ಮರಳು ಭೂಮಿ ಮತ್ತು ಮೌನ
ಟೋನಿ ಬೋರ್ಡೇನ್ (Anthony Bourdain) ನ Without Pyramids ಕಾರ್ಯಕ್ರಮವನ್ನು ಟ್ರಾವೆಲ್ ಚಾನೆಲ್‌ನಲ್ಲಿ ನೋಡಿದಾಗಲೇ ಈಜಿಪ್ಟಿನ ಮರಳುಗಾಡು calm ಮತ್ತು clean ಆಗಿರುವ ಬಗ್ಗೆ ಅವನ ವಿವರಣೆಗಳನ್ನು ಕೇಳುತ್ತಲೇ ಒಂದು ಮರಳುಭೂಮಿಯಲ್ಲೂ ಒಬ್ಬನ ಅಂತಃಸತ್ವವನ್ನು ಶುದ್ಧೀಕರಿಸುವ ಅಗಾಧವಾದ ಮೌನವಿದೆ ಎಂದು ಅರಿವಿಗೆ ಬಂದದ್ದು. ಒಬ್ಬನ ಒಡಲಾಳದ ಸಂಸ್ಕಾರಗಳನ್ನು ಕೂಲಂಕಷವಾಗಿ ಸೋಸಿ ಶುದ್ಧೀಕರಿಸುವ ಬಗ್ಗೆ ಭಾರತೀಯ ಮೂಲದ ಧ್ಯಾನದಲ್ಲೂ ಪರಮರ್ಶೆಗಳು ದೊರೆಯುತ್ತವೆ (self-purification by introspection). ಭಾರತೀಯ ಪರಂಪರೆಯಲ್ಲಿ ಋಷಿ ಮುನಿಗಳು ಹಿಮಾಲಯದ ತಪ್ಪಲಿನ ಮೊರೆ ಹೊಕ್ಕಿದ್ದರ ಬಗ್ಗೆ ಕೇಳಿದ್ದೆನೆ ಹೊರತು ರಾಜಸ್ತಾನದ ಮರಳುಗಾಡಿನಲ್ಲಿ ಅಗಮ್ಯ ಹಾಗೂ ಅನಂತವಾದ ಮೌನವನ್ನು ಹುಡುಕಿಕೊಂಡು ಹೋದವರ ಬಗ್ಗೆ ನಾನು ಕೇಳಿಲ್ಲ. ನಕ್ಷತ್ರಗಳು ಮಿನುಗುವ ನಿಶ್ಶಬ್ದ ಮುಗಿಲಿನ ರಾತ್ರಿಗಳಲ್ಲಿ, ಕಾಲ ಬೆರಳುಗಳ ನಡುವೆ ಸೋಕಿ ಹರಿದಾಡುವ ಬಿಸಿ-ತಂಪು ಮರಳಿನ ಕಣಗಳಲ್ಲಿ ಜೊತೆಗೆ ಒಬ್ಬನ ಒಳಗನ್ನು ಹೊರತೆರೆದು ತೋರುವ ಏಕತಾನ ಮೌನದ ಬಗ್ಗೆ ಟೋನಿ ಹಾಗೂ ಆತನ ಸಹ ಪ್ರಯಾಣಿಕರು ವಿವರಿಸಿದ ಅನುಭವ ಬಹಳಷ್ಟು ಮುದ ನೀಡಿತು. ಈ ಕಾರ್ಯಕ್ರಮದಲ್ಲಿನ ಈಜಿಪ್ಟಿನ ಮರಳುಭೂಮಿಯ ಮೂಲದವನೊಬ್ಬನು ವಿವರಿಸುವಂತೆ ಐದೇ ಐದು ದಿನಗಳು ಸಾಕು ಎಂತಹವರ ಅಂತರಾಳವನ್ನು ಬಡಿದೆಬ್ಬಿಸಲು ಎಂಬರ್ಥ ಬರುವ ಮಾತುಗಳು ಗಮನ ಸೆಳೆದವು.
ಈಜಿಪ್ಟ್ ಎಂದರೆ ನೈಲ್ ನದಿ, ಪಿರಮಿಡ್ಡುಗಳು, ಪುರಾತನ ಕಾಲದಿಂದಲೂ ಬಂದ ಪರಂಪರೆ ಎಂಬುದು ಎಲ್ಲರ ಮನಸ್ಸಿಗೆ ಬರಬಹುದಾದ ಅಂಶ. ಸುಮಾರು USA ಭೂವಿಸ್ತಾರದಷ್ಟೇ ದೊಡ್ಡದಾದ ಸಹಾರ ಮರುಭೂಮಿ ಪ್ರಪಂಚದ ಅತಿದೊಡ್ಡ ಮರಳುಭೂಮಿ. ಕ್ರಿಸ್ತಪೂರ್ವ ೬೦೦೦ ವರ್ಷಗಳ ಹಿಂದಿನ ಉಲ್ಲೇಖಗಳು ಸಿಗುವಂತಹ ಈಜಿಪ್ಟ್ ಸಂಸ್ಕೃತಿಗೆ ಈ ಮರುಭೂಮಿಯ ಸಂಸ್ಕೃತಿ ಇನ್ನೂ ಹಳೆಯದು!
***
ಇದು ಮರುಭೂಮಿಯ ಕಥೆಯನ್ನಾಗಲೀ ಈಜಿಪ್ಟಿನ ಬಗ್ಗೆ ವ್ಯವಸ್ಥಿತವಾಗಿ ಹೇಳುವ ಪ್ರಯತ್ನವಂತೂ ಆಗಲಾರದು ಏಕೆಂದರೆ ಅವೆರೆಡನ್ನೂ ನಾನು ನೋಡೇ ಇಲ್ಲ, ಅನುಭವಿಸಿಯೂ ಇಲ್ಲ - ಟಿವಿ ಪರದೆಯ ಮೇಲೆ ನೋಡಿದ್ದನ್ನು ಹೊರತು ಪಡಿಸಿ. ಇನ್ನು ಭಾರತದ ಥಾರ್ ಮರುಭೂಮಿಯ ಬಗ್ಗೆ ಓದಿದ್ದೇನಾದರೂ ಕಣ್ಣಿಂದ ನೋಡಿದ್ದಂತೂ ಇಲ್ಲ. ಈ ಯುಎಸ್‌ಎ ಅಷ್ಟು ದೊಡ್ಡದಾದ ಮರಳುಗಾಡನ್ನು ಊಹಿಸಿಕೊಳ್ಳುತ್ತಾ ಹೋದಂತೆ, ಒಬ್ಬ ಪಶ್ಚಿಮದವನು ಮರುಭೂಮಿಯಲ್ಲಿ ನಡೆಯುತ್ತಾ ಅದರ ವೈಭವವನ್ನು ವರ್ಣಿಸುತ್ತಾ ಹೋದದ್ದನ್ನು ನೋಡಿದಂತೆ, ಸ್ಥಳೀಯ ಈಜಿಪ್ಟ್ ಮೂಲದವನು ಈ ಮರುಭೂಮಿ ಎಂಥವರನ್ನೂ ತಮ್ಮನ್ನು ಅವಿಷ್ಕರಿಸಿಕೊಳ್ಳಲು ಸಹಾಯಮಾಡುವುದು ಎಂಬ ಮಾತನ್ನು ಕೇಳಿದಂತೆ ನನ್ನ ಮನದಲ್ಲಿ ಮರುಭೂಮಿಯ ಬಗ್ಗೆ ಹೊಸದಾದ ಗೌರವ ಭಾವವೊಂದು ತಳೆಯತೊಡಗಿತು. ಈ ಸೃಷ್ಟಿಯಲ್ಲಿ ಮರುಭೂಮಿಯ ಪಾತ್ರವೂ ಇದೆ, ಅದಕ್ಕೂ ಒಂದು ನೆಲೆ ಇದೆ ಎನ್ನುವ ಆಲೋಚನೆ ಹೊಮ್ಮಿದ್ದು.
ಈ ಪ್ರಪಂಚದಲ್ಲಿ ಮೌನವಿದೆ, ಹುಡುಕಿಕೊಂಡು ಹೋಗಬೇಕಷ್ಟೇ. ಅದಕ್ಕೆ ಬೇಕು ಎರಡು ರೀತಿಯ ಪ್ರಯಾಣ - ಒಂದು ಅಂತರಾಳದ ಒಳಗೆ ಇನ್ನೊಂದು ಇರುವುದರೆಲ್ಲದರಿಂದ ದೂರ. ಇವೆರಡನ್ನೂ ಮಾಡಲು ದೂರವೆಲ್ಲೂ ಹೋಗಬೇಕಾದುದಿಲ್ಲ, ಮರುಭೂಮಿಯೂ ಬೇಡ ಬಯಲೂ ಬೇಡ, ಎಲ್ಲವೂ ನಮ್ಮೊಳಗೇ ಇದೆ. ಹಾಡುಹಗಲು ಎಂತಹ ಸಂತೆಯ ವಾತಾವರಣದಲ್ಲಿ ಕಣ್ಮುಚ್ಚಿ ಹಾಯಾಗಿ ನಿದ್ರೆ ಮಾಡುವವರಿಲ್ಲವೇನು? ಆದರೆ ನಮಗೆ ಅಂಟಿಕೊಂಡವುಗಳಿಂದ ’ದೂರ’ ಹೋಗುವುದು ಸರಳವಂತೂ ಅಲ್ಲ, ಅದಕ್ಕೆ ಬಹಳಷ್ಟು ಕಷ್ಟಪಡಬೇಕಾದ ಅಗತ್ಯವಿದೆ. ಈ ’ದೂರ’ ಹೋಗುವಿಕೆಗೆ ಅನುಕೂಲವಾಗಿ ಬರಬಹುದಾದ ಭೌತಿಕವಾಗಿ ಒಂದು ನೆಲೆಯಿಂದ ಮತ್ತೊಂದು ನೆಲೆಯಲ್ಲಿ ನಮ್ಮನ್ನು ಕಂಡುಕೊಳ್ಳಲು ಅನುವುಮಾಡಿಕೊಡುವಲ್ಲಿ ಮರುಭೂಮಿಯ ಪಾತ್ರವಂತೂ ಸ್ಪಷ್ಟವಾಯಿತು. ಇನ್ನು ಅಲ್ಲಿಗೆ ಹೋಗುವುದು ಹೇಗೆ ಅಲ್ಲಿ ಒಂದು ವಾರ ಕಳೆಯುವುದು ಹೇಗೆ ಎಂದೆಲ್ಲ ಯೋಚಿಸಿಕೊಂಡು ಬಾಯಿ ತುಟಿಯೊಣಗಿ ಹತ್ತಿರದ ನೀರಿನ ಬಾಟಲಿಯನೆತ್ತಿ ಮರುಭೂಮಿಯಲ್ಲಿ ನೀರು ಕುಡಿಯುವವರ ಹಾಗೆ ನೀರು ಕುಡಿದದ್ದಷ್ಟೇ ಬಂತು, ಆದರೆ ಅದು ಅಷ್ಟು ಸುಲಭವಂತೂ ಅಲ್ಲ.
***
ನಮ್ಮನ್ನಂಟಿದ ಸಂಕೋಲೆಗಳನ್ನೆಲ್ಲ ಬದಿಗೊತ್ತಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಮತ್ಯಾವುದೋ ದೇಶದವರಾದ ನಾವು ಹೋಗುವುದು ಬರುವುದು ಬಹಳ ದೂರದ ಮಾತು. ಐದು ವರ್ಷಗಳ ಹಿಂದೆ ಯೂರೋಪಿನಲ್ಲಿ ಕಳೆದ ಹನ್ನೆರಡು ದಿನಗಳನ್ನು ಇತ್ತೀಚಿನ ಸ್ಥಿತಿಗತಿಗಳಿಗೆ ಹೋಲಿಸಿಕೊಂಡು ನೋಡಿದಾಗ ಅದು ದೊಡ್ಡ ಸಾಹಸವೆಂದೇ ಕಂಡೀತು. ಇನ್ನು ನನಗೆ ಆಸಕ್ತಿ ತಂದ ಸಹಾರ ಮರುಭೂಮಿಯನ್ನು ನೋಡಿ ಅನುಭವಿಸುವುದು ಕನಸಿನ ಮಾತೇ. ಅದಕ್ಕೆಂದೇ ನಾನು ಟಿವಿ ಚಾನೆಲ್ಲುಗಳಿಗೆ ಪ್ರವಾಸಿ ಪುಸ್ತಕ/ವೆಬ್ ಸೈಟ್‌ಗಳಿಗೆ ಜೋತು ಬೀಳೋದು. ’ಕೋಶ ಓದು’ ಎನ್ನುವ ಮಾತಿನಲ್ಲಿ ಬಲವಿದೆ, ಬೆಂಬಲವಿದೆ. ನಾವು ಈಗಿರುವ ನೆಲೆಯಿಂದ ಹೊರಬಂದು ಮತ್ತಿನ್ಯಾವುದೋ ನೆಲೆಯಲ್ಲಿ ನಮ್ಮನ್ನವಿಷ್ಕರಿಸಿಕೊಂಡು ಎಲ್ಲವೂ ನೆಮ್ಮದಿಯಿದ್ದಾಗ ತಾನೇ ಆ ದಿವ್ಯ ಮೌನ ಹೊಮ್ಮೋದು? ಹಾಗಾಗಲೂ ಬಹಳ ಕಷ್ಟವಿದೆ, ದಿವ್ಯ ಮೌನ ಹೊಮ್ಮದಿರುವ ಮಾತಲ್ಲ ಅದಕ್ಕೆ ಮೊದಲಿನ ನೆಮ್ಮದಿಯ ಬಗ್ಗೆ. ನಮ್ಮ ಆಹಾರ ಆಚಾರ-ವಿಚಾರಗಳು ಭಿನ್ನ, ನಮ್ಮ ನಿಲುವು ನೋಟ ಭಿನ್ನ, ಈ ಭಿನ್ನತೆ ಮತ್ತೊಂದು ಅಗಾಧವಾದ ಸಂಸ್ಕೃತಿಯ ಮುಂದೆಯೂ ಎದ್ದು ಕಾಣುತ್ತದೆ. ಪ್ರವಾಸಿಗರಾಗಿ ಹೋದಲ್ಲಿ ನಾವು ನಮ್ಮತನವನ್ನು ಎತ್ತಿ ಗಂಟುಕಟ್ಟಿಕೊಂಡು ಹೋಗೋದೋ ಅಥವಾ ಹೋದಲ್ಲಿ ಬಂದಲ್ಲಿ ಅಲ್ಲಿಯವರಲ್ಲೊಂದಾಗಿ ಅವರ ಸ್ಥಳೀಯ ಅನುಭವಗಳಿಗೆ ಸ್ಪಂದಿಸುವುದೋ ಎನ್ನುವ ದ್ವಂದ್ವ ಎದುರಾಗುತ್ತದೆ. (ಭಾರತೀಯ ಮೂಲದ ನಾವು ಅಮೇರಿಕದಿಂದ ಈಜಿಪ್ಟಿಗಾಗಲೀ ಯೂರೋಪಿಗಾಗಲೀ ಎಲ್ಲೇ ಹೋದರೂ ನಾವು ಅಲ್ಲಿಯವರ ಕಣ್ಣಿಗೆ ಭಾರತೀಯರೇ ಎಂಬುದನ್ನು ನಾನು ನನ್ನ ಯುರೋಪಿನ ಪ್ರವಾಸದಲ್ಲಿ ಸ್ವತಃ ಅನುಭವಿಸಿದ್ದು ನಿಜ.) ಪ್ರವಾಸಿಗರು ಏನನ್ನು ’ನೋಡಲು’ ಹೋಗುತ್ತಾರೆ, ಎಷ್ಟು ’ದೂರ’ ಹೋಗುತ್ತಾರೆ ಎನ್ನುವುದು ಮುಖ್ಯ. ನೀವು ಕೇವಲ ನೋಡಲು ಹೋಗುವವರಾದರೆ ನಿಮ್ಮ ಪುಳಿಯೊಗರೆ, ತಿಳಿಸಾರು-ಅನ್ನ, ಮೊಸರು ನಿಮ್ಮ ಜೊತೆ ಬಂದೀತು, ಅಲ್ಲಿಯ ಬದುಕನ್ನು ಅನುಭವಿಸಿ ನೋಡುವವರಿಗೆ ಗೋಟ್ ಚೀಜೂ ಇಷ್ಟವಾದೀತು ಎನ್ನುವುದು ಈ ಹೊತ್ತಿನ ತತ್ವವಷ್ಟೇ!