ಗ್ರ್ಯಾನ್‌ವಿಲ್ಲ್ ಪ್ರಸಂಗ
ಒಂದೆರಡು ವಾರಗಳ ಹಿಂದೆ ನಮ್ಮ ಕಂಪನಿಯವರು ನಡೆಸಿಕೊಟ್ಟ ಲೀಡರ್‌ಶಿಪ್ ತರಗತಿಯೊಂದರಲ್ಲಿ ಇದ್ದ ಹದಿನಾಲ್ಕು ಜನರಲ್ಲಿ ನಾನು ಮತ್ತು ರಮೇಶ್ ಮಾತ್ರ ಭಾರತೀಯರು ಎಂದುಕೊಂಡಿದ್ದೆ, ಆದರೆ ನನ್ನ ಲೆಕ್ಕ ತಪ್ಪು ಎಂದು ಗೊತ್ತಾಗಿದ್ದು ಅದರ ಮುಂದಿನವಾರವೇ. ಅದೇ ತರಗತಿಯಲ್ಲಿ ಗ್ರ್ಯಾನ್‌ವಿಲ್ಲ್ (Granville - ಮೊದಲ ಹೆಸರು) ಎಂಬುವವರೂ ಇದ್ದರು, ಸುಮಾರು ನಲವತ್ತೈದರ ಆಸುಪಾಸಿನ ಇವರು ಸೂಟಿನಲ್ಲಿ ಕಂಗೊಳಿಸುತ್ತಿದ್ದರು, ನಾವೆಲ್ಲರೂ ಎಂದಿನಂತೆ ಬ್ಯುಸಿನೆಸ್ ಕ್ಯಾಷುವಲ್‌ನಲ್ಲಿ ಇದ್ದೆವು. ತರಗತಿಯಲ್ಲಿ ಆಶ್ಚರ್ಯಕರವೆನ್ನುವಂತೆ ಗ್ರ್ಯಾನ್‌ವಿಲ್ಲ್ ಎಲ್ಲ ಚರ್ಚೆಗಳಲ್ಲೂ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು, ಕ್ಲಾಸನ್ನು ಅದೆಷ್ಟೋ ವರ್ಷಗಳಿಂದ ನಡೆಸುತ್ತಿರುವ ಇನ್ಸ್ಟ್ರಕ್ಟರ್‌ಗೂ ಗೊತ್ತಿರದ ಎಷ್ಟೋ ವಿಷಯಗಳಿಗೆ ಉತ್ತರಗಳನ್ನು ಹೇಳುತ್ತಿದ್ದರು, ಅಲ್ಲದೇ ಕ್ಲಾಸಿನಲ್ಲಿ ಬಹಳ ಚಟುವಟಿಕೆಯಿಂದಲೂ ಇದ್ದರು. ಅವರು ನನಗಿಂತ ಸ್ವಲ್ಪ ದೂರದಲ್ಲಿ ಕುಳಿತದ್ದರಿಂದ ಕ್ಲಾಸಿನಲ್ಲಿ ಒಂದೆರಡು ಮಾತುಗಳನ್ನು ಆಡಿಕೊಂಡಿದ್ದು ಬಿಟ್ಟರೆ ಮತ್ತಿನ್ಯಾವ ಚರ್ಚೆಯೂ ನಮ್ಮ ನಡುವೆ ನಡೆದಿರಲಿಲ್ಲ.
ಈ ಕ್ಲಾಸು ಮುಗಿದು ಒಂದು ವಾರದ ನಂತರ ಆಫೀಸಿನಲ್ಲಿ ಇದೇ ಗ್ರ್ಯಾನ್‌ವಿಲ್ಲ್ ದರ್ಶನವಾಯಿತು, ನಾವಿಬ್ಬರೂ 'Hello, Hi...''ಕ್ಲಾಸು ಹಾಗಿತ್ತು, ಹೀಗಿತ್ತು...' ಎಂದು ಉಭಯಕುಶಲೋಪರಿಯಾದ ಮೇಲೆ ನಮ್ಮ ನಮ್ಮ ಪಾಡಿಗೆ ಹೊರಟುಹೋದೆವು, ಗ್ರ್ಯಾನ್‌ವಿಲ್ಲ್ ಈ ದಿನವೂ ಸೂಟು ಧರಿಸಿದ್ದರು, ಆದರೆ ಈ ದಿನ ಬಹಳ ಹತ್ತಿರದಿಂದ ನೋಡಿದ ಮೇಲೆ ಗ್ರ್ಯಾನ್‌ವಿಲ್ಲ್ ಭಾರತೀಯನಿರಬಹುದು ಎಂಬ ಬಲವಾದ ಅನುವಾದ ಮೂಡಿತು, ಅವರನ್ನು ಸರಿಯಾಗಿ ನೋಡಿದಾಗ ನಮ್ಮೂರಿನಲ್ಲಿರುವ ಪುರೋಹಿತರೊಬ್ಬರ ನೆನಪು ಬಂತು - ಎತ್ತರವಾದ ನಿಲುವು, ಗೌರವರ್ಣ, ಸ್ವಲ್ಪ ನೆತ್ತಿ ಕಾಣುತ್ತಿತ್ತೇನೋ ಎನ್ನುವಂತೆ ತೆಳ್ಳಗಾದ ಅದೇ ಸುಮಾರು ಹಣ್ಣಾದ ಬಿಳಿ ಕೂದಲುಗಳು, ಸಾಕಷ್ಟು ಓದಿಕೊಂಡಿದ್ದಂತೆ ಕಂಡುಬಂದ ಆಳವಾದ ಕಣ್ಣುಗಳು, ಹಣೆಯ ಮೇಲೆ ಹರಡಿಕೊಂಡ ಉದ್ದುದ್ದ ಗೆರೆಗಳು ಇವುಗಳೆಲ್ಲವೂ ನನಗೆ ಗ್ರ್ಯಾನ್‌ವಿಲ್ಲ್ ಮೇಲೆ ಒಂದು ರೀತಿಯ ಗೌರವ ಭಾವನೆಯನ್ನು ಮೂಡಿಸಿದವು, ನಾನು ಲಗುಬಗೆಯಲ್ಲಿ ಇದ್ದುದರಿಂದ ಮತ್ತೆ ಹೆಚ್ಚೇನನ್ನೂ ಮಾತನಾಡಲಿಲ್ಲ, ಆದರೆ ಗ್ರ್ಯಾನ್‌ವಿಲ್ಲ್ ಗೆ ಯಾವುದೇ ಅರ್ಜೆಂಟಿಲ್ಲದಿದ್ದರೂ ನಾನೇ ಅವರ ಮಾತುಗಳನ್ನು ಮಧ್ಯದಲ್ಲಿ ತುಂಡು ಮಾಡಿ ಓಡಿಹೋದಂತೆನಿಸಿತು.
ಅದೇ ದಿನ ಸಂಜೆ ಆಶ್ಚರ್ಯವೆನ್ನುವಂತೆ ನಾಲ್ಕೂವರೆಗೆಲ್ಲಾ ಎಲ್ಲೋ ಅರ್ಜೆಂಟಾಗಿ ಹೋಗಬೇಕು ಎಂದು ಓಡಿಹೋಗುತ್ತಿದ್ದ ನನಗೆ ಅಷ್ಟೇ ಗಡಿಬಿಡಿಯಲ್ಲಿ ಮನೆಗೆ ಹೊರಟ ಗ್ರ್ಯಾನ್‌ವಿಲ್ಲ್ ಕಣ್ಣಿಗೆ ಬೀಳಬೇಕೆ - ಅದೂ ಎಲಿವೇಟರ್ ಹತ್ತಿರ? ಸರಿ, ಮತ್ತೆ ಹಾಯ್‌ಗಳ ವಿನಿಮಯವಾಯಿತು, ಎಲಿವೇಟರ್‌ನಲ್ಲಿ ನಾವಿಬ್ಬರೇ ಇದ್ದವರು, ನಾನು ಧೈರ್ಯ ಮಾಡಿ ಕೇಳಿ ಬಿಟ್ಟೆ - 'By any chance are you from India?!' ಈ ಪ್ರಶ್ನೆಗೆ ಗ್ರ್ಯಾನ್‌ವಿಲ್ಲ್ ಹೌದು ಎಂದು ಉತ್ತರಕೊಟ್ಟು, ನನ್ನನ್ನು ಭಾರತೀಯನೇ? ಎಂದದಕ್ಕೆ ಹೌದು ಎಂದಾಗ, ಭಾರತದಲ್ಲಿ ಎಲ್ಲಿ? ಎಂದರು, ನಾನು ಕರ್ನಾಟಕದವನು ಎಂದೆ, ಕರ್ನಾಟಕದಲ್ಲಿ ಎಲ್ಲಿ ಎನ್ನಬೇಕೆ? ನಾನು ಶಿವಮೊಗ್ಗದವನು ಎಂದೆ...ಮುಂದೆ ನಾನು ಅವರನ್ನು ಭಾರತದಲ್ಲಿ ಎಲ್ಲಿ? ಎಂದು ಕೇಳಿದಾಗ ನನಗೆ ಆಶ್ಚರ್ಯವಾಗುವಂತೆ 'ಮಂಗಳೂರಿನವನು' ಎಂದು ಇಂಗ್ಲೀಷಿನಲ್ಲೇ ಉತ್ತರ ಕೊಟ್ಟರು - ನಾನು 'ಹಾಗಾದರೆ ಕನ್ನಡ ಬರುತ್ತೆ ನಿಮಗೆ' ಎಂದೆ, ಅವರು 'ಖಂಡಿತವಾಗಿ...' ಎಂದು ಹೇಳಿ ಮತ್ತೆ ಸಿಗೋಣ ಎಂದು ಹೇಳಿಕೊಂಡು ಇಬ್ಬರೂ ಅರ್ಜೆಂಟಿನಲ್ಲಿದ್ದುದರಿಂದ ನಮ್ಮ ನಮ್ಮ ದಾರಿ ಹಿಡಿದೆವು, ಅಂದಿನಿಂದ ಇಲ್ಲಿಯವರೆಗೂ ಗ್ರ್ಯಾನ್‌ವಿಲ್ಲ್ ಎಲ್ಲೂ ಸಿಕ್ಕಿಲ್ಲ, ಸಿಕ್ಕಿದರೆ ಕನ್ನಡದಲ್ಲೇ ಮಾತನಾಡುವ ಇರಾದೆ ಇದೆ.
***
ನನ್ನ ಸ್ನೇಹಿತರೊಬ್ಬರ ಹತ್ತಿರ ಮಾತನಾಡುತ್ತಾ ಗ್ರ್ಯಾನ್‌ವಿಲ್ಲ್ ಪ್ರಸಂಗವನ್ನು ವಿವರಿಸಿದೆ - ಅವರು ಭಾರತೀಯರು ಅನ್ನೋ ಅನುಮಾನ ಇದ್ದಿತಾದರೂ ಅವರ ಹೆಸರಿನಿಂದ ನನಗೆ ಕನ್ನಡಿಗರು ಎಂದು ಗೊತ್ತಾಗುವ ಸಾಧ್ಯತೆಗಳೇ ಇರಲಿಲ್ಲ. ಅದಕ್ಕೆ ನನ್ನ ಸ್ನೇಹಿತರು ಒಂದು ಕಾಲದಲ್ಲಿ ಮಂಗಳೂರು-ಗೋವಾ ಕಡೆಯಲ್ಲಿನ ಬ್ರಾಹ್ಮಣರು ಕ್ರಿಶ್ಚಿಯನ್ನರಾಗಿ ಪರಿವರ್ತಿತಗೊಂಡಿದ್ದೂ, ಮುಂದೆ ಟಿಪ್ಪೂಸುಲ್ತಾನನ ಕಾಲದಲ್ಲಿ ಸಾವಿರಾರು ಜನರನ್ನು ಮಂಗಳೂರಿನಿಂದ ಶ್ರೀರಂಗ ಪಟ್ಟಣದವರೆಗೆ ನಡೆಸಿ, ಸಾಕಷ್ಟು ಸಂಖ್ಯೆಯಲ್ಲಿ ಸಾವುನೋವಿಗೆ ಕಾರಣವಾಗಿದ್ದೂ ಅಲ್ಲದೆ ಸುಮಾರು ಜನರನ್ನು ಬಲವಂತವಾಗಿ ಮುಸಲ್ಮಾನರನ್ನಾಗಿ ಪರಿವರ್ತಿತರನ್ನಾಗಿ ಮಾಡಿದ್ದೂ, ಹಾಗೆ ಮಾಡಿಯೂ ಎಲ್ಲ ಕಷ್ಟಗಳಿಗೆ ಹೆದರದೆಯೂ ಕೆಚ್ಚೆದೆಯಿಂದ ಮುಂದೆ ಬಿಡುಗಡೆಯಾಗಿ ಮಂಗಳೂರಿಗೆ ಹೋದ ಕ್ರಿಶ್ಚಿಯನ್ನರಿಗೆ ಬಹಳ ಬೆಲೆ ಇದೆ, ಅವರನ್ನು ಆಯಾ ಸಮುದಾಯಗಳಲ್ಲಿ ಬಹಳ ಗೌರವಪೂರ್ವಕವಾಗಿ ನೋಡಿಕೊಳ್ಳುತ್ತಾರೆಂತಲೂ ಕಥೆಗಳನ್ನು ಹೇಳಿದರು - ಅವರು ಹಾಗೆ ಹೇಳಿದ್ದನ್ನು ನಾನು ವಿಶ್ವಾಸಪೂರ್ವಕವಾಗಿ ನಂಬುತ್ತೇನಾದರೂ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರಯತ್ನಿಸಲಿಲ್ಲವಾದ್ದರಿಂದ 'ಕಥೆ' ಎಂದು ಕರೆಯಬೇಕಾಯಿತು.
ಇದೇ ಮಾತುಗಳ ಮಧ್ಯೆ, ಸರಸ್ವತೀ ನದಿ ಮೂಲದ ಒಂದು ಪರಂಪರೆಯ ಬಗ್ಗೆ ಮಾತು ಬಂದಿತು - ಎಷ್ಟೋ ಜನರು ಸರಸ್ವತಿ ನದಿಯು ಬತ್ತಿ ಹೋಗಿಲ್ಲ ಅಥವಾ ಅದೃಶ್ಯವಾಗಿಲ್ಲ ಎಂದು ನಂಬಿಕೊಂಡಿದ್ದಾರಂತೆ, ಅಂದರೆ ಭಗೀರಥನ ಪ್ರಯತ್ನದಲ್ಲಿ ಸ್ವೇಚ್ಛಳಾಗಿ ಹರಿಯುತ್ತಿದ್ದ ಸರಸ್ವತಿಯ ಪಾತ್ರವನ್ನು ಬದಲಿಸಿ ಗಂಗೆಯನ್ನಾಗಿ ಪರಿವರ್ತಿಸಲಾಯಿತು - ಗಂಗೆ ನಿಜವಾಗಿಯೂ ಮೂಲ ನದಿಯಲ್ಲ ಎನ್ನುವ ಮಾತೂ ಕೇಳಿಬಂತು. ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಗಂಗಾವತರಣ ಮಾಡಿದ ಭಗೀರಥನ ಪ್ರಯತ್ನ ನದಿಯ ಪಾತ್ರವನ್ನು ಬದಲಿಸಿ ನೀರು ಕೊಂಡೊಯ್ದು ತನ್ನ ಪೂರ್ವಿಕರಿಗೆ ಮೋಕ್ಷ ಕೊಡಿಸುವ ಒಂದು ಯೋಜನೆಯಾಗಿ ಕಂಡುಬಂದಿತು. ಹಾಗೇ ಮಾತುಗಳು ಋಗ್ವೇದದ ಕಡೆಗೆ ಹೊರಳಿದಾಗ ನಮ್ಮ ಈಗಿನ ಗೋವಾ-ಮಂಗಳೂರು ಪ್ರಾಂತ್ಯದ ಎಷ್ಟೋ ಜನ ಕ್ರಿಶ್ಚಿಯನ್ನರು ವೇದಗಳ ಬಗ್ಗೆ ಬ್ರಾಹ್ಮಣರಿಗಿಂತ ಹೆಚ್ಚು ತಿಳಿದುಕೊಂಡಿರುವ ಪ್ರಸ್ತಾವವೂ ಬಂತು - ಆಗಿನ ಕಾಲದಲ್ಲಿ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನದಲ್ಲಿದ್ದ ಬ್ರಾಹ್ಮಣರನ್ನು ಮತಾಂತರಗೊಳಿಸಲು ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ನರಲ್ಲಿ ಮಹಾ ಪೈಪೋಟಿ ಇದ್ದಿರಬಹುದು, ಏಕೆಂದರೆ ಬ್ರಾಹ್ಮಣರನ್ನು ಒಲಿಸಿಕೊಂಡರೆ ಉಳಿದ ವರ್ಗದವರನ್ನು ಒಲಿಸಿಕೊಳ್ಳುವುದು ಸುಲಭ ಎಂಬುದು ಅಂದಿನ ಆಲೋಚನೆ ಇದ್ದಿರಬಹುದು.
ಈ ಎರಡು ವಾರಗಳಲ್ಲಿ ವೇದಗಳ ಕುರಿತು ಯೋಚನೆ ಮಾಡುವಂತಹ ಹಲವಾರು ಅವಕಾಶಗಳು ಕಾಕತಾಳೀಯವೆಂಬಂತೆ 'ಗ್ರ್ಯಾನ್‌ವಿಲ್ಲ್' ಪ್ರಸಂಗದ ಜೊತೆಗೆ ಥಳುಕು ಹಾಕಿಕೊಂಡಿದ್ದರಿಂದ ಈ ಬರಹವನ್ನು ಬರೆಯಬೇಕಾಗಿ ಬಂತೇ ವಿನಾ ಮತ್ಯಾವುದೇ ulterior motivation ನನಲ್ಲಿಲ್ಲ.
***
ನಾನು ಗ್ರ್ಯಾನ್‌ವಿಲ್ಲ್ ಜೊತೆಯಲ್ಲಿ ಮತ್ತಿನ್ನೆಲ್ಲಾದರೂ ಬಿಡುವಿನಲ್ಲಿ ಸಿಕ್ಕರೆ ಮಾತನಾಡುತ್ತೇನೆ, ಅವರ ಬಗ್ಗೆ ಗೆರೆಯನ್ನು ದಾಟದೇ ಎಷ್ಟು ತಿಳಿದುಕೊಳ್ಳಬೇಕೋ ಅಷ್ಟನ್ನು ತಿಳಿದುಕೊಳ್ಳುತ್ತೇನೆ, ಅವರು ಮಾತಿಗೆ ತೊಡಗುತ್ತಾರೆಂದರೆ ಮಾತಿಗೆ ಇಳಿಯಲು ನನಗೇನು ಹೆದರಿಕೆ? ಗ್ರ್ಯಾನ್‌ವಿಲ್ ಹೆಸರೋ, ಅವರು ಹಾಕಿಕೊಂಡ ಬಟ್ಟೆಯೋ, ಮಾತನಾಡುವ ವಿಧಿಯೋ, ಅಥವಾ ಮತ್ತಿನ್ಯಾವುದೋ ನನಗೆ ಅವರನ್ನು ಭಾರತೀಯರು ಎಂದು ನೋಡಿದ ಕೂಡಲೇ ಕಂಡು ಹಿಡಿಯದಂತೆ ಮಾಡಿದ್ದು ಸತ್ಯ, ಆದರೆ ಅದರ ಹಿಂದೆಯೇ ನಾನೂ ಕೂಡ ಅವರಂತೆಯೇ ಎಲ್ಲಿ ಬದಲಾಗಿಬಿಟ್ಟಿದ್ದೇನೋ ಎಂದು ಭಯವಾಗುತ್ತದೆ, ಇಲ್ಲವೆಂದಾದರೆ Are you from India? ಎಂದು ನನ್ನನ್ನೇಕೆ ಅವರು ಕೇಳುತ್ತಿದ್ದರು?
No comments:
Post a Comment