ಪರಿಸ್ಥಿತಿಯ ಕೈ ಗೊಂಬೆ
ಅಸಹಾಯಕತೆ ಅನ್ನೋದು ದೊಡ್ಡದು, ಆದರೆ ನಮ್ ನಮ್ ಕೈಯಲ್ಲಿ ಆಗೋಲ್ಲ ಅಂತ ಕೈ ಚೆಲ್ಲಿ ಕುಳಿತುಕೊಳ್ಳೋದು ದೊಡ್ಡದಲ್ಲ, ಆಯಾ ಪರಿಸ್ಥಿತಿಗೆ ತಕ್ಕಂತೆ ನಾವು ಏನು ಮಾಡಬಲ್ಲೆವು ಸುಮ್ಮನಿರೋದನ್ನು ಬಿಟ್ಟು ಅನ್ನೋದು ಮುಖ್ಯ. ಕೆಲವೊಮ್ಮೆ ವಿಷಯವನ್ನ ನಮ್ಮ ಕೈಗೆತ್ತಿಕೊಳ್ಳಬೇಕಾಗುತ್ತೆ, ಇನ್ನು ಕೆಲವು ಸಲ ಆದದ್ದಾಗಲಿ ಎಂದು ದೇವರ ಮೇಲೆ ಭಾರ ಹಾಕಿ ಸುಮ್ಮನಿರುವುದೇ ಒಳಿತು ಅನ್ನಿಸಬಹುದು ಅನುಭವಗಳ ಹಿನ್ನೆಲೆ ಇದ್ದೋರಿಗೆ. ಹೀಗೆ ಹಳೆಯ ಕನ್ನಡ ಚಿತ್ರಗಳ ಡಿವಿಡಿಯೊಂದನ್ನು ನೋಡ್ತಾ ಇರುವಾಗ ಬಹಳ ದಿನಗಳಿಂದ ಯೋಚನೆಗೆ ಸಿಕ್ಕದ ನಮ್ಮೂರುಗಳಲ್ಲಿ ಜನ ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಳ್ಳುತ್ತಾರೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು.
***
ಹೊಡೆದಾಟ ಬಡಿದಾಟದಲ್ಲಿ ಬೇರೆ ಯಾರೂ ಬೇಡಪ್ಪ, ನನ್ನ ದೊಡ್ಡ ಅಣ್ಣನೇ ಸಾಕು. ನಾಲ್ಕು ಹೊಡೆತ ಕೊಟ್ಟೂ ಬರಬಲ್ಲ, ಹಾಗೇ ತಿಂದುಕೊಂಡು ಬಂದಿದ್ದೂ ಇದೆ. ಒಂದು ದಿನ ಯಾವುದೋ ಕೆಲಸ ಕಾರ್ಯ ಮಾಡಿಸಿಕೊಳ್ಳಲೆಂದು ನಮ್ಮೂರಿನ ಮಂಡಲ ಪಂಚಾಯಿತಿ ಪ್ರಧಾನರನ್ನು ಹುಡುಕಿಕೊಂಡು ನಮ್ಮಣ್ಣ ಬಸ್‌ಸ್ಟ್ಯಾಂಡ್ ಹಿಂಬಾಗವಿರೋ ಜರಮಲೆಯವರ ಸಾ ಮಿಲ್ ಆಫೀಸಿಗೆ ಹೋಗಿದ್ದನಂತೆ. ಅಲ್ಲಿ ಶ್ರೀಮಂತರುಗಳ ದಂಡು ದೊಡ್ಡದಾಗಿ ಜಮಾಯಿಸಿತ್ತಂತೆ. ನಮ್ಮಣ್ಣ ಏನೋ ಕಾರಣಕ್ಕೆಂದು ಹೋದವನು ಮಾತಿಗೆ ಮಾತು ಬೆಳೆದು ಅಲ್ಲಿ ದೊಡ್ಡ ಮನುಷ್ಯರುಗಳ ನಡುವೆ ಉಪಸ್ಥಿತರಿದ್ದ ಮಂಡಲ ಪ್ರಧಾನರ ಬಾಯಿಂದ ಸೂಳೇಮಗನೇ ಎಂದು ಬೈಯಿಸಿಕೊಂಡನಂತೆ. ಹಾಗೆ ಅವರು ಬೈದದ್ದೇ ತಡ ಇವನಿಗೆ ಇಲ್ಲಸಲ್ಲದ ಸಿಟ್ಟು ಬಂದು ಅಷ್ಟು ಜನರಿರುವಂತೆಯೇ ಪ್ರಧಾನರನ್ನು ಹಿಡಿದೆಳೆದು ಹಿಗ್ಗಾಮುಗ್ಗಾ ಹೊಡೆದು ಹೊಟ್ಟೆಯೊಳಗಿನ ಕರುಳೂ ಕಿತ್ತುಬರುವಂತೆ ಪಂಚ್ ಮಾಡಿ ಬಂದಿದ್ದ. ಮುಂದಾಗುವ ಕಷ್ಟನಷ್ಟಗಳನ್ನರಿತವನು ಅಲ್ಲೇ ಹತ್ತಿರವಿದ್ದ ಪೋಲೀಸ್ ಸ್ಟೇಷನ್ನಿಗೆ ಓಡಿಬಂದು ಸಬ್‌ಇನ್ಸ್ಪೆಕ್ಟರ್ ಹತ್ತಿರ ಇರುವ ವಿಷಯವೆಲ್ಲವನ್ನು ಹೇಳಿ ತಪ್ಪೊಪ್ಪಿಕೊಂಡಿದ್ದ.
ಅಷ್ಟೊಂದು ಜನರ ಮುಂದೆ ಮಂಡಲ ಪ್ರಧಾನರನ್ನು ಆಸ್ಪತ್ರೆಗೆ ಸೇರಿಸುವಷ್ಟರ ಮಟ್ಟಿಗೆ ಹೊಡೆದರು ಅವರು ಬಿಟ್ಟಾರೇನು? ನಮ್ಮಣ್ಣನ ಮೇಲೆ 302, 302A ಮುಂತಾದ ಸೆಕ್ಷನ್ನುಗಳನ್ನು ಹೇರಿ, ಜೀವ ತೆಗೆಯಲು ಬಂದಿದ್ದನೆಂದು ಪುರಾವೆಗಳನ್ನೊದಗಿಸಿ ಸಾಬೀತು ಮಾಡಿದ್ದೂ ಆಯಿತು. ನಮ್ಮಣ್ಣ ಜೈಲಿನಿಂದ ಹೊರಬರುವಾಗ ಮತ್ತಿನ್ಯಾರದ್ದೋ ಕೈ ಕಾಲು ಹಿಡಿದು ಜಾಮೀನು ಪಡೆಯುವಂತಾಯ್ತು. ಇವೆಲ್ಲ ಆಗಿನ ಮಟ್ಟಿಗೆ ನಡೆದ ಕಷ್ಟಗಳಾದರೆ ಒಂದೆರಡು ದಿನಗಳಲ್ಲಿಯೇ ನಮ್ಮನೆಯ ಮುಂಬಾಗಿಲ ಬೀಗ-ಚಿಲಕವನ್ನು ಕಿತ್ತು ಎಸೆಯುವುದರಿಂದ ಹಿಡಿದು ಅನೇಕಾನೇಕ ಕಿರುಕುಳಗಳನ್ನು ಕೊಟ್ಟಿದ್ದೂ ಅಲ್ಲದೆ, ಇಂದಿಗೂ ಆ ಶ್ರೀಮಂತರ ತಂಡ ನಮ್ಮ ಮನೆಯವರನ್ನು ಕಂಡರೆ ಒಂದು ರೀತಿಯ ಅಸಡ್ಡೆಯನ್ನು ಪ್ರದರ್ಶಿಸುತ್ತದೆ ಎಂದರೂ ತಪ್ಪಲ್ಲ. ಇಷ್ಟೂ ಸಾಲದು ಎಂಬಂತೆ ವಾರ-ತಿಂಗಳುಗಟ್ಟಲೆ ಸೊರಬದ ಕೋರ್ಟಿಗೆ ಅಲೆದದ್ದೂ ಆಯಿತು, ಒಂದು ಬಗೆಯ ಒಪ್ಪಂದವನ್ನೂ ಮಾಡಿಕೊಂಡಿದ್ದಾಯಿತು.
ನಾನು ಈ ಸಂಬಂಧವಾಗಿ ಈ ಘಟನೆ ನಮ್ಮ ನಡುವೆ ಮಾತಿಗೆ ಬಂದಾಗಲೆಲ್ಲ ನಮ್ಮಣ್ಣನನ್ನು ಮನಸೋ ಇಚ್ಛೆ ಬೈದಿದ್ದೇನೆ. ರಿಟೈರ್ ಆಗಿರುವ ಅಮ್ಮನಿಗೆ ಕಿರುಕುಳ ಕೊಡೋದಕ್ಕೆ ನೀನು ನಿನ್ನ ಶಕ್ತಿ ಪ್ರದರ್ಶನ ಮಾಡಬೇಕಿತ್ತೇನು? ಇಂದು ಅವರು ನಲ್ಲಿಯ ಪೈಪ್ ಅನ್ನು ಒಡೆದು ಹೋಗುತ್ತಾರೆ, ನಾಳೆ ಮತ್ತೊಂದನ್ನು ಮಾಡುತ್ತಾರೆ ಅವುಗಳಿಂದ ನೀನು ನಮ್ಮೆಲ್ಲರನ್ನು ರಕ್ಷಿಸುವ ತಾಕತ್ತಿದೆಯೇನು? ಅವರು ದುಡ್ಡಿದ್ದೋರು, ಅವರು ಹೇಳಿದಂತೆ ನಡೆಯೋ ಪೋಲೀಸು-ಕೋರ್ಟುಗಳ ಮುಂದೆ ಕೆಲಸವಿಲ್ಲದೇ ತಿರುಗೋ ನಿನ್ನ ದರ್ಪ ನಡೆಯೋದು ಅಷ್ಟರಲ್ಲೇ ಇದೆ! ಮುಂತಾಗಿ ಬೇಕಾದಷ್ಟು ಬೈದಿದ್ದೇನೆ, ಕೊರೆದಿದ್ದೇನೆ. ಇವೆಲ್ಲಕ್ಕೂ ನಮ್ಮಣ್ಣ ಹಿಂದೆ ’ಅವರು ಏನಂದರೂ ಅನ್ನಿಸಿಕೊಂಡು ಬರೋಕಾಗುತ್ತೇನು?’ ಎಂದು ಅದೇನೇನೋ ಹೇಳುತ್ತಿದ್ದವನು ಇಂದು ಮೌನ ಅವನ ಉತ್ತರವಾಗುತ್ತದೆ. ನಾನು ಬೇಕಾದರೆ ನಾಲ್ಕು ಹೊಡೆತ ತಿಂದುಕೊಂಡೋ ಬೈಯಿಸಿಕೊಂಡೋ ಮನೆಗೆ ಅತ್ತುಕೊಂಡು ಬರುತ್ತೇನೆಯೇ ವಿನಾ ಇವತ್ತಿಗೂ ಯಾವನಿಗೋ ಹೊಡೆದು ಆಸ್ಪತ್ರೆ ಸೇರಿಸಿ ಅವರು ನನ್ನ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಜಾಮೀನು ಪಡೆಯೋ ಸ್ಥಿತಿ ಬರುವುದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
***
೧೯೮೩ ರಲ್ಲಿ ಬಿಡುಗಡೆಯಾದ ರಾಜ್‌ಕುಮಾರ್ ನಟಿಸಿರುವ ಚಿತ್ರ ಸಮಯದ ಗೊಂಬೆ, ಅದರಲ್ಲಿ ಅನಿಲ್ ಆಲಿಯಾಸ್ ಗುರುಮೂರ್ತಿಯಾಗಿ ನಟಿಸಿರುವ ರಾಜ್‌ಕುಮಾರ್ ಒಬ್ಬ ಸಾಮಾನ್ಯ ಲಾರಿ ಡ್ರೈವರ್. ಆತನ ಸಾಕು ತಂದೆ ಶಕ್ತಿ ಪ್ರಸಾದ್ ಚೀಟಿ ಹಣವೆಂದು ತೂಗುದೀಪ ಶ್ರೀನಿವಾಸ್ ಹತ್ತಿರ ಕೊಟ್ಟಿರುವ ಹತ್ತು ಸಾವಿರ ರೂಪಾಯಿ ಹಣವನ್ನು ಕೇಳೋದಕ್ಕೆ ಹೋದಾಗ ’ಮದುವೆ ದಿನ ಬಾ ಆ ದಿನವೇ ಕೊಡುತ್ತೇನೆ’ ಎಂದು ಸುಳ್ಳು ಹೇಳಿ ರಾಜ್‌ಕುಮಾರ್ ಮೇಲೆ ಹಳೆಯ ಹಗೆಯ ಸೇಡು ತೀರಿಸಿಕೊಳ್ಳುವ ಹವಣಿಕೆ ತೂಗುದೀಪ ಶ್ರೀನಿವಾಸ್‌ದು. ಇನ್ನೇನು ರಾಜ್‌ಕುಮಾರ್ ತಂಗಿಯ ಮದುವೆ ನಡೆಯುತ್ತಿದೆ, ಅಂತಹ ಒಳ್ಳೆಯ ಸಮಯದಲ್ಲಿ ಈ ಹಿಂದೆ ಯೋಚಿಸಿಟ್ಟುಕೊಂಡಂತೆ ತೂಗುದೀಪ ಶ್ರೀನಿವಾಸ್ ’ಯಾವ ಹಣ, ಅದನ್ನು ಕೊಟ್ಟಿದ್ದಕ್ಕೆ ಏನು ಸಾಕ್ಷಿ-ಆಧಾರವಿದೆ, ಕೊಡೋದಿಲ್ಲ...’ವೆಂದು ಗರ್ಜಿಸಿದ್ದನ್ನು ಕಂಡು ದೀನನಾಗಿ ಬೇಡಿಕೊಂಡು ಫಲ ಸಿಗದೇ ಶಕ್ತಿಪ್ರಸಾದ್ ಪೆಚ್ಚು ಮೋರೆ ಹಾಕಿಕೊಂಡು ಮದುವೆ ಮಂಟಪಕ್ಕೆ ಖಾಲೀ ಕೈ ಇಟ್ಟುಕೊಂಡು ಹಿಂತಿರುಗುತ್ತಾನೆ. ಮದುವೆಯ ಮಾತಿನ ಪ್ರಕಾರ ಸ್ಕೂಟರ್ ಖರೀದಿ ಹಣವೆಂದು ಹತ್ತು ಸಾವಿರ ರೂಪಾಯಿ ಹಣಕೊಡದಿದ್ದರೆ ಮದುವೆಯನ್ನೇ ನಿಲ್ಲಿಸುವುದಾಗಿ ಗಂಡಿನ ಕಡೆಯವರು ಪಟ್ಟು ಹಿಡಿದು ನಿಂತಾಗ, ತಂಗಿಯ ಮದುವೆಯ ಖರ್ಚಿಗೆಂದು ತಾನು ಓಡಿಸುತ್ತಿದ್ದ ಲಾರಿಯನ್ನು ಮಾರಿದ್ದ ರಾಜ್‌ಕುಮಾರ್‌ಗೆ ತೂಗುದೀಪ ಶ್ರೀನಿವಾಸ್ ಹತ್ತಿರ ಹೋಗಿ ನ್ಯಾಯಾನ್ಯಾಯ ಕೇಳದೇ ಬೇರೆ ನಿರ್ವಾಹವೇ ಇರೋದಿಲ್ಲ. ಒಂದು ಕಡೆ ಮಹೂರ್ತ ಬೇರೆ ಮೀರಿ ಹೋಗುತ್ತಿದೆ, ಮತ್ತೊಂದು ಕಡೆ ಮದುವೆ ನಿಂತು ಹೋದರೆ ಅಗಾಧವಾದ ಅವಮಾನ ಬೇರೆ.
ಹೀಗಿರುವಾಗ ರಾಜ್‌ಕುಮಾರ್ ತೂಗುದೀಪ ಶ್ರೀನಿವಾಸ್ ಹತ್ತಿರ ಬಂದು ಕೇಳಿದಾಗ ಮತ್ತೆ ಅದೇ ಮಾತು, ’ಯಾವ ಹಣ, ಕೊಟ್ಟಿದ್ದಕ್ಕೆ ಏನು ಆಧಾರವಿದೆ, ಕೊಡೋದಿಲ್ಲ, ಅದೇನು ಮಾಡ್ತೀಯೋ ಮಾಡಿಕೋ’...ಹೀಗಿರುವಾಗ ದುಷ್ಟರ ಗುಂಪಿಗೂ ರಾಜ್‌ಗೂ ಮಾರಾಮಾರಿ ನಡೆದು ಕೊನೆಗೆ ಬಲವಂತವಾಗಿ ತೂಗುದೀಪ ಶ್ರೀನಿವಾಸ್ ಹತ್ತಿರದಿಂದ ಹತ್ತು ಸಾವಿರ ರೂಪಾಯಿ ತಂದು ತಂಗಿಯ ಮದುವೆಯನ್ನು ರಾಜ್ ಪೂರೈಸುವ ಸಂದರ್ಭ ಬರುತ್ತದೆ. ಇನ್ನೇನು ಮದುವೆ ಮುಗಿಯಿತು ಎಂದ ಕೂಡಲೇ ತೂಗುದೀಪ ಶ್ರೀನಿವಾಸ್ ಪೋಲೀಸರೊಡನೆ ಬಂದು ರಾಜ್ ತನ್ನನ್ನು ಹೊಡೆದು ಬಡಿದು ದೋಚಿರುವುದಾಗಿ ಪಿರ್ಯಾದನ್ನು ಕೊಟ್ಟ ಕಾರಣ, ಪೋಲೀಸರು ರಾಜ್ ಅನ್ನು ಅರೆಷ್ಟ್ ಮಾಡಿ ಕರೆದುಕೊಂಡು ಹೋಗುತ್ತಾರೆ. ಸಂತಸದಿಂದ ಕೊನೆಯಾಗ ಬೇಕಾಗಿದ್ದ ಮದುವೆ ಮನೆ ದುಃಖದ ಕಡಲಲ್ಲಿ ಮುಳುಗುತ್ತದೆ. ಕೆಲ ದಿನಗಳ ನಂತರ ಕೋರ್ಟಿನಲ್ಲಿ ರಾಜ್‌ದೇ ತಪ್ಪಿದೆಯೆಂದು ಸಾಬೀತಾಗಿ ಒಂದು ವರ್ಷಗಳ ಕಠಿಣ ಸಜೆಯನ್ನು ವಿಧಿಸಿ ರಾಜ್‌ಗೆ ಜೈಲಿಗೆ ತಳ್ಳಲಾಗುತ್ತದೆ.
***
ಇಂತಹ ಸಂದರ್ಭಗಳು ನಮ್ಮೂರಲ್ಲಿ ಹೊಸದೇನೂ ಅಲ್ಲ. ಕೊಂಕಣಿ ಎಮ್ಮೆಗೆ ಕೊಡತಿ ಪೆಟ್ಟು ಎಂದ ಹಾಗೆ ಕೆಲವರಿಗೆ ಏಟು ಬೀಳದೇ ಬಗ್ಗಲಾರರು. ರಾಜ್ ಪಾತ್ರದಲ್ಲಿ ಯಾರೇ ಇದ್ದರೂ ಏನು ಮಾಡಬಹುದಿತ್ತು? ತನ್ನ ತಂಗಿಯ ಮದುವೆ ನಿಂತು ಹೋಗುತ್ತಿರುವಾಗ ತಾನು ಕಾನೂನನ್ನು ಕೈಗೆ ತೆಗೆದುಕೊಂಡದ್ದು ಸರಿಯೇ, ತಪ್ಪೇ? ತೂಗುದೀಪ ಶ್ರೀನಿವಾಸರನ್ನು ಹೊಡೆಯದೇ ರಾಜ್ ಆತನ ಬಗ್ಗೆ ಕಂಪ್ಲೇಂಟನ್ನು ಬರೆದುಕೊಡಬಹುದಿತ್ತು, ಬೇರೆ ಯಾರಾದರೊಬ್ಬರ ಬಳಿ ಮದುವೆಯ ಮಹೂರ್ತ ಮೀರಿ ಹೋಗುವುದರೊಳಗೆ ಸಾಲ ಮಾಡಿ ಮುಂದೆ ಯೋಚಿಸಬಹುದಿತ್ತು, ಇತ್ಯಾದಿ ದಾರಿಗಳಿದ್ದರೂ ರಾಜ್ ಮಾಡಿದ್ದೇ ಸರಿ ಎನಿಸೋದಿಲ್ಲವೆ? ತನಗೆ ನ್ಯಾಯವಾಗಿ ಬರಬೇಕಾದ ಹಣವನ್ನು ಇನ್ನೊಬ್ಬರು ’ನೀನು ಕೊಟ್ಟೇ ಇಲ್ಲ’ ಎಂದರೆ ಅದನ್ನು ಕೇಳಿಕೊಂಡು ಸುಮ್ಮನೇ ನಕ್ಕು ಬರುವುದಕ್ಕೆ ಉಪ್ಪು ಹುಳಿ ಖಾರ ತಿಂದ ಯಾರಿಗಾದರೂ ಸಾಧ್ಯವಿದೆಯೇನು?