Showing posts with label ಬದಲಾವಣೆ. Show all posts
Showing posts with label ಬದಲಾವಣೆ. Show all posts

Thursday, November 30, 2023

ಸುಖ-ದುಃಖ

ಬಾಳಿನಲ್ಲಿ ಬರೋ ಸಂತೋಷದ ಕ್ಷಣಗಳೇ ಒಂದು ರೀತಿಯಲ್ಲಿ ಸೂಕ್ಷ್ಮವಾದವುಗಳು. ಈ ಸಂತೋಷವನ್ನ ಸುಖ, ಹರ್ಷ, ನಲಿವು, ಉಲ್ಲಾಸ, ಹಿಗ್ಗು, ಖುಷಿ, ಮೋಜು, ವಿನೋದ... ಮೊದಲಾದ ಸಮಾನಾರ್ಥಕ ಪದಗಳನ್ನು ಉಪಯೋಗಿಸಿ ಕರೆದರೂ ಅದೊಂದು ಅಗಮ್ಯವಾದ ಲೋಕವಾಗೇ ಉಳಿದುಬಿಡುತ್ತದೆ. ಸುಖದಲ್ಲಿ, ಕಷ್ಟ, ಕಾರ್ಪಣ್ಯ, ದುಃಖ, ನೋವುಗಳಿಲ್ಲ ಅನ್ನೋದರ ಜೊತೆಗೆ ಸುಖವೆಂದೂ ದಂಡಿಯಾಗಿ ಬುಟ್ಟಿಯಲ್ಲಿ ಮೊಗೆಯುವಷ್ಟು ಸಿಗುವುದಂತೂ ಅಲ್ಲವೇ ಅಲ್ಲ. ಅದು ಮಳೆಯ ದಿನಗಳಲ್ಲಿ ಬರುವ ಕೋಲ್ಮಿಂಚಿನ ಹಾಗೆ, ಹೀಗೆ ಬಂದು ಹಾಗೆ ಹೋಗುವುದು. ಎಷ್ಟೋ ಸಮಯ ಗೊತ್ತಾಗುವುದೂ ಇಲ್ಲ. ಅದರಲ್ಲಿಯೂ ಮೋಡ ಕವಿದ ಆಕಾಶವಿದ್ದರೆ ಮುಗಿದೇ ಹೋಯಿತು, ದೂರದಲ್ಲೆಲ್ಲೋ ಮಿಂಚಿ ಮಾಯವಾಗುವ ಮಾಯಾಂಗನೆಯ ಹಾಗೆ, ಅದು ಇದ್ದೂ ಇರಲೊಲ್ಲದು.


ಈ ಕಾರಣಗಳಿಂದಲೇ ಇರಬೇಕು, ಇಂಗ್ಲೀಷಿನವರು, ಚೆನ್ನಾಗಿರುವುದಕ್ಕೆ awesome ಎಂದು ಹೇಳೋದು... ಅದರಲ್ಲಿ "some" ಅಡಕವಾಗಿದೆ. ಅದೇ, ಮನಸ್ಸಿಗೆ ಅಹಿತವಾದ ವಿಷಯಗಳಿಗೆ, awful ಎಂದು ಹೇಳುವಾಗ, ಅದು ಯಾವಾಗಲೂ "full" ಆಗಿಯೇ ತೋರೋದು! ಸುಖ-ಸಂತೋಷಗಳು ಹಿತಮಿತವಾಗಿಯೂ, ಕಷ್ಟ-ಕಾರ್ಪಣ್ಯಗಳು ದಂಡಿ ದಂಡಿಯಾಗಿಯೂ ಬರುತ್ತವೆ ಎಂದು ಒಂದೊಂದು ಪದದಲ್ಲಿಯೇ ಹೇಳುವ ಅವರ ಜಾಣ್ಮೆಯನ್ನು ಮೆಚ್ಚಬೇಕಾದ್ದೆ!


ಯಾರು ಯಾರಿಗೋ ಯಾವುದೋ ಕಾರಣಗಳಿಗೆ ಖುಷಿಯಾಗುವುದುಂಟು. ಇಡೀ ದಿನ ದಣಿದ ತಾಯಿಯ ದಣಿವು ತನ್ನ ಮಗುವಿನ ಒಂದು ಕಿರುನಗೆಯನ್ನು ನೆನಪಿಸಿಕೊಳ್ಳುವುದರ ಮೂಲಕವೇ ಮರೆಯಾಗಬಲ್ಲದು. ಸಂಜೆ ಒಮ್ಮೊಮ್ಮೆ ಒಂದು ಒಳ್ಳೆಯ ಚಹಾ ಕುಡಿದಾಗ, ಮಲೆನಾಡಿನ ಮಳೆ ಮತ್ತು ಚಳಿ ಪ್ರಕೃತಿಯಲ್ಲಿ ಮುಂಜಾನೆ ಒಂದು ಮಜಬೂತಾದ ಫ಼ಿಲ್ಟರ್ ಕಾಫ಼ಿ ಕುಡಿದಾಗ, ಬೇಸಿಗೆಯ ಬಿಸಿಲಿನ ಬಳಲಿಕೆಯಲ್ಲಿ ಒಂದು ಶುಂಠಿ ಹಾಕಿದ ಮಜ್ಜಿಗೆ ಕುಡಿದಾಗ - ಈ ಕಿರು ಸಂತೋಷ ಸುಖವಾಗಿ ಪ್ರಕಟವಾಗುವುದುಂಟು. ಹೀಗಿರುವಾಗ ಸುಖವೆನ್ನುವುದು ದಂಡಿ ದಂಡಿಯಾಗಿ ಸಿಗಬೇಕೆಂದೇನೂ ಇಲ್ಲ... ಬಳಲಿದ ಮನಸ್ಸಿಗೆ ಹಿತವಾಗುವುದಕ್ಕೆ ಚಿಕ್ಕ ಲೋಟದಲ್ಲಿ ಸಿಗುವ ಪಾನೀಯ ಸಾಕಾಗುವುದರಿಂದ, ನಿಮಗೆ ಬಕೇಟುಗಟ್ಟಲೆ ಎಂದೂ ಕಾಫ಼ಿಯನ್ನು ಕುಡಿಯಬೇಕೆನ್ನಿಸುವುದಿಲ್ಲ. ನಾವು ಚಿಕ್ಕವರಿದ್ದಾಗ ಭದ್ರಾವತಿಯ ಸಕ್ಕರೆ ಕಾರ್ಖಾನೆಯನ್ನು ನೋಡಲು ಹೋಗಿದ್ದೆವು. ಶಾಲಾ ಮಕ್ಕಳಿಗೆ ಪ್ರವಾಸದ ಕೊನೆಯಲ್ಲಿ ಒಂದು ಮೂಟೆ ಸಕ್ಕರೆಯನ್ನು ತೋರಿಸಿ, ಯಾರು ಎಷ್ಟು ಬೇಕಾದರೂ ತಿನ್ನಬಹುದು ಎಂದು ಹೇಳಿದಾಗ ನಾವ್ಯಾರೂ ಒಂದು ಚಿಟುಕೆಯಷ್ಟು ಕೂಡ ಸಕ್ಕರೆಯನ್ನು ತಿನ್ನದಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ. ದಂಡಿಯಾಗಿ ಸಿಗುವುದೆಲ್ಲವೂ ಸುಖವಲ್ಲ, ಜೊತೆಗೆ ಯಥೇಚ್ಛವಾಗಿ ದೊರಕುವುದು ಸುಖವನ್ನು ಕಸಿದುಕೊಳ್ಳಲೂಬಹುದು. ಊಟ-ತಿಂಡಿಗಳು ಬಹಳ ಇಷ್ಟ ಎಂದು ಹೊಟೇಲಿನಲ್ಲಿ ಕೆಲಸಕ್ಕೆ ಸೇರಿಕೊಂಡವರು, ಸಮಯ ಸರಿದಂತೆಲ್ಲ, ಊಟ-ತಿಂಡಿಯ ಬಗೆಗಿನ ತಮ್ಮ ದೃಷ್ಟಿಕೋನವನ್ನೇ ಬದಲಾಯಿಸಿಕೊಳ್ಳುವ ಹಾಗೆ.


ನನ್ನ ಪ್ರಕಾರ, ಎಲ್ಲಿದೆ ಸುಖ? ಎಂದು ಅರಸಿಕೊಂಡು ಹೋಗುವುದೇ ತಪ್ಪು. ಸುಖ-ಸಂತೋಷ ನಮ್ಮ ಒಳಗಿದೆ, ನಮ್ಮ ಹೊರಗಿದೆ, ಮುಖ್ಯ ಅದು ನಾವಿರುವಲ್ಲೇ ಇದೆ. ಆಧ್ಯಾತ್ಮಿಕ ಚಿಂತನಶೀಲರು, ನಿಮ್ಮ ಒಳಗಡೆ ಗಮನಕೊಡಿ, ಅದರಲ್ಲಿ ಅಂತರ್ಧಾನದ ಸುಖವಿದೆ ಎಂದಾರು. ಕವಿಗಳು, ನಿಮ್ಮ ಸುತ್ತಮುತ್ತಲಿನ ಪ್ರಕೃತಿಯ ಆರಾಧನೆಯಲ್ಲಿದೆ ಸುಖ ಎಂದಾರು. ತನ್ನ ಮನಸ್ಸನ್ನು ತನ್ನೊಳಗೇ ಕೇಂದ್ರೀಕರಿಸಿ ಹತೋಟಿಯಲ್ಲಿಡಲು ಪ್ರಯತ್ನಿಸುವ ಯೋಗಿಗೆ, ಪಕ್ಕದ ಮರದ ಮೇಲೆ ಕುಳಿತು ವಸಂತನ ಆಗಮನವನ್ನು ಸಾರುವ ಕೋಗಿಲೆಯ ಸಂದೇಶ ಕಿರಿಕಿರಿ ತರಿಸಲಿಕ್ಕೂ ಸಾಕು. ಅದೇ ಬಾಹ್ಯ ಪ್ರಕೃತಿಗೆ ತನ್ನನ್ನು ತಾನು ಒಡ್ಡಿಕೊಂಡು ಹೊಸತೇನನ್ನೋ ನಿರೀಕ್ಷಿಸುತ್ತಿರುವ ಕವಿ ಮನಸ್ಸಿಗೆ ಕ್ರೌಂಚ ಪಕ್ಷಿಗಳ ಕಲರವವೂ ಮುದ ತರಬಹುದು. ಅವರವರ ಭಾವನೆ-ಭಕ್ತಿ ಮತ್ತು ಶ್ರದ್ಧೆಗೆ ಸಂಬಂಧಿಸಿದಂತೆ ಸುಖ ಎಲ್ಲ ಕಡೆಯೂ ಇದೆ... ಆದರೆ ಅದು ದಂಡಿಯಾಗಿ ಸಿಗುವ ಸರಕು-ಸಾಮಗ್ರಿಯಾಗಂತೂ ಅಲ್ಲವೇ ಅಲ್ಲ.


***

ಸುಖ ಮನಸ್ಸಿಗೆ ಸಂಬಂಧಿಸಿದ್ದಾದರೂ, ಅದರ ಮೂಲ ಹೃದಯದಲ್ಲಿದೆ ಎನ್ನಬಹುದೇ? ಸುಖದ ನಿರೀಕ್ಷೆ ಒಂದು ರೀತಿಯಲ್ಲಿ ತಪ್ಪು. ಮುಂದಿನ ಸುಖದ ಕ್ಷಣ ಹೀಗೇ ಇದ್ದೀತು ಎಂದು ಮೊದಲೇ ಊಹಿಸಿಕೊಳ್ಳುವುದಾದರೂ ಹೇಗೆ? ಸುಖ-ಸಂತೋಷದ ವಿಷಯಕ್ಕೆ ಬಂದಾಗ ಬಡವ-ಬಲ್ಲಿದನೆಂಬ ಬೇಧ-ಭಾವ ಏನಾದರೂ ಇರಬಹುದೇ? ಅತಿ ಶ್ರೀಮಂತರಿಗೆ ಹೆಚ್ಚಿನ ಸಂತೋಷ ಸಿಗುವುದು ನಿಜವೇ? ಹಾಗಿಲ್ಲವಾದರೆ, ಜನ ತಮ್ಮ ಹಂಗುಗಳನ್ನು ತೊರೆದು ಸದಾಕಾಲ ಶ್ರೀಮಂತರಾಗುವ, ಇನ್ನೂ ಹೆಚ್ಚು ಹೆಚ್ಚು ಸಂಪಾದಿಸಿ, ಕೂಡಿಡುವ ಕನಸನ್ನು ಕಾಣುವುದಾದರೂ ಏಕೆ? ಬಡವರ ಸಂತೋಷಗಳಿಗೂ, ಉಳ್ಳವರ ಸಂತೋಷಗಳಿಗೂ ಏನು ವ್ಯತ್ಯಾಸ? ಸುಖ ಎನ್ನುವುದು ನಮ್ಮೊಳಗಿದೆಯೋ, ನಮ್ಮ ಹೊರಗಿದೆಯೋ? ಸುಖ ಎನ್ನುವುದು ವ್ಯಕ್ತಿಗತವೋ, ಅಥವಾ ಒಂದು ನೆರೆಹೊರೆಗೆ ಸಂಬಂಧಿಸಿದ ವಿಷಯವೋ? ಸುಖವನ್ನು ಅಳೆಯುವುದಾದರೂ ಹೇಗೆ? ಇಂತಿಷ್ಟು ದಿನ ಈ ಕೆಲಸವನ್ನು ಮಾಡಿದರೆ ಇಂತಿಷ್ಟು ಸುಖ ಎಂಬ ನಿಯಮವೇನಾದರೂ ಇದೆಯೇ?


***

ಬೆಂಗಳೂರಿನಿಂದ ನೆಲಮಂಗಲದ ಕಡೆಗೆ ಹೋಗುವ ದಾರಿಯಲ್ಲಿ, ಬೆಂಗಳೂರು ನಗರ ಮುಗಿಯುವ ಸರಹದ್ದಿನಲ್ಲಿ ಅದೆಷ್ಟೋ ನಿರ್ಗತಿಕ ಕುಟುಂಬಗಳು ಬಯಲುಗಳಲ್ಲಿ ಗುಡಿಸಲು ಅಲ್ಲದ ಡೇರೆಗಳಲ್ಲಿ ಬದುಕುವುದನ್ನು ನೋಡಬಹುದು. ಇಲ್ಲಿ ಬದುಕುವ ಕುಟುಂಬದ ಸದಸ್ಯರುಗಳಿಗೆ ಆಯಾ ಹಂಗಾಮಿ ವಸತಿ ಸೌಕರ್ಯವೇ ಸುಖವನ್ನು ತಂದುಕೊಟ್ಟೀತು. ಹಾಗಂತ, ಲೀಲಾ ಪ್ಯಾಲೇಸಿನಲ್ಲಿ ದಿನದ ಬಾಡಿಗೆಯಾಗಿ ಲಕ್ಷಾಂತರ ರುಪಾಯಿಯನ್ನು ಸುರಿವ ಶ್ರೀಮಂತರಿಗೆ ಸುಖವಿಲ್ಲ ಎಂದು ಹೇಳಲಾಗದು. ಹಾಗಿದ್ದ ಮೇಲೆ, ಸುಖ ಎನ್ನುವುದು ಅವರವರ ಮಾನಸಿಕ, ಸಾಮಾಜಿಕ, ಶಾರೀರಿಕ ಮೌಲ್ಯಗಳ ಮೇಲೆ ನಿಂತಿದೆ ಎನ್ನಬಹುದೇ? ಬಯಲಿನ ಗುಡಿಸಲಲ್ಲಿರುವ ವ್ಯಕ್ತಿಯ ಸೌಕರ್ಯಗಳನ್ನು ಲೀಲಾ ಪ್ಯಾಲೇಸಿನಲ್ಲಿರುವ ವ್ಯಕ್ತಿಯ ಸೌಕರ್ಯಕ್ಕೆ ಅದಲು ಬದಲು ಮಾಡಿದಾಗ ಇಬ್ಬರಿಗೂ ಅವರವರ ಸುಖ ದೂರವಾಗಬಹುದು. ಅದೇ ಪ್ರಪಂಚದಲ್ಲಿ ಒಂದಿಷ್ಟು ದಿನ ಇರಲಾಗಿ ಪ್ರತಿಯೊಬ್ಬನೂ ಅದಕ್ಕೆ ಹೊಂದಿಕೊಂಡು ಹೋಗಬಹುದು.


ಗಾಜ಼ಾ ಗಡಿಯಲ್ಲಿ ನಡೆದ ಯುದ್ಧದಿಂದಾಗಿ ಅದೆಷ್ಟೋ ಕುಟುಂಬಗಳು ರಾತ್ರೋರಾತ್ರಿ ತಮ್ಮ ತಮ್ಮ ನೆರೆಹೊರೆಯನ್ನು ಬಿಟ್ಟು ಕದಲಬೇಕಾದಾಗ, ಅವರವರ ಸುಖ-ಸಂಭ್ರಮಗಳು ಸಂಘರ್ಷದಲ್ಲಿ ಕೊಚ್ಚಿಹೋದವು. ಒಂದು ವಟಾರದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಬಂದ ಕುಟುಂಬಗಳು ಕೇವಲ ನಿರ್ಗತಿಕರಾಗಷ್ಟೇ ಅಲ್ಲ, ಅವರ ನೆಲೆಯನ್ನು ಕಳೆದುಕೊಂಡರೂ ಕೂಡ. ಆದರೆ, ಹೊಸ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಕ್ಕಳು ತಮ್ಮ ಆಟದ ಸುಖವನ್ನು ಅನುಭವಿಸುವುದರಲ್ಲಿ ನಿರತರಾದಂತೆ ತೋರಿತು. ಸುಖದ ಪರಿಭ್ರಮೆಗೆ ನಾವೊಂದು ಪರಿಧಿಯನ್ನು ಹಾಕಿಕೊಂಡಿರುತ್ತೇವೆ. ಕೊನೆಮೊದಲಿಲ್ಲದ ಆ ಪರಿಧಿ, ಒಂದೇ ಒಂದು ಸಂಘರ್ಷದ ಸಂಕಟಕ್ಕೆ ಚೂರುಚೂರಾಗಿ ಹೋಗುವುದಾದರೆ, ಮನುಕುಲ ಸಂಘರ್ಷವನ್ನು ಹುಟ್ಟುಹಾಕುವುದಾದರೂ ಏಕೆ ಎನಿಸೊಲ್ಲವೇ? ಇಂದಿನ ತಲೆಮಾರಿನ ಜೊತೆಜೊತೆಗೆ ಇನ್ನೆರೆಡು ತಲೆಮಾರುಗಳು ಅನುಭವಿಸಿ ತಮ್ಮದೆಲ್ಲವನ್ನೂ ಕಳೆದುಕೊಳ್ಳುವ ಈ ಸಂಘರ್ಷದ ಫಲಿತಾಂಶವಾದರೂ ಏನು? ಕೈಯಲ್ಲಿ ಬಂದೂಕು ಹಿಡಿದು ಹೋರಾಡುವ (ಉಗ್ರ) ತರುಣರಿಗೆ ಈ ಸರಳ ಸಂದೇಶವೇಕೆ ಅರ್ಥವಾಗುವುದಿಲ್ಲ? ಹುಟ್ಟಿ-ಸಾಯುವ ಹಲವು ವರ್ಷಗಳಲ್ಲಿ ಹೀಗೆ ಬಂದು ಹಾಗೆ ಹೋಗುವ ನಾಲ್ಕು ಅವಸ್ಥೆಗಳಲ್ಲಿ ನಾವು ಏನನ್ನಾದರೂ ಬದಲಾಯಿಸುತ್ತೇವೆ ಎಂದುಕೊಳ್ಳುವುದೇ ತಪ್ಪಲ್ಲವೇನು? ಅಕಸ್ಮಾತ್ ಬದಲಾವಣೆಯೇ ಆಗುವುದು ಎಂದಾದಲ್ಲಿ, What difference does it make? ಎಂದು ಕೇಳಬೇಕೆನಿಸುತ್ತದೆ.


ಸೂರ್ಯನು ಮುಳುಗದ ಸಾಮ್ರಾಜ್ಯವಾಗಿ ಇಂಗ್ಲೀಷ್ ಸಾಮ್ರಾಜ್ಯ ಬೆಳೆಯಿತು ಮತ್ತೆ ಕಳೆದುಹೋಯಿತು. ತಮ್ಮದೇ ಆದ ತಂತ್ರವನ್ನು ಜಗದೆಲ್ಲೆಡೆ ಸಾರುತ್ತೇವೆಂದು ಮಾವೋವಾದಿಗಳು, ಸಮತಾವಾದಿಗಳು ಹೋರಾಡುತ್ತಲೇ ಪ್ರಾಣಬಿಟ್ಟರು. ತಮ್ಮದೇ ಮತ ದೊಡ್ಡದು, ತಮ್ಮ ಧರ್ಮವೇ ನಿಜವಾದ ವಿಶ್ವ ಧರ್ಮವೆಂದು ಎಂದೋ ಘಟಿಸಿ ಆಗಿ ಹೋದ ಪ್ರವಾದಿಗಳ ಹೆಸರಿನಲ್ಲಿ ಕಾಡು-ಮೇಡು, ಗುಡ್ಡ-ಬೆಟ್ಟ, ನದಿ-ದ್ವೀಪಗಳನ್ನೆಲ್ಲ ಗುಡ್ಡೆ ಹಾಕಿ ತಮ್ಮ ಮತವನ್ನು ಸ್ಠಾಪಿಸಿಕೊಂಡರು, So what? ಯೂರೋಪಿನ ಸ್ಪೇನ್ ದೇಶದ ಮೂಲೆಯಲ್ಲಿ ಒಂದು ಕರ್ಚೀಫ಼ಿನ ಅಗಲದಷ್ಟು ಹರಡಿಕೊಂಡು ತನ್ನ ಅಸ್ತಿತ್ವವನ್ನೇ ಇನ್ನೂ ಸರಿಯಾಗಿ ಕಂಡುಕೊಳ್ಳದ ಪೋರ್ಚುಗೀಸರು ದೂರದ ದಕ್ಷಿಣ ಅಮೇರಿಕದ ಅರ್ಧ ಭಾಗದಷ್ಟು ದೊಡ್ಡದಾದ ಬ್ರೆಜಿಲ್ ದೇಶದ ಮೇಲೆ ತಮ್ಮ ಭಾಷೆ ಮತ್ತು ಸಂಸ್ಕೃತಿಯ ದಬ್ಬಾಳಿಕೆಯನ್ನು ಹೇರಲೇಬೇಕಿತ್ತೇನು? ಹಾಗಿಲ್ಲದಿದ್ದರೆ ಅವರೇನು ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಸಾಯುತ್ತಿದ್ದರೇನು? ಈ ಮಾನವನ ಕ್ಷುಲ್ಲಕ ತಂತ್ರಗಳನ್ನು ಒಂದೇ ಒಂದು ಮಾತಿನಲ್ಲಿ ಹೇಳುವುದಾದರೆ, ಹುಟ್ಟಿ ಹೋರಾಡುತ್ತಲೇ ಹತನಾಗುವ ಹುಲುಮಾನವನಿಗೆ ಸುಖವೆನ್ನುವ ಅದ್ಯಾವ ಮರೀಚಿಕೆಯ ಹಂಬಲವಿದ್ದಿರಬಹುದು?


ತನ್ನ ಸುಖದ ಚೌಕಟ್ಟಿಗೆ ಒಳಪಡದಿರುವುದು ಅಸುಖ ಎಂದುಕೊಳ್ಳುವುದೇ ತಪ್ಪು. ಚೀನಾ ದೇಶದ ಜನರಿಗೆ ಹಾವು-ಹಲ್ಲಿ-ಸರೀಸೃಪಗಳನ್ನು ತಿಂದು ತೇಗುವ ಬಯಕೆ, ಅವರು ಮಾಡಿಕೊಳ್ಳಲಿ. ದೂರದ ಆಸ್ಟ್ರೇಲಿಯ ದೇಶವಾಸಿಗಳು ಕಾಂಗರೂ ಪ್ರಾಣಿಯನ್ನು ತಿಂದು ಆನಂದಿಸಲಿ, ಅದು ಅವರ ಪರಿಸರ ಕೊಟ್ಟ ಬಳುವಳಿ. ಇನ್ನೆಲ್ಲೋ ಮೆಕ್ಸಿಕೋ ದೇಶದಲ್ಲಿ ಕೆಲವರು ಜಿರಲೆಗಳನ್ನು ತಿಂಡಿಯಾಗಿ ತಿನ್ನಲಿ. ಮಂಗೋಲಿಯಾ, ಕಜಾಕ್‌ಸ್ತಾನ್‌ದವರು ಕುದುರೆ ಮಾಂಸವನ್ನು ತಿನ್ನವಂತೆ, ತೈವಾನ್-ವಿಯೆಟ್ನಾಮ್ ದೇಶವಾಸಿಗಳು ನಾಯಿ-ಬೆಕ್ಕುಗಳನ್ನು ತಿನ್ನಲಿ - ಅದರಲ್ಲಿ ಅವರವರ ಸಂತೋಷ ಆಯಾ ದೇಶವಾಸಿಗಳ ಅಗತ್ಯ-ಅನುಕೂಲಗಳನ್ನು ಹೊಂದಿಕೊಂಡಿದೆ. ಇದನ್ನೇ ದೊಡ್ಡ ಕಾನೂನನ್ನಾಗಿ ಮಾಡಿ ಎಲ್ಲರೂ ನಮ್ಮ ಪಾಕಶಾಸ್ತ್ರವನ್ನೇ ಬಳಸಿ, ನಮ್ಮ ಅಡುಗೆಯ ವಿಧಾನವೇ ವಿಶೇಷವಾದುದು ಎಂದು ತಮಟೆ ಸಾರಿಸಿಕೊಂಡರೆ? ಒಂದು ಹೆಜ್ಜೆ ಮುಂದೆ ಹೋಗಿ ಅದನ್ನೇ ಇನ್ನೊಬ್ಬರ ಮೇಲೆ ಹೇರಿಬಿಟ್ಟರೆ? ಭೂಮಿಯ ಸಮಭಾಜಕ ವೃತ್ತದ ಆಸುಪಾಸಿನಲ್ಲಿ ದಿನವಿಡೀ ಉರಿಬಿಸಿಲಿನಲ್ಲಿ ಬದುಕುವವರಿಗೂ ಉತ್ತರ-ದಕ್ಷಿಣ ಧೃವ ಪ್ರದೇಶಗಳ ಹತ್ತಿರ ಬದುಕುವ ಜನರ ಆಗು-ಹೋಗು, ಆಚಾರ-ವಿಚಾರ, ಉಡುಗೆ-ತೊಡುಗೆ, ಊಟ-ವಿಶೇಷಗಳಲ್ಲಿ ವ್ಯತ್ಯಾಸಗಳಿರುವುದು ಸಹಜವೇ. ಸಮುದ್ರಕ್ಕೆ ಹತ್ತಿರವಾದವನಿಗೆ ನದೀ ಮೂಲವನ್ನು ಅರಸಿ ಹೋಗುವ ಅಗತ್ಯವಿಲ್ಲ, ನೀರು- ನದಿಗಳು ಅವನಿದ್ದಲ್ಲೇ ಬರುವುದು ಸಹಜ. ಅಂತೆಯೇ, ಗುಡ್ಡ-ಗವಿಗಳಲ್ಲಿ ಬದುಕುವ ಮಾನವನಿಗೆ, ಮಿತವಾಗಿ ದೊರಕುವ ನೀರೊಂದು ಅಗತ್ಯದ ವಸ್ತುವಷ್ಟೇ. ಹಾಗಾಗಿ ಸುಖ-ಸಮೃದ್ಧಿ ಎನ್ನುವುದು ಅವರವರ ಸ್ಥಳವನ್ನು ಅವಲಂಬಿಸಿದೆ ಎಂದಾಯ್ತು!


***

ಸುಖವೆನ್ನುವ ಪರಮಾರ್ಥವನ್ನು ಅರಸಿಕೊಂಡು ಹೋಗಬೇಕಾದ ಅಗತ್ಯ ಯಾರಿಗೂ ಇಲ್ಲ. ತನ್ನೊಳಗೆ ಮತ್ತು ಹೊರಗೆ ಸಿಗುವ ಆ ಸುಖಮಯ ಕ್ಷಣಗಳನ್ನು ಅನುಭವಿಸುವ ರಸಾನುಭೂತಿಯನ್ನು ಅರ್ಥಮಾಡಿಕೊಳ್ಳಬೇಕಷ್ಟೇ. ಹೇರಳವಾದ ಕತ್ತಲಿದ್ದಲ್ಲಿ ಒಂದು ಚಿಕ್ಕ ಹಣತೆ ತನ್ನ ಪ್ರಕಾಶವನ್ನು ಚೆಲ್ಲುವ ಹಾಗೆ, ಕತ್ತಲಿನಿಂದ ಕತ್ತಲಿಗೆ ಸೇರುವ ಈ ಬದುಕು ಅಂತಹ ಹಣತೆಗಳ ಬೆಳಕನ್ನು ನಂಬಬೇಕಾಗುವುದು ತಾರ್ಕಿಕವಾದದ್ದು. ಸುಖವನ್ನು ಹುಡುಕದೇ ತನ್ನೊಳಗೆ ಹುದುಗಿದ ಭಾವನೆಗಳನ್ನು ಜಾಲಾಡುತ್ತಾ ಹೋದ ಹಾಗೆ ಸುಖ ಕಾಣುವುದು ಖಂಡಿತ, ಎನ್ನುವುದು ಈ ಹೊತ್ತಿನ ತತ್ವ!

Monday, June 01, 2020

ಕೆಲಸಕ್ಕೆ ಜನರಿಲ್ಲ!



ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತುಲನೆ ಮಾಡಿ ನೋಡಿದಾಗ, ಹಿಂದಿನ ತಲೆಮಾರಿನವರು ಕಷ್ಟ ಜೀವಿಗಳು ಅನ್ನಿಸೋದು ಸಹಜ.  ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆದ ಹಾಗೆ ನಾಗರೀಕತೆ, ನಗರೀಕರಣ, ಜನರ ವಲಸೆ ಮೊದಲಾದವು ಬದಲಾಗುತ್ತಿರುತ್ತವೆ.  ನಮ್ಮ ಪೂರ್ವಜರು ತಮ್ಮ ಇಡೀ ಜೀವಮಾನದಲ್ಲಿ ಪ್ರಯಾಣಿಸಿದ ದೂರವನ್ನು ನಾವು ಒಂದು ತಿಂಗಳಲ್ಲೇ ಪ್ರಯಾಣಿಸಿ ಅವರನ್ನು ಮೀರಿಸಬಲ್ಲೆವು.  ಆದರೆ,  ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹೆಚ್ಚಾಗುತ್ತಿರುವ ಅಂತರವನ್ನು ಗ್ರಹಿಸಲು ಈ ಕೆಳಗಿನ ಎರಡು ಸೂಕ್ಷ್ಮಗಳನ್ನು ಗಮನಿಸಿ:


1. ಹಿಂದೆಲ್ಲ ಕೆಲಸಗಾರರು ಸಿಗುತ್ತಿದ್ದರು, ಇಂದು ಕೆಲಸಗಾರರು ಸಿಗುವುದಿಲ್ಲ.  ಸಿಕ್ಕರೂ ಸಹ "ನಿಯತ್ತಿ"ನಿಂದ ಮೈ ಬಗ್ಗಿಸಿ ದುಡಿಯುವುದಿಲ್ಲ.  ಕಡಿಮೆ ಕೆಲಸಕ್ಕೆ ಹೆಚ್ಚು ಬೆಲೆ ಕೇಳುತ್ತಾರೆ.

2.  ಎಲ್ಲರೂ ಓದಿದವರಾಗಿ ಮೇಲ್ಮಟ್ಟದ ಕೆಲಸಗಳನ್ನೇ ಯಾಚಿಸುವುದಾದರೆ, ಉಳಿದೆಲ್ಲ ಕೆಲಸಗಳನ್ನು ಯಾರು ಮಾಡುವವರು? ತೋಟ-ಗದ್ದೆಗಳಲ್ಲಿ ಕೆಲಸ ಮಾಡಲು, ರಸ್ತೆ ಗುಡಿಸಲು, ನೆಲ ಒರೆಸಲು, ಬಟ್ಟೆ ಒಗೆಯಲು, ಮನೆ ಕಟ್ಟಲು, ಮರಳು ಹೊರಲು, ಕಟ್ಟಿಗೆ ಒಡೆಯಲು, ಸುಣ್ಣ-ಬಣ್ಣ ಹಚ್ಚಲು, ತೆಂಗಿನಕಾಯಿ ಕೊಯ್ಯಲು, ಮನೆ ಕೆಲಸ ಮಾಡಲು... ಕೆಲಸಕ್ಕೆ ಯಾರು ಸಿಗುತ್ತಾರೆ?

***



ಕಳೆದ ಇಪ್ಪತ್ತು ವರ್ಷಗಳಲ್ಲಿ ಯು.ಎಸ್.ಎ. ಒಂದು ದೇಶದಲ್ಲಿಯೇ (ಒಂದು ಅಧ್ಯಯನದ ಪ್ರಕಾರ) ಸುಮಾರು 50 ಲಕ್ಷ ಮ್ಯಾನ್ಯುಫ್ಯಾಕ್ಚರಿಂಗ್ ಕೆಲಸಗಳು ಕಾಣೆಯಾದವು.  60 ರ ದಶಕದಲ್ಲಿ ಸುಮಾರು ನೂರಕ್ಕೆ 25% ಜನರು ಮ್ಯಾನ್ಯುಫ್ಯಾಕ್ಚರಿಂಗ್‌ನಲ್ಲಿ ತೊಡಗಿಕೊಂಡಿದ್ದರೆ, ಇಂದು ಅದರ ಪ್ರಮಾಣ ಸುಮಾರು 5% ಮಟ್ಟಿಗೆ ಇಳಿದಿದೆ.  ಒಂದು ಕಾಲದಲ್ಲಿ Ford ಅಂಥ ಕಂಪನಿಗಳು ತಮ್ಮ supply chainನಲ್ಲಿ ಬರುವ ಎಲ್ಲ ವಿಧವಾದ ಪರಿಕರ/ವಸ್ತುಗಳನ್ನು ತಮ್ಮಷ್ಟಕ್ಕೆ ತಾವೇ ತಯಾರಿಸುತ್ತಿದ್ದರು.  ಆದರೆ, ಈಗ ಅವರ ಮುಖ್ಯವಾದ components (such as engine parts) ಸಹ ಬೇರೆ ಕಡೆಯಿಂದ ಆಮದಾಗುವ ಪರಿಸ್ಥಿತಿ ಇದೆ.

ಮ್ಯಾನ್ಯುಫ್ಯಾಕ್ಚರಿಂಗ್ ವಲಯದಲ್ಲಿರುವ ಕೆಲಸಗಾರರು ಅಮೇರಿಕದಲ್ಲಿ ಒಂದು ಘಂಟೆಗೆ 20 ಡಾಲರ್‌ ಅಷ್ಟುಸಂಬಳದಲ್ಲಿ ಕೆಲಸ ಮಾಡುವ ಸ್ಥಿತಿ ಇದೆ.  ಇದು, ಇಲ್ಲಿನ ಕನಿಷ್ಠ ವೇತನದ ಮೂರು ಪಟ್ಟು ಹೆಚ್ಚು ಎಂದುಕೊಳ್ಳಬಹುದು.  ಅದೇ ಗುಣಮಟ್ಟದ ವಸ್ತುಗಳು, ಹೊರದೇಶದಿಂದ ಕಡಿಮೆ ಬೆಲೆಗೆ ಸಿಗುವಂತೆ (ವಿಶೇಷವಾಗಿ ಚೀನಾದಿಂದ) ಆಮದಾಗುವ ಪರಿಸ್ಥಿತಿ ಇರುವುದಾದರೆ ಇಲ್ಲಿ ಮ್ಯಾನ್ಯುಫ್ಯಾಕ್ಚರಿಂಗ್ ಹೇಗೆ ಉಳಿಯುತ್ತದೆ? ಹೇಗೆ ಬೆಳೆಯುತ್ತದೆ?

***

ಸಾಮಾನ್ಯ ಜನರ ಅನುಕೂಲ: ತೊಂಭತ್ತರ ದಶಕದ ಕೊನೆಯಲ್ಲಿ ಭಾರತದ ಬ್ಯಾಂಕುಗಳಿಗೆ ನಿಧಾನವಾಗಿ ಕಂಪ್ಯೂಟರುಗಳು ನುಸುಳತೊಡಗಿದಾಗ ನಮ್ಮನಮ್ಮಲ್ಲಿ ವಾದ-ವಿವರಣೆಗಳು ನಡೆಯುತ್ತಿದ್ದವು.  ಒಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ಕೆಲಸವನ್ನು ನುಂಗಿ ಹಾಕುತ್ತವೆ ಎಂದೂ, ಇನ್ನೊಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ದಕ್ಷತೆಯನ್ನೂ (efficiency), ಜನರ ಕೆಲಸದ ನಿಖರತೆಯನ್ನೂ (accuracy) ಹೆಚ್ಚಿಸುತ್ತವೆ ಎಂದೂ ವಾದವನ್ನು ಮಂಡಿಸುತ್ತಿದ್ದೆವು.  ಆಗಿನ ಕಾಲವೆಲ್ಲ ದಪ್ಪನಾದ ಲೆಡ್ಜರುಗಳ ಕಾಲ, ಎಲ್ಲಿ ನೋಡಿದರೂ ಅಲ್ಲಿ ಪೇಪರುಗಳದ್ದೇ ದರಬಾರು, ಅವುಗಳದ್ದೇ ಕಾರುಬಾರು.

ನಂತರ ಕಂಪ್ಯೂಟರುಗಳು ನಿಧಾನವಾಗಿ ಎಲ್ಲ ಕಡೆಗೆ ಹರಡಿಕೊಂಡ ಮೇಲೆ ನಾವೆಲ್ಲರೂ ಅದರ ಅನುಕೂಲವನ್ನು ಪಡೆದಿದ್ದೇವೆ.  ಆದರೆ, ಕಂಪ್ಯೂಟರುಗಳು ಬಂದ ನಂತರ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಡಿಮೆ ಏನೂ ಆಗಿಲ್ಲ.  ಬ್ಯಾಂಕುಗಳು ಬೆಳೆದಂತೆ, ಬ್ರ್ಯಾಂಚುಗಳು ಹೆಚ್ಚಾದವು, ಎಟಿಎಮ್ ಮಿಷೀನುಗಳು ಎಲ್ಲ ಕಡೆ ತಲೆ ಎತ್ತಿದವು.  ಮುಂದೆ ಕ್ರೆಡಿಟ್ ಕಾರ್ಡ್, ನಂತರದಲ್ಲಿ ಆನ್‌ಲೈನ್ ಪೇಮೆಂಟ್, ಪೇಟಿಎಮ್ ನಂತಹ ಸೇವೆಗಳು ಬಂದು ಹಣ ವಿಲೇವಾರಿ ತ್ವರಿತವಾಯಿತು.  ಹಣದುಬ್ಬರ (inflation) ಹೆಚ್ಚಾದಂತೆ ಪ್ಯಾಂಟ್ ಜೇಬಿನಲ್ಲಿ ತೆಗೆದುಕೊಂಡು ಹೋಗುವ ಹಣ ಯಾವ ಕೆಲಸಕ್ಕೂ ಸಾಕಾಗದೇ ರಾಶಿ ರಾಶಿ ಹಣವನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಅಲ್ಲಿಂದಿಲ್ಲಿಗೆ ವಹಿವಾಟು ನಡೆಸುವಂತಾಯಿತು.  ಈ ಅನುಕೂಲಗಳೆಲ್ಲ ಒಂದು ರೀತಿಯಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆದ ಅವಿಷ್ಕಾರಗಳಿಂದಲೇ ಸಾಧ್ಯವಾದದ್ದು.

ಸಿರಿವಂತರ ನೋವು: ಯಾವುದಾದರೂ ಹಳೆಯ ಕನ್ನಡ ಸಿನಿಮಾಗಳನ್ನೋ ಅಥವಾ ಫೋಟೋಗಳನ್ನೋ ನೀವು ನೋಡಿದರೆ ಒಂದಂತೂ ನಿಮಗೆ ಗ್ಯಾರಂಟಿಯಾಗುತ್ತದೆ.  ನಾವು ನೋಡಿದ ಎಂಭತ್ತರ ದಶಕದಲ್ಲಿ ಟ್ರಾಫಿಕ್ ಜಾಮ್ ಅನ್ನೋ ಪರಿಸ್ಥಿತಿ ಇರುತ್ತಲೇ ಇರಲಿಲ್ಲ.  ಊರಿನಲ್ಲಿ ಕೆಲವೇ ಕೆಲವು ಮನೆಗಳಿಗೆ ಫೋನ್ ಕನೆಕ್ಷನ್ ಇರುತ್ತಿತ್ತು.  ದೂರದ ಊರುಗಳಿಂದ ಟ್ರಂಕ್ ಕಾಲ್ ಮಾಡಿ ಕರೆ ಮಾಡಬೇಕಿತ್ತು.  ಅದರ ಜೊತೆಗೆ ಊರಿನಲ್ಲಿ ನಿಗದಿತ ಸಮಯಕ್ಕೆ ಹೋಗಿ ಬರುತ್ತಿದ್ದ ಬಸ್ಸುಗಳು, ಆಗಾಗ್ಗೆ ಬಂದು ಹೋಗುತ್ತಿದ್ದ ಲಾರಿಗಳನ್ನು ಬಿಟ್ಟರೆ ಕೇವಲ ಶ್ರೀಮಂತರ ಮನೆಯ ಕಾರುಗಳಿಗೆ ರಸ್ತೆಗಳು ಮೀಸಲಾಗಿದ್ದವು. ಕೇವಲ ಹಳ್ಳಿಗಳಷ್ಟೇ ಏಕೆ, ಜಿಲ್ಲಾ ಕೇಂದ್ರಗಳೂ, ಬೆಂಗಳೂರಿನಲ್ಲೂ ಸಹ ಅಷ್ಟೊಂದು ಕಾರುಗಳು ಓಡಾಡುತ್ತಿರಲಿಲ್ಲ.  ಕಾರು ಇಟ್ಟುಕೊಂಡವರಿಗೆ ಯಾವತ್ತೂ ಪಾರ್ಕಿಂಗ್ ಸಮಸ್ಯೆ ಬಂದುದನ್ನು ನಾನು ನೋಡಿಲ್ಲ, ಕೇಳಿಲ್ಲ.

ಈಗ ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಳಲ್ಲಿ ಕಾರು ಇದೆ.  ಕೆಲವೊಂದು ಮನೆಗಳಲ್ಲಿ ಕಾರುಗಳನ್ನು ನಿಲ್ಲಿಸಲು ಜಾಗವಿರದಿದ್ದರೂ ಅವರ ಹತ್ತಿರ ಕನಿಷ್ಠ ಒಂದಾದರೂ ಕಾರು ಇರುವುದು ಸಾಮಾನ್ಯವಾಗಿದೆ.  ದೇಶದ ಉದ್ದಗಲಕ್ಕೂ ಇಂದು ಕಾರುಗಳ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ.  ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಕಳೆದ ನಲವತ್ತು ವರ್ಷಗಳಲ್ಲಿ ಬೆಂಗಳೂರು ನಗರ ಒಂದರಲ್ಲಿಯೇ ವಾಹನಗಳ ಪ್ರಮಾಣ 6000% ದಷ್ಟು ಏರಿರುವುದನ್ನು ಕಾಣಬಹುದು.

ಊರು-ಕೇರಿಯ ರಸ್ತೆಗಳು ಕೇವಲ ಸಿರಿವಂತರಿಗೆ ಮಾತ್ರ ಎನ್ನುವಂತಿದ್ದ ಒಂದು ಕಾಲಕ್ಕೂ ಈಗಿನ ಎಲ್ಲರೂ ರಸ್ತೆ ಮೇಲೆ ತಮ್ಮ ಸವಾರಿಯನ್ನು ಚಲಾಯಿಸುತ್ತಿರುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ.  ಇದರಿಂದ ಸಾಮಾನ್ಯ ಜನರಿಗಂತೂ ಅನುಕೂಲವೇ ಸರಿ, ಆದರೆ ಆಗಿನ ಸಿರಿವಂತರು ತಮ್ಮ ವಿಶೇಷವಾದ ಸೌಲಭ್ಯವನ್ನು ಕಳೆದುಕೊಂಡರು ಎನ್ನುವುದು ನನ್ನ ಅಭಿಪ್ರಾಯ.

***
ಇಂದಿನ ಚಿಕ್ಕದಾದ ಕುಟುಂಬಗಳಲ್ಲಿ ದಿನನಿತ್ಯದ ಕೆಲಸ ಕಾರ್ಯಗಳನ್ನು ಪೂರೈಸುವಲ್ಲಿ ಮೆಷೀನುಗಳ ಪಾತ್ರ ಇರುವುದು ಹಿರಿದಾಗಿದೆ.  ನಗರದ  ಹೆಚ್ಚಿನ ಮನೆಗಳಲ್ಲಿ ಇಂದು ವಾಷಿಂಗ್ ಮೆಷೀನ್ ನುಸುಳಿದೆ.  ಸೋಲಾರ್ ಪವರ್‌ನಿಂದ ನೀರು ಕಾಯಿಸಿಕೊಳ್ಳುವ ಅನೇಕರು ಸ್ವಿಚ್ ಹಾಕಿದರೆ ಬಿಸಿ ನೀರು ಪಡೆಯುವ ಸ್ಥಿತಿಯನ್ನು ಕಾಣಬಹುದು.  ನೆಲವನ್ನು ಗುಡಿಸಲು, ಪಾತ್ರೆ ತೊಳೆಯಲು ಮತ್ತು ಬಟ್ಟೆ ಒಗೆಯಲು ಪ್ರತಿದಿನ ಕೆಲಸಕ್ಕೆ ಬಂದು ಹೋಗುವವರು ಸಿಗುತ್ತಾರೆ.  ತಿಂಗಳಿಗೆ ಇಷ್ಟು ಎನ್ನುವ ನಿಗದಿತ ಸಂಬಳಕ್ಕೆ ಕೆಲಸ ಮಾಡುವ ಇವರುಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ವಟಾರದ ಒಂದಿಷ್ಟು ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನವನ್ನು ಸಾಗಿಸುತ್ತಾರೆ.  ಹೆಚ್ಚಿನವರಿಗೆ ಒಳ್ಳೆಯ ಉತ್ಪನ್ನವೂ ಇರುವುದು ಕೇಳಿ ಬರುತ್ತದೆ.  ಇನ್ನು ಮನೆಯ ಚಿಕ್ಕ-ಪುಟ್ಟ ಕೆಲಸಗಳ ಜೊತೆಗೆ ಮನೆ ಮಂದಿಗೆ ಅಡುಗೆ ಮಾಡಿಕೊಂಡು ಹೋಗುವುದು ಮನೆಯವರ ಕೆಲಸ.  ಅದರಲ್ಲೂ ಸಹ ನ್ಯೂಕ್ಲಿಯರ್ ಫ್ಯಾಮಿಲಿಗಳಿಗೆ ತೊಂದರೆ ಹೆಚ್ಚು, ಎಲ್ಲದಕ್ಕೂ ಗಂಡ ಹೆಂಡತಿ ಹೊಂದಿಕೊಂಡು ಹೋಗಬೇಕಾಗುತ್ತದೆ.  ಇನ್ನು ಮನೆಯಲ್ಲಿ ಹಿಂದಿನ ತಲೆಮಾರಿನ ಹಿರಿಯರು ಯಾರಾದರೂ ಇದ್ದರೆ, ಅಡುಗೆಯ ಕೆಲಸದಲ್ಲಿ, ಮಕ್ಕಳನ್ನು ನೋಡಿಕೊಳ್ಳಲು ಸಾಕಷ್ಟು ನೆರವಾಗುತ್ತದೆ.  ನೂರು ಕೋಟಿಗಿಂತಲೂ ಹೆಚ್ಚು ಜನರಿರುವ ಭಾರತದಲ್ಲಿ ಎಲ್ಲರ ಮನೆಯೂ ಹೀಗೆ ಎಂದು ನಿರ್ದಿಷ್ಟವಾಗಿ ಹೇಳಲಾಗದು.  ಆದರೆ, ಸೀನಿಯರ್ ಸಿಟಿಜನ್ಸ್ ಜನಸಂಖ್ಯೆ ಹೆಚ್ಚುತ್ತಿರುವ ಭಾರತದಲ್ಲಿ ವ್ಯವಸ್ಥೆ ಅಷ್ಟೊಂದು ಮುಂದುವರೆದ ಹಾಗಿಲ್ಲ.  ಇವತ್ತಿಗೂ ಹೆಚ್ಚಿನ ವೃದ್ಧ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ನಂಬಿಕೊಂಡಿರುವುದು ಕಂಡು ಬರುತ್ತದೆ.  ಇಂಥವರ ಪೋಷಣೆಗೆ ಅದರಲ್ಲೂ ಖಾಯಿಲೆ ಬಿದ್ದಿರುವ ಹಿರಿಯರಿಗೆ ದಿನನಿತ್ಯದ ನೆರವಿಗೆ ಕೆಲಸಗಾರರು ಸಿಗುತ್ತಿಲ್ಲ.

ಸೀನಿಯರ್ ಸಿಟಿಜನ್ಸ್‌ಗಳನ್ನು ನೋಡಿಕೊಳ್ಳುವುದು ಬಹಳ ಸೂಕ್ಷ್ಮ ಹಾಗೂ ಕಷ್ಟದ ಕೆಲಸ.  ಬಹಳಷ್ಟು ಜನರಿಗೆ ಒಂದಲ್ಲ ಒಂದು ರೀತಿಯ ಖಾಯಿಲೆ ಬಾಧಿಸುತ್ತಿರುತ್ತದೆ.  ಅವರ ಪ್ರಿನ್ಸಿಪಲ್ಸ್, ಅವರಿಗೆ ಬೇಕಾದ ಊಟ-ತಿಂಡಿ ಅಗತ್ಯಗಳು, ಅವರ ಮನರಂಜನೆ, ಇತ್ಯಾದಿ ಇವೆಲ್ಲವೂ ಬೇರೆಯ ಒಂದು ಆಯಾಮವನ್ನೇ ಪಡೆದುಕೊಂಡಿರುತ್ತವೆ.  ಹೀಗಿರುವಾಗ ಮನೆಯಲ್ಲಿ ಯಾರಿಗಾದರೊಬ್ಬರಿಗೆ ಗಂಭೀರ ಸ್ವರೂಪದ ಖಾಯಿಲೆ ಏನಾದರೂ ಬಂದರೆ, ಅವರನ್ನು ಸಂತೈಸುವುದು ಬಹಳ ಕಷ್ಟದ ವಿಷಯವಾಗುತ್ತದೆ... ಈ ನಿಟ್ಟಿನಲ್ಲಿ ಭಾರತದುದ್ದಕ್ಕೂ ವೃದ್ಧಾಶ್ರಮಗಳು ಅಷ್ಟೊಂದು ಬೆಳೆಯದಿದ್ದರೂ ಇನ್ನು ಮುಂದೆ ಬೆಳೆಯುವುದನ್ನು ಊಹಿಸಬಹುದು. 

ಆದರೆ, ಇತ್ತೀಚೆಗೆ ಮನೆಗಳಲ್ಲಿ ಕೆಲಸ ಮಾಡಲು ಸಿಗುವವರು "ನಿಯತ್ತಿ"ನಿಂದ ಕೆಲಸ ಮಾಡೋದಿಲ್ಲ ಎನ್ನುವ ಆರೋಪಗಳು ಸಾಕಷ್ಟು ಕೇಳಿ ಬರುತ್ತವೆ.  ಯುವ ಜನತೆ ಯಾವಾಗಲೂ ತಮ್ಮ ತಮ್ಮ ಮೊಬೈಲು ಫೋನುಗಳಿಗೆ ಶರಣಾಗಿರುತ್ತಾರೆ.  ಹಿಂದಿನ ಕಾಲದವರ ಹಾಗೆ ನಿಯತ್ತಿನಿಂದ ನಡೆದುಕೊಳ್ಳೋದಿಲ್ಲ, ಕೆಲಸಗಳ್ಳರು, ಯಾವಾಗಲೂ ಸಬೂಬುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರೆಯೇ ಹೊರತು ವಹಿಸಿಕೊಂಡ ಕೆಲಸವನ್ನು ಮೈಬಗ್ಗಿಸಿ ಮಾಡೋದಿಲ್ಲ.  ಹೀಗೆ ಅನೇಕ ಹೇಳಿಕೆಗಳನ್ನು ಕೇಳುವುದು ಸಾಮಾನ್ಯವಾಗಿದೆ.  ಎಲ್ಲರೂ ಐಶಾರಾಮಿ ಬದುಕಿನ ಕನಸನ್ನು ಕಂಡು ಅದರಲ್ಲೇ ಬದುಕುವ ಹಾಗಿದ್ದರೆ, ಈ ಐಶಾರಾಮಿತನಕ್ಕೆ ಅರ್ಥವೂ ಬರೋದಿಲ್ಲ. ಜೊತೆಗೆ ಅದು ಸೃಷ್ಟಿಸುವ "ಟ್ರಾಫಿಕ್ ಜಾಮ್" ಕೂಡಾ ಭೀಕರವಾಗಿರುತ್ತದೆ.  ಊರಿನಲ್ಲಿ ಕೆಲವೇ ಕೆಲವು ಕಾರುಗಳಿದ್ದಾಗ ಹೇಗೆ ಒಂದು ವ್ಯವಸ್ಥೆ ಚಾಲನೆಯಲ್ಲಿತ್ತೋ, ಅದೇ ವ್ಯವಸ್ಥೆ ಊರಿನ ಪ್ರತಿಯೊಬ್ಬರೂ ಸಮತೋಲಿತದವರಾದಾಗ ಸಂತುಲನ (equilibrium) ವನ್ನು ಕಳೆದುಕೊಳ್ಳುತ್ತದೆ.  ಯಾರಿಗೂ ಯಾವ ಕೆಲಸವನ್ನೂ ಮಾಡಿಕೊಡಲು ಯಾರೂ ಸಿಗದೇ ಹೋಗುವ ಪರಿಸ್ಥಿತಿ ಬರುತ್ತದೆ.  ಕಿತ್ತ ಚಪ್ಪಲಿಗಳನ್ನು ದುರಸ್ತಿ ಮಾಡಿಸುವುದಾಗಲೀ, ಬಟ್ಟೆಯನ್ನು ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳುವುದಾಗಲೀ ಕಡಿಮೆಯಾಗಿ ಎಲ್ಲರೂ ದಿನದಿನಕ್ಕೂ "ಹೊಸ"ತನ್ನು ನಂಬಿಕೊಳ್ಳುವ ಗ್ರಾಹಕ ಪ್ರವೃತ್ತಿ (consumerism) ಬೆಳೆಯುತ್ತದೆ.  ಅದರಿಂದ ಎಕಾನಮಿ ದೊಡ್ಡದಾಗುತ್ತದೆ ಎಂದು ಎಷ್ಟೋ ಜನ ತಮ್ಮ ತತ್ವಗಳನ್ನು ಮಂಡಿಸಬಹುದು.  ಆದರೆ, ಅದರಿಂದ ನಾವು ಅನೇಕ ವ್ಯತಿರಿಕ್ತ ಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ.

ಹೀಗೆ ತಲೆಮಾರಿನಿಂದ ತಲೆಮಾರಿಗೆ ಪ್ರತಿಯೊಬ್ಬರೂ "ಸಿರಿವಂತ"ರಾಗುತ್ತಲೇ ಇದ್ದಾರೆ... ಆದರೆ, ಸಿರಿವಂತರೆನ್ನುವುದು ಒಂದು ತುಲನಾತ್ಮಕ ಹಣೆಪಟ್ಟಿ ಅಷ್ಟೇ.

Saturday, April 18, 2020

ದೊಡ್ಡ ನೋವಿನ ಮುಂದೆ...

ದೊಡ್ಡ ನೋವಿನ ಮುಂದೆ ಚಿಕ್ಕ-ಚಿಕ್ಕ ನೋವುಗಳು ತಮ್ಮಷ್ಟಕ್ಕೆ ತಾವೇ ಮಾಯವಾಗುತ್ತವೆ ಎನ್ನುವ ಹಾಗೆ... ಇತ್ತೀಚೆಗೆ ನಮ್ಮ ಮೆಡಿಕಲ್ ಫೆಸಿಲಿಟೀಸ್ ಮತ್ತು ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತ ರೋಗಿಗಳದ್ದೇ ಹೆಚ್ಚಿನ ಪಾಲು.  ಅಂದಂತೆ ಎಲ್ಲ ಕಡೆ ಹೆಚ್ಚು ಹೆಚ್ಚು ಹಾಸಿಗೆಗಳು ಇರುವ ಆಸ್ಪತ್ರೆಗಳನ್ನು ಸಮರೋಪಾದಿಯಲ್ಲಿ ತೆರೆಯಲಾಗಿದೆ.  ದೊಡ್ಡ ಕನ್ವೆನ್ಷನ್ ಸೆಂಟರುಗಳಲ್ಲಿ ಈಗಾಗಲೇ ಅನೇಕ ರೋಗಿಗಳನ್ನು ಒಟ್ಟೊಟ್ಟಿಗೆ ಏಕಕಾಲಕ್ಕೆ ನೋಡುವಂತೆ ಮುಂಜಾಗರೂಕತೆಯನ್ನು ಕೈಗೊಳ್ಳಲಾಗಿದೆ.  ನಮ್ಮ ಹತ್ತಿರದಲ್ಲಿರುವ ನ್ಯೂ ಯಾರ್ಕ್‌ ನಗರದಲ್ಲಿ ಜಾವಿಟ್ಸ್ ಸೆಂಟರ್‌ ಅನ್ನು ಈಗಾಗಲೇ ಆಸ್ಪತ್ರೆಯಾಗಿ ಬದಲಾಯಿಸಲಾಗಿದ್ದು ಸುಮಾರು 2500 ಜನರನ್ನು ಏಕಕಾಲಕ್ಕೆ ನೋಡುವಷ್ಟು ಅನುಕೂಲ ಕಲ್ಪಿಸಿಕೊಟ್ಟಿದ್ದರೂ ಅದರ ಕಾಲು ಭಾಗವೂ ಇನ್ನೂ ತುಂಬಿಲ್ಲ.  ಯು.ಎಸ್. ನೇವಿ  ಹಾಸ್ಪಿಟಲ್ ಶಿಪ್ "ಕಂಫರ್ಟ್" ಇನ್ನೂ ಖಾಲಿ ಇದೆ.  ಈ ನಿಟ್ಟಿನಲ್ಲಿ, ನ್ಯೂ ಯಾರ್ಕ್ ಮೇಯರ್ ಮತ್ತು ಗವರ್ನರುಗಳು ಸುಕಾ ಸುಮ್ಮನೇ ಆರ್ತನಾದ ಹೊರಡಿಸಿದರೇ? ಎನ್ನುವುದು ಇನ್ನೊಂದು ದಿನದ ಪ್ರಶ್ನೆ!

ಈ ಕೊರೋನಾ ವೈರಸ್ ಹಾವಳಿಯಿಂದ ಒಂದಂತೂ ಗ್ಯಾರಂಟಿ - ಯಾರು ಯಾರಿಗೆ ತಡೆದುಕೊಳ್ಳಬಲ್ಲ ಖಾಯಿಲೆ ಇದೆಯೋ ಅವರು ಯಾರೂ ಆಸ್ಪತ್ರೆಯ ಬಳಿ ಸುಳಿಯುತ್ತಿಲ್ಲ.  ಎಲ್ಲ ಎಲೆಕ್ಟಿವ್ ಸರ್ಜರಿಗಳು ಮುಂದೂಡಲ್ಪಟ್ಟಿವೆ.  ಒಂದು ಮಾಹಿತಿಯ ಪ್ರಕಾರ, ಕೇವಲ ಕ್ರಿಟಿಕಲ್ ಪೇಷಂಟ್‌ಗಳನ್ನು ಮಾತ್ರ ಆಡ್ಮಿಟ್ ಮಾಡಿಕೊಳ್ಳಲಾಗುತ್ತಿದೆ, ಉಳಿದವರನ್ನು ಹೊರಗೇ ಟ್ರೀಟ್ ಮಾಡಿ ಮನೆಗೆ ಕಳಿಸುತ್ತಿದ್ದಾರೆ.  ಕ್ರಿಟಿಕಲ್ ಪೇಷಂಟ್ ಎಂದರೆ ಹಾರ್ಟ್‌ಅಟ್ಯಾಕ್, ಸ್ಟ್ರೋಕ್, ಮೊದಲಾದ ಜೀವಕ್ಕೆ ಅಪಾಯ ತಂದೊಡ್ಡುವ ಖಾಯಿಲೆ ಇರುವ ರೋಗಿಗಳು ಎಂದರ್ಥ.

***
ನಮ್ಮ ಆಸ್ಪತ್ರೆಗಳಿಗೆ ಮೊದಲೆಲ್ಲ ಅಂದರೆ ದಿನದಲ್ಲಿ ಒಂದಿಷ್ಟು ಮೋಟಾರು ವೆಹಿಕಲ್ ಅಫಘಾತದ ಕೇಸುಗಳು ಬರುತ್ತಿದ್ದವು.  ಎಲೆಕ್ಟಿವ್ ಸರ್ಜರಿ ಕೇಸುಗಳು ಬರುತ್ತಿದ್ದವು.  ಏನಿಲ್ಲವೆಂದರೂ "ರುಟೀನ್ ಟೆಸ್ಟ್" ಎಂದುಕೊಂಡು, ಬಂದ ಪೇಷೆಂಟುಗಳಿಗೆ ತಲೆನೋವಿಂದ ಕಾಲು ನೋವಿನವರೆಗೆ ಅನೇಕ ಟೆಸ್ಟ್‌ಗಳನ್ನು ಮಾಡುವ ವ್ಯವಸ್ಥೆ ಇತ್ತು.  ಅದನ್ನು ಅವಲಂಬಿಸಿ ದೊಡ್ಡದೊಂದು ಬಿಸಿನೆಸ್ ವಾತಾವರಣ ನಿರ್ಮಾಣಗೊಂಡಿತ್ತು.

ಈ ಕೊರೋನಾ ವೈರಸ್‌ನ ದೆಸೆಯಿಂದಾಗಿ ಅವೆಲ್ಲ ಈಗ ಕಡಿಮೆಯಾಗಿದೆ.  ಲಾಭ ಮಾಡುವುದೇ ತಮ್ಮ ಧ್ಯೋತಕ ಎಂಬಂತೆ (ಭಾರತದಲ್ಲಿ) ನಾಯಿಕೊಡೆಗಳಂತೆ ಎದ್ದು ನಿಂತ ಅನೇಕ ನರ್ಸಿಂಗ್ ಹೋಮ್‌ಗಳು ಇವತ್ತು ಖಾಲಿಯಾಗಿವೆ.  ಅದೇ ರೀತಿ ಅಮೇರಿಕದಲ್ಲೂ ಸಹ, ಎಲ್ಲ ಕಡೆ ಕೋವಿಡ್ ಮಯವಾದ್ದರಿಂದ ಆಸ್ಪತ್ರೆಗಳು ಹಾಗೂ ಅದಕ್ಕೆ ಹೊಂದಿಕೊಂಡ ಹಲವಾರು ಸರ್ವಿಸ್ ಪ್ರೊವೈಡರುಗಳಿಗೆ ಅವರ ಆದಾಯಕ್ಕೇ ಸಂಚಕಾರ ಬಂದಿದೆ.

ಇನ್ನು ಕೋವಿಡ್ ಗಲಾಟೆ ಭರಾಟೆ ಎಲ್ಲ ಮುಗಿದ ಮೇಲೆ, ನಮ್ಮ ನಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ಧೀರ್ಘಕಾಲೀನವಾಗಿ ಏನೇನು ಪರಿಣಾಮಗಳು ಬೀರುತ್ತವೆಯೋ? ಅವನ್ನೆಲ್ಲ ನಾವು ಕಾದು ನೋಡಬೇಕು.

ಒಟ್ಟಿನಲ್ಲಿ, ಕೋವಿಡ್ ನಮ್ಮನ್ನು ಕೊಳ್ಳುಬಾಕತನದಿಂದ ದೂರವಿರಿಸಿ, ಉತ್ತಮ ಹಾಗೂ ಸಮತೋಲಿತ ಆಹಾರ ಸೇವನೆಯತ್ತ ಗಮನ ಕೊಡುವಂತೆ ಮಾಡಿ, ನಮ್ಮ ನಮ್ಮ ಸಂಬಂಧಗಳ ಸುಧಾರಣೆಗೆ ಆದ್ಯತೆಯನ್ನು ಹೆಚ್ಚಿಸಿ, ಇನ್ನೆಂದಿಗೂ ನಮ್ಮ ಸರ್ವತೋಮುಖ ಆರೋಗ್ಯವನ್ನು ನಾವೆಲ್ಲ ಜೋಪಾನ ಮಾಡಿಕೊಳ್ಳುವಂತೆ ಪಾಠ ಕಲಿಸಿದೆಯೆಲ್ಲ... ಅದರಿಂದಲಾದರೂ ನಮ್ಮ ಹೆಲ್ತ್‌ಕೇರ್ ವ್ಯವಸ್ಥೆ ಎಲ್ಲರ ಒಳಿತನ್ನು ಗಮನದಲ್ಲಿಟ್ಟುಕೊಂಡು ಸುಧಾರಿಸಲಿ!

Wednesday, April 15, 2020

ಬದಲಾದವರು ಯಾರು?

ಹಾಳಾದ ವೈರಸ್ಸು ನಮ್ಮನ್ನೆಲ್ಲ ಹಗಲೂ-ರಾತ್ರಿ ತನ್ನ ಧ್ಯಾನದಲ್ಲೇ ತೊಡಗಿಸಿರುವಂತೆ ಮಾಡಿರುವುದೂ ಅಲ್ಲದೇ, ವಿಶ್ವದಾದ್ಯಂತ ಅನೇಕ ಹಸಿದ ಹೊಟ್ಟೆಗಳನ್ನೂ, ಸಾವು-ನೋವಿನ ಕಣ್ಣೀರ ಕೋಡಿಯನ್ನೂ ಹರಿಸಿರುವುದು ನಿಜ.  ಈ ವೈರಸ್ಸಿನ ಭೀತಿ ಒಂದು ರೀತಿಯ ಕಾಡ್ಗಿಚ್ಚಿನಂತೆ ಎಲ್ಲ ಕಡೆಗೆ ಹರಡಿದ್ದು, ಇದು ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ಭಸ್ಮವನ್ನಾಗಿಸಿ, ಆ ಜಾಗದಲ್ಲಿ ಮತ್ತೆ ಹೊಸ ಹುಟ್ಟುಗಳನ್ನು ಕಾಣಬಹುದು.  ಕೆಲವರು ಈ ವೈರಸ್ಸಿನಿಂದ ಬದುಕಿಗೆ ಆಗಿ ಮಿಗುವಷ್ಟು ಪಾಠ ಕಲಿಯುತ್ತಾರೆ, ಇನ್ನು ಕೆಲವರು ತಮಗೇನೂ ಆಗೇ ಇಲ್ಲ, ಈ ಸೃಷ್ಟಿಯ ಸೌಲಭ್ಯಗಳು ಇರುವುದೇ ನಮ್ಮ ಪೋಷಣೆಗಾಗಿ ಎಂದುಕೊಳ್ಳುವವರೂ ಇದ್ದಾರೆ.  ದೂರದ ಸ್ನೇಹಿತರು, ನೆಂಟರು-ಇಷ್ಟರನ್ನು ಮಾತನಾಡಿಸಲು ಇದು ಸಕಾಲ.  ಸಂಜೆಯ ವೇಳೆ (ಆಫೀಸಿನ ಅವಧಿ ಮುಗಿದ ಮೇಲೆ), ವಾರಾಂತ್ಯದಲ್ಲಿ ಎಲ್ಲರೂ ಕೂಡ ಗೊಂದಲವಿಲ್ಲದೇ ಹೆಚ್ಚು ಕಾಲ ಫೋನ್ ಅಥವಾ ವಿಡಿಯೋ ಸಂಭಾಷಣೆಯಲ್ಲಿ ಸಿಗುವುದು ಇತ್ತೀಚಿನ ಒಂದು ಬದಲಾವಣೆ ಎನ್ನಬಹುದು.  ನಮ್ಮ ಪರಿವಾರದವರಿಗೆ ನಾವು ಕಷ್ಟಕಾಲದಲ್ಲಿ ಆಗಿ ಬರಲಿಲ್ಲ ಎನ್ನುವ ವ್ಯಥೆ ಒಮ್ಮೊಮ್ಮೆ ಬಾಧಿಸುತ್ತಾದರೂ, ಮರುದಿನ ಫೋನ್‌ನಲ್ಲಿ ಮಾತನಾಡಿದಾಗ ಮನಸ್ಸು ಹಗುರವಾಗುತ್ತದೆ.  ಕಾಲ ಎಲ್ಲರನ್ನೂ ಬದಲಾಗಿಸುತ್ತದೆ... ಅದರಲ್ಲೂ ದೇಶ-ಭಾಷೆ-ಬಂಧುಗಳನ್ನು ಬಿಟ್ಟು ದೂರ ಬಂದ ನಾವುಗಳು ಹೆಚ್ಚು ಬದಲಾಗಿದ್ದೇವೆ ಎಂದು ಅನಿಸುತ್ತದೆ.

***

ಕಳೆದ ವರ್ಷ ಭಾರತಕ್ಕೆ ಹೋಗಿದ್ದಾಗ ನಮ್ಮ ಹಳೆಯ ಸಂಬಂಧಿಕರೆನ್ನೆಲ್ಲ ನೋಡಿ ಮಾತನಾಡಿಸುವ ಅವಕಾಶವೊಂದು ಬಂದಿತ್ತು. ಭಾರತದ ಬೇರುಗಳನ್ನು ಬಿಟ್ಟು ಬಂದವರಿಗೆ ಈ ರೀತಿಯ ಸುಯೋಗಗಳು ಸಿಗುವುದು ಅಪರೂಪವಷ್ಟೇ. ನಾವು ಎಷ್ಟೇ ದೂರದಿಂದ ಫೋನಿನಲ್ಲಿ ಮಾತನಾಡಿದರೂ ಹತ್ತಿರ ಕುಳಿತು, ಪರಸ್ಪರ ಭೇಟಿಯಾಗಿ ಮಾತನಾಡುವ ಅನುಕೂಲ ಸುಖಕ್ಕೆ ಯಾವ ರೀತಿಯಲ್ಲೂ ತಾಳೆ ನೋಡಲಾಗದು. ಇತ್ತೀಚಿನ ತಂತ್ರಜ್ಞಾನದ ಉನ್ನತಿಯ ದೆಸೆಯಿಂದ ಅಪರೂಪಕ್ಕೊಮ್ಮೆ ವೀಡಿಯೋ ಕಾಲ್ ಮಾಡಿದರೂ ಸಹ ಅದೂ ಕೂಡ ಪರಸ್ಪರ ಭೇಟಿಯ ಅನುಭವವನ್ನು ಕೊಡಲು, 8000 ಮೈಲಿಯ ದೂರದ ಅಂತರದಲ್ಲಿ ಸೋಲುತ್ತದೆ ಎಂದೇ ಹೇಳಬೇಕು. ನಮ್ಮ ಸಹಪಾಠಿಗಳು, ಸ್ನೇಹಿತರು ನೆಂಟರು, ಇಷ್ಟರು, ಬಂಧು-ಬಳಗದವರು ಇವರನ್ನೆಲ್ಲ ಲೆಕ್ಕ ಹಾಕಿದರೆ ಸುಮಾರು ಎರಡು ಸಾವಿರ ಜನರಷ್ಟಾಗಬಹುದು. ನಮ್ಮ ಮದುವೆಗಳಲ್ಲಿ ಏನಿಲ್ಲವೆಂದರೂ ಒಂದು ಸಾವಿರ ಜನರಾದರೂ ಬಂದಿರುತ್ತಾರಲ್ಲ?

ಹೀಗೇ ಒಂದು ಭೇಟಿಯಲ್ಲಿ, ನಮ್ಮ ಹಿರಿಯ ತಲೆಗಳನ್ನು ನೋಡಿ ಮಾತನಾಡಿಸುವ ಸುಯೋಗ ಬಂದಿತ್ತು. ನಾನು ಅವರುಗಳ ಮನೆಗೆ ಹೋದಾಗ ಅವರು ನನ್ನನ್ನು ’ಅತಿಥಿ’ಯಾಗಿ ನೋಡಿಕೊಳ್ಳುವ ರೀತಿಯಲ್ಲಿ ಅನೇಕ ಹೊಸತುಗಳಿದ್ದವು. ದೂರದಿಂದ ಬಂದಿದ್ದಾನೆ ಎಂದು ಒಂದಿಷ್ಟು ಉಪಚಾರಗಳು, ಅವುಗಳ ನಡುವೆ ನೆಲದ ಮೇಲೆ ಕೂರಿಸಿ ಊಟಕ್ಕೆ ಹಾಕಬೇಕೋ, ಅಥವಾ ಡೈನಿಂಗ್ ಟೇಬಲ್‌ನಲ್ಲಿ ಕೂರಿಸಬೇಕೋ ಎನ್ನುವ ಕಸಿವಿಸಿ. ಎಲೆಯಿಟ್ಟು ಊಟ ಮಾಡುತ್ತಾರೋ ಅಥವಾ ಸ್ಟೀಲ್ ತಟ್ಟೆಯಲ್ಲಿ ಬಡಿಸಬೇಕೋ ಎನ್ನುವ ಮುಜುಗರ. ಊಟಕ್ಕೆ ಏನು ಬಡಿಸಬೇಕು ಅಥವಾ ಬೇಡ ಎನ್ನುವ ಅಳುಕು. ಹೀಗೇ ನನ್ನ ಭೇಟಿಯುದ್ದಕ್ಕೂ ಸ್ಥಳೀಯ ಭಾಷೆಯನ್ನು ಬಿಟ್ಟು ಯಾರದ್ದೋ ಜೊತೆಗೆ ನಡೆಸಬಹುದಾದ ಗ್ರಾಂಥಿಕ ಭಾಷೆಯನ್ನು ಬಳಸಿ ನಡೆಸುವ ಸಂವಾದದ ಸಂಕಟ... ಈ ಎಲ್ಲದರ ಹಿನ್ನೆಲೆಯಲ್ಲಿ ನಾನು ಯಾರ ಮನೆಗೆ ಬಂದಿದ್ದೇನೆ, ಇವರಿಗೆಲ್ಲ ಏನಾಗಿದೆ? ಒಂದು ಕಾಲದಲ್ಲಿ ಎಷ್ಟೊಂದು ಸಹಜವಾಗಿ ವರ್ತಿಸುತ್ತಿದ್ದ ನಮ್ಮ ಜನರಿಗೆ ಈ ರೀತಿ ಇರುಸುಮುರುಸೇಕಾಗುತ್ತಿದೆ ಎಂದು ಯೋಚಿಸಲು ತೊಡಗಿದೆ. ನಾನು ಊರಿಗೆ ಹೋದೊಡನೆ ಅಲ್ಲಿನ ಸ್ಥಳೀಯ ಉಡುಪುಗಳನ್ನು ತೊಡುವುದರ ಮೂಲಕ ’ಎಲ್ಲರೊಳಗೊಂದಾಗ’ ಬಯಸುವ ನನ್ನ ಪ್ರಯತ್ನಕ್ಕೆ ಅನಾಯಾಸ ಸೋಲು! ನಾನು ದಂಗಾಗಿ ಹೋಗಿದ್ದೆ.

ಒಂದು ಕಾಲದಲ್ಲಿ ಎಷ್ಟೊಂದು ವಿಷಯಗಳಿಗೆ ಬಡಿದಾಡುತ್ತಿದ್ದೆವು, ತಾಳಮದ್ದಳೆಯ ಪ್ರತೀಕವಾಗಿ ಅನೇಕ ವಾದ-ವಿವಾದಗಳನ್ನು ಹೂಡುತ್ತಿದ್ದೆವು, ಆಯಾ ಸಮಯದ ಮಟ್ಟಿಗೆ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳನ್ನು ಚರ್ಚಿಸುತ್ತಿದ್ದೆವು. ನಮ್ಮ ಸಂಘರ್ಷಗಳಲ್ಲಿ ಘರ್ಷಣೆಗಳಿದ್ದವು, ಘೋಷಣೆಗಳಿದ್ದವು. ಮದುವೆ-ಮುಂಜಿಯ ಮಾತುಗಳು ಬರುತ್ತಿದ್ದವು. ಜಾತಿ-ಆಸ್ತಿ-ಅಂತಸ್ತಿನ ವಿಚಾರಗಳು ಹಿಣುಕಿ ಹಾಕುತ್ತಿದ್ದವು... ಆದರೆ, ಈ ಅಸಹಜ ವರ್ತಮಾನದ ಒಡನಾಟದಲ್ಲಿ ಈ ಮೇಲಿನೆಲ್ಲವೂ ಮಾಯವಾಗಿ, ಯಾರೋ (ದಾರಿ ತಪ್ಪಿ ಬಂದ) ಅತಿಥಿಗಳ ಸತ್ಕಾರದಂತೆ ನಮ್ಮ ಭೇಟಿ ನಡೆಯತೊಡಗಿದ್ದನ್ನು ನೋಡಿ ಮನ ಹಿಂಡಿಹೋಗಿತ್ತು.

ಇದನ್ನು ಹೀಗೇ ಬಿಟ್ಟರೆ, ನನ್ನವರೆನ್ನುವವರನ್ನೆಲ್ಲ ಎಲ್ಲಿ ದೀರ್ಘಕಾಲೀನವಾಗಿ ಕಳೆದುಕೊಳ್ಳಬೇಕಾಗುತ್ತೋ ಎಂದು ನಾನು ಅನೇಕ ಸೂಕ್ಷ್ಮ ವಿಷಯಗಳನ್ನು ಎತ್ತಿ ನಿಧಾನವಾಗಿ ವಾದಗಳನ್ನು ಮಂಡಿಸತೊಡಗಿದೆ. ಹೀಗಾದಲಾಗರೂ ಅವರುಗಳು ತೆರೆದುಕೊಳ್ಳಲಿ ಎಂದು... ಊಹ್ಞೂ, ನಾನು ಏನೇ ಮಾಡಿದರೂ ಅವರು ತಿಪ್ಪೆ ಸಾರಿಸಿದ ಹಾಗೆ ಉತ್ತರಗಳನ್ನೇ ಕೊಡುತ್ತಾ ಬಂದರು. ಹೀಗೇ ಬಿಟ್ಟರೆ, ಇವರುಗಳು ನನ್ನಿಂದ ದೂರವೇ ಇರುತ್ತಾರೆ ಎಂಬ ಯೋಚನೆ ಬಂದಿದ್ದೇ ತಡ, ನಾನು ಅಲ್ಲಿಂದ ಕಾಲ್ಕಿತ್ತು... ಮರುದಿನ ಒಂದು ಹೊಸ ಆಲೋಚನೆಯೊಡನೆ ಅವರನ್ನೆಲ್ಲ ಭೇಟಿ ಮಾಡಲು ಹೋದೆ.

***
ಹಳ್ಳಿಗಳಲ್ಲಿ ಸಹಜವಾಗಿ ಸೂರ್ಯ ಹುಟ್ಟುತ್ತಲೇ ಜೀವನ ಆರಂಭವಾಗುವ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಆನೇಕ ಮನೆಗಳಲ್ಲಿ ಬೆಳಗಾಗುವುದರ ಒಳಗೆ ಜಾನುವಾರುಗಳಿಗೆ ಬಾಯಾರು (ಗಂಜಿ-ನೀರು) ಕೊಡುವುದರಿಂದ ಹಿಡಿದು, ಅಂಗಳವನ್ನು ಗುಡಿಸಿ ಸಾರಿಸಿ, ಹೊಸ್ತಿಲಿಗೆ ಅರಿಶಿಣ-ಕುಂಕುಮವಿಡುವುದರಿಂದ ಹಿಡಿದು, ಮನೆ ಮಂದಿಯೆಲ್ಲ ಮಿಂದು ತಮ್ಮ ತಮ್ಮ ಕೆಲಸ ನೋಡಿಕೊಳ್ಳುವ ವಾಡಿಕೆಯಿದೆ. ಮಲೆನಾಡಿನ ಅನೇಕ ಮನೆಗಳಲ್ಲಿ ತಿಂಡಿಗೆ ಖಾಯಂ ಅವಲಕ್ಕಿ ಅಥವಾ ದೋಸೆಯ ಪರಿಪಾಠ ಇನ್ನೂ ಜಾರಿ ಇದೆ. ನಾನು ನನ್ನ ಪರಿವಾರವನ್ನು ಬಿಟ್ಟು, ಒಂದು ಲುಂಗಿಯನ್ನು ಸುತ್ತಿಕೊಂಡು, ಬೆಳ್ಳಂಬೆಳಗ್ಗೆ ಇವರುಗಳ ಮನೆಯ ಅಡುಗೆ ಮನೆ ತಡಕಾಡಿದರೆ  ಒಂದಿಷ್ಟು ದೋಸೆಗೇನೂ ಕಡಿಮೆ ಇಲ್ಲ ಎನ್ನುವ ನಂಬಿಕೆಯಿಂದ ನಮ್ಮ ನೆಂಟರೊಬ್ಬರ ಮನೆಗೆ ಹಿಂಬದಿ ಬಾಗಿಲಿನಿಂದ ಹೋಗಿ... ಎಂದಿನಂತೆ ಮಾತಿಗೆ ತೊಡಗುತ್ತಾ, ಅಲ್ಲೇ ಹತ್ತಿರದಲ್ಲಿದ್ದ ಮಣೆಯನ್ನೊಂದು ಎಳೆದುಕೊಂಡು ಕುಳಿತುಕೊಂಡೆ. ಆಗ ನೋಡಿ ನಿಜವಾಗಿ ನಮ್ಮ-ಅವರ ಮಾತುಕಥೆ ಶುರುವಾಗಿದ್ದು.... ಉಭಯ ಕುಶಲೋಪರಿಗೆ ಕತ್ತರಿ ಹಾಕಿ, ಕಳೆದ ನಾಲ್ಕು ವರ್ಷಗಳ ಆಗು-ಹೋಗುಗಳ ಒಟ್ಟು ಲೆಕ್ಕಾಚಾರವನ್ನು ನಾಲ್ಕು ಘಂಟೆಗಳಲ್ಲಿ ಮುಗಿಸುವ ಹುನ್ನಾರದಲ್ಲಿದ್ದವನಿಗೆ ಸಮಯ ಹೋದುದೇ ತಿಳಿಯಲಿಲ್ಲ. (ಜೊತೆಗೆ ಅಕ್ಕ-ಪಕ್ಕದ ಮನೆಗಳಿಂದಲೂ ಪರಿಚಯದವರು ಬಂದು ಸೇರತೊಡಗಿದರು. ನಮ್ಮ ಮಾತುಕಥೆಗಳಲ್ಲಿ ’ಬನ್ನಿ-ಹೋಗಿ’ಗಳು ಇರಲಿಲ್ಲ!) ತಿಂಡಿ-ಕಾಫಿಯ ಸಮಯವೆಲ್ಲವೂ ಮುಗಿದು, ಮಧ್ಯಾಹ್ನದ ಊಟದ ಸಮಯವೂ ಆಗಿ ಹೋಯಿತು. ನೀವು ಮಾಡಿದ್ದನ್ನೇ ಬಡಿಸಿ ಎಂದು ತೋಚಿಕೊಳ್ಳುವ ನನಗೆ, ಏನಾದರೂ ವಿಶೇಷವಾದ ಅಡಿಗೆಯನ್ನ ಮಾಡಲೇ ಬೇಕು ಎಂದು ಅವರು, ಒಬ್ಬರಿಗೊಬ್ಬರು ಮತ್ತೆ ’ಹೋರಾಟ’ ನಡೆಸಿದೆವು. ಕೊನೆಗೆ ನಾನೇ ಸೋತು, ಅಲ್ಲೇ ಇದ್ದ ಒಂದೆಲಗದ ತಂಬಳಿಯನ್ನು ಮಾಡಿರೆಂದು ಕೇಳಿಕೊಂಡೆ. ಊಟವಾದ ಮೇಲೂ ಮಣೆ ಬಿಡದ ನನ್ನ ಜಿಗಣೆಯ ಜಿದ್ದಿಗೆ ಅವರು ಸೋತಿದ್ದರು. ಕೊನೆಗೆ ಅಲ್ಲಿಯೇ ಇದ್ದ ಎಲೆ-ಅಡಿಕೆ ಬಟ್ಟಲನ್ನು ಎಳೆದುಕೊಂಡು ಕವಳ ಹಾಕಿದ ಮೇಲೆ ಅವರಲ್ಲಿ ಒಬ್ಬನಾಗಿ ಹೋಗಿದ್ದೆ.
"ಹೀಂಗೆ ಬರ್ತಾ ಇರು ಮಾರಾಯ, ನೀ ಬಂದ್ರೆ ಒಂಥರ ಚೆಂದ ನೋಡು!" ಎನ್ನುವ ಮನದಾಳದ (ಬರೆಯಲಾರದ) ಷರಾ ವನ್ನು ಹೇಳಿಸಿಕೊಂಡು ಹಿಂತಿರುಗಿ ಹೊರಟೆ.

***
ಈ ಒಂದು ಘಟನೆಯ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದಾಗ, ನನ್ನ ಮನದಲ್ಲಿ ಬದಲಾದವರು ಯಾರು? ಎಂಬ ಪ್ರಶ್ನೆ ಬಲವಾಗಿ ಏಳತೊಡಗಿತು. ಕಾಲ ಕಳೆದಂತೆ ನಮ್ಮ-ನಮ್ಮ ವ್ಯಕ್ತಿತ್ವ, ಪ್ರಬುದ್ಧತೆ, ವಿಚಾರಗಳು ಬದಲಾಗಲಿ. ಆದರೆ, ಈ ಬದಲಾವಣೆಯ ದೆಸೆಯಿಂದ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾದ ಸಂದರ್ಭ ಬಂದರೆ, ಅಥವಾ ಈ ಬದಲಾವಣೆಯ ಕೃಪೆಯಿಂದ ನಮ್ಮವರೊಡನೆ ನಾವೇ ಒಂದಾಗಲಾರದವರಾದರೆ, ಅದು ನಮ್ಮನ್ನು ಬೇರ್ಪಡಿಸಿ, ನಮ್ಮಲ್ಲಿ ಪ್ರತ್ಯೇಕತಾ ಭಾವನೆಯನ್ನು ಮೂಡಿಸೋದಿಲ್ಲವೇ? ಬಂಧುಗಳಿಗೆ, ಸ್ನೇಹಿತರಿಗೆ ಅವರವರ ಧರ್ಮವಿದೆ, ಅವರಿಗೆ ಒಂದು ಕಾರ್ಯಭಾರವಿದೆ, ಪಾತ್ರವಿದೆ... ಅವುಗಳನ್ನೆಲ್ಲ ತೊರೆದು ಅವರು ಅವರಾಗಿಲ್ಲದಿದ್ದಾಗ ನಾವು ನಾವಾಗದಿದ್ದರೆ ಯಾರನ್ನು ನೋಡಲು ಎಷ್ಟು ದೂರ ಹೋದರೆ ಏನು ಪ್ರಯೋಜನ?

ಅಮೇರಿಕದ ನೀರು ಕುಡಿದು ಅಮೇರಿಕನ್ ಇಂಗ್ಲೀಷ್ ಬಳಸಿ ನನ್ನೊಡನೆ ಬರೀ ಇಂಗ್ಲೀಷಿನಲ್ಲೇ ಸಂವಾದಿಸುವ ನನ್ನ ಖಾಸಾ ಪರಿಚಿತ (ಸ್ನೇಹಿತ) ಶೃಂಗೇರಿಯ ರಾಜೇಂದ್ರನಾಗಲೀ, ಅಥವಾ ತಮ್ಮತನವನ್ನು ಬಿಟ್ಟು ನಮ್ಮೊಡನೆ ಗ್ರಾಂಥಿಕ ಭಾಷೆಯನ್ನು ಬಳಸಿ ನಟಿಸುವ ನನ್ನ ಹಿರಿಯ ಸಂಬಂಧಿಕರಾಗಲೀ ನನಗೇಕೆ ಬೇಕು?

ಬದಲಾದವರು ಯಾರೋ ಅವರೇ ಉತ್ತರ ಕೊಡಬೇಕು!

Saturday, June 28, 2008

ಬದಲಾದ Hy factorಗಳ ವ್ಯಾಪ್ತಿ ಅರ್ಥಾಥ್ ಏನಾಗಿದೆ ನನಗೆ

ನೀವು ನನ್ನ ಹಾಗೆ ಎಪ್ಪತ್ತರ ದಶಕದ ಆರಂಭದ ವರ್ಷಗಳಲ್ಲಿ ಹುಟ್ಟಿದ್ದರೆ ಇನ್ನೇನು ಇಂಗ್ಲೀಷರು ಭಾರತವನ್ನು ಬಿಟ್ಟು ಹೋದರು ನಾವೆಲ್ಲ ನಮ್ಮ ನಮ್ಮ ಮೂಲ ಸಂಸ್ಕೃತಿಯಲ್ಲಿ ಬೆಳೆಯುತ್ತೇವೆ ಬದುಕುತ್ತೇವೆ ಎಂದು ಒಳಗೊಳಗೆ ಅಂದುಕೊಳ್ಳುತ್ತಲೇ ಮಾತಿನ ಮಧ್ಯೆ ಧಾರಾಳವಾಗಿ ಇಂಗ್ಲೀಷ್ ಪದಗಳನ್ನು ಬಳಸುವ ಪೋಷಕರೋ ಸಂಬಂಧಿಕರ ನಡುವೆ ಬೆಳೆದು ಬಂದಿರುತ್ತೀರಿ. ’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು!’ ಎನ್ನುವ ಹಾಡಿನ ಗುಂಗಿನಲ್ಲಿ ಬೆಲ್ ಬಾಟಮ್ ಪ್ಯಾಂಟುಗಳನ್ನು ಧರಿಸಿಕೊಂಡಿರುತ್ತೀರಿ. ಆಗಷ್ಟೇ ನಾಯಿಕೊಡೆಗಳಂತೆ ಎಲ್ಲೆಲ್ಲೆ ಬೇಕು ಅಲ್ಲಲ್ಲಿ ತಲೆ ಎತ್ತಿ ನಿಂತು ತಮ್ಮನ್ನು ತಾವು ಸೃಷ್ಟಿಯಲ್ಲಿ ಲೀನವಾಗಿಸಿಕೊಳ್ಳಲು ಸಾಹಸ ಮಾಡುವ ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕಾಲೇಜುಗಳಲ್ಲಿ ವ್ಯಾಸಾಂಗ ನಡೆಸುವವರನ್ನು ನೋಡಿ ಬೆರಗಾಗಿರುತ್ತೀರಿ. ಆಗಷ್ಟೇ ಕಣ್ತೆರೆಯುತ್ತಿದ್ದ ಕಾಮನ್ ಎಂಟ್ರನ್ಸ್ ಟೆಸ್ಟ್ (CET) ಎನ್ನುವ ವರ್ತುಲದಲ್ಲಿ ನೀವೂ ತೊಡಗಿಕೊಂಡಿದ್ದು, ಸಾಗರ-ಸೊರಬದಂತಹ ಹಳ್ಳಿಯೂರುಗಳಲ್ಲೂ ವಿದ್ಯಾರ್ಥಿಗಳ ನಿದ್ದೆಗೆಡಿಸುವ ಆಬ್ಜೆಕ್ಟಿವ್ ಪರೀಕ್ಷೆಗಳ ಪ್ರಭಾವಕ್ಕೊಳಗಾಗಿರುತ್ತೀರಿ.

ಹೀಗೆ ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ನಾವು Y2K ಗೆ ತಯಾರಿ ಮಾಡಲೆಂದು ಸಿಸ್ಟಮ್ ಪ್ಲಾನಿಂಗ್ ಮೀಟಿಂಗ್ ಸೇರಿ ಇಂದಿಗೆ ಹತ್ತು ವರುಷಗಳು ಕಳೆದು ಹೋದವು! ಹೀಗೆ ಕಳೆದ ಮೂರು ದಶಕಗಳಲ್ಲಿ ಉಪೇಂದ್ರನ ’ಡೇಂಜರ್’ ಹಾಡಿನ ಎಫೆಕ್ಟ್ ಏನೂ ಅಷ್ಟೊಂದು ಗೊತ್ತಾಗದಿದ್ದರೂ ನನ್ನಲ್ಲಿ ನನ್ನ ಸುತ್ತಲಿನಲ್ಲಿ ಆದ ಬೇಕಾದಷ್ಟು ಬದಲಾವಣೆಗಳು ಇಂದು ಅದೇನನ್ನೋ ಯೋಚಿಸಿಕೊಂಡು ಹಳೆಯ ಫೈಲ್ ಒಂದನ್ನು ಹುಡುಕಿಕೊಂಡು ಹೋದವನಿಗೆ ಕಣ್ಣ ಮುಂದೆ ಸುಳಿದು ಹೋದವು.

ಈ ಕಂಪ್ಯೂಟರುಗಳು ಒಂದಲ್ಲ ಒಂದು ನಮ್ಮ ಮನೆಯ ಫೋನ್ ಆದ ಹಾಗೆ ಆಗುತ್ತವೆ ಎಂದು ಯಾರೋ ಹೇಳಿದ್ದು ನಿಜವಾಗಿದೆ ಅನ್ನಿಸುತ್ತೆ. ಹತ್ತು ವರ್ಷದ ಹಿಂದೆ ದಿನಕ್ಕೆ ಪರ್ಸನಲ್ ಕೆಲಸಗಳಿಗೆಂದು ನಾಲ್ಕೈದು ಘಂಟೆಗಳನ್ನು ಕಳೆಯುತ್ತಿದ್ದವನಿಗೆ (ಅದರಲ್ಲೂ ವೀಕೆಂಡಿನಲ್ಲಿ ಇನ್ನೂ ಹೆಚ್ಚು), ಇಂದೆಲ್ಲ ಪರ್ಸನಲ್ ಬಳಕೆಗೆಂದು ಕಂಪ್ಯೂಟರ್ ಉಪಯೋಗ ಅತ್ಯಂತ ಮಿತವಾಗಿದೆ ಎಂದೇ ಹೇಳಬೇಕು: ಎಲ್ಲೋ ಒಂದಿಷ್ಟು ಇ-ಮೇಲ್‌ಗಳನ್ನು ನೋಡಬೇಕು, ಕೆಲವಕ್ಕೆ ಉತ್ತರಿಸಬೇಕು, ಇನ್ನು ದಿನದ ಸುದ್ದಿ ವಿಶೇಷಗಳನ್ನೂ ಓದಿ/ಕೇಳುವುದಕ್ಕೆ ಮೊದಲಿನ ತರಾತುರಿಯಿಲ್ಲದಿರುವುದು ವಿಶೇಷವೇ ಸರಿ, ಜೊತೆಗೆ ಕಂಪ್ಯೂಟರ್ ಮುಂದೆ ಕುಳಿತು ವಿಡಿಯೋ ನೋಡುವುದಾಗಲೀ ಆಡಿಯೋ ಕೇಳುವುದಾಗಲೀ ಬಹಳ ಅಪರೂಪವೆಂದೇ ಹೇಳಬೇಕು. ಮೊದಲೆಲ್ಲ ಇದ್ದ Hy factors ಗಳಿಗೂ ಇಂದಿನ ಅವೇ ಫ್ಯಾಕ್ಟರುಗಳಿಗೂ ಸಾಕಷ್ಟು ವ್ಯತ್ಯಾಸವಿದೆ. Hy factors ಎಂದರೆ ಏನು ಎಂದಿರಾ? ಅವೇ - Happy, Hobby, Hungry ಮೊದಲಾದವುಗಳು. ಅವರವರ ಹಸಿವು, ದಾಹ, ಸಂತೋಷ-ದುಃಖ, ಹವ್ಯಾಸ ಮೊದಲಾದವುಗಳ ಮೇಲೆ ಅವುಗಳನ್ನು ಅವಲಂಭಿಸಿದ ಅಗತ್ಯಗಳ ಮೇಲೆ ತಾನೆ ಅವರವರ ಚಟುವಟಿಕೆಗಳು ಸುತ್ತುವರೆದಿರೋದು? (ನಿಮಗೇನಾದರೂ ಬೇರೆ Hy factor ಗಳು ಗೊತ್ತಿದ್ದರೆ ತಿಳಿಸಿ).

ಅಂದಿಗಿಂತ ಇಂದು ಇನ್‌ಫರ್ಮೇಷನ್ ಲೋಕ ಬದಲಾಗಿದೆ, ಅಂದು ಸಿಗುತ್ತಿದ್ದ ಒಂದೊಂದು ವೆಬ್ ಸೈಟ್‌ಗಳಿಗೂ ಇಂದು ಅದರ ಹತ್ತು-ನೂರರ ಪಟ್ಟು ಹೆಚ್ಚು ವೆಬ್ ಸೈಟ್‌ಗಳು ಸಿಗತೊಡಗಿವೆ. ಆದರೆ ಇವೆಲ್ಲದರಲ್ಲೂ ಯಾವುದೇ ಆಸಕ್ತಿ ಎನ್ನುವುದು ಇಲ್ಲದಿರುವುದು ನನಗೊಬ್ಬನಿಗೆ ಮಾತ್ರ ಆಗಿಲ್ಲವಷ್ಟೇ? ರಾಷ್ಟ್ರೀಯ-ಅಂತಾರಾಷ್ಟ್ರೀಯ ಸುದ್ದಿಗಳನ್ನು ನಾನು ಬೆನ್ನೆತ್ತಿ ಹೋಗುತ್ತಿದ್ದ ಕಾಲವೊಂದಿತ್ತು, ಏಷ್ಯಾದಿಂದ ಹಿಡಿದು ಅಂಟಾರ್ಟಿಕಾವರೆಗಿನ ವಿದ್ಯಮಾನವನ್ನು ಪ್ರಪಂಚದ ಬೇರೆ ಬೇರೆ ಮಾಧ್ಯಮದವರು ಹೇಗೆ ಬಿಂಬಿಸಿದ್ದಾರೆ ಎಂದು ತೂಗಿ ನೋಡುವುದಿತ್ತು, ಪಾಕಿಸ್ತಾನದ Dawn ನಿಂದ ಹಿಡಿದು, BBC ಮೊದಲಾದವರ ವೆಬ್ ‌ಸೈಟ್‌ಗಳನ್ನು ತಡಕಿ ನೋಡುವುದಿತ್ತು. ಇಂದೆಲ್ಲ ಈ ಪ್ರಪಂಚದಲ್ಲಿ ಕಚ್ಚಾಡಿಕೊಂಡಿರುವವರು ಯಾವಾಗಲೂ ಇದ್ದೇ ಇರುತ್ತಾರೆ ಎನ್ನುವುದು ಗ್ಯಾರಂಟಿಯಾದಂದಿನಿಂದ - ಅವರಲ್ಲಿ ಕಚ್ಚಾಡಿಕೊಂಡು ಹೊಡೆದಾಡಿ ಸತ್ತರೆ ನಾನೇಕೆ ಇಲ್ಲಿ ತಲೆಕೆಡಿಸಿಕೊಳ್ಳಲಿ? - ಎನ್ನುವ ಉದಾಸೀನ ಮೈತುಂಬಿಕೊಂಡಿದೆ. ಕರ್ನಾಟಕದ ರಾಜ್ಯಕಾರಣವೆಂದರೆ ಇನ್ನಾದರೂ ಸ್ವಲ್ಪ ಆಸಕ್ತಿ ಇರೋ ವಿಷಯ, ಅದೇ ಆಸಕ್ತಿ ನನಗೆ ಭಾರತದ ಮಟ್ಟದಲ್ಲಾಗಲೀ ಅಮೇರಿಕದ ವಿಷಯಕ್ಕಾಗಲೀ ಹೋಲಿಸಿಕೊಂಡರೆ 2004 ರಲ್ಲಿ ಬುಷ್-ಕೆರ್ರಿ ಅವರ ಪ್ರತಿಯೊಂದು ಡಿಬೇಟುಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದವನಿಗೆ ಈ ವರ್ಷ ಆ ಆಸಕ್ತಿಯೂ ಇಲ್ಲವೆಂದೇ ಹೇಳಬೇಕು. ಈ ಯಡಿಯೂರಪ್ಪನ ಸರ್ಕಾರವೇನಾದರೂ ಇನ್ನೊಂದು ವರ್ಷದಲ್ಲಿ ಬಿದ್ದು ಮತ್ತೆ ಅತಂತ್ರ ವ್ಯವಸ್ಥೆ ಉದ್ಭವವಾದರೆ ಕರ್ನಾಟಕದ ರಾಜಕೀಯ ಸ್ಥಿತಿಗತಿಯೂ ನನ್ನ ಆಸಕ್ತಿಯಿಂದ ಮರೆಯಾಗುವುದರಲ್ಲಿ ಸಂಶಯವಂತೂ ಇಲ್ಲ.

ಏನಾಗಿದೆ ನನಗೆ? ನನ್ನ Hy factor ಗಳ ವ್ಯಾಪ್ತಿ ಹೇಗೆ ಹೇಗೆ ಬದಲಾಗುತ್ತಾ ಬಂದಿದೆ? ನನ್ನ ಬದಲಾವಣೆಗಳಿಗೆ ಕನ್ನಡಿ ಅನ್ನೋ ಹಾಗೆ ನನ್ನ ಇಂಟರ್ನೆಟ್ ಬ್ರೌಸಿಂಗ್ ಹ್ಯಾಬಿಟ್ಟನ್ನೇ ತೆಗೆದುಕೊಂಡರೆ ಅಗತ್ಯವಿದ್ದಷ್ಟು ಆನ್‌ಲೈನ್ ಮ್ಯಾಪ್, ಮಿತವಾದ ಪರ್ಸನಲ್ ಇ-ಮೇಲ್‍ಗಳು (unsolicited ಇ-ಮೇಲ್‌ಗಳು ತಮ್ಮಷ್ಟಕ್ಕೆ ತಾವೇ ಕಸದ ಬುಟ್ಟಿಗೆ ಹೋದ ಬಳಿಕ), ಬ್ಯಾಂಕ್ ಅಕೌಂಟುಗಳು (ಬಿಲ್ ಪೇಮೇಂಟ್‌ಗೆಂದು), ಫೈನಾನ್ಸಿಯಲ್ ಹೆಡ್‌ಲೈನ್ಸುಗಳು (ಸ್ಟಾಕ್ ಮಾರ್ಕೆಟ್ಟಿನ ಮೇಲೆ ಕಣ್ಣಿಟ್ಟುಕೊಂಡೇ ಇರಬೇಕಲ್ಲ ಅದಕ್ಕೆ), ಇವೆಲ್ಲದರ ಜೊತೆಗೆ ನಮ್ಮನೆ ಕಂಪ್ಯೂಟರಿನ ಹೋಮ್ ಪೇಜ್ ಆದ ಪ್ರಜಾವಾಣಿಯ ಹೆಡ್‌ಲೈನ್‌ಗಳನ್ನು ಇಪ್ಪತ್ತು ಸೆಕೆಂಡು ಜಾಲಾಡಿ ನೋಡುವುದನ್ನು ಬಿಟ್ಟರೆ ಮತ್ತೆ ಹೆಚ್ಚು ಹೊತು ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳುವುದು ಕಷ್ಟವೆಂದೇ ಹೇಳಬೇಕು. ಮೊದಲೆಲ್ಲ ಉಳಿದವರ ಬ್ಲಾಗ್‌ಗೆ ಹೋಗಿ ಓದಿ, ಅಪರೂಪಕ್ಕೆ ಕಾಮೆಂಟುಗಳನ್ನು ಬಿಡುತ್ತಿದ್ದವನು ಇಂದು ಅದನ್ನು ಮಿತಿಗೊಳಿಸಿದ್ದೇನೆಂದು ಹೇಳಿಕೊಳ್ಳುವುದಕ್ಕೇ ಕಷ್ಟವೆನಿಸುತ್ತದೆ. ಆಗೆಲ್ಲ ಒಂದೇ ದಿನ ಐದು-ಆರು-ಎಂಟು ಘಂಟೆಗಳಷ್ಟು ಹಲವಾರು ವ್ಯಕ್ತಿಗಳೊಡನೆ ಧೀರ್ಘವಾದ ಚಾಟ್ ಮಾಡುತ್ತಿದ್ದವನು ಇತ್ತೀಚೆಗೆ ವಾರಕ್ಕೊಮ್ಮೆಯೂ ಒಬ್ಬರಿಗೂ ’ಹಾಯ್’ ಹೇಳದ ಮಟ್ಟಕ್ಕೆ ಬಂದಿಳಿದಿದ್ದೇನೆ! ಆಫೀಸಿನಲ್ಲೂ ಅಷ್ಟೇ ಇನ್ಸ್ಟಂಟ್ ಮೆಸ್ಸೇಜ್ ಸಂಭಾಷಣೆಗಳು ನೀರಸವೆನ್ನಿಸತೊಡಗಿ ಪಕ್ಕದಲ್ಲಿನ ಫೋನ್ ಎತ್ತಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದರೂ ಮಾತನಾಡಿ ಆಗಬೇಕಾದ ಕೆಲಸವನ್ನು ಮುಗಿಸಿಕೊಳ್ಳುತ್ತೇನೆ.

ಈ ಇಂಟರ್ನೆಟ್ ಎಂದರೆ ಒಂದು ದೊಡ್ಡ ಲೈಬ್ರರಿ ಇದ್ದ ಹಾಗೆ - ನೆನಪಿದೆಯಾ ನಿಮಗೆ ನಿಮ್ಮ ಸುತ್ತಮುತ್ತಲೂ ಅಗಾಧವಾದ ಪುಸ್ತಕಗಳ ರಾಶಿಯೇ ಇದ್ದರೂ ನೀವು ನಿಮಗೆ ಬೇಕಾದ ಯಾವುದೋ ಒಂದು ಪುಸ್ತಕಕ್ಕಂಟಿಕೊಂಡು ದಿನಪೂರ್ತಿ ಅದೇ ಲೈಬ್ರರಿಯಲ್ಲಿ ಕಳೆಯುತ್ತಿದ್ದುದು? ಒಂದು ಕಾಲದಲ್ಲಿ ಮಾನಸಗಂಗೋತ್ರಿಯ ಕನ್ನಡ ವಿಭಾಗದಲ್ಲಿನ ನನಗೆ ಬೇಕಾದ ಲೇಖಕರ ಎಲ್ಲ ಪುಸ್ತಕಗಳನ್ನು ಓದಿ ಮುಗಿಸುವ ದಾಹವಿದ್ದವನಿಗೆ ಇಂದು ಅದೇ ವಾತಾವರಣದಲ್ಲಿ ಬಿಟ್ಟರೆ ಯಾವೊಂದು ಪುಸ್ತಕವನ್ನು ತೆಗೆದು ಓದುತ್ತೇನೆ ಎನ್ನುವ ಕಲ್ಪನೆಯನ್ನೂ ಮಾಡಿಕೊಳ್ಳಲಾಗದು. ನಮ್ಮ ಮನೆಗೆ ನ್ಯೂ ಯಾರ್ಕ್ ಟೈಮ್ ನ್ಯೂಸ್ ಪೇಪರನ್ನು ತರಿಸೋಣವೆಂದುಕೊಂಡರೆ ಅದನ್ನು ಓದೋರು ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲವೆಂಬ ಉತ್ತರ ಬಂತು. ಎಲ್ಲಾದರೂ ಬಿಸಿನೆಸ್ ಟ್ರಿಪ್‌ನಲ್ಲಿ ನಾನುಳಿದುಕೊಳ್ಳುವ ಹೋಟೇಲಿನಲ್ಲಿ ಪುಕ್ಕಟೆ ನ್ಯೂಸ್ ಪೇಪರನ್ನು ಕೊಟ್ಟರೂ ಓದದೇ ಇರುವ ಪರಿಗೆ ಬಂದು ತಲುಪಿದ್ದೇನೆ ಎಂದು ಹೇಳಿಕೊಳ್ಳಲು ಹೆದರಿಕೆಯಾಗುತ್ತದೆ. ನಿನ್ನೆಯವರೆಗೆ ನಡೆದ ವಿಶ್ವದೆಲ್ಲ ಸುದ್ದಿಗಳನ್ನು ಇಂತಿಷ್ಟೇ ಪುಟಗಳಲ್ಲಿ ಹೀಗೇ ಕಟ್ಟಿ ಹಿಡಿಯುತ್ತೇವೆ ಎನ್ನುವ ಹಠವಾದಿಗಳ ಅಗತ್ಯ ಈಗಿನ ಇಂಟರ್ನೆಟ್ ಯುಗದಲ್ಲಿ ಯಾರಿಗೆ ಬೇಕು ಹೇಳಿ, ಹಾಗೆ ಮುಕ್ತವಾಗಿ ಸಿಗುವ ವಿಷಯಗಳನ್ನೆ ನಮ್ಮ ನಮ್ಮ ಕಂಪ್ಯೂಟರ್ ಪರದೆಯ ಮೇಲೆ ಓದದಿರುವ ನಾವು ಇನ್ನು ಭೌತಿಕ ಪುಟಗಳನ್ನು ತಿರುಗಿಸಿ ಓದುವುದು ನಿಜವೇ?

ಇವತ್ತಿಗೆ ನನ್ನ ಸ್ವ ಇಚ್ಛೆಯಿಂದ ರೇಡಿಯೋವನ್ನು ಕೇಳದೆ ಆರು ತಿಂಗಳು ಸಂದವು. ಹಿಂತಿರುಗಿ ನೋಡಿದರೆ ನಾನು ಕಳೆದುಕೊಂಡದ್ದೇನು ಇಲ್ಲ ಅನ್ನುವ ವಾದಕ್ಕೆ ಪೂರಕವಾದ ಅಂಶಗಳೇ ಹೆಚ್ಚು ಎನ್ನಿಸುತ್ತಿರುವುದು ಈ ಹೊತ್ತಿನ ತತ್ವಗಳಲ್ಲೊಂದು. ಇತ್ತೀಚೆಗೆ ಟಿವಿಯಲ್ಲಿ ಬೇಕಾದಷ್ಟು ಸಿಗುತ್ತಿರುವ ಸ್ಟ್ಯಾಂಡ್ ಅಪ್ ಕಾಮಿಡಿಯೂ ಅಷ್ಟೊಂದು ಇಷ್ಟವಾಗುತ್ತಿಲ್ಲ ಎಂದು ಹೇಳುವ ಹೊತ್ತಿಗೆ ನನ್ನ ಫೇವರೈಟ್ ಕಮಿಡಿಯನ್ George Carlin ಸತ್ತು ಹೋದ ವಿಷಯ ನಿನ್ನೆ ಆಫೀಸಿನಲ್ಲಿ ಯಾರದ್ದೋ ಇನ್ಸ್ಟಂಟ್ ಮೆಸ್ಸೇಜಿನ ಸೇಟಸ್ಸ್ ಮೆಸ್ಸೇಜಿನ ಮೂಲಕ ಗೊತ್ತಾಯಿತು - One good thing about being dead is you automatically qualify for putting your picture on stamps and notes! ಅಡಿಗರು 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಅದೆಷ್ಟೋ ವರ್ಷಗಳ ಹಿಂದೆ ಬರೆದದ್ದೂ, ಗುಂಡಪ್ಪನವರು ತಮ್ಮ ಕಗ್ಗದಲ್ಲಿ ಸಂಸಾರ ಸೋಜಿಗವನ್ನು ಸರಳ ವಿಷಯ-ವಸ್ತುಗಳಲ್ಲಿ ಹಿಡಿದದ್ದೂ ನನ್ನನ್ನಂತೂ ಅಗಾಧವಾಗಿ ಕಾಡಿಸುತ್ತಲೇ ಎನ್ನಬಹುದು. ನಾವಂತೂ ಇತ್ತೀಚೆಗೆ ಧೀರ್ಘವಾಗಿ ಗಾಢವಾಗಿ ಅದೇನನ್ನು ಓದಿಲ್ಲವಾದರೂ ಅಲ್ಲಲ್ಲಿ ಸಿಗುವ ಈ ಹಳೆಯ ಗ್ರಂಥಗಳ ಪುಟಗಳು ನನ್ನನ್ನು ಯಾವತ್ತೂ ಒಂದು ಕ್ಷಣ ನಿಲ್ಲಿಸಿಯೇ ನಿಲ್ಲಿಸುತ್ತವೆ - ಅದು ಮಾತ್ರ ಬದಲಾಗಿಲ್ಲ ಎನ್ನುವುದೇ ಸಂತೋಷದ ವಿಷಯ.

ಈ information overload ಕಾಲದಲ್ಲಿ ಈಗಷ್ಟೇ ಇನ್ನೂ ಮೂರೂವರೆ ದಶಕಗಳನ್ನು ಪೂರೈಸಿಕೊಂಡು ದಿನದಿನಕ್ಕೂ ಪ್ರಬುದ್ಧಗೊಳ್ಳುತ್ತಿರುವ (ಅಥವಾ ಹಾಗೆಂದುಕೊಂಡು) ಮೈಮನಗಳಿಂದ ಜಗತ್ತನ್ನು ನೋಡುವ ನನ್ನ ಪರಿ ಇನ್ನು ಇಷ್ಟೇ ವರ್ಷಗಳಲ್ಲಿ ಅದೇನೇನೂ ಬದಲಾವಣೆಗಳನ್ನು ತಾಳುವುದಿದೆಯೋ? 2000 ದ ಹ್ಯೂಸ್ಟನ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಎಲ್ಲರಿಗಿಂತ ಮೊದಲು ನೋಂದಾವಣೆ ಮಾಡಿಸಿಕೊಂಡು ಹೋಗಿ ಖುಷಿಯಾಗಿ ವಾಪಾಸು ಬಂದಿದ್ದ ನನಗೆ ಇಂದು 2008 ರ ಶಿಕಾಗೋ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಲು ಅಷ್ಟೊಂದು ಮನಸ್ಸು ಬಾರದಿರುವುದು ಏಕೆ ಎಂದು ಕೇಳಿಕೊಳ್ಳುತ್ತಲೇ ಇರುವಂತಾಗಿರುವುದು ವಿಶೇಷ. ನಮ್ಮದೇ ಆದದ್ದನ್ನು ಬರೆಯುವ ವ್ಯವಧಾನ ಆಸಕ್ತಿ ಹಗುರವಾಗುತ್ತಾ ಬಂದ ಹಾಗೆ ಇನ್ನೊಬ್ಬರದನ್ನು ಓದುವ ಕಾಳಜಿ ಕಳಕಳಿ ದೂರವಾಗದಿದ್ದರೆ ಸಾಕು. ಸುತ್ತಮುತ್ತಲಿನಿಂದ ದೂರವಿದ್ದುಕೊಂಡು ಸ್ವಯಂ ಅನ್ನೇ ಸರ್ವಸ್ವ ಎಂದುಕೊಂಡು ಈ ದೊಡ್ಡ ಜಗದ ಚಿಕ್ಕ ಗೂಡಿನೊಳಗೆ ಮನಸ್ಸು ಹೂತು ಹೋಗದಿದ್ದರೆ ಸಾಕು. ಬೆಟ್ಟದಷ್ಟು ಬಿದ್ದುಕೊಂಡಿರುವ ಕಸದಲ್ಲಿ ರಸವನ್ನು ಹುಡುಕಿ ತೆಗೆದು ಅದನ್ನು ಅರಗಿಸಿಕೊಳ್ಳುವುದಕ್ಕೆ ಮೊದಲಿಗಿಂತಲೂ ಇಂದು ಹೆಚ್ಚಿನ ಶ್ರಮ ಬೇಕು ಅನ್ನುವುದಕ್ಕೆ ನನ್ನನ್ನು ಕೇಳಿ - ಮೊದಲೆಲ್ಲ ಸ್ನೇಹಿತರು ಈ ಪುಸ್ತಕವನ್ನು ಓದಿ/ಓದಿದೆ - ಎನ್ನುತಲಿದ್ದರು, ಈಗ ಅಂಥವರ ಸಂಖ್ಯೆ ಕಡಿಮೆ ಆಗಿದೆ ಎಂದೇ ಹೇಳಬೇಕು.

ನಿಮ್ಮ ನಿಮ್ಮ (ಬದಲಾಗುತ್ತಿರುವ) Hy factor ಗಳ ಅವಸ್ಥೆ/ವ್ಯವಸ್ಥೆಗಳ ಹಿನ್ನೆಲೆಯಲ್ಲಿ ನೀವು ಬದಲಾಗಿದ್ದೀರಿ ಎಂದುಕೊಂಡಿದ್ದೀರೇನು?