Showing posts with label ಟ್ರಂಪ್. Show all posts
Showing posts with label ಟ್ರಂಪ್. Show all posts

Wednesday, September 29, 2021

ಬೈಡೆನ್ ಏನ್ ಬೆಂಡೇಕಾಯ್ ತಿಂತಾನಾ?

ಬಹಳ ದಿನಗಳಿಂದ ಸುಬ್ಬೂನ ಹತ್ರ ಮಾತಾಡಿಲ್ಲ ಎಂದುಕೊಂಡು ಫ಼ೋನಾಯಿಸಲು ಯೋಚಿಸಿದೆ.  ಸುಮ್ಮನೇ ದಿಢೀರ್ ಅಂತ ಫ಼ೋನ್ ಮಾಡಿದ್ರೆ, ಎಲ್ಲಿ ಗುರ್‌ರ್ ಎಂದುಕೊಂಡು ಬಾಯಿಗೆ ಬಂದಂತೆ ಬೈತಾನೇನೋ ಎಂದುಕೊಂಡು, "ಏನಪ್ಪಾ, ಕಾಲ್ ಮಾಡ್ಲಾ?" ಎಂದು ಮೊದಲು ಮೆಸೇಜ್ ಹಾಕಿದೆ.  ಅಲ್ದೇ ಅಲ್ಲಿ ಕುತಗೊಂಡು ಅಮೇರಿಕನ್ ಕಂಪನಿಯ ಲೆಕ್ಕಾ ಚುಕ್ಕಾ ಬರೆಯೋರ್ದೆಲ್ಲಾ ಹಣೇ ಬರಾ ನಮಗೊತ್ತಿಲ್ವಾ?!  ಬೆಳಿಗ್ಗೆ ಹನ್ನೊಂದು ಗಂಟೆಗೆ ಆಫೀಸು ಎನ್ನುವ ಮನೆಯ ಮೇಜು-ಕುರ್ಚಿಗೆ ಅಂಟಿಕೊಂಡವನು ರಾತ್ರಿ ಹತ್ತು-ಹನ್ನೊಂದು ಆದ್ರೂ ಇನ್ನೂ ಊಟಾ ಸೈತಾ ಮಾಡ್ದೆ, ಇಲ್ಲಿನ ಜನರ ಸೇವೇ ಮಾಡ್ತಾನಲ್ಲ? ಇವನನ್ನ ಹಿಡಕೊಂಡು ಜಾಡಿಸಬೇಕು ಅನ್ಸುತ್ತೆ ಒಮ್ಮೊಮ್ಮೆ!  ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಮುನ್ನೂರೇ ಮಿಲಿಯನ್ ಜನರಿರುವ ಈ ದೇಶದವರಿಗೆ ಎಲ್ಲ ದೇಶದವರೂ ಯಾಕ್ ಕೆಲಸ ಮಾಡ್ಬೇಕು?  ಇರ್ಲಿ, ಅದನ್ನ ಇನ್ನೊಂದು ದಿನ ಕೇಳೋಣ ಎಂದುಕೊಂಡು ಸುಮ್ಮನಿರುವಾಗ,

"ಮಾಡು ಮಗಾ!" ಎಂದು ಆ ಕಡೆಯಿಂದ ಉತ್ರ ಬಂತು!.

ಮಲೆನಾಡಿನ ಮಾತುಕತೆಯ ಶಿಷ್ಟಾಚಾರವನ್ನೆಲ್ಲ ಬದಿಗೆ ತಳ್ಳಿ ಹಾಳು ಬೆಂಗಳೂರಿನ ವಿಚಾರವನ್ನಷ್ಟೇ ಅಲ್ಲ, ಆಚಾರವನ್ನೂ ಮೈ ಮೇಲೆ ಹೊದ್ದುಕೊಂಡವರ ಥರ ಇತ್ತೀಚೆಗೆಲ್ಲ, ಸುಬ್ಬನ ಮಾತುಕತೆಯಲ್ಲಿ "ಮಗ, ಮಗಾ" ಎನ್ನುವ ವಿಚಿತ್ರಗಳೂ ಮೂಡುತ್ತಿದ್ದವು.  ಎಷ್ಟೋ ಸರ್ತಿ, ಅಮೇರಿಕದ ಪ್ರೆಸಿಡೆಂಟ್ ಟ್ರಂಪ್‌ ನಿಂದ ಈ "ಮಗ" ಹುಟ್ಟಿತೋ, ಅಥವಾ ಬೆಂಗಳೂರಿನಲ್ಲೇ "ಮಗ" ಎನ್ನುವ ಉದ್ಗಾರ ಹುಟ್ಟಿತೋ ಎನ್ನುವ ಜಿಜ್ಞಾಸೆಯೂ ನನ್ನ ಮನದಲ್ಲಿ ಬೆಳೆದಿದ್ದಿದೆ.

" ಎನಪ್ಪ, ಏನೂ ಸುದ್ದೀನೇ ಇಲ್ಲ, ಏನ್ ಮಾಡ್ತಾ ಇದ್ದಿ, ಕೆಲ್ಸಾ ಎಲ್ಲ ಆಯ್ತಾ?" ಎಂದು ಯೋಗಕ್ಷೇಮವನ್ನು ವಿಚಾರಿಸಿದೆ.

"ಹೈ ನಿನ್ನ. ತೆಗಿ.  ಈ ಕೆಲ್ಸ ಯಾವತ್ತೂ ಮುಗಿಯಂಗ್ ಕಾಣಲ್ಲ... ಈಗಿನ್ನೂ ಒಂದು ಮೀಟಿಂಗ್ ಆಯ್ತು, ಮತ್ತೆ ಕ್ಲೈಂಟುಗಳು ರಿಕೈರ್‌ಮೆಂಟ್ ಬದ್ಲಾಯಿಸಿದ್ರಾ, ಇನ್ನೂ ಎರಡು ದಿನ ಕೋಡ್ ಕುಟ್ಟೂದು ಇದೆ ನೋಡು... ಮತ್ತಿನ್ನೇನ್ ರಿಲೀಸಿಗೆ ರೆಡಿ ಆಯ್ತು ಅನ್ನೋ ಅಷ್ಟೊತ್ತಿಗೆ, ಮತ್ತೆ ಇನ್ನೊಂದೇನೋ ತಗಾದೆ ತೆಗಿತಾವೆ ಬಡ್ಡಿ ಮಕ್ಳು... ಈ ಅಮೇರಿಕದವರನ್ನ ಸಂತೋಷ ಪಡಿಸೋ ಸುಖ ಯಾವ್ ನಮ್ ದೇರ್ವಿಗೂ ಬ್ಯಾಡ ನೋಡು!" ಎಂದು ಪೂರ್ತಿ ಕ್ಯಾತೆ ತೆಗೆದ.  ಇನ್ನೇನು, ಅಮೇರಿಕದವರ ಜನ್ಮ ಜಾಲಾಡಿದರೆ ಕಷ್ಟ ಎಂದು ನಾನು ನಿಧಾನಕ್ಕೆ ಟಾಪಿಕ್ ಬದಲಾಯಿಸ್ದೆ.

"ಅಲ್ಲೋ ಸುಬ್ಬ, ಮೋದಿ ಮತ್ತೆ ಅಮೇರಿಕಕ್ಕೆ ಬಂದು ರಾಜ ಗಾಂಭೀರ್ಯ ಮೆರೀತಾ ಇದ್ದಾರೆ... ಏನ್ ಸಮಾಚಾರ ಹೇಗಿದೆ ಇತ್ತೀಚಿಗಿನ ರಾಜಕೀಯ ಅಲ್ಲಿ?!" ಎಂದು ಓಪನ್ ಎಂಡೆಡ್ ಪ್ರಶ್ನೆ ಕೇಳಿದೆ, ಅವನ ಮನಸ್ಸಲ್ಲಿ ಏನ್ ಇದೆ ಅಂತ ನೋಡೋಣ ಎಂದು,

"ಮೋದಿಗೇನು ಬಿಡು, ವಯಸ್ಸಾಗ್ತಾ ಬಂತು.  ಇನ್ನೊಂದು ಟರ್ಮು ನಡೆಸೋ ಅಷ್ಟು ಶಕ್ತಿ ಇದೆಯೋ ಇಲ್ವೋ.  ತನ್ನ ಹತ್ತು ವರ್ಷಗಳ ಅಧಿಕಾರವಧಿಯಲ್ಲಿ ಎಷ್ಟೋ ದೇಶಗಳನ್ನ ಸುತ್ತಿ ಬಂದು ಒಂಥರ ರೆಕಾರ್ಡ್ ಮಾಡ್ಬಿಟ್ಟ ನೋಡು!  ಮೋದಿ ಮರ್ಮ ಈ ದೇಶಕ್ಕೆ ಅರ್ಥವಾಗಲ್ಲ, ಈ ದೇಶದ ಜನ ಕೊರಗೋದು ಬಿಡೋಲ್ಲ!" ಎಂದು ಪಕ್ಕಾ ಮೋದಿ ಭಕ್ತನ ಸ್ಟೇಟ್‌ಮೆಂಟ್ ಕೊಟ್ಟ, ಸಾಲದ್ದಕ್ಕೆ, ಏಕ್‌ದಂ ವ್ಯವಹಾರ ಪರಿಣಿತನಾದಂತೆ, 

"ಏನ್, ಸುಮ್ನೇ ಫ಼ೋನ್ ಮಾಡ್ದ್ಯ? ಏನ್ ಸಮಾಚಾರ ನಿಮ್ಮ ಕಡೆಗೆ..." ಎಂದು ಯಾರೋ ಗುಜರಾತಿ ಮಾರ್ವಾಡಿಗಳು ವ್ಯವಹಾರಕ್ಕೆ ಕುಳಿತವರ ಹಾಗೆ ಕೇಳುವಂತೆ ಕೇಳಿದ.  ನಾನು ಅಂದುಕೊಂಡೆ, ಇದು ನಮ್ಮ ಯೂಶುವಲ್ ಸುಬ್ಬನಲ್ಲ, ಮಲ್ಟಿ ಟಾಸ್ಕಿಂಗ್‌ನಲ್ಲಿ ಮುಳುಗಿ ಎದ್ದು, ಮುಂದೆ ಕುಟ್ಟಬೇಕಾದ ಕೋಡ್ ಬಗ್ಗೆ ಚಿಂತಿಸುವ ಕೊರಗಿನ ಕೋಡಂಗಿ ಎಂದು!

"ಏನಿಲ್ಲ ಕಣೋ, ಸುಮ್ನೇ ಮಾಡ್ದೆ.  ನಮ್ಮಲ್ಲಿ ಈ ಹಾಳಾದ ಹರಿಕೇನ್‌ಗಳ ಹಾವಳಿಯಿಂದ ಬಾಳಾ ಮಳೆ ಬಂದು ಹಾನಿ-ಪಾನಿ ಆದ ವಿಚಾರ ನಿಂಗ್ ಗೊತ್ತೇ ಇದೆಯಲ್ಲ?  ನಮ್ದೇನೂ ವಿಶೇಷವಿಲ್ಲ ಇಲ್ಲಿ... ಮಕ್ಳು ಶಾಲೆಗೆ ಹೋದ್ರು, ಇಲ್ಲಿ ನಾನೊಬ್ಬನೇ ಕುತಗೊಂಡು ನಿನ್ನ ಥರಾನೇ ಕಡೀತಾ ಇದ್ದೀನಿ, ದೊಡ್ಡ ಗುಡ್ಡವನ್ನ..." ಎಂದು ನಗಾಡಿದೆ.

"ಹೌದು ಮತ್ತೆ, ಹಿಂದೆಲ್ಲಾ ಈ ಕೋವಿಡ್ ಪರಿಸ್ಥಿತಿಯಿಂದ ಸ್ವಲ್ಪ ಕಷ್ಟದಲ್ಲಿದ್ದ ಅಮೇರಿಕ ಈಗ ಹೇಗಿದೆ?" ಎಂದ.

"ನಮ್ಮ ಜೆರ್ಸಿಯಲ್ಲಿ ಏನೂ ತೊಂದ್ರೆ ಇಲ್ಲ.  ಆದ್ರೆ ದಕ್ಷಿಣ ರಾಜ್ಯದಲ್ಲಿ ಇನ್ನೂ ಸಂಕಷ್ಟಾ ಇದ್ದೇ ಇದೆ.  ಅಲ್ಲಿನ ಜನ ತಮ್ಮ ಫ಼್ರೀಡಮ್-ಲಿಬರ್ಟಿ ಅಂದುಕೊಂಡು ವ್ಯಾಕ್ಸೀನೂ ತೊಗೋಳಲ್ಲ ಅಂತಾರೆ, ಯಾರೂ ಏನೂ ಮಾಡಕ್ಕಾಗಲ್ಲ..." ಎನ್ನುವಾಗಲೇ, ನನ್ನ ಮಾತನ್ನು ತುಂಡುಮಾಡಿ,

"ಥೂ, ಥರ್ಡ್ ಕ್ಲಾಸ್ ಜನಗಳು ಕಣೋ... ಪುಕ್ಕಟೆ ವ್ಯಾಕ್ಸೀನ್ ಕೊಟ್ರೂ ತೊಗೊಳೋಲ್ಲ ಅಂತಾರಲ್ಲ... ಇವರ ಜನ್ಮಕ್ಕಿಷ್ಟು..." ಎಂದು ಮುಂದೆ ಅವರ ಜನ್ಮವನ್ನು ಜಾಲಾಡುವುದರ ಒಳಗೆ ನಾನು ಮಧ್ಯ ಬಾಯಿ ಹಾಕಿ,

"ಹ್ಞಾ, ಒಂದ್ ನಿಮ್‌ಷ!  ಹಂಗೆಲ್ಲ ಜಡ್ಜ್‌ಮೆಂಟ್ ಕೊಡಬೇಡ... ನಿನಗೆ ಪೂರ್ತಿ ವಿಷ್ಯ ಗೊತ್ತಿಲ್ಲ... ಅವರು ಏನ್ ನ್ಯೂಸ್ ಕೇಳ್ತಾರೋ, ಯಾರು ಸರಿಯೋ ಯಾರು ತಪ್ಪೋ... ಒಟ್ಟಿನಲ್ಲಿ ಅವರ ದೇಶ-ಅವರ ಜೀವನ, ಕೊನೇ ಪಕ್ಷ ಅವರಿಗೆ ಇರುವ ಫ಼್ರೀಡಮ್ ಬಗ್ಗೆನಾದ್ರೂ ಸಂತೋಷ ಪಡು... ನಿಮ್ಮ ಪಕ್ಕದ ದೇಶದಲ್ಲಿ ಅಧಿಕಾರಶಾಹಿಗಳು ಹಾಕೋ ರೂಲ್ಸ್‌ನಲ್ಲಿ ಬೇಯೋ ಬದ್ಲು, ಫ಼್ರೀಡಮ್‌ನಲ್ಲಿ ಸಾಯೋದೇ ಮೇಲು... ಅದೂ ಅಲ್ದೇ,  ಸಾಯೋರು ಅವ್ರೇ ತಾನೇ?" ಎಂದು ಪ್ರಶ್ನೆ ಹಾಕಿದೆ.

"ಅವರ ಹಣೇ ಬರ, ಸಾಯಲಿ ಬಿಡು!" ಎಂದು ಅಲ್ಲಿಗೇ ಬಿಟ್ಟ.  "ಆಮೇಲೆ ನಿನ್ನ ಡಯಟ್ಟೂ-ರನ್ನಿಂಗೂ ಎರಡೂ ಎಲ್ಲಿಗೆ ಬಂತೂ?!" ಎಂದು ಸಂಭಾಷಣೆಯನ್ನು ಬೇರೆ ಕಡೆಗೆ ತಿರುಗಿಸಿದ...

"ಓ, ಅದಾ, ಅದ್ರದ್ದೊಂದ್ ದೊಡ್ಡ ಕತೆ!  ಮನೇಲೇ ಕುಂತೂ ಕುಂತೂ ಟೇಬಲ್ಲಿಗೂ ಹೊಟ್ಟೆಗೂ ಗೆಳೆತನ ಜಾಸ್ತಿ ಆದ ಪರಿಣಾಮದಿಂದ, ನನ್ನ ಹೊಟ್ಟೆ ದೊಡ್ಡದಾಗಿ ಬೆಳೆದಿದೆ ನೋಡು!" ಎಂದು ಜೋರಾಗಿ ನಕ್ಕೆ.

"ಮತ್ತೇ, ಏನ್ ಮಾಡ್ತೀ ಅದಕ್ಕೆ?"  ಎಂದು ಮಹಾ ಸ್ವಾಮಿಗಳ ಸಂಭಾಷಣೆಯ ತೀಕ್ಷ್ಣತೆಯಿಂದ ಒಂದು ಪ್ರಶ್ನೆ ಎಸೆದ.

"ಏನಿಲ್ಲ, ಸ್ವಲ್ಪ ತಿನ್ನೋದ್ ಕಡ್ಮೆ ಮಾಡಿದ್ರೆ, ಎಲ್ಲಾ ಸರಿ ಹೋಗತ್ತೇ" ಎಂದು ಸಮಜಾಯಿಷಿ ನೀಡಿದೆ.

"ಅಲ್ವೋ, ಈ ಡಯಟ್ಟೂ-ಪಯಟ್ಟೂ ಯಾವ್ದೂ ನಮಿಗೆ ವರ್ಕ್ ಆಗಲ್ಲ... ಪಕ್ಕಾ ದಕ್ಷಿಣ ಭಾರತದ ಊಟದ ಮುಂದೆ ಬೇರೇ ಏನೂ ಇಲ್ಲ ಅಂತ ಭಾಷ್ಣ ಕೊಡ್ತಾ ಇದ್ದೆಯಲ್ವಾ ಕೆಲವು ತಿಂಗಳುಗಳ ಹಿಂದೆ? ಅದಕ್ಕೇನಾಯ್ತೋ??" ಎಂದು ಕಿಚಾಯಿಸಿದ.

"ಇಲ್ಲ, ಕಾಲಕ್ರಮೇಣ ನಮ್ಮ ತಿಳುವಳಿಕೇನೂ ಬದಲಾಗುತ್ತಲ್ವಾ?! (ನಗುತ್ತಾ) ಈಗ, ಪಕ್ಕಾ ವೀಗನ್ ಮೆನ್ಯೂ ಅಂಥ ಶುರು ಮಾಡಿದೀನಿ... ಅದರಿಂದಲಾಂದ್ರೂ ಈ ಕೊಬ್ಬಿನ ಬಾಂಧವ್ಯ ಕಳಚುತ್ತೇನೋ ಅಂಥ ನೋಡೋಣ..." ಎನ್ನುವಷ್ಟರಲ್ಲಿ... ಮಧ್ಯೆ ಬಾಯಿ ಹಾಕಿ...

"ಹೋಗೋ ಸಾಕು... ನಿಮ್ಮ ಬೈಡೆನ್ ಏನಾದ್ರೂ ಬೆಂಡೇಕಾಯ್ ತಿಂತಾನ? ಟ್ರಂಪ್ ಏನಾದ್ರೂ ತೊಂಡೇ ಕಾಯ್ ತಿಂತಾನಾ? ಅವರೆಲ್ಲ ಮೇಲಿಂದ ಕೆಳಗಿನ ತನಕ ನೆಟ್ಟಗೇ ಇಲ್ವಾ, ಮತ್ತೆ?? ಈ ಮುದುಕ ಸೆಪ್ಟಾಜೆನೇರಿಯನ್ನ್‌ಗಳು ದೇಶಾನೇ ಆಳ್ತಾವಂತೆ... ನೀನು ಒಂಥರಾ ನಲವತ್ತೈದು ಐವತ್ತಕ್ಕೆ ಸೋಗ್ ಹಾಕ್ತೀಯಲ್ಲ...ನಿನ್ನ ನನ್ನ ಜೀನ್ಸ್ ಏನಿದ್ರೂ ಯಾವತ್ತೂ ಸೇವ್ ಮಾಡೋ ಮೆಂಟಾಲಿಟಿಯವು... ಅವುಗಳು ಕೊಬ್ಬನ್ನಾಗಲೀ, ದುಡ್ಡನ್ನಾಗಲೀ ಉಳಿಸೋ ಪ್ರವೃತ್ತಿಯನ್ನ ಎಂದಿಗೂ ಬಿಡಲ್ಲ, ನಮ್ಮ ಬೆಳೆದಿರೋ ಹೊಟ್ಟೆ ಒಂದು ರೀತಿ ಸಮೃದ್ಧಿಯ ಸಂಕೇತ ನೋಡು!" ಎಂದು ಗಹಗಹಿಸಿದ.

ಸುಬ್ಬ ಹೇಳಿದ್ರಲ್ಲೂ ಪಾಯಿಂಟ್ ಇದೆ... ಅಂಥ ಮೊಟ್ಟ ಮೊದ್ಲಿಗೆ ಭಯವಾಗತೊಡಗಿತು!  ಬಡ್ಡೇತ್ತಾವ ಇನ್ನೇನೇನೂ ಓದಿಕೊಂಡು ತಲೆ ದೊಡ್ಡದ್ದನ್ನಾಗಿ ಮಾಡಿಕಂಡವ್ನೋ ಅಂಥ!

"ಇರ್ಲಿ ಬಿಡೋ, ಯೋಗಿ ಪಡ್ದಿದ್ದು ಯೋಗಿಗೆ, ಜೋಗಿ ಪಡ್ದುದ್ದು ಜೋಗಿಗೆ... ನಮ್ ನಮ್ ಕಷ್ಟ-ನಷ್ಟಾ ಎಲ್ಲಾ ನಮ್ಗೇ ಇರ್ಲಿ..." ಎಂದು ಸಮಾಧಾನ ಮಾಡಿಕೊಂಡೆ.

"ಹೋಗ್ಲಿ... ಹರಿಕೇನು ಪರಿಕೇನು ಅಂಥ ಬರ್ತಾನೇ ಇರ್ತವೆ, ಹುಷಾರಾಗಿರು... ಅಲ್ದೇ ಫ಼್ರೀಡಮ್ ಲಿಬರ್ಟಿ ಮಣ್ಣೂ ಮಸಿ ಅಂದ್‌ಕೊಂಡು ಎಲ್ಲಾರು ತಿರುಗಾಡೋಕ್ ಹೋಗಿ,ಡೆಲ್ಟಾ ವೇವ್‌ನಲ್ಲಿ ಸಿಕ್ಕಾಕ್ಕೊಂಡ್ ಬಿಟ್ಟೀ, ಹುಷಾರು..., ಮತ್ತಿನ್ಯಾವಾಗಾದ್ರೂ ಮಾತಾಡಾಣಾ... ಸ್ವಲ್ಪ ಕೆಲ್ಸಾ ಜಾಸ್ತಿ ಇವತ್ತು... ಮನೆಯಲ್ಲೇ ಕುಳಿತು ಕೆಲ್ಸಾ ಮಾಡೋರ ಹಣೇ ಬರವೆಲ್ಲ ಹೀಗೇ... ಒಂದ್ ಥರ ಬೋಳ್ ತಲೆಯ ಮನುಷ್ಯ ಮುಖ ತೊಳೆದ ಹಾಗೆ... ಎಲ್ಲಿ ಶುರು ಮಾಡ್ಬೇಕೋ ಬಿಡಬೇಕೋ ಗೊತ್ತಾಗಲ್ಲ... ಮತ್ತಿನ್ಯಾವಾಗಾದ್ರೂ ಮಾತನಾಡೋಣ...", ಎಂದು ನಗುತ್ತಲೇ ಬೈ ಹೇಳಿದ.

"ಸರಿ ಮತ್ತೆ" ಎಂದು ನಾನೂ ಫ಼ೋನ್ ಕಟ್ ಮಾಡಿ, ಉಸ್ ಎಂದು ನಿಟ್ಟುಸಿರು ಬಿಟ್ಟೆ.