Sunday, May 14, 2006

ದೇಶದ್ರೋಹ ಮತ್ತು ದೇಶಪ್ರೇಮಗಳ ನಡುವಿನ ಸಣ್ಣ ಗೆರೆ

ಇಂದಿನ ಮಾಹಿತಿ ಯುಗದಲ್ಲಿ ನಾವು ಹಲವಾರು ಮೂಲಗಳಿಂದ ವಿಷಯಗಳನ್ನು ಗ್ರಹಿಸುತ್ತೇವೆ, ಸಂಗ್ರಹಿಸುತ್ತೇವೆ. ಆದರೆ ಪತ್ರಿಕೆಗಳು, ಅಂತರ್ಜಾಲ ತಾಣಗಳು, ರೇಡಿಯೋ, ಟಿವಿ. ಇತ್ಯಾದಿಗಳು ಸುದ್ದಿ, ವಿಚಾರಗಳ ಮಹಾಪೂರವನ್ನೇ ಹರಿಸುತ್ತಿರುವಾಗ ಕೆಲವೊಂದಿಷ್ಟನ್ನು ಕಳೆದುಕೊಳ್ಳಬೇಕಾಗುತ್ತದೆ, ಈ ಕಳೆದುಕೊಳ್ಳುವುದರ ಹಿಂದೆ ಹಲವಾರು (ಕ್ವಾಲಿಟಿ, ಕಂಟೆಂಟ್, ವರದಿಗಳ ಸ್ವಾರಸ್ಯ, ಮೌಲ್ಯ, ಪಕ್ಷಪಾತ, ಏಕಪಕ್ಷೀಯ ನಿಲುವು, ಇತ್ಯಾದಿ) ಕಾರಣಗಳಿರಬಹುದಾದರೂ ಕೆಲವೊಮ್ಮೆ ಭಾವನೆಗಳೂ, ನಮ್ಮ ನಂಬಿಕೆಗಳೂ ಕಾರಣವಾಗುತ್ತವೆ. ಈ ದಿನ NPR ನ Weekend editionನಲ್ಲಿ ಇರಾಕಿನ ಮಾಜೀ ಯೋಧನೊಬ್ಬನನ್ನು ದೊಡ್ಡ ಹೀರೋನನ್ನಾಗಿ ಚಿತ್ರಿಸಿದ ಅವತರಣಿಕೆಯೊಂದು ಬಿತ್ತರವಾಯಿತು - ತನ್ನ ದೇಶವನ್ನು ಅಂದು ಜೋಪಾನ ಮಾಡಿಕೊಳ್ಳುವ ಮನಸ್ಸಿರದವನು ಅಮೇರಿಕದ ನೀರು ಕುಡಿದ ಕೆಲವೇ ದಿನಗಳಲ್ಲಿ "...I have a very big, huge faith in the future..." ಎಂದದ್ದು ನನಗಂತೂ ಬಾಲಿಶವಾಗಿ ಕಾಣಿಸಿತು.

***

NPR ನ Weekend Editionನಲ್ಲಿ ಇರಾಕೀ ಮಿಲಿಟರಿಯನ್ನು ಅಮೇರಿಕದವರು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮೈಲಿಗಲ್ಲೊಂದನ್ನು ಮುಟ್ಟಲಾಗಿದೆ ಎಂಬ ವರದಿ ಇಂದು ಮುಂಜಾನೆ ಪ್ರಕಟವಾಯಿತು. ಈ ವರದಿಯಲ್ಲಿ ೨೮ ವರ್ಷ ವಯಸ್ಸಿನ ಆರ್ಕನ್ ಎನ್ನೋ ಇರಾಕೀ ಆರ್ಮೀ ಕ್ಯಾಪ್ಟನ್ ಒಬ್ಬನು ಅಮೇರಿಕದ ಎಲೈಟ್ ಸೈನಿಕರು ಮಾತ್ರ ಮುಗಿಸಬಹುದಾದ ರೇಂಜರ್ ಟ್ರೈನಿಂಗ್‌ನ್ನು ಫೋರ್ಟ್ ಬೆನ್ನಿಂಗ್, ಜಾರ್ಜಿಯಾ ದಲ್ಲಿ ಮುಗಿಸಿದನೆಂದೂ, ಯಶಸ್ವಿಯಾಗಿ ತರಬೇತಿ ಮುಗಿಸಿದ ಉಳಿದ ೧೮೬ ಜನರಲ್ಲಿ ಆರ್ಕನ್ ಕೂಡಾ ಒಬ್ಬನೆಂದೂ ಹಾಗೂ ತನ್ನ ದಿನ ನಿತ್ಯದ ಚಟುವಟಿಕೆಳಲ್ಲಿ ಆದಷ್ಟು 'ಅಮೇರಿಕನ್' ಶೈಲಿಯನ್ನು ಬಳಸುತ್ತಾನೆಂದೂ ಆರ್ಕನ್‌ನ್ನು ಪರಿಚಯಿಸಿದರು. ಇರಾಕಿನಲ್ಲಿ ಅಮೇರಿಕನ್ ಮಾದರಿಯ ಆರ್ಮಿಯನ್ನು ಸ್ಥಾಪಿಸುವುದು ಇವೆಲ್ಲದರ ಉದ್ದೇಶ, ಆದರೆ ಅದು ಎಷ್ಟರ ಮಟ್ಟಿಗೆ ಸಫಲವಾಗುತ್ತೋ ಅನ್ನೋದು ಸ್ಟೋರಿಯ ಹಿನ್ನೆಲೆಯಾದರೂ ವರದಿಗಾತ್ರಿ ಡೆಬ್ರಾ ಏಮೋಸ್ (Deborah Amos) ಉತ್ತರವನ್ನಾಗಲೇ ಕಂಡುಕೊಂಡ ಹಾಗಿತ್ತು.

ಇರಾಕ್‌ನಲ್ಲಿ ಅಳಿದುಳಿದ ಯುವಕರನ್ನು ಮಿಲಿಟರಿಗೆ ಸೇರಿಸಿಕೊಂಡು ಅವರಲ್ಲಿ ಆಯ್ದ ಕೆಲವರನ್ನು ಅಮೇರಿಕಕ್ಕೂ ಕರೆದುಕೊಂಡು ಬಂದು, ಅಮೇರಿಕದ ಫ್ಲೋರಿಡಾ ಹಾಗೂ ಜಾರ್ಜಿಯಾದ ಮಿಲಿಟರಿ ಕ್ಯಾಂಪ್‌ಗಳಲ್ಲಿ ಬೂಟ್‌ಕ್ಯಾಂಪ್‌ಗಿಂತಲೂ ಹೆಚ್ಚು ಇಂಟೆನ್ಸ್ ಆಗಿ ತರಬೇತಿಯನ್ನು ಕೊಟ್ಟು ಅವರನ್ನು ತಮ್ಮ ತಾಯ್ನಾಡಿಗೆ ಕಳಿಸಿ ಮಿಲಿಟರಿಯಲ್ಲಿ ಹೆಚ್ಚಿನ ಸ್ಥಾನವನ್ನು ಕೊಟ್ಟರೆ... ಎಂಬುದು ಅಮೇರಿಕನ್‌ರ ತರ್ಕ. ಈ ತರಬೇತಿ ಎಷ್ಟು ತೀಕ್ಷ್ಣವಾಗಿರುತ್ತದೆ ಎಂದರೆ ಸುಮಾರು ಅರ್ಧಕರ್ಧ ಜನ ಮಧ್ಯದಲ್ಲಿಯೇ ಬಿಡುತ್ತಾರೆಂತಲೂ, ತರಬೇತಿಯನ್ನು ಯಶಸ್ವಿಯಾಗಿ ಪೂರೈಸುವರು ದಿನವಿಡೀ ತಮ್ಮ ದೇಹ ಹಾಗೂ ಮನಸ್ಸನ್ನು ಕಾಂಬ್ಯಾಟ್ ಸಿಚುವೇಷನ್‌ಗೆ ಒಡ್ಡಿಕೊಂಡು ತಮ್ಮನ್ನು 'ಗಟ್ಟಿ'ಮಾಡಿಕೊಳ್ಳುತ್ತಾರೆಂತಲೂ ಕೇಳಿದೆ.

ಈ ವರದಿಯಲ್ಲಿ ಆರ್ಕನ್ ಎಂಬ ಹಳೆಯ ಸದ್ದಾಮ್ ಸರ್ಕಾರದ ಸಮಯದಲ್ಲಿ ಎಲೈಟ್ ಫೋರ್ಸ್ ನಲ್ಲಿದ್ದ ಆರ್ಮಿಯವನ ಕಥೆಯನ್ನು ಬಣ್ಣಿಸಿದರು - ಕಥೆಯ ಮೊದಲಿಗೆ ಆತ ಸದ್ದಾಮನ ಆಡಳಿತದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದವನೆಂದೂ, ೨೦೦೩ ರಲ್ಲಿ ಅಮೇರಿಕನ್ ಮಿಲಿಟರಿ ಬಾಗ್ದಾದ್ ಅನ್ನು ಪ್ರವೇಶಿಸಿದ ತಕ್ಷಣ ಈತ ತನ್ನ ಹುದ್ದೆಯನ್ನು ತ್ಯಜಿಸಿ ಈಗ ಅಮೇರಿಕನ್ನರ ಆಡಳಿತದಡಿಯಲ್ಲಿ ಮತ್ತೆ ಮಿಲಿಟರಿಗೆ ಸೇರಿಕೊಂಡು 'ಮೇಲೆ'ಬರುವ ಕನಸುಗಳನ್ನು ಇಟ್ಟುಕೊಂಡಿದ್ದಾನೆಂತಲೂ ಕೇಳಿದೆ.

ಈ ಮೇಲಿನ ಒಂದು ಸಾಲನ್ನು ಬರೆದು ಓದಿದ ಡೆಬ್ರಾ ಯಾವ ಭಾವನೆಯೂ ಇಲ್ಲದೇ ಓದಿ ಬಿಟ್ಟಳು ಆದರೆ ನಾವು ಅದನ್ನು ಕುರಿತು ಒಂದು ಕ್ಷಣ ಯೋಚಿಸೋಣ - ಈತ ತನ್ನ ದೇಶದ ಮಿಲಿಟರಿಯಲ್ಲಿ ಕೆಲಸಮಾಡುತ್ತಿದ್ದವ, 'ವೈರಿ'ಪಡೆ ಬಂದ ತಕ್ಷಣವೇ ಕಂಬಿ ಕಿತ್ತವನು, ಇಂಥವನು ದೇಶದ್ರೋಹಿಯಾಗೋದಿಲ್ಲವೇ? ಯುದ್ಧದಲ್ಲಿ ತೊಡಗಿದ ಆರ್ಕನ್‌ಗೆ ಅಮೇರಿಕದ ಸೈನ್ಯ ಬಾಗ್ದಾದ್ ತಲುಪಿದ ತಕ್ಷಣ ಕೈ ಚೆಲ್ಲುವಂತೆ ಹಿಂದೆ ತರಬೇತಿ ನೀಡಲಾಗಿತ್ತೇ? ಅಥವಾ ತನ್ನ ದೇಶದ ಅಧ್ಯಕ್ಷನ ಆಡಳಿತದ ಮೇಲೆ ಮೊದಲಿಂದಲೂ ಅಸಮಧಾನ ಇದ್ದು ಅದನ್ನು ತನ್ನ ಸದುಪಯೋಗಕ್ಕೆ ಬಳಸಿಕೊಂಡು 'ವೈರಿ'ಪಡೆಯನ್ನು ಸೇರುವ ಯೋಜನೆ ಆತನ ಮನಸ್ಸಿನಲ್ಲಿತ್ತೇ? ಆದರೆ ಇದೇ ವರದಿಯಲ್ಲಿ ಆರ್ಕನ್ ತನ್ನ ದೇಶದವರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದನ್ನೂ ಕೇಳಿದೆ - ಆಕ್ರಮಣಕಾರರನ್ನು ಹೊರಗಿನವರು ಎಂದು ಕರೆದವನು, ಅವರನ್ನು ಹುಟ್ಟು ಹಾಕಿದ್ದು ಯಾರು ಎಂದು ಯೋಚಿಸಿದ್ದರೆ ಒಳ್ಳೆಯದಿತ್ತು. ಯುದ್ಧ ಸರಿಯೋ ತಪ್ಪೋ, ಅದು ಯಾವ ಕಾರಣಕ್ಕೆ ಆಗುತ್ತದೆ, ಬಿಡುತ್ತದೆ ಎನ್ನುವುದು ಒಂದು ಸೈನ್ಯದಲ್ಲಿ ಕೆಲಸಮಾಡುತ್ತಿರುವವರಿಗಿಂತ ಮಿಗಿಲಾದುದು (ಮುಖ್ಯವಾಗಿ ಪ್ರತಿ ಯುದ್ಧದ ಹಿಂದೆ ಅಂತಹ ವಿವೇಚನೆ ಇದ್ದರೆ ಯುದ್ಧವಾದರೂ ಏಕೆ ಆಗುತ್ತಿತ್ತು). ಸರಿ, ಇಂಥವನನ್ನು ತಂದು ಅಮೇರಿಕನ್ನರು ತರಬೇತಿ ಕೊಟ್ಟ ಮಾತ್ರಕ್ಕೆ ನಾಳೆ ತನ್ನ ದೇಶವನ್ನು ಈತ ರಕ್ಷಿಸುತ್ತಾನೆ ಎನ್ನುವುದಕ್ಕೆ ಏನು ಗ್ಯಾರಂಟಿ ಇದೆ? ಸದ್ದಾಮನ ಸರ್ಕಾರದ ವಿರುದ್ಧ ಸಾವಿರ ಅಲಿಗೇಷನ್‌ಗಳಿರಬಹುದು (ಅವನು ತಪ್ಪನ್ನು ಮಾಡಿಲ್ಲ ಎನ್ನುವುದು ನನ್ನ ನಿಲುವಲ್ಲ) ಆದರೆ ಅಮೇರಿಕದವರು ಸುಳ್ಳಿನ ಸರಮಾಲೆಯನ್ನು ಸೃಷ್ಟಿಸಿ, ನೆಟ್ಟಗಿದ್ದ ದೇಶವನ್ನು ಕಲಕಿ, ಈಗ ಅದರಿಂದ ಹೊರಬರಲು ಪ್ರಯತ್ನಿಸುತ್ತಾ 'ಇಂಥ' ಸಮಯಸಾಧಕರನ್ನು ಮೇಲೆ ತರುವ ಪ್ರಕ್ರಿಯೆ ಇದೆ ನೋಡಿ ಅದು ಬಹಳ ದೂರ ಬರಲಾರದು. ಆರ್ಮಿ ರಿಸರ್ವ್ ಅಥವಾ ಮಿಲಿಟರಿ ಸೇವೆಗಳಲ್ಲಿ ತಮ್ಮನ್ನು ನೋಂದಾವಣೆ ಮಾಡಿಕೊಂಡ ಎಷ್ಟೋ ಜನ ಯುವಕ-ಯುವತಿಯರನ್ನು ಅಮೇರಿಕ ದುಡಿಸಿಕೊಳ್ಳುತ್ತಿದೆ, ಇಲ್ಲಿ ತಮ್ಮನ್ನು ತಾವು ಭರ್ತಿಮಾಡಿಕೊಂಡವರಿಗೆ, ತಾವು ಕೊಟ್ಟ ಮಾತಿನಂತೆ ಇಷ್ಟವಿರಲೀ ಇಲ್ಲದಿರಲೀ, ಕೆಲಸಕ್ಕೆ ನಿಯೋಜಿಸಿದಾಗ ಹೋಗಲೇ ಬೇಕು, ಇಲ್ಲಾ ಎಂದರೆ ದಂಡನೆಗೆ ಗುರಿಯಾಗಬೇಕಾಗುತ್ತದೆ, ಅದೇ ಬೇರೊಂದು ದೇಶದಲ್ಲಿ ತನ್ನ ಅದೇ ಜವಾಬ್ದಾರಿಯನ್ನು ಕೈತೊಳೆದುಕೊಂಡ ವ್ಯಕ್ತಿಯೊಬ್ಬನನ್ನು ಇಲ್ಲಿ ಮನ್ನಿಸಲಾಗುತ್ತದೆ, ಯಾವ ನ್ಯಾಯ?

ನಮ್ಮ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಗೆ ತಂದುಕೊಳ್ಳಿ...ಅದರಲ್ಲಿ ವಿಶ್ವದ ಐಶಾರಾಮಗಳನ್ನು ಮನಸ್ಸು ಮಾಡಿದ್ದರೆ ಪಡೆದುಕೊಳ್ಳಬಹುದಾಗಿದ್ದರೂ ಅವುಗಳನ್ನೆಲ್ಲ ಧಿಕ್ಕರಿಸಿ ಸರಳ ಬದುಕನ್ನು ತಾವೂ ರೂಢಿಸಿಕೊಳ್ಳುವುದೂ ಅಲ್ಲದೇ ವಿಶ್ವಕ್ಕೇ ಆದರ್ಶಮಯವಾಗಿದ್ದ ಬಾಪು ಅಂಥವರೂ ಇದ್ದರು, ಅವರ ಸತ್ಯಾಗ್ರಹಗಳಲ್ಲಿ ದೇಶಕ್ಕಾಗಿ 'ಮಾಡು ಇಲ್ಲವೇ ಮಡಿ' ಎಂಬ ಅಂದೋಳನಗಳಲ್ಲಿ ಜೀವವನ್ನು ತೊರೆಯುವ ಮುಗ್ಧ ದೇಶಭಕ್ತರೂ ಇದ್ದರು. ನಿಮಗೆ ನೆನಪಿರಬಹುದು ೧೯೯೯ರಲ್ಲಿ ಕಾರ್ಗಿಲ್ ಯುದ್ಧವಾದಾಗ ಜೈಲಿನಲ್ಲಿ ಮರಣ ದಂಡನೆಗೊಳಪಟ್ಟ ಕೆಲವು ಖೈದಿಗಳೂ ತಮ್ಮನ್ನು 'ಮಾನವ ಬಾಂಬ'ನ್ನಾಗಿ ಬಳಸಿಕೊಳ್ಳಿ ಎಂದು ಕೇಳಿಕೊಂಡಿದ್ದರಂತೆ - ಇಂದು ನಮ್ಮ ದೇಶವನ್ನು ಯಾರಾದರೂ ಆಕ್ರಮಿಸಿಕೊಳ್ಳುತ್ತಾರೆಂದರೆ ಮಣ್ಣಿನ ಮಹತ್ವ ಹಾಗೂ ಋಣವನ್ನು ಬಲ್ಲ ಯಾವೊಬ್ಬ ಸೈನಿಕನೂ ಪಲಾಯನಗೊಳ್ಳುವುದಿಲ್ಲ - ಇಂದಿನ ಸರ್ಕಾರದ ರೀತಿ ರಿವಾಜುಗಳು ಏನೇ ಇರಬಹುದು, ದೇಶಭಕ್ತಿ ಬಹಳ ದೊಡ್ಡದು, ಅದು ಹಣದ ಹಂಬಲ, ವಿದೇಶೀ ವ್ಯಾಮೋಹ, ಅಧಿಕಾರದ ಆಮಿಷ ಮುಂತಾದ ರಾಗಗಳನ್ನು ಸುಲಭವಾಗಿ ಜಯಿಸಬಲ್ಲದು, ಇಲ್ಲವೆಂದಾದರೆ ಅದರಲ್ಲಿ ಏನೋ ಕುಂದಿದೆಯೆಂದೇ ಅರ್ಥ.

ಅಷ್ಟೇ ಅಲ್ಲದೇ ನಾವು ಯಾವ ದೇಶವನ್ನು ಅನ್ಯಾಯವಾಗಿ ಆಕ್ರಮಿಸಿಕೊಳ್ಳಲಿಲ್ಲ ಎನ್ನುವ ಆತ್ಮಸ್ಥೈರ್ಯವೇ ಸಾಕು ನಮ್ಮನ್ನು ಬಹಳ ಎತ್ತರದಲ್ಲಿಡುತ್ತದೆ. ಅಮೇರಿಕದಲ್ಲಿ ಸೈನ್ಯಕ್ಕೆ ಸೇರಿ ಯಾವುದೋ ಕಣ್ಣು ಕಾಣದ ದೇಶದಲ್ಲಿ ಯಾರೋ ಮಾಡಿದ ತಪ್ಪಿಗೆ ಜೀವ ತೆರುವುದು ಇದೆ ನೋಡಿ ಅದು ಬಹಳ ದುರ್ಭರವಾದುದು. ಹಿಂದೆ ನಡೆದ ಎಲ್ಲ ಯುದ್ಧಗಳಲ್ಲೂ, ಒಂದು ರೀತಿ-ನೀತಿ ಎನ್ನುವುದೊಂದಿತ್ತು, ಆದರೆ ಇಂದಿನ ಇರಾಕ್ ಪರಿಸ್ಥಿತಿಯಲ್ಲಿ ಅಮೇರಿಕದವರು ಇನ್ನೇನು ಯುದ್ಧ ಮುಗಿಯಿತು ಎಂದು ಶ್ವಾಸವನ್ನು ಹೊರಗೆ ಬಿಡುವ ಪ್ರಯತ್ನಮಾಡಿದಂತೆಲ್ಲಾ ರಸ್ತೆ ಬದಿಯಲ್ಲಿ ಮತ್ತೊಂದು ಬಾಂಬು ಸಿಡಿಯುತ್ತದೆ, ಮತ್ತಿನ್ನಷ್ಟು ಕ್ಯಾಷುವಾಲಿಟಿಯಾಗುತ್ತದೆ. ನಾನು ಆಗಾಗ್ಗೆ ಕ್ಯಾಷುವಾಲಿಟಿಯ ಈ ಸೈಟುಗಳಿಗೆ ಭೇಟಿ ಕೊಡುತ್ತಿರುತ್ತೇನೆ, ನೀವು ಅದನ್ನು ಇಲ್ಲಿ, ಇಲ್ಲಿ ನೋಡಬಹುದು. ಸತ್ತವರು, ಸತ್ತು ಬದುಕಿದವರು ಯಾರ ಕಡೆಯವರೇ ಆಗಲಿ ನನ್ನ ಮೇಲೆ ಒಂದೇ ರೀತಿಯ ಪರಿಣಾಮ ಉಂಟಾಗುತ್ತದೆ.

ಇರಾಕ್‌ನಲ್ಲಿ ಹಿಂದೆ ನಿಜವಾಗಿ ಸೈನಿಕರಾಗಿದ್ದವರೆಲ್ಲ ಈಗಿಲ್ಲ. ಈಗ ಇರುವವರಲ್ಲಿ ಒಂದೇ ಹಿಂದಿನ ಸೈನ್ಯದಿಂದ ಕಂಬಿಕಿತ್ತ ಅವಕಾಶವಾದಿಗಳು ಅಥವಾ ಇನ್ನೂ ಏನನ್ನೂ ಅರಿಯದ ಹಾಗೂ ಹಲವು ಕನ್‌ಫ್ಯೂಷನ್ ಗೆ ಸಿಕ್ಕಿಕೊಂಡ ಮುಗ್ಧ ಯುವಕರು, ಒಳಗಿದ್ದುಕೊಂಡೇ ಶಕುನಿ ತಂತ್ರವನ್ನನುಸರಿಸೋ ಕುತಂತ್ರಿಗಳು ಹಾಗೂ ದಂಗೆಕೋರರು ಬೇಡವೆಂದು ಬಿಟ್ಟುಹೋದ ಹಲವು ತಬ್ಬಲಿಗಳು. ತಮ್ಮನ್ನೇ ತಾವು 'ರಕ್ಷಿಸಿ'ಕೊಳ್ಳದ ಇಂಥ ಸೈನಿಕರನ್ನು ಯಾವ ದೇಶದವರೇ ತರಬೇತಿಕೊಡಲಿ ಅವರಲ್ಲಿ ತಮ್ಮ ದೇಶಕ್ಕಾಗಿ ಹೋರಾಡುವ ಕೆಚ್ಚನ್ನು ಮೂಡಿಸಲು ಸಾಧ್ಯವಿಲ್ಲ. ದಿನವೂ ಬದಲಾಗುವ ಸಿವಿಲ್ ವಾರ್‌ನ್ನು ಎದುರಿಸುವ ಕಾನೂನು ಕಟ್ಟಳೆಗಳಲ್ಲಿ ತಮ್ಮನ್ನು ತಮ್ಮ ಕುಟುಂಬವನ್ನು ರಕ್ಷಿಸಿಕೊಂಡರೆ ಹೆಚ್ಚು, ಆದರೆ ವ್ಯಕ್ತಿಯ ಮಟ್ಟದಲ್ಲಿ ದೊರೆತು, ಬೆಳೆಯುವ ಅವರ ತರಬೇತಿ, ಸಮೂಹ ಮಟ್ಟದಲ್ಲಿ ಯಾವ ಪರಿಣಾಮವನ್ನೂ ಬೀರಲಾರದು. ದಿನವೂ ರಸ್ತೆ ಬದಿಯಲ್ಲಿ ಸಿಡಿಯುವ ಬಾಂಬುಗಳಿಗೆ ತರಕಾರಿ ಮಾರುವವ ಹಾಗೂ ಅಮೇರಿಕದಿಂದ ತರಬೇತಿ ಪಡೆದ ಎಲೈಟ್ ಸೈನಿಕನೆಂಬ ಪಕ್ಷಪಾತವಿರುವುದಿಲ್ಲ ನೋಡಿ ಅದಕ್ಕೆ. ನನ್ನ ದೃಷ್ಟಿಯಲ್ಲಿ ಟೆಕ್ನಾಲಜಿ ಹೆವಿ ಅಮೇರಿಕನ್ ಮಿಲಿಟರಿ ವ್ಯವಸ್ಥೆಗಳಿಗೆ ಇಂಥ ಸ್ಪಂದನಗಳು ಕಾಣುವುದಿಲ್ಲ, ಕಂಡರೂ ಕುರುಡಾಗಿರುತ್ತವೆ, ಇಲ್ಲವೆಂದಾಗಿದ್ದರೆ ಆಕ್ರಮಣಕ್ಕೆ ಮೂರು ದಿನ, ಅಲ್ಲಿಂದ ಹೊರಬರುವುದಕ್ಕೆ ಮೂರು ವರ್ಷಗಳಿಗಿಂತ ಹೆಚ್ಚು ಹಿಡಿಯುತ್ತಿರಲಿಲ್ಲ.

***

ಸ್ಟ್ರಾಟೀಜಿಕ್ ನೆಲೆಗಟ್ಟು ಎಂದು ವಿಶ್ವದ ತುಂಬೆಲ್ಲಾ ಕಂಡ ಕಂಡಲ್ಲಿ ಮಿಲಿಟರಿ ಬೇಸುಗಳನ್ನು ಸ್ಥಾಪಿಸಿರುವ, ವೈಯುಕ್ತಿಕ ಅನುಕೂಲಗಳಿಗೋಸ್ಕರ ಹಾಡು ಹಗಲೇ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವನ್ನು ಹಾಕುವ ಹಾಗೂ ತನ್ನ ಅಗತ್ಯಕ್ಕೆ ತಕ್ಕಂತೆ ರಾಜಾರೋಷವಾಗಿ ಸುಳ್ಳನ್ನು ಹೇಳಿ ಮುಂದೆ ಅದನ್ನು ಸಾಧಿಸಿಕೊಳ್ಳುವ ಅಮೇರಿಕದ ಅರ್ಹತೆ ಮತ್ತು ಅಧಿಕಾರವನ್ನು ಪ್ರಶ್ನಿಸುವ ಮನಸ್ಥಿತಿಗಳನ್ನು ದೇಶದ್ರೋಹಿಗಳೆಂದು ಇಲ್ಲಿನ ಬುದ್ಧಿವಂತರೆಲ್ಲ ತೆಗಳುವುದು ಏಕೋ? ವಿಶ್ವವನ್ನೇ 'ಅಮೇರಿಕನ್' ಮಯ ಮಾಡುವ ಹುನ್ನಾರ ಎಂದು ನಿಲ್ಲುತ್ತದೆಯೋ?

8 comments:

ಶ್ರೀವತ್ಸ ಜೋಶಿ said...

೧) ಆ ಸೈನಿಕನಿಗೆ 'ವಿಭೀಷಣ' ಪ್ರಶಸ್ತಿಯನ್ನು ಕೊಡಬೇಕೆಂದು ಬುಷ್‍ಗೆ ಶಿಫಾರಿಸೋಣವೆ?

೨) 'ಭಿತ್ತರ' ಎಂಬ ಪದವನ್ನು ಉಪಯೋಗಿಸಿದ್ದೀರಿ. ಅದು 'ಬಿತ್ತರ' ಆಗಬೇಕು. ವಿಸ್ತಾರ (ತತ್ಸಮ) <-> ಬಿತ್ತರ (ತದ್ಭವ)

೩) 'ಫ' ಬರೆಯಲು ಬರಹ ಯುನಿಕೋಡ್‍ನಲ್ಲಿ 'f' ಉಪಯೋಗಿಸಬೇಡಿ, ಬದಲಿಗೆ 'ph' ಉಪಯೋಗಿಸಿ. ಅಕ್ಷರವು ಸರಿಯಾಗಿಬರುತ್ತದೆ.

sritri said...

"ಅಂತರಂಗಿ"ಯ ಉದಯವಾಗಿರುವುದು ಸಂತೋಷ. "ಪಂಚರಂಗಿ"ಗೆ ಪ್ರಾಸವಾಗಬಹುದಾದ ಈ "ಅಂತರಂಗಿ" ಅಂದರೆ ಏನು? ಅಂತರಂಗ ಇರುವವನು ಎಂದೇ?

"ಫ" ಬಗ್ಗೆ ನಾನೂ ಕೂಡ ಬರೆಯಬೇಕೆಂದಿದ್ದೆ. ಈಗಾಗಲೇ ಜೋಶಿಯವರು ಬರೆದುಬಿಟ್ಟಿದ್ದಾರೆ:-)

ಶ್ರೀವತ್ಸ ಜೋಶಿ said...

'ಬನಿಯನ್ ಚಹಾದ ಮಹಿಮೆ' ಎಂಬ ಎಂಟ್ರಿಯನ್ನು ಇದೇ ಬ್ಲಾಗ್‍ನಲ್ಲಿ ಓದಿದ ನಿಮಗೆ 'ಅಂತರಂಗಿ' ಎಂದರೆ ಬನಿಯನ್ ಇರಬಹುದೆಂದು ಹೊಳೆಯದಿದ್ದುದು ಆಶ್ಚರ್ಯ!!

ಅಂದಹಾಗೆ,

"ಅಂತರಂಗಿ ಎಂದರೆ ಬನಿಯನ್" ಅಂತ ರಂಗಿ ಹೇಳಿದ್ದು ಯಾವಾಗ ಗೊತ್ತಾ? ರಂಗಿಯ ಕೈಯಾ ಮ್ಯಾಗೆ ರಂಗ ಬಾಸೆಯ ಕೊಟ್ಟ... ಸಂಗಾತಿ ನೀನೆ ಅಂತ ಆಣೆ ಇಟ್ಟ... ಬಾಳ ಸಂಗಾತಿ ನೀನೆ ಅಂತ ಆಣೆ ಇಟ್ಟಾ...ಗ!

Satish said...

ಜೋಶಿಯವರೇ,

'ಬಿತ್ತರ' ಹಾಗೂ 'ಫ' ವನ್ನು ತಿದ್ದಿ ಒಳ್ಳೆಯ ಕೆಲಸ ಮಾಡಿದಿರಿ. 'ಬಿಳೀಹೆಂಡ್ತಿ'ಯ ಹಾಡನ್ನು ಇನ್ನೂ ನೆನಪಿಟ್ಟೀದ್ದೀರಲ್ಲ!

Satish said...

sritri ಅವರೇ,

ಎಲ್ಲರಿಗೂ ಒಂದು ಅಂತರಂಗ ಎಂಬುದು ಇರುವುದರಿಂದ 'ಅಂತರಂಗಿ' ಎಂದರೆ 'ಅಂತರಂಗ' ಬರೆಯುವವನು ಎಂದುಕೊಳ್ಳೋಣವೇ?

Anonymous said...

Hey what a great site keep up the work its excellent.
»

Anonymous said...

This site is one of the best I have ever seen, wish I had one like this.
»

Sanjaya said...

ಅಂತರಂಗಿಗಳೆ,

ವಿಚಾರಪೂರ್ಣ ಲೇಖನ ಬರೆದಿದ್ದೀರಿ. ಇಂದಷ್ಟೇ ಓದಿದೆ.

"ಯುದ್ಧದಲ್ಲಿ ತೊಡಗಿದ ಆರ್ಕನ್‌ಗೆ ಅಮೇರಿಕದ ಸೈನ್ಯ ಬಾಗ್ದಾದ್ ತಲುಪಿದ ತಕ್ಷಣ ಕೈ ಚೆಲ್ಲುವಂತೆ ಹಿಂದೆ ತರಬೇತಿ ನೀಡಲಾಗಿತ್ತೇ? ಅಥವಾ ತನ್ನ ದೇಶದ ಅಧ್ಯಕ್ಷನ ಆಡಳಿತದ ಮೇಲೆ ಮೊದಲಿಂದಲೂ ಅಸಮಧಾನ ಇದ್ದು ಅದನ್ನು ತನ್ನ ಸದುಪಯೋಗಕ್ಕೆ ಬಳಸಿಕೊಂಡು 'ವೈರಿ'ಪಡೆಯನ್ನು ಸೇರುವ ಯೋಜನೆ ಆತನ ಮನಸ್ಸಿನಲ್ಲಿತ್ತೇ?"

ಆತನ ಬಗ್ಗೆ ಇನ್ನೊಂದು ಪ್ರಶ್ನೆಯನ್ನೂ ಕೇಳಬಹುದಲ್ಲವೇ? "ಕ್ರೂರ ಸರ್ವಾಧಿಕಾರಿಯ ಮೇಲೆ ಮೊದಲಿನಿಂದಲೂ ಅಸಮಾಧಾನ ಇದ್ದು ಅವನಿಂದ ದೇಶ ರಕ್ಷಿಸಲು ಅಮೆರಿಕನ್ ಸೈನ್ಯದೊಂದಿಗೆ ಕೈಗೂಡಿಸಿದನೇ?"

"ಸದ್ದಾಮನ ಸರ್ಕಾರದ ವಿರುದ್ಧ ಸಾವಿರ ಅಲಿಗೇಷನ್‌ಗಳಿರಬಹುದು (ಅವನು ತಪ್ಪನ್ನು ಮಾಡಿಲ್ಲ ಎನ್ನುವುದು ನನ್ನ ನಿಲುವಲ್ಲ) ಆದರೆ ಅಮೇರಿಕದವರು ಸುಳ್ಳಿನ ಸರಮಾಲೆಯನ್ನು ಸೃಷ್ಟಿಸಿ, ನೆಟ್ಟಗಿದ್ದ ದೇಶವನ್ನು ಕಲಕಿ, ಈಗ ಅದರಿಂದ ಹೊರಬರಲು ಪ್ರಯತ್ನಿಸುತ್ತಾ 'ಇಂಥ' ಸಮಯಸಾಧಕರನ್ನು ಮೇಲೆ ತರುವ ಪ್ರಕ್ರಿಯೆ ಇದೆ ನೋಡಿ ಅದು ಬಹಳ ದೂರ ಬರಲಾರದು."

"ಸಾವಿರ ಅಲಿಗೇಷನ್" ಸದ್ದಾಮ ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದ ಇರಾಕ್ "ನೆಟ್ಟಗಿತ್ತೇ"? ಸದ್ದಾಮನ ಸೈನ್ಯದಿಂದ ಹೊರಬಂದವರು "ಸಮಯ ಸಾಧಕರು" ಇರಬಹುದಾದರೂ, ಅವರು ದೇಶ ದ್ರೋಹಿಗಳೇ ಆಗಿರಬೇಕಿಲ್ಲ. ಬ್ರಿಟಿಶ್ ಇಂಡಿಯಾದ ಮೇಲೆ ಯುದ್ಧಕೆ ಸಿದ್ಧರಾದ ಸುಭಾಶ್ ಚಂದ್ರ ಬೋಸ್ ದೇಶ ದ್ರೋಹಿಗಳೇ? ಸಾವಿರಾರು ಜನರನ್ನು ಹೆಂಗಸರು-ಮಕ್ಕಳು ಎನ್ನದೆ ಕೊಂದ ಸದ್ದಾಮನ ವಿರುದ್ಧ ಅವನ ಸೈನ್ಯದ ಕೆಲವರು ತಿರುಗಿ ಬಿದ್ದರೆ ಅಂತಹವರನ್ನು ದೇಶ ದ್ರೋಹಿಗಳೆಂದು ಕರೆಯಬಹುದೇ?

ದೇಶ ಪ್ರೇಮವೆಂದರೆ ಆಳುತ್ತಿರುವವನ ಆಣತಿಗಳಿಗೆ ತಲೆಬಾಗುವುದೇ? ಅದರಲ್ಲೂ ಆ ಆಳುತ್ತಿರುವವನು ಕ್ರೂರ ಸರ್ವಾಧಿಕಾರಿಯಾಗಿದ್ದರೆ?

ನನ್ನ ಅಭಿಪ್ರಾಯದಲ್ಲಿ "ತಪ್ಪಿರಲಿ, ಸರಿಯಿರಲಿ ನನ್ನ ದೇಶ" ಎಂಬ ಅಭಿಮಾನಕ್ಕಿಂತ, ದೇಶ (ಆಡಳಿತ) ತಪ್ಪು ದಾರಿಯಲ್ಲಿ ನಡೆಯುತ್ತಿರುವಾಗ ಅದಕ್ಕೆ ಎದುರು ನಿಲ್ಲುವುದೇ ನಿಜವಾದ ದೇಶ ಪ್ರೇಮ.

ವಂದನೆಗಳೊಂದಿಗೆ,

"ಸಂಜಯ"