Sunday, May 28, 2006

ಕವಳೀಕಾಯಿಯನ್ನು ಹುಡುಕಿಕೊಂಡು ಹೋದ ದಿನ

ಕವಳೀಕಾಯಿ, ಅದರ ಉಪ್ಪಿನಕಾಯಿ, ಕವಳೀ ಹಣ್ಣು, ಇವೆಲ್ಲವನ್ನೂ ನೆನೆಸಿಕೊಂಡಾಗ ನಾಲಿಗೆಯಲ್ಲಿ ತನ್ನಷ್ಟಕ್ಕೆ ತಾನೇ ನೀರೂರುತ್ತದೆ. ಅಂಗಡಿಯಲ್ಲಿ ಸಿಗುವ ಇಲ್ಲಿನ ಕೆಲವೇ ಕೆಲವು ಉಪ್ಪಿನಕಾಯಿ ಬಾಟಲಿಗಳಲ್ಲಿ ಕವಳೀಕಾಯಿಯೆಂದು ಸ್ವಲ್ಪ ಸೇರಿಸಿದಂತೆ ಮಾಡಿರುತ್ತಾದರೂ, ನಮ್ಮ ಊರಿನಲ್ಲಿ ಬೊಗಸೆಗಟ್ಟಲೆ ಹಣ್ಣು-ಕಾಯಿಗಳನ್ನು ತಿನ್ನುವುದಕ್ಕೂ, ಇಲ್ಲಿ ಉಪ್ಪಿನಕಾಯಿಯಂತೆ ಒಂದೆರಡು ತುಂಡನ್ನು ನಂಚಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಈ ಹಣ್ಣಿಗೆ ಇಂಗ್ಲೀಷಿನಲ್ಲಿ ಏನೆನ್ನುತ್ತಾರೋ, ಎಲ್ಲೆಲ್ಲಿ ಬೆಳೆಯುತ್ತೋ, ಅದರ ಮೂಲ ಮತ್ತು ಮಹತ್ವವೇನೋ ಯಾರಿಗೆ ಗೊತ್ತು, ಆದರೆ ಇವತ್ತಿಗೂ ಸಹ ನಮ್ಮೂರಲ್ಲಿ ಈ ಹಣ್ಣುಗಳು ಸ್ವಾಭಾವಿಕವಾಗಿ ಬೆಳೆದು ಯಾರದ್ದೋ ಬೇಲಿಯಲ್ಲೋ, ಇಲ್ಲಾ ಒಂದು ಕಾಲದಲ್ಲಿ ಕಾಡು ಇದ್ದ ಜಾಗದಲ್ಲೋ ಪೊದೆಗಳಲ್ಲಿ ಸಿಕ್ಕುವುದಂತೂ ಗ್ಯಾರಂಟಿ!

***

೨೦೦೩ ರಲ್ಲಿ ಆನವಟ್ಟಿಗೆ ಹೋದಾಗ ಬೇಸಿಗೆ ರಜೆಗೆಂದು ಬಂದ ಅಣ್ಣನ, ಅಕ್ಕ-ತಂಗಿಯ ಮಕ್ಕಳು ಬೇಕಾದಷ್ಟು ಹುಡುಗರು ಸಿಕ್ಕಿದ್ದರು. ನಾನೇ ಜೋರು ಎಂದರೆ ಈ ಹುಡುಗರು ಇನ್ನೂ ಜೋರು, ಹತ್ತು-ಹನ್ನೆರಡು ವರ್ಷಗಳಿಗಾಗಲೇ 'ಜಾಗಿಂಗ್ ಹೋಗೋಣ' ಎಂದರೆ ಬೆಳ್ಳಗಿನ ಸ್ನೀಕರ್ ಧರಿಸಿ ತಯಾರಿರುವಂತವರು, ನಾವೆಲ್ಲ ಬರೀ ಕಾಲಿನಲ್ಲಿ ಓಡಾಡಿದಂತೆ ಇವರೇನಾದರೂ ಮನೆಯಿಂದ ಹೊರಗಡೆ ಕಾಲಿಟ್ಟರೆ ಅಂದು ಸೂರ್ಯ ಪಶ್ಚಿಮದಲ್ಲಿ ಹುಟ್ಟಿದಂತೆಯೇ ಸರಿ. ಮನೆಯಲ್ಲಿ ಸೇರಿಕೊಂಡಿದ್ದ ಹಲವಾರು ಹುಡುಗ-ಹುಡುಗಿಯರಲ್ಲಿ ಕೊನೆಗೆ 'ಹೊರಗಡೆ ಹೋಗುವ' ಉತ್ಸಾಹವನ್ನು ಉಳಿಸಿಕೊಂಡವರು ನನ್ನ ಅಣ್ಣನ ಮಗ ನಿತಿನ್ ಹಾಗೂ ನನ್ನ ತಂಗಿಯ ಮಗ ಆಕಾಶ್ ಇಬ್ಬರೇ. 'ಬೆಳಿಗ್ಗೆ ಸೂರ್ಯ ಹುಟ್ಟುವ ಮೊದಲೇ ಮನೆ ಬಿಡಬೇಕು' ಎಂದು ಎಚ್ಚರಿಕೆ ನೀಡಿದ್ದರೆ 'ಹಾ...' ಎಂದವರು, ಬೆಳಿಗ್ಗೆ ಐದೂವರೆ ಆದರೂ ಇನ್ನೂ ಸಕ್ಕರೆ ನಿದ್ದೆಯಲ್ಲೇ ಬಿದ್ದಿರುವುದೇ? ಇಬ್ಬರನ್ನೂ ತಡವಿ ಎಬ್ಬಿಸಿದೆ 'ನೋಡ್ರೋ, ನಾನು ಹೊರಟಿದ್ದೇನೆ, ಕೊನೆಗೆ ಹೇಳ್ಲಿಲ್ಲಾ ಅನ್ನಬೇಡಿ!' ಎಂದು ಹೇಳುತ್ತಲೇ ಇಬ್ಬರೂ ಯಾವ ಮಾಯದಲ್ಲಿ ಎದ್ದರೋ, ಮುಖ ತೊಳೆದರೋ, ಹೊರಡಲು ತಯಾರೂ ಆದರು. ಬೆಳಿಗ್ಗೆ ಐದೂಮುಕ್ಕಾಲು ಸುಮಾರಿಗೆ ಇನ್ನೂ ಸೂರ್ಯ ಹುಟ್ಟುವ ಮೊದಲೇ ನಾವು ಮನೆ ಬಿಟ್ಟಾಗಿತ್ತು.

ಎಲ್ಲರಿಗೂ ಅವರವರ ಊರಿನ ಪರಿಚಯವಿರುವಂತೆ ನನಗೂ ನಮ್ಮ ಊರಿನ ಮೂಲೆ ಮೂಲೆಯ ಪರಿಚಯವಿದೆ, ಆದರೆ ಊರಿನ ಬೆಳವಣಿಗೆ ಹೆಚ್ಚಿದಂತೆಲ್ಲಾ ನಾನು ನಮ್ಮ ಊರನ್ನು ನೋಡುವುದು ಕಡಿಮೆ ಆದದ್ದರಿಂದ ಖಾಲಿ ಇದ್ದ ಜಾಗದಲ್ಲಿ ಮನೆಗಳು ಎದ್ದು, ಬೇಲಿಯೇ ಇರದ ಜಾಗದಲ್ಲಿ ಕಾಂಪೌಂಡುಗಳು ಬಂದು, ರಸ್ತೆಯಲ್ಲಿ 'ಯಾರೋ ಬಂದರು' ಎಂದು ಬೊಗಳುವ ನಿನ್ನೆ-ಮೊನ್ನೆ ಹುಟ್ಟಿದ ಕಂತ್ರೀ ನಾಯಿಗಳಿಗೂ ನನ್ನ ಪರಿಚಯವನ್ನೂ ಹೇಳಬೇಕಾದ್ದರಿಂದ ನನ್ನನ್ನು ನಮ್ಮ ಊರಿನಲ್ಲಿ ಪರಕೀಯ ಎಂದುಕೊಂಡರೇ ಸರಿ. ಮೊದಲೆಲ್ಲಾ ಸಹಜವಾಗಿ ಬೆಳೆದು ನಿಂತ ಗಂಧದ ಮರಗಳನ್ನು ಹತ್ತಿ ಸೊಪ್ಪನ್ನು ಕಿತ್ತು ತರುತ್ತಿದ್ದೆ, ಆದರೆ ಈ ದಿನಗಳಲ್ಲಿ ಆ ಗಂಧದ ಮರವಿರಲಿ ಅದರ ಬೇರಿನ ತುದಿಗೆ ಒಂದು ಕಾಲದಲ್ಲಿ ಅಂಟಿಕೊಂಡಿದ್ದ ಮಣ್ಣೂ ಸಿಗುವುದಿಲ್ಲ - ರಾತ್ರೋ ರಾತ್ರಿ ಹೀಗೆ ಎಷ್ಟೋ ಮರಗಳು ನಾನು ಅಲ್ಲಿದ್ದಾಗಲೇ ಕಾಣೆಯಾಗಿ ಯಾವನೋ ದಿಢೀರನೆ ಸ್ವಲ್ಪ ಕಾಸನ್ನು ಮಾಡುತ್ತಿದ್ದ, ನಾನು ಆಪ್ತ ಸ್ನೇಹಿತನೊಬ್ಬನನ್ನು ಕಳೆದುಕೊಂಡ ಹಾಗೆ 'ಅಲ್ಲಿರೋ ಮರಾನೂ ಹೋಯ್ತಾ' ಎಂದು ರೋಧಿಸುತ್ತಿದ್ದೆ. ನಾನು ನನ್ನ ಬಾಲಂಗೋಚಿಗಳು (ಜೊತೆಯಲ್ಲಿ ಬರುವ ಈ ಹುಡುಗರು) ಇಲ್ಲದೇ ಪೇಟೆಗೆ ಎಂದಾದರೂ ಹೋದರೆ, ನನ್ನ ವೇಷವನ್ನು ನೋಡಿ, ಮಾತನ್ನು ಕೇಳಿ 'ತಮ್ದು ಯಾವೂರಾಯ್ತೋ?' ಎನ್ನುವ ಜನಗಳಿಗೆ ನಾನು ಅದೇ ಊರಿನಲ್ಲಿ ಇದ್ದುಕೊಂಡೇ 'ಆನವಟ್ಟಿ!' ಎಂದು ನಗುತ್ತೇನೆ, ಅವರು 'ಇಲ್ಲಿ ಯಾರ ಮನೆ?' ಎಂದರೆ 'ನಮ್ಮ ಮನೆ!' ಎಂದು ಈ ಊರು ನಮ್ಮದು ಎನ್ನುವ ಹಠವನ್ನು ಪ್ರದರ್ಶಿಸುತ್ತೇನೆ, 'ಅಂದರೆ...' ಎಂದು ಇಲ್ಲೀವರೆಗೂ ಯಾರೂ ವಿವರಣೆಯನ್ನು ಕೇಳೋದಿಲ್ಲವಾದ್ದರಿಂದ, ಮುಂದೆ ಪ್ರಶ್ನೆಗಳೇನಾದರೂ ಬಂದರೆ ಆಗ ನೋಡೋಣವೆಂದು ಸುಮ್ಮನಿದ್ದೇನೆ.

ಆಕಾಶ ಮತ್ತು ನಿತಿನ್ ಕೊಯ್ಯೋ-ಮರ್ರೋ ಮಾಡುತ್ತಾ ನನ್ನ ಜೊತೆ ಬಂದು ಇನ್ನೂ ಸ್ವಲ್ಪ ದೂರವೂ ನಡೆದಿಲ್ಲ, 'ಯಾವ ಕಡೆ ಹೋಗೋದು ಮಾಮಾ' ಎಂದು ಆಕಾಶನೆಂದರೆ 'ಹೈ ಸ್ಕೂಲ್ ಫೀಲ್ಡಿಗೆ ಹೋಗೋಣ್ವಾ' ಎಂದು ನಿತಿನ್ ಸೂಚಿಸಿದ. ನಾನು 'ಹೈ ಸ್ಕೂಲ್ ಕಡೆ ಹೋಗಿ, ಅಲ್ಲಿ ಸಾಲ್ ಮರದಲ್ಲಿ ಒಂದಿಷ್ಟು ಮಾವಿನ್‌ಕಾಯಿ ಬಡಚಿಕೊಂಡು, ಆಮೇಲೆ ಒಂದಿಷ್ಟು ಕವಳೀಕಾಯಿ ಹುಡುಕಿಕೊಂಡು ಹೋಗೋಣ' ಎಂದೆ. ಆಕಾಶ ಇದ್ದವನು 'ಮತ್ತೆ, ಜಾಗಿಂಗೂ?' ಅಂದ, ನಾನು 'ಸರೀ ಓಡೋಣ ಹಾಗಾದರೆ' ಎಂದು ಓಟಕ್ಕೆ ಚಾಲನೆ ಕೊಟ್ಟೆ, ಆದರೆ ದಾರಿಯುದ್ದಕ್ಕೂ ಉಸಿರುಬಿಡುತ್ತಿದ್ದವನು ನಾನು, ಈ ಹುಡುಗರು ನೆಲದಲ್ಲಿ ಸುಮ್ಮನೇ ಪುಟಿಯುತ್ತಿದ್ದಂತೆ ಕಂಡು ಬಂತು. ಅದ್ಯಾವ ಪುಣ್ಯಾತ್ಮ ನಮ್ಮೂರಿನ ರಸ್ತೆಯನ್ನು ಹೇಗೆ ಡಿಸೈನ್ ಮಾಡಿದನೋ ಗೊತ್ತಿಲ್ಲ, ಆನವಟ್ಟಿಯಿಂದ ಶಿರಾಳಕೊಪ್ಪಕ್ಕೆ ಹೋಗೋ ರಸ್ತೆಯ ಎರಡೂ ಬದಿಗೆ ಥರಾವರಿ ಮಾವಿನಮರಗಳಿವೆ, ಸಾಲುಗಿಡಗಳೆಂದು ಚೆಂದವಾಗಿ ಅಂದು ನೆಟ್ಟಿದ್ದು ಇವತ್ತಿನವರೆಗೂ ಫಲ ಕೊಡುತ್ತಿದೆ, ನೆರಳು ನೀಡುತ್ತಿದೆ, ಆದರೆ ಎಲ್ಲವೂ ಪುಕ್ಕಟೆ, ಈ ಮಾವಿನ ಹಣ್ಣುಗಳಿಗೂ, ಇವುಗಳಿಂದ ಕೊಯ್ದು ಮನೆಗೆ ತೋರಣ ಕಟ್ಟಿದ ಎಲೆಗಳಿಗೂ, ಹೀಚು, ಕಾಯಿ, ದ್ವಾರೆ ಹಣ್ಣು, ಹಣ್ಣುಗಳೆಂದು ತಿಂದು ಚೆಲ್ಲಿದ ಎಣಿಸಲಾರದ ಅದೆಷ್ಟೋ ಹಣ್ಣುಗಳಿಗೆ ನಾನು ಈವರೆಗೆ ಒಂದು ಪೈಸೆಯನ್ನೂ ಕೊಟ್ಟಿಲ್ಲ, ಬೇರೆಯವರೂ ಕೊಟ್ಟಿರಲಾರರು. ಆಲಿಕಲ್ಲು ಮಳೆಬಿದ್ದ ಸಂಜೆಯ ಮಾರನೇ ಬೆಳಿಗ್ಗೆ ಹೋದರೆ ಹೊರಲಾರದಷ್ಟು ಹಣ್ಣುಗಳನ್ನು ಹುಡುಕಬಹುದು. ನಾವೆಣಿಸಿದಂತೆ ಕೆ.ಇ.ಬಿ. ಆಫೀಸಿನ ಮುಂದೆ, ಹಾಸ್ಟೆಲಿನ ಮುಂದೆ, ಜ್ಯೂನಿಯರ್ ಕಾಲೇಜಿನ ಮುಂದೆ, ಫಾರೆಸ್ಟ್ ಆಫೀಸಿನ ಮುಂದೆ ಎಷ್ಟೋ ಮಾವಿನ ಕಾಯಿಗಳನ್ನು ಕೈಗೆ ಸಿಕ್ಕ ಕಲ್ಲು ಕೋಲುಗಳಿಂದ ಬಡಚುತ್ತಾ ಹೋದರೆ ನನಗೆ ನನ್ನ ಹಳೆಯ ಗುರಿ ಸಿಕ್ಕುವಷ್ಟರಲ್ಲಿ ಕೈನೋವು ಬಂದಿತ್ತು, ಇನ್ನು ಈ ಹುಡುಗರಿಗೆ ಗುರಿಯಿಟ್ಟು ಹೊಡೀರೋ ಎಂದರೆ ಕಂಡ ಕಂಡಲ್ಲಿ ಕಲ್ಲುಗಳನ್ನು ಬೀಸುವಂತೆ ಕಂಡುಬಂದರು. ಮೊದಲೆಲ್ಲಾ ಆದರೆ ಮಾವಿನಕಾಯಿಗಳ ಗೊಂಚಲಿನ ಬುಡಕ್ಕೆ ಏಟುಬಿದ್ದು ಹಾಗೆ ಬೀಳುತ್ತಿರುವ ಹೊಂಚಲನ್ನು ನೆಲಕ್ಕೆ ಬೀಳುವ ಮುನ್ನ ಗಾಳಿಯಲ್ಲೇ ಹಿಡಿದು ತಂದಿದ್ದರೆ ಹೊಡೆತ ಬೀಳದ ಕಾಯಿಗಳೆಂದು ಅಮ್ಮ ಉಪ್ಪಿನಕಾಯಿ ಹಾಕುತ್ತಿದ್ದಳು, ಆದರೆ ಆ ಭಾಗ್ಯ ಈಗ ಲಭಿಸಲಿಲ್ಲ, ನಮ್ಮ ಏಟಿಗೆ ಬಿದ್ದ ಕೆಲವೇ ಕೆಲವು ಕಾಯಿಗಳು ನೇರವಾಗಿ ಏಟು ತಿಂದದ್ದೂ ಅಲ್ಲದೇ ಟಾರು ರಸ್ತೆಯ ಮೇಲೆ ಬಿದ್ದು ಎರಡೆರಡು ರೀತಿಯ ನೋವಿನಿಂದಾಗಿ ತಮ್ಮ ಹಸಿರು ಚರ್ಮವನ್ನು ಕೆತ್ತಿಕೊಂಡು ಒಳಗಿನ ಬಿಳಿ ಭಾಗವನ್ನು ಅಲ್ಲಲ್ಲಿ ತೋರಿಸುತ್ತಾ ಸೊನೆಯನ್ನು ಸೂಸುವುದು ಕಣ್ಣೀರಿಡುತ್ತಿದ್ದಂತೆ ಕಂಡು ಬಂದಿತು. ಆಕಾಶ 'ಮಾಮಾ, ಒಂದಿಷ್ಟು ಉಪ್ಪೂ-ಖಾರ ಇದ್ರೆ ಚೆನ್ನಾಗಿತ್ತು!' ಅಂದ. ನಾನು ಮನೆಗೆ ಹೋದ ಮೇಲೆ ನೋಡೋಣ, ಇನ್ನೂ ತುಂಬಾ ಕೆಲ್ಸಾ ಇದೆ' ಎಂದದ್ದು ಇಬ್ಬರ ಮುಖದ ಮೇಲೂ ಆಶ್ಚರ್ಯ ಹುಟ್ಟಿಸಿತು.

***

ನನಗೆ ಗೊತ್ತು ನಮ್ಮೂರಲ್ಲಿ ಈಗಿನ ಬೇಲಿಗಳು ಒಂದೇ ಸ್ಥಳಾಂತರಗೊಂಡಿವೆ ಅಥವಾ ಸಮಯಕ್ಕೆ ತಕ್ಕಂತೆ ಅವೂ ಬದಲಾಗಿವೆ - ಎರಡು ಗದ್ದೆ, ಬ್ಯಾಣಗಳ ಅಕ್ಕ ಪಕ್ಕದ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿ ಬೇಲಿಯಂತೂ ಇರಲೇಬೇಕು ಆದರೆ ಆಧುನಿಕ ಸಂಬಂಧಗಳಿಗೆ ತಕ್ಕಂತೆ ಅವೂ ಬದಲಾಗಲಿಲ್ಲವೆಂದರೆ? ಮೊದಲೆಲ್ಲಾ ಬೇಲಿಯಲ್ಲಿ ಇರುತ್ತಿದ್ದ ಮುಳ್ಳಿರುವ ಕವಳೀ ಗಿಡಗಳ ಪೊದೆಯ ಬದಲು ಈಗ ಗೊಬ್ಬರದ ಗಿಡಗಳು ಹುಲುಸಾಗಿ ಬೆಳೆದುಕೊಂಡಿದ್ದು ಕಣ್ಣಿಗೆ ಗೋಚರಿಸಿತು. ಈ ದಿನ ಕವಳೀಹಣ್ಣಿನ ಮಾತಿರಲಿ, ಕಾಯಿಯನ್ನು ಹುಡುಕುವುದಕ್ಕೆ ಬೇಕಾದಷ್ಟು ನಡೆಯುವುದಕ್ಕಿದೆ ಎಂದು ನನಗೆ ಅನ್ನಿಸಿದ್ದರಿಂದ ಜೊತೆಯಲ್ಲಿದ್ದ ಹುಡುಗರಿಗೆ 'ನಡೀರೀ ಹೋಗೋಣ - ಈ ಕಡೆ' ಎಂದು ಮನೆಗೆ ವಿರುದ್ಧವಾದ ದಿಕ್ಕಿಗೆ ಕೈ ತೋರಿಸಿದೆ. ಅವರು ಚಕಾರವೆತ್ತದೆ ನನ್ನನ್ನು ಹಿಂಬಾಲಿಸಿದ್ದರು. ಆ ಹುಡುಗರಿಗೆ ನನ್ನ ಜೊತೆ ಬರುವುದೇ ಗುರಿಯಾಗಿದ್ದರೆ, ನನಗೆ ಯಾವುದೇ ಗೊತ್ತು-ಗುರಿಗಳಿರಲಿಲ್ಲ, ಅದೆಲ್ಲಿಯೋ ಮುಂದೆ ಸಿಗಬಹುದಾದ ಸಹಜವಾಗಿ ಬೆಳೆದ ಕವಳಿ ಹಣ್ಣೊ, ಕಾಯಿಗಳನ್ನು ತಿನ್ನುವುದನ್ನು ಬಿಟ್ಟು!

ಏನಾಶ್ಚರ್ಯ, ನಾವು ಶಿರಾಳಕೊಪ್ಪದ ರಸ್ತೆಯಿಂದ ಸುಮಾರು ಒಂದು ಮೈಲಿನ ಮೇಲೆ ನಡೆದರೂ ಒಂದೇ ಒಂದು ಕಡೆ ಕವಳೀ ಗಿಡದ ಪೊದೆಯೂ ಕಾಣುತ್ತಿಲ್ಲ, ಜೊತೆಯಲ್ಲಿ ಆದಷ್ಟು ಬೇಗ ಸಿಗಲಿ ಅನ್ನೋ ಸಂಕಲ್ಪದಲ್ಲಿರೋ ಇವರ 'ಅದರ ಎಲೆಗಳು ಹೇಗಿರುತ್ತೆ?' ಅನ್ನೋ ಪ್ರಶ್ನೆಗೆ ಬೇರೆ ಉತ್ತರಕೊಡಬೇಕು. ಹೀಗೆ ಎಷ್ಟೋ ಹೊತ್ತು, ಎಷ್ಟೋ ದೂರ ನಡೆದ ಮೇಲೆ, ಹುಡುಗರು ಆಗಾಗ್ಗೆ ಕೊಡುತ್ತಿದ್ದ 'ಅಕಸ್ಮಾತ್ ನಮಗೆ ದಾರಿಯೇನಾದ್ರೂ ಕಳೆದು ಹೋದ್ರೆ!' ಎನ್ನುವ ಎಚ್ಚರಿಕೆಗಳ ನಡುವೆ, ಕೊನೆಗೂ ಅದ್ಯಾವುದೋ ಬೇಲಿಯೊಂದರಲ್ಲಿ ಕವಳಿಗಿಡ ಇರುವುದು ದೂರದಿಂದಲೇ ಕಂಡಿತು. ಕುರಿಗಳ ಬಾಯಿಗೆ ಸಿಗದಂತೆ ಬೇಲಿಯ ಪಕ್ಕದಲ್ಲಿ ಗುಂಡಿಯಿದ್ದುದರಿಂದ ಅದರಲ್ಲಿ ಕೆಲವುಕಾಯಿಗಳು ಇನ್ನೂ ಇದ್ದವು. ನನಗಾದ ಸಂತೋಷಕ್ಕಿಂತಲೂ ನನ್ನ ಜೊತೆಯಿದ್ದ ಹುಡುಗರಿಗೆ ತುಂಬಾ ಖುಷಿಯಾಗಿತ್ತು. ನಾನು ಗಿಡದ ಹತ್ತಿರ ಹುಷಾರಾಗಿ ಹೋಗಿ ಒಂದಿಷ್ಟು ಕಾಯಿಗಳನ್ನು ಕಿತ್ತುಕೊಂಡೆ, ಕಾಯಿಗಳನ್ನು ಕಿತ್ತುಕೊಂಡ ಕಡೆಯಿಂದ ಗಿಡದ ಹಾಲು ಒಸರತೊಡಗಿತು, ಹುಡುಗರಿಗೆ ತಲಾ ಒಂದಿಷ್ಟು ಕೊಟ್ಟು, 'ತಿನ್ರೋ' ಎಂದರೆ ಅವರು ಮೊದಲು ಮುಖ-ಮುಖ ನೋಡಿ ಆಮೇಲೆ ಬಾಯಿಗೆ ಹಾಕಿಕೊಂಡರು, ನಾನು ಈ ಕಾಯಿಗಳ ಮೇಲೆ ಲಘುವಾಗಿ ಪಸರಿಸಿದ ಧೂಳನ್ನು ನನ್ನ ಜೀನ್ಸ್ ಪ್ಯಾಂಟಿಗೆ ತಿಕ್ಕಿ ಒಂದೊಂದೇ ಕಾಯಿಗಳನ್ನು ತಿನ್ನ ತೊಡಗಿದೆ. ಹುಡುಗರು 'ಒಂಥರಾ ಒಗರು!' ಎಂದದ್ದಕ್ಕೆ 'ಅದರಲ್ಲೇ ಇರೋದು ಮಜಾ!' ಎಂದು ಸಮಜಾಯಿಷಿ ಕೊಟ್ಟೆ.

***

ಕವಳೀಕಾಯಿ ಕೀಳಲು ಹೋದದ್ದನ್ನು ಯಾರಿಗೂ ಹೇಳಬೇಡಿ ಎಂದಿದ್ದಕ್ಕೆ ಹುಡುಗರು ನನ್ನ ಮಾತನ್ನು ಕೇಳಿದರಾದರೂ ಮತ್ತೆ ಮರುದಿನ ಯಾರೂ 'ಎಲ್ಲೆಲ್ಲೋ ಕರೆದುಕೊಂಡು ಹೋಗುತ್ತಾರೆಂದು' ನನ್ನ ಜೊತೆಯಲ್ಲಿ 'ಜಾಗ್ಗಿಂಗ್' ಗೆ ಬರಲಿಲ್ಲ, ನಮ್ಮೂರಿನ ಹೆಂಗಳೆಯರು ಮುಂಜಾನೆ ಅಂಗಳವನ್ನು ಗುಡಿಸಿ ಸಾರಿಸೋದೋರಳಗೆ ನಿರ್ಜನಗಲ್ಲಿಗಳನ್ನು ಹಳೆ ಸ್ನೇಹಿತರಂತೆ ಹುಡುಕಿಕೊಂಡು ಹೋಗುವ ಪರಿಪಾಟವನ್ನು ನಾನು ನಿಲ್ಲಿಸಲಿಲ್ಲ!

1 comment:

Anveshi said...

ಈಗ ಆ ಪೋರರು ನಿಮ್ಮ ಜತೆ ಜಾಗಿಂಗ್ ಗೆ ಬರಲು ಒಪ್ಪದಿದ್ದರೂ, ಬ್ಲಾಗಿಂಗ್ ಗೆ ಬರಲು ಖಂಡಿತಾ ಒಪ್ಪುವರು.

ಅಂದಹಾಗೆ ನಿಮಗೆ ಕವಳೀಹಣ್ಣೇ ಯಾಕೆ ಬೇಕಿತ್ತು? ಚಳ್ಳೆ ಹಣ್ಣು ತಿಂದಿದ್ದರಾಗದೆ?