ನಾವು, ಜನಸಾಮಾನ್ಯರು ಅಥವಾ ನಮ್ಮ ಮಾನವ ಜನಾಂಗವನ್ನು ಒಟ್ಟಿಗೆ ಪ್ರತಿನಿಧಿಸುವ ನಾವೆಲ್ಲರೂ ಈ ಕಳೆದ ನೂರು ವರ್ಷಗಳಲ್ಲಿ ದುರ್ಬಲರಾಗಿದ್ದೇವೆಯೇ?
ಅಂಕಿ-ಅಂಶಗಳ ಪ್ರಕಾರ ನಾವೆಲ್ಲರು ಧೀರ್ಘಾಯುಗಳು, ನಮ್ಮ ಬದುಕಿನ ಗುಣಮಟ್ಟ ಹೆಚ್ಚಿದೆ, ನಮ್ಮ ಮೌಲ್ಯ (net worth) ವೃದ್ಧಿಯಾಗಿದೆ.
ನಮ್ಮ ಸಂಖ್ಯೆ ಹೆಚ್ಚಿದೆ - 1900 ರಲ್ಲಿ 1.6 ಬಿಲಿಯನ್ ಇದ್ದದ್ದು 2020ಕ್ಕೆ 7.8 ಬಿಲಿಯನ್ ಆಗಿದೆ. ಅದರಂತೆ ನಮ್ಮ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ:
ಹೃದಯ ಸಂಬಂಧಿ ಖಾಯಿಲೆಗಳು, ಕ್ಯಾನ್ಸರ್, ರಸ್ತೆ ಅಫಘಾತ, ಡಯಬೀಟಿಸ್ ಮೊದಲಾದಂತೆ ಮಿಲಿಯನ್ನುಗಟ್ಟಲೆ ಜನ ಸಾಯುತ್ತಲೇ ಇದ್ದಾರೆ.
ಫ್ಲೂ (ಇನ್‌ಫ್ಲೂಯೆಂಜ಼ಾ) ಒಂದರಿಂದಲೇ ವರ್ಷಕ್ಕೆ ಸಾವಿರಾರು ಜನ ಸಾಯುತ್ತಿದ್ದಾರೆ. ನಿಮಗೆಲ್ಲ ನೆನಪಿರುವಂತೆ,
2004ರ ಡಿಸೆಂಬರ್ 26ರಂದು ಬಂದ ಸುನಾಮಿಯಿಂದ ಸುಮಾರು ಎರಡೂವರೆ ಲಕ್ಷ ಜನ ಸತ್ತು ಹೋಗಿದ್ದು, ಸಾವಿರಾರು ಜನ ತಮ್ಮ ಮನೆ-ಮಠವನ್ನು ಕಳೆದುಕೊಂಡು ನಿರ್ಗತಿಕರಾಗಿದ್ದು ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ.
ಆದರೆ, ಈ ಕೋವಿಡ್-೧೯ ಎನ್ನುವ ಮಹಾಮಾರಿ ನಮ್ಮೆಲ್ಲರನ್ನು ಎಲ್ಲಿ ಆಪೋಷನ ತೆಗೆದುಕೊಳ್ಳುವುದೋ ಎನ್ನುವುದು ಎಲ್ಲರ ಭೀತಿ. ಎಲ್ಲರನ್ನೂ ಒಮ್ಮೆಲೇ ಬಲಿ ತೆಗೆದುಕೊಂಡ ಸುನಾಮಿಯಂತಲ್ಲ ಇದರ ಕಥೆ, ಒಂದು ಸಾಮಾಜಿಕ ವ್ಯವಸ್ಥೆಯನ್ನೇ ಹಂತ-ಹಂತವಾಗಿ ಮಲಗಿಸಿ, ಯಾವ ಶಸ್ತ್ರಾಸ್ತವನ್ನೂ ಬಳಸದೇ ಎಲ್ಲರನ್ನೂ ಮುಗಿಸಿಬಿಡುವ ಶಕ್ತಿ ಈ ವೈರಸ್ಸಿಗಿದೆ.
ಆದರೆ, ಮತ್ತೆ ಅದೇ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ: ಈ ನೂರು ವರ್ಷಗಳಲ್ಲಿ ನಾವು ದುರ್ಬಲರಾಗಿದ್ದೇವೆಯೇ?
ನಮ್ಮ ಗ್ಲೋಬಲೈಜೇಷನ್ ಅನ್ನೋದೇ ನಮಗೆ ಶಾಪವಾಯಿತು. ನೂರು ವರ್ಷಗಳ ಹಿಂದೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಇಷ್ಟೊಂದು ಕ್ಷಿಪ್ರವಾಗಿ ಹೋಗಿ-ಬರುವ ವ್ಯವಸ್ಥೆ ಇದ್ದಿರಲಿಲ್ಲ. ಅಲ್ಲದೇ ನಮ್ಮೆಲ್ಲರ ಓಡಾಟಗಳು ಸ್ಥಳೀಯ ಜಿಲ್ಲೆ-ಪ್ರ್ಯಾಂತ್ಯಗಳಿಗೆ ಸೀಮಿತವಾಗಿರುತ್ತಿದ್ದುದು ವಿಶೇಷ. ಒಂದು ದೇಶದಲ್ಲಿ ಹುಟ್ಟಿದ ಮಹಾಮಾರಿ ಮತ್ತೊಂದು ದೇಶವನ್ನು ಈಗ ಆಕ್ರಮಿಸುತ್ತಿರುವಂತೆ ಅತಿಯಾದ ವೇಗದಲ್ಲಂತೂ ಆಕ್ರಮಿಸುತ್ತಿರಲಿಲ್ಲ. ಜೊತೆಗೆ, ಆಗಿನ ಕಾಲದಲ್ಲಿ ವಾಹನ ವ್ಯವಸ್ಥೆಗಳೇ ಇರಲಿಲ್ಲ - ಇದ್ದರೂ ಕೆಲವೇ ಜನರಿಗೆ ಸೀಮಿತವಾಗಿರುತ್ತಿತ್ತು. ಆದರೆ, ಈಗ ಹಾಗಿಲ್ಲ. ಪ್ರಪಂಚ ಒಂದು ಹಳ್ಳಿಯಾಗಿದೆ (global village), ಅದರಂತೆ ಒಂದು ಹಳ್ಳಿಯಲ್ಲಾಗುವ ಎಲ್ಲ ಘಟನೆಗಳಿಗೂ ಆ ಹಳ್ಳಿಯ ಎಲ್ಲರೂ ಸ್ಪಂದಿಸುತ್ತಾರೆ, ಅದನ್ನು ಪ್ರತಿಬಿಂಬಿಸುತ್ತಾರೆ. ಈಗಿನ ಟ್ರೆಂಡುಗಳೂ ಕೂಡ ಹುಟ್ಟುವುದೂ-ಸಾಯುವುದೂ ಅಷ್ಟೇ ವೇಗವಾಗಿ.
ಆದರೆ, ನಮ್ಮ ಹೆಚ್ಚಿನ ವಿದ್ಯಾಭ್ಯಾಸ (or simply awareness), ನಮ್ಮಲ್ಲಿ ಹುಲುಸಾಗಿ ಬೆಳೆದು ಯಥೇಚ್ಛವಾಗಿ ಸಿಗುವ ತಂತ್ರಜ್ಞಾನ, ಇವು ನಮ್ಮಲ್ಲಿನ ಆರ್ಗನೈಜೇಷನ್ ಶಕ್ತಿಯನ್ನು ಕಡಿಮೆ ಮಾಡಿವೆಯೇ?
ಉದಾಹರಣೆಗೆ:
ಭಾರತದ ಸ್ವಾತಂತ್ರ್ಯ ಸಂಗ್ರಾಮ (೧೮೫೭-೧೯೪೭) ವನ್ನು ವಿಶ್ಲೇಷಿಸಿದಾಗ, ಆಗಿನ ಕಾಲದಲ್ಲಿ ಅದು ಹೇಗೆ ಆರಂಭವಾಗಿ, ದೇಶದುದ್ದಕ್ಕೂ ಬೆಳೆಯಿತು? ಎಂದು ಸೋಜಿಗಗೊಳ್ಳಬೇಕಾಗುತ್ತದೆ. ಈಗಿನ ಕಾಲದಲ್ಲಾದರೆ ಕ್ಷಣಾರ್ಧದಲ್ಲಿ ದೇಶವೇನು? ವಿಶ್ವದ ಯಾವ ಭಾಗವನ್ನು ಬೇಕಾದರೂ ನಮ್ಮ ಸುದ್ದಿಗಳಿಗಾಗಿ ತಡಕಾಡಬಹುದು. ಆಗ ತಂತ್ರಜ್ಞಾನ ಈಗಿನಷ್ಟು ಮುಂದುವರೆದಿರಲಿಲ್ಲ, ಜನರು ಈಗಿನಂತೆ ಹೆಚ್ಚು-ಹೆಚ್ಚು ಪದವೀಧರರಾಗಿರಲಿಲ್ಲ, ಆದರೆ ಸಮರ್ಥ ನಾಯಕತ್ವವನ್ನು ನಂಬಿ ಅವರೆಲ್ಲರೂ ಮುಂದೆ ಬಂದಿದ್ದರು, ತಮ್ಮ ತಮ್ಮ ಮನೆ-ಮಠವನ್ನು ತೊರೆದು ರಾಷ್ಟ್ರದ ಬಲವಾಗಿ ನಿಂತಿದ್ದರು. ಮಾಡು-ಇಲ್ಲವೇ-ಮಡಿ ಎನ್ನುವ ಚಳವಳಿಯಲ್ಲಿ ಆನೇಕರು ತಮ್ಮ ಕೊರಳನ್ನು ಸಮರ್ಪಿಸಿದ್ದರು.
ಅವರದ್ದೂ ಸಹ ಜೀವವಲ್ಲವೇ? ಅವರೆಲ್ಲರಿಗೂ ಜೀವವಿರಲಿಲ್ಲವೇ? ಅವರಿಗೂ ಕೂಡ ತಮ್ಮ-ತಮ್ಮ ಸಂಸಾರಗಳ ಹೊಣೆ ಇದ್ದಿರಲಿಲ್ಲವೇ? ಆದರೆ, ತಮ್ಮ ವೈಯಕ್ತಿಕ ಆಗುಹೋಗುಗಳ ಮುಂದೆ ರಾಷ್ಟ್ರ ದೊಡ್ಡದಾಗಿತ್ತು. ಹೋರಾಟ ಉಸಿರಾಗಿತ್ತು. ರಾಷ್ಟ್ರ ನಾಯಕರುಗಳಿಗೆ ಬೆಂಬಲ ಕೊಡಬೇಕಾಗಿತ್ತು. ಹೀಗೆ, ಅವರುಗಳೆಲ್ಲ ದೊಡ್ಡದನ್ನು ಗುರಿಯಾಗಿಟ್ಟುಕೊಂಡು, ಉಳಿದೆಲ್ಲವನ್ನು ಗೌಣವಾಗಿ ಕಂಡಿದ್ದರು.
ಮುಂದೆ ಕಾಲ ಕ್ರಮೇಣ, ಕುಟುಂಬಗಳು ಅವಿಭಕ್ತ ಪರಿಧಿಯನ್ನು ದಾಟಿ, ನ್ಯೂಕ್ಲಿಯರ್ ಕುಟುಂಬಗಳಾದವು. ಜನರ ವಲಸೆ ಸಹಜವಾಯಿತು. ನಗರೀಕರಣ ಹೆಚ್ಚಿತು. ವಿದ್ಯಾಭ್ಯಾಸದ ಮಟ್ಟ ಬೆಳೆಯಿತು. ಆದರೆ - ರಾಷ್ಟ್ರ, ಸ್ವಾತಂತ್ರ್ಯ, ಬಿಡುಗಡೆ, ಸ್ವಇಚ್ಛೆ, ಪ್ರಜಾಪ್ರಭುತ್ವ ಇವುಗಳು ಜನರಿಗೆ ಆಯ್ಕೆಯ ಹಕ್ಕನ್ನು ನೀಡಿದವು. ಜನರು ತಮಗೆ ಏನು ಬೇಕೋ ಅದನ್ನು ಆಯ್ದುಕೊಳ್ಳುವಂತಾದರು.
ಈ ಆಯ್ಕೆಯ ಪ್ರತಿಫಲವಾಗಿ ಕೆಲವೊಮ್ಮೆ ಅದರಲ್ಲಿ ನನಗೆ ಸ್ವಾರ್ಥ ಕಂಡುಬರುತ್ತದೆ. ಒಂದುವೇಳೆ, ಈಗೇನಾದರೂ ಸ್ವತಂತ್ರ್ಯ ಭಾರತದ ಚಳುವಳಿಯಂಥವು ಆರಂಭವಾದರೆ, ಅದಕ್ಕೆ ಬೆಂಬಲ ಕೊಡುವವರಾರು? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಬೆಂಬಲ ಎನ್ನುವುದು ತನು-ಮನ-ಧನದ ರೂಪದಲ್ಲಿರಬಹುದು, ಎಲೆಕ್ಟ್ರಾನಿಕ್ ಮಾಧ್ಯಮವನ್ನು ಅವಲಂಭಿಸಿರಬಹುದು (petition), ಅಥವಾ ಘೇರಾವ್/ಬಂದ್ (ಸತ್ಯಾಗ್ರಹ) ಮತ್ತಿತರ ಭೌತಿಕ ರೂಪದಲ್ಲಿರಬಹುದು.
ನಮ್ಮಲ್ಲಿ ಚಳವಳಿಗಳಾದಾಗ ವ್ಯವಸ್ಥೆಯ ವಿರುದ್ಧ ಜನ ತಮ್ಮ ’ಆತ್ಮಾರ್ಪಣೆ" ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಇದಕ್ಕೂ ಒಂದು ಹೆಜ್ಜೆ ಮುಂದುವರಿದು ಯೋಚಿಸಿದಾಗ ಒಂದು ವ್ಯವಸ್ಥೆಯ ವಿರುದ್ಧ ಅಥವಾ ಮತ್ತೊಂದು ವ್ಯವಸ್ಥೆಯ ಪರವಾಗಿ ಜನರು "ಆತ್ಮಾಹುತಿ"ಯನ್ನು ಮಾಡಿಕೂಳ್ಳುವುದನ್ನು ನೋಡಿದ್ದೇವೆ. ಆದರೆ, ಒಂದು ಖಾಯಿಲೆಯನ್ನು ಹರಡುವ ವೈರಸ್ಸಿನ ವಿರುದ್ಧವಾಗಿ ಜನರನ್ನು ಮೂರು ವಾರಗಳ ಕಾಲ ಕೂಡಿ ಹಾಕಿರುವಂತೆ ಕೇಳಿಕೊಂಡಾಗ ಜನರಿಗೆ ಮನೆಯಲ್ಲಿರಲು ಕಷ್ಟವಾಗುತ್ತದೆ! ಅದರಿಂದ, ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆಯಲ್ಲ!
***
ಜನರು ಸುಖದ ಸುಪ್ಪತ್ತಿಗೆಯಲ್ಲಿ (comfort zone) ಕುಳಿತು ತೇಲಾಡುತ್ತಿರುವಾಗ ಯಾವುದೇ ಸಂಶೋಧನೆಗಳು ಹೊರಗೆ ಬಾರವು. ಆಭರಣವಾಗುವ ಮೊದಲು ಚಿನ್ನಕ್ಕೆ ಮೂಸೆಯಲ್ಲಿ ಪುಟವಿಟ್ಟ ಹಾಗೆ, ಶಿಲ್ಪ ಕಲಾಕೃತಿ ಆಗುವ ಮೊದಲು ಕಠಿಣವಾದ ಶಿಲೆಯನ್ನು ಬಾಚಿ-ಚಾಣಗಳ ಮೂಲಕ ಕುಟ್ಟಿದ ಹಾಗೆ, ಕಬ್ಬನ್ನು ಹಿಂಡಿ ಸವಿಯಾದ ಬೆಲ್ಲವನ್ನು ತೆಗೆದ ಹಾಗೆ - ಒಂದು ಸಮಾಜವೂ ತನ್ನ ಕಷ್ಟಗಳ ಕುಲುಮೆಯಲ್ಲಿ ಬೇಯಬೇಕಾಗುತ್ತದೆ, ಹಾಗಾಗುವುದರಿಂದಲೇ ಮುಂದಿನ ತಲೆಮಾರಿಗೆ ನಾವು ಹೊಸದೇನನ್ನೋ ತೆಗೆದುಕೊಂಡು ಹೋಗಲು ಸಾಧ್ಯ. ಇಲ್ಲಿ ಸಾಧನೆ ಮುಖ್ಯವಾಗುತ್ತದೆ, ಇಲ್ಲಿ ದಿಢೀರ್ ಜನಪ್ರಿಯತೆ ಸಿಗುವುದಿರಲಿ ವರ್ಷಗಟ್ಟಲೇ ಮಾಡಿದ ಶ್ರಮಕ್ಕೆ ಕಿರುಗಾಸು ಬೆಲೆಯೂ ಸಿಗದಂತಾಗಬಹುದು, ಆದರೆ ಈ ರೀತಿಯು ಅನೇಕ ಪ್ರಯತ್ನಗಳು ನಮ್ಮನ್ನು ಸಂಪೂರ್ಣರನ್ನಾಗಿ ಮಾಡುವುದರ ಜೊತೆಗೆ ಸಬಲರನ್ನಾಗಿಯೂ ಮಾಡಬಲ್ಲವು - ಎಂಬುದು ಈ ಹೊತ್ತಿನ ನನ್ನ ನಂಬಿಕೆ!