ತಿತ್ವಕ್ಕೆ ಬಂದರೆ ಎಂದು ಹೆದರಿಕೆಯಾಗುತ್ತದೆ.

ಕನ್ನಡಿಗರು ಸುಮ್ಮನಿದ್ದರೆ ಇವತ್ತಲ್ಲ ನಾಳೆ ದೇಶದ ಅತ್ಯಂತ ಬಡ ಹಾಗೂ ಭ್ರಷ್ಟರಾಜ್ಯಗಳ ಯಾದಿಯಲ್ಲಿ ಕರ್ನಾಟಕವೂ ನಿಲ್ಲಬೇಕಾದೀತು ಎಂದು ಹೆದರಿಕೆಯಾಗುತ್ತದೆ. ರಾಜ್ಯೋತ್ಸವದ ಸಂಬಂಧಿಸಿದಂತೆ ಕನ್ನಡಿಗರು ಏನನ್ನಾದರೂ ಮಾಡಿಕೊಳ್ಳಲಿ, ನವೆಂಬರ್ ಒಂದರಿಂದ ಡಿಸೆಂಬರ್ ಕೊನೆಯವರೆಗೆ ರಾಜ್ಯೋತ್ಸವವನ್ನು ಆಚರಿಸದೇ ಏನೇ ಆಚರಣೆಗಳಿದ್ದರೂ ಅದನ್ನು ಕೇವಲ ಒಂದು ದಿನಕ್ಕೆ ಮೀಸಲಾಗಿಟ್ಟರೆ ಸಾಕು, ಅಷ್ಟೇ.

Friday, October 26, 2007

ಸಾರೆಕೊಪ್ಪ ಬಂಗಾರಪ್ಪನವರಿಗೆ ಎಪ್ಪತ್ತೈದರ ಸಂಭ್ರಮ

ಹ್ಞೂ, ಬಹಳ ಸ್ವಾರಸ್ಯಕರವಾಗಿದೆ, ಇವತ್ತು ಬಂಗಾರಪ್ಪನವರ ಬಗ್ಗೆ ’ಅಂತರಂಗ’ದಲ್ಲಿ ಏನೇನು ಬರೆದಿದ್ದೇನೆ ಅಂತ ಹುಡುಕಿದರೆ ಒಂದೇ ಒಂದು ಲೇಖನ ಸಿಗಲಿಲ್ಲ! ನಮ್ಮೂರು ಆನವಟ್ಟಿಯ ವಾತಾವರಣದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಬಂಗಾರಪ್ಪನವರ ಪ್ರಭಾವದ ಬಗ್ಗೆ ಬರೆಯದೇ ಹೋದರೆ ಹೇಗೆ ಎಂದು ಒಮ್ಮೆಯೇ ನನಗನ್ನಿಸಿದ್ದು ಇವತ್ತು ಪ್ರಜಾವಾಣಿಯಲ್ಲಿ ಅವರ ೭೫ ನೇ ಹುಟ್ಟು ಹಬ್ಬದ ಸಂದರ್ಶನವನ್ನು ಓದಿದ ಮೇಲೆ. ಆದರೂ ಈ ಮನುಷ್ಯ ಬಹಳ ಗಟ್ಟಿಗ, ಇವತ್ತಿಗೂ ಶಟಲ್ ಬ್ಯಾಡ್‌ಮಿಂಟನ್ ಆಡೋದಿರಲಿ, ಹಿಂದೂಸ್ತಾನಿಯನ್ನು ಹಾಡೋದಿರಲಿ ನಿಲ್ಲಿಸಿದಂತೆ ಕಾಣೋದಿಲ್ಲ.

ಎಂಭತ್ತರ ದಶಕದಲ್ಲಿ ಬಂಗಾರಪ್ಪ ರಾಜ್ಯ ಮಂತ್ರಿಗಳಾಗಿದ್ದಾಗ ಯಾವತ್ತಾದರೊಂದು ದಿನ ಆನವಟ್ಟಿಯ ಬಳಿಯ ಲಕ್ಕವಳ್ಳಿಗೆ ಬಂದರೆ ಅಲ್ಲಿ ಸ್ಥಳೀಯ ಯುವಕರೊಡನೆ ಶಟಲ್ ಬ್ಯಾಡ್‌ಮಿಂಟನ್ ಆಡುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ, ಆ ಆಟಗಳಿಗೆ ನಮ್ಮಣ್ಣನೂ ಹೋಗುತ್ತಿದ್ದ. ಯಾರೂ ಎಷ್ಟೇ ದಣಿದರೂ ಬಂಗಾರಪ್ಪನವರಿಗೆ ಸುಸ್ತೆಂಬುದೇ ಇಲ್ಲ. ಅದೇ ರೀತಿ ಬಂಗಾರಪ್ಪನವರನ್ನು ಕೇವಲ ರಾಜಕಾರಣಿಯಾಗಿ ಬಲ್ಲವರು ಅವರು ಸಂಗೀತವನ್ನೂ ಕಲಿತಿದ್ದಾರೆ ಎಂದು ಹೇಳಿದರೆ ನಂಬಲಾರರು. ಕೋಳೀಕೆರಂಗ ಹಾಡನ್ನು ಬಂಗಾರಪ್ಪ ತಮ್ಮ ಅಭಿಮಾನಿಗಳ ಎದಿರು ಹೇಳಿ ಬೇಕಾದಷ್ಟು ಚಪ್ಪಾಳೆಯನ್ನು ಗಿಟ್ಟಿಸಿರೋದು ಸೊರಬಾ ತಾಲ್ಲೂಕಿನ ಜನರು ಮರೆಯಲಾರರು. ಡೊಳ್ಳು ಕುಣಿಯುವವರೊಡಗೂಡಿ ತಾವೇ ಡೊಳ್ಳು ಕಟ್ಟಿಕೊಂಡು ಕುಣಿದರೆ ತಮ್ಮ ಸಹಾಯಕ್ಕೆಂದು ಬಂದವರ ಕಷ್ಟವನ್ನು ಕೇಳಿ ಮರುಕಪಟ್ಟಿದ್ದೂ ಇದೆ. ಬಂಗಾರಪ್ಪನವರ ಕ್ರಿಯಾತ್ಮಕ ವೈಯಕ್ತಿಕ ಜೀವನಕ್ಕೂ ರಾಜಕೀಯ ಜೀವನಕ್ಕೂ ಬಹಳಷ್ಟು ಸಾಮ್ಯತೆ ಇದೆ. ಜನತಾಪಕ್ಷ, ಕಾಂಗ್ರೆಸ್ ಮುಂತಾದವುಗಳನ್ನು ಧಿಕ್ಕರಿಸಿ ಹಿಂದೆ ಕ್ರಾಂತಿರಂಗವೆಂಬ ಪಕ್ಷವನ್ನು ಕಟ್ಟಿದ ನೇತಾರ ಇಂದು ಮುಲಾಯಮ್ ಒಡಗೂಡಿ ಉತ್ತರ ಭಾರತದ ಸಮಾಜವಾದದ ಅಲೆಯನ್ನು ದಕ್ಷಿಣಕ್ಕೆ ತರಲು ಪ್ರಯತ್ನಿಸಿದ್ದಾರೆ.

ಬಂಗಾರಪ್ಪನವರಿಗೆ ಎಪ್ಪತ್ತೈದು ವರ್ಷಗಳು ಎಂದರೆ ನಂಬಲು ಕಷ್ಟವಾದೀತು. ಶಾಸಕರಾಗಿ ಸಂಸದರಾಗಿ ಇಂದಿಗೂ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಇವರನ್ನು ಶಿವಮೊಗ್ಗದ ಜನತೆ, ವಿಶೇಷವಾಗಿ ಸಾಗರ, ಸೊರಬದ ಜನತೆ ಖಂಡಿತವಾಗಿ ಸ್ಮರಿಸಿಕೊಳ್ಳುತ್ತದೆ. ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಬಂಗಾರಪ್ಪನವರ ಪ್ರಾಬಲ್ಯ ಬಹಳಷ್ಟಿತ್ತು, ಇತ್ತೀಚೆಗಷ್ಟೇ ಅವರು ಅಲ್ಪಸಂಖ್ಯಾತ ಸಮಾಜವಾದವನ್ನು ಆಲಂಗಿಸಿಕೊಂಡ ಮೇಲೆ ಅವರ ಮಾತಿನ ಹರಿತ ಕಡಿಮೆಯಾದಂತೆ ಕಂಡುಬರುತ್ತದೆ. ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾದಾಗಈ ಸೊಟ್ಟಮೂತಿಯವನು ಏನು ಮಾಡಿಯಾನು ಎಂದು ಪ್ರಶ್ನೆ ಕೇಳುತ್ತಿದ್ದ ಜನ ಅವರ ಯೋಜನೆಗಳಲ್ಲಿ ಮುಖ್ಯವಾದ ಆಶ್ರಯ, ವಿಶ್ವ ಮುಂತಾದವುಗಳನ್ನು ಇಂದಿಗೂ ಕೊಂಡಾಡುತ್ತಾರೆ. ಬೇಕಾದಷ್ಟು ಆಸ್ತಿ-ಅಂತಸ್ತು ಮಾಡಿಟ್ಟಿದ್ದಾರೆ ರಾಜಕೀಯ ಸೇರಿಕೊಂಡು ಎಂದು ರಾಗ ಹೊರಡಿಸುವವರಿಗೆ ಸೆಡ್ಡು ಹೊಡೆಯುವಂತೆ ಬಂಗಾರಪ್ಪನವರ ಆಸ್ತಿ-ಅಂತಸ್ತು ಬೇಕಾದಷ್ಟಿದೆ. ಮಗ ಕುಮಾರ್ ಸಹ ರಾಜಕೀಯದಲ್ಲಿ ತೊಡಗಿಕೊಂಡು ಮುಂದಿನ ನಾಯಕನಾಗಿ ಕನಸನ್ನು ಕಾಣುವಂತೆ ವೇದಿಕೆಯನ್ನು ಸೃಷ್ಟಿಸಿದ್ದಾರೆ.

ಬಂಗಾರಪ್ಪನವರು ಒಂದು ಕಾಲದಲ್ಲಿ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಗೋಪಾಲಗೌಡರ ಸಮಾಜವಾದವನ್ನು ಒಪ್ಪಿ ಅದೇ ಹಾದಿಯನ್ನು ತುಳಿದು ರಾಜಕೀಯದಲ್ಲಿ ನಲವತ್ತು ವರ್ಷಗಳನ್ನು ಕಳೆದ ಪ್ರಬುದ್ಧತೆಗೆ ಸಂದ ಗೌರವ, ಕೀರ್ತಿ ಹಾಗೂ ಉತ್ಪತ್ತಿ ಬೇಕಾದಷ್ಟಿದೆ. ಅರವತ್ತು ಎಪ್ಪತ್ತರ ದಶಕಗಳಲ್ಲಿ ಅದೇ ತಾನೇ ರಾಜಕೀಯ ಚಿಗುರೊಡೆಯುತ್ತಿದ್ದ ಕಾಲದಲ್ಲಿ ಸಮಾಜಕ್ಕೆ ನ್ಯಾಯ ಒದಗಿಸುವ, ಬೇಧ-ಭಾವವನ್ನು ಕಡಿಮೆ ಮಾಡುವ ಸಾಮಾಜಿಕ ನೆಲೆಗಟ್ಟನ್ನು ಕನಸಾಗಿ ಕಂಡವರು ಹೆಚ್ಚು ಜನ ಇನ್ನೂ ಉಳಿದಿರಲಾರರು. ಆದರೆ ಆಗ ರಾಜಕೀಯಕ್ಕೆ ಧುಮುಕಿದವರೆಲ್ಲರೂ ಇಂದು ಬೇಕಾದಷ್ಟು ಸಂಪನ್ಮೂಲಗಳನ್ನು ತಮ್ಮದಾಗಿಸಿಕೊಂಡಿದ್ದಾರೆ, ತಲೆ-ತಲೆಮಾರಿಗೆ ಸಾಕಾಗುವಷ್ಟನ್ನು ಮಾಡಿಕೊಂಡಿದ್ದಾರೆ. ಅದು ತಪ್ಪೋ ಸರಿಯೋ ಬಂಗಾರಪ್ಪನವರೂ ಎಲ್ಲರೊಳಗೊಂದಾಗಿ ಹೋದರು. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ನಲವತ್ತು ವರ್ಷಗಳ ಕಾಲ ಒಂದು ತಾಲ್ಲೂಕು, ಜಿಲ್ಲೆಯನ್ನು ಆಳಿಕೊಂಡಿದ್ದ ಯಾವೊಬ್ಬ ರಾಜಕಾರಣಿಯಾಗಲೀ, ಅವರ ತಲೆಮಾರಾಗಲೀ ಅಲ್ಲಿ ಸಾಕಷ್ಟನ್ನು ಮಾಡಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸೊರಬಾ ತಾಲ್ಲೂಕಿಗೆ ಇವತ್ತಿಗೂ ಸಹ ಸರಿಯಾದ ರಸ್ತೆಗಳು ಎಂಬುವುದೇನಿಲ್ಲ. ಸೊರಬಾ ತಾಲ್ಲೂಕಿನಲ್ಲಿ ಸಾಕಷ್ಟು ಹೆಸರು ಮಾಡಿರುವ ಗುಡವಿ ಪಕ್ಷಿಧಾಮಕ್ಕೆ ಹೋಗುವ ರಸ್ತೆಯನ್ನು ನೋಡಿದರೆ ತಾಲ್ಲೂಕಿನ ಹಣೆಬರಹವನ್ನೇ ಹೇಳಿಬಿಡಬಹುದು. ಅಲ್ಲಲ್ಲಿ ಹೂಳು ತುಂಬಿ ಬೇಸಿಗೆಯಲ್ಲಿ ನೀರು ನಿಲ್ಲದ ಕೆರೆಕಟ್ಟೆಗಳನ್ನು ನೋಡಿ ಮರುಗಬಹುದು. ಮುಖ್ಯ ರಸ್ತೆಗಳಲ್ಲಿ ಕಾಣಸಿಗುವ ಶಿತಿಲಗೊಂಡ ಸೇತುವೆಗಳು, ಕಳಪೆ ಕಾಮಗಾರಿಗೆ ಸಾಕ್ಷಿ ಒದಗಿಸುವ ಸರ್ಕಾರಿ ಕಟ್ಟಡ, ವಸತಿಗೃಹ, ಕಛೇರಿಗಳನ್ನು ನೋಡಿದಾಗಲೆಲ್ಲ ನಲವತ್ತು ವರ್ಷದ ಕೌಟುಂಬಿಕ ರಾಜಕಾರಣವೇ ಸೊರಬಾ ತಾಲ್ಲೂಕಿನ ಶಾಪವೇ ಎಂದು ಅನ್ನಿಸದೇ ಇರದು. ಸೊರಬಾ ಆನವಟ್ಟಿಯ ಸುತ್ತಮುತ್ತಲು ಹಾಡುಹಗಲೂ ಕದ್ದು ಸಾಗಿಸುವ ಅರಣ್ಯ ಸಂಪತ್ತನ್ನು ತಡೆದಿದ್ದರೆ ಇಂದಿಗೂ ಸ್ವಾಭಾವಿಕವಾಗಿ ಬೆಳೆಯುವ ಗಂಧದ ಮರಗಳನ್ನು ನಾವೆಲ್ಲ ನೋಡಬಹುದಿತ್ತು. ಮಂಡಲ ಪಂಚಾಯತಿ ಮತ್ತೊಂದೇನೇ ವ್ಯವಸ್ಥೆ ಬಂದರೂ ವಾರಕ್ಕೊಮ್ಮೆ ಸಾವಿರಾರು ಜನ ಸೇರುವ ಆನವಟ್ಟಿಯ ಸಂತೇಪೇಟೆಗೆ ಒಂದು ಸದ್ಗತಿಯನ್ನು ಒದಗಿಸಿಕೊಡಬಹುದಿತ್ತು. ಮೊದಲು ಮಲೆನಾಡಿದ್ದುದು, ನಂತರ ಅರೆಮಲೆನಾಡಾಗಿ ಈಗ ಎಲ್ಲಿ ನೋಡಿದರೂ ಬಯಲು ಸೀಮೆಯ ಅವಶೇಷಗಳಾದಂತಹ ತಾಲ್ಲೂಕಿನ ನಾನಾ ಭಾಗಗಳನ್ನು ಊರ್ಜಿತಗೊಳಿಸುವುದಿರಲಿ, ಅಲ್ಲಿಂದ ಜನರು ಕಾಫೀ ಸೀಮೆಗೆ ಗುಳೆ ಹೋಗುವುದನ್ನು ತಪ್ಪಿಸಬಹುದಿತ್ತು. ಯಾವುದೂ ಬೇಡ, ಮಹಾನ್ ವಿಶ್ವೇಶ್ವರಯ್ಯನವರು ಮಾಡಿದಂತೆ ಶಿವಮೊಗ್ಗದ ಸುತ್ತಮುತ್ತಲು ಒಂದಿಷ್ಟು ಕಾರ್ಖಾನೆಗಳನ್ನು ಬಂಗಾರಪ್ಪನವರು ಮುಖ್ಯಮಂತ್ರಿಯಾದಾಗ ಕಟ್ಟಿದ್ದರೆ ಜಿಲ್ಲೆಯ ಜನ ಇವತ್ತಿಗೂ ಅವರ ಹೆಸರನ್ನು ಹೇಳಿ ನೀರು ಕುಡಿಯಬಹುದಿತ್ತು.

ಬಂಗಾರಪ್ಪನವರು ’ನಾನು ಕೋಳೀಕೆರಂಗ’ ಹಾಡಿನ ಚರಣಗಳಂತೆ ತಮ್ಮ ಹುಟ್ಟೂರನ್ನು ನೆನೆಸಿಕೊಳ್ಳುತ್ತಾರೋ ಇಲ್ಲವೋ ಅಲ್ಲಿನ ಜನರಂತೂ ಅವರನ್ನು ಖಂಡಿತ ಹಚ್ಚಿಕೊಂಡಿದ್ದಾರೆ. ಆ ನೆಲ ಹೊರಹೊಮ್ಮಿಸಿದ ಗಟ್ಟಿ ನಾಯಕ ಬಂಗಾರಪ್ಪನವರಿಗೆ ಎಪ್ಪತ್ತೈದರ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು.

Wednesday, October 24, 2007

ಅಕ್ಟೋಬರ್ ಮುಗೀತು, ದೀಪಾವಳಿ ಬಂತು!

ಏನಪ್ಪಾ ಇದು ನೋಡ್ ನೋಡ್ತಾನೇ ಅಕ್ಟೋಬರ್ ಬಂತು ಹಂಗೇ ಮಾಯವೂ ಆಗ್ತಾ ಇದೆಯಲ್ಲಾ ಅಂತ ಅನ್ಸಿದ್ದು ಇವತ್ತು ಬೆಳಿಗ್ಗೆ. ನಾನು ಅಕ್ಟೋಬರ್ ಅನ್ನು ಜೀರ್ಣಿಸಿಕೊಳ್ಳಬೇಕು ಅನ್ನೋ ಅಷ್ಟರಲ್ಲಿ ಅದು ಮುಗಿತಾನೇ ಬಂದೋಯ್ತು. ಈ ಅಮೇರಿಕದ್ ಲೈಫ್ ಬಗ್ಗೆ ಒಂದೇ ಸಾಲ್ನಲ್ಲಿ ಹೇಳ್ಬೇಕು ಅಂದ್ರೆ ಇಲ್ಲಿ ಬದುಕು ವಾರದಿಂದ ವಾರಕ್ಕೆ ಉರುಳ್ತಾ ಉರುಳ್ತಾ ಕೊನೆಗೆ ತಿಂಗಳು, ವರ್ಷಗಳು ಮುಗಿದು ಹೋಗೋದೇ ಗೊತ್ತಾಗಲ್ಲ. ಇವತ್ತೂ ನಾಳೇ ಅಂತ ಕಾಲ ತಳ್ಳೀ ತಳ್ಳೀ ವರ್ಷದ ಮೇಲೆ ವರ್ಷಾ ಉರುಳಿ ಅದ್ಯಾವ್ದೋ ಹಳೇ ಫೋಟೋ ನೋಡ್ದಾಗ್ಲೇ ಅನ್ಸೋದು ’ಓಹ್, ನಾನು ಹಿಂಗಿದ್ನಾ’ ಅಂತ! ಮೊನ್ನೇ ಇನ್ನೂ ವಯಸ್ಸಾದವರ ಸಂಘದ ಬಗ್ಗೆ ಬರೆದು ಇನ್ನೊಂದು ಸರ್ತಿ ಅದೇ ಸಬ್ಜೆಕ್ಟ್ ಹಿಡಕೊಂಡ್ ಬೈರಿಗಿ ಬಿಡೋದಿಲ್ಲ ಹೆದರ್ಕೋ ಬೇಡಿ, ಇವತ್ತಿನ ಸಮಾಚಾರ ಬೇರೇನೇ...ಬಟ್ ಯಾವ್ದೇ ಸಮಾಚಾರ ಹಿಡ್ಕೊಂಡ್ ಹೊರಟ್ರೂ ಒಂದ್ ರೀತಿ ’ಅಳುಮುಂಜಿ’ ಫ್ಲೇವರ್ ಇರೋದಿಲ್ಲಾ ಅಂತಂದ್ರೆ ’ಅಂತರಂಗ’ದ ವಿಶೇಷವಾದ್ರೂ ಏನ್ ಉಳಿಯುತ್ತೆ ಹೇಳಿ.

ನನಗೆ ಈ ಪ್ರಶ್ನೆಯನ್ನ ಬೇಕಾದಷ್ಟು ಜನ ಕೇಳಿದ್ದಾರೆ, ’ನೀವು ಅಮೇರಿಕದಲ್ಲಿ ಸೆಟ್ಲ್ ಆಗಿದ್ದೀರಾ?’ ಅಂತ. ಈ ಪ್ರಶ್ನೆಗೆ ನನಗೆ ಹೇಗ್ ಉತ್ರಾ ಕೊಡಬೇಕು ಅನ್ನೋದೇ ಗೊತ್ತಾಗಲ್ಲ. ಒಂದು ಕಡೆ ’ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು’ ಅನ್ನೋ ಚೇತನಾ ನಮ್ದು. ಅದರ ಜೊತೆಯಲ್ಲಿ ಹೋದಕಡೆ ನಮ್ಮ ಬೇರುಗಳನ್ನ ಆದಷ್ಟು ಆಳವಾಗಿ ಬಿಟ್ಟು ನೆಲ-ನೀರಿನ ರುಚಿ ನೋಡೋ ಗುಣವೂ ನಮ್ಮದು. ಇದು ನಮ್ಮ ದೇಶವಲ್ಲ ಅನ್ನೋ ವಿದೇಶೀ ಭಾವನೆ ಒಂದು ಕಡೆ, ದಿನೇದಿನೇ ನಾವೂ ಇಲ್ಲಿಯವರೇ ಆಗಿ ಹೋಗಿದ್ದೇವೆ ಅನ್ನೋ ಅನಿವಾಸಿಗಳ ಪೆಚ್ಚುಮೋರೆ ಮತ್ತೊಂದು ಕಡೆ. ಈ ಕಾನ್‌ಫ್ಲಿಕ್ಟ್ ಮೆಂಟಾಲಿಟಿ ಇಟ್ಕೊಂಡ್ ಯಾರಾದ್ರೂ ಎಲ್ಲಾದ್ರೂ ಸೆಟ್ಲೂ ಅನ್ನೋದೇನಾದ್ರೂ ಇದೆಯಾ ಅನ್ನೋದು ನನ್ನ ಪ್ರಶ್ನೆ. ಎಷ್ಟು ದುಡುದ್ರೂ ಎಲ್ಲಿಗೂ ಸಾಲಲ್ಲ ಅಂತ ಹಿಂದೆ ಎಲ್ಲೋ ಒಂದು ಕಡೆ ಬರೆದಿದ್ದೆ, ಇವತ್ತು ನಮ್ ಸ್ನೇಹಿತ್ರೊಬ್ರ ಜೊತೆ ಮಾತಾಡ್ತಾ ಇರಬೇಕಾದ್ರೆ ಅವರೇ ಅಂದ್ರು ’ದುಡ್ಡೂ ಅಂದ್ರೆ ಏನು ಅಂತ ಕೇಳೋ ಹಂಗ್ ಆಗಿದೆ’ ಅಂತ.

ದುಡ್ಡೂ ಅಂದ ಮೇಲೆ ನೆನಪಿಗೆ ಬಂತು, ನಮ್ಮೂರಲ್ಲಿ ನಾವು ಚಿಕ್ಕವರಿರಬೇಕಾದ್ರೇ ಆಯುಧಪೂಜೆಗೆ ನಮ್ ನಮ್ ಪೆನ್ನೂ, ಪುಸ್ತಕಾ ಎಲ್ಲಾ ಇಟ್ಟು ಅರಿಶಿಣ ಕುಂಕುಮ ಹಚ್ಚಿ ’ಆಯುಧ’ ಅನ್ನೋ ಭಾವನೇನಲ್ಲಿ ಪೂಜೆ ಮಾಡ್‌ತಿದ್ವಿ, ಆದ್ರೆ ಇಲ್ಲಿ ಅದೇನನ್ನು ಇಟ್ಟು ಪೂಜೇ ಮಾಡೋಣ ಹೇಳಿ. ಡಾಕ್ಟ್ರಾದ್ರೇ ಸ್ಟೆತಾಸ್ಕೋಪ್ ಇಟ್ಟು ಪೂಜೆ ಮಾಡ್ತಾರೋ ಏನೋ, ನಾವು ಬೆಳಿಗ್ಗಿಂದ ಸಂಜೇವರೆಗೂ ಸಣ್ಣ ಪರದೇ ನೋಡ್ಕೊಂಡು ಕುಟ್ಟುತಾ ಕೂರೋರು ಯಾವ್ದಾದ್ರೂ ಹಳೇ ಕಂಪ್ಯೂಟರ್ ಕೀ ಬೋರ್ಡ್ ಇಟ್ಟು ಪೂಜೆ ಮಾಡಿದ್ರೆ ಹೇಗೆ ಅಂತ ಮೊನ್ನೆ ನೆನಪಿಗೆ ಬಂತು. ಇವತ್ತಿಗೂ ನಮ್ಮನೇನಲ್ಲಿ ದೀಪಾವಳಿಯ ಲಕ್ಷ್ಮೀಪೂಜೆಗೆ ಭಾರತದ ದುಡ್ಡೂ-ಕಾಸನ್ನೇ ಇಟ್ಟು ಪೂಜೇ ಮಾಡೋರ್ ನಾವು, ಜೊತೆಗೆ ಅಮೇರಿಕನ್ ಡಾಲರ್ರೂ, ಕಾಯಿನ್ನುಗಳನ್ನೂ ಸೇರ್ಸಿಡ್‌ತೀವಿ, ಪಾಪ ಆ ಲಕ್ಷ್ಮಿಗೆ ಎಷ್ಟೊಂದ್ ಕನ್‌ಫ್ಯೂಷನ್ ಆಗುತ್ತೋ ಯಾರಿಗ್ ಗೊತ್ತು?

ದಿನಗಳು ಬರ್ತಾವ್ ಸಾರ್, ಮತ್ತೆ ಹಂಗೇ ಹೋಗ್ತಾವೇ...ನಾವು ಎಲ್ಲೂ ಸೆಟ್ಲ್ ಆಗಲ್ಲ, ಇಲ್ಲೂ ಇರಲ್ಲ ಅಲ್ಲೂ ಹೋಗಲ್ಲ. ಅಪರೂಪಕ್ಕೊಮ್ಮೆ ಪ್ರೆಂಡ್ಸ್‌ಗಳು ಸೇರ್ಕೊಂಡಾಗ ಮೊದಲೆಲ್ಲಾ ಗ್ರೀನ್‌ಕಾರ್ಡ್ ಬಗ್ಗೆ ಮಾತಾಡ್ಕೊಂಡು ಹೊಟ್ಟೇ ತುಂಬುಕೊಳ್ತಾ ಇದ್ದ ನಮಗೆ ಇವತ್ತು ಬುಷ್-ಬ್ರೌನುಗಳ ಬಗ್ಗೆ ನೆನಸಿಕೊಂಡು ಮಾತನಾಡೋ ಸ್ಥಿತಿ ಬಂದಿರೋದನ್ನ ನೋಡಿ, ಇನ್ನೊಂದ್ ಸ್ವಲ್ಪ ದಿನದಲ್ಲೇ ’ನಾನೂ ಅಮೇರಿಕನ್ ಆಗಿ ಬಿಟ್ಟೇ!’ ಅನ್ನೋ ಮಾತುಗಳು ದೂರವೇ ಇಲ್ಲ ಅಂತ ಅನ್ಸುತ್ತೆ. ದೂರವಾದ ಅಲ್ಲಿಯದು ದಿನಗಳು ಕಳೆದಂತೆ ಇನ್ನಷ್ಟು ದೂರವಾಗ್ತಾ ಹೋಗುತ್ತೆ, ಹತ್ತಿರವಾದ ಇಲ್ಲಿಯದು ಯಾವತ್ತಿದ್ರೂ ಅಷ್ಟೊಂದ್ ಹತ್ರಾ ಬರೋದೇ ಇಲ್ಲ! ಕಮ್ಮ್ಯೂನಿಟಿ ಸರ್ವೀಸುಗಳಲ್ಲಿ ತೊಡಗಿಸಿಕೊಳ್ಳಬೇಕು, ರಾಜಕೀಯ ಪ್ರೇರಣೆಯನ್ನು ಪಡೆದುಕೊಂಡು ಒಂದು ರೀತಿಯ ’ಆಕ್ಟಿವಿಷ್ಟ್’ ಆಗಬೇಕು ಅಂತ ಎಷ್ಟೊಂದು ಸರ್ತಿ ಅನ್ಸುತ್ತೆ. ಸೋಮವಾರದಿಂದ ಶುಕ್ರವಾರದವರೆಗೆ ದುಡಿದು ಶನಿವಾರ, ಭಾನುವಾರ ಬದುಕೋ ನಮಗೆ ಇತ್ತೀಚೆಗೆ ನಮ್ಮೂರಿನ ಖೋತಾಸ್ ಕಾಫೀನೂ ರುಚಿಸದೇ ಇಲ್ಲಿಯ ಕಾಫಿಯ ಪರಿಮಳವೇ ಆಗಬೇಕು ಅನ್ನೋ ಮನಸ್ಥಿತಿಯಲ್ಲಿ ಏನೋ ಕಡಿಮೆ ಆಗಿದೆ ಅಂತ್ಲೇ ನನಗೆ ಅನುಮಾನ. ನಾಲಿಗೆ ರುಚಿ ಹೆಚ್ಚಾಗ್ಲೀ ಅಂತ ಇಡ್ಲೀ-ದೋಸೆ ಮಾಡ್ಕೊಂಡ್ ತಿಂದ್ರೂ ಅದರ ಹಿಂದೇನೂ ಯಾವ್ದೋ ಸಮಾಧಾನ ಅನ್ನೋದೇ ಇಲ್ಲ. ಭಾರತದಲ್ಲಿದ್ದಾಗ ಒಂದೇ ಒಂದು ದಿನ ಓಟ್‌ಮೀಲ್ ತಿನ್ನದ ನಾವು ಇಲ್ಲಿ ಅದನ್ನ ಫುಲ್ ಮೀಲ್ ಮಾಡ್ಕೊಂಡು ತಿನ್ನೋ ಕಾಯಕದಲ್ಲಿ ಯಾಕೋ ಒಂದು ವ್ಯತಿರಿಕ್ತ ಮನಸ್ಥಿತಿ ಕಾಣಿಸ್ತಾ ಇರೋದು ನನ್ನೊಬ್ಬನಿಗೆ ಮಾತ್ರಾ ಅಲ್ಲಾ ತಾನೆ?

ನೀವ್ ಕೇಳ್ತೀರಾ, ’ನೀವ್ ಅಮೇರಿಕದಲ್ಲಿ ಸೆಟ್ಲ್ ಆಗಿದ್ದೀರಾ?’ ಅಂತ, ಅದಕ್ಕೇನಂತ ಉತ್ರ ಹೇಳೋಣ? ’ಹೌದು’, ಎಂದರೆ ’ಹಾಗಾದ್ರೇ ಹಿಂತಿರುಗಿ ಬರಲ್ವಾ?’ ಅನ್ನೋ ಪ್ರಶ್ನೆ ರೆಡಿ ಇಟ್ಟುಕೊಂಡಿರ್ತೀರಿ. ’ಇಲ್ಲ’, ಎಂದರೆ ’ಹಾಗಾದ್ರೆ ಯಾವತ್ತು ಬರ್ತೀರಾ ವಾಪಾಸ್ಸು?’ ಅಂತ ಕೇಳ್ತೀರಿ. ಈ ಎಲ್ಲ ಪ್ರಶ್ನೆಗಳಿಗೆ ನಾನಂತೂ ನಿಖರವಾಗಿ ಉತ್ತರ ಕೊಡದ ಸ್ಥಿತಿಗೆ ಬಂದುಬಿಟ್ಟಿದ್ದೇನೆ ಅಂತ ಸಹಜವಾಗೇ ಹೇಳ್ತೀನಿ. ಅದನ್ನ ಕೇಳಿ ಉತ್ತರವನ್ನ ಯಾರು ಯಾರು ಹೇಗೆ ಹೇಗೆ ಜೀರ್ಣಿಸಿಕೊಳ್ತಾರೋ ಅದು ಅವರ ಸಮಸ್ಯೆ. ಆದ್ರೆ ಒಂದ್ ವಿಷಯವಂತೂ ನಿಜ, ಇಲ್ಲಿ ಸೆಟ್ಲ್ ಆದವರಿಗೆ, ಇಲ್ಲಿನಂತೆಯೇ ಬದುಕೋರಿಗೆ ಅಷ್ಟೇ ಕಷ್ಟನಷ್ಟಗಳು ಇರ್ತಾವೆ. ನಾವು ಯಾವತ್ತಿದ್ರೂ ಇಮಿಗ್ರೆಂಟ್ಸೇ ಅಂದ್ಕೊಂಡು ಚಿಕ್ಕದಾಗಿ ಚೊಕ್ಕದಾಗಿ ಜೀವ್ನಾ ನಡೆಸಿಕೊಂಡಿರೋರಿಗೆ ಹಿಂತಿರುಗಿ ಹೋಗೋದು ಸುಲಭಾ ಅಗುತ್ತೇ ಅನ್ನೋದು ನನ್ನ ಅನಿಸಿಕೆ. ಆದ್ರೆ, ನಮ್ಮೆಲ್ಲರ ಮನಸ್ನಲ್ಲೂ ಇವತ್ತಲ್ಲ ನಾಳೆ ಒಂದಲ್ಲ ಒಂದು ಕಡೆ ಸೆಟ್ಲ್ ಆಗಬೇಕು ಅನ್ನೋ ಆಶಯ ಯಾವತ್ತಿದ್ರೂ ಜೀವಂತ ಇದ್ದೇ ಇರುತ್ತೇ ಅನ್ನೋದೇನೋ ನಿಜವೇ.

ಅಕ್ಟೋಬರ್ ಬಂದು ಹೋದ ಮೇಲೆ ಏನಿದ್ರೂ ರಜಾದಿನಗಳ ಸುಗ್ಗಿ, ಮುಂಬರುವ ಥ್ಯಾಂಕ್ಸ್ ಗಿವಿಂಗ್, ಕ್ರಿಸ್ಮಸ್, ಹೊಸವರ್ಷ ಇವೆಲ್ಲ ತಮ್ಮ ಒಡಲಲ್ಲಿ ಒಂದಿಷ್ಟು ಸಂತೋಷ ಸಡಗರಗಳನ್ನು ತರುತ್ವೆ. ಯಾವ ಧರ್ಮದವರೇ ಇರಲಿ ಮಕ್ಕಳಿದ್ದೋರ್ ಮನೇನಲ್ಲಿ ಕ್ರಿಸ್ಮಸ್ ಟ್ರೀ ಇಟ್ಟು ಅಲಂಕಾರ ಮಾಡೋದನ್ನ ನಾನು ನೋಡಿದ್ದೀನಿ, ಅದೂ ಭಾರತೀಯರ ಮನೆಗಳಲ್ಲಿನ ಕ್ರಿಸ್ಮಸ್ ಪರಂಪರೆಯನ್ನು ಕಂಡು ಬೆರಗಾಗಿದ್ದೀನಿ. ನಮ್ಮನೇನಲ್ಲಿ ನಾವು ಕ್ರಿಸ್ಮಸ್ ಟ್ರೀ ಇಡೋಲ್ಲ, ಬದಲಿಗೆ ದೀಪಾವಳಿ ಹಾಗೂ ಯುಗಾದಿ ಹಬ್ಬಗಳಿಗೆ ಹೊರಗಡೆ ಸೀರಿಯಲ್ ಸೆಟ್ ಹಾಕಿ ಲೈಟ್‌ಗಳನ್ನು ಹಾಕ್ತೀನಿ, ಬಾಗಿಲಿಗೆ ಒಂದು ಸ್ವಲ್ಪ ಹೊತ್ತಾದ್ರೂ ಕುಡಿಕೆ ದೀಪವನ್ನು ಹಚ್ಚಿಡ್ತೀನಿ. ದೀಪಾವಳಿ ವರ್ಷದ ಯಾವ ದಿನ ಬಂದ್ರೂ ಯಾವ್ದೇ ಪ್ರೊಡಕ್ಷನ್ ಕೆಲ್ಸಾ ಇಲ್ಲಾ ಅಂತಂದ್ರೆ ಅವತ್ತಿನ ದಿನಾ ಒಂದು ರಜೆಯನ್ನು ಬಿಸಾಕಿ ನಮ್ಮ ನಮ್ಮ್ ಮಟ್ಟಿಗೆ ಹಬ್ಬದ ಆಚರಣೆಯನ್ನೂ ಮಾಡ್ತೀವಿ. ಅದೇ ಲಕ್ಷ್ಮೀ ಪೂಜೆ ಬಗ್ಗೆ ಹೇಳಿದ್ನಲ್ಲಾ, ಅದನ್ನ ಮಾತ್ರ ತಪ್ಪಿಸೋದಿಲ್ಲ ಏನಾದ್ರೂ! ದಸರೆ ಮುಗಿದ ಮೇಲೆ ಇಪ್ಪತ್ತು ದಿನಕ್ಕೆ ದೀಪಾವಳಿ, ಇನ್ನೊಂದೆರಡು ವಾರದಲ್ಲಿ ಬರೋ ದೀಪಾವಳಿ ಎಲ್ಲರಿಗೂ ಸಡಗರ ತರಲಿ.

Sunday, October 21, 2007

... ವಿಜಯದಶಮಿಯ ಬರುವಿಕೆಗೆ ಕಾಯುತ್ತಾ...

ಸದಾ ಮನಸ್ಸಿನಲ್ಲಿ ಮಡುಗಟ್ಟಿದ ಕೋಪ ಇರೋರ ಹಾಗಿನ ಮನೋಭಾವ - ಈ ವಿಜಯದಶಮೀ ಹೊತ್ತಿಗೆ ಯಾಕಪ್ಪಾ ಬಂತು ಎಂದು ಯೋಚಿಸಿಕೊಂಡರೆ ಬೇಕಾದಷ್ಟು ಕಾರಣಗಳು ಸ್ಪಷ್ಟವಾಗಿ ಕಂಡು ಬಂದವು. ನಾನು ದಿನಕ್ಕೊಂದು ಲಾಟರಿಯನ್ನು ಗೆದ್ದಿದ್ದೇನೆ ಎಂದು ಯಾವು ಯಾವುದೋ ದೇಶದಿಂದ "ಅಧಿಕೃತ" ಇ-ಮೇಲ್‌ಗಳು ಸ್ಪ್ಯಾಮ್‌ಗಳಾಗಿ ಬಂದು ಕಾಡುವುದೂ ಅಲ್ಲದೇ ಇರೋ ಒಂದೆರಡು ಇ-ಮೇಲ್ ಅಕೌಂಟುಗಳನ್ನು ಮಟ್ಟ ಹಾಕಿಕೊಂಡು ಅಟ್ಟಹಾಸ ಗೈಯುವುದು ಎಲ್ಲದಕ್ಕಿಂತ ಮೊದಲು ನಿಂತಿತು. ಪ್ರಪಂಚದಲ್ಲಿರೋ ದುಡ್ಡೆಲ್ಲಾ ಆಫ್ರಿಕಾದಲ್ಲಿ ತುಂಬಿಕೊಂಡು ಕಗ್ಗತ್ತಲಿನ ಖಂಡದಿಂದ ’ನಿಮ್ಮ ಸಹಾಯ ಬೇಕು’ ಎಂದು ಮೇಲ್ನೋಟಕ್ಕೆ ಸುಲಭವಾಗಿ ಮಿಲಿಯನ್ ಡಾಲರ್‌ಗಳನ್ನು ಕೊಡುವಂತೆ ಕಂಡುಬಂದರೂ ಅದರ ಹಿನ್ನೆಲೆಯಲ್ಲಿ ನೀವು ಚೂರೂ-ಪಾರೂ ಉಳಿಸಿರುವ ದುಡ್ಡನ್ನು ಕಬಳಿಸುವ ಒಂದು ಕುತಂತ್ರ ವ್ಯವಸ್ಥೆಯೇ ಇದೆ ಎಂದು ಯೋಚಿಸಿದರೆ ಕಂಪ್ಯೂಟರ್ ಪರದೆಯ ಮೇಲೆ ಪಿಚ್ಚ್ ಎಂದು ಉಗುಳಿ ಬಿಡೋಣವೆನ್ನಿಸುತ್ತದೆ. ಇಂಥ ಖದೀಮರ ಕಣ್ಣಿಗೆ ನಾವೆಲ್ಲರೂ ಪಾಪಿಷ್ಟರ ಹಾಗೆ ಕಂಡುಬರುವುದೂ ಅಲ್ಲದೇ ನಮ್ಮಂಥವರನ್ನು ಗೋಳು ಹೊಯ್ದುಕೊಳ್ಳುವುದೇ ಇವರ ಬಿಸಿನೆಸ್ ಎಂದು ಯೋಚಿಸಿಕೊಂಡಾಗಲೆಲ್ಲ ಪ್ರಪಂಚ ಎಂಥ ದುರ್ಗತಿಯತ್ತ ಸಾಗುತ್ತಿದೆ ಎನಿಸೋದಿಲ್ಲವೇ?

ನೀವೇ ಯೋಚಿಸಿ, ಒಂದು ವೆಬ್‌ಸೈಟ್ ಅನ್ನು ಹೋಸ್ಟ್ ಮಾಡುವುದಿರಲಿ, ISP ಸಹಾಯದ ಮೂಲಕ ಒಂದು ಇ-ಮೇಲ್ ಅನ್ನು ಕಳಿಸುವುದಿರಲಿ, ನಮ್ಮ ನಿಮ್ಮಂಥವರ ವೈಯುಕ್ತಿಕ ಇ-ಮೇಲ್ ಅಕೌಂಟನ್ನ ಸಣ್ಣ ಪ್ರೋಗ್ರಾಮುಗಳಿಗೆ ಅಳವಡಿಸಿ ದಿನಕ್ಕೆ ಮಿಲಿಯನ್‌ಗಟ್ಟಲೆ ಜನರಿಗೆ ಸ್ಪ್ಯಾಮ್ ಕಳಿಸುವುದಿರಲಿ ಇಂಥವೆಲ್ಲವೂ ಒಂದು IP-Network ವ್ಯವಸ್ಥೆಯಲ್ಲಿಯೇ ಆಗಬೇಕು ಎಂದು ನಂಬಿಕೊಂಡಿರುವವ ನಾನು. ಹೀಗಿರುವಾಗ ಪ್ರಪಂಚಕ್ಕೆಲ್ಲಾ ಸ್ಪ್ಯಾಮ್ ಕಳಿಸುವ unsolicited ಮೆಸ್ಸೇಜುಗಳನ್ನು ಕಳಿಸುವ ದಗಾಕೋರರನ್ನು ನಮ್ಮ ವ್ಯವಸ್ಥೆಗೆ ಬಗ್ಗು ಬಡಿಯಲೇಕೆ ಆಗದು? ಜೊತೆಗೆ ಎಷ್ಟೋ ಜನ ಅಮಾಯಕರ ಬ್ಯಾಂಕ್ ಅಕೌಂಟುಗಳನ್ನು ಅಕ್ರಮಿಸಿಕೊಂಡೋ ಅಥವಾ ಮುಟ್ಟಗೋಲು ಹಾಕಿಕೊಂಡೋ ಪ್ರಪಂಚದ ಯಾವುದೋ ಮೂಲೆಯಿಂದ ಇನ್ಯಾವುದೋ ಮೂಲೆಯಲ್ಲಿನ ಹಣವನ್ನು ಎಲೆಕ್ಟ್ರಾನಿಕಲಿ ದೋಚುವವರನ್ನೂ ತಡೆಯಲಾಗದೇ?

ಆರು ತಿಂಗಳ ಹಿಂದೆ ಒಂದು ಶುಕ್ರವಾರ ಅದ್ಯಾವುದೋ ಕೆಲಸದ ನಿಮಿತ್ತ ಆಫೀಸಿಗೆ ರಜೆ ಹಾಕಿ ಮಧ್ಯಾಹ್ನದ ಹೊತ್ತು ಕಂಪ್ಯೂಟರಿನಲ್ಲಿ ಏನನ್ನೋ ನೋಡುತ್ತಿದ್ದಾಗ ಎಲ್ಲಿಂದಲೋ ಹೀಗೇ ಒಂದು ಫೋನ್ ಕಾಲ್ ಬಂತು. ನನ್ನ ಕಾಲರ್ ಐಡಿ ಎಲ್ಲ ಸಂಖ್ಯೆಗಳನ್ನು 9999999999 ತೋರಿಸಿ ಖದೀಮರ ಕಾಲ್ ಇದು ಎಂದು ಮುಂಜಾಗರೂಕತೆಯನ್ನಾಗಲೇ ಕೊಟ್ಟಿತ್ತು. ಕೆಲವೊಮ್ಮೆ ಭಾರತದ ಕರೆಗಳು Unknown ಎಂದು ಬರುತ್ತವೆ ಅಥವಾ ಮತ್ತೆಲ್ಲಿಯದೋ ಸಂಖ್ಯೆಗಳನ್ನು ತೋರಿಸುತ್ತವೆಯಾದ್ದರಿಂದ ನಾನು ಕಾಲ್ ರಿಸೀವ್ ಮಾಡಿದೆ. ಆ ಕಡೆಯವನು ತಾನು IRS (Internal Revenue Service) ಕಡೆಯವನು ಎಂದು ಹೇಳಿ ತನ್ನ ಪರಿಚಯ ಮಾಡಿಕೊಂಡ. ಅವನ ಪ್ರಕಾರ ನನಗೆ IRS ನವರು ಆರು ಸಾವಿರ ಡಾಲರ್ ಕೊಡುತ್ತಾರಂತೆ, ಅದಕ್ಕೆ ಅವನು ನನ್ನ ಬಗ್ಗೆ ಕೆಲವೊಂದಿಷ್ಟು ವಿಷಯಗಳನ್ನು ಪಡೆದುಕೊಳ್ಳುವುದಾಗಿ ತಿಳಿಸಿದ. ನನಗಾಗಲೇ ಈ ರೀತಿಯ ಹೋಕ್ಸ್ ಕರೆಗಳ ಬಗ್ಗೆ ತಿಳಿದಿದ್ದರಿಂದ ಅವರ ಇಂಗಿತವನ್ನರಿಯಲು ನನಗೇನೂ ಕಷ್ಟವಾಗಲಿಲ್ಲ. ಆದರೂ ನೋಡೋಣವೆಂದುಕೊಂಡು ಸ್ವಲ್ಪ ಮಾತನಾಡತೊಡಗಿದೆ. ಅವನ್ ಇಂಗ್ಲೀಷ್ ಆಕ್ಸೆಂಟ್ ಆಫ್ರಿಕಾದವರ ಹಾಗಿತ್ತು. ಅಮೇರಿಕನ್ ಹೆಸರನ್ನು ಹೇಳುತ್ತಿದ್ದರೂ ಆ ಹೆಸರಿನ ಉಚ್ಚಾರ ಅಷ್ಟೊಂದು ಸ್ಪಷ್ಟವಾಗಿರಲಿಲ್ಲ. ಅವನ ಪ್ರವರವನ್ನು ವಿಚಾರಿಸಾಗಿ ಅವನು IRS ನಲ್ಲಿ ಸುಮಾರು ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ. ಅವನ ಆಫೀಸ್ ವಿಳಾಸವನ್ನು ಕೇಳಲು ವಾಷಿಂಗ್ಟನ್ ಡಿಸಿಯ ಯಾವುದೋ ಒಂದು ಫೋನೀ ವಿಳಾಸವನ್ನು ತಿಳಿಸಿದ - ನನಗೆ ಡಿಸಿಯ ಬಗ್ಗೆ ಗೊತ್ತಿದ್ದರೂ ಅವನ ಜೊತೆ ಮಾತನಾಡುತ್ತಲೇ IRS ಅಫೀಷಿಯಲ್ ವೆಬ್ ಸೈಟ್ ನೋಡಲಾಗಿ ಅವನು ಹೇಳುತ್ತಿರುವ ಅಡ್ರೆಸ್ ವ್ಯಾಲಿಡ್ ಅಲ್ಲವೆಂದು ತಿಳಿಯಿತು. ನಿನ್ನ ಸೂಪರ್‌ವೈಸರ್ ಜೊತೆ ಮಾತನಾಡಬೇಕು ಎಂದರೆ, ಮೊದಲ ಖದೀಮನಿಗಿಂತಲೂ ಮತ್ತೊಬ್ಬ ಖದೀಮ ಲೈನಿಗೆ ಬಂದ, ಅವನೂ ಸುಳ್ಳಿನ ಮೇಲೆ ಸುಳ್ಳು ಹೇಳುವವನೇ.

ಅವರ ವಿಳಾಸ ಸುಳ್ಳು, ಹೆಸರುಗಳು ಸುಳ್ಳು, ಎಷ್ಟು ಕೇಳಿದರೂ ಅವರ ಫೋನ್ ನಂಬರ್ ಕೊಡಲಾರದವರು. ಅವರ ಬಿಸಿನೆಸ್ಸಿನ ಮೂಲಮಂತ್ರ ಇನ್ನೊಬ್ಬರಿಗೆ ನಾಮ ಹಾಕುವುದು. ಇನ್ನೊಬ್ಬರು ಕಷ್ಟಪಟ್ಟು ದುಡಿದ ಹಣವನ್ನು ಹಾಡಹಗಲು ದೋಚುವ ಕುತಂತ್ರಿಗಳು. ಇಂಥವರೊಡನೆ ನನದೇನು, ನಾನು ಫೋನ್ ಇಟ್ಟು ಇನ್ನೊಮ್ಮೆ ಕರೆ ಮಾಡಬೇಡಿ ಎಂದು ವಾರ್ನ್ ಮಾಡಬಹುದಿತ್ತು, ಆದರೆ ನಾನು ಹಾಗೆ ಮಾಡದೆ ಈ ದುರುಳರನ್ನು ಜೊತೆ ಸುಮಾರು ತೊಂಭತ್ತು ನಿಮಿಷ ಸತಾಯಿಸಿ, ಆಟವಾಡಿಸಿ ಅವರಿಗೆ ಬಹಳ ಪ್ರಾಮುಖ್ಯವಾಗಿ ಬೇಕಾಗಿದ್ದ ನನ್ನ ಬ್ಯಾಂಕ್ ಅಕೌಂಟ್ ನಂಬರನ್ನು ಅದೆಲ್ಲಿಲ್ಲಿಂದಲೋ ಅಂಕೆಗಳನ್ನು ಬಳಸಿ, ಕೂಡಿ ಕಳೆದು ಎಂಟು ಡಿಜಿಟ್ ಅಂಕೆಯನ್ನು ಅವರ ಒತ್ತಾಸೆಯಂತೆ ಪೂರೈಸಿದೆ. ನಾನು ತೆಗೆದುಕೊಂಡ ತೊಂಭತ್ತು ನಿಮಿಷಗಳಲ್ಲಿ ಅವರು ಅದಿನ್ನೆಷ್ಟು ಜನರನ್ನು ಕಾಂಟ್ಯಾಕ್ಟ್ ಮಾಡುವುದಿತ್ತೋ ಅಷ್ಟಾದರೂ ತಪ್ಪಿತಲ್ಲ! ನಾನು ಅಕೌಂಟ್ ನಂಬರನ್ನು ಸುಳ್ಳು ಹೇಳುತ್ತಿರುವೆನೇನೋ ಎಂದು ಅನುಮಾನವಾಗಿ ಅವರು ಪದೇ ಪದೇ ಅದನ್ನು ಕೇಳುತ್ತಿದ್ದರು, ನಾನು ನನ್ನ ಸ್ಕ್ರೀನ್ ನಲ್ಲಿ ಬರೆದುಕೊಂಡಿದ್ದರಿಂದ ಅದನ್ನು ಯಥಾವತ್ತಾಗಿ ಹೇಳುತ್ತಲೇ ಇದ್ದೆ. ಮಧ್ಯೆ ಒಂದೆರಡು ಬಾರಿ ’ನನಗೆ ಮತ್ತೊಂದು ಕರೆ ಬರುತ್ತಿದೆ, ಐದು ನಿಮಿಷ ಬಿಟ್ಟು ಫೋನ್ ಮಾಡಿ’ ಎಂದು ಹೇಳಿದ್ದಕ್ಕೆ ಆ ಕಡೆಯವರು ಹಾಗೆಯೇ ಮಾಡುತ್ತಿದ್ದರು. ಈ ಮಧ್ಯೆ ನನ್ನ ಫೋನ್ ನಂಬರ್ ಒದಗಿಸಿದ ಸೆಂಟ್ರಲ್ ಆಫೀಸಿನ ಟೆಕ್ನಿಕಲ್ ಮ್ಯಾನೇಜರ್ ಒಬ್ಬನನ್ನು ಆಫೀಸಿನ ಇನ್ಸ್‌ಟಂಟ್ ಮೆಸ್ಸೇಜ್ ವ್ಯವಸ್ಥೆಯಿಂದ ಕಾಂಟ್ಯಾಕ್ಟ್ ಮಾಡಿ ನನ್ನ ಕರೆಯ ಕಾಲ್ ರೆಕಾರ್ಡುಗಳನ್ನು ರೆಕಾರ್ಡ್ ಮಾಡಲು ಹೇಳಿದೆ. ಪ್ರತಿಯೊಂದು ಫೋನಿಗೆ ಒಳಬರುವ ಕರೆಯನ್ನು ದಾಖಲಿಸಲಾಗದಿದ್ದರೂ ಸ್ವಿಚ್‌ನಲ್ಲಿ ನೋಡಿ ಎಲ್ಲಿಂದ ಕರೆ ಒಳಬರುತ್ತಿದೆ ಎಂದು ಹೇಳಬಹುದು. ಆದರೆ ಈ ಖದೀಮರು IP-IP ನೆಟ್‌‍ವರ್ಕ್‌ನಲ್ಲಿ ಅದ್ಯಾವುದೋ ಕಂಪ್ಯೂಟರ್ ಒಂದರಿಂದ ಕರೆ ಮಾಡುತ್ತಿದ್ದರು, ಅದರ ಮೂಲವನ್ನು ಜಾಲಾಡಿಸಿ ನೋಡಿದರೆ ನನಗೆ ಗೊತ್ತಾದದ್ದು ’ನೈಜೀರಿಯಾ’ ಎಂದು, ಅಷ್ಟೇ.

ಖದೀಮರಿಗೆ ನನ್ನ ಅಕೌಂಟ್ ನಂಬರ್ ಸಿಕ್ಕಿದೆಯೆಂದುಕೊಂಡು ಬಹಳಷ್ಟು ಖುಷಿಯಾಯಿತು. ಇನ್ನೇನು ಕರೆ ಮುಗಿಯಿತು ಎಂದುಕೊಂಡಾಗ ಆ ಕಡೆಯಿಂದ ಅವರು 'thank you!' ಎಂದರು, ನಾನು ಈ ಕಡೆಯಿಂದ ಕನ್ನಡದಲ್ಲಿ ನನಗೆ ಅರಿವಿದ್ದೋ ಅರಿವಿರದೆಯೋ ’ಸೂಳಾ ಮಕ್ಳಾ’ ಎಂದೆ. ಅವ ’ಏನು ಹಾಗಂದ್ರೇ?’ ಎಂದ, ನಾನು ’thats how we say thank you in our language' ಎಂದೆ.

***

ನಿಜವಾಗಿಯೂ ಒಮ್ಮೊಮ್ಮೆ ಹೀಗನ್ನಿಸುತ್ತೆ, ಈ ಖದೀಮರೇ ಆಧುನಿಕ ಪ್ರಪಂಚದ ರಾಕ್ಷಸರು, ಇಂತಹವರನ್ನು ನೀಗಿಸೋದೇ ನಿಜವಾದ ವಿಜಯೋತ್ಸವ ಎಂಬುದಾಗಿ. ಆ ಮಹಿಷಾಸುರ, ರಾವಣ ಇವರೆಲ್ಲರಿಗೂ ಒಂದು ರೀತಿ-ನೀತಿಗಳು ಎಂಬುವುದಾದರೂ ಇದ್ದವೇನೋ ಆದರೆ ಇಂದಿನ ಕಾಲದ ಈ ರಾಕ್ಷಸರಿಗೆ ಇತರರ ರಕ್ತವನ್ನು ಕುಡಿಯುವುದನ್ನು ಬಿಟ್ಟರೆ ಬೇರೆ ಯಾವುದೇ ಆಲೋಚನೆ ಎನ್ನುವುದೇ ಇಲ್ಲ.

ಅಲ್ಲದೇ, ಒಂದು ವ್ಯವಸ್ಥಿತವಾದ ಬಿಸಿನೆಸ್ಸನ್ನು ಆರಂಭಿಸಲು ಅದೆಷ್ಟೆಲ್ಲಾ ಕಷ್ಟಗಳು ಬರುತ್ತವೆ, ಆದರೆ ಈ ಖದೀಮರು ಇತರರನ್ನು ಸುಲಿಯುವುದೇ ವ್ಯವಹಾರವನ್ನಾಗಿಟ್ಟುಕೊಂಡಿರುವ ಬಿಸಿನೆಸ್ಸುಗಳು ಅದು ಹೇಗೆ ನೆಲೆ ನಿಲ್ಲುತ್ತವೆಯೋ ಯಾರಿಗೆ ಗೊತ್ತು? ನನ್ನ ಇ-ಮೇಲ್ ಅಕೌಂಟುಗಳಿಗೆ ಪ್ರತಿಯೊಂದು ಸಾರಿ ನಾನು ಲಾಟರಿ ಗೆದ್ದುದಕ್ಕಾಗಲೀ, ಆಫ್ರಿಕಾದಲ್ಲಿ ಯಾರೋ ಸತ್ತವರ ಹಣಕ್ಕೆ ಸಹಿ ಹಾಕುವ ಅವಕಾಶ ಸಿಕ್ಕಾಗಲೀ ಕೇವಲ ಒಂದೊಂದು ಪೈಸೆ ಸಿಕ್ಕಿದ್ದರೆ ನಾನು ಇಷ್ಟೊತ್ತಿಗೆ ಲಕ್ಷಾಧೀಶ್ವರನಾಗುತ್ತಿದ್ದೆ ಎನ್ನುವುದು ಇತ್ತೀಚೆಗೆ ನಾನು ಹೇಳುವ ಜೋಕ್‌ಗಳಲ್ಲಿ ಒಂದು.

Thursday, October 18, 2007

ಭುಟ್ಟೋ ಬಂದಳು ಶಾಂತಿ ತಂದಳು!

ಎಂಟು ವರ್ಷದ ಅಜ್ಞಾತವಾಸದ ಬಳಿಕ ಮರಳಿ ಬಂದ ಬೆನಜೀರ್ ತಾವು ತಮ್ಮ ಪ್ರಯಾಣದುದ್ದಕ್ಕೂ ಶಾಂತಿಯ ಕನಸನ್ನು ಕಾಣುತ್ತಿದ್ದರೆ ಅವರು ಕಾಲಿಟ್ಟ ದಿನ ಪಾಕಿಸ್ತಾನದಲ್ಲಿ ಆದದ್ದೇ ಬೇರೆ. ನೂರಾರು ಜನರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡುದಿರಲಿ ಸ್ವತಃ ತಾವೇ ಸ್ವಲ್ಪದರಲ್ಲಿ ಪಾರಾದುದು ಆಶ್ಚರ್ಯದ ಸಂಗತಿ. ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ನಿಜವಾಗಿಯೂ ಬೇರೆಯೇ ಆದ ದೇಶ, ಅಲ್ಲಿನ ಸುಪ್ರೀಮ್ ಕೋರ್ಟ್ ಪ್ರೆಸಿಡೆಂಟ್ ಮುಷಾರಫ್ ಅವರ ಮೇಲೇ ತಿರುಗಿ ಬಿದ್ದುದೂ, ಮತ್ತೊಬ್ಬ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ದೇಶಕ್ಕೆ ಹೊಕ್ಕಿಸದೇ ಹಿಂತಿರುಗಿ ಕಳಿಸಿದ್ದುದೂ ಇತ್ತೀಚಿನ ಬೆಳವಣಿಗೆಗಳಲ್ಲಿ ಒಂದು.

ಅಮೇರಿಕದ ದೃಷ್ಟಿಯಲ್ಲಿ ಪಾಕಿಸ್ತಾನ ಭಯೋತ್ಪಾದಕತೆಯ ಅಲೆಯನ್ನು ಹುಟ್ಟಗಿಸುವ ಪ್ರಯತ್ನದಲ್ಲಿನ ಬಹುಮುಖ್ಯ ಆಟಗಾರ. ಇಂಥ ಒಂದು ನೋಷನ್‌ಗೆ ವಿರುದ್ಧವಾಗಿ ಭಾರತ ಹಾಗೂ ಉಳಿದ ದೇಶಗಳು ಪಾಕಿಸ್ತಾನದ ವಿರುದ್ಧ ಏನೇ ಹೇಳುತ್ತ ಬಂದಿದ್ದರೂ ಹಾಲೀ ಅಮೇರಿಕದ ಸರ್ಕಾರದ ಸವಾಲುಗಳು ಪಾಕಿಸ್ತಾನವನ್ನು ಪುರಸ್ಕರಿಸುವತ್ತಲೇ ಸಮಯ ವ್ಯಯಿಸುತ್ತಿದೆಯೇ ವಿನಾ ಬೇರೆ ಯಾರ ಮಾತನ್ನೂ ಕೇಳಿಸಿಕೊಳ್ಳುವ ಹಾಗೆ ಕಾಣಿಸುತ್ತಿಲ್ಲ. ಮುಷಾರಫ್ ರಕ್ತ ರಹಿತ ಕ್ರಾಂತಿ ಕಳೆದ ಏಳೆಂಟು ವರ್ಷಗಳಲ್ಲಿ ಬೇಕಾದಷ್ಟನ್ನು ಸಾಧಿಸಿದ್ದರೂ ತಮ್ಮ ದೇಶದ ಜನ ತಮ್ಮ ವಿರುದ್ಧವೇ ತಿರುಗಿ ಬೀಳುವುದನ್ನು ಕನಸು ಮನಸಿನಲ್ಲೂ ಯೋಚಿಸಿರಲಾರದ ಮುಷಾರಫ್‌ಗೆ ಅಮೇರಿಕ ಹಾಗೂ ಉಳಿದ ಹಿತೈಷಿಗಳ ಮಾತನ್ನು ಕೇಳಿ ಬೆನಜೀರ್ ಅವರನ್ನು ದೇಶದೊಳಕ್ಕೆ ಬಿಟ್ಟುಕೊಂಡು ಒಂದು ರೀತಿಯ ಒಪ್ಪಂದಕ್ಕೆ ಬರದೇ ಬೇರೆ ಗತ್ಯಂತರವಿರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಾಕಿಸ್ತಾನದ ಪ್ರಧಾನಮಂತ್ರಿ ಎನ್ನುವ ಸ್ಥಾನ ರಾಜಕೀಯದ ಉತ್ತುಂಗವನ್ನು ವ್ಯಕ್ತಿಯೊಬ್ಬರಿಗೆ ಕೊಡಿಸಿದರೆ ಅಲ್ಲಿನ ಅಧ್ಯಕ್ಷ ಸ್ಥಾನವಾಗಲೀ, ಮಿಲಿಟರಿ ನಾಯಕತ್ವವಾಗಲೀ ಮತ್ತೊಂದು ಮಹತ್ವದ ಸ್ಥಾನವೇ. ಇಂತಹ ಎರಡು ಬಣಗಳಿಗೆ ಸೇರದೇ ತನ್ನದೇ ಆದ ಪ್ರಾಬಲ್ಯವನ್ನು ಮೆರೆದದ್ದು ಇತ್ತೀಚಿನ ಸುಪ್ರೀಮ್ ಕೋರ್ಟ್ ಬೆಳವಣಿಗೆ. ಪ್ರಜಾಪ್ರಭುತ್ವವಿರದ ದೇಶದಲ್ಲಿ ಸುಪ್ರೀಮ್ ಕೋರ್ಟ್‌ಗೆ ಒಂದು ಧ್ವನಿಯೆಂಬುದು ಹುಟ್ಟಿದ್ದು ಬಹಳಷ್ಟು ಜನರಿಗೆ ಆಶ್ಚರ್ಯ ಮೂಡಿಸಿದರೂ ಮುಷಾರಫ್ ಬೇರೇನನ್ನು ಮಾಡದೇ ಸುಮ್ಮನೇ ಇದ್ದರೆ ದೇಶಾದ್ಯಂತ ಕ್ರಾಂತಿ ಹುಟ್ಟುವ ಸನ್ನಿವೇಶ ನಿರ್ಮಾಣವಾಗಲು ಇನ್ನು ಹೆಚ್ಚು ದಿನಗಳು ಇದ್ದಂತೆ ಕಂಡು ಬರುತ್ತಿರಲಿಲ್ಲ. ಮುಷಾರಫ್ ಯಾವುದೇ ಎಲೆಕ್ಷನ್ ಮತಗಳನ್ನು ಎಷ್ಟೇ ತಿದ್ದಿ ತನ್ನ ಖುರ್ಚಿಯನ್ನು ಉಳಿಸಿಕೊಂಡರೂ ದೇಶದಾದ್ಯಂತ ಅಮೇರಿಕದ ಗುಲಾಮನನ್ನಾಗಿ ಮುಷಾರಫ್ ಅವರನ್ನು ಜನ ನೋಡುವುದೇ ಅವರ ಮೇಜರ್ ವೀಕ್‌ನೆಸ್ ಆಗಿ ಕಂಡು ಬರುತ್ತಿತ್ತು. ಇಂತಹ ಸಂದರ್ಭದಲ್ಲಿ ಮುತ್ಸದ್ದಿ ಮುಷಾರಫ್‌ಗೆ ಬೆನಜೀರ್ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ವಿಧಿ ಇರಲಿಲ್ಲ ಎನ್ನುವುದು ಹಲವರ ಅಂಬೋಣ.

ಪಾಕಿಸ್ತಾನ ಪೀಪಲ್ಸ್ ಪಕ್ಷದ ನೇತಾರೆ ಬೆನಜೀರ್ ಭುಟ್ಟೋ ಭ್ರಷ್ಟಾಚಾರದ ಅರೋಪದಲ್ಲಿ ಸಿಕ್ಕಿರುವುದು, ಅವುಗಳ ವಿಚಾರಣೆಗೆ ತೊಡಗಿಕೊಂಡರೆ ಇನ್ನೆಂದೂ ರಾಜಕೀಯ ಆಶೋತ್ತರಗಳಿಗೆ ನೀರು ಹಾಕದ ಪರಿಸ್ಥಿತಿ ನಿರ್ಮಾಣವಾಗುವ ಹಂತ ಒಂದು ಕಡೆ. ಜೊತೆಗೆ ಈಗಾಗಲೇ ತಾವು ಎರಡು ಭಾರಿ ಪ್ರಧಾನಿಯಾಗಿರುವುದರಿಂದ ಮೂರನೇ ಭಾರಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಚುಕ್ಕಾಣಿ ಹಿಡಿಯಬೇಕಾಗಿ ಬಂದರೆ ಅಲ್ಲಿ ಕಾನೂನನ್ನು ತಿದ್ದುವ ಅನಿವಾರ್ಯತೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರ ಮನದಲ್ಲಿನ ಪೀಡೆ ಮುಷಾರಫ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ದೇಶದಲ್ಲಿ ಕಾಲಿಡುತ್ತ ಮುಷಾರಫ್ ವಿರುದ್ಧವೇ ಇವತ್ತಲ್ಲ ನಾಳೆ ಎದ್ದು ನಿಲ್ಲಬೇಕಾದ ವಿಪರ್ಯಾಸ ಬೇರೆ.

ಬೆನಜೀರ್ ಭುಟ್ಟೋ ತನ್ನ ರಾಜಕೀಯ ರ್ಯಾಲಿಗಳಲ್ಲಿ ಯಾರನ್ನು ಕುರಿತು ಹೊಗಳುತ್ತಾರೆ ತೆಗಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಏಳೆಂಟು ವರ್ಷಗಳನ್ನು ಆಳಿದ ಮುಷಾರಫ್ ವಿರುದ್ಧದ ಅಲೆಯನ್ನು ನಾಜೂಕಾಗಿ ಹೇಗೆ ಎತ್ತಿಕೊಂಡು ಜನರ ಮತ ಹಾಗೂ ವಿಶ್ವಾಸವನ್ನು ಗಳಿಸುತ್ತಾರೆ ಎನ್ನುವುದು ದಿನದಿನವೂ ರೋಚಕವಾಗುತ್ತಿದೆ. ಒಂದು ವೇಳೆ ಅಲ್ಲಿ ಮರಳಿ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣಗೊಂಡರೆ ಪಕ್ಕದ ಭಾರತದಂತಹ ದೇಶಗಳಿಗೆ ಒಂದು ರೀತಿಯ ಸಮಾಧಾನವಾದರೂ ದೂರದ ಅಮೇರಿಕಕ್ಕೆ ಕಷ್ಟವೇ ಆಗಬಹುದು ತಮ್ಮ ನಿರ್ಣಯಗಳನ್ನು ಮುಂದುವರಿಸಲು. ಭಯೋತ್ಪಾದನೆಯನ್ನು ಹತ್ತಿಕ್ಕುವುದು ಬೆನಜೀರ್ ಅವರಿಗೆ ಬೇಕೋ ಬೇಡವೋ ಅವರ ಪ್ರಣಾಳಿಕೆಯ ಪುಟದ ಹಿನ್ನೆಲೆ. ಪ್ರಪಂಚದ ಅರ್ಥ ವ್ಯವಸ್ಥೆಯೆಲ್ಲ ಏರು ದಿಕ್ಕಿನಲ್ಲಿ ಮುಂದುವರೆಯುತ್ತಿರುವಾಗ ಪಾಕಿಸ್ತಾನ ಹಿಂದುಳಿಯದಂತೆ ಬೆನಜೀರ್ ತನ್ನ ದೇಶವನ್ನು ಮುಂದುವರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ರಾಜಕೀಯ ರ್ಯಾಲಿಗಳಲ್ಲಿ ಯಾರೂ ತಮ್ಮ ಮೇಲೆ ಆಕ್ರಮಣ ನಡೆಸದಂತೆ ಬಿಗಿಭದ್ರತೆಯನ್ನು ಮಾಡಿಕೊಳ್ಳುವುದೂ ಅಷ್ಟೇ ಮುಖ್ಯವಾದುದು.

ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮರುಕಳಿಸಿದಂತೆ ಮುಷಾರಫ್ ಹಿನ್ನೆಲೆಗೆ ಸರಿಯುತ್ತಾರೆ. ಅಲ್ಲಿನ ಯುವ ರಾಜಕೀಯ ಶಕ್ತಿಗಳಿಗೆ ಚಾಲನೆ ದೊರೆಯುತ್ತದೆ. ಇವತ್ತಲ್ಲ ನಾಳೆ ತಾನೂ ಹಿಂತಿರುಗಿ ಮುಖ್ಯವಾಹಿನಿಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಕನಸು ಕಾಣುವ ನವಾಜ್ ಶರೀಫ್ ಅವರಿಗಿಂತಲೂ ಸುಮಾರು ಒಂದು ದಶಕಗಳಲ್ಲಿ ತಮ್ಮ ಹಿತಾಸಕ್ತಿಗಳನ್ನು ಅಂತರಂಗದಲ್ಲಿ ಒತ್ತಿಕೊಂಡ ಅನೇಕ ಯುವ ಮುಖಂಡರುಗಳಿಗೆ ಬೆನಜೀರ್ ಆಗಮನ ಬಹಳಷ್ಟು ಸಹಾಯ ಮಾಡಿದೆ. ಪಾಕಿಸ್ತಾನದಲ್ಲೂ ನಾಯಕರಿದ್ದಾರೆ, ನಡೆಸುವವರಿದ್ದಾರೆ. ಅಲ್ಲೂ ಹೊಸ ಬೆಳಕು ಮೂಡುತ್ತಿದೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ನೊಂದ ದೇಶಕ್ಕೆ ಶಾಂತಿಧೂತಳಾಗಿ ಬಂದ ಬೆನಜೀರ್ ಅಧ್ಯಾಯವನ್ನು ಮತ್ತೆ ತೆರೆದುದು ರಕ್ತದೋಕುಳಿಯಿಂದಲೇ ಎನ್ನುವುದು ಮತ್ತೊಂದು ವಿಪರ್ಯಾಸವಲ್ಲದೇ ಇನ್ನೆನು?

Tuesday, October 16, 2007

ಛಳಿಯ ಬೆನ್ನೇರಿ ಬಂತು...

’ಹ್ಞೂ, ಈ ಛಳಿ ಬೀಳೋಕಿಂತ ಮೊದಲು ಹಂಗ್ ಮಾಡ್ತೀನೀ ಹಿಂಗ್ ಮಾಡ್ತೀನಿ ಅಂತ ಕುಣೀತಿದ್ದೆ, ಈಗ ಅನುಭವಿಸು!’ ಎಂದು ಯಾರೋ ಶಾಪ ಹಾಕಿದಂತಾಗಿ ದಿಗ್ಗನೆದ್ದು ಕುಳಿತೆ, ಎತ್ತಣ ದಿಕ್ಕಿನಿಂದ ನೋಡಿದ್ರೂ ಛಳಿಗಾಲ ವೇಗದಲ್ಲಿ ಬರೋ ಹಾಗೆ ಕಾಣಿಸ್ತು, ಅದರ ವೇಗದ ಭರಾಟೆ ಮುಂದೆ ಇನ್ನೇನು ಸಾಯೋ ಸೂರ್ಯನ ಕಿರಣಗಳೂ ತಮ್ಮ ಆಸೆಯನ್ನು ಕಳೆದುಕೊಂಡಂತೆ ಕಾಣಿಸಿದವು. ಅವುಗಳ ಮೇಲ್ಮೈಯಲ್ಲಿನ ನಿರಾಶೆಯನ್ನು ನೋಡಿ ನಾಳೆ ಬರ್ತಾವೋ ಎನ್ನುವ ಸಂಶಯ ಮೂಡಿದರೂ ಇರೋ ಅಷ್ಟು ಹೊತ್ತು ಸೂರ್ಯನ ಕಿರಣಗಳ ಬಿಸಿಯನ್ನು ನಮಗೂ ತಾಗಿಸಿಕೊಳ್ಳೋಣ ಎಂದು ಕಲಾಯ್ಡು ಧೂಳಿನ ಕಣಗಳು ಸೂರ್ಯನ ಕಿರಣದ ಬಿಂಬದ ವ್ಯಾಪ್ತಿಯಲ್ಲಿ ಒಂದು ರೀತಿಯ ನರ್ತನವನ್ನು ನಡೆಸಿದಂತೆ ತೋರಿದವು. ಇನ್ನೇನು ಇವತ್ತಿನ ಸೂರ್ಯನ ಕಿರಣಗಳ ಕಥೆ ಮುಗಿಯಿತು ಎಂದು ಗೊತ್ತಾದ ಸುಳಿವು ಕಂಡೊಡನೆ ಭರದಿಂದ ಬೀಸಿದ ಗಾಳಿಯ ಗತ್ತನ್ನು ನೋಡಿ ಮನೆಯ ಒಳಗಿನ ಗಾಜಿನ ಮುಸುಡಿಗೆ ತಾಗಿಕೊಂಡ ಬ್ಲೈಂಡಿನ ಲೇಯರುಗಳಿಗೂ ಬೆನ್ನ ಹುರಿಯಲ್ಲಿ ಛಳಿ ಹುಟ್ಟಿಕೊಂಡಿದ್ದು ಸ್ಪಷ್ಟವಾಗತೊಡಗಿತ್ತು.

’ನ್ಯೂ ಯಾರ್ಕ್ ಸಿಟಿ ಭಿಕ್ಷುಕರಿಗೆಲ್ಲಾ ಪ್ಲೋರಿಡಾಕ್ ಹೋಗ್ರಿ ಅಂತ ತಾಕೀತು ಮಾಡ್ತಿದ್ದೆ!’ ಎಂದು ಮತ್ತೊಂದು ಧ್ವನಿ ಕೇಳಿಸಿ ಇನ್ನಷ್ಟು ಜಾಗರೂಕನಾದೆ, ಈಗಂತೂ ನಾನಿದ್ದ ರೂಮಿನಲ್ಲಿ ಬೆಳಕು ಕಡಿಮೆಯಾದ್ದರಿಂದ ನನ್ನ ಕಣ್ಣುಗಳು ಡ್ರಾವಿಡ್ ಈಗ ಸಿಕ್ಸ್ ಹೊಡೀತಾನೆ ಆಗ ಸಿಕ್ಸ್ ಹೊಡೀತಾನೆ ಎಂದು ಕಾದುಕೊಂಡ ಪ್ರೇಕ್ಷಕನ ಕಣ್ಣಾಲಿಗಲ ಹಾಗೆ ಮತ್ತಿನ್ನಷ್ಟು ಅಗಲಗೊಂಡವು. ಎಲ್ಲರೂ ಛಳಿ ರಾಜ್ಯಗಳನ್ನು ತೊರೆದು ಪ್ಲೋರೀಡಾಕ್ಕೆ ಹೋದ್ರೆ ಹೇಗೆ ಎಂದು ಬಂದ ಹುಂಬ ಯೋಚನೆ ತುಟಿಗಳನ್ನು ಬಿರಿಯುವಂತೆ ನಗೆಯೊಂದನ್ನು ಉಕ್ಕಿಸಿತಾದರೂ ಆ ನಗೆ ಹೆಚ್ಚು ಕಾಲ ಮುಖದಲ್ಲೇನೂ ಉಳಿಯಲಿಲ್ಲ. ಇರೋ ಮುನ್ನೂರೂ ಚಿಲ್ರೆ ಮಿಲಿಯನ್ನ್ ಜನರು ಕೇವಲ ದಕ್ಷಿಣ ರಾಜ್ಯಗಳಿಗೆ ಹೋಗಿ ಅಲ್ಲಿ ಹೆಚ್ಚು ಜನ ಸಾಂದ್ರತೆ ಇರೋ ಬದ್ಕು ಬದುಕಿ ಈ ಛಳಿ ಬಡುಕ ಉತ್ತರದ ರಾಜ್ಯಗಳನ್ನೆಲ್ಲ ಖಾಲಿ ಬಿಡಬೇಕು ಅದೇ ಈ ಆಸಾಧ್ಯ ಛಳಿಗೆ ಮನುಕುಲದ ಉತ್ತರ ಎನ್ನುವ ವಾದವೂ ಮಿಂಚಿ ಮರೆಯಾಯಿತು. ಈಗ ಛಳಿಗೆ ನಾನೇ ಬೈಯಬೇಕು ಎಂದೆನಿಸಿದಾಕ್ಷಣ, ಯಾರು ಬರೋದಕ್ಕೆ ಹೇಳಿದ್ರು ಇಷ್ಟು ಬೇಗ ಇದಕ್ಕೆ, ಈ ವರ್ಷ ಮೇ ತಿಂಗಳು ಬಂದ್ರೂ ಇನ್ನೂ ಹೋಗಿದ್ದಿಲ್ಲ ಅಂಥಾದ್ದರಲ್ಲಿ ಸೆಪ್ಟೆಂಬರ್ ಬಂದ ಕೂಡ್ಲೆ ಬಾ ಎಂದೋರು ಯಾರು ಎಂದು ಕೇಳೋಣವೆನ್ನಿಸಿತು.

’ಈ ದೇಶ್ದಲ್ಲಿ ಗ್ಲೋಬಲ್ ವಾರ್ಮಿಂಗ್ ಬಗ್ಗೇ ಯಾರು ಏನೇ ಬಾಯ್ ಬಡ್ಕೊಂಡ್ರೂ ಅವರವರ ಮನೆ ಫೈಯರ್ ಪ್ಲೇಸ್‌ಗಳಿಗೆ ಕಟ್ಟಿಗೆ ತುಂಬೋದೇನೋ ಕಡಿಮೆ ಮಾಡೋಲ್ಲ!’ ಎನ್ನೋ ಜ್ಞಾನೋದಯಕ್ಕೆ ಸರಿಯಾದ ಹೊತ್ತಾದಂತೆ ಕಾಣಿಸಿ ದಿಗ್ಗನೆ ಮನದಲ್ಲಿ ಮೂಡಿತು. ಹೆಚ್ಚು ಜನ ಒಬೀಸ್ ಇರೋರ ಮಧ್ಯೆ ಯಾವನೋ ಬಂದು ಉಪವಾಸ ಸತ್ಯಾಗ್ರಹದ ಕಥೆಯನ್ನು ಒದರಿದ್ದನಂತೆ ಹಂಗಾಯ್ತು. ಇನ್ನೇನ್ ಕೊರಿಯೋ ಛಳಿ ಬೀಳೋ ಸಮಯ, ಮನೆ ಮಂದೀ ಎಲ್ಲಾ ಮುರುಟಿ ಹೋಗೋ ಹೊತ್ನಲ್ಲಿ ಎನರ್ಜಿ ಕನ್ಸರ್‌ವೇಷನ್ನ್ ಬಗ್ಗೆ ಉಪನ್ಯಾಸ ಕೇಳೋರ್ ಯಾರು, ಅನುಸರಿಸೋರ್ ಯಾರು? ನಮ್ ಹತ್ರಾ ದುಡ್ಡ್ ಐತಿ, ನಾವ್ ಏನ್ ಬೇಕಾರ್ ಮಾಡ್ತೀವ್ ಅನ್ನೋರ್ ಮುಂದೆ, ರೊಕ್ಕಾ ಕಡಿಮಿ ಖರ್ಚ್ ಮಾಡ್ರಲೇ ಅಂತ ಅನ್ನೋ ಮೇಷ್ಟ್ರಿಗ್ ಯಾವ ಹುಡ್ರು ಉತ್ರಾ ಕೊಟ್ಟಾರು, ನೀವೊಂದು. ಹೇಳೀ ಕೇಳೀ ದೊಡ್ಡ ದೇಶ ದೊಡ್ಡ ಜನ, ಇವರ್ನೆಲ್ಲಾ ಬಿಸಿ ಮಾಡ್ ಬೇಕ್ ಅಂದ್ರೆ ತುಂಬಾ ಎನರ್ಜಿ ಖರ್ಚು ಆಗೋಕೇ ಬೇಕು, ಅದಕ್ಕೆ ತಕ್ಕಂತೆ ಪರಿಣಾಮಗಳು ಇರೋವೇ, ಅದು ಸಹಜಾ ಅಲ್ವೇ? ಈ ಛಳಿಯ ಗುಂಗಿಗೆ ನನ್ ತಲೇನೂ ಕೆಲ್ಸಾ ಮಾಡೋದನ್ನ ನಿಲ್ಸಿದ ಹಾಗೆ ಕಾಣಿಸಿ ಪಕ್ಕನೇ ಎನೂ ಉತ್ರಾ ಹೋಳೀಲಿಲ್ಲಾ. ಇಂಥಾ ಪರಿಸ್ಥಿತೀನಲ್ಲೂ ನಾನು ಪ್ರಶ್ನೆಗಳನ್ನ ಯಾಕ್ ಕೇಳ್ಕೋತೀನಿ ಅನ್ನೋದನ್ನ ಯೋಚ್ಸಿ ಮತ್ತೊಮ್ಮೆ ಜೋರಾಗಿ ನಗೆ ಬರೋ ಪ್ರಯತ್ನಾ ಆಯ್ತು, ಆದ್ರೂ ಮೂಗಿನ ಹಿಂದೆ ಸಿಕ್ಕೊಂಡ ಸೀನಿನ ಹಾಗೆ ಆ ನಗುವೂ ಅಲ್ಲೇ ಎಲ್ಲೋ ಅಡಗಿಕೊಂಡಿತು.

’ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಛಳಿ ಇದೆ!’ ಎನ್ನೋ ಲಾಜಿಕ್ಕು ಬೇಡವೆಂದರೂ ಕೊಸರಿಕೊಂಡೇ ಬಂತು. ಮೋಷ್ಟ್‌ಲಿ ಹೊರಗಡೇ ಬೀಸೋ ಮಂದ ಮಾರುತ ಈ ರೀತಿಯ ಶಿಫಾರಸ್ಸನ್ನ ನನ್ನ ಮೇಲೆ ಮಾಡಿರಬಹುದು, ಅಥವಾ ಛಳಿಯನ್ನು ಎದುರಿಸಲಿಕ್ಕೆ ದುಡ್ಡು ಬೇಕು, ಆ ದುಡ್ಡು ಇದ್ದೋರು ಶ್ರೀಮಂತರು ಅವರೇ ಅಭಿವೃದ್ಧಿ ಹೊಂದಿದವರು ಅನ್ನೋ ತರ್ಕವೂ ಬಂತು. ಹಂಗಾದ್ರೆ ಛಳಿ ದೇಶದ ಬಡವ್ರು ಹೆಂಗ್ ಬದುಕ್ತಾರೆ? ಛಳಿಯನ್ನು ಎದುರಿಸೋಕೆ ದುಡ್ಡು ಬೇಕೇನೋ ನಿಜ, ಆದ್ರಿಂದ ಇಲ್ಲಿನ ಬಡವ್ರಿಗೂ ಬಡ ದೇಶದ ಬಡವ್ರಿಗೂ ವ್ಯತ್ಯಾಸ ಅನ್ನೋದೇನಾದ್ರೂ ಇದೆಯೇ? ಇಲ್ಲಿನ ಬಡವ್ರನ್ನ ಬಡವರು ಅಂಥಾ ಕರೆಯೋ ನಾವು ಬಡದೇಶದ ಬಡವರನ್ನ ಅದೇ ಪದದಿಂದ ಕರೆಯೋದ್ ಸರಿಯೇ, ಅಲ್ವೇ ಅನ್ನೋ ತರ್ಕ ಹುಟ್ಟಿಕೊಂಡಿತು.

’ನನ್ನನ್ನೇ ಹೆದರಿಸ್ತೀರಾ, ಅದೇನೇನೋ ತರ್ಕಗಳನ್ನು ಮನಸಲ್ಲಿ ಹುಟ್ಟಿಸಿಕೊಳ್ತೀರಾ?’ ಎಂದು ಈ ಸರ್ತಿ ನಿಜವಾಗಿ ನನ್ನನ್ನು ಹೆದರಿಸೋಕೆ ನೋಡಿದ್ದು ಹೊರಗಿನ ಛಳಿ. ಮತ್ತಿನ್ನೇನು, ನಾನು ಪ್ರತಿಯೊಂದು ಆಲೋಚನೆಯನ್ನು ಮನದಲ್ಲಿ ಹುಟ್ಟಿಸಿಕೊಂಡ ತಕ್ಷಣ ಗಟ್ಟಿಯಾಗಿ ಗಾಳಿ ಬೀಸಬೇಕು ಅಂತಾ ಯಾರಾದ್ರೂ ಯಾರಿಗಾದ್ರೂ ಹೇಳಿಕೊಟ್ಟಿದ್ದಾರೇನು? ಸೂರ್ಯನೇನೋ ಅತ್ಲಾಗ್ ಹೋಗೋನ್ ಹೋದ, ಈ ಕೆಂಪುಗೊಂಡ ಎಲೆಗಳ ರಂಗಿನ ಮುಂದೆ ಅವನ ಕಿತ್ತಲೇ ಬಣ್ಣವೂ ಅಷ್ಟೊಂದು ಸ್ವಾರಸ್ಯಕರವಾಗಿ ಕಾಣ್ಲಿಲ್ಲ. ಇಲ್ಲಿನ ಜನರ ಚರ್ಮವನ್ನು ಬಿಸಿ ಮಾಡಲಾರದ ಅಯೋಗ್ಯ ಮತ್ತಿನ್ಯಾವುದೋ ದೇಶದಲ್ಲಿ ಜನರನ್ನ ಸುಡ್ತಾನೇ ಅಂತ ನಂಬೋಕೂ ಆಗ್ಲಿಲ್ಲ - ಬಡವ್ರನ್ನ ಕಂಡ್ರೆ ಎಲ್ಲರಿಗೂ ಒಂದ್ ರೀತಿ ಹೀನ ಭಾವನೇನೇ - ಮತ್ತಿನ್ನೇನು ಛಳಿ ಬೀಸೋದ್ ಬೀಸ್ಲಿ ಅವನ ಕೆಲಸವನ್ನಾದ್ರೂ ನೆಟ್ಟಗೆ ಮಾಡಬೇಕಿತ್ತು. ಲೇಟಾಗಿ ಬರ್ತಾನೆ, ಬೇಗ ಹೊರಟು ಹೋಗ್ತಾನೆ, ನಟ್ಟನಡು ಮಧ್ಯಾಹ್ನದಲ್ಲೂ ಕಿರಣಗಳಲ್ಲಿ ಧಮ್ ಇರೋದೇ ಇಲ್ಲ. ಯಾರು ಏನು ಅನ್ಲೀ ಬಿಡ್ಲೀ, ಇನ್ನಾರು ತಿಂಗಳು ಹಪ್ತಾ ವಸೂಲಿ ಮಾಡೋ ಗೂಂಡಾಗಳಿಂದ ತಪ್ಪಿಸಿಕೊಳ್ಳಲಾಗದ ಅಮಾಯಕರ ಪಾಡು ನಮ್ಮದು - ಛಳಿ, ಗಾಳಿ, ಮಳೆ-ಮಂಜು ಇವೆಲ್ಲವೂ ಬರ್ತಲೇ ಇರ್ತಾವೆ ನಮ್ ನಮ್ ಅಡಗಿಸಿಕೊಂಡಿರೋ ಶಕ್ತಿಯನ್ನು ಪ್ರಶ್ನಿಸಿಕೊಂಡು. ಅದಕ್ಕುತ್ತರವಾಗಿ ನಾವುಗಳು ಅದೆಲ್ಲೋ ಮುಚ್ಚಿಟ್ಟಿರೋ ದಪ್ಪನೇ ಬಟ್ಟೆಗಳನ್ನು ಹೊರತೆಗೆದು ಧೂಳು ಕೊಡಗಿ ನಮ್ಮ ಚರ್ಮದ ಮೇಲೆ ಲೇಯರ್ರುಗಳನ್ನು ಹಾಕಿ ಕೊಳ್ತೀವಿ. ಅಂತಹ ದಪ್ಪ ಚರ್ಮದ ಹಿಂದಿರೋ ಮನಸ್ಸು ಕುಬ್ಜವಾಗುತ್ತೆ, ಇನ್ನು ಸೃಜನಶೀಲತೆಗಾಗ್ಲಿ, ಕೊರೆಯೋದಕ್ಕಾಗ್ಲೀ, ಯಾವ ರೀತಿ ಯೋಚ್ನೆಗೂ ಟೈಮಿರೋಲ್ಲ - ಬರೀ ಮುಂಬರುವ ಛಳಿಯನ್ನು ಶಪಿಸೋದನ್ನು ಬಿಟ್ರೆ! ಹೀಗೆ ಛಳಿಯ ಬೆನ್ನೇರಿ ಬಂತು ಹಲವು ಆಲೋಚನೆಗಳು, ಪ್ರಶ್ನೆಗಳು, ವಿಚಾರಗಳು - ನಾನೂ ಹೈಬರ್ನೇಟ್ ಮಾಡೋಕ್ ನೋಡ್ತೀನಿ, ಮತ್ತಿನ್ಯಾವಾಗ್ ಎಚ್ರವಾಗುತ್ತೋ ಏನೋ.

Sunday, October 14, 2007

ವಯಸ್ಸಾದವರ ಸಂಘಕ್ಕೆ - ಜೈ!

ಒಂದಂತೂ ನಿಜ, ನನ್ನ ತಲೆ ಜಡ್ಡು ಬಿದ್ದು ಹೋಗಿರೋದು. ಮೊದಲೆಲ್ಲಾ ಎಂಥಾ ಲೆಕ್ಕಗಳೂ ತಲೆಯಲ್ಲಿ ಹೊಳೆದು ಮಿಂಚಿ ಮಾಯವಾಗುತ್ತಿದ್ದರೆ ಈಗ ಎರಡರ ಮಗ್ಗಿಗೂ ಕ್ಯಾಲ್ಕುಲೇಟರ್ ಹಿಡಿಯುವ ಪರಿಸ್ಥಿತಿ! ಛೇ, ಛೇ, ಅಮೇರಿಕಕ್ಕೆ ಬಂದು ಹೀಗಾಯ್ತು ಅಂತ ಅಂದ್ರೆ ಅದು ನನ್ನ ತಪ್ಪಾಗಿ ಹೋದೀತು, ಬದಲಿಗೆ ನನ್ನನ್ನು ನಾನೇ ತಪ್ಪಿತಸ್ಥನನ್ನಾಗಿ ಮಾಡ್ಕೊಂಡ್ರೇ ಎಷ್ಟೋ ಚೆನ್ನ.

ನಿಮಗೂ ಹೀಗಾಗಿರಬಹುದು ಅಂತ ಕೇಳ್ದೆ ಅಷ್ಟೇ - ಮೊದಲೆಲ್ಲ ಎಷ್ಟೊಂದು ಕಷ್ಟ ಪಡ್ತಾ ಇದ್ದ ನೀವುಗಳು ಈಗೀಗ ಸುಲಭದ ದಾರಿ ಹಿಡಿಯೋದೂ ಅಲ್ದೇ ಬೆಚ್ಚಗಿನ ತಾಣ ಸಿಕ್ಕಿದ್ದನ್ನ ಬದಲಿಸಲಿಕ್ಕೆ ಹಿಂಜರಿತೀರೇನೋ? ಬರೀ ಬದಲಾವಣೆಯನ್ನಷ್ಟೇ ದ್ವೇಷಿಸದೇ ಬದಲಾವಣೆಯನ್ನು ಹೇರುವವರನ್ನೂ ಸಹ ನಿಮ್ಮ ಶತ್ರುಗಳ ಯಾದಿಗೆ ಸೇರಿಸಿಕೊಳ್ತೀರಾ? ಅಷ್ಟೇ ಅಲ್ಲ, ಅವರೆಲ್ಲರ ಹೆಸರಿನಲ್ಲಿ ಆಗಾಗ್ಗೆ ಶತನಾಮಾವಳಿಯನ್ನು ಉದುರಿಸುತ್ತಲೇ ಇರ್ತೀರಾ?

ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಅಂತ ಆಗ್ಲೇ ಬೇಕು ಅಂತ ಏನಿಲ್ಲ, ಆ ವಾಕ್ಯಗಳನ್ನು ಓದುತ್ತಾ ಇರೋವಾಗ ಸ್ವಲ್ಪ ಸಿಂಪತಿ ತೋರ್ಸಿದ್ರೂನೂ ನಿಮ್ಮನ್ನ ನಮ್ಮ ಗುಂಪಿಗೆ ಸೇರಿಸಿಕೊಳ್ಳೋ ಹುನ್ನಾರವೊಂದು ನಮ್ಮ ಮನದಲ್ಲಿ ಮಿಂಚಿ ಮಾಯವಾಗ್ತಾ ಇರುತ್ತೆ - ಅಂದ್ರೆ ’ವಯಸ್ಸಾದವರ ಪ್ರಪಂಚದ’ ಸದಸ್ಯತ್ವ - ನಿಮಗೋಸ್ಕರ ಕಾಯ್ತಾ ಇರುತ್ತೆ. ಎಪ್ಪತ್ತರ ದಶಕದಲ್ಲಿ ಹುಟ್ಟಿದ ನಾವುಗಳು ಈಗಾಗ್ಲೇ ನಮ್ಮ ಎದುರಿನಲ್ಲಿ ಶೋಕಿ ಮಾಡೋ ಎಂಭತ್ತು ತೊಂಭತ್ತರ ದಶಕದವರನ್ನು ನೋಡಿ ’ಛೇ, ಅನುಭವವಿಲ್ಲದ ಜನ!’ ಎಂದು ಲೇವಡಿ ಮಾಡೋ ಹಾಗೆ ಮೇಲ್ನೋಟಕ್ಕೆ ಕಂಡ್ರೂನೂವೇ ಒಳಗೊಳಗೆ ಹೊಟ್ಟೇಕಿಚ್ಚು ಇರೋದೇ ಎಂದು ನಮ್ಮ ಸಂಘದ ಕರಾರುಗಳನ್ನು ಗಾಳಿಗೆ ತೂರಿ ನಿಮ್ಮ ನಡುವೆ ರಹಸ್ಯವನ್ನು ಓಪನ್ ಆಗಿ ಹಂಚಿಕೊಳ್ತಾ ಇದ್ದೀನ್ ನೋಡಿ, ನನ್ನ ಭಂಡ ಧೈರ್ಯಾನಾ. ಯಾಕೆ ಗೊತ್ತಾ, ಇವತ್ತಲ್ಲ ನಾಳೆ ನಮ್ಮ ಸಂಘವನ್ನು ಸೇರೋ ನಿಮಗೂ ಮೂಗಿನ ಮೇಲೆ ಒಂದಿಷ್ಟು ತುಪ್ಪಾ ಅಂತ ಹಚ್ಚದೇ ಇದ್ರೆ ಹೇಗೆ!

ಈ ’ವಯಸ್ಸಾದವರ ಪ್ರಪಂಚ’ದಲ್ಲಿ ಇನ್ನೇನೇನಿದೆ ಎಂದು ನಿಮಗೇನಾದ್ರೂ ಅನ್ಸಿರಬಹುದು - ಒಂದು ರೀತಿ ಪೀಕ್ ಪ್ರಿವ್ಯೂವ್ ಕೊಟ್ತೀನ್ ನೋಡಿ - ಈ ಪ್ರಪಂಚದಲ್ಲಿ ಬರೀ ಕೆಲ್ಸಾ ಸಾರ್. ಕೆಲ್ಸಾ ಇಲ್ದೇ ಹೋದ್ರೂ ಬರೀ ಜವಾಬ್ದಾರಿ. ಯಾರಿಗಪ್ಪಾ ಬೇಕು ಇದು ಅಂತ ಎಷ್ಟೋ ಸರ್ತಿ ಅನ್ಸಿ ಎಲ್ಲಾದ್ರೂ ಓಡ್ ಹೋಗೋಣ ಅನ್ನೋಷ್ಟರ ಮಟ್ಟಿಗೆ ಬೇಸರ ಹುಟ್ಟೋಷ್ಟು ಕೆಲ್ಸ, ಅದರ ಜೊತೆಗೆ ಜವಾಬ್ದಾರಿ. ನಿಮಗೋಸ್ಕರ ಒಂದು ಸ್ಪೆಷಲ್ ಉದಾಹರಣೆ ಕೊಡ್ತೀನ್ ನೋಡಿ - ಎಲ್ಲಿ ಜೋರಾಗಿ ಕಾರ್ ಓಡ್ಸಿದ್ರೆ ಮಾಮಾ ಬೆನ್ನ ಹಿಂದೆ ಬಿದ್ದು ಟಿಕೇಟ್ ಕೊಡ್ತಾನೋ ಅನ್ನೋ ಹೆದರಿಕೆ ಯಾಕೆ ಬರುತ್ತೇ ಅಂದ್ರೆ ಒಂದು ಆ ಟಿಕೆಟ್ಟಿಗೆ ಕಟ್ಟೋ ದುಡ್ಡನ್ನ ಹೇಗೆ ಹೊಂದಿಸೋದು ಅನ್ನೋ ಕಷ್ಟದಿಂದ ಮತ್ತೆ ನಮ್ಮ ಮನೆಯ ಸಣ್ಣವರೆದುರು ನಮಗೆ ಶಿಕ್ಷೆ ವಿಧಿಸಿದ್ದನ್ನ ಒಪ್ಪಿಕೊಳ್ಳಬೇಕಲ್ಲಾ ಅಂತ - ಗಂಡ್ ಸತ್ತ ದುಕ್ಕಾ ಒಂದ್ ಕಡೆ, ಬೊಡ್ ಕೂಪಿನ್ ಉರಿ ಮತ್ತೊಂದು ಕಡೆ ಅಂತಾರಲ್ಲ ಹಾಗೆ. ಆದ್ರೆ, ಜೀವನದಲ್ಲಿ ಸುಮಾರಾಗಿ ಎಲ್ಲ ಅಡ್ರಿನಲಿನ ಅಗತ್ಯಗಳನ್ನು ಪೂರೈಸಿಕೊಂಡ ನಮಗೆ ಕಾರನ್ನು ಜೋರಾಗಿ ಓಡಸಲೇ ಬೇಕಾದ್ದು ಮತ್ತೊಂದು ಅಗತ್ಯ ಏಕೆಂದ್ರೆ ಅವರೂ-ಇವರೂ ಇವರೆಲ್ಲರನ್ನೂ ಸಂತೈಸಿ ಖುಷಿ ಪಡಿಸಿ ನಾವ್ ಹೊರಡೋ ಅಷ್ಟರಲ್ಲಿ ಯಾವತ್ತೂ ನಿಧಾನ-ತಡ-ಲೇಟ್ ಅನ್ನೋದು ಕಾಮನ್ನಾಗಿ ಹೋಗಿಬಿಟ್ಟಿದೆ.

ಮೊನ್ನೆ ಪಾರ್ಕಿನಲ್ಲಿ ನಮ್ಮ ಸಂಘದ ಹಿರಿಯ ವ್ಯಕ್ತಿ ಒಬ್ಬ - ನಾಲ್ಕು ಮಕ್ಕಳ ತಂದೆ ಸಿಕ್ಕಿದ್ದ. ಅವನ ಕಷ್ಟಾ ನೋಡಲಾರ್ದೆ ನನಗೇ ಕರುಳು ಚುರುಕ್ ಅಂದು ಹೋಗಿ ಕರಕೊಂಡ್ ಹೋಗಿ ಒಂದು ಕಾಫಿ ಕುಡಿಸಿದೆ. ’ಬೇಜಾರ್ ಮಾಡ್ಕೋಬೇಡ ಕಣಣ್ಣಾ!’ ಎಂದು ನನ್ನ ಸಂತಾಪದ ಮಾತು ಕೇಳ್ಸಿಕೊಂಡು ಇನ್ನೇನು ಅಳೋ ಮುಸುಡಿ ಮಾಡಿಕೊಂಡಿದ್ದ ಪುಣ್ಯಾತ್ಮ. ಒಂದು ಕಾಲದಲ್ಲಿ ಗರಿಗರಿ ಇಸ್ತ್ರಿ ತಾಗಿಸಿಕೊಂಡ ಬಟ್ಟೆ ಹಾಕುತ್ತಿದ್ದ ಅವನು ಇವತ್ತು ಕೇವಲ ಡ್ರೈಯರಿನಿಂದ ಕೊರಳಿಗೆ ಇಳಿಯೋ ಟೀಶರ್ಟುಗಳಿಗೆ ಮೊರೆ ಹೊಕ್ಕಿದ್ದಾನೆ. ಒಂದು ಕಾಲದಲ್ಲಿ ಒಳ್ಳೇ ಹಳೇ ಕನ್ನಡ ಸಿನಿಮಾದ ಹೀರೋ ಥರ ಕ್ರಾಪು ತೆಗೆದು ಬಾಚುತ್ತಿದ್ದವನು ಇವತ್ತು ಕಪ್ಪು ಕೂದಲಿಗಿಂತ ಬಿಳಿ ಕೂದಲು ಹೆಚ್ಚಾದ ತಲೆಯನ್ನು ಕಾಲು ಇಂಚಿಗಿಂತ ತುಸು ಎತ್ತರದಲ್ಲಿ ಕೂದಲು ಇರುವಂತೆ ಎಲ್ಲ ಕಡೆ ಒಂದೇ ಎತ್ತರಕ್ಕೆ ಚೀಪ್ ಹೇರ್ ಕಟಿಂಗ್ ಮಾಡಿಸಿಕೊಂಡಿದ್ದಾನೆ. ಇನ್ನು ಅವನು ಹಾಕಿದ ಶೂ ಮೇಲೆಲ್ಲ ಮಕ್ಕಳ ಆಹಾರದ ಕಲೆಗಳಿದ್ದವು, ಜೊತೆಗೆ ಅವನ ಪ್ಯಾಂಟೂ-ಸಾಕ್ಸು ಮ್ಯಾಚ್ ಆಗುವುದಿರಲಿ ಸದ್ಯ ಎರಡೂ ಒಂದೇ ಬಣ್ಣದವನ್ನು ಹಾಕಿಕೊಂಡಿದ್ದಾನೇ ಅನ್ನೋದೇ ನಮ್ಮ ಮಾತಿನ ನಡುವೆ ದೊಡ್ಡ ಸಮಾಧಾನದ ವಿಷಯವಾಗಿತ್ತು. ’ಬಾ, ನಮ್ಮನೇಗೇ...’ ಎಂದು ಅವನು ಕೊಟ್ಟ ಔತಣದ ಹಿಂದಿನ ಸ್ವಗತ ’ಇನ್ನು ಇವನು ಬಂದ್ರೆ ಮನೆ ಕ್ಲೀನ್ ಮಾಡಬೇಕಲ್ಲಪ್ಪಾ ನಾನು...’ ಎನ್ನೋದು ನನಗೂ ಕೇಳಿಸಿತ್ತು. ನಾನು ಹೇಳಿದ ’ಇರು ಗುರೂ, ಇನ್ನೂ ಸ್ವಲ್ಪ ಹೊತ್ತು ಮಾತಾಡೋಣ...’ ಎನ್ನೋ ಮಾತುಗಳು ಕೇಳಿದ್ರೂ ಕೇಳಿಸದ ಹಾಗೆ ’ನನ್ನ ಚಿಕ್ಕ ಮಗಳಿಗೆ ಅದೇನೋ ಪ್ರಾಕ್ಟೀಸ್ ಇದೆ...’ ಎಂದು ಗೊಗ್ಗರು ಧ್ವನಿಯಲ್ಲಿ ಹೇಳಿಕೊಳ್ಳುತ್ತಲೇ ಅವನ ಕಾರಿನ ಹತ್ತಿರ ಹೋದ. ನಾನು ’ಬೈ’ ಹೇಳೋಣವೆಂದು ಅವನ ಕಾರಿನ ಹತ್ತಿರ ಹೋದರೆ ಅಲ್ಲಿ ಹಿಂದಿನ ಸೀಟಿನಲ್ಲಿ ಹಲವು ಶತಮಾನದ ಆಹಾರದ ಪದಾರ್ಥಗಳ ಪುಡಿ-ಸ್ಯಾಂಪಲ್ಲು-ವಾಸನೆ ಇವೆಲ್ಲ ಸೇರಿಕೊಂಡು ಬಿಸಿಲಿಗೆ ಮೀಟಿಂಗ್ ನಡೆಸುತ್ತಿದ್ದವು. ಅವನ ಕಾರಿನ ಸೀಟುಗಳು ಎಷ್ಟು ಕೊಳೆಯಾಗಿದ್ದವೆಂದರೆ ಒಂದೊಂದು ಸೀಟಿನ ಫ್ಯಾಬ್ರಿಕ್ ಅದರ ಒದರ ಒರಿಜಿನಲ್ ಕಲರ್ ಕಳೆದುಕೊಂಡು ಜವರಕ್ಕನ ಮನೆಯ ಕೌದಿಯಂತೆ ಬಿಸಿಲ ಕಾಯಿಸಿಕೊಳ್ಳುತ್ತಿದ್ದವು. ನಾನು ಹತ್ರ ಹೋದ್ರೆ ಇನ್ನೆಲ್ಲಿ ಕಾಯ್ಲೆ ಬರುತ್ತೋ ಅಂತ ದೂರದಿಂದಲೇ ’ನಮಸ್ಕಾರ ಸಿಗೋಣ ಮತ್ತೆ!’ ಎಂದು ಗಟ್ಟಿಯಾಗೇನೋ ಅಂದ್ರೆ, ಆದರೆ ’ಮತ್ತೆ...’ ಎಂದು ಹೇಳಿದ್ದನ್ನು ಮತ್ತೆ-ಮತ್ತೆ ನನ್ನ ಮನಸ್ಸು ಪ್ರಶ್ನಿಸಿಕೊಳ್ಳುತ್ತಲೇ ಇತ್ತು ಎಷ್ಟೋ ಹೊತ್ತು.

ನೋಡಿ ಎಂಥಾ ಅದ್ಭುತ - ಬ್ರಾಡ್‌ವೇ ಶೋಗಳನ್ನು ನೋಡಿ ಬದುಕನ್ನು ಸಾಗಿಸಬೇಕಾದವರು ’ಬಾರ್ನಿ ಅಂಡ್ ಫ್ರೆಂಡ್ಸ್’ ನೋಡೋ ಹಾಗಾಯ್ತು. ದಿನಾ ಸ್ಟಾರ್‌ಬಕ್ಸ್ ಕಾಫಿ ಕುಡಿಯೋರು ಸ್ಯಾಮ್ಸ್ ಕ್ಲಬ್ಬಿನ ಮೆಂಬರ್ಸ್ ಮಾರ್ಕ್ ಕಾಫಿಗೆ ಜೋತು ಬಿದ್ದಾಯ್ತು. ರೇಟೆಡ್ R ಇರಲಿ, PG-13 ಕಥೆ/ಸಿನಿಮಾಗಳನ್ನೂ ನೋಡೋಕೆ ಟೈಮೇ ಸಿಗದೇ, ಬರೀ G ರೇಟೇಡ್ ಕಾರ್ಟೂನುಗಳನ್ನು ನೋಡೋದೇ ಬದುಕಾಯ್ತು. ಇನ್ನೊಂದೇನ್ ಗೊತ್ತಾ ಈ ಸಂಘದಲ್ಲಿ ಹೆಚ್ಚು ಹೆಚ್ಚು ಸೀನಿಯಾರಿಟಿ ದೊರೆತಂತೆಲ್ಲಾ ಯಾರೂ ಯಾರಿಗೂ ಸಿಂಪತಿ ಹೇಳೋದೇ ಇಲ್ಲಾ! ನಮ್ಮ್ ನಮ್ಮ್ ಮೀಟಿಂಗ್‌ಗಳಲ್ಲಿ ಯಾವ್ದೇ ಅಜೆಂಡಾ ಅಂತ ಇರೋದೇ ಇಲ್ಲ. ಮೀಟಿಂಗುಗಳಿಗೆ ಕೆಲವರು ಹಲವು ನಿಮಿಷ ಲೇಟಾಗಿ ಬರೋದು ಖಾಯಂ, ಇನ್ನು ಕೆಲವರು ಸೋಮವಾರದ ಮೀಟಿಂಗ್‌ಗೆ ಮಂಗಳವಾರ ಬಂದಿದ್ದೂ ಉಂಟು! ಮರ್ಸೇಡಿಸ್ಸೂ, ಬಿಎಮ್‌ಡಬ್ಲೂ ಕಾರುಗಳನ್ನು ಹೊಡೀ ಬೇಕು ಅನ್ನೋ ಆಸೆ ಇರೋ ನಮಗೆಲ್ಲಾ ಸಿಗೋದು ಯಾವ್ದೋ ತಗಡು ಮಿನಿವ್ಯಾನುಗಳು. ನಮ್ಮನ್ನು ದಾರಿಯಲ್ಲಿ ನೋಡೋ ಜನಗಳೂ ಸಹ ದೂರವೇ ಇರ್ತಾರೆ. ಪೋಲೀಸ್ನೋರೂ ಸಹ ಟಿಕೇಟ್ ಕೊಡಬೇಕಾದ್ರೆ ಯೋಚಿಸ್ತಾರೆ - Poor soul - ಅಂತ ಸಂತಾಪ ಸೂಚಿಸ್ತಾರೆ. ಟಿಕೇಟ್ ಕೊಡೋದ್ ಹಾಗಿರ್ಲಿ ನೀವ್ ಯಾವತ್ತಾದ್ರೂ ಒಂದು ಮಿನಿವ್ಯಾನ್ ಹಿಂದೆ ಪೋಲೀಸ್ ಚೇಸ್ ಮಾಡಿಕೊಂಡು ಹೋಗಿದ್ದನ್ನ ನೋಡಿದಿರೇನು? ಉಳಿದೆಲ್ಲ ಕಾರುಗಳು ಝೀರೋದಿಂದ ಅರವತ್ತಕ್ಕೆ ಹೋಗೋಕೆ ಆರು ಸೆಕೆಂಡ್ ತಗೊಂಡ್ರೆ ಈ ಮಿನಿವ್ಯಾನುಗಳು ಅದರಲ್ಲಿ ಕೂತಿರೋರ ಸಂಕಷ್ಟವನ್ನು ಅರವತ್ತು ಮೈಲಿ ವೇಗದಲ್ಲಿ ಓಡಿಸೋಕೆ ಅರವತ್ತು ನಿಮಿಷಗಳಾದ್ರೂ ಬೇಕು - ಅಂತಾ ಪರಿಸ್ಥಿತಿ.

ನಾನು ಈ ಲೇಖನವನ್ನು ಯಂಗ್ ಅಂಡ್ ಎನರ್ಜೆಟಿಕ್ ಆಗಿರೋ ಓದುಗರಿಗೆ ಬರೆದಿರೋದು ಅನ್ನೋದರಲ್ಲಿ ಸಂಶಯವೇನೂ ಇಲ್ಲ. ಆದ್ರೆ ನಮ್ಮ ಸಂಘದ ಯಾರಾದ್ರೂ ಇದನ್ನ ಓದಿ ನನ್ನ ಮೇಲೆ ಕಂಪ್ಲೇಂಟ್ ಮಾಡಿದ್ರೆ ಅನ್ನೋ ಹೆದರಿಕೆ ನನಗೆ ಇಲ್ಲವೇ ಇಲ್ಲ. ಏಕೆಂದ್ರೆ ಒಂದು - ಅವರ ಮನೆಯ ಕಂಪ್ಯೂಟರ್‌ಗೆ ಅವರು ಲಾಗಿನ್ ಆಗಿ ಈ ಕನ್ನಡವನ್ನು ಓದೋದು ಅಷ್ಟರಲ್ಲೇ ಇದೆ, ಎರಡು - ಅಕಸ್ಮಾತ್ ಅವರು ಓದಿದ್ರೂ ’ಸರಿಯಾಗೇ ಹೇಳ್ದ’ ಅನ್ನೋ ಸಾಂತ್ವನದ ಮುಂದೆ ಅವರು ನಮ್ಮ ಸಂಘಕ್ಕೆ ಹೋಗಿ ಕಂಪ್ಲೇಂಟ್ ಮಾಡೋದೇ ಇಲ್ಲ ಅನ್ನೋ ಭರವಸೆ ನನಗಂತೂ ಖಂಡಿತ ಇದೆ.

ನೀವ್ ಯಾವ ಸಂಘಕ್ಕೆ ಸೇರಿದವರು? ನಿಮ್ಮ ಸಂಘದ ಬಗ್ಗೆ ಒಂದಿಷ್ಟು ಬರೀತೀರಾ ತಾನೆ?

Wednesday, October 10, 2007

ಕೂದಲು ಕತ್ತರಿಸೋರೂ ಪ್ರಶ್ನೆ ಕೇಳ್ತಾರೆ ಅಂದ್ರೆ...

'Was your marriage arranged or you picked your wife?' ಎಂದು ಮೊನ್ನೆ ನೇರ ಮುಖದ ಪ್ರಶ್ನೆಯನ್ನು ಕೇಳಿದ್ದು ಬೇರೆ ಯಾರೂ ಅಲ್ಲ, ನನ್ನ ಸಬ್‌ಸ್ಟಿಟ್ಯೂಟ್ ಹೇರ್ ಡ್ರೆಸ್ಸರ್ರ್ ಡೆಬಿ. ಭಾನುವಾರ ಬೆಳಿಗ್ಗೆ ಇನ್ನೂ ಕಾಫಿ ಬೀಳದ ನರಮಂಡಲದ ವ್ಯವಸ್ಥೆಯಲ್ಲಿ ಇಂಥ ಪ್ರಶ್ನೆಗೆ ನಾನಂತೂ ತಯಾರಿರಲಿಲ್ಲ. ಒಡನೆಯೇ ನನ್ನ ಮುಖ ಅಚಾನಕ್ ಆಗಿ ಕಷ್ಟದ ಟಾಪಿಕ್ ಅನ್ನು ಎತ್ತಿಕೊಂಡ ವರದಿಗಾರನನ್ನು ಎದುರಿಸುವ ಪ್ರೆಸಿಡೆಂಟ್ ಬುಷ್ ಥರ ಆಗಿ ಹೋಗಿತ್ತು. ನನ್ನ ಮಾಮೂಲಿ ಹೇರ್ ಕಟ್ ಮಾಡುವವಳು ಡಾಲಿ ಎನ್ನುವ ಗುಜರಾತಿ ಹೆಂಗಸು. ಆಕೆ ಯಾವ ಲಂಗು ಲಗಾಮಿಲ್ಲದೇ ಬಿಳಿ-ಕಪ್ಪು-ಕಂದು ಬಣ್ಣದ ಜನರ ಮಾತನಾಡುವುದು ನನಗಿಷ್ಟವಾದರೂ ವೃತ್ತಿಯಲ್ಲಿ ಒಬ್ಬ ಕೂದಲು ಕತ್ತರಿಸುವವಳಾಗಿ ಆಕೆಗೆ ಅವಳ ಮಿತಿ ಇರುವುದು ಮೊದಲ ದಿನದಿಂದಲೇ ಸ್ಪಷ್ಟವಾದ್ದರಿಂದ ನಾನು ಆಕೆಯ ಮಾತುಗಳನ್ನು ಬಹಳ ಮಟ್ಟಿಗೆ ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ಬಿಟ್ಟರೂ ಎಷ್ಟೋ ಸಾರಿ ಆಕೆಯ ಸ್ಪಷ್ಟವಾದ ನೋಟ ಇಷ್ಟವಾಗಿರೋದು ನಿಜ. ಕೂದಲು ಕತ್ತರಿಸುವವ, ಬಟ್ಟೆ ಇಸ್ತ್ರಿ ಮಾಡಿಕೊಡುವವ, ತರಕಾರಿ ಮಾರುವವ ಹಾಗೂ ಅವರ ಗಿರಾಕಿಯ ನಡುವೆ ಭಾರತದಲ್ಲಿ ಒಂದು ಅನ್ಯೋನ್ಯ ಸಂಬಂಧವಿರುತ್ತದೆ, ಅವರು ಎಷ್ಟೋ ಜನ ಗಿರಾಕಿಗಳ ಜೊತೆ ನಡೆದುಕೊಂಡು ಅವರದ್ದೇ ಆದ ಒಂದು ಮಾತಿನ ವರಸೆಯನ್ನು ಕಂಡುಕೊಂಡಿರುವುದೂ ಅದರಲ್ಲಿ ಕೆಲವೊಮ್ಮೆ ಗಮನ ಸೆಳೆಯುವ ಅಂಶಗಳು ಹೊರ ಬರುವುದನ್ನು ನಾನು ಗಮನಿಸಿದ್ದೆ. ಆದರೆ ಇಲ್ಲಿ ನನ್ನ ಮತ್ತು ನನ್ನ ಕೂದಲು ಕತ್ತರಿಸುವವಳ ಸಂಬಂಧ ಭಾರತದ ಅಂತಹ ಸಂಬಂಧದ ಒಂದು ಸಣ್ಣ ಎಳೆ ಅಷ್ಟೇ, ಅದನ್ನು ಬಿಟ್ಟರೆ ವ್ಯಾಪಾರಿ-ಗ್ರಾಹಕ ಸಂಬಂಧದಲ್ಲಿ ಬೇರೆ ಯಾರು ’ಮನಬಿಚ್ಚಿ’ ಮಾತನಾಡಿದ್ದನ್ನು ನಾನು ಈ ವರೆಗೂ ನೋಡಿಲ್ಲ.

ಕೂದಲು ಕತ್ತರಿಸುವ ವ್ಯಕ್ತಿ ಎಂದರೆ ಕೃತಕವಾದೀತು, ಹಜಾಮ ಎನ್ನೋಣ, ನಾಪಿಗ ಎನ್ನೋಣ - ಹಜಾಮ ಎನ್ನುವುದು ಹಾರ್ಶ್ ಆದರೆ, ನಾಪಿಗ ಎನ್ನುವುದು ತೀರಾ ನುಣುಪಾದೀತು, ಕ್ಷೌರ ಮಾಡುವವನು ಎಂದರೆ ಗ್ರಾಂಥಿಕವಾದೀತು! ಇವೆಲ್ಲ ಬಳಕೆಯಲ್ಲಿ ನೀವು ಬರೀ ಪುಲ್ಲಿಂಗದ ಬಳಕೆಯನ್ನು ಗಮನಿಸಿರಬಹುದು. ಹಜಾಮೆ, ನಾಪಿಗಿತ್ತಿ ಎನ್ನುವ ಪದಗಳು ಇದ್ದಂತೆ ನನಗೆ ತೋರದು. ಅಂದರೆ ಭಾರತದಲ್ಲಿ ಕ್ಷೌರ ಮಾಡುವುದು ಗಂಡಸರು ಮಾಡುವ ಕೆಲಸವೇ ಸರಿ, ಇತ್ತೀಚಿನ ಬ್ಯೂಟಿ ಪಾರ್ಲರ್‌ಗಳಲ್ಲಿ ಹೆಂಗಸರು ಅದೇನೇನೆಲ್ಲವನ್ನು ಮಾಡಿ ಬೆಚ್ಚಗಿನ ಏರ್ ಕಂಡೀಷನ್ಡ್ ಕೋಣೆಗಳಲ್ಲಿ ಬಹಳಷ್ಟು ಹಣವನ್ನು ಸುಲಿಯುವುದು ನಿಜವಾದರೂ ನನ್ನ ಮತ್ತು ನಮ್ಮೂರಿನ ಹಜಾಮನ ಸಂಬಂಧ ಬಹಳ ಅನ್ಯೋನ್ಯವಾದದ್ದೇ. ಊರಿನಲ್ಲಿ ನಡೆಯುವ ಪ್ರತಿಯೊಂದು ಬದಲಾವಣೆಗಳಿಗೂ ಆತ ಒಂದು ರೀತಿಯ ತೆರೆದ ಕಣ್ಣಿನ ವರದಿಗಾರನಿದ್ದ ಹಾಗೆ. ನೀವು ಯಾವುದೇ ಊರಿನ ಇತಿಹಾಸವನ್ನು ಹುಡುಕಿ ಹೋದರೂ ಆಯಾ ಊರಿನ ಹಜಾಮನ ಬಳಿ ಇರಬಹುದಾದ ಮಾಹಿತಿಗಳು ನಿಮಗೆ ಅಲ್ಲಿನ ಗ್ರಂಥಾಲಯಗಳಲ್ಲಿಯೂ ದೊರೆಯಲಾರವು. ಹೀಗೆ ಒಂದು ಊರಿನ ಸವಿತಾ ಸಮಾಜಕ್ಕೆ ಅವರದ್ದೇ ಆದ ಒಂದು ಕಾಯಕವಿದೆ, ಅದು ಊರಿನ ಇತಿಹಾಸ, ವರ್ತಮಾನವನ್ನು ಯಾವಾಗಲೂ ತಮ್ಮ ಡೇಟಾಬೇಸ್‌ಗಳಲ್ಲಿ ಅಪ್‌ಡೇಟ್ ಮಾಡಿಕೊಂಡು ಹೋಗುವುದು.

ಅಮೇರಿಕಕ್ಕೆ ಬಂದವರ ಪಾಡಿನಲ್ಲಿ ಇಲ್ಲಿ ಮೊದಲ ದಿನದಿಂದಲೇ ಮಹಿಳಾ ಕ್ಷೌರಿಕರ ಜೊತೆ ಹೊಂದಿಕೊಳ್ಳುವ ಅನಿವಾರ್ಯತೆ. ನಿಮಗೆಲ್ಲ ಹೇಗೋ ಏನೋ ಗೊತ್ತಿಲ್ಲ, ನನಗಂತೂ ಒಬ್ಬ ಒಳ್ಳೆಯ ಕ್ಷೌರಿಕನನ್ನು ಕಂಡುಕೊಳ್ಳುವುದು ಒಂದು ಒಳ್ಳೆಯ ದಿನಸಿ ಅಂಗಡಿಯನ್ನು ಕಂಡುಕೊಳ್ಳುವಷ್ಟೇ ಮುಖ್ಯ. ಮೊದಮೊದಲ ನಾಚಿಕೆ, ಬಿಂಕ ನನಗಂತೂ ಇಲ್ಲ - ಒಂದು ರೀತಿ ಕರ್ನಾಟಕದ ಜನರು ಬಸ್ಸುಗಳಲ್ಲಿ ಮಹಿಳಾ ಕಂಡಕ್ಟರುಗಳನ್ನು ಸ್ವೀಕರಿಸಿದ ಹಾಗೆ, ಮಹಿಳಾ ಆಟೋ ಡ್ರೈವರುಗಳನ್ನು ಗೌರವಿಸುವ ಹಾಗೇ ನಾನೂ ಹೊಂದಿಕೊಂಡು ಬಿಟ್ಟಿದ್ದೇನೆ. ಕೂದಲು ಕತ್ತರಿಸುವ ವಾತಾವರಣ ಬಹಳ ಮುಖ್ಯವಾದದ್ದು. ನಿಮ್ಮ ಮುಖವನ್ನು ಎಲ್ಲ ಬೆಳಕುಗಳಲ್ಲಿ ತೋರಿಸುವ ಕನ್ನಡಿ ನಿಮ್ಮ ಮುಂದೇ ಇರುತ್ತದೆ, ಜೊತೆಗೆ ಬಹಳಷ್ಟು ಸಾರಿ ಕ್ಷೌರ ಮಾಡುವವರು ನಿಮ್ಮನ್ನುದ್ದೇಶಿಸಿ ಮಾತನಾಡುವಾಗ ನಿಮ್ಮ ಕನ್ನಡಿಯ ಬಿಂಬವನ್ನು ನೋಡುತ್ತಿರುತ್ತಾರೆ ಎಂಬುದೂ ಸ್ಪಷ್ಟ. ಆದ್ದರಿಂದ ಅವರು ಕೇಳುವ ಪ್ರಶ್ನೆಗೆ ನೀವು ಯಾವ ಉತ್ತರ ಕೊಡುತ್ತೀರಿ, ಆ ಉತ್ತರಕ್ಕೆ ತಕ್ಕಂತೆ ನಿಮ್ಮ ಮುಖಭಾವ ಹೇಗೆ ಬದಲಾಗುತ್ತದೆ, ನೀವು ಸುಳ್ಳು ಹೇಳುತ್ತಿದ್ದೀರೋ ಇಲ್ಲವೋ ಎನ್ನುವುದನ್ನು ನಿಮಗೂ ಸ್ಪಷ್ಟ ಪಡಿಸುವ ಒಂದು ಸ್ವಚ್ಛ ಕನ್ನಡಿ ಇರೋದರಿಂದ ನೀವು ಎಷ್ಟು ಸಾಧ್ಯವೋ ಅಷ್ಟು ಸತ್ಯವಂತರಾಗದೇ ಬೇರೆ ದಾರಿಯೇ ಇರೋದಿಲ್ಲ. ನಿಮಗೆ ಗೊತ್ತಿರೋ ಹಾಗೆ ನಿಮ್ಮ ಹಾಗೂ ಕನ್ನಡಿಯಲ್ಲಿನ ನಿಮ್ಮ ಬಿಂಬದ ನಡುವೆ ಒಂದು ಅವಕಾಶವಿರುತ್ತದೆ (space), ಆ ವರ್ಚುವಲ್ ಇಮೇಜ್ ನಿಮ್ಮ ಹಾಗೂ ಕನ್ನಡಿಯ ನಡುವಿನ ಅಂತರದ ಎರಡು ಪಟ್ಟು ದೂರದಲ್ಲಿರುತ್ತದೆ. ಈ ರಿಯಲ್ ಹಾಗೂ ವರ್ಚುವಲ್ ಅವಕಾಶ ಒಂದು ರೀತಿಯ ರಂಗಪ್ರದೇಶವನ್ನು ಅನುಗೊಳಿಸಿ ನೀವು ಹಾಗೂ ನಿಮ್ಮ ನಡತೆ, ಹಾವಭಾವ, ಆಚಾರ-ವಿಚಾರ ಇವುಗಳಿಗೆಲ್ಲಕ್ಕೂ ಬೆಳಕು ತೋರಿ ನಿಮ್ಮನ್ನು ನೀವು ಬೇಡವೆಂದರೂ ಇಬ್ಬಂದಿಗೆ ಸಿಲುಕಿಸಬಲ್ಲದು.

ಸಬ್‌ಸ್ಟಿಟ್ಯೂಟ್ ಹೇರ್ ಡ್ರೆಸ್ಸರ್ ಡೆಬಿ ಕೇಳಿದ ಪ್ರಶ್ನೆಗೆ ಇಲ್ಲಿನ ರಾಜಕಾರಣಿಗಳು ಹೇಳುವಂತೆ ಸುತ್ತಿ ಬಳಸಿ ಉದ್ದವಾದ ಉತ್ತರವನ್ನು ಕೊಡಬಹುದಿತ್ತು, ಆದರೆ ಹೇರ್ ಸೆಲೂನ್‌ನಲ್ಲಿ ಅಂತಹ beating around the bush ಮುಮೆಂಟ್‌ಗಳಿಗೆ ಅವಕಾಶವೇ ಬರೋದಿಲ್ಲ. ನನ್ನ ಮಾಮೂಲಿ ಹೇರ್ ಡ್ರೆಸ್ಸರ್ ಡಾಲಿ ಇರದಿದ್ದುದು ಒಂದು ಬದಲಾವಣೆ, ಅಂತಹ ಬದಲಾವಣೆಯನ್ನು ನಾನೂ ಫೈಟ್ ಮಾಡಬೇಕಾಗುತ್ತದೆ ಹಲವಾರು ವಿಚಾರಗಳಲ್ಲಿ - ಕೂದಲು ಕತ್ತರಿಸುವ ಆಕೆಯ ಕೈಚಳಕ ಹೇಗೋ ಏನೋ ಎನ್ನುವ ಮೂಲಭೂತ ಪ್ರಶ್ನೆಯಿಂದ ಹಿಡಿದು ಆಕೆಯ ಪೊಲಿಟಿಕಲ್, ಧಾರ್ಮಿಕ, ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆಯನ್ನು ಅರಿತು ಅಥವಾ ಅದಕ್ಕೆ ಸೆನ್ಸಿಟಿವ್ ಆಗಿದ್ದುಕೊಂಡು ನಾನು ಆಕೆಯೊಡನೆ ಮಾತನಾಡಬೇಕಾಗುತ್ತದೆ. ಇರೋ ಕೆಲವೇ ನಿಮಿಷಗಳಲ್ಲಿ ಆಕೆ ತನ್ನ ಬಗ್ಗೆ ಬಹಳಷ್ಟು ಹೇಳಿ ಬಿಟ್ಟಿದ್ದಳಾದ್ದರಿಂದ ಆಕೆಯೊಡನೆ ವ್ಯವಹರಿಸಲು ನನಗೆ ಯಾವ ಕಷ್ಟವೂ ಆಗಲಿಲ್ಲ. ಇಲ್ಲೇ ನಾವಿರುವ ಊರಿನ ಹತ್ತಿರದಲ್ಲಿಯೇ ಒಂದು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸುಗಳಲ್ಲಿ ನೆಲೆಸಿ ಬಹಳಷ್ಟು ಭಾರತೀಯರೊಡನೆ ಈಗಾಗಲೇ ಸಾಕಷ್ಟು ಒಡನಾಡಿರುವ ಒಮ್ಮೆ ಮದುವೆಯಾಗಿ ಈಗ ಡೈವೋರ್ಸ್ ಪಡೆದಿರುವ ನಲವತ್ತರ ನಡುವಿನ ಪ್ರಾಯದಲ್ಲಿರುವ ಆಕೆಯ ಪ್ರಶ್ನೆಗಳು ಹಾಗೂ ಉತ್ತರ ನೇರವಾದದ್ದೇ. ಅಂತಹ ತಾತ್ಕಾಲಿಕ ಸಂಬಂಧ ಅದೇ ರೀತಿಯ ಸಂವಾದವನ್ನು ಬಳಸುತ್ತದೆ ಹಾಗೂ ಬೆಳಸುತ್ತದೆ. ಆಕೆ ಕೇಳುವ ಪ್ರಶ್ನೆಗಳಿಗೆ Its none of your business ಎನ್ನುವ ಪ್ರಮೇಯವೇ ಬರೋದಿಲ್ಲ! ಆದ್ದರಿಂದಲೇ ಆಕೆಗೆ ನನ್ನ ಉತ್ತರ - ’No and yes. Was I free to pick anyone as my wife? No. Did I pick or chose my wife? Yes.'

ನಿಮಗೇನಾದರೂ ಇದೇ ರೀತಿಯ ಸಂದಿಗ್ಧ ಒದಗಿ ಬಂದಿದೆಯೇ? ಹಾಗೇನಾದರೂ ಆದಲ್ಲಿ ನಾನು ಆಗಾಗ್ಗೆ ಬಳಸುವ ಭಾರತೀಯರನ್ನು ವಿಸ್ತಾರವಾಗಿ ಕವರ್ ಮಾಡುವ ಈ ಕೆಳಗಿನ ಹೇಳಿಕೆಯೊಂದನ್ನು ಬಳಸಿ ನೋಡಿ ನಿಮ್ಮ ಕಷ್ಟ ಸ್ವಲ್ಪ ಕಡಿಮೆಯಾಗಬಹುದು - It varies (in India)...there are one billion people over there and as many cultures!

Sunday, October 07, 2007

ಕನಸುಗಾರರು ಬೇಕಾಗಿದ್ದಾರೆ...

ರಾಜಕೀಯದ ಬಗ್ಗೆ ಬರೆಯೋದ್ ಏನಿದೆ, ಬರೆಯೋಕ್ ಏನಿದೆ ಅಂತ ಯೋಚಿಸ್ತಾ ಇರಬೇಕಾದ್ರೆ ಏನು ಬರೆದ್ರೂ ಯಾರಿಗಾದ್ರೂ ಒಬ್ರಿಗ್ ಬೈಯಲೇ ಬೇಕು, ಹಾಗೆ ಬೈಯದೆ ಇದ್ರೆ ನನಗಂತೂ ಸಮಾಧಾನವೇ ಇರೋದಿಲ್ಲ. ನಮ್ ದೇಶದ ರಾಜಕಾರಣವಾಗ್ಲೀ, ನಮ್ ರಾಜ್ಯದ ರಾಜಕಾರಣವಾಗ್ಲೀ ಹೊಲಸೆದ್ದು ಹೋಗಿದೆ ಅಂತ್ಲೇ ನಾನು ನಂಬಿರೋನು. ಇನ್ನೇನು ಹೇಳೋದು, ಈ ತಿಂಗಳುಗಳನ್ನು ನಂಬಿದ ಸರ್ಕಾರಗಳನ್ನು ಕುರಿತು ಓದ್ತಾ ಇರಬೇಕಾದ್ರೆ? ಜನತಾ ನ್ಯಾಯಾಲಯಕ್ಕಾದ್ರೂ ಯಾವ ಆಪ್ಷನ್‌ಗಳು ಉಳಿದಿವೆ ಈ ಮಂಕುದಿಣ್ಣೆಗಳನ್ನೇ ಮತ್ತೆ ಮತ್ತೆ ಆರಿಸಿ ತರೋದನ್ನು ಬಿಟ್ರೆ?

ನನ್ನ ಒಡಲಿನಲ್ಲಿ ಬೇಕಾದಷ್ಟು ಬೈಗಳುಗಳನ್ನು ತುಂಬಿಕೊಂಡಿದ್ರೂ ದಳ, ಬಿಜೆಪಿ, ಕಾಂಗ್ರೆಸ್ಸಿನವರನ್ನು ನೋಡಿ ಬೈಯದೇ ಇರುವಷ್ಟು ಸುಮ್ಮನಾಗಿ ಹೋಗಿರೋದನ್ನು ನೋಡಿ ನನಗೇ ಆಶ್ಚರ್ಯ ಆಗ್ತಾ ಇದೆ. ಈ ಸಮ್ಮಿಶ್ರ ಸರಕಾರ ಮೊಟ್ಟ ಮೊದಲ್ನೆ ಬಾರಿಗೆ ಅಧಿಕಾರ ಬರೋಕ್ಕಿಂತ ಮೊದಲೇ ಚುನಾವಣೆ ಫಲಿತಾಂಶ ನೋಡಿ ಯಾರಿಗೂ ನಿಚ್ಚಳ ಬಹುಮತ ಬಾರದಿದ್ದುದನ್ನು ಕಂಡಾಗಲೇ ಈ ಹೊಂದಾಣಿಕೆ ಹತ್‌ಹತ್ರ ನಲವತ್ತು ತಿಂಗಳು ಬಂದಿದ್ದೇ ಹೆಚ್ಚು ಅನ್ಸಿದ್ದು ನಿಜ. ಕಳೆದ ಚುನಾವಣೆಯಲ್ಲಿ ಹೆಚ್ಚು ಶಾಸಕರನ್ನು ಪಡೆದವರಿಗೆ ಅಧಿಕಾರ ಸಿಗದಿದ್ದುದೂ, ಕಡಿಮೆ ಶಾಸಕರನ್ನು ಪಡೆದವರು ಮುಖ್ಯಮಂತ್ರಿಗಳಾಗಿ ಮೆರೆದದ್ದೂ ವಿಶೇಷ. ಇಪ್ಪತ್ತು ತಿಂಗಳ ಹಿಂದೆ ಅಪ್ಪ-ಮಗನ ವಿರಸ ಪ್ರಕಟವಾಗಿತ್ತು, ಈಗ ಎಲ್ಲರೂ ಒಂದಾದ ಹಾಗಿದೆ. ಅಧಿಕಾರದ ಆಸೆಗೋಸ್ಕರ ಕೈ ಜೋಡಿಸಿ ಒಪ್ಪಂದ ಮಾಡಿಕೊಳ್ಳುವಾಗ ಬುದ್ಧಿ ಇರಲಿಲ್ಲವೇ ಎಂದೂ ಅನೇಕಾನೇಕ ಪ್ರಶ್ನೆಗಳು ಇನ್ನೂ ಹುಟ್ಟುತ್ತಲೇ ಇವೆ.

ಜನಾದೇಶ, ಚುನಾವಣೆ, ಜನತಾ ನ್ಯಾಯಾಲಯ ಎಂದೇನೇ ಕರೆದರೂ ರಾಜ್ಯವನ್ನು ಸರಿಯಾಗಿ ನಡೆಸಿಕೊಂಡು ಹೋಗುವ ನಾಯಕರ ಕೊರತೆ ಬಹಳ ದೊಡ್ಡದು. ನಾನು ಕಂಡ ಹಾಗೆ ಯಾವ ಪಕ್ಷದಲ್ಲಿಯೂ ಸರಿಯಾದ ನಾಯಕರು, ಮುಂದಾಳುಗಳು ನನ್ನ ಕಣ್ಣಿಗಂತೂ ಬೀಳುತ್ತಿಲ್ಲ. ಹಾಳೂರಿಗೆ ಉಳಿದವನೇ ಗೌಡ ಎಂದು ಯಾರನ್ನು ಬೇಕಾದರೂ ಆರಿಸುವುದಾದರೆ ಜನತೆಯ ಮತಕ್ಕಾದರೂ ಎಲ್ಲಿಯ ಬೆಲೆ ಬಂದೀತು? ಹಾಗಾದರೆ ಕರ್ನಾಟಕದ ರಾಜಕಾರಣದಲ್ಲಿ ಯಾವ ಮುತ್ಸದ್ದಿಗಳೂ ಇಲ್ಲವೇ? ಮುವತ್ತು ನಲವತ್ತು ವರ್ಷಗಳ ರಾಜಕಾರಣ ಮಾಡಿದವರೆಲ್ಲರೂ ’ಕಾದು ನೋಡುತ್ತೇವೆ, ಹೈ ಕಮಾಂಡಿನ ಆದೇಶದಂತೆ ನಡೆಯುತ್ತೇವೆ’ ಎನ್ನುವುದು ಯಾವ ನ್ಯಾಯ? ಪಕ್ಷದ ಅಧ್ಯಕ್ಷರಿಗೆ ಬೆಲೆ ಇರಬೇಕೋ ಬೇಡವೋ, ಪಕ್ಷ ಹೆಚ್ಚೋ ವ್ಯಕ್ತಿ ಹೆಚ್ಚೋ ಮುಂತಾದ ಪ್ರಶ್ನೆಗಳು ನಾಳೆ ನಡೆಯುವ ಚರ್ಚಾಸ್ಪರ್ಧೆಗೆ ತಯಾರು ನಡೆಸುತ್ತಿರುವ ಹೈ ಸ್ಕೂಲು ಹುಡುಗನ ಮನದಲ್ಲಿ ಸುಳಿಯುವ ಹಾಗೆ ಸುಳಿದು ಹೋದವು.

***

ನೀವು ಸ್ವಲ್ಪ ಯೋಚಿಸಿ ನೋಡಿ - ಇದರಿಂದ ಒಂದಂತೂ ಒಳ್ಳೆಯದಾಗಿದೆ. ಕುಮಾರಸ್ವಾಮಿ ತಮ್ಮ ಅತ್ಯಂತ ಕಡಿಮೆ ಅನುಭವವಿದ್ದಾಗ್ಯೂ ಚಿಕ್ಕ ವಯಸ್ಸಿನಲ್ಲಿ ಮುಖ್ಯಮಂತ್ರಿಯಾಗಿದ್ದು ನೋಡಿದರೆ, ಮುಂದೆ ಅವರ ಪಕ್ಷ ಮೆಜಾರಿಟಿಗೆ ಬಂದರೆ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೇ ಹೊರತು ಬೇರೆ ಯಾವ ಮಂತ್ರಿ ಪದವಿಯೂ ಅವರಿಗೆ ತಕ್ಕುದಾದಂತೆ ಕಾಣುವುದಿಲ್ಲ, ವಿರೋಧಪಕ್ಷದಲ್ಲಿ ಕುಳಿತು ಚಿಂತಿಸುವುದನ್ನು ಬಿಟ್ಟರೆ. ದೇವೇಗೌಡರಂತೂ ಈಗಾಗಲೇ ತಮ್ಮ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಹುದ್ದೆಗಳ ಕೋಟಾವನ್ನು ಪೂರೈಸಿದಂತೆ ಕಾಣುವುದರಿಂದ ಹಿನ್ನೆಲೆಯಲ್ಲಿ ಕುಳಿತು ಏನೇ ಮಾಡಿದರೂ ಮತ್ತೆ ಅವರು ಆಡಳಿತ ಗದ್ದುಗೆ ಹತ್ತುವಂತೆ ತೋರದು. ಬಿಜೆಪಿಯ ಯಡಿಯೂರಪ್ಪನವರದೂ ಅದೇ ಕಥೆ - ಉಪಮುಖ್ಯಮಂತ್ರಿ ಆದವರು ಮುಖ್ಯಮಂತ್ರಿಗಳಾಗ ಬೇಕಷ್ಟೇ? ನಿಚ್ಚಳ ಬಹುಮತ ಬಾರದ ಹೊರತು ಅವರು ಕಾಂಗ್ರೆಸ್ ಒಂದಿಗಾಗಲೀ, ಜನತಾದಳದೊಂದಿಗಾಗಲೀ ಸಂಧಿ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ಕಾಂಗ್ರೇಸಿನವರು ಯಾಕೋ ಸಪ್ಪಗಾಗಿ ಹೋಗಿದ್ದಾರೆ. ಧರಮ್ ಸಿಂಗ್ ಮುಂದಾಳತ್ವದಲ್ಲಿ ಅದೇಕೋ ಅಷ್ಟೊಂದು ಚುರುಕು ಕಾಣಿಸುತ್ತಲೇ ಇಲ್ಲ.

ಆದ್ದರಿಂದಲೇ, ಚುನಾವಣೆ ನಡೆದು ಯಾವ ರೀತಿಯ ಫಲಿತಾಂಶ ಬಂದರೂ ಹಳೆ ತಲೆಗಳು ಮತ್ತೆ ಗದ್ದುಗೆ ಹತ್ತುವುದು ಕಷ್ಟಸಾಧ್ಯ ಎಂದು ನನ್ನ ಅನಿಸಿಕೆ. ಹಾಗಾದರೆ, ಹೊಸ ನಾಯಕರಿಲ್ಲ, ಹಳೆಯವರ ಕಾಲ ಮುಗಿದಿದೆ - ಹೀಗಿರುವಾಗ ಚುನಾವಣೆಯ ಫಲಿತಾಂಶ ಯಾವ ದಿಕ್ಕಿಗೆ ಸಾಗಬಹುದು? ಕಳೆದ ಸಾರಿ ಬಿಜೆಪಿ ಹೆಚ್ಚು ಶಾಸಕರನ್ನು ಗಳಿಸಿತ್ತು, ಎರಡನೆಯ ಸ್ಥಾನದಲ್ಲಿ ಕಾಂಗ್ರೆಸ್, ಮೂರನೆಯ ಸ್ಥಾನದಲ್ಲಿ ದಳ ಬಂದಿದ್ದವು. ಈಗ ಮುಂದಿನ ಚುನಾವಣೆಯಲ್ಲಿ (ನಡೆದರೆ), ಈ ಪಕ್ಷಗಳು ಅಷ್ಟಷ್ಟೇ ಮತಗಳನ್ನು/ಶಾಸಕರನ್ನು ಗಳಿಸಿ ಮುಂದೆ ಇದೇ ರೀತಿ ಹಂಗ್ ಅಸೆಂಬ್ಲಿ ಬಂದರೆ ಏನು ಮಾಡುತ್ತಾರಂತೆ? ಜಾತಿಯ ಅಲೆ, ಸಂವೇದನೆಯ ಅಲೆ, ಸುಮ್ಮನೇ ಕುಳಿತು ಏನೂ ಮಾಡದಿರುವ ಸೋಮಾರಿಗಳ ಅಲೆಗಳಾಗಲೀ ಯಾವ ರೀತಿಯಲ್ಲಿ ಯಾರು ಯಾರಿಗೆ ಸಹಾಯ ಮಾಡುತ್ತವೆ ಎನ್ನೋದು ಬಹಳ ಕುತೂಹಲಕಾರಿ ವಿಷಯ.

***

ನಮ್ಮ ಸ್ನೇಹಿತರೊಬ್ಬರು, ಕನ್ನಡಿಗರೇ - ಅನಿವಾಸಿಯಾಗಿ ಸುಮಾರು ಎಂಟು ವರ್ಷಗಳಿಂದ ಅಮೇರಿಕದಲ್ಲಿ ಇರುವವರೊಬ್ಬರು ಕರ್ನಾಟಕ/ಭಾರತದ ರಾಜಕಾರಣದಲ್ಲಿ ಧುಮುಕ ಬೇಕು ಎನ್ನುವ ಆಸೆಯನ್ನು ಒಮ್ಮೆ ವ್ಯಕ್ತಪಡಿಸಿದ್ದರು. ಅವರೊಬ್ಬ ವಿದ್ಯಾವಂತ ಮಹಿಳೆ, ಇಲ್ಲಿ ಒಳ್ಳೆಯ ಕೆಲಸದಲ್ಲಿರುವವರು, ಅಂತಹವರಿಗೆ ರಾಜಕೀಯ ಕಾಳಜಿ ಆ ಮೂಲಕ ಜನರ ಸೇವೆ ಮಾಡುವ ಗುರಿ ಅಥವಾ ಕನಸು ಇರುವುದು ಬಹಳ ದೊಡ್ಡ ವಿಷಯ. ಅದೂ ಇತ್ತೀಚಿನ ವಿದ್ಯಾವಂತ ಜನತೆ ಹಾಳು ರಾಜಕೀಯದಿಂದ ದೂರವೇ ಇರೋಣ ಎನ್ನುವಂತಹ ಸಂದರ್ಭದಲ್ಲಿ ಅಮೇರಿಕದ ಉನ್ನತ ಎಮ್‌ಬಿಎ ಪದವಿ ಪಡೆದಿರುವ ಹಾಗೂ ಇಲ್ಲಿನ ಕಾರ್ಪೋರೇಷನ್ನುಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ಆಡಳಿತವರ್ಗದ ಆಗುಹೋಗುಗಳನ್ನು ಬಲ್ಲವರಿಗೆ ಕರ್ನಾಟಕದ ರಾಜಕೀಯದಲ್ಲಿ ಸಕ್ರಿಯ ಪಾತ್ರವನ್ನು ವಹಿಸುವುದು ಕಷ್ಟವೇ? ಎನ್ನುವ ಪ್ರಶ್ನೆಯನ್ನು ನಾನೂ ಕೇಳಿಕೊಂಡಿದ್ದೆ.

ಕಳೆದ ವರ್ಷ ಭಾರತಕ್ಕೆ ಹೋದಾಗ ನನ್ನ ಸಹಪಾಠಿ ಹಾಗೂ ಬಾಲ್ಯ ಸ್ನೇಹಿತ ಶ್ರೀಕಾಂತನ ಬಳಿ ಈ ಬಗ್ಗೆ ವಿಚಾರಿಸಿದಾಗ ಅವನು ನಾನೇ ಎಲ್ಲಿ ಎಮ್‌ಎಲ್‌ಎ ಸೀಟಿಗೆ ಸ್ಪರ್ಧಿಸಿಬಿಡುತ್ತೇನೋ ಎಂದು ತಿಳಿದುಕೊಂಡು ನನ್ನ ಪ್ರಶ್ನೆಗೆ ಗಹಗಹಿಸಿ ನಗತೊಡಗಿದ. ಅವನ ಮುಗ್ಧ ಉತ್ತರದ ಪ್ರಕಾರ ನನ್ನಂತಹ ಹುಂಬ ಮತ್ತೊಬ್ಬನಿಲ್ಲವೆಂದೂ, ತಲೆ ಸರಿ ಇರುವವನು ಯಾರೂ ರಾಜಕೀಯದ ಸಹವಾಸಕ್ಕೆ ಹೋಗುವುದಿಲ್ಲವೆಂತಲೂ, ಒಂದು ವೇಳೆ ಹೋದರೂ ಒಂದು ಎಮ್‌ಎಲ್‍ಎ ಸೀಟಿಗೆ ಟಿಕೆಟ್ ತೆಗೆದುಕೊಳ್ಳಲು ಮಾಡಬೇಕಾದ ಕಸರತ್ತುಗಳನ್ನೆಲ್ಲ ನಿಧಾನವಾಗಿ ವಿವರಿಸಿದ. ನಮ್ಮ ಸೊರಬಾ ತಾಲ್ಲೂಕಿನ ಕುಮಾರ್ ಬಂಗಾರಪ್ಪ, ಬಂಗಾರಪ್ಪನವರ ಉದಾಹರಣೆಯಿಂದ ಹಿಡಿದು ನೆರೆಯ ತಾಲ್ಲೂಕಿನ ಶಿಕಾರಿಪುರದ ಯಡಿಯೂರಪ್ಪ ಹಾಗೂ ರಾಜ್ಯ ಮಟ್ಟದಲ್ಲಿ ಅಂದು ಜೆ‍ಎಚ್ ಪಟೇಲ್, ದೇವೇಗೌಡರ ಇವರ ಬಗ್ಗೆ ತಿಳಿಸಿದ. ಒಂದು ಎಮ್‌ಎಲ್‌ಎ ಸೀಟಿಗೆ ಐವತ್ತು ಲಕ್ಷದಿಂದ ಹಿಡಿದು ಸರಿಸುಮಾರು ಕೋಟಿಯವರೆಗೆ ಸುರಿಯುವ ಬಗ್ಗೆ ಕೇಳಿ ನನಗಂತೂ ಆಶ್ಚರ್ಯವಾಯಿತು. ಇತ್ತೀಚೆಗೆ ಚುನಾವಣಾ ಅಭ್ಯರ್ಥಿಗಳು ತಮ್ಮ ಆಸ್ತಿ ಅಂತಸ್ತುಗಳ ಬಗ್ಗೆ ಸಾರ್ವಜನಿಕವಾಗಿ ಲೆಕ್ಕಪತ್ರಗಳನ್ನು ಕೊಡಬೇಕೆಂಬ ಕಾನೂನಿದ್ದರೂ ಅದೆಲ್ಲಿಂದ ಈ ಶಾಸಕ ಸ್ಪರ್ಧಿಗಳು ಅಷ್ಟೊಂದು ದುಡ್ಡನ್ನು ತರುತ್ತಾರೋ ಎಂದು ಜಿಲ್ಲಾ ಪರಿಷತ್ ಡೇಟಾಬೇಸನ್ನು ಹುಡುಕಿಕೊಂಡು ಹೋಗಿ ನನಗೆ ಬೇಕಾದ ಪ್ರತಿಯೊಬ್ಬ ಮುತ್ಸದ್ದಿ, ದುರೀಣ, ನಾಯಕ, ಪುಡಾರಿಗಳ ಆಸ್ತಿ ವಿವರಗಳನ್ನು ನಾನೇ ಓದಿ ನೋಡಿದೆ. ಆದರೆ ಎಲ್ಲೂ ಉತ್ತರ ಸಿಕ್ಕ ಹಾಗೆ ಕಾಣಿಸಲಿಲ್ಲ. ಶ್ರೀಕಾಂತನ ಜೊತೆಯ ಮಾತುಕಥೆಯಿಂದ ಒಂದಂತೂ ಸ್ಪಷ್ಟವಾಯಿತು - ಸಕ್ರಿಯವಾಗಿ ರಾಜಕಾರಣದಲ್ಲಿ (ದೇಶದ ಮಟ್ಟದಲ್ಲಿ ಅಥವಾ ರಾಜ್ಯ ಮಟ್ಟದಲ್ಲಿ) ಪಾಲುಗೊಳ್ಳಲು ಬೇಕಾದುದು ruthlessness - ವಿದ್ಯಾವಂತರ, ಮುಂದುವರಿದವರ ವೀಕ್‌ನೆಸ್ ಅದೇ ಆಗಬಲ್ಲದು, ಜೊತೆಯಲ್ಲಿ ಜಾತಿ, ದುಡ್ಡು, ಶಿಫಾರಸ್ಸು ಮುಂತಾದವುಗಳ ಬಲ ಇಲ್ಲದಿದ್ದರೆ ಏನೂ ಪ್ರಯೋಜನವಾಗದು ಎಂದೂ ತಿಳಿಯಿತು.

ಭಾರತ/ಕರ್ನಾಟಕದ ಚುನಾವಣೆಯಲ್ಲಿ ಆಸಕ್ತಿ ಇರುವ ನನ್ನ ಸ್ನೇಹಿತರಿಗೆ ನಾನು ಅವರ ಗುರಿಯನ್ನು ನೋಡಿ ಪ್ರಸಂಶಿಸಲೂ ಇಲ್ಲ, ಅವರ ಉತ್ಸಾಹಕ್ಕೆ ತಣ್ಣೀರೆರಚಲೂ ಇಲ್ಲ. ಆದರೆ, ಅವರ ಕನಸಿನ ಪ್ರಕಾರ ನಡೆದಿದ್ದೇ ಆದಲ್ಲಿ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಬೇಕು ಎನ್ನುವುದಂತೂ ಖಚಿತ. ಅವರು ಮುಂದೆ ಏನಾಗುತ್ತಾರೋ ಬಿಡುತ್ತಾರೋ ನಮ್ಮ ಹಾರೈಕೆ ಸದಾ ಅವರ ಜೊತೆ ಇರಲಿ.

***

ಹೌದು, ಕನಸುಗಾರರು ಬೇಕಾಗಿದ್ದಾರೆ! ನಮ್ಮ ಈಗಿನ ಪೀಳಿಗೆ ಹಾಗೂ ಮುಂಬರುವ ಪೀಳಿಗೆಗಳನ್ನು ದಾಸ್ಯದಿಂದ ಬಿಡುಗಡೆ ಮಾಡಲು. ಜಾತಿ ರಾಜಕೀಯದಿಂದ ದೂರವಿದ್ದು ಕರ್ನಾಟಕದ ಸುವರ್ಣ ಪುಟಗಳನ್ನು ಮತ್ತೆ ತೆರೆಯಲು. ಯಾವುದೇ ಅರ್ಹತೆ ಇಲ್ಲದೇ ಕುರ್ಚಿ ಏರುವ ಖದೀಮರನ್ನು ಬದಿಗೊತ್ತಿ ನಮ್ಮೆಲ್ಲರ ಮುಖಂಡರಾಗಿ ಮೆರೆದು ದೇಶದಲ್ಲಿ ಕರ್ನಾಟಕ ತಲೆ ಎತ್ತುವಂತೆ ಮಾಡಲು. ನಮ್ಮ ನಡುವಿನ ಕಚ್ಚಾಟಗಳನ್ನು ದುರುಪಯೋಗಪಡಿಸಿಕೊಂಡು ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುವ ನೆರೆ ಹೊರೆಯವರಿಗೂ ಹಾಗೂ ದೂರದವರಿಗೂ ಬುದ್ಧಿ ಕಲಿಸಲು. ಐವತ್ತು ಮಿಲಿಯನ್‍ಗೂ ಮಿಕ್ಕಿರುವ ಕನ್ನಡಿಗರಿಗೆ ಒಂದು ನೆಲೆ ಕಾಣಿಸಲು. ಹಸಿವು-ಹಾಹಾಕಾರ ಇನ್ನಿಲ್ಲದಂತೆ ಮಾಡಲು. ಲಂಚ ಭ್ರಷ್ಟಾಚಾರ ತಾಂಡವವಾಡದಂತೆ ಮಾಡಲು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಹಳೆಯ ಕಾನೂನನ್ನು ಬದಿಗೊತ್ತಿ ಅದರ ಬದಲಿಗೆ ಹೊಸತೊಂದನ್ನು ಸ್ಥಾಪಿಸುವ ಹರಿಕಾರರು ಬೇಕಾಗಿದ್ದಾರೆ.

ನೂರಾರು ವರ್ಷಗಳಿಂದ ಕನ್ನಡ ನಾಡನ್ನು ಆಳಿಕೊಂಡು ಬಂದ ರಕ್ತಕ್ಕೆ ಇಂದು ನಿರ್ವೀರ್ಯತೆ ಅನಿವಾರ್ಯವೇ? ಅಥವಾ ನಮ್ಮಲ್ಲೂ ಹೊಸ ಹುರುಪಿನ ನಾಯಕರ ಅವಿಷ್ಕಾರವಾಗಲಿದೆಯೇ?

ಕಾದು ನೋಡೋಣ...ಇವತ್ತಲ್ಲ ನಾಳೆ ಕನಸುಗಾರರು ಬರುತ್ತಾರೆ ತಮ್ಮ ನನಸಾದ ಕನಸುಗಳ ಸವಾರಿ ಮಾಡಿಕೊಂಡು.

Wednesday, October 03, 2007

ಸೋಮವಾರದ ಆಚರಣೆಗಳು

’Oh, its a Gandhi holiday in India!' ಅನ್ನೋ ಅಮೇರಿಕದವರಿಗೇನು ಗೊತ್ತು ನಮ್ಮ ಗಾಂಧೀ ಮಹಾತ್ಮನ ಬಗ್ಗೆ? ಮಾರ್ಟಿನ್ ಲೂಥರ್ ಕಿಂಗ್ ಡೇ, ಪ್ರೆಸಿಡೆಂಟ್ಸ್ ಡೇ, ಕೊಲಂಬಸ್ ಡೇ, ಕ್ರಿಸ್‌ಮಸ್ ಎಂದು ಆಚರಿಸೋ ಒಂದೋ ಎರಡೋ ಬರ್ಥ್‌ಡೇಗಳಲ್ಲೂ ಕ್ರಿಸ್‌ಮಸ್ ಒಂದನ್ನು ಬಿಟ್ಟು ಉಳಿದೆಲ್ಲವನ್ನೂ ವೀಕ್‌ಎಂಡ್ ಗೆ ಅಡ್ಜಸ್ಟ್ ಮಾಡ್ಕೊಂಡು ಅದನ್ನು ಶಾಪ್ಪಿಂಗ್ ದಿನಗಳಿಗೆ ಹೋಲಿಸಿಕೊಳ್ಳುವ ಸಂಸ್ಕೃತಿಯವರಿಗೆ ನಾವು ಆಚರಿಸುವ ನೂರಾರು ’ದಿನ’, ’ಜಯಂತಿ’, ’ಮಹೋತ್ಸವ’, ’ಆರಾಧನೆ’ ಮುಂತಾದವುಗಳ ಬೆಲೆ ಹಾಗೂ ಪ್ರತೀಕವಾದರೂ ಏನು ಗೊತ್ತಿರಬಹುದು? ಐದು ಸಾವಿರ ವರ್ಷದ ಸಂಸ್ಕೃತಿಗೂ ಇನ್ನೂರೈವತ್ತು ವರ್ಷಗಳ ಸ್ಮರಣೆಗೂ ಎಲ್ಲಿಂದೆಲ್ಲಿಯ ಸಂಬಂಧ?

ಈ ಮೇಲಿನ ವಾಕ್ಯಗಳು ಅಮೇರಿಕದೆಡೆಗಿನ ದ್ವೇಷವನ್ನು ಹೆಚ್ಚಿಸಲು ಬರೆದ ವಾಕ್ಯಗಳಲ್ಲ, ಬದಲಿಗೆ ಇಂದಿನ ಗ್ಲೋಬಲ್ ವ್ಯಾಪಾರ-ವ್ಯವಹಾರದ ನೆಲೆಗಟ್ಟಿನಲ್ಲಿ ಇಲ್ಲಿ ಕುಳಿತು ಪ್ರಪಂಚದ ಚಲನವಲನಗಳನ್ನು ಯಾರು ಹೇಗೆ ಗಮನಿಸುತ್ತಾರೆ, ಇತರ ರಾಷ್ಟ್ರಗಳ ವಿಧಿ-ವಿಧಾನ, ಆಚಾರ-ವಿಚಾರ ಮುಂತಾದವುಗಳಿಗೆ ಯಾವ ರೀತಿಯ ಗ್ಲೋಬಲ್ ಸ್ವರೂಪವನ್ನು ಕಟ್ಟಲಾಗುತ್ತದೆ ಎಂಬ ಪ್ರಯತ್ನ ಮಾತ್ರ. ಕೇವಲ ಸ್ಟಾಕ್ ಮಾರ್ಕೆಟ್ ವರ್ತುಲದಲ್ಲಿ ಮಾತ್ರವಲ್ಲ, ಬಹುರಾಷ್ಟ್ರೀಯ ಕಂಪನಿಗಳು, ಅಲ್ಲಿನ ಕೆಲಸಗಾರರು ತಮ್ಮನ್ನು ಹೇಗೆ ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತಾರೆ ಎಂಬ ಸ್ಥೂಲ ನೋಟ ಕೂಡ.

ನನ್ನ ತಲೆಮಾರಿನವರು ಹುಟ್ಟಿ ಬೆಳೆದಂದಿನಿಂದ ನಾವು ಶಾಲಾ-ಕಾಲೇಜು-ಕೆಲಸಗಳಲ್ಲೆಲ್ಲ ಸೆಕ್ಯುಲರಿಸಮ್ ಅನ್ನು ಗೊತ್ತಿದ್ದೋ ಗೊತ್ತಿರದೆಯೋ ಹಂಚಿಕೊಂಡೇ ಬಂದಿದ್ದೆವು. ಇದುಲ್ ಫಿತರ್, ರಮ್‌ಜಾನ್, ಗುಡ್‌ಫ್ರೈಡೇ, ಕ್ರಿಸ್ಮಸ್, ಬುದ್ಧ ಪೂರ್ಣಿಮಾ, ಜೈನ ತೀರ್ಥಂಕರರ ದಿನ ಮುಂತಾದ ರಜಾ ದಿನಗಳಿಗೆ ನಾವೆಲ್ಲರೂ ಸಾಕಷ್ಟು ಹೊಂದಿಕೊಂಡಿದ್ದೆವು. ಯಾವ ಯಾವ ಮೈನಾರಿಟಿಗಳು ಅದೆಷ್ಟೇ ಕಡಿಮೆ ಅಥವಾ ಹೆಚ್ಚಿದ್ದರೂ ಭಾರತದ ಸಂವಿಧಾನದ ನೆಲೆಗಟ್ಟಿನಲ್ಲಿ ಎಲ್ಲರಿಗೂ ಒಂದು ಧ್ವನಿಯಿತ್ತು, ಅವರವರಿಗೆ ಅವರದ್ದೇ ಆದ ಒಂದು ವೈಚಾರಿಕತೆ ಇದ್ದುದನ್ನು ನಾವು ಹುಟ್ಟಿದಂದಿನಿಂದ ಗಮನಿಸಿಕೊಂಡೇ ಇದ್ದೆವು. ’ಭಾರತ ವೈವಿಧ್ಯಮಯವಾದ ದೇಶ...’ ಎಂದೇ ನಮ್ಮಲ್ಲಿಯ ಸಮಾಜಶಾಸ್ತ್ರ ಪಾಠಗಳು ಆರಂಭವಾಗುತ್ತಿದ್ದುದು ಇಂದಿಗೂ ನೆನಪಿದೆ. ನಮ್ಮಲ್ಲಿಯ ಪಠ್ಯಪುಸ್ತಕಗಳಲ್ಲಿ ’ಭಾವೈಕ್ಯತೆ ಎಂದರೇನು?’ ಎಂಬ ಪ್ರಶ್ನೆಗಳು ಇರುತ್ತಿದ್ದವು. ಅಮೇರಿಕಕ್ಕೆ ಬಂದ ಹೊಸತರಲ್ಲಿ ಉಳಿದೆಲ್ಲದರ ಜೊತೆಗೆ ನನ್ನ ಗಮನಕ್ಕೆ ಬಂದ ವಸ್ತುಗಳಲ್ಲಿ ಇಲ್ಲಿನ ರಜಾ ದಿನಗಳ ಸ್ವರೂಪವೂ ಒಂದು. ಹೊಸ ವರ್ಷದ ದಿನ, ಸ್ವಾತ್ರಂತ್ರ್ಯ ದಿನ ಹಾಗೂ ಕ್ರಿಸ್‌ಮಸ್ ದಿನಗಳನ್ನು ಬಿಟ್ಟರೆ ಮತ್ತಿನ್ನೆಲ್ಲವೂ ಪ್ಲೋಟಿಂಗ್ ರಜಾದಿನಗಳೇ, ಅಂದರೆ ಅವು ಕ್ಯಾಲೆಂಡರಿನಲ್ಲಿ ಯಾವ ದಿನದಲ್ಲೇ ಬಂದರೂ ಅದನ್ನ ಹತ್ತಿರದ ಸೋಮವಾರಗಳಿಗೆ ಪರಿವರ್ತಿಸಿ ಲಾಂಗ್ ವೀಕ್‌ಎಂಡ್ ಮಾಡುತ್ತಿರುವುದು. ಇದನ್ನು ತಪ್ಪು-ಸರಿ ಎಂದು ನೋಡುವ ಬದಲು, ಅದನ್ನು ಇಲ್ಲಿಯ ಪದ್ಧತಿ, ಆಚರಣೆ, ಸಂಸ್ಕ್ರುತಿಯ ಪ್ರತೀಕವೆಂದು ತಿಳಿದುಕೊಳ್ಳೋಣ. ಈ ರೀತಿಯ ವ್ಯವಸ್ಥೆ ಭಾರತದ ಮೂಲದವರಿಗೆ ಹೊಸತು, ನಮ್ಮಲ್ಲಿನ ಜಯಂತಿ-ದಿನಾಚರಣೆಗಳು ಇವತ್ತಿಗೂ ಕ್ಯಾಲೆಂಡರಿನ ಅದೇ ದಿನ ಆಚರಿಸಿಕೊಳ್ಳಲ್ಪಡುತ್ತವೆ.

ದಿನೇ ದಿನೇ ಗ್ಲೋಬಲ್ ವ್ಯವಸ್ಥೆ ಬೆಳೆದಂತೆಲ್ಲ ಪ್ರಪಂಚ ಕುಗ್ಗಿ ವರ್ಕ್ ಫೋರ್ಸ್ ಪ್ರಪಂಚದ ಮೂಲೆ ಮೂಲೆಗಳಲ್ಲಿ ಗರಿಗೆದರಿಕೊಂಡು ನಿಂತಾಗಲೇ ಕ್ಯಾಪಿಟಲಿಷ್ಟಿಕ್ ವ್ಯವಸ್ಥೆ ಉಳಿದ ಸಂಸ್ಕೃತಿ-ಆಚಾರ-ವಿಚಾರಗಳ ಮೇಲೆ ಕಣ್ಣು ತೆರೆದಿದ್ದು ಎಂದು ತೋರುತ್ತದೆ. ಒಂದಿಷ್ಟು ಜನರಿಗೆ ಅವರ ಹಿತ್ತಲಿನಲ್ಲಿ ಬೆಳೆದ ಆಲದ ಮರವೇ ದೊಡ್ಡದು, ಅದೇ ದೇವರು. ಇನ್ನೊಂದಿಷ್ಟು ಜನರಿಗೆ ವಸ್ತುಗಳು, ತಮ್ಮ ನೆರೆಹೊರೆ ಇವೆಲ್ಲವೂ ಕಮಾಡಿಟಿಗಳು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಂಡು ಬಿಸಾಡಬಹುದಾದವುಗಳು. ಭಾರತದಂತಹ ರಾಷ್ಟ್ರಗಳಲ್ಲಿ ಸಾದು-ಸಂತರು, ದೇವರು-ದಿಂಡರುಗಳು, ಪ್ರತಿಮೆಗಳು, ಉಲ್ಲೇಖಗಳು, ಜಾತಿ-ಮತ-ಧರ್ಮ, ದೇವರ ರೂಪದ ಅನೇಕ ಪ್ರಾಣಿ-ಪಕ್ಷಿಗಳು ಇವೆಲ್ಲವೂ ಹೆಚ್ಚೇ, ಜನರೂ ಹೆಚ್ಚು, ಭಾಷೆ-ಸಂಸ್ಕೃತಿಗಳೂ ಹೆಚ್ಚು. ಅದೇ ಯುರೋಪ್, ಏಷ್ಯಾ, ಅಮೇರಿಕಾ ಖಂಡಗಳ ಮುಂದುವರಿದ ದೇಶಗಳಲ್ಲಿ ಇವೆಲ್ಲದರ ವೈರುಧ್ಯ. ಹಿಂದೆ ನಮ್ಮನ್ನೆಲ್ಲ ಆಳುತ್ತಿದ್ದ ಬ್ರಿಟೀಷರು ಇವೆಲ್ಲವನ್ನೂ ಗಮನಿಸಿ ಇಂತಹ ವ್ಯತ್ಯಾಸಗಳಿಗೆ ಸ್ಪಂದಿಸುತ್ತಿದ್ದರೋ ಇಲ್ಲವೋ ಆದರೆ ಇಂದಿನ ವ್ಯವಸ್ಥೆಯಲ್ಲಿ ಇಂಥ ವ್ಯತ್ಯಾಸಗಳು ಗಮನೀಯವಾಗಿವೆ. ಗಾಂಧೀ ಮಹಾತ್ಮನ ಹೆಸರಿರಲಿ, ಭಾರತವೆಂದರೆ ಎಲ್ಲಿ ಎಂದು ಕೇಳುತ್ತಿದ್ದ ಜನರಿಗೆ ಭಾರತದ ತುದಿ ಬುಡಗಳು ಭಾರತದವರಿಗಿಂತ ಚೆನ್ನಾಗಿ ಗೊತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅತಿಶಯೋಕ್ತಿಯಾದರೂ ಅದರ ಹಿಂದಿನ ಧ್ವನಿ ನಿಮಗೆ ಸ್ಪಷ್ಟವಾಗಬಹುದು.

ಹಿಂದೊಮ್ಮೆ ವರ್ಷ ಪೂರ್ತಿ ಬಿಸಿಲಿನಲ್ಲಿ ಬೇಯುವ ಸಮಭಾಜಕ ವೃತ್ತದವರೂ ಸೂಟ್-ಬೂಟ್ ಸಂಸ್ಕೃತಿಗೆ ಹೊಂದಿಕೊಂಡಿರುವುದರ ಬಗ್ಗೆ ಬರೆದಿದ್ದೆ, ಇಂದಿನ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ತಮ್ಮ ಪ್ರಾಸೆಸ್ ಫಾರ್ಮಾಲಿಟಿಯನ್ನು ತರುವುದರ ಜೊತೆಗೆ ತಮ್ಮ ಸಂಸ್ಕೃತಿಯನ್ನೂ ಧಾರಾಳವಾಗಿ ಕೊಡುಗೆಯನ್ನಾಗಿ ನೀಡಿವೆ. ಬರೀ ಕೊಕಾಕೋಲದ ಅಡ್ವರ್‌ಟೈಸ್‌ಮೆಂಟ್ ನೋಡಿಯೇ ಎನರ್‌ಜೈಸ್ಡ್ ಆಗೋ ಸ್ಥಳೀಯ ಜನಗಳ ಮೇಲೆ ಈ ಬಹುರಾಷ್ಟ್ರೀಯ ಕಂಪನಿಗಳು ಧಾರಾಳವಾಗಿ ಹಂಚುವ ’ವ್ಯವಸ್ಥೆ’ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳನ್ನೂ ಮಾಡಿದೆ. ನಮ್ಮಲ್ಲಿನ ಯುವ ಜನ ರಾತ್ರಿ ಪಾಳಿಯ ಮೇಲೆ ಕೆಲಸ ಮಾಡಿ ಯಾವುದೋ ಕಣ್ಣು ಕಾಣದ ದೇಶದ ರೈಲು ವೇಳಾಪಟ್ಟಿಯನ್ನೋ, ಕ್ರೆಡಿಟ್‌ಕಾರ್ಡ್‌ಗೆ ಸಂಬಂಧಿಸಿದ ವ್ಯವಸ್ಥೆಯನ್ನು ಕಂಠಪಾಠ ಮಾಡಿ ಕಲಿಯುವಂತಾಯ್ತು. ಉದ್ಯೋಗ ಹೆಚ್ಚಿತು, ಉತ್ಪನ್ನ ಹೆಚ್ಚಿತು. ಗಾಂಧೀ ಜಯಂತಿಯಂತಹ ದಿನಗಳು ದೂರವಾದವು. ಭಾರತದಲ್ಲಿ ಕೆಲವರು ಆಚರಿಸುವ ದೀಪಾವಳಿಗಳು ಅನಿವಾಸಿಗಳ ದೀಪಾವಳಿಯ ಆಚರಣೆಯ ಹಾದಿ ಹಿಡಿಯಿತು. ಜಾತ್ರೆ, ಮಹೋತ್ಸವ, ಆರಾಧನೆಗಳು ಅರ್ಥ ಕಳೆದುಕೊಂಡವು. ’ಓಹ್, ಭಾರತದಲ್ಲಿ ವಿಪರೀತ ರಜೆಗಳಪ್ಪಾ...’ ಎಂದು ಯುವಕರು ಮೂಗು ಮುರಿಯುವಂತಾದರು.

ಕಡಿಮೆ ಜನರು ಅನುಸರಿಸುವ ಸಂಸ್ಕ್ರುತಿಯೇ ಹೆಚ್ಚು ಜನರಿಗೆ ಸೂಕ್ತವೇ ಎಂಬ ಪ್ರಶ್ನೆಯನ್ನು ನಾನು ಕೇಳಿಕೊಳ್ಳುತ್ತಲೇ ಬಂದಿದ್ದೇನೆ. ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳ ಸಾಮಾಜಿಕ ಪದ್ಧತಿ, ನಡೆ-ನುಡಿಗಳು ಹೆಚ್ಚಿನವೇ ಅಲ್ಲವೇ ಎಂದು ತುಲನೆ ಮಾಡುವುದೂ ಸರಿಯಾದುದೇ ಎಂದು ಕೇಳಿಕೊಳ್ಳಬೇಕಾಗಿದೆ. ಅಮೇರಿಕದ ಒಳಗಡೆ ತುಂಬ ದೂರ ಹೋಗುವುದೇ ಬೇಡ - ಬಾಲ್ಟಿಮೋರ್ ನಗರದ ಒಂದಿಷ್ಟು ಭಾಗ, ನ್ಯೂ ಯಾರ್ಕ್ ನಗರದ ಒಂದಿಷ್ಟು ಭಾಗ, ದೇಶದ ರಾಜಧಾನಿಯ ಒಂದಿಷ್ಟು ಭಾಗವನ್ನು ತೆಗೆದುಕೊಂಡು ನೋಡಿದರೆ ಮುಂದುವರೆದ ಅಮೇರಿಕ ಹೊಟ್ಟೆಯೊಳಗಿನ ಪಂಖವೂ ಕಣ್ಣಿಗೆ ರಾಚೀತು, ವೈಭವದ ಫೈವ್ ಸ್ಟಾರ್ ಹೊಟೇಲಿನ ಯಾವುದೇ ಪ್ರಾಸೆಸ್ಸುಗಳಿಗೂ ಮೀರಿದ ಹಿಂಬಾಗಿಲಿನ ನೆರೆಹೊರೆಯ ಹಾಗೆ.

ಭಾರತದ ಸ್ವಾತಂತ್ರ್ಯೋತ್ತರ ಈ ಅರವತ್ತು ವರ್ಷಗಳಲ್ಲಿ ಚಲಾವಣೆಗೆ ಬಂದ ಬರುತ್ತಿರುವ ಪಂಚವಾರ್ಷಿಕ ಯೋಜನೆಗಳ ಸವಾಲುಗಳ ಮೂಲದಲ್ಲಿ ಬಹಳಷ್ಟೇನು ವ್ಯತ್ಯಾಸವಾದಂತಿಲ್ಲ. ಅದೇ ಕುಡಿಯುವ ನೀರು, ಅದೇ ಯೋಜನೆ; ಅದೇ ಬಡತನ, ಮತ್ತದೇ ಸಮೀಕರಣ; ಅದೇ ಉದ್ಯೋಗ ನಿವಾರಣೆ, ಅದೇ ಆದೇಶ; ಅದೇ ನೀರಾವರಿ ಯೋಜನೆ, ಮತ್ತದೇ ಫಲಿತಾಂಶ. ನಾವು ಬುದ್ಧ, ಗಾಂಧಿ, ರಾಮ, ಕೃಷ್ಣ, ಜೈನ, ಏಸು ಎಂದುಕೊಂಡು ಹಿತ್ತಲಿನ ಆಲದ ಮರಕ್ಕೆ ನಾಗರಪಂಚಮಿ ಹಬ್ಬದಂದು ಜೋಕಾಲಿ ಕಟ್ಟಿ ಜೀಕುವುದೋ ಅಥವಾ ನಮ್ಮೆಲ್ಲ ಜಯಂತಿ-ದಿನಾಚರಣೆ-ಮಹೋತ್ಸವ ಮುಂತಾದವುಗಳನ್ನು ಹತ್ತಿರದ ಸೋಮವಾರಕ್ಕೆ ಹೊಂದಿಸಿಕೊಂಡು ಲಾಂಗ್ ವೀಕ್‌ಎಂಡ್ ಮಾಡಿಕೊಂಡು ಹಬ್ಬ ಹರಿದಿನಗಳಂದು ತಡವಾಗಿ ಎದ್ದು ಹಲ್ಲುಜ್ಜುವುದಕ್ಕಿಂತ ಮೊದಲು ತಿಂಡಿ ತಿನ್ನುವುದೋ? ಹಬ್ಬ, ಸಾಮಾಜಿಕ, ಧಾರ್ಮಿಕ ಆಚರಣೆಗಳಂದು ನಾವು ಕಷ್ಟ ಪಟ್ಟು ನಮ್ಮಲ್ಲಿರುವವುಗಳನ್ನು ಹಂಚಿಕೊಂಡು ದೈಹಿಕವಾಗಿ ಕಷ್ಟಪಟ್ಟು ಸುಖವಾಗಿರುವುದಕ್ಕೆ ಪ್ರಯತ್ನಿಸುವುದೋ, ಅಥವಾ ನಾವು ಗಳಿಸಿದ ರಜಾ ದಿನಗಳನ್ನು ತಕ್ಕ ಮಟ್ಟಿಗೆ ಅನುಭವಿಸಿ ನಮ್ಮ ಐಷಾರಾಮಗಳಲ್ಲಿ ರಿಲ್ಯಾಕ್ಸ್ ಮಾಡುವುದೋ? ಗಾಂಧೀ ಜಯಂತಿಯೇನೋ ಅಕ್ಟೋಬರ್ ಎರಡಕ್ಕೇ ಬರುತ್ತದೆ ವರ್ಷಾ ವರ್ಷಾ, ಆದರೆ ಬೇಕಾದಷ್ಟು ಉಳಿದ ಜಯಂತಿ-ಮಹೋತ್ಸವಗಳು ಹಿಂದೂ ಕ್ಯಾಲೆಂಡರಿಗೆ ಅನುಗುಣವಾಗಿ ಬರುತ್ತವಾದ್ದರಿಂದ ಅವುಗಳನ್ನೆಲ್ಲ ಕೂಡಿಸಿ ಭಾಗಿಸಿ ಗುಣಿಸಿ ಕಳೆದು ಹತ್ತಿರದ ಸೋಮವಾರಕ್ಕೆ ಹೊಂದಿಸುವ ಕೈಂಕರ್ಯ ನನಗಂತೂ ಬೇಡ.

Tuesday, October 02, 2007

ಪಟ್ ಪಟ್ಟೀ ಕಥೆ

ಪ್ರತೀ ಸಲ ರಸ್ತೇ ಮೇಲೆ ಮೋಟಾರ್ ಸೈಕಲ್ ಸವಾರರನ್ನು ನೋಡಿದಾಗಲೆಲ್ಲ, ’ಛೇ, ನನ್ನ ಬಳಿಯೂ ಒಂದು ಮೋಟಾರ್ ಸೈಕಲ್ ಇರಬೇಕಿತ್ತು!’ ಎಂದು ಅನ್ನಿಸೋದು ಇವತ್ತಿಗೂ ನಿಜ. ಅದರಲ್ಲೂ ಎರಡು ಚಕ್ರದ ಬೈಸಿಕಲ್‌ನಿಂದ ನಾಲ್ಕು ಚಕ್ರದ ಕಾರಿಗೆ ನೇರವಾಗಿ ಬಡ್ತಿ ಪಡೆದ ನನ್ನಂತಹವರಿಗಂತೂ ಇವತ್ತಿಗೂ ಮೋಟಾರ್ ಸೈಕಲ್ ಇನ್ನೂ ನಿಗೂಢವಾಗಿಯೇ ಉಳಿದಿದೆ ಎಂದರೆ ತಪ್ಪಾಗಲಾರದು. ನಾವು ಸಣ್ಣವರಿದ್ದಾಗ ’ಪಟ್‌ಪಟ್ಟಿ’ ಎಂದು ಕರೆಯುತ್ತಿದ್ದ ಕುತೂಹಲ ತರಿಸುತ್ತಿದ್ದ ವಾಹನ ಇವತ್ತಿಗೂ ನನ್ನ ಮಟ್ಟಿಗೆ ಅದೇ ಕುತೂಹಲವನ್ನು ಉಳಿಸಿಕೊಂಡಿದೆ.

ಮೋಟಾರ್ ಸೈಕಲ್ ಹೊಡೆಯೋದನ್ನು ಯಾರು ಎಷ್ಟೇ ಡೇಂಜರ್ ಎಂದು ಹೇಳಿದರೂ ಅದರಲ್ಲಿರೋ ಸ್ವಾರಸ್ಯವೇ ಬೇರೆ. Robert M. Pirsig ನ ’Zen and the Art of Motorcycle Maintenance’ ಪುಸ್ತಕದ ಮೊದಲಿನಲ್ಲಿ ಹೇಳಿರೋ ಹಾಗೆ (ನೆನಪು) ಮೋಟಾರ್ ಸೈಕಲ್ ಸವಾರರ ಹಾಗೂ ರಸ್ತೆಯ ನಡುವಿನ ಅನ್ಯೋನ್ಯತೆ ಹಾಗೂ ಆ ಸಂಬಂಧಗಳು ಅತಿ ಮಧುರವಾದದ್ದು. ಕಾರಿನಲ್ಲಿ ಕುಳಿತು ಹೋಗುವವರಿಗೆ ಆ ರೀತಿಯ ಸಂಬಂಧದ ಅರಿವು ಸಾಧ್ಯವೇ ಇಲ್ಲ. ನಮ್ಮಲ್ಲಿ ಹಿಂದೆ ದೊರೆಯುತ್ತಿದ್ದ ಸುವೇಗ, ಲೂನಾ ಮೊಪೆಡ್ಡುಗಳು ಇಂದಿನ ಹೀರೋ ಪುಕ್ಕ್ ಗಳ ರೂಪದಲ್ಲಿ ಅದೇನೇನೇ ವಿನ್ಯಾಸಗೊಂಡಿದ್ದರೂ, ೩೫ ಸಿಸಿ ಇಂಜಿನ್ ಇಂದ ಹಿಡಿದು ೮೦೦ ಸಿಸಿ ಇಂಜಿನ್‌ವರೆಗೆ ಬೆಳೆದಿದ್ದರೂ ಮೋಟಾರ್ ಸೈಕಲ್ ಅಥವಾ ಮೊಪೆಡ್ಡುಗಳು ಬಹಳ ವಿಶೇಷವಾದವುಗಳೇ.

ನಾಲ್ಕೈದು ವರ್ಷಗಳ ಹಿಂದೆ ನನ್ನ ಅಣ್ಣನ ಯಮಾಹ ಬೈಕ್ (೧೦೦ ಸಿಸಿ) ತೆಗೆದುಕೊಂಡು ನಮ್ಮೂರಿನ ಬಯಲಿನಲ್ಲಿ ಒಂದು ಘಂಟೆ ಪ್ರಾಕ್ಟೀಸ್ ಮಾಡಿದ್ದನ್ನು ಬಿಟ್ಟರೆ ನಾನಿದುವರೆಗೂ ಯಾವುದೇ ಮೋಟಾರ್ ಬೈಕ್ ಅನ್ನು ಇಂಡಿಪೆಂಡೆಂಟ್ ಆಗಿ ಸವಾರಿ ಮಾಡಿದ್ದುದೇ ಇಲ್ಲ. ಭಾರತದಲ್ಲಿ ಬೈಕ್ ಇಲ್ಲದಿದ್ದರೆ ಅದು ಒಂದು ರೀತಿ ಹ್ಯಾಂಡಿಕ್ಯಾಪ್ ಪರಿಸ್ಥಿತಿ ತಂದುಬಿಡುತ್ತೇನೋ ಅನ್ನೋ ಹೆದರಿಕೆ ಹುಟ್ಟುತ್ತಿದ್ದ ಹಾಗೇ ದೇಶ ಬಿಟ್ಟು ಬಂದು ಏಕ್ ದಂ ಕಾರಿಗೆ ಬಡ್ತಿ ಪಡೆಯುವಂತಾದ್ದರಿಂದ ಇವತ್ತಿಗೂ ಮೋಟಾರ್ ಸೈಕಲ್ ಅನ್ನು ನಾನು ಮಿಸ್ ಮಾಡಿಕೊಳ್ಳುತ್ತಿರುವುದು. ನಾನು ಎಷ್ಟೇ ಬೆಳೆದರೂ ಒಂದು ೩೫೦ ಸಿಸಿ ಎನ್‌ಫೀಲ್ಡ್ ಬೈಕ್ ಅನ್ನು ಸ್ಟ್ಯಾಂಡ್ ತೆಗೆದು ಮತ್ತೆ ನಿಲ್ಲಿಸುವ ಶಕ್ತಿಯನ್ನಾಗಲೀ, ಯುಕ್ತಿಯನ್ನಾಗಲೀ ಪಡೆದುಕೊಳ್ಳಲೇ ಇಲ್ಲ. ಅದಕ್ಕೋಸ್ಕರವೇ ಇವತ್ತಿಗೂ ನಮ್ಮೂರಿನ ಗ್ಯಾರೇಜಿನಲ್ಲಿ ಕೆಲಸ ಮಾಡುವ ಇನ್ನೂ ಮೀಸೆ ಚಿಗುರದ ಹುಡುಗರು "ಬುಲೆಟ್" ಬೈಕ್ ಅನ್ನು ಲೀಲಾಜಾಲವಾಗಿ ಓಡಿಸಿ, ನಿಲ್ಲಿಸುವಾಗ ನಾನು ಹೊಟ್ಟೇ ಉರಿಸಿಕೊಳ್ಳುವುದು. ಅಲ್ಲಿನ ಜನ ನಿಭಿಡ ಗಲ್ಲಿಗಳಲ್ಲಿ ಮೋಟಾರ್ ಬೈಕ್ ಮುಂದೆ ಮತ್ತೊಂದು ವಾಹನವೇ ಇಲ್ಲ ಎನ್ನುವುದನ್ನಾಗಲೀ, ಬುಲೆಟ್ ಬೈಕ್ ಮುಂದೆ ಮಾರುತಿ ಕಾರು ಕೂಡಾ ಸಪ್ಪೆಯೇ ಎಂದು ಹೇಳುವುದನ್ನಾಗಲೀ ನೀವೂ ಕೇಳಿರಬಹುದು.

ಮೋಟಾರ್ ಬೈಕ್ ಅವಿಷ್ಕಾರ ಮಾನವನ ಮಹಾಸಾಧನೆಗಳಲ್ಲೊಂದು. ನಮ್ಮೂರಿನಲ್ಲಿ ಹಿಂದೆ ಮಾಮೂಲಿ ಸೈಕಲ್ (ಬೈಸಿಕಲ್)ಗಳಿಗೂ ಒಂದು ಯಂತ್ರವನ್ನು ಜೋಡಿಸಿ ಅದರ ಮೂಲಕ ಪೆಡಲ್ ಮಾಡುವುದನ್ನು ತಪ್ಪಿಸಿದ್ದನ್ನು ನಾನು ನೋಡಿದ್ದೇನೆ. ಮುಂದೆ ಅವೇ ಲೂನಾ, ಸುವೇಗ ಮೊಪೆಡ್ಡುಗಳಾಗಿ ಜೀವ ತಳೆದಿದ್ದು. ಅಂತಹ ಮೊಪೆಡ್ಡುಗಳಿಗೆ ಗಿಯರ್ ಅಳವಡಿಸಿ ಅವುಗಳನ್ನು ಸ್ಕೂಟರ್, ಮೋಟಾರ್‍ ಬೈಕ್ ಮಾಡಿದ್ದಿರಬಹುದು. ಇವುಗಳಲ್ಲಿ ದೇಸೀ ತಂತ್ರಜ್ಞಾನವೆಷ್ಟಿದೆಯೋ ಇಲ್ಲವೋ ಗೊತ್ತಿಲ್ಲ, ಆದರೂ ಆಗಿನ್ನೂ ಹೊಂಡಾ, ಯಮಾಹ, ಕವಾಸಾಕಿ ಅಂತಹ ಹೆಸರುಗಳೇನಿದ್ದರೂ ಪತ್ರಿಕೆಗಳಲ್ಲಿ ಓದಲಿಕ್ಕೆ ಸಿಗುತ್ತಿದ್ದವೇ ವಿನಾ ನಿಜ ಜೀವನದಲ್ಲಿ ನೋಡಲು ಸಿಗುತ್ತಿರಲಿಲ್ಲ. ಎಂಭತ್ತರ ದಶಕದ ಮೊದಲಲ್ಲಿ ಇರಬೇಕು (ಸರಿಯಾಗಿ ಗೊತ್ತಿಲ್ಲ), ಒಂದೊಂದು ಎಕರೆ ಅಡಿಕೆ ತೋಟವಿದ್ದವರೂ ಒಳ್ಳೇ ಸೀಜನ್ ನಲ್ಲಿ ಮನೇ ಮುಂದೆ ಒಂದು ಬೈಕ್ ನಿಲ್ಲಿಸುವಂತಾದದ್ದು. ಅವುಗಳ ಜೊತೆ ಎಂಟು ಒಂಭತ್ತು ರೂಪಾಯ್ ಗೆ ಒಂದು ಲೀಟರ್ ಪೆಟ್ರೋಲ್ ಹಾಕಿಸಿ ನಲವತ್ತು ಐವತ್ತು ಕಿಲೋ ಮೀಟರ್ ಓಡಿಸುತ್ತಿದ್ದ ಜನರು ಪ್ರಪಂಚ ಬದಲಾಗುತ್ತಿದ್ದ ಹಾಗೆ ಇವತ್ತು ಐವತ್ತು ಅರವತ್ತು ರೂಪಾಯ್ ಗೆ ಒಂದು ಲೀಟರ್ ಪೆಟ್ರೋಲ್ ಆದರೂ ಇನ್ನೂ ತಮ್ಮ ಹಳೆಯ ಬೈಕ್‌ಗಳನ್ನು ಕೈ ಬಿಡದಿದ್ದುದು. ಯಜ್ಡಿ, ಜಾವಾ, ಎನ್‌ಫೀಲ್ಡ್ ಇವುಗಳು ನಾನು ನೋಡಿ ಬೆಳೆದ ಬೈಕುಗಳು, ಅವುಗಳ ಸವಾರರು ಯಾವಾಗಲೂ ಆ ಬೈಕುಗಳಷ್ಟೇ ನಿಗೂಢರಾದರೂ ಅವರು ಮನೆಗೆ ಬಂದು ಹೊರ ಹೋಗುವಾಗೆಲ್ಲಾ ’ಪಟ್ ಪಟ್’ ಸದ್ದು ಮಾಡುವುದನ್ನು ಕಂಡು ನಾವು ’ಪಟ್ಟ್ ಪಟ್ಟಿ’ಯನ್ನು ತೆರೆದ ಕಣ್ಣುಗಳಿಂದ ನೋಡಿದ್ದೂ ಅಲ್ಲದೇ ಅವುಗಳ ಸದ್ದಿಗೆ ಬೆಚ್ಚಿ ಬಿದ್ದದ್ದೂ ಇದೆ. ಯಜ್ಡಿ, ಜಾವಾಗಳು ಅವುಗಳದ್ದೇ ಆದ ಒಂದು ಕರ್ಕಷ ಶಬ್ದವನ್ನೇ ತಮ್ಮ ಗುಣವನ್ನಾಗಿ ಮಾಡಿಕೊಂಡಿದ್ದರೆ, ಎನ್‌ಫೀಲ್ಡ್‌ಗೆ ಒಂದು ರಾಜ ಗಾಂಭೀರ್ಯ ಇದೆ - ನಮ್ಮೂರಿನ ಪಡ್ಡೇ ಹುಡುಗರು ನಮ್ಮಣ್ಣನ ಬೈಕ್ ಸದ್ದನ್ನು ದೂರದಿಂದಲೇ ಕೇಳಿ ಯಾರೋ ಇನ್‌ಸ್ಪೆಕ್ಟರ್ ಬಂದರೆಂದು ಜೂಜಾಡುವುದನ್ನು ಬಿಟ್ಟು ಓಡಿ ಹೋಗುವಷ್ಟರ ಮಟ್ಟಿಗೆ!

’ನಿನಗ್ಯಾಕೋ ಬೈಕ್ ಸವಾಸ, ಕಾಲು ಮುರುಕಂತಿ ನೋಡು!’ ಎಂದು ಹೆದರಿಸುತ್ತಿದ್ದ ಹೇಳಿಕೆಗಳು ಅಂದಿನಿಂದ ಇಂದಿನವರೆಗೆ ನನ್ನ ಮತ್ತು ಮೋಟಾರ್ ಬೈಕ್‌ಗಳ ಬಾಂಧವ್ಯದ ನಡುವೆ ಎಂದಿಗೂ ಮುರಿಯಲಾರದಂತ ಅಡ್ಡ ಗೋಡೆಯನ್ನು ಕಟ್ಟುವಲ್ಲಿ ಸಫಲವಾಗಿವೆ. ಇಲ್ಲಿನ ವರ್ಷದ ಆರು ತಿಂಗಳ ಛಳಿಯಾಗಲೀ, ಮತ್ತೊಂದಾಗಲೀ ಬರೀ ನೆಪವನ್ನು ಕೊಡಬಲ್ಲವೇ ವಿನಾ ನಾನೆಂದೂ ಸ್ವಂತ ಬೈಕ್ ಒಂದನ್ನು ಇಟ್ಟುಕೊಂಡು ಲೀಲಾಜಾಲವಾಗಿ ರಸ್ತೆಗಳಲ್ಲಿ ಓಡಿಸಿ ರಸ್ತೆಗೂ ನನಗೂ ಮತ್ತೊಂದಿಷ್ಟು ಆತ್ಮೀಯತೆಯನ್ನು ಬೆಳಸಿಕೊಳ್ಳುವ ಸಮಯ ಬರುತ್ತೋ ಇಲ್ಲವೋ ಯಾರಿಗೆ ಗೊತ್ತು?