Saturday, May 13, 2006

ಮೂವರು 'ರಘು'ಗಳು

ಹೆಚ್ಚಿನ ನನ್ನ ಶಕ್ತಿಯೆಲ್ಲಾ ಎಲ್ಲಿ ವ್ಯಯವಾಗುತ್ತದೆಯೆಂದು ನನಗೆ ಚೆನ್ನಾಗಿ ಗೊತ್ತು: ಉಳಿದವರಿಗೆ ಬೇಡದ ಆಗದ ಹೋಗದ ವಿವರಗಳನ್ನು ನೆನಪಿಡುವಲ್ಲಿ. ಈ ಪ್ರಪಂಚದಲ್ಲಿ ಮನುಷ್ಯರ ಮನಸ್ಥಿತಿಯನ್ನು ಇಷ್ಟಪಡುವಷ್ಟು ಬೇರೇನನ್ನು ಇಷ್ಟಪಟ್ಟಿರಲಾರೆ - ಮನುಷ್ಯ ಸಂಘಜೀವಿಯಾಗಿ ಬೆಳೆದು ಬಂದದ್ದೂ ಅಲ್ಲದೇ, ಉಳಿದ ಪ್ರಾಣಿಸಂಕುಲದಲ್ಲಿ ಭಿನ್ನವಾಗಿರಲು ಈ ಮನಸ್ಸೇ ಮೂಲಕಾರಣ - ಬೇರೆ ಜೀವಿಗಳಿಗೂ ಮನಸ್ಸೆಂಬುದು ಇದೆ, ಆದರೆ ನಮ್ಮಷ್ಟು ವಿಸ್ತಾರ ರೂಪವನ್ನು ತಾಳಿಲ್ಲ ಎನ್ನುವುದು ನನ್ನ ನಂಬಿಕೆ, ಈ ವಿಶ್ವದಲ್ಲಿ ತೃಣ ಮಾತ್ರವಾದದ್ದು ಮಾನವ ಪ್ರಪಂಚ, ಅದರಲ್ಲಿ ಕೂದಲೆಳೆಯ ಸಾವಿರದೊಂದು ಭಾಗದ ಸಾವಿರದನೇ ಒಂದು ತುಂಡಿನ ಸಾವಿರದ ಒಂದನೇ ಭಾಗ ನಾನು, ನನ್ನ 'ನಂಬಿಕೆ'ಯಲ್ಲಿ ತಪ್ಪಿರಬಹುದು ಎನ್ನುವ ಕಲ್ಪನೆ ನನಗಿದ್ದರೂ, ಬಲವಾದ ನಂಬಿಕೆ ಹಾಗೂ ವಿಶ್ವಾಸಗಳು ನನ್ನ ವಾದವನ್ನು ಗೆಲ್ಲಿಸುತ್ತೇವೆಂದು ಮಾತುಕೊಟ್ಟಿರುವುದರಿಂದ ನಾನು ನನ್ನಲ್ಲಿ ವಿಶ್ವಾಸವನ್ನಿಟ್ಟುಕೊಳ್ಳುತ್ತೇನೆ!

***

ನಾನು ಈವರೆಗೆ ಹಲವಾರು 'ರಘು' ಎನ್ನುವ ಹೆಸರಿನ ವ್ಯಕ್ತಿಗಳನ್ನು ಮಾತನಾಡಿಸಿರಬಹುದು, ಅವರ ಜೊತೆಯಲ್ಲಿ ಕೆಲಸಮಾಡಿರಬಹುದು ಆದರೆ ಅಮೇರಿಕದಲ್ಲಿ ನನ್ನ ಸಹೋದ್ಯೋಗಿಗಳಾಗಿ ನಾನು ಹತ್ತಿರದಿಂದ ಬಲ್ಲ ಈ ಮೂವರು ರಘುಗಳ ಬಗ್ಗೆ ಬರೆಯಲೇ ಬೇಕಾಗುತ್ತದೆ. ಇತ್ತೀಚೆಗೆ ನನಗೆ ಆಫೀಸ್ ಸ್ಥಳಾಂತರವಾಗಿ ಹೊಸ ಆಫೀಸಿಗೆ ಹೋಗುವ ಸನ್ನಿವೇಶ ಬಂತು, ಮೊದಲನೇ ದಿನ ನನ್ನ ಹೊಸ ಕ್ಯೂಬಿಕಲ್ ಸುತ್ತಲೂ ಯಾರು ಯಾರು ಇದ್ದಾರೆ ಎಂದು ನೋಡುತ್ತಿದ್ದಾಗ ನನ್ನ ಹತ್ತಿರದಲ್ಲೇ ಕೂರುವ 'ರಘು' ಎನ್ನುವ ತೆಲುಗಿನವನು ಬಹಳ ಹತ್ತಿರದ ಸ್ನೇಹಿತನಂತೆ ಕಂಡು ಬಂದದ್ದೂ ಅಲ್ಲದೇ ಮುಂದೆ ಬಹಳ ದಿನಗಳವರೆಗೆ ಉತ್ತಮ ಗೆಳೆಯನಾಗುವ ಮುನ್ಸೂಚನೆಗಳನ್ನು ನೀಡಿದ - ಆತನ ನಡತೆ, ಮಾತುಕತೆ, ಇಲ್ಲಿನವರಲ್ಲಿ ಹೊಂದುಕೊಂಡ ರೀತಿ ಇವುಗಳು ನಾನು ಇದುವರೆಗೆ ನೋಡಿರುವ ತೆಲುಗು ಜನರೆಲ್ಲರ ಇಮೇಜನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವಂತಿದ್ದವು, ಹಾಗೂ ಆತ ತೋರಿದ ಆದರ, ಸಹೃದಯತೆಗಳು ಅವನ ಮೇಲಿನ ಗೌರವವನ್ನು ಹೆಚ್ಚು ಮಾಡಿದವು. ಅದೇ ವಾರ Diversity training ನಲ್ಲಿ ಹೇಳಿಕೊಟ್ಟ "We individualize the good behavior and generalize the bad behavior" ನೆನಪಿಗೆ ಬಂತು. ಅದರ ಸಾರ ಇಷ್ಟೇ: ನಾನೇನಾದರೂ ಒಳ್ಳೆಯ ನಡತೆಯನ್ನು ತೋರಿಸಿದರೆ ಅದು ನನ್ನ ಮಟ್ಟಿಗೇ ಸೀಮಿತವಾಗುತ್ತದೆ, ಆದೇ ನಾನೇನಾದರೂ ಕೆಟ್ಟದಾಗಿ ನಡೆದುಕೊಂಡರೆ 'ಈ ಭಾರತೀಯರೆಲ್ಲಾ ಹೀಗೇ' ಎನ್ನುವ ಜೆನರಲೈಸೇಷನ್ ಆಗುವುದು ಸ್ವಾಭಾವಿಕವಾದ್ದರಿಂದ ಈ ದೇಶದಲ್ಲಿ ನಮ್ಮ ಹೆಗಲುಗಳ ಮೇಲೆ ಯಾವಾಗಲೂ ಒಳ್ಳೆಯದಾಗೇ ನಡೆದುಕೊಳ್ಳುವ ಅದೃಶ್ಯವಾದ ಒತ್ತಡವೊಂದು ಇದ್ದೇ ಇರುತ್ತೆ.

ಇನ್ನು ಎರಡನೇ ರಘು, ನಾಲ್ಕು ವರ್ಷಗಳ ಹಿಂದೆ ನಮ್ಮ ಆಫೀಸಿನಲ್ಲೇ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದವನು. ಈತನ ಒಂದು ವಿಶೇಷವೆಂದರೆ, ಅವನು ಈ ದೇಶದಲ್ಲಿ ಎಷ್ಟು ವರ್ಷದಿಂದ ಇದ್ದವನೋ ಬಿಟ್ಟವನೋ, ಆದರೆ ಅವನ ನಡೆ-ನುಡಿ ಎಲ್ಲವೂ ಸಂಪೂರ್ಣ ಅಮೇರಿಕನ್ ಮಯವಾಗಿತ್ತು. ಆದರೆ ಒಂದು ಮುಖ್ಯವಾದ ವಿಷಯವೆಂದರೆ ಈತ ಟೆಕ್ನಿಕಲ್ ವಿಷಯದಲ್ಲಿ ಎಷ್ಟು ಪಾರಾಂಗತನೋ, ಬಿಸಿನೆಸ್ ವಿಷಯದಲ್ಲೂ ಅಷ್ಟೇ ನಿಪುಣನಾಗಿದ್ದ, ಎಷ್ಟೋ ಸಾರಿ ನನಗೆ ಅವನು ಬೇರೆ ಯಾರಿಗೂ ಗೊತ್ತಿರದ ಕಷ್ಟವಾದ ಪ್ರಾಡಕ್ಟಿನ ವಿವರಗಳನ್ನು ಹೇಳಿಕೊಟ್ಟಿದ್ದಿದೆ. ಒಂದು ದಿನ ಹೀಗೇ ಹರಟೆ ಹೊಡೆಯುತ್ತಿದ್ದಾಗ ಅವನೂ ಸಹ ಕರ್ನಾಟಕದವನೆಂದು ತಿಳಿಯಿತು. ನನ್ನ ಮೇಜಿನ ಮೇಲೆ ಸಿ.ಅಶ್ವಥ್‌ರ 'ನೂಪುರ' ಸಿ.ಡಿ. ಬಿದ್ದುಕೊಂಡಿತ್ತು (ಅಶ್ವಥ್ ಇಲ್ಲಿಗೆ ಬಂದಾಗ ಎಲ್ಲ ಹಾಡುಗಳನ್ನು ಅವರೇ ಹಾಡಿದ 'ನೂಪುರ' ಎನ್ನುವ ಸಿ.ಡಿ.ಯನ್ನು ಮಾರಿದ್ದರು, ಮುಂದೆ ಅದನ್ನೇ 'ಹುಣ್ಣಿಮೆ' ಎಂದು ಪ್ರಕಟಿಸಿ ಹಾಡುಗಳನ್ನು ಹೇಮಂತ್, ಸಂಗೀತಾ ಕುಲಕರ್ಣಿ, ಹಾಗೂ ಅಶ್ವಥ್ ಹಾಡಿದ್ದರು), ಆತನಿಗೆ ಹಾಡುಗಳನ್ನು ಕೇಳುವುದೂ ಇಷ್ಟವೆಂದು ತಿಳಿದು ಆ ಸಿ.ಡಿ.ಯನ್ನು ನಾನೇ ಅವನಿಗೆ ಕೇಳಿ ಕೊಡುವಂತೆ ಕೊಟ್ಟಿದ್ದೆ. ಅವನು ಕೆಲವು ದಿನಗಳ ನಂತರ ಸಿ.ಡಿ.ಯನ್ನು ಹಿಂತಿರುಗಿಸಿದ, ನಾನು 'ಯಾವ ಹಾಡು ಇಷ್ಟವಾಯಿತು, ಇವುಗಳಲ್ಲಿ' ಎಂದೆ, ಅವನು - '"ಬಾಳೀನ ದಾರಿಯಲಿ..." ಹಾಡು ಪರವಾಗಿಲ್ಲ, ಉಳಿದವುಗಳು ಅಷ್ಟಕಷ್ಟೇ' ಎಂದ.

ಈ ರಘು ನನ್ನ ಮನಸ್ಸಿನ್ನಲ್ಲಿ ಬಹಳ ಕಾಲ ನಿಲ್ಲುತ್ತಾನೆ. ಆತನ ಬಿಸಿನೆಸ್ಸಿನ ತಿಳುವಳಿಕೆಯೂ, ಸಂಪೂರ್ಣವಾಗಿ ಅಮೇರಿಕನ್‍ಮಯವಾದ ಇಂಗ್ಲೀಷೂ, ಹಾಗೂ ಉತ್ತಮ ಕೆಲಸವನ್ನು ಮಾಡಿ ಎಲ್ಲರಿಂದಲೂ ಮೆಚ್ಚುಗೆಗಳಿಸುತ್ತಿದ್ದುದೂ ನನಗಿನ್ನೂ ನೆನಪಿದೆ - ಒಬ್ಬ ರೋಲ್ ಮಾಡೆಲ್ ಆಗಿ ಇರಬಹುದಾದಂತ ವ್ಯಕ್ತಿತ್ವ ಆತನಲ್ಲಿತ್ತು.

***

ಇನ್ನು ಮೂರನೆಯವನಾಗಿ ಈ ರಘು - ೧೯೯೭ರಲ್ಲಿ ನಾನು ಐ.ಬಿ.ಎಮ್.ನಲ್ಲಿ ಕೆಲಸ ಮಾಡುತ್ತಿರುವಾಗ ಈತ ನನ್ನ ಜೊತೆ ನಮ್ಮ ಟೀಮಿನಲ್ಲೇ ಇದ್ದ. ಕನ್ಸಲ್‌ಟಿಂಗ್ ಕೆಲಸ ಮಾಡಿಕೊಂಡೂ, ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ಎಮ್.ಬಿ.ಎ. ಮಾಡಿಕೊಂಡು ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದ. ಈತ ನನ್ನ ನೆನಪಿನಲ್ಲಿ ಉಳಿಯೋದು ಎರಡೇ ಎರಡು ಕಾರಣಗಳಿಗಾಗಿ - ಒಂದು ಆತನ ಸೀರಿಯಸ್ಸಾದ ಮುಖದಲ್ಲಿ ಹುಟ್ಟುತ್ತಿದ್ದ ಹಾಸ್ಯ ಹಾಗೂ ಇನ್ನೂ ಜೀವನವನ್ನು ಕಣ್ಬಿಟ್ಟು ನೋಡುವುದರ ಮೊದಲೇ ಆತ ಅನುಭವಿಸಬೇಕಾದ ದುರಂತ.

ನಾವೆಲ್ಲರೂ, ಅಂದರೆ ದೇಸಿ ಜನರು ಮಧ್ಯಾಹ್ನ ಊಟದ ಸಮಯದಲ್ಲಿ ಒಟ್ಟಿಗೇ ಕುಳಿತು ಹರಟೆ ಹೊಡೆಯುತ್ತಿದ್ದೆವು - ಅರುಣ್, ರಾಜೀವ್, ವಿದ್ಯಾ, ಕಲ್ಪೇಶ್, ಶ್ರೀಧರ್, ಅಬ್ದುಲ್, ರಘು, ಮಲ್ಲಿ, ಸುರೇಶ್, ಇನ್ನೂ ಮೂರ್ನಾಲ್ಕು (ಮುಖ ನೆನಪಿಗೆ ಬಂದು ಹೆಸರು ನೆನಪಿಗೆ ಬರದ) ಜನರೆಲ್ಲ ಸೇರಿ, ಪ್ರತಿ ದಿನ ಮಧ್ಯಾಹ್ನ ಊಟಕ್ಕೆ ಏನಿಲ್ಲ ಎಂದರೂ ಒಂದು ಎಂಟು ಜನರಾದರೂ ಸೇರಿಕೊಂಡು ಊಟದ ಟೇಬಲ್ಲನ್ನು 'ಮಿನಿ ಇಂಡಿಯಾ'ವನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದೆವು - ಆಗೆಲ್ಲ ಬಿ.ಪಿ.ಓ. ಗಳ ಗೊಂದಲವಿರಲಿಲ್ಲ, ರಘುವನ್ನು ಬಿಟ್ಟು ನಮಗ್ಯಾರಿಗೂ ಇನ್ನೂ ಮದುವೆಯೂ ಆಗಿರದಿದ್ದುದರಿಂದ ಆಫೀಸಿನ ಬಾಸನ್ನು ಬಿಟ್ಟರೆ ಉಳಿದ ಸಮಯದಲ್ಲೆಲ್ಲಾ ನಾವೇ ನಮ್ಮ ಬಾಸುಗಳು ಎನ್ನುವಂತಿದ್ದೆವು. ಇವರಿಷ್ಟು ಜನರಲ್ಲಿ ರಘುವಿನ ಪಕ್ಕದ ಕ್ಯೂಬಿನಲ್ಲಿ ಕುಳಿತುಕೊಳ್ಳುವ ನನಗೆ ರಘುವಿನ ಆಕ್ಸೆಸ್ ಹೆಚ್ಚಿಗೆ ಇತ್ತು. ನನ್ನ ಮತ್ತು ರಘುವಿನ ಮಾತುಗಳು ಅಮೇರಿಕದಲ್ಲಿ ಡೇಟ್ ಮಾಡುವ ವಿಷಯದತ್ತ ಹೊರಳಿದಾಗೆಲ್ಲ ಆತ ನನಗೆ 'ಆ ಹೆಲ್ಪ್ ಡೆಸ್ಕಿನ ಡೊರೋತಿಯನ್ನು 'ಬರ್ತೀಯಾ' ಎಂದು ಕೇಳಿನೋಡು' ಎಂದು ಚುಚ್ಚುತ್ತಿದ್ದ, ಅದಕ್ಕೆ ನಾನು ಗಟ್ಟಿಯಾಗಿ ನಕ್ಕು ಬಿಡುತ್ತಿದ್ದೆ - ಡರೋತಿ ಎನ್ನುವವಳು ಒಬ್ಬಳು ಧಡೂತಿ ಕಪ್ಪು ಹೆಂಗಸು, ಉಳಿದವರೆಲ್ಲರಿಗಿಂತಲೂ ನನ್ನ ಮೇಲೆ ಅವಳಿಗೆ ವಿಶೇಷ ಪ್ರೀತಿ ಇತ್ತು/ಇದೆ ಎನ್ನುವುದು ರಘುವಿನ ಇಂಗಿತ. ರಘುವಿನ ಹಲವಾರು ಮಾತುಗಳನ್ನು ನಂಬಿದವನಿಗೆ ಡೊರೋತಿಯ ವಿಷಯದಲ್ಲಿ ಅವನು ಹೇಳಿದ್ದು ಯಾವಾಗಲೂ ಹಾಸ್ಯವಾಗೇ ಕಾಣುತ್ತಿತ್ತು, ನಾನು ಅದನ್ನು ಅಲ್ಲಿಗೇ ಬಿಡುತ್ತಿದ್ದೆ.

ಹೀಗಿರುವಲ್ಲಿ, ರಘುಗೆ ಹಸಿರು ಕಾರ್ಡು ದೊರೆತು ಸುಮಾರು ವರ್ಷವೇ ಆಗುತ್ತ ಬಂದಿದ್ದರಿಂದ ಆತ ನಮ್ಮ ಕಂಪನಿಯನ್ನು ಬಿಟ್ಟು ಮತ್ಯಾವುದೋ ಕಂಪನಿಯನ್ನು ಸೇರಿಕೊಂಡ, ಹ್ಯಾಪ್ಪಿ ಅವರು, 'ಹಾಯ್-ಬಾಯ್' ಎಲ್ಲಾ ಆಗಿ, ಮೂರ್ನಾಲ್ಕು ತಿಂಗಳುಗಳೂ ಆದವು. ಒಂದು ದಿನ ಇದ್ದಕ್ಕಿದ್ದಂತೇ ರಘುವಿನ ಹಳೆಯ ಕಂಪನಿಯ ಮ್ಯಾನೇಜರ್ ಅಂದರೆ ನನ್ನ ಆಗಿನ ಕಂಪನಿಯ ಮ್ಯಾನೇಜರ್ ನನ್ನನ್ನು ಹುಡುಕಿಕೊಂಡು ಬಂದ - 'ನಿನ್ನಲ್ಲಿ ರಘುವಿನ ಅಡ್ರಸ್ಸು ಇದೆಯೇ, ತುಂಬಾ ಅರ್ಜೆಂಟು, ಫ್ಯಾಮಿಲಿ ಎಮರ್ಜೆನ್ಸಿ...' ಎಂದು ಹೇಳಿ ನಡುಗುತ್ತಿದ್ದ ಧ್ವನಿ ನನಗೆ ಈಗಲೂ ನೆನಪಿದೆ. ಆದದ್ದು ಇಷ್ಟು - ಅದೇ ದಿನ ಮುಂಜಾನೆ, ಕನೆಕ್ಟಿಕಟ್ ಹತ್ತಿರವಿರುವ ಯಾವುದೋ ಊರಿಗೆ ಪರೀಕ್ಷೆ ಬರೆಯಲು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ ರಘುವಿನ ಹೆಂಡತಿ, ಅಪರ್ಣಾಳ ಕಾರು ಅಪಘಾತಕ್ಕೀಡಾಗಿ ಆಕೆ ಸ್ಥಳದಲ್ಲೇ ಇಹಲೋಕವನ್ನು ತ್ಯಜಿಸಿದ್ದಳು. ಅಪರ್ಣಾ ಒಬ್ಬ ಮೆಡಿಕಲ್ ರೆಸಿಡೆಂಟ್ ಆಗಿ ರೆಸಿಡೆನ್ಸಿ ಮಾಡುತ್ತಿದ್ದವಳು, 'ಅಲ್ಲೇ ಹೋಗಿ ರೂಮು ಮಾಡೋಣ' ಎಂದು ಹೇಳಿದ ರಘುವನ್ನೂ ಕೇಳದೇ ಬೆಳಗ್ಗೆ ಐದು ಘಂಟೆಗೆಲ್ಲಾ ಮನೆಬಿಟ್ಟು ಹೊರಟು, ಟ್ಯಾಪೆನ್ ಝೀ ಬ್ರಿಜ್ಜಿಗೆ ಟೋಲ್ ಕೊಟ್ಟು ಎಂಟು ಮೈಲು ಹೋಗುವುದರೊಳಗೆ ನಿದ್ರೆ ಬಂದು - ರಸ್ತೆ ಬದಿಯ ಮರವೊಂದಕ್ಕೆ ಆಕೆಯ ನಿಸ್ಸಾನ್ ಕ್ವೆಸ್ಟ್ ಮಿನಿವ್ಯಾನ್ ಗುದ್ದಿದ ಹೊಡೆತಕ್ಕೆ, ಸ್ಥಳದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು, ಆಕೆಯ ಯಾವ ಅವಶೇಷವೂ ಇರದಂತೆ ಸುಟ್ಟು ಕರಕಲಾಗಿ ಹೋಗಿದ್ದಳು. ಅದೇ ದಿನ ರಘುವಿನ ಮನೆಯಲ್ಲಿ ನಾವೆಲ್ಲರೂ ಅವನನ್ನು ನೋಡಲು ಹೋಗಿದ್ದೆವು - ಆತ ಶಾಕ್‌ಗೆ ಒಳಗಾಗಿದ್ದರೂ ಮುಖದ ಮೇಲೆ ಯಾವುದೇ ಭಾವನೆಯನ್ನು ತೋರಿಸಿಕೊಳ್ಳುತ್ತಿರಲಿಲ್ಲ - ನಾವೆಲ್ಲ ಲಿವಿಂಗ್ ರೂಮಿನಲ್ಲಿ ಕುಳಿತಿದ್ದಂತೆಯೇ, ಟೇಬಲ್ಲಿನ ಮೇಲೆ 'This is all that they recovered from her' ಎಂದು ಸುಟ್ಟುಹೋದ ತಾಳಿಯ ಸರವನ್ನೂ ಹಾಗೂ ಆಕೆಯ ವಾಚನ್ನೂ ಹರವಿದ. ನಮ್ಮೆಲ್ಲರಿಗೂ ಎದೆ ಒಮ್ಮೆ ಧಸಕ್ ಎಂದಿತು, ಎದೆಗುಂದಿದ ಇವನನ್ನು ಹೀಗೆ ಒಬ್ಬನೇ ಬಿಡಬಾರದೆಂದು ನಾವೆಲ್ಲ ಥರಾವರಿ ಸಮಾಧಾನ ಹೇಳಿದೆವು, ನಮ್ಮಲ್ಲಿ ಕೆಲವರು ಅವನ ಜೊತೆಯಲ್ಲಿ ಒಂದೆರಡು ದಿನಗಳ ಮಟ್ಟಿಗೂ ಇದ್ದೆವು.

ಈ ಸಂದರ್ಭದಲ್ಲಿ ರಘು ಹೇಳಿದ ಇನ್ನೊಂದೆರಡು ಮಾತುಗಳನ್ನು ಹೇಳಿದರೆ ಒಳ್ಳೆಯದು:
ಅಫಘಾತವಾದ ದಿನ ಮುಂಜಾನೆ ಅಪರ್ಣಾ 'ಹೋಗಿ ಬರುತ್ತೇನೆ' ಎಂದು ಹೇಳಿದಾಗ ರಘು ನಿದ್ದೆ ಕಣ್ಣಿನಲ್ಲೇ ಕಳಿಸಿಕೊಟ್ಟಿದ್ದನಂತೆ. ಸ್ವಲ್ಪ ಹೊತ್ತಿನಲ್ಲಿ ಅವನು ಎದ್ದು ತಯಾರಾಗಿ ಆಫೀಸಿಗೆ ಹೊರಟು ಬರುತ್ತಿರುವಾಗ ಮೆಟ್ಟಿಲು ಜಾರಿ ಬಿದ್ದನಂತೆ, ಅದೇ ಸಮಯಕ್ಕೇ ಅಪಫಾತವಾಗಿದ್ದು ಎಂದು ಅವನು ಬಹಳ ನೊಂದುಕೊಂಡಿದ್ದ.

ರಘು ಹೇಳಿದಂತೆ - 'ಅಪರ್ಣಾಳನ್ನು ಕಳೆದುಕೊಂಡ ಮೇಲೆ, ನನಗೆ ಅತ್ಯಂತ ಕಷ್ಟಕರವಾದ ಸಂದರ್ಭ ಎಂದರೆ ಆಕೆಯ ತಂದೆಗೆ ಫೋನಿನಲ್ಲಿ ಈ ವಿಷಯ ಹೇಳಬೇಕಾಗಿ ಬಂದಿದ್ದು'. ಅದು ನಿಜವೂ ಹೌದು ಸಪೋರ್ಟು ನೆಟ್‌ವರ್ಕ್ ಇರದ ಇಲ್ಲಿ ಎಲ್ಲವನ್ನೂ ಅವರವರೇ ಮಾಡಬೇಕೆನ್ನುವುದು ಕಹಿಯಾದ ಸತ್ಯಗಳಲ್ಲೊಂದು.

ಮುಂದೆ ರಘು ತನ್ನ ಮನೆಯನ್ನು ಮಾರಿ ಎಲ್ಲೋ 'ದೇಶಾಂತರ' ಹೋಗುವುದಾಗಿ ತೀರ್ಮಾನ ಮಾಡಿದ - ಮಾರುವ ಹಿಂದಿನ ದಿನ ನಮ್ಮೆಲ್ಲರನ್ನು ಕರೆದು ಸೀರಿಯಸ್ಸಾಗಿ ನಿಮಗೇನು ಬೇಕೋ ಅದನ್ನೆಲ್ಲ ತೆಗೆದುಕೊಂಡು ಹೋಗಿ ಎಂದು ಬಹಳ ಒತ್ತಾಯ ಮಾಡಿದ, ನಾನು ಗೋಡೆ ಗಡಿಯಾರವೊಂದನ್ನು ತೆಗೆದುಕೊಂಡು ಬಂದೆ.

ಇದಾದ ಒಂದೆರಡು ವರ್ಷಗಳ ನಂತರ ಅಬ್ದುಲ್ ರಘುವಿನ ಜೊತೆ ಮಾತನಾಡಿದ್ದಾಗಿ ಹೇಳಿದ, ರಘು ಈಗ ಬ್ಯುಸಿನೆಸ್ ಕನ್ಸಲ್‌ಟಿಂಗ್ ಮಾಡಿಕೊಂಡು ಅದೆಲ್ಲೋ ಕ್ಯಾಲಿಫೋರ್ನಿಯಾದಲ್ಲಿದ್ದಾನೆ, ಈಗ ಪೂರ್ತಿ ರಿಕವರ್ ಆಗಿದ್ದಾನೆ ಎಂದು - ಮುಂದೆ ಅವನು ಮತ್ತೊಂದು ಮದುವೆಯನ್ನೂ ಆದ ಎಂದು ಕೇಳಿದ್ದೆ.

***

ನಮ್ಮ ಮನೆಯಲ್ಲಿ ರಘು ಕೊಟ್ಟ ಗೋಡೆ ಗಡಿಯಾರ ಇನ್ನೂ ನಡೆಯುತ್ತಿದೆ, ನಿನ್ನೆ ಬ್ಯಾಟರಿಯನ್ನು ಬದಲಾಯಿಸಿ ಅದರ ಸಮಯವನ್ನು ಸರಿ ಮಾಡಿ ಇಟ್ಟಿದ್ದೇನೆ - ಇನ್ನು ಹಲವು ತಿಂಗಳುಗಳವರೆಗೆ ಆ ಗಡಿಯಾರ ಓಡುತ್ತಲೇ ಇರುತ್ತದೆ, ಓಡಲೇ ಬೇಕು ಇಲ್ಲದಿದ್ದರೆ ನಿಷ್ಪ್ರಯೋಜಕ ಎಂದು ತಿಪ್ಪೆಗೆ ಬಿಸಾಡಬೇಕಾದೀತು, ಇಲ್ಲಿ ಯಾರೂ ರಿಪೇರಿಯನ್ನು ಮಾಡುವುದಿಲ್ಲ, ಮಾಡಿದರೂ ರಿಪೇರಿಗೆ ಹೆಚ್ಚಿನ ಮೌಲ್ಯ ತೆರಬೇಕಾಗಿ ಬಂದು ವಸ್ತುವಿನ ಹಿಂದಿನ ಭಾವನೆಗಳನ್ನು ಒಮ್ಮೆ ತೂಗಿ ನೋಡುವ ಸಂಭವ ಹೆಚ್ಚು!

5 comments:

ಶೇಖರ್‌ಪೂರ್ಣ said...

ನಿಮ್ಮ ಮೂರನೆ ರಘುವಿನ ಸಂದರ್ಭವನ್ನು ವಿವರಿಸಿರುವ ರೀತಿ ಬಹಳ ಚೆನ್ನಾಗಿದೆ. ಒದಗಿಸುವ ವಿವರಗಳು ನಿಮ್ಮ ಭಾವನೆಯನ್ನು ಮತ್ತು ಸಂದರ್ಭದ ತೀವ್ರತೆಯನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ತೀರಾ ಭಾವುಕವಾಗದೆ ನಿಮ್ಮನ್ನು ಅದು ಕಾಪಾಡಿದೆಯಲ್ಲದೆ ನಿಮ್ಮಿಂದ ದೂರ ಉಳಿದಿದ್ದರು ಚಿತ್ರಣವನ್ನು ಕಟ್ಟಿಕೊಡುವಲ್ಲಿಯೂ ಗಟ್ಟಿಯಾಗಿ ಮೂಡಿಬಂದಿದೆ. "ಮೂರನೆ" ರಘು ನಿಮ್ಮ ಬರವಣಿಗೆಗೂ/ರೀತಿಗೂ ಭದ್ರವಾದ ಬುನಾದಿಯಾಗಲಿ ಎಂದು ಆಶಿಸುವ-
ಶೇಖರ್‌ಪೂರ್ಣ

Enigma said...

"muvaru" spelling mistake agide. it sounds like the balm "moov"

Satish said...

enigma,

It is a bug in Tunga, I can not write 'mUru' using unicode...hopefully Microsoft will fix it soon. Similary there are other errors which have been documented on baraha site.

nIlagrIva said...

ಅಂತರಂಗಿಗಳೇ,
ರಘುಗಳ ವೃತ್ತಾಂತ ಚೆನ್ನಾಗಿ ಓದಿಸಿಕೊಳ್ಳುತ್ತದೆ. ಚೆನ್ನಾಗಿ ಬರೆದಿದ್ದೀರಿ.

ಇದರಲ್ಲಿ ನನಗೆ ಎದ್ದು ಕಾಣುವುದು ಮೂರನೇ ರಘುವಿನ ಕಥೆ. ಅಲ್ಲಿ ನೀವು ಸಪೋರ್ಟ್ ನೆಟ್ವರ್ಕ್ ಬಗ್ಗೆ ಹೇಳಿದಿರಿ. ಬಹಳ ಸತ್ಯವಾದ ಮಾತು. ಅಮೇರಿಕದಲ್ಲಿ ಎಲ್ಲವನ್ನೂ ನಾವೇ ಮಾಡಬೇಕು. ಅಂಥ ಘೋರ ಕೆಲಸಗಳನ್ನೂ ಸಹ! ಆದರೆ ಅದು ಸ್ವಾವಲಂಬನೆ ಕಲಿಸುತ್ತದೆ. ಅಮೇರಿಕದಲ್ಲಿರುವ ಭಾರತೀಯರು ಹೆಚ್ಚು ಸ್ವಾವಲಂಬಿಗಳು - ಏಕೆಂದರೆ ಅದಾಗದೆ ಅವರಿಗೆ ಗತಿಯಿಲ್ಲ. ವೈಯಕ್ತಿಕವಾಗಿ ನಾನು ಭಾರತದಲ್ಲಿ ನೆನೆಸಿಕೊಳ್ಳಲು ಸಾಧ್ಯವಾಗದ ಕೆಲಸಗಳನ್ನು ಅಮೇರಿಕದಲ್ಲಿ ಮಾಡಿದ್ದೆ - ಮಾಡಬೇಕಾಯ್ತು. ಇದರಿಂದ ನನ್ನ ಆತ್ಮವಿಶ್ವಾಸ ಬೆಳೆಯಿತು. ಭಾರತದಲ್ಲಿ ಸಪೋರ್ಟ್ ನೆಟ್ವರ್ಕ್ ನಮ್ಮನ್ನು ಸ್ವಲ್ಪ ಅಸ್ವತಂತ್ರರನ್ನಾಗಿ ಮಾಡುತ್ತದೆ, ನನ್ನಂಥ ಸೋಮಾರಿಗಳಿಗೆ ಹಾಸಿಗೆ ಹಾಸಿದ ಹಾಗೆ ಕೂಡ ಇರುತ್ತದೆ. ಆದರೆ ಆಮೇರಿಕದಲ್ಲಿ ಹಿರಿಯರ-ಪಕ್ಕದವರ ಸಂಪರ್ಕ ಕಡಿಮೆಯಿರುವುದರಿಂದ ತೀರ ವೈಯಕ್ತಿಕವಾಗಿ ಯೋಚಿಸಲು ಪ್ರಚೋದಿಸುತ್ತದೆ. ತಾನಾಯ್ತು ತನ್ನ ಮನೆಯಯ್ತು. ಏಕೆಂದರೆ ನಾವು ಮಾಡದೆ ಬೇರೆಯವರು ಮಾಡುವರೇ? ಸಮಾಜದ ಬಗ್ಗೆ ಕಳಕಳಿ ಕಡಿಮೆ ಮಾಡುತ್ತದೆ. ಆದರೆ ಅಲ್ಲಿ ಸಮಯ ನನಗೆ ಹೆಚ್ಚು ಸಿಗುತಿತ್ತು. ಬೆಂಗಳೂರಿನಲ್ಲಿ ಅಷ್ಟಿಲ್ಲ.

ಅಂತರಂಗಿಗಳೇ, ನಿಮಗೆ ಇದರ ಬಗ್ಗೆ ಏನನ್ನಿಸುತ್ತದೆ? ಎಂದಾದರೂ ಭಾರತಕ್ಕೆ ಮರಳುವ ಮನಸ್ಸಿದೆಯೇ? (ಇದು ವೈಯಕ್ತಿಕ ಪ್ರಶ್ನೆಯೆಂದೆನಿಸಿದರೆ ಉತ್ತರಿಸಬೇಡಿ - ಆದರೆ ಹೊರ ದೇಶದಲ್ಲಿರುವುದರಿಂದ ನಿಮ್ಮನ್ನು ನೀವೇ "ಪಾಪಿಷ್ಟ"ರೆಂದು ಕರೆದುಕೊಂಡಿರುವುದರಿಂದ ಕೇಳಿದೆ, ಅಷ್ಟೆ)

Satish said...

ನೀಲಗ್ರೀವರೇ,

ಕೊನೆಗೂ ನನ್ನನ್ನು ಹೆದರಿಸಿ ಬಿಟ್ಟಿರಲ್ಲಾ! ಇನ್ನೇನು ಮತ್ತೆ? '...ಅಲ್ಲಿ ಸಮಯ ನನಗೆ ಹೆಚ್ಚು ಸಿಗುತ್ತಿತ್ತು, ಬೆಂಗಳೂರಿನಲ್ಲಿ ಅಷ್ಟಿಲ್ಲ.' ಎಂದು ಬರೆದಿದ್ದೀರಿ, ನಾನು ಇಲ್ಲಿ ಎಷ್ಟು ಸಾಧ್ಯವೋ ಅಷ್ಟು ದುಡಿದು ಬೆಂಗಳೂರಿನಲ್ಲಿ 'ಹಾಯಾಗಿ' ಇದ್ದು ಬಿಡೋಣ ಎಂದುಕೊಂಡಿದ್ದರೆ, ನೀವು ಹೀಗೆ ಮಾಡುವುದೇ!?

'ಅಂತರಂಗ'ದಲ್ಲಿ ವೈಯುಕ್ತಿಕ ಪ್ರಶ್ನೆ ಎಂಬುದಿಲ್ಲ - ನೀವು ಯಾವ ಪ್ರಶ್ನೆಯಾದರೂ ಕೇಳಿ, ನನಗೆ ತಿಳಿದ ಮಟ್ಟಿಗೆ ನಿಜವಾದ ಉತ್ತರ ಸಿಗುತ್ತದೆ. ಸಪೋರ್ಟು ನೆಟ್‌ವರ್ಕ್ ಇಲ್ಲದಿದ್ದಾಗ ಸಹ ಸ್ವಾವಲಂಬನೆ ಅನಿವಾರ್ಯ, ಇಂತಹ ಅನಿವಾರ್ಯಗಳ ದೆಸೆಯಿಂದ ದೊರಕಿಸಿಕೊಂಡದ್ದನ್ನು ನಾನು ಮಹಾ (ಸಾಧನೆ) ಎಂದು ಒಪ್ಪುವುದಿಲ್ಲವಾದರೂ ಅಲ್ಲಿ-ಇಲ್ಲಿನ ಬದುಕುಗಳೆರಡನ್ನು ಕಂಡು ಅನುಭವಿಸಿದರೇನೇ ಬಾಳು ಪೂರ್ಣ ಅನ್ನುವ ತಾತ್ಕಾಲಿಕ ಕನ್‌ಕ್ಲೂಷನ್‌ಗೆ ಬರುತ್ತೇನೆ. ಆದರೂ, ನನ್ನ ನಿಮ್ಮಂತಹ ಸೂಕ್ಷ್ಮಿಗಳಿಗೆ ನೆರೆಹೊರೆ ಬಹಳ ಮುಖ್ಯ - ನಾವು ಇಲ್ಲಿನವರೊಳಗೊಂದಾಗಿ ಬದುಕುವುದಕ್ಕೆ ಬಹಳಷ್ಟು ಬದಲಾವಣೆಗಳನ್ನು (ಇಷ್ಟವಿದ್ದೋ ಇಷ್ಟವಿರದೆಯೋ) ಮಾಡಿಕೊಳ್ಳಬೇಕಾಗುತ್ತದೆ. ಅದೇ ಇಲ್ಲಿಂದ ಹಿಂತಿರುಗಿ ಹೋದ ಮೇಲೂ ನಮ್ಮಲ್ಲಿಯ ಬೆಳವಳವಣಿಗೆಗೆ ಹೊಂದಿಕೊಳ್ಳಲು ಸ್ವಲ್ಪ ತಡವರಿಕೆಯಾದರೂ 'ನಮ್ಮೂರು ನಮ್ಮೂರೆ', ಅಲ್ಲವೇ?

ಇನ್ನು ನೀವು ವೈಯುಕ್ತಿಕ ಎಂದು ಕರೆದಿರುವ ಪ್ರಶ್ನೆಗೆ ಬರುತ್ತೇನೆ - ಇದನ್ನು ನಾನು ನನಗೆ ಈಗ ತಿಳಿದ ಮಟ್ಟಿಗೆ ಈ ಪ್ರಬುದ್ಧತೆ ಹಾಗೂ ಸ್ಥಿತಿಗತಿಗಳಿಗನುಗುಣವಾಗಿ ಉತ್ತರಿಸಿದ್ದರೂ ಮುಂದೆ ಬದಲಾಗಬಾರದೆಂದೇನಿಲ್ಲ - ನನ್ನ ವೈಯುಕ್ತಿಕ ಉತ್ತರ ಹಲವರ ಉತ್ತರವೂ ಆಗಬಹುದು.

ಭಾರತಕ್ಕೆ ಮರಳುವ ಮನಸ್ಸಿನ ಹಿಂದೆ ಭಾರತವನ್ನು ಬಿಟ್ಟು ಬಂದದ್ದೇಕೆ ಎಂದು ಆಲೋಚಿಸಿಕೊಂಡಾಗ 'ಹಣ' ಎನ್ನುವುದು ಮೊದಲಿನ ಸಾಲಿನಲ್ಲಿ ನಿಲ್ಲುತ್ತದೆ. ನಾನು ಭಾರತದಲ್ಲಿ ನ್ಯಾಯವಾಗಿ ಸಂಪಾದಿಸಿ, ಉಂಡುಟ್ಟು, ಉಳಿಸಬಹುದಾದ ಹಣಕ್ಕಿಂತ ಇಲ್ಲಿಗೆ ಬಂದು ದುಡಿದು ಉಳಿಸಿದ ಹಣ ಹೆಚ್ಚು - ಇದೇ ರೀತಿ ಇನ್ನು ಕೆಲವು ವರ್ಷ ಸಂಪಾದನೆ ಮಾಡಿದ್ದೇ ಆದರೆ ನಾನು ಭಾರತಕ್ಕೆ ಮರಳಬಹುದು. ನಿವೃತ್ತ ಜೀವನ ಸಾಗಿಸಲು ಎಂದು ಹೇಳುವುದಕ್ಕೆ ಬದಲು ನನ್ನದೇ ಒಂದು ಮನೆ ಮತ್ತು ಅಗತ್ಯಕ್ಕೆ ಒಂದಿಷ್ಟು ಹಣವಂತೂ ಖಂಡಿತ ಇರುತ್ತದೆ. ಹಾಗೂ ಅಲ್ಲಿಗೆ ಬಂದಮೇಲೆ ನಾನೇನು ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲವಾದ್ದರಿಂದ 'ಕ್ಯಾಷ್ ಫ್ಲೋ' ಬಗ್ಗೆ ಯಾವ ಚಿಂತೆಯೂ ಇರೋದಿಲ್ಲ. ಇನ್ನು ಕೆಲವರು ಮಕ್ಕಳ ವಿದ್ಯಾಭ್ಯಾಸವನ್ನು ನೆಪವಾಗಿ ಒಡ್ಡುತ್ತಾರೆ (ಇಲ್ಲಿರಲು ಹಾಗೂ ಇಲ್ಲಿಂದ ಹೊರಡಲು). ಆದರೆ ನಾನು ಅದರಲ್ಲಿ ಯಾವ ನಂಬಿಕೆಯನ್ನೂ ಇಟ್ಟವನಲ್ಲ - ಮಕ್ಕಳು ಎಲ್ಲಿ ಓದಿದರೂ ಅವರು ಪ್ರತಿಭಾವಂತರಾದರೆ ಮುಂದೆ ಬರುತ್ತಾರೆ ಅನ್ನೋದು ಗ್ಯಾರಂಟಿ - ಒಂದಲ್ಲ ಒಂದು ರಂಗದಲ್ಲಿ ಅವರಲ್ಲಿ ಅಡಗಿದ ಪ್ರತಿಭೆಯನ್ನು ಹೊರತರಲು ಸಹಾಯ ಮಾಡುವುದಷ್ಟೇ ಪೋಷಕರ ಕರ್ತವ್ಯವಲ್ಲವೇ? ಮಾವಿನ ಸಸಿ ಯಾರು ಬೇಡವೆಂದರೂ ಮಾವಿನ ಮರವಾಗೇ ಹಬ್ಬೋದು.

ಆದರೆ ಒಂದಂತೂ ನಿಜ - ಇಲ್ಲೇ ದುಡಿದು ಇಲ್ಲೇ ನಿವೃತ್ತರಾಗೋದಾದರೆ ಈಗ ದುಡಿದು ಗಳಿಸುವುದೂ ಹಾಗೂ ಅದನ್ನು ಉಳಿಸಿ ಬೆಳಸುವುದರ ಬಗ್ಗೆಯೂ ಗಂಭೀರವಾಗಿ ಯೋಚಿಸಿ ದೂರದರ್ಶಿತ್ವವನ್ನು ಇಟ್ಟುಕೊಳ್ಳಬೇಕಾಗುತ್ತದೆ - ಅದೇ ಇಲ್ಲಿ ದುಡಿದು ಅಲ್ಲಿ ನಿವೃತ್ತರಾಗೋದಾದರೆ ಇಲ್ಲಿಗಿಂತಲೂ ಕಡಿಮೆ ಖರ್ಚು ವೆಚ್ಚದಲ್ಲಿ ಇರಬಹುದು.

ನಿಮಗೆ ಇದಕ್ಕಿಂತಲೂ ಹೆಚ್ಚು ವಿವರವಾದ ಉತ್ತರ ಬೇಕು ಎಂದರೆ ನೀವೇ ಬೇರೆಯವರನ್ನೂ ಕೇಳಬೇಕು ಹಾಗೂ ತುಳಸೀವನದಲ್ಲಿ ಬರೆದಂತಹ ಇಂಥ ಬರಹಗಳನ್ನು ಹೆಚ್ಚು-ಹೆಚ್ಚು ಓದಬೇಕು!

http://www.dhaatri.com/Triveni/index.php?paged=2