Thursday, May 18, 2006

ಬನಾರಸ್ಸಿನ ಬದುಕು - ಭಾಗ ೧

ನಮ್ಮೂರು ಆನವಟ್ಟಿಯನ್ನು ಬಿಟ್ಟರೆ, ನನಗೆ ಬದುಕಿನಲ್ಲಿ ಹಲವು ದರ್ಶನಗಳನ್ನು ಮಾಡಿಸಿದ ಊರು ಬನಾರಸ್, ಅಲ್ಲಿದ್ದದ್ದು ಕೇವಲ ಹನ್ನೆರಡೇ ತಿಂಗಳಾದರೂ ಅದು ನನ್ನ ಮಟ್ಟಿಗೆ ಬಹಳ ದೊಡ್ಡದು. ಶಿವಮೊಗ್ಗದಿಂದ ಕಣ್ಣಿನಲ್ಲಿ ಹಲವು ಆದರ್ಶಗಳನ್ನು ತುಂಬಿಕೊಂಡು ಬೆನ್ನಿನ ಮೂಟೆಯ ತುಂಬಾ ಸಂಶೋಧನೆ ನಡೆಸಬೇಕು ಎನ್ನುವ ಉತ್ಸಾಹ ಹೇರಿಕೊಂಡು ಮುಗಿಲಿಗೆ ಮುಖ ಮಾಡಿಕೊಂಡಿದ್ದ ನನ್ನನ್ನು ಭೂಮಿಗೆ ತಂದಿದ್ದೇ ಬನಾರಸ್ಸಿನ ಬದುಕು. ಅಲ್ಲಿ ಸಿಕ್ಕ ಹೊಸ ಚೇತನ, ಹುರುಪು ಹಾಗೂ ನಾನು ಬೇರೆಯವರನ್ನು ನೋಡುವ ರೀತಿ ಹಾಗೂ ನನ್ನನ್ನು ಬೇರೆಯವರು ನೋಡುವ ಬಗೆ ಎಲ್ಲವೂ ಬದಲಾದವು.

***

ನಾನು ಅಲ್ಲಿ ಮೊದಲು ಎದುರಿಸಿದ ಸಂಕಷ್ಟವೆಂದರೆ ಇರುವುದಕ್ಕೊಂದು ಹಾಸ್ಟೆಲ್ ಸೀಟನ್ನು ಪಡೆದುಕೊಳ್ಳುವುದು. ಅಲ್ಲಿ ಹಾಸ್ಟೆಲ್ ಸೀಟುಗಳನ್ನು ಎಂ. ಎಸ್ಸಿ.ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ತೀರ್ಮಾನಿಸುತ್ತಿದ್ದರು. ಆದಿನ ನಾನು ನಮ್ಮ ಡಿಪಾರ್ಟ್‌ಮೆಂಟಿನಲ್ಲಿ ಪ್ರಕಟವಾದ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲವಾದ್ದರಿಂದ - ಏನೋ ಕಣ್ದೋಷದಿಂದಾಗಿ ತಪ್ಪಾಗಿರಬಹುದೇನೋ ಎಂದು ಹೆಡ್‌ಕ್ಲರ್ಕ್ ತಿವಾರಿಯವರನ್ನು ಕೇಳಿದ್ದಕ್ಕೆ ಅವರನ್ನು ಕೇಳಿ ಎಂದು ಮೂಲೆಯಲ್ಲಿ ಮೂಗಿನ ಮೇಲೆ ಕನ್ನಡಕವನ್ನಿರಿಸಿ ಯಾವುದೋ ಫೈಲಿನಲ್ಲಿ ತಲ್ಲೀನರಾದ ಶ್ರೀವಾತ್ಸವನನ್ನು ತೋರಿಸಿದ್ದರು. ಶ್ರೀವಾತ್ಸವ 'ಕಾಹೋ' ಎಂದು ನನ್ನನ್ನು ನೋಡಿ, ಹಾಸ್ಟೆಲ್ ನಲ್ಲಿ ಸೀಟು ಸಿಗದ ನನ್ನ ಹೆಸರನ್ನು ಹುಡುಕತೊಡಗಿದರು, ಸ್ವಲ್ಪ ಹೊತ್ತು ಹುಡುಕಿದ ಮೇಲೆ ಅವರು ನನ್ನ ಅಂಕಗಳು ಕಡಿಮೆ ಇರುವುದರಿಂದ ನನಗೆ ಹಾಸ್ಟೆಲ್ ಸೀಟು ಸಿಕ್ಕಿಲ್ಲವೆಂದು ಹೇಳಿದರು. ನಾನು ಕುತೂಹಲಕ್ಕೆ ಯಾರು ಯಾರಿಗೆ ಸೀಟು ಎಷ್ಟು ಅಂಕಗಳಿಗೆ ಸಿಕ್ಕಿದೆ ಎಂದು ನೋಡಲು ಹೋದರೆ ಏನಾಶ್ಚರ್ಯ - ಆ ಪಟ್ಟಿಯಲ್ಲಿ ಅತ್ಯಂತ ಕಡಿಮೆ ಅಂಕ ತೆಗೆದವನೂ ಎಂಭತ್ತು ಪರ್ಸೆಂಟುಗಳಿಗಿಂತ ಹೆಚ್ಚಿಗೆ ತೆಗೆದಿದ್ದ - ಉತ್ತರ-ದಕ್ಷಿಣಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನನಗೆ ಆದ ಮೊದಲ ಪಾಠ. ನಮ್ಮ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ನನ್ನ ಬ್ಯಾಚಿನಲ್ಲಿ ಮೊದಲ ರ್‍ಯಾಂಕು ೬೫ ಪರ್ಸೆಂಟಿಗೆ ಬಂದಿತ್ತು, ನನ್ನದು ಅದರಿಂದ ಕೆಲವು ಅಂಕಗಳು ಕಡಿಮೆ ಅಷ್ಟೇ. ಅಂದರೆ ಬನಾರಸ್ಸಿನ ನಿಯಮದ ಪ್ರಕಾರ ನನ್ನ ಮೈಸೂರಿನಲ್ಲಿ ಮೊದಲ ರ್‍ಯಾಂಕ್ ತೆಗೆದವರಿಗೂ ಸೀಟು ಸಿಗುವುದಿಲ್ಲ, ಇದು ಯಾವ ನ್ಯಾಯ? ಅಲ್ಲದೇ ಅಲ್ಲಿಯ ಜೋನ್‌ಪುರ, ಬಾಗಲ್‌ಪುರ ಮುಂತಾದ ಕಡೆಗಳಿಗಿಂತ ಬಂದ ವಿದ್ಯಾರ್ಥಿಗಳಿಗಿಂತಲೂ ಶಿವಮೊಗ್ಗದಿಂದ ಒಬ್ಬನೇ ಹೋದ ನನಗೆ ಹಾಸ್ಟೆಲ್ ರೂಮಿನ ಅಗತ್ಯ ಹೆಚ್ಚಿತ್ತು. ಆದರೆ ಪರಿಸ್ಥಿತಿ ಹೀಗಿರುವಾಗ ತಿವಾರಿಯಾಗಲಿ, ಶ್ರೀವಾಸ್ತವರಾಗಲೀ ಏನೂ ಮಾಡಲು ಸಾಧ್ಯವಿರಲಿಲ್ಲ.

ಸರಿ, ಕನ್ನಡ ಚಲನಚಿತ್ರಗಳಲ್ಲಿ ಹೀರೋ-ಹೀರೋಯಿನ್ ಉತ್ತರ ಭಾರತಕ್ಕೆ ಪ್ರವಾಸಕ್ಕೆ ಹೋದಾಗಲೆಲ್ಲ ಕನ್ನಡ ಮಾತನಾಡುವವರು ಸಿಗುವಂತೆ ನನಗೂ ಬನಾರಸ್ಸಿನ ಕನ್ನಡ ಪೀಠದಲ್ಲಿ ಸಂಶೋಧನೆ ಮಾಡುತ್ತಿದ್ದ ಆಯನೂರಿನ ಹತ್ತಿರದ ಮುದ್ದೇನಹಳ್ಳಿಯ ಕುಮಾರ್‌ರ ಪರಿಚಯವಾಯಿತು. ಅವರು ಕ್ಯಾಂಪಸ್ಸಿನಿಂದ ಹೊರಗೆ ಸ್ವಲ್ಪ ದೂರದಲ್ಲೇ ಒಂದು ಸಣ್ಣ ಕೊಠಡಿಯನ್ನು ಬಾಡಿಗೆಗೆ ಹಿಡಿದಿದ್ದರು, ಹಾಸ್ಟೆಲ್ ಸೀಟು ಸಿಗುವವರೆಗೆ ಅವರ ಜೊತೆಯಲ್ಲಿ ನಾನಿರಲು ಅವರು ಒಪ್ಪಿಗೆ ಕೊಟ್ಟಿದ್ದು ಎಂದೂ ಮರೆಯಲಾರದಂತಹ ಸಂಗತಿ. ಕುಮಾರ್ ಅವರ ಒಡನಾಟದಲ್ಲಿ ಇನ್ನುಳಿದ ಕನ್ನಡಿಗರ ಪರಿಚಯವೂ ಆಯಿತು, ಹಾಗೇ ಬನಾರಸ್ಸಿನ ಒಳ್ಳೆಯ-ಕೆಟ್ಟ ವಿಷಯ-ವಸ್ತುಗಳಿಗೆಲ್ಲ ಒಂದು ಕ್ರಾಷ್ ಕೋರ್ಸ್ ಸಿಕ್ಕಹಾಗಾಯಿತು.

***

ಬನಾರಸ್ಸಿನ ವಿಷಯ ಹೇಳಿ ಬಿಹಾರಿಗಳ ಬಗ್ಗೆ ಬರೆಯದಿದ್ದರೆ ರಾಮಾಯಣದಲ್ಲಿ ರಾಮನನ್ನೇ ಬಿಟ್ಟಂತೆ, ನನ್ನ ಪ್ರಕಾರ ಬಿಹಾರಿಗಳಲ್ಲಿ ಕೇವಲ ಎರಡೇ ಎರಡು ತರಹದ ಜನಗಳು - ಅವರು ಒಂದೇ ಶುದ್ಧ ಶೂನ್ಯರು ಅಥವಾ ನೂರಕ್ಕೆ ನೂರು! ನನ್ನ ಜೊತೆಯಲ್ಲಿ ಸಂಶೋಧನೆಗಳಲ್ಲಿ ತೊಡಗಿದವರೆಲ್ಲ ಮಹಾ ಬುದ್ಧಿವಂತರೆಂದೇ ಹೇಳಬೇಕು - ಬಿಹಾರಿಗಳನ್ನು ಬಡವರು ಎಂದು ತಿಳಿದುಕೊಂಡಿದ್ದರೆ ನೀವು ಅದರ ಬಗ್ಗೆ ಮತ್ತೊಮ್ಮೆ ಯೋಚಿಸಿ ಏಕೆಂದರೆ ನಾನು ನೋಡಿದ ಬಿಹಾರಿಗಳಲ್ಲಿ ಕೆಲವರು ಹೆಚ್ಚೂ ಕಡಿಮೆ ಶಿವಮೊಗ್ಗವನ್ನೇ ಖರೀದಿಮಾಡಬಲ್ಲಂತಹವರಿದ್ದರು.

ಬನಾರಸ್ಸಿನ ಮೊದಲ ಕೆಲಸದ ದಿನವೇ ಸತ್ಯದ ದರ್ಶನವಾಯಿತು - ನಮ್ಮ ಪ್ರೊಫೆಸರ್, ಯಶವಂತ ಸಿಂಗ್, ಪಾಲಿಮರ್ ಥಿಯರಿಯಲ್ಲಿ ಜಗತ್ತಿನಾದ್ಯಂತ ಹೆಸರು ಗಳಿಸಿದ ಮನುಷ್ಯ, ಕೋಟಿ ರೂಪಾಯಿಕೊಟ್ಟರೂ ಬಗ್ಗದಂತವರು - ಅವರು ನನ್ನನ್ನು ಕೋಣೆಗೆ ಕರೆದು ಹೇಳಿದರು - 'ನೋಡು, ಸಂಶೋಧನೆ ಮಾಡುವುದೂ-ಬಿಡುವುದೂ ನಿನ್ನ ಕೈಯಲ್ಲೇ ಇರೋದು, ನಿನಗೇನಾದರೂ ಐಡಿಯಾಗಳಿದ್ದರೆ ಅದಕ್ಕೆ ನಾನು ಮಾರ್ಗದರ್ಶನ ಮಾಡುತ್ತೆನೇ ವಿನಾ ನೀನು ನನ್ನ ಬಳಿ ಇದ್ದ ಮಾತ್ರಕ್ಕೆ ನಿನ್ನ ಪಿ.ಎಚ್.ಡಿ. ಆಗುತ್ತದೆ ಎಂಬ ಭ್ರಮೆಯನ್ನು ಮಾತ್ರ ಇಟ್ಟುಕೊಳ್ಳಬೇಡ!' ಆದರಲ್ಲಿ ಅವರ ತಪ್ಪೆನೂ ಇಲ್ಲ, ಅವರನ್ನು ತಪ್ಪಾಗಿ ಅರ್ಥೈಸಿಕೊಂಡ ರಾಮ್‌ಸಿಂಗ್‌ನಂಥವರಿಗೆ ಪಿ.ಎಚ್.ಡಿ. ಮುಗಿಸಲು ಸುಮಾರು ಎಂಟು ವರ್ಷದ ಮೇಲೇ ಬೇಕಾಯಿತು. ನಾನು ಕೆಲಸಕ್ಕೆ ವರದಿ ಮಾಡಿಕೊಂಡ ಮೊದಲನೇ ದಿನವೇ ಹೀಗೆ ಕೇಳಬೇಕಾಯಿತಾದ್ದರಿಂದ, ನಾನು ಆ ಕೂಡಲೇ 'ಇಲ್ಲಾ ನಾನು ವಾಪಾಸ್ಸು ಹೊರಡುತ್ತೇನೆ' ಎಂದು ಹೊರಡಲು ಸಾಧ್ಯವಿರದಿದ್ದುದರಿಂದ ಅಲ್ಲೇ ಉಳಿದು ಸಂಶೋಧನೆಯನ್ನು ಮುಂದುವರಿಸದೇ ಬೇರೆ ವಿಧಿ ಇರಲಿಲ್ಲ.

ಆದರೆ ಇದ್ಯಾವ ನ್ಯಾಯ, ನನ್ನ ಜೊತೆಯಲ್ಲಿ ಇರೋ ಸಂಶೋಧಕ ರಾಮನ್, ಪ್ರೊ. ಶ್ರೀವಾಸ್ತವ ಅವರ ಜೊತೆ ಸಂಶೋಧನೆ ಮಾಡಿದರೆ ವರ್ಷಕ್ಕೊಂದು ಪೇಪರ್ ಪಬ್ಲಿಷ್ ಮಾಡಿ ನಾಲ್ಕು ವರ್ಷಕ್ಕೆಲ್ಲ ಸಂಶೋಧನೆ ಮುಗಿಸಿ ಥೀಸೀಸ್ ಸಬ್‌ಮಿಟ್ ಮಾಡುಬಹುದಾಗಿತ್ತು, ಆದರೆ ರಾಮ್‌ಸಿಂಗ್ ಲೆಕ್ಕಕ್ಕೆ ಹೋಲಿಸಿದರೆ ನಾನು ಎಂಟು ವರ್ಷವಾದರೂ ಥೀಸೀಸ್ ಇರಲಿ ಮೂರು ಪೇಪರ್ ಅನ್ನೂ ಪಬ್ಲಿಷ್ ಮಾಡಲಾಗುವುದಿಲ್ಲವಲ್ಲಾ? ಹೀಗೆ ನಾನು ಶಿವಮೊಗ್ಗದಿಂದ ಹೊತ್ತುಕೊಂಡು ಹೋದ ಕನಸುಗಳು ನುಚ್ಚುನೂರಾದವು, ಬನಾರಸ್ಸಿನಲ್ಲಿ ಒಮ್ಮೆ ಒಬ್ಬ ಪ್ರೊಫೆಸರರ ಅಡಿ (ಅದೂ ಯಶವಂತ್ ಸಿಂಗರ ಜೊತೆ) ಸೇರಿದರೆ ಮತ್ಯಾರೂ ತೆಗೆದುಕೊಳ್ಳುತ್ತಿರದಿದ್ದುದರಿಂದಲೂ, ನನಗೆ ಕಂಪ್ಯೂಟರ್ ಸಿಮಿಲೇಷನ್‌ನಲ್ಲಿ ಸಂಶೋಧನಾ ಮಟ್ಟದ ಐಡಿಯಾಗಳು ಇರದಿದ್ದುದರಿಂದಲೂ, 'ಛೇ, ಬನಾರಸ್ಸಿಗೆ ಬಂದು ತಪ್ಪು ಮಾಡಿದೆನೇ..., ಈಗ ಏನು ಮಾಡುವುದು' ಎಂದು ಎಷ್ಟೋ ರಾತ್ರಿಗಳನ್ನು ಯೋಚಿಸುತ್ತಾ ಕಳೆದಿದ್ದೇನೆ. ಮೊಟ್ಟ ಮೊದಲನೇ ಬಾರಿಗೆ ನಾನು ಶಿವಮೊಗ್ಗದಲ್ಲಿ ಬಿಟ್ಟು ಬಂದ ಅರೆಕಾಲಿಕ ಉಪನ್ಯಾಸಕನ ಕೆಲಸಗಳು ಬಹಳ ಅಪ್ಯಾಯಮಾನವಾಗಿ ಕಂಡುಬಂದವು. ಭಾರತ ಸರ್ಕಾರದ ಡಿಪಾರ್ಟ್‌ಮೆಂಟ್ ಆಫ್ ಸೈನ್ಸ್ ಎಂಡ್ ಟೆಕ್ನಾಲಜಿಯಲ್ಲಿ ಸಂಶೋಧನೆಗೆ ಸೇರಿಕೊಂಡಿದ್ದೇನೆಂದು ಅದ್ದೂರಿಯಾಗಿ ಬಿಟ್ಟುಬಂದವನಿಗೆ ಶಿವಮೊಗ್ಗಕ್ಕಾಗಲೀ, ಬೆಂಗಳೂರು-ಮೈಸೂರಿಗಾಗಲೀ ಹಿಂತಿರುಗಿ ಹೋಗುವ ಯಾವ ಆಲೋಚನೆಗಳು ಬಂದರೂ ಅವು ಬಂದಷ್ಟೇ ವೇಗದಲ್ಲಿ ಮಾಯವಾಗುತ್ತಿದ್ದವು.

***

ಭಾರತದಲ್ಲಿ ಪ್ರತಿವರ್ಷ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಹೊಂದುವವರಲ್ಲಿ ಹೆಚ್ಚಿನ ಪಾಲು ಉತ್ತರ ಪ್ರದೇಶ ಹಾಗು ಬಿಹಾರಿನವರದ್ದು. ಅಲ್ಲದೇ ನಮ್ಮ ದೇಶಕ್ಕೆ ಉತ್ತರಪ್ರದೇಶ ಹಾಗೂ ಬಿಹಾರಿಗಳು ನೀಡಿರುವಷ್ಟು ದೇವ-ದೇವತೆಗಳನ್ನೂ, ರಾಜಕಾರಣಿಗಳನ್ನೂ ಮತ್ಯಾವ ರಾಜ್ಯವೂ ನೀಡಿಲ್ಲ. ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಬಿಹಾರಿಗಳು ಏಕೆ ಹೆಚ್ಚು ಜನ ಪಾಸಾಗುತ್ತಾರೆ ಎಂದು ಪ್ರಶ್ನಿಸಿಕೊಂಡರೆ ಅದಕ್ಕುತ್ತರವಾಗಿ 'ಅವರು ಕ್ರಮಬದ್ಧವಾಗಿ ಅಭ್ಯಾಸ ಮಾಡುತ್ತಾರೆ ಹಾಗೂ ಕಷ್ಟ ಪಡುತ್ತಾರೆ' ಎಂದು ಹೇಳಬಹುದು.

ನನ್ನ ಜೊತೆ ಇದ್ದ ಬಿಹಾರಿಗಳು ಎಲ್ಲರೂ ಒಂದಲ್ಲ ಒಂದು ವಿಷಯದಲ್ಲಿ ಪದವೀದರರೇ, ಪದವಿಯಾದ ತರುವಾಯ ಸ್ನಾತಕ್ಕೋತ್ತರ ಪದವಿಗಳಿಗೆ (ಎಮ್.ಎ., ಎಂ.ಎಸ್ಸಿ. ಇತ್ಯಾದಿ) ಬನಾರಸ್ಸಿನ ವಿಶ್ವವಿದ್ಯಾನಿಲಯದಲ್ಲಿ ಅರ್ಜಿ ಗುಜರಾಯಿಸುತ್ತಿದ್ದರು - ನಾನು ತಿಳಿದ ಮಟ್ಟಿಗೆ ಬಿಹಾರ ಅಥವಾ ಒರಿಸ್ಸಾದಲ್ಲಿ ತರಗತಿಯ ಅತಿ ಹೆಚ್ಚಿನ ಅಂಕ ತೆಗೆದವರು ೯೯ ರ ಆಸುಪಾಸಿನಲ್ಲಿದ್ದರೆ, ಅತಿಕಡಿಮೆ ಅಂಕ ತೆಗೆದವರು ೯೦ ರ ಹತ್ತಿರಹತ್ತಿರವಿರುತ್ತಿದ್ದರು (ಇಂಥವರ ನಡುವೆ ಮೈಸೂರಿನ ಪದವೀದರರು ಸುಳಿದು ಬಿಡಲೂ ಯೋಗ್ಯರಲ್ಲ - ಇನ್ನು ಹಾಸ್ಟೆಲ್ ಸೀಟು ಹೇಗೆ ಸಿಕ್ಕೀತು). ನನಗೆ ಆಶ್ಚರ್ಯವಾಗುವಂತೆ ಪ್ರತಿಯೊಬ್ಬ ಬಿಹಾರಿಯೂ (ಉತ್ತರಪ್ರದೇಶದವರೂ ಸಹಾ) ಸ್ನಾತಕ್ಕೋತ್ತರ ವಿಭಾಗಕ್ಕೆ ಸೇರಲು ಆಯ್ದುಕೊಳ್ಳುತ್ತಿದ್ದುದು ಸುಲಭವಾದ ವಿಷಯಗಳಾದ ಗಾಂಧೀಯನ್ ಸ್ಟಡೀಸ್, ಕ್ರಿಶ್ಚಿಯಾನಿಟಿ, ಸಮಾಜಶಾಸ್ತ್ರ, ಇತ್ಯಾದಿ...ಅವರು ಹಾಗೆ ಮಾಡುತ್ತಿದ್ದುದು ಕೇವಲ ಹಾಸ್ಟೆಲಿನ ಸೀಟನ್ನು ಗಳಿಸುವುದಕ್ಕಾಗಿ ಮಾತ್ರ. ಒಮ್ಮೆ ಹಾಸ್ಟೆಲ್ ಸೀಟು ಸಿಕ್ಕ ನಂತರ ಈ ವಿದ್ಯಾರ್ಥಿಗಳಲ್ಲಿ ಎರಡು ಭಾಗಗಳಾಗುತ್ತಿದ್ದವು - ಒಂದು ಗುಂಪು ಬ್ಯಾಂಕು, ಮತ್ತಿತರ ಸುಲಭ ಪರೀಕ್ಷಗಳನ್ನು ಪಾಸು ಮಾಡುವುದಕ್ಕೆ ಗಮನ ಹರಿಸಿದರೆ, ಇನ್ನು ಎರಡನೆಯ ಗುಂಪು ಸಿವಿಲ್ ಸರ್ವೀಸ್ (ಮುಖ್ಯವಾಗಿ ಐ.ಎ.ಎಸ್.) ಪರೀಕ್ಷೆಗಳತ್ತ ಗಮನ ಹರಿಸುತ್ತಿತ್ತು. ಇನ್ನು ಇವರ ಪದವಿ ಬ್ಯಾಕ್‌ಗ್ರೌಂಡ್ ಯಾವುದೇ ಇದ್ದರೂ ಇವರು ಐ.ಎ.ಎಸ್. ಪರೀಕ್ಷೆಯಲ್ಲಿ ಆಯ್ದುಕೊಳ್ಳುತ್ತಿದ್ದ ವಿಷಯ ಭೂಗೋಳ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತ್ಯಾದಿ...ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರಗಳು ಕಡಿಮೆ. ಹೀಗೆ ಐ.ಎ.ಎಸ್. ಪಾಸು ಮಾಡುವ ಹಠ ತೊಟ್ಟ ಗುಂಪು ಮಾಡುತ್ತಿದ್ದ ಮುಖ್ಯ ಕೆಲಸಗಳು ಇಷ್ಟು:

- ತಮ್ಮ ಹಳ್ಳಿಗಳಿಂದ ಒಬ್ಬ ಅಡುಗೆ ಮಾಡುವನನ್ನೂ, ಅವನ ಸಹಾಯಕನನ್ನೂ ತಂದು ಹಾಸ್ಟೆಲ್‌ನಲ್ಲಿ ಇಟ್ಟುಕೊಳ್ಳುವುದು
- ಪರೀಕ್ಷೆ ಕಟ್ಟಿದ ಹುಡುಗರೆಲ್ಲರೂ ತಮ್ಮ-ತಮ್ಮ ತಲೆಗಳನ್ನು ನುಣ್ಣಗೆ ಬೋಳಿಸಿಕೊಳ್ಳುವುದು
- ಒಂದು ದಿನ ದೆಹಲಿಗೆ ಹೋಗಿ ತಮಗೆ ಬೇಕಾದ ಪುಸ್ತಕಗಳ ಕಂತೆಯನ್ನು ಹೊತ್ತು ತರುವುದು

ತಾವು ತಲೆ ಬೋಳಿಸಿಕೊಂಡರೆ (ಒಂದು ರೀತಿಯಲ್ಲಿ ಮಿಲಿಟರಿಯಲ್ಲಿ ಮಾಡಿದ ಹಾಗೆ) ಸ್ವಯಂ ದಂಡನೆಗೆ ಸುಲಭವಾಗುತ್ತೆಂತಲೋ ಏನೋ (ಬನಾರಸ್ಸಿನಲ್ಲಿ ನೀವು ಒಂದು ಸೀಜನ್‌ನಲ್ಲಿ ಎಲ್ಲಿ ಹೋದರೂ ತಲೆಬೋಳಿಸಿಕೊಂಡವರು ಕಾಣಸಿಗುತ್ತಾರೆ) ಐ.ಎ.ಎಸ್. ಪರೀಕ್ಷಾರ್ಥಿಗಳು ಮಾಡುವ ಮೊಟ್ಟ ಮೊದಲ ಕೆಲಸ ಅದಾಗಿತ್ತು. ದೆಹಲಿಗೆ ಹೋಗುವ ಉದ್ದೇಶ ಇಷ್ಟು, ಅಲ್ಲಿ ನೀವು ಐ.ಎ.ಎಸ್. ಪರೀಕ್ಷೆಗೆ ಆಯ್ದುಕೊಂಡ ವಿಷಯಗಳನ್ನು ತಿಳಿಸಿದರೆ ಸಾಕು ಸ್ಪೆಷಲೈಸ್ಡ್ ಪುಸ್ತಕದ ಅಂಗಡಿಗಳು ಸಿಗುತ್ತವೆ. ಇಂತಿಂಥ ಪುಸ್ತಕಗಳನ್ನೆ ತೆಗೆದುಕೊಂಡು ಓದಿ ಎನ್ನುವುದರೆ ಜೊತೆಗೆ ೯೮ ರಲ್ಲಿ ಈ ಪ್ರಶ್ನೆ ಬಂದಿತ್ತು, ೯೬ ರಲ್ಲಿ ಈ ಪ್ರಶ್ನೆಯನ್ನು ಕೇಳಿದ್ದರು, ೯೯ ರಲ್ಲಿ ಗ್ಯಾರಂಟಿ ಈ ಪ್ರಶ್ನೆಯನ್ನು ಕೊಟ್ಟೇ ಕೊಡುತ್ತಾರೆ ಎನ್ನುವ ಅನಾಲಿಸೀಸೂ ಸಿಗುತ್ತಿತ್ತು. ಹೀಗೆ ಹೋದ ಹುಡುಗರ ಗುಂಪು ಅವರು ಕಷ್ಟ ಪಟ್ಟು ಹೊತ್ತರೂ ಹೊರಲಾರದಷ್ಟು ಪುಸ್ತಕಗಳನ್ನು ತಂದು ರೂಮಿನಲ್ಲಿ ಸೇರಿಕೊಂಡರೆ ತಿಂಗಳಿಗೊಮ್ಮೆಯೂ ಸೂರ್ಯನಿಗೆ ಮುಖ ತೋರಿಸುತ್ತಿರಲಿಲ್ಲ. ರಾತ್ರೀ-ಹಗಲೂ ಓದಿ-ಓದೀ, ಐ.ಎ.ಎಸ್. ಪರೀಕ್ಷೆಯೇನು ಯಾವ ಪರೀಕ್ಷೆಯನ್ನಾದರೂ ಸುಲಭವಾಗಿ ಪಾಸು ಮಾಡಬಲ್ಲವರಾಗುತ್ತಿದ್ದರು. ಊಟ ತಿಂಡಿಗೆ ಮಹರಾಜ್ (ಅಡುಗೆಯವ) ಹಾಗೂ ಅವನ ಸೇವಕ ಸಹಾಯ ಮಾಡುತ್ತಿದ್ದರು, ದೇಹ ತೀಟೆಗೆ ಗಾಂಜಾ, ಅಫೀಮೂ ದೊರೆಯುತ್ತಿತ್ತು, ಹೆಣ್ಣುಗಳೂ ಬಂದು ಹೋಗುತ್ತಿದ್ದವು, ರೂಮಿನೊಳಗಡೆ ಏನೇನು ಆಗುತ್ತಿತ್ತೋ ಬಿಡುತ್ತಿತ್ತೋ, ಕೊನೆಗೆ ಹೀಗೆ ತಲೆ ಬೋಳಿಸಿ ದೀಕ್ಷೆ ತೆಗೆದುಕೊಂಡವರಲ್ಲಿ ಹೆಚ್ಚಿನ ಜನರಿಗೆ ಇಂಟರ್‌ವ್ಯೂವ್ ಬಂದೇ ಬರುತ್ತಿತ್ತು. ಈ ಸಂದರ್ಶನದ ಹಂತವೇ ಹೆಚ್ಚಿನವರಿಗೆ ಕಬ್ಬಿಣದ ಕಡಲೆಯಾಗುತ್ತಿತ್ತು, ರಾತ್ರೀ-ಹಗಲು ಯಾವ ರ್‍ಯಾಪಿಡೆಕ್ಸ್ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ತೆಗೆದುಕೊಂಡರೂ, ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ನಿರರ್ಗಳವಾಗಿ ಉತ್ತರಿಸಲು ಇವರಿಗೆಲ್ಲ ಬಹಳ ಸಮಯ ಹಿಡಿಯುತ್ತಿತ್ತು - ಇಂಥಾ ಸಮಯದಲ್ಲಿ ನನ್ನಂತ ದಕ್ಷಿಣದವರ ಸಹವಾಸಕ್ಕೆ ಹೆಚ್ಚು ಜನರು ಮುಗಿಬೀಳುತ್ತಿದ್ದರು ಏಕೆಂದರೆ ನಾವು ಹೇಗೇ ಇದ್ದರೂ ಇಂಗ್ಲೀಷನ್ನಂತೂ ಸುಮಾರಾಗಿ ಮಾತನಾಡುತ್ತಿದ್ದೆವು!

***

ಈ ಬಿಹಾರಿಗಳೆಲ್ಲ ಹೀಗೆ ಐ.ಎ.ಎಸ್. ಎಂದು ಕಷ್ಟ ಪಡುತ್ತಿದ್ದುದಕ್ಕೂ ಒಂದು ಕಾರಣ ಇದೆ - ಐ.ಎ.ಎಸ್. ಪಾಸು ಮಾಡಿದಾಕ್ಷಣ ರಾತ್ರೋ ರಾತ್ರಿ ಹೆಚ್ಚಾಗುತ್ತಿದ್ದ ಅವರ ಬೆಲೆ. ನೀವು ಉತ್ತರ ಭಾರತದ ಮದುವೆಗಳನ್ನು ನೋಡಿದರೆ ಗೊತ್ತಾಗುತ್ತದೆ, ಅವರಲ್ಲಿ ವರದಕ್ಷಿಣೆ ಬಹಳ - ಒಬ್ಬ ಐ.ಎ.ಎಸ್. ಪರೀಕ್ಷೆಯನ್ನು ಕಟ್ಟಿದ ವಿದ್ಯಾರ್ಥಿಯ ಬೆಲೆ ಮೂರು ಕಾಸು, ಅದೇ ಐ.ಎ.ಎಸ್. ಪಾಸಾದರೆ ಮೂರು ಕೋಟಿ! ಹೀಗೆ ಐ.ಎ.ಎಸ್. ಪಾಸಾದವರೆಲ್ಲರೂ ನಗರಗಳಲ್ಲಿರಲು ಇಷ್ಟ ಪಡುತ್ತಿದ್ದುದು ಕಡಿಮೆ, ಏಕೆಂದರೆ ಹಳ್ಳಿಯ ಕಡೆಗೆ ಜಿಲ್ಲಾಧಿಕಾರಿಯಾಗಿ ಹೋದರೆ ರಾಜರ ತರಹ ಇರಬಹುದು ಎಂದು.

ಹೀಗೆ ನನ್ನಲ್ಲಿ ಮನೆ ಮಾಡಿದ ಶಿವಮೊಗ್ಗದ ನಯವನ್ನು ಒರಿಸಿ ಅದರಲ್ಲಿ ಬಿಹಾರಿಗಳ ನಾಜೂಕನ್ನು ತುಂಬಲು ಭೂಮಿಕೆಯಾಗಿದ್ದೇ ಬನಾರಸ್ಸು, ಹುಟ್ಟೂರಿನಲ್ಲಿ ಕಲಿಯದ ಬುದ್ಧಿಯನ್ನು ಬದುಕು ಇಲ್ಲಿ ಕಲಿಸಿದೆ, ಹಾಗೂ ಅಲ್ಲಿ ದೊರೆತ ದರ್ಶನದ ಬೆಳಕು ಇನ್ನೂ ನನ್ನ ಕಣ್ಣಲ್ಲಿದೆ. ಇಂಥ ಬಿಹಾರಿಗಳ ನಡುವೆ ಇದ್ದವನಾಗಿ ನಾನೇಕೆ ಐ.ಎ.ಎಸ್. ಓದಲಿಲ್ಲ ಎಂದು ನನಗೇ ಅನ್ನಿಸಿದೆ - ಅದಕ್ಕುತ್ತರ ಸಿಕ್ಕಿದೆ, ಅದನ್ನು ಮುಂದೆ ಎಲ್ಲಾದರೂ ಬರೆಯುತ್ತೇನೆ.

***

ನಾವು ದಕ್ಷಿಣ ಭಾರತದವರು ಸುಖಾ ಇಲ್ಲ, ಬಿಹಾರಿಗಳ ಅರ್ಧದಷ್ಟು ನಾವೇನಾದರೂ 'ಕಷ್ಟ' ಪಟ್ಟಿದ್ದರೆ ಅದರ ಕಥೆಯೇ ಬೇರೆ!

6 comments:

Satish said...

ಪ್ರಿಯ kanlit,

ನೀವು 'ಅಂತರಂಗ'ವನ್ನು ಓದಿ ನಿಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ನೀವು ನಿಮ್ಮ ಅನಿಸಿಕೆಯಲ್ಲಿ 'ಅಂತರಂಗ'ದ ತುಮುಲಗಳಿಗೆ ಸಂಬಂಧಿಸಿದಂತೆ ಬರೆದರೆ ಒಳ್ಳೆಯದಿತ್ತು, ಒಬ್ಬ ಅನುಪಸ್ಥಿತ ವ್ಯಕ್ತಿಯ ಬಗ್ಗೆ ತೆರೆಮರೆಯ ಹಿಂದೆ ಅಸಹ್ಯಕರವಾಗಿ ಬರೆಯುವುದು ಯಾರಿಗೂ ಶೋಭೆ ತರುವುದಿಲ್ಲ.

ನನಂಥ ಅನಿವಾಸಿಗಳ ಮೇಲೆ ನಿಮಗೆ ಸಾತ್ವಿಕ ಸಿಟ್ಟಿದೆಯೋ, ಅಥವಾ ಅಸೂಯೆ ಇದೆಯೋ, 'ಅವರು ಹೀಗಿದ್ದರೆ ಹೇಗೆ?' ಎನ್ನುವ ಹಂಬಲವಿದೆಯೋ ಯಾರು ಬಲ್ಲರು? ಎಲ್ಲರೂ ಅವರವರ ಮೂಗಿನ ನೇರಕ್ಕೇ ಯೋಚಿಸುತ್ತಾರಾದ್ದರಿಂದ ಅವರವರು ಮಾಡಿದ್ದು ಅವರಿಗೆ ಸರಿ ಎಂದು ತೋರಿಯೇ ತೋರುತ್ತದೆ.

ನೀವು ಅನಿವಾಸಿಗಳನ್ನು ಕೊಂಡುಕೊಂಡಂತೆ ಮಾತನಾಡುತ್ತಿರುವುದರಿಂದ ಈ ವಿಷಯವನ್ನು ಹೇಳಬೇಕಾಗಿ ಬಂತು - ನೀವು ಯಾರಿಗಾದರೂ ರಚನಾತ್ಮಕ ಪ್ರತ್ಯುತ್ತರವನ್ನು (constructive feedback ಅನ್ನೋ ಅರ್ಥದಲ್ಲಿ) ಕೊಟ್ಟಿದ್ದೀರೇ, ಅದರಿಂದ ಏನೇನಾಗಿದೆ ಎಂದು ತಿಳಿಸಬಲ್ಲಿರಾ? ಹಾಗೂ ಉಳಿದವರ ಬಗ್ಗೆ ನಿರ್ಭಯವಾಗಿ ಬರೆಯುವ ಮುಖವಾಡ ಹಾಕಿಕೊಂಡಿರುವ ನೀವು ನಿಮ್ಮದೇ ಬ್ಲಾಗ್‌ನಲ್ಲಿ ಅನಿಸಿಕೆಗಳನ್ನು ಮಾಡರೇಟ್ ಮಾಡುವುದನ್ನು ನಿಮ್ಮ ಇನ್‌ಸೆಕ್ಯೂರಿಟಿ ಎಂದು ಅರ್ಥ ಮಾಡಿಕೊಳ್ಳಲೇ?

ಹೀಗೇ ಬರೆಯುತ್ತಿರಿ.

Anonymous said...

ಕನ್ನಡ 'ವ್ಯಾಕ್ರರಣ' ದ ಬಗ್ಗೆ 'ಸರಳಾ'ವಾಗಿ ಪುಸ್ತಕ ಬರೆದು ಅನಿವಾಸಿಕನ್ನಡಿಗರ ಮಕ್ಕಳಿಗೆ ಓದಿಸಬಹುದು/ಬೇಕು ಎಂಬ kanlit ಅವರ ಸಲಹೆ ಕನ್ನಡಕಾಳಜಿಯು ಅವರಲ್ಲಿ ಎಷ್ಟು ಪೂರ್ಣವಾಗಿ ಶೇಖರವಾಗಿದೆಯೆಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ! ಇಷ್ಟೊಂದು ರಚನಾತ್ಮಕ ಸಲಹೆಯನ್ನು kanlit ನೇರವಾಗಿ srivathsajoshi@yahoo.com ಗೆ ಬರೆದುತಿಳಿಸಿದ್ದರೆ ಎಷ್ಟೊಂದು ಒಳ್ಳೆಯದಿತ್ತು! ಅದುಬಿಟ್ಟು ಅನಾಮಧೇಯವಾಗಿ (= ಮುಸುಕುಧಾರಿಯಾಗಿ) ಇನ್ನೊಬ್ಬ ಅನಾಮಧೇಯರ ಬ್ಲಾಗ್‍ನಲ್ಲಿ ಆಚೆಕಡೆ ಮುಖತಿರುಗಿಸಿ blabberಇಸಿದರೆ kanlit ಬಗ್ಗೆ ಮರುಕವೆನಿಸುತ್ತದೆ.

ದೇವರು kanlitಅನ್ನು ಚೆನ್ನಾಗಿಟ್ಟಿರಲಿ!

ಇತಿ,

kanwit :-)

Anonymous said...

That reminds me of a few biharis I came across in Delhi. Not your IAS type, though. These were budding journalists - almost-JNU brand. These (and other Biharis I met over the years) convinced me that Bihar is certainly a genius-production-factory. May be we would be genius's (geniuii?) too if our state was as backward as Bihar? (just joking)

Coming to other stuff, Can somebody tell me how they manage to blog or comment in Kannada. I would like to be commenting here in Kannada too!

Satish said...

ಪ್ರಿಯ mastmaker,

ಕನ್ನಡದಲ್ಲಿ ಬರೆಯೋದು ತುಂಬಾ ಸುಲಭ - ನಿಮ್ಮಲ್ಲಿ ಬರಹ ಆರು ಅಥವಾ ಏಳು ಇರಬೇಕಲ್ಲ? ನೀವು ಬರಹದಲ್ಲಿ ಬರೆದು transliterate (CTRL + T) ಮಾಡಿ, ನಂತರ File ಮೆನ್ಯುನಲ್ಲಿ Quick Export ಬಳಸಿ, ಮುಂದೆ ನಿಮ್ಮ ಎದುರು (ಹೊಸ ವಿಂಡೋನಲ್ಲಿ) ಕನ್ನಡ (ಯೂನಿಕೋಡ್ ಕಂಡರೂ ಕಾಣಬಹುದು) ಕಾಣ ತೊಡಗುತ್ತದೆ, ಅದನ್ನು copy & paste ಮಾಡಿ ಇಲ್ಲಿ ಹಾಕಿ.

ಎಲ್ಲಿ, ಪ್ರಯತ್ನಿಸಿ ನೋಡೋಣ.

(ಅಕಸ್ಮಾತ್ ನಿಮ್ಮಲ್ಲಿ "ಬರಹ" ಇಲ್ಲದಿದ್ದರೆ www.baraha.com ನಿಂದ download & install ಮಾಡಿ. ನಿಮ್ಮ Operating System XP ಅಲ್ಲದಿದ್ದರೆ, ಅಥವಾ ಬೇರೇನಾದರೂ ಸಮಸ್ಯೆಯಾದರೆ ನನಗೆ ತಿಳಿಸಿ.)
(ಬರಹ ಏಳರಲ್ಲಿ 'ಬರಹ ಪ್ಯಾಡ್‌'ನಲ್ಲಿ ನೇರವಾಗೇ ಕನ್ನಡ ಟೈಪ್ ಮಾಡಬಹುದು, ಅದನ್ನೂ ಪ್ರಯತ್ನಿಸಿ)

Anonymous said...

ಜೋಶಿಗಳೇ,
ಫೂರ್ಣಮದಂ ಅಧಮಂ ಅನ್ನುವ ಅರ್ಥ ಚೆನ್ನಗಿಯೇ ಇದೆ. ಅದನ್ನು ಬೋಲ್ಡ್ ಬೇರೆ ಮಾಡಿದ್ದೀರ. ನನಗೂ ಈ kanlit ಗೂ ಐಡೆಂಟಿಟಿ ಕ್ರೈಸಿಸ್ ತಂದಿದ್ದೀರ. ನಾನು ಬರೆಯುವುದನ್ನು ನೇರವಾಗಿ ಬರೆಯಬಲ್ಲೆ. ಮತ್ತು ತೋಚಿದ್ದನ್ನು ಆಡಿಬಿಡುವ ಹೀನ ವೃತ್ತಿಯವ. ಹೀಗಾಗಿ ನನಗೂ ಮುಖವಾಡವೆ?
ಶೇಖರ್‌ಪೂರ್ಣ

Anonymous said...

ಆಹಾ! ಕನ್ನಡದಲ್ಲಿ ಬರೆಯುವುದು ಇಷ್ಟು ಸುಲಭ ಎಂದು ತಿಳಿದಿರಲಿಲ್ಲ.

ಅಂತರಂಗಿಗಳೇ, ಸಾಗರ, ಎಚ್ಚೆಲ್ಲೆಸ್ಸ್, ರೇಣುಕಪ್ಪ ಗೌಡರು, ಟಿ ಪಿ ಅಶೋಕ, ಎಂತೆಲ್ಲಾ ಬರೆದು ಒಂದು ಬಗೆಯ ನೋಸ್ಟಾಲ್ಜಿಯಾ ಬರಿಸುತ್ತಿದ್ದೀರಿ. ಆದರೂ ನಿಮ್ಮ ಪರಿಚಯ ಇನ್ನೂ ಆಗಲಿಲ್ಲವೆಂದು ನಾನು ಕೇಳಲಿಲ್ಲ (ನೀವೂ ಗಮನಿಸಿರಬಹುದು). ಏಕೆ ಗೊತ್ತೋ? ನೀವು ಅಲ್ಲಲ್ಲಿ ತಿಳಿಸಿರುವ ದಿನಾಂಕಗಳನ್ನು ಇಟ್ಟುಕೊಂಡೇ ಲೆಕ್ಕ ಹಾಕಿದೆ: ನನಗಿಂತ ಕನಿಷ್ಠ ೫ - ೮ ವರ್ಷ (ಅಂದರೆ ಈಗಿನ ಕಾಲದಲ್ಲಿ ಒಂದು ಜನರೇಷನ್ನು) ಚಿಕ್ಕವರೆಂದು!

ಇನ್ನು ಯೂನಿಕೋಡ್ ಕನ್ನಡದ ಬಗ್ಗೆ ಏನು ಹೇಳಲಿ? ಮೊನ್ನೆ ಮೊನ್ನೆ, ಕನ್ನಡ ಇಂಟರ್ಫೇಸ್ ಪ್ಯಾಕ್ ರಿಲೀಸ್ ಆದ ಮೇಲೆ, ಅದನ್ನುಪಯೋಗಿಸಿಕೊಂಡು ಕ್ಯಾರೆಕ್ಟರ್ ಮ್ಯಾಪ್ ನಲ್ಲಿಯೇ (ಸ್ಟ್ರಿಂಗ್ ಟೇಬಲ್ಲಿಗೆ) ಕನ್ನಡ ವಾಕ್ಯಗಳನ್ನು ರಚಿಸಿ ನಮ್ಮ ಸಾಫ್ಟ್‍ವೇರ್‌ಗೆ ಆಳವಡಿಸಿದ ಹೈದ ನಾನು!(ಆಗ ಇನ್ನೂ ಈ ಬರಹ-ವಿಧಾನ ಗೊತ್ತಿರಲಿಲ್ಲ!)

ಇನ್ನೂ ಹೆಚ್ಚು ಇಲ್ಲಿ ಬರೆದರೆ ಅವರ ಬ್ಲಾಗನ್ನು ನಾನು ಹೈಜಾಕ್ ಮಾಡಿದನೆಂದು ಅಂತರಂಗಿಗಳು ಅಂದುಕೊಂಡಾರು!

-