ನಾವು ಯಾವುದನ್ನೂ ಬದಲಾಯಿಸೋಕಾಗಲ್ಲ...
ಏನಪ್ಪಾ, ಬದಲಾವಣೆ ಹೆಸರಿನಲ್ಲಿ ಒಂದು ದೊಡ್ಡ ನೆಗೆಟಿವ್ ಐಡಿಯಾನ ಶೇರ್ ಮಾಡ್ತಾ ಇದ್ದೀನಲ್ಲ ಅಂತ ಯೋಚ್ನೆ ಮಾಡ್ಬೇಡಿ... ಇವತ್ತಿನ ವಿಷಯವೇ ಅಂತದ್ದು, ಬೇರೆ ಏನೂ ಇಲ್ಲ ಅಂದ್ರೆ, ಈ ಮಾತುಗಳು, ನಿಮ್ಮನ್ನ ಸ್ವಲ್ಪ ನನ್ನ ಥರ ಯೋಚ್ನೆ ಮಾಡೋಕೆ ಹಚ್ಚಿದ್ರೆ ಸಾಕು, ಅಷ್ಟೇ!
ತುಂಬಾ ಜನರಿಗೆ ಈಗಾಗ್ಲೇ ಮರೆತು ಹೋಗಿರಬಹುದು. ಕೇವಲ ಐದು ವರ್ಷಗಳ ಹಿಂದೆ, ಅಂದ್ರೆ ಮಾರ್ಚ್ ಹದಿನೈದು 2020 ರ ಹೊತ್ತಿಗೆಲ್ಲ, ನಮ್ಮನ್ನು ಕೋವಿಡ್ ಮಹಾಮಾರಿ ಆವರಿಸಿಕೊಂಡು ಬಿಟ್ಟಿತ್ತು. ಆಫ಼ೀಸಿನಲ್ಲಿ ಕೆಲಸ ಮಾಡೋರನ್ನ ಮನೆಯಿಂದಲೇ ಕೆಲಸ ಮಾಡಿ ಅಂದ್ರು. ಅಂಗಡಿಗಳೆಲ್ಲ ನಿಧಾನವಾಗಿ ಕ್ಲೋಸ್ ಆಗಿ, ಮಾನವ ನಿರ್ಮಿತ ಪ್ರಪಂಚ ಇನ್ನೇನು ಸ್ಟ್ಯಾಂಡ್ ಸ್ಟಿಲ್ ಅನ್ನೋ ಪರಿಸ್ಥಿತಿ ಆರಂಭವಾಗಿದ್ದು ಈ ದಿನ, ಐದು ವರ್ಷದ ಹಿಂದೆ.
ನೂರು ವರ್ಷಕ್ಕೆ ಒಮ್ಮೆ ಬರೋ ಇಂಥಾ ಮಹಾಮಾರಿಗಳನ್ನ ಅನುಭವಿಸಿದ್ದು, ನಮ್ಮ ಜನರೇಶನ್ನಿನ ಪುಣ್ಯ ಅಂದುಕೋ ಬೇಕೋ, ಅಥವಾ ಪಾಪಕರ್ಮ ಅಂದುಕೋ ಬೇಕೋ ಗೊತ್ತಿಲ್ಲ. ಆದ್ರೆ, ಪ್ರಪಂಚದಾದ್ಯಂತ ಲಕ್ಷಾಂತರ ಜನ ತಮ್ಮ ಜೀವ ಕಳೆದುಕೊಂಡ್ರು. ಈ ಮಹಾಮಾರಿಯ ದೆಸೆಯಿಂದ ಅದೆಷ್ಟೋ ಬಿಸಿನೆಸ್ಸುಗಳು ಮುಚ್ಚಿ ಹೋದವು. ಬಹಳಷ್ಟು ಜನರ ಬದುಕಿನಲ್ಲಿ ಅನೇಕ ತಿರುವುಗಳು ಬಂದವು.
ಅದನ್ನೆಲ್ಲ ಒಮ್ಮೆ ನೆನಪಿನ ಸುರುಳಿಗಳಲ್ಲಿ ವೀಕ್ಷೀಸೋದು, ಐದು ವರ್ಷಗಳ ನಂತರ ಒಂದು ವಿಶೇಷವೇ ಸರಿ.
***
ಬದಲಾವಣೆ ಬಹಳ ದೊಡ್ಡದು... ಯಾವಾಗಲೂ ಎಲ್ಲ ಸಮಯದಲ್ಲೂಅಗೋ ಬದಲಾವಣೆ ಮಾತ್ರ ನಿರಂತರ. ಮತ್ಯಾವುದೂ ಬದಲಾಗೋದಿಲ್ಲ ಅನ್ನೋದು ಈ ಹೊತ್ತಿನ ತತ್ವ ಅಷ್ಟೇ!
ಒಂದು ಸಣ್ಣ ಉದಾಹರಣೆ ಕೊಡ್ತೀನಿ: ಇದೇ ಐದು ವರ್ಷದ ಹಿಂದೆ, ನಮ್ಮ ಮನೆಯಲ್ಲಿ ನಾನು ಒಂದು ಮಾವಿನ ಸಸಿಯನ್ನ ಶುರು ಮಾಡ್ದೆ. ಸಸಿ ಅಥವಾ ಗಿಡವನ್ನ ಶುರುಮಾಡೋದು ಅಂದ್ರೆ ಏನರ್ಥ? ತೋಟಗಾರಿಕೆ ವಿಭಾಗದಲ್ಲಿ ಹೇಳಿಕೊಡೋ ಹಾಗೆ ಒಂದು ಗಿಡವನ್ನ ಕಸಿ ಮಾಡಿ ಮತ್ತೊಂದನ್ನು ಚಿಗುರಿಸೋ ವಿಚಾರ ಇದಲ್ಲ... ನಮ್ಮ ಅಮೇರಿಕದಲ್ಲಿ ಎಲ್ಲ ಕಾಲದಲ್ಲೂ ಸಿಗೋ ಮಾವಿನ ಹಣ್ಣಿನ ಗೊರಟೆ ಅಂದ್ರೆ ಬೀಜ ಒಂದನ್ನು ನಾನು ನನ್ನ ಕೋವಿಡ್ ಸಮಯದಲ್ಲಿನ ಆಫ಼ೀಸ್ ರೂಮಿನ ಒಂದು ಚಿಕ್ಕ ಪಾಟ್ ಒಂದರಲ್ಲಿ ಹೂತು ಹಾಕಿ, ಅದಕ್ಕೆ ದಿನಾ ಮುಂಜಾನೆ ನೀರು ಎರೆದ ಪರಿಣಾಮದಿಂದ ಆ ಗೊರಟೆಯಿಂದಲೂ ಒಂದು ಗಿಡ ಚಿಗುರಿಕೊಂಡಿತ್ತು. ಅದು ಆಶ್ಚರ್ಯ ಸೂಚಕ ಚಿಹ್ನೆಯಂತೆ ಚಿಗುರಾಗಿ ಒಡೆದು, ನಂತರ ಪ್ರಶ್ನಾರ್ಥಕ ಚಿಹ್ನೆಯಂತೆ ಅರಳಿಕೊಂಡು ದೊಡ್ಡ ಗಿಡವಾಗುವ ಎಲ್ಲ ಲಕ್ಷಣಗಳನ್ನೂ ತೋರಿತ್ತು.
ಅಂಗಡಿಯಿಂದ ತಂದ ಹಣ್ಣು ರುಚಿಯಾಗಿದೆ ಎಂದು, ಇನ್ನೂ ಜೀವವಿರೋ ಬೀಜವನ್ನು ಟ್ರ್ಯಾಷ್‌ನಲ್ಲಿ ಹಾಕಿ ಕಳಿಸದ ನನ್ನ ಮನಸ್ಥಿತಿಯಿಂದ ಆರಂಭಗೊಂಡಿತ್ತು ಈ ಪ್ರಹಸನ. ಆಫ಼ೀಸಿನ ರೂಮಿನಲ್ಲಿ ನಾನು ಒಬ್ಬನಿಗೆ ಕೆಲಸ ಮಾಡುವ ಹೊತ್ತಿಗೆ ಕಂಪನಿ ಸಿಗಲಿ ಎಂದು ಸುಮ್ಮನೇ ಮಣ್ಣಿನಲ್ಲಿ ಹೂತು ಹಾಕಿ, ಒಂದು ತೇವವಾದ ವಾತಾವರಣ ನಿರ್ಮಿಸುವ ಹೊತ್ತಿಗೆ, ಮಾವಿನ ಬೀಜದಿಂದ ಮಾವಿನ ಗಿಡವೇ ಹುಟ್ಟಿಬರುವುದು ಸಹಜ ಎಂದು ಹೇಳಿಕೊಳ್ಳುತ್ತಾ, ಒಬ್ಬ ವಿಜ್ಞಾನದ ವಿದ್ಯಾರ್ಥಿಯಾಗಿ ಆ ಗಿಡದ ಪ್ರತಿಯೊಂದು ಮಿಲಿ ಮೀಟರು, ಇಂಚು ಬೆಳವಣಿಗೆಯನ್ನೂ ಪ್ರತಿದಿನ ಹತ್ತಿರದಿಂದ ಗಮನಿಸಿದ ನನಗೆ ಬಹಳಷ್ಟು ಆಶ್ಚರ್ಯಗಳಂತೂ ಖಂಡಿತ ಆಗಿವೆ.
ಸರಿ, ಮಾವಿನ ಬೀಜದಿಂದ ಹುಟ್ಟುವ ಗಿಡವನ್ನಂತೂ ಬದಲಾಯಿಸಲಾಗಲಿಲ್ಲ... ಆದರೆ, ಅದರ ಬೆಳವಣಿಗೆಯನ್ನು ಬದಲಾಯಿಸಬಹುದಿತ್ತೇ?
ನಮ್ಮ ನ್ಯೂ ಜೆರ್ಸಿಯಲ್ಲಿ ಇರೋ ಭಾರತೀಯ ಕುಟುಂಬಗಳು ತಮ್ಮ ಮನೆಗಳಲ್ಲಿ ಒಂದಲ್ಲ ಒಂದು ಗಿಡವನ್ನು ಬೆಳೆಸೋದು ಎಲ್ಲರಿಗೂ ಗೊತ್ತಿರುವ ಒಂದು ಪದ್ದತಿ. ಈ ಒಂದು ಪದ್ಧತಿ, ಬಳಕೆಯಾಗಿ ಬೆಳೆದು, ಸಂಪ್ರದಾಯವಾಗಿ ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿ ಒಂದು ಸುಂದರವಾದ ಪರಂಪರೆಯಾಗೋದು ನನ್ನನ್ನು ಯಾವಾಗಲೂ ಯೋಚಿಸುವಂತೆ ಮಾಡುತ್ತದೆ. ಅಮೇರಿಕಕ್ಕೆ ಬಂದ ಭಾರತೀಯರು, ತಮ್ಮ ತಮ್ಮ ಮನೆಗಳಲ್ಲಿ ತುಳಸಿ, ಮಲ್ಲಿಗೆ, ಮಾವು, ಕರಿಬೇವು, ಬಾಳೆ, ನಿಂಬೆ, ದಾಸವಾಳ, ಸಾಂಬಾರುಬಳ್ಳಿ, ಮೊದಲಾದ ಗಿಡಗಳನ್ನು ಬೆಳೆಸಿಕೊಳ್ಳುವಂತೆ - ಅಮೇರಿಕದಿಂದ ಮತ್ತೊಂದು ದೇಶಕ್ಕೆ ವಲಸೆ ಹೋದವರು ಏನನ್ನು ಬೆಳೆಸಿಕೊಳ್ಳುತ್ತಾರೋ ಎನ್ನುವ ಕುತೂಹಲ ನನಗಿದೆ.
ನಮ್ಮ ಮನೆಯ ಗಿಡಗಳು ಹೊರ ವಾತಾವರಣಕ್ಕೆ ಬರುವುದು ವರ್ಷದಲ್ಲಿ ಕೇವಲ ನಾಲ್ಕು ತಿಂಗಳುಗಳು ಮಾತ್ರ. ಮೇ ಕೊನೆಯಲ್ಲಿ ಬರುವ ಮೆಮೋರಿಯಲ್ ಡೇ ವೀಕೆಂಡ್‌ನಿಂದ ಶುರುವಾಗುವ ನಮ್ಮ ಅನಫ಼ಿಷಿಯಲ್ ಸಮ್ಮರ್, ಸೆಪ್ಟೆಂಬರ್ ಮೊದಲ ವಾರದಲ್ಲಿ ಬರುವ ಲೇಬರ್ ಡೇ ವರೆಗೆ ಅಷ್ಟೇ. ಇನ್ನುಳಿದ ಎಂಟು ತಿಂಗಳುಗಳ ಕಾಲ ಈ ಗಿಡಗಳು, ಅದರಲ್ಲೂ ಟ್ರಾಪಿಕಲ್ ಪ್ರದೇಶದ ಗಿಡಗಳಾದ ಬಾಳೆ, ಮಾವು, ಬೇವು - ಇತ್ಯಾದಿ ಎಲ್ಲ ನಮ್ಮ ಒಳಾಂಗಣದ ಬಂಧಿಗಳೇ!
ಗಿಡಗಳಿಗೆಲ್ಲ ಜೀವವಿದೆ ಎಂದು ತೋರಿಸಿಕೊಟ್ಟ ವಿಜ್ಞಾನಿ ಬೋಸ್ ಅವರ ಸಂಶೋಧನೆಯಲ್ಲಿ ಎಷ್ಟೊಂದು ಸತ್ಯವಿದೆ! ಇಂದಿಗೂ ಸಹ ನೀವು ನಮ್ಮ ನ್ಯೂ ಜೆರ್ಸಿಯ ಯಾರದೇ ಮನೆಗೆ ಹೋಗಿ ನೋಡಿ, ಅವರೆಲ್ಲ ತಮ್ಮ ಒಳಾಂಗಣದ ಗಿಡಗಳನ್ನು ಬಹಳ ಪ್ರೀತಿಯಿಂದ ಸಾಕಿಕೊಂಡಿರುವುದರ ಜೊತೆಗೆ, ಅವುಗಳ ಜೊತೆಗೆ ನಿತ್ಯವೂ ಒಂದು ಆಂತರಂಗಿಕವಾಗಿ ಸಂಭಾಷಣೆಯಲ್ಲಿಯೂ ತೊಡಗಿಕೊಂಡಿರುತ್ತಾರೆ! ಹಾಗಾಗಿ, ಈಗಿಡಗಳು ನಮ್ಮ ಸಾಕು "ಪ್ರಾಣಿ"ಗಳಾಗಿ ಹೋಗುತ್ತವೆ.
ಆದರೆ, ಇಲ್ಲಿಯೇ ನನಗೊಂದು ಸಂಕಷ್ಟದ ವಿಷಯ ಬಂದಿರೋದು. ಯಾವುದೋ ಟ್ರಾಪಿಕಲ್ ಪ್ರದೇಶದಲ್ಲಿ ಆರಾಮವಾಗಿ ಬಿಸಿಲನ್ನು ತಿಂದು, ನೆಲವನ್ನು ಬಿರಿದು ಆಳದಲ್ಲಿ ಬೇರುಗಳನ್ನು ಬೆಳೆಸುತ್ತಾ ಗಗನಚುಂಬಿಗಳಾಗಿ ಬೆಳೆಯುವ potential ಇರುವ ಈ ಗಿಡಗಳನ್ನು ನಾವು indoor flower potಗಳಲ್ಲಿ ಹಾಕಿ ಅವುಗಳ ಬೆಳವಣಿಗೆಯ ವಿಶಾಲತೆಯನ್ನು ಕುಂಠಿತಗೊಳಿಸುತ್ತಿದ್ದೇವೇನೋ ಅನಿಸೋದಿಲ್ಲವೇ? ಅವುಗಳು pot ನಲ್ಲಿ ನಿಧಾನವಾಗಿ ಬೆಳೆಯೋದನ್ನ ಒಂದು ದಯನೀಯ ಸ್ಥಿತಿ ಅಂತ ನೋಡಬಹುದೇ?
ಹಾಗಾದ್ರೆ, ನಾವು ನಿಜವಾಗಿ ಈ ಗಿಡಗಳನ್ನು ಪೋಷಿಸುತ್ತಿದ್ದೇವೆಯೋ? ಅಥವಾ ಪೋಷಣೆಯ ಹೆಸರಿನಲ್ಲಿ ಅವುಗಳನ್ನು ಶೋಷಿಸುತ್ತಾ ಅವುಗಳ ಬೆಳವಣಿಗೆಗೆ ತಡೆಯಾಗಿದ್ದೇವೆಯೋ?
ನಮ್ಮ ಮನೆಯ ಟ್ರ್ಯಾಶ್ ಚೀಲವನ್ನು ಸೇರಿ, dump truck ನಲ್ಲಿ ಸವಾರಿ ಮಾಡಿ,
ಲ್ಯಾಂಡ್‌ಫ಼ಿಲ್ ಅನ್ನು ಹೊಕ್ಕು ಕೊಳೆತು ಗೊಬ್ಬರವಾಗಬಹುದಾಗಿದ್ದ, ಮಾವಿನ ಗೊರಟಿಗೆ ನಾನು ನನ್ನ ಆಫ಼ೀಸಿನ ರೂಮಿನಲ್ಲಿ ಜಾಗ ಕೊಟ್ಟು ಹುಟ್ಟಿ-ಬೆಳೆಯಲು ಅವಕಾಶ ಕೊಟ್ಟಿದ್ದೇನೆಂದು ಸಂತೋಷ ಪಡಬೇಕೇ? ಅಥವಾ ಯಾವುದೋ warm ಆಗಿರೋ ಭೂ ಪ್ರದೇಶದಲ್ಲಿ ಬಿರಿದು, ಹಿರಿದು, ತಿಂದು, ತೇಗಿ ಸಂತೋಷ ಪಟ್ಟು, ಎಂಭತ್ತು-ನೂರು ಡಿಗ್ರಿ ಫ಼್ಯಾರನ್‌ಹೀಟ್ temperature ವೆದರ್ ನಲ್ಲಿ ಸೂರ್ಯನ ಜೊತೆಗೆ ಸರಸವಾಡುತ್ತಾ, ಮುಂಬರುವ ಮಾನ್ಸೂನ್ ಮಾರುತವನ್ನು ನಿರೀಕ್ಷಿಸುತ್ತಾ, ಈ ತಿಂಗಳ ಕೊನೆಗೆ ಬರುವ ಯುಗಾದಿಯ ಹೊತ್ತಿಗೆಲ್ಲ - ತನ್ನ ಪಕ್ಕದಲ್ಲೇ ಇರುತ್ತಿದ್ದ ಹೊಂಗೆ ಮರಗಳ ಟೊಂಗೆಗಳಿಂದ ಹೊರಹೊಮ್ಮುತ್ತಿದ್ದ ಚಿಗುರುಗಳಿಗೆ ಪೈಪೋಟಿಕೊಂಡುವಂತೆ, ತಾನೂ ತನ್ನ ಚಿಗುರನ್ನು ಟಿಸಿಲಾಗಿ ಒಡೆದು ಹೂ ಬಿಸಿಲಿಗೆ ಮುಖ ಮಾಡುವಂತೆ ಮಾಡುತ್ತಿದ್ದ ಅವಕಾಶವನ್ನೇ ಈ ಗಿಡದಿಂದ ತಪ್ಪುವಂತೆ ಮಾಡುತ್ತಿದ್ದೇನೆಯೇ?
ನಾವು ಈ ಗಿಡಗಳನ್ನಾದರೂ ಏಕೆ ಬೆಳೆಸುತ್ತೇವೆ? ನಮ್ಮ ಮನೆಯಲ್ಲಿ ಎರಡು ಬಾಳೆಗಿಡಗಳ ಕಂದನ್ನು ನೆಟ್ಟು ಹಲವು ವರ್ಷಗಳಿಂದ ಪೋಷಿಸಿಕೊಂಡು ಬಂದರೂ ಅವು ಎರಡು ಅಡಿಗಳಿಗಿಂತ ಹೆಚ್ಚು ಬೆಳೆದಿಲ್ಲ. ಕೋವಿಡ್ ಸಮಯದಲ್ಲಿ ಹುಟ್ಟಿದ ಮಾವಿನ ಗಿಡ ವರ್ಷಕ್ಕೆರಡು ಎಲೆಗಳಂತೆ ಚಿಗುರಿಸುತ್ತಾ ಇನ್ನೂ ಒಂದೂವರೆ ಅಡಿ ಎತ್ತರವನ್ನೂ ತಲುಪಿಲ್ಲ. ಮೂರು ಭಿನ್ನ ವರೈಟಿಯ ಮಲ್ಲಿಗೆ ಗಿಡಗಳು ಸ್ವಲ್ಪ ವೇಗವಾಗಿ ಬೆಳೆದು ಕಾಲಕಾಲಕ್ಕೆ ಒಂದೆರಡು ಹೂವುಗಳನ್ನಾದರೂ ಬಿಟ್ಟಿವೆ. ಇನ್ನು ಮೂಲೆಯಲ್ಲಿ ಅಗಲವಾಗಿ ಹರಡಿಕೊಂಡ ಕರಿಬೇವಿನ ಸಸಿ, ದೊಡ್ಡ ಮರವಾಗುವ ಎಲ್ಲ ಲಕ್ಷಣಗಳನ್ನು ತೋರಿದರೂ, ಅದು ಇದ್ದ ಪಾಟ್ ಅದರ ಬೆಳವಣಿಗೆಯನ್ನು ಖಂಡಿತಾ ಕುಂಠಿತ ಗೊಳಿಸಿದೆ ಎನ್ನಬಹುದು.
(ನಾವು ಕರಿಬೇವಿನ ಗಿಡವನ್ನು ಬೆಳೆಸಿದರೂ, ಅಡುಗೆ ಮಾಡಲು ಅದರ ಎಲೆಗಳನ್ನು ಬಳಸದೇ, ಅಂಗಡಿಯಲ್ಲಿ transperant plastic packet ನಲ್ಲಿ ಕರಿಬೇವಿನ ಎಸಳುಗಳನ್ನು purchase ಮಾಡುವುದಂತೂ ತಪ್ಪಿಲ್ಲ ಏಕೆ, ಅನ್ನುವುದು ಮತ್ತೊಂದು ಆಶ್ಚರ್ಯದ ವಿಷಯ ಬಿಡಿ.)
ವರ್ಷದ ಆರರಿಂದ ಎಂಟು ತಿಂಗಳು ಚಳಿಯಲ್ಲಿ ತೊಳಲುವ ಈ ಗಿಡಗಳು ಸಂತೋಷವಾಗಿದ್ದಾವೆಯೇ? ನಮ್ಮ pet project ಹೆಸರಿನಲ್ಲಿ ನಾವು ಇವುಗಳನ್ನು ಪೋಷಿಸುತ್ತಿದ್ದೇವೆಯೋ, ಶೋಷಿಸುತ್ತಿದ್ದೇವೆಯೋ?
(ಕೆಲವೊಮ್ಮೆ ಅನ್ನಿಸುತ್ತದೆ, ಈ ಮಾವಿನ ಗಿಡವನ್ನು ಫ಼್ಲೋರಿಡಾದಲ್ಲಿರುವ ನನ್ನ ಸ್ನೇಹಿತನ ಮನೆಗೆ ಕಳುಹಿಸಿ, ಅವನ ತೋಟದಲ್ಲಿ ನೆಟ್ಟು ಅದರ ಸಹಜ ಪೋಷಣೆಗೆ ಅವಕಾಶಕೊಟ್ಟು, ಅದಕ್ಕೂ ನನಗೂ ಒಂದು "ಬಿಡುಗಡೆ" ಸಿಗುವಂತೆ ಮಾಡಿದರೆ ಹೇಗೆ? ಎಂದು.)
ಹೌದು, ಈ ಗಿಡಗಳು, ಅಷ್ಟು ಹಾರ್ಡ್ ಆದ ನೆಲವನ್ನು ಬಗೆದು ಬೇರು ಬೆಳೆಸಿಕೊಂಡು ಹೋಗುವ ಶಕ್ತಿ ಇರುವ ಬೀಜಗಳಲ್ಲವೇ? ಹಾಗಿರುವಾಗ, ಈ ಬೇರುಗಳಿಗೆ, ಸುಟ್ಟ ಮಣ್ಣಿನ ಪಾಟ್‌ನ ಬುಡವನ್ನು ಕೊರೆದುಕೊಂಡು ಹೊರಬರಲಾರದ ಅಸಹಾಯಕತೆಯಾದರೂ ಏಕೆ? ಅದು ಮತ್ತೊಂದು ದಿನದ ವಿಚಾರವಾಗಲಿ ಬಿಡಿ.
ಈಗ ಹೇಳಿ, ನಮ್ಮ ಕೈಲಿ ಏನಿದೆ?
ನಾವು ಏನನ್ನು ಬದಲಾಯಿಸಬಲ್ಲೆವು? ಬೀಜದಲ್ಲಿ ಸುಪ್ತವಾಗಿ ಅಡಗಿರೋ ಮಹಾನ್ ಶಕ್ತಿಯ ಮುಂದೆ, ನಾವು ತಿಂದ ಗೊರಟೆಯನ್ನು ಮಣ್ಣಿನಲ್ಲಿ ಹೂತು ಅದು ಮೊಳಕೆ ಒಡೆಯುವ ಪ್ರಸಂಗವನ್ನು ನೋಡುತ್ತಾ ಏನನ್ನೋ ಸೃಷ್ಟಿಸಿದೆವು ಅಂದುಕೊಳ್ಳುವುದಿದೆಯಲ್ಲಾ ಅದು ಎಂಥಾ ಎಳಸುತನದ ಪ್ರವೃತ್ತಿ ಅನ್ನಿಸೋದಿಲ್ಲವೇ?
ನಾವು ಉಸಿರಾಡಲು ಹಸಿರು ಬೇಕು, ನಿಜ - ಹಾಗಂತ, ಸೊಂಪಾಗಿ ಬೆಳೆಯಬಹುದಾದ, ಮಾವು-ಬೇವು-ತಾಳೆ-ತೆಂಗುಗಳನ್ನು ನಮ್ಮ ನಿಯಂತ್ರಣದಲ್ಲಿ ಬೆಳೆಸಿಕೊಂಡು, ಅವುಗಳ full potenial ಅನ್ನು ತಲುಪೋ ಒಂದು ವ್ಯವಸ್ಥ್ಯೆಯನ್ನ ನಿರ್ಮಿಸಿಕೊಡದಿದ್ದಲ್ಲಿ ಅದು ಒಂದು ಅಪರಾಧವಾಗೋದಿಲ್ಲವೇ?
ಅದು ಒಬ್ಬ ಕವಿಯನ್ನು ಕತ್ತಲಿನ ಕೋಣೆಯಲ್ಲಿ ಕೂಡಿ ಹಾಕಿದಷ್ಟೇ ಕ್ರೂರ. ಒಬ್ಬ ಶಿಲ್ಪಿಯ ಕೈಗಳನ್ನು ಕತ್ತರಿಸಿದಷ್ಟೇ ಘೋರ. ಒಬ್ಬ ಕಲಾವಿದನಿಗೆ ಬಣ್ಣಗಳನ್ನಾಗಲೀ, ಕುಂಚವನ್ನಾಗಲೀ ಕೊಡದಷ್ಟೇ ದುಸ್ತರವಾದದ್ದು ಅನ್ನಿಸುತ್ತೆ.
ಆದ್ದರಿಂದಲೇ, ಇರುವಷ್ಟು ಈ ಗಿಡಗಳು ಎಷ್ಟು ದಿನವಾದರೂ ಇರಲಿ. ನಾನು ಮತ್ತಿನ್ಯಾವ ಗಿಡಗಳನ್ನೂ ಹಾಕೋದಿಲ್ಲ, ಸಂಬಾಳಿಸೋದಿಲ್ಲ - ಅವುಗಳು annual, perennial ಆಗಿ ನಮ್ಮ ಹೊರಾಂಗಣದಲ್ಲಿ ವರ್ಷಕ್ಕೊಮ್ಮೆ ಬಂದರೆ ಬರಲಿ, ಇಲ್ಲವೆಂದರೆ ಇಲ್ಲ. ಈ ಸಂದರ್ಭದಲ್ಲೇ ನಮ್ಮ ಮನೆಯ ಗುಲಾಬಿ ಗಿಡಗಳನ್ನು ಕಂಡರೆ ನನಗೆ ಅತ್ಯಂತ ಒಲವು ಮತ್ತು ಹೆಮ್ಮೆ ಕೂಡ... ಅದೆಂಥಾ ಚಳಿಯೇ ಇದ್ದಿರಲಿ, ವಸಂತನ ಆಗಮನ ಆದೊಡನೆ ಮತ್ತೆ ಹೊಸತನವನ್ನು ಆರಂಭಿಸೋ ಈ ಗಿಡಗಳು ಬಹಳ ಗಟ್ಟಿ!
ನಮ್ಮ ನ್ಯೂ ಜೆರ್ಸಿಯಲ್ಲಿ, ಖಂಡಿತ ಮುಂಬರುವ ಯುಗಾದಿಯಂದು, ಹೊಂಗೆ ಹೂವ ತೊಂಗಲಲ್ಲಿ ಬೃಂಗದ ಸಂಗೀತದ ಕೇಳಿ ಮತ್ತೆ ಕೇಳಿ ಬರೋದಿಲ್ಲ... ಅವತ್ತು, ಮಾಮೂಲಿಗಿಂತ ಸ್ವಲ್ಪ ಬಿಸಿಲು ಹೆಚ್ಚಿದ್ದರೆ "Happy Yugaadi!" ಎಂದು ಸಂಭ್ರಮಿಸುತ್ತಾ ಒಂದಿಷ್ಟು WhatsApp message ಗಳನ್ನು ಕಳಿಸಿಕೊಂಡೇವು. ವಾರಾಂತ್ಯದಲ್ಲೇ ಹಬ್ಬ ಬಂದಿದ್ದರಿಂದ ಒಂದಿಷ್ಟು ವಿಶೇಷ ಲವಲವಿಕೆಗಳಿರಬಹುದು, ಅಷ್ಟೇ!