ಈ ವೈರಸ್ ಹಾವಳಿ ಜನವರಿಯಲ್ಲಿ ಎಲ್ಲ ಕಡೆಗೆ ಹಬ್ಬುತ್ತಿದ್ದಂತೆ ಅನೇಕ ಸಿದ್ಧಾಂತಗಳು (theories) ಹುಟ್ಟಿದವು, ಕೆಲವು ಮರು ಹುಟ್ಟು ಪಡೆದವು. ವುಹಾನ್ ನಗರ (ಹುಬೈ ಪ್ರಾಂತ್ಯ) ಸಂಪೂರ್ಣವಾಗಿ ಮುಚ್ಚಿದ ನಂತರ, ಚೈನಾಕ್ಕೆ ಹೋಗುವ ಚೈನಾದಿಂದ ಬರುವ ಎಲ್ಲ ಪ್ರಯಾಣಿಕರು ಕಡಿಮೆಯಾದ ಮೇಲೆ, ಇಡೀ ವಿಶ್ವವೇ ಚೈನಾದ ಬೆಳವಣಿಗೆಗಳನ್ನು ಬಿಟ್ಟ ಕಣ್ಣು ಮಿಟುಕಿಸದೆ ನೋಡತೊಡಗಿತು. ಒಂದಿಷ್ಟು ಜನ (ರಾಷ್ಟ್ರಗಳು) ತಮ್ಮ ದೇಶಕ್ಕೆ ಈ ವೈರಸ್ಸಿನಿಂದ ತೊಂದರೆಯಾದೀತೆಂದು ಮುಂಜಾಗರೂಕತೆ ಕ್ರಮವನ್ನು ಕೈಗೊಂಡರು. ಮತ್ತಿನ್ನೊಂದಿಷ್ಟು ಜನ ಆ ನಿಟ್ಟಿನಲ್ಲಿ ತಮ್ಮ ನಿರ್ಧಾರಗಳನ್ನು ಪ್ರಕಟಿಸುವಾಗ ವಿಳಂಬದಿಂದಾಗಿ ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗಿ ಬಂತು. ಈಗ ಕಳೆದ ಆರೇಳು ವಾರಗಳಿಂದ (ಮಾರ್ಚ್ ೧ ರಿಂದ ಏಪ್ರಿಲ್ ೭ ರವರೆಗೆ) ಕರೋನಾ ವೈರಸ್ (covid-19) ನಮ್ಮ ಜನ ಜೀವನದಲ್ಲಿ ನೆಲೆ ನಿಂತಿದೆ. ಇನ್ನೂ ಎರಡು ತಲೆ ಮಾರುಗಳಿಗಾಗುವಷ್ಟು ನಮಗೆಲ್ಲ ಪಾಠವನ್ನು ಕಲಿಸಿದೆ.
ಈ ಶತಮಾನದ ದೊಡ್ಡ ದುರಂತ, ಮಹಾವ್ಯಾಧಿ, ಸೋಂಕು, ಸಾಂಕ್ರಾಮಿಕ ರೋಗ, ಶಾಪ - ಇನ್ನೂ ಮೊದಲಾದ ಹೆಸರಿನಿಂದ ಕರೆಸಿಕೊಂಡು ತನ್ನ ಪರಿಣಾಮವನ್ನು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದುಕೊಂಡು, ಇನ್ನು ಇನ್ನೂರೈವತ್ತು ವರ್ಷವಾದರೂ, 2020ರ ಈ ಅನುಭವವನ್ನು ಜನರು ತಮ್ಮ ಹಾಡು-ಹಸೆಗಳಲ್ಲಿ ಮೆಲುಕುಹಾಕುವಂತೆ ಮಾಡುವ, ಚೈನಾದಿಂದ ಆರಂಭಿಸಿದ ಈ ಪ್ರಭಾವಿ ವೈರಸ್ಸಿನ ಅಭಿಯಾನವನ್ನು ಮಾನವ ನಿರ್ಮಿತ (ಕುತಂತ್ರ) ಎನ್ನೋಣವೋ ಅಥವಾ ಮಾನವನಿಗೆ ಮೀರಿದ (ಅತಂತ್ರ)ವೆಂದು ಕರೆಯೋಣವೋ? ಈಗ ನಮಗೆ ಲಭ್ಯವಿರುವ ವಿಚಾರಗಳ ವಿನಿಮಯವೇ ಈ ಬರಹ. ಕುತಂತ್ರವೋ-ಅತಂತ್ರವೋ ಎನ್ನುವ ತೀರ್ಮಾನ ನಿಮ್ಮದು!
***
ಅತಂತ್ರ: ಚೈನಾದವರು ಬಹುಪ್ರಾಣಿ ಭಕ್ಷಕರು - ಒಂದು ರೀತಿಯಲ್ಲಿ ಮಾಂಸ ಪ್ರಿಯರು, ಅದರಲ್ಲೂ ಅನೇಕ ಕಾಡು ಪ್ರಾಣಿಗಳನ್ನು ಫಾರ್ಮ್‌ಗಳಲ್ಲಿ ವ್ಯವಸ್ಥಿತವಾಗಿ ಅವುಗಳನ್ನು ಬೆಳೆಸಿ ತಮ್ಮ exotic cuisine ನಲ್ಲಿ ಬಳಸುವವರು. ಚಿಕ್ಕ ಇರುವೆಗಳಿಂದ ಹಿಡಿದು, ಹಾರುವ ಬಾವುಲಿಯವರೆಗೆ, ಮೀನುಗಳಿಂದ ಹಿಡಿದು ಸರೀಸೃಪಗಳವರೆಗೆ (ಇವರು ಮನುಷ್ಯರನ್ನು ಮಾತ್ರ ತಿಂದ ನಿದರ್ಶನಗಳು ಸಿಗವು), ಅಂದರೆ ಉಳಿದೆಲ್ಲ ಜೀವಿಗಳು ಮಿಲಿಯನ್ನುಗಟ್ಟಲೆ ಚೈನಾ ದೇಶದ ಜನರ ಉದರವನ್ನು ಪೋಷಿಸಿರುವುದಕ್ಕೆ ಬಹಳ ನಿದರ್ಶನಗಳು ಸಿಕ್ಕಾವು.
ನಾವು ಅಮೇರಿಕದಲ್ಲಿ ಇಂಡಿಯನ್ ಸ್ಟೋರು, ರೆಸ್ಟೋರಂಟುಗಳಿಗೆ ಹೋದಾಗ ಒಂದು ರೀತಿಯ (ಕಮಟು) ವಾಸನೆ ನಮಗೆ ಎದುರಾಗುತ್ತದೆ. ನಾವು ಭಾರತೀಯರಿಗೆ ಅದು ನಮಗೆ ಗೊತ್ತಾಗದಷ್ಟು ಹೊಂದಾಣಿಕೆಯಾಗಿರುತ್ತದೆ. (ನಮ್ಮ ಪಕೋಡಾ ಅಥವಾ ದೋಸೆ ವಾಸನೆ ನಮಗೆ ಪ್ರಿಯವಾಗಿರಬಹುದು, ಆದರೆ, ಅದು ಎಲ್ಲರಿಗೂ ಇಷ್ಟವಾಗಬೇಕು ಎಂದೇನೂ ಇಲ್ಲ). ಅದೇ ರೀತಿ ನಾವು ಕೊರಿಯನ್, ವಿಯಟ್‍ನಾಮೀಸ್, ಚೈನೀಸ್ ಅಂಗಡಿಗಳಿಗೆ ಹೋದಾಗ, ಇನ್ನೊಮ್ಮೆ ಇಲ್ಲಿ ಬರಬಾರದು ಎನ್ನುವಷ್ಟರ ಮಟ್ಟಿಗೆ ಅಲ್ಲಿ ಗಬ್ಬುನಾತ ಹೊಡೆಯುತ್ತಿರುತ್ತದೆ. ಇವರುಗಳು ಜೀವವೈವಿಧ್ಯವನ್ನು ನೋಡುವ ರೀತಿ ನಮಗಿಂತಲೂ ಭಿನ್ನ. ಕೊಳೆಯಾದ ಗಾಜಿನ ಅಕ್ವೇರಿಯಂನಲ್ಲಿ ತುಂಬಿಕೊಂಡು ದಯನೀಯ ಸ್ಥಿತಿಯಲ್ಲಿರುವ ಮೀನುಗಳು, ಏಡಿಗಳು, ಮೊದಲಾದ ಪ್ರಾಣಿಗಳನ್ನು ಅಲ್ಲಿ ನೋಡಿ ಖೇದವೆನಿಸುತ್ತದೆ. ಅದು ಅವರಿಗೆ ಸಹನೀಯವಾದದ್ದು, ಅವರ ಧರ್ಮದಲ್ಲಿ (ಜೀವನಕ್ರಮ) ಅದು ಯಾರಿಗೂ ದೊಡ್ಡದೆನಿಸುವುದಿಲ್ಲ. ಇಂತಹ ಸಂದರ್ಭದಲ್ಲಿ, ಚೈನಾದ ವುಹಾನ್‌ನ ಒಂದು ಮಾರುಕಟ್ಟೆಯಲ್ಲಿ ಒಂದರ ಮೇಲೂಂದು ಹೇರಿಸಿಟ್ಟ ಕೇಜುಗಳಲ್ಲಿ ಒಂದು ಪ್ರಾಣಿಯ ಎಂಜಲು-ಗಲೀಜು ಮತ್ತೊಂದು ಪ್ರಾಣಿಯ ಜೊತೆ ಸಂಘರ್ಷ ಉಂಟಾದಾಗ ಹುಟ್ಟಿದ್ದು ಈ ವಿಭಿನ್ನ ವೈರಸ್ ಎಂದು ಕೆಲವು ಕಡೆ ಹೇಳಲಾಗಿದೆ. ಅದೇ ರೀತಿ ಬಾವುಲಿಗಳನ್ನು (bats) ಕತ್ತರಿಸುವಾಗ ಅದರ ರಕ್ತದಲ್ಲಿ ಇದ್ದ ವೈರಸ್ಸು ಒಬ್ಬರಿಂದ ಮತ್ತೊಬ್ಬರಿಗೆ ತಗುಲು ಬೆಳೆಯಿತು ಎಂದೂ ಹೇಳಲಾಗುತ್ತದೆ.
ಒಮ್ಮೆ ಹೀಗೆ ಜನರಿಂದ ಜನರಿಗೆ ಬೆಳೆದ ವೈರಸ್ಸು ಡಿಸೆಂಬರ್‌ನಲ್ಲಿ ಸುದ್ದಿ ಮಾಡಿದರೂ ಚೈನಾ ಅದನ್ನು ತಕ್ಷಣ ದೊಡ್ಡದು ಮಾಡಲಿಲ್ಲ, ಅದು ಬೆಳೆದು ಪ್ರಕೋಪಕ್ಕೆ ತಿರುಗಿದ ನಂತರ ಎಲ್ಲ ಕಡೆಗೆ ಸುದ್ದಿಯಾಯಿತು. ವುಹಾನ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಯಿತು. ಜನರನ್ನು ಮನೆಗಳಲ್ಲಿ ಅಮಾನವೀಯ ರೀತಿಯಲ್ಲಿ ಕೂಡಿ ಹಾಕಲಾಯಿತು. ಇದು ಅವರ ಅತಂತ್ರ ಸ್ಥಿತಿಗೆ ಹಿಡಿದ ಕನ್ನಡಿ. ಕೊನೆಗೆ ಕಡಿಮೆ ಸಾವುಗಳನ್ನು ದಾಖಲಿಸಿ (ಸೋಂಕು ತಗುಲಿದವರ ಮತ್ತು ಸತ್ತವರ percentage ಪ್ರಕಾರ ನೋಡಿದರೆ), ಈಗ ಏನೂ ಆಗೇ ಇಲ್ಲವೆನ್ನುವಂತೆ ಮೊದಲೇ expression ಇರದ ಮುಖಗಳು ಈಗಂತೂ ಮುಖ ಗಂಟು ಹಾಕಿಕೊಂಡ ಹಾಗೆ ಎಲ್ಲ ಕಡೆ ಕಂಡು ಬರುತ್ತದೆ.
ಕಳೆದ ಹತ್ತು ವರ್ಷಗಳಲ್ಲಿ ಸಾರ್ಸ್, H1-N1, ಹಕ್ಕಿ ಜ್ವರ ಮೊದಲಾದವುಗಳಿಂದ ಪೂರ್ವೋತ್ತರ ದೇಶಗಳು ಬಳಲಿದ್ದವು, ಅದರಿಂದಾಗಿ ಈ ಕೋವಿಡ್-19 ಅನ್ನು ಎದುರಿಸಲು ಅವೆಲ್ಲ ದೇಶಗಳು ಪರೋಕ್ಷವಾಗಿ ತಯಾರಾಗಿದ್ದವು. ಆದರೆ, ಕೆಲವು ಯೂರೋಪಿಯನ್ ದೇಶಗಳು ಮತ್ತು ಅಮೇರಿಕದಲ್ಲಿ ಈ ರೀತಿ ಹಿಂದೆಂದೂ ಆಗಿರದ ಕಾರಣದಿಂದ, ಮೊಟ್ಟ ಮೊದಲನೇ ಬಾರಿಗೆ ಇಲ್ಲಿಯ ಜನ (ಈ ಪ್ರಮಾಣದಲ್ಲಿ) ಸಂಕಷ್ಟವನ್ನು ಅನುಭವಿಸಬೇಕಾಗಿ ಬಂತು ಎನ್ನುವುದು ಅನೇಕರ ಅಂಬೋಣ.
***
ಕುತಂತ್ರ: ಚೈನಾದವರು ಮಹಾ ಬುದ್ದಿವಂತರು. ವುಹಾನ್ ಹತ್ತಿರದ ತಮ್ಮ ಮಿಲಿಟರಿ ಲ್ಯಾಬೋರೇಟರಿ ಒಂದರಲ್ಲಿ ಈ ಹೊಸ ವೈರಸ್ಸನ್ನು ಸೃಷ್ಟಿಸಿ ಜಗತ್ತಿಗೇ ಬಿಡುಗಡೆ ಮಾಡಿ ಜಗತ್ತನ್ನು ಆಳುವ ಯೋಚನೆ ಹೊಂದಿದ್ದರು. ಅಥವಾ ಲ್ಯಾಬ್‍ನಲ್ಲಿದ್ದ ವೈರಸ್ಸು ಯಾರದ್ದೋ ತಪ್ಪಿನಿಂದ ಹೊರಗೆ ಬಂದಿತೆಂದು ಅನೇಕ ಕಡೆ ಓದಲು ಸಿಗುತ್ತದೆ. ಹಾಗಾಗಿ, ಹುಬೈ ಪ್ರಾಂತ್ಯದಲ್ಲಿ ಮೊದಲು ಇದರ ಪರಿಚಯವಾಯಿತು. ಆದರೆ, ಇದರ ಪರಿಣಾಮ ಉಳಿದ ರಾಜ್ಯಗಳ ಮೇಲೆ ಅಷ್ಟೊಂದು ಆಗಲಿಲ್ಲ.
ನೀವೇ ಯೋಚಿಸಿ: ವುಹಾನ್ ನಿಂದ ಇಂಟರ್‌ನ್ಯಾಷನಲ್ ಪ್ರಯಾಣಿಕರ ಮುಖೇನ ಅನೇಕ ದೇಶಗಳಿಗೆ ಈ ಕೊರೋನಾ ವೈರಸ್ ಹರಡಿರುವಾಗ, ಆಂತರಿಕ ಚೈನಾದೊಳಗೇ ಇದು ಬೇರೆ ಕಡೆ ಏಕೆ ಹಬ್ಬಲಿಲ್ಲ? ಚೈನಾದ ಅಂಕಿ-ಅಂಶಗಳನ್ನು ನಂಬಬೇಕೋ ಬಿಡಬೇಕೋ ಗೊತ್ತಿಲ್ಲ, ಆದರೂ ಅವರು ಹೇಳುವ ಹಾಗೆ ಬರೀ ಹುಬೈ ಪ್ರಾಂತ್ಯದಲ್ಲಿ ಮಾತ್ರ ಸಾವುಗಳಾಗಿವೆಯೇ? ಒಂದೂವರೆ ಬಿಲಿಯನ್‌ನಷ್ಟು ಜನರಿರುವ ಚೈನಾದಲ್ಲಿ (ಈ ಲೇಖನ ಬರೆಯುವ ಹೊತ್ತಿಗೆ) ಕೇವಲ 81,802 ಜನರಿಗೆ ಸೋಂಕು ತಗಲಿದ್ದು, ಅವರಲ್ಲಿ ಕೇವಲ 3,333 ಜನರು ಮಾತ್ರ ಸಾವಿಗೆ ಈಡಾಗಿದ್ದಾರೆ ಎಂದರೆ ಹೇಗೆ ನಂಬುವುದು. ಸೋಂಕು ತಗುಲಿದವರ ಸಂಖ್ಯೆಯಲ್ಲಿ (330 ಮಿಲಿಯನ್ ಜನರಿರುವ) ಅಮೇರಿಕ 396,981 ಒಟ್ಟು ಕೇಸುಗಳನ್ನು ದಾಖಲಿಸಿ ಅವರಲ್ಲಿ 12,758 ಜನರು ಮರಣ ಹೊಂದಿರುವುದನ್ನು ಪ್ರಕಟಿಸಿರುವುದನ್ನು ನೀವೇ ನೋಡಬಹುದು. ಅಲ್ಲದೇ ಒಂದೂವರೆ ಬಿಲಿಯನ್ ಜನರಿರುವ ಚೈನಾ ಇವತ್ತಿಗೆ ಒಟ್ಟು ಕೇಸುಗಳಲ್ಲಿ ಉಳಿದ ರಾಷ್ಟ್ರಗಳಿಗೆ ಹೋಲಿಸಿದಾಗ ಐದನೇ ಸ್ಥಾನಕ್ಕೆ ಇಳಿದಿರುವುದನ್ನೂ ನೋಡಬಹುದು.
Image 1: COVID-19 World view (April 07, 2020 at 9:23 PM ET)
Image 2: COVID-19 China view (April 07, 2020 at 9:23 PM ET)
ಇನ್ನು ಎರಡನೆಯ ಚಿತ್ರದಲ್ಲಿ, ಹುಬೈ ಪ್ರಾಂತ್ಯದ ಒಟ್ಟು ಕೇಸುಗಳು 67,803. ಉಳಿದ 30 ರಾಜ್ಯಗಳಲ್ಲಿ ಉಳಿದ ಹದಿಮೂರು ಸಾವಿರ ಕೇಸುಗಳು ಚದುರಿರುವುದನ್ನು ಕೂಡ ಕಾಣಬಹುದು.
ಈ ಅಂಕಿ-ಅಂಶಗಳ ಪ್ರಕಾರ, ಚೈನಾದವರು ಬರೀ ಇಂಟರ್‌ನ್ಯಾಷನಲ್ ಪ್ರಯಾಣಿಕರೆಂದೋ ಅಥವಾ ಅವರ ಪ್ಯಾಕೇಜು/ಪಾರ್ಸೆಲ್ಲುಗಳ ಮೂಲಕ ಪ್ರಪಂಚದಾದ್ಯಂತ ಕೋವಿಡ್ ಹರಡಿತೆಂದು ಊಹಿಸಬಹುದು. ಇಲ್ಲವೆಂದರೆ, ಅವರ ನಂಬರುಗಳು ಖಂಡಿತ ನಂಬಲರ್ಹವಲ್ಲದವು. ಉದಾಹರಣೆಗೆ, ಹುಬೈ ಪ್ರಾಂತ್ಯದಿಂದ ಚೈನಾದ ಉಳಿದ ದೊಡ್ಡ ನಗರಗಳಿಗೆ ಜನರು ಹೋಗೇ ಇಲ್ಲವೇ? ನಮ್ಮ ನ್ಯೂ ಯಾರ್ಕ್ ನಗರದಲ್ಲಿ ಇಷ್ಟೊಂದು ಜನರು ಬಳಲುತ್ತಿರುವಾಗ ಚೈನಾದ ನಗರಗಳು ನಿರಾತಂಕವಾಗಿರಲು ಕಾರಣವೇನು?
***
ಇದು ಚೈನಾದವರ ಅತಂತ್ರವೋ, ಕುತಂತ್ರವೋ... ಅದನ್ನು ನಿಮ್ಮ ತೀರ್ಮಾನ, ಅಭಿಪ್ರಾಯಗಳಿಗೇ ಬಿಡೋಣ. ಆದರೆ, ಇಷ್ಟಂತೂ ಖಂಡಿತ: ಇದರಿಂದಾಗಿ/ಇವರಿಂದಾಗಿ ವಿಶ್ವದಾದ್ಯಂತ ಅನೇಕ ವ್ಯಾಪಾರ ವಹಿವಾಟುಗಳು ನೆಲಕಚ್ಚಿದವು. ಅನೇಕರ ರಿಟೈರ್‌ಮೆಂಟ್ ಹಣ ಕೆಲವೇ ವಾರಗಳಲ್ಲಿ ಮಾಯವಾಯಿತು. ಎಷ್ಟೋ ಜನರು ಹಸಿವಿನಿಂದ ಬಳಲುವಂತಾಯ್ತು. ನಾವು ಇನ್ನಾರು ವಾರಗಳಲ್ಲಿ ಹೊರಗೆ ಹೊರಟರೂ ನಮ್ಮ ಅರ್ಥ ವ್ಯವಸ್ಥೆ ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಕೆಲವೇ ವರ್ಷಗಳೇ ಬೇಕಾಗುತ್ತದೆ.
ಇದು ಮಾನವನ ದೌರ್ಜ್ಯನ್ಯಕ್ಕೆ ನಿಸರ್ಗ ಕೊಟ್ಟ ಪೆಟ್ಟು ಎಂದು ಒಂದಿಷ್ಟು ಜನ ನಂಬಿಕೊಂಡಿದ್ದಾರೆ, ಇನ್ನು ಕೆಲವರು ಇದು ಮಾನವ ನಿರ್ಮಿತ ಹೊಗೆ ಬರದ ನ್ಯೂಕ್ಲಿಯರ್ ಬಾಂಬು ಎಂದು ಚೈನಾದವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ!