Facebook ಅನ್ನು ಎದುರಿಸಿ...
ಎಲ್ಲರ ಹಾಗೇ ನನ್ನದೂ ಅಂತ ಒಂದು ಫೇಸ್‌ಬುಕ್ ಅಕೌಂಟ್ ಅಂತ ಓಪನ್ನ್ ಮಾಡಿಕೊಂಡು ಅದರಲ್ಲಿ ಸುಮಾರು ನಾಲ್ಕು ವರ್ಷದಿಂದ ಒಂದಿಷ್ಟು ಗೀಚಿದ್ದು ಈಗ ಇತಿಹಾಸ... ಇ-ಮೇಲ್, ಬ್ಲಾಗು, ಕಮ್ಮ್ಯೂನಿಟಿ ಕೆಲಸ ಮೊದಲಾದ ಎಲ್ಲವಕ್ಕೂ ಆಶ್ರಯಕೊಟ್ಟು ಅವುಗಳನ್ನು ನೀರೆರೆದು ಪೋಷಿಸುವ ಅನೇಕ ಗೊಂದಲಗಳ ನಡುವೆ ಈ ಫೇಸ್‌ಬುಕ್ಕ್ ಮತ್ತು ಟ್ವಿಟ್ಟರ್ ಅಕೌಂಟುಗಳು ಸೊರಗುತ್ತಲೇ ಬಂದವು.
ಅದರಲ್ಲೂ ಇತ್ತೀಚೆಗೆ ತೆಗೆದು ನೋಡಿದಾಗ ಸುಮಾರು ೪೯ ಜನ ಫ್ರೆಂಡ್ ಲಿಸ್ಟಿನಲ್ಲಿ ಕಾಯ್ದು ಕುಳಿತಿದ್ದೂ ಕಂಡುಬಂತು, ಇವರ ಜೊತೆಯಲ್ಲಿ ಇದ್ದವರಲ್ಲಿ ನನ್ನ ಹೊಸ ಬಾಸ್ ಕೂಡ ಒಬ್ಬರು! ಈ ವರ್ಚುವಲ್ಲ್ ಪ್ರಪಂಚದ ಸಂಬಂಧಗಳೂ ಸಹ ನಮ್ಮ ಉಳಿವಿಗೆ ಅಗತ್ಯವಾಗಿರೋವಾಗ, ಅದರಲ್ಲಿನ ಪ್ರತಿಯೊಂದು ಎಳೆಗಳೂ ಕೂಡ ಪೋಷಣೆಯನ್ನು ಬೇಡುತ್ತಿರುವಾಗ ನಾನೊಬ್ಬನೇ ಕಣ್ಣು ಮುಚ್ಚಿ ಕುಳಿತುಕೊಂಡರೆ ಅದು ನನ್ನ ನಷ್ಟವಲ್ಲದೇ ಇನ್ನೇನು? ಹೀಗೆ, ಯೋಚಿಸಿಕೊಂಡಾಗೆಲ್ಲ ಫೇಸ್‌ಬುಕ್ ನಂತಹ ದೈತ್ಯ ಸಾಮಾಜಿಕ ಯೋಧನೊಬ್ಬನನ್ನು ಎಷ್ಟು ದಿನವಾದರೂ ಅಲಕ್ಷಿಸಲಾದೀತು?
Facebook - ಅನ್ನೋ ಪದದಲ್ಲಿ Face ಅಂದ್ರೆ ಮುಖವೋ ಅಥವಾ Face it! ಅನ್ನೋ ಹಾಗೆ ಎದುರಿಸೋದೋ? book ಅಂದ್ರೆ ನಮಗೆ ಗೊತ್ತಿರೋ ಪುಸ್ತಕ, ಹೊತ್ತಿಗೆಗಳೋ ಅಥವಾ book it! ಅನ್ನೋ ಹಾಗೆ ಕಾದಿರಿಸೋದೋ? Face ಮತ್ತು book ಎರಡೂ ಸೇರಿ ಆಗಿರೋ ಹೊಸ ಪದವೋ ಅಥವಾ ಕ್ರಾಂತಿಯೋ? ಇದಕ್ಕೆ ಪ್ರಪಂಚಾದಾದ್ಯಂತ 500 ಕ್ಕೂ ಹೆಚ್ಚು ಮಿಲಿಯನ್ನ್ ಬಳಕೆದಾರರಿದ್ದಾರಂತೆ, ಪ್ರತಿಯೊಬ್ಬ ಬಳಕೆದಾರನ ಹೆಸರಿನಲ್ಲಿ ಸುಮಾರು $2 ರಂತೆ ವರ್ಷಕ್ಕೆ ಒಂದು ಬಿಲಿಯನ್ನ್‌ಗಿಂತ ಹೆಚ್ಚು ರೆವಿನ್ಯೂ ಇದೆಯಂತೆ, ಕೆಲವರ $38 ರಿಂದ ಹಿಡಿದು ಮೈಕ್ರೋಸಾಫ್ಟಿನ $200 ಪ್ರತಿ ಬಳಕೆದಾರರಿಂದ ಹುಟ್ಟೋ ರೆವಿನ್ಯೂವರೆಗಿನ ಲೆಕ್ಕಗಳಲ್ಲಿ ಸುಮಾರು 50 ಬಿಲಿಯನ್ನ್ ವ್ಯಾಲ್ಯೂವೇಷನ್ನಿನ ಅಂದಾಜು ಮಾಡಿದ್ದಾರಂತೆ! ಗೂಗಲ್ಲ್ ಅಂಥಾ ಕಂಪನಿಗಳಲ್ಲಿ ಒಬ್ಬೊಬ್ಬ ಬಳಕೆದಾರನ ಮೇಲೆ ಸುಮಾರು $14 ರಂತೆ ಆದಾಯ ಹುಟ್ಟಿಸುತ್ತಾರಾದರೂ, Facebook ಅಂಥ ಕಂಪನಿಗಳು ತಮ್ಮ ಇರುವನ್ನು ಬಲಪಡಿಸಿಕೊಳ್ಳಲು ಅನೇಕಾನೇಕ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರಂತೆ, ಇರುವ ಬಳಕೆದಾರರ ಬೇಸ್ ಅನ್ನು ಕ್ಯಾಪಿಟಲೈಸ್ ಮಾಡಿಕೊಳ್ಳುವ ಒತ್ತಡದಲ್ಲಿದ್ದಾರಂತೆ...ಹೀಗೆ ಅನೇಕಾನೇಕ ವಿಶೇಷಗಳು Facebook ಅನ್ನು ಸುತ್ತಿಕೊಳ್ಳತೊಡಗಿದ್ದು ಗೊತ್ತಾಯಿತು.
ಅಂತರಂಗದಲ್ಲಿ ಉದ್ದುದ್ದವಾಗಿ ಬರೆದ ಹಾಗೆ ಅಲ್ಲಿ ನನಗೆ ಬರೆಯೋಕಾಗೋದಿಲ್ಲ, ಬರೆದರೂ ಚಿಕ್ಕ ಫೋನುಗಳಲ್ಲಿ ಫಾಲ್ಲೋ ಮಾಡುವವರಿಗೆ ಕಷ್ಟವಾಗುತ್ತೆ. ಆದರೂ ಸಹ, ಅಂತರಂಗ ಮತ್ತು ನನ್ನ Facebook ಅಕೌಂಟುಗಳನ್ನು ಎರಡೂ ಒಟ್ಟು ಸೇರಿಸಿ, ಇಷ್ಟು ದಿನ ಹಿಡಿದುಕೊಂಡಿದ್ದ ಸುಮಾರು ನಲವತ್ತು ಜನ ಕನ್ನಡಿಗರನ್ನು ಬರಮಾಡಿಕೊಂಡರಾಯಿತು, ಕನ್ನಡಿಗರಷ್ಟೇ ಏಕೆ ಉಳಿದವರೂ ನೋಡಲಿ - ಎಲ್ಲರೂ ಬರಲಿ, ನನ್ನ ಈಗಿನ ಬಾಸ್ ಒಬ್ಬರನ್ನು ಬಿಟ್ಟು! (ಇಲ್ಲಿ ಕನ್ನಡದಲ್ಲಿ ಬರೆಯೋಕೆ ಈತನಿಗೆ ಸಮಯವಿದೆ ಅಂಥ ಮತ್ತೊಂದಿಷ್ಟು ಕೆಲಸ ಹುಟ್ಟಿಕೊಂಡರೆ ಕಷ್ಟ, ಹಾಗಾಗಿ).
ಈ ಅಂತರ್ಜಾಲ ಯುಗದ ಸಂಬಂಧಗಳು ಬಹಳ ಸಡಿಲವಾದದ್ದು - ಉದಾಹರಣೆಗೆ ಈ ಫೇಸ್‌ಬುಕ್ಕಿನ ಮಿಲಿಯನ್ನುಗಟ್ಟಲೆ ಬಳಕೆದಾರರಿಗೆ ಮತ್ತೊಂದೇನಾದರೂ ಆಕರ್ಷಕವಾಗಿ ಕಂಡುಬಂದರೆ ಅವರೆಲ್ಲರೂ ಅಲ್ಲಿಗೆ ಒಂದೇ ನೆಗೆತದಲ್ಲಿ ಹೋಗದಂತೆ ತಡೆಯುವುದು ಕಷ್ಟ. ಹಗಲೂ ರಾತ್ರಿ ಈ ಸರ್ವರುಗಳಿಗೆ ಜನ ಮುಗಿ ಬಿದ್ದ ಹಾಗೆ, ಪ್ರಸಿದ್ಧಿ ಅಥವಾ ಪ್ರಾಬಲ್ಯದ ಉತ್ತುಂಗದಲ್ಲಿರುವುದು ಬಹಳ ಕಷ್ಟದ ಕೆಲಸ - ಸುತ್ತಲಿನ ಆಗುಹೋಗುಗಳಿಗೆ ತತ್ಕಾಲದಲ್ಲಿ ಸ್ಪಂದಿಸಿ ನಿರಂತರವಾಗಿ ಬದಲಾಗುವುದರ ಜೊತೆಗೆ ಸದಾಕಾಲ ತಮ್ಮನ್ನು ತಾವು ರಿಫೈನ್ ಮಾಡಿಕೊಳ್ಳುವ ಕರ್ಮಠತನ ಬೇಕಾಗುತ್ತದೆ. ಬರೀ ಬಳಕೆದಾರರ ಸಂಬಂಧಗಳನ್ನಷ್ಟೇ ಅಲ್ಲ, ಹಣತೊಡಗಿಸಿದವರನ್ನು ಎದುರಿಸಬೇಕಾಗುತ್ತದೆ, ಪೈಪೋಟಿ ಒಡ್ಡುವವರನ್ನು ಹಿಂದಿಕ್ಕಬೇಕಾಗುತ್ತದೆ...ಹೀಗೆ ಅನೇಕಾನೇಕ ಸವಾಲುಗಳು ಯಾವಾಗಲೂ ಇದ್ದೇ ಇರುತ್ತವೆ. ಈ ಸವಾಲುಗಳು ಹೊಸತೇನಲ್ಲ - ಆನೆಗೆ ಆನೆಯ ಭಾರ, ಇರುವೆಗೆ ಇರುವೆಯ ಭಾರ ಅಷ್ಟೇ.
ಈ ಮೂಲಕ ಅಂತರಂಗದ ಓದುಗರಿಗೂ ಫೇಸ್‌ಬುಕ್ಕ್‌ನಲ್ಲಿ ಲಿಂಕ್ ಒದಗಿಸುತ್ತಿದ್ದೇನೆ. ನಮ್ಮ ಸಂವಹನ, ಸಂಘಟನೆ ಹಾಗೂ ಸಂಘರ್ಷಗಳು ನಿರಂತರವಾಗಿರಲಿ. ನಮ್ಮ ಜಗಳಗಳಲ್ಲೂ ಸೊಗಸಿರಲಿ, ಭಾಷೆಯಲ್ಲಿ ಶುದ್ಧಿ ಇರಲಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸು ಸದಾ ಊರ್ಧ್ವಮುಖಿಯಾಗಿರಲಿ!