Tuesday, September 29, 2009

(ಕುರುಚಲು ಗಡ್ಡ, ಓಡುವ ಮೋಡ ಹಾಗೂ) ಆಲೋಚನೆಗಳು

ಈ ಆಲೋಚನೆಗಳೇ ಹಾಗೆ ಕೆಲವೊಮ್ಮೆ ತಂಡೋಪತಂಡವಾಗಿ ಸರಣಿಗಳಲ್ಲಿ ಬಂದು ಮುತ್ತಿಗೆ ಹಾಕಿ ಬಿಡುತ್ತವೆ, ತಿಳಿಯಾದ ಕೊಳವನ್ನು ಕಲಕಿ ರಾಡಿಯನ್ನು ಮೆಲಕೆತ್ತಿದ ಹಾಗೆ ಹಳೆಯದೆಲ್ಲ ಮೇಲಕ್ಕೆದ್ದು ಕೇಂದ್ರೀಕೃತ ಅಲೆಗಳ ಹಿಂಡು ದಡವನ್ನು ಅಪ್ಪಳಿಸುವಂತೆ ಕಣ್ಣು ಮುಚ್ಚಿ ಬಿಡುವುದರೊಳಗೆ ಏನೇನೋ ಅಗಿ ಹೋಗುತ್ತದೆ. ಈ ಮನಸೆಂಬ ಮರ್ಕಟ ಹಾರಿ ಬಂದ ಮರಗಳ ರೆಂಬೆ-ಕೊಂಬೆಗಳಿಗೆ ಹೇಗೆ ಕೊನೆಯಿಲ್ಲವೋ ಹಾಗೆ ಆಲೋಚನೆಗಳ ದಂಡು.

ಈ ಆಲೋಚನೆಗಳಿಗೂ ಓಡುವ ಮೋಡಗಳಿಗೂ ಏನು ಸಂಬಂಧ? ಈ ಆಲೋಚನೆಗಳಿಗೂ ಕುರುಚಲು ಗಡ್ಡಕ್ಕೂ ಏನು ನಂಟು? ಎಂದು ಯೋಚಿಸಿಕೊಂಡಂತೆಲ್ಲ ಮೇಲ್ಮಟ್ಟದಲ್ಲಿ ಗೋಕುಲಾಶ್ಠಮಿ-ಇಮಾಮ್ ಸಾಬಿಗಳಂತೆ ಕಂಡುಬಂದರೂ ಒಳಗೊಳಗೆ ಅವುಗಳ ಅರ್ಥಬದ್ಧ ಬಾಂಧವ್ಯದ ಬಗ್ಗೆ ನನಗೆ ತಿಳಿದದ್ದು ಇತ್ತೀಚೆಗಷ್ಟೇ. ಈ ಆಳವಾಗಿ ಆಲೋಚಿಸುವ ಕೆಲವರು ಮುಗಿಲನ್ನು ಎವೆಯಿಕ್ಕದೆ ದಿಟ್ಟಿಸುವುದನ್ನು ನೀವು ಗಮನಿಸಿರಬಹುದು. ಹೌದು, ಈ ಆಳವಾದ ದೃಷ್ಟಿಯೇ ಮುಗಿಲಿನ ಹಂದರದಲ್ಲಿ ಹರವಿಕೊಂಡ ಆ ಮೋಡಗಳಲ್ಲಿ ಚಲನಶಕ್ತಿಯನ್ನು ಕುದುರಿಸೋದು. ಹಾಗೇ ಆಲೋಚನೆಯಲ್ಲಿ ಮುಳುಗಿದವರು ಗದ್ದಕ್ಕೆ ಕೈಯಿಟ್ಟು ಯೋಚನೆ ಮಾಡಿದಂತೆಲ್ಲ ನುಣುಪಾದ ಅಂಗೈ ಹಾಗೂ ಕೆನ್ನೆಯ ನಡುವೆ ಘರ್ಷಣೆ ಹುಟ್ಟುವ ಹೊತ್ತಿನಲ್ಲಿ ಕೈ ಜಾರದಂತೆ ಜೀವವಿಕಾಸ ಸೃಷ್ಟಿಸಿದ ವಿಸ್ಮಯಗಳಲ್ಲಿ ಕುರುಚಲು ಗಡ್ಡವೂ ಒಂದು!

ಆಲೋಚನೆಗಳನ್ನು ಮಾಡಿ ತಲೆ ಕೆಡಿಸಿಕೊಂಡವರೇ ಹೆಚ್ಚು, ಉದ್ದಾರವಾದವರು ಯಾರು ಎಂದು ಅಲ್ಲಗಳೆಯಬೇಡಿ, ಹೆಚ್ಚು ಆಲೋಚನೆ ಮಾಡಿದವರೇ ದೊಡ್ಡ ಮನುಷ್ಯರು, ಅವರವರ ಆಲೋಚನೆಗಳ ಆಳ ಅವರವರ ಚಿಂತನಶೀಲತೆಯ ಪ್ರತೀಕ ಎಂದರೆ ತಪ್ಪೇನು ಇಲ್ಲ. ಆದರೆ ಆಲೋಚನೆ, ಕೊರಗು, ಚಿಂತೆ ಹಾಗೂ ಚಿಂತನೆಗಳಲ್ಲಿ ಬೇಕಾದಷ್ಟು ವ್ಯತ್ಯಾಸಗಳಿವೆ. ನನ್ನ ಪ್ರಕಾರ ಆಲೋಚನೆ ತನ್ನ ಪ್ರಭೇದದ ಇತರ ಸೋದರರಾದ ಕೊರಗು-ಮರುಗು-ಚಿಂತೆ-ಚಿಂತನೆಗಳಿಗಿಂತ ಸ್ವಲ್ಪ ಭಿನ್ನ ಹಾಗೂ ತನ್ನಷ್ಟಕ್ಕೆ ತಾನು ಒಂದು ಅಮೋಘವಾದ ಸಾಮ್ರಾಜ್ಯವನ್ನು ಸೃಷ್ಟಿಸಿಕೊಂಡ ಧೀರ ಬೇರೆ. ಆಲೋಚನೆಗೆ ಯಾವುದೇ ವಿಷಯ-ವಸ್ತುವೆಂಬುದಿಲ್ಲ, ಎಂದು ಇತರರ ಜೊತೆ ಬೆಳೆದು ಸಮಾಲೋಚನೆಯಾಗಬಹುದು, ಅಥವಾ ತನ್ನ ದೂರದ ಮಟ್ಟಕ್ಕೆ ದೂರಾಲೋಚನೆಯಾಗಬಹುದು, ಕೆಟ್ಟ ವಸ್ತುಗಳಿದ್ದರೆ (ಕೆಟ್ಟದು ಎಂಬುದು ಸಾಪೇಕ್ಷವಾದುದು) ದುರಾಲೋಚನೆಯೂ ಆಗಬಹುದು. ಆಲೋಚನೆ ಎನ್ನುವುದು ತನ್ನಷ್ಟಕ್ಕೆ ತಾನು ಇದ್ದರಿರಬಹುದು ಅಥವಾ ಅದು ಉಳಿದವರ ಜೊತೆ ಸೇರಿ ಒಂದು ಸಿದ್ಧಾಂತವಾಗಬಹುದು. ಒಟ್ಟಿನಲ್ಲಿ ಆಲೋಚನೆ ಎನ್ನುವುದು ನೀರಿದ್ದ ಹಾಗೆ, ಅದು ತನ್ನಷ್ಟಕ್ಕೆ ತಾನು ಯಾವುದೇ ಆಕಾರ, ಗಾತ್ರ, ಬಣ್ಣ, ವಾಸನೆ, ಗಡಿರೇಖೆಗಳಿಗೆ ಒಳಪಡದ ಒಂದು ರೀತಿಯ ಎಲ್ಲವನ್ನು ತ್ಯಜಿಸಿದ ಸಂತನ ಮನಸ್ಥಿತಿಯನ್ನು ಪ್ರತಿಬಿಂಬಿಸುವುದರ ಜೊತೆ ಜೊತೆಗೆ ತಾನು ಇದ್ದ ಯಾವುದೇ ಒಂದು ವಸ್ತುವಿನ ರೂಪರೇಶೆಗಳನ್ನು ದಿಢೀರನೆ ಪಡೆದುಕೊಂಡುಬಿಡಬಲ್ಲದು.

ಒಟ್ಟಿನಲ್ಲಿ ಈ ಆಲೋಚನೆಯ ಪರಿ ಭಿನ್ನ. ನನ್ನ ಮನಸ್ಸಿನಲ್ಲಿ ಬರುವ ಆಲೋಚನೆಗಳ ಮಹಾಪೂರವನ್ನು ನೋಡಿ ಕೆಲವೊಮ್ಮೆ ಈ ಪರಿಯ ಸೊಬಗ ಇನ್ಯಾವ ಮನಸ್ಥಿತಿಯಲೂ ಕಾಣೆ ಎಂದು ಹಾಡಿಕೊಂಡಿದ್ದಿದೆ. ಈ ಆಲೋಚನೆಗಳೆಂಬುವುದಕ್ಕೆ ಮಿತಿಯಂತೂ ಇಲ್ಲವೇ ಇಲ್ಲ - ಅದರಲ್ಲಿ ಬಿಳಿ-ಕಪ್ಪಿದೆ, ಕೆಟ್ಟದ್ದು-ಒಳ್ಳೆಯದಿದೆ, ಸಂಭ್ರಮ-ಸಂಗಮಗಳಿವೆ, ನೋವು-ನಲಿವಿದೆ, ಹೀಗೆ ಅನೇಕಾನೇಕ ಪರ-ವಿರೋಧಗಳನ್ನು ತನ್ನೊಡಲಿನಲ್ಲಿ ಹರವಿಕೊಂಡ ಅಲೋಚನೆಗಳ ದಿಬ್ಬಣವನ್ನು ನಾನು ನಮ್ಮೂರ ಜಾತ್ರೆಯ ತೇರಿಗೆ ಹೋಲಿಸಿಕೊಳ್ಳೋದು. ತೇರಿನ ಗರ್ಭಗುಡಿಯಲ್ಲಿ ದೇವತೆಯ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಅಸಂಖ್ಯ ಭಕ್ತರು ಎಳೆದು ಜನತುಂಬಿ ತುಳುಕುತ್ತಿರುವ ರಸ್ತೆಯ ಮಧ್ಯದಲ್ಲಿ ನಿಧಾನವಾಗಿ ತೇಲಿ ಹೋಗುವ ತೇರಿನ ಹಾಗೆ - ನಾವು ಎಲ್ಲಿದ್ದರೂ ಹೇಗಿದ್ದರೂ ಏನನ್ನೇ ಮಾಡುತ್ತಿದ್ದರೂ ನಮ್ಮ ಮನದಲ್ಲಿ ಈ ಆಲೋಚನೆಗಳ ತೇರು ಎಳೆಯಲ್ಪಡುತ್ತಿರುತ್ತದೆ, ನಿರಂತರವಾಗಿ.

Monday, September 28, 2009

ಕಾಫಿ ಫಿಲ್ಟರ್, ಕಿವಿಗೆ ಹಾಕುವ ಹತ್ತಿ ಹಾಗೂ ಅನಿವಾಸಿತನ

ಭಾರತದಿಂದ ಬಂದ ಹೊಸತರಲ್ಲಿ ಅಮೇರಿಕದಲ್ಲಿ ದೊರೆಯುವ ಕಾಫಿ (ಲೋಟಾಗಳ) ಸೈಜು, ಅದನ್ನು ಬಳಸುವ ಬಳಕೆದಾರರೆಲ್ಲ ನನ್ನಲ್ಲಿ ಬಹಳ ಕಳವಳವನ್ನೂ ದಿಗ್ಬ್ರಾಂತಿಯುನ್ನು ಮೂಡಿಸುತ್ತಿದ್ದರು ಎನ್ನುವುದು ನನ್ನ ಅನುಭವ ಅಥವಾ ಅನಿಸಿಕೆ. ಇಲ್ಲಿ ಎಲ್ಲವೂ ಲಾರ್ಜ್ ಸೈಜು - ಕಾಫಿ, ಸೋಡಾ, ತಿನ್ನುವ ಸ್ಯಾಂಡ್‌ವಿಚ್, ಆಹಾರ ಪದಾರ್ಥ, ಆಚಾರ-ವಿಚಾರ ಎಲ್ಲವೂ. ನಮ್ಮ ಭಾರತೀಯ ಪದ್ದತಿಯ ಪ್ರಕಾರ ನಾನು ಬೆಳಗ್ಗೆ ಒಂದು ಲೋಟಾ ಮತ್ತು ಸಂಜೆ ಒಂದು ಲೋಟಾ ಕಾಫಿ ಅಥವಾ ಚಹಾಕ್ಕೆ ಹೊಂದಿಕೊಂಡವನು. ಇಲ್ಲಿ ಬಂದ ಹೊಸತರಲ್ಲಿ ಈ ಲಾರ್ಜ್ ಸೈಜುಗಳು ಖಂಡಿತ ನನ್ನಂತಹವರಿಗಲ್ಲ ಅಲ್ಲದೇ ಎಂದೂ ನನಗೆ ಇಷ್ಟು ದೊಡ್ಡ ಸರ್ವಿಂಗ್ ಸೈಜಿನ ಅಗತ್ಯವಿಲ್ಲ ಎಂಬುದು ಅಂದಿನ ನಿಲುವಾಗಿತ್ತು.

ಭಾರತದಲ್ಲಿ ನಾವು ಫಿಲ್ಟರ್ ಕಾಫಿ ಕುಡಿಯುತ್ತಿದ್ದೆವು, ಆದರೆ ಅಲ್ಲೆಲ್ಲೂ ಹತ್ತು-ಹನ್ನೆರಡು ಕಪ್ ಕಾಫಿ ಹಿಡಿಯುವಷ್ಟು ದೊಡ್ಡ ಪ್ರಮಾಣದ ಫಿಲ್ಟರ್ ನಾನು ನೋಡಿರಲಿಲ್ಲ. ಇಲ್ಲಿಗೆ ಬಂದ ಹೊಸತರಲ್ಲಿ ಒಮ್ಮೆ ನಾವು ಒಂದಿಷ್ಟು ಜನ ಬ್ಯಾಚುಲರ್ಸ್ ಸೇರಿಕೊಂಡು ಕಾಫಿ ಫಿಲ್ಟರ್ ಹೆಸರಿನಲ್ಲಿ ಒಂದಿಷ್ಟು ಕಾಫಿ ಫಿಲ್ಟರುಗಳನ್ನು ತಂದು, ಈ ಪೇಪರಿನ ಕೊಟ್ಟೆಯನ್ನು ಹೇಗೆ ಉಪಯೋಗಿಸಬೇಕು ಎಂಬುದು ತಿಳಿಯದೇ ಅದನ್ನು ಹಾಗೇ ಎಸೆದ ಹಾಗೆ ನೆನಪು.

ಅದಾದ ನಂತರದ ಕೆಲವು ವರ್ಷಗಳಲ್ಲಿ ಇಲ್ಲಿನ ಕಾಫಿ ಕುಡಿಯುವುದಕ್ಕೆ ಒಗ್ಗಿ ಹೋದ ನಾನು ಲಾರ್ಜ್ ಕಾಫಿಗಳನ್ನು ಗಣನೀಯ ಪ್ರಮಾಣದಲ್ಲಿ ಸೇವಿಸ ತೊಡಗಿದ ಮೇಲೆ ಮಿಸ್ಟರ್ ಕಾಫಿಯ ಬಳಕೆಗೆ ಹೊಂದಿಕೊಂಡಿದ್ದು. ಹಾಗೇ ದಿನದ ಆರಂಭದಲ್ಲಿ ನಮ್ಮೂರಿನ ನಾಲ್ಕು ಲೋಟಾಗಳು ಹಿಡಿಯುವಷ್ಟು ಕಾಫಿಯನ್ನು ಅರ್ಧ ಘಂಟೆಯ ಒಳಗೆ ಒಂದು ಕೈಯಿಂದ ಕಾರನ್ನು ಡ್ರೈವ್ ಮಾಡುತ್ತಲೇ ಮತ್ತೊಂದು ಕೈಯಿಂದ ಸೇವಿಸುವುದನ್ನು ಕರತಾಮಲಕ ಮಾಡಿಕೊಂಡಿದ್ದು. ಇಲ್ಲಿ ನಮ್ಮ ಮನೆಯಲ್ಲಿ ಇಂತಹ ದಿನನಿತ್ಯ ಉಪಯೋಗಿ ವಸ್ತುವಾಗಿ ಕಾಫಿಯ ಬಳಕೆಯಾದ ಮೇಲೆ ಅದರ ಸಂಗಾತಿ ಪೇಪರ್ ಫಿಲ್ಟರ್ರೂ ಇಲ್ಲವೆಂದರೆ ಹೇಗೆ? ಜೊತೆಗೆ ಒಂದೋ ಎರಡೋ ಕಾಫಿ ವೆರೈಟಿಗೆ ಹೊಂದಿಕೊಂಡ ದೇಹಕ್ಕೆ (ಹಾಗೂ ಮನಸ್ಸಿಗೆ) ಇಲ್ಲಿನ ಹತ್ತು ಹಲವಾರು ಪ್ಲೇವರುಗಳೂ ಅವುಗಳ ಜೊತೆಗೆ ಕಾಫಿ ಬೀಜದ ರೋಸ್ಟ್ (ಲೈಟ್, ಮೀಡಿಯಂ, ಡಾರ್ಕ್) ಸೇರಿಕೊಂಡು ಆಹ್ಲಾದಕರ ಕಾಫಿಯ ಅನುಭವಕ್ಕೆ ಇನ್ನೊಂದಿಷ್ಟು ರುಚಿಗಳನ್ನು ಸೇರಿಸಿಕೊಂಡಿದ್ದು.

ಇಲ್ಲಿ ನಾವು ಹೋಲ್ ಸೇಲ್ ಮಳಿಗೆಗಳಲ್ಲಿ ದಿನಸಿ ಸಾಮಾನುಗಳನ್ನು ಕೊಳ್ಳುವಲ್ಲಿ ಕೇವಲ ಎರಡೂವರೆ ಡಾಲರ್‌ಗೆ ಆರು ನೂರು (೬೦೦) ಫಿಲ್ಟರುಗಳನ್ನು ತಂದು ಬಳಸುವುದು ರೂಢಿ. ಆದರೆ ಒಮ್ಮೆ ಖರೀದಿಸಿದ ಈ ಫಿಲ್ಟರ್ ಖಾಲಿ ಆಗುವಾಗ ದಿನಕ್ಕೊಂದರಂತೆ ಬಳಸಿದರೂ ಮನಯಲ್ಲಿ ಕಾಫಿ ಕುದಿಸದ ವರ್ಷದ ಇತರ ದಿನಗಳನ್ನು ಲೆಕ್ಕ ಹಾಕಿದರೆ ಕೊನೇ ಪಕ್ಷ ಆರು ನೂರು ಫಿಲ್ಟರ್ ಪೇಪರುಗಳು ಎರಡು ವರ್ಷದ ಮಟ್ಟಿಗಾದರೂ ಬಂದಾವು. ಆದರೆ ನಾನು ಕಾಫಿ ಹೀರುವ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು ಇತ್ತೀಚೆಗೆ ಮಾತ್ರ ಹಾಗಾಗಿ ಐದು ವರ್ಷಗಳ ಹಿಂದೆ ತಂದ ಫಿಲ್ಟರ್ ಪೇಪರುಗಳು ಖಾಲಿಯಾಗಿ ಹೀಗೆ ಈ ಘಳಿಗೆಯಲ್ಲಿ ಅವುಗಳ ಬಗ್ಗೆ ಬರೆಯುವಂತಾಯಿತು.

ಕಾಫಿ ಫಿಲ್ಟರುಗಳಿಗೆ ಅನ್ವಯವಾಗುವ ಇತಿಹಾಸ ಹಾಗೂ ವಾಸ್ತವದ ಅನುಭವಗಳು ಕಿವಿಗೆ ಹಾಕುವ ಹತ್ತಿಯ ಕಡ್ಡಿಗೂ ಅನ್ವಯಿಸುತ್ತವೆ ಎಂದೇ ಹೇಳಬೇಕು. ಐದು ಡಾಲರುಗಳಿಗೆ ಸಾವಿರದ ಇನ್ನೂರು (೧೨೦೦) ಹತ್ತಿ ಕಡ್ಡಿಯನ್ನು ತಂದು ಅದೆಷ್ಟೋ ವರ್ಷಗಳ ಹಿಂದೆ ಮನೆಯಲ್ಲಿಟ್ಟು ಈಗ ಖಾಲಿ ಆಗಿ ಹೋಗಿದೆ. ಮತ್ತೆ ಫಿಲ್ಟರುಗಳ ಹಾಗೆ ಒಂದು ದೊಡ್ಡ ಪ್ರಮಾಣದ ಖರೀದಿಯನ್ನು ಸಣ್ಣ ಬೆಲೆಗೆ ಮಾಡಬೇಕಾಗಿ ಬಂದಿದೆ, ಅವಿನ್ನು ಖಾಲಿಯಾಗುವುದು ಇನ್ನೆಷ್ಟು ವರ್ಷಗಳ ನಂತರವೋ. ನಾವೇನು ಭಾರತದಲ್ಲಿ ಪ್ರತಿನಿತ್ಯ ಸ್ನಾನ ಮಾಡಿದ ನಂತರ ಕಿವಿಯೊಳಗೆ ಹತ್ತಿಯನ್ನು ತೂರಿಸಿ ಕ್ಲೀನ್ ಮಾಡಿಕೊಳ್ಳುತ್ತಿರಲಿಲ್ಲ, ಹಾಗೇ ಇಲ್ಲೂ ಕೂಡ. ಕಿವಿಗೆ ಹಾಕುವ ಹತ್ತಿ ಕಡ್ಡಿಯ ಉಪಯೋಗ ಅಪರೂಪಕ್ಕೊಮ್ಮೆ, ಅದೂ ಕೆಲವೊಮ್ಮೆ ಸೈನ್‌ಫೆಲ್ಡ್‌ನ ಕ್ರೇಮರ್ ಕಿವಿಯೊಳಗೆ ನೀರು ತುಂಬಿಸಿಕೊಂಡು ಕುಣಿದಾಡುವ ಪ್ರಸಂಗ ಬಂದ ಹಾಗೆ ನಮಗೂ ಈ ಹತ್ತಿ ಕಡ್ಡಿಯ ಬಳಕೆಗೂ ನಂಟು.

ಈ ಅನಿವಾಸಿತನಕ್ಕೂ ಈ ಕಾಫಿ ಫಿಲ್ಟರ್-ಹತ್ತಿ ಕಡ್ಡಿಯ ಅವಿನಾಭಾವ ಸಂಬಂಧದ ಬಗ್ಗೆ ಬರೆಯೋದಕ್ಕೂ ಒಂದು ಕಾರಣವಿದೆ. ಸಂಪನ್ಮೂಲಗಳು ಕಡಿಮೆ ಇದ್ದು ಅವು ಹೆಚ್ಚು-ಹೆಚ್ಚು ಮಟ್ಟದಲ್ಲಿ ಸಿಗದ ಅಥವಾ ಅಭಾವದ ಪರಿಸ್ಥಿತಿ ಒಂದು ಕಡೆ, ಆದರೆ ಇಲ್ಲಿ ಹಣವೊಂದಿದ್ದರೆ ಸಾಕು ಬೇಕಾದಷ್ಟು ಸಿಗುವುದು ಮತ್ತೊಂದು ಕಡೆ. ಚಿಕ್ಕ ಸೈಜಿನ ಕಾಫಿ ಲೋಟಾಗಳಿಂದ ಹಿಡಿದು ಕಿವಿಗೆ ಹಾಕುವ ಹತ್ತಿಯ ಬಳಕೆಯ ಪ್ರಮಾಣ ಕಡಿಮೆಯಿತ್ತು, ಆದರೆ ಇಲ್ಲಿ ಎಲ್ಲವೂ ಲಾರ್ಜ್ ಸೈಜು. ಒಂದೋ ಎರಡೋ ಎಕರೆ ಗದ್ದೆ-ಭೂಮಿ ಪ್ರಮಾಣ ನನ್ನಂಥವರ ಮಧ್ಯಮ ವರ್ಗದವರಿಗೆ ದೊಡ್ಡವಾಗಿದ್ದವು, ಆದರೆ ಇಲ್ಲಿ ನನ್ನ ಸಹೋದ್ಯೋಗಿಗಳಲ್ಲಿ ಕೆಲವರು ಎರಡು-ಮೂರು ಸಾವಿರ ಎಕರೆಗಳ ಒಡೆಯರು. ನನ್ನ ಪಕ್ಕದಲ್ಲಿ ಕುಳಿತುಕೊಳ್ಳುವ ನನ್ನ ಸಹೋದ್ಯೋಗಿ ಇತ್ತೀಚೆಗೆ ಇಪ್ಪತ್ತು ಎಕರೆಗಳನ್ನು ತನ್ನ ಸ್ವಂತ ಊರಿನಲ್ಲಿ ಖರೀದಿಸಿದ್ದು ದೊಡ್ಡ ಸುದ್ದಿಯಲ್ಲ. ನಮ್ಮ ಕಾರುಗಳ ಇಂಜಿನ್ ದೊಡ್ಡವು. ನಿನ್ನೆ ಗಾರ್‌ಫೀಲ್ಡ್ ಪರಿಚಿಯಿಸಿದ ಸಾಧಾರಣ ಗಾತ್ರದ ಅವನ ಮೋಟಾರ್‍ ಸೈಕಲ್ ಇಂಜಿನ್ ೧೫೦೦ ಸಿ.ಸಿ. (1500 cc), ಭಾರತದಲ್ಲಿ ಎಷ್ಟೋ ಕಾರುಗಳ ಇಂಜಿನ್ ಇದಕ್ಕಿಂತ ಚಿಕ್ಕವು. ದೊಡ್ಡ ರಸ್ತೆಗಳು. ದೊಡ್ಡ ದೇಶ - ಎಲ್ಲವೂ ದೊಡ್ಡದೇ.

ಆದರೆ ಈ ಮಹಾನ್ ಗಾತ್ರ ಹಾಗೂ ಮಹಾನ್ ಸಂಸ್ಕೃತಿಗೆ ನಮ್ಮ ಚಿಕ್ಕ ಅಥವಾ ಮೀಡಿಯಮ್ ಸೈಜಿನ ಮನಸ್ಸುಗಳಾಗಲೀ, ಆಚಾರ-ವಿಚಾರಗಳಾಗಲಿ ದಿಢೀರನೆ ಹೇಗೆ ಹೊಂದಿಕೊಂಡಾವು. ಇವತ್ತೋ ನಿನ್ನೆಯೋ ಭಾರತದಿಂದ ಬಂದವರಿಗೆ ಒಂದು ಲಾರ್ಜ್ ಸ್ಟಾರ್‌ಬಕ್ಸ್ ಕಾಫಿ ಕೊಟ್ಟು ನೋಡಿ, ಅದನ್ನು ಅವರು ಪೂರ್ತಿ ಮುಗಿಸುತ್ತಾರೆಯೇ ಎಂದು. ಈ ಚಿಕ್ಕ-ದೊಡ್ಡ ವಿಚಾರಗಳು ಮೊದಲಿನಿಂದ ಕೊನೆಯವರೆಗೆ ನಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಲೇ ಇರುತ್ತವೆ ಎನ್ನೋದು ಈ ಹೊತ್ತಿನ ನನ್ನ ತತ್ವ.

ಇಂದು ಖರೀದಿಸಿ ಆದಷ್ಟು ಬೇಗನೇ ಬಳಸಿ ಮತ್ತೆ ಹೊಸತನ್ನು ಖರೀದಿಸುವುದು ಒಂದು ವಿಧ, ನಮ್ಮಲ್ಲಿ ಉಗ್ರಾಣಗಳಿವೆ ಎಂದು ಬೇಕಾದ್ದನ್ನೆಲ್ಲ ಹೋಲ್‌ಸೇಲ್ ದರದಲ್ಲಿ ಕೊಂಡು ಹಲವು ವರ್ಷಗಳ ವರೆಗೆ ಅನುಭವಿಸುವುದು ಮತ್ತೊಂದು ವಿಧ. ಪ್ರೆಸೆಂಟ್ ವ್ಯಾಲ್ಯೂ ಫ್ಯೂಚರ್ ವ್ಯಾಲ್ಯೂನಿಂದಾನಾದರೂ ಲೆಕ್ಕ ಹಾಕಿ, ಬೇಕಾಗಿದ್ದು ಸಾಕಾದಷ್ಟು ಇರಲಿ ಎಂದಾದರೂ ಸಮಜಾಯಿಸಿ ಕೊಟ್ಟುಕೊಳ್ಳಿ.

ಅವೇ ಲಾರ್ಜ್ ಕಾಫಿಗಳನ್ನು ಬಿಕರಿ ಮಾಡುವ ಪೇಪರ್ ಫಿಲ್ಟರುಗಳು, ಸಾವಿರಗಟ್ಟಲೆ ಸಿಗುವ ಕಿವಿಗೆ ಹಾಕುವ ಹತ್ತಿ ಕಡ್ಡಿಗಳು ಅಗಾಧ ಪ್ರಮಾಣದಲ್ಲಿ ಸಿಗುವ ಇವುಗಳನ್ನು ನಿಯಂತ್ರಣಕ್ಕೆ ತಂದುಕೊಂಡು ದಿನ-ವಾರ-ವರ್ಷಗಳನ್ನು ದೂಡುವ ಅನಿವಾಸಿ ಬದುಕು. ಇವುಗಳ ಮುಂದೆ ಹರಿದು ಹೋಗುವವರೆಗೆ ಉಪಯೋಗಕ್ಕೆ ಬರುವ ನಮ್ಮ ಅಲ್ಯುಮಿನಮ್ ಅಥವಾ ಪ್ಲಾಸ್ಟಿಕ್ ಜಾಲರಿ ಇರುವ ಫಿಲ್ಟರುಗಳು ಹಳೆಯವಾಗುತ್ತವೆ, ಅಮೇರಿಕದ ಮಿಸ್ಟರ್ ಕಾಫಿ ಇಳಿಸಲು ಭಾರತದ ಫಿಲ್ಟರ್ ಕೆಲಸ ಮಾಡದಾಗುತ್ತದೆ. ಇಲ್ಲಿನ ಹೆಚ್ಚು ಧೂಳಿಲ್ಲದ ಏರ್ ಕಂಡೀಷನ್ನ್ ವಾತಾವರಣದಲ್ಲಿ ಬೆಳೆಯುತ್ತಿದ್ದರೂ ಕಿವಿಯಲ್ಲಿ ಸೇರಿದ ಕೊಳೆ ತೆಗೆಯಲು ಸಾವಿರ ಸಂಖ್ಯೆಯಲ್ಲಿ ಸಿಗುವ ಕಡ್ಡಿ ಸರದಾರರು ನೆರವಿಗೆ ಬರುತ್ತಾರೆ, ಹಿಂದೆ ಹಗಲೂ-ರಾತ್ರಿ ಧೂಳಿನಲ್ಲೇ ಜೀವನ ಸಾಗಿಸಿ ಬಂದು ಯಾವತ್ತೋ ಕಿವಿಯ ಕೊಳೆಯನ್ನು ತೆಗೆದಿದ್ದು ಗೌಣವಾಗುತ್ತದೆ.

Sunday, September 27, 2009

ಅವನ ರೂಮು ಅವನ ಮನ

ಒಂಟಿ ಗೂಟಕ್ಕೆ ತಗುಲಿ ಹಾಕಿದಾ ಕೋಟು
ಒಣಗಿದ ಹೂಗಳ ತುರುಕಿಕೊಂಡ ಕಪಾಟು
ಅಲ್ಲಲ್ಲಿ ಚೆದುರಿ ಹೋದ ಪುಸ್ತಕಗಳ ಸಂತೆ
ಹುಲ್ಲು ಕುತ್ರೆ ತಲೆಯಲ್ಲಿ ಹಿಡಿಸಲಾರದ ಕಂತೆ.

ಯುದ್ಧವಿರದ ಸಿಪಾಯಿ ಕಾಡ ಮೇಲಿನ ದಂಗೆ
ಹಸಿವಿರದಿದ್ದರೂ ಕೂಳಿನ ಅಟ್ಟಹಾಸದ ನಗೆ
ಕಾಣದ ಕೈಗಳು ದೂರದಿಂದಲೇ ಆಡಿಸೊ ಆಟ
ಗೊತ್ತಿದ್ದೂ ಗೊತ್ತಿರದ ಚಕ್ರವ್ಯೂಹದ ಹೂಟ.

ಇವನ್ಯಾರು ಅವನ್ಯಾರು ಅದು ಬೇರೆ ಇದು ಬೇರೆ
ದೂರವಿರೆ ಮುಂದೆ ಬೇರೆ ಪ್ರಮೇಯವೇ ಬರದು
ಸಂತೆಯೊಳಗೆ ಹರವಿಟ್ಟ ಹತ್ತು ಹಲವು ತರಕಾರಿ
ಬರಿ ಬಿಸಿಲೊಳಗೇ ಬೇಯಿಸಿ ಹದ ಮಾಡುವ ಪರಿ.

ಪ್ರತಿ ಬಾಗಿಲಿಗೂ ಚಿಲಕವಿರೆ ಏನಂತೆ ಮನಕಿಲ್ಲವಲ್ಲ
ಕೋಣೆ ಕೋಣೆಗೆ ಅವುಗಳದೇ ಒಂದು ವಾಸ್ತವ್ಯವಲ್ಲ
ಹರವಿಬಿಟ್ಟ ಮನ ಎಲ್ಲೂ ಹೋಗದೆ ನಿಂತ ಹಾಗಿದೆ
ಮುಚ್ಚಿಟ್ಟ ಕೋಣೆ ನಿಂತು ನಿಂತಲ್ಲೇ ಎಲ್ಲೋ ಹೋಗಿದೆ.

ಚೌಕ ಆಯತಾಕಾರಗಳ ಪ್ರತಿಬಿಂಬ ಅವನ ಕೋಣೆ
ಆದರವನ ಮನದ ಮೂಲೆಗಳ ಇತಿಮಿತಿಗಳ ಕಾಣೆ
ಒಂದರದು ನಿಂತ ಹಾಗಿರುವಾಗಲೇ ಒಂದೊಂದು ಚಿತ್ರ
ಮತ್ತೊಂದರದು ಎಲ್ಲಾ ಕಡೆ ತಿರುಗಿಕೊಂಡಿಹ ವಿಚಿತ್ರ.

(ಲೈಬ್ರರಿಯ ರೀಡಿಂಗ್ ರೂಮಿನಲ್ಲಿ ತದೇಕ ಚಿತ್ತನಾಗಿ ಓದುತ್ತಿದ್ದ ವ್ಯಕ್ತಿಯೊಬ್ಬನನ್ನು ಕುರಿತು)

Friday, September 04, 2009

ಮತ್ತೆ ಅವನ ದರ್ಶನವಾಯ್ತು...

ನನ್ನ ಪಾಡಿಗೆ ನಾನು ಸುಮ್ಮನೇ ಒಂದು ಮುಂಜಾನೆ ಕೆಲಸಕ್ಕೆ ಹೊರಟಿರೋ ಹೊತ್ತಿಗೆ ಸುತ್ತಲಿನ ಮರಗಳು ಕುಲಕಿದಂತಾಗಿ ಅವುಗಳತ್ತ ನೋಡಿದೆ ಯಾವೊಂದು ವಿಶೇಷವೂ ಕಾಣಲಿಲ್ಲ, ಆದರೆ ಮರಗಳ ಎಲೆಗಳು ಅಲುಗಾಡುವಿಕೆಯಲ್ಲಿ ಏನೋ ಒಂದು ರೀತಿಯ ಹೊಸತನವಿದ್ದಂತೆ ತೋರಿತು. ಸುಮ್ಮನೇ ಹೀಗೇ ಇರಬಹುದು ಎಂದು ನನ್ನ ಪಾಡಿಗೆ ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾಗಲೂ ಯಾರೋ ಆಹ್ವಾನಿಸದ ಅತಿಥಿಯೊಬ್ಬರು ನನ್ನ ಜೊತೆಗೆ ಕಾರಿನಲ್ಲಿ ಬರುತ್ತಿದ್ದಾರೆ ಎನ್ನಿಸಿದಾಗಲಂತೂ ಮೈ ನಡುಗತೊಡಗಿತು. ಸುತ್ತಲೂ ನೋಡಿದೆ ಯಾರೂ ಕಾಣಲಿಲ್ಲ.

ಮುಂದೆ ಸ್ವಲ್ಪ ದೂರಗಳ ದಾರಿ ಸವೆಸಿದಂತೆ ಮರಗಿಡಗಳ ನಡುವೆ ಸೂರ್ಯ ಕಿರಣಗಳು ತೂರಿಬರಲು ಹರಸಾಹಸ ಮಾಡುತ್ತಿದ್ದವು. ಸೂರ್ಯನ ಬೆಳಕೂ ಕೂಡ ಮಂದಗತಿಯನ್ನು ತಲುಪಿತ್ತು. ಮುಂಜಾನೆ ಚುರುಕಾದ ಕಿರಣಗಳು ಮಲಗಿದವನ್ನೆಲ್ಲ ಬಡಿದೆಬ್ಬಿಸುವುದರ ಬದಲು ತಮ್ಮ ಮಂದ ಬೆಳಕಿನಲ್ಲೂ ಎದ್ದವರ ಕಣ್ಣನ್ನು ಕುಕ್ಕುತ್ತಿದ್ದವೇ ವಿನಾ ಮಲಗಿದವರ ಹತ್ತಿರ ಕೂಡಾ ಸುಳಿಯುತ್ತಿರಲಿಲ್ಲ. ಇದು ಸಾಲದು ಎಂಬಂತೆ ವಾತಾವರಣದ ಉಷ್ಣತೆಯೂ ಸ್ವಲ್ಪ ಸ್ವಲ್ಪ ಕಡಿಮೆಯಾದಂತಾಗಿ ಮಲಗಿದವರು ಕಂಬಳಿ-ಕೌದಿಯನ್ನು ಈಗಾಗಲೇ ಹುಡುಕಿಕೊಂಡು ಹೋಗುವುದು ಅನಿವಾರ್ಯವೆನ್ನಿಸಿರಬಹುದಾದದ್ದು ಜನರಲ್ಲಿ ಲವಲವಿಕೆಯನ್ನು ಮೂಡಿಸುವಲ್ಲಿ ಯಾವ ಉತ್ಸಾಹವನ್ನೂ ಕೂಡಿಹಾಕುತ್ತಿರಲಿಲ್ಲ. ಆದರೂ ನಾನು ದಾರಿ ಸವೆಸಿದಂತೆಲ್ಲಾ ಇಂದು ವಿಶೇಷವಾದ ಏನೋ ಒಂದು ಬದಲಾವಣೆ ಇದೆ ಎಂದು ಬಲವಾಗಿ ಅನ್ನಿಸುತ್ತಿದ್ದುದಂತೂ ನಿಜ.

ನನ್ನ ಹಿಂದೆ ಮುಂದೆ ಇದ್ದ ಕಾರುಗಳತ್ತ ಕಣ್ಣು ಹಾಯಿಸಿದೆ, ಅವರೆಲ್ಲರ ಅರ್ಧ ಮುಖಗಳು ಬೆಳಕಿನಲ್ಲಿ ಇನ್ನರ್ಧ ಮುಖಗಳು ನೆರಳಿನಲ್ಲಿ ಕಾಣಿಸುವಂತೆ ಎದುರಿನ ಸನ್ ಸ್ಕ್ರೀನ್ ನಿರ್ದೇಶಿಸುತ್ತಿತ್ತು. ಕಪ್ಪು ಕನ್ನಡಕ ಧರಿಸಿದ್ದ ಅವರೆಲ್ಲರೂ ಈ ಬೆಳಕು-ಕತ್ತಲಿನ ಬದಲಾವಣೆಗಳಿಗೆ ಹೆಣಗುವವರು ಯಾರು ಎಂದು ತಮ್ಮ ಸವಾಲನ್ನು ಯಾವತ್ತೋ ಬಿಟ್ಟಂತಿತ್ತು. ರಸ್ತೆಯ ಬದಿಯ ಮನೆಯ ಚಿಮಣಿಯ ಪಕ್ಕದಲ್ಲಿದ್ದ ಹೊಗೆ ಕೊಳವೆಯಲ್ಲಿ ಗ್ಯಾಸ್ ಹೀಟರ್ ಉರಿಯುತ್ತಿರುವುದರ ಪ್ರತೀಕವಾಗಿ ಕಪ್ಪು-ಕಂದು ಮಿಶ್ರಿತ ಹೊಗೆ ನಿಧಾನವಾಗಿ ವಾತಾವರಣದಲ್ಲಿ ತನ್ನ ಅಸ್ಥಿತ್ವವನ್ನು ಸ್ಥಾಪಿಸುತ್ತಿತ್ತು. ಹಾಗೆ ಸ್ಥಾಪಿಸಿದ ಅಸ್ಥಿತ್ವ ಮರುಕ್ಷಣವೇ ಮಾಯವಾಗುವ ಹಾಗೆ ಕಂಡು ಇವು ಎಲ್ಲ ಎಷ್ಟೊಂದು ಕ್ಷಣಿಕ ಎನ್ನಿಸುವಂತಾಯಿತು. ಇಷ್ಟೊತ್ತಿಗಾಗಲೇ ಹಬ್ಬಿ, ಹರಡಿ ಹಾಗೂ ಕದಡಿ ಹೋದ ಹೊಗೆ ಶುಭ್ರ ವಾತಾವರಣದಲ್ಲಿ ಮಂದವಾದ ಸೂರ್ಯನ ಕಿರಣಗಳ ದಯೆಯಿಂದ ಗೋಧೂಳಿಯ ತಿಳಿ ಪದರನ್ನು ಕಣ್ಣ ಮುಂದೆ ನಿರ್ಮಿಸುವಲ್ಲಿ ಹೆಣಗುತ್ತಿತ್ತು. ಹೀಗೇ ಏನೇನೇನೋ ಆಲೋಚನೆಗಳ ನಡುವೆಯೂ ಇಂದು ಅದೇನೋ ವಿಶೇಷವಿದೆ ಎನ್ನುವ ನನ್ನ ಭಾವನೆಗಳು ಬಲವಾಗುತ್ತಲೇ ಹೋದವು.

ನಡುವೆ ಬೇಕು ಎಂದರೂ ನಿಲ್ಲದ ಪಯಣ, ರಸ್ತೆಯಲ್ಲಿ ಇಳಿದ ಮೇಲೆ ಎಲ್ಲರಂತಿರಲೇ ಬೇಕಲ್ಲ, ನಾನೂ ಮುನ್ನಡೆದೆ. ನಮ್ಮ ಮನೆಯಿಂದ ಸರಿಯಾಗಿ ಆರು ಪಾಯಿಂಟ್ ಒಂದು ಮೈಲು ದೂರದಲ್ಲಿ ಕೊನೆಯಾಗುವ ಪ್ಲೆಸೆಂಟ್ ವ್ಯಾಲಿ ವೇ ಅಂತ್ಯದಲ್ಲಿ ಆರಂಭವಾಗುವ ಓಕ್‌ಡೇಲ್ ಅವೆನ್ಯೂನಲ್ಲಿ ಒಂದಿಷ್ಟು ಓಕ್ ಮರಗಳ ನಡುವೆ ದಾರಿಯಲ್ಲಿ ಬಂದಿದ್ದವನ್ನೆಲ್ಲ ಇರಿದು ಬಿಡುತ್ತೇವೆ ಎನ್ನುವ ಇರಾದೆಯಲ್ಲಿ ಬಲಿಯುತ್ತಿದ್ದ ಕಿರಣಗಳು ನನ್ನ ಕಣ್ಣುಗಳನ್ನು ಚುಚ್ಚಿದಾಗಲೇ ಈ ಅಪರೂಪದ ಅತಿಥಿ ಯಾರು ಎಂದು ನನಗೆ ಅರ್ಥವಾದದ್ದು! ಆ ಅತಿಥಿಯೇ ಫಾಲ್ (Fall) ದಿನ, ಮುಂಬರುವ ಛಳಿಗಾಲದ ಮುನ್ಸೂಚಕ, ಚಿಗುರಿ ಬಲಿತು ಮುಂದೆ ಬೆಳೆಯ ಬೇಕಾದ ಎಲೆಗಳಿಗೂ ಕರುಣೆ ತೋರದೆ ಎಲ್ಲವನ್ನೂ ಕೆಳಗೆ ಇಳಿಸುವವ, ಹಸಿರು-ಹಳದಿಯನ್ನು ಕೆಂಪಗಾಗಿಸುವವ, ಮರ-ಗಿಡಗಳ ಮೂಗು ಮುಸುಡಿಯನ್ನು ನೋಡದೆ ಬೆತ್ತಲಾಗಿಸುವವ, ರೀಸೈಕಲ್ ಪರಮಗುರು, ಎಂಥಾ ಮರವನ್ನು ನಡುಗಿಸುವವ, ಗಾಳಿಯಲ್ಲಿನ ತೇವವನ್ನು ತಿಂದು ತೇಗಿ ಬಿಡುವವ. ನಮ್ಮಂಥ ಹುಲು ಮಾನವರ ಕಥೆ ಹಾಗಿರಲಿ ಉರಿವ ಸೂರ್ಯನಿಗೂ ಸರಿಯಾಗಿ ಕೆಲಸ ಮಾಡಲು ಬಿಡದೆ ಅವನ ದಿನಗಳನ್ನೆಲ್ಲ ಮೊಟಕು ಹಾಕಿ ಬಿಡುವವ.

ಫಾಲ್ ದಿನ ಎಂದರೆ ಹೊಸತನವನ್ನು ಸ್ವಲ್ಪ ನಿಧಾನವಾಗಿಯೇ ತರುವ ಸಂಭ್ರಮದ ಆಶಾವಾದಿಯೇ ಎಂದು ನನ್ನನ್ನು ನಾನು ಸಂತೈಸಿಕೊಂಡಿದ್ದೇನೆ. ಅಥವಾ ಬಿಸಿಯಾಗಿದ್ದನ್ನು ತಂಪಾಗಿಸಿ ನಮ್ಮವರ ಮನ-ಮನೆಗಳಲ್ಲಿ ಡಿಪ್ರೆಷ್ಷನ್ನನ್ನು ಉಂಟು ಮಾಡುವ ನಿರಾಶಾವಾದಿಯೇ ಎಂದು ನಿಟ್ಟುಸಿರಿಟ್ಟಿದ್ದೇನೆ. ಬೇಸಿಗೆ ಮತ್ತು ಛಳಿಗಾಲಗಳ ನಡುವೆ ಬಂದು ಹೋಗುವ ಇವನ ಹೂಟವೇನು? ತರಗಲೆಗಳನ್ನೆಲ್ಲ ಸುತ್ತಿ ಎಲ್ಲಿಂದ ಎಲ್ಲಿಗೋ ಎಸೆಯುವ ಇವನ ಆಟವೇನು? ಬದುಕನ್ನು ಬಯಲಾಗಿಸಿ ನೋಡುವ ಇವನ ಮಾಟವೇನು?

ಇನ್ನೂ ಇಪ್ಪತ್ತು ದಿನಗಳಾದರೂ ಇವೆ ಅಧಿಕೃತವಾಗಿ ಸಮ್ಮರ್ ಮುಗಿಯಲು ಎಂದರೆ ಅಭ್ಯಾಗತ ಅತಿಥಿ ಈಗಾಗಲೇ ಬಂದು ಒಕ್ಕರಿಸಿದ್ದಾನೆ. ಬೆಳ್ಳಂಬೆಳಗ್ಗೆ ವಾತಾವರಣದ ಉಷ್ಣತೆಯನ್ನು ನಲವತ್ತೈದು ಡಿಗ್ರಿ ಫ್ಯಾರನ್‌ಹೈಟ್ ಮಟ್ಟಕ್ಕೆ ಇಳಿಸಿ ಸಂತಸ ಪಡುತ್ತಾನೆ. ಇದ್ದ ಒಂದೆರಡು ದಿನಗಳನ್ನಾದರೂ ಹಾಯಾಗಿ ಡೆಕ್ ಮೇಲೆ ಕಳೆಯೋಣವೆಂದರೆ ಈತ ವರುಣನೊಂದಿಗೆ ಬಿನ್ನಾಣದ ಸ್ನೇಹವನ್ನೂ ಬೆಳೆಸಿ ವರ್ಷಧಾರೆಯನ್ನು ಸುರಿಸುತ್ತಾನೆ. ಬೇಡಾ-ಬೇಡಾ ಎಂದರೂ ಬೇಡದ್ದನ್ನೇ ಮಾಡದ ಹಠ ಹಿಡಿದ ಪೋರನಂತೆ, ಇಂದು ಏನಾದರೂ ಸಿಕ್ಕಿದ್ದು ಸಿಕ್ಕಲಿ ಎನ್ನುವ ಚೋರನಂತೆ ಇವನ ಮನ. ಇವನ ಸ್ನೇಹವನ್ನು ಬೆಳೆಸದಿದ್ದರೆ ಬೇರೆ ದಾರಿಯೇನಿದೆ? ಇವನಿಗೆ ಸಲಾಮು ಹೊಡೆದು ಸಹಕರಿಸುತ್ತಿದ್ದ ಹಾಗೆ ಇವನ ಅಣ್ಣ ವಿಂಟರ್ ಬರುತ್ತಾನೆ - ಇವರೆಲ್ಲರ ಅಟ್ಟ ಹಾಸಕ್ಕೆ ಸಿಕ್ಕಿ ನೆರೆಹೊರೆ ಮರುಗುವುದರೊಳಗೆ ಮತ್ತೆ ನಂತರ ಸ್ಪ್ರಿಂಗ್ ಬಂದು ಸೂರ್ಯನ ಮಾಮೂಲಿ ಡ್ಯೂಟಿ ಆರಂಭವಾಗುವಾಗ ಇನ್ನು ಯಾವ ಕಾಲವಿದೆಯೋ ಅದೆಷ್ಟು ದೂರವೋ ಎಂದು ಎಣಿಸುತ್ತಿರುವ ಹೊತ್ತಿಗೆ ಯಾವಾಗಲೂ ಒಂದೇ ಮುಖವನ್ನು ಹೊತ್ತಿಕೊಂಡ ಆಫೀಸಿನ ಬಿರುಸು ಡ್ರೈವ್ ವೇ ಎದುರಿಗೆ ಸಿಕ್ಕು ಮತ್ತಿನ್ಯಾವುದೋ ಆಲೋಚನೆಯಲ್ಲಿ ಮನಸ್ಸು ತೊಡಗಿಕೊಳ್ಳುತ್ತದೆ. ಹೀಗೆ ಆಫೀಸ್ ಹೊಕ್ಕು ಮತ್ತೆ ಹೊರಬರುವವರೆಗೆ ಈ ಅತಿಥಿಗಳು ನನ್ನನ್ನು ಅಷ್ಟೊಂದು ಕಾಡೋದಿಲ್ಲವೆನ್ನುವುದು ನಿಜ.