Sunday, April 21, 2013

ಇತ್ತೀಚಿನ ವಿದ್ಯಮಾನ: ಸಾವಿನ ಸುತ್ತ

ಈ ಕಳೆದ ಭಾನುವಾರ (ಏಪ್ರಿಲ್ ೧೪) ದಿಂದ ಇಂದಿನ ಭಾನುವಾರದ ವರೆಗೆ ಹಲವಾರು ಸಾವಿನ ಸುದ್ದಿಗಳು...ಒಂದರ ಹಿಂದೆ ಒಂದರಂತೆ ಬಂದು ಅಪ್ಪಳಿಸುತ್ತಲೇ ಇವೆ. ಪಿ.ಬಿ. ಶ್ರೀನಿವಾಸ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ, ಅವರು ಇತ್ತೀಚೆಗೆ ಹಿನ್ನೆಲೆ ಸಂಗೀತದಲ್ಲಿ ಚಟುವಟಿಕೆಯಲ್ಲಿರಲಿಲ್ಲವಾದರೇನಂತೆ ನಮ್ಮ ಮನೆ-ಮನಗಳಲ್ಲಿ ಅವರ ಧ್ವನಿ ಎಂದಿಗೂ ಅಮರವಾಗಿರುತ್ತದೆ. ಇಂದಿಗೂ ಕೂಡ ಅವರ ಅನೇಕ ಹಾಡುಗಳು ನನಗೆ ಅಪ್ಯಾಯಮಾನವಾದವು, ಅವುಗಳ ಪಟ್ಟಿಯನ್ನು ಬರೆಯುತ್ತಾ ಹೋದರೆ ಕೊನೆ ಮೊದಲಿಲ್ಲದಂತಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ರಾಜ್‌ಕುಮಾರ್, ಚಿ. ಉದಯಶಂಕರ್ ಮತ್ತು ಪಿ.ಬಿ. ಶ್ರೀನಿವಾಸ್ ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂತಹ ತ್ರಿಮೂರ್ತಿಗಳು, ಇಂಥ ಪ್ರತಿಭಾನ್ವಿತರು ಇಲ್ಲದ ನಾವು ಬಡವರೇ.

 

"Remembering that I’ll be dead soon is the most important tool I’ve ever encountered to help me make the big choices in life. No one wants to die, even people who want to go to heaven don’t want to die to get there. And yet, death is the destination we all share. "

ಹೀಗೆ ಬರೆದವರು ಹೇಳಿದವರು ಬೇರೆ ಯಾರೂ ಅಲ್ಲ, ಸ್ಟೀವ್ ಜಾಬ್ಸ್, (೨೦೦೫ರ ಸ್ಟ್ಯಾಂಡ್‌ಫರ್ಡ್ ವಿಶ್ವವಿದ್ಯಾನಿಲಯದ ಕಮೆನ್ಸ್‌ಮೆಂಟ್ ಭಾಷಣದಲ್ಲಿ).

ಕಳೆದ ವರ್ಷ ತಾಯಿಯನ್ನು ಕಳೆದುಕೊಂಡ ನಂತರ ನನ್ನನ್ನು ಅರಸಿ ಬರುವ ಪ್ರತಿಯೊಂದು ಸಾವಿನ ಸುದ್ದಿಗೂ ನಾನು ಸ್ಪಂದಿಸುವ ಬಗೆ ಭಿನ್ನವಾಗಿದೆ. ಆಫೀಸಿನಲ್ಲಿ ಮೊದಲೆಲ್ಲ ’ಕಂಡೋಲೆನ್ಸ್’ ಇ-ಮೇಲ್ ಬರೆದು ಮರೆಯುತ್ತಿದ್ದವನಿಗೆ ಈಗ ಸಹೋದ್ಯೋಗಿಗಳ ಬಳಿ ಹೋಗಿ ಅಥವಾ ಕರೆ ಮಾಡಿ ಸಾಂತ್ವನ ಹೇಳುವಷ್ಟು ಬುದ್ಧಿಯನ್ನು ಸಾವಿನ ಸುದ್ದಿಗಳು ಕಲಿಸಿವೆ.

ಪಿ.ಬಿ. ಶ್ರೀನಿವಾಸ್ ನಿಧನದ ಶೋಕದಲ್ಲೇ ಸೋಮವಾರ ಆಫೀಸಿಗೆ ಹೋದರೆ ಅಲ್ಲಿ ನನ್ನ ಸಹೋದ್ಯೋಗಿ ೪೬ ವರ್ಷದ ಬಾಬ್ ಫೆಲಿಕೋನಿಯೋ ಇದ್ದಕ್ಕಿದ್ದ ಹಾಗೇ ಕುಸಿದು ಸತ್ತು ಹೋದ ತಿಳಿದು ಆಘಾತವಾಯಿತು. ಬುಧವಾರ, ನನ್ನ ಸ್ನೇಹಿತ ಮೋಹನ್ ತಾಯಿ ತೀರಿಕೊಂಡ ವಿಷಯ ತಿಳಿಯಿತು. ಶನಿವಾರ ನಮ್ಮೂರಿನ ೫೨ ವರ್ಷದ ಪುರೋಹಿತ ರವಿ ಭಟ್ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಕೇಳಿ ದಂಗುಬಡಿದು ಹೋಯಿತು.

ನಮಗೆಲ್ಲ ವಯಸ್ಸಾಗುತ್ತಾ ಬಂದ ಹಾಗೆ ನಾವು ಕೇಳುವ ಹುಟ್ಟು-ಸಾವಿನ ಸುದ್ದಿಗಳಲ್ಲಿ ಸಾವಿನ ಪ್ರಮಾಣವೇ ಹೆಚ್ಚೋ ಅಥವಾ ನಮ್ಮ ಪ್ರಬುದ್ಧತೆಗೆ ಅನುಗುಣವಾಗಿ ನಾವು ಪ್ರತಿಕ್ರಿಯಿಸುವ ರೀತಿ ಬೇರೆಯೋ ಎನ್ನುವುದನ್ನು ಬಲ್ಲವರು ಹೇಳಲಿ!