Showing posts with label ಸಂಬಂಧ. Show all posts
Showing posts with label ಸಂಬಂಧ. Show all posts

Monday, April 27, 2020

ಮೊದಲ ದಿನ ಮೌನ

ಮೊದಲ ದಿನ ಮೌನ
ಕವಿ: ಕೆ. ಎಸ್. ನರಸಿಂಹ ಸ್ವಾಮಿ



ಮೊದಲ ದಿನ ಮೌನ... ಮೈಸೂರ ಮಲ್ಲಿಗೆಯ ಈ ಹಾಡನ್ನು ಕೇಳಿದಾಗೆಲ್ಲ ಹೊಸದಾಗಿ ಮದುವೆಯಾಗಿ ಗಂಡನ ಮನೆಯನ್ನು ಪ್ರವೇಶಿಸಿದ ಹೆಣ್ಣುಮಗಳ ತಳಮಳ ಅರಿವಾಗುತ್ತದೆ.  ಆಗಿನ ಕಾಲದಲ್ಲಿ ತವರು ಮನೆ ತೊರೆದು ಮತ್ತು ಗಂಡನ ಮನೆಯನ್ನು ಸೇರಿ  ಅಲ್ಲಿ ಅವಿಭಕ್ತ ಕುಟುಂಬದಲ್ಲಿ ಹೊಸ ಜೀವನವನ್ನು ಸಾಗಿಸುವುದು ಪ್ರತಿ ಹೆಣ್ಣುಮಗಳ ಬದುಕಿನಲ್ಲಿ ಮಹತ್ವದ ಬದಲಾವಣೆಯೇ ಸರಿ.  ಈ ಹಾಡಿನ ಉದ್ದಕ್ಕೂ ಬರುವ ಅಲಂಕಾರಗಳು ಒಂದೊಂದು ಹಂತದಲ್ಲಿಯೂ ಹೊಸತನ್ನೇನೋ ಸಾರುತ್ತಿವೆ ಎನ್ನಿಸುತ್ತದೆ.  ಕನ್ನಡ ಸಾಹಿತ್ಯದಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಗಳ ಮನದ ತಲ್ಲಣವನ್ನು ಮೈಸೂರ ಮಲ್ಲಿಗೆಯ ಈ ಕವನ ಅತ್ಯಂತ ಸೂಕ್ಷ್ಮವಾಗಿ ಗಮನಿಸುವುದರ ಜೊತೆಗೆ, ಈ ಮೂರು ದಿನಗಳ ಪರಿವರ್ತನೆಯ ಸಮಯದಲ್ಲಿ ಸಾಂದರ್ಭಿಕವಾಗಿ ಆಕೆಯ ಒಳತೋಟಿಯನ್ನು ಇಣುಕಿ ನೋಡುತ್ತದೆ.  ಹಲವು ದಶಕಗಳ ಹಿಂದೆ ಎಲ್ಲರೂ ಸಹಜವಾಗಿ ಗಮನಿಸಬಹುದಾದ ಭಾವನೆಯೇನೋ ಎನ್ನುವಂತಿದ್ದ ಕಾಲದಲ್ಲಿ ಈ ಹಾಡು ಜನಮಾನಸದಲ್ಲಿ ಅದರ ಸ್ಥಾನವನ್ನು ಪಡೆದುಕೊಂಡಿದ್ದಿರಬಹುದು, ಆದರೆ ಈ ಹಾಡಿನ ಭಾವನೆಗಳ ಸಾಂದ್ರತೆಯ ವಸ್ತುನಿಷ್ಠತೆ ಇಂದಿನ ಆಧುನಿಕ ಯುಗದಲ್ಲೂ ಕೇಳುಗರನ್ನು ತನ್ನೊಳಗೆ ತಲ್ಲೀನಗೊಳಿಸಿಕೊಂಡು ಒಂದು ಕ್ಷಣ ಈ  ಹಾಡಿನಲ್ಲಿ ಅಡಗಿದ ಭಾವನೆಗಳ ಕೋಟಲೆಗಳೊಳಗೆ ಒಂದು ಮಾಡಿ ಬಿಡುತ್ತದೆ.

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ 
ಚಿಂತೆ ಬಿಡಿ ಹೂವ ಮುಡಿದಂತೆ 

ಗಂಡನ ಮನೆ ಸೇರಿದ ಮೊದಲ ದಿನ ಹೆಚ್ಚೂ ಕಡಿಮೆ ಮೌನದಲ್ಲೇ ಕಳೆದು ಹೋಗುತ್ತದೆ.  ಗುರುತು ಪರಿಚಯವಿಲ್ಲದ ಊರು,  ಮನೆಯಲ್ಲಿ ಮದುಮಗಳು ಅಲಂಕಾರಕ್ಕಿಟ್ಟ ಬೊಂಬೆಯೇನೋ ಎನ್ನುವಂತೆ ಎಲ್ಲರೂ ನೋಡುವವರೇ.  ಕುಳಿತರೂ ಕಷ್ಟ, ನಿಂತರೂ ಕಷ್ಟ.  ನಡುನಡುವೆ ತವರಿನ ಜ್ಞಾಪಕದಿಂದ ಕಣ್ಣು ಹನಿಗೂಡುತ್ತವೆ.  ಅಳು ತುಟಿಗೆ ಬರುತ್ತದೆ, ಆದರೆ ಗಟ್ಟಿಯಾಗಿ ಅಳಲಾಗದು.  ಚಿಂತೆ ಬಿಡಿ ಹೂವು ಮುಡಿದಂತೆ ಸಣ್ಣಗೆ ಇದ್ದರೂ ಇಲ್ಲದಂತೆ ತಲೆ ಏರಿ ಕುಳಿತಿರುತ್ತದೆ.

ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ 
ಜೀವದಲಿ ಜಾತ್ರೆ ಮುಗಿದಂತೆ|

ನೆರೆ ಹೊರೆಯವರು ಹಾಗೂ ಮನೆ ಮಂದಿ ಎಲ್ಲರೂ ಬಂದು ನೋಡುವವರೇ.  ನವ ವಧು ಹೇಗಿದ್ದಾಳೆ? ಏನು ಮಾಡುತ್ತಿದ್ದಾಳೆ ಎನ್ನುವ ಕುತೂಹಲ ಚಿಕ್ಕವರಿಂದ ದೊಡ್ಡವರ ವರೆಗೆ.  ಎಲ್ಲ ಕಡೆಯಿಂದ ಇಣುಕಿ ನೋಡುವ ಕಣ್ಣುಗಳು ಸಣ್ಣಗೆ ದೀಪ ಉರಿದಂತೆ ಕಂಡರೆ, ತಳಮಳದ ಜೀವದಲ್ಲಿ ಜಾತ್ರೆ ಮುಗಿದಂತೆನಿಸುತ್ತದೆ.  ಜಾತ್ರೆ ಮುಗಿದಾಗ ಏನೇನಾಗಬಹುದು... ಜಾತ್ರೆಗೆಂದು ತಲೆ ಎತ್ತಿದ್ದ ಅಂಗಡಿ ಮುಗ್ಗಟ್ಟುಗಳು ತಮ್ಮ ಟೆಂಟನ್ನು ಕಿತ್ತು ಗಂಟು ಮೂಟೆ ಕಟ್ಟುವುದು, ಅಲ್ಲಲ್ಲಿ ನಿಲ್ಲಿಸಿದ ಎತ್ತಿನ ಬಂಡಿ ಜಾನುವಾರುಗಳು ಪುನಃ ಮನೆ ಕಡೆಗೆ ದಾರಿ ಹಿಡಿವುದು, ಇಷ್ಟೊಂದು ಹೊತ್ತು ಗಿಜುಗಿಟ್ಟುತ್ತಿದ್ದ ಬೀದಿ-ವಠಾರಗಳು ನಿಧಾನವಾಗಿ ಖಾಲಿ ಆಗುವುದು.  ಊರಿನ ತೇರು ಆಗಲೇ ಗುಡಿ ಸೇರಿ ಜನರು ದೇವಸ್ಥಾನದಿಂದ ಪುನಃ ಮನೆಗೆ ಮರಳುವುದು.  ಜನಜಂಗುಳಿಯಿಂದ ಮೇಲೆದ್ದಿದ್ದ ಧೂಳು ನಿಧಾನವಾಗಿ ತಿಳಿಯಾಗುವುದು...ಹೀಗೆ ಒಂದು ಸಂಭ್ರಮದ ಕ್ಷಣ ಸಹಜವಾಗಿ ಮುಂದಿನ ಗತಿಯಲ್ಲಿ ಲೀನವಾಗುವುದರ ಚಿತ್ರಣದ ಮೂಲಕ ಈ ಸಾಲುಗಳು ಅನೇಕ ನೆನಪುಗಳನ್ನು ಹಲವು ರೂಪಕಗಳ ಮುಖೇನ ಕಣ್ಣಿಗೆ ಕಟ್ಟಿಕೊಡುತ್ತದೆ.

ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು 
ಮೂಗುತಿಯ ಮಿಂಚು ಒಳಹೊರಗೆ 
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು 
ಬೇಲಿಯಲಿ ಹಾವು ಹರಿದಂತೆ|

ಅಂತೂ ಕಷ್ಟದ ಮೊದಲ ದಿನ ಮುಗಿದು ಎರಡನೆಯ ದಿನ ಸ್ವಲ್ಪ ಚೇತರಿಕೆ ಶುರುವಾಗುತ್ತದೆ.  ಎರಡನೆಯ ಹಗಲು ಎಂದು ಶುರುವಾಗುವ ಸಾಲುಗಳು ಬಹಳ ನಿಧಾನವಾಗಿ ಸಾಗುವ ಉದ್ದದ ದಿನಗಳನ್ನು ತೋರಿಸುತ್ತವೆ.  ಸುತ್ತಲಿನ ಪರಿಸರ ನಿನ್ನೆಯಷ್ಟು ಹೊಸತೆನಿಸುವುದಿಲ್ಲ, ಆದ್ದರಿಂದ ಇಳಿ ಮುಖವಿರದೆ ಸ್ವಲ್ಪ ಕೊರಗು ಕಡಿಮೆಯಾದಂತೆನಿಸುತ್ತದೆ.  ಮನೆಯ ಒಳ ಹೊರಗೆ ಓಡಾಡಿದಂತೆಲ್ಲ ಹೊಸ ಮೂಗುತಿಯ ಮಿಂಚು ಅಲ್ಲಲ್ಲಿ ಕಾಣಸಿಗುತ್ತದೆ.  ಆದರೂ ಅವರಿವರ ಮಾತುಗಳಲ್ಲಿ ಅಷ್ಟೊಂದು ಸ್ಪಷ್ಟತೆ ಇಲ್ಲ, ಈ ಕಡೆ ಮಾತನಾಡಿದಂತೆಯೂ ಇರಬೇಕು, ಆಡದಂತೆಯೂ ಇರಬೇಕು.  ತೆಳುವಾದ ದುಃಖದ ಗುಂಗಿನಲ್ಲಿ ತೇಲುವ ಮನಸಿಗೆ ಆಡಿದ ಮಾತುಗಳು ಬರೀ ತುಟಿಯ ಚಲನೆಯಂತೆ ಕಂಡು ಬರಬಹುದು.  ಈ ಸಂದರ್ಭಗಳಲ್ಲಿ ಸಮಯ ಬಹಳ ನಿಧಾನವಾಗಿ ಚಲಿಸುತ್ತದೆ.  ಬೇಲಿಯಲ್ಲಿ ಹಾವು ಸರಿದಂತೆ ಎನ್ನುವ ರೂಪಕ ತವರು ಮತ್ತು ಗಂಡನ ಮನೆಯ ಎರಡು ಕಡೆಗಳಲ್ಲಿ ಹರಿದಾಡುವ ಮನಸ್ಸಿನ ಪ್ರತೀಕವಿರಬಹುದು.  ಜೊತೆಗೆ ಬೇಲಿಯಲ್ಲಿ ಹರಿದಾಡುವ ಹಾವು ಜೊತೆಗೆ ಅಲ್ಲಿ ಹರಡಿದ ಹೂವು-ಮುಳ್ಳುಗಳ ಜೊತೆಗೆ ಸಹ ಪರಿಸರದಲ್ಲಿ ಹೊಂದಿಕೊಂಡಿರುವುದನ್ನು ಕಣ್ಣಿಗೆ ಕಟ್ಟುತ್ತದೆ.

ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ 
ಹೂವಿಗೂ ಜೀವ ಬಂದಂತೆ 
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ 
ಹುಣ್ಣಿಮೆಯ ಹಾಲು ಹರಿದಂತೆ|

ಇನ್ನು ಮೂರನೆ ದಿನ ನಿಜವಾಗಿಯೂ ಚೇತರಿಕೆಯ ದಿನ.  ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ಕೈಗೂಡಿಸಿ ಮನೆಯವರೊಂದಿಗೆ ಸೇರಿಕೊಳ್ಳುವ ಪರಿ.  ಅತ್ತೆ, ಮಾವ, ಗಂಡ, ನಾದಿನಿ, ಮೈದುನರನ್ನೆಲ್ಲ ಸಂಬಾಳಿಸಿಕೊಂಡು ಹೋಗುವ ಪರಿ.  ಹೆರಳಿನ ತುಂಬಾ ಹೂ ಮುಡಿದಂತೆ ಆ ಹೂವಿಗೂ ಜೀವ ಬಂದಂತೆ ಎನ್ನುವ ಸಾಲುಗಳು ತಾಜಾ ಹೂಗಳು ಗುಂಪಾಗಿ ದಂಡೆಯ ರೂಪದಲ್ಲಿ ಸಂಭ್ರಮಿಸುವುದನ್ನು ನೋಡಬಹುದು, ಕೇವಲ ಮೂರೇ ದಿನಗಳಲ್ಲಿ ಇದು ಬಿಡಿ ಹೂವಿನ ಚಿಂತೆಯಿಂದ ಬಹಳ ದೂರ ಬಂದ ಮನಸ್ಸಿನ ಪರಿವರ್ತನೆಯನ್ನು ತೋರಿಸುತ್ತದೆ.  ಮೂರನೆಯ ಸಂಜೆ ಎಂದು ಆರಂಭವಾಗುವ ಪದಗಳು ಎರಡನೆಯ ಭಾರವಾದ ಹಗಲಿನಿಂದ ಬಹಳಷ್ಟು ಮುಂದೆ ಬಂದ ಸೂಚನೆಯನ್ನು ಕೊಡುತ್ತದೆ.  ಜೊತೆಗೆ ರಾತ್ರಿ ಇಳಿದಂತೆ ಕತ್ತಲಾದರೂ ಇಡೀ ಬಾನನ್ನು ಆವರಿಸುವ ಹುಣ್ಣಿಮೆಯ ಹಾಲು   ಬೆಳದಿಂಗಳ ಕೊರಗುವ ಕತ್ತಲಿನಿಂದ ಮನಸ್ಸು ದೂರಸರಿದಿರುವುದನ್ನು ಪ್ರತಿಬಿಂಬಿಸುತ್ತದೆ.

ಈ ಹಾಡನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು/ಕೇಳಬಹುದು.

Thursday, April 30, 2009

ವರ್ಚುವಲ್ಲ್ ಪ್ರಪಂಚದ ಲೀಲೆ

ನನಗೆ ಅವಾಗಾವಾಗ ’ನೀವು ಆರ್ಕುಟ್‌ನಲ್ಲಿದ್ದೀರಾ?’, ’ಟ್ವಿಟ್ಟರ್ರ್ ನಲ್ಲಿದ್ದೀರಾ?’ ಮುಂತಾಗಿ ಪ್ರಶ್ನೆಗಳು ಬರ್ತಾನೇ ಇರ್ತವೆ. ನಾನು ಅಂತಹ ಪ್ರಶ್ನೆಗಳಿಗೆ ’ಟು ಡು ವಾಟ್?’ ಅನ್ನೋ ಮತ್ತೊಂದು ಪ್ರಶ್ನೆ ಎಸೆದು ಉತ್ರ ಕೊಡ್ತೀನಿ. ನನಗೆ ಸಿಗೋ ಎಲ್ಲ ಉತ್ತರ ಅಥವಾ ಸಮಜಾಯಿಷಿಗಳೂ ಇವೆಲ್ಲಾ ಸೋಷಿಯಲ್ಲ್ ನೆಟ್‌ವರ್ಕಿಂಗ್ ಸೈಟ್‌ಗಳು, ಅಲ್ಲಿಗೆ ಬಂದೂ ಹೋಗಿ ಮಾಡೋದ್ರಿಂದ ನಿಮ್ಮ ನಿಮ್ಮ ನೆಟ್‌ವರ್ಕ್ ಅಭಿವೃದ್ಧಿ ಆಗುತ್ತೆ ಅನ್ನೋ ರೀತಿ ಇರುತ್ವೆ. ನಾನಂತೀನಿ, ’ನಮ್ಮ ಸುತ್ ಮುತ್ಲು ಇರೋರ ಜೊತೆ ಬೆರೆತುಕೊಂಡಿರೋದೇ ದೊಡ್ಡ ಸವಾಲಾಗಿದೆ ಇನ್ನು ಈ ವರ್ಚುವಲ್ ಪ್ರಪಂಚದವರ ಜೊತೆ ಏಗೋದು ಯಾರೂ ಅಂತ?’

ನೀವೇ ಯೋಚ್ನೆ ಮಾಡಿ, ಎಷ್ಟೊಂದು ಸೋಷಿಯಲ್ ನೆಟ್‌ವರ್ಕಿಂಗ್ ಸೈಟ್‌ಗಳಿವೆ ಅಂತಾ - ಆರ್ಕುಟ್ಟು, ಫೇಸ್‌ಬುಕ್, ಮೈಸ್ಪೇಸ್, ಟ್ವಿಟ್ಟರ್ ಮುಂತಾಗಿ. ಇವುಗಳಿಗೆಲ್ಲ ಒಂದೊಂದು ಅಕೌಂಟ್ ಕ್ರಿಯೇಟ್ ಮಾಡಿಕೊಂಡಿರಬೇಕು, ಅವಕ್ಕೆಲ್ಲ ಒಂದೊಂದು ಯೂಸರ್ ಐಡಿ ಪಾಸ್‌ವರ್ಡ್. ಜೊತೆಗೆ ಅಲ್ಲಿ ಬಂದು ಹೋಗೋರ ಜೊತೆಯಲ್ಲ ಸಂಭಾಷಣೆ ಮಾಡುತ್ತಾ ಇರೋದಕ್ಕೆ ಟೈಮಾದ್ರೂ ಯಾರ ಹತ್ರ ಇದೆ ಅನ್ಸೋಲ್ವ? ನಾನು ತಮಾಷೆಯಾಗಿ ಹೇಳೋದೇನು ಅಂದ್ರೆ, ಒಂದಲ್ಲ ಒಂದು ದಿನ ಈ ಸೈಟುಗಳೆಲ್ಲ ಗೂಗಲ್ಲೋ, ಮೈಕ್ರೋಸಾಫ್ಟ್‌ನವರೋ ಮರ್ಜ್ ಮಾಡೋ ಕಾಲ ಬರುತ್ತೆ, ಆಗ ನಾನು ಒಂದೇ ಒಂದು ಅಕೌಂಟ್ ಓಪನ್ ಮಾಡಿಕೊಂಡಿರ್ತೀನಿ ಅಂತ.

ಇನ್ನೂ ಮುವತ್ತರ ಹರೆಯದಲ್ಲಿದ್ದುಕೊಂಡೇ ನಾನು ಇಷ್ಟೊಂದು ಔಟ್‌ಡೇಟೆಡ್ ಆಗಿ ಹೋದ್ತಾ ಅನ್ನೋ ಹೆದರಿಕೆ ಒಂದು ಕಡೆ. ಛೇ, ಪ್ರಪಂಚದ ಆರು ಬಿಲಿಯನ್ ಜನರಲ್ಲಿ ಕನಿಷ್ಠ ಮೂರು ಬಿಲಿಯನ್ನ್ ಜನರಾದ್ರೂ ಇನ್ನೂ ಫೋನಿನ ಡಯಲ್ ಟೋನ್ ಕೇಳದೇ ಇರೋ ಪರಿಸ್ಥಿತಿ ಇರೋವಂತ ಸಮಯದಲ್ಲಿ ನನ್ನಂಥವರು ಔಟ್‌ಡೇಟೆಡ್ ಅಗೋದಾದ್ರೂ ಹೇಗೆ ಅನ್ನೋ ಸಮಾಧಾನ ಜೊತೆಗೆ. ಇ-ಮೇಲ್, ಫೋನ್ ಹಾಗೂ ಮುಖತಃ ಭೇಟಿ ಮಾಡುವ ಸಂದರ್ಭಗಳಲ್ಲಿ ನಾವು ನಮ್ಮನ್ನು ಚೆನ್ನಾಗಿ ತೊಡಗಿಸಿಕೊಂಡ್ರೆ ಸಾಕು ಸಂಬಂಧಗಳು ಬೆಳೆಯೋದಕ್ಕೆ, ಇವಿಷ್ಟರ ಜೊತೆಗೆ ಅಲ್ಲಿ-ಇಲ್ಲಿ ವೆಬ್ ಸೈಟ್‌ಗಳಲ್ಲಿ ಹೋಗಿ ’ಇಂದು ನಾನು ಇಂಥಾ ತಿಂಡಿ ತಿಂದೆ’, ’ಅವನು ಅಲ್ಲಿ ಅಷ್ಟೊಂದು ರನ್ ಹೊಡೆದ’ ಅಂತೆಲ್ಲ ’ವಾಲ್’ ಮೇಲೆ ಬರೆದುಕೊಳ್ಳೋದ್ರಿಂದ ಏನ್ ಪ್ರಯೋಜನ ಅಂತ ನನಗಿನ್ನೂ ಕನ್ವಿನ್ಸ್ ಆಗಿಲ್ಲ ನೋಡಿ.

ನಾನು ಹಳೇ ಕಾಲದವನು ಆಗೋ ಕಾಲ ಹತ್ರ ಬರ್ತಾ ಇದೆ, ಅಂತ ನೀವೆಲ್ಲ ನಗಬಹುದು. ನನ್ನ ಪ್ರಕಾರ, ಕೈಯಲ್ಲಿರೋ ಐದು ಸಾವಿರ ಡಾಲರ್ ವಾಚಾಗ್ಲಿ ಅಥ್ವಾ ಬೆಂಗಳೂರಿನಲ್ಲಿ ಐವತ್ತು ರೂಪಾಯಿಗೆ ಸಿಗೋ ವಾಚಾಗ್ಲಿ ಮುಖ್ಯವಲ್ಲ್ - ಸಮಯವನ್ನ ಚೆನ್ನಾಗಿ ಬಳಸೋರು, ಅವರ ಕೈಯಲ್ಲಿ ಯಾವ ವಾಚ್ ಇದ್ರೂ ಇಲ್ದೇ ಇದ್ರೂ, ಸಮಯದ ಉಪಯೋಗವನ್ನು ಚೆನ್ನಾಗಿ ಮಾಡಿಕೊಳ್ತಾರೆ. ಅದೂ ಅಲ್ದೇ, ಈ ಸಂಬಂಧಗಳು ಅನ್ನೋದೆಲ್ಲ, ತೋಟದಲ್ಲಿ ಒಂದು ಗಿಡ ನೆಟ್ಟ ಹಾಗೆ, ಅವುಗಳನ್ನು ಚೆನ್ನಾಗಿ ಬೆಳೆಸಿ, ಪೋಷಿಸದೇ ಹೋದ್ರೇ ಸತ್ತೇ ಹೋಗ್ತಾವೆ. ಹಾಗಿರಬೇಕಾದ್ರೆ, ನನ್ನ ಸುತ್ತು ಮುತ್ಲೂ ಇರೋ ಸಂಬಂಧಗಳನ್ನು ನಾನು ಆತುಕೊಳ್ಳಲೋ ಅಥ್ವಾ ಜೊತೆಗೆ ಒಂದಿಷ್ಟು ವರ್ಚುವಲ್ಲ್ ಪ್ರಪಂಚದ ಲಿಂಕುಗಳನ್ನೂ ಪೋಣಿಸಿಕೊಳ್ಳಲೋ? ಅನ್ನೋ ಸಂಧಿಗ್ಧ ಬೇರೆ.

ಇಂಟರ್‌ನೆಟ್ ಈಗ ತಾನೆ ಕಣ್ಣು ತೆರೀತಾ ಇದೆ, ಕೇವಲ ಒಂದೂವರೆ ದಶಕದಷ್ಟು ಹಳೆಯದಾದ ಈ ತಂತ್ರಜ್ಞಾನಕ್ಕೆ ಇನ್ನೂ ದೊಡ್ಡ ಭವಿಷ್ಯವಿದೆ. ಈ ಇಂಟರ್‌ನೆಂಟ್ ಸೈಟ್‌ಗಳು ನಮ್ಮೂರಿನ ಪಬ್ಲಿಕ್ ಲೈಬ್ರರಿಗಳಾಗೋ ಮುನ್ನ ಬಹಳಷ್ಟು ಬೆಳವಣಿಗೆ ಖಂಡಿತ ಇದೆ. ನಾವೆಲ್ಲ ಮುದುಕರಾಗೋಷ್ಟೋತ್ತಿಗೆ ಇನ್ನೂ ಏನೇನು ಬದಲಾವಣೆಗಳು ಬಂದು ಹೋಗ್ತಾವೋ ಕಾಣೆ. ನಮ್ಮ ಸುತ್ತು ಮುತ್ಲೂ ಇರೋ ಖಾಲಿ ಜಾಗಗಳ್ಳಲ್ಲಿ - ಅಂದ್ರೆ ಅದು ರೆಫ್ರಿಜರೇಟರ್ರಿನ ಸೈಡ್ ಆಗಿರಬಹುದು, ಆಥವಾ ಅಟ್ಟದ ಮೇಲಿನಿಂದ ಇಳಿಯುವಾಗ ಸಿಗೋ ಗೋಡೆ ಮೇಲಿನ ಖಾಲಿ ಜಾಗವಾಗಬಹುದು, ಅಥವಾ ಕಾರಿನ ವಿಂಡ್‌ಶೀಲ್ಡ್ ಇನ್ನು ಮುಂತಾದ ಫ್ಲಾಟ್ ಜಾಗಗಳು ಫ್ಲಾಟ್‌ಸ್ಕ್ರೀನ್ ಆಗಿ ಮಾರ್ಪಾಡಾಗೋ ಕಾಲ ದೂರವಿಲ್ಲ. ವರ್ಚುವಲ್ಲ್ ಆಗಲಿ ರಿಯಲ್ ಆಗಲಿ ಈ ಪ್ರಪಂಚ ಇಷ್ಟೇ, ಯಾವಾಗ್ಲೂ ಬೆಳಿತಾನೇ ಇರುತ್ತೆ. ಇವುಗಳಿಗೆಲ್ಲ ಸ್ಪಂದಿಸೋದಕ್ಕೆ, ಇವುಗಳ ಜೊತೆ ಏಗೋದಕ್ಕೆ ಸಮಯ ಮಾತ್ರ ಸಿಗೋದಿಲ್ಲ ಅಷ್ಟೇ.

Tuesday, June 17, 2008

ಪಾಪ, ಇಂದಿನ ಮಕ್ಕಳು!

ಆಫೀಸಿನಲ್ಲಿ ನನ್ನ ಅಕ್ಕ ಪಕ್ಕದ ಕ್ಯೂಬಿಕಲ್‌ಗಳಲ್ಲಿ ಕುಳಿತುಕೊಳ್ಳುವ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡ ನಾಲ್ಕು ಸಹೋದ್ಯೋಗಿಗಳಲ್ಲಿ ಕೆಲವು ಸಾಮ್ಯತೆಗಳನ್ನು ಕಂಡುಕೊಂಡಿದ್ದೇನೆ. ಅವರೆಲ್ಲ ವಯಸ್ಸಿನಲ್ಲಿ ಸುಮಾರು ಇಪ್ಪತ್ತನಾಲ್ಕು ವರ್ಷದ ಆಜುಬಾಜಿನವರು, ಭಿನ್ನ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆದು ಓದಿದ್ದೂ ಸಹ ಹಾಗೂ ಇವತ್ತಿಗೂ ತಮ್ಮ ತಂದೆ-ತಾಯಿಯರ ಜೊತೆಗೇ ವಾಸಿಸುತ್ತಿರುವವರು. ಈ ನಾಲ್ಕು ಜನರು ಇಲ್ಲೇ ಹುಟ್ಟಿ ಬೆಳೆದವರಾದರೂ ನಮ್ಮ ಭಾರತೀಯ ಪರಂಪರೆಯಲ್ಲಿ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲುವವರೆಗೆ ತಮ್ಮ ತಮ್ಮ ಪೋಷಕರನ್ನು ಆಧರಿಸಿಕೊಂಡಿರುತ್ತಿದ್ದುದನ್ನು ಆಗಾಗ್ಗೆ ನೆನಪಿಗೆ ತಂದುಕೊಡುತ್ತಾರೆ. ಇವರನ್ನು ನೋಡಿದ ಬಳಿಕ ಅಮೇರಿಕನ್ ಮಕ್ಕಳು ಸ್ವಾತಂತ್ರ ಪ್ರಿಯರೋ ಅಥವಾ ಹದಿನೆಂಟು ವರ್ಷ ವಯಸ್ಸಾಗುತ್ತಿದ್ದಂತೆ ತಮ್ಮ ಪೋಷಕರನ್ನು ಬಿಟ್ಟು ದೂರ ಹೋಗಬಯಸುವವರೋ ಎಂದೆಲ್ಲ ಯೋಚಿಸಿಕೊಂಡಿದ್ದ ಅಥವಾ ಜೆನರಲೈಜೇಷನ್ನುಗಳ ಬಗ್ಗೆ ಕೇಳಿದ್ದು ಅಲ್ಲವೋ ಹೌದೋ ಎಂದು ಪ್ರಶ್ನೆ ಎದ್ದಿದ್ದಂತೂ ನಿಜ. ತಾವು ತಮ್ಮ ಕಾರುಗಳನು ಚಲಾಯಿಸಬಲ್ಲರಾದರೂ ತಮ್ಮ ಪೋಷಕರೊಡನೆ ಕೂಡಿ ಆಫೀಸಿಗೆ ಬಂದು ಹೋಗುವ ಅಥವಾ ಪೋಷಕರು ಮಕ್ಕಳನ್ನು ಆಫೀಸಿಗೆ ಬಿಟ್ಟು ಕರೆದುಕೊಂಡು ಹೋಗುವುದನ್ನು ನಾನು ನೋಡಿದ್ದು ಕಡಿಮೆಯೇ. ಹಿಂದೆ ನನ್ನ ಅಮೇರಿಕನ್ ಸ್ನೇಹಿತ ಕೆನ್ ಲೆನಾರ್ಡ್‌ನ ಕುಟುಂಬವನ್ನು ನಾನು ನೋಡಿದ ಹಾಗೆ ಎಷ್ಟೋ ರೀತಿಯಲ್ಲಿ ಭಾರತೀಯ ಕುಟುಂಬಗಳನ್ನು ಹೋಲುವಂತೆಯೇ ಆತನೂ ಹಲವಾರು ಗ್ರೌಂಡ್ ರೂಲ್ಸ್‌ಗಳ ಸಹಾಯ/ಆಧಾರದ ಮೇಲೆ ತನ್ನ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದುದರ ಬಗ್ಗೆ ಬರೆದಿದ್ದೆ.

ನನ್ನ ಹಾಗಿನವರು ಬಹಳಷ್ಟು ಜನ ಹತ್ತನೇ ತರಗತಿ ಮುಗಿದ ಬಳಿಕ ಪಿಯುಸಿ ವಿದ್ಯಾಭ್ಯಾಸದಿಂದ ಹಿಡಿದು ತಮ್ಮ ಮುಂದಿನ ಜೀವನವನ್ನು ಪೋಷಕರಿಂದ ದೂರವಿದ್ದೇ ನಡೆಸಿಕೊಂಡು ಬರುತ್ತಿರುವುದು ಭಾರತದಲ್ಲಿ ಸಾಮಾನ್ಯವೆಂದು ಹೇಳಲಾಗದಿದ್ದರೂ ಅಲ್ಲಲ್ಲಿ ನೋಡಲು ಸಿಗುತ್ತದೆ ಎನ್ನಬಹುದಾದ ಅಂಶ. ಹತ್ತನೇ ತರಗತಿ ಮುಗಿದರೂ ನನಗೆ ಒಂದು ಬ್ಯಾಂಕಿಗೆ ಹೋಗಿ ಹತ್ತು ರೂಪಾಯಿ ಡಿಪಾಜಿಟ್ ಮಾಡುವುದು ಹೇಗೆ ಎಂದು ಗೊತ್ತಿರದಿದ್ದುದು ಇಂದಿಗೂ ಆಶ್ಚರ್ಯ ತರಿಸುತ್ತದೆ. ಮೊದಲನೆಯದಾಗಿ ಬ್ಯಾಂಕ್ ವ್ಯವಹಾರಗಳಾಗಲೀ ಹಣಕಾಸು ಸಂಬಂಧಿ ಚರ್ಚೆಗಳಾಗಲೀ ನಮ್ಮ ಅವಿಭಕ್ತ ಕುಟುಂಬಗಳಲ್ಲಿ (ನಮ್ಮೆದುರಿಗೆ) ಆಗುತ್ತಿದ್ದುದು ಕಡಿಮೆ. ಮನೆಯ ಯಜಮಾನನಾದವನು ನಡೆಸಿಕೊಂಡು ಹೋಗಬಹುದಾದ ಚರ್ಚೆ ಹಾಗೂ ವ್ಯವಹಾರಗಳಲ್ಲಿ ನಾವು ಚಿಕ್ಕವರಿಗೆ ಯಾವ ಸ್ಥಾನವೂ ಇದ್ದಿರಲಿಲ್ಲ. ಹೈ ಸ್ಕೂಲು ಮುಟ್ಟುವ ಹೊತ್ತಿಗೆ ಒಂದೆರಡು ಬಾರಿ ಯಾರೋ ಕೊಟ್ಟ ಚೆಕ್ ಡಿಪಾಜಿಟ್ ಮಾಡಿದ್ದೋ ಅಥವಾ ಬ್ಯಾಂಕಿನಿಂದ ಹಣವನ್ನು ತೆಗೆದುಕೊಂಡಿದ್ದನ್ನೋ ಬಿಟ್ಟರೆ ಮತ್ತೇನೂ ವಿಶೇಷ ಅನುಭವಗಳು ನಮ್ಮ ನೆನಪಿನಲ್ಲಿ ಇರಲಾರವು. ಇನ್ನು ಕೆಲವರು ಇಂಜಿನಿಯರಿಂಗ್ ಮುಗಿಯುವವರೆಗೆ, ಕೆಲಸ ಸಿಗುವವರೆಗೆ, ಮದುವೆಯಾಗಿ ಮಕ್ಕಳಾಗುವವರೆಗೂ ಪೋಷಕರನ್ನು ಆಧರಿಸಿಕೊಂಡಿದ್ದನ್ನು ನಾನು ನೋಡಿದ್ದೇನೆ. ಈ ವಿಭಿನ್ನ ವ್ಯವಸ್ಥೆ-ವಿಧಾನಗಳಲ್ಲಿ ತಪ್ಪು ಸರಿ ಯಾವುದು ಎನ್ನುವುದಕ್ಕಿಂತ ಹಲವು ಮನಸ್ಥಿತಿ, ನನ್ನಂತಹವರು ಬೆಳೆದು ಬಂದ ರೀತಿ ಹಾಗೂ ಬದಲಾದ ಕಾಲಮಾನಗಳ ಅವಲೋಕನವನ್ನು ಮಾಡಿಕೊಡುವ ಒಂದು ಪ್ರಯತ್ನವಿದಷ್ಟೇ.

’ಅಮೇರಿಕನ್ ಮಕ್ಕಳು ಬಹಳ ಇಂಡಿಪೆಂಡೆಂಟ್’ ಎನ್ನುವ ನೋಷನ್ನ್ ಅನ್ನು ನಾನು ಎನ್‌ಆರ್‍‌ಐ ಸಮುದಾಯಗಳಲ್ಲಿ, ನಮ್ಮ-ನಮ್ಮ ನಡುವಿನ ಮಾತುಕಥೆಗಳಲ್ಲಿ ಕೇಳಿದ್ದೇನೆ. ಈ ಬಗೆಯ ಜನರಲೈಜೇಷನ್ನಿಗಿಂತ ಇದೇ ಅವಲೋಕನವನ್ನು ಇಲ್ಲಿನ ಹಳ್ಳಿ-ಪಟ್ಟಣ-ನಗರ ಸಮುದಾಯಗಳಲ್ಲಿ ಮಾಡಿದಾಗ ಬೇಕಾದಷ್ಟು ರೀತಿಯ ಫಲಿತಾಂಶಗಳು ಹಾಗೂ ಮುಖ್ಯವಾಗಿ ಜನರಲೈಜೇಷನ್ನಿಗಿಂತ ಭಿನ್ನ ಅಂಕಿ-ಅಂಶಗಳೂ ಸಿಕ್ಕಬಹುದು. ನಮ್ಮ ಪುರೋಹಿತರು ಇಲ್ಲೇ ಹುಟ್ಟಿ ಬೆಳೆದ ಭಾರತೀಯ ಮೂಲದ ಮಕ್ಕಳಿಗೆ ಇಂಗ್ಲೀಷಿನಲ್ಲಿ ಬಾಲಕೃಷ್ಣನ ಲೀಲೆಗಳನ್ನು, ಕೃಷ್ಣ-ಬಲರಾಮರ ಬಗ್ಗೆ ಕಥೆಗಳನ್ನು ಹೇಳುತ್ತಿದ್ದರಂತೆ. ’ಕೃಷ್ಣ ಮತ್ತು ಆತನ ಸ್ನೇಹಿತರು ಬೆಣ್ಣೆಯನ್ನು ಮನೆಯಲ್ಲಿ ಹುಡುಕುತ್ತಿದ್ದರಂತೆ, ಮಡಿಕೆಯ ಕುಡಿಕೆಯನ್ನು ಯಶೋಧೆ ಮಾಳಿಗೆಯ ಕುಡಿಕೆಯಲ್ಲಿ ಬಿಗಿದು ಕಟ್ಟಿದ್ದನ್ನು ಇವರು ಕಂಡು ಹಿಡಿದರಂತೆ...’ ಎಂದು ಕಥೆ ಮುಂದುವರಿಸುತ್ತಿದ್ದಾಗ ಒಬ್ಬ ಹುಡುಗ ’ಅಂಕಲ್, ಅವರು ಬೆಣ್ಣೆಯನ್ನು ಏಕೆ ಹುಡುಕುತ್ತಿದ್ದರು, ಫ್ರಿಜ್ ಬಾಗಿಲು ತೆಗೆದು ನೋಡಿದ್ದರೆ ಅಲ್ಲೇ ಸಿಗುತ್ತಿರಲಿಲ್ಲವೇ?’ ಎಂದು ಮುಗ್ಧವಾಗಿ ಪ್ರಶ್ನೆ ಕೇಳಿದ್ದನ್ನು ಪುರೋಹಿತರು ನಗುತ್ತಲೇ ಇನ್ನೂ ಸ್ವಾರಸ್ಯವಾಗಿ ವಿವರಿಸಿ, ’ಇಂದಿನ ಮಕ್ಕಳು ಬಹಳ ಭಿನ್ನ ನಮ್ಮ ಕಾಲದವರ ಹಾಗಲ್ಲ’ ಎಂದು ಹೇಳಿದ್ದು ನೆನಪಿಗೆ ಬಂತು.

ಇಂದಿನ ಮಕ್ಕಳ ಪ್ರಪಂಚ ಸಣ್ಣದು, ಆದರೆ ಅದರ ಒಳ ವಿಸ್ತಾರ ಬಹಳ ಹೆಚ್ಚು - ಅವರ ಆಟಿಕೆಗಳು ಬೇರೆ, ಅವರ ಪಾಠ-ಪುಸ್ತಕ ಪ್ರವಚನಗಳು ಬೇರೆ, ಅವರ ಬದುಕೇ ಭಿನ್ನ. ಕಂಪ್ಯೂಟರ್ ಕೀ ಬೋರ್ಡಿನಿಂದ ಹಿಡಿದು ವಿಡಿಯೋ ಗೇಮ್ ಆಟಗಳವರೆಗೆ, ಅವರು ಮಾತಿನಲ್ಲಿ ಬಳಸುವ ಶಬ್ದಗಳಿಂದ ಹಿಡಿದು ಅವರವರಲ್ಲೇ ಸಂವಹನಕ್ಕೆ ಬಳಸುವ ಮಾಧ್ಯಮಗಳವರೆಗೆ ಇಂದಿನ ಮಕ್ಕಳು ಬಹಳ ಭಿನ್ನ. ನಮ್ಮ ಪೋಷಕರು ನಾವು ಬೆಳೆಯುತ್ತಿದ್ದಾಗ ಅವರಿಗೂ ನಮಗೂ ಇದ್ದ ಅಂತರಕ್ಕಿಂತಲೂ ನಮಗೂ ನಮ್ಮ ಮಕ್ಕಳಿಗೂ ಇರುವ ಅಂತರ ಹೆಚ್ಚು ಎಂದರೆ ತಪ್ಪಾಗಲಾರದು. ನಮ್ಮ ತಲೆಯಲ್ಲಿ ಬಳಸಿ ಉಳಿದುಹೋದ ಪದಗಳಾದ - ಎತ್ತು ಏರಿ ಕಣ್ಣಿ ಮಿಣಿ ಕಡಗೋಲು ಮಜ್ಜಿಗೆ ಗಿಣ್ಣ ನೊಗ ಗೋಲಿ ಬುಗುರಿ ಚೆಂಡು ಚಿತ್ರ ಪರೀಕ್ಷೆ ಹಾಡು ಹಸೆ ಸ್ನಾನ - ಮೊದಲಾದವುಗಳಿಗೆ ಈಗಿನ ಮಕ್ಕಳ ತಲೆಯಲ್ಲಿ ಪರ್ಯಾಯ ಪದಗಳು ಬಂದಿರಬಹುದು ಅಥವಾ ಅವು ಉಪಯೋಗಕ್ಕೆ ಬಾರದೇ ಇರುವವಾಗಿರಬಹುದು. ಮೆಕ್ಯಾನಿಕಲ್ ಟೈಪ್‌ರೈಟರ್ ಎಂದರೆ ಏನು? ಎನ್ನುವವರಿಂದ ಹಿಡಿದು ತಮ್ಮಿಂದ ಕೇವಲ ಇಪ್ಪತ್ತೇ ಅಡಿ ದೂರದಲ್ಲಿರುವ ಗೆಳೆಯ-ಗೆಳತಿಯರೊಡನೆ ಕೇವಲ ಟೆಕ್ಸ್ಟ್ ಮೆಸ್ಸೇಜ್ ಸಂಭಾಷಣೆಯಲ್ಲೇ ನಿರತರಾಗಿದ್ದುಕೊಂಡು ಅದರ ಮಿತಿಯಲ್ಲೇ ತಮ್ಮ ಆಗುಹೋಗು ಅನಿಸಿಕೆಗಳನ್ನು ಹಂಚಿಕೊಳ್ಳುವವರು. ವಿಶ್ವದ ಎಲ್ಲ ಸಮಸ್ಯೆಗಳನ್ನೂ ಶಾಲಾ ಮಟ್ಟದಲ್ಲೇ ಇವರಿಗೆ ಪರಿಚಯಿಸಿ ಅದರ ಉತ್ತರ ಕಂಡುಹಿಡಿಯುವಂತೆ ಮಾಡುವ ಅಸೈನ್‌ಮೆಂಟ್‌ಗಳು ಇವರವಾಗಿರಬಹುದು. ತಮ್ಮ ಹಿರಿಯರು ಮನೆಗೆ ಬಂದವರು ಅತಿಥಿಗಳು ಮೊದಲಾದವರು ಯಾವುದೋ ಒಂದು ಶುಭ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರೆ ಇವರು ಅದೇ ಹಾಲ್‌ನ ಒಂದು ಮೂಲೆಯ ಸೋಫಾದ ಮೇಲೆ ಕುಳಿತು ಹ್ಯಾಂಡ್‌ಹೆಲ್ಡ್ ಡಿವೈಸ್‌ನಿಂದ ಇಂದೇ ಪ್ರಪಂಚದ ಕೊನೆಯಾದೀತೇನೋ ಎಂಬ ತನ್ಮಯತೆಯಲ್ಲಿ ವಿಡಿಯೋ ಗೇಮ್‌ಗಳನ್ನು ಆಡುವವರು. ವಿಕಾಸವಾದದ ಮುನ್ನಡೆಯಾದಂತೆ ಇವರ ಮಿದುಳು ಪ್ರಚಂಡ ಇನ್‌ಫರ್ಮೇಷನನ್ನು ಸಂಸ್ಕರಿಸುವ ಹಾಗೂ ಒಂದೇ ಸಮಯದಲ್ಲಿ ಹಲವು ಕಾರ್ಯಗಳನ್ನು ಮಾಡುವ ಕ್ಷಮತೆಯನ್ನು ಹೊಂದಿರಬಹುದು ಅಥವಾ ವಿಡಿಯೋ ಗೇಮ್ ಆಡೀ ಆಡೀ ಇವರ ಕೈ ಬೆರಳುಗಳ ಸ್ನಾಯುಗಳು ಬಲಗೊಂಡು ಮುಂದೆ ಬ್ಲಾಕ್‌ಬೆರಿ ಉಪಯೋಗಿಸುವಲ್ಲಿ ನೆರವಾಗಬಹುದು ಅಥವಾ ಅದಕ್ಕೆಂದೇ ಹೊಸ ಸ್ನಾಯುಗಳ ಬೆಳವಣಿಗೆಯಾದರೂ ನನಗೇನೂ ಆಶ್ಚರ್ಯವಾಗೋದಿಲ್ಲ.

ಆದರೆ ಇಂದಿನ ಮಕ್ಕಳನ್ನು ನೋಡಿದರೆ ಕಷ್ಟವಿದೆ ಎನ್ನಿಸುತ್ತೆ, ಅವರ ಬದುಕಿನ ಬಗ್ಗೆ ಅನುಕಂಪ ಖಂಡಿತ ಹುಟ್ಟುತ್ತೆ. ನಾವು ಎಂಭತ್ತರ ದಶಕದಲ್ಲಿ ಸಾಗರದಂತಹ ಪಟ್ಟಣಗಳಲ್ಲಿ ಪಿಯುಸಿ ಓದುತ್ತಿರುವಾಗ ನಮ್ಮ ಕ್ಲಾಸಿನಲ್ಲಿ ಒಂದಿಷ್ಟು ’ಮುಂದುವರೆದ’ ಕುಟುಂಬದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಪರೀಕ್ಷೆ ಬರೆದು ಅದರ ಫಲಿತಾಂಶ ಬಂದು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುವ ಮೊದಲೇ ಮನೆಪಾಠಗಳಲ್ಲಿ ವ್ಯವಸ್ಥಿತವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ನನ್ನಂತಹ ಸಾಧಾರಣ ಹಳ್ಳಿಗಾಡಿನ ವಿದ್ಯಾರ್ಥಿಗಿಂತ ಬಹಳಷ್ಟು ಮುಂದಿರುತ್ತಿದ್ದರು. ಅದು ನನಗೆ ಆಗ ಆಶ್ಚರ್ಯ ತರಿಸಿತ್ತು. ಒಂದು ತರಗತಿಯ ಪರೀಕ್ಷೆಗಳು ಮುಗಿದ ಬಳಿಕ ನನ್ನಂತಹವರು ಅಜ್ಜ-ಅಜ್ಜಿಯ ಜೊತೆ ಸ್ನೇಹಿತರ ಜೊತೆ ಬೇಸಿಗೆ ರಜೆ ಕಳೆಯುವ ಸಂದರ್ಭಗಳಲ್ಲಿ ಮುಂದಿನ ತರಗತಿಗಳಾಗಲೀ ಬದುಕಿನ ಬಗ್ಗೆಯಾಗಲೀ ಯೋಚಿಸಿದ್ದಿರಲಾರೆವು, ಆದರೆ ’ಮುಂದುವರೆದ’ ವಿದ್ಯಾರ್ಥಿಗಳ ಜನರೇಷನ್ನ್ ಅಲ್ಲಿ ನಮಗೆ ವಿಶೇಷವಾಗಿತ್ತು, ಅದರಲ್ಲೂ ನಾವು ಯಾವ ನಿಟ್ಟಿನಲ್ಲಿ ಆಲೋಚಿಸಿಕೊಂಡರೂ ಅವರ ಎದುರಿಗೆ ನಮ್ಮ ಸ್ಪರ್ಧೆ ನೀರಸವಾಗುತ್ತಿತ್ತು. ಇಂದಿನ ಮಕ್ಕಳಿಗೆ ಎಲಿಮೆಂಟರಿ (ಪ್ರಾಥಮಿಕ) ಹಂತದಲ್ಲೆ ಮನೆ-ಪಾಠ (ಪೈವೇಟ್ ಟ್ಯೂಷನ್) ಆರಂಭವಾಗುತ್ತದೆ ಎಂದು ಕೇಳಿದಾಗ, ಅದರ ಬಗ್ಗೆ (ವಿರುದ್ಧವಾಗಿ) ಬೇಕಂತಲೇ ವಾದ ಮಾಡಿದಾಗ ನನ್ನನ್ನು ಮೃಗಾಲಯದ ಪ್ರಾಣಿಯನ್ನು ನೋಡುವ ಹಾಗೆ ಜನರು ನೋಡುವುದನ್ನು ನೆನಪಿಸಿಕೊಳ್ಳುತ್ತೇನೆ. ಅದಕ್ಕೇ ಹೇಳಿದ್ದು ಇಂದಿನ ಮಕ್ಕಳ ಬದುಕು ಕಷ್ಟ ಎಂದು. ನಮ್ಮ ಸರ್ವತೋಮುಖ ಬೆಳವಣಿಗೆ ಎನ್ನುವುದನ್ನು ಅದೆಷ್ಟರ ಮಟ್ಟಿಗೆ ಇಂದಿನ ಸ್ಪರ್ಧಾತ್ಮಕ ವ್ಯವಸ್ಥೆ ಆಧರಿಸುತ್ತದೆ ಎನ್ನುವುದು ಈ ಹೊತ್ತಿನ ಪ್ರಶ್ನೆ - ಅದರ ಬೆನ್ನ ಹಿಂದೆ ಹುಟ್ಟುತ್ತಿರುವುದೇ ಈ ಹೊತ್ತಿನ ತತ್ವ!

ನನ್ನ ಬೆಳವಣಿಗೆ ಹೇಗೇ ಇರಲಿ ಇಂದಿನ ಬದುಕು ಯಾವ ರೀತಿಯಲ್ಲೇ ಇರಲಿ, ನನ್ನ ಬಾಲ್ಯವನ್ನು ಮಾತ್ರ ನಾನು ಯಾವಾಗಲೂ ಬೆಂಬಲಿಸುತ್ತೇನೆ. ನನ್ನ ಮಕ್ಕಳನ್ನು ಇಂದಿಗೆ ಹೋಲುವ ಹಾಗೆ ಅದೇ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆಸುವ ಹಾಗಿದ್ದರೆ ಎಂದು ಯೋಚಿಸುತ್ತೇನೆ. ನಮ್ಮ ನಡುವೆ ಇದ್ದ ಅವಿಭಕ್ತ ಕುಟುಂಬದ ವ್ಯವಸ್ಥೆಯ ಬೆನ್ನೆಲುಬಿನ ಮೇಲೆ ನಿಂತಿದ್ದ ನೀರು-ನಿಡಿ, ಪರಿಸರ-ನೆರೆಹೊರೆ, ನೆಂಟರು-ಇಷ್ಟರು, ಊರು-ಬಳಗ, ಸಂಪ್ರದಾಯ ಮೊದಲಾದವುಗಳನ್ನು ಇಂದಿನ ಮಕ್ಕಳ ಮನಸ್ಸಿಗೆ ಹೇಗೆ ಅನ್ವಯಿಸಬಹುದು ಎಂದು ಚಿಂತಿಸುತ್ತೇನೆ. ಮಕ್ಕಳು ಒಳ್ಳೆಯ ಶಾಲೆಗೆ ಸೇರಿವುದರಿಂದ ಹಿಡಿದು, ಒಳ್ಳೆಯ ಗ್ರೇಡು-ಮಾರ್ಕ್ಸ್‌ಗಳನ್ನು ಪಡೆಯುವವರೆಗೆ, ಅವರಿಗೆ ತಕ್ಕ/ಒಪ್ಪುವ/ದಕ್ಕುವ ಶಿಕ್ಷಣವನ್ನು ಆಧರಿಸುವವರೆಗೆ, ಮುಂದೆ ಉದ್ಯೋಗವನ್ನು ಕಂಡುಕೊಳ್ಳುವವರೆಗೆ, ಸಂಸಾರ ನಡೆಸಿಕೊಂಡು ಹೋಗುವವರೆಗೆ ಎಲ್ಲೆಲ್ಲಿ ನಮ್ಮ ಇನ್‌ಫ್ಲುಯೆನ್ಸ್‌ಗಳು ನಡೆಯುತ್ತವೆ ಎಂದು ಕೊರಗುತ್ತೇನೆ. ಮನೆ-ಪಾಠ, ಕೋಚಿಂಗ್ ಮೊದಲಾದವುಗಳನ್ನು ಕೊಟ್ಟು ಇವರನ್ನು ನಾವು ಮುಂದಿನ ಬದುಕಿಗೆ ತಯಾರು ಮಾಡುವುದು ನಮ್ಮ ಕೈಯಲ್ಲಿದೆಯೋ, ಅಥವಾ ಅವರೇ ತಮ್ಮ ತಮ್ಮ ದಾರಿ/ಗುರಿಯನ್ನು ರೂಪಿಸಿಕೊಳ್ಳುತ್ತಾರೋ, ನಮ್ಮ ಪೋಷಕರು ನಮ್ಮನ್ನು ಬೆಳೆಸಿದ ರೀತಿಯಲ್ಲಿ ನಾವು ಇವರನ್ನು ಬೆಳೆಸಲಾಗದಿದ್ದ ಮೇಲೆ ಇವರನ್ನು ನಾವು ಬೆಳೆಸುವ ರೀತಿಯೇ ಸರಿಯೆಂದು ನಮಗೆ ಗೊತ್ತಾಗುವುದು ಹೇಗೆ ಮತ್ತು ಎಂದು?

Sunday, April 27, 2008

ನಮ್ಮ ನಡುವಿನ ಸಂಬಂಧ-ಸೂಕ್ಷ್ಮತೆ

ನನ್ನ ಸ್ನೇಹಿತ, ಸಹೋದ್ಯೋಗಿಯಾಗಿದ್ದವನು ಇಂದು ಕರೆ ಮಾಡಿ ಏನೋ ಹೊಸ ಸುದ್ದಿಯನ್ನು ಹೇಳುತ್ತಾನೆ ಅಂದುಕೊಂಡರೆ ನನಗೆ ಖಂಡಿತವಾಗಿ ಆಶ್ಚರ್ಯ ಕಾದಿತ್ತು. ಆತನ ಮಾತನ್ನು ಕೇಳಿದ ಮೇಲೆ ಮಾನವ ಸಂಬಂಧಗಳನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುವಂತೆ ಆಗಿದ್ದು ನಿಜ. ಒಮ್ಮೆ ಆ ಮಟ್ಟಿಗಿನ ವೈರಾಗ್ಯ ನನ್ನನ್ನು ಹಾಗೆ ಆಲೋಚಿಸುವಂತೆ ಸ್ಪೂರ್ತಿ ನೀಡಿದ್ದಿರಬಹುದು, ಅಥವಾ ಪ್ರತಿಯೊಂದನ್ನು ಸೂಕ್ಷ್ಮವಾಗಿ ಅವಲೋಕಿಸುವ ನನ್ನ ರೀತಿ ಹಾಗೆಯೇ ಇರಬಹುದು.

ಈಗ್ಗೆ ಕಳೆದ ಹದಿನಾರು ವರ್ಷಗಳಿಂದ ಅಮೇರಿಕದಲ್ಲಿ ನೆಲೆಸಿ ಕಳೆದು ಹನ್ನೊಂದು ವರ್ಷಗಳ ವೈವಾಹಿಕ ಜೀವನದಲ್ಲಿ ಮುದ್ದಾದ ಎರಡು ಮಕ್ಕಳನ್ನು ಪಡೆದ ನನ್ನ ಸ್ನೇಹಿತನ ಬದುಕು ಗಂಭೀರವಾಗಿದೆಯಂತೆ. ಆತನ ಹೆಂಡತಿ ಇದ್ದಕ್ಕಿದ್ದಂತೆ ಕಳೆದೊಂದು ವಾರದಲ್ಲಿ ಮಾತಿಗೆ ಮಾತು ಬೆಳೆಸಿ ತನ್ನ ಮಕ್ಕಳನ್ನು ಕರೆದುಕೊಂಡು ಇನ್ನೊಮ್ಮೆ ಬರುವುದಿಲ್ಲ ಎಂದುಕೊಂಡು ಒನ್ ವೇ ಟಿಕೇಟ್ ತೆಗೆದುಕೊಂಡು ಹೋಗಿದ್ದಾಳಂತೆ. ಮೊದಲಿನಿಂದಲೂ ಎರಡೂ ಮನೆಯವರಿಗೂ ಸಂಬಂಧಗಳಲ್ಲಿ ಅಷ್ಟೊಂದು ವಿಶ್ವಾಸವಿರಲಿಲ್ಲವೆಂದೂ ಯಾವಾಗಲೂ ಗಂಡ-ಹೆಂಡತಿಯರ ನಡುವೆ ಜಗಳವಿತ್ತೆಂದೂ, ಎಷ್ಟೋ ಸಾರಿ ಜಗಳ ತಾರಕಕ್ಕೇರಿ ವಿಚ್ಛೇದನದ ಮಾತಿನವರೆಗೂ ಹೋಗಿದೆ ಎಂದು ತಿಳಿದು ನನಗಂತೂ ಏನೂ ಹೇಳಲು ತೋಚದಂತಾಯಿತು.

***

ಇಂದಿನ ಯುಗದಲ್ಲಿ ನಮ್ಮ ನಮ್ಮ ನಡುವಿನ ಕಮ್ಮ್ಯುನಿಕೇಷನ್‌ಗೆ ಆದ್ಯತೆ ಕೊಡುವ ಕಾಲ, ನಮ್ಮ ಅಂತರಾಳದ ಸಂವಹನಕ್ಕೆ ಬೇಕಾದ ಸೂತ್ರಗಳಿವೆ, ಉಪಕರಣಗಳಿವೆ. ಹೀಗೆಲ್ಲ ಇರುವಾಗಲೇ ನಾನು ಗಂಡ-ಹೆಂಡತಿ ನಡುವೆ ಆಗಿ ಹೋಗದ ಮಾತುಗಳನ್ನೋ ಅಥವಾ ಹೆಚ್ಚು ವಿಚ್ಛೇದನದ ವಿಷಯವನ್ನೋ ಅಲ್ಲಲ್ಲಿ ಸುದ್ಧಿ-ವಿಚಾರವಾಗಿ ಕೇಳೋದೇ ಹೆಚ್ಚು. ಅಂದರೆ ಹಿಂದಿನ ಕಾಲದವರು ಕಷ್ಟವೋ-ಸುಖವೋ ಹೊಂದಿಕೊಂಡಿರುತ್ತಿದ್ದರೋ ಅಥವಾ ಅವರ ರಾದ್ಧಾಂತಗಳು ಹೊರಗೆ ಬರುತ್ತಿರಲಿಲ್ಲವೋ, ಅಥವಾ ಇಂದಿನವರ ಸವಾಲಿಗೂ ಅಂದಿನವರ ಸವಾಲಿಗೂ ವ್ಯತ್ಯಾಸವಿದೆಯೋ, ಅಥವಾ ಇವೆಲ್ಲ ನಿಜವೋ ಎನ್ನುವ ಆಲೋಚನೆ ಸಹಜವಾಗೇ ಬರುತ್ತದೆ. ಅದೂ ಇತ್ತೀಚಿನ ಗಂಡ-ಹೆಂಡತಿ ಇಬ್ಬರೂ ದುಡಿದು ಬರುವ ನ್ಯೂಕ್ಲಿಯರ್ ಕುಟುಂಬಗಳಲ್ಲಿ ಮಕ್ಕಳಿರಲಿ ಬಿಡಲಿ ಮನೆಯ ಹಿರಿಯ ಅಥವಾ ಯಜಮಾನರಾಗಿ ಅವರೇ ಎಲ್ಲ ಜವಾಬ್ದಾರಿಯನ್ನು ಹೊತ್ತು ಸಂಸಾರ ರಥವನ್ನು ನಡೆಸುವ ಕಾಯಕವನ್ನು ಅನುಸರಿಸುತ್ತಿರುವಾಗ ಸಂಬಂಧಗಳ ಹೆಣಿಕೆಯಲ್ಲಿ ಒಂದು ಚೂರು ಊನವಾದರೂ ಸಂಸಾರ ರಥಕ್ಕೆ ಸಂಚಕಾರ ಬಂದಂತೆಯೇ ಎಂದು ಎಷ್ಟೋ ಸರತಿ ಅನ್ನಿಸಿದ್ದಿದೆ.

ನಾನೇನೂ ಹೇಳೋದಿಲ್ಲ, ಹೇಳೋದಕ್ಕೆ ಉಳಿದಿರೋಲ್ಲ ಬಿಡಿ. ಈ ಸಂಸಾರ ತಾಪತ್ರಯದ ಒಡಕಲಿನ ವಿಷಯ ನನ್ನ ಕಿವಿಗೆ ಬೀಳುವ ಹೊತ್ತಿಗೆ ಆಗಬೇಕಾದ್ದದೆಲ್ಲ ಆಗಿ ಹೋಗಿರುತ್ತದೆ. ಗಂಡ-ಹೆಂಡತಿ ಇಬ್ಬರೂ ನನಗೆ ಪರಿಚಿತರೇ ಆದ ಸಂದರ್ಭಗಳಲ್ಲಿ ನಾವು ಯಾರೊಬ್ಬರ ಪರವನ್ನು ವಹಿಸಿ ಮಾತನಾಡುವುದು ತಪ್ಪಾದೀತು - ಬೆಂಕಿ ಇಲ್ಲದೇ ಹೊಗೆ ಬಾರದು ಎನ್ನುವಂತೆ ಏನೋ ಕ್ಷುಲ್ಲಕ ಕಾರಣ ಇದ್ದು ಅದು ದೊಡ್ಡ ಹೆಮ್ಮರವಾಗಿ ಬೆಳೆಯುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.

***

ಇಂದಿನ ಗಂಡ-ಹೆಂಡತಿ ಸಂಬಂಧವೆಂದರೆ ಸಾವಿರದ ಒಂಭೈನೂರ ಐವತ್ತರ ಸಮಯದ ಸಂಬಂಧಗಳ ಹಾಗೆ ಇರಬೇಕಾಗಿಲ್ಲ. ಗಂಡ ಉಂಡಾದ ನಂತರವೇ ಹೆಂಡತಿ ಊಟ ಮಾಡುವುದು ಎಂಬ ಕಾನೂನನ್ನು ತಲೆ ಸರಿ ಇರುವ ಯಾರೂ ಪಾಲಿಸಿಕೊಂಡು ಹೋಗಲಾರರು. ಆದರೆ ಗಂಡ-ಹೆಂಡತಿಯ ನಡುವೆ ವ್ಯತ್ಯಾಸವಿದ್ದಿರಲೇ ಬೇಕು, ಹಾಗಿದ್ದಾಗಲೇ ಚೆನ್ನು, ಆ ವ್ಯತ್ಯಾಸವನ್ನು ಆ ಕುಟುಂಬದ ಏಳಿಗೆಗೆ ಬಳಸದೇ ಅದನ್ನು ವಾದದ ಬೆಂಕಿಗೆ ಇಂಬುಕೊಡುವ ತುಪ್ಪವನ್ನಾಗಿ ಸುರಿದು ಮಾತಿಗೆ ಮಾತು ಬೆಳೆಸಿ ಕೋರ್ಟು ಕಛೇರಿ ಹತ್ತುವುದು ಆಯಾ ವ್ಯಕ್ತಿಯ ಹಿನ್ನೆಲೆಯಲ್ಲಿ ಸುಲಭವಾಗಿ ಕಾಣಿಸಿದರೂ ಇಡೀ ಕುಟುಂಬದ ಹಂದರಕ್ಕೆ ಅದರಿಂದ ಸಂಚಕಾರ ಬರುತ್ತದೆ. ಭಾರತದಲ್ಲೂ ಸಹ ಗಂಡ-ಹೆಂಡತಿ ಅಮೇರಿಕನ್ ಶೈಲಿಯಲ್ಲಿ ಮಕ್ಕಳನ್ನು ವಾರಾಂತ್ಯದಲ್ಲಿ ಕಷ್ಟಡಿಗೆ ತೆಗೆದುಕೊಂಡು ಸಾಕುತ್ತಾರೆ ಎನ್ನುವುದನ್ನು ಕೇಳಿದ ಮೇಲೆ ಎಲ್ಲೋ ನಮ್ಮ ಸಂಸ್ಕೃತಿಗೆ ವಿದೇಶಿ ಶಿಫಾರಸ್ಸು ಹೆಚ್ಚಾಗಿಯೇ ಸಿಕ್ಕಿದೆಯೆಂದು ಅರ್ಥವಾಯಿತು. ಮೊದಲೆಲ್ಲಾ ಹೇಗಿತ್ತೋ ಗೊತ್ತಿಲ್ಲ, ಆದರೆ ನಾನು ಭಾರತದಲ್ಲಿ ಮಕ್ಕಳನ್ನು ಕಷ್ಟಡಿಗೆ ತೆಗೆದುಕೊಂಡು ಸಾಕುವುದನ್ನು ಕೇಳಿದ್ದು ಇಂದೇ ಮೊದಲು.

ಯಾವುದು ಎಲ್ಲಿ ತಪ್ಪಿತೋ ಎಂದು ಸೋಜಿಗ ಪಡುವ ಸಮಯವೋ, ಆದದ್ದಾಗಲಿ ಮುಂದಿನದು ಮುಖ್ಯ ಎನ್ನುವ ಧೋರಣೆಯನ್ನು ಬಿಗಿದಪ್ಪುವ ನಿಲುವೋ, ಈ ಸಂಬಂಧಗಳ ಗೊಂದಲವೇ ಬೇಡ ಎನ್ನುವ ಹಣಾಹಣಿಯೋ ಮತ್ತೊಂದೋ ತಪ್ಪಿದ್ದಲ್ಲ. ಅದು ಬದುಕು, ಅದೇ ಅದರ ನಿಯಮ ಹಾಗೋ ಅದರಲ್ಲಿರುವ ಸೂಕ್ಷ್ಮತೆಯ ಒಂದಲ್ಲ ಒಂದು ರೀತಿಯಲ್ಲಿ ನಾವು ಯೋಚಿಸುವುದು ನಮಗೆ ಅಂಟಿದ ಕಾಯಕ ಎಂದರೆ ತಪ್ಪೇನಿಲ್ಲ.