Friday, May 26, 2006

ನೂರಾ ಎಂಭತೈದು ವರ್ಷದ ಜೈಲುವಾಸ ಹೇಗಿದ್ದಿರಬಹುದು?

ನಿನ್ನೆ ಎನ್ರಾನ್ ಕಂಪನಿಯ ಟ್ರಯಲ್ ಮುಗಿದು ಹಳೆಯ ಇಬ್ಬರು ಎಕ್ಸೆಕ್ಯೂಟಿವ್‌ಗಳನ್ನು ಜ್ಯೂರರ್‌ಗಳು ಕನ್‌ವಿಕ್ಟ್ ಮಾಡಿದ್ದನ್ನು ಕೇಳಿ ೨೦೦೧ ರಿಂದ ಇಲ್ಲಿಯವರೆಗೆ ಆದ ಅಕೌಂಟಿಂಗ್ ಫ್ರಾಡ್ ಹಗರಣಗಳೆಲ್ಲ ಒಮ್ಮೆ ಕಣ್ಣ ಮುಂದೆ ಬಂದವು. ಎನ್ರಾನ್, ಎಮ್‌ಸಿಐ, ಟೈಕೋ ಒಂದೇ ಎರಡೇ ಹೀಗೆ ಹಲವಾರು ಕಂಪನಿಗಳ ಸೀನಿಯರ್ ಎಕ್ಸೆಕ್ಯೂಟಿವ್‌ಗಳ ನಿದ್ದೆ ಕೆಡಿಸಿದ ಅಕೌಂಟಿಂಗ್‌ಗೆ ಸಂಬಂಧ ಪಟ್ಟ ತನಿಖೆಗಳೂ, ಅದರ ಪರಿಣಾಮಗಳೂ ಆಯಾ ಕಂಪನಿಗಳ ನೌಕರರನ್ನೂ, ಆಯಾ ಕಂಪನಿಗಳಲ್ಲಿ ಬಂಡವಾಳ ಹೂಡಿದವರನ್ನೂ ಯೋಚನೆಗೆ ಹಚ್ಚಿದ್ದವು. ನಾನು ಎನ್ರಾನ್‌ನ ಎಕ್ಸೆಕ್ಯೂಟಿವ್ ಕೆನ್ ಲೇ ಬಗ್ಗೆ ಈ ಹಗರಣದ ಮೊದಲೇ ಕೇಳಿದ್ದೆ ಆತ ಹ್ಯೂಸ್ಟನ್ ವಲಯದಲ್ಲಿ ಬಹಳ ದೊಡ್ಡ ಬ್ಯುಸಿನೆಸ್‌ಮನ್ ಆಗಿದ್ದೂ, ಸೀನಿಯರ್ ಬುಷ್ ಚುನಾವಣೆಯಲ್ಲಿ ನಿಂತಾಗ ರಿಪಬ್ಲಿಕನ್ ಪಾರ್ಟಿಯಲ್ಲಿ ಹೆಚ್ಚು ಹಣವನ್ನು ಕೂಡಿಸಿದ್ದೂ, ಆತ ದೊಡ್ಡ ಫಿಲಾಂತ್ರೊಪಿಷ್ಟ್ ಆಗಿದ್ದೂ, ಮುಂದೆ ಜ್ಯೂನಿಯರ್ ಬುಷ್‌ಗೂ ಚುನಾವಣೆಯಲ್ಲಿ ಸಹಾಯ ಮಾಡಿ ಬುಷ್ ಕುಟುಂಬದ ಹತ್ತಿರದ ಸ್ನೇಹಿತನಾಗಿದ್ದೂ ಇವೆಲ್ಲವೂ ಗೊತ್ತಿತ್ತು. ಆದರೆ ನಿನ್ನೆಯ ವರ್ಡಿಕ್ಟ್‌ನ ಪ್ರಕಾರ ಕೆನ್ ಲೇಯನ್ನು ಎಲ್ಲಾ ಆರು ಕೌಂಟುಗಳಲ್ಲೂ ತಪ್ಪಿತಸ್ಥನೆಂದು ಜ್ಯೂರಿಗಳು ತೀರ್ಮಾನಿಸಿದ್ದರಿಂದ ಆತನಿಗೆ ೪೫ ವರ್ಷಗಳವರೆಗೂ ಜೈಲು ಶಿಕ್ಷೆ ಆಗಬಹುದು, ಜೊತೆಯಲ್ಲಿ ಎನ್ರಾನ್‌ನ ಮತ್ತೊಬ್ಬ ಎಕ್ಸೆಕ್ಯೂಟಿವ್ ಜೆಫ್ರಿ ಸ್ಕಿಲ್ಲಿಂಗ್ ವಿಷಯದಲ್ಲಂತೂ ಹತ್ತೊಂಬತ್ತು ಕೌಂತುಗಳಲ್ಲಿ ತಪ್ಪಿತಸ್ಥನೆಂದು ಜ್ಯೂರಿಗಳು ತೀರ್ಮಾನಿಸಿದ್ದಾರೆಂದೂ ಅವನಿಗೆ ಹೆಚ್ಚೆಂದರೆ ೧೮೫ ವರ್ಷಗಳವರೆಗೆ ಜೈಲಿನಲ್ಲಿಡಬಹುದು ಎಂದು ಕೇಳಿದಾಗ ನಗದೇ ಇರಲಾಗಲಿಲ್ಲ.

ಇದೇ ವರ್ಷ ಸೆಪ್ಟೆಂಬರ್ ೧೧ರಂದು ಅವರ ಜೈಲು ಶಿಕ್ಷೆಯನ್ನು ತೀರ್ಮಾನಿಸೋ ಹಾಗೆ ಕೋರ್ಟು ಡೇಟು ಕೊಟ್ಟಿದೆ, ೬೪ ವರ್ಷದ ಲೇ ಗೆ ೪೫ ವರ್ಷ ಹಾಗೂ ೫೨ ವರ್ಷದ ಸ್ಕಿಲ್ಲಿಂಗ್‌ಗೆ ೧೮೫ ವರ್ಷ ಜೈಲು ಶಿಕ್ಷೆ ಆಗಲಾರದು, ಅದರ ಬದಲು ಇಬ್ಬರೂ ಕಡಿಮೆ ಎಂದರೆ ಒಂದು ಇಪ್ಪತ್ತು ವರ್ಷವಂತೂ ಫೆಡರಲ್ ಜೈಲಿನಲ್ಲಿ ಕೊಳೆಯುವುದು ಗ್ಯಾರಂಟಿ ಆದರೂ ಲೆಕ್ಕಕ್ಕೆ ಲೆಕ್ಕ ಸೇರಿಸಿ ಪ್ರತಿಯೊಂದು ಕೌಂಟನ್ನೂ ಪ್ರತ್ಯೇಕವಾಗಿ ನೋಡಿ ಅದರಲ್ಲಿ ತಪ್ಪಿತಸ್ಥನೆಂದು ಕಂಡುಬಂದ ಕೌಂಟಿಗೆಲ್ಲಾದಕ್ಕೂ ಶಿಕ್ಷೆಗಳನ್ನು ಕೂಡಿಸುತ್ತಾ ಹೋಗಿ ಕೊನೆಗೆ ಹೆಚ್ಚೆಂದರೆ ನೂರು ಚಿಲ್ಲರೆ ವರ್ಷ ಬದುಕಬೇಕಾದವನಿಗೆ ೧೮೫ ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಲೂ ಹೇಸದ ಈ ವ್ಯವಸ್ಥೆಯನ್ನು ನೋಡಿ ಪಿಚ್ಚೆನಿಸಿತು.

***

ಅಮೇರಿಕದಲ್ಲಿ ತಪ್ಪು ಮಾಡಬಾರದು, ಮಾಡಿದರೆ ಸಿಕ್ಕಿ ಬೀಳಬಾರದು, ಅದು ಕ್ರಿಮಿನಲ್ ಕೇಸೇ ಆಗಲಿ, ಬಿಳಿ ಕಾಲರ್ ಕೇಸೇ ಆಗಲಿ, ಇಲ್ಲಿಯ ನ್ಯಾಯಾನ್ಯಾಯ ವ್ಯವಸ್ಥೆ ಹೇಗಿದೆ ಎಂದರೆ ಜೈಲು ಶಿಕ್ಷೆಯ ಅವಧಿ ಸಣ್ಣ ಹುಡುಗರು ಮಾಡಬಹುದಾದ ಗಣಿತವಾಗುತ್ತದೆ. ತಪ್ಪುಗಳಲ್ಲವಕ್ಕೂ ಇಷ್ಟಿಷ್ಟು ಶಿಕ್ಷೆ ಎಂದು ಸೇರಿಸಿದರಾಯಿತು. ಒಂದು ಸಣ್ಣ ವಯಲೇಷನ್ ಇದ್ದರೂ ಅದನ್ನು ರೆಕ್‌ಲೆಸ್ ಎಂಡೇಂಜರ್‌ಮೆಂಟ್ ಆಫ್ ಪಬ್ಲಿಕ್ ಲೈಫ್ ಎಂದು ಎಲ್ಲಿಯವರೆಗೆ ಬೇಕಾದರೂ ಎಳೆಯಬಹುದು. ಅದೇ ನಮ್ಮಲ್ಲಿ 'ಎಷ್ಟು ಕೊಲೇ ಮಾಡಿದ್ರೂ ಒಂದೇ ಶಿಕ್ಷೆ' ಅನ್ನೋದನ್ನ ಕೇಳಿದ್ದೇನೆ, ಹೆಚ್ಚೆಂದರೆ ಹದಿನಾಲ್ಕು ವರ್ಷ 'ಜೀವಾವಧಿ' ಶಿಕ್ಷೆ, ಅದರಲ್ಲೂ ಒಳ್ಳೇ ಬುದ್ಧಿ ತೋರಿಸಿದ್ರೆ ಬೇಗ ಹೊರಗೆ ಬಿಡ್ತಾರೆ ಅಂತಲೂ ಕೇಳಿದ್ದೇನೆ, ಎಷ್ಟು ಸುಳ್ಳೋ ನಿಜವೋ ಗೊತ್ತಿಲ್ಲ.

ಇಲ್ಲಿ ಎನ್ರಾನ್ ಎಕ್ಸೆಕ್ಯೂಟಿವ್‌ಗಳ ವಿಷಯದಲ್ಲಿ ಅವರನ್ನು ತಪ್ಪಿತಸ್ಥರೆಂದು ತೀರ್ಮಾನಿಸಲಾಗಿದೆ ಆದರೆ ಆ ಕಂಪನಿಯಲ್ಲಿ ನಡೆದ ಹಗರಣಗಳಿಗೆಲ್ಲ ಬರೀ ಇಬ್ಬರನ್ನು ಮಾತ್ರ ಬೆರಳೆತ್ತಿ ಆಡಿದರೆ ತಪ್ಪಾಗುತ್ತದೆ. ಎನ್ರಾನ್ ಕಂಪನಿಯ ಟ್ರಯಲ್ ಇನ್ನೂ ತುಂಬಾ ಮುಂದೆಹೋಗುವುದಕ್ಕಿದೆ, ಅದರಲ್ಲಿ ತಪ್ಪು ಮಾಡಿದ ಬೇರೆ ಬೇರೆ ಅಧಿಕಾರಿಗಳೂ, ಎನ್ರಾನ್ ಬೀಳುವಲ್ಲಿ ಸಂಬಂಧಪಟ್ಟ ಇತರ ಕಂಪನಿಗಳ, ಅವುಗಳ ಎಕ್ಸೆಕ್ಯೂಟಿವ್‌ಗಳನ್ನೂ ಹೀಗೆ ಜೈಲಿಗೆ ಎಳೆಯುವುದನ್ನು ಕಾದು ನೋಡಬೇಕಷ್ಟೇ.

ಆದರೆ ಒಂದಂತೂ ಸತ್ಯ, ದೊಡ್ಡ ಬ್ಯುಸಿನೆಸ್‌ಮೆನ್‌ಗಳಾಗಿ ಲೇ ಮತ್ತು ಸ್ಕಿಲ್ಲಿಂಗ್ ಈಗಾಗಲೇ ಮೆರೆದಿದ್ದಾರೆ, ಅವರನ್ನು ಹತ್ತು ವರ್ಷವೋ, ಇಪ್ಪತ್ತು ವರ್ಷವೋ ಅಥವಾ ಮೂವತ್ತು ವರ್ಷವೋ ಜೈಲಿಗೆ ಹಾಕೋದರಿಂದ ಅವರ ಬದುಕಿನಲ್ಲಿ ವ್ಯತ್ಯಾಸವೇನೂ ಆಗೋದಿಲ್ಲ, ಲೇ ಜೈಲಿನಲ್ಲೇ ಒಂದು ದಿನ ಸತ್ತರೆ ಜೆಫ್ರಿ ಇನ್ಯಾವತ್ತೋ ಬಿಡುಗಡೆ ಹೊಂದಿದರೂ ಅವನಲ್ಲಿ ತಲೆ ಎತ್ತಿ ಬದುಕುವುದಕ್ಕೇನೂ ಉಳಿದಿರೋದಿಲ್ಲ - ಒಬ್ಬ ಕ್ರಿಮಿನಲ್ಲನ್ನು ಸಾರ್ವಜನಿಕರಿಗೆ ಮುಂದೆ ಯಾವುದೇ ತೊಂದರೆಯಾಗದಂತೆ ಬಂಧಿಸಿ ಇಡಬೇಕಾದದ್ದು ಒಳ್ಳೆಯದಾದರೂ ಇಂಥ ಎಕ್ಸೆಕ್ಯುಟೀವ್‌ಗಳನ್ನು ಜೈಲಿನಲ್ಲಿ ಕೊಳೆಸೋ ಬದಲು ಅವರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಂಡು ಇನ್ನ್ಯಾವತ್ತೂ ಕಡುಬಡವನಾಗಿ ಬದುಕುವಂತೆ ಮಾಡಿದ್ದರೆ, ಇಲ್ಲಾ ಅವರ ಮ್ಯಾನೇಜ್‌ಮೆಂಟ್ ಅನುಭವಗಳನ್ನು ಅತಿ ಕಡಿಮೆ ಸಂಬಳಕೊಟ್ಟು ದುಡಿಸಿ ಸಮಾಜದ ಒಳಿತಿಗೆ ಬಳಸಿಕೊಳ್ಳುವಂತಿದ್ದರೆ ಎಂಬ ಯೋಚನೆಯೂ ಬಂತು - ಈ ಅಕೌಂಟಿಂಗ್ ಹಗರಣಗಳಲ್ಲಿ ನೊಂದ, ಹಣ ಕಳೆದುಕೊಂಡವರ, ತಮ್ಮ ನಿವೃತ್ತ ಜೀವನದ ಕನಸನ್ನು ನುಚ್ಚು ನೂರು ಮಾಡಿಕೊಂಡ ಸಾವಿರಾರು ಜನರಿಗೆ ಇದರಿಂದ ನೆಮ್ಮದಿ ಹೇಗೆ ಸಿಗುತ್ತದೆಯೋ ಎನಿಸಿದೆ, ಇವರಿಗೆ ಜೈಲು ಶಿಕ್ಷೆಯಾಯಿತು ಸರಿ, ಹೂಡಿಕೆದಾರನಾಗಿ ಒಂದಿಷ್ಟು ಸಾವಿರ ಡಾಲರ್‌ಗಳನ್ನು ಕಳೆದುಕೊಂಡರೆ ಅದು ಅಷ್ಟೊಂದು ದೊಡ್ಡ ವಿಷಯವಲ್ಲ, ಆದರೆ ಜೀವಮಾನವಿಡೀ ದುಡಿದು, ನಿವೃತ್ತನಾಗೋ ಕೊನೆಯ ಹಂತದಲ್ಲಿ ತಮ್ಮ ಸರ್ವಸ್ವವನ್ನೂ ಎನ್ರಾನ್‌ನಲ್ಲಿ ಹೂಡಿಕೊಂದು ಬರಿಗೈ ಮಾಡಿಕೊಂಡವರಿಗೆ ಇಲ್ಲಿನ ವ್ಯವಸ್ಥೆ ಕಿಂಚಿತ್ ಕರುಣೆಯನ್ನೂ ತೋರದು. ಅರವತ್ತು ವರ್ಷದ ನಂತರ ನಿವೃತ್ತರಾಗಿ ಹಾಯಾಗಿ ಮನೆಯಲ್ಲಿರಬೇಕಾದವರು ನಾಳಿನ ಊಟದ ಬಗ್ಗೆ ಆಲೋಚಿಸಬೇಕಾದಾಗ ಪರಿಸ್ಥಿತಿಯ ಕಹಿ ಅರಿವಿಗೆ ಬರುತ್ತದೆ. ಈ ದೇಶದಲ್ಲಿ ಎಂತೆಂಥದಕ್ಕೋ ಹಣ ಖರ್ಚು ಮಾಡುವ ಸರ್ಕಾರ ಇಂತಹವರ ರಕ್ಷಣೆಗೆ ಬಂದಿದೆಯೇ, ಬಂದಿದ್ದರೆ ಒಳ್ಳೆಯದಿತ್ತು. ಈ ವರ್ಡಿಕ್ಟಿನಿಂದ ಬೋರ್ಡ್‌ರೂಮ್ ಎಕ್ಸೆಕ್ಯೂಟಿವ್‌ಗಳಿಗೊಂದು ಪಾಠ ಎನ್ನುವುದು ಎಷ್ಟರ ಮಟ್ಟಿಗೆ ಸರಿ, ತಪ್ಪಿತಸ್ಥರನ್ನು ದಂಡಿಸಿದಾಗೆಲ್ಲ ಉಳಿದವರು ಅದರಿಂದ ಕಲಿತು ಎಚ್ಚೆತ್ತಿಕೊಳ್ಳುವುದು ಸತ್ಯವಾಗಿದ್ದರೆ ಇಷ್ಟು ಹೊತ್ತಿಗೆ ಪ್ರಪಂಚದಲ್ಲಿ ಕ್ರೈಮ್ ಅನ್ನೋದೇಕಿರುತ್ತಿತ್ತು?

***

ಅಮೇರಿಕದಲ್ಲಿ ಮ್ಯಾನೇಜ್‌ಮೆಂಟಿನಲ್ಲಿ ಮುಂದುವರೆಯುವ ಆಸೆ ಇದ್ದವರು ಒಂದಲ್ಲ ಒಂದು ದಿನ ಬಿಗ್ ಫೈವ್ ಅಕೌಂಟಿಂಗ್ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದರೆ ಒಳ್ಳೆಯದು ಎಂದು ಹೇಳುವುದನ್ನು ಅಲ್ಲಲ್ಲಿ ಕೇಳಿದ್ದೇನೆ, ಆದರೆ ಎನ್ರಾನ್‌ನಂತಹ ಕಂಪನಿಯನ್ನು ನೆಲಮಟ್ಟ ಮಾಡುವಲ್ಲಿ ಸಕ್ರಿಯ ಪಾತ್ರವಹಿಸಿದ ಆರ್ಥರ್ ಆಂಡರ್‌ಸನ್ ಅಂಥ ಕಂಪನಿಯಲ್ಲೂ, ೨೦೦೫ ರಲ್ಲಿ ತಾವೇ ಒಪ್ಪಿಕೊಂಡಂತೆ ಬಿಲಿಯನ್ ಡಾಲರ್ ಟ್ಯಾಕ್ಸ್ ಶೆಲ್ಟರ್ ಫ್ರಾಡಿನಲ್ಲಿ ಭಾಗಿಗಳಾದ ಕೆಪಿಎಮ್‌ಜಿ ಅಂಥಹ ಕಂಪನಿಯಲ್ಲೂ ನಾನು ಖಂಡಿತವಾಗಿ ಕೆಲಸಮಾಡೋದಿಲ್ಲ, ಮಾಡಬಾರದು ಎಂದುಕೊಂಡಿದ್ದೇನೆ, ಅವರ ಎಷ್ಟೇ ಉನ್ನತ ಹುದ್ದೆಗಳಿದ್ದರೂ ಒಬ್ಬ ಕಂಪನಿಯ ಉದ್ಯೋಗಿಯಾಗಿ ಯಾವ ಮಟ್ಟದಲ್ಲೇ ಇರಲಿ ಆ ಕಂಪನಿಯ ಉದ್ಯೋಗಿ ನಾನು ಎಂದು ಹೇಳಿಕೊಳ್ಳುವಲ್ಲಿ ಹೆಮ್ಮೆ ಪಡುತ್ತೇನೆಯೇ ವಿನಾ ಇಂಥಾ ದೊಡ್ಡ ಹಗರಣಗಳಲ್ಲಿ ಸಿಕ್ಕಿಕೊಂಡ, ಸರ್ಕಾರಕ್ಕೆ ಮೋಸ ಮಾಡುವ, ಕೊನೆಯಲ್ಲಿ ಜನರ ಹಣ ಕೀಳುವ ಈ ಕಂಪನಿಗಳಿಂದ ದೂರವಿರಿ ಎಂದೇ ನಾನು ಎಲ್ಲರಿಗೂ ಹೇಳೋದು. ಕೆಪಿಎಮ್‌ಜಿ ಬಗ್ಗೆ ಫ್ರಂಟ್‌ಲೈನ್ ನಲ್ಲಿ ಡೇವಿಡ್ ಬ್ರಾಂಕಾಚಿಯೋ ಮಾಡಿದ್ದ ಒಂದು ವಿಡಿಯೋ ಕಾರ್ಯಕ್ರಮವನ್ನು ನೋಡಿದವರಿಗೆ ಗೊತ್ತು, ಕಂಪನಿಗಳು ಮೋಸ ಮಾಡುವುದಕ್ಕೆ ಯಾವ ಮಟ್ಟಕ್ಕೆ ಇಳಿಯುತ್ತವೆ ಎಂದು.

ಒಂದು ಕಂಪನಿಯಲ್ಲಿ ಅಷ್ಟೊಂದು ದೊಡ್ಡ ಹಗರಣಗಳು ಹೇಗಾದವು ಎಂದು ಯೋಚಿಸಿದರೆ ಬರೀ ಸೀನಿಯರ್ ಎಕ್ಸೆಕ್ಯೂಟಿವ್‌ಗಳು ಅಷ್ಟೇ ಅಲ್ಲ, ಪಾಪದ ಫಲವನ್ನು ಅನುಭವಿಸಿದ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಾಗಿಗಳಾಗಲೇ ಬೇಕಾಗುತ್ತದೆ. ಎನ್ರಾನ್‌ನವರು ತಪ್ಪು ಲೆಕ್ಕ ಪತ್ರಗಳನ್ನು ತೋರಿಸಿದ್ದರಿಂದ ಅವರ ಸ್ಟಾಕ್ ಕೆಲವು ವರ್ಷಗಳವರೆಗೆ ತುಂಬಾ ಮೇಲೆ ಹೋಯಿತು ಎನ್ನೋಣ, ಆ ಸಮಯದಲ್ಲಿ ಅವರ ಸುಳ್ಳು ಅಭಿವೃದ್ಧಿಯ ಅಂಕಿ ಅಂಶಗಳಿಂದ ಸ್ಟಾಕ್ ಮಾರ್ಕೇಟ್‌ನಲ್ಲಿ ದುಡ್ಡು ಮಾಡಿದವರೆಲ್ಲರೂ ಅದನ್ನು ಹಿಂತಿರುಗಿಸಲು ತಯಾರಿದ್ದಾರೆಯೇ? ಎನ್ರಾನ್‌ನ ನಿವೃತ್ತರು ಹಾಗೂ ಹಾಲೀ ಕೆಲಸಗಾರರು ಕಳೆದುಕೊಂಡ ಹಣ ಎಲ್ಲಿ ಹೋಯಿತು, ಅದು ಯಾರ ಕೈವಶವಾಗಿದೆ ಎಂಬುದನ್ನೆಲ್ಲಾ ಶೋಧಿಸಿ ಅವರಿಂದ ಹಣ ಹಿಂತಿರುಗಿ ಕೇಳಿದರೆ ಎಂದು ಒಮ್ಮೆ ಯೋಚಿಸುತ್ತೇನೆ, ಅದೊಂದು ಮೂರ್ಖವಾದ ಎಂದು ಅಲ್ಲಿಗೇ ಬಿಟ್ಟು ಬಿಡುತ್ತೇನೆ!

***

೨೦೦೩ ರಲ್ಲಿ ಅಮೇರಿಕದವರು ಇರಾಕ್‌ನ ಆಕ್ರಮಣ ಮಾಡಿ ಕೆಲವು ತಿಂಗಳುಗಳ ನಂತರ ಅಲ್ಲಲ್ಲಿ ನಾಯಿಕೊಡೆಗಳಂತೆ ಹುಟ್ಟಿದ್ದ ಇಸ್ಲಾಮ್‌ಗೆ ಸಂಬಂಧಿಸಿದ ಹೆಸರುಗಳನ್ನು ಹೊಂದಿದ್ದು, ಭಯೋತ್ಪಾದನೆಗೆ ಹಣ ಸರಬರಾಜು ಮಾಡುವ ಹಲವಾರು 'ಸಂಸ್ಥೆ'ಗಳು, ಅವುಗಳ ಹಣವನ್ನು ಅಮೇರಿಕ ಫ್ರೀಜ್ ಮಾಡಿತು. ಆಗ ಮುಚ್ಚಿ ಹೋದ 'ಸಂಸ್ಥೆ'ಗಳು ಬೇರೆ ಬೇರೆ ಹೆಸರಿನಿಂದ ಮತ್ತೆ ತಲೆ ಎತ್ತತೊಡಗಿದವು. ಅಮೇರಿಕದವರು ಭಯೋತ್ಪಾದಕರ ಒಂದೊಂದೇ ಆರ್ಗನೈಜೇಷನ್‌ಗಳನ್ನು ಹಿಡಿದು ಅವುಗಳನ್ನು 'ಭಯೋತ್ಪಾದಕರು' ಎಂದು ಘೋಷಿಸಿದಂತೆಲ್ಲ ಮತ್ತೊಂದು ಹೆಸರಿನಲ್ಲಿ ಅಷ್ಟೇ ವೇಗವಾಗಿ ಇನ್ನೇನೋ ಒಂದು ಹೆಸರಿನಿಂದ ಅವೆಲ್ಲಾ ಕೆಲಸ ಮಾಡತೊಡಗಿದವು. ಇಂಥದ್ದನ್ನು ಎಲ್ಲೋ ಓದಿದ್ದ ನನ್ನ ಸಹೋದ್ಯೋಗಿ ಒಬ್ಬಳು 'ಹೀಗೆ ಹೆಸರು ಬದಲಿಸಿ ಕೆಲಸ ಮಾಡೋ ಕಾರ್ಯತಂತ್ರವನ್ನು ಎಲ್ಲಿಂದ ಕಲಿತರೋ...' ಎಂದು ಆಶ್ಚರ್ಯಪಡುತ್ತಿರುವಾಗ ನಾನು 'ಮತ್ತಿನ್ನೆಲ್ಲಿಂದ? ಆಂಡರ್‌ಸನ್ ಕನ್ಸಲ್‌ಟಿಂಗ್‌ನವರು ತಮ್ಮ ಸಾಫ್ಟ್‌ವೇರ್ ಕನ್ಸಲ್ಟಿಂಗನ್ನು ಅಕ್ಸೆಂಚರ್ ಎಂದು ಬದಲಾಯಿಸಲಿಲ್ಲವೇ...' ಎಂದುದಕ್ಕೆ ಅವಳು ದುರುಗುಟ್ಟಿ ನೋಡಿದಳೇ ವಿನಾ ಮತ್ತೇನನ್ನೂ ಹೇಳಲಿಲ್ಲ!

3 comments:

ಅಸತ್ಯ ಅನ್ವೇಷಿ said...

ನೀವೇ ಪುಣ್ಯವಂತರು. ನಿಮ್ಮೂರಲ್ಲಾದರೆ ಒಂದಿಬ್ಬರಿಗಾದರೂ ಶಿಕ್ಷೆ ಅಂತ ಆಯಿತಲ್ಲಾ...!

ನಮ್ಮಲ್ಲಾದರೆ, ಶಿಕ್ಷೆಯಾದ ತಕ್ಷಣವೇ ಅವರಿಗೆ ಜಾಮೀನು, ಅಥವಾ ಅವರು ಕಾನೂನು ಕೈಗೆ ಸಿಗದಂತೆ ದೇಶ ಬಿಟ್ಟು ಹೋಗಲು ಅವಕಾಶ ಮಾಡಿಕೊಡಲಾಗುತ್ತದೆ. (ಕ್ವಟ್ರೋಚಿ!!!)

ಅಥವಾ ಅವರಿಗೆ ರಹಸ್ಯವಾಗಿ ಭಾರತ ರತ್ನ ಕೊಡಿಸುವ ಪ್ರಯತ್ನವೂ ನಡೆಯುತ್ತದೆ ಗೊತ್ತೇ?

sritri said...

ಅಸತ್ಯಾನ್ವೇಷಿಗಳೇ, ನಿಮ್ಮೂರಿನ ಜೈಲುಗಳಲ್ಲಿ ಖೈದಿಗಳಿಗೆ ರಾಗಿಮುದ್ದೆ ಕೊಡೋ ಹಾಗೆ, ಅಮೆರಿಕಾ ಜೈಲುಗಳಲ್ಲಿ ಊಟಕ್ಕೆ ಏನು ಕೋಡ್ತಾರೆ ಅಂತ ಪತ್ತೆ ಮಾಡಿ ಕೊಂಡು ಬನ್ನಿ.

Satish said...

sritri ಅವರೇ,

ಅನ್ವೇಷಿಗಳನ್ನು ಜೈಲಿಗೆ ಕಳಿಸೋ ಹುನ್ನಾರ ನಡೆಸುತ್ತಿರೋ ಹಾಗಿದೆಯೆಲ್ಲಾ!

ಅನ್ವೇಷಿಗಳೇ,

ಜೈಲಿಗೆ ಹೋಗೋ ನೆಪದಲ್ಲೂ ದಯವಿಟ್ಟು ಅಮೇರಿಕೆಗೆ ಬರಬೇಡಿ, ನಿಮ್ಮ ಬೊಗಳೆ ಭಾರತದಲ್ಲಿದ್ದರೇನೆ ಚೆಂದ!