Tuesday, May 09, 2006

ಉಪ್ಪಿಟ್ಟಿನಲ್ಲಿ ಬಲವಿದೆ!

ಎಸ್.ಎಸ್.ಎಲ್.ಸಿ ಪಾಸಾದ ನಂತರ ಸಾಗರದ ಚಳಿಗೆ (ತಣ್ಣೀರು ಸ್ನಾನ ಮಾಡಬೇಕಲ್ಲ ಎಂದು) ಹೆದರಿಕೊಂಡು, ನಾನೇ ಅಡುಗೆ ಮಾಡಿಕೊಂಡು ತಿನ್ನಬೇಕಲ್ಲಪ್ಪಾ ಎಂಬ ಚಿಂತೆಯಿಂದ ಮನೆಬಿಟ್ಟು ಬಂದವನಿಗೆ ಇದ್ದಲಿ ಒಲೆ, ಸೀಮೆ ಎಣ್ಣೆ ಒಲೆ ಹಾಗೂ ನಾನು ತಂದ ಒಂದಿಷ್ಟು ಪಾತ್ರೆ, ತಟ್ಟೆ, ಲೋಟಾಗಳು ಬಹಳ ವರ್ಷಗಳವರೆಗೆ ಬಂದವು. ಸಾಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಕ್ರಮೇಣ ಅಡುಗೆ ಮಾಡುವುದನ್ನು ಕಲಿತೆನಾದರೂ, ಇವತ್ತಿಗೂ ಹಲವಾರು ಫುಡ್ ನೆಟ್‌ವರ್ಕ್ಸ ಕಾರ್ಯಕ್ರಮಗಳನ್ನು ಲಾಗಾಯ್ತಿನಿಂದ ಬಾಯಿಬಿಟ್ಟುಕೊಂಡು ನೋಡುತ್ತಾ ಬಂದಿದ್ದರೂ, ನನಗೆ ಅಡುಗೆ ಮಾಡುವುದು ಹಾಗೂ ತಿನ್ನುವುದು ಎಂದರೆ ಅಷ್ಟಕಷ್ಟೇ. ಕೆಲವರಿಗೆ ಆಗುವಂತೆ ನನ್ನ ಕನಸಿನಲ್ಲಿಯೂ ಯಾವತ್ತೂ ಅಂತದ್ದನ್ನು ತಿನ್ನಬೇಕು, ಇಂತದ್ದನ್ನು ತಿನ್ನಬೇಕು ಎಂದೆನಿಸಿದ್ದಿಲ್ಲ. ಎಣಗಾಯಿ-ರೊಟ್ಟಿ ನನ್ ಮೆಚ್ಚಿನ ತಿಂಡಿಯಾದ್ರೂ ಅದು ನನಗೆ ವರ್ಷಕ್ಕೊಮ್ಮೆಯೂ ಸಿಗೋದಿಲ್ಲ. ಹಾಗಂತ ನಾನು ಉಪವಾಸ ಮಲಗೋದಿಲ್ಲ, ಎಲ್ಲೇ ಹೋಗಲಿ ಬರಲಿ, ಊಟವಂತೂ ನನಗೆ ಕಟ್ಟಿಟ್ಟ ಬುತ್ತಿ, ಹೇಗಾದರೂ ಮಾಡಿ ಅವತ್ತಿನ ಊಟ-ತಿಂಡಿ ದೊರೆತೇ ತೀರುತ್ತಾದ್ದರಿಂದ ನಾನು ಊಟ-ತಿಂಡಿಗಳನ್ನು ಉಪಚರಿಸುವುದಕ್ಕಿಂತಲೂ ಅವೇ ನನ್ನನ್ನು ಚೆನ್ನಾಗಿ ನೋಡಿಕೊಂಡಿವೆ. ಬೇಕಾದರೆ ಇವತ್ತಿನ ಉದಾಹರಣೆಯನ್ನೇ ತೆಗೆದುಕೊಳ್ಳಿ - ನಾನು ಆಫೀಸಿನಲ್ಲಿ ತಿಂಡಿ ತಿಂದರಾಯಿತು ಎಂದು ಹೊರಟೆ, ನನ್ನ ಸಹೋದ್ಯೋಗಿಯೊಬ್ಬ ತಾನು ತಿನ್ನಬೇಕೆಂದುಕೊಂಡು ಕ್ಯಾಫೆಟೇರಿಯಾದಿಂದ ಮಫಿನ್ ಒಂದನ್ನು ತಂದವನು ಅದನ್ನು ತಾನು ತಿನ್ನದೆ ನನಗೇ ಕೊಟ್ಟ! ಹೀಗೆ ಹಲವಾರು ವರ್ಷಗಳಿಂದ ಎಲ್ಲೆಲ್ಲಿ ಎಷ್ಟು ಸಿಗಬೇಕೋ ಅಷ್ಟಷ್ಟು ತಿನ್ನಲು ಸಿಗುತ್ತಿರುವುದರಿಂದ ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ನನ್ನ ತೂಕದಲ್ಲಿ ಬಹಳಷ್ಟು ವ್ಯತ್ಯಾಸವೇನೂ ಆಗಿಲ್ಲ.

ಊಟ ತಿಂಡಿಯ ವಿಷಯ ಹೇಳಿ ಉಪ್ಪಿಟ್ಟಿನ ಬಗೆಗೆ ಹೇಳದಿದ್ದರೆ ಈ ಬರಹವೇ ಅಪೂರ್ಣ: ಏಕೆಂದರೆ ನಾನು ಕೆಲವರು ಅನ್ನವನ್ನು ತಿನ್ನುವುದಕ್ಕಿಂತಲೂ ಹೆಚ್ಚಾಗಿ ಉಪ್ಪಿಟ್ಟನ್ನು ತಿಂದಿದ್ದೇನೆ - ಈ ಉಪ್ಪಿಟ್ಟನ್ನು ಹಲವಾರು ರೀತಿಯಲ್ಲಿ ಅವಲೋಕನ ಮಾಡಿಕೊಂಡಿದ್ದೇನೆ - ಆದ್ದರಿಂದಲೇ ಉಪ್ಪಿಟ್ಟು ನಾನು ದ್ವೇಷಿಸುವ ತಿಂಡಿಗಳಲ್ಲೊಂದು. ಸಾಗರದಲ್ಲಿ ಅಪರೂಪಕ್ಕೊಮ್ಮೆ ಹೊಟೇಲಿನಲ್ಲಿ ತಿಂಡಿ ತಿನ್ನುತ್ತಿದ್ದವನಿಗೆ ನನ್ನ ರೂಮಿನಲ್ಲಿ ಮಾಡುತ್ತಿದ್ದ ತಿಂಡಿಗಳೆಂದರೆ ಮೂರ್‍ಏ ಮೂರು - ಅವಲಕ್ಕಿ, ಉಪ್ಪಿಟ್ಟು ಅಥವಾ ಚಿತ್ರಾನ್ನ. ನನ್ನ ರೂಮಿನ ಮೆನ್ಯು ತುಂಬಾ ಸಿಂಪಲ್ಲು, ಸೋಮವಾರ ಬೆಳಗ್ಗೆ ಉಪ್ಪಿಟ್ಟಾದರೆ, ಮಂಗಳವಾರವೂ ಉಪ್ಪಿಟ್ಟೇ, ಬುಧವಾರ-ಗುರುವಾರಗಳೆರಡರೊಂದರಲ್ಲಿ ಅವಲಕ್ಕಿ ಸೇರಿಕೊಂಡರೆ, ಶುಕ್ರವಾರ-ಶನಿವಾರ-ಭಾನುವಾರಗಳಲ್ಲೂ ಉಪ್ಪಿಟ್ಟಿನ ಮಹಿಮೆಯೇ ಹೆಚ್ಚು. ಈ ಅವಲಕ್ಕಿಯನ್ನು ಹಲವು ತರಗಳಲ್ಲಿ ಮಾಡಿದಂತೆ ಉಪ್ಪಿಟ್ಟನ್ನಾಗಲೀ-ಚಿತ್ರನ್ನವನ್ನಾಗಲಿ ಹೆಚ್ಚು ವಿಧದಿಂದ ಮಾಡಲಾಗದು - ಹೆಚ್ಚೆಂದರೆ ಒಂದಿಷ್ಟು ಮಾವಿನಕಾಯಿಯ ತುರಿಯನ್ನು ಹಾಕಬಹುದು, ಅಥವಾ ಪೇಟೆಗಳಲ್ಲಿ ಮಾಡುವಂತೆ ಅನಾನಸ್ಸಿನ ತುಂಡುಗಳನ್ನು ಸೇರಿಸಬಹುದು, ಅದಿಲ್ಲವಾದರೆ ವಿಧಾನ ಬಹಳ ಸುಲಭ: ಮೀಡಿಯಂ ರವೆಯನ್ನು ಬಂಗಾರದ ಬಣ್ಣ ಬರುವವರೆಗೆ ಹುರಿದು, ಒಗ್ಗರಣೆಯನ್ನು ಶಾಸ್ತ್ರೋಕ್ತವಾಗಿ ಹಾಕಿ, ರವೆಗೆ ತಕ್ಕಷ್ಟು ನೀರನ್ನು ಒಗ್ಗರಣೆಯೊಂದಿಗೆ ಕುದಿಸಿ, ಅದಕ್ಕೆ ರವೆಯನ್ನು ಸುರಿಯುತ್ತಾ ಹಾಗೇ ಚಮಚೆಯಿಂದ ಎಲ್ಲೂ ಗಟ್ಟಿಯಾಗದಂತೆ ತಿರುವುತ್ತಾ ಬಂದರೆ ಹೊರಬರುವ ಎಂಡ್ ಪ್ರಾಡಕ್ಟ್ ಏನಿದೆಯೋ ಅದನ್ನೇ ಉಪ್ಪಿಟ್ಟು ಎಂದು ನಾನು ಕರೆಯುವುದು (ನಾನೇನು ಆಲ್ಟನ್ ಬ್ರೌನ್ ಕೆಟ್ಟೋದ್ನೇ ವೈಜ್ಞಾನಿಕವಾಗಿ ವಿವರಿಸೋಕೆ!). ನೀವು ನನಗೆ ರವೆಯನ್ನು ತೋರಿಸಿ, ನಾನು ಅದರಿಂದ ಇಂತದ್ದೇ ಉಪ್ಪಿಟ್ಟು ಆಗುತ್ತದೆ ಎಂದು ಹೇಳುತ್ತೇನೆ. ಇದೇ ಉಪ್ಪಿಟ್ಟನ್ನು ವಿಧವಿಧವಾದ ಆಡುಗೆ ಪದಾರ್ಥಗಳಿಂದ ಮಾಡಿಯೂ ಗೊತ್ತು, ಏನೂ ಇಲ್ಲದೇ ಬರೀ ಎಣ್ಣೆ, ಉಪ್ಪು, ಈರುಳ್ಳಿ, ರವೆಯಿಂದ ಮಾಡಿಯೂ ಗೊತ್ತು. ಹೀಗೆ ನಾನು ಮಾಡುತ್ತಿದ್ದ ಉಪ್ಪಿಟ್ಟನ್ನು ನನ್ನ ಬದಿಯ ರೂಮಿನವರಿಗೂ ಕೊಡುತ್ತಿದ್ದೆ, ಒಮ್ಮೆ ತಿಂಡಿಯ ಸಮಯಕ್ಕೆ ನನ್ನ ರೂಮಿಗೆ ಬಂದವರು ಮತ್ತೊಮ್ಮೆ ಆ ಕಡೆ ತಲೆಹಾಕಿ ಮಲಗುತ್ತಲೂ ಇರದುದ್ದರಿಂದ 'ಮಾಡಿದ್ದುಣ್ಣೋ ಮಹರಾಯ' ಎಂಬಂತೆ ನಾನು ಮಾಡಿದ್ದನ್ನು ನಾನೇ ತಿಂದುಕೊಂಡು ಮಾಡಿನೆಡೆಗೆ ನೋಡುತ್ತಾ ಕನಸು ಕಾಣಲು ಬಹಳಷ್ಟು ಸಮಯ ಸಿಗುತ್ತಿತ್ತು. ಎಷ್ಟೋ ಸಾರಿ, ನನ್ನ ಬಾಯಿಗೆ ಹೆದರಿ, ನನ್ನ ಕೈ ರುಚಿಯನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಬಂದಿದ್ದಿಲ್ಲ - ನನ್ನ ಎರಡನೇ ಅಕ್ಕ ನನ್ನನ್ನು 'ವೇದಾಂತಿ' ಎಂದು ಅಡ್ಡ ಹೆಸರಿನಿಂದ ಕರೆಯುತ್ತಿದ್ದುದೂ ಇದೇ ಕಾರಣಕ್ಕೆ - ಯಾವುದೇ ಒಂದು ವಿಷಯವನ್ನಾದರೂ ಕೊಡಿ, ಅದನ್ನು ಸಿದ್ಧಾಂತವನ್ನಾಗಿ ಮಾಡಿಬಿಡುತ್ತೇನೆ (ಅರ್ಥಾಥ್ ಕೊರೆಯುತ್ತೇನೆ), ಇನ್ನು ನಾನು ಮಾಡಿದ ಉಪ್ಪಿಟ್ಟನ್ನು ಹೀಯಾಳಿಸಿದರೆ ಸುಮ್ಮನೇ ಬಿಟ್ಟು ಬಿಡುತ್ತೇನೆಯೇ?

ಈ ರೀತಿ ತಿಂದ ಉಪ್ಪಿಟ್ಟೇ ನನಗೆ ಕಷ್ಟವನ್ನು ಸಹಿಸಿಕೊಳ್ಳೋ ಗುಣವನ್ನು ತಂದುಕೊಟ್ಟಿದೆ - ಬಾಯಿಗೆ ಇಟ್ಟಕೂಡಲೇ ಆಹಾರದ ನಿಜ ಬುದ್ದಿ ತಿಳಿಯುತ್ತದಾದರೂ ನಾನು ಈವರೆಗೆ ಯಾರಿಗೂ 'ಕೆಟ್ಟದಾಗಿ ಅಡುಗೆ ಮಾಡಿದ್ದೀರಿ' ಎಂದು ದೂರಿಲ್ಲ - ರೆಸ್ಟೋರಂಟ್‌ಗಳಲ್ಲಿ ಧಾರಾಳವಾಗಿ ಕ್ವಾಲಿಟಿ ನಿರೀಕ್ಷಿಸಿದಷ್ಟಿಲ್ಲವೆಂದು ಕಂಪ್ಲೇಂಟ್ ಮಾಡಿದ್ದೇನೆ!

ಮುಂದೆ ಸಾಗರ ಬಿಟ್ಟು ಮೈಸೂರು ಸೇರಿದರೆ ಅಲ್ಲೂ ಉಪ್ಪಿಟ್ಟೇ ಗಂಟು ಬೀಳುವುದೇ? ಕೆಲವು ತಿಂಗಳು ಹಾಸ್ಟೆಲಿನಲ್ಲಿ ಇದ್ದುದನ್ನು ಬಿಟ್ಟರೆ, ಇನ್ನು ಮಿಕ್ಕುಳಿದ ಸಮಯದಲ್ಲಿ ಗಂಗೋತ್ರಿಯ ಕ್ಯಾಂಟೀನಿನಲ್ಲಿ ನನ್ನ ಗೆಳೆಯ ರಾಜೇಶ 'ಕಾಂಕ್ರೀಟು' ಎಂದು ಕರೆಯುತ್ತಿದ್ದ ಉಪ್ಪಿಟ್ಟು-ಕೇಸರಿಬಾತ್ ಎರಡರ ಸಹವಾಸ ಆರಂಭವಾಯಿತು. ಆಗಲೇ ನನಗೆ ಮದುವೆ ಮನೆಗಳಲ್ಲಿ ಉಪ್ಪಿಟ್ಟು-ಕೇಸರಿಬಾತನ್ನು ಜೊತೆಯಾಗಿ ಏಕೆ ಕೊಡುತ್ತಾರೆ ಎಂದು ತಿಳಿದದ್ದು - ಒಮ್ಮೆ ತಿಂದರೆ ಕಾಂಕ್ರೀಟಿನೋಪಾದಿಯಲ್ಲಿ ಹೊಟ್ಟೆಯನ್ನು ಆವರಿಸಿಕೊಳ್ಳುವುದರಿಂದ ಕೊನೆಗೆ ಮಧ್ಯಾಹ್ನ ಜನ ಊಟ ಕಡಿಮೆ ಮಾಡಲಿ ಎಂದಿದ್ದಿರಬಹುದು!

***

ಹೀಗೆ ಉಪ್ಪಿಟ್ಟಿಗೆ ಸಂದ ಕೀರ್ತಿಯ ಬಹುಪಾಲು ನನ್ನ ಭುಜಗಳ ಮೇಲೆ ದಶಕಗಳಿಂದ ಮನೆಮಾಡಿರೋ ಸೋಮಾರಿತನ ಹಾಗೂ ಮೈಗಳ್ಳತನಗಳಿಗೆ ಸೇರಬೇಕು, ಇಂತಹ ಸೋಂಬೇರಿತನದ ದೆಸೆಯಿಂದ ಕೈಗೆ ಸಿಕ್ಕಿದ್ದನ್ನು ತಿಂದು 'ಬದುಕುವುದಕ್ಕಾಗಿ ತಿನ್ನಬೇಕು' ಎಂದು ವಾದ ಬದಲಾಯಿಸಿ ಬಡಪಾಯಿಕೊಚ್ಚುವ ನನ್ನ 'ವೇದಾಂತಿ'ತನಕ್ಕೂ ಅದರ ಕ್ರೆಡಿಟ್ಟು ದೊರೆಯಬೇಕು. ಹೈಸ್ಕೂಲು-ಕಾಲೇಜುಗಳಲ್ಲಿ ಬರೀ ಪ್ರೈಜ್‌ಗಳಿಸುವುದಕ್ಕೆಂದೇ ಚರ್ಚಾಸ್ಪರ್ಧೆಯಲ್ಲಿಟ್ಟಿದ್ದ ವಿಷಯಗಳ ಪರ ಅಥವಾ ವಿರೋಧವಾಗಿ ವಾದ ಮಾಡಿ ಮಾತನಾಡುವ ಅಭ್ಯಾಸ ಬದುಕಿನುದ್ದಕ್ಕೂ ಹೀಗೆ ಬರಬಾರದಿತ್ತು - ಮನುಷ್ಯನಾದವನು ಸರಿಯೋ-ತಪ್ಪೋ, ಒಳ್ಳೆಯದೋ-ಕೆಟ್ಟದ್ದೋ, ಪರವೋ-ವಿರೋಧವೋ ಎಂಬ ತರ್ಕಕ್ಕೆ ತನ್ನನ್ನು ಮೊದಲು ತೊಡಗಿಸಿಕೊಂಡು ಯಾವುದಾದರೊಂದನ್ನು ಹಚ್ಚಿಕೊಳ್ಳುತ್ತಾನೋ, ಅಥವಾ ಮೊದಲೇ ವಿಷಯವನ್ನು ಮನಸ್ಸಿಗೆ ತಂದುಕೊಂಡು ಕೊನೆಗೆ ಅದನ್ನು ಇಷ್ಟಪಟ್ಟಿದ್ದಕ್ಕೆ ಕಾರಣಗಳನ್ನು ಹುಡುಕುತ್ತಾನೋ ಎನ್ನುವ ಪ್ರಶ್ನೆಯ ಉತ್ತರವನ್ನು ನನಗಿಂತ ದೊಡ್ಡ 'ವೇದಾಂತಿ'ಗಳಿಗೆ ಬಿಡುತ್ತೇನೆ. ಎಲ್ಲಿಯವರೆಗೆ ಚರ್ಚಾಸ್ಪರ್ಧೆಯಲ್ಲಿ ಬಹುಮಾನಗಳಿಸುವುದು ಗುರಿಯಾಗುತ್ತದೆಯೋ, ಎಲ್ಲಿಯವರೆಗೆ ಮಾಡಿದ್ದನ್ನು ಸಾಧಿಸಿಕೊಳ್ಳುವ ಅಥವಾ ಅದಕ್ಕೊಂದು ವಿವರಣೆಯನ್ನು ಹೊಂಚಿಹಾಕುವ ಕುಹಕತನವಿರುತ್ತದೆಯೋ ಅಲ್ಲಿಯವರೆಗೆ ದಿನವೂ ಉಪ್ಪಿಟ್ಟು ತಿನ್ನುವ ಕಾಯಕ ಶಿಕ್ಷೆಯಾಗಲಿ!

***

ಬೋಲೋ ಬ್ಯಾಚೆಲರ್ ಲೈಫ್ ಕೀ...ಜೈ...ಉಪ್ಪಿಟ್ಟಿನಲ್ಲಿ ಬಲವಿದೆ! (ನಾವು ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನಗಳಂದು ಪ್ರಭಾತ್‌ಪೇರಿ ಹೋಗುತ್ತಿದ್ದಾಗ ಕೂಗುತ್ತಿದ್ದ 'ಬೋಲೋ ಭಾರತ್ ಮಾತಾ ಕೀ...ಜೈ...ಒಗ್ಗಟ್ಟಿನಲ್ಲಿ ಬಲವಿದೆ!' ಎಂಬುದನ್ನು ಅನುಕರಣೆ ಮಾಡುತ್ತಾ...)

13 comments:

Anonymous said...

ಉಪ್ಪಿಟ್ಟಿನಲ್ಲಿ ಬಲವಿದೆಯೋ ಇಲ್ಲವೋ ಗೊತ್ತಿಲ್ಲ, ಅದಕ್ಕೆ timeನಲ್ಲಿ ಸಹಾಯ ಮಾಡುವ ಬುದ್ಧಿಯಂತೂ ಇದೆ. ಉಪ್ಪಿಟ್ಟನ್ನು ಇಷ್ಟಪಡೋ ಜನ ಕಡಿಮೆ. ಆದರೂ ಅದನ್ನು ಬಿಡಲಾರದ ಅನಿವಾರ್ಯ. ನನಗೂ ಅಷ್ಟೇನೂ ಇಷ್ಟ ಇಲ್ಲ. ನಿಮ್ಮಂತೆ ದ್ವೇಷ ಕೂಡ ಇಲ್ಲ. ಎಚ್.ನರಸಿಂಹಯ್ಯ ಅಮೆರಿಕಾದಲ್ಲಿದ್ದಷ್ಟೂ ದಿನ ಮೂರು ಹೊತ್ತು ಉಪ್ಪಿಟ್ಟನ್ನೇ ತಿಂದಿದ್ದರಂತೆ!! ಅವರ ಮುಂದೆ ನಿಮ್ಮದು ಯಾವ ಮಹಾ ಬಿಡಿ :)

'ಬೋಲೋ ಭಾರತ್ ಮಾತಾ ಕೀ...ಜೈ...ಒಗ್ಗಟ್ಟಿನಲ್ಲಿ ಬಲವಿದೆ!' - ಇದು ಚೆನ್ನಾಗಿದೆ. ಜೋಶಿಯವರು ಎಲ್ಲೋ "ಉಪ್ಪಿಟ್ಟು ಉಪ್ಪಿಟ್ಟು ಗೋವಿಂದ .." ಎಂದು ಬರೆದ ಹಾಗಿತ್ತು. ಪೂರ್ತಿ ಸಾಲು ನೆನಪಿಲ್ಲ. ಅವರನ್ನೇ ಕೇಳಬೇಕು.

Anonymous said...

ಅಲ್ಲಾ ಸ್ವಾಮಿ, ಒಳ್ಳೆಯ ಉಪ್ಪಿಟ್ಟನ್ನು ನೀವು ತಿಂದೇ ಇಲ್ಲವೆಂದು ಕಾಣುತ್ತೆ-ಅದನ್ನು ನೋಡುವ ರೀತಿಯಲ್ಲಿ ನೋಡಿ, ಸವಿಯುವ ರೀತಿಯಲ್ಲಿ ಸವಿದರೆ ಚೆನ್ನ.. ಒಳ್ಳೆಯ ಹುರಿದ ರವೆ, ಕರಿಬೇವಿನ ಸುವಾಸನೆ, ಅಂಟಿಯೂ ಅಂಟದ ಎಣ್ಣೆ, ಎಲ್ಲವೂ ಎಷ್ಟು ಚೆನ್ನಾಗಿರುತ್ತೆ. ದಿನವೂ ಬೇರೆ ಬೇರೆ ತೆರನಾದ ಉಪ್ಪಿಟ್ಟು ಮಾಡಬಹುದು. ತರ್ಕಾರಿ ಹಾಕಿ, ಅಥವ ಬಾಂದಲೆಯಲ್ಲೆ ಉಪ್ಪಿಟ್ಟು ಕೆದಕುವುದು...ಎಲ್ಲದಕ್ಕೂ ಅದರದೇ ಆದ ರುಚಿ..ಉಪ್ಪಿಟ್ಟಿನ ಬಗೆಗೆ ಮೆಚ್ಚುಗೆ ಹಾಗು ದ್ವೇಷ ಎರಡನ್ನೂ ಬೆರೆಸಿ ನಿಮ ಕಷ್ಟಗಳನ್ನ ಹೇಳಿಕೊಂಡಿದ್ದೀರ..ಕಷ್ಟಗಳನ್ನು ಬಿಟ್ಟು ನಿಮಗೆ ಒಳ್ಳೆಯ ಉಪ್ಪಿಟ್ಟು ಸಿಗಲಿ.

Enigma said...

:) nimma baraha oodeda mele nage annisuthede naanu nimma category ge sereidavala endu :). but i also make pulav often. ppl who ahve eaten my version of pongal :) say they forgot wht pongal is. so taht way in a way iam better but at the same time i don't enjoy cooking so much , i owuld try to adjust n eat than cook soemthing elaborate. But u guys are lucky u can get ur wife to cook. but we girls ahev to cook irrespectiev of our like n dislikes n working / non working. world is not a fair place :P

Anveshi said...

ನನಗೆ ಉಪ್ಪಿಟ್ಟು ಮಾಡುವುದು, ಅನ್ನ-ಸಾಂಬಾರು, ಚಪಾತಿ, ಪುಲಾವ್ ಮಾಡುವುದು ಎಲ್ಲವೂ ಇಷ್ಟವೆ. ಆದ್ರೆ ಅದನ್ನು ಬೇರೆಯವರು ಮಾಡಬೇಕು, ನಾನು ತಿನ್ನಬೇಕು, ತಿಂದ ಬಳಿಕ ನನ್ನ ತಟ್ಟೆ ಲೋಟಗಳನ್ನು ಬೇರೆಯವರು ತೊಳೆಯಬೇಕು.... ನಮ್ಮಂಥವರು ಬೆಳೆಯಬೇಕು... ಹೀಗೆಲ್ಲಾ ಬೇಕುಬೇಕಾದ ಆಸೆಗಳಿವೆ.

ಉಪ್ಪಿಟ್ಟು ಮಾಡಿದ್ದು ಹೆಚ್ಚಾದ್ರೆ ಶ್ರೀತ್ರೀಯವರ ತುಳಸಿವನದಲ್ಲಿ ಬೆಳೆಯುವ ಸಸಿಗಳಿಗೆ ಉಣಬಡಿಸಬಹುದು.

ಆದ್ರೆ, ಎನಿಗ್ಮಾ ಹೇಳಿದ ಪೊಂಗಲ್ ಸುದ್ದಿ ಕೇಳಿದ್ರೆ ಭಯವಾಗುತ್ತೆ. ಹುಡ್ಗೀರಿಗೆ ಸಿದ್ಧಿಸುವ ಈ ಅಡುಗೆ ಎಂಬುದು ಬಲುದೋ...ಡ್ಡ ಕಲೆಯೇ ಅಲ್ವೆ?

Anonymous said...

೧) ಉಪ್ಪಿಟ್ಟು ಎಂದರೆ ಬೈ ಡಿಫಾಲ್ಟ್ 'ರವೆ ಉಪ್ಪಿಟ್ಟು' ಎಂದಾಗಿರುವುದರಿಂದ ಬಹುಶಃ ಉಪ್ಪಿಟ್ಟುದ್ವೇಷಿ (ಈ ಪದವು 'ಅಸತ್ಯಾನ್ವೇಷಿ' ಜತೆ ರೈಮಿಸುತ್ತದೆ!)ಗಳ ಸಂಖ್ಯೆ ಬಹಳವಾಗಿರುವುದು. ಆದರೆ ನಮ್ಮಲ್ಲಿ ರವೆಉಪ್ಪಿಟ್ಟು ಮಾತ್ರವಲ್ಲದೆ ಅಕ್ಕಿ ಉಪ್ಪಿಟ್ಟು, ಅಕ್ಕಿನುಚ್ಚಿನ ಉಪ್ಪಿಟ್ಟು, ಅವರೆಕಾಳು ಉಪ್ಪಿಟ್ಟು ಇತ್ಯಾದಿ ತರಾವರಿ ಇರುವುದರಿಂದ ಯಾರೂ worry ಮಾಡಿಕೊಳ್ಳಬೇಕಾದ್ದಿಲ್ಲ.

೨) ಉಪ್ಪಿಟ್ಟಿಗೆ ಉಪ್ಪು ಹಾಕಿದ್ದರೆ ಮಾತ್ರ ಅದು ಉಪ್ಪಿಟ್ಟು (ಉಪ್ಪು + ಇಟ್ಟು; ಲೋಪಸಂಧಿ). ಒಂದುವೇಳೆ ಉಪ್ಪು ಹಾಕಲು ಮರೆತುಹೋದರೆ ನಾನದನ್ನು 'ಉಪ್ಪಿಡದೆ' (ಉಪ್ಪು + ಇಡದೆ, ವನ್ಸ್ ಅಗೈನ್ ಲೋಪ ಸಂಧಿ) ಎನ್ನುತ್ತೇನೆ.

೩) sritriಯವರು ನೆನಪಿಸಹೊರಟ ಸೂಕ್ತವು, 'ಉಪ್ಪಿಟ್ಟೋ ಉಪ್ಪಿಟ್ಟು ಗೋವಿಂದ ಉಪ್ಪಿಟ್ಟು ಗರುಡಧ್ವಜ... ಉಪ್ಪಿಟ್ಟು ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು' ಎಂಬುವುದು.

೪) 'ಉಪ್ಪಿಟ್ಟಿನಲ್ಲಿ ಬಲವಿದೆ!' ಸ್ಲೋಗನ್ ನಿಂದ ಗುಂಡಿನ ಸುರಿಮಳೆಯಾಗಿ ಅಲ್ಲೆಲ್ಲಾದರೂ ಹಲ್ಲಿ/ಜಿರಳೆಗಳ ಬಾಲ ಬಿದ್ದುಬಿಟ್ಟರೆ 'ಉಪ್ಪಿಟ್ಟಿನಲ್ಲಿ ಬಾಲವಿದೆ!' ಎಂದಾಗಬಹುದು. ಜತೆಯಲ್ಲೇ ಅಲ್ಪಸ್ವಲ್ಪ ಉಪ್ಪಿಟ್ಟಿನ ಮೇಲೆ ಅಲ್ಪಸ್ವಲ್ಪ ಭಕ್ತಿಯಿರುವವರೂ ಉಪ್ಪಿಟ್ಟಿನ ವಿಷಯದಲ್ಲಿ ನಾಸ್ತಿಕರಾಗಬಹುದು. ಆಗ ಅಕ್ಷರಶಃ "ಉಪ್ಪಿಟ್ಟೋ ಉಪ್ಪಿಟ್ಟು ಗೋವಿಂದಾ ಗೋ...ವಿಂದಾ...!"

Satish said...

ನಿಮ್ಮ ಈ ಪ್ರತಿಕ್ರಿಯೆಗಳನ್ನೆಲ್ಲ ನೋಡಿದ ಮೇಲೆ ಒಂದೇ 'ಸವಿ'ಯವರ ಮನೆಗೋ ಇಲ್ಲಾ sritri ಅವರ ಮನೆಗೋ ಉಪ್ಪಿಟ್ಟು ತಿನ್ನಲು ಹೋದರೆ ಹೇಗೆ ಎಂದು ಯೋಚಿಸುತ್ತಿದ್ದೆ. enigma ಅವರ ಮನೆಯ ಉಪ್ಪಿಟ್ಟನ್ನಾಗಲೀ, ಪೊಂಗಲ್ಲನ್ನಾಗಲೀ ತಿನ್ನಲು ಇನ್ನೊಮ್ಮೆ ಹೋದರಾಯಿತು - ಎಷ್ಟೇ ಸಮಜಾಯಿಷಿ ಹೇಳಿಕೊಂಡರೂ 'ಅನ್ವೇಷಿ'ಗಳ ಹಾಗೂ ಜೋಶಿಯವರ ಆತಿಥ್ಯದಲ್ಲಿ ನಂಬಿಕೆ ಬರುತ್ತಿಲ್ಲ!

ಉಪ್ಪಿಟ್ಟಿನಲ್ಲಿ ಬಲವಿಲ್ಲವೆಂದವರ್‍ಯಾರು? ಇಲ್ಲವೆಂದಾಗಿದ್ದರೆ ನಾವೆಲ್ಲರೂ ತಾಣದಲ್ಲಿ ಈ ರೀತಿ ಒಗ್ಗಟ್ಟಿನಿಂದಿರಲಾಗುತ್ತಿತ್ತೇ?

Enigma said...

"anveshi"yavare girls have no choice!! but to cook. As we ahve saying practice makes (wo)man perfect, by cooking for yeras they becoem good cook :)
But these days in blore i have herad that workinng couples hire a cook :) hope i also have that previlige.

Enigma said...

"anveshi"yavare girls have no choice!! but to cook. As we ahve saying practice makes (wo)man perfect, by cooking for yeras they becoem good cook :)
But these days in blore i have herad that workinng couples hire a cook :) hope i also have that previlige.

Enigma said...

"anveshi"yavare girls have no choice!! but to cook. As we ahve saying practice makes (wo)man perfect, by cooking for yeras they becoem good cook :)
But these days in blore i have herad that workinng couples hire a cook :) hope i also have that previlige.

Anonymous said...

ಮೂರು ಹೊತ್ತು ಊಟಕ್ಕೂ ಅಡುಗೆಯವನನ್ನು ನೇಮಿಸಿಕೊಳ್ಳುವ ಪ್ರಿವಿಲೆಜ್ಜನ್ನು ಪ್ರಾರ್ಥಿಸುತ್ತ enigma ಅವರು ಮೂರು ಸಲ ತನ್ನ ಕಾಮೆಂಟನ್ನು ಪೋಸ್ಟಿಸಿದಂತಿದೆ!!!

bhadra said...

ದಿಟವಾಗಿಯೂ ಉಪ್ಪಿಟ್ಟಿನಲ್ಲಿ ಬಲವಿದೆ. ನಾನು ಉಪ್ಪಿಟ್ಟನ್ನು ಗೊಬ್ಬರ ಎನ್ನುತ್ತಿದ್ದೆ. ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲು ಆಗೋಲ್ಲ. ಕಾಂಕ್ರೀಟಿನಂತೆ ಹೊಟ್ಟೆಯೊಳಗೆ ಕುಳಿತುಬಿಡುತ್ತದೆ. ಉಪ್ಪಿಟ್ಟು ಮತ್ತು ಬಿಸಿಬೇಳೆಬಾತ್ ತಿಂದು ಜೀರ್ಣಿಸಿಕೊಂಡವನಿಗೆ ಹೆಚ್ಚಿನ ಬಲವಿದೆ.

Anonymous said...

Interesting website with a lot of resources and detailed explanations.
»

Anonymous said...

ನನಗಂತೂ ಉಪ್ಪಿಟ್ಟು ಸ್ವಲ್ಪವೂ ಇಷ್ಟವಿಲ್ಲ. ಅದರ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ.

-ಪವನಜ