Showing posts with label ನಿವೃತ್ತ ಬದುಕು. Show all posts
Showing posts with label ನಿವೃತ್ತ ಬದುಕು. Show all posts

Wednesday, April 15, 2020

ಬದಲಾದವರು ಯಾರು?

ಹಾಳಾದ ವೈರಸ್ಸು ನಮ್ಮನ್ನೆಲ್ಲ ಹಗಲೂ-ರಾತ್ರಿ ತನ್ನ ಧ್ಯಾನದಲ್ಲೇ ತೊಡಗಿಸಿರುವಂತೆ ಮಾಡಿರುವುದೂ ಅಲ್ಲದೇ, ವಿಶ್ವದಾದ್ಯಂತ ಅನೇಕ ಹಸಿದ ಹೊಟ್ಟೆಗಳನ್ನೂ, ಸಾವು-ನೋವಿನ ಕಣ್ಣೀರ ಕೋಡಿಯನ್ನೂ ಹರಿಸಿರುವುದು ನಿಜ.  ಈ ವೈರಸ್ಸಿನ ಭೀತಿ ಒಂದು ರೀತಿಯ ಕಾಡ್ಗಿಚ್ಚಿನಂತೆ ಎಲ್ಲ ಕಡೆಗೆ ಹರಡಿದ್ದು, ಇದು ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ಭಸ್ಮವನ್ನಾಗಿಸಿ, ಆ ಜಾಗದಲ್ಲಿ ಮತ್ತೆ ಹೊಸ ಹುಟ್ಟುಗಳನ್ನು ಕಾಣಬಹುದು.  ಕೆಲವರು ಈ ವೈರಸ್ಸಿನಿಂದ ಬದುಕಿಗೆ ಆಗಿ ಮಿಗುವಷ್ಟು ಪಾಠ ಕಲಿಯುತ್ತಾರೆ, ಇನ್ನು ಕೆಲವರು ತಮಗೇನೂ ಆಗೇ ಇಲ್ಲ, ಈ ಸೃಷ್ಟಿಯ ಸೌಲಭ್ಯಗಳು ಇರುವುದೇ ನಮ್ಮ ಪೋಷಣೆಗಾಗಿ ಎಂದುಕೊಳ್ಳುವವರೂ ಇದ್ದಾರೆ.  ದೂರದ ಸ್ನೇಹಿತರು, ನೆಂಟರು-ಇಷ್ಟರನ್ನು ಮಾತನಾಡಿಸಲು ಇದು ಸಕಾಲ.  ಸಂಜೆಯ ವೇಳೆ (ಆಫೀಸಿನ ಅವಧಿ ಮುಗಿದ ಮೇಲೆ), ವಾರಾಂತ್ಯದಲ್ಲಿ ಎಲ್ಲರೂ ಕೂಡ ಗೊಂದಲವಿಲ್ಲದೇ ಹೆಚ್ಚು ಕಾಲ ಫೋನ್ ಅಥವಾ ವಿಡಿಯೋ ಸಂಭಾಷಣೆಯಲ್ಲಿ ಸಿಗುವುದು ಇತ್ತೀಚಿನ ಒಂದು ಬದಲಾವಣೆ ಎನ್ನಬಹುದು.  ನಮ್ಮ ಪರಿವಾರದವರಿಗೆ ನಾವು ಕಷ್ಟಕಾಲದಲ್ಲಿ ಆಗಿ ಬರಲಿಲ್ಲ ಎನ್ನುವ ವ್ಯಥೆ ಒಮ್ಮೊಮ್ಮೆ ಬಾಧಿಸುತ್ತಾದರೂ, ಮರುದಿನ ಫೋನ್‌ನಲ್ಲಿ ಮಾತನಾಡಿದಾಗ ಮನಸ್ಸು ಹಗುರವಾಗುತ್ತದೆ.  ಕಾಲ ಎಲ್ಲರನ್ನೂ ಬದಲಾಗಿಸುತ್ತದೆ... ಅದರಲ್ಲೂ ದೇಶ-ಭಾಷೆ-ಬಂಧುಗಳನ್ನು ಬಿಟ್ಟು ದೂರ ಬಂದ ನಾವುಗಳು ಹೆಚ್ಚು ಬದಲಾಗಿದ್ದೇವೆ ಎಂದು ಅನಿಸುತ್ತದೆ.

***

ಕಳೆದ ವರ್ಷ ಭಾರತಕ್ಕೆ ಹೋಗಿದ್ದಾಗ ನಮ್ಮ ಹಳೆಯ ಸಂಬಂಧಿಕರೆನ್ನೆಲ್ಲ ನೋಡಿ ಮಾತನಾಡಿಸುವ ಅವಕಾಶವೊಂದು ಬಂದಿತ್ತು. ಭಾರತದ ಬೇರುಗಳನ್ನು ಬಿಟ್ಟು ಬಂದವರಿಗೆ ಈ ರೀತಿಯ ಸುಯೋಗಗಳು ಸಿಗುವುದು ಅಪರೂಪವಷ್ಟೇ. ನಾವು ಎಷ್ಟೇ ದೂರದಿಂದ ಫೋನಿನಲ್ಲಿ ಮಾತನಾಡಿದರೂ ಹತ್ತಿರ ಕುಳಿತು, ಪರಸ್ಪರ ಭೇಟಿಯಾಗಿ ಮಾತನಾಡುವ ಅನುಕೂಲ ಸುಖಕ್ಕೆ ಯಾವ ರೀತಿಯಲ್ಲೂ ತಾಳೆ ನೋಡಲಾಗದು. ಇತ್ತೀಚಿನ ತಂತ್ರಜ್ಞಾನದ ಉನ್ನತಿಯ ದೆಸೆಯಿಂದ ಅಪರೂಪಕ್ಕೊಮ್ಮೆ ವೀಡಿಯೋ ಕಾಲ್ ಮಾಡಿದರೂ ಸಹ ಅದೂ ಕೂಡ ಪರಸ್ಪರ ಭೇಟಿಯ ಅನುಭವವನ್ನು ಕೊಡಲು, 8000 ಮೈಲಿಯ ದೂರದ ಅಂತರದಲ್ಲಿ ಸೋಲುತ್ತದೆ ಎಂದೇ ಹೇಳಬೇಕು. ನಮ್ಮ ಸಹಪಾಠಿಗಳು, ಸ್ನೇಹಿತರು ನೆಂಟರು, ಇಷ್ಟರು, ಬಂಧು-ಬಳಗದವರು ಇವರನ್ನೆಲ್ಲ ಲೆಕ್ಕ ಹಾಕಿದರೆ ಸುಮಾರು ಎರಡು ಸಾವಿರ ಜನರಷ್ಟಾಗಬಹುದು. ನಮ್ಮ ಮದುವೆಗಳಲ್ಲಿ ಏನಿಲ್ಲವೆಂದರೂ ಒಂದು ಸಾವಿರ ಜನರಾದರೂ ಬಂದಿರುತ್ತಾರಲ್ಲ?

ಹೀಗೇ ಒಂದು ಭೇಟಿಯಲ್ಲಿ, ನಮ್ಮ ಹಿರಿಯ ತಲೆಗಳನ್ನು ನೋಡಿ ಮಾತನಾಡಿಸುವ ಸುಯೋಗ ಬಂದಿತ್ತು. ನಾನು ಅವರುಗಳ ಮನೆಗೆ ಹೋದಾಗ ಅವರು ನನ್ನನ್ನು ’ಅತಿಥಿ’ಯಾಗಿ ನೋಡಿಕೊಳ್ಳುವ ರೀತಿಯಲ್ಲಿ ಅನೇಕ ಹೊಸತುಗಳಿದ್ದವು. ದೂರದಿಂದ ಬಂದಿದ್ದಾನೆ ಎಂದು ಒಂದಿಷ್ಟು ಉಪಚಾರಗಳು, ಅವುಗಳ ನಡುವೆ ನೆಲದ ಮೇಲೆ ಕೂರಿಸಿ ಊಟಕ್ಕೆ ಹಾಕಬೇಕೋ, ಅಥವಾ ಡೈನಿಂಗ್ ಟೇಬಲ್‌ನಲ್ಲಿ ಕೂರಿಸಬೇಕೋ ಎನ್ನುವ ಕಸಿವಿಸಿ. ಎಲೆಯಿಟ್ಟು ಊಟ ಮಾಡುತ್ತಾರೋ ಅಥವಾ ಸ್ಟೀಲ್ ತಟ್ಟೆಯಲ್ಲಿ ಬಡಿಸಬೇಕೋ ಎನ್ನುವ ಮುಜುಗರ. ಊಟಕ್ಕೆ ಏನು ಬಡಿಸಬೇಕು ಅಥವಾ ಬೇಡ ಎನ್ನುವ ಅಳುಕು. ಹೀಗೇ ನನ್ನ ಭೇಟಿಯುದ್ದಕ್ಕೂ ಸ್ಥಳೀಯ ಭಾಷೆಯನ್ನು ಬಿಟ್ಟು ಯಾರದ್ದೋ ಜೊತೆಗೆ ನಡೆಸಬಹುದಾದ ಗ್ರಾಂಥಿಕ ಭಾಷೆಯನ್ನು ಬಳಸಿ ನಡೆಸುವ ಸಂವಾದದ ಸಂಕಟ... ಈ ಎಲ್ಲದರ ಹಿನ್ನೆಲೆಯಲ್ಲಿ ನಾನು ಯಾರ ಮನೆಗೆ ಬಂದಿದ್ದೇನೆ, ಇವರಿಗೆಲ್ಲ ಏನಾಗಿದೆ? ಒಂದು ಕಾಲದಲ್ಲಿ ಎಷ್ಟೊಂದು ಸಹಜವಾಗಿ ವರ್ತಿಸುತ್ತಿದ್ದ ನಮ್ಮ ಜನರಿಗೆ ಈ ರೀತಿ ಇರುಸುಮುರುಸೇಕಾಗುತ್ತಿದೆ ಎಂದು ಯೋಚಿಸಲು ತೊಡಗಿದೆ. ನಾನು ಊರಿಗೆ ಹೋದೊಡನೆ ಅಲ್ಲಿನ ಸ್ಥಳೀಯ ಉಡುಪುಗಳನ್ನು ತೊಡುವುದರ ಮೂಲಕ ’ಎಲ್ಲರೊಳಗೊಂದಾಗ’ ಬಯಸುವ ನನ್ನ ಪ್ರಯತ್ನಕ್ಕೆ ಅನಾಯಾಸ ಸೋಲು! ನಾನು ದಂಗಾಗಿ ಹೋಗಿದ್ದೆ.

ಒಂದು ಕಾಲದಲ್ಲಿ ಎಷ್ಟೊಂದು ವಿಷಯಗಳಿಗೆ ಬಡಿದಾಡುತ್ತಿದ್ದೆವು, ತಾಳಮದ್ದಳೆಯ ಪ್ರತೀಕವಾಗಿ ಅನೇಕ ವಾದ-ವಿವಾದಗಳನ್ನು ಹೂಡುತ್ತಿದ್ದೆವು, ಆಯಾ ಸಮಯದ ಮಟ್ಟಿಗೆ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳನ್ನು ಚರ್ಚಿಸುತ್ತಿದ್ದೆವು. ನಮ್ಮ ಸಂಘರ್ಷಗಳಲ್ಲಿ ಘರ್ಷಣೆಗಳಿದ್ದವು, ಘೋಷಣೆಗಳಿದ್ದವು. ಮದುವೆ-ಮುಂಜಿಯ ಮಾತುಗಳು ಬರುತ್ತಿದ್ದವು. ಜಾತಿ-ಆಸ್ತಿ-ಅಂತಸ್ತಿನ ವಿಚಾರಗಳು ಹಿಣುಕಿ ಹಾಕುತ್ತಿದ್ದವು... ಆದರೆ, ಈ ಅಸಹಜ ವರ್ತಮಾನದ ಒಡನಾಟದಲ್ಲಿ ಈ ಮೇಲಿನೆಲ್ಲವೂ ಮಾಯವಾಗಿ, ಯಾರೋ (ದಾರಿ ತಪ್ಪಿ ಬಂದ) ಅತಿಥಿಗಳ ಸತ್ಕಾರದಂತೆ ನಮ್ಮ ಭೇಟಿ ನಡೆಯತೊಡಗಿದ್ದನ್ನು ನೋಡಿ ಮನ ಹಿಂಡಿಹೋಗಿತ್ತು.

ಇದನ್ನು ಹೀಗೇ ಬಿಟ್ಟರೆ, ನನ್ನವರೆನ್ನುವವರನ್ನೆಲ್ಲ ಎಲ್ಲಿ ದೀರ್ಘಕಾಲೀನವಾಗಿ ಕಳೆದುಕೊಳ್ಳಬೇಕಾಗುತ್ತೋ ಎಂದು ನಾನು ಅನೇಕ ಸೂಕ್ಷ್ಮ ವಿಷಯಗಳನ್ನು ಎತ್ತಿ ನಿಧಾನವಾಗಿ ವಾದಗಳನ್ನು ಮಂಡಿಸತೊಡಗಿದೆ. ಹೀಗಾದಲಾಗರೂ ಅವರುಗಳು ತೆರೆದುಕೊಳ್ಳಲಿ ಎಂದು... ಊಹ್ಞೂ, ನಾನು ಏನೇ ಮಾಡಿದರೂ ಅವರು ತಿಪ್ಪೆ ಸಾರಿಸಿದ ಹಾಗೆ ಉತ್ತರಗಳನ್ನೇ ಕೊಡುತ್ತಾ ಬಂದರು. ಹೀಗೇ ಬಿಟ್ಟರೆ, ಇವರುಗಳು ನನ್ನಿಂದ ದೂರವೇ ಇರುತ್ತಾರೆ ಎಂಬ ಯೋಚನೆ ಬಂದಿದ್ದೇ ತಡ, ನಾನು ಅಲ್ಲಿಂದ ಕಾಲ್ಕಿತ್ತು... ಮರುದಿನ ಒಂದು ಹೊಸ ಆಲೋಚನೆಯೊಡನೆ ಅವರನ್ನೆಲ್ಲ ಭೇಟಿ ಮಾಡಲು ಹೋದೆ.

***
ಹಳ್ಳಿಗಳಲ್ಲಿ ಸಹಜವಾಗಿ ಸೂರ್ಯ ಹುಟ್ಟುತ್ತಲೇ ಜೀವನ ಆರಂಭವಾಗುವ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಆನೇಕ ಮನೆಗಳಲ್ಲಿ ಬೆಳಗಾಗುವುದರ ಒಳಗೆ ಜಾನುವಾರುಗಳಿಗೆ ಬಾಯಾರು (ಗಂಜಿ-ನೀರು) ಕೊಡುವುದರಿಂದ ಹಿಡಿದು, ಅಂಗಳವನ್ನು ಗುಡಿಸಿ ಸಾರಿಸಿ, ಹೊಸ್ತಿಲಿಗೆ ಅರಿಶಿಣ-ಕುಂಕುಮವಿಡುವುದರಿಂದ ಹಿಡಿದು, ಮನೆ ಮಂದಿಯೆಲ್ಲ ಮಿಂದು ತಮ್ಮ ತಮ್ಮ ಕೆಲಸ ನೋಡಿಕೊಳ್ಳುವ ವಾಡಿಕೆಯಿದೆ. ಮಲೆನಾಡಿನ ಅನೇಕ ಮನೆಗಳಲ್ಲಿ ತಿಂಡಿಗೆ ಖಾಯಂ ಅವಲಕ್ಕಿ ಅಥವಾ ದೋಸೆಯ ಪರಿಪಾಠ ಇನ್ನೂ ಜಾರಿ ಇದೆ. ನಾನು ನನ್ನ ಪರಿವಾರವನ್ನು ಬಿಟ್ಟು, ಒಂದು ಲುಂಗಿಯನ್ನು ಸುತ್ತಿಕೊಂಡು, ಬೆಳ್ಳಂಬೆಳಗ್ಗೆ ಇವರುಗಳ ಮನೆಯ ಅಡುಗೆ ಮನೆ ತಡಕಾಡಿದರೆ  ಒಂದಿಷ್ಟು ದೋಸೆಗೇನೂ ಕಡಿಮೆ ಇಲ್ಲ ಎನ್ನುವ ನಂಬಿಕೆಯಿಂದ ನಮ್ಮ ನೆಂಟರೊಬ್ಬರ ಮನೆಗೆ ಹಿಂಬದಿ ಬಾಗಿಲಿನಿಂದ ಹೋಗಿ... ಎಂದಿನಂತೆ ಮಾತಿಗೆ ತೊಡಗುತ್ತಾ, ಅಲ್ಲೇ ಹತ್ತಿರದಲ್ಲಿದ್ದ ಮಣೆಯನ್ನೊಂದು ಎಳೆದುಕೊಂಡು ಕುಳಿತುಕೊಂಡೆ. ಆಗ ನೋಡಿ ನಿಜವಾಗಿ ನಮ್ಮ-ಅವರ ಮಾತುಕಥೆ ಶುರುವಾಗಿದ್ದು.... ಉಭಯ ಕುಶಲೋಪರಿಗೆ ಕತ್ತರಿ ಹಾಕಿ, ಕಳೆದ ನಾಲ್ಕು ವರ್ಷಗಳ ಆಗು-ಹೋಗುಗಳ ಒಟ್ಟು ಲೆಕ್ಕಾಚಾರವನ್ನು ನಾಲ್ಕು ಘಂಟೆಗಳಲ್ಲಿ ಮುಗಿಸುವ ಹುನ್ನಾರದಲ್ಲಿದ್ದವನಿಗೆ ಸಮಯ ಹೋದುದೇ ತಿಳಿಯಲಿಲ್ಲ. (ಜೊತೆಗೆ ಅಕ್ಕ-ಪಕ್ಕದ ಮನೆಗಳಿಂದಲೂ ಪರಿಚಯದವರು ಬಂದು ಸೇರತೊಡಗಿದರು. ನಮ್ಮ ಮಾತುಕಥೆಗಳಲ್ಲಿ ’ಬನ್ನಿ-ಹೋಗಿ’ಗಳು ಇರಲಿಲ್ಲ!) ತಿಂಡಿ-ಕಾಫಿಯ ಸಮಯವೆಲ್ಲವೂ ಮುಗಿದು, ಮಧ್ಯಾಹ್ನದ ಊಟದ ಸಮಯವೂ ಆಗಿ ಹೋಯಿತು. ನೀವು ಮಾಡಿದ್ದನ್ನೇ ಬಡಿಸಿ ಎಂದು ತೋಚಿಕೊಳ್ಳುವ ನನಗೆ, ಏನಾದರೂ ವಿಶೇಷವಾದ ಅಡಿಗೆಯನ್ನ ಮಾಡಲೇ ಬೇಕು ಎಂದು ಅವರು, ಒಬ್ಬರಿಗೊಬ್ಬರು ಮತ್ತೆ ’ಹೋರಾಟ’ ನಡೆಸಿದೆವು. ಕೊನೆಗೆ ನಾನೇ ಸೋತು, ಅಲ್ಲೇ ಇದ್ದ ಒಂದೆಲಗದ ತಂಬಳಿಯನ್ನು ಮಾಡಿರೆಂದು ಕೇಳಿಕೊಂಡೆ. ಊಟವಾದ ಮೇಲೂ ಮಣೆ ಬಿಡದ ನನ್ನ ಜಿಗಣೆಯ ಜಿದ್ದಿಗೆ ಅವರು ಸೋತಿದ್ದರು. ಕೊನೆಗೆ ಅಲ್ಲಿಯೇ ಇದ್ದ ಎಲೆ-ಅಡಿಕೆ ಬಟ್ಟಲನ್ನು ಎಳೆದುಕೊಂಡು ಕವಳ ಹಾಕಿದ ಮೇಲೆ ಅವರಲ್ಲಿ ಒಬ್ಬನಾಗಿ ಹೋಗಿದ್ದೆ.
"ಹೀಂಗೆ ಬರ್ತಾ ಇರು ಮಾರಾಯ, ನೀ ಬಂದ್ರೆ ಒಂಥರ ಚೆಂದ ನೋಡು!" ಎನ್ನುವ ಮನದಾಳದ (ಬರೆಯಲಾರದ) ಷರಾ ವನ್ನು ಹೇಳಿಸಿಕೊಂಡು ಹಿಂತಿರುಗಿ ಹೊರಟೆ.

***
ಈ ಒಂದು ಘಟನೆಯ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದಾಗ, ನನ್ನ ಮನದಲ್ಲಿ ಬದಲಾದವರು ಯಾರು? ಎಂಬ ಪ್ರಶ್ನೆ ಬಲವಾಗಿ ಏಳತೊಡಗಿತು. ಕಾಲ ಕಳೆದಂತೆ ನಮ್ಮ-ನಮ್ಮ ವ್ಯಕ್ತಿತ್ವ, ಪ್ರಬುದ್ಧತೆ, ವಿಚಾರಗಳು ಬದಲಾಗಲಿ. ಆದರೆ, ಈ ಬದಲಾವಣೆಯ ದೆಸೆಯಿಂದ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾದ ಸಂದರ್ಭ ಬಂದರೆ, ಅಥವಾ ಈ ಬದಲಾವಣೆಯ ಕೃಪೆಯಿಂದ ನಮ್ಮವರೊಡನೆ ನಾವೇ ಒಂದಾಗಲಾರದವರಾದರೆ, ಅದು ನಮ್ಮನ್ನು ಬೇರ್ಪಡಿಸಿ, ನಮ್ಮಲ್ಲಿ ಪ್ರತ್ಯೇಕತಾ ಭಾವನೆಯನ್ನು ಮೂಡಿಸೋದಿಲ್ಲವೇ? ಬಂಧುಗಳಿಗೆ, ಸ್ನೇಹಿತರಿಗೆ ಅವರವರ ಧರ್ಮವಿದೆ, ಅವರಿಗೆ ಒಂದು ಕಾರ್ಯಭಾರವಿದೆ, ಪಾತ್ರವಿದೆ... ಅವುಗಳನ್ನೆಲ್ಲ ತೊರೆದು ಅವರು ಅವರಾಗಿಲ್ಲದಿದ್ದಾಗ ನಾವು ನಾವಾಗದಿದ್ದರೆ ಯಾರನ್ನು ನೋಡಲು ಎಷ್ಟು ದೂರ ಹೋದರೆ ಏನು ಪ್ರಯೋಜನ?

ಅಮೇರಿಕದ ನೀರು ಕುಡಿದು ಅಮೇರಿಕನ್ ಇಂಗ್ಲೀಷ್ ಬಳಸಿ ನನ್ನೊಡನೆ ಬರೀ ಇಂಗ್ಲೀಷಿನಲ್ಲೇ ಸಂವಾದಿಸುವ ನನ್ನ ಖಾಸಾ ಪರಿಚಿತ (ಸ್ನೇಹಿತ) ಶೃಂಗೇರಿಯ ರಾಜೇಂದ್ರನಾಗಲೀ, ಅಥವಾ ತಮ್ಮತನವನ್ನು ಬಿಟ್ಟು ನಮ್ಮೊಡನೆ ಗ್ರಾಂಥಿಕ ಭಾಷೆಯನ್ನು ಬಳಸಿ ನಟಿಸುವ ನನ್ನ ಹಿರಿಯ ಸಂಬಂಧಿಕರಾಗಲೀ ನನಗೇಕೆ ಬೇಕು?

ಬದಲಾದವರು ಯಾರೋ ಅವರೇ ಉತ್ತರ ಕೊಡಬೇಕು!

Thursday, July 31, 2008

ನಾವು ಮತ್ತು ನಮ್ಮ ಕೆಲಸ (ಅದರ ಮೇಲಿನ ಪ್ರೀತಿ)

ಎಲ್ರೂ ಮಾಡೋದ್ ಹಾಗೇ, ಯಾವ್ದೋ ಒಂದ್ ಕಂಪ್ನಿಗೋ, ಗವರ್ನಮೆಂಟ್ ಕೆಲ್ಸಕ್ಕೋ ಜೀವಾ ತೇದೋದು ನಾಳೆ ಬದುಕಬೇಕಲ್ಲ ಅನ್ನೋ ಒಂದೇ ನೆವಕ್ಕೆ... ಅಂತ ಅನ್ಸಿದ್ದು ಈ ವಾರದ ಕೊನೇಲಿ ನಿವೃತ್ತನಾಗ್ತಿರೋ ನನ್ನ ಸಹೋದ್ಯೋಗಿಯೊಡನೆ ಅಪ್ತವಾದ ವಿಷಯಗಳ ಬಗ್ಗೆ ಮಾತನಾಡುತ್ತಾ ಇದ್ದಾಗ.

ಅವ್ನಿಗೆ ನಾನು ವಿಷ್ ಮಾಡ್ದೆ, ನನಗುತ್ತರವಾಗಿ ಅವನು ’Have fun at work!' ಎಂದು ನಕ್ಕ.

ನಾನು ತಕ್ಷಣ TOFLE ಪ್ರಶ್ನೆಗಳ ಮಾದರಿಯಲ್ಲಿ What do/did you mean? ಎಂದು ಕೇಳೋಣವೆನ್ನಿಸಿದರೂ ಕೇಳದೇ ಸುಮ್ಮನಾದೆ.

ಕೆಲ್ಸ ಹಾಗೂ ಸಹೋದ್ಯೋಗಿಗಳನ್ನು ಬಿಟ್ಟು ಹೋಗ್ತಿದೀನಿ ಅನ್ನೋ ದುಗುಡವಾಗ್ಲೀ ದುಮ್ಮಾನವಾಗ್ಲೀ ನನಗೇನೂ ಅವನ ಮುಖದ ಮೇಲೆ ಕಾಣ್ಲಿಲ್ಲ, ಜೊತೆಗೆ ಮುಂದೆ ಅದೆಲ್ಲೆಲ್ಲೋ ಗಾಲ್ಫ್ ಆಡೋದಕ್ಕೆ ಹೋಗ್ತೀನಿ, ಹಾಗ್ ಮಾಡ್ತೀನಿ, ಹೀಗ್ ಮಾಡ್ತೀನಿ ಅನ್ನೋ ಹುರುಪು ಎದ್ದು ಕಾಣ್ತಿತ್ತು.

***

ಹೆಚ್ಚು ಜನ ಬೆಳಗ್ಗೆ ಎದ್ದ ಕೂಡ್ಲೆ ’ಓಹ್, ಇವತ್ತು ಕೆಲ್ಸಕ್ಕೆ ಹೋಗ್ಬೇಕಲ್ಲ!’ ಎಂದು ಉಲ್ಲಸಿತರಾಗೇನೂ ಇರೋದಿಲ್ಲ (ನನ್ನ ಅನಿಸಿಕೆ). ಈ ಹಾಳಾದ್ ಕೆಲ್ಸಕ್ಕೆ ಹೋಗ್ಬೇಕಲ್ಲ ಅನ್ನೋರೂ ಇದಾರೆ ಅಂತನೂ ಗೊತ್ತು. ಹಾಗಾದ್ರೆ ಜನಗಳು ತಮ್ಮ ಬದುಕನ್ನು ರೂಢಿಸೋ ಕೆಲಸವನ್ನ, ತಮಗೆ ಅನ್ನ ನೀಡೋ ಅನ್ನದಾತರನ್ನ ಅಷ್ಟೊಂದಾಗಿ ದ್ವೇಷಿಸದೆ ಇದ್ರೂ ಮನಸ್ಸಿಟ್ಟು ಪ್ರೀತಿಸೋದಂತೂ ನನಗೆ ಮನವರಿಕೆ ಆಗ್ಲಿಲ್ಲ. ನಾವೆಲ್ಲ ಶಾಲೆ-ಕಾಲೇಜುಗಳಲ್ಲಿರುವಾಗ ’ಹಾಗ್ ಆಗ್ತೀನಿ, ಹೀಗ್ ಆಗ್ತೀನಿ’ ಅನ್ನೋ ಕನಸುಗಳು ಎಲ್ರಿಗೂ ಇರುತ್ತೆ. ನಮ್ಮ ಆಫೀಸಿನಲ್ಲಿ ತೆರೆದ ಕಣ್ಣಿನ ಈಗಷ್ಟೇ ಕಾಲೇಜು ಮುಗಿಸಿ ಬಂದ ಇಂಟರ್ನುಗಳ ಸ್ಪಿರಿಟ್ಟು ಈಗಾಗಲೇ ನೆಲೆ ಊರಿದ ನಮ್ಮಂತಹವರ ಕೆಲಸದ ವಿವರಗಳನ್ನು ಅರಿಯುತ್ತಿದ್ದಂತೆ ಅವರ ದವಡೆ ಕೆಳಗೆ ಬೀಳೋದನ್ನು ನಾನೇ ನೋಡಿದ್ದೇನೆ, ಮೊದಮೊದಲು ಏನೂ ಗೊತ್ತಿರದೇ ಇದ್ರೂ, ಮಾಡೋಕ್ ಏನೂ ಹೆಚ್ಚ್ ಕೆಲ್ಸ ಇರ್ದಿದ್ರು ಎಂಟು ಘಂಟೆ ಕಾಲ ಖುರ್ಚಿಗೆ ತಮ್ಮನ್ನು ತಾವು ಗಂಟು ಹಾಕಿಕೊಳ್ಳೋ ಹೋರಾಟವನ್ನು ನೋಡಿ ಬೇಸ್ತು ಬಿದ್ದಿದ್ದೇನೆ. ಹೊಸದಾಗಿ ಸೇರಿಕೊಂಡವರಿಗೆ ನನ್ನಂತಹವರು ದಿನಕ್ಕೆ ನಾಲ್ಕೈದು ಘಂಟೆಗಳ ಕಾಲ ಫೋನ್ ಹೆಡ್‌ಸೆಟ್ ಅನ್ನು ತಲೆಗೆ ಸಿಕ್ಕಿಸಿಕೊಂಡಿರುವುದನ್ನು ನೋಡೇ ಸುಸ್ತಾಗಿ ಹೋಗುವುದನ್ನು ಮನವರಿಕೆ ಮಾಡಿಕೊಂಡಿದ್ದೇನೆ.

ಅಲ್ಲಿಂದ ಆರಂಭವಾದ ವೃತ್ತಿ ಜೀವನ ಎನ್ನುವ ಬದುಕು ರಿಟೈರ್‌ಮೆಂಟ್ ಹಂತ ತಲುಪುವವರೆಗೆ ಕೆಲವರಿಗೆ ಹಲವು ಕಂಪನಿಗಳ ಫ್ಲೇವರ್‌ಗಳನ್ನು ನೀಡಿದರೆ ಇನ್ನು ಕೆಲವರಿಗೆ ಒಂದೇ ಕಂಪನಿಯ ಔತಣವಾಗುತ್ತದೆ. ಅಲ್ಲಿ ಪ್ರೊಮೋಷನ್ನು-ಡಿಮೋಷನ್ನು ಮೊದಲಾದ ಬ್ಲಡ್ ಪ್ರಷರ್ ಏರಿಸಿ-ಇಳಿಸುವ ಹಂತ/ಮಟ್ಟ ಬಂದು ಹೋದರೂ ಇರುವಲ್ಲಿಂದ ತಲೆ ಎತ್ತಿ ನೋಡುವುದು ಎಲ್ಲಿ ಹೋದರೂ ತಪ್ಪೋದಿಲ್ಲ. ಒಂದಲ್ಲ ಒಂದು ಚಾಲೆಂಜುಗಳನ್ನು ಹಿಡಿದು ಸಂಬಾಳಿಸೋದೇ ವೃತ್ತಿಯಾಗುತ್ತದೆ. ಇಂಜಿನಿಯರುಗಳಿಗೆ ಡಾಕ್ಟರು, ಡಾಕ್ಟರುಗಳಿಗೆ ಮತ್ತಿನ್ಯಾರೋ ಕೆಲಸ ಇಷ್ಟವಾಗುವಂತೆ ಮೇಲ್ನೋಟಕ್ಕೆ ಕಾಣುತ್ತದೆ, ಹೆಚ್ಚಿನವರು ’I love my job' ಅಥವಾ ’I love what I do for a living' ಎಂದು ಮನ ಬಿಚ್ಚಿ ಹೇಳಿದ್ದನ್ನು ನಾನು ಕೇಳಿಲ್ಲ.

***

Why do we have to work? ಅನ್ನೋ ಪ್ರಶ್ನೆ ಈ ಬ್ಲಾಗಿನ ಬರಹಕ್ಕಿಂತ ದೊಡ್ಡದು. ಆದರೆ ನಮ್ಮ ನಮ್ಮ ಕೆಲಸಗಳನ್ನೇಕೆ ನಾವು ಪ್ರೀತಿಯಿಂದ ನೋಡೋದಿಲ್ಲ ಅನ್ನೋದು ಈ ಹೊತ್ತಿನ ಪ್ರಶ್ನೆ. ನಾವೆಲ್ಲ ಒಂದಲ್ಲ ಒಂದು ಕೆಲಸವನ್ನು ಮಾಡೇ ಮಾಡುತ್ತೇವೆ - ಆದರೆ ಆ ಕೆಲಸಕ್ಕೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆಯೇ? ಎಲ್ಲೋ ಕಲಿತು ಬಂದ ವಿದ್ಯೆ, ಸ್ಕಿಲ್ಸ್‌ಗಳಿಂದ ಈಗಿರುವ ಕೆಲಸವನ್ನು ಗಳಿಸಿಕೊಂಡಿದ್ದಾಯಿತು, ಇನ್ನು ಇಲ್ಲಿಂದ ಮುಂದೆ ಹೋಗಲು ಅಥವಾ ಬೇರೆ ಕಡೆಗೆ ಹಾರಿಹೋಗಲು ಇನ್ಯಾವುದನ್ನಾದರೂ ಪ್ರಯೋಗಿಸಿದ್ದೇವೆಯೇ? ಪ್ರಯತ್ನಿಸಿದ್ದೇವೆಯೇ? ಸರಿ, ಒಂದು ಮುವತ್ತು ವರ್ಷಗಳ ನಂತರ ಕೆಲಸ ಮಾಡಿ ಮುಂದೆ ನಿವೃತ್ತರಾದ ಮೇಲೆ ಏನು ಮಾಡೋದು? ಅಷ್ಟೊಂದು ವರ್ಷಗಳು ಕೆಲಸ ಮಾಡುವುದೇ ಖಾಯಂ ಆದಾಗ ನಾವು ಮಾಡುವ ಹುದ್ದೆಯನ್ನೇಕೆ ಪ್ರೀತಿಸೋದಿಲ್ಲ ಅಥವಾ ನಾವು ಪ್ರೀತಿಸುವ ಹುದ್ದೆಯನ್ನೇಕೆ ಮಾಡುವುದಿಲ್ಲ? ಅಥವಾ ಕೆಲಸ ಹಾಗೂ ಕೆಲಸದ ಮೇಲಿನ ಪ್ರೇಮ ಇವರೆಡೂ ಒಂದಕ್ಕೊಂದು ಎಣ್ಣೆ-ನೀರಿನ ಸಂಬಂಧವನ್ನು ಪಡೆದುಕೊಂಡುಬಿಟ್ಟಿವೆಯೇ?

ಸೋಮವಾರ ಶುರು ಮಾಡೋ ಕೆಲಸದಂದು ಮುಂಬರುವ ಶುಕ್ರವಾರದ ನಿರೀಕ್ಷೆ ಇದ್ದು ’ಈ ಕೆಲಸವನ್ನು ಯಾರು ಮಾಡುತ್ತಾರಪ್ಪಾ’ ಎನ್ನೋ ನಿಟ್ಟುಸಿರು ಆಗಾಗ್ಗೆ ಬರುತ್ತಿದ್ದರೆ ಆ ಕೆಲಸದಲ್ಲಾಗಲೀ ಕಂಪನಿಯಲ್ಲಾಗಲೀ ಕೊರತೆ ಇರದೆ ಕೆಲಸಗಾರನ ಮನದಲ್ಲೇನಿದೆ ಎಂದು ಆಲೋಚಿಸಿಕೊಳ್ಳಬೇಕಾಗುತ್ತದೆ. ನಾನಂತೂ ನನ್ನ ಕೆಲಸವನ್ನು ಅನ್ನದಾತನೆಂಬಂತೆ ಗೌರವಿಸುತ್ತೇನೆ, ಇದೇ ಪ್ರಪಂಚದ ಮಹಾ ಕೆಲಸಗಳಲ್ಲೊಂದಲ್ಲದಿದ್ದರೂ ಸದ್ಯಕ್ಕೆ ನನಗೆ ಅನ್ನ-ನೀರು ಕೊಡುತ್ತದೆಯೆಲ್ಲ ಎನ್ನುವ ರೀತಿಯಿಂದಲಾದರೂ ನನಗೆ ಅದರ ಮೇಲೆ ಮೋಹವಿದೆ ಪ್ರೀತಿಯಿದೆ. ಒಮ್ಮೊಮ್ಮೆ ’ಇದು ಯಾವನಿಗೆ ಬೇಕು, ಈ ಹಾಳು ಕೆಲಸವನ್ನು ಮಾಡೋದೇ ನನ್ನ ಬದುಕೇ...’ ಎಂದು ಅನ್ನಿಸಿದ್ದರೂ ಈ ಕೆಲಸವನ್ನು ಹುಡುಕಿಕೊಂಡು ಬಂದಿದ್ದು ನಾನೇ ಹೊರತು ಆ ಕೆಲಸ ನನ್ನನ್ನಲ್ಲ ಎನ್ನುವ ಸಾಮಾನ್ಯ ತಿಳುವಳಿಕೆ ನನ್ನನ್ನು ಸುಮ್ಮನಿರಿಸಿದೆ. ಒಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮಾಡಲೊಂದು ಕೆಲಸ ಬೇಕು, ಆದರೆ ಅವರವರು ನಿವೃತ್ತರಾಗುವುದಕ್ಕೆ ಮೊದಲು (ಸಾಧ್ಯವಾದರೆ) ಅವರ ಇಷ್ಟ ಪಡುವ ಕೆಲಸವನ್ನು ಸ್ವಲ್ಪ ದಿನ/ತಿಂಗಳುಗಳಾದರೂ ಮಾಡುವಂತಿದ್ದರೆ ಎಷ್ಟೋ ಚೆನ್ನಾಗಿರುತ್ತೆ, ಅಲ್ವೇ?