ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಧನ
ತೀರಿಸುವೆನೆ ಅದರ ಋಣ
ಈ ಒಂದೇ ಜನ್ಮದಿ|
ನೂರು ಬಣ್ಣ ವೇಷ ಕಲೆ
ಸ್ವಚ್ಛಂದದ ಹಕ್ಕಿಗಳೆ
ನಮ್ಮ ಹಾಡು ಬದುಕಲು|
ನಮ್ಮ ದೇಶದಲ್ಲಿ ಒಂದು ಕೋಮಿನವರು ವೈರಸ್ ಸೋಂಕನ್ನು ಉದ್ದೇಶ ಪೂರ್ವಕವಾಗಿ ಹರಡುತ್ತಿದ್ದಾರೆ... ಇಡೀ ಪ್ರಪಂಚವೇ ವೈರಸ್ ದೆಸೆಯಿಂದ ನಲುಗುತ್ತಿದ್ದರೆ ಅದನ್ನು ಕೆಲವರು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ... ನಮ್ಮ ಯುವಕ-ಯುವತಿಯರು ಪಾಕಿಸ್ತಾನಕ್ಕೆ ಜೈಕಾರ ಹಾಕುವುದನ್ನು ತಮ್ಮ ಹಕ್ಕು ಎಂದುಕೊಂಡಿದ್ದಾರೆ... ಎಂದೆಲ್ಲ ಮಾಧ್ಯಮಗಳಲ್ಲಿ ಓದಿದಾಗ ಚೆನ್ನವೀರ ಕಣವಿಯವರ ಈ ಹಾಡು ನೆನಪಿಗೆ ಬಂತು. ಇನ್ನೂ ಕೇವಲ ಎಪ್ಪತ್ತಮೂರು ವರ್ಷಗಳನ್ನು ಕಳೆದ ನಮ್ಮ "ಸ್ವಾತಂತ್ರ್ಯ" ನಮ್ಮನ್ನು ಈ ಸ್ಥಿತಿಗೆ ತಂದಿದೆ. ಇನ್ನೊಂದಿನ್ನೂರು ವರ್ಷಗಳಲ್ಲಿ ನಮ್ಮ ಯುವ ಜನರ "ದೇಶಭಕ್ತಿ" ಇದೇ ರೀತಿಯಲ್ಲಿ ಮುಂದುವರೆದು, ನಮ್ಮೆಲ್ಲರ ದೇಶ ಪ್ರೇಮ, ವಿಶ್ವಾಸ, ಒಗ್ಗಟ್ಟು, ಭಾವೈಕ್ಯತೆ, ಘನತೆ ಇವೆಲ್ಲವೂ ಏನಾಗಬಹುದು ಎಂದು ಯೋಚಿಸಿದಾಗ ನಿಜವಾಗಿಯೂ ಬೆನ್ನ ಹುರಿಯಲ್ಲಿ ಕಂಪನವಾಯಿತು. ಇಂದಿನ ಯುವಕರೇ ಮುಂದಿನ ಪ್ರಜೆಗಳು, ನಾಳಿನ ಭಾರತದ ಭವಿತವ್ಯರು - ಎಂದೆಲ್ಲ ಯೋಚಿಸಿಕೊಂಡಾಗ ಹೆದರಿಕೆಯ ಜೊತೆಗೆ, ಖೇದವೂ ಒಡಮೂಡಿತು.
***
1947ರ ಸ್ವಾತ್ರಂತ್ರ್ಯ ನಿಜವಾಗಿಯೂ ನಮ್ಮನ್ನು ಒಂದುಗೂಡಿಸಿತೇ? ಬ್ರಿಟೀಷ್ ಮತ್ತು ಇತರ ವಸಾಹತುಶಾಹಿಗಳ ಅಧಿಕಾರ ಅವಧಿ ಇರದೇ ಇರುತ್ತಿದ್ದರೆ ಇಂದಿನ ನಮ್ಮ ಅಖಂಡ ಭಾರತ ಹೇಗಿರುತ್ತಿತ್ತು? ಬ್ರಿಟೀಷರ ಭಾಷೆ ನಮ್ಮನ್ನು ಒಂದುಗೂಡಿಸಿತೇ? ಅವರ ಆಚಾರ-ವಿಚಾರ ಹಾಗೂ ನಡೆವಳಿಕೆಗಳು ನಮ್ಮನ್ನು ಮುಂದುವರೆದವರನ್ನಾಗಿ ಮಾಡಿದವೇ? ಎಪ್ಪತ್ಮೂರು ವರ್ಷಗಳ ಹಿಂದೆ ಸ್ವಾತಂತ್ರ್ಯ ಸಂಗ್ರಾ?ಮದ ಸಮಯದಲ್ಲಿ ಮಾಹಿತಿ ಇರದಿದ್ದರೂ ಕೋಟ್ಯಾಂತರ ಮಂದಿ ಬ್ರಿಟೀಷರ ವಿರುದ್ಧ ಹೋರಾಡಿ ತಂದು ಕೊಟ್ಟ ಈ ಸ್ವಾಂತಂತ್ರ್ಯಕ್ಕೆ ಇಂದು ಅಂಗೈಯಲ್ಲಿ ಮಾಹಿತಿ ಸಿಗುವ ಅನುಕೂಲದ ಸಮಯದಲ್ಲಿ ಯುವ ಜನತೆಯಿಂದ ಅದಕ್ಕೇಕೆ ಕಡಿವಾಣ ಬೀಳುತ್ತಿದೆ? ದೇಶದ ಸಹನೆಯನ್ನೇಕೆ ಕೆಲವರು ಪರೀಕ್ಷಿಸುವಂತಾಗಿದೆ? ನಿಜವಾಗಿಯೂ ನಮ್ಮ ದೇಶದಲ್ಲಿ ಸ್ವಾತಂತ್ರ್ಯವಿದೆಯೇ? ಹಾಗಿದ್ದರೆ ಅದರ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆಯೇ?
***
ಧರ್ಮದ ಹೆಸರಿನಲ್ಲಿ ಸ್ಥಾಪಿತವಾದ, ಇಸ್ಲಾಂ ಮೂಲದ ಜೊತೆಗೆ ಮಧ್ಯ ಪ್ರಾಚ್ಯ ನೆರೆಹೊರೆಯ ಸಂಪ್ರದಾಯವನ್ನು ಮೈವೆತ್ತ ನೆರೆಯ ಪಾಕಿಸ್ತಾನ 1947ರಿಂದಲೂ ಬಡರಾಷ್ಟ್ರವಾಗೇ ಮುಂದುವರೆದಿದೆ. ಒಂದು ಕಾಲದಲ್ಲಿ ತನ್ನಲ್ಲಿ ಬೆಳೆಯುವ ಹತ್ತಿಯನ್ನು ಸಂಸ್ಕರಿಸುವ ಕೈಗಾರಿಕೆಯೂ ಇಲ್ಲದೆ ಒಂದು ಸಣ್ಣ ಸೂಜಿಯಿಂದ ಹಿಡಿದು ಕಾರಿನವರೆಗೂ ಹೊರ ರಾಷ್ಟ್ರಗಳಿಗೆ ತನ್ನ ಮಾರುಕಟ್ಟೆಯನ್ನು ತೆರೆದುಕೊಂಡು ತನ್ನ ಆಂತರಿಕ ಸಂಘರ್ಷಗಳನ್ನು ಒಂದು ಕಡೆ ಹತ್ತಿಕ್ಕಲೂ ಆಗದೆ ಬಚ್ಚಿಡಲೂ ಆಗದೆ ಬಳಲುತ್ತಿರುವ ರಾಷ್ಟ್ರ ಪಾಕಿಸ್ತಾನ. ಅನೇಕ ಮುತ್ಸದ್ದಿಗಳು ಹುಟ್ಟಿಬಂದ ನೆಲದಲ್ಲೇ ಇಸ್ಲಾಂ ಪ್ರವಾದಿಗಳು ಜನರ ಮನದಲ್ಲಿ ಸೇಡು, ಕಿಚ್ಚಿನ ಕ್ರಾಂತಿಯನ್ನು ಬಿತ್ತುತ್ತಾ ಬಂದರು. ಭಾರತವನ್ನು ದ್ವೇಷಿಸುವುದೇ ಪ್ರಣಾಳಿಕೆಯೆಂಬಂತೆ ನಾಯಿಕೊಡೆಗಳಂತೆ ಅಲ್ಲಲ್ಲಿ ಪಕ್ಷಗಳು ಹುಟ್ಟಿದವು. ಅವೇ ಮುಂದೆ ಭಯೋತ್ಪಾದಕ ಸಂಘಟನೆಗಳಾದವು. ಅನೇಕ ಮಿಲಿಟರಿ ಕ್ಯೂ (ರಕ್ತಪಾತ) ಹಾಗೂ ಅನೇಕ ಭ್ರಷ್ಟಾಚಾರದ ಅಧೋಗತಿಯಲ್ಲಿ ದೇಶ ಹಾಳಾಗಿ ಹೋಯಿತು. ಒಂದು ಕಾಲದಲ್ಲಿ ವಿದೇಶೀ ಸಹಾಯವಿಲ್ಲದಿದ್ದರೆ ಯಾವತ್ತೋ ಭೂಪಟದಲ್ಲಿ ನಾಪತ್ತೆಯಾಗಿ ಹೋಗುವಂತಿದ್ದ ಪಾಕಿಸ್ತಾನಕ್ಕೆ ಬಲವಾಗಿ ಸಿಕ್ಕಿದ್ದು ನ್ಯೂಕ್ಲಿಯರ್ ಶಕ್ತಿ. ನವದೆಹಲಿಯಿಂದ ಕೇವಲ ಐನೂರು ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನದ ಅಸ್ಥಿರತೆಯನ್ನು ನಾವು ಬಹಳ ಸೂಕ್ಷವಾಗಿ ನೋಡಿಕೊಂಡು ಬರುವಂತ ಸ್ಥಿತಿ ಇಂದಿಗೂ ಇದೆ. ಯಾವುದೋ ಧಾರ್ಮಿಕ ಮೂಲಭೂತವಾದಿಗೆ ಈ ಅಣ್ವಸ್ತ್ರವೇನಾದರೂ ದೊರೆತರೆ ಅದು ಪ್ರಪಂಚದ ವಿನಾಶಕ್ಕೆ ಕಾರಣವಾಗಬಹುದು!
ಇಂತಹ ಪಾಕಿಸ್ತಾನವನ್ನು ನಮ್ಮಲ್ಲಿನ ಕೆಲವು ಯುವಕ-ಯುವತಿಯರು ಬೆಂಬಲಿಸುತ್ತಾರೆ. ಇಂತಹ ಪಾಕಿಸ್ತಾನಕ್ಕೆ ಜಯಕಾರ ಹಾಕುತ್ತಾರೆ ಎಂದು ಕೇಳುತ್ತಲೇ ಹೊಟ್ಟೆ ತೊಳಸಿದಂತಾಗುತ್ತದೆ. ಈ ಯುವಕ-ಯುವತಿಯರಿಗೆ ನಿಜವಾದ ಪಾಕಿಸ್ತಾನದ ಅರಿವೇ ಇಲ್ಲ. ಯಾವ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿದೆಯೋ, ಯಾವ ದೇಶದಲ್ಲಿ ಮೈನಾರಿಟಿ ಜನರ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲವೋ, ಯಾವ ದೇಶದಲ್ಲಿ ಧರ್ಮದ ಹೊರೆಯನ್ನು ಬಲವಂತವಾಗಿ ಹೇರಲಾಗುತ್ತದೆಯೋ - ಅಂತಹ ದೇಶದ ಮೇಲೆ ನಮ್ಮ ದೇಶದಲ್ಲಿ ನಿಜವಾದ ಸ್ವಾತಂತ್ರ್ಯದ ಉಸಿರಿನ ಬೆಲೆ ಗೊತ್ತಿರದ ಯುವಕ-ಯುವತಿಯರ ಮಮಕಾರ ಹೆಚ್ಚಾಗಲು ಏನು ಕಾರಣ, ಅದರ ಮೂಲ ನೆಲೆಯೇನು ಎಂದು ಗಂಭೀರವಾಗಿ ಯೋಚನೆ ಮಾಡಬೇಕಾಗುತ್ತದೆ.
ಪಾಕಿಸ್ತಾನದ ಪರವಾಗಿ ಕೂಗಿದ ಜೆ.ಎನ್.ಯು. ವಿದ್ಯಾರ್ಥಿಗಳು ಎಲ್ಲರೂ ಮುಸಲ್ಮಾನರಲ್ಲ. ಕಾಶ್ಮೀರದಿಂದ ಕೇರಳದವರೆಗೆ ಒಂದು ರೀತಿಯಲ್ಲಿ ಯುವಜನತೆಯ ಬ್ರೈನ್‌ವಾಶ್ ಮಾಡಲಾಗುತ್ತಿದೆ. ಚೀನಾದಲ್ಲಿ ಹುಟ್ಟಿ ಅಲ್ಲಿ ಪ್ರಬಲವಾಗಿ ಬೆಳೆದ ಮಾವೋಯಿಸಂ ನಮ್ಮ ವಿದ್ಯಾರ್ಥಿಗಳಿಗೆ ಪ್ರಿಯವಾಗುತ್ತದೆ. ಸರ್ಕಾರದ ವಿರುದ್ಧ, ಪ್ರಜಾಸತ್ತತೆಯ ವಿರುದ್ಧ ಧ್ವನಿ ಎತ್ತುವುದು ಎಂದರೆ ಪಕ್ಕದ ಪಾಕಿಸ್ತಾನವನ್ನು ಹೊಗಳುವುದು ಎಂದಾಗಿ ಹೋಗಿಬಿಟ್ಟಿದೆ. ನಮಗೆ ಸ್ವಾತಂತ್ರ್ಯ ಸಿಕ್ಕ ಮೊದಲ ಐವತ್ತು ವರ್ಷಗಳಲ್ಲಿ ಈ ಸ್ಥಿತಿ ಇರಲಿಲ್ಲ... ನಾವೆಲ್ಲ ಕಂಡ ಎಂಭತ್ತರ, ತೊಂಭತ್ತರ ದಶಕದ ಭಾರತದಲ್ಲಿ, ನಮ್ಮ ಶಾಲಾದಿನಗಳಲ್ಲಿ ಒಂದು ದಿನವೂ ಯಾರೂ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಿಲ್ಲ... ನಾವೆಲ್ಲ ಅನೇಕ ಜನವಿರೋಧಿ ನೀತಿಗಳ ವಿರುದ್ಧವೋ, ಕಾನೂನಿನ ಪರವಾಗಿಯೋ, ಅಥವಾ ರಾಜ್ಯ-ದೇಶ-ಭಾಷೆಗಳ ಪರವಾಗಿಯೋ ಸತ್ಯಾಗ್ರಹ, ಸಂಗ್ರಾಮಗಳನ್ನು ಮಾಡಿದ್ದೇವೆ. ಆದರೆ, ಇಂದಿನ ಯುವಜನತೆಯ ದೇಶದ್ರೋಹದ ಹಾದಿಯನ್ನು ಎಂದೂ ಹಿಡಿದಿದ್ದಿಲ್ಲ. ನಾವು ಶಾಲೆಗೆ ಹೋಗುತ್ತಿದ್ದಾಗ ಪ್ರತಿದಿನವೂ ರಾಷ್ಟ್ರಗೀತೆಯನ್ನು ಹೇಳುತ್ತಿದ್ದೆವು, ಧ್ವಜವಂದನೆಯನ್ನು ಮಾಡುತ್ತಿದ್ದೆವು. ನಮ್ಮೆಲ್ಲರಿಗಿಂತ ದೇಶ ಯಾವತ್ತೂ ದೊಡ್ಡದಾಗಿತ್ತು. ಆದರೆ ಇಂದಿನ ಯುವಜನತೆಯ ಮನಃಸ್ಥಿತಿಯನ್ನು ನೋಡಿದಾಗ ಅದೇ ಭಾವನೆ ಖಂಡಿತ ಒಡಮೂಡುವುದಿಲ್ಲ.
ನನ್ನ ದೇಶ ಉನ್ನತವಾದುದು. ಜನರಿಗೆ ನಿಜವಾಗಿಯೂ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಬದುಕನ್ನು ಕಲ್ಪಿಸಿಕೊಟ್ಟಿದೆ. ಹಾಡು ಹಗಲೇ ದರೋಡೆ, ಅತ್ಯಾಚಾರ, ಕೊಲೆ-ಸುಲಿಗೆ ಮಾಡಿದವರೂ ಸಂವಿಧಾನದ ವಿಧಿಯ ಪ್ರಕಾರ ಶಿಕ್ಷೆಗೆ ಗುರಿಪಡುತ್ತಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಹಕ್ಕುಗಳಿವೆ. ಆದರೆ ಜನರು ತಮ್ಮ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ, ಅವೇ ಹಕ್ಕುಗಳ ಮಗ್ಗುಲಲ್ಲಿರುವ ಕರ್ತವ್ಯಗಳನ್ನು ಮರೆಯುತ್ತಾರೆ. ತಮ್ಮ ಮೈಕ್ರೋ ಫ್ಯಾಮಿಲಿಗಳ ಸಂತೋಷಕ್ಕಾಗಿ ದೊಡ್ಡ ದೇಶದ ಘನತೆ ಗೌರವವನ್ನು ಮರೆಯುತ್ತಾರೆ. ರಾಷ್ಟ್ರ ಯಾವತ್ತೂ ಸೆಕೆಂಡರಿಯಾಗುತ್ತದೆ, ತಮ್ಮ ಸ್ವಾರ್ಥ ದೊಡ್ಡದಾಗುತ್ತಾ ಹೋಗುತ್ತದೆ.
ಎಪ್ಪತ್ತು ವರ್ಷಗಳ ನಂತರ ನಮ್ಮ ಮೂಲಭೂತ ಸಮಸ್ಯೆಗಳು ಇನ್ನೂ ಹಾಗೇ ಇರುವಾಗ, ಈ ಎದೆಕರಗದ ದೇಶಭಕ್ತಿಯ ಜನ ಯಾವ ರೀತಿಯಲ್ಲಿ ದೇಶವನ್ನು ಮುಂದೆ ತಂದಾರು? ಇನ್ನು ನೂರಿನ್ನೂರು ವರ್ಷಗಳಲ್ಲಿ ನಮ್ಮ ದೇಶ ನಮ್ಮ ದೇಶವಾಗೇ ಇರುವುದೋ ಅಥವಾ ಮೊದಲಿನ ಹಾಗೆ ಹಂಚಿಕೊಂಡು ತುಂಡು ತುಂಡಾಗುವುದೋ ಎಂದು ಸಂಕಟವಾಗುತ್ತದೆ.