Thursday, May 04, 2006

ಬನಿಯನ್ ಚಹಾದ ಮಹಿಮೆ

ಭಾರತದಲ್ಲಿ ನಮ್ಮ ಸಂಬಂಧಿಕರ ಮನೆಗಳಿಗೆ ಹೋದಾಗ 'ಕುಡೀಲಿಕ್ಕೆ ಏನಾದ್ರೂ ತಗೋತೀರಾ?' ಅನ್ನೋ ಪ್ರಶ್ನೆಗೆ (ಕೆಲವೊಮ್ಮೆ ತಮಾಷೆಗೆ) 'ಒಂದು ಬನಿಯನ್ ಟೀ ಬರ್‍ಲಿ!' ಎನ್ನುತ್ತೇನೆ, ಅಗ ಅವರ ಮುಖದ ಮೇಲೆ ಈವರೆಗೆ ಎಲ್ಲೂ ಕಾಣದ ಒಂದು ನೋಟ ಬರುತ್ತೆ, ಅದು ಬಹಳ ವಿಶೇಷವಾಗಿರುತ್ತೆ, ಏಕೆ ಅಂದ್ರೆ 'ನಮಗೆ ಗೊತ್ತಿಲ್ಲದಿರುವುದೇನೋ ಇವನಿಗೆ ತಿಳಿದಿದೆ...' ಅನ್ನೋ ಭಲವಾದ ನಂಬಿಕೆ ಇದೆಯಲ್ಲಾ ಅದನ್ನು ನಾನೇನು ಕೇಳಿ ಪಡೆಯಲಿಲ್ಲ.

***

ಬ್ರೂಕ್ ಬಾಂಡ್ ಚಹಾದ ಟಿವಿ ಕಮರ್ಷಿಯಲ್ ನೋಡಿದವರಿಗೆ ಚೆನ್ನಾಗಿ ಗೊತ್ತು - ಒಬ್ಬ ಪೋಲೀಸ್ ಇನ್ಸ್‌ಪೆಕ್ಟರ್ ಯಾವುದೋ ಒಂದು ಹೊಡೆದಾಟದಲ್ಲಿ ತೊಡಗಿ ಅದೇ ತಾನೆ ರೌಡಿಗಳನ್ನು ಸೆದೆ ಬಡಿದಿರುತ್ತಾನೆ, ಆ ಸಮಯಕ್ಕೆ ಒಬ್ಬ ಪುಟ್ಟ ಹುಡುಗನೊಬ್ಬ ಟೀ ಟ್ರೇ ನಲ್ಲಿ ಬಿಸಿಬಿಸಿಯಾದ ಚಹಾದ ಗ್ಲಾಸೊಂದನ್ನು ನೀಡುತ್ತಾನೆ, ಚಹಾದ ಅಹ್ಲಾದವನ್ನು ಆಸ್ವಾದಿಸಿದ ಇನ್ಸ್‌ಪೆಕ್ಟರ್ ಆ ಹುಡುಗನ ತಲೆಯ ಮೇಲೆ ತನ್ನ ಟೋಪಿಯನ್ನು ತೆಗೆದಿಟ್ಟು ಮುಗುಳ್ ನಗುತ್ತಾನೆ. ಇದರಲ್ಲಿ ಎರಡು ವಿಷಯಗಳನ್ನು ನಾನು ಗಮನಿಸುತ್ತೇನೆ: ಮೊದಲನೆಯದಾಗಿ, ಬಾಲ ಕಾರ್ಮಿಕರನ್ನು ಇಟ್ಟುಕೊಳ್ಳುವುದು ಕಾನೂನು ಪ್ರಕಾರ ಅಪರಾಧ, ಅಂಥಾದ್ದರಲ್ಲಿ ದೇಶದಾದ್ಯಂತ ಭಿತ್ತರಿಸೋ ಆ ಕಮರ್ಷಿಯಲ್ ಹೇಗೆ ಸೆನ್ಸಾರ್ ಮಂಡಳಿಯ ಅನುಮತಿಯನ್ನು ಪಡೆಯಿತು? ಎರಡನೆಯದಾಗಿ, ವಿಶ್ವದ ಬೇರೆಲ್ಲೂ ಕಾಣದ (ನನ್ನ ಅನುಮಾನ/ಅನಿಸಿಕೆ, ಫ಼್ಯಾಕ್ಟ್ ಅಲ್ಲದಿರಬಹುದು) ಭಾರತದಲ್ಲಿ ಗ್ಲಾಸ್‌ನಲ್ಲಿ ಚಹಾ ಕುಡಿದು ಅನುಭವಿಸುವ ಸುಖ - ಇದಕ್ಕೆ ಪೂರಕವೆಂಬಂತೆ ನಮ್ಮ ಮನೆಯಲ್ಲಿ ಆ ರೀತಿಯ ಎರಡು ಗ್ಲಾಸ್‌ಗಳಿವೆ, ನಮ್ಮ ಮನೆಗೆ ಭಾರತದಿಂದ ಬಂದ ಅತಿಥಿಯೊಬ್ಬರು, ಎಷ್ಟೇ ಒಳ್ಳೇ ಚೈನಾ ಇದ್ದರೂ, ಬೀಕರ್ ಇದ್ದರೂ ಅವುಗಳಲ್ಲಿ ಚಹಾ ಕುಡಿಯದೇ ಈ ಗ್ಲಾಸ್‌ಗೇ ಮೊರೆ ಹೋಗೋದು. ನಾನು ಯಾವಾಗಲೂ ಕಪ್ಪು-ಬಸಿಯಲ್ಲಿ ಚಹಾ ಕುಡಿಯುತ್ತೇನೆ, ಹಾಗು ಉಳಿದವರಿಗೂ ಹಾಗೇ ಮಾಡಿ ಅನ್ನುತ್ತೇನೆ - ಅವರು ಶಿಸ್ತನ್ನು ಕಲಿಯುತ್ತಾರೋ ಬಿಡುತ್ತಾರೋ, ಪ್ರತೀವಾರ ನಾನು ಸ್ವಚ್ಛಗೊಳಿಸಬೇಕಾಗಿರೋ ಓಟ್‌ಮೀಲ್ ಬಣ್ಣದ ಕಾರ್ಪೇಟ್ (ಅದ್ಯಾವ ಜನ್ಮದಲ್ಲಿ ಶತ್ರುವಾಗಿತ್ತೋ ಯಾರಿಗೆ ಗೊತ್ತು) ಮೇಲೆ ಚಹಾದ ಹನಿಗಳೇನಾದರೂ ಬಿದ್ದು ನಾನೆಲ್ಲಿ ಆ ಕಲೆಯನ್ನು ಹೋಗಲಾಡಿಸುವ ಭಗೀರಥ ಪ್ರಯತ್ನವನ್ನು ಹಮ್ಮಿಕೊಳ್ಳಬೇಕಾಗುವುದೋ ಎಂಬ ಸಂಕಷ್ಟದಿಂದ. ಈ ಸ್ವಚ್ಛತೆಯ ಪರಿಕಲ್ಪನೆ ಒಂದು ರೀತಿಯ ಭೂತವಿದ್ದಂತೆ, ಅದು ನನ್ನನ್ನು ಯಾವಾಗಲೋ ಮೆಟ್ಟಿಕೊಂಡಿದೆ, ಇನ್ನೇನು ಕೆಲವೇ ವರ್ಷಗಳಲ್ಲಿ ನಾನು Keeping Up Appearances ನ Hyacinth Bucket (ಬೂಕೇ) ಆಗುತ್ತೇನೋ ಅನ್ನೋ ಹೆದರಿಕೆಯೂ ಇಲ್ಲದಿಲ್ಲ. ನಮ್ಮ ಮನೆಗೆ ಬಂದೋರು ನಾನು 'ಸಾಸರ್'ಗೆ 'ಬಸಿ' ಅನ್ನೋದನ್ನ ಕಂಡು ನನ್ನನ್ನ ಯಾವುದೋ ಶಿಲಾಯುಗದ ಮಾನವನೆಂಬಂತೆ ಒಮ್ಮೆ ನೋಡುತ್ತಾರೆ, ಆದರೆ ನಮ್ಮ ಮನೆಯ ನೀರು ಕುಡಿದ ಕೆಲವೇ ದಿನಗಳಲ್ಲಿ ಅವರೂ ಸಹ 'ಬಸಿ' ಎನ್ನುತ್ತಾರೆ ಅನ್ನೋದು ನನ್ನ ಕೆಲವೇ ಕೆಲವು ಸಫಲತೆಗಳಲ್ಲೊಂದು. ಆದರೂ, ನನ್ನ ಅತಿಥಿಗಳು ಎಷ್ಟೋ ಸಾರಿ ಅಡಿಗೆಮನೆಯಲ್ಲಿ ನಿಂತುಕೊಂಡು ಆ ಗ್ಲಾಸ್‌ನಲ್ಲೇ 'ಸೊರ ಸೊರ' ಚಹಾ ಹೀರುವುದನ್ನು ನೋಡಿದರೂ ನೋಡದಂತಿರುತ್ತೇನೆ, ಗ್ಲಾಸ್‌ನಲ್ಲಿ ಚಹಾವನ್ನು ಅಹ್ಲಾದಿಸುವ ಸುಖ ಬೇರೆಯೇ ಇರಬಹುದು, ಅದಕ್ಕೇಕೆ ನಾನು ಅಡ್ಡಬರಲಿ.

***

ನಾನು ಮದ್ರಾಸ್‌ನಲ್ಲಿ ನಗರದ ಹೊರವಲಯದಿಂದ ಹೊರಗೆ ಇರುವ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ಬಾರಿ ವೈಯಕ್ತಿಕ ಕೆಲಸಗಳಿಗೋಸ್ಕರ ಆಗಾಗ್ಗೆ ಮದ್ರಾಸ್ ನಗರಕ್ಕೆ ಬಂದು ಹೋಗುತ್ತಿದ್ದೆ. ಕೆಲವೊಮ್ಮೆ ಮುಂಜಾನೆ ಬೇಗ ಹೊರಟು, ಕೆಲವೊಮ್ಮೆ ಮಧ್ಯಾಹ್ನವೇ ಹೋಗಿ ಮಾಡುವ ಕೆಲಸಗಳನ್ನು ಮುಗಿಸಿಕೊಂಡು ಬಂದಿದ್ದಿದೆ. ಇಂತಹ ಪ್ರಯಾಣಗಳಿಗೆಲ್ಲ ಕಂಪನಿಯ ಷಟಲ್ ಬಳಕೆಯಾಗುತ್ತಿತ್ತು. ಎರಡೋ ಮೂರೋ ಇದ್ದ ಷಟಲ್ ಬಸ್ಸುಗಳ ಡ್ರೈವರ್‌ಗಳ ಪರಿಚಯವೂ ತಕ್ಕ ಮಟ್ಟಿಗೆ ಆಗುತ್ತಿತ್ತು. ನನಗೆ ಅವರ ಭಾಷೆ ಅರ್ಥವಾಗದಿದ್ದರೂ ಒಂದು ಮಾತಂತೂ ನಿಜ - ದಾರಿಯಲ್ಲಿ ಸಿಗುವ ರಸ್ತೆ ಪಕ್ಕದ ಚಹಾ ಅಂಗಡಿಯಲ್ಲಿ ಒಂದು ಚಹಾ ಕುಡಿಯೋಣವೆಂದು ಆ ಡ್ರೈವರುಗಳೆಲ್ಲರೂ ಹಿಂದೆ ಯಾವುದೋ ಅಗ್ರಿಮೆಂಟಿಗೆ ಸಹಿ ಮಾಡಿದವರ ಹಾಗೆ ನಿರ್ಧಿಷ್ಟ ಪ್ರದೇಶವೊಂದರಲ್ಲಿ ವಾಹನವನ್ನು ನಿಲ್ಲಿಸುತ್ತಿದ್ದರು. ಎಷ್ಟೋ ಸಾರಿ ಇಂತಹ ಷಟಲ್‌ಗಳಲ್ಲಿ ಡೈವರ್ ಜೊತೆಗೆ ನಾನೊಬ್ಬನೇ ಪ್ರಯಾಣ ಮಾಡಿದ್ದಿದೆ. ವಿಶೇಷವೆಂದರೆ - ನನಗೆ ಅವರ ಭಾಷೆ ಬರೋದಿಲ್ಲವೆಂದು ಗೊತ್ತಿದ್ದರೂ ಅವರು - ಬೇರೆ ಭಾಷೆಯನ್ನು ಮಾತನಾಡುವ ಯಾವುದೇ ಪ್ರಯತ್ನವನ್ನೇ ಮಾಡದೇ ಹಟ ತೊಟ್ಟವರಂತೆ ಸಂಪೂರ್ಣವಾಗಿ ತಮಿಳಿನಲ್ಲೇ 'ಸಾರ್, ಇಲ್ಲಿ ಚಹಾ ಕುಡಿಯೋಣವೇ, ಬಹಳ ಸೊಗಸಾಗಿರುತ್ತೆ!' ಎಂದು ಹೇಳುತ್ತಿದ್ದರು, ನಾನು ಮತ್ತೇನನ್ನು ಮಾತನಾಡಲು ಗೊತ್ತಾಗದೇ - ಎರಡೋ, ನಾಲ್ಕೋ ರೂಪಾಯಿ ಹೋದರೆ ಹೋಗಲಿ ಎಂದುಕೊಂಡು 'ಓಕೆ' ಎನ್ನುತ್ತಿದ್ದೆ. ಇದೇ ದೃಶ್ಯ ನಮ್ಮ ಕರ್ನಾಟಕದಲ್ಲಿ ನಡೆದಿದ್ದರೆ ಇಂತಹ ಷಟಲ್ ಬಸ್ಸಿನ ಡ್ರೈವರುಗಳು ಒಂದೇ ಇಂಗ್ಲೀಷ್‌ನಲ್ಲೋ, ಹಿಂದಿಯಲ್ಲೋ ಅವರ ಭಾಷೆ ಬರದ ನನ್ನಂಥವರನ್ನು ಕೇಳುತ್ತಿದ್ದರು, ಇನ್ನೂ ವರ್ಸ್ಟ್ ಎಂದರೆ ಆ ಡ್ರೈವರುಗಳು ಪ್ಯಾಸೆಂಜರಿನ ಭಾಷೆಯಲ್ಲೇ ಮಾತನಾಡುವುದನ್ನೂ ನೋಡಿದರೂ ನನಗೆ ಆಶ್ಚರ್ಯವಾಗೋಲ್ಲ - ಭಾಷೆಯ ಬಳಕೆ, ಬದುಕು ಹಾಗೂ ಬೆಳವಣಿಗೆಯ ಬಗ್ಗೆ ಯೋಚಿಸಿದ್ದಕ್ಕೆ ಹೀಗೆ ಹೇಳಬೇಕಾಯಿತು. ಇನ್ನು ಚಹಾದ ವಿಷಯಕ್ಕೆ ಬರುತ್ತೇನೆ.

ನೆನಪಿರಲಿ ನಮ್ಮ ಷಟಲ್ ಡ್ರೈವರ್ 'ಇದೇ ಬೆಸ್ಟ್ ಚಹಾ' (the best ಅನ್ನೋ ಅರ್ಥದಲ್ಲಿ) ಹೇಳಿದನೆಂದೆನಲ್ಲವೇ? ಹೌದು, ಎಲ್ಲರೂ ಅವರವರ ಮೂಗಿನ ನೇರಕ್ಕೇ ಯೋಚಿಸೋ ಹಾಗೆ, ನನ್ನ ಅಣ್ಣನನ್ನು ನೀವು ಫೋನ್ ಮಾಡಿ 'ಇಲ್ಲಿ ಒಳ್ಳೇ ಇಡ್ಲಿ ಎಲ್ಲಿ ಸಿಗುತ್ತೇ' ಎಂದು ಕೇಳಿದಿರಾದರೆ '(ನಮ್ಮೂರಿನ) ಕೃಷ್ಣ ಭಟ್ಟರ ಹೋಟ್ಲಿನ ಇಡ್ಲಿ, ಪ್ರಪಂಚದಲ್ಲೇ ಬೆಸ್ಟ್!' ಅನ್ನೋ ಉತ್ತರ ಬರುತ್ತೆ. ಅವನ ಪ್ರಪಂಚದ ವ್ಯಾಪ್ತಿಯನ್ನು ನೀವು ಅರ್ಥ ಮಾಡಿಕೊಂಡರೆ ಎಲ್ಲವೂ ಸುಲಭ, ಒಂದು ರೀತಿ ನಮ್ಮ ಹಳ್ಳಿಯಲ್ಲಿ ನಡೆಯೋ 'ವಿಶ್ವ' ಕನ್ನಡ ಸಮ್ಮೇಳನವೋ, ಅಥವಾ 'ವಿಶ್ವ' ವೀರಶೈವ ಸಮ್ಮೇಳನವೋ ಇದ್ದ ಹಾಗೆ, ಅವರವರ ವಿಶ್ವದ ವ್ಯಾಪ್ತಿ ಅವರವರಿಗೆ, let us leave it there.

ಹೀಗೆ ಕೇಳಂಬಾಕ್ಕಂ‌ನ ರಸ್ತೆ ಬದಿಯ 'ಟೀ ಶಾಪ್' ಅನ್ನುವ ಅಂಗಡಿಯಲ್ಲಿ ನನಗೆ ಯಾವಾಗಲೋ ವಿಶ್ವರೂಪ ದರ್ಶನವಾಗಿದೆ. ಬೆಳ್ಳಂ ಬೆಳಗ್ಗೆ, ಹಣೆಯ ಮೇಲೆ ಬೆವರು ಹನಿ ಕಟ್ಟಲು ಶುರು ಮಾಡಿದ, ಮೈ ಮೇಲೆ ಬಟ್ಟೆ ಇಲ್ಲದ, ಅಲ್ಲಲ್ಲಿ ಬಿಳಿ, ಕಪ್ಪು ರೋಮದಿಂದ ಅಲಂಕೃತವಾದ ಎದೆಯ ಕೆಳಗೆ ಎಂಟು ತಿಂಗಳ ಬಸುರಿ ಹೆಂಗಸಿನ ಹೊಟ್ಟೆ, ಓನರ್ ಕಮ್ ಸರ್ವರ್ ಕಮ್ ಕ್ಲೀನರ್ ಅನ್ನುವ ಮಾನವಾಕೃತಿಗೆ ಅಂಟಿಕೊಂಡಿರುತ್ತದೆ. ನಾನು ನಮ್ಮ ಡ್ರೈವರ್ ಇಳಿದು ಹೋಗುತ್ತಲೇ 'ಎಷ್ಟು ಜನ ಸಾರ್' ಅನ್ನೋ ಪ್ರಶ್ನೆ ಬರುತ್ತೆ, ನಾವು 'ಇಬ್ಬರೇ' ಅನ್ನುತ್ತೇವೆ. ಎದುರು ಅದ್ಯಾವ ಮರದಿಂದ ಮಾಡಿದುದೋ ಏನೋ ಕಪ್ಪು ಕೊಳೆಹಿಡಿದ ಟೇಬಲ್ ಒಂದರ ಮೇಲೆ ಯಾವುದೋ ವಿಷಯದ ಮೇಲೆ ಯಾವಾಗಲೂ ಕೋಪ ಮಾಡಿಕೊಂಡಂತೆ 'ಬುರ್‍ರ್‍' ಎನ್ನುವ ಬದಿಯಲ್ಲಿ ಟ್ಯಾಂಕ್ ಇರುವ ಸೀಮೆಣ್ಣೆ ಸ್ಟೋವ್, ಅದರ ಮೇಲೆ ತೊಳೆದು ಯಾವುದೋ ಕಾಲವಾಗಿ, ತನ್ನ ಹೊರ ಮೈಯ ಬಣ್ಣವನ್ನು ಅಂಗಡಿಯವನಿಗೇ ಮಾರಿಕೊಂಡ ಪೇಚಿನ ಮುಖದ ಉದ್ದನೇ ಹಿಡಿಕೆ ಇರುವ ಒಂದು ಅಲ್ಯುಮಿನಮ್ ಪಾತ್ರೆ ಸುಡುತ್ತಿದ್ದೇನಲ್ಲಾ ಅನ್ನೋ ಚಿಂತೆಯ ಗೆರೆಗಳನ್ನ ತನ್ನ ಮಡಿಲ್ಲಲ್ಲಿ ಅಡಗಿಸಿಕೊಂಡಿರೋ ಚಹಾ ಎನ್ನುವ ದ್ರಾವಕದ ಮೋರೆಯ ಮೇಲೆ ತೋರಿಸಲು ಪ್ರಯತ್ನಿಸತೊಡಗುತ್ತೆ, 'ಯಾರದೋ ಉರಿಗೆ ಯಾರಿಗೆ ಶಿಕ್ಷೆ' ಅನ್ನೋ ಹಾಗೆ ಒಳಗಿನ ಚಹಾ ಕುದ್ದು ಇನ್ನೆನು ಮೇಲೆ ಬರುತ್ತಿದ್ದಂತೆ ಅದರ ಹಿಂದೆ ಆಗಾಗ್ಗೆ ಕೈ ಆಡಿಸುತ್ತಿದ್ದ ಮಾಲೀಕ ಉರಿಯುವ ಸ್ಟೋವ್‌ಗೆ ಯಾವ ಗೌರವವನ್ನೂ ಕೊಡದೆ ಪಾತ್ರೆಯಲ್ಲಿನ ಚಹಾವನ್ನು ಗಾಳಿಸತೊಡಗುತ್ತಾನೆ - ಇಲ್ಲೇ ಇರೋದು ಬನಿಯನ್ ಚಹಾದ ವಿಶೇಷ!

ಕೊತಕೊತನೆ ಕುದ್ದ ಚಹಾ ಮಾಲಿಕನ ಕೈಯಲ್ಲಿನ ಎರಡು ಪಾತ್ರೆಗಳಲ್ಲಿ ಒಂದು ಕೈಯಲ್ಲಿ ಅವನ ತಲೆಯಿಂದ ಎರಡು ಆಡಿ ಮೇಲಕ್ಕೆ ಹೋಗಿ, ಮತ್ತೊಂದು ಕೈಯಲ್ಲಿ ಅವನ ಮೊಳಕಾಲು ಮಂಡಿಯವರೆಗೆ 'ಬೆಂಕಿಯಲ್ಲಿ ಬೆರೆಯದಿದ್ದದ್ದು, ಗಾಳಿಯಲ್ಲಿ ಬೆರೆತಂತೆ' ಸುರ್‍ರ್‍ ಎಂದು ಸದ್ದು ಮಾಡುತ್ತಾ ಪಾತ್ರೆಯಿಂದ ಪಾತ್ರೆಗೆ ಎರಡು ಮೂರು ಬಾರಿ ಕೈ-ಕೈ ಬದಲಾಗುತ್ತದೆ - ಈ ಮಧ್ಯೆ ಅರ್ಧ ಕ್ಷಣಗಳ ಕಾಲ ಗಾಳಿಯಲ್ಲಿ ಕಾಣುವ ಮೂರ್ನಾಲ್ಕು ಆಡಿ ಎತ್ತರದ ಧಾರೆ 'ಗಂಗಾವತರಣ'ವನ್ನು ನೆನಪಿಗೆ ತರುತ್ತದೆ. ಮಾಲೀಕನ ತೃಪ್ತಿಗೆ ಚಹಾ ಬೆರೆತಿದೆ ಎಂದು ಅನ್ನಿಸಿದ ತಕ್ಷಣ ಮಾಲೀಕ ಟೇಬಲ್ ಮೇಲೆ ಎಲ್ಲೋ ಇದ್ದ, ಒಂದು ಕಾಲದಲ್ಲಿ ಯಾವತ್ತೋ ಬಿಳಿಯಾಗಿದ್ದು-ಇಂದು ಸಂಪೂರ್ಣವಾಗಿ ಚಹಾದ ಬಣ್ಣವನ್ನೇ ಹೋಲುವ ಬಟ್ಟೆಯಲ್ಲಿ ಚಹಾವನ್ನು ಸೋಸತೊಡಗುತ್ತಾನೆ, ನಾನು ಅಂದುಕೊಂಡ ಮಟ್ಟಿಗೆ ಅದು ಪಾಣಿ ಪಂಚೆಯೋ, ಅಥವಾ ಮತ್ಯಾವುದೂ ಅಲ್ಲ, ಅದು ಈ ಹಿಂದೆ ಉಪಯೋಗಿಸಿ ಬಿಟ್ಟ ಹಳೆಯ ಬನಿಯನ್ ಎಂದು (ವಾಷ್ ಮಾಡಿದ್ದಿರಬಹುದು, ಅದು ಬೇರೆ ವಿಷಯ). ನನ್ನ ಪ್ರಕಾರ, ಆ ಚಹಾಗೆ ಈ ಡ್ರೈವರುಗಳು ಅನುಭವಿಸುವ ಆ ವಿಶೇಷ ಸ್ವಾದ ಬರೋದು ಈ ಹಂತದಲ್ಲಿಯೇ ಎಂದು ಕಾಣುತ್ತೆ! ಅಲ್ಲದೇ ಬನಿಯನ್‌ನ ಯಾವ ಭಾಗದಿಂದ ಚಹಾ ಸೋಸಿಬಂದರೆ ಯಾವ ಸ್ವಾದ ಹೆಚ್ಚಾಗಬಹುದೂ ಎಂದು ಯೋಚಿಸಿದ್ದೇನೆ - ಉದಾಹರಣೆಗೆ ಎಷ್ಟು ಸೋಪು ಹಾಕಿ ತಿಕ್ಕಿ ತೊಳೆದರೂ ಹೋಗದ ಬನಿಯನ್‌ನ ಕಂಕುಳಿನ ಕೆಳಗಿನ ಭಾಗದಿಂದ ಚಹಾ ಸೋಸಿ ಬಂತೆಂದು ಅಂದುಕೊಳ್ಳಿ, ಅದರ ಸ್ವಾದ ಹೇಗಿರಬಹುದು ನೀವೆ ಊಹಿಸಿ. ಈ ರೀತಿ ವಿಶೇಷ ಸ್ವಾದ ಇರದೇ ಹೋದರೆ ರಿಪೀಟ್ ಕಸ್ಟಮರ್‌ಗಳಾಗಿ ಆ ಶಟಲ್ ಡ್ರೈವರ್‌ಗಳು ಕಂಪನಿಯ ಕ್ಯಾಂಟೀನ್‌ನಲ್ಲಿ ಸ್ವಲ್ಪ ಹೊತ್ತಿನ ಮುಂಚೆ ಚಹಾ ಕುಡಿದಿದ್ದರೂ ಮತ್ತೇಕೆ ಪ್ರಯಾಣದ ನಡುವೆ ನಿಲ್ಲಿಸಿ ಇಲ್ಲಿಗೇಕೆ ಬರುತ್ತಿದ್ದರು? ಆದರೆ ಒಂದು ವಿಷಯವಂತೂ ನಿಜ, ಈ ಮೇಲಿನ ಚಹಾದಲ್ಲಿ ನಿಮಗೆ ಬೇಕಾದ ಸ್ವಾದ, ಸತ್ವ ಇವುಗಳು ಯಥೇಚ್ಚವಾಗಿ ಸಿಗುವುದೂ ಅಲ್ಲದೇ, ಅಮೇರಿಕದಿಂದ 'ಜೀವ ನಿರೋಧಕ'ಗಳ ಕೊರತೆಯಲ್ಲಿ ಹೋಗುವ ನಿಮಗೆ ಒಂದು ಡೋಸ್ ವ್ಯಾಕ್ಸೀನ್ ಆಗಿಯೂ ದೊರೆಯಬಲ್ಲದು.

***

ನಮ್ಮ ಮನೆಯಲ್ಲಿ ನನ್ನ ಅಕ್ಕ ಅಥವಾ ತಂಗಿಗೆ 'ಏ ಒಂದ್ ಬನೀನ್ ಟೀ ಮಾಡೇ' ಅಂದಾಗೆಲ್ಲ ಅವರೆಲ್ಲರಿಗೂ ನಾನು ಏನು ಕೇಳುತ್ತೇನೆಂದು ಗೊತ್ತು, ಅವರು ಒಮ್ಮೆ ನಗುತ್ತಾರೆ, ಆದರೆ ನನ್ನ ಅಮ್ಮ ಇದ್ದಲ್ಲಿ ಇಂಥ ಮಾತುಗಳನ್ನು ಆಡಿದರೆ ಬೈಸಿಕೊಳ್ಳೋದು ಗ್ಯಾರಂಟಿ.

5 comments:

ಅಸತ್ಯ ಅನ್ವೇಷಿ said...

ನಮ್ಮವರೆ,
ನಾನೂ ಹಾಗೇ ತಿಳಿದಿದ್ದೆ. ನನಗೂ ಗೊತ್ತಿಲ್ಲದ ಬನಿಯನ್ ಟೀ ಬಗ್ಗೆ ಹೇಳುತ್ತೀರಿ ಅಂದ್ಕೊಂಡ್ರೆ....!

ಹೋಗ್ಲಿ ಬಿಡಿ, ನೀವೇಕೆ ಬನೀನು ಟೀನೇ ಬೇಕೂಂತ ಹಠ ಹಿಡಿಯೋದು? ಇದರ ಹಿಂದಿನ ಉದ್ದೇಶ ಏನು?

sritri said...

ಹೀಗೇ ಇರಬಹುದೆಂದು ಊಹಿಸಿದ್ದೆ :)

ನಮ್ಮ ಮನೆಗಳಲ್ಲಿ ಹೋಟೆಲ್‍ಗಳಲ್ಲಿ ತಿನ್ನುವ ಪದ್ಧತಿ ಇರಲಿಲ್ಲ. ಆಗೆಲ್ಲ ಹೋಟೆಲ್ಲಿನಲ್ಲಿ ಕಾಫಿ, ಟೀ ಮಾಡುವ ಬಗೆಯನ್ನು ಹೀಗೆಲ್ಲ ಚಿತ್ರವಿಚಿತ್ರವಾಗಿ ಬಣ್ಣಿಸುತ್ತಿದ್ದುದು ನೆನಪಾಯಿತು.(ಯಾರಿಗೂ ಹೋಟೆಲಿಗೆ ಹೋಗುವ ಬಯಕೆಯಾಗದಿರಲಿ ಎಂದಿರಬಹುದಾ?) ಅದರಲ್ಲೂ ದೋಸೆ ಮಾಡುವ ವಿಧಾನವಂತೂ ...( ಇನ್ನೂ ಅಸಹ್ಯ!!)

ಅಸತ್ಯಾನ್ವೇಷಿಗಳ ಪ್ರಶ್ನೆಗೆ ಏನು ಹೇಳುತ್ತೀರಿ?

Satish said...

ಅನ್ವೇಷಿ ಹಾಗೂ sritri ಅವರೇ,

ಹುಡುಕುವುದೇನೇ ಇದ್ದರೂ ಅದನ್ನು ಅನ್ವೇಷಿಗಳಿಗೆ outsource ಮಾಡಿಬಿಟ್ಟಿದ್ದೇನೆ!

ನಾನೆಂದುಕೊಂಡಂತೆ, ನನ್ನ ಈ ಹಾಳುಮೋರೆ ಹೊತ್ತುಕೊಂಡು (ಯಾವತ್ತೋ ಒಂದು ದಿನ) ಭಾರತಕ್ಕೆ ಹೋದಾಗ ಎಲ್ಲೂ ಕೆಲಸ ಸಿಗದಿದ್ದರೆ, ನನ್ನ ಅಮೇರಿಕನ್ ಮ್ಯಾನೇಜ್‌ಮೆಂಟ್ ಅನುಭವದ ಹಿನ್ನೆಲೆಯಲ್ಲಿ ನಾನೂ ಒಂದು 'ಬನೀನ್ ಟೀ' ಅಂಗಡಿಯನ್ನು ತೆರೆಯೋಣವೆಂದುಕೊಂಡಿದ್ದೇನೆ. ಆದ್ದರಿಂದ ಮಾರ್ಕೆಟ್ ರಿಸರ್ಚ್ ಹಾಗೂ ಫ಼ೀಲ್ಡ್ ಸ್ಟಡಿ ಅನ್ನೋ ಹೆಸರಿನಲ್ಲಿ ಸ್ಯಾಂಪಲ್ ನೋಡಬೇಕಾಗಿ ಬಂತು ಅಷ್ಟೇ. (ಈ ಉತ್ತರವನ್ನ ಓದಿ ಮುಂಬರುವ ರಿಕ್ರೂಟ್‌ಮೆಂಟಿನ ಮುನ್ಸೂಚನೆ ಸಿಕ್ಕವರಲ್ಲಿ ಮಸಾಲೆ ದೋಸೆ, ಸಮೋಸ ಇತ್ಯಾದಿ ಮಾಡುವ ಕಲೆ ಇದ್ದವರೆಲ್ಲ ತಮ್ಮ ತಮ್ಮ ಬಯೋ ಡೇಟಾ ಕಳಿಸಬೇಕಾಗಿ ವಿನಂತಿ).

On the lighter side, ಎಲ್ಲಿಯಾದರೂ ಹೋದಾಗ ನನ್ನ ನಿರೀಕ್ಷೆಗೆ ತಕ್ಕಂತೆ ಸ್ವಚ್ಛತೆ ಇರದಿದ್ದಲ್ಲಿ ಅವರು ಕೊಡುವ ಕಾಫಿ/ಚಹಾಕ್ಕೆ ನಾನು ಬನಿಯನ್ ಟೀ ಎಂದೇ ಹೆಸರು ಕೊಟ್ಟಿದ್ದೇನೆ. ಇಂಥ ಅನುಭವಗಳಿಂದಲೇ 'ಹೋಟೇಲಿನ ಹಿಂದ್ ನೋಡಬ್ಯಾಡಾ, ಮದುವೇ ಮನೆ ಮುಂದ್ ನೋಡಬ್ಯಾಡಾ!' ಎಂಬ ಜಾಣ್ಣುಡಿಯನ್ನೂ ಕಟ್ಟಿದ್ದೇನೆ!

ಇತಿ,
ನಿಮ್ಮವ

ಅಸತ್ಯ ಅನ್ವೇಷಿ said...

ಬನೀನ್ ಟೀ ಅಂಗಡಿಯಲ್ಲಿ ಕೆಲಸ ಕೊಡಿಸುವ ಭರವಸೆ ದೊರೆತ ಬಳಿಕ ಮತ್ತಷ್ಟು "ನಮ್ಮವರೇ" ಆಗಿಬಿಟ್ಟವರೆ,

ನಾಲಿಗೆಯೊಳಗೆ ಉಂಡೆ ಕಟ್ಟುವ ಕಲೆ ನನಗೆ ಗೊತ್ತಿರುವುದರಿಂದ ಅಂಬಡೆ ಮಾಡುವುದನ್ನು ನಮ್ಮ ಬ್ಯುರೋಗೆ outsource ಮಾಡಿಬಿಡಿ. ನಾವು ತಕ್ಷಣವೇ ಇ-ಮೇಲ್ ಮೂಲಕ ಅದನ್ನು ಪೂರೈಸುತ್ತೇವೆ.

ಆ ಮೇಲೆ ಹೊಟ್ಟೆಯೊಳಗೆ ಬೇಯಿಸಬೇಕಾದ ಯಾವುದಾದರೂ ತಿಂಡಿ ಇದ್ದರೆ ಅದನ್ನೂ ನಿಮ್ಮ ಹೋಟೆಲ್ ನಲ್ಲಿ ಆರಂಭಿಸೋಣ. ಆದರೆ ಅದರ ಉಸ್ತುವಾರಿ ಮಾತ್ರ ನಮಗೆ. ಇಲ್ಲದಿದ್ದರೆ ಈ ಆಟಕ್ಕೆ ತಗೊಳ್ಳಿ ನನ್ನ ರಾಜೀನಾಮೆ.....
(ಸೂ: ರಾಜೀನಾಮೆಯನ್ನು ಬನೀನ್ ಟೀ ಅಂಗಡಿಯಲ್ಲಿ ಮಾರಬೇಡಿ)

Anonymous said...

Hallo I absolutely adore your site. You have beautiful graphics I have ever seen.
»