Showing posts with label ಚಿತ್ರ ವಿಮರ್ಶೆ. Show all posts
Showing posts with label ಚಿತ್ರ ವಿಮರ್ಶೆ. Show all posts

Sunday, August 10, 2025

ಸು ಫ಼್ರಮ್ ಸೋ (ಸುಲೋಚನ ಫ಼್ರಮ್ ಸೋಮೇಶ್ವರ)

ಸು ಫ಼್ರಮ್ ಸೋ, ಪೂರ್ತಿ ಚಲನಚಿತ್ರ ಮರ್ಲೂರು ಮತ್ತು ಸೋಮೇಶ್ವರ, ಈ ಎರಡು ಊರುಗಳಲ್ಲಿ ನಡೆಯುವ ಪ್ರಸಂಗ. ಇದರಲ್ಲಿ, ಹಾಸ್ಯ, ಸಂಭಾಷಣೆ, ಒಂದು ಸಾಮಾಜಿಕ ಪರಿಸರದ ಕಲ್ಪನೆಯ ಮೂಲಕ ಚುಟುಕಾಗಿ ಮಾನವೀಯ ಮೌಲ್ಯದ ಸಂದೇಶವನ್ನು ಕಟ್ಟಿಕೊಡಲಾಗಿದೆ. ಜೊತೆಗೆ, ಒಂದು ಊರಿನ ಪರಿಸರದಲ್ಲಿ, ಮೌಢ್ಯ ಮತ್ತು ದೌರ್ಜನ್ಯ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೂ ಬೆಳಕು ಚೆಲ್ಲಲಾಗಿದೆ.

ಜೆ.ಪಿ. ತೂಮಿನಾಡು (ಜೆಪಿ) ಎಂದಾಕ್ಷಣ, ಇವರನ್ನೆಲ್ಲೋ ನೋಡಿದ್ದೇವೆಲ್ಲ ಎಂದು ನೆನಪಾಗುವಷ್ಟು ಆತ್ಮೀಯವಾದ ಪರ್ಸನಾಲಿಟಿ ಅವರದ್ದು. ಮುಖದಲ್ಲಿ, ಸಹಜವಾಗಿ ಮುಗ್ದತೆಯನ್ನು ಪ್ರದರ್ಶಿಸುವ ಇವರು, ಕೆಲವೇ ವರ್ಷಗಳ ಹಿಂದೆ, "ಒಂದು ಮೊಟ್ಟೆಯ ಕಥೆ"ಯಲ್ಲಿ ತನ್ನ ಕನ್ನಡ ಉತ್ತರ ಪತ್ರಿಕೆಗೆ 35 ಅಂಕಗಳನ್ನು ಬೇಡುವ ವಿದ್ಯಾರ್ಥಿಯಾಗಿ, ಆ ಚಿಕ್ಕ ಪಾತ್ರದ ಮುಖೇನ ನೋಡುಗರ ಮನದಲ್ಲಿ ಉಳಿಯುವಂತೆ ಮಾಡುವ ಮುಗ್ಧ ಪ್ರತಿಭೆ.

ಈ ಯುವ ಪ್ರತಿಭೆ, ಪಳಗಿದ ರಾಜ್ ಶೆಟ್ಟಿ ಅವರ ಜೊತೆ ಕೈ ಸೇರಿಸಿ, ಬರೆದು ನಿರ್ದೇಶಿಸಿ ನಿರ್ಮಿಸಿದ ಚಿತ್ರವೇ ಸು ಫ಼್ರಮ್ ಸೋ.


ರಾಜ್ ಶೆಟ್ಟಿ ಅವರು ತಮ್ಮ ಸಂದರ್ಶನವೊಂದರಲ್ಲಿ ಹೇಳಿದಂತೆ, ಒಂದು ಸುಂದರವಾದ ಚಿತ್ರಕ್ಕೆ ಮೂಲವೇ, ಸುಂದರವಾದ ಕಥೆ. ಅದರ ಆಂತರ್ಯವನ್ನು, ನೋಡುಗರಿಗೆ ತಲುಪಿಸುವುದೇ ಚಿತ್ರಕಥೆ ಹಾಗೂ ಸಂಭಾಷಣೆ. ಜೆ.ಪಿ. ಈ ವಿಚಾರದಲ್ಲಿ ನೋಡುಗರಿಗೆ ಯಾವುದೇ ಮೋಸವಾಗದಂತೆ ಮೊನಚಾದ ಮತ್ತು ಅಗತ್ಯವಾದ ಸಂಭಾಷಣೆಯನ್ನು ಚಿತ್ರದುದ್ದಕ್ಕೂ ಸೇರಿಸಿದ್ದಾರೆ. ಆದರೆ,  ಅಲ್ಲಲ್ಲಿ ಸಂಭಾಷಣೆಯೇ ಅತಿ ಎನ್ನುವಷ್ಟು ಇದೆ. ಕೆಲವೊಂದು ಕಡೆ ಮೌನಕ್ಕೂ ಅದ್ಯತೆ ಕೊಟ್ಟು, ಆ ಮೂಲಕ ಕಲಾವಿದರ ಮುಖಾಭಿನಯಕ್ಕೆ ಒತ್ತುಕೊಡಬಹುದಿತ್ತು.

ಭಾಷೆ: ಶುದ್ಧ ದಕ್ಷಿಣ ಕನ್ನಡದ್ದು. ನೀವು ಅಲ್ಲಿನ ನೇಟಿವ್ ಪರಿಸರದವರಾಗಿರದಿದ್ದರೆ, ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಆದರೆ, ಸಬ್ ಟೈಟಲ್ ಇರೋದರಿಂದ ಸಹಾಯವಾದೀತು. ಸಬ್ ಟೈಟಲ್ ಇಂಗ್ಲೀಷ್ ಅನುವಾದ ಇನ್ನಷ್ಟು ಚೆನ್ನಾಗಿರಬಹುದಿತ್ತು. ಇಲ್ಲಿ, ಅನುವಾದಕರಿಗೆ ಖಂಡಿತ ಕಷ್ಟವಾಗುತ್ತದೆ, ಆದರೆ, ಆಯಾ ಮಾತಿನ ತೂಕಕ್ಕೆ ತಕ್ಕಂತೆ ಇಂಗ್ಲೀಷಿನ ಬದಲಾವಣೆಗೆ ಅವಕಾಶವಿದೆ.

ಹಿನ್ನೆಲೆ ಸಂಗೀತ, ಸುಮಾರಾಗಿದೆ. ಕೆಲವೊಂದು ಸನ್ನಿವೇಶಗಳಲ್ಲಿ, ಇನ್ನೂ ಗಂಭೀರ, ರೌದ್ರ, ಕರುಣಾ ರಸಗಳನಾಧರಸಿ, ಇನ್ನಷ್ಟು ಪ್ರಯೋಗಗಳನ್ನು ಮಾಡಬಹುದಿತ್ತು. ಭಾನು ಪಾತ್ರ, ತನ್ನ ನೋವುಗಳನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋಗುವಾಗ, ಆ ಭಾವನೆಗಳಿಗೆ ಇನ್ನಷ್ಟು ಒತ್ತನ್ನು ಕೊಟ್ಟು ಆ ಮಾತು, ಅಭಿನಯಗಳನ್ನು "ಭಾರ"ವಾಗಿಸಬಹುದಿತ್ತು. ಹಾಡುಗಳಲ್ಲಿ, ಪ್ರಾಸಕ್ಕೆ ಜೋತು ಬಿದ್ದು, ಒಂದಿಷ್ಟು ಪದಗಳನ್ನು ತುಂಬಿ ಕಸರತ್ತು ಮಾಡಿದ ಹಾಗಿದೆ. ಹಾಸ್ಯವಿರಲಿ, ಗಂಭೀರ ಸನ್ನಿವೇಶವಿರಲಿ - ಒಂದೆರಡು ಸಾಲುಗಳನ್ನು ಹಿನ್ನೆಲೆಯಲ್ಲಿ ಹಾಡಿಸಬಹುದಿತ್ತು. "ಹೂ ತೆರೆಯುತಿದೆ ಹೊರಟಿರುವ ನಸುಕಿನಲಿ, ಹಾತೊರೆಯದೆ ಕುಣಿಯುತಿದೆ ಮನಸಿನಲಿ"... ಅರ್ಧ ಬೆಂದ ಈ ಹಾಡಿನ ಸಾಹಿತ್ಯದಲ್ಲಿ ಬಹಳ ಕಷ್ಟ ಪಟ್ಟು ಪದಗಳನ್ನು ಜೋಡಿಸಿದ ಹಾಗೆ ಕಾಣಿಸುತ್ತದೆ. ಹಾಗೆಯೇ, ಹಿನ್ನೆಲೆ ಸಂಗೀತದಲ್ಲಿ ಉಪಯೋಗಿಸಿದ ವಾದ್ಯ ಮತ್ತು ಅವುಗಳ ಧ್ವನಿಯಲ್ಲಿ ಪಕ್ವತೆ ಇದ್ದಂತೆ ಅನಿಸಲಿಲ್ಲ. ಮದುವೆ ಮನೆಯ ಕುಡಿತದ ಹಾಡು, ಮನದಲ್ಲಿ ನಿಲ್ಲದು. ಒಂದು ಐಟಂ ಸಾಂಗು, ಒಂದು ಫ಼ೈಟು ಇರುವ ಸಿನಿಮಾ ಎನ್ನುವುದಕ್ಕೆ ಇಂಬು ಕೊಡಲಾಗಿದೆಯೇನೋ ಎಂದು ಅನುಮಾನ ಹುಟ್ಟುತ್ತದೆ. ಮೈ ಮುರಿಯುವಂತೆ ಹೊಡೆದಾಡಿಕೊಂಡ ಜನ, ಕೊನೆಗೆ ಎಲ್ಲ ಎದ್ದು ಸರಿ ನಿಲ್ಲುವುದು ನಾಟಕೀಯವಾದಂತೆ ಕಾಣುತ್ತದೆ.

ಹೆಂಡ-ಸರಾಯಿ ಸಹವಾಸ: ನಿಜವಾಗಿ ಜನ ಅಷ್ಟೊಂದು ಕುಡಿಯುತ್ತಾರೆಯೇ? ಒಂದಿಷ್ಟು ಕುಡುಕರು ಇರಬಹುದು. ಊರಿಗೆ ಊರೇ ಟೈಟ್ ಆಗುವ ಇಂಥ ವಾತಾವರಣ, ನಿಜವಾಗಿಯೂ ಇರುವುದಾದರೆ ಅದು ನಮ್ಮ ದುರ್ದೆಸೆ. ಮದುವೆಯ ಮನೆಯ ವಾತಾವರಣವನ್ನು ಕಥೆಯ ಬೆಳವಣಿಗೆಗೆ ಬಳಸಿಕೊಳ್ಳಲಾಗಿದೆಯೋ, ಅಥವಾ ಕ್ಯಾರಕ್ಟರ್ ಬಿಲ್ಡ್ ಮಾಡಲಾಗಿದೆಯೋ ಗೊತ್ತಿಲ್ಲ.

ಈ ಚಿತ್ರದ ಮುಖ್ಯ ಅಂಶ ಎಂದರೆ ಸಹ ಕಲಾವಿದರಿಂದ ಒಳಗೊಂಡ ಕಥಾ ಹಂದರ. ಆ ಪಾತ್ರಗಳೆಲ್ಲವೂ, ಈ ಅಭಿನಯ ತಮ್ಮ ನಿಜವಾದ ಜೀವನದ ಭಾಗ ಎನ್ನುವಂತೆ ಈ ಚಿತ್ರದಲ್ಲಿ ಒಳಗೊಂಡಿರುವುದು ಬಹಳ ಮುಖ್ಯವಾದ ಅಂಶ. ಈ ಹೈಲೈಟ್ ಒಂದರಿಂದಲೇ, ಚಿತ್ರ ಏಕೆ ಇಷ್ಟೊಂದು ಜನಪ್ರಿಯತೆಯನ್ನು ಗಳಿಸಿತು, ಎನ್ನುವುದಕ್ಕೆ ಉತ್ತರ ಕೊಡಬಹುದು. ಅವರೆಲ್ಲರ ಅಭಿನಯ ಸಹಜವಾಗಿದೆ. ಪೋಷಕ ಮತ್ತು ಸಹನಟರ ಪಾತ್ರಗಳಲ್ಲಿ, ಬಾವನಾಗಿ ಪುಷ್ಪರಾಜ್ ಬೋಳಾರ್, ಚಂದ್ರನಾಗಿ ಪ್ರಕಾಶ್ ತೂಮಿನಾಡು, ಸತೀಶನಾಗಿ ದೀಪಕ್ ರೈ ಮತ್ತು ಚಿತ್ರದ ಕಥಾ ನಾಯಕಿ"ಯಾಗಿ ಭಾನು ಪಾತ್ರವನ್ನು ನಿರ್ವಹಿಸಿದ ಸಂಧ್ಯಾ ಅರೆಕೆರೆ ಅವರ ಪಾತ್ರಗಳು ನಿಮ್ಮನ್ನು ಚಿತ್ರ ಮುಗಿದ ನಂತರವೂ ಕಾಡುತ್ತವೆ.

ಆದರೆ, ವಸ್ತ್ರವಿನ್ಯಾಸ (ಕಾಸ್ಟ್ಯೂಮ್) ಮತ್ತು ಮೇಕಪ್‌ಗಳಲ್ಲಿ ಈ ಚಿತ್ರ ಸ್ವಲ್ಪ ಕಡಿಮೆ  ಅಂಕಗಳಿಸುತ್ತದೆ. ಕೆಲವೊಂದು ಫ಼್ರೇಮ್‌ನಲ್ಲಿ 20, 30, 40 ಜನರಿರುವ ಕಡೆ - ಸುಮ್ಮ ಸುಮ್ಮನೇ ಊರಿನವರನ್ನೆಲ್ಲ ಕರೆದು ಕೂರಿಸಿದಂತೆ ಕಂಡುಬರುತ್ತದೆ, ಅವರಿಗೆ ಸರಿಯಾದ ಕ್ಯಾಮೆರಾ ಓರಿಯೆಂಟೇಶನ್ ಕೂಡ ಇರುವಂತೆ ಕಂಡು ಬರುವುದಿಲ್ಲ.

ಕರುಣಾಕರ ಗುರೂಜಿಯ ಪಾತ್ರದಲ್ಲಿ ಇನ್ನಷ್ಟು ಆಳ ಮತ್ತು ಅನುಭವವನ್ನು ನಿರೀಕ್ಷಿಸಿದ್ದೆವು. ರೌದ್ರ, ಕರುಣೆ, ದಯೆ, ಮೊದಲಾದ ಅನುಭವವನ್ನು ಧಾರಾಳವಾಗಿ ತಮ್ಮ ಸಹಜ ಅಭಿನಯದಲ್ಲಿ ಹೆಣೆಯುವ ರಾಜ್ ಶೆಟ್ಟಿ, ಇಲ್ಲಿ ಡೋಂಗಿ ಬಾಬಾ ಆಗಿ ಅಷ್ಟೊಂದು ಪರಿಣಾಮಕಾರಿಯಾಗಿ ಅವರ ನಟನೆ ಕಾಣುವುದಿಲ್ಲ. ಅಸಹಾಯಕತೆಯ ಅವರ ನಗುವಿನಲ್ಲಿ ಏಕತಾನತೆ ಇಲ್ಲದೇ, ಒಂದು ಕಡೆ ಬಾಲಿಶವೂ ಅಲ್ಲ, ಮತ್ತೊಂದು ಕಡೆ ಅನುಭವ ಜನ್ಯ ಅಭಿನಯವೂ ಇಲ್ಲದೇ ಸಪ್ಪೆಯಾಗಿ ಕಾಣುತ್ತದೆ. ರಾಜ್ ಅವರಿಂದ, ಇನ್ನಷ್ಟು ಗಹನವಾದ ಮತ್ತು ಮನೋಜ್ಞವಾದ ಅಭಿನಯವನ್ನು ನಿರೀಕ್ಷಿಸಿದವರಿಗೆ ಸ್ವಲ್ಪ ನಿರಾಸೆಯಾಗಬಹುದು.

ಒಂದು ಭಯವನ್ನು(horror) ಆದರಿಸಿದ ಕಥಾ ಹಂದರದಲ್ಲಿ ಹಾಸ್ಯ ಪ್ರದಾನವಾದ ಕಥೆಯನ್ನು ಜನರಿಗೆ ಉಣಬಡಿಸುವುದು ಅಷ್ಟೊಂದು ಸುಲಭವಲ್ಲ. ಚಿತ್ರದ ಪಾತ್ರಗಳ ಸಹಜವಾದ ಸಂಭಾಷಣೆ, ಜನರಲ್ಲಿ ನಲಿವು ಹುಟ್ಟಿಸಿ, ನಗುವನ್ನು ಸಹಜವಾಗಿ ಮೂಡಿಸುತ್ತದೆ. ಚಿತ್ರದ ಪಾತ್ರಗಳ ಮೇಲೆಯೇ ಫ಼ೋಕಸ್ ಮಾಡಿ, ಚಿತ್ರವನ್ನು ನೋಡುವುದಾದರೆ, ಕೊನೇಪಕ್ಷ ಮೂರು ಸಲವಾದರೂ ಚಿತ್ರವನ್ನು ನೋಡುವಷ್ಟು ಉತ್ತಮ ಅಂಶಗಳಿವೆ. ಎಲ್ಲೂ ಅಶ್ಲೀಲತೆ ಎದ್ದು ಕಾಣುವುದಿಲ್ಲ, ಕೆಲವು ಕಡೆ ಕಂಡರೂ ಸಹಜವಾಗಿ ಬಿಂಬಿತವಾಗಿರುವುದುರಿಂದ ಅದು ಸಹ್ಯವಾಗುತ್ತದೆ. ಈ ಎಲ್ಲ ದೃಷ್ಟಿಯಿಂದ ಪೂರ್ಣ ಪರಿವಾರ ನೋಡಿ ಆನಂದಿಸಬಹುದಾದ ಸಿನಿಮಾ ಇದು ಎನ್ನಬಹುದು.

ಚಿತ್ರದಲ್ಲಿ ಜನರು ಅತಿ ಹೆಚ್ಚು ಇಷ್ಟ ಪಡುವ ಹಾಸ್ಯ ಬೇಕಾದಷ್ಟಿದೆ. ಆದರೆ, ಹೆಣ್ಣಿನ ಮೇಲಿನ ದೌರ್ಜನ್ಯ, ಮದ್ಯ-ಮದಿರೆಯ ಮೇಲಿನ ಯುವ ಜನರ ಅವಲಂಬನೆ, ಒಂದು ಹಳ್ಳಿ-ಊರು-ಜನರ ಪ್ರವೃತ್ತಿ, ಅವರ ತಿಳುವಳಿಕೆ ಹಾಗೂ ಸಾಮಾಜಿಕ ಆರೋಗ್ಯದ ಮೇಲೆಯೂ ಈ ಚಿತ್ರ ಬೆಳಕು ಚೆಲ್ಲುತ್ತದೆ. ಆದರೆ, ಅವೆಲ್ಲ, ಹಾಸ್ಯದ ನೆರಳಿನಲ್ಲಿ ಗೌಣವಾಗಿ ಹೋಗಬಹುದು. ಮಂಗಳೂರು ಪ್ರಾಂತ್ಯಕ್ಕೆ ನೇಟಿವ್ ಅಲ್ಲದವರು ಈ ಚಿತ್ರವನ್ನು ನೋಡಿದರೆ, ಕೆಲವು ಕಡೆ "ಜನ ಹೀಗೂ ಬದುಕುತ್ತಾರೆಯೇ" ಎಂದು ಅಸಹ್ಯವಾಗಲೂ ಬಹುದು. ಎಲ್ಲಿ ಹೋದರೂ, ಬಂದರೂ ನಾವು-ನಮ್ಮವರನ್ನು ಒಂದು ಒಳ್ಳೆಯ ಬೆಳಕಿನಲ್ಲಿ ತೋರಿಸುವ ಆಂತರಿಕ ಜವಾಬ್ದಾರಿ ಎಲ್ಲರ ಮೇಲೆಯೂ ಸಹಜವಾಗಿ ಇರೋದಿಲ್ಲವೇ? ಇಲ್ಲವೆಂದರೆ, ಇತ್ತೀಚಿನ ದಿನಗಳಲ್ಲಿ ಅದ್ಯಾವ ಮದುವೆ ಮನೆ  ಊಟದ ಪಂಕ್ತಿಗಳಲ್ಲಿ, ಹಿಂದೆ ಊಟ ಮಾಡಿದವರ ಎಂಜಲನ್ನು ಒರೆಸದೇ, ಸ್ವಚ್ಛಮಾಡದೇ ಮುಂದಿನ ಪಂಕ್ತಿಯವರಿಗೆ ಊಟಕ್ಕೆ ಹಾಕಬಹುದು? ಹೀಗೆ, (ಜನರಿಗೆ ಕಲ್ಚರ್ ಇಲ್ಲವೇನೋ ಎಂಬುವಂತೆ, )ಊಟಮಾಡಿದ ಟೇಬಲ್ಲನ್ನೂ ನೆಟ್ಟಗೆ ಒರೆಸದೆ ಊಟಕ್ಕೆ ಕೂರುವ ಜನರನ್ನು ಕಂಡರೆ ಅಸಹ್ಯ ಹುಟ್ಟುತ್ತದೆ.

ಛಾಯಾಚಿತ್ರಗ್ರಹಣ: ಎಸ್. ಚಂದ್ರಶೇಖರನ್ ಅವರು, ಕರಾವಳಿಯ ಸೊಬಗನ್ನು ಇನ್ನಷ್ಟು ಸೇರಿಸಬಹುದಿತ್ತು, ಆದರೆ ಅವಕಾಶಗಳು ಕಡಿಮೆ. ಚಿತ್ರದ ಹೆಚ್ಚು ಭಾಗ ಒಂದೆರಡು ಹೊರಾಂಗೀಣ ಫ಼್ರೇಮುಗಳಲ್ಲಿ ನಡೆಯುವುದರಿಂದ ಕ್ಯಾಮೆರಾ ಕಣ್ಣಿಗೆ ಪರಿಸರದ ಸೊಬಗನ್ನು ಅಸ್ವಾದಿಸಲು ಅವಕಾಶ ಕಡಿಮೆ. ಆದರೆ, ಪಾತ್ರಗಳ ಕ್ಲೋಸ್ ಅಪ್, ಚೆನ್ನಾಗಿ ಬಂದಿದೆ. ಜೆ.ಪಿ ಮತ್ತು ಸಂಧ್ಯಾ ಅವರ ಪಾತ್ರಗಳ ಮುಖಾಭಿನಯ, ಕೆಲವೊಂದು ಭಾವನೆಗಳ ಬಣ್ಣನೆ ಇನ್ನಷ್ಟು ಗಾಢವಾಗಬಹುದಿತ್ತು. ಹತ್ತಿರದಿಂದ ಸೆರೆಯಾದ ಮುಖಗಳಲ್ಲಿ, ಕೆಲವು ಕಡೆ, ನೆರಳು-ಬೆಳಕನ್ನು ಉಪಯೋಗಿಸಿ ಪರಿಸ್ಥಿತಿಯ ಗಂಭೀರತೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದಿತ್ತು.

ರವಿಯಣ್ಣ: ಈ ಪಾತ್ರದಲ್ಲಿ ಶನೀಲ್ ಗೌತಮ್ ಅವರ ಸಹಜ ಅಭಿನಯ, ಮಾತು, ಹಾವ-ಭಾವ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಪ್ರತಿ ಊರಿಗೆ ಒಬ್ಬ ರವಿಯಣ್ಣ ಇರಬೇಕು ಎನ್ನುವಂತೆ ಅವರು ತಮ್ಮ ಅಭಿನಯದ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಕಥೆಗೆ ಜೆಪಿ ಮತ್ತು ಶನೀಲ್ ಅವರು ಎರಡು ಮುಖ್ಯ ಆಧಾರ ಸ್ಥಂಭಗಳು ಎನ್ನಬಹುದು. 

ಒಂದು ಮನೋಜ್ಞ ಕಥೆಯನ್ನು ಆಧರಿಸಿ, ಜೆಪಿ ತೂಮಿನಾಡು, ಒಂದು ಒಳ್ಳೆಯ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಒಬ್ಬ ಉದಯೋನ್ಮುಖ ನಿರ್ದೇಶಕ ಮತ್ತು ಕಲಾವಿದನಾಗಿ ಜೆಪಿ ಸಂಪೂರ್ಣ ಅಂಕ ಗಿಟ್ಟಿಸಿದ್ದಾರೆ. ರಾಜ್ ಅವರು 2017 ರಲ್ಲಿ ಒಂದು ಮೊಟ್ಟೆಯ ಕಥೆಯ ಮೂಲಕ ಕನ್ನಡಿಗರನ್ನು ತಲುಪಿದಂತೆ, ಜೆಪಿ ಅವರು ಈ ಚಿತ್ರ, ಕತೆ ಮತ್ತು ನಿರ್ದೇಶನದ ಮೂಲಕ ಕನ್ನಡಿಗರಿಗೆ ಬಹಳ ಆತ್ಮೀಯರಾಗುತ್ತಾರೆ. ಇವರಿಂದ ಇನ್ನಷ್ಟು ಪ್ರಬುದ್ಧತೆಯ ಚಿತ್ರಗಳನ್ನು ನಿರೀಕ್ಷಿಸಿಸಬಹುದು.

Friday, February 02, 2024

ಟಗರು ಪಲ್ಯ: ಚಿತ್ರದ ಬಗ್ಗೆ ಅನಿಸಿಕೆ

ಹಳ್ಳಿಯ ಸೊಗಡಿರುವ ಸಿನಿಮಾ ಎಂದು ತಕ್ಷಣವೇ ಗೊತ್ತಾಗುವಷ್ಟು ಗಾಢತೆ ಈ ಸಿನಿಮಾದಲ್ಲಿದೆ.  ಹಳ್ಳಿಯ ಕುರಿತ ಸಿನಿಮಾಗಳಿಗೆ "ಕೋಳಿ ಎಸ್ರು" ಎನ್ನುವ ಹೆಸರು ಇದ್ದಾಗ ಅದು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದರೆ, ಇತ್ತ ಪೂರ್ಣವಾಗಿ ಇಂಗ್ಲೀಷೂ ಅಲ್ಲದ, ಅತ್ತ ಕನ್ನಡವೂ ಅಲ್ಲದ - ಟಗರು ಪಲ್ಯ - ಎನ್ನುವ ಹೆಸರು ಅದೇಕೋ ಅಷ್ಟೊಂದು ಸೂಕ್ತ ಎನಿಸುವುದಿಲ್ಲ. ಮಟನ್ ಚಾಪ್ಸ್ ಅನ್ನೋದನ್ನ ನೇರವಾಗಿ ಕನ್ನಡಕ್ಕೆ ತರ್ಜುಮೆ ಮಾಡಿದ ಹಾಗಿದೆ. ತರಕಾರಿ ಪಲ್ಯಕ್ಕೆ ಹೊಂದಿಕೊಳ್ಳುವ ಹಾಗೆ, ಕುರಿ-ಕೋಳಿಗಳು ಹೊಂದಿಕೊಳ್ಳಬಹುದೇನೋ, ಆದರೆ ಟಗರು ಪದ ಹೊಂದಿಕೊಳ್ಳುವುದು ಅಸಹಜವಾಗಿ ಕಂಡುಬರುತ್ತದೆ.



ಒಂದು ಹಳ್ಳಿಯ ಮನೆ, ಮನೆಯ ಮುಂದಿನ ಕಟ್ಟೆಯ ಸುತ್ತ ನಡೆಯುವ ಒಂದೆರಡು ದೃಶ್ಯಗಳನ್ನು ಬಿಟ್ಟರೆ, ಉಳಿದ ಕಥೆ ಒಂದೇ ಒಂದು ಹೊರಾಂಗಣದಲ್ಲಿ ನಡೆಯುತ್ತದೆ. ಮಿತವಾದ ಪಾತ್ರಧಾರಿಗಳು. ಅದರಲೂ ಕಥಾ ನಾಯಕಿ ಮತ್ತು ನಾಯಕ ಇಬ್ಬರೂ ಹೊಸಬರು. ಇದುವರೆಗೆ ಹಾಸ್ಯಭರಿತ ಪಾತ್ರದಲ್ಲಿ ಸಹ ಕಲಾವಿದನಾಗಿದ್ದ ನಾಗಭೂಷಣ್ ಅವರು ಇಲ್ಲಿ ನಾಯಕನಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದರಲ್ಲಿಯೂ ಅವರು ಆ ಸ್ಥಳೀಯ ಭಾಷೆಯ ಸೂಕ್ಷ್ಮತೆಯನ್ನು ಗಮನಿಸಿ ಅದರಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಈ ಸಿನಿಮಾದ ಚಿತ್ರಕತೆಯನ್ನು ಬರೆಯುವುದು, ಅದನ್ನ ಮನನ ಮಾಡಿಕೊಂಡು ಅಲ್ಲಿನ ನೇಟಿವ್ ಭಾಷೆಗೆ ನ್ಯಾಯ ಒದಗಿಸಿ, ಜೊತೆಗೆ ತಮ್ಮ ಭಾವನೆಗಳನ್ನೂ ಪ್ರಕಟಿಸುವುದು ಅಷ್ಟೊಂದು ಸುಲಭದ ವಿಷಯವಲ್ಲ. ಈ ನಿಟ್ಟಿನಲ್ಲಿ ನಾಗಭೂಷಣ್ ಅವರ ಪಾತ್ರ ಸರಳ ಮತ್ತು ಭಿನ್ನವಾಗಿ ನೆನಪಿನಲ್ಲುಳಿಯುತ್ತದೆ.

ಕಥಾನಾಯಕಿ, ಅಮೃತಾಪ್ರೇಮ್ ಮೊದ ಮೊದಲು ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆಯದಿದ್ದರೂ, ಅಂತಿಮ ಹಂತದಲ್ಲಿ ಅವರು ಈ ಚಿತ್ರದಲ್ಲಿ ನಟಿಸಲು ಪಟ್ಟ ಪರಿಶ್ರಮ ಎದ್ದು ಕಾಣುತ್ತದೆ. ಹೊರಾಂಗಣದಲ್ಲಿ, ಅದೂ ತಮ್ಮ ಮೊದಲ ಚಿತ್ರದಲ್ಲಿ ಭಾಷೆ-ಭಾವನೆಗಳ ಅಭಿವ್ಯಕ್ತಿಯ ಮೂಲಕ ಎಲ್ಲರ ಕಣ್ಣಂಚಿನಲ್ಲಿ ನೀರೂರುವ ಸಾಹಸವನ್ನು ನಿರ್ದೇಶಕ ಉಮೇಶ್ ಅವರು ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಹಾವ-ಭಾವಗಳಿಂದ ಇಷ್ಟವಾಗುವ ಅಮೃತಾ, ಇನ್ನೂ ನಟನೆಯಲ್ಲಿ ಚೆನ್ನಾಗಿ ಪಳಗಬೇಕು, ಆದರೆ ಈ ಚಿತ್ರ ಅವರಿಗೊಂದು ಸವಾಲಾಗಿದ್ದು, ಆ ಸವಾಲಿನಲ್ಲಿ ಗೆದ್ದಿದ್ದಾರೆ ಎನ್ನಬಹುದು.

ರಂಗಾಯಣ ರಘು ಮತ್ತು ತಾರಾ ಅವರ ಪಾತ್ರ ಮತ್ತು ಅಭಿನಯದ ಬಗ್ಗೆ ಹೆಚ್ಚು ಹೇಳುವ ಅಗತ್ಯವೇ ಇಲ್ಲ. ಇಬ್ಬರೂ ನುರಿತ ಕಲಾವಿದರು, ತಮಗೆ ಪಾತ್ರ ಮತ್ತು ಜವಾಬ್ದಾರಿಯನ್ನು ನಿರೀಕ್ಷೆಗಿಂತಲೂ ಹೆಚ್ಚು ಚೆನ್ನಾಗಿ ನಡೆಸಿಕೊಟ್ಟಿದ್ದಾರೆ. ಚಿತ್ರದಲ್ಲಿ ಸ್ವಲ್ಪವೂ ಸಾಮಾನ್ಯ ಜ್ಞಾನವಿರದಂತೆ ಚಿತ್ರಿಸಿದ ವಾಸುಕಿ ವೈಭವ್ ಅವರ ಟೆಕ್ಕಿ ಪಾತ್ರ ಕಿರಿಕಿರಿ ಮಾಡುತ್ತದೆ. ಕುರಿ ಹಿಕ್ಕೆಗೂ ಕಡಲೇಬೀಜಕ್ಕೂ ವ್ಯತ್ಯಾಸಗೊತ್ತಿರದ ಟೆಕ್ಕಿಗಳನ್ನು ತೋರಿಸುವ ನಿರ್ದೇಶಕರಿಗೆ, ಟೆಕ್ಕಿಗಳ ಮೇಲೆ ಹಗೆ ತೀರಿಸಿಕೊಂಡಂತಾಗಿರಬೇಕು. ಇನ್ನು, ಸಂಗೀತ ನೀಡುವ ವಾಸುಕಿ ಅವರನ್ನು ಒತ್ತಾಯಪೂರ್ವಕವಾಗಿ ನಟನೆಗೆ ದೂಡಿದ್ದಾರೆನೋ ಎಂಬ ಸಂಶಯವೂ ಮೂಡುತ್ತದೆ.

ಟೈಟಲ್ ಸಾಂಗ್‌ನಲ್ಲಿ ಅನಗತ್ಯವಾಗಿ "ಟಗರುಪಲ್ಯ"ವನ್ನು ತುರುಕಿರದಿದ್ದರೆ, ಒಂದು ಹಳ್ಳಿಯಗಾಥೆಯಾಗಿ ನೆನಪಿನಲ್ಲುಳಿಯುತ್ತಿತ್ತೇನೋ. ಆದರೆ, ಚಿತ್ರದುದ್ದಕ್ಕೂ ಸಂಗೀತ ಎಷ್ಟು ಪೇಲವವಾಗಿದೆಯೋ, ಹಾಡುಗಳೂ ಹಾಗೇ ಇವೆ. ಒಂದೇ ಸ್ಥಳದಲ್ಲಿ ನಡೆದದ್ದನ್ನು ಚಿತ್ರೀಕರಿಸಲು ಛಾಯಾಗ್ರಾಹಕರೇನು ಹೆಚ್ಚು ಕಷ್ಟಪಟ್ಟಂತಿಲ್ಲ, ಇದ್ದುದರಲ್ಲಿ ತಮಗೆ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನಬಹುದು. ಇನ್ನು ಪೋಷಕ ಪಾತ್ರಗಳಲ್ಲಿ ಬಿರಾದಾರ್ ನಟನೆ ಎದ್ದು ಕಾಣುತ್ತದೆ. ತಮಗೆ ಸಹಜವಲ್ಲದ ಭಾಷೆಯಲ್ಲೂ ಪರಿಪಕ್ವತೆಯನ್ನು ಕಂಡು, ದೊಡ್ಡಪ್ಪನಾಗಿ ನಟಿಸುವ ಅವರ ನಿಲುವು ಇಷ್ಟವಾಗುತ್ತದೆ.  ಇನ್ನು ಹಾಸ್ಯದ ಹೆಸರಿನಲ್ಲಿ ಹೆಂಡ, ಹೆಂಡದ ಮತ್ತಿನಲ್ಲಿ ಹಾಸ್ಯ ಸ್ವಲ್ಪ ಅತಿ ಎನ್ನಿಸಿದರೂ, ಇಂದಿನ ಗ್ರಾಮೀಣ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಸರಿಯಾಗಿವೆ. ಪೂಜಾರಪ್ಪನ ಪಾತ್ರ, ಬೆಂಗಳೂರಿನ ಸಂಬಂಧಿಕರ ಪಾತ್ರಗಳು, ಸ್ಥಳೀಯ ರೈತಾಪಿ ವರ್ಗದ ಭಕ್ತರ ಪಾತ್ರಗಳು ಎಲ್ಲವೂ ಚೆನ್ನಾಗಿ ಹೊಂದಿಕೊಂಡಿವೆ.

ಕಡಿಮೆ ಬಜೆಟ್ಟಿನಲ್ಲಿ ಮಾಡಿ ಸಂಪೂರ್ಣ ಚಿತ್ರವನ್ನು ನಿರ್ಮಿಸಿದ ತಂಡ, ಈ ಚಿತ್ರ ಬಿಡುಗಡೆಯಾಗಿ ಕರ್ನಾಟಕದುದ್ದಗಲಕ್ಕೂ ಎಲ್ಲ ಕಡೆ ನಡೆಯುತ್ತದೆ ಎಂದು ಅಂದುಕೊಂಡರೆ ಕಷ್ಟ. ಇದು, ಗ್ರಾಮೀಣ ಸೊಗಡಿನ ಚಿತ್ರ. ಅದರಲ್ಲೂ ಒಂದು ತಾಲೂಕಿನ ಭಾಷೆ, ಅದರ ಕ್ಲಿಷ್ಟತೆಯನ್ನು ಅರಗಿಸಿಕೊಂಡಿರುವುದರಿಂದ ಆ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗುವುದೇನೋ ಎನ್ನುವ ಅನುಮಾನ ಮೂಡುತ್ತದೆ. ಹಾಗೆಯೇ, ಬಿಡುಗಡೆಯಾಗಿ, ಒಂದು ವಾರದಲ್ಲೇ ಮೂಡಿಮರೆಯಾಗುವ ಚಿತ್ರಕ್ಕೆ ಇಷ್ಟೊಂದು ಕಷ್ಟಪಡಬೇಕಿತ್ತೇನೋ ಎಂದು ಬೇಸರವೂ ಆಗುತ್ತದೆ. ಈ ಚಿತ್ರವನ್ನು ನಾಟವನ್ನಾಗಿ ಮಾಡಿ ಸಂಬಂಧಪಟ್ಟ ಗ್ರಾಮೀಣ ಭಾಗಗಳಲ್ಲಿ ಪ್ರದರ್ಶಿಸಿದ್ದರೆ ಹೇಗಿರುತ್ತಿತ್ತು, ಅದರಿಂದ ಹೆಚ್ಚಿನ ಪರಿಣಾಮವೇನಾದರೂ ಆಗುತ್ತಿತ್ತೇನೋ ಎಂದು ಯೋಚಿಸಬಹುದು.

ಮುಖ್ಯವಾಗಿ ಕಥೆ ಸಾರುವ ಸಂದೇಶ ಸರಳವಾದುದು. ಹಾಗಿದ್ದಾಗ, ಈ ಚಿತ್ರದ ಸ್ವಾರಸ್ಯ ಮತ್ತು ಶಕ್ತಿ ಎಲ್ಲವೂ ಚಿತ್ರಕತೆ ಮತ್ತು ಅದರ ಭಾಷ್ಯದಲ್ಲಿಯೇ ಇದೆ ಎಂದರೆ ತಪ್ಪಾಗಲಾರದು. ಸದಾ ತಮಗೆ ಗೊತ್ತಿರದ ಸುಖದ ಸಂಪತ್ತಿನ ಮರೀಚಿಕೆಯನ್ನು ಅರಸಿ, ತಮಗೆ ಗೊತ್ತಿರದ ದೂರದ ಬೆಂಗಳೂರಿನ ಗಂಡುಗಳೇ ಬೇಕು ಎಂದು ಪೋಷಕರಿಗೆ ಗಂಟುಬೀಳುವ ಮದುವೆಗೆ ಬಂದ ಹೆಣ್ಣುಮಕ್ಕಳು ಈ ಚಿತ್ರದ ದೆಸೆಯಿಂದಲಾದರೂ ಒಂದಿಷ್ಟು ಪಾಠಗಳನ್ನು ಕಲಿತರೆ ಒಳ್ಳೆಯದು. ತಮ್ಮ ನೆರೆಹೊರೆಯಲ್ಲಿ ತಮ್ಮ ನಿಲುವು-ಅಂತಸ್ತಿಗೆ ತಕ್ಕಂತೆ ಇರುವುದನ್ನು ಆಯ್ದುಕೊಳ್ಳುವುದರ ಮೂಲಕ ಸಹಜವಾಗಿ ಬದುಕಬೇಕು ಎನ್ನುವುದು ಈ ಚಿತ್ರದ ಆಶಯ. ಚಿತ್ರದ ಕೊನೆಯಲ್ಲಿ ಬರುವ ಮಾತು, "...ನೋಡಿ ಮಾಡಿ ಹೆಣ್ ಕೊಡಿ, ಸಂಬಧಗಳಿಗೆ ಬೆಲೆ ಕೊಡಿ..." ಎನ್ನುವುದು ಅಕ್ಷರಶಃ ಸತ್ಯವಾದುದು. ಚಿತ್ರದ ಕೊನೆಯಲ್ಲಿ ತೋರಿಸುವ ಕಲಾವಿದರ ಕುಟುಂಬಗಳ ಗ್ರೂಪ್ ಫ಼ೋಟೋಗಳು, ಹಿನ್ನೆಲೆಯ ಹಾಡಿನ ಆಶಯ ಕುಟುಂಬ ಪ್ರೇಮವನ್ನು ಎತ್ತಿ ತೋರುತ್ತದೆ, ಹಾಗೂ ಕುಟುಂಬಗಳ ಅಗತ್ಯವನ್ನು ಎತ್ತಿ ಹಿಡಿಯುತ್ತವೆ.  ಇಂದಿನ ಒಬ್ಬಂಟಿ ತನದ ಏಕತಾನದ ಪ್ರಪಂಚದಲ್ಲಿ ತಮ್ಮನ್ನು ತಾವೇ ಕಳೆದುಕೊಂಡಿರುವ ನ್ಯೂಕ್ಲಿಯರ್ ಕುಟುಂಬಗಳಿಗೆ ಈ ಹಾಡು ಛಾಟಿಯ ಏಟಿನಂತೆ ಹೊಡೆಯಬಲ್ಲದು ಕೂಡ.

ಇನ್ನು ಚಿತ್ರ ನಿರ್ಮಾಪಕ ಡಾಲಿ ಧನಂಜಯ ಅವರು ಸಾಹಸ ಪ್ರಧಾನ ಚಿತ್ರಗಳಲ್ಲಿ ಹೀರೋ ಆಗಿ ಮಿಂಚಿ-ಮೆರೆಯುವ ಜೊತೆಗೇ ಈ ಗ್ರಾಮೀಣ ಕನ್ನಡ ಚಿತ್ರಕಥನಕ್ಕೆ ಪೋಷಣೆಯನ್ನು ನೀಡಿರುವುದು ಬಹಳ ದೊಡ್ಡ ವಿಚಾರ. ಈ ಕತೆಯನ್ನು ತೆರೆಯ ಮೇಲೆ ತಂದಿರುವುದರ ಮೂಲಕ, ಕನ್ನಡದಲ್ಲಿ ಒಂದು  ಕುಟುಂಬ ಪ್ರಧಾನ ಚಿತ್ರವನ್ನು ಬೆಂಬಲಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಜೊತೆಗೆ ಅವರು ಚಿತ್ರದ ಹಾಡುಗಳ ರಚನೆಯಲ್ಲೂ ತೊಡಗಿಕೊಂಡಿರುವುದು ಅವರೊಳಗಿನ ಕಲಾವಿದನ ಮನಸ್ಸಿನ ಸಂವೇದನೆಗಳಿಗೆ ಹಿಡಿದ ಕನ್ನಡಿಯಂತಿದೆ. ಹೀಗೆ ಒಂದೇ ದಿನದ ಕತೆಯನ್ನು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿ, ಅನೇಕ ಚಿತ್ರ ಮತ್ತು ಚಿತ್ರಣಗಳನ್ನು ಕಣ್ಣಿಗೆ ಕಟ್ಟಿ, ಹಳ್ಳಿಯ ನೇಟಿವ್ ಭಾಷೆಯ ಮಜಬೂತಾದ ಊಟವನ್ನು ಉಣಿಸಿ,  "...ಸಂಬಂಧ ಅನ್ನೋದು ದೊಡ್ದು ಕಣಾ..." ಎನ್ನುತ್ತಲೇ ಚಿತ್ರ ಕೊನೆಯಾಗುತ್ತದೆ.

Sunday, January 14, 2024

ಸ್ವಾತಿ ಮುತ್ತಿನ ಮಳೆ ಹನಿಯೇ

ನಿನ್ನೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ನೋಡೋ ಅವಕಾಶ ಸಿಕ್ಕಿತು. ನಿಧಾನವಾಗಿ ಓಡುವ ಸಿನಿಮಾ, ಕೊನೆಯಲ್ಲಿ ದುರಂತದಲ್ಲಿ ಕೊನೆಗೊಳ್ಳುವ ಎಲ್ಲ ಮುನ್ನೆಚ್ಚರಿಕೆಗಳು ಸಿಕ್ಕಿದ್ದರೂ, ರಾಜ್ ಬಿ. ಶೆಟ್ಟಿಯಲ್ಲಿ ಒಬ್ಬ ಸಿನಿಮಾ ಕಥಾವಸ್ತುವನ್ನು ಸೂಕ್ಷ್ಮವಾಗಿ ಹೆಣೆಯುವ ಕಸಬುಗಾರಿಕೆಯ ಬರಹಗಾರನನ್ನು ಗುರುತಿಸುವ ನಾನು, ಒಂದು ಸುಂದರವಾದ ಕಥಾ ಹಂದರವನ್ನು ನಿರೀಕ್ಷೆಯಲ್ಲಿಟ್ಟುಕೊಂಡಿದ್ದೆ. ಆ ನಿರೀಕ್ಷೆ ಹುಸಿಯಾಗದಂತೆ ಆದದ್ದು ಈ ಸಿನಿಮಾದ ಹೆಚ್ಚುಗಾರಿಕೆ ಮತ್ತು ಅದರ ಗೆಲುವು ಕೂಡ.

ಕೋಟ್ಯಾಂತರ ರೂಪಾಯಿಗಳನ್ನು ಸುರಿದು ಒಂದು ಭವ್ಯವಾದ ಕಥನವನ್ನು ಹೆಣೆದು ಮೇಲೆದ್ದು ಬಂದು ಗೆದ್ದ ಚಿತ್ರಗಳು ಎಷ್ಟೋ, ಸೋತವುಗಳು ಕೂಡ ಅಷ್ಟೇ. ಈ ಎಲ್ಲ ವ್ಯಾವಹಾರಿಕ ಚಿತ್ರ ಪ್ರಪಂಚದಲ್ಲಿ ಅದೊಂದು ದುಡಿಮೆಯ ಮೂಲವಾಗಿ ಗೆದ್ದಾಗ ನಿರ್ಮಾತೃಗಳನ್ನು ಎತ್ತಿಕೊಂಡಾಡುವಷ್ಟೇ ಸಹಜವಾಗಿ, ಬಿದ್ದಾಗ ಹಣ ಹಾಕಿದವರು ಎಲ್ಲವನ್ನು ಕಳೆದುಕೊಳ್ಳುವುದು ಮಾಮೂಲು. ಆದರೆ, ಈ ಸಣ್ಣ ಬಜೆಟ್ಟಿನ ಚಿತ್ರಗಳಲ್ಲಿ ಹಾಗಲ್ಲ. ಇಲ್ಲಿ ಸೋಲು-ಗೆಲುವು, ಹಣ ಮಾಡಬೇಕು ಎನ್ನುವುದಕ್ಕಿಂತ ಮುಖ್ಯವಾಗಿ ನಿರ್ಮಾತೃಗಳಿಗೆ, ತಮ್ಮ ಮನದಾಳದಲ್ಲಿ ಸೂಕ್ಷ್ಮವಾಗಿ ಹುಟ್ಟಿ, ಕತೆಯಾಗಿ ಬೆಳೆದ ಕತೆಗಳ ಮುಖೇನ, ಒಂದು ಸಂದೇಶವನ್ನು ಸಾರುವುದು ಅವುಗಳ ಧ್ಯೇಯವಾಗಿರುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ, ಈ ಚಿತ್ರ, ರಾಜ್ ಶೆಟ್ಟಿ ಅವರ ಮನದ ಮೂಸೆಯಲ್ಲಿ ಕುದಿದ ಬಂಗಾರದಿಂದ ಮಾಡಿದ ಒಂದು ಸುಂದರವಾದ ಆಭರಣದಂತೆ ಕಂಡು ಬರುತ್ತದೆ.

ಈ ಚಿತ್ರದಲ್ಲಿ ಎಲ್ಲವೂ ನಿಧಾನವೇ. ಕಥಾನಾಯಕಿ ಪ್ರೇರಣ, ಅವಳ ನಡೆ-ನುಡಿ, ಆಡಿದರೆ ದುಡ್ಡು ಖರ್ಚಾಗುವುದೇನೋ ಎನ್ನುವಷ್ಟು ಕಡಿಮೆ ಮಾತುಗಳು. ಹಿನ್ನೆಲೆಯಲ್ಲಿ ಒಂದೇ ಒಂದು ಗುಂಗಿನ ಸಂಗೀತ, ಇವೆಲ್ಲವೂ ನಿಮ್ಮ ತಾಳ್ಮೆಯನ್ನು ಪರೀಕ್ಷಿಸಬಲ್ಲದು. ನಮ್ಮ ವೃತ್ತಿ ಜೀವನದ ಏಳು-ಬೀಳುಗಳು ನಮ್ಮನ್ನು ಪ್ರಬುದ್ಧತೆಯ ವಿಭಿನ್ನ ನೆಲೆಗೆ ಕೊಂಡೊಯ್ಯುವ ಹಲವು ಅಂಶಗಳನ್ನು ಅಭಿವ್ಯಕ್ತಪಡಿಸುವಲ್ಲಿ, ನಾಯಕಿಯದ್ದು ಸಹಜವಾದ ಅಭಿನಯ. ತಮ್ಮ ಇಂಟ್ರೋಶಾಟ್ ಒಂದರಲ್ಲಿಯೇ, ’ಬುಲೆಟ್‌ನಲ್ಲಿ ಬಂದ ಪೇಶೆಂಟ್’ ಆಗಿ ರಾಜ್ ಅವರು ಚಿತ್ರದೊಳಗೆ ತಾವೇ ಒಂದಾಗಿ ಹೋಗಿದ್ದಾರೆ ಎನ್ನುವಷ್ಟು ತನ್ಮಯತೆಯನ್ನು ಪ್ರದರ್ಶಿಸಿದ್ದಾರೆ.

ಒಂದು ಮೊಟ್ಟೆಯ ಕಥೆಯಲ್ಲಿ ನೀವು ರಾಜ್ ಅವರನ್ನು ನೋಡಿದ್ದರೆ, ಇಲ್ಲಿ ಮತ್ತೆ ಆ ವ್ಯಕ್ತಿತ್ವವನ್ನು ಸಮತೋಲಿಸಿಕೊಳ್ಳಬಹುದು. ಚಿತ್ರದಲ್ಲಿ ನಾಯಕನ ಹೆಸರೇ, ಅನಿಕೇತ್, ಮನೆ ಇಲ್ಲದವ... ಅದೂ ಕೂಡ ಈ ಸಂದರ್ಭಕ್ಕೆ ಆತನಿಟ್ಟುಕೊಂಡ ಹೆಸರು ಎಂದು ಗೊತ್ತಾಗುತ್ತದೆ.

ಚಿತ್ರದುದ್ದಕ್ಕೂ ಅನೇಕ ರೂಪಕಗಳಿವೆ, ವಿಡಂಬನೆಗಳಿವೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಅಷ್ಟೇ. ಕಸದಂತೆ ದಿನವಿಡೀ ಹೂವು ಉದುರಿಸುವ ನಂದಿಬಟ್ಟಲು ಗಿಡ, ಅದರೆ ಬಗ್ಗೆ ನಿಮ್ಮಇರುವ ನಿಮ್ಮ ಮನದೊಳಗಿನ ಪ್ರತಿಮೆಯನ್ನು ಈ ಸಿನಿಮಾ ಬದಲಾಯಿಸಬಲ್ಲದು. ಹಾಗೆಯೇ, ಹಾಲು ಹಾಕದ ಚಹಾ, ಬೀದಿ ನಾಯಿ ಹೇಗೆ ಸಾಯುತ್ತದೆ ಎನ್ನುವುದು, ಒಂದು ಕೊಳ/ಕೆರೆ ದಿನದ ವಿವಿಧ ಸಮಯದಲ್ಲಿ ಹೇಗಿರುತ್ತದೆ ಎನ್ನುವುದರ ಮೂಲಕ ನಿಮ್ಮ ಚಿಂತನಶೀಲತೆಗೆ ಇಲ್ಲಿ ಹಲವಾರು ವಸ್ತುಗಳು ಸಿಗುವುದಂತೂ ನಿಜ. ಎಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ಬದುಕಿನ ಆಯಾ ಸಂದರ್ಭಕ್ಕೆ ಇರುವ ಕಷ್ಟದ ಸನ್ನಿವೇಶಗಳನ್ನ ವಾಷಿಂಗ್‌ಮೇಷೀನ್‌ನಲ್ಲಿ ಕೊಳೆ ಬಟ್ಟೆಗಳು ತಿರುವುದರ ಮೂಲಕವೂ ಒಂದು ಸಂದೇಶವನ್ನು ಹೇಗೆ ಹೇಳಬಹುದು ಎನ್ನುವುದು ಸಿನಿಮಾವನ್ನು ಹೇಗೆ ಮಾಡಬಹುದು ಎಂದು ಹಲವು ವಿದ್ಯಾರ್ಥಿಗಳಿಗೆ ಒಂದು ಡಾಕ್ಯುಮೆಂಟ್ ಕೂಡ ಆಗಬಲ್ಲದು.

ಸಿನಿಮಾದಲ್ಲಿ ಅಲ್ಲಲ್ಲಿ ಹೆಣ್ಣೆದ ಸಣ್ಣಪುಟ್ಟ ತಿರುವುಗಳು ಊಟಿಯ ಹೊರಾಂಗಣ ಚಿತ್ರೀಕರಣದಷ್ಟೇ ಸಹಜವಾಗಿ ನಿಮ್ಮನ್ನು ಕಾಡುತ್ತವೆ. ಸಿನಿಮಾದ ಎಲ್ಲ ಪಾತ್ರಗಳೂ ನಿಮ್ಮನ್ನು ಚಿಂತನೆಯ ಒರೆಗೆ ಹಚ್ಚುತ್ತವೆ ಎಂದರೆ ತಪ್ಪಾಗಲಾರದು. ಈ ಚಿತ್ರದಲ್ಲಿ ಪಾತ್ರಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆಯೆಂದರೆ, "ಅವನೇ ಶ್ರೀಮನ್ ನಾರಾಯಣ" ಚಿತ್ರದಲ್ಲಿ ಅಭೀರರ ದೊರೆಯಾಗಿ ಕಠೋರ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ಬಾಲಾಜಿ ಮನೋಹರ್, ಈ ಚಿತ್ರದಲ್ಲಿ ಒಂದು ಹಾಸ್‌ಪಿಸ್ ಸೆಂಟರಿನ ಮುಖ್ಯ ಡಾಕ್ಟರ್‌ ಆಗಿ, ಪೇಷಂಟ್‌ಗಳಿಗೆ ಮಾದಕ ದ್ರವ್ಯಗಳ ದಾಸರಾಗುವಂತೆ ಮಾಡದಿರುವುದು ಸರಿ ಎಂಬ ನಿಲುವಿನಿಂದ ತಮ್ಮ ಬಿಗಿ ನಟನೆಯಿಂದ ಅವರಲ್ಲಿನ ಕಲಾವಿದನಿಗೆ ನ್ಯಾಯ ಒದಗಿಸಿದ್ದಾರೆ.

***

ಇತ್ತೀಚಿನ ನೂರು-ಸಾವಿರ ಕೋಟಿ ವ್ಯವಹಾರದ ಉದ್ಯಮದ ಬೆಂಬಲದಲ್ಲಿ ಹುಟ್ಟಿ ಮೂಡಿಬರುವ ಚಿತ್ರಗಳು ತಾಂತ್ರಿಕತೆ, ಸೆಟ್ ಮತ್ತು ವಿಜೃಂಬಣೆಯಲ್ಲಿ ಎಲ್ಲರ ಗಮನ ಸೆಳೆಯಬಲ್ಲವು. ಉದಾಹರಣೆಗೆ, ಕೆಜಿಎಫ಼್ ಚಿತ್ರದಲ್ಲಿ ಉಪಯೋಗಿಸುವ ಸುತ್ತಿಗೆ, ಚೈನು, ಧೂಳು ಮತ್ತಿತರ ವಸ್ತುಗಳು ಒಂದು ವ್ಯವಸ್ಥಿತವಾದ ಕ್ಯಾಮೆರಾ ಕಣ್ಣಿನಲ್ಲಿ ಅದ್ಭುತವಾಗಿ ಹೊರಹೊಮ್ಮ ಬಲ್ಲವು. ಆದರೆ, ಈ ಗ್ರ್ಯಾಂಡ್ ಕಥಾನಾಯಕರಂತೆ ಅದ್ಯಾವ ಅಗಮ್ಯವಾದ ಶಕ್ತಿಯನ್ನೂ ಹೊಂದಿರದ ಒಬ್ಬ ಸಾಮಾನ್ಯ ಮನುಷ್ಯನ ಚಿತ್ರದಲ್ಲಿ ತನ್ಮಯತೆಯನ್ನು ಕಾಣುವ ನಿರೂಪಣೆಯನ್ನು ಮಾಡಿ ನೂರು ನಿಮಿಷಗಳ ಕಮರ್ಶಿಯಲ್ ಸಿನಿಮಾದಲ್ಲೂ ಕಲಾತ್ಮಕತೆಯನ್ನು ಕಾಣುವುದು ಬಹಳ ಕಷ್ಟ.

ನೀವು ತರಾಸು ಅವರ ಕಾದಂಬರಿ ಆಧಾರಿತ "ಬೆಂಕಿಯಬಲೆ" ಸಿನಿಮಾವನ್ನು ನೋಡಿದ್ದರೆ, ಅಲ್ಲಿ ಅನಂತ್‌ನಾಗ್, ಲಕ್ಷ್ಮಿ, ಅಶ್ವಥ್, ತೂಗುದೀಪ ಶ್ರೀನಿವಾಸ್ ಅವರ ಪಾತ್ರಗಳ ಸಂವೇದನಾಶೀಲತೆಯನ್ನು ಅರ್ಥಮಾಡಿಕೊಂಡಿದ್ದರೆ, ರಾಜ್ ಬಿ. ಶೆಟ್ಟಿಯ ಈ ಸಿನಿಮಾ ನಿಮಗೆ ಇಷ್ಟವಾಗುತ್ತದೆ.

ಇದು ನನ್ನ ಅನಿಸಿಕೆ. ಹೆಚ್ಚಿನ ವಿವರಗಳಿಗೆ ಪ್ರಜಾವಾಣಿಯಲ್ಲಿ ಪ್ರಕಟವಾದ ಈ ವಿಮರ್ಶೆಯನ್ನು ನೋಡಿ.