Tuesday, May 02, 2006

ಮನೆ ಕಟ್ಸಿ ನೋಡು...ಕೆಲ್ಸಾ ಮಾಡ್ಸಿ ನೋಡು

ಮೊನ್ನೆ ನನ್ನ ಡೈರೆಕ್ಟರ್ ಒಬ್ಬರು ನನಗೆ 'ಭಾರತದಲ್ಲಿ ಕೆಲಸ ಮಾಡ್ತೀಯಾ' ಎಂದು ಕೇಳಿದ್ದಕ್ಕೆ, ನಾನು 'ಸದ್ಯದ ಮಟ್ಟಿಗೆ ಇಲ್ಲ' ಎಂದು ನಯವಾಗಿ ನಿರಾಕರಿಸಿದೆ. ಎಂಥಾ ವಿಶೇಷ ನೋಡಿ, ನನಗೆ ಇಲ್ಲಿ ಕುಳಿತುಕೊಂಡೇ, ಯಾವುದೋ ದೇಶದವರು ನಮ್ಮ ದೇಶದಲ್ಲಿ ಕೆಲಸ ಕೊಡೋ ಪರಿಸ್ಥಿತಿ ಬಂದಿದೆ! ಭಾರತದ ಕಂಪನಿಗಳಲ್ಲಿ ಕೆಲಸಕ್ಕೆ ಪ್ರತಿಭಾವಂತ ಯುವಕ-ಯುವತಿಯರನ್ನ ನೇಮಕ ಮಾಡಿ ಅವರೊಡನೆ ಒಡನಾಡಿದವರಿಗೆ ಒಂದು ವಿಷಯ ಚೆನ್ನಾಗಿ ಗೊತ್ತಿರುತ್ತೆ - ಇಂತಹ ಪ್ರತಿಭಾವಂತರನ್ನು ಒಂದೇ ಕಡೆ ಹಿಡಿದಿಡುವುದು ಬಹಳ ಕಷ್ಟದ ಕೆಲಸ ಎಂದು. ನನಗೆ ಗೊತ್ತಿರುವ ಅಲ್ಲಿನ ಯುವ ಸ್ನೇಹಿತರು ಒಂದೇ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದೋ ಅಥವಾ ಕೆಲಸ ಸೇರಿಕೊಳ್ಳೋದಕ್ಕಾಗಿಯೋ ವಿದೇಶಕ್ಕೆ ಹೋಗಲು ಯಾವಾಗಲೂ ಹವಣಿಸುತ್ತಿರುತ್ತಾರೆ. ಒಬ್ಬ ವ್ಯಕ್ತಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿರಬಹುದು, ಅಥವಾ ಹಲವಾರು ವರ್ಷಗಳ ಅನುಭವದ ನಂತರ ಸೇರಿಕೊಂಡಿರಬಹುದು, ಒಂದು ಕಂಪನಿ ಇಂತಹ ವ್ಯಕ್ತಿಯನ್ನು ತಮ್ಮಲ್ಲೇ ನಿರಂತರವಾಗಿ (ಕೊನೇ ಪಕ್ಷ ಒಂದೈದು ವರ್ಷಗಳ ಮಟ್ಟಿಗಾದರೂ) ಕೆಲಸಕ್ಕೆ ಇಟ್ಟುಕೊಳ್ಳಬೇಕೆಂದರೆ ಬಹಳ ದೊಡ್ಡ ಸಾಹಸವನ್ನು ಮಾಡಬೇಕಾಗುತ್ತದೆ. ಹಾಗಿಲ್ಲದೇ ಹೋದಲ್ಲಿ ವಿದೇಶದ business analysis ಅನ್ನು ಸ್ಥಳೀಯರಿಗೆ ಅವರ ಭಾಷೆಯಲ್ಲೇ ವಿವರಿಸಿ ಅವರಿಂದ ಕೆಲಸ ತೆಗೆಯುವವರ್‍ಯಾರು? ಸ್ಥಳೀಯ ಕೆಲಸಗಳ ಕ್ವಾಲಿಟಿಯನ್ನು ಪರೀಕ್ಷಿಸುವವರ್‍ಯಾರು? ಭಾರತದಲ್ಲಿ ಒಬ್ಬ ಮ್ಯಾನೇಜರ್‌ನ ಕೆಳಗೆ ಸುಮಾರು ಇಪ್ಪತ್ತು ಜನರು ಕೆಲಸ ಮಾಡಬಹುದು, ಪ್ರತಿ ವಾರ, ಪ್ರತಿ ತಿಂಗಳೂ ಒಬ್ಬರಲ್ಲ ಒಬ್ಬರು ಬಸ್ಸನ್ನ ಹತ್ತಿ ಇಳಿಯುತ್ತಲೇ ಇದ್ದರೆ ಅಂತಹ ಟೀಮಿನ ಡೈನಮಿಕ್ಸ್ ಹೇಗಿರಬಹುದು ನೀವೆ ಊಹಿಸಿ. Hope, they took or derived good Human Resource policy and guidelines along with Company business! ಈ workforce management ಅನ್ನೋದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳದ ಕಂಪನಿಗಳು ಖಂಡಿತವಾಗಿ ಸೋತು, ಹೊರದೇಶಕ್ಕೆ ಕೆಲಸಗಳನ್ನು ಕಳಿಸಿ ಡಾಲರ್ ಮೌಲ್ಯದಲ್ಲಿ ಲಾಭಗಳಿಸುವುದು ಮರೀಚಿಕೆಯಾಗೇ ಉಳಿಯುತ್ತದೆ.

ಹೆಚ್ಚಿನ ಕಂಪನಿಗಳು ಮಾಡಿದಂತೆ ಇಲ್ಲಿ ನಾನು ಕೆಲಸ ಮಾಡುತ್ತಿರುವ ಕಂಪನಿಯೂ ಆಫ್‌ಷೋರಿಂಗ್ ಅನ್ನೋ ಹೆಸರಿನಲ್ಲಿ ನಿಧಾನವಾಗಿ ಒಂದೊಂದೇ ಕೆಲಸವನ್ನು ಭಾರತಕ್ಕೆ ಕಳಿಸತೊಡಗಿತು. ಸುಮಾರು ೨೦೦೦ ದ ಹೊತ್ತಿಗೆಲ್ಲಾ ಆರಂಭವಾದ ಆಫ್‌ಷೋರಿಂಗ್ ಇಲ್ಲಿಯವರೆಗೂ ನಿರಾತಂಕವಾಗಿ ಇನ್ನೂ ಮುಂದುವರೆಯುತ್ತಿದೆ, ಅಲ್ಲಿ ಭಾರತದಲ್ಲಿ ನಮ್ಮ ಕಂಪನಿಯಲ್ಲಿ ದಿನೇ-ದಿನೇ ಕೆಲಸಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ನನಗೆ ಇತ್ತೀಚೆಗೆ ಒಬ್ಬರಲ್ಲಾ ಒಬ್ರು ಕಾಲ್ ಮಾಡಿ, 'We are leaving for good!' ಎಂದು ಹೇಳ್ತಾನೇ ಇರೋದನ್ನೇ ನೋಡಿದ್ರೆ, ನಮ್ಮ ದೇಶ ವೀಡಿಯೋಕಾನ್ ಸೇಲ್ಸ್ ಪಿಚ್‌ನಲ್ಲಿ Bring home the leader! ಎಂದು ಇಲ್ಲಿಗೆ ಎಂಭತ್ತರ, ತೊಂಭತ್ತರ ದಶಕದಲ್ಲಿ ಬಂದ ಅತಿರಥ-ಮಹಾರಥರನ್ನೆಲ್ಲ ವಾಪಾಸ್ಸು ಕರೆಸಿಕೊಳ್ಳುತ್ತಿದೆ, ಆದರೆ ಸದ್ಯಕ್ಕೆ ಇಲ್ಲೇ ಬಿದ್ದು ಕೊಳೆಯಬೇಕಾಗಿರುವ ನನ್ನ ದೃಷ್ಟಿಯಲ್ಲಿ ಇದು ಒಂಥರಾ - ಹೊಲದಲ್ಲಿ ಹಂದಿ ತಿಂದೂ ಹಾಳು, ಬಾಲ ಬಡ್ದೂ ಹಾಳು - ಅಂತಾರಲ್ಲ ಹಾಗೆ. ಇಲ್ಲಿಯ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕೆಲಸಗಳೇನೋ ಒಂದೊಂದಾಗೇ ನಮ್ಮ ದೇಶದ ಹಾದಿ ಹಿಡಿದವು, ಜೊತೆಯಲ್ಲಿ ನನ್ನ ಫೋನ್ ಪುಸ್ತಕ ಕೂಡಾ ಖಾಲಿಯಾಗುತ್ತಿದೆ. ಹಾಳೂರಿಗೆ ಉಳಿದವನೇ ಗೌಡ ಅನ್ನೋ ರೀತಿಯಲ್ಲಿ ಇಲ್ಲಿ ನಾವಿರಬೇಕಾಗಿ ಬಂದಿರೋದರಿಂದ ಒಂದೇ ಬೇರೆ ಯಾವುದಾದರೂ ಇಂಡಷ್ಟ್ರಿ ಹಿಡೀ ಬೇಕು, ಇಲ್ಲಾ ಮತ್ತಿನ್ನೇನಾದರೂ ಮಾಡಬೇಕು - ಏಕೆಂದ್ರೆ ಮ್ಯಾನೇಜ್‌ಮೆಂಟ್ ಏಣಿಯಲ್ಲಿ ನನ್ನಂತೋರು ಮುಂದೆ ಹೋಗಬೇಕಾದ್ರೆ ಬಹಳ ಕಷ್ಟ ಇದೆ, ಹಾಗೇ ಇದ್ದ ಕೆಲಸವನ್ನು ಉಳಿಸಿಕೊಂಡು ಏಗ ಬೇಕೆಂದರೆ ಇನ್ನೂ ಕಷ್ಟ ಇದೆ.

***

ಈಗ ಹೇಗೋ ಗೊತ್ತಿಲ್ಲ, ಮೊದಲೆಲ್ಲಾ ಮೇಷ್ಟ್ರುಗಳಿಗೆ ಬಹಳಷ್ಟು ರಜಾದಿನಗಳು ಸಿಕ್ಕೋವು. ಬೇಸಿಗೆ ರಜೆ, ದಸರಾ ರಜೆ ಅಂತ ತಿಂಗಳುಗಟ್ಟಲೆ ಸಿಗೋದೂ ಅಲ್ದೇ, ಸರ್ಕಾರಿ, ಸ್ಥಳೀಯ ರಜೆಗಳಿಂದ ಹಿಡಿದು, ತಿಂಗಳಿಗೆ ಒಂದರಂತೆ ಸಿಗುತ್ತಿದ್ದ ಸಾಮಾನ್ಯ ರಜೆ ಹಾಗೂ ಪ್ರತೀವಾರ ಶನಿವಾರ ಅರ್ಧ ದಿನ ಮತ್ತು ಭಾನುವಾರ ರಜೆ ಸಿಗುತ್ತಿತ್ತು. ನನ್ನ ಅಪ್ಪಾ-ಅಮ್ಮಾ ಇಬ್ಬರೂ ಮೇಷ್ಟ್ರು, ಅವರ ಪರಂಪರೆ ಮುಂದುವರೀಲಿ ಅಂತ ಮನೆಯಲ್ಲಿ ನನ್ನ ಎರಡನೇ ಅಣ್ಣ ಹಾಗೂ ಒಬ್ಬಳು ಅಕ್ಕ ಅವರ ಹಾಗೇ ಮೇಷ್ಟ್ರಾಗಿದ್ದಾರೆ. ಇಷ್ಟೆಲ್ಲಾ ರಜಾ ದಿನಗಳು ಇದ್ದಾಗಲೂ ನನ್ನ ಅಣ್ಣ - ತುಂಬಾ ಕೆಲಸ, ಟೈಮೇ ಸಿಗಲ್ಲ ಅಂತ ಒದ್ದಾಡ್‌ತಿರ್‍ತಾನೆ! ಅವನಿಗೆ ತನ್ನ ಮಕ್ಕಳನ್ನೂ ನೋಡಿಕೊಂಡು, ಶಾಲೆಗೆ ಹೋಗಿ ಕೆಲಸ ಮಾಡಿ, ಇತ್ತೀಚೆಗೆ ಒಂದು ಮನೆಯನ್ನು ಕಟ್ಟಿಸಬೇಕೆಂದರೆ ಸಾಕು-ಸಾಕಾಯಿತಂತೆ, 'ಮನೆ ಕಟ್ಟಿ ನೋಡು-ಮದುವೆ ಮಾಡಿ ನೋಡು' ಅನ್ನೋದು ಅಲ್ಲಿ ಇನ್ನೂ ಅನ್ವಯವಾಗಬಹುದು ಬಿಡಿ, ಆದರೆ ಅವನಿಗೆ ಇದ್ದಂತಾ ಸಪೋರ್ಟ್ ನೆಟ್‌ವರ್ಕ್ ಯಾವನಿಗೂ ಇಲ್ಲ. ಕೈಗೊಬ್ಬರು ಕಾಲ್ಗೊಬ್ಬರು ಜನಾ ಸಿಗ್ತಾರೆ. ಅವನು ಎಲ್ಲಿ ಹೋದ್ರೂ ಎಲ್ಲಿ ಬಂದ್ರೂ ಬೇಬಿ ಸಿಟ್ಟಿಂಗ್‌ಗಾಗಿ ಒಂದ್ ದಿನವೂ ತಲೆ ಕೆಡಿಸಿಕೊಳ್ಳಲ್ಲ, ನಾನು ತಿಳಿದ ಮಟ್ಟಿಗೆ ಅವನು ಒಂದು ದಿನವೂ ಡೈಪರ್ ಚೇಂಜ್ ಮಾಡಿಯೂ ಇಲ್ಲಾ ಅಂತ ಕಾಣ್ಸುತ್ತೆ!

ಅಮ್ಮ ಅಂತಾಳೆ 'ಅವನಿಗೆ ಬಾರಿ ಕಷ್ಟಾ ಅಗುತ್ತೋ, ಮನೇ ಕಟ್ಟೋದು ಅಂದ್ರೆ ಸುಮ್ಮನೇನೆ?'

ನಾನು 'ಅಲ್ಲಮ್ಮಾ, ನಾನೂ ಇಲ್ಲಿ ಬಂದು ಮನೆ ಕಟ್ಟಿದ್ದೀನಿ, ನನ್ ಬಗ್ಗೆ ಒಂದು ದಿನವೂ ಆ ಮಾತನ್ನ ಹೇಳ್‌ಲಿಲ್ಲವಲ್ಲಾ ನೀನು!'.

'ನಿಂದೇನ್ ಬಿಡು, ದುಡ್ ಕೊಟ್ರೆ ಅವರೇ ಕಟ್ಟಿ ಕೊಡ್ತಾರೆ, ಇಲ್ಲಿ ಇವನಿಗಂತೂ ಟೈಮೇ ಸಿಗಲ್ಲ, ಬಾಳ ಕಷ್ಟ' ಅಂತ ಅಮ್ಮ ಅಣ್ಣನನ್ನೇ ಹೊತ್ತುಕೊಂಡು ಆಡ್ತಾಳೆ.

ನನಗೆ ಗೊತ್ತು, ಇಲ್ಲಿ ಮನೆ ಕಟ್ಟಿಸುವುದಕ್ಕೂ ಅಲ್ಲಿ ಕಟ್ಟಿಸುವುದಕ್ಕೂ ಏನು ವ್ಯತ್ಯಾಸ ಎಂದು, ಆದ್ರೂ ಅಮ್ಮ ಬರೀ 'ಅವನು ಮಾತ್ರ ತುಂಬಾ ಕೆಲ್ಸ ಇರೋನು, ಅವ್ನು ಮಾತ್ರ ಬಹಳ ಕಷ್ಟಾ ಪಟ್ಟೋನು...' ಅಂದಾಗೆಲ್ಲ ಎದೆ ಒಂದ್ ಸಾರಿ ಗವಕ್ ಅನ್ನುತ್ತೆ, sibling rivalry ಅಲ್ಲ, ಬೆಳಗ್ಗೆದ್ದು ಬ್ರೆಡ್ ತಿಂದ್ ಓಡೋ ನಮ್ ಪಡಿಪಾಟ್ಲೆ ಅಮ್ಮನಿಗೆ ಯಾವತ್ತೂ ಅರ್ಥ ಆಗಲ್ಲ ಅನ್ನೋ ದುಃಖಕ್ಕಾಗಿ.

ಮೊನ್ನೆ ಸುಮಾರು ಐದಾರು-ಸಾವಿರ ಜನರನ್ನ ಜಮಾಯಿಸಿ ಬಹಳ ಅದ್ದೂರಿಯಾಗಿ ಗೃಹಪ್ರವೇಶ ಮಾಡ್ಸಿದನಂತೆ, ಒಂದ್ ರಾತ್ರಿ ಒಂದ್ ಹಗಲು ಇದ್ದ ಕಾರ್ಯಕ್ರಮದಲ್ಲಿ ಆರು ಜನ ಪುರೋಹಿತರು ಬಂದು ಅದೇನೇನೋ ಮಂತ್ರಾ ಹೇಳಿ ಎಲ್ಲಾ ಅದ್ದೂರಿಯಾಗಿ ಆಯ್ತು ಅಂದ.

ಇಲ್ಲಿ ನಮ್ಮ ಹೊಸಮನೆ ಗೃಹಪ್ರವೇಶ ಮಾಡಿದಾಗ ನಾವು ಇದ್ದದ್ದು ಕೇವಲ ಆರೇ ಜನ, ಪುರೋಹಿತರನ್ನೂ ಸೇರಿ ಏಳು! ವಾರಾಂತ್ಯದಲ್ಲಿ ಮಾಡದೇ ಅದು ಯಾವ ಮಹೂರ್ತದಲ್ಲಿ ಬರುತ್ತೋ ಆಗಲೇ ಆಗಲಿ ಅನ್ನೋ ನನ್ನ ಹಠಕ್ಕೆ ನನ್ನ ಇಬ್ಬರು ಸ್ನೇಹಿತರು ಸಂಸಾರ ಸಮೇತರಾಗಿ ಗುರುವಾರ ದಿನ ಆಫೀಸಿಗೆ ರಜೆ ಹಾಕಿ ಸುಮಾರು ೨೫೦ (ಒಮ್ಮುಖ) ಮೈಲುಗಳನ್ನು ಡ್ರೈವ್ ಮಾಡಿಕೊಂಡು ಬಂದಿದ್ದರು!

ಆದ್ರೆ, ಅಲ್ಲಿ ಅವನು ಎಷ್ಟೇ ಕಷ್ಟಾ ಪಟ್ಟು ಮನೆ ಕಟ್ಟಿದ್ರೂ ನಮ್ಮೂರಿನ ಜನ ನನ್ನನ್ನೆಂದೂ ಕೈಬಿಟ್ಟಿದ್ದಿಲ್ಲ - ಬಂದೋರೆಲ್ಲ 'ಮೇಷ್ಟ್ರೇ, ನಿಮಗೇನ್ ಬಿಡ್ರಿ, ನಿಮ್ಮ ತಮ್ಮ ಅಮೇರಿಕದಲ್ಲಿರೋವಾಗ...' ಅಂತಾರಂತೆ, ಇವನು ಕೈ-ಕೈ ಹಿಸುಕಿಕೊಳ್ತಾನಂತೆ.

***

ನಿನ್ನೆ ಕಾರ್ಮಿಕರ ದಿನಾಚರಣೆ ಅಂತ ಭಾರತದಲ್ಲಿರೋ ನಮ್ ಕಂಪನಿಗೆ ರಜೆ ಕೊಟ್ಟಿದ್ರು, ಇಲ್ಲಿ ಅಮೇರಿಕದಾದ್ಯಂತ ವಲಸಿಗರು ಚಳುವಳಿ ನಡಿಸಿ ಹೆಚ್ಚು ಜನ ಕೆಲಸಕ್ಕೆ ಹೋಗದೇ ಇದ್ರು, ನಾನು ಇವು ಯಾವ್ದೂ ನನಗೆ ತಾಗಲ್ಲ ಎಂದು ಮಾಮೂಲಿನಂತೆ ಕೆಲಸಕ್ಕೆ ಹೋದೆ. ಅಲ್ಲಿ ನಮ್ಮ ಭಾರತೀಯ ಕಂಪನಿಗಳಿಗೆ ಇದ್ದ ರಜಾದಿನಗಳ ಲಿಸ್ಟ್ ನೋಡಿದಾಗ ಎದೆ ಧಸಕ್ ಎಂದಿತು. ಮೊದಲೆಲ್ಲ ಇದ್ದ ಎಲ್ಲಾ ರಜಾದಿನಗಳನ್ನು ತೆಗೆದು ಹಾಕಿ, ಮುಖ್ಯವಾದ ಒಂದಿಷ್ಟು ಹಬ್ಬ ಹರಿದಿನಗಳಿಗೆ ಮಾತ್ರ ರಜೆ! ಇದ್ದ ಎಲ್ಲಾ ರಜಾ ದಿನಗಳನ್ನು ಒಟ್ಟು ಗೂಡಿಸಿದರೆ ಇಲ್ಲಿಗಿಂತಲೂ ಕಡಿಮೆ, ನಂಬಲೇ ಆಗುತ್ತಿಲ್ಲ! ಇಲ್ಲಿಂದ business process ಗಳನ್ನು ತೆಗೆದುಕೊಂಡು ಹೋಗೋದರ ಜೊತೆಗೆ ಕೆಲಸ ಮಾಡುವ, ಮಾಡಿಸುವ ಪರಂಪರೆಯನ್ನೂ ತೆಗೆದುಕೊಂಡು ಹೋಗಿದ್ದಾರಲ್ಲ ಎಂದು 'ಖುಷಿ'ಯೂ ಆಯಿತು!

ಆದರೆ ಭಾವೈಕ್ಯ, ವೈವಿಧ್ಯತೆ, ಹಲವು ಧರ್ಮ ಸಮನ್ವಯವಾದ ನಮ್ಮ ನಾಡಿನಲ್ಲಿ ಎಲ್ಲಾ ಧರ್ಮೀಯರಿಗೂ ಒಂದಲ್ಲ ಒಂದು ರಜಾ ದಿನವಿದೆಯೆಲ್ಲ ಎಂದು ಸಮಾಧಾನವಾಯಿತು, ಅದೇ ಸಮಯಕ್ಕೆ ಗೂಗಲ್‌ನಲ್ಲಿ ಪಾಪ್ ಅಪ್ ಆದ ಕಾಶ್ಮೀರ ಹತ್ಯಾಖಾಂಡದ ಸುದ್ದಿ ಓದಿ ಖೇದವೂ ಆಯಿತು.

5 comments:

Anonymous said...

ಇವತ್ತಿನ ಬರೆಹದಲ್ಲಿನ ಆರಂಭದ ವಾಕ್ಯ "ಮೊನ್ನೆ ನನ್ನ ಡೈರೆಕ್ಟರ್ ಒಬ್ಬರು ನನಗೆ 'ಭಾರತದಲ್ಲಿ ಕೆಲಸ ಮಾಡ್ತೀಯಾ' ಎಂದು ಕೇಳಿದ್ದಕ್ಕೆ, ನಾನು 'ಸದ್ಯದ ಮಟ್ಟಿಗೆ ಇಲ್ಲ' ಎಂದು ನಯವಾಗಿ ನಿರಾಕರಿಸಿದೆ."

ಮತ್ತು

ಕೆಲದಿನಗಳ ಹಿಂದಿನ ಒಂದು ಬರೆಹದ ಆರಂಭದ ವಾಕ್ಯ "ಬರುವ ಜೂನ್ ತಿಂಗಳಿನಲ್ಲಿ ನನ್ನ ಮೂರು ಜನ ಸ್ನೇಹಿತರು ತಾಯ್ನಾಡಿಗೆ ಹಿಂತಿರುಗಿ ಹೋಗ್ತಾ ಇದ್ದಾರೆ ಅನ್ನೋದನ್ನ ನೆನೆಸಿಕೊಂಡಾಗಲೆಲ್ಲ ನಾನು ಇಲ್ಲೇ ಉಳಿದು ಬಿಡುತ್ತೇನೆಯೋ ಎಂದು ಕಸಿವಿಸಿಯಾಗುತ್ತದೆ."

- ಇವೆರಡೇ ಸಾಕು ನಿಮ್ಮ ತಾಕಲಾಟವನ್ನು ನೂರು ಪ್ರತಿಶತ ಸಮರ್ಥವಾಗಿ ಪ್ರತಿಬಿಂಬಿಸಲು!

ದೇವರು ನಿಮಗೆ (ಹಾಗೂ ಬೇರೆಲ್ಲರಿಗೂ ಸಹ) ಒಳ್ಳೆಯದು ಮಾಡಲಿ.

Enigma said...

Do u have an LJ account? wht is your id? If you can give me your LJ Id i'll add you
Thanks
Enigma
PS: you didn't reply to my prev questions

Satish said...

Enigma,

I just got an account, I am still nimmava there!
http://nimmava.livejournal.com/

To answer your previous question, the answer is 'no' and 'no'.

nimmava

Satish said...

ಅನಾಮಿಕ ಮಾನ್ಯರೇ,

ನಿಮ್ಮ ಅಬ್ಸರ್‌ವೇಷನ್ ನನಗೆ ತುಂಬಾ ಇಷ್ಟವಾಯಿತು, ಮನಸ್ಸನ್ನು ಹಗುರಗೊಳಿಸಿಕೊಳ್ಳಲೆಂದು ಬರೆದ ಬರಹಗಳಲ್ಲಿ ಕಾಲಕ್ಕೆ ತಕ್ಕಂತೆ ದ್ವಂದ್ವಗಳು ಮೂಡುವುದು ಸಹಜ. ಹಾಗೆಯೇ ಈ ಎರಡೂ ದ್ವಂದ್ವಗಳು ಆಗಿಂದಾಗ್ಗೆ ನನ್ನಲ್ಲಿ ಹುಟ್ಟಿಕೊಳ್ಳುತ್ತಿರುತ್ತವೆ.

ಈ ತರಹದ ಹಲವಾರು ದ್ವಂದ್ವಗಳು, ಒಳಗಿನ ಮತ್ತು ಹೊರಗಿನ ಧ್ವನಿಗಳು, ಹಾಗೂ ನಿಮ್ಮಂತೆ ಓದಿ ಪ್ರಾಮಾಣಿಕವಾಗಿ ಬರೆದ ಪ್ರತಿಕ್ರಿಯೆಗಳು ಇವೆಲ್ಲವೂ ಬದುಕಿನ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ!

ಇತಿ,
ನಿಮ್ಮವ

Satish said...

ರಾಜೇಶ್,

'ಇದೇ' ಸಂಬಳ ನಮ್ಮ ದೇಶದಲ್ಲಿ ಸಿಗುವಂತಿದ್ದರೆ ಖಂಡಿತವಾಗಿ ಹೋಗುತ್ತಿದ್ದೆ.

ನಮ್ಮ ಕಂಪನಿಯವರ ಆಫೀಸ್ ಬೆಂಗಳೂರಿನಲ್ಲಿ ಇಲ್ಲ, ಮದ್ರಾಸು ಅಥವಾ ಹೈದರಾಬಾದುಗಳಲ್ಲಿ ಇದ್ದು ಬಳಲುವುದಕ್ಕಿಂತ ಇಲ್ಲಿದ್ದುಕೊಂಡು ತೊಳಲುವುದೇ ಲೇಸು ಎಂದುಕೊಂಡಿದ್ದೇನೆ.

ಏನಂತೀರಾ?

ಇತಿ,
ನಿಮ್ಮವ