ಸುಖ-ದುಃಖ
ಬಾಳಿನಲ್ಲಿ ಬರೋ ಸಂತೋಷದ ಕ್ಷಣಗಳೇ ಒಂದು ರೀತಿಯಲ್ಲಿ ಸೂಕ್ಷ್ಮವಾದವುಗಳು. ಈ ಸಂತೋಷವನ್ನ ಸುಖ, ಹರ್ಷ, ನಲಿವು, ಉಲ್ಲಾಸ, ಹಿಗ್ಗು, ಖುಷಿ, ಮೋಜು, ವಿನೋದ... ಮೊದಲಾದ ಸಮಾನಾರ್ಥಕ ಪದಗಳನ್ನು ಉಪಯೋಗಿಸಿ ಕರೆದರೂ ಅದೊಂದು ಅಗಮ್ಯವಾದ ಲೋಕವಾಗೇ ಉಳಿದುಬಿಡುತ್ತದೆ. ಸುಖದಲ್ಲಿ, ಕಷ್ಟ, ಕಾರ್ಪಣ್ಯ, ದುಃಖ, ನೋವುಗಳಿಲ್ಲ ಅನ್ನೋದರ ಜೊತೆಗೆ ಸುಖವೆಂದೂ ದಂಡಿಯಾಗಿ ಬುಟ್ಟಿಯಲ್ಲಿ ಮೊಗೆಯುವಷ್ಟು ಸಿಗುವುದಂತೂ ಅಲ್ಲವೇ ಅಲ್ಲ. ಅದು ಮಳೆಯ ದಿನಗಳಲ್ಲಿ ಬರುವ ಕೋಲ್ಮಿಂಚಿನ ಹಾಗೆ, ಹೀಗೆ ಬಂದು ಹಾಗೆ ಹೋಗುವುದು. ಎಷ್ಟೋ ಸಮಯ ಗೊತ್ತಾಗುವುದೂ ಇಲ್ಲ. ಅದರಲ್ಲಿಯೂ ಮೋಡ ಕವಿದ ಆಕಾಶವಿದ್ದರೆ ಮುಗಿದೇ ಹೋಯಿತು, ದೂರದಲ್ಲೆಲ್ಲೋ ಮಿಂಚಿ ಮಾಯವಾಗುವ ಮಾಯಾಂಗನೆಯ ಹಾಗೆ, ಅದು ಇದ್ದೂ ಇರಲೊಲ್ಲದು.
ಈ ಕಾರಣಗಳಿಂದಲೇ ಇರಬೇಕು, ಇಂಗ್ಲೀಷಿನವರು, ಚೆನ್ನಾಗಿರುವುದಕ್ಕೆ awesome ಎಂದು ಹೇಳೋದು... ಅದರಲ್ಲಿ "some" ಅಡಕವಾಗಿದೆ. ಅದೇ, ಮನಸ್ಸಿಗೆ ಅಹಿತವಾದ ವಿಷಯಗಳಿಗೆ, awful ಎಂದು ಹೇಳುವಾಗ, ಅದು ಯಾವಾಗಲೂ "full" ಆಗಿಯೇ ತೋರೋದು! ಸುಖ-ಸಂತೋಷಗಳು ಹಿತಮಿತವಾಗಿಯೂ, ಕಷ್ಟ-ಕಾರ್ಪಣ್ಯಗಳು ದಂಡಿ ದಂಡಿಯಾಗಿಯೂ ಬರುತ್ತವೆ ಎಂದು ಒಂದೊಂದು ಪದದಲ್ಲಿಯೇ ಹೇಳುವ ಅವರ ಜಾಣ್ಮೆಯನ್ನು ಮೆಚ್ಚಬೇಕಾದ್ದೆ!
ಯಾರು ಯಾರಿಗೋ ಯಾವುದೋ ಕಾರಣಗಳಿಗೆ ಖುಷಿಯಾಗುವುದುಂಟು. ಇಡೀ ದಿನ ದಣಿದ ತಾಯಿಯ ದಣಿವು ತನ್ನ ಮಗುವಿನ ಒಂದು ಕಿರುನಗೆಯನ್ನು ನೆನಪಿಸಿಕೊಳ್ಳುವುದರ ಮೂಲಕವೇ ಮರೆಯಾಗಬಲ್ಲದು. ಸಂಜೆ ಒಮ್ಮೊಮ್ಮೆ ಒಂದು ಒಳ್ಳೆಯ ಚಹಾ ಕುಡಿದಾಗ, ಮಲೆನಾಡಿನ ಮಳೆ ಮತ್ತು ಚಳಿ ಪ್ರಕೃತಿಯಲ್ಲಿ ಮುಂಜಾನೆ ಒಂದು ಮಜಬೂತಾದ ಫ಼ಿಲ್ಟರ್ ಕಾಫ಼ಿ ಕುಡಿದಾಗ, ಬೇಸಿಗೆಯ ಬಿಸಿಲಿನ ಬಳಲಿಕೆಯಲ್ಲಿ ಒಂದು ಶುಂಠಿ ಹಾಕಿದ ಮಜ್ಜಿಗೆ ಕುಡಿದಾಗ - ಈ ಕಿರು ಸಂತೋಷ ಸುಖವಾಗಿ ಪ್ರಕಟವಾಗುವುದುಂಟು. ಹೀಗಿರುವಾಗ ಸುಖವೆನ್ನುವುದು ದಂಡಿ ದಂಡಿಯಾಗಿ ಸಿಗಬೇಕೆಂದೇನೂ ಇಲ್ಲ... ಬಳಲಿದ ಮನಸ್ಸಿಗೆ ಹಿತವಾಗುವುದಕ್ಕೆ ಚಿಕ್ಕ ಲೋಟದಲ್ಲಿ ಸಿಗುವ ಪಾನೀಯ ಸಾಕಾಗುವುದರಿಂದ, ನಿಮಗೆ ಬಕೇಟುಗಟ್ಟಲೆ ಎಂದೂ ಕಾಫ಼ಿಯನ್ನು ಕುಡಿಯಬೇಕೆನ್ನಿಸುವುದಿಲ್ಲ. ನಾವು ಚಿಕ್ಕವರಿದ್ದಾಗ ಭದ್ರಾವತಿಯ ಸಕ್ಕರೆ ಕಾರ್ಖಾನೆಯನ್ನು ನೋಡಲು ಹೋಗಿದ್ದೆವು. ಶಾಲಾ ಮಕ್ಕಳಿಗೆ ಪ್ರವಾಸದ ಕೊನೆಯಲ್ಲಿ ಒಂದು ಮೂಟೆ ಸಕ್ಕರೆಯನ್ನು ತೋರಿಸಿ, ಯಾರು ಎಷ್ಟು ಬೇಕಾದರೂ ತಿನ್ನಬಹುದು ಎಂದು ಹೇಳಿದಾಗ ನಾವ್ಯಾರೂ ಒಂದು ಚಿಟುಕೆಯಷ್ಟು ಕೂಡ ಸಕ್ಕರೆಯನ್ನು ತಿನ್ನದಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ. ದಂಡಿಯಾಗಿ ಸಿಗುವುದೆಲ್ಲವೂ ಸುಖವಲ್ಲ, ಜೊತೆಗೆ ಯಥೇಚ್ಛವಾಗಿ ದೊರಕುವುದು ಸುಖವನ್ನು ಕಸಿದುಕೊಳ್ಳಲೂಬಹುದು. ಊಟ-ತಿಂಡಿಗಳು ಬಹಳ ಇಷ್ಟ ಎಂದು ಹೊಟೇಲಿನಲ್ಲಿ ಕೆಲಸಕ್ಕೆ ಸೇರಿಕೊಂಡವರು, ಸಮಯ ಸರಿದಂತೆಲ್ಲ, ಊಟ-ತಿಂಡಿಯ ಬಗೆಗಿನ ತಮ್ಮ ದೃಷ್ಟಿಕೋನವನ್ನೇ ಬದಲಾಯಿಸಿಕೊಳ್ಳುವ ಹಾಗೆ.
ನನ್ನ ಪ್ರಕಾರ, ಎಲ್ಲಿದೆ ಸುಖ? ಎಂದು ಅರಸಿಕೊಂಡು ಹೋಗುವುದೇ ತಪ್ಪು. ಸುಖ-ಸಂತೋಷ ನಮ್ಮ ಒಳಗಿದೆ, ನಮ್ಮ ಹೊರಗಿದೆ, ಮುಖ್ಯ ಅದು ನಾವಿರುವಲ್ಲೇ ಇದೆ. ಆಧ್ಯಾತ್ಮಿಕ ಚಿಂತನಶೀಲರು, ನಿಮ್ಮ ಒಳಗಡೆ ಗಮನಕೊಡಿ, ಅದರಲ್ಲಿ ಅಂತರ್ಧಾನದ ಸುಖವಿದೆ ಎಂದಾರು. ಕವಿಗಳು, ನಿಮ್ಮ ಸುತ್ತಮುತ್ತಲಿನ ಪ್ರಕೃತಿಯ ಆರಾಧನೆಯಲ್ಲಿದೆ ಸುಖ ಎಂದಾರು. ತನ್ನ ಮನಸ್ಸನ್ನು ತನ್ನೊಳಗೇ ಕೇಂದ್ರೀಕರಿಸಿ ಹತೋಟಿಯಲ್ಲಿಡಲು ಪ್ರಯತ್ನಿಸುವ ಯೋಗಿಗೆ, ಪಕ್ಕದ ಮರದ ಮೇಲೆ ಕುಳಿತು ವಸಂತನ ಆಗಮನವನ್ನು ಸಾರುವ ಕೋಗಿಲೆಯ ಸಂದೇಶ ಕಿರಿಕಿರಿ ತರಿಸಲಿಕ್ಕೂ ಸಾಕು. ಅದೇ ಬಾಹ್ಯ ಪ್ರಕೃತಿಗೆ ತನ್ನನ್ನು ತಾನು ಒಡ್ಡಿಕೊಂಡು ಹೊಸತೇನನ್ನೋ ನಿರೀಕ್ಷಿಸುತ್ತಿರುವ ಕವಿ ಮನಸ್ಸಿಗೆ ಕ್ರೌಂಚ ಪಕ್ಷಿಗಳ ಕಲರವವೂ ಮುದ ತರಬಹುದು. ಅವರವರ ಭಾವನೆ-ಭಕ್ತಿ ಮತ್ತು ಶ್ರದ್ಧೆಗೆ ಸಂಬಂಧಿಸಿದಂತೆ ಸುಖ ಎಲ್ಲ ಕಡೆಯೂ ಇದೆ... ಆದರೆ ಅದು ದಂಡಿಯಾಗಿ ಸಿಗುವ ಸರಕು-ಸಾಮಗ್ರಿಯಾಗಂತೂ ಅಲ್ಲವೇ ಅಲ್ಲ.
***
ಸುಖ ಮನಸ್ಸಿಗೆ ಸಂಬಂಧಿಸಿದ್ದಾದರೂ, ಅದರ ಮೂಲ ಹೃದಯದಲ್ಲಿದೆ ಎನ್ನಬಹುದೇ? ಸುಖದ ನಿರೀಕ್ಷೆ ಒಂದು ರೀತಿಯಲ್ಲಿ ತಪ್ಪು. ಮುಂದಿನ ಸುಖದ ಕ್ಷಣ ಹೀಗೇ ಇದ್ದೀತು ಎಂದು ಮೊದಲೇ ಊಹಿಸಿಕೊಳ್ಳುವುದಾದರೂ ಹೇಗೆ? ಸುಖ-ಸಂತೋಷದ ವಿಷಯಕ್ಕೆ ಬಂದಾಗ ಬಡವ-ಬಲ್ಲಿದನೆಂಬ ಬೇಧ-ಭಾವ ಏನಾದರೂ ಇರಬಹುದೇ? ಅತಿ ಶ್ರೀಮಂತರಿಗೆ ಹೆಚ್ಚಿನ ಸಂತೋಷ ಸಿಗುವುದು ನಿಜವೇ? ಹಾಗಿಲ್ಲವಾದರೆ, ಜನ ತಮ್ಮ ಹಂಗುಗಳನ್ನು ತೊರೆದು ಸದಾಕಾಲ ಶ್ರೀಮಂತರಾಗುವ, ಇನ್ನೂ ಹೆಚ್ಚು ಹೆಚ್ಚು ಸಂಪಾದಿಸಿ, ಕೂಡಿಡುವ ಕನಸನ್ನು ಕಾಣುವುದಾದರೂ ಏಕೆ? ಬಡವರ ಸಂತೋಷಗಳಿಗೂ, ಉಳ್ಳವರ ಸಂತೋಷಗಳಿಗೂ ಏನು ವ್ಯತ್ಯಾಸ? ಸುಖ ಎನ್ನುವುದು ನಮ್ಮೊಳಗಿದೆಯೋ, ನಮ್ಮ ಹೊರಗಿದೆಯೋ? ಸುಖ ಎನ್ನುವುದು ವ್ಯಕ್ತಿಗತವೋ, ಅಥವಾ ಒಂದು ನೆರೆಹೊರೆಗೆ ಸಂಬಂಧಿಸಿದ ವಿಷಯವೋ? ಸುಖವನ್ನು ಅಳೆಯುವುದಾದರೂ ಹೇಗೆ? ಇಂತಿಷ್ಟು ದಿನ ಈ ಕೆಲಸವನ್ನು ಮಾಡಿದರೆ ಇಂತಿಷ್ಟು ಸುಖ ಎಂಬ ನಿಯಮವೇನಾದರೂ ಇದೆಯೇ?
***
ಬೆಂಗಳೂರಿನಿಂದ ನೆಲಮಂಗಲದ ಕಡೆಗೆ ಹೋಗುವ ದಾರಿಯಲ್ಲಿ, ಬೆಂಗಳೂರು ನಗರ ಮುಗಿಯುವ ಸರಹದ್ದಿನಲ್ಲಿ ಅದೆಷ್ಟೋ ನಿರ್ಗತಿಕ ಕುಟುಂಬಗಳು ಬಯಲುಗಳಲ್ಲಿ ಗುಡಿಸಲು ಅಲ್ಲದ ಡೇರೆಗಳಲ್ಲಿ ಬದುಕುವುದನ್ನು ನೋಡಬಹುದು. ಇಲ್ಲಿ ಬದುಕುವ ಕುಟುಂಬದ ಸದಸ್ಯರುಗಳಿಗೆ ಆಯಾ ಹಂಗಾಮಿ ವಸತಿ ಸೌಕರ್ಯವೇ ಸುಖವನ್ನು ತಂದುಕೊಟ್ಟೀತು. ಹಾಗಂತ, ಲೀಲಾ ಪ್ಯಾಲೇಸಿನಲ್ಲಿ ದಿನದ ಬಾಡಿಗೆಯಾಗಿ ಲಕ್ಷಾಂತರ ರುಪಾಯಿಯನ್ನು ಸುರಿವ ಶ್ರೀಮಂತರಿಗೆ ಸುಖವಿಲ್ಲ ಎಂದು ಹೇಳಲಾಗದು. ಹಾಗಿದ್ದ ಮೇಲೆ, ಸುಖ ಎನ್ನುವುದು ಅವರವರ ಮಾನಸಿಕ, ಸಾಮಾಜಿಕ, ಶಾರೀರಿಕ ಮೌಲ್ಯಗಳ ಮೇಲೆ ನಿಂತಿದೆ ಎನ್ನಬಹುದೇ? ಬಯಲಿನ ಗುಡಿಸಲಲ್ಲಿರುವ ವ್ಯಕ್ತಿಯ ಸೌಕರ್ಯಗಳನ್ನು ಲೀಲಾ ಪ್ಯಾಲೇಸಿನಲ್ಲಿರುವ ವ್ಯಕ್ತಿಯ ಸೌಕರ್ಯಕ್ಕೆ ಅದಲು ಬದಲು ಮಾಡಿದಾಗ ಇಬ್ಬರಿಗೂ ಅವರವರ ಸುಖ ದೂರವಾಗಬಹುದು. ಅದೇ ಪ್ರಪಂಚದಲ್ಲಿ ಒಂದಿಷ್ಟು ದಿನ ಇರಲಾಗಿ ಪ್ರತಿಯೊಬ್ಬನೂ ಅದಕ್ಕೆ ಹೊಂದಿಕೊಂಡು ಹೋಗಬಹುದು.
ಗಾಜ಼ಾ ಗಡಿಯಲ್ಲಿ ನಡೆದ ಯುದ್ಧದಿಂದಾಗಿ ಅದೆಷ್ಟೋ ಕುಟುಂಬಗಳು ರಾತ್ರೋರಾತ್ರಿ ತಮ್ಮ ತಮ್ಮ ನೆರೆಹೊರೆಯನ್ನು ಬಿಟ್ಟು ಕದಲಬೇಕಾದಾಗ, ಅವರವರ ಸುಖ-ಸಂಭ್ರಮಗಳು ಸಂಘರ್ಷದಲ್ಲಿ ಕೊಚ್ಚಿಹೋದವು. ಒಂದು ವಟಾರದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಬಂದ ಕುಟುಂಬಗಳು ಕೇವಲ ನಿರ್ಗತಿಕರಾಗಷ್ಟೇ ಅಲ್ಲ, ಅವರ ನೆಲೆಯನ್ನು ಕಳೆದುಕೊಂಡರೂ ಕೂಡ. ಆದರೆ, ಹೊಸ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಕ್ಕಳು ತಮ್ಮ ಆಟದ ಸುಖವನ್ನು ಅನುಭವಿಸುವುದರಲ್ಲಿ ನಿರತರಾದಂತೆ ತೋರಿತು. ಸುಖದ ಪರಿಭ್ರಮೆಗೆ ನಾವೊಂದು ಪರಿಧಿಯನ್ನು ಹಾಕಿಕೊಂಡಿರುತ್ತೇವೆ. ಕೊನೆಮೊದಲಿಲ್ಲದ ಆ ಪರಿಧಿ, ಒಂದೇ ಒಂದು ಸಂಘರ್ಷದ ಸಂಕಟಕ್ಕೆ ಚೂರುಚೂರಾಗಿ ಹೋಗುವುದಾದರೆ, ಮನುಕುಲ ಸಂಘರ್ಷವನ್ನು ಹುಟ್ಟುಹಾಕುವುದಾದರೂ ಏಕೆ ಎನಿಸೊಲ್ಲವೇ? ಇಂದಿನ ತಲೆಮಾರಿನ ಜೊತೆಜೊತೆಗೆ ಇನ್ನೆರೆಡು ತಲೆಮಾರುಗಳು ಅನುಭವಿಸಿ ತಮ್ಮದೆಲ್ಲವನ್ನೂ ಕಳೆದುಕೊಳ್ಳುವ ಈ ಸಂಘರ್ಷದ ಫಲಿತಾಂಶವಾದರೂ ಏನು? ಕೈಯಲ್ಲಿ ಬಂದೂಕು ಹಿಡಿದು ಹೋರಾಡುವ (ಉಗ್ರ) ತರುಣರಿಗೆ ಈ ಸರಳ ಸಂದೇಶವೇಕೆ ಅರ್ಥವಾಗುವುದಿಲ್ಲ? ಹುಟ್ಟಿ-ಸಾಯುವ ಹಲವು ವರ್ಷಗಳಲ್ಲಿ ಹೀಗೆ ಬಂದು ಹಾಗೆ ಹೋಗುವ ನಾಲ್ಕು ಅವಸ್ಥೆಗಳಲ್ಲಿ ನಾವು ಏನನ್ನಾದರೂ ಬದಲಾಯಿಸುತ್ತೇವೆ ಎಂದುಕೊಳ್ಳುವುದೇ ತಪ್ಪಲ್ಲವೇನು? ಅಕಸ್ಮಾತ್ ಬದಲಾವಣೆಯೇ ಆಗುವುದು ಎಂದಾದಲ್ಲಿ, What difference does it make? ಎಂದು ಕೇಳಬೇಕೆನಿಸುತ್ತದೆ.
ಸೂರ್ಯನು ಮುಳುಗದ ಸಾಮ್ರಾಜ್ಯವಾಗಿ ಇಂಗ್ಲೀಷ್ ಸಾಮ್ರಾಜ್ಯ ಬೆಳೆಯಿತು ಮತ್ತೆ ಕಳೆದುಹೋಯಿತು. ತಮ್ಮದೇ ಆದ ತಂತ್ರವನ್ನು ಜಗದೆಲ್ಲೆಡೆ ಸಾರುತ್ತೇವೆಂದು ಮಾವೋವಾದಿಗಳು, ಸಮತಾವಾದಿಗಳು ಹೋರಾಡುತ್ತಲೇ ಪ್ರಾಣಬಿಟ್ಟರು. ತಮ್ಮದೇ ಮತ ದೊಡ್ಡದು, ತಮ್ಮ ಧರ್ಮವೇ ನಿಜವಾದ ವಿಶ್ವ ಧರ್ಮವೆಂದು ಎಂದೋ ಘಟಿಸಿ ಆಗಿ ಹೋದ ಪ್ರವಾದಿಗಳ ಹೆಸರಿನಲ್ಲಿ ಕಾಡು-ಮೇಡು, ಗುಡ್ಡ-ಬೆಟ್ಟ, ನದಿ-ದ್ವೀಪಗಳನ್ನೆಲ್ಲ ಗುಡ್ಡೆ ಹಾಕಿ ತಮ್ಮ ಮತವನ್ನು ಸ್ಠಾಪಿಸಿಕೊಂಡರು, So what? ಯೂರೋಪಿನ ಸ್ಪೇನ್ ದೇಶದ ಮೂಲೆಯಲ್ಲಿ ಒಂದು ಕರ್ಚೀಫ಼ಿನ ಅಗಲದಷ್ಟು ಹರಡಿಕೊಂಡು ತನ್ನ ಅಸ್ತಿತ್ವವನ್ನೇ ಇನ್ನೂ ಸರಿಯಾಗಿ ಕಂಡುಕೊಳ್ಳದ ಪೋರ್ಚುಗೀಸರು ದೂರದ ದಕ್ಷಿಣ ಅಮೇರಿಕದ ಅರ್ಧ ಭಾಗದಷ್ಟು ದೊಡ್ಡದಾದ ಬ್ರೆಜಿಲ್ ದೇಶದ ಮೇಲೆ ತಮ್ಮ ಭಾಷೆ ಮತ್ತು ಸಂಸ್ಕೃತಿಯ ದಬ್ಬಾಳಿಕೆಯನ್ನು ಹೇರಲೇಬೇಕಿತ್ತೇನು? ಹಾಗಿಲ್ಲದಿದ್ದರೆ ಅವರೇನು ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಸಾಯುತ್ತಿದ್ದರೇನು? ಈ ಮಾನವನ ಕ್ಷುಲ್ಲಕ ತಂತ್ರಗಳನ್ನು ಒಂದೇ ಒಂದು ಮಾತಿನಲ್ಲಿ ಹೇಳುವುದಾದರೆ, ಹುಟ್ಟಿ ಹೋರಾಡುತ್ತಲೇ ಹತನಾಗುವ ಹುಲುಮಾನವನಿಗೆ ಸುಖವೆನ್ನುವ ಅದ್ಯಾವ ಮರೀಚಿಕೆಯ ಹಂಬಲವಿದ್ದಿರಬಹುದು?
ತನ್ನ ಸುಖದ ಚೌಕಟ್ಟಿಗೆ ಒಳಪಡದಿರುವುದು ಅಸುಖ ಎಂದುಕೊಳ್ಳುವುದೇ ತಪ್ಪು. ಚೀನಾ ದೇಶದ ಜನರಿಗೆ ಹಾವು-ಹಲ್ಲಿ-ಸರೀಸೃಪಗಳನ್ನು ತಿಂದು ತೇಗುವ ಬಯಕೆ, ಅವರು ಮಾಡಿಕೊಳ್ಳಲಿ. ದೂರದ ಆಸ್ಟ್ರೇಲಿಯ ದೇಶವಾಸಿಗಳು ಕಾಂಗರೂ ಪ್ರಾಣಿಯನ್ನು ತಿಂದು ಆನಂದಿಸಲಿ, ಅದು ಅವರ ಪರಿಸರ ಕೊಟ್ಟ ಬಳುವಳಿ. ಇನ್ನೆಲ್ಲೋ ಮೆಕ್ಸಿಕೋ ದೇಶದಲ್ಲಿ ಕೆಲವರು ಜಿರಲೆಗಳನ್ನು ತಿಂಡಿಯಾಗಿ ತಿನ್ನಲಿ. ಮಂಗೋಲಿಯಾ, ಕಜಾಕ್‌ಸ್ತಾನ್‌ದವರು ಕುದುರೆ ಮಾಂಸವನ್ನು ತಿನ್ನವಂತೆ, ತೈವಾನ್-ವಿಯೆಟ್ನಾಮ್ ದೇಶವಾಸಿಗಳು ನಾಯಿ-ಬೆಕ್ಕುಗಳನ್ನು ತಿನ್ನಲಿ - ಅದರಲ್ಲಿ ಅವರವರ ಸಂತೋಷ ಆಯಾ ದೇಶವಾಸಿಗಳ ಅಗತ್ಯ-ಅನುಕೂಲಗಳನ್ನು ಹೊಂದಿಕೊಂಡಿದೆ. ಇದನ್ನೇ ದೊಡ್ಡ ಕಾನೂನನ್ನಾಗಿ ಮಾಡಿ ಎಲ್ಲರೂ ನಮ್ಮ ಪಾಕಶಾಸ್ತ್ರವನ್ನೇ ಬಳಸಿ, ನಮ್ಮ ಅಡುಗೆಯ ವಿಧಾನವೇ ವಿಶೇಷವಾದುದು ಎಂದು ತಮಟೆ ಸಾರಿಸಿಕೊಂಡರೆ? ಒಂದು ಹೆಜ್ಜೆ ಮುಂದೆ ಹೋಗಿ ಅದನ್ನೇ ಇನ್ನೊಬ್ಬರ ಮೇಲೆ ಹೇರಿಬಿಟ್ಟರೆ? ಭೂಮಿಯ ಸಮಭಾಜಕ ವೃತ್ತದ ಆಸುಪಾಸಿನಲ್ಲಿ ದಿನವಿಡೀ ಉರಿಬಿಸಿಲಿನಲ್ಲಿ ಬದುಕುವವರಿಗೂ ಉತ್ತರ-ದಕ್ಷಿಣ ಧೃವ ಪ್ರದೇಶಗಳ ಹತ್ತಿರ ಬದುಕುವ ಜನರ ಆಗು-ಹೋಗು, ಆಚಾರ-ವಿಚಾರ, ಉಡುಗೆ-ತೊಡುಗೆ, ಊಟ-ವಿಶೇಷಗಳಲ್ಲಿ ವ್ಯತ್ಯಾಸಗಳಿರುವುದು ಸಹಜವೇ. ಸಮುದ್ರಕ್ಕೆ ಹತ್ತಿರವಾದವನಿಗೆ ನದೀ ಮೂಲವನ್ನು ಅರಸಿ ಹೋಗುವ ಅಗತ್ಯವಿಲ್ಲ, ನೀರು- ನದಿಗಳು ಅವನಿದ್ದಲ್ಲೇ ಬರುವುದು ಸಹಜ. ಅಂತೆಯೇ, ಗುಡ್ಡ-ಗವಿಗಳಲ್ಲಿ ಬದುಕುವ ಮಾನವನಿಗೆ, ಮಿತವಾಗಿ ದೊರಕುವ ನೀರೊಂದು ಅಗತ್ಯದ ವಸ್ತುವಷ್ಟೇ. ಹಾಗಾಗಿ ಸುಖ-ಸಮೃದ್ಧಿ ಎನ್ನುವುದು ಅವರವರ ಸ್ಥಳವನ್ನು ಅವಲಂಬಿಸಿದೆ ಎಂದಾಯ್ತು!
***
ಸುಖವೆನ್ನುವ ಪರಮಾರ್ಥವನ್ನು ಅರಸಿಕೊಂಡು ಹೋಗಬೇಕಾದ ಅಗತ್ಯ ಯಾರಿಗೂ ಇಲ್ಲ. ತನ್ನೊಳಗೆ ಮತ್ತು ಹೊರಗೆ ಸಿಗುವ ಆ ಸುಖಮಯ ಕ್ಷಣಗಳನ್ನು ಅನುಭವಿಸುವ ರಸಾನುಭೂತಿಯನ್ನು ಅರ್ಥಮಾಡಿಕೊಳ್ಳಬೇಕಷ್ಟೇ. ಹೇರಳವಾದ ಕತ್ತಲಿದ್ದಲ್ಲಿ ಒಂದು ಚಿಕ್ಕ ಹಣತೆ ತನ್ನ ಪ್ರಕಾಶವನ್ನು ಚೆಲ್ಲುವ ಹಾಗೆ, ಕತ್ತಲಿನಿಂದ ಕತ್ತಲಿಗೆ ಸೇರುವ ಈ ಬದುಕು ಅಂತಹ ಹಣತೆಗಳ ಬೆಳಕನ್ನು ನಂಬಬೇಕಾಗುವುದು ತಾರ್ಕಿಕವಾದದ್ದು. ಸುಖವನ್ನು ಹುಡುಕದೇ ತನ್ನೊಳಗೆ ಹುದುಗಿದ ಭಾವನೆಗಳನ್ನು ಜಾಲಾಡುತ್ತಾ ಹೋದ ಹಾಗೆ ಸುಖ ಕಾಣುವುದು ಖಂಡಿತ, ಎನ್ನುವುದು ಈ ಹೊತ್ತಿನ ತತ್ವ!