ಛಳಿಯ ಬೆನ್ನೇರಿ ಬಂತು...
’ಹ್ಞೂ, ಈ ಛಳಿ ಬೀಳೋಕಿಂತ ಮೊದಲು ಹಂಗ್ ಮಾಡ್ತೀನೀ ಹಿಂಗ್ ಮಾಡ್ತೀನಿ ಅಂತ ಕುಣೀತಿದ್ದೆ, ಈಗ ಅನುಭವಿಸು!’ ಎಂದು ಯಾರೋ ಶಾಪ ಹಾಕಿದಂತಾಗಿ ದಿಗ್ಗನೆದ್ದು ಕುಳಿತೆ, ಎತ್ತಣ ದಿಕ್ಕಿನಿಂದ ನೋಡಿದ್ರೂ ಛಳಿಗಾಲ ವೇಗದಲ್ಲಿ ಬರೋ ಹಾಗೆ ಕಾಣಿಸ್ತು, ಅದರ ವೇಗದ ಭರಾಟೆ ಮುಂದೆ ಇನ್ನೇನು ಸಾಯೋ ಸೂರ್ಯನ ಕಿರಣಗಳೂ ತಮ್ಮ ಆಸೆಯನ್ನು ಕಳೆದುಕೊಂಡಂತೆ ಕಾಣಿಸಿದವು. ಅವುಗಳ ಮೇಲ್ಮೈಯಲ್ಲಿನ ನಿರಾಶೆಯನ್ನು ನೋಡಿ ನಾಳೆ ಬರ್ತಾವೋ ಎನ್ನುವ ಸಂಶಯ ಮೂಡಿದರೂ ಇರೋ ಅಷ್ಟು ಹೊತ್ತು ಸೂರ್ಯನ ಕಿರಣಗಳ ಬಿಸಿಯನ್ನು ನಮಗೂ ತಾಗಿಸಿಕೊಳ್ಳೋಣ ಎಂದು ಕಲಾಯ್ಡು ಧೂಳಿನ ಕಣಗಳು ಸೂರ್ಯನ ಕಿರಣದ ಬಿಂಬದ ವ್ಯಾಪ್ತಿಯಲ್ಲಿ ಒಂದು ರೀತಿಯ ನರ್ತನವನ್ನು ನಡೆಸಿದಂತೆ ತೋರಿದವು. ಇನ್ನೇನು ಇವತ್ತಿನ ಸೂರ್ಯನ ಕಿರಣಗಳ ಕಥೆ ಮುಗಿಯಿತು ಎಂದು ಗೊತ್ತಾದ ಸುಳಿವು ಕಂಡೊಡನೆ ಭರದಿಂದ ಬೀಸಿದ ಗಾಳಿಯ ಗತ್ತನ್ನು ನೋಡಿ ಮನೆಯ ಒಳಗಿನ ಗಾಜಿನ ಮುಸುಡಿಗೆ ತಾಗಿಕೊಂಡ ಬ್ಲೈಂಡಿನ ಲೇಯರುಗಳಿಗೂ ಬೆನ್ನ ಹುರಿಯಲ್ಲಿ ಛಳಿ ಹುಟ್ಟಿಕೊಂಡಿದ್ದು ಸ್ಪಷ್ಟವಾಗತೊಡಗಿತ್ತು.
’ನ್ಯೂ ಯಾರ್ಕ್ ಸಿಟಿ ಭಿಕ್ಷುಕರಿಗೆಲ್ಲಾ ಪ್ಲೋರಿಡಾಕ್ ಹೋಗ್ರಿ ಅಂತ ತಾಕೀತು ಮಾಡ್ತಿದ್ದೆ!’ ಎಂದು ಮತ್ತೊಂದು ಧ್ವನಿ ಕೇಳಿಸಿ ಇನ್ನಷ್ಟು ಜಾಗರೂಕನಾದೆ, ಈಗಂತೂ ನಾನಿದ್ದ ರೂಮಿನಲ್ಲಿ ಬೆಳಕು ಕಡಿಮೆಯಾದ್ದರಿಂದ ನನ್ನ ಕಣ್ಣುಗಳು ಡ್ರಾವಿಡ್ ಈಗ ಸಿಕ್ಸ್ ಹೊಡೀತಾನೆ ಆಗ ಸಿಕ್ಸ್ ಹೊಡೀತಾನೆ ಎಂದು ಕಾದುಕೊಂಡ ಪ್ರೇಕ್ಷಕನ ಕಣ್ಣಾಲಿಗಲ ಹಾಗೆ ಮತ್ತಿನ್ನಷ್ಟು ಅಗಲಗೊಂಡವು. ಎಲ್ಲರೂ ಛಳಿ ರಾಜ್ಯಗಳನ್ನು ತೊರೆದು ಪ್ಲೋರೀಡಾಕ್ಕೆ ಹೋದ್ರೆ ಹೇಗೆ ಎಂದು ಬಂದ ಹುಂಬ ಯೋಚನೆ ತುಟಿಗಳನ್ನು ಬಿರಿಯುವಂತೆ ನಗೆಯೊಂದನ್ನು ಉಕ್ಕಿಸಿತಾದರೂ ಆ ನಗೆ ಹೆಚ್ಚು ಕಾಲ ಮುಖದಲ್ಲೇನೂ ಉಳಿಯಲಿಲ್ಲ. ಇರೋ ಮುನ್ನೂರೂ ಚಿಲ್ರೆ ಮಿಲಿಯನ್ನ್ ಜನರು ಕೇವಲ ದಕ್ಷಿಣ ರಾಜ್ಯಗಳಿಗೆ ಹೋಗಿ ಅಲ್ಲಿ ಹೆಚ್ಚು ಜನ ಸಾಂದ್ರತೆ ಇರೋ ಬದ್ಕು ಬದುಕಿ ಈ ಛಳಿ ಬಡುಕ ಉತ್ತರದ ರಾಜ್ಯಗಳನ್ನೆಲ್ಲ ಖಾಲಿ ಬಿಡಬೇಕು ಅದೇ ಈ ಆಸಾಧ್ಯ ಛಳಿಗೆ ಮನುಕುಲದ ಉತ್ತರ ಎನ್ನುವ ವಾದವೂ ಮಿಂಚಿ ಮರೆಯಾಯಿತು. ಈಗ ಛಳಿಗೆ ನಾನೇ ಬೈಯಬೇಕು ಎಂದೆನಿಸಿದಾಕ್ಷಣ, ಯಾರು ಬರೋದಕ್ಕೆ ಹೇಳಿದ್ರು ಇಷ್ಟು ಬೇಗ ಇದಕ್ಕೆ, ಈ ವರ್ಷ ಮೇ ತಿಂಗಳು ಬಂದ್ರೂ ಇನ್ನೂ ಹೋಗಿದ್ದಿಲ್ಲ ಅಂಥಾದ್ದರಲ್ಲಿ ಸೆಪ್ಟೆಂಬರ್ ಬಂದ ಕೂಡ್ಲೆ ಬಾ ಎಂದೋರು ಯಾರು ಎಂದು ಕೇಳೋಣವೆನ್ನಿಸಿತು.
’ಈ ದೇಶ್ದಲ್ಲಿ ಗ್ಲೋಬಲ್ ವಾರ್ಮಿಂಗ್ ಬಗ್ಗೇ ಯಾರು ಏನೇ ಬಾಯ್ ಬಡ್ಕೊಂಡ್ರೂ ಅವರವರ ಮನೆ ಫೈಯರ್ ಪ್ಲೇಸ್‌ಗಳಿಗೆ ಕಟ್ಟಿಗೆ ತುಂಬೋದೇನೋ ಕಡಿಮೆ ಮಾಡೋಲ್ಲ!’ ಎನ್ನೋ ಜ್ಞಾನೋದಯಕ್ಕೆ ಸರಿಯಾದ ಹೊತ್ತಾದಂತೆ ಕಾಣಿಸಿ ದಿಗ್ಗನೆ ಮನದಲ್ಲಿ ಮೂಡಿತು. ಹೆಚ್ಚು ಜನ ಒಬೀಸ್ ಇರೋರ ಮಧ್ಯೆ ಯಾವನೋ ಬಂದು ಉಪವಾಸ ಸತ್ಯಾಗ್ರಹದ ಕಥೆಯನ್ನು ಒದರಿದ್ದನಂತೆ ಹಂಗಾಯ್ತು. ಇನ್ನೇನ್ ಕೊರಿಯೋ ಛಳಿ ಬೀಳೋ ಸಮಯ, ಮನೆ ಮಂದೀ ಎಲ್ಲಾ ಮುರುಟಿ ಹೋಗೋ ಹೊತ್ನಲ್ಲಿ ಎನರ್ಜಿ ಕನ್ಸರ್‌ವೇಷನ್ನ್ ಬಗ್ಗೆ ಉಪನ್ಯಾಸ ಕೇಳೋರ್ ಯಾರು, ಅನುಸರಿಸೋರ್ ಯಾರು? ನಮ್ ಹತ್ರಾ ದುಡ್ಡ್ ಐತಿ, ನಾವ್ ಏನ್ ಬೇಕಾರ್ ಮಾಡ್ತೀವ್ ಅನ್ನೋರ್ ಮುಂದೆ, ರೊಕ್ಕಾ ಕಡಿಮಿ ಖರ್ಚ್ ಮಾಡ್ರಲೇ ಅಂತ ಅನ್ನೋ ಮೇಷ್ಟ್ರಿಗ್ ಯಾವ ಹುಡ್ರು ಉತ್ರಾ ಕೊಟ್ಟಾರು, ನೀವೊಂದು. ಹೇಳೀ ಕೇಳೀ ದೊಡ್ಡ ದೇಶ ದೊಡ್ಡ ಜನ, ಇವರ್ನೆಲ್ಲಾ ಬಿಸಿ ಮಾಡ್ ಬೇಕ್ ಅಂದ್ರೆ ತುಂಬಾ ಎನರ್ಜಿ ಖರ್ಚು ಆಗೋಕೇ ಬೇಕು, ಅದಕ್ಕೆ ತಕ್ಕಂತೆ ಪರಿಣಾಮಗಳು ಇರೋವೇ, ಅದು ಸಹಜಾ ಅಲ್ವೇ? ಈ ಛಳಿಯ ಗುಂಗಿಗೆ ನನ್ ತಲೇನೂ ಕೆಲ್ಸಾ ಮಾಡೋದನ್ನ ನಿಲ್ಸಿದ ಹಾಗೆ ಕಾಣಿಸಿ ಪಕ್ಕನೇ ಎನೂ ಉತ್ರಾ ಹೋಳೀಲಿಲ್ಲಾ. ಇಂಥಾ ಪರಿಸ್ಥಿತೀನಲ್ಲೂ ನಾನು ಪ್ರಶ್ನೆಗಳನ್ನ ಯಾಕ್ ಕೇಳ್ಕೋತೀನಿ ಅನ್ನೋದನ್ನ ಯೋಚ್ಸಿ ಮತ್ತೊಮ್ಮೆ ಜೋರಾಗಿ ನಗೆ ಬರೋ ಪ್ರಯತ್ನಾ ಆಯ್ತು, ಆದ್ರೂ ಮೂಗಿನ ಹಿಂದೆ ಸಿಕ್ಕೊಂಡ ಸೀನಿನ ಹಾಗೆ ಆ ನಗುವೂ ಅಲ್ಲೇ ಎಲ್ಲೋ ಅಡಗಿಕೊಂಡಿತು.
’ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಛಳಿ ಇದೆ!’ ಎನ್ನೋ ಲಾಜಿಕ್ಕು ಬೇಡವೆಂದರೂ ಕೊಸರಿಕೊಂಡೇ ಬಂತು. ಮೋಷ್ಟ್‌ಲಿ ಹೊರಗಡೇ ಬೀಸೋ ಮಂದ ಮಾರುತ ಈ ರೀತಿಯ ಶಿಫಾರಸ್ಸನ್ನ ನನ್ನ ಮೇಲೆ ಮಾಡಿರಬಹುದು, ಅಥವಾ ಛಳಿಯನ್ನು ಎದುರಿಸಲಿಕ್ಕೆ ದುಡ್ಡು ಬೇಕು, ಆ ದುಡ್ಡು ಇದ್ದೋರು ಶ್ರೀಮಂತರು ಅವರೇ ಅಭಿವೃದ್ಧಿ ಹೊಂದಿದವರು ಅನ್ನೋ ತರ್ಕವೂ ಬಂತು. ಹಂಗಾದ್ರೆ ಛಳಿ ದೇಶದ ಬಡವ್ರು ಹೆಂಗ್ ಬದುಕ್ತಾರೆ? ಛಳಿಯನ್ನು ಎದುರಿಸೋಕೆ ದುಡ್ಡು ಬೇಕೇನೋ ನಿಜ, ಆದ್ರಿಂದ ಇಲ್ಲಿನ ಬಡವ್ರಿಗೂ ಬಡ ದೇಶದ ಬಡವ್ರಿಗೂ ವ್ಯತ್ಯಾಸ ಅನ್ನೋದೇನಾದ್ರೂ ಇದೆಯೇ? ಇಲ್ಲಿನ ಬಡವ್ರನ್ನ ಬಡವರು ಅಂಥಾ ಕರೆಯೋ ನಾವು ಬಡದೇಶದ ಬಡವರನ್ನ ಅದೇ ಪದದಿಂದ ಕರೆಯೋದ್ ಸರಿಯೇ, ಅಲ್ವೇ ಅನ್ನೋ ತರ್ಕ ಹುಟ್ಟಿಕೊಂಡಿತು.
’ನನ್ನನ್ನೇ ಹೆದರಿಸ್ತೀರಾ, ಅದೇನೇನೋ ತರ್ಕಗಳನ್ನು ಮನಸಲ್ಲಿ ಹುಟ್ಟಿಸಿಕೊಳ್ತೀರಾ?’ ಎಂದು ಈ ಸರ್ತಿ ನಿಜವಾಗಿ ನನ್ನನ್ನು ಹೆದರಿಸೋಕೆ ನೋಡಿದ್ದು ಹೊರಗಿನ ಛಳಿ. ಮತ್ತಿನ್ನೇನು, ನಾನು ಪ್ರತಿಯೊಂದು ಆಲೋಚನೆಯನ್ನು ಮನದಲ್ಲಿ ಹುಟ್ಟಿಸಿಕೊಂಡ ತಕ್ಷಣ ಗಟ್ಟಿಯಾಗಿ ಗಾಳಿ ಬೀಸಬೇಕು ಅಂತಾ ಯಾರಾದ್ರೂ ಯಾರಿಗಾದ್ರೂ ಹೇಳಿಕೊಟ್ಟಿದ್ದಾರೇನು? ಸೂರ್ಯನೇನೋ ಅತ್ಲಾಗ್ ಹೋಗೋನ್ ಹೋದ, ಈ ಕೆಂಪುಗೊಂಡ ಎಲೆಗಳ ರಂಗಿನ ಮುಂದೆ ಅವನ ಕಿತ್ತಲೇ ಬಣ್ಣವೂ ಅಷ್ಟೊಂದು ಸ್ವಾರಸ್ಯಕರವಾಗಿ ಕಾಣ್ಲಿಲ್ಲ. ಇಲ್ಲಿನ ಜನರ ಚರ್ಮವನ್ನು ಬಿಸಿ ಮಾಡಲಾರದ ಅಯೋಗ್ಯ ಮತ್ತಿನ್ಯಾವುದೋ ದೇಶದಲ್ಲಿ ಜನರನ್ನ ಸುಡ್ತಾನೇ ಅಂತ ನಂಬೋಕೂ ಆಗ್ಲಿಲ್ಲ - ಬಡವ್ರನ್ನ ಕಂಡ್ರೆ ಎಲ್ಲರಿಗೂ ಒಂದ್ ರೀತಿ ಹೀನ ಭಾವನೇನೇ - ಮತ್ತಿನ್ನೇನು ಛಳಿ ಬೀಸೋದ್ ಬೀಸ್ಲಿ ಅವನ ಕೆಲಸವನ್ನಾದ್ರೂ ನೆಟ್ಟಗೆ ಮಾಡಬೇಕಿತ್ತು. ಲೇಟಾಗಿ ಬರ್ತಾನೆ, ಬೇಗ ಹೊರಟು ಹೋಗ್ತಾನೆ, ನಟ್ಟನಡು ಮಧ್ಯಾಹ್ನದಲ್ಲೂ ಕಿರಣಗಳಲ್ಲಿ ಧಮ್ ಇರೋದೇ ಇಲ್ಲ. ಯಾರು ಏನು ಅನ್ಲೀ ಬಿಡ್ಲೀ, ಇನ್ನಾರು ತಿಂಗಳು ಹಪ್ತಾ ವಸೂಲಿ ಮಾಡೋ ಗೂಂಡಾಗಳಿಂದ ತಪ್ಪಿಸಿಕೊಳ್ಳಲಾಗದ ಅಮಾಯಕರ ಪಾಡು ನಮ್ಮದು - ಛಳಿ, ಗಾಳಿ, ಮಳೆ-ಮಂಜು ಇವೆಲ್ಲವೂ ಬರ್ತಲೇ ಇರ್ತಾವೆ ನಮ್ ನಮ್ ಅಡಗಿಸಿಕೊಂಡಿರೋ ಶಕ್ತಿಯನ್ನು ಪ್ರಶ್ನಿಸಿಕೊಂಡು. ಅದಕ್ಕುತ್ತರವಾಗಿ ನಾವುಗಳು ಅದೆಲ್ಲೋ ಮುಚ್ಚಿಟ್ಟಿರೋ ದಪ್ಪನೇ ಬಟ್ಟೆಗಳನ್ನು ಹೊರತೆಗೆದು ಧೂಳು ಕೊಡಗಿ ನಮ್ಮ ಚರ್ಮದ ಮೇಲೆ ಲೇಯರ್ರುಗಳನ್ನು ಹಾಕಿ ಕೊಳ್ತೀವಿ. ಅಂತಹ ದಪ್ಪ ಚರ್ಮದ ಹಿಂದಿರೋ ಮನಸ್ಸು ಕುಬ್ಜವಾಗುತ್ತೆ, ಇನ್ನು ಸೃಜನಶೀಲತೆಗಾಗ್ಲಿ, ಕೊರೆಯೋದಕ್ಕಾಗ್ಲೀ, ಯಾವ ರೀತಿ ಯೋಚ್ನೆಗೂ ಟೈಮಿರೋಲ್ಲ - ಬರೀ ಮುಂಬರುವ ಛಳಿಯನ್ನು ಶಪಿಸೋದನ್ನು ಬಿಟ್ರೆ! ಹೀಗೆ ಛಳಿಯ ಬೆನ್ನೇರಿ ಬಂತು ಹಲವು ಆಲೋಚನೆಗಳು, ಪ್ರಶ್ನೆಗಳು, ವಿಚಾರಗಳು - ನಾನೂ ಹೈಬರ್ನೇಟ್ ಮಾಡೋಕ್ ನೋಡ್ತೀನಿ, ಮತ್ತಿನ್ಯಾವಾಗ್ ಎಚ್ರವಾಗುತ್ತೋ ಏನೋ.