ಪಟ್ ಪಟ್ಟೀ ಕಥೆ
ಪ್ರತೀ ಸಲ ರಸ್ತೇ ಮೇಲೆ ಮೋಟಾರ್ ಸೈಕಲ್ ಸವಾರರನ್ನು ನೋಡಿದಾಗಲೆಲ್ಲ, ’ಛೇ, ನನ್ನ ಬಳಿಯೂ ಒಂದು ಮೋಟಾರ್ ಸೈಕಲ್ ಇರಬೇಕಿತ್ತು!’ ಎಂದು ಅನ್ನಿಸೋದು ಇವತ್ತಿಗೂ ನಿಜ. ಅದರಲ್ಲೂ ಎರಡು ಚಕ್ರದ ಬೈಸಿಕಲ್‌ನಿಂದ ನಾಲ್ಕು ಚಕ್ರದ ಕಾರಿಗೆ ನೇರವಾಗಿ ಬಡ್ತಿ ಪಡೆದ ನನ್ನಂತಹವರಿಗಂತೂ ಇವತ್ತಿಗೂ ಮೋಟಾರ್ ಸೈಕಲ್ ಇನ್ನೂ ನಿಗೂಢವಾಗಿಯೇ ಉಳಿದಿದೆ ಎಂದರೆ ತಪ್ಪಾಗಲಾರದು. ನಾವು ಸಣ್ಣವರಿದ್ದಾಗ ’ಪಟ್‌ಪಟ್ಟಿ’ ಎಂದು ಕರೆಯುತ್ತಿದ್ದ ಕುತೂಹಲ ತರಿಸುತ್ತಿದ್ದ ವಾಹನ ಇವತ್ತಿಗೂ ನನ್ನ ಮಟ್ಟಿಗೆ ಅದೇ ಕುತೂಹಲವನ್ನು ಉಳಿಸಿಕೊಂಡಿದೆ.
ಮೋಟಾರ್ ಸೈಕಲ್ ಹೊಡೆಯೋದನ್ನು ಯಾರು ಎಷ್ಟೇ ಡೇಂಜರ್ ಎಂದು ಹೇಳಿದರೂ ಅದರಲ್ಲಿರೋ ಸ್ವಾರಸ್ಯವೇ ಬೇರೆ. Robert M. Pirsig ನ ’Zen and the Art of Motorcycle Maintenance’ ಪುಸ್ತಕದ ಮೊದಲಿನಲ್ಲಿ ಹೇಳಿರೋ ಹಾಗೆ (ನೆನಪು) ಮೋಟಾರ್ ಸೈಕಲ್ ಸವಾರರ ಹಾಗೂ ರಸ್ತೆಯ ನಡುವಿನ ಅನ್ಯೋನ್ಯತೆ ಹಾಗೂ ಆ ಸಂಬಂಧಗಳು ಅತಿ ಮಧುರವಾದದ್ದು. ಕಾರಿನಲ್ಲಿ ಕುಳಿತು ಹೋಗುವವರಿಗೆ ಆ ರೀತಿಯ ಸಂಬಂಧದ ಅರಿವು ಸಾಧ್ಯವೇ ಇಲ್ಲ. ನಮ್ಮಲ್ಲಿ ಹಿಂದೆ ದೊರೆಯುತ್ತಿದ್ದ ಸುವೇಗ, ಲೂನಾ ಮೊಪೆಡ್ಡುಗಳು ಇಂದಿನ ಹೀರೋ ಪುಕ್ಕ್ ಗಳ ರೂಪದಲ್ಲಿ ಅದೇನೇನೇ ವಿನ್ಯಾಸಗೊಂಡಿದ್ದರೂ, ೩೫ ಸಿಸಿ ಇಂಜಿನ್ ಇಂದ ಹಿಡಿದು ೮೦೦ ಸಿಸಿ ಇಂಜಿನ್‌ವರೆಗೆ ಬೆಳೆದಿದ್ದರೂ ಮೋಟಾರ್ ಸೈಕಲ್ ಅಥವಾ ಮೊಪೆಡ್ಡುಗಳು ಬಹಳ ವಿಶೇಷವಾದವುಗಳೇ.
ನಾಲ್ಕೈದು ವರ್ಷಗಳ ಹಿಂದೆ ನನ್ನ ಅಣ್ಣನ ಯಮಾಹ ಬೈಕ್ (೧೦೦ ಸಿಸಿ) ತೆಗೆದುಕೊಂಡು ನಮ್ಮೂರಿನ ಬಯಲಿನಲ್ಲಿ ಒಂದು ಘಂಟೆ ಪ್ರಾಕ್ಟೀಸ್ ಮಾಡಿದ್ದನ್ನು ಬಿಟ್ಟರೆ ನಾನಿದುವರೆಗೂ ಯಾವುದೇ ಮೋಟಾರ್ ಬೈಕ್ ಅನ್ನು ಇಂಡಿಪೆಂಡೆಂಟ್ ಆಗಿ ಸವಾರಿ ಮಾಡಿದ್ದುದೇ ಇಲ್ಲ. ಭಾರತದಲ್ಲಿ ಬೈಕ್ ಇಲ್ಲದಿದ್ದರೆ ಅದು ಒಂದು ರೀತಿ ಹ್ಯಾಂಡಿಕ್ಯಾಪ್ ಪರಿಸ್ಥಿತಿ ತಂದುಬಿಡುತ್ತೇನೋ ಅನ್ನೋ ಹೆದರಿಕೆ ಹುಟ್ಟುತ್ತಿದ್ದ ಹಾಗೇ ದೇಶ ಬಿಟ್ಟು ಬಂದು ಏಕ್ ದಂ ಕಾರಿಗೆ ಬಡ್ತಿ ಪಡೆಯುವಂತಾದ್ದರಿಂದ ಇವತ್ತಿಗೂ ಮೋಟಾರ್ ಸೈಕಲ್ ಅನ್ನು ನಾನು ಮಿಸ್ ಮಾಡಿಕೊಳ್ಳುತ್ತಿರುವುದು. ನಾನು ಎಷ್ಟೇ ಬೆಳೆದರೂ ಒಂದು ೩೫೦ ಸಿಸಿ ಎನ್‌ಫೀಲ್ಡ್ ಬೈಕ್ ಅನ್ನು ಸ್ಟ್ಯಾಂಡ್ ತೆಗೆದು ಮತ್ತೆ ನಿಲ್ಲಿಸುವ ಶಕ್ತಿಯನ್ನಾಗಲೀ, ಯುಕ್ತಿಯನ್ನಾಗಲೀ ಪಡೆದುಕೊಳ್ಳಲೇ ಇಲ್ಲ. ಅದಕ್ಕೋಸ್ಕರವೇ ಇವತ್ತಿಗೂ ನಮ್ಮೂರಿನ ಗ್ಯಾರೇಜಿನಲ್ಲಿ ಕೆಲಸ ಮಾಡುವ ಇನ್ನೂ ಮೀಸೆ ಚಿಗುರದ ಹುಡುಗರು "ಬುಲೆಟ್" ಬೈಕ್ ಅನ್ನು ಲೀಲಾಜಾಲವಾಗಿ ಓಡಿಸಿ, ನಿಲ್ಲಿಸುವಾಗ ನಾನು ಹೊಟ್ಟೇ ಉರಿಸಿಕೊಳ್ಳುವುದು. ಅಲ್ಲಿನ ಜನ ನಿಭಿಡ ಗಲ್ಲಿಗಳಲ್ಲಿ ಮೋಟಾರ್ ಬೈಕ್ ಮುಂದೆ ಮತ್ತೊಂದು ವಾಹನವೇ ಇಲ್ಲ ಎನ್ನುವುದನ್ನಾಗಲೀ, ಬುಲೆಟ್ ಬೈಕ್ ಮುಂದೆ ಮಾರುತಿ ಕಾರು ಕೂಡಾ ಸಪ್ಪೆಯೇ ಎಂದು ಹೇಳುವುದನ್ನಾಗಲೀ ನೀವೂ ಕೇಳಿರಬಹುದು.
ಮೋಟಾರ್ ಬೈಕ್ ಅವಿಷ್ಕಾರ ಮಾನವನ ಮಹಾಸಾಧನೆಗಳಲ್ಲೊಂದು. ನಮ್ಮೂರಿನಲ್ಲಿ ಹಿಂದೆ ಮಾಮೂಲಿ ಸೈಕಲ್ (ಬೈಸಿಕಲ್)ಗಳಿಗೂ ಒಂದು ಯಂತ್ರವನ್ನು ಜೋಡಿಸಿ ಅದರ ಮೂಲಕ ಪೆಡಲ್ ಮಾಡುವುದನ್ನು ತಪ್ಪಿಸಿದ್ದನ್ನು ನಾನು ನೋಡಿದ್ದೇನೆ. ಮುಂದೆ ಅವೇ ಲೂನಾ, ಸುವೇಗ ಮೊಪೆಡ್ಡುಗಳಾಗಿ ಜೀವ ತಳೆದಿದ್ದು. ಅಂತಹ ಮೊಪೆಡ್ಡುಗಳಿಗೆ ಗಿಯರ್ ಅಳವಡಿಸಿ ಅವುಗಳನ್ನು ಸ್ಕೂಟರ್, ಮೋಟಾರ್ ಬೈಕ್ ಮಾಡಿದ್ದಿರಬಹುದು. ಇವುಗಳಲ್ಲಿ ದೇಸೀ ತಂತ್ರಜ್ಞಾನವೆಷ್ಟಿದೆಯೋ ಇಲ್ಲವೋ ಗೊತ್ತಿಲ್ಲ, ಆದರೂ ಆಗಿನ್ನೂ ಹೊಂಡಾ, ಯಮಾಹ, ಕವಾಸಾಕಿ ಅಂತಹ ಹೆಸರುಗಳೇನಿದ್ದರೂ ಪತ್ರಿಕೆಗಳಲ್ಲಿ ಓದಲಿಕ್ಕೆ ಸಿಗುತ್ತಿದ್ದವೇ ವಿನಾ ನಿಜ ಜೀವನದಲ್ಲಿ ನೋಡಲು ಸಿಗುತ್ತಿರಲಿಲ್ಲ. ಎಂಭತ್ತರ ದಶಕದ ಮೊದಲಲ್ಲಿ ಇರಬೇಕು (ಸರಿಯಾಗಿ ಗೊತ್ತಿಲ್ಲ), ಒಂದೊಂದು ಎಕರೆ ಅಡಿಕೆ ತೋಟವಿದ್ದವರೂ ಒಳ್ಳೇ ಸೀಜನ್ ನಲ್ಲಿ ಮನೇ ಮುಂದೆ ಒಂದು ಬೈಕ್ ನಿಲ್ಲಿಸುವಂತಾದದ್ದು. ಅವುಗಳ ಜೊತೆ ಎಂಟು ಒಂಭತ್ತು ರೂಪಾಯ್ ಗೆ ಒಂದು ಲೀಟರ್ ಪೆಟ್ರೋಲ್ ಹಾಕಿಸಿ ನಲವತ್ತು ಐವತ್ತು ಕಿಲೋ ಮೀಟರ್ ಓಡಿಸುತ್ತಿದ್ದ ಜನರು ಪ್ರಪಂಚ ಬದಲಾಗುತ್ತಿದ್ದ ಹಾಗೆ ಇವತ್ತು ಐವತ್ತು ಅರವತ್ತು ರೂಪಾಯ್ ಗೆ ಒಂದು ಲೀಟರ್ ಪೆಟ್ರೋಲ್ ಆದರೂ ಇನ್ನೂ ತಮ್ಮ ಹಳೆಯ ಬೈಕ್‌ಗಳನ್ನು ಕೈ ಬಿಡದಿದ್ದುದು. ಯಜ್ಡಿ, ಜಾವಾ, ಎನ್‌ಫೀಲ್ಡ್ ಇವುಗಳು ನಾನು ನೋಡಿ ಬೆಳೆದ ಬೈಕುಗಳು, ಅವುಗಳ ಸವಾರರು ಯಾವಾಗಲೂ ಆ ಬೈಕುಗಳಷ್ಟೇ ನಿಗೂಢರಾದರೂ ಅವರು ಮನೆಗೆ ಬಂದು ಹೊರ ಹೋಗುವಾಗೆಲ್ಲಾ ’ಪಟ್ ಪಟ್’ ಸದ್ದು ಮಾಡುವುದನ್ನು ಕಂಡು ನಾವು ’ಪಟ್ಟ್ ಪಟ್ಟಿ’ಯನ್ನು ತೆರೆದ ಕಣ್ಣುಗಳಿಂದ ನೋಡಿದ್ದೂ ಅಲ್ಲದೇ ಅವುಗಳ ಸದ್ದಿಗೆ ಬೆಚ್ಚಿ ಬಿದ್ದದ್ದೂ ಇದೆ. ಯಜ್ಡಿ, ಜಾವಾಗಳು ಅವುಗಳದ್ದೇ ಆದ ಒಂದು ಕರ್ಕಷ ಶಬ್ದವನ್ನೇ ತಮ್ಮ ಗುಣವನ್ನಾಗಿ ಮಾಡಿಕೊಂಡಿದ್ದರೆ, ಎನ್‌ಫೀಲ್ಡ್‌ಗೆ ಒಂದು ರಾಜ ಗಾಂಭೀರ್ಯ ಇದೆ - ನಮ್ಮೂರಿನ ಪಡ್ಡೇ ಹುಡುಗರು ನಮ್ಮಣ್ಣನ ಬೈಕ್ ಸದ್ದನ್ನು ದೂರದಿಂದಲೇ ಕೇಳಿ ಯಾರೋ ಇನ್‌ಸ್ಪೆಕ್ಟರ್ ಬಂದರೆಂದು ಜೂಜಾಡುವುದನ್ನು ಬಿಟ್ಟು ಓಡಿ ಹೋಗುವಷ್ಟರ ಮಟ್ಟಿಗೆ!
’ನಿನಗ್ಯಾಕೋ ಬೈಕ್ ಸವಾಸ, ಕಾಲು ಮುರುಕಂತಿ ನೋಡು!’ ಎಂದು ಹೆದರಿಸುತ್ತಿದ್ದ ಹೇಳಿಕೆಗಳು ಅಂದಿನಿಂದ ಇಂದಿನವರೆಗೆ ನನ್ನ ಮತ್ತು ಮೋಟಾರ್ ಬೈಕ್‌ಗಳ ಬಾಂಧವ್ಯದ ನಡುವೆ ಎಂದಿಗೂ ಮುರಿಯಲಾರದಂತ ಅಡ್ಡ ಗೋಡೆಯನ್ನು ಕಟ್ಟುವಲ್ಲಿ ಸಫಲವಾಗಿವೆ. ಇಲ್ಲಿನ ವರ್ಷದ ಆರು ತಿಂಗಳ ಛಳಿಯಾಗಲೀ, ಮತ್ತೊಂದಾಗಲೀ ಬರೀ ನೆಪವನ್ನು ಕೊಡಬಲ್ಲವೇ ವಿನಾ ನಾನೆಂದೂ ಸ್ವಂತ ಬೈಕ್ ಒಂದನ್ನು ಇಟ್ಟುಕೊಂಡು ಲೀಲಾಜಾಲವಾಗಿ ರಸ್ತೆಗಳಲ್ಲಿ ಓಡಿಸಿ ರಸ್ತೆಗೂ ನನಗೂ ಮತ್ತೊಂದಿಷ್ಟು ಆತ್ಮೀಯತೆಯನ್ನು ಬೆಳಸಿಕೊಳ್ಳುವ ಸಮಯ ಬರುತ್ತೋ ಇಲ್ಲವೋ ಯಾರಿಗೆ ಗೊತ್ತು?