Showing posts with label ಸ್ನೇಹ. Show all posts
Showing posts with label ಸ್ನೇಹ. Show all posts

Monday, April 20, 2020

ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್! (ಭಾಗ-೨)


ಸುಮಾರು 14 ವರ್ಷಗಳ "ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್!" ಎಂಬ ಲೇಖನ ಬರೆದಿದ್ದೆ.  ಅದರಲ್ಲಿ ನನ್ನೊಬ್ಬ ಸ್ನೇಹಿತನಿಗೆ ಕೊಟ್ಟ ನಾಲ್ಕು ಲಕ್ಷ ರೂಪಾಯಿಗಳು ದೊಡ್ಡವಾಗಿ ಕಂಡಿದ್ದವು.  ಆದರೆ, ಹದಿನಾಲ್ಕು ವರ್ಷಗಳ ನಂತರ ಅವರವರ ಪ್ರಬುದ್ಧತೆಯ ಬೆಳವಣಿಗೆಯಂತೆ, ಅನೇಕ ಲಕ್ಷಗಳು ಬಂದಿರಬಹುದು, ಹೋಗಿರಬಹುದು.  ಮಾನವೀಯತೆಯೊಂದೇ ಕೊನೆಗೆ ಉಳಿಯುವುದು ಗ್ಯಾರಂಟಿ.  ಆದರೆ, ಪ್ರಸ್ತುತ ಹಣಕಾಸಿನ ಪರಿಸ್ಥಿತಿ ಇದ್ದ ಹಾಗೆ ಅವರವರ ಪ್ರತಿಕ್ರಿಯೆ ಇರುತ್ತದೆ.  ಒಮ್ಮೆ ನಾಲ್ಕು ಲಕ್ಷ ರೂಪಾಯಿಗಳೇ ದೊಡ್ಡವಾಗಿ ಕಂಡರೆ, ಮತ್ತೊಮ್ಮೆ ಅದು ನಗಣ್ಯವಾದೀತು.

ಈ ಲೇಖನ ಬರೆಯುವ ಹೊತ್ತಿಗೆ ಆಗಾಗ್ಗೆ ಜಗದೀಶನಂತವರು ಏಕೆ ಹೀಗೆ ಮಾಡಿದರು, ಏಕೆ ಹೀಗಾದರೂ ಎಂದೆಲ್ಲ ಯೋಚಿಸಬೇಕಾಗುತ್ತದೆ.  ಕೊನೆಗೆ ವಿಧಿಯ ಲೀಲೆ ಹೇಗಿರುತ್ತದೆ ಎಂಬುದನ್ನು ಊಹಿಸಿದರೆ, ನಿಜಕ್ಕೂ ಜೀವನದ ಬಗ್ಗೆ ಬೇಸರ ಬಂದೀತು.

***

ಸೋಶಿಯಲಿಸ್ಟ್ ದೇಶಗಳಲ್ಲಿ ಆಗದ ಒಂದು ಮಹಾನ್ ಸಾಧನೆಯನ್ನು ಕ್ಯಾಪಿಟಲಿಸ್ಟ್ ವ್ಯವಸ್ಥೆಯಲ್ಲಿ ಮಾಡಬಹುದು - ಅದು ಏನೆಂದರೆ, ನಿಮ್ಮ ಹೂಡಿಕೆ ಯನ್ನು ದ್ವಿಗುಣವೇಕೆ, ಅನೇಕ ಗುಣಗಳ ಮಟ್ಟಿಗೆ ರಾತ್ರೋ ರಾತ್ರಿ ಹೆಚ್ಚಿಸಿಕೊಳ್ಳಬಹುದು, ಹಾಗೆಯೇ ಕಡಿಮೆ ಮಾಡಿಕೊಳ್ಳಬಹುದು!  ಸೂಕ್ಷ್ಮವಾಗಿ ಹೇಳುವುದಾದರೆ, ಇದು ಒಂದು ಹಣವನ್ನು ಪ್ರಿಂಟ್ ಮಾಡುವ ವ್ಯವಸ್ಥೆಯೇ ಸರಿ.  ನಿಮ್ಮ ಹೂಡಿಕೆಗಳು, ನಿಮ್ಮ ಕಂಪನಿಗಳು, ನಿಮ್ಮ ನೆಟ್ ವರ್ತ್ ಮೊದಲಾದವು - ನಿಮ್ಮ ಹಣೇಬರಹ ನೆಟ್ಟಗಿದ್ದರೆ, ರಾತ್ರೋರಾತ್ರಿ ಬೆಳೆಯಬಲ್ಲವು ಹಾಗೂ ಕುಗ್ಗ ಬಲ್ಲವು.

ಇಂದು, ಅಮೇಜ಼ಾನ್ ಕಂಪನಿಯ ಒಂದು ಸ್ಟಾಕ್ ಇವತ್ತಿಗೆ ಎರಡು ಸಾವಿರ ಡಾಲರ್‌ಗೂ ಅಧಿಕವಾಗಿದ್ದು, ಅದು ಒಂದು ಕಾಲದಲ್ಲಿ ಒಂದು ಡಾಲರ್‌ನ ಆಸುಪಾಸು ಇತ್ತು. ಇದು ಅನೇಕ ವರ್ಷಗಳಲ್ಲಿ ಆದ ಬೆಳವಣಿಗೆ.  ಅದೇ ರೀತಿ,   ನನ್ನ ಕಣ್ಣ ಮುಂದೆಯೇ ಅನೇಕ ಕಂಪನಿಗಳು, ಒಂದೇ ದಿನದಲ್ಲಿ ನೂರು ಅಥವಾ ಸಾವಿರ ಪರ್ಸೆಂಟ್ ಮೇಲೆ ಹೋಗಿದ್ದನ್ನು ಮತ್ತೆ ಕೆಳಗೆ  ಬಿದ್ದಿದ್ದನ್ನ ನಾನು ನೋಡಿದ್ದೇನೆ.  2008-2009ರ ಮಾರ್ಕೆಟ್ ಕ್ರಾಷ್ ಆದಾಗ ಬಿಲಿಯನ್ ಡಾಲರ್‌ಗಟ್ಟಲೆ ಹಣವನ್ನು ಅನೇಕ ಹೆಡ್ಜ್‌ಫಂಡ್ ಮ್ಯಾನೇಜರುಗಳು ಕಳೆದುಕೊಂಡಿದ್ದಾರೆ, ಅಂತೆಯೇ ಮಾರ್ಕೆಟ್ ಮೇಲೆ ಹೋದಾಗ ದುಡಿದಿದ್ದಾರೆ ಕೂಡ.

ಈ ಚಿಕ್ಕ ಮಾರ್ಕೆಟ್ ಕಾಮೆಂಟರಿಯ ಉದ್ದೇಶವೆಂದರೆ - ಯಾರು ಬೇಕಾದರೂ ಹಣವನ್ನು ಗಳಿಸಬಹುದು, ಅಥವಾ ಕಳೆದುಕೊಳ್ಳಬಹುದು... ಅಂತಹುದರಲ್ಲಿ, ಒಂದು ಕಾಲದಲ್ಲಿ ಒಂದು ಡಾಲರ್ ಅನ್ನೋದು 36 ರೂಪಾಯಿಗಳು ಇದ್ದುದು, ಇವತ್ತಿಗೆ ಒಂದು ಡಾಲರ್ ಎನ್ನುವುದು 75 ರೂಪಾಯಿಗಳಾದಾಗ, ನಮ್ಮ ಹಳೆಯ ಒಂದು ಲಕ್ಷದ ಮೊತ್ತ ಇವತ್ತಿಗೆ ಬಹಳ ಕಡಿಮೆಯಾಗಿ ಕಾಣುತ್ತದೆ.  ಅದನ್ನ ಇನ್‌ಫ್ಲೇಶನ್‌ಗೆ ಅಡ್ಜಸ್ಟ್ ಮಾಡಿ ನೋಡಿದರೂ ಸಹ, ಈ ಕರೆನ್ಸಿ ಕನ್ವರ್ಷನ್‌ನಲ್ಲಿ ಅಂದಿನ ಒಂದು ಲಕ್ಷ ರುಪಾಯಿ, ಇಂದಿಗೆ ಏನೇನೂ ಸಾಕಾಗುವುದಿಲ್ಲ.

(ಅದು ಹೇಗೆ ಭಾರತದಲ್ಲಿ ಜನ ಜೀವನವನ್ನು ಸಾಗಿಸುತ್ತಾರೋ ಇಷ್ಟೊಂದು ಇನ್‌ಪ್ಲೇಶನ್ ಇಟ್ಟುಕೊಂಡು!  ಅದು ಇನ್ನೊಂದು ದಿನದ ಬರಹವಾದೀತು!)

***

ಅಂದು ದುಡ್ಡು ತೆಗೆದುಕೊಂಡ ಗೆಳೆಯರ ಸುಳಿವಿಲ್ಲ.  ಆದರೆ, ಇಂದಿಗೆ ಒಂದಂತೂ ಜ್ಞಾನೋದಯವಾಗಿದೆ... ಯಾರಿಗಾದರೂ ಹಣಕೊಟ್ಟರೆ ಅದು ಹಿಂದೆ ಬರುತ್ತದೆ ಎಂಬ ನಂಬಿಕೆಯನ್ನೇ ಬಿಟ್ಟು ಬಿಡುವಂತಾಗಿದೆ.  ಅದರ ಅರ್ಥ, ನಮ್ಮ ಕೈಯಲ್ಲಿ ಎಷ್ಟನ್ನು ಕಳೆದುಕೊಂಡರೆ ಅದು ದೊಡ್ಡದೆನಿಸುವುದಿಲ್ಲವೋ ಅಷ್ಟನ್ನು ಮಾತ್ರ ಕೊಡಲು ಸಮರ್ಥರಾಗಿದ್ದರೆ ಸಾಕು ಎನಿಸುತ್ತದೆ.  ಈ ಒಂದು ಮನೋಧರ್ಮದಿಂದ, ನಮಗೆ ಯಾವ ನಷ್ಟವೂ ಇಲ್ಲ (ಕೊಟ್ಟ ದುಡ್ಡೊಂದನ್ನು ಹೊರತು ಪಡಿಸಿ), ಯಾವ ಮನೋವ್ಯಾಧಿಯೂ ಅಂಟೋದಿಲ್ಲ.  ನಮ್ಮ ಬಂಧು-ಮಿತ್ರರ ಜೊತೆಗೆ ನಿಷ್ಟೂರವಂತೂ ಆಗೋ ಮಾತೇ ಇಲ್ಲ... ಎಲ್ಲವನ್ನೂ ದಾನವಾಗಿ ಕಂಡು ಕೊಂಡರೆ.

ಈ ಹೊತ್ತಿನಲ್ಲಿ, ಇನ್ನೂ ಒಂದು ತತ್ವ ಹೊಮ್ಮುತ್ತದೆ - ಎಲ್ಲವನ್ನು ಕರ್ಮದ ಫಲವನ್ನಾಗಿ ನೋಡುವುದು... ನಾವು ಯಾವ ಜನ್ಮದಲ್ಲಿ ಅವರಿಂದ ಉದಾರಕ್ಕೆ ಪಡೆದಿದ್ದೆವೋ ಇಂದು ಅದನ್ನು ಹಿಂತಿರುಗಿಸಿದೆವು ಎಂದು ನಿರುಮ್ಮಳವಾಗಿರುವುದು!

ಹಣವನ್ನು ಕೊಡುವ-ತೆಗೆದುಕೊಳ್ಳುವ ವಿಚಾರದಲ್ಲಿ ನನ್ನ ಹಾಗೆ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆ ಎನ್ನುವ ಮಹಾಸಾಗರದಲ್ಲಿದ್ದುಕೊಂಡು, ಅದರಲ್ಲಿ ಸೋಶಿಯಲಿಸ್ಟ್ ಮೌಲ್ಯದ ಹಾಯಿ ದೋಣಿಯನ್ನು ಚಲಾಯಿಸುವ ಈ ಸಾಧನೆ ನನ್ನಂಥವರನ್ನು ಬಹುದೂರ ಕೊಂಡೊಯ್ಯಲಾರದು, ಎನ್ನುವುದು ಈ ಹೊತ್ತಿನ ನಂಬಿಕೆ!

Wednesday, December 26, 2007

...ಯಾವಾಗ್ ನೋಡಿದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ

ನಾನು ಒಣದ್ರಾಕ್ಷಿ ಡಬ್ಬದ ಮುಚ್ಚಳ ತೆಗೆಯೋದಕ್ಕೂ ಅದರ ಒಳಗಿನಿಂದ ಮುಂದುವರೆಯುತ್ತಿದ್ದ ಸಂಭಾಷಣೆಯ ಈ ತುಣುಕು ಕೇಳೋದಕ್ಕೂ ಸರಿಯಾದ ಸಮಯ ಬಂದಿತ್ತು, ’...ಬನ್ನಿ ಬನ್ನಿ, ಯಾವಾಗ್ ನೋಡುದ್ರೂ ಅನಿವಾಸಿಗಳ ಥರ ಬರೀ ನಿಮ್ಮದೇ ರಾಗದ ಗುಂಗಿನಲ್ಲಿ ಇರ್ತೀರಿ, ವಾಸ್ತವಕ್ಕೆ ಬನ್ನಿ ಕಾರ್ಯಕ್ರಮ ಆರಂಭ ಮಾಡೋಣ’.

ಎಲಾ ಇವನಾ, ಅನಿವಾಸಿಗಳ ಬಗ್ಗೆ ಇಷ್ಟು ಅಥಾರಿಟಿಯಿಂದ ಮಾತಾಡೋರ್ ಯಾರಪ್ಪಾ ಎಂದು ಬೆಳಕಿಗೆ ಡಬ್ಬವನು ಬಗ್ಗಿಸಿ ನೋಡಿದ್ರೆ ಸೆಪ್ಟೆಂಬರ್ ತಿಂಗಳಿನಲ್ಲಿ ಪೆಚ್ಚು ಮೋರೆಯ ದರ್ಶನ ಕೊಟ್ಟು ಕೊನೆಗೆ ದಿಢೀರನೆ ಗುಂಪಿನಲ್ಲಿ ಕರಗಿ ಹೋಗಿದ್ದ ಒಣದ್ರಾಕ್ಷಿದ್ವಯರು ಕಂಡು ಬಂದರು. ಸುಮಾರು ಇಪ್ಪತ್ತು ಉಳಿದ ದ್ರಾಕ್ಷಿಗಳನ್ನು ಒಂದೆಡೆ ಆಯೋಜಿಸಿ ಅದೇನೋ ’ಕಾರ್ಯಕ್ರಮ’ವನ್ನು ಆರಂಭಿಸುವ ಗುಂಗಿನಲ್ಲಿದ್ದವರು ಆ ಮಟ್ಟಿಗೆ ವ್ಯಸ್ತರಾಗಿ ಕಂಡುಬಂದುದು ನನಗೆ ಸ್ವಲ್ಪ ಖುಷಿ ತಂದಿತು. ಏನಿಲ್ಲವೆಂದರೂ ಈ ಹಿಂದಿನ ಅಳುಮೋರೆಗೆ ಉತ್ತರ ಕೊಡಬೇಕಾಗಿಲ್ಲವಲ್ಲ ಎಂದು ನನ್ನೊಳು ನಾನೇ ಹೇಳಿಕೊಂಡಿರುವಾಗ ನಾನು ಡಬ್ಬದ ಮುಚ್ಚಳ ತೆಗೆದ ಫಲವಾಗಿ ದಿಢೀರನೆ ಹೆಚ್ಚಿದ ಬೆಳಕನ್ನು ಕಂಡು ತಮ್ಮ ಕಾರ್ಯಕ್ರಮಕ್ಕೆ ಅದ್ಯಾರಪ್ಪಾ ಭಂಗ ತಂದವರು ಎಂದು ಹುಬ್ಬೇರಿಸುತ್ತಲೇ ನನ್ನತ್ತ ನೋಡಿದ ದ್ರಾಕ್ಷೀದ್ವಯರು, ’ಓಹ್, ಏನ್ಸಾರ್ ಬಾಳಾ ಅಪರೂಪ ಆಗಿದ್ದೀರಾ ಇತ್ತೀಚಿಗೆ!?’ ಎಂದು ಒಕ್ಕೊರಲಿನಿಂದಲೇ ತಮ್ಮ ಆಶ್ಚರ್ಯವನ್ನು ಸೂಚಿಸುತ್ತಲೇ ಪ್ರಶ್ನೆಯೊಂದನ್ನು ಎಸೆದವು.

ನಾನಿದ್ದೋನು, ’ಹೌದಲ್ವಾ, ಹೇಗಿದ್ದೀರಾ ಮತ್ತೆ? ಏನ್ಸಮಾಚಾರಾ, ಏನೋ ಗಡಿಬಿಡಿ ನಡೀತಾ ಇರೋ ಹಾಗಿದೆ?’ ಎಂದೆ.

ಆ ದ್ರಾಕ್ಷಿಗಳಲ್ಲಿ ಬಲಗಡೆ ಇದ್ದುದು ಉತ್ತರ ಕೊಡುವ ಹವಣಿಕೆ ಮಾಡುತ್ತಾ, ’ಹೀಗಿದೀವ್ ನೋಡಿ, ಸದ್ಯ ಕಳೆದ ಸರ್ತಿ ಡಬ್ಬ ಖಾಲಿ ಆದ ಹಾಗೆ ಈ ಸರ್ತಿ ಆಗ್ಲಿಲ್ಲವಲ್ಲಾ, ಒಂದಿಷ್ಟು ಜನ ಉಳಿದಿರೋದೇ ಹೆಚ್ಚು’ ಎಂದು ಸಿನಿಕತನದ ಹಾರಿಕೆ ಉತ್ತರಕೊಡುವ ಹೊತ್ತಿಗೆ ಅದರ ಜೊತೆಗಾರ, ’ಊರ್ ತುಂಬಾ ಎಷ್ಟ್ ಜನಾ ಬೇಕಾದ್ರೂ ಇರ್ಲಿ ನೋಡ್ರಿ ಕೊನೆಗೆ ನಮ್ ಕಾರ್ಯಕ್ರಮ ಅಂತಂದ್ರೆ ಇಷ್ಟೇ ಜನಾ ಬರೋದು!’ ಎಂದು ಅಸಮಧಾನವನ್ನು ವ್ಯಕ್ತಪಡಿಸಿತು.

ನಾನು, ’ಅದೇನೋ ಅನಿವಾಸಿಗಳ ಬಗ್ಗೆ ಹೇಳ್ತಾ ಇದ್ರಲ್ಲ, ಅವರುಗಳ ಬಗ್ಗೆ ನಿಮಗೇನ್ ಗೊತ್ತಿರೋದು?’ ಎಂದೆ ಕೆದಕಿ ನೋಡಿದ್ದಕ್ಕೆ,

ಇಬ್ಬರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡು ಏನ್ ಹೇಳೋದೂ ಬಿಡೋದು ಗೊತ್ತಾಗದೇ ಒಂದು ಕ್ಷಣ ಅಮೇರಿಕಕ್ಕೆ ಬಂದ ಪ್ರವಾಸಿಯ ಹಾಗೆ ಗರ ಬಡೆದು ನಿಂತುಕೊಂಡವು, ಸ್ವಲ್ಪ ಸುಧಾರಿಸಿಕೊಂಡು ಬಲಗಡೆ ಇದ್ದ ದ್ರಾಕ್ಷಿ ಹೇಳಿತು, ’ನಮಗೇನ್ ಗೊತ್ತೂ ಸಾರ್, ನಾವ್ ನಮಗೆ ಕಂಡದ್ದು ಹೇಳಿದ್ವಿ ಅಷ್ಟೇ, ಅನಿವಾಸಿಗಳು ಯಾವಾಗ್ ನೋಡುದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ, ಒಂದ್ ರೀತಿ ಗಮ್ಮನ್ ಗುಸಕಗಳ ಥರಾ ಯಾವಾಗ್ ನೋಡುದ್ರೂ ಅವರದ್ದೇ ಅವರಿಗೆ ಅತಿಯಾಗಿ ಹೋಗಿರುತ್ತೇ, ತಮ್ಮದೇ ದೊಡ್ಡದು ಅನ್ನೋ ಥರಾ ಆಡೋ ಅಂತಾ ಸ್ವಾರ್ಥಿಗಳನ್ನು ನಾನು ಯಾವತ್ತೂ ನೋಡೇ ಇಲ್ಲ, ಅದಕ್ಕೇ ಹಂಗದ್ದದ್ದು!’ ಎಂದು ದೊಡ್ಡ ವಾಗ್ದಾಳಿಯೊಂದನ್ನು ಮಾಡಿ ಸುಮ್ಮನಾಯಿತು.

ಆ ದ್ರಾಕ್ಷಿ ಹೀಗೆಂದ ಕೂಡಲೇ ನಾನೇನ್ ಹೇಳೋದು ಅಂತ ತಲೆ ತುರಿಸಿಕೊಂಡ್ರೆ ಏನೂ ಹೋಳೀಲಿಲ್ಲ, ಮ್ಯಾನೇಜ್‌ಮೆಂಟ್ ಎಂಪ್ಲಾಯಿ ಹೇಳೋ ಹಾಗೆ, ’ಅದು ನಿಮ್ಮ ನಿಮ್ಮ ಅನಿಸಿಕೆ ಅಭಿಪ್ರಾಯ ಅದಕ್ಕೆ ನೀವೇ ಬಾಧ್ಯಸ್ಥರು...ಅದು ಸುಳ್ಳೋ ನಿಜಾನೋ ಅಂತ ಮಾತಾಡ್ತಾ ಹೋದ್ರೇ ದೊಡ್ಡ ವಾದಾನೇ ನಡೆದು ಹೋಗುತ್ತೆ, ಅದರ ಬದಲಿಗೆ ಅದನ್ನ ಅಲ್ಲಿಗೆ ಬಿಡೋದೇ ವಾಸಿ’ ಎಂದು ಹೇಳಿ ಕೈ ತೊಳೆದುಕೊಳ್ಳಲು ನೋಡಿದೆ.

ಆಗ ಎಡಗಡೆ ಇದ್ದ ದ್ರಾಕ್ಷಿ, ’ಅಲ್ರಿ, ಹೀಗೆ ಒಂದು ಸಮೂಹದ ಮೇಲೆ ನಾವ್ ಏನಾದ್ರೂ ಹೇಳ್ಲಿ ಅದನ್ನ ಅವರವರ ಅಭಿಪ್ರಾಯ ಅಂತ ಹೇಳಿಬಿಟ್ಟು ಸುಮ್ನೇ ಕೈ ತೊಳಕೊಳಕ್ಕೆ ನೋಡ್ತೀರಲ್ಲಾ, ನಿಮಗೆ ಕೆಚ್ಚು ಅಭಿಮಾನಾ ಅನ್ನೋದ್ ಸ್ವಲ್ಪಾನೂ ಇಲ್ವೇ ಮತ್ತೆ? ಏನು ಅದನ್ನೆಲ್ಲಾ ಬಂಡವಾಳಶಾಹಿ ವ್ಯವಸ್ಥೆಯ ಏಣಿಯ ಮೆಟ್ಟಿಲುಗಳಿಗೆ ಆಪೋಷನ ಕೊಟ್ಟೋರಂಗೆ ಆಡ್ತೀರಲ್ಲಾ, ನಿಮ್ಮಂತೋರುನ್ನಾ ನಮ್ಮೂರ್ನಲ್ಲಿ ಏನಂತಾ ಕರೀತಾರೆ ಗೊತ್ತಾ?...’ ಎಂದು ಸುಮ್ಮನಾಯಿತು.

ನಾನು, ’ಏನಂತ ಕರೀತಾರೆ?’ ಎಂದರೆ,

’ಬ್ಯಾಡಾ ಬಿಡಿ, ನಾನ್ಯಾಕೆ ಹೇಳಿ ನನ್ನ ಬಾಯನ್ನ ಹೊಲ್ಸು ಮಾಡ್ಕೊಳ್ಳೀ?’ ಎನ್ನುವ ಉತ್ತರ ದೊರೆಯಿತು, ಮತ್ತೆ ಮುಂದುವರೆಸುತ್ತಾ, ’ನಾವ್ ಹೆಂಗಾರೂ ಇರ್ಲಿ ನಮ್ಮನ್ನ ಯಾವಾನಾದ್ರೂ ಸ್ವಾರ್ಥಿ ನನಮಕ್ಳು ಅಂತ ಹೇಳಿದ್ದಿದ್ರೆ ಅವರನ್ನ ಒಂದ್ ಕೈ ನೋಡಿಕಂತಿದ್ವಿ, ಏನೋ?’ ಎಂದು ಪಕ್ಕದವನ ಪಕ್ಕೆಗೆ ತಿವಿಯಿತು.

ನಾನು, ’ಥೂ, ಇದೇನಪ್ಪಾ ಗ್ರಹಚಾರ’ ಎಂದು ಮನಸ್ಸಿನಲ್ಲೇ ಶಪಿಸಿಕೊಂಡೆ, ಶಾವಿಗೆ ಪಾಯಸ ಮಾಡೋದಕ್ಕೆ ಒಣದ್ರಾಕ್ಷಿ ಹಾಕೋಣ ಅಂತ ಮುಚ್ಚಳ ತೆಗೆದೋನಿಗೆ ಈ ಇಬ್ಬರ ಜೊತೆ ವಾದಾ ಮಾಡಿ ಮೈ ಮನಸ್ಸು ಕೆದರಿಕೊಳ್ಳೋ ಕಷ್ಟಾ ಯಾವನಿಗೆ ಬೇಕಿತ್ತು?

ನಾನು ಸುಮ್ಮನಿದ್ದುದನ್ನು ನೋಡಿ ಎಡಗಡೆ ಇದ್ದ ದ್ರಾಕ್ಷಿ ಬಲಗಡೆಯವನ ಕುರಿತು, ’ಏ ಬಿಡೋ, ಈ ಅನಿವಾಸಿಗಳನ್ನ ಯಾರು ಉದ್ದಾರ ಮಾಡಿದಾರೆ. ನಮ್ಮ ಕೆಲಸ ನೋಡೋಣ ನಡಿ, ಜನಗಳು ಕಾಯ್ತಾ ಇದಾರೆ ಕಾರ್ಯಕ್ರಮಾನಾದ್ರೂ ಶುರು ಮಾಡೋಣ’ ಎಂದು ಹೇಳುತ್ತ ಇನ್ನೇನು ಅಲ್ಲಿ ಮೂಲೆಯಲ್ಲಿ ಸೇರಿದ್ದ ಉಳಿದ ದ್ರಾಕ್ಷಿಗಳ ಕಡೆಗೆ ತಿರುಗಬೇಕು ಎನ್ನುವಾಗ ನಾನೆಂದೆ,

’ಅಲ್ರೋ, ಅನಿವಾಸಿಗಳನ್ನ ಕಂಡ್ರೆ ನಿಮಗ್ಯಾಕೆ ಅಷ್ಟೊಂದು ಹೊಟ್ಟೇಕಿಚ್ಚು? ಎಲ್ಲೋ ಒಂದು ದೃಷ್ಟಿಕೋನದಿಂದ ಅವರುಗಳನ್ನು ನೋಡಿರಬಹುದಾದ ನೀವು ಪ್ರಪಂಚವನ್ನೇ ತಿಳಿದುಕೊಂಡಿರೋ ತಿಕ್ಕಲುಗಳ ಥರಾ ಆಡೋದ್ ಯಾಕೆ? ಊರು-ಮನೇ-ದೇಶ ಬಿಟ್ಟು ಬಂದು ತಮ್ಮ್ ತಮ್ಮ ಕಷ್ಟದಲ್ಲಿ ಸಿಕ್ಕಿ ಒದ್ದಾಡ್ತಿರೋರನ್ನ ಪೂರ್ತಿ ಅರ್ಥ ಮಾಡಿಕೊಳ್ಳದೇ ಬರೀ ಅವರನ್ನ ದೊಡ್ಡ ಸ್ವಾರ್ಥಿಗಳು ಅಂತೀರಲ್ಲಾ ಇದು ಯಾವ ನ್ಯಾಯ?’ ಎಂದು ಮೂರ್ನಾಲ್ಕು ಪ್ರಶ್ನೆಗಳನ್ನ ಒಂದೇ ಉಸಿರಲ್ಲಿ ಕೇಳಿ ದಂಗುಬಡಿಸಿದೆ.

ಎಡಗಡೆ ದ್ರಾಕ್ಷಿಗೆ ನನ್ನ ಮಾತೇ ಕೇಳಿ ಸಿಟ್ಟೇ ಬಂದಿತು ಅಂತ ಕಾಣ್ಸುತ್ತೆ, ’ ಅವರವರ ತೆವಲಿಗೆ ಬಂದವರು ಅವರವರ ಕಷ್ಟಗಳನ್ನ ಅನುಭವಿಸಲೇ ಬೇಕಾದ್ ನ್ಯಾಯಾ ತಾನೆ? ಯಾವಾಗ್ ನೋಡಿದ್ರೂ ಸೆಲ್ಫ್ ಸೆಂಟರ್ಡ್ ಜನ ಅಂತ ಹೇಳ್ದೇ ಇನ್ನೇನ್ ಹೇಳೋಕ್ ಆಗುತ್ತೇ? ಒಂದ್ ದಿನಾನಾದ್ರೂ ಹೊರಗಿನ ಪ್ರಪಂಚದ ಬಗ್ಗೆ ಯೋಚ್ನೇ ಮಾಡಿ ಗೊತ್ತೇನ್ರೀ ಅವರಿಗೆ? ತಾವ್ ಆಡಿದ್ದೇ ಆಟ ತಾವ್ ಮಾಡಿದ್ದೇ ಮಾಟಾ ಅನ್ನೋ ಗುಂಗ್ನಲ್ಲಿ ತಮ್ಮಲ್ಲಿರೋ ಡಾಲರ್ರೂ-ಪೌಂಡೂ-ಯೂರೋಗಳನ್ನ ಝಳಪಿಸ್ತಾನೇ ನಮ್ಮಲ್ಲಿರೋ ರುಪಾಯಿ ಎಣಿಸೋ ಜನಗಳನ್ನ ಕೊಂದು ಬಿಟ್ಟಿರೋದು. ಕಷ್ಟಾ ಇರ್ಲಿ, ಸುಖಾ ಇರ್ಲಿ ಕಂಡಿದ್ದನ್ನೆಲ್ಲ ರೊಕ್ಕದಿಂದ ಕೊಳ್ತೀವಿ ಅನ್ನೋ ಮಾತು ಎಲ್ಲೀವರೆಗೆ ನಡೆಯುತ್ತೇ ನೀವೇ ಹೇಳಿ’ ಎಂದು ನನಗೇ ತಿರುಮಂತ್ರ ಹಾಕಲು ನೋಡಿತು.

ನಾನು, ’ಓಹ್, ಪ್ರತಿಯೊಂದೂ ದುಡ್ಡಿನ ಸುತ್ಲೂ ತಿರುಗುತ್ತೇ, ಅಲ್ವೇನು?’ ಅಂದು ಸುಮ್ಮನಾದೆ.

’ನೋಡಿ ನೋಡಿ, ನಮಗೇನೋ ಅರ್ಥ ಆಗದ ಹೀಗೆ ದೊಡ್ಡದೊಂದು ವಾಕ್ಯವನ್ನ ಮಧ್ಯೆ ಸೇರಿಸಿ ಏನೂ ಎಕ್ಸ್‌ಪ್ರೆಶ್ಶನ್ನೇ ಇಲ್ದಿರೋ ಮುಖವನ್ನ ಮಾಡೋ ಕಲೆ ಅನಿವಾಸಿಗಳಿಗಲ್ದೇ ಇನ್ಯಾರಿಗೆ ಬರುತ್ತೇ?’ ಎಂದು ಬಲಗಡೆ ದ್ರಾಕ್ಷಿ ಸೊಪ್ಪು ಹಾಕಿತು.

’ದುಡ್ದಿನ ವಿಷ್ಯಾ ಎತ್ತಿದೋನು ನಾನಂತೂ ಅಲ್ಲಾ!’ ಎಂದು ಒಂದು ಕ್ಷಣ ತಡೆದು, ’ನಿಮ್ಮಗಳಲ್ಲೇ ಅಡಗಿರೋ ಭಿನ್ನತೆ, ಭಿನ್ನಾಭಿಪ್ರಾಯದ ಮಸೂರದಲ್ಲಿ ಎಲ್ರುನ್ನೂ ನೋಡೋ ಹಾಗೆ ಅನಿವಾಸಿಗಳನ್ನೂ ನೋಡಿ, ಅದರಲ್ಲಿ ಕಾಣೋದೇನಿದ್ರೂ ನಿಮಗೆ ಹಳದಿಯೇ, ಕಾಮಾಲೆ ರೋಗ ನನಗಂತೂ ಬಂದಿಲ್ಲ’ ಎಂದು ಮತ್ತೆ ಸುಮ್ಮನಾದೆ.

ಎಡಗಡೆ ಇದ್ದ ದ್ರಾಕ್ಷಿಗೆ ಈಗಂತೂ ಸಿಟ್ಟೇ ಬಂದಿತು ಅಂತಾ ಕಾಣ್ಸುತ್ತೆ, ’ಬಾರಿ ಶಾಣ್ಯಾ ಇದೀರ್ ನೋಡ್ರಿ, ಅದೆಷ್ಟು ಬೇಗ ನಮ್ಮ ಆರ್ಗ್ಯುಮೆಂಟೇ ತೆಗೆದು ನಮ್ಮ ಮೇಲೇ ಗೂಬೇ ಕೂರಿಸಿ ತಮ್ಮನ್ನ ತಾವೇ ಸರಿ ಅಂತ ಸಾಧಿಸಿಕೊಳ್ಳೋ ನಿಮ್ಮಂತೋರಿಗೆಲ್ಲಾ ಒಂದ್ ಗತಿ ಕಾಣ್ಸದೇ ಇದ್ರೆ ನೋಡಿ ಮತ್ತೆ?’ ಎಂದು ಕತ್ತಿ ಮಸೆಯಿತು.

’ಓಹ್, ಏನು...ಅನಿವಾಸಿಗಳ ನಡೆನುಡಿಯ ಬಗ್ಗೆ ಪುಸ್ತಕಾ ಬರೀತೀರೇನು?’ ಎಂದು ಜೋರಾಗಿ ನಗುವ ಧ್ವನಿಯನ್ನು ಮಾಡಿ ಕೈಯಲ್ಲಿನ ಚಮಚೆಯಿಂದ ಪಕ್ಕೆಗೆ ತಿವಿದೆ, ’ಬರೀರಿ, ಬರೀರಿ - ನಿಮ್ಮಗಳ ಸಾಹಿತ್ಯವೇ ದೊಡ್ದು, ನೀವ್ ಬರ್ದಿರೋದೇ ರಾಮಾಯಣ!’

ಆ ಎರಡೂ ದ್ರಾಕ್ಷಿಗಳು ಒಕ್ಕೊರಲಿನಿಂದ, ’ದಯವಿಟ್ಟು ಈಗ ನಮ್ಮನ್ನ ಸುಮ್ನೇ ಬಿಟ್ ಬಿಡಿ ಸಾರ್, ಕಾರ್ಯಕ್ರಮ ಶುರುವಾಗೋ ಹೊತ್ತಾಯ್ತು’ ಎಂದು ಆರ್ತರಾಗಿ ಬೇಡಿಕೊಂಡವು.

ನಾನಿದ್ದೋನು, ’ಇನ್ನೊಬ್ರ ಬದುಕಿನ ಬಗ್ಗೆ ಬೇಕಾಬಿಟ್ಟಿ ಮಾತನಾಡಿ ಅದೇನೋ ಕಾರ್ಯಕ್ರಮ ಅಂತ ಸಾಯ್ತಿರೋ ನಿಮಗೆ ಸಮಯದ ಪ್ರಜ್ಞೇ ಬೇರೆ ಕೇಡಿಗೆ’ ಎನ್ನುತ್ತಾ ಇವತ್ತು ಪಾಯಸಕ್ಕೆ ದ್ರಾಕ್ಷಿ ಹಾಕದಿದ್ರೇನೇ ಲೇಸು ಎಂದು ದ್ರಾಕ್ಷೀ ಡಬ್ಬದ ಮುಚ್ಚಳವನ್ನು ಹಾಕಿದರೂ, ದ್ರಾಕ್ಷಿ ಸ್ನೇಹಿತರು ಹೇಳಿದ ’ಅನಿವಾಸಿಗಳು ಯಾವಾಗ್ ನೋಡಿದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ’ ಎನ್ನುವ ವಾಕ್ಯಗಳು ನನ್ನ ಮನದಲ್ಲಿ ಅನುರಣಿಸತೊಡಗಿದವು.

Tuesday, September 18, 2007

ಒಣದ್ರಾಕ್ಷಿ ಸ್ನೇಹಿತರ ಪರಸಂಗ

ಬೇಯಿಸಿದ ಓಟ್‌ಮೀಲ್‌ಗೆ ಹಾಕೋಕೇ ಅಂತ ಒಣದ್ರಾಕ್ಷಿ ಡಬ್ಬದ ಮುಚ್ಚಲ ತೆಗೆದರೆ ಅಲ್ಲಿ ಎಲ್ಲವೂ ಖಾಲೀಯಾಗಿ ಡಬ್ಬದ ಕೆಳಗೆ ಒಂದು ಮೂಲೆಯಲ್ಲಿ ಎರಡು ದ್ರಾಕ್ಷಿಗಳು ಒಂದಕ್ಕೊಂದು ಅಂಟಿಕೊಂಡಿದ್ದವು. ’ಏನ್ರಯ್ಯಾ, ಸಮಾಚಾರ?’ ಅಂತ ಮಾತನಾಡಿಸ್ಸಿದ್ದಕ್ಕೆ ಬೇಕೋ ಬೇಡವೋ ಎನ್ನುವಂತೆ ನನ್ನ ಕಡೆ ನೋಡಿದವು, ಅದ್ಯಾವ್ದೋ ತಪ್ಪಸ್ಸು ಮಾಡ್ತಾ ಇರೋ ಋಷಿ ಮಧ್ಯೆ ಯಾರೋ ತೊಂದ್ರೇ ಕೊಟ್ರು ಅಂತ ಕೋಪಿಸಿಕೊಂಡಿದ್ದನಂತಲ್ಲ ಹಾಗೆ. ’ನಾನೇನ್‌ರಯ್ಯಾ ಮಾಡ್ಲಿ...ಉಳಿದವ್ರೆಲ್ಲಾ ಎಲ್ಲಿ?’ ಎಂದು ಮತ್ತೊಂದು ಪ್ರಶ್ನೆ ಹಾಕಿದೆ ಅದಕ್ಕಾದ್ರೂ ಉತ್ರಾ ಕೊಡ್ಲಿ ಅನ್ನೋ ಹುಮ್ಮಸ್ಸಿನಲ್ಲಿ, ಆದ್ರೂ ಸುಮ್ನೆ ಕುಂತಿವೆ! ಎಲಾ ಇವ್ನಾ ಎಂದುಕೊಂಡು ಒಂದು ಸ್ಟೀಲ್ ಚಮಚೆಯಿಂದ ಅವುಗಳನ್ನು ತವಕದಿಂದ ಅಲುಗಾಡಿಸಿ ನೋಡಿದೆ. ನಾನು ಅವುಗಳನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತಳ್ಳಿದರೆ ಕಷ್ಟಪಟ್ಟು ಒಲ್ಲದ ಮನಸ್ಸಿನಿಂದ ಹೋಗೋಕೇನೋ ತಯಾರಿದ್ದಾವೆ, ಆದ್ರೆ ಒಬ್ಬರನ್ನೊಬ್ಬರು ಬಿಟ್ಟು ಅಗಲ್ತಾ ಇಲ್ಲಾ. ’ಯಾಕ್ರೋ, ಹುಷಾರಿಲ್ವಾ?’ ಎಂದು ಇನ್ನೊಂದು ಪ್ರಶ್ನೆ ಬಿಸಾಕಿದ್ದಕ್ಕೆ ’ಈ ಮಾರಾಯಾ ಬರೀ ಪ್ರಶ್ನೆಗಳಿಂದ್ಲೇ ತಲೇ ತಿಂತಾನೇ’ ಅಂತ ಮನಸ್ಸಿನ್ನಲ್ಲೇ ಅಂದುಕೊಂಡಿರಬೇಕು, ಇದ್ದದ್ದರಲ್ಲಿ ಒಬ್ಬನಿಂದ ಧ್ವನಿಯೊಂದು ಹೊರಗೆ ಬಂತು.

’ಹುಷಾರಿಲ್ಲ ಅಂತೇನಿಲ್ಲಾ...ನಮ್ ಸ್ನೇಹಿತ್ರುಗಳು ಎಲ್ಲೋ ಕಾಣಿಸ್ತಾ ಇಲ್ಲಾ ಅಂತ ಬೇಜಾರ್ ಮಾಡ್ಕೋಂಡ್ ಕೂತೀದೀವಿ...’

ನಾನು, ’ಸ್ನೇಹಿತ್ರಾ? ಯಾರು...ನಿಮ್ ಜೊತೆ ಯಾವ್ ಸ್ನೇಹಿತ್ರಿದ್ರು?’ ಎಂದು ಕಳಕಳಿಯಿಂದ ಕೇಳಿದ್ದಕ್ಕೆ,

’ಊ, ನಾವೆಲ್ಲಾ ಒಟ್ಟಿಗೆ ಹುಟ್ಟೀ, ಬೆಳೆದು ಬಂದಿದ್ವಿ...ಇಲ್ಲೀವರೆಗೆ ಬಂದಿದ್ವಿ, ಒಬ್ಬರ ಕೈ ಒಬ್ರು ಹಿಡಕೊಂಡು...ಆದ್ರೆ ದಿನಾ ದಿನಾ ನಮ್ ಸಂಖ್ಯೆ ಖಾಲೀ ಆಗ್ತಾ ಆಗ್ತಾ ಈಗ ನೋಡಿ ನಾವಿಬ್ರೇ ಇರೋ ಹಾಗಾಗಿದೆ’ ಎಂದು ಇನ್ನು ಸ್ವಲ್ಪ ಆದ್ರೆ ಅತ್ತೇ ಬಿಡ್ತಾವೇನೋ ಅನ್ನೋ ಸ್ವರದಲ್ಲಿ ಸಮಜಾಯಿಷಿ ಸಿಕ್ಕಿತು.

ನನಗೇನು ಗೊತ್ತು, ಈ ಒಣ ದ್ರಾಕ್ಷಿಗಳಿಗೂ ಅನ್ಯೋನ್ಯತೆ, ಸ್ನೇಹ, ಸಂಬಂಧ ಇರುತ್ತೇ ಅಂತ. ಅವುಗಳ ಬಗ್ಗೆ ಇನ್ನಷ್ಟು ತಿಳಕೊಳ್ಳಬೇಕು ಅನ್ನಿಸ್ತು, ಆದ್ರೆ ಮೊದಲ ಭೇಟಿಯಲ್ಲೇ ಪೂರ್ವಾಪರ ವಿಚಾರ್ಸೋದು ಶಿಷ್ಟಾಚಾರ ಅಲ್ಲಾ ಅಂತ ಬಲವಂತವಾಗಿ ಸುಮ್ಮನಿದ್ದೆ. ಆಫೀಸಿಗೆ ಅರ್ಜೆಂಟಾಗಿ ಹೋಗ್‌ಬೇಕು ಅನ್ನೋ ತವಕ ಒಂದು ಕಡೆ, ಟೇಬಲ್ ಮೇಲೆ ಛಳಿ ಗಾಳಿ ಜೊತೆಗೆ ಫ್ರೆಂಡ್‌ಶಿಪ್ ಮಾಡ್ಕೊಂಡು ಇನ್ನೊಂದ್ ಸ್ವಲ್ಪಾ ಹೊತ್ನಲ್ಲೇ ಆರಿ ತಣ್ಣಗಾಗಿ ಬಿಡ್ತೀವಿ ಅಂತ ನನ್ ಮೇಲೆ ಪಂಥಾ ಕಟ್ಟಿರೋ ಕಾಫಿ ಗ್ಲಾಸೂ, ಓಟ್‌ಮೀಲ್ ಭರಣೀನೂ ಮತ್ತೊಂದು ಕಡೆ. ಇವತ್ತು ದ್ರಾಕ್ಷೀ ಇಲ್ಲದೇ ಓಟ್‌ಮೀಲ್ ತಿಂದ್ರೂ ಪರವಾಗಿಲ್ಲ, ಅಷ್ಟೊಂದು ಅನ್ಯೋನ್ಯತೆಯಿಂದ ಇರೋ ಸ್ನೇಹಿತರ ಬಂಧನವನ್ನ ಮುರಿಯೋದ್ ಬೇಡ ಅಂತ ಮನಸ್ಸು ಆಗಷ್ಟೇ ಇಳಿಸಿದ ಸಕ್ರೆ ಪಾಕದ ಥರ ಹರಳುಗಟ್ಟತೊಡಗಿತ್ತು.

ಇದ್ದಕ್ಕಿದ್ದ ಹಾಗೆ, ಇವರ ಸ್ನೇಹಿತ್ರೆನ್ನೆಲ್ಲ ಹಿಂತಿರುಗಿಸಿ ತಂದು ಕೊಟ್ಟಂತೆ ಮಾಡಿದ್ರೆ ಹೇಗೆ ಅನ್ನೋ ಆಲೋಚ್ನೇ ಬಂದಿದ್ದೇ ತಡ ಒಡನೆಯೇ ಪ್ಯಾಂಟ್ರಿ ಕ್ಲಾಸೆಟ್ಟಿನಿಂದ ಸನ್‌ಮೇಡ್ (sun maid) ರೇಸಿನ್ ಡಬ್ಬವನ್ನು ತಂದೆ, ಇನ್ನೇನು ಮುಚ್ಚಲವನ್ನು ತೆಗೆದು ಖಾಲಿಯಾದ ಡಬ್ಬದೊಳಗೆ ಸುರಿಯಬೇಕು ಆಗ ಈ ಸ್ನೇಹಿತರ ಭಾವನೆಗಳಿಗೆ ಸ್ವಲ್ಪವೂ ಬೆಲೆಕೊಡದೆ ಎಂಥಾ ಹುಂಬ ಕೆಲಸವನ್ನು ಮಾಡುತ್ತಿದ್ದೇನೆ ಎಂದೆನಿಸಿದ್ದರಿಂದ, ನಿಧಾನವಾಗಿ ಅಕ್ವೇರಿಯಂ‌ನಲ್ಲಿರುವ ಮೀನನ್ನು ತೆಗೆಯುವ ಹಾಗೆ ಚಮಚೆಯಿಂದ ಅಗಲದ ಸ್ನೇಹಿತರನ್ನು ತೆಗೆದು ದ್ರಾಕ್ಷಿ ಡಬ್ಬದ ಮುಚ್ಚಲದ ಮೇಲೆ ಹಾಕಿದೆ, ಸನ್‌ಮೇಡ್ ರೇಸಿನ್ ಡಬ್ಬದಿಂದ ಸುಮಾರು ಅರ್ಧ ಡಬ್ಬಿ ತುಂಬುವವರೆಗೆ ದ್ರಾಕ್ಷಿ ಡಬ್ಬವನ್ನು ತುಂಬಿದೆ, ಆಗಲಾದರೂ ತಮ್ಮ ಅಗಲಿದ ಸ್ನೇಹಿತರನ್ನು ಇವರಿಬ್ಬರೂ ಮರೆಯಲಿ ಎಂಬ ಆಸೆಯಲ್ಲಿ, ಆದರೆ ಆದದ್ದೇ ಬೇರೆ.

ನಾನು ಅರ್ಧ ಡಬ್ಬವನ್ನು ತುಂಬುತ್ತಿರುವುದನ್ನು ನೋಡಿ ಇಬ್ಬರ ಮುಖವೂ ಪೆಚ್ಚಾಯಿತು, ಏಕೆ ಎಂದು ಹೊಳೆಯಲಿಲ್ಲ, ಕೇಳಿಯೇ ಬಿಡೋಣವೆಂದು, ’ಈಗೇನಾಯ್ತು?’ ಎಂದೆ.

ಇಬ್ಬರೂ ಒಬ್ಬರನೊಬ್ಬರನ್ನು ನೋಡಿಕೊಂಡು, ’ಏನಿಲ್ಲ, ಅವರೆಲ್ಲಾ ನಮ್ ಸ್ನೇಹಿತ್ರಲ್ಲಾ...’ ಎಂದು ಒಕ್ಕೊರಲಿನಿಂದ ಉತ್ತರ ಕೊಟ್ಟವು. ಎಲಾ ಇವ್ನಾ...’ನಿಮಗೆ ಹೇಗೆ ಗೊತ್ತಾಯ್ತು?’ ಎಂದಿದ್ದಕ್ಕೆ,

’ನಮ್ ಸುತ್ಲೂ ಬಾಳಾ ವರ್ಷದಿಂದ ಇದ್ದು ಬೆಳದೋರಿಗೂ ಇವರಿಗೂ ತುಂಬಾ ವ್ಯತ್ಯಾಸ ಇದೆ, ಈಗ ಮನುಷ್ಯರನ್ನು ತಗೊಂಡ್ರೇ ಎಲ್ಲರೂ ಒಂದೇನಾ?’ ಎಂದು ನನ್ನನ್ನೇ ಪ್ರಶ್ನಿಸಿದವು. ಇದೊಳ್ಳೇ ಕಥೆಯಾಯ್ತಲ್ಲಪ್ಪಾ, ಬೆಳ್ಳಂಬೆಳಗ್ಗೆ, ಏನಾದ್ರೂ ಹಾಳ್ ಬಡಿಸಿಕೊಂಡ್ ಹೋಗ್ಲೀ, ತಿಂಡಿ ತಿನ್ನದಿದ್ರೂ ಪರವಾಗಿಲ್ಲ ಆಫೀಸಿಗೆ ಹೋಗಿ ಬಿಡಲಾ ಎಂದು ಒಂದು ಮನಸ್ಸಿಗೆ ಅನ್ನಿಸಿದ್ರೂ, ನೋಡೇ ಬಿಡೋಣ ಇವರ ಸ್ನೇಹ ಎಲ್ಲೀವರೆಗೆ ಬರುತ್ತೆ ಅಂತ ಇನ್ನೊಂದು ಮನಸ್ಸಿಗೆ ಅನ್ನಿಸಿದ್ದು ನಿಜ. ನಾನು ಮತ್ತೆ ಪ್ರಶ್ನೆ ಕೇಳತೊಡಗಿದೆ.

’ನೀವಿಬ್ರೂ ಎಲ್ಲಿ ಬೆಳದೋರು? ಯಾವೂರಿನವ್ರು?’

’ನಮ್ಮೂರು ತುಂಬಾ ದೂರಾ ಸಾರ್, ನಾವು ನಿಮ್ಮನೇ ಡಬ್ಬಿಗೆ ಹೇಗ್ ಬಂದ್ವೋ ಗೊತ್ತಿಲ್ಲಾ, ಒಂದೇ ಗದ್ದೇಲ್ ಹುಟ್ಟಿದ್ವಿ, ಒಂದೇ ಗೊಂಚಲಲ್ಲಿ ಬೆಳೆದಿದ್ವಿ, ಒಂದೇ ಕಡೆ ಒಣಗಿದ್ರೂನ್ವೆ ನಾವ್ ಯಾವತ್ತೂ ಜೊತೆ ಬಿಟ್ಟೋರಲ್ಲಾ...ಹೀಗಿರೋ ಸ್ನೇಹಿತ್ರು ಅವರವ್ರ ಕಾಲಾ ಬಂತೂ ಅಂತ ಒಂದೊಂದ್ ಕಡೇ ಹೋದ್ರು, ಕೊನೇಗ್ ನಾವ್ ಮಾತ್ರ ಉಳಿದೀದೀವ್ ನೋಡ್ರಿ, ನಮ್ ಕಥೆ ಇನ್ನೇನಾಗುತ್ತೋ ಅನ್ನೋ ಭಯ ಬೇರೆ...’ ಎಂದು ತಮ್ಮ ಅಳಲನ್ನು ತೋಡಿಕೊಂಡವು.

’ಓ ಹಾಗಾ...’ ಎಂದು ಯಾರದ್ದೋ ಪ್ರಶ್ನೆಗೆ ಉತ್ತರ ಹೊಳೆದವರ ಹಾಗೆ ಧ್ವನಿ ಹೊರಗಡೆ ಬಂದರೂ, ಈ ಸ್ನೇಹಿತರುಗಳ ಬಗ್ಗೆ ಚಿಂತಿಸೋದು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ಅವರಿಗೆ ಸಮಜಾಯಿಷಿ ಹೇಳೋ ಹಾಗೆ,

’ನೋಡ್ರಪಾ, ನಿಮ್ ಸ್ನೇಹಿತ್ರು ಎಲ್ಲೆಲ್ಲಿ ಹೋಗೋವ್ರೇ ಅಂತ ನನಗೂ ತಿಳೀದೂ, ಈ ಭೂಮಿಗ್ ಬಂದೋರೆಲ್ಲಾ ಒಂದಲ್ಲ ಒಂದ್ ದಿನ ಹೋಗೋದೇ ಅಂತ ನಿಮಗೂ ತಿಳಿದಿರ್‍ಬೇಕು, ಅಂಥಾದ್ದರಲ್ಲಿ ಹೋದೋರ್ ಬಗ್ಗೆ ಮರುಕಾ ಪಟ್ಟು ಯಾರಿಗೇನ್ ಸುಖಾ ಇದೆ...’ ಎಂದು ಉಪದೇಶ ಸಾರೋ ನನ್ನ ಮಾತನ್ನ ಅರ್ಧದಲ್ಲೇ ತುಂಡು ಮಾಡಿ, ಅವರಲ್ಲೊಬ್ಬ ಹೀಗನ್ನೋದೇ,

’ನೀವೇನೋ ದೊಡ್ಡ ಮನುಷ್ಯರೂ ಅಂತ ಅಂದುಕೊಂಡಿದ್ವಿ, ಹುಟ್ಟೀ ಸಾಯೋದೇನಿದ್ರೂ ದೇಹಾ ಸಾರ್, ಆದ್ರೆ ಸಂಬಂಧ-ಬಾಂಧವ್ಯಾ ಅನ್ನೋದೂ ದೇಹಕ್ಕಿಂತ ದೊಡ್ಡದು. ನಾವು ಎಲ್ಲೋ ಕಳಕೊಂಡ ನಮ್ ಸ್ನೇಹಿತ್ರು ಬಗ್ಗೆ ಮರುಗ್ತಾ ಇದ್ರೆ ಮುಂದಿನ್ ದಾರೀ ನೋಡ್ರೀ ಅಂತ ಹೇಳ್ತೀರಲ್ಲಾ ಸಾರ್...’ ಎಂದು ಅಳುಮುಖದಿಂದ ಸಿಟ್ಟಿಗೆ ಪರಿವರ್ತನೆಗೊಂಡವು.

’ಲೋ, ಮನಸ್ಸು ಮಾಡಿದ್ರೆ ನಿಮ್ಮನ್ನ್ ಒಂದೇ ಮುಕ್ಕಿಗೆ ತಿಂದ್ ಬಿಸಾಕ್ತೀನ್ ನೋಡ್ರೀ...’ ಎಂದು ಹೆದರಿಸೋಣವೆಂದು ನಾಲಿಗೆ ತುದೀವರೆಗೆ ಬಂದರೂ ಕಷ್ಟಪಟ್ಟು ತಡೆದುಕೊಂಡೆ, ಇನ್ನೊಂದ್ ಸರ್ತಿ ಪ್ರಯತ್ನಿಸೋಣಾ ಅಂತ,

’ನೋಡ್ರೋ, ನಿಮ್ ಕಷ್ಟಾ ನನಗರ್ಥಾ ಆಗುತ್ತೇ, ಆದ್ರೆ ನಿಮ್ಮ್ ಸಮಸ್ಯೇ ಕೇಳೋಕಾಗ್ಲೀ ಅದಕ್ಕ್ ಪರಿಹಾರಾ ಹುಡುಕೋಕ್ ಆಗ್ಲಿ ನನ್ ಹತ್ರ ಟೈಮಿಲ್ಲ, ಆಫೀಸಿಗೆ ಬೇರೆ ಹೊತ್ತಾಗ್ತಾ ಇದೆ...’ ಎನ್ನೋ ಮಾತನ್ನೂ ಅರ್ಧದಲ್ಲೇ ತಡೆದು, ಅವರಿಬ್ಬರಲ್ಲಿ ಮತ್ತೊಬ್ಬ,

’ಕಂಡಿದ್ದೀವಿ ನಡೀರಿ ನಿಮ್ ಆಫೀಸ್ ಕೆಲ್ಸಾನಾ...ಆಫೀಸಲ್ಲಿದ್ದಾಗ ಮನೇ ಬಗ್ಗೆ ಕೊರಗ್ತೀರಿ, ಮನೇಲಿದ್ದಾಗ ಆಫೀಸಿನ್ ವಿಷ್ಯಾ ತೆಲೆಕೆಡಿಸಿಕಂತೀರಿ...ನಿಮ್ ಆಫೀಸೂ, ಆಫೀಸ್ ಕೆಲ್ಸಾ, ಆಫೀಸ್ ತಿರುಗಾಟಾ ಅಂತೆಲ್ಲಾ ಅಂದೂ ಅಂದೇ ನಿಮ್ಮ್ ಮನಸಿನ್ನಷ್ಟೇ ನಿಮ್ಮ್ ನಿಮ್ಮ್ ಸಂಬಂಧಗಳೂ ಸಣ್ಣವಾಗಿರೋದು...ಕೊನೇಗೆ ನಮ್ಮಂತೋರ್ ಸತ್ರೆ - ಒಳ್ಳೇ ಸ್ನೇಹಿತ್ರು, ಸಂಬಂಧಗಳ ಜೀವಂತಿಕೆಗೆ ತಡಪಡಿಸೋರು - ಅಂತ ನಮ್ ಗೋರೀ ಮೇಲೆ ಬರೀತಾರೆ, ಇನ್ನು ನಿಮ್ಮಂತೋರಿಗೆ ದಿನಾ ಆಫೀಸಿಗೆ ಹೋಗೋ ದಾಸಯ್ಯಾ ಸತ್ತಾ ಅಂತ ಬರೀತಾರೆ...’ ಎಂದು ಜೋರು ಮಾಡತೊಡಗಿದವು. ನನಗಂತೂ ಈ ಫುಟ್‍‌ಪಾತ್ ಮೇಲೆ ಇದ್ದೋರಿಗೆ ಸಹಾಯ ಮಾಡಕ್ಕೋಗಿ ಅವರೇ ಎದುರಿಗೆ ತಿರುಗಿ ಬಿದ್ದ ಅನುಭವವಾದಂತಾಗಿ, ಈ ಒಣದ್ರಾಕ್ಷಿಗಳು ನಿಜವಾಗಿಯೂ ಮಾತನಾಡುತ್ತಿವೆಯೇ ಎಂದು ಪರೀಕ್ಷಿಸುವಂತಾಯಿತು. ಮತ್ತೆ ಸಮಜಾಯಿಷಿ ಹೇಳೋ ಧ್ವನಿಯಲ್ಲಿ ಶುರು ಮಾಡಿದೆ,

’ನಿಮಗ್ಗೊತ್ತಾಗಲ್ಲ, ನಾವು ಇವತ್ತು ದುಡಿದು ನಾಳೇ ತಿನ್ನಬೇಕು, ದುಡಿದದ್ದನೆಲ್ಲ ಬಿಲ್ ಕಟ್ಟೋದಕ್ಕೇ ಆಗಿ ಹೋಗುತ್ತೇ, ಇನ್ನು ಸಂಸಾರ ತೂಗಿಸೋದೂ ಅಂದ್ರೆ...’ ಎಂದು ರಾಗ ಎಳಿಯುತ್ತಿದ್ದ ಹಾಗೆ...

’ಮತ್ತೆ ಶುರು ಮಾಡಿದ್ರಾ ನಿಮ್ ಅಳುಮುಂಜೀ ರಾಗಾನಾ...’ಎಂದು ಇಬ್ಬರೂ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಸ್ವಲ್ಪ ಖುಷಿಯನ್ನು ಕಿರುಚುವಿಕೆಯಲ್ಲಿ ಅಭಿವ್ಯಕ್ತಗೊಳಿಸಿ ಅರ್ಧ ತುಂಬಿದ ಒಣ ದ್ರಾಕ್ಷಿ ಡಬ್ಬದೊಳಗೆ ಜಿಗಿದು ಅವುಗಳಲ್ಲಿ ಒಂದಾಗಿ ಹೋದವು.

’...ನಿಮ್ಮನ್ನಾ ಒಂದ್ ಕೈ ನೋಡೇ ಬಿಡ್ತೀನಿ...’ ಎನ್ನುವ ನನ್ನ ಧ್ವನಿ ಹಲ್ಲಿನ ಹಿಂದೆಯೇ ಉಳಿದು ಹೋಗಿ, ಒಣದ್ರಾಕ್ಷಿ ಡಬ್ಬವನ್ನು ಗಟ್ಟಿಯಾಗಿ ಮುಚ್ಚುಳ ಹಾಕಿದೆ, ಮತ್ತೆನ್ನೆಲ್ಲಿಯಾದರೂ ಓಡಿ ಹೋಗಿ ಕಾರಿನ ವಿಂಡ್‌ಶೀಲ್ಡ್ ಹಿಂದೆ ಸೇರಿ ಬಿಟ್ಟಾರು ಎನ್ನುವ ಹೆದರಿಕೆಯಂತೂ ಇತ್ತು, ಸದ್ಯ ಹಾಗಾಗಲಿಲ್ಲ!