Showing posts with label ಕರ್ನಾಟಕ. Show all posts
Showing posts with label ಕರ್ನಾಟಕ. Show all posts

Tuesday, September 20, 2011

ನಿಜವಾದ "ಅಂತರಂಗ"ದ ನಂಬಿಕೆ

ಕನ್ನಡ ಹಿರಿಮೆಗೆ ಮತ್ತೊಂದು ಪ್ರಶಸ್ತಿ, ಕನ್ನಡ ತಾಯಿಯ ಮಕುಟಕ್ಕೆ ಮತ್ತೊಂದು ಗರಿ. ಈ ದಿನ ವಿಶ್ವದಾದ್ಯಂತ ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾದ ದಿನ. ನಮ್ಮ ಗುರುಗಳಾಗಿ, ಅಧ್ಯಾಪಕರಾಗಿ, ನಾಟಕಕಾರರಾಗಿ, ನಿರ್ದೇಶಕ ಮೊದಲಾಗಿ ಕನ್ನಡ ಸಾಹಿತ್ಯ ಅನೇಕ ಮಜಲುಗಳಲ್ಲಿ ಪಳಗಿದ ಸುಮಾರು ನಾಲ್ಕು ದಶಕದ ಸಾಧನೆಯ ಪರಿಪೂರ್ಣತೆಯನ್ನು ಪಡೆದ ಚಂದ್ರಶೇಖರ ಕಂಬಾರರಿಗೆ ೮ ನೇ ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಬಹಳ ಸಂತೋಷದ ವಿಷಯ.

***
ನಾನು ಜ್ಞಾನಪೀಠ ಎಂದರೆ ಸುಮ್ಮನೆಯೇ? ಎಂದು ೨೦೦೬ (ಮೇ ೧೭, ೨೦೦೬) ರಲ್ಲಿ ಬರೆದದ್ದು ನಿಜವಾಯಿತು. "...ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು.". ಈ ಪ್ರಶಸ್ತಿಯನ್ನು ಪಡೆದ ಕನ್ನಡದ ದಿಗ್ಗಜರಲ್ಲಿ ನಾನು ಬಹಳ ಹತ್ತಿರದಿಂದ ನೋಡಿದವರೆಂದರೆ ಕಂಬಾರರು. ಈ ದಿನ ಅವರಿಗೆ ಈ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ಬಹಳ ಸಂತಸದ ವಿಚಾರ.

ಒಮ್ಮೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆಗೆ ಮತ್ತೆ ಅದೆಷ್ಟೋ (ಐದು ಇರಬೇಕು) ವರ್ಷಗಳ ನಂತರವೆ ಕನ್ಸಿಡರ್ ಮಾಡುತ್ತಾರೆಂತಲೂ, ಮೊದಲಿನ ಹಾಗೆ 'ನಾಕು-ತಂತಿ', 'ಚಿಕವೀರ ರಾಜೇಂದ್ರ' ಮುಂತಾದ ಏಕಕೃತಿಗಳ ಮೇಲೆ ಪ್ರಶಸ್ತಿಯನ್ನು ಕೊಡದೇ, ಕವಿ ಅಥವಾ ಬರಹಗಾರರ ಸಮಗ್ರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಯನ್ನು ಕೊಡುವಂತೆ ಕಟ್ಟಳೆಯನ್ನು ಬದಲಾಯಿಸಿದ್ದಾರೆಂತಲೂ ಕೇಳಿದ್ದೇನೆ. ಈ ಯಾವ ನಿಟ್ಟಿನಿಂದ ನೋಡಿದರೂ ಕನ್ನಡದಲ್ಲಿ ಅಗ್ರಮಾನ್ಯರಾಗಿ ನನ್ನ ಕಣ್ಣಿಗೆ ಕಂಡುಬರುವವರು ಕಂಬಾರರೇ, ಆದ್ದರಿಂದಲೇ ಮುಂದೆ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು. ಮೈಸೂರು-ಮಂಗಳೂರಿನವರಿಗೆ ಅವರ ಭಾಷೆ ಮೇಲ್ನೋಟಕ್ಕೆ ಸ್ವಲ್ಪ ಒರಟು, ಕಷ್ಟವೆಂದು ಕಂಡು ಬಂದರೂ ಒಮ್ಮೆ ಅವರ ಬರಹದ ಸವಿ ಹತ್ತಿತೆಂದರೆ ಒಂದು ರೀತಿ ಜೋನಿ ಬೆಲ್ಲವನ್ನು ತಿಂದರೆ ಇನ್ನೂ ತಿನ್ನಬೇಕು ಎಂಬಂತೆ ಆಗುವ ಹಾಗೆ ಆಗುತ್ತದೆ. ನಿಮಗೆ ನನ್ನ ಮೇಲೆ ನಂಬಿಕೆ ಇರದಿದ್ದರೆ ನಾನು ಹೇಳಿದೆನೆಂದು ಅವರ ಕಾಡುಕುದುರೆಯನ್ನು ಎರಡು ಸಾರಿ ಓದಿ ನೋಡಿ ನಿಮಗೇ ಗೊತ್ತಾಗುತ್ತದೆ. ಇನ್ನು ಕಂಬಾರರ ಹಾಡುಗಳನ್ನು ಅವರ ಬಾಯಿಂದಲೇ ಕೇಳುವ ಭಾಗ್ಯವೇನಾದರೂ ನಿಮಗೆ ಲಭಿಸಿದರೆ ಅದನ್ನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ - ಕಂಬಾರರ ಹಾಡುಗಳಲ್ಲಿನ ವಸ್ತುಗಳನ್ನು ಎಸ್.ಪಿ. ಬಾಲಸುಬ್ರಮಣ್ಯಂ (no offense) ಕಂಠದಲ್ಲಿ ಕೇಳಿದಾಗ ಪೇಟೇ ಹುಡುಗ ಹಳ್ಳಿಯಲ್ಲಿ ಕಳೆದುಕೊಂಡ ಹಾಗಾಗುತ್ತದೆ, ಬೇಕಾದರೆ ನೀವೇ 'ಕಾಡು ಕಾಡೆಂದರೆ' ಕೇಳಿ ನೋಡಿ.
***

ಕಂಬಾರರ ಭಾಷೆ ಬಹಳ ಚೆಲುವಾದುದು - ಬೆಳಗಾವಿಯ ಗ್ರಾಮೀಣ ಕನ್ನಡದ ಸೊಗಡನ್ನು ಸವಿಯ ಬೇಕಾದರೆ ಅವರ ಮಾತುಗಳನ್ನು ಆ ಭಾಷೆ ಬಲ್ಲವರಿಂದ ಗಟ್ಟಿಯಾಗಿ ಓದಿಸಿ ಕೇಳಬೇಕು, ಅಥವಾ ಅವರ ನಾಟಕಗಳನ್ನು ನುರಿತ ಕಲಾವಿದರು ಮಾಡಿದ್ದನ್ನು ನೋಡಿ ಸವಿಯ ಬೇಕು. ಇದೇ ಬೆಳಗಾವಿಯ ಕನ್ನಡದಲ್ಲಿಯೇ ಅವರು "ಮರತೇನಂದರ ಮರೆಯಲಿ ಹೆಂಗ..." ಬರೆದದ್ದು.
ಇದು ನಿಜವಾಗಿಯೂ ನಮಗೆಲ್ಲ ಸಂತೋಷದ ದಿನ.
ಜೈ ಕನ್ನಡ ಮಾತೆ!

Saturday, January 30, 2010

ನಮ್ಮೊಳಗಿನ ಬದಲಾವಣೆ ದೊಡ್ಡದು...

’ಇಂಡಿಯಾ ಪ್ರವಾಸ ಹೇಗಿತ್ತು?’ ಅನ್ನೋ ಪ್ರಶ್ನೆಗೆ ’ಅದು ಪ್ರವಾಸವೇ ಅಲ್ಲ!’ ಎಂದು ಉತ್ತರ ಕೊಟ್ಟು ಪ್ರಶ್ನೆ ಕೇಳಿದವರ ಮುಖದ ಮೇಲೆ ಸಹಜವಾಗಿ ಏಳುವ ಆಶ್ಚರ್ಯದ ಅಲೆಗಳನ್ನು ನೋಡೋದಕ್ಕೆ ಒಂದು ರೀತಿ ಖುಷಿ ಅನ್ಸುತ್ತೆ. ನಮ್ಮ ಊರಿಗೆ ನಾವು ಟೈಮ್ ಸಿಕ್ಕಾಗ ಕೊಡೋ ಭೇಟಿಯನ್ನು ಯಾರಾದ್ರೂ ಪ್ರವಾಸ ಅಂತ ಕರೀತಾರೇನು? ಅದು ಯಾವತ್ತಿದ್ದರೂ ಋಣ ಕರ್ಮಗಳಿಗೆ ಅಂಟಿಕೊಂಡಂತ ಒಂದು ಬಂಧನ, ಅಥವಾ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನು ಯಾವುದೋ ಒಂದು ಹೆಸರಿನಿಂದ ಕರೆಯಲೇ ಬೇಕು ಅಂತಾದರೆ ಅದನ್ನು "ಭೇಟಿ" ಎಂದು ಕರೆಯೋಣ, ಅದು ನನ್ನ ಮಟ್ಟಿಗೆ ಪ್ರವಾಸವಂತೂ ಖಂಡಿತ ಅಲ್ಲ. ಇಲ್ಲಿಂದ ಅಲ್ಲಿಗೆ ಹೋಗಿ ಮತ್ತಿನ್ಯಾವುದಾದರೂ ಯಾತ್ರಾ ಸ್ಥಳಗಳಿಗೋ ಪ್ರೇಕ್ಷಣೀಯ ಸ್ಥಾಣಗಳಿಗೋ ಹೋಗಿ ಬಂದರೆ ಅದಾದರೂ ಪ್ರವಾಸವಾದೀತು, ನಮ್ಮದೇನಿದ್ದರೂ ಏರ್‌ಪೋರ್ಟಿನಿಂದ ಮನೆ, ಮನೆಯಿಂದ ಏರ್‌ಪೋರ್ಟ್ ಅನ್ನಬಹುದು ಅಷ್ಟೇ.

’ಸಾಕಪ್ಪಾ ಸಾಕು ಆ ಗುಂಡಿ ರಸ್ತೆಗಳು...’, ’ಸಾಕಪ್ಪಾ ಆ ಟ್ರಾಫಿಕ್ ಜ್ಯಾಮು...’ ಎಂದು ಮೂಗೆಳೆಯುವವರಿಗಂತೂ ನನ್ನ ಹತ್ತಿರ ಸಿದ್ಧ ಉತ್ತರವಿದೆ. ’ಮತ್ತಿನೇನನ್ನು ತಾನೇ ನಿರೀಕ್ಷಿಸಬಲ್ಲಿರಿ? ಬದಲಾದವರು ನೀವು ಹಾಗೂ ನಿಮ್ಮ ನಿಲುವು, ನೀವು ಬದಲಾದ ಮಾತ್ರಕ್ಕೆ ಪ್ರಪಂಚವೇ ಬದಲಾಗಬೇಕೇನು? ನೀವು ಅಮೇರಿಕದವರು ಸ್ವಿಟ್ಜರ್‌ಲೆಂಡ್ ಹೋಗಿ ಬಂದಾಕ್ಷಣ ಅಲ್ಲಿಯವರ ಹಾಗೆ ಸಮಯ ಪಾಲಿಸುತ್ತೀರೇನು?’ ನಮ್ಮ ದೇಶ ಬಡ ದೇಶವಾಗಿತ್ತು, ಈಗ ನಿಧಾನವಾಗಿ ಅಭಿವೃದ್ಧಿಯ ಹಂತಕ್ಕೆ ಕಾಲಿಡುತ್ತಿದೆ. ನಾವು ಹಾಗೂ ನಮ್ಮ ತತ್ವಗಳು ಪ್ರಜಾಪ್ರಭುತ್ವವನ್ನು ಪ್ರತಿಬಿಂಬಿಸುವವು, ರಾತ್ರೋ ರಾತ್ರಿ ಕಾನೂನನ್ನು ಸೃಷ್ಟಿಸಿ ಅದನ್ನು ಎಲ್ಲರು ನಾಳೆಯಿಂದ ಪಾಲಿಸಿ ಎನ್ನಲು ನಮ್ಮದು ಸರ್ವಾಧಿಕಾರಿ ಸರ್ಕಾರವಂತೂ ಅಲ್ಲ. ರಸ್ತೆಯ ಮೇಲೆ ಉದ್ದಾನುದ್ದಕೂ ಲೇನ್‌ಗಳನ್ನು ಎಳೆದುಕೊಂಡ ಮಾತ್ರಕ್ಕೆ ಅದನ್ನು ಎಲ್ಲರೂ ಪಾಲಿಸಬೇಕು ಎನ್ನುವ ನಿಯಮವನ್ನು ಎಲ್ಲರೂ ಅನುಕರಿಸಿದ್ದೇ ಆದರೆ ಟ್ರಾಫಿಕ್ ಲೈಟ್‌ನಿಂದ ಹಿಡಿದು ರಸ್ತೆಯ ಉದ್ದಾನುದ್ದಕ್ಕೂ, ಎಲ್ಲಿ ನೋಡಿದರಲ್ಲಿ ಟ್ರಾಫಿಕ್ ಜ್ಯಾಮ್ ಆಗುವುದರಲ್ಲಿ ಸಂದೇಹವೇ ಇಲ್ಲ. ಅವೇ ದೇಶ, ಅವೇ ರಸ್ತೆಗಳು ಆದರೆ ದಿನೇ-ದಿನೇ ಹಿಗ್ಗುತ್ತಿರುವ ಜನಸಂಖ್ಯೆ ಮತ್ತು ಅದರ ಡಿಮ್ಯಾಂಡುಗಳಿಗೆ ಸ್ಪಂದಿಸೋದಕ್ಕೆ ಆ ಹಳೆಯ ಇನ್‌ಪ್ರಾಸ್ಟ್ರಕ್ಚರ್ರಿನಿಂದ ಹೇಗಾದರೂ ಸಾಧ್ಯವಿದೆ ಹೇಳಿ?

***

ಅಮೇರಿಕದಿಂದ ಭಾರತಕ್ಕೆ ಬಂದು ಲ್ಯಾಂಡ್ ಆಗುವ ವಿಮಾನಗಳು ಹಾಗೂ ಭಾರತವನ್ನು ಬಿಟ್ಟು ಹೊರಡುವ ವಿಮಾನಗಳು ಮಧ್ಯರಾತ್ರಿಯ ನಂತರ ಹಾಗೂ ಬ್ರಾಹ್ಮೀ ಮಹೂರ್ತಕ್ಕೆ ಮುಂಚೆ ಏಕೆ ಬಂದು ಹೋಗುತ್ತವೆ ಎಂದು ಯೋಚಿಸಿದ್ದಕ್ಕೆ ಈ ಸಾರಿ ಉತ್ತರ ಸಿಕ್ಕಿತು. ನಮ್ಮಂತೆ ದೇಶವನ್ನು ಅದೆಷ್ಟೋ ವರ್ಷಗಳ ನಂತರ ಅರಸಿ ಬಂದವರಿಗೆ ಏಕ್‌ದಂ ಭ್ರಮನಿರಸನವಾಗಬಾರದಲ್ಲ ಅದಕ್ಕೆ. ಉದಾಹರಣೆಗೆ ಚಿಕಾಗೋದಿಂದ ಹೊರಟ ವಿಮಾನ ಸರಿ ಬೆಳಗ್ಗೆ ಒಂಭತ್ತು ಘಂಟೆಗೆ ಬೆಂಗಳೂರನ್ನು ತಲುಪಿತು ಎಂದುಕೊಳ್ಳಿ, ಅಲ್ಲಿನ ಪೀಕ್ ಅವರ್ ನಲ್ಲಿ ನೀವು ಆ ದಿನ ಮನೆ ಸೇರುವಾಗ ಅದೆಷ್ಟು ಹೊತ್ತಾಗುತ್ತೋ ಯಾರು ಬಲ್ಲರು? ನಿಮಗೆ ಎದಿರಾಗಿ ದಿಢೀರನೆ ಉದ್ಭವಿಸೋ ಮುಷ್ಕರ ಮೆರವಣಿಗೆಗಳಿರಬಹುದು, ಯಾರೋ ಸತ್ತರು ಎಂದು ತೂರಿ ಬರುವ ಕಲ್ಲುಗಳಿಗೆ ಆಹುತಿಯಾಗುವ ಗಾಜಿನ ತುಣುಕುಗಳಿರಬಹುದು ಅಥವಾ ಸಾಮಾನ್ಯ ಟ್ರಾಫಿಕ್ಕ್ ಜಾಮೇ ನಿಮ್ಮನ್ನು ಮೊದಲ ದಿನವೇ ಹೈರಾಣಾಗಿಸಿಬಿಡಬಹುದು. ಇಲ್ಲಿ ಬರುವಾಗ ಅದೇನೇನೋ ಕನಸುಗಳನ್ನು ಕಟ್ಟಿಕೊಂಡ ನಮಗೆ ಇಲ್ಲಿ ಬರುವ ಅವಕಾಶ ಅವಸ್ಥೆಗಳೆಲ್ಲ ಒಂದು ರೀತಿಯ ಓಪನ್ ಎಂಡೆಡ್ ಪ್ರಶ್ನೆಗಳ ಥರ, ಅದೇ ಇಲ್ಲಿಂದ ಅಲ್ಲಿಗೆ ಹೋದಾಗ ನಮ್ಮ ನಿರೀಕ್ಷೆ ಮತ್ತು ನಮಗಾಗೂ ನಿರಾಶೆಗಳ ಮೂಲವೇ ಬೇರೆ.

ಪಲಾಯನವಾದ ಅನ್ನೋದು ನಮ್ಮ ಹೆಸರುಗಳಿಗೆ ನಮ್ಮ ಪ್ರತಿಭೆಗೆ ಮಾತ್ರ ಅಂಟಿದ್ದಲ್ಲ, ನಾವು ನಮ್ಮ ಮ್ಯಾನೇಜ್‌ಮೆಂಟಿನ ಸ್ಥರಗಳಲ್ಲಿ ನಮ್ಮ ಅನುಭವಗಳನ್ನು ವಿಸ್ತರಿಸಿಕೊಂಡ ಹಾಗೆಲ್ಲ ದುತ್ತನೆ ಎದುರಾಗುವ ಸಮಸ್ಯೆಗಳಿಗೆ ಥಟ್ಟನೆ ಉತ್ತರ ಹೇಳುವಲ್ಲಿ ಸೋತು ಹೋಗುತ್ತೇವೇನೋ ಅನ್ನಿಸುತ್ತದೆ. ಎಂಥ ವಾಜ್ಞಿ ರಾಜಕಾರಣಿ ಅಧಿಕಾರಕ್ಕೆ ಬಂದರೂ ಮುಂದೆ ಪಬ್ಲಿಕ್ ಸ್ಟೇಟ್‌ಮೆಂಟ್ ಕೊಡೋವಾಗ ಪದಗಳ ನಂತರ ಪದಗಳನ್ನು ಹುಷಾರಾಗಿ ಪೋಣಿಸಿ ವಾಕ್ಯಗಳನ್ನು ರಚಿಸುವಂತೆ ಭಾರತದಲ್ಲಿ ಎದಿರಾಗೋ ಸಮಸ್ಯೆಗಳಿಗೆ ಅಮೇರಿಕದಿಂದ ಹೋದೋರು ಸ್ಪಂದಿಸೋದು ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಓರಗೆಯವರ ಬ್ಯಾಂಕ್‌ ಬ್ಯಾಲೆನ್ಸಿಗಿಂತ ನಮ್ಮದು ತುಸು ಹೆಚ್ಚಿರಬಹುದು ಎನ್ನುವಲ್ಲಿ ನಾವೇ ಮುಂದೇ ಹೊರತು ಅಲ್ಲಿಯ ಆಗು ಹೋಗುಗಳಿಗೆ ನಿಜವಾಗಿ ಸ್ಪಂದಿಸೋದಕ್ಕೆ ನಮ್ಮಿಂದ ಸಾಧ್ಯವೇ? ನಿಮ್ಮ ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲ ಎಂದು ಸ್ಥಳೀಯ ಸರ್ಕಾರಿ ದವಾಖಾನೆಗೆ ಕರೆದುಕೊಂಡು ಹೋಗಿ ಅಥವಾ ಕೈಲಾದರೆ ಪ್ರೈವೇಟ್ ನರ್ಸಿಂಗ್ ಹೋಮ್‌ಗಳಲ್ಲಿ ಟ್ರೀಟ್‌ಮೆಂಟ್ ಕೊಡಿಸಿ ನೋಡಿ, ಅಲ್ಲಿಯ ಚಲನವಲನ (ಲಾಜಿಸ್ಟಿಕ್ಸ್)ಗಳಿಗೆ ನಮ್ಮಿಂದ ಹೊಂದಿಕೊಳ್ಳೋದಕ್ಕೆ ಇನ್ನೊಂದು ದಶಕವೇ ಬೇಕು ಎನ್ನಿಸುತ್ತೆ ಕೆಲವೊಮ್ಮೆ. ಇಲ್ಲಿಯ ವೇಷವನ್ನು ಕಳಚಿ ಕ್ರಮೇಣ ಅಲ್ಲಿಯವರಾದಂತೆ ನಟಿಸಿದರೂ ನಮ್ಮೊಳಗಿನ ಭಿನ್ನ ಮನ ಸದಾ ಬದಲಾವಣೆಯನ್ನು ನಿರೀಕ್ಷಿಸುತ್ತದೆ, ಆದರೆ ಅಲ್ಲಿಯ ವ್ಯವಸ್ಥೆ ಮನೋ ವೇಗಕ್ಕೆ (ಅಥವಾ ರೋಗಕ್ಕೆ) ಸ್ಪಂದಿಸೋದಾದರೂ ಹೇಗೆ ಸಾಧ್ಯ?

ನಮ್ಮ ಕೈಯಲ್ಲಿ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ - ಒಂದು ಹೊತ್ತು ಉಂಡರೆ ಮತ್ತೊಂದು ಹೊತ್ತು ಊಟದ ಬಗ್ಗೆ ಕೊರಗುವ ನಾಗರಿಕತೆ ಇರುವಾಗ, ನಮ್ಮ ಸಂಪನ್ಮೂಲ ಸ್ತೀಮಿತವಾಗುತ್ತದೆ. ನಾವು ನಿರೀಕ್ಷಿಸುವ ಬದಲಾವಣೆಗಳು ಲಾರ್ಜ್‌ಸ್ಕೇಲ್‌ನಲ್ಲಿ ಇಂಪ್ಲಿಮೆಂಟ್ ಮಾಡಲಾಗದ ಪುಸ್ತಕದ ಬದನೆಕಾಯಿಯಾಗುತ್ತದೆ. ದಿನೇ-ದಿನೇ ಉಳ್ಳವರ-ಇಲ್ಲದವರ ನಡುವಿನ ಕಂದಕ ದೊಡ್ಡದಾಗುತ್ತಾ ಹೋಗುತ್ತಿರುವಾಗ ನಮ್ಮ ಧನಾತ್ಮಕ ಆಲೋಚನೆಗಳು ಮುರಿದು ಹೋದ ಚಿಕ್ಕ ಮರದ ತುಂಡನ್ನು ಅಂಟಿಸೋ ಗೋಂದಾಗುತ್ತದೆಯೇ ಹೊರತು ಅದು ದೊಡ್ಡ ಪ್ರಮಾಣದ ಬಂಧನವಾಗೋದಿಲ್ಲ. ನಾವು ಎಲ್ಲವನ್ನು ಮಾಡಲಾಗದಿದ್ದರೂ ನಮ್ಮ ಮನಸ್ಸಿನಲ್ಲಿರುವ ಕ್ವಾಲಿಟಿಗೆ ತಕ್ಕಂತೆ ಎಲ್ಲರಿಂದ ಕೆಲಸವನ್ನು ನಿರೀಕ್ಷಿಸುವುದು ಇನ್ನೂ ಕಷ್ಟದ ಮಾತೇ. ಬೆಂಗಳೂರಿನಲ್ಲಿ ಮನೆ ಕೆಲಸದವರ ಜೊತೆ ಏಗಿ ಸರಿಯಾಗಿ ಪಾತ್ರೆ ತೊಳೆಸಿಕೊಂಡು ಬಟ್ಟೆ ಒಗೆಸಿಕೊಂಡು ನೆಲವನ್ನು ಸ್ವಚ್ಛವಾಗಿಸಿಕೊಳ್ಳುವುದಕ್ಕೆ ಪೀಪಲ್ ಮ್ಯಾನೇಜ್‌ಮೆಂಟಿನಲ್ಲಿ ಹೊಸ ಡಿಗ್ರಿ ಬೇಕಾಗುತ್ತದೆ. ಆಳು ಮಾಡಿದ್ದು ಹಾಳು...ಅಂತಹ ಹಾಳು ಕೆಲಸದ ನಡುವೆ ನಮ್ಮ ಬದುಕನ್ನು ಸುಗಮವಾಗಿ ಸಾಗಿಸಿಕೊಂಡು ಹೋಗುವಾಗ ಮೈಕ್ರೋ-ಮಿನಿ ಮ್ಯಾನೇಜುಮೆಂಟುಗಳಿಗೆ ಜೋತು ಬೀಳಬೇಕಾಗುತ್ತದೆ.

***

ಭಾರತಕ್ಕೆ ಹೋಗಿ ಬರೋ ಅನುಭವ ಪ್ರವಾಸವಲ್ಲ, ಅದು ಒಂದು ದರ್ಶನ, ಒಂದು ವಾತಾವರಣದಲ್ಲಿ ಪಕ್ವಗೊಂಡ ಮನಸ್ಸು ಮತ್ತೊಂದು ವಾತಾವರಣದಲ್ಲಿ ಬೆರೆಯುವ ಯೋಗ, ತಾಯ ಮಡಿಲನ್ನು ಸೇರಿ ಹಾಯಾಗಿ ಕಣ್ಮುಚ್ಚಿ ಮಲಗುವ ಮಗುವಿಗೆ ದೊರೆತ ಒಂದು ಅವಕಾಶ. ಸಮಸ್ಯೆಗಳು ಎಲ್ಲಿಲ್ಲ, ಹಾಗಿರುವಾಗ ನಾವು ಹೋದಲೆಲ್ಲ ಸುತ್ತಲಿನ ಕೊಳೆಯನ್ನು ಮಾತ್ರ ನೋಡಿಕೊಂಡು "ಶಿಟ್" ಎಂದು ಮೂಗು ಸಿಂಡರಿಸಿದಾಕ್ಷಣ ಅಲ್ಲಿಯದೇನೂ ಬದಲಾಗೋದಿಲ್ಲ. ಬದಲಾವಣೆ ಎಲ್ಲ ಕಡೆಗಿದೆ, ಆದರೆ ಕಡಿಮೆ ಸಮಯದಲ್ಲಿ ಹೆಚ್ಚು ಬದಲಾವಣೆಗೊಳಪಟ್ಟ ನಮ್ಮ ಮನಸ್ಸು ಎಲ್ಲ ಕಡೆ ಅದನ್ನೇ ನಿರೀಕ್ಷಿಸಿದರೆ ಅದರ ಔಚಿತ್ಯವನ್ನು ಪ್ರಶ್ನಿಸಬೇಕಾಗುತ್ತದೆ. ನಮ್ಮ ಆಫೀಸಿನಿಂದ ಬಿಸಿನೆಸ್ ಗೋಸ್ಕರ ಹೋಗುವವರಿಗೆ ನಾನು ಹೇಳೋದು ಇಷ್ಟೇ: ’ಅಲ್ಲಿ ಬೇಕಾದಷ್ಟು ಸಂಸ್ಕೃತಿಗಳಿವೆ, ಒಂದು ಬಿಲಿಯನ್ನ್‌ಗಿಂತಲೂ ಹೆಚ್ಚು ಜನರಿದ್ದಾರೆ, ದೊಡ್ಡ ಸಾಗರವನ್ನು ನೋಡೋ ಹಾಗೆ ನೋಡಿ, ಅದನ್ನು ಬಿಟ್ಟು ಆಗಾಗ್ಗೆ ಬರುವ ಅಲೆಗಳಿಗೆ ತಲೆಕೆಡಿಸಿಕೊಳ್ಳಬೇಡಿ!"

Thursday, December 31, 2009

ಯಾರೂ ಇದರ ಬಗ್ಗೆ ಏಕೆ ಮಾತನಾಡಲ್ಲ?

ಸದ್ಯ, ಈ ದಿನ ಪ್ರಜಾವಾಣಿ ಮುಖಪುಟ ತೆರೆದು ನೋಡ್ತಾಗ ಮೃತ್ಯುದೇವತೆ ಕನ್ನಡದ ಅಭಿಮಾನಿಗಳ ಮೇಲೆ ಹ್ಯಾಟ್ರಿಕ್ ಹೊಡೆತವನ್ನೇನೂ ಕೊಟ್ಟಿರಲಿಲ್ಲ ಎಂದು ಸಮಾಧಾನ ಮೂಡಿತು.  ಕೊನೆಗೆ ಆದ ಘಟನೆಗಳ ಸಿಂಹಾವಲೋಕನ ಮಾಡಲಾಗಿ ಅಭಿಮಾನಿಗಳು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುತ್ತಿದ್ದುದನ್ನು ನೋಡಿ ಅವರ ತರ್ಕವೇನು ಎಂದು ಯೋಚಿಸಿ ಮನ ಹೆಣಗಿತು, ಇವೆಲ್ಲದರ ನಡುವೆ ವಿಷ್ಣುವರ್ಧನ್ ಕೇವಲ ೫೯ ವರ್ಷಕ್ಕೆ ಸಾಯಲು ಕಾರಣವೇನಿರಬಹುದು ಎಂದು ಆಶ್ಚರ್ಯವೂ ಆಯಿತು.

 

ನಮ್ಮ ನಂಬಿಕೆಯ ಪ್ರಕಾರ ಆಯಸ್ಸು ತೀರಿದವರು ಎಲ್ಲಿದ್ದರೂ ಮೃತ್ಯುದೇವತೆಯನ್ನು ವಂಚಿಸಲಾಗದು ಎನ್ನುವುದನ್ನು ತಲೆಯ ಒಂದು ಬದಿಯಲ್ಲಿಟ್ಟುಕೊಂಡೇ ಮತ್ತೊಂದು ಕಡೆ ವೈದ್ಯಕೀಯ ವಿಜ್ಞಾನ ಇಷ್ಟೊಂದು ಬೆಳೆದಿರುವಾಗ ವಿಕ್ರಂ ಆಸ್ತ್ಪತ್ರೆಯ ವೈದ್ಯರು ರಾತ್ರಿ ಕಾಡಿದ ಎದೆನೋವಿನ ಮೂಲಕಾರಣವನ್ನು ಪತ್ತೆಹಚ್ಚುವಲ್ಲಿ ವಿಫಲರಾದರೇನೋ ಎಂದು ಬಲವಾದ ಸಂಶಯ ಕೂಡ ಬಂತು.  ಒಬ್ಬ ೫೯ ವರ್ಷದ ಮನುಷ್ಯ, ಯಾರೇ ಇರಲಿ, ಎದೆ ನೋವು ಎಂದು ರಾತ್ರಿ ಹತ್ತು ಘಂಟೆಗೆ ಆಸ್ಪತ್ರೆಗೆ ಬಂದರೆ ಅಂಥವರನ್ನು ಅಡ್ಮಿಟ್ ಮಾಡಿಕೊಳ್ಳದೇ ಹೇಗೆ ಮನೆಗೆ ಕಳುಹಿಸುತ್ತೀರಿ?  ಮಾಡಬೇಕಾದ ಸ್ಕ್ಯಾನಿಂಗ್ ಎಲ್ಲವನ್ನೂ ಮಾಡಿದ್ದೀರೋ? ಅಥವಾ ಪೇಷೆಂಟ್ ತಮ್ಮ ಸ್ವ-ಇಚ್ಚೆಯಿಂದ ಸೈನ್-ಔಟ್ ಮಾಡಿ ಮನೆಗೆ ಹೋದರೋ?

 

ಅಮೇರಿಕದಲ್ಲಿ ಕುಳಿತ ನಮಗೆ ಈ ರೀತಿಯ ಒಣತರ್ಕ ಮಾಡಲು ಸುಲಭ, ಇಲ್ಲಿನ ಲಿಟಿಗೇಶನ್ ವ್ಯವಸ್ಥೆ ಏನೇನೋ ಅನಾನುಕೂಲಗಳನ್ನು ಕಲ್ಪಿಸಿದ್ದರೂ ಈ ರೀತಿ ಯೋಚಿಸುವ ಮನಸ್ಥಿತಿಯನ್ನಾದರೂ ಹುಟ್ಟಿಸಿದೆ ಎನ್ನುವುದು ದೊಡ್ಡ ವಿಷಯ.  ಯಾರಾದರೂ ವಿಕ್ರಂ ಆಸ್ಪತ್ರೆಯ ಚಾರ್ಟ್ ತೆಗೆದು ನೋಡಿದ್ದಾರಾ? ಅಂದು ರಾತ್ರಿ ಕಾಲ್‌ನಲ್ಲಿ ಇದ್ದ ಆಸ್ಪತ್ರೆ ಸಿಬ್ಬಂದಿ ಯಾರು? ಅವರು ಏನೇನು ಪರೀಕ್ಷೆಗಳನ್ನು ಮಾಡಿದ್ದಾರೆ, ರೋಗಿಯನ್ನು ಹೊರಹೋಗಲು ಬಿಡುವ ಮುನ್ನ ಯಾವ ಯಾವ ಎಚ್ಚರಿಕೆಗಳನ್ನು ಕೊಟ್ಟಿದ್ದಾರೆ?  ಏನಾದರೂ ಔಷಧಿ-ಮದ್ದನ್ನು ಕೊಟ್ಟಿದ್ದಾರೋ ಅಥವಾ ಮರುದಿನ ಮತ್ತೆ ಬರಲು ತಿಳಿಸಿದ್ದಾರೋ? ವಿಕ್ರಂ ಆಸ್ಪತ್ರೆ ಚಿಕ್ಕದ್ದಿದ್ದು ಅಲ್ಲಿ ರೋಗಿಯನ್ನು ಇಟ್ಟುಕೊಳ್ಳಲಾಗದಿದ್ದರೆ ಹತ್ತಿರದ ದೊಡ್ಡ ಆಸ್ಪತ್ರೆಗೇನಾದರೂ ವಿಷಯ ತಿಳಿಸಿದ್ದರೋ? ಇತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತವೆ, ಯಾರೂ ಇದರ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಲಿಲ್ಲ/ಕಾಣಲಿಲ್ಲ.

 

ಆದದ್ದು ಆಯ್ತು, ಎಂದು ಸುಮ್ಮನೆ ಬಿಟ್ಟು ಬಿಡಬಹುದಾದ ವಿಷಯ ಇದಲ್ಲ.  ರೋಗಿ/ವ್ಯಕ್ತಿ ಯಾರೇ ಆಗಿದ್ದರೂ ಆಸ್ಪತ್ರೆ/ವೈದ್ಯರು ತಮ್ಮ-ತಮ್ಮ ಕರ್ತವ್ಯವನ್ನು ಪಾಲಿಸಲೇಬೇಕು, ಕೊನೇಪಕ್ಷ ಈ ಘಟನಾವಳಿಗಳಲ್ಲಿ ತಪ್ಪೇನಾದರೂ ನಡೆದಿದ್ದು ಸಾಬೀತಾದರೆ ಇನ್ನು ಮುಂದೆ ಹೀಗಾಗದಂತೆ ನೋಡಬೇಕು.

 

ಅದೇ ರೀತಿ ಅಶ್ವಥ್ ಸಾವೂ ಕೂಡಾ ಅನಿರೀಕ್ಷಿತ ಎಂದೇ ಹೇಳಬೇಕು.  ವೈದ್ಯರು ಇನ್ನೇನು ಗುಣಮುಖರಾಗುತ್ತಾರೆ ಎಂದು ಹೇಳಿದ್ದರಂತೆ, ಏನು ತೊಂದರೆ ಆಯಿತೋ? ಕಿಡ್ನಿ-ಲಿವರ್ ತಮ್ಮ ಸಾಮರ್ಥ್ಯಗಳಲ್ಲಿ ಕ್ಷೀಣಿಸುತ್ತಾ ಬಂದಂತೆ ಅದನ್ನು ಮೊದಲೇ ಪತ್ತೆ ಹಚ್ಚಿ ಯಾವುದಾದರೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದರೋ ಇಲ್ಲವೋ.  ಕ್ಷಮಿಸಿ, ನಾನು ವೈದ್ಯನೇನಲ್ಲ, ಈ ರೀತಿ ಪ್ರಶ್ನೆಗಳನ್ನು ಹಾಕುತ್ತಿರುವುದು ಉದ್ಧಟತನದಿಂದಲ್ಲ, ಕೇವಲ ಕುತೂಹಲದಿಂದ ಮಾತ್ರ.  ಎಲ್ಲೋ ಕುಳಿತು ಇನ್ನೆಲ್ಲಿಯೋ ಸರ್ಜರಿ ಮಾಡುವು ಇಂದಿನ ವೈದ್ಯಕೀಯ ವ್ಯವಸ್ಥೆಯಲ್ಲಿ ಇಬ್ಬರು ಮಹಾಚೇತನಗಳನ್ನು ಎರಡು ದಿನಗಳಲ್ಲಿ ಕಳೆದುಕೊಂಡು ರೋಧಿಸುವ ಅಭಿಮಾನಿ ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಸಹಜವೆಂದುಕೊಂಡಿದ್ದೇನೆ.

 

ನಿಮಗೇನಾದರೂ ಹೆಚ್ಚು ತಿಳಿದಿದ್ದರೆ ನಮಗೂ ಸ್ಪಲ್ಪ ತಿಳಿಸಿ.

 

image

(ಕೃಪೆ: ಪ್ರಜಾವಾಣಿ)

Wednesday, December 30, 2009

ಶ್ರದ್ದಾಂಜಲಿ...ವಿಷ್ಣು, ಅಶ್ವಥ್ ಇನ್ನಿಲ್ಲ

೨೦೦೯ ಸುಮ್ನೇ ಹೋಗಲಿಲ್ಲ...ತನ್ನ ಕೊನೆಯ ದಿನಗಳಲ್ಲಿ ಎರಡು ಮಹಾನ್ ಚೇತನಗಳನ್ನ ತನ್ನ ಜೊತೆ ತೆಗೆದುಕೊಂಡು ಹೋಯ್ತು...ಇನ್ನೂ ಒಂದು ದಿನ ಬಾಕಿ ಇದೆ ವರ್ಷದ ಬಾಬ್ತು ಮುಗಿಯೋದಕ್ಕೆ ಅನ್ನೋದು ಹೆದರಿಕೆಯ ವಿಷಯವೇ, ಏನೇನು ಆಗಲಿಕ್ಕೆ ಇದೆಯೋ!

 

ಕೆಲವು ತಿಂಗಳುಗಳ ಹಿಂದೆ ಅಶ್ವಥ್ ಅಮೇರಿಕಕ್ಕೆ ತಮ್ಮ ತಂಡದವರೊಂದಿಗೆ ಬಂದು ನಮಗೆಲ್ಲ ಸುಗಮ ಸಂಗೀತದ ರಸದೌತಣವನ್ನು ನೀಡಿದ್ದರು, ಅವರು ಇನ್ನಿಲ್ಲ...ತಾನು ಹುಟ್ಟಿದ ದಿನವೇ ಸಾಯುವ ಕಾಕತಾಳೀಯವನ್ನು ಬಹಳ ಜನ ಕಾಣಲಾರರು, ಅಂಥವರಲ್ಲಿ ಅಶ್ವಥ್ ಅವರು ಒಬ್ಬರು, ಇಂದಿಗೆ ಅವರಿಗೆ ಬರೋಬ್ಬರಿ ಎಪ್ಪತ್ತು ವರ್ಷ.

 

ashwath241209_1

***

 

ವಿಷ್ಣುವರ್ಧನ್, ಕೇವಲ ೫೯ ವರ್ಷಕ್ಕೆ ಹೃದಯಾಘಾತಕ್ಕೆ ಈಡಾಗುತ್ತಾರೆ ಎಂದು ಯಾರೂ ಎಣಿಸಿರಲಿಕ್ಕಿಲ್ಲ.  ಇತ್ತೀಚೆಗಷ್ಟೇ ಯಾವುದೋ ಉದಯ ಟಿವಿ ಕಾರ್ಯಕ್ರಮವನ್ನು ತೋರಿಸಿ ’ಪರವಾಗಿಲ್ಲ, ವಿಷ್ಣು ತನ್ನ ಫಾರ್ಮ್ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ!’ ಎಂದು ಹೇಳಿದ್ದು ನನಗೆ ಚೆನ್ನಾಗಿ ನನಪಿದೆ.

 

vishnuvardhan-6677

***

ಈ ಇಬ್ಬರು ಕನ್ನಡದ ಚೇತನಗಳಿಗೆ "ಅಂತರಂಗ"ದ ನಮನ, ಅವರ ಆತ್ಮಗಳು ಶಾಂತಿಯಿಂದಿರಲಿ, ಹಾಗೂ ಮತ್ತೊಮ್ಮೆ ಕನ್ನಡ ನಾಡಲ್ಲೇ ಹುಟ್ಟಿ ಬರಲಿ.

 

picture source:

http://www.indiaglitz.com/channels/kannada/article/52939.html

http://entertainment.oneindia.in/tag/vishnuvardhan

Monday, November 09, 2009

ನಮ್ಮ ನೆಲೆಗಟ್ಟು ಹಾಗೂ ಆಯಾಮಗಳು

ಅಬ್ಬಾ, ಕೊನೆಗೂ ಈ ರಾಜ್ಯ ರಾಜಕಾರಣದ ಬಿಕ್ಕಟ್ಟಿನ ಸುದ್ದಿಗಳು ವೃತ್ತಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಸೆಕೆಂಡರಿಯಾಗತೊಡಗಿದವು!  ಇತ್ತೀಚೆಗೆ ಕೆಲವು ವಾರಗಳಿಂದ ಅವರಿವರು ಹಿಡಿದ ಬಿಗಿಪಟ್ಟಿಗೆ ಕೊನೆಗೂ ತೆರೆ ಬಿತ್ತು.  ಮತ್ತೆ ಮಳೆ ಅಲ್ಲಲ್ಲಿ ಹೆಚ್ಚು ಅಬ್ಬರ ತೋರಿದಂತೆ ನಮ್ಮ ಧುರೀಣರಿಗೆ ಇತ್ತೀಚಿನ ಪ್ರವಾಹದ ಪ್ರಕೋಪ ನೆನಪಿಗೆ ಬಂದು ತಮ್ಮ ತಾಲ್ಲೂಕು, ಜಿಲ್ಲೆಗಳ ಜನರಿಗೆ ಸಂತೈಸಲು ಈಗ ಸಮಯ ಸಿಕ್ಕಿರಬಹುದು ಎಂದು ನನ್ನಂತಹವರಿಗೆ ಒಂದು ರೀತಿಯ ಸಮಾಧಾನ.  ಅದೂ ಕರ್ನಾಟಕ ರಾಜ್ಯೋತ್ಸವ ಮಾಹೆಯಲ್ಲಿ ನಮ್ಮ ಸರ್ಕಾರ ಕುಸಿದು ನಮ್ಮ ವ್ಯವಸ್ಥೆ ನಗೆಪಾಟಲಿಗೆ ಗುರಿಯಾಗುವುದೆಂದರೆ?

 

ದೂರದ ಅಮೇರಿಕದಲ್ಲಿ ಕುಳಿತು ಮಾಧ್ಯಮಗಳನ್ನು ಹೇಳಿದ್ದನ್ನು ನೋಡಿ ನಂಬುವ ನಮ್ಮಂತಹವರಿಗೆ ವಸ್ತು-ವಿಷಯದ ಪೂರ್ಣ ಪರಿಚಯವಾಗುವುದೇ ಇಲ್ಲ.  ಅಧಿಕಾರಿಗಳ ನಡುವೆ ನಡೆಯುವ ಮಾತುಕಥೆ, ಅವರ ತಂತ್ರಗಳ ಸುತ್ತಲೂ ಹೆಣೆದುಕೊಳ್ಳುವ ಅಸಮಧಾನ ಇವು ಹೊಸತಲ್ಲ ಹಾಗೂ ಶಾಸಕಾಂಗದ ಪ್ರಭಾವ ಕಾರ್ಯಾಂಗದ ಮೇಲೆ ಯಾವಾಗಲೂ ಇರುವಂತೆ ರಾಜಕಾರಣಿಗಳು ಹೋಗಿ-ಬರುತ್ತಿದ್ದರೂ ಅಧಿಕಾರಿಗಳು ತಮ್ಮ ವರ್ತುಲಗಳಲ್ಲಿ ಮುಂದುವರೆಯುತ್ತಲೇ ಇರುತ್ತಾರೆ.  ಹೀಗಿದ್ದ ಅಧಿಕಾರಿಗಳ ವಲಯದಲ್ಲಿ ದಿಢೀರ್ ’ಕಾರ್ಯಾಚರಣೆ’ ನಡೆದು ಅವರಿವರನ್ನು ಜನ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡು ಅಲ್ಲಿಲ್ಲಿ ವರ್ಗಾವಣೆ ಮಾಡಲಾಗಿದೆ ಎನ್ನುವುದೊಂದು ಆರೋಪ.  ಅದಕ್ಕೆ ಪ್ರತಿಯಾಗಿ ಭಿನ್ನಮತ.  ಇವುಗಳಿಗೆಲ್ಲ ದೆಹಲಿಯ ವರಿಷ್ಠರ ಸೂತ್ರದಾರಿಕೆ ಹಾಗೂ ಮಾತುಕಥೆ.  ಇವುಗಳನ್ನೆಲ್ಲ ಹತ್ತಿರದಿಂದ ವೀಕ್ಷಿಸಿಕೊಂಡು ಸಿಕ್ಕಿದ್ದರಲ್ಲಿ ಅವಕಾಶ ಸಾಧನೆ ಮಾಡಿಕೊಳ್ಳುವುದು ಮತ್ತೊಂದು ಬಣ.

 

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಕಡೆಗಣಿಸಿ ಶಾಸಕರನ್ನು ಹೈದರಾಬಾದಿನಲ್ಲಿ ನಿಯೋಜಿಸಿ ’ಮಾರಾಟ’ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಹೆಸರಿನಲ್ಲಿ ಕೋಟ್ಯಾಂಟರ ರೂಪಾಯಿಗಳಿಗೆ ಒಬ್ಬೊಬ್ಬ ಶಾಸಕರನ್ನು ಮಾರಿಕೊಳ್ಳುವ ಧರಣಿಯನ್ನು ಹಮ್ಮಿಕೊಂಡಿದ್ದರು.  ಅದು ಜನ ಸಾಮಾನ್ಯರ ಪ್ರತಿಭಟನೆಯೋ, ರಾಜಕೀಯ ಪ್ರೇರಿತವೋ ಎಂಬುದು ಸರಿಯಾಗಿ ತಿಳಿದು ಬಂದಿಲ್ಲವಾದರೂ ಶಾಸಕರ “ಕುದುರೆ ವ್ಯಾಪಾರ” ಇವತ್ತು ನಿನ್ನೆಯದಲ್ಲ ಬಿಡಿ.

 

ನಮ್ಮವರನ್ನು ಪ್ರೇರಿಪಿಸುವುದು ಇಷ್ಟೇ: ಹಣ, ಜಾತಿ ಹಾಗೂ ಬಣ.  ಇವು ಎಲ್ಲಿ ಹೋದರೂ ಸತ್ಯವಲ್ಲವೇ? ಎಂದು ಯಾರಾದರೂ ಪ್ರಶ್ನಿಸಬಹುದು, ಆದರೆ ನಮ್ಮ ಕರ್ನಾಟಕದಲ್ಲಿ ಒಂದು ವಿಶೇಷತೆ ಇದೆ – ಅವೇ ಬ್ರಾಹ್ಮಣ, ಗೌಡ, ಲಿಂಗಾಯಿತ, ಕುರುಬ ಮೊದಲಾದ ಜಾತಿಗಳು, ಅವರಲ್ಲೇ ಗಣಿ ಒಡೆತನದವರು, ಪಕ್ಷ ಕಟ್ಟಿದವರು, ಬೇರೆ ಪಕ್ಷದಿಂದ ಹಾರಿ ಸಧ್ಯಕ್ಕೆ ತಾತ್ಕಾಲಿಕ ನೆಲೆಯನ್ನು ಕಂಡುಕೊಂಡವರು, ಒಂದೂವರೆ ವರ್ಷದ ಹಿಂದೆ ಸ್ವತಂತ್ರ ಅಭರ್ಥಿಗಳಾಗಿ ಗೆದ್ದು ಇಂದು ಮತ್ತೊಂದು ಪಕ್ಷ ಸೇರಿಕೊಂಡವರು – ಮೊದಲಾದವರೆಲ್ಲ ನಮ್ಮ ರಾಜ್ಯ ರಾಜಕಾರಣವನ್ನು ವಿಶೇಷಗೊಳಿಸುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

 

“ನಾನು ಸತ್ತರೂ ಪರವಾಗಿಲ್ಲ, ಅವನ ಮನೆಯಲ್ಲಿ ಅಥವಾ ಅವನಿಂದ ಒಂದು ಹನಿ ನೀರೂ ನನಗೆ ಬೇಡ!” ಎನ್ನುವುದು ನಮ್ಮ ಧ್ಯೇಯವಾಕ್ಯ.  ಇದೊಂದು ವಾಕ್ಯವೇ ಸಾಕು ಪ್ರಪಂಚದ ಪ್ರಯೋಗಶೀಲತೆಯನ್ನೆಲ್ಲ ಬದಿಗೊತ್ತಲು, ಇದೊಂದೇ ವಾಕ್ಯ ಸಾಕು ನಮ್ಮ ಹಿತ್ತಲಿನ ಆಲದ ಮರವೋ ಹುಣಿಸೇ ಮರವೋ ನಮಗೆ ದೊಡ್ಡದಾಗಿ ಕಾಣಲು.  ಈ ಮನೋಭಾವನೆ ಇರುವವರೆಗೆ ನಮ್ಮಲ್ಲಿನ ರಾಜಕಾರಣ ವಿಶ್ವ ರಾಜಕೀಯದ ಮಾದರಿಯ ಪ್ರಜಾಪ್ರಭುತ್ವವನ್ನು ಅನುಸರಿಸಿಯೂ ಭಿನ್ನವಾಗಿರುತ್ತದೆ, ಹೀಗೆ ಭಿನ್ನವಾಗಿರುವ ನೆಲೆಗಟ್ಟಿಗೆ ಹಣ, ಜಾತಿ ಹಾಗೂ ಬಣಗಳೆಂಬುವವು ಹೊಸ ಹೊಸ ಆಯಾಮಗಳನ್ನು ಕೊಡುತ್ತಲೇ ಹೋಗುತ್ತವೆ.

Saturday, October 27, 2007

ರಾಜ್ಯೋತ್ಸವದ ಆಚರಣೇ ಕೇವಲ ಒಂದೇ ದಿನ ಇರಲಿ

ಇನ್ನೇನು ಕನ್ನಡ ರಾಜ್ಯೋತ್ಸವ ಬಂದೇ ಬಿಡ್ತು, ಆದರೆ ಹೇಳಿಕೊಳ್ಳಲಿಕ್ಕೊಂದು ಸರ್ಕಾರವಿಲ್ಲ, ರಾಜ್ಯವನ್ನು ಮುನ್ನಡೆಸುವ ನಾಯಕರಿಲ್ಲ. ಐದು ವರ್ಷಗಳ ಆಡಳಿತ ನಡೆಸುವಂತೆ ಜನತೆ ಅಭಿಮತವಿತ್ತು ಶಾಸಕರನ್ನು ಆರಿಸಿದರೆ, ಇವರುಗಳು ತಮಗೆ ಬೇಕಾದ ರೀತಿಯಲ್ಲಿ ಒಡಂಬಡಿಕೆಗಳನ್ನು ಸೃಷ್ಟಿಸಿಕೊಂಡು ತಿಂಗಳುಗಳ ಸರ್ಕಾರವನ್ನು ಮುಂದಿಡುತ್ತಲೇ ಬಂದಿದ್ದಾರೆ. ಒಟ್ಟಿನಲ್ಲಿ ಎರಡೆರಡು ವರ್ಷಗಳಿಗೊಬ್ಬ ಮುಖ್ಯಮಂತ್ರಿ ಹಾಗೂ ಅವರ ಪರಿವಾರವನ್ನು ತೃಪ್ತಿ ಪಡೆಸುವುದಷ್ಟೇ ರಾಜ್ಯದ ಗುರಿಯಾಗಿ ಹೋಯಿತು. ನಮ್ಮ ಸಮಸ್ಯೆಗಳು ಸಮಸ್ಯೆಗಳಾಗೇ ಉಳಿದು ಬಿಟ್ಟವು.

ಗಡಿ ಸಮಸ್ಯೆಯ ಮಾತಂತೂ ಇತ್ತೀಚೆಗೆ ಬಹಳ ಕೇಳಿಬರುತ್ತಿದೆ. ಉತ್ತರದಲ್ಲಿ ಮಹಾರಾಷ್ಟ್ರ ಸರ್ಕಾರದ ಹುಕುಮತ್ತಿನಲ್ಲಿ ಬೆಳಗಾವಿ ಪ್ರಾಂತ್ಯವನ್ನು ಕಿತ್ತುಕೊಳ್ಳಲು ಹವಣಿಕೆ ನಡೆಯುತ್ತಿದ್ದರೆ ಪೂರ್ವ ಹಾಗೂ ದಕ್ಷಿಣದಲ್ಲಿ ಭಾಷಾ ಹೇರಿಕೆ ನಡೆಯುತ್ತಿದೆ. ಕನ್ನಡಿಗರ ಸೊಲ್ಲೇನಿದ್ದರೂ ಅಡಗಿ ಹೋಗಿ ಎಲ್ಲಿ ನೋಡಿದರೂ ಅನ್ಯ ಭಾಷೆಯವರಿಗೇ ಪ್ರಾತಿನಿಧ್ಯ ಕಾಣುತ್ತಿದೆ. ನಾವು ದಕ್ಷಿಣದಲ್ಲಿ ಉಳಿದವರಿಗೆ ಸರಿಸಮಾನವಾಗಿ ಬೆಳೆಯದೇ ಹೋಗಿ ಹಿಂದುಳಿಯುತ್ತಿದ್ದೇವೆಯೇ ಎನ್ನೋ ಸಂಶಯ ಕೂಡ ಹುಟ್ಟುತ್ತಿದೆ. ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸಬೇಕು ಎಂಬುದು ಇವತ್ತಿಗೂ ವಿಶ್ ಆಗಿ ಉಳಿಯಿತೇ ವಿನಾ ಎಷ್ಟೋ ಕಡೆ ಇನ್ನೂ ಚಾಲ್ತಿಗೆ ಬಂದ ಹಾಗಿಲ್ಲ.

ಪ್ರತಿಯೊಂದಕ್ಕೂ ಅಸ್ಥಿರ ರಾಜಕೀಯ ಸ್ಥಿತಿಗತಿಯನ್ನು ಬೆರಳು ಮಾಡಿ ತೋರಿಸಲಾಗದಿದ್ದರೂ ನಮ್ಮಲ್ಲಿನ ರಾಜಕೀಯ ಮುತ್ಸದ್ದಿತನದ ಕೊರತೆಯಿಂದಾಗಿ, ಮುಂದಾಳುಗಳಾಗಲೀ, ದಾರ್ಶನಿಕರಿಲ್ಲದೇ ಕೇಂದ್ರ ಎಷ್ಟೋ ಯೋಜನೆಗಳ ಪಾಲು ಕರ್ನಾಟಕಕ್ಕೆ ಸಿಗುವಲ್ಲಿ ಮಲತಾಯಿ ಧೋರಣೆಯ ಮಾತು ಅಲ್ಲಲ್ಲಿ ಕೇಳಿಬರುತ್ತದೆ. ರಾಜ್ಯಕ್ಕೆ ಹೊಸ ರೈಲು ನಿಲ್ದಾಣಗಳಾಗಲೀ, ಮಾರ್ಗಗಳಾಗಲಿ ಕೊಡುವಲ್ಲಿ ಕೇಂದ್ರದ ತಾರತಮ್ಯ ಎದ್ದು ತೋರುತ್ತದೆ. ಅದೇ ರೀತಿ ಅನೇಕ ಯೋಜನೆಗಳಿಗೂ ಸಹ ತಕ್ಕ ಮಾನ್ಯತೆ ಸಿಕ್ಕಂತೆ ಕಂಡು ಬಂದಿಲ್ಲ. ಕೇಂದ್ರದಲ್ಲಿ ಪ್ರಭಲ ಕಾಂಗ್ರೇಸ್ ರಾಜ್ಯದಲ್ಲಿನ ಕಾಂಗ್ರೇಸೇತರ ಸರ್ಕಾರಕ್ಕೆ ಸಹಾಯ ಮಾಡೀತು ಎಂದು ನಂಬುಕೊಳ್ಳುವುದು ಕಷ್ಟದ ಮಾತು. ತಮ್ಮ ತಮ್ಮ ಒಳಜಗಳಗಳನ್ನು ಪೂರೈಸಿಕೊಳ್ಳುವುದರಲ್ಲೇ ಕಾಲಹರಣ ಮಾಡುವ ಶಾಸಕಾಂಗದ ಸದಸ್ಯರು ಯಾವ ರೀತಿಯಲ್ಲಿ ಅವರವರ ಕ್ಷೇತ್ರಗಳನ್ನು ಪ್ರತಿನಿಧಿಸಿಯಾರು ಮತ್ತೆ ಇನ್ನೆರಡು ವರ್ಷಗಳಲ್ಲಿ ಚುನಾವಣೆ ನಡೆದರೆ ತಮ್ಮ ಕ್ಷೇತ್ರದ ಜನರನ್ನು ಹೇಗೆ ಮುಖಕೊಟ್ಟು ಮಾತನಾಡಿಸಿಯಾರು ಎಂಬ ಅನುಮಾನ ಬರುತ್ತದೆ. ಚುನಾವಣೆಗೆ ಮೊದಲಿನ ಪ್ರಸ್ತಾವನೆಗಳಲ್ಲಿ, ಪ್ರಣಾಲಿಕೆಗಳಲ್ಲಿ ಕೇವಲ ಹತ್ತು ಪರ್ಸೆಂಟ್ ಕೆಲಸವನ್ನಾದರೂ ಪ್ರತಿಯೊಬ್ಬ ಶಾಸಕರು ಮಾಡಿದ್ದರೆ ಅದು ನಿಜವಾಗಿಯೂ ತೃಪ್ತಿಕರ ಕಾರ್ಯ ಎಂದು ಒಪ್ಪಿಕೊಳ್ಳುವ ಸಂದಿಗ್ಧ ಬಂದಿದೆಯಷ್ಟೇ.

ಪ್ರತಿವರ್ಷ ಇಷ್ಟೊತ್ತಿಗಾಗಲೇ ಕೇಳಿ ಬರುತ್ತಿದ್ದ ಕಾವೇರಿ ನೀರಿನ ಕೂಗು ಇನ್ನು ಸ್ವಲ್ಪ ದಿನಗಳಲ್ಲೇ ಶುರುವಾಗಬಹುದು. ದಿನೇ ದಿನೇ ಬೇಸಿಗೆ ಏರಿದಂತೆ ನಿಯೋಗದ ಮೇಲೆ ನಿಯೋಗವನ್ನು ಕಳಿಸಿ ತಮ್ಮತನವನ್ನು ಸಾಧಿಸಿಕೊಳ್ಳುವ ಪಕ್ಕದ ರಾಜ್ಯದ ಸರ್ಕಾರದ ಮುಂದೆ ನಮ್ಮವರ ಆಟ ಈ ಸಲ ಹೇಗೆ ಬೇರೆಯಾಗುವುದೋ ನೋಡಬೇಕು. ಕಾವೇರಿ ನೀರಿನ ವಿಷಯ ರಾಜಕೀಯ ಪ್ರೇರಿತವಾದದ್ದು, ಅಲ್ಲದೇ ಕೇವಲ ಕೆಲವೇ ಕೆಲವು ಜಿಲ್ಲೆಯವರು ಪ್ರತಿನಿಧಿಸುವ ಅಂಶವಾಗಿರುವುದು ಮತ್ತೊಂದು ಬೆಳವಣಿಗೆ. ನಮ್ಮಲ್ಲಿಲ್ಲದ ಒಗ್ಗಟ್ಟೇ ನಮಗೆ ಮುಳುವಾದೀತು ಎಂದರೂ ತಪ್ಪಾಗಲಾರದು.

ಕನ್ನಡಿಗರು ಹೋಮ್‌ವರ್ಕ್ ಮಾಡೋದೇ ಇಲ್ಲವೇನೋ ಎನ್ನಿಸಿಬಿಡುತ್ತದೆ ಕೆಲವೊಮ್ಮೆ. ನಮ್ಮಲ್ಲಿನ ಸುದ್ದಿಗಳು ಇತ್ತೀಚೆಗಂತೂ ಕೇವಲ ರಾಜಕೀಯವನ್ನು ಮಾತ್ರ ಕವರ್ ಮಾಡುತ್ತಿವೆಯೇನೋ ಎನ್ನುವ ಅನುಮಾನವೂ ಹುಟ್ಟುತ್ತದೆ. ಒಂದು ದಿನ ಒಬ್ಬರನ್ನೊಬ್ಬರು ಬೈದುಕೊಳ್ಳುವ ರಾಜಕಾರಣಿಗಳು ಮರುದಿನ ಹಸ್ತಲಾಘವವನ್ನು ಕೊಟ್ಟುಕೊಳ್ಳುವುದನ್ನು ನೋಡಿದರೆ, ಪ್ರತಿಯೊಬ್ಬರ ಮುಖದಲ್ಲಿನ ಅಧಿಕಾರ ಲಾಲಸೆಯನ್ನು ಕಂಡರೆ ಹೇಸಿಗೆಯಾಗುತ್ತದೆ. ಇಂಥ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೋಡಿ ಹೇಸಿಗೆಯೂ ಬರುತ್ತದೆ. ನಿಜವಾಗಿಯೂ ಚುನಾಯಿತ ಪ್ರತಿನಿಧಿಗಳಿಗೆ ಹೇಳುವವರು ಕೇಳುವವರು ಎನ್ನುವವರು ಇದ್ದಾರೆಯೇ ಎನ್ನುವ ಸಂಶಯ ಮೂಡುತ್ತದೆ. ಸರ್ಕಾರ ಬಡವಾಗುತ್ತಾ ಹೋಗುತ್ತದೆ ಚುನಾಯಿತ ಪ್ರತಿನಿಧಿಗಳು ಅಲ್ಟ್ರಾ ಶ್ರೀಮಂತರಾಗುತ್ತಾ ಹೋಗುತ್ತಾರೆ, ಯಾರದೋ ಮನೆಯ ಸೊಸೆ ಸುಮಾರು ನೂರು ಕೋಟಿ ರೂಪಾಯಿಯನ್ನು ತೊಡಗಿಸಿ (೨೫ ಮಿಲಿಯನ್ ಡಾಲರ್) ಹೊಸ ಕನ್ನಡ ಟಿವಿ ಚಾನೆಲ್ ಒಂದನ್ನು ಹೊರತರುತ್ತಾರೆ, ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳು, ಅವರ ಕುಟುಂಬವೂ ಬಡತನದ ರೇಖೆಯಿಂದ ಬಹಳಷ್ಟು ದೂರವೆನೂ ಇರೋದಿಲ್ಲ. ಚುನಾವಣೆಗೆ ಕಣಕ್ಕಿಳಿಯುವ ಅಭ್ಯರ್ಥಿಗಳ ಬಲಾಬಲ ಅವರವರು ಭ್ರಷ್ಟಾಚಾರಕ್ಕೆ ಮೋಸಕ್ಕೆ ಬಳಸುವ ಹಣದ ಮೇಲೆ ತೀರ್ಮಾನವಾಗುತ್ತದೆ. ನಿಜವಾದ ಆದಾಯದಿಂದ ಬದುಕುವುದೇ ದುಸ್ತರವೆನ್ನಿಸಿ ಮಧ್ಯಮ ಹಾಗೂ ಕೆಳವರ್ಗದ ಜನರಿಗೆ ಗಿಂಬಳವನ್ನಾಧರಿಸಿ ಬದುಕುವುದೇ ಬದುಕಾಗುತ್ತದೆ. ದೇಶ್ದ ಹಣದುಬ್ಬರ, ಆರ್ಥಿಕ ಪರಿಸ್ಥಿತಿ ಮುಂತಾದವುಗಳನ್ನು ಸರಿಯಾಗಿ ನಿಭಾಯಿಸದೇ ಹೋಗಿ ಬಳಸುವ ಸಾಮಗ್ರಿಗಳ ಬೆಲೆ ಗಣನೀಯವಾಗಿ ಹೆಚ್ಚಾದಂತೆ ಪ್ರತಿಯೊಬ್ಬರ ತಲಾ ಆದಾಯ ಅಷ್ಟೇನು ಹೆಚ್ಚದೆ ಲಂಚ ಮೊದಲಾದವುಗಳಿಗೆ ಕುಮ್ಮಕ್ಕು ಸಿಗುತ್ತದೆ. ಭ್ರಷ್ಟರಾಗಿ ಬದುಕುವುದು, ಲಂಚದ ಕೂಪದಲ್ಲಿ ಸಿಲುಕುವುದು ಸಹಜವಾಗಿ ಹೋಗಿ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವವನು ಹಾಸ್ಯಾಸ್ಪದಕ್ಕೆ ಗುರಿಯಾಗಬೇಕಾಗುತ್ತದೆ. ಅಕಸ್ಮಾತ್ ಈಗಲ್ಲದಿದ್ದರೆ ಮುಂದೆಂದಾದರೂ ಚುನಾವಣೆ ನಡೆಯದಿದ್ದಲ್ಲಿ ಮತ್ತೆ ಯಾರಿಗೂ ನಿಚ್ಛಳ ಬಹುಮತ ಬಾರದೇ ಹೋಗಿ ದೋಸ್ತಿ ಸರಕಾರಗಳು ತಿರುಗಿ ಅಸ್ತಿತ್ವಕ್ಕೆ ಬಂದರೆ ಎಂದು ಹೆದರಿಕೆಯಾಗುತ್ತದೆ.

ಕನ್ನಡಿಗರು ಸುಮ್ಮನಿದ್ದರೆ ಇವತ್ತಲ್ಲ ನಾಳೆ ದೇಶದ ಅತ್ಯಂತ ಬಡ ಹಾಗೂ ಭ್ರಷ್ಟರಾಜ್ಯಗಳ ಯಾದಿಯಲ್ಲಿ ಕರ್ನಾಟಕವೂ ನಿಲ್ಲಬೇಕಾದೀತು ಎಂದು ಹೆದರಿಕೆಯಾಗುತ್ತದೆ. ರಾಜ್ಯೋತ್ಸವದ ಸಂಬಂಧಿಸಿದಂತೆ ಕನ್ನಡಿಗರು ಏನನ್ನಾದರೂ ಮಾಡಿಕೊಳ್ಳಲಿ, ನವೆಂಬರ್ ಒಂದರಿಂದ ಡಿಸೆಂಬರ್ ಕೊನೆಯವರೆಗೆ ರಾಜ್ಯೋತ್ಸವವನ್ನು ಆಚರಿಸದೇ ಏನೇ ಆಚರಣೆಗಳಿದ್ದರೂ ಅದನ್ನು ಕೇವಲ ಒಂದು ದಿನಕ್ಕೆ ಮೀಸಲಾಗಿಟ್ಟರೆ ಸಾಕು, ಅಷ್ಟೇ.