Showing posts with label ಸುದ್ದಿ. Show all posts
Showing posts with label ಸುದ್ದಿ. Show all posts

Monday, May 04, 2020

ತಿನ್ನಬಾರದ್ದನ್ನ ತಿಂದರೆ...

ತಿನ್ನಬಾರದ್ದನ್ನ ತಿಂದರೆ... ಆಗಬಾರದ್ದು ಆದೀತು... ಇದು ಈ ಹೊತ್ತಿನ ತತ್ವ.  ಮುನ್ನೂರು ಮಿಲಿಯನ್‌ಗೂ ಹೆಚ್ಚು ಜನಸಂಖ್ಯೆ ಹೊಂದಿದ ಯುಎಸ್‌ಎ ನಂತಹ ಮುಂದುವರಿದ ದೇಶದಲ್ಲಿ ವರ್ಷಕ್ಕೆ 60 ರಿಂದ 75 ಸಾವಿರ ಜನರು ತೀರಿಕೊಳ್ಳುತ್ತಿರುವ ವರದಿಗಳು CDCಯ ಸೈಟ್‌ನಲ್ಲಿ ಸಿಗುತ್ತವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಫ್ಲೂ ಎನ್ನುವ ಮಹಾಮಾರಿ (pandemic, ಸರ್ವವ್ಯಾಪಿ ವ್ಯಾಧಿ) ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಅಂಟಿಕೊಳ್ಳುವ ಈ ಖಾಯಿಲೆಯ ಸೋಂಕು ವೈರಸ್ಸುಗಳು ವರ್ಷಕ್ಕೊಂದು strain ನಂತೆ ಬದಲಾಗಿ ಮನುಕುಲಕ್ಕೆ ಸೆಡ್ಡುಹೊಡೆದಿವೆ ಎಂದರೆ ಅತಿಶಯವೇನೂ ಅಲ್ಲ. ಹೀಗೆ ಹಬ್ಬಿಕೊಳ್ಳುವ ಮತ್ತು ವರ್ಷದಿಂದ ವರ್ಷಕ್ಕೆ ವೃದ್ಧಿಸುವ ವ್ಯಾಧಿಯ ಹಿನ್ನೆಲೆಯಲ್ಲಿ ಚೈನಾದಂತಹ ರಾಷ್ಟ್ರಗಳು ಎದ್ದು ಕಾಣುತ್ತವೆ. ಫ್ಲೂ ಹೇಗೆ ಹುಟ್ಟಿ ಹೇಗೆ ಬೆಳೆಯುತ್ತದೆ ಎಂದು ನೋಡಿದಾಗ ಅದರ ಹಿನ್ನೆಲೆಯಲ್ಲಿ ಅನೇಕ ಪ್ರಾಣಿಗಳೂ ಕಂಡುಬರುತ್ತವೆ!
***


ಚೀನಾದಲ್ಲಿ ಏನೇನಾಗುತ್ತೋ, ಅದೆಷ್ಟು ಸತ್ಯ ಹೊರಗೆ ಬರುತ್ತೋ ಎನ್ನುವುದು ನಮಗೆಲ್ಲ ಮೊದಲಿಂದಲೂ ಇದ್ದ ಸಂಶಯ. ಕಮ್ಯುನಿಸ್ಟ್ ಸರ್ವಾಧಿಕಾರಿಗಳ ಕಪಿಮುಷ್ಟಿಯಲ್ಲಿ ನಲುಗುವ ಈ ರೀತಿಯ ದೇಶಗಳು ವಿಶ್ವದ ಆರ್ಥಿಕ ಮಾನದಂಡದಲ್ಲಿ ಎಲ್ಲರಿಗಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ದೇಶವಾಗಿವೆ. ಕೆಲವೊಮ್ಮೆ ಸರ್ವಾಧಿಕಾರದ ನಡೆ ಅನೇಕ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದೆ. ರಾತ್ರೋ ರಾತ್ರಿ ಎಲ್ಲರನ್ನು ತೆರವುಗೊಳಿಸಿ ಹೊಸ ಅಣೆಕಟ್ಟುಗಳನ್ನು ಕಟ್ಟಿದ್ದಿದೆ. ಅಲ್ಲದೇ ಈ ರೀತಿಯ ಅಣೆಕಟ್ಟುಗಳು ಒಡೆದು ಹೋದಾಗ ಲೆಕ್ಕಕ್ಕೆ ಸಿಗದ ಮಿಲಿಯನ್ನುಗಟ್ಟಲೆ ಜನರನ್ನು ಇನ್ನೂ ಹುಡುಕುತ್ತಿರುವವರು ಇದ್ದಾರೆ. ಮನೆಗೆ ಒಂದೇ ಮಗು, ಎಂದು ಕಾನೂನನ್ನು ಬಳಸಿ ದೇಶದ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದುಕೊಳ್ಳುವಂತಹ ನಿಸರ್ಗದೊಂದಿಗೆ ಹೊಡೆದಾಡುವ ದಾರ್ಷ್ಟ್ಯವನ್ನೂ ಈ ದೇಶ ಪ್ರಕಟಿಸಿದ್ದಿದೆ. ಇಂತಹುದರಲ್ಲಿ ಅಲ್ಲಿನ ದೇಶವಾಸಿಗಳು ತಮಗೆ ಇಷ್ಟವಾದುದ್ದನ್ನು ತಿನ್ನಬೇಕು, ತಿನ್ನಬಾರದು ಎಂದು ಏಕೆ ತಾನೆ ಕಾನೂನನ್ನು ನಿರ್ಮಿಸೀತು?

ಹನ್ನೊಂದು ಮಿಲಿಯನ್ ಜನರಿರುವ ವುಹಾನ್ ನಗರದ ಮಾರ್ಕೆಟ್ಟಿನಲ್ಲಿ ಯಾವ ಯಾವ ಪ್ರಾಣಿಗಳನ್ನು ಮಾರುತ್ತಾರೆ ಎಂದು ಶೋಧಿಸಿದಾಗ ನಾಯಿ, ನವಿಲು, ಆಟರ್ಸ್, ಒಂಟೆ, ಕೊವಾಲ, ಹಾವುಗಳ ಜೊತೆಗೆ ತೋಳದ ಮರಿಗಳು, ಕಾಡು ಬೆಕ್ಕುಗಳು ಕಂಡುಬಂದವು. ಈ ಜನರ ಹೊಟ್ಟೆ ಹೊರೆಯಲು ಅಗಾಧವಾದ ಸೀ ಫುಡ್ ಇದ್ದರೂ ಸಹ ಇಲ್ಲಿನ ಜನರಿಗೆ ಕಾಡಿನಲ್ಲಿ ವಾಸಿಸುವ ಡೆಲಿಕಸಿಗಳೇ ಇಷ್ಟ! ಯುಎಸ್‌ಎನಲ್ಲಿಯೇ ಚೈನಾದ ರೆಸ್ಟೋರೆಂಟುಗಳಲ್ಲಿ ಮೀನು, ಕಪ್ಪೆ, ಲಾಬ್‌ಸ್ಟರ್‌ಗಳನ್ನು ದಯನೀಯ ಸ್ಥಿತಿಯಲ್ಲಿ ತುಂಬಿಟ್ಟುಕೊಂಡು ತಮ್ಮ ತಮ್ಮ ಹೊಟ್ಟೆ ಹೊರೆದುಕೊಳ್ಳುವ ಇವರುಗಳು ಇನ್ನು ಮೈನ್ ಲ್ಯಾಂಡ್ ಚೈನಾದ ನೆಲದಲ್ಲಿ ಪ್ರಾಣಿಗಳನ್ನು ಯಾವ ರೀತಿ ಸತಾಯಿಸುತ್ತಿರಬೇಡ. ಒಂದು ಲೆಕ್ಕದಲ್ಲಿ ಇವರೇ ಫಾರ್ಮ್‌ನಲ್ಲಿ ಬೆಳೆಸಿ ಕೊಂದು ತಿನ್ನುವುದಿದ್ದರೆ ಹೇಗಾದರೂ ಇದ್ದುಕೊಂಡಿರಲಿ ಎನ್ನಬಹುದಿತ್ತು. ಆದರೆ, ಕಾಡು ಪ್ರಾಣಿಗಳನ್ನ ತಮ್ಮ ಉದರ ಪೋಷಣೆಗೆ ಬಳಸಿಕೊಳ್ಳುವ ಇವರ ಈ ದುರ್ಗುಣವನ್ನ ಯಾವ ರೀತಿಯಿಂದಲೂ ಸಹಿಸಲಾಗದು.  ಮೇಲಾಗಿ ಕಾಡಿನಲ್ಲಿನ ಪ್ರಾಣಿಗಳನ್ನು ತಮ್ಮ ಉದರ ಪೋಷಣೆಗೆ ಬಳಸಿಕೊಳ್ಳಲು ಇವರಿಗೆ ಯಾರು ಲೈಸನ್ಸ್ ಕೊಟ್ಟವರು?  ಬಿಲಿಯನ್ನುಗಟ್ಟಲೆ ಬೆಳೆಯುತ್ತಿರುವ ಇವರ ಜನಸಂಖ್ಯೆಯನ್ನು ಮತ್ತಿನ್ಯಾವುದೋ ಜೀವಿ ಕೊಲ್ಲುವದು ನ್ಯಾಯ ಸಮ್ಮತವೇ?

ನಿಸರ್ಗದ ನಿಯಮಗಳನ್ನು ಗಾಳಿಗೆ ತೂರಿ ಅನೇಕ ಇಂಡಸ್ಟ್ರಿಗಳನ್ನು ಕಟ್ಟಿ ವಿಶ್ವದಲ್ಲಿ ಅತ್ಯಂತ ಹೆಚ್ಚು ಪೊಲ್ಯೂಷನ್ ಅನ್ನು ಹುಟ್ಟಿಸುವ ಈ ದೇಶದ ವಿರುದ್ಧ ಯಾವುದೇ ಶಕ್ತಿಯೂ ತನ್ನ ಧ್ವನಿ ಎತ್ತುವುದಿಲ್ಲ. ಮಾರುಕಟ್ಟೆಯ ಬೆಲೆ ಮತ್ತು ತನ್ನ ಕರೆನ್ಸಿಯನ್ನು ಡಾಲರ್ ಒಂದಿಗೆ ತುಲನೆ ಮಾಡಿಕೊಂಡು ರಾತ್ರೋ ರಾತ್ರಿ ಡೀವ್ಯಾಲ್ಯೂ ಮಾಡುವ ಈ ದೇಶವನ್ನು ಯಾವ ವಿಶ್ವ ಸಂಸ್ಥೆಯೂ ಎಚ್ಚರಿಸುವ ಗೋಜಿಗೆ ಹೋಗುವುದಿಲ್ಲ. ಮಿತಿಮೀರಿ ಕಟ್ಟಡ, ರಸ್ತೆ, ಡ್ಯಾಮ್ ಮೊದಲಾದವುಗಳನ್ನು ಕಟ್ಟಿ ತನ್ನ ಕಾಡನ್ನು ನಾಶಮಾಡಿಕೊಳ್ಳುವುದು ಬರೀ ಆಂತರಿಕ ಸಮಸ್ಯೆಯಾಗುತ್ತದೆ. ಯಾವುದೇ ಪೊಲ್ಯೂಷನ್ ಕಂಟ್ರೋಲ್ ಅಥವಾ ನ್ಯೂಕ್ಲಿಯರ್ ಪ್ರೊಲಿಫಿರೇಷನ್ ಕಾನೂನಿಗೆ ಸಿಗದೇ ಮನಬಂದಂತೆ ವರ್ತಿಸುವುದರಿಂದ ಹೆಚ್ಚಾಗುವ ಗ್ಲೋಬಲ್ ವಾರ್ನಿಂಗ್ ಎದುರಿಗೆ ಯಾರು ಜವಾಬು ಕೊಡುತ್ತಾರೆ?

***

ಕೊರೋನಾ ವೈರಸ್ ಇಂದು ನಿನ್ನೆಯದಲ್ಲ, ಅದು ಎಂದಿಗೂ ಸಾಯುವುದಿಲ್ಲ. ಎಲ್ಲಿಯವರೆಗೆ ಮನುಕುಲ ತನ್ನನ್ನು ತಾನು ಜನಸಂಖ್ಯೆಯ ಸ್ಫೋಟದ ಮುಖಾಂತರ ದ್ವಿಗುಣ ತ್ರಿಗುಣಗೊಳ್ಳುತ್ತಾ ತನ್ನ ಸುತ್ತಲಿನ ಸಂಪನ್ಮೂಲವನ್ನೆಲ್ಲ ತಿಂದು ತೇಗುತ್ತದೆಯೋ,  ಅಲ್ಲಿಯವರೆಗೆ ಈ ವಿಶ್ವದ ಉಳಿದ ಜೀವಿಗಳಿಗೆ ಉಳಿಗಾಲವಿಲ್ಲ. ಸಣ್ಣ ಏಕಾಣುಕೋಶದ ಜೀವಿಯಿಂದ ಹಿಡಿದು ಆನೆಯವರೆಗೆ, ತಿಮಿಂಗಲದವರೆಗೆ ಎಲ್ಲ ಪ್ರಾಣಿ-ಪಕ್ಷಿಗಳೂ ನಮ್ಮ ಕೃಪೆಯಲ್ಲಿ ಬದುಕುವಂತೆ ಮಾಡಿಕೊಂಡಿರುವುದು ನಮ್ಮ ಮುಂದುವರಿದ ಪೀಳಿಗೆಯ ಹೆಗ್ಗಳಿಕೆ.

***
ಈ ಕೆಳಗಿನ ಚಿತ್ರಗಳನ್ನು ನೋಡಿ:


ಚೈನಾದ ಮಾರ್ಕೆಟ್ಟಿನಲ್ಲಿ ಇರೋ ಒಂದು ರೇಟ್ ಫಲಕವನ್ನು ನೋಡಿ!  ನಿಜವೋ ಸುಳ್ಳೋ ಆದರೆ ಇಲ್ಲಿ ಎಲ್ಲ ರೀತಿಯ ಪ್ರಾಣಿಗಳೂ ಕಾಣ ಸಿಗುತ್ತವೆ.




ಚೈನಾದ ಮಾರ್ಕೆಟ್ಟಿನಲ್ಲಿ ಇರೋ ಮೀಟ್ ಮಾರ್ಕೆಟ್ಟಿನ ಫೋಟೋ.  

Tuesday, July 27, 2010

ಶಿಕಾರಿಪುರ ಹರಿಹರೇಶ್ವರ

ಶಿಕಾರಿಪುರ ಹರಿಹರೇಶ್ವರ...ಈ ಹೆಸರನ್ನು ನೆನದಾಗಲೆಲ್ಲ ಎಷ್ಟೊಂದು ಆತ್ಮೀಯ ನೆನಪುಗಳು ನಮ್ಮ ಸುತ್ತ ಸುಳಿದಾಡುತ್ತವೆ, ಧ್ವನಿ ಗದ್ಗದಿತವಾಗುತ್ತದೆ, ಭಾವನೆಗಳ ಕೋಡಿ ಕಿತ್ತೇಳುತ್ತದೆ. ಹಿಂದಿನ ಅನೇಕಾನೇಕ ಒಡನಾಟಗಳ ಸಾಂಗತ್ಯದಲ್ಲಿ ಬೆಳೆದುಬಂದ ಸಂಬಂಧವನ್ನಾಗಲೀ ಮಧುರ ನೆನಪುಗಳನ್ನಾಗಲೀ ಬುಡಸಹಿತ ಕಿತ್ತೊಗೆಯುವ ಶಕ್ತಿ ಸಾವು ಎನ್ನುವ ಎರಡಕ್ಷರದ ಪದಕ್ಕಂತೂ ಖಂಡಿತ ಇಲ್ಲ ಎನ್ನುವ ಧೋರಣೆ ನನ್ನ "ಅಂತರಂಗ"ದ್ದು ಇತ್ತೀಚಿನ ದಿನಗಳಲ್ಲಿ.

ಹಿಂದೆ ಡಿ.ಆರ್. ನಾಗರಾಜ್ ತೀರಿಕೊಂಡಾಗ ’ಬಣ್ಣದ ವೇಷ ಅಟ್ಟವನೇರಿ...’ ಎಂಬ ಕವನವನ್ನು ಕಂಬಾರರು ಬರೆದಿದ್ದರು, ಸದಾ ಅವಿರತ ದುಡಿದ ಹರಿಹರೇಶ್ವರ ಅವರಿಗೂ ಅನ್ವಯಿಸುವ 'ಈಗಲಾದರೂ ವಿಶ್ರಾಂತಿ ತಗೋ ಮಿತ್ರಾ...' ಎನ್ನುವ ಆ ಕವನದ ಸಾಲುಗಳು ಥಟ್ಟನೆ ನೆನಪಿಗೆ ಬಂದವು.

ನಮ್ಮ ಅನಿವಾಸಿ ಕನ್ನಡಿಗರ ಪಾಲಿಗೆ ಹರಿಹರೇಶ್ವರ ಅವರು ಯಾವತ್ತೂ ಸಂಪರ್ಕಿಸಬಹುದಾದ ಪರಾಮರ್ಶಕರಾಗಿದ್ದರು. ಕೆಲವು ವರ್ಷಗಳ ಹಿಂದೆ ’ಉಗಾದಿ-ಯುಗಾದಿ’ ಎನ್ನುವ ಪದಬಳಕೆಯ ವ್ಯಾಪ್ತಿ ವ್ಯುತ್ಪತ್ತಿಯಿಂದ ಹಿಡಿದು, ಇತ್ತೀಚಿನ ’ಸಿಂಚನ’ ಎಂದರೆ ಏನು ಎನ್ನುವ ನನ್ನ ಪ್ರಶ್ನೆಗೆ ತತ್‌ಕ್ಷಣ ಯಾವುದೇ ಪುಸ್ತಕದ ಸಹಾಯವಿಲ್ಲದೇ, ತಮ್ಮ ನೆನಪಿನ ಶಕ್ತಿಯಿಂದಲೇ ಈ ಕೆಳಗಿನ ವಾಕ್ಯಗಳನ್ನು ಇ-ಮೇಲ್ ಮೂಲಕ ಕಳುಹಿಸಿದ್ದರು.

"...ಸಿಂಚನ ಪದವನ್ನು ಪ್ರೋಕ್ಷಣ, ಚಿಮುಕಿಸುವುದು, ಸಿಂಪಿಸುವುದು-- ಮೆಲ್ಲಗೆ ಚೆಲ್ಲುವುದು -ಎಂಬ ಅರ್ಥದಲ್ಲಿ ಸಂಸ್ಕೃತ ಕವಿಗಳು (ಉದಾಹರಣೆಗೆ, ಮಾಘ ಕವಿ ಕಿರಾತಾರ್ಜುನೀಯ ೮:೩೪, ೮:೪೦ ರಲ್ಲಿ; ಕಾಳಿದಾಸ ಮೇಘದೂತ ೧:೨೬ ದಲ್ಲಿ ) ಬಹಳ ಹಿಂದೆಯೇ ಬಳಸಿದ್ದಾರೆ.

"ಸಿಂಪಡಿಸು" ಎಂದರೆ ಸಿಂಚನವೇ. ಅದರ ಇನ್ನೊಂದು ರೂಪ "ಸಿಂಬಡಿಸು" ಅದಕ್ಕೆ ಈ ಸ್ವಾರಸ್ಯಕರ ಉದಾಹರಣೆ ನೋಡಿ:
"ಗಂಡ ಹೆಂಡರ ಮಾತು ಒಂದೆ ಹಾಸಿಗೆ ಮ್ಯಾಲ; ಗಂಧ ಸಿಂಬಡಿಸಿ ನಗತಾಳ ನನ ತಮ್ಮ, ಗಂಗಿ ನಿನಗೆಲ್ಲಿ ದೊರೆತಾಳ!"" (ಗರತಿಯ ಹಾಡು ೫೧)
ಸಿಂಪಿಣಿ, ಸಿಂಪಣಿ, ಸಿಂಪಣಿಗೆ, ಸಿಂಪಣಿಯಾಡು, ಸಿಂಪಣಿಗೆಗೊಡು, ಸಿಂಪಿಸು- ಸಿಂಪಡಿಸು- ಇತ್ಯಾದಿ ವಿವಿಧ ರೂಪಗಳು ಕನ್ನಡ ಕಾವ್ಯಗ್ರಂಥಗಳಲ್ಲಿ ಹಲವೆಡೆ ಬರುತ್ತವೆ. ಇವೆಲ್ಲಕ್ಕೂ ಸಿಂಚನ- ವೇ ಮೂಲ ಧಾತು ಮತ್ತು ಅರ್ಥ. "

ನಾನು ಕುತೂಹಲಿತನಾಗಿ ಇಷ್ಟೊಂದು ವಿವರವಾಗಿ ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದ್ದಕ್ಕೆ, ಕಿರಾತಾರ್ಜುನೀಯ, ಮೇಘದೂತಗಳನ್ನು ಬೇಕಾದಷ್ಟು ಸಾರಿ ಓದಿ, ಇವೆಲ್ಲವೂ ನೆನಪಿನಲ್ಲಿ ಚೆನ್ನಾಗಿವೆ ಎಂದಿದ್ದರು.

ಹೀಗೆ ಯಾವೊಂದು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಅದರಲ್ಲಿ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡು ತಮ್ಮ ಕೈಲಾದದ್ದಕ್ಕಿಂತಲೂ ಹೆಚ್ಚಿನದನ್ನು ಮಾಡುವುದು ಅವರ ಶೈಲಿ ಎನ್ನುವುದಕ್ಕಿಂತ, ಹಾಗಿರುವುದನ್ನೇ that's him - ಎನ್ನಬಹುದು.
ನಾವು ಅನಿವಾಸಿ ಕನ್ನಡಿಗರು, ನಮ್ಮ ಪದಭಂಡಾರ, ನಮ್ಮ ಹಳವಂಡಗಳು ದಿನೇದಿನೇ ಒಣಗಿ ಹೋಗೋ ನೀರು ತುಂಬಿದ ಹೊಂಡವಾಗಿರುವ ಹೊತ್ತಿನಲ್ಲಿ ನಮ್ಮ ಸಂಕಷ್ಟಗಳಿಗೆ ದೂರದಿಂದ ಹರಿಹರೇಶ್ವರ ತಮ್ಮ ಎಂದೂ ಬತ್ತದ ಸಪೋರ್ಟನ್ನು ಕೊಟ್ಟವರು. ಹರಿ ಅವರು ತಮ್ಮ ಸಮಯವನ್ನು ಹೇಗೆ ವ್ಯಯಿಸುತ್ತಾರೆ, ಎಷ್ಟೊಂದು ಪ್ರಾಜೆಕ್ಟುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರಲ್ಲ ಎಂದು ನಾನು ಆಶ್ಚರ್ಯ ಪಡುವ ಹೊತ್ತಿಗೇ ಅವರು ತೊಡಗುವ ಇನ್ನೊಂದು ಪ್ರಾಜೆಕ್ಟಿಗೂ ಒಬ್ಬ ತಂದೆ ತನ್ನ ಮಕ್ಕಳ ನಡುವೆ ಸಮಪ್ರೀತಿಯನ್ನು ಹಂಚಿಕೊಂಡಂತೆ ಹಂಚಿಕೊಳ್ಳುವವರು....ಹೀಗೆ ಏನೇನೆಲ್ಲ ಬರೆದರೂ ಅದು ಇತಿಹಾಸವಾಗುತ್ತದೆ, ಹರಿ ಅವರ ಜೀವನಶೈಲಿಯ ಒಂದು ಸಣ್ಣ ತುಣುಕಿನ ಕಿರುಪರಿಚಯವಾಗುತ್ತದೆ.

ಹರಿ ಅವರ ಆದರ್ಶ, ಅವರ ಅಗಾಧ ಕನ್ನಡ ಪ್ರೇಮ ಅದಕ್ಕೆ ಹೊಂದುವ ಸೇವಾ ಮನೋಭಾವ, ಕರ್ಮಠತನ, ಕನ್ನಡಿಗನ ಅನುಭೂತಿಯಲ್ಲಿ ಪೂರ್ವ-ಪಶ್ಚಿಮಗಳ ಪರಿಕಲ್ಪನೆ ಹಾಗೂ ಅನುಭವ, ಅವರು ಹೊರತಂದ ಹಲವಾರು ಹೊತ್ತಿಗೆಗಳು, ಗ್ರಂಥ ಸಂಗ್ರಹ, ಎಲ್ಲಕ್ಕಿಂತ ಮಿಗಿಲಾಗಿ ಹಿರಿಯ-ಕಿರಿಯರೆಲ್ಲರಿಗೂ ದೊರಕುವ ’ಸ್ನೇಹ’ - ಇವೆಲ್ಲವನ್ನು ಕಳೆದುಕೊಂಡು ನಾವು ಕನ್ನಡಿಗರು ಬಡವರಾಗಿದ್ದೇವೆ. ನಮ್ಮ ಇ-ಮೇಲ್ ಇನ್‌ಬಾಕ್ಸ್‌ಗೆ ಇನ್ನು ಮುಂದೆ "ಸ್ನೇಹದಲ್ಲಿ ನಿಮ್ಮ,..." ಎಂದು ಸಹಿ ಇರುವ ಅವರ ಸಂದೇಶಗಳು ಬರದೇ ಸೊರಗುತ್ತದೆ.

೨೦೦೦ದಲ್ಲಿ ನಡೆದ "ಅಕ್ಕ" ಸಮ್ಮೇಳನಕ್ಕೆ ಸಾಕಷ್ಟು ದುಡಿದದ್ದರಿಂದ ಹಿಡಿದು, ಹತ್ತು ವರ್ಷಗಳ ನಂತರ ನಡೆಯುವ ಮುಂಬರುವ ಸಮ್ಮೇಳನದಲ್ಲೂ ಹರಿಯವರ ಸಹಾಯ ಹಸ್ತವಿದೆ. ತಮ್ಮ ಹೆಸರನ್ನು ಹಲವಾರು ತಂಡದ ಪರವಾಗಿ ನಮೂದಿಸಲಿ ಬಿಡಲಿ, ತಾವು ತೊಡಗಿಕೊಂಡ ಕಾಯಕವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹಿರಿಮೆ ಹಾಗೂ ಇತಿಹಾಸ ಅವರದು. ಅಂತಹ ಹಿರಿಯರ ಮಾರ್ಗದರ್ಶನದಲ್ಲಿ ನಾವು ಎಂದಿಗಿಂತಲೂ ಹೆಚ್ಚು ನಮ್ಮನ್ನು ನಾವು ತೊಡಗಿಸಿಕೊಂಡು ಮುಂಬರುವ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಿಕೊಟ್ಟು ಸಮ್ಮೇಳನವನ್ನು ಎಲ್ಲಾ ರೀತಿಯಿಂದಲೂ ಯಶಸ್ಸುಗೊಳಿಸುವುದೇ ನಾವು ಅವರಿಗೆ ಕೊಡುವ ಗೌರವ. ಜೊತೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನಮ್ಮನ್ನು ನಾವು ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಂದ ನಾವು ಕಲಿಯಬಹುದಾದ ನಡವಳಿಕೆ.

(ಚಿತ್ರಕೃಪೆ: ದಟ್ಸ್‌ಕನ್ನಡ.ಕಾಮ್)

Sunday, January 31, 2010

ಶ್ರದ್ದಾಂಜಲಿ

ತಿಂಗಳಲ್ಲಿ ಕನ್ನಡ ಸಂಸ್ಕೃತಿ ಲೋಕ ಕಳೆದುಕೊಂಡ ಚೇತನಗಳ ನೆನಪಿಗೆ...

ಬಿ.ವಿ. ವೈಕುಂಠರಾಜು - ಜನವರಿ ೩೧


ಚಿತ್ರಕೃಪೆ: ಪ್ರಜಾವಾಣಿ
***
ಚಿಂದೋಡಿ ಲೀಲಾ - ಜನವರಿ ೨೧




ಚಿತ್ರಕೃಪೆ: ಪ್ರಜಾವಾಣಿ

***
ಕೆ.ಎಸ್. ಅಶ್ವಥ್ - ಜನವರಿ ೧೮



ಚಿತ್ರಕೃಪೆ: ಪ್ರಜಾವಾಣಿ
’ಅಂತರಂಗ’ದ ನಮನ ಹಾಗೂ ಚಿರವಿದಾಯ.

Tuesday, November 03, 2009

...there goes Jon Corzine!

ನ್ಯೂ ಜೆರ್ಸಿ ಅಂದರೆ ಡೆ‌ಮಾಕ್ರಟಿಕ್ ರಾಜ್ಯ - ಹತ್ತು ವರ್ಷಗಳಿಗಿಂತಲೂ ಹೆಚ್ಚು ಡೆಮಾಕ್ರಟಿಕ್ ಪಕ್ಷದವರು ಆಡಳಿತ ನಡೆಸಿಕೊಂಡು ಬಂದ ಸಂಭ್ರಮ ಇಂದು ಗವರ್ನರ್ ಜಾನ್ ಕಾರ್‌ಝೈನ್ ಎಲೆಕ್ಷನ್ನಿನ್ನಲ್ಲಿ ಸೋಲುವುದರೊಂದಿಗೆ ಕೊನೆಯಾಯಿತು ಅನ್ನಬಹುದು.

ನಮ್ಮಂಥವರು, ಅದೇ ಹಸಿರು ಕಾರ್ಡು ಫಲಾನುಭವಿಗಳು, ಇಲ್ಲಿ ಮತ ಚಲಾವಣೆ ನಡೆಸದಿದ್ದರೂ ರಾಜ್ಯದಾದ್ಯಂತ ನಡೆಯೋ ಚುನಾವಣೆಯ ವಿಚಾರಗಳನ್ನು ಬೇಡವೆಂದು ದೂರವಿರಿಸಿದರೂ ಅವುಗಳ ವಿಚಾರ ಒಂದಲ್ಲ ಒಂದು ರೀತಿಯಿಂದ ನಮ್ಮ ಮನ-ಮನೆಗಳಲ್ಲಿ ನುಸುಳುವುದು ಸಹಜ. ರಾಜ್ಯದ ಬಜೆಟ್, ನಿರುದ್ಯೋಗ, ಆದಾಯ ತೆರಿಗೆ, ಹೈವೇ ಸುಂಕ ಮೊದಲಾದವುಗಳು ಎಲ್ಲರಿಗೂ ಅನ್ವಯವಾಗುತ್ತವೆ.

ವಾಲ್‌ಸ್ಟ್ರೀಟ್ ಗುರು, ಗೋಲ್ಡ್‌ಮನ್ ಸ್ಯಾಕ್ಸ್‌ನ ಎಕ್ಸಿಕ್ಯೂಟಿವ್ ಎಂದೇ ಪ್ರಖ್ಯಾತಿಯಾಗಿದ್ದ ಜಾನ್ ಕಾರ್‌ಝೈನ್ ಕೇವಲ ವರ್ಷಕ್ಕೆ ಒಂದೇ ಒಂದು ಡಾಲರ್ ಸಂಬಳ ತೆಗೆದುಕೊಂಡು ಹೆಸರು ಮಾಡಿದ ಮನುಷ್ಯ. ಜಾನ್ ಪಕ್ಕದ ನ್ಯೂ ಯಾರ್ಕ್ ನಗರ ಮೇಯರ್ (ಮತ್ತೊಮ್ಮೆ ಮೂರನೇ ಟರ್ಮ್‌ಗೆ ಇಂದು ಆಯ್ಕೆಗೊಂಡ) ಮೈಕಲ್ ಬ್ಲೂಮ್‌ಬರ್ಗ್ ಥರ ಬಿಲಿಯುನರ್ ಅಲ್ಲದಿದ್ದರೂ ಮಲ್ಟಿ ಮಿಲಿಯನರ್ ಖಂಡಿತ ಹೌದು. ಅಂಥವರಿಗೆ ಈ ಗವರ್ನರ್‌ಗೆ ಕೊಡುವ ಸಂಬಳ ಯಾವ ಲೆಕ್ಕವೂ ಅಲ್ಲ. ಜಾನ್ ಕಾರ್‌ಝೈನ್‌ನ ಮಾತುಗಳನ್ನು ಕೇಳಿದರೆ, ಅದು ಯಾವುದೇ ಸಮಾರಂಭದಲ್ಲಿರಬಹುದು ಅಥವಾ ಎಲೆಕ್ಷನ್ನ್ ಕ್ಯಾಂಪೇನ್‌ನಲ್ಲಿರಬಹುದು, ಅವರು ಹಿಂದೆ ವಾಲ್‌ಸ್ಟ್ರೀಟ್‌ನಲ್ಲಿ ಒಬ್ಬ ಎಕ್ಸಿಕ್ಯೂಟಿವ್ ವರ್ಚಸ್ಸನ್ನು ಬಳಸಿಕೊಳ್ಳೋದಿಲ್ಲ ಅಥವ ತೋರಿಸಿಕೊಳ್ಳೋದಿಲ್ಲ ಎನ್ನೋದು ನನ್ನ ಅನಿಸಿಕೆ. ಜೊತೆಗೆ, ಒಬ್ಬ ಸೀಜನ್ಡ್ ರಾಜಕಾರಣಿಯ ಚಾಕಚಕ್ಯತೆ, ತಂತ್ರಗಳೂ ಅವರಿಗೆ ಈ ನಾಲ್ಕು ವರ್ಷಗಳಲ್ಲಿ ಸಿದ್ಧಿಸಿದ ಹಾಗೆ ಕಂಡುಬರಲಿಲ್ಲ.

ಐತಿಹಾಸಿಕವಾಗಿ ಹಾಲಿ ಗವರ್ನರ್ ಮರು ಎಲೆಕ್ಷನ್ನಿನ್ನಲ್ಲಿ ಸೋಲುವುದು ನ್ಯೂ ಜೆರ್ಸಿಯಲ್ಲಿ ಗಮನಾರ್ಹವಾದುದು. ಕೇಂದ್ರದಲ್ಲಿ ಡೆಮಾಕ್ರಟಿಕ್ ಸರ್ಕಾರ ಇದ್ದು - ಕಾಂಗ್ರೆಸ್, ಸೆನೆಟ್, ವೈಟ್‌ಹೌಸ್ ಎಲ್ಲಕಡೆಗೆ ಡೆಮಾಕ್ರಟ್ ಪಕ್ಷದವರು ತುಂಬಿರುವ ಸನ್ನಿವೇಶದಲ್ಲಿ ಹಾಗೂ ಒಬಾಮ ಖುದ್ದಾಗಿ ಬಂದು ಕ್ಯಾಂಪೇನ್‌ನಲ್ಲಿ ಭಾಗವಹಿಸಿದ್ದರೂ ಇದ್ದ ಸೀಟ್ ಅನ್ನು ಉಳಿಸಿಕೊಳ್ಳಲಿಲ್ಲ ಎನ್ನುವುದು ಬಹಳ ದೊಡ್ಡ ವಿಷಯವಾಗುತ್ತದೆ. ಇಲ್ಲಿ ರಿಪಬ್ಲಿಕನ್ ಪಕ್ಷದ್ದ ಕ್ರಿಸ್ ಕ್ರಿಸ್ಟೀಯ ಜಯ, ಸಫಲತೆ ಮುಖ್ಯವಾಗಿ ಕಾಣಿಸುತ್ತದೆ. ಹೀಗೇ ವರ್ಜೀನಿಯ ರಾಜ್ಯದಲ್ಲೂ ಅಲ್ಲಿನ ಡೆಮಾಕ್ರಟಿಕ್ ಪಕ್ಷದ ಗವರ್ನರ್ ಸೀಟು ಉಳಿಯದೆ ಅದೂ ರಿಪಬ್ಲಿಕನ್ ಪಕ್ಷದವರ ಪಾಲಾಗಿರುವುದು ಮತ್ತೊಂದು ಮುಖ್ಯ ಅಂಶ.

ಈ ಎರಡು ಅಂಶಗಳನ್ನು ಗಮನಿಸಿ ಇನ್ನು ಮೂರು ವರ್ಷಗಳ ನಂತರ ಬರುವ ಪ್ರೆಸಿಡೆಂಟ್ ಎಲೆಕ್ಷನ್ನ್ ಬಗ್ಗೆ ಈಗಲೇ ಏನನ್ನು ಹೇಳುವುದು ತಪ್ಪಾಗುತ್ತದೆ. ಆದರೆ, ಕಳೆದ ವರ್ಷ ಓಟಿನಲ್ಲಿ ಭಾಗವಹಿಸಿದಷ್ಟು ಜನ ಮುಖ್ಯವಾಗಿ ಮೊಟ್ಟ ಮೊದಲನೇ ಭಾರಿ ಮತ ಚಲಾಯಿಸಿದವರ ಸಂಖ್ಯೆ ಗಮನಾರ್ಹವಾಗಿ ಇಳಿಮುಖುವಾಗಿರುವುದು ಗೊತ್ತಾಗುತ್ತದೆ.

ನಾವು, ನ್ಯೂ ಜೆರ್ಸಿಯ ಜನ, ಈ ಹೊಸ ರಿಪಬ್ಲಿಕನ್ ರಾಜ್ಯ ಸರ್ಕಾರದ ಕಡೆಗೆ ನೋಡುತ್ತೆವೆ, ಹಾಗಾದರೂ ಒಂದಿಷ್ಟು ಟ್ಯಾಕ್ಸ್ ಕಡಿಮೆಯಾಗಲಿ ಎಂದು!

***

ದೂರದಲ್ಲಿ - ನಾವು, ನಮ್ಮ ಕರ್ನಾಟಕದ ಮುಖ್ಯಮಂತ್ರಿ ಎಡೆಯೂರಪ್ಪನವರ ಸರ್ಕಾರ, ಅವರ ಖುರ್ಚಿಗೆ ಏನು ಆತಂಕ ಕಾದಿದೆಯೋ ಎಂದು ಬಿಟ್ಟುಗಣ್ಣು ಬಿಟ್ಟು ನೋಡುತ್ತಲೇ ಇದ್ದೇವೆ. ಅಲ್ಲಿ ಐದು ವರ್ಷಗಳ ಒಬ್ಬ ಮುಖ್ಯ ಮಂತ್ರಿಯ ಆಳ್ವಿಕೆ ಮುಂದುವರೆಯಲಿ, ರಾಜ್ಯದ ಜನರಿಗೆ ನೆಮ್ಮದಿ ಸಿಗಲಿ ಎನ್ನುವುದು ಆಶಯ ಅಷ್ಟೇ. ಎರಡೆರಡು ವರ್ಷಕ್ಕೊಮ್ಮೆ ಎಲೆಕ್ಷನ್ನುಗಳನ್ನು ನಡೆಸಿಕೊಂಡು ಹಣ ಚೆಲ್ಲುವುದರ ಬದಲು ಇದ್ದ ಸರ್ಕಾರವನ್ನೇ ಮುಂದುವರೆಸಿಕೊಂಡು ಒಳಜಗಳಗಳು ಮುಖ್ಯವಾಗದೇ ರಾಜ್ಯದ ಅಭಿವೃದ್ಧಿ ಕಾರ್ಯಗಳತ್ತ ಮುಖ ತೋರುವುದು ಒಳಿತು.

Wednesday, October 28, 2009

ಇನ್‌ಫರ್‌ಮೇಷನ್ನ್ ಓವರ್‌ಲೋಡ್ ಅಂದ್ರೆ ಇದೇನಾ?

ರೇಡಿಯೋ ನ್ಯೂಸ್ ಆಗ್ಲಿ ಅಥವಾ ಬಿಸಿನೆಸ್ ನ್ಯೂಸ್‌ಗಳನ್ನ ಕೇಳ್ತಾ ಹೋದ್ರೆ, ಅಲ್ಲಿ-ಇಲ್ಲಿ ಓದ್ತಾ ಇದ್ರೆ ತುಂಬಾ ತಲೆ ತಿಂತಾರೆ ಅನ್ಸಿದ್ದು ಇತ್ತೀಚೆಗೆ. ಬಹಳಷ್ಟು ಇನ್‌ಫರ್‌ಮೇಷನ್ ಓವರ್‌ಲೋಡ್, ಜೊತೆಗೆ ಸಾವಿರಾರು ಅನಾಲಿಸಿಸ್ಸುಗಳು ರಿಪೋರ್ಟುಗಳು ಇತ್ಯಾದಿ. ಅಬ್ಬಾ, ಸಾಕಪ್ಪಾ ಸಾಕು ಅನ್ಸೋ ಮಟ್ಟಿಗೆ ಒಮ್ಮೊಮ್ಮೆ.

ಯಾವ್ದೇ ಬಿಸಿನೆಸ್ ಚಾನೆಲ್ಲನ್ನ ಹಾಕಿ ನೋಡಿ ಅಲ್ಲಿನ ರಿಪೋರ್ಟರುಗಳು, ಮಾಡರೇಟರುಗಳು ಎಲ್ಲರೂ ತಾರಕ ಸ್ವರದಲ್ಲಿ ಕಿರುಚಿಕೊಳ್ತಾರೇನೋ ಅನ್ನೋ ಮಟ್ಟಿಗೆ ಉದ್ರಿಕ್ತರಾಗಿರ್ತಾರೆ. ಜೊತೆಗೆ ಉನ್ನತ ತಂತ್ರಜ್ಞಾನದ ಸಹಾಯದಿಂದ ಟಿವಿ ಸ್ಕ್ರೀನಿನ ತುಂಬಾ ಎಷ್ಟೊಂದು ಬಾರ್ಕರ್ ಮೆಸ್ಸೇಜುಗಳು, ವಿಡಿಯೋಗಳಲ್ಲೇ ವಿಡಿಯೋಗಳು, ಬ್ಯಾನರುಗಳು, ಗ್ರಾಫ್, ನಂಬರುಗಳು, ಹಲವಾರು ಕಮಾಡಿಟಿಗಳು ಅವುಗಳ ಬೆಲೆಯಲ್ಲಿನ ನಿರಂತರ ಬದಲಾವಣೆಯನ್ನು ನಿಖರವಾಗಿ ತೋರಿಸಿ ಅಳೆಯೋ ಸೂಚಕಗಳು, ಹೀಗೆ ಹಲವಾರು ರೀತಿಯ "ಕಣ್ಸೆಳೆಯುವ" ವಿಧಿವಿಧಾನಗಳು.

ಟಿವಿ ಸ್ಟೇಷನ್ನುಗಳಿಗೆ ಒಮ್ಮೆ ಅಲ್ಲಿಗೆ ಬಂದ ವೀಕ್ಷಕರನ್ನು ಕಟ್ಟಿ ಹಾಕುವ ಚಿಂತೆ. ರಿಪೋರ್ಟರುಗಳಿಗೆ ತಮ್ಮ ಅನಾಲಿಸಿಸ್ಸೇ ದೊಡ್ಡದು ಎಂದು ತೋರಿಸಿಕೊಳ್ಳುವ ಹಂಬಲ. ಜೊತೆಗೆ ಅವರು ತೋರಿಸೋ ಸಂದೇಶಗಳ ಹಿಂದೆ ಸ್ಮಾಲ್ ಪ್ರಿಂಟು. "ನಾವು ನಾಳೆಯನ್ನು ಕಂಡಿಲ್ಲ" ಎನ್ನುವ ಸೂಚನೆಯ ಜೊತೆಗೇ "ನಮ್ಮ ಚಿಂತನೆ ನಾಳೆಯ ಪ್ರತಿರೂಪ" ಎನ್ನುವ ಅಹವಾಲು! ಈ ಅಹವಾಲು, ಕೋರಿಕೆ, ಸಂದೇಶ, ಚಿಂತನೆ ಇವೆಲ್ಲ ನೋಡುಗರ ಮುಂದೆ ದೊಡ್ಡ ಜನರ ಸಂತೆಯಂತೆ ಕಂಡೂ ಅವುಗಳಲ್ಲಿ ಕೆಲವೇ ಕೆಲವು ಒಬ್ಬೊಬ್ಬರಿಗೆ ಲಾಂಗ್‌ಟರ್ಮ್ ಇಂಡಿಕೇಟರ್ ಆಗಬಲ್ಲ ಹುನ್ನಾರ ಅಷ್ಟೇ, ಅದೂ ಏಕೆ - ತೋರಿಸಿದ್ದನ್ನೇ ತೋರಿಸ್ತಾ ಇದ್ರೆ ಇವತ್ತಲ್ಲ ನಾಳೆ ಜನಗಳು ನಂಬಿಯಾರು ಎನ್ನುವ ದೂರಾಲೋಚನೆ.

ಇವುಗಳ ಮಧ್ಯೆ ಹೇಗೆ ಬದುಕೋದು. ಎಲ್ಲದರ ಹತ್ತಿರ ಇದ್ದೂ ದೂರ ಹೇಗೆ ಇರೋದು? ಯಾವೊಂದು ಮಾಧ್ಯಮಕ್ಕೆ ಅಂಟಿಕೊಳ್ಳದೇ ನಮ್ಮ ನಮ್ಮ ರಿಟೈರ್‌ಮೆಂಟ್ ಆಗಲಿ ಹಣಕಾಸಿನ ವಿಚಾರಗಳಲ್ಲಿ ಹುಷಾರಾಗಿರೋದು ಹೇಗೆ? ಯಾರನ್ನ ನಂಬೋದು ಯಾರನ್ನ ಬಿಡೋದು? ಇನ್‌ಫರ್‌ಮೇಷನ್ನ್ ಓವರ್‌ಲೋಡ್ ಅಂದ್ರೆ ಇದೇನಾ?

ಈ ಅನುಭವಗಳ ಮಿತಿಯ ಬಗ್ಗೆ ಹಿಂದೆ ಬರೆದಿದ್ದೆ - ಊರು ಕೊಳ್ಳೆ ಹೊಡೆದ ಮೇಲೆ ದೊಡ್ಡಿ ಬಾಗಿಲು ಮುಚ್ಚಿದ್ರಂತೆ ಹಾಗಾಯ್ತು. ಕಳೆದ ಎರಡು ವರ್ಷಗಳಲ್ಲಿ ಮಾರ್ಕೆಟ್ಟಿನಲ್ಲಿ ಹಣ ಕಳೆದುಕೊಂಡವರ ಸಂಖ್ಯೆ ಹೆಚ್ಚು, ಈಗ ಹಿಂತಿರುಗಿ ನೋಡಿದ್ರೆ ’ಅಯ್ಯೋ, ನಮಗೇಕೆ ಈ ವಿಷಯ ಹೊಳೆದಿರಲಿಲ್ಲ!’ ಅನ್ಸತ್ತೆ. ಹಣ ಕಳೆದುಕೊಂಡು ಚೆನ್ನಾಗಿ ಪಾಠ ಕಲಿತ ಮೇಲೆ, ಅದನ್ನು ಇಂಪ್ಲಿಮೆಂಟ್ ಮಾಡೋವಾಗ ಇನ್ನೊಂದು ಹತ್ತು ವರ್ಷ ಹಿಡಿಯುತ್ತೆ, ಅಷ್ಟರೊಳಗೆ ಮತ್ತೊಂದು ಏರಿಳಿತದ ಸೈಕಲ್ಲ್ ಬಂದಿರುತ್ತೆ. ಹೀಗೆ ಕಲಿತ ಪಾಠ ಹಳೆಯದಾಗುತ್ತಲೇ ಇರುತ್ತೆ.

ನೀವೆಲ್ಲ ಯಾವ ಯಾವ ಮಾಧ್ಯಮಗಳಿಗೆ ಗಂಟು ಬಿದ್ದುಕೊಂಡಿದ್ದೀರಿ? ನಿಮಗೆ ಯಾವ ಮಾಹಿತಿ ಯಾವ ರೂಪದಲ್ಲಿ ಯಾವುದರಿಂದ ದೊರಕುತ್ತೆ? ಅಥವಾ ನೀವೆಲ್ಲರೂ ನನ್ನ ಹಾಗೆ ಓವರ್‌ಲೋಡ್‌ನಿಂದ ಒತ್ತಡದಲ್ಲಿ ಸಿಲುಕಿಕೊಂಡಿದ್ದೀರೋ?

Wednesday, May 06, 2009

ಬೆಂಗಳೂರ್ ಹೋಯ್ತು ಬಫೆಲೋ ಬಂತು - ಡುಂ! ಡುಂ!

’ಲೋ, ಒಳ್ಳೇ ನಾಯ್ಕನನ್ನೇ ಆರ್ಸಿಕೊಂಡಿದ್ದೀರಿ ಕಣ್ರೋ!’ ಎಂದಿದ್ದು ಇನ್ಯಾರು ಅಲ್ಲ - ನಮ್ ಸುಬ್ಬ.
ಸುಮ್ನೇ ಕುಶಾಲಕ್ಕೆ ’ಹೆಂಗಿದ್ಯೋ?’ ಅಂತ ಫೋನ್ ಕಾಲ್ ಮಾಡಿದ್ರೆ ತಗಳಾಪ್ಪಾ ಪೂರ್ತಿ ರಾಮಾಯ್ಣನೇ ಶುರು ಹಚ್ಚಿಕೊಂಬಿಟ್ನಲ್ಲಾ!

ಮತ್ತೆ ಮುಂದುವರೆಸುತ್ತಾ, ’...ಬೆಂಗ್ಳೂರಿಗೂ ಬಫೆಲೋಗೂ ಎಲ್ಲಿಯ ಹೋಲಿಕೆ ಹೊಂದಾಣಿಕೆ, ಏನೋ ಕರಿಯರ ನಾಯ್ಕ ಅಂತ ಸುಮ್ನೇ ಇದ್ದಿದ್ದಕ್ಕೆ ಸಪೋರ್ಟ್ ಮಾಡಿದ್ದಕ್ಕೆ ತಂದ್ನಲ್ಲಪ್ಪಾ ಕಾಣಿ. ಒಂದಿಷ್ಟ್ ಜನ ಅವ್ನನ್ನ ಮುಸ್ಲಿಮ್ ಅಂತಾರೆ, ಒಂದಿಷ್ಟ್ ಜನ ಅವನನ್ನ ಬಿಳಿಯ ಅಂತಾರೆ, ಒಂದಿಷ್ಟು ಜನ ಅವನೇ ದೇವ್ರು ಅಂತ ಕೊಂಡಾಡ್ತಾರೆ, ಒಳ್ಳೇ ಬ್ರೂಸ್ ಆಲ್‌ಮೈಟ್ ಕಥೆ ಆಯ್ತು ನೋಡು!’ ಎಂದು ಸುಮ್ಮನಾದ.

’ಯಾರೋ ಮುಸ್ಲೀಮ್, ಅವನೋ ಚರ್ಚಿಗೆ ಹೋಗೋ ಒಳ್ಳೇ ಕ್ರಿಶ್ಚಿಯನ್ನ್ ಅಲ್ವೇ?’ ಎನ್ನೋ ಪ್ರಶ್ನೆಯನ್ನ ತಾಳಲಾರದೆ ತಾಳಿಕೊಂಡು,
’ಲೋ, ಹುಸೇನ್ ಅಂತ ಮಿಡ್ಲ್ ನೇಮ್ ಇಟ್ಟುಕೊಂಡು ಮಿಡ್ಲ್ ಈಸ್ಟ್ ನಲ್ಲಿ ಪಾಪ್ಯುಲ್ಲರ್ ಅಗೀರೊ ಬರಾಕ್ ಅಂದ್ರೆ ಏನ್ ಅಂತ ತಿಳುಕೊಂಡಿದೀಯಾ? ಬರಾಕ್‍ಗೆ ಬಹು ಪರಾಕ್! ಹಹ್ಹಹ್ಹ...’ ಎಂದು ದೊಡ್ಡದಾಗಿ ನಗಾಡಿದ.

’ಹ್ಞೂ, ಅದಿರ್ಲಿ, ಬೆಂಗ್ಳೂರಿನವರು ಏನಂತಾರೆ?’

’ಬೆಂಗ್ಳೂರಿಗೂ ಬಫೆಲ್ಲೋಗೂ ಏನು ತಾಳೆ ಗುರುವೇ? ವರ್ಷದ ಆರು ತಿಂಗಳು ಆರು ಅಡಿ ಸ್ನೋನಲ್ಲಿ ಮುಚ್ಚಿರೋ ನಗರಕ್ಕೂ ಸೌತ್ ಇಂಡಿಯನ್ ಸ್ವರ್ಗಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಈ ನನ್ ಮಕ್ಳು ನಮ್ಮಲ್ಲಿನ ರಸವನ್ನೆಲ್ಲ ಹೀರಿಕೊಂಡು ಈಗ ಸಿಪ್ಪೆ ಬಿಸಾಡಿದ ಹಾಗಾಯ್ತು. ನನ್ ಕೇಳಿದ್ರೆ ಔಟ್‌ಸೋರ್ಸಿಂಗ್ ವಿರುದ್ಧ ತಿರುಗಿ ಬಿದ್ದಿರೋ ಅಮೇರಿಕನ್ಸ್ ನೀತಿ ವಿರೋಧಿಸಿ ದೊಡ್ಡ ರ್ಯಾಲಿ ಆಗಬೇಕು. ಏನ್ ಆದ್ರೆ ಏನಂತೆ, ಇವೆಲ್ಲ ಕ್ವಾಣನ ಮುಂದೆ ಕಿನ್ನರಿ ಬಾರಿಸಿದಂಗೇ ಸೈ’.

’ಅಂದ ಹಾಗೆ, ನ್ಯೂ ಯಾರ್ಕ್ ರಾಜ್ಯದ ಬಫೆಲ್ಲೋಗೂ ಕಾಡು ಎಮ್ಮೆಗೂ ವ್ಯತ್ಯಾಸವಿದೆ ಗೊತ್ತಲ್ವಾ? ನಮ್ ನ್ಯೂಸ್ ಪೇಪರ್ರ್‌ಗಳು ಎಮ್ಮೆ-ಕ್ವಾಣ ಅಂತ ಬರೆಯೋಕ್ ಮುನ್ನ ಸ್ವಲ್ಪ ಯೋಚಿಸ್ಲಿ ಅಂತ ಹೇಳ್ದೆ ಅಷ್ಟೇ...’

’ಏನಾದ್ರೂ ಹಾಳಾಗ್ ಹೋಗ್ಲಿ ಬಿಡು, ಈಗಿನ ಕಾಲ್ದಲ್ಲಿ ನ್ಯೂಸ್ ಪೇಪರ್ ಓದೋರ್ ಯಾರು? ಎಲ್ಲರೂ ದಿವಾಳಿ ಆಗ್ಲಿ, ಅಡ್ವರ್‌ಟೈಸ್ ರೆವಿನ್ಯೂ ನಂಬಿಕೊಂಡಿರೋ ನ್ಯೂ ಯಾರ್ಕ್ ಟೈಮ್ಸ್ ಬಂಡವಾಳವೇ ಅಲುಗಾಡ್ತಾ ಇರುವಾಗ ಇನ್ನು ರೀಜನಲ್ಲ್ ನ್ಯೂಸ್ ಪ್ರಿಂಟ್‌ಗಳ ಕಥೆ ದೇವ್ರೆ ಕಾಪಾಡ್‌ಬೇಕು.’

’ಮತ್ತೇನಾದ್ರೂ ಇದೆಯಾ? I got to go' ಎಂದೆ.

’ಏನೂ ಇಲ್ಲ, ಬೆಂಗ್ಳೂರ್ ಹೋಯ್ತು, ಬಫೆಲ್ಲೋ ಬಂತು, ಡುಂ, ಡುಂ!’ ಎಂದ, ಕಾಲ್ ಕತ್ತರಿಸಿದೆ.

Sunday, April 05, 2009

ಸಗಣಿಯೊಳಗಿನ ಹುಳಗಳೂ ಬಾವಿ ಕಪ್ಪೆಗಳೂ...



























ಮಾರ್ಚ್ ೨೯ ರ ವಿ.ಕ.ದಲ್ಲಿ ’ಜನಗಳ ಮನ’ದಲ್ಲಿ ರವಿ ರೆಡ್ಡಿ ಹಾಗೂ ಜಗದೀಶ್ ರಾವ್ ಕಲ್ಮನೆಯವರ ಬಗ್ಗೆ ಓದಿ ಹೀಗನಿಸಿದ್ದು ನಿಜ.

ಹ್ಞೂ, ’ಇಂಥವರ ಬಗ್ಗೆ ಎರಡು ಸಾಲು ಬರೆದರೂ ಜಾಗ ವೇಷ್ಟು’ ಎಂದಿದ್ದಾರಲ್ಲವೇ? ಜೊತೆಗೆ, ’...ಬೆಂಗಳೂರು ಸುಧಾರಣೆಯಾಗಬೇಕಿದೆ.’ ಎನ್ನುವ ಕುಹಕ ಅಲ್ಲ, ನಿಜ ಸ್ಥಿತಿ ಬೇರೆ ಕೇಡಿಗೆ.

***

’ನಾವು ಭಾರತೀಯರೂ, ಒಹೋಯ್!’ ಎಂದು ಮೊನ್ನೆ ಮೊನ್ನೆ ತಾನೆ ಅಶ್ವಥ್ ಕೂಗಿ ಹೋಗಿದ್ದರಲ್ಲವೇ? ಸಗಣಿಯೊಳಗಿನ ಹುಳುಗಳಿಗೆ ಅದೇ ಪ್ರಪಂಚ, ಒಂದು ವೇಳೆ ಅವುಗಳನ್ನೇನಾದರೂ ಯಾರಾದರೂ ಎತ್ತಿ ಹೊರಗೆ ಬಿಟ್ಟರೂ ಮತ್ತೆ ಸಗಣಿಯೊಳಗೆ ಸಿಗುವ ಸುಖಕ್ಕೆ ಜೋತು ಬೀಳುವ ಜಾತಿ. ಹಾಗೇ ಬಾವಿ ಕಪ್ಪೆಗಳೂ ಕೂಡ, ತಮ್ಮದೇ ಪ್ರಪಂಚದಲ್ಲಿ ತಾವೇ ದೊಡ್ಡವರು ಎಂದುಕೊಂಡ ಹಾಗೆ.

ಇವೇ ಅತಿರಥ-ಮಹಾರಥರು ಅಮೇರಿಕದ ಸಮ್ಮೇಳನಗಳಿಗೆ ಬಂದಾಗ ಬಾಲ ಮುದುರಿಕೊಂಡು ತಮಗೆ ತೋಚಿದ್ದನ್ನ ಬರೀತಾರೇ ವಿನಾ ಯಾರೊಬ್ಬರ ಹೆಸರಿಗೂ ಮಸಿ ಬಳಿಯುವ ಕಾಯಕಕ್ಕಂತೂ ಕೈಗೂಡಿದ್ದನ್ನ ನಾನು ನೋಡಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಅಮೇರಿಕದಲ್ಲಿ ಇನ್ನೂ ಮುಗಿಯದೇ ಇದ್ದ ’ಬಾಲ್ಟಿಮೋರ್ ಸಮ್ಮೇಳನ’ವನ್ನು ಈಗಾಗಲೇ ಮುಗಿದು ಹೋಯಿತು ಎಂದು ವರದಿಯನ್ನು ಹೊರಗೆ ಹಾಕಿದ್ದಕ್ಕೂ ಒಂದು ಅಪಾಲಜಿ ಇವುಗಳ ಮುಸುಡಿಯಿಂದ ಹೊರಡಲ್ಲ. ಇದ್ದ ಬದ್ದ ಸುದ್ದಿಗೆ ಒಂದಿಷ್ಟು ಕಣ್ಣೊರೆಸುವ ಚಾಕಚಕ್ಯತೆಯನ್ನು ಮುಟ್ಟಿಸಿ ಸುಳ್ಳಿನ ಮೇಲೆ ನೂರೆಂಟು ಸುಳ್ಳನ್ನು ಹೇಳೋ ಪದ್ಧತಿಯೂ ಇನ್ನೂ ನಿಂತ ಹಾಗಿಲ್ಲ.

***

’ಮೌಲ್ಯ’ವೆಂದರೇನು ಎಂದು ತಿಳಿದು ಅದನ್ನು ಪಚನ ಮಾಡಿಕೊಳ್ಳಲು ಇನ್ನೂ ಒಂದೈದು ಸಾವಿರ ವರ್ಷಗಳಾಗಬೇಕು ನಮಗೆ. ಇನ್ನು ಮೌಲ್ಯವನ್ನು ಆಧರಿಸಿದ ರಾಜಕಾರಣವೆಂದರೇನದು? ನಾವೆಲ್ಲ ಕುರಿಗಳು ಎಂದು ಕವಿಗಳು ಆಡಿ ಅಣಗಿಸಲಿಲ್ಲವೇ? ಅಂಥ ಕುರಿಗಳ ಮಂದೆಗೆ ಅಮೇರಿಕದೊಂದಿಷ್ಟು ಜನ ಪಾಪ ಏನೋ ಸಹಾಯವಾಗಲಿ ಎಂದು ಮನೆ-ಮಠ ಬಿಟ್ಟು, ಇರುವ ರಜಾ ವಜಾ ಮಾಡಿಕೊಂಡು, ಕೈಯಲ್ಲಿನ ಕಾಸು ಕರಗುವ ವರೆಗೂ ಪ್ರಯತ್ನ ಮಾಡುವ ಗೋಜಿಗಾದರೂ ಹೋಗುತ್ತಾರಲ್ಲ ಅದೇ ಮುಖ್ಯ.

ಐವತ್ತು ವರ್ಷಗಳಿಂದ ಚಲಾವಣೆಯಲ್ಲಿದ್ದ ಸಂವಿಧಾನ ಬದ್ಧ ’ಬಾವುಟ ಹಾರಿಸುವ ಕಾಯಿದೆ’ಯನ್ನು ಮುರಿದು ನಮ್ಮ ದೇಶದ ಬಾವುಟವನ್ನು ನಾವು ನಮ್ಮ ಮನೆ ಮುಂದೆ ಹಾರಿಸಿದರೆ ತಪ್ಪೇ? ಎಂದು ಸಾಧಿಸಿಕೊಂಡಿದ್ದು ನಮ್ಮಂಥ ಒಬ್ಬ ಅನಿವಾಸಿಯೇ.
ಅಮೇರಿಕದಲ್ಲಿ ಓದಿಕೊಂಡು, ಸದನದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಮುಂದೆ ಒಬ್ಬ ಪ್ರತಿಭಾವಂತ ಮುಖ್ಯಮಂತ್ರಿ ಎಂದು ಎಸ್. ಎಮ್. ಕೃಷ್ಣ ಹೆಸರು ತೆಗೆದುಕೊಳ್ಳಲಿಲ್ಲವೇ?

***

ಇಂಥವರ ಬಗ್ಗೆ ಬರೀ ಬೇಡ್ರಿ, ನಿಮ್ಮ ಮೂರುಕಾಸ್ ಪತ್ರಿಕೆಯಲ್ಲಿ, ಯಾರ್ ಕೇರ್ ಮಾಡ್ತಾರೆ? ಹಾಗೆ ಬರೆಯದೇ ಉಳಿದ ಜಾಗೆಯಲ್ಲಿ ಅವೇ-ಅವೇ ಪ್ರಭೃತಿಗಳ ದರ್ಶನ ಮಾಡಿಸಿಕೊಂಡು ಸುಖವಾಗಿರಿ. ಲಂಚ, ಭ್ರಷ್ಟಾಚಾರ ಅನ್ನೋದು ಹಾಡು ಹಗಲಿನ ದಂದೆಯಾಗಿದ್ದರೂ ಅದನ್ನು ಇದ್ದ ಹಾಗೆ ಬರೆದು ವರ್ಷಕ್ಕೊಬ್ಬ ಪುಂಡು ರಾಜಕಾರಣಿಯನ್ನಾದರೂ ಜೈಲಿಗೆ ಸೇರಿಸಿದ್ದೇ ನಿಜವಾಗಿದ್ದರೆ ಪತ್ರಿಕೆ ಪಾವನವಾಗುತ್ತಿತ್ತು, ಹಾಗಾಗೋದಿಲ್ಲ ಎಂದ ಮೇಲೆ ತಿಪ್ಪೇ ಸಾರಿಸಿಕೊಂಡೇ ಬಿದ್ದಿರಿ.

ಹೆಂಡ-ಸೀರೆ ಹಂಚಿ ಮತ ತೆಗೆದುಕೊಳ್ಳೋ ನಿಮ್ಮ ದೊರೆಗಳ ಪಾದ ನೆಕ್ಕೊಂಡು ಬಿದ್ದಿರಿ, ಇವತ್ತಲ್ಲ ನಾಳೆ ನಿಮಗೂ ಬೆಳಕಿನ ದರ್ಶನವಾದೀತು. ಬಡವರನ್ನ ದೋಚಿ ಸುಲಿಗೆ ಮಾಡಿ ಜಾತಿ ರಾಜಕಾರಣ ಮಾಡೋರು ನಿಮಗೆಲ್ಲ ಆದರ್ಶವಾಗಲಿ.

ದೇಶ ಬಿಟ್ಟು ಭಾಷೆ ಬಿಟ್ಟು, ಎಲ್ಲರಿಗಿಂತ ಹೆಚ್ಚು ಕೊರಗಿಕೊಂಡು, ಮನಸಲ್ಲಿ ಅಪ್ಪಟ ಮಾನವನಾಗಿ ಬೆಳೆಯೋ ಆಲೋಚನೆಗಳಿಗೆ ದಿನೇದಿನೇ ನೀರು ಕುಡಿಸುತ್ತಾ ಒಂದು ಕಡೆ ಬೇಡವೆಂದರೂ ದೂರ ಹೋಗುವ ಭಾರತೀಯತೆಯನ್ನು ಮತ್ತೊಂದು ಕಡೆ ಗಟ್ಟಿಯಾಗಿ ಅಪ್ಪಿಕೊಂಡೇ ನಾವು ನಿಟ್ಟುಸಿರು ಬಿಡ್ತೀವಿ, ಅವು ನಿಮಗೆಲ್ಲ ಖಂಡಿತ (ಈ ಜನುಮದಲ್ಲಿ) ಅರ್ಥ ಆಗಲ್ಲ ಬಿಡಿ.

Tuesday, March 11, 2008

ಈ ಮಹಾನುಭಾವರ ಬಗ್ಗೆ ಬರೆಯೋದೇ ತಪ್ಪೇ?

ನಾನು ದಿನನಿತ್ಯದ ವಿದ್ಯಮಾನಗಳ ಬಗ್ಗೆ ಓದಿ ಅವರಿವರು ಮಹಾನುಭಾವರ ಬಗ್ಗೆ ಚಿಂತಿಸಿ ಬರೆಯೋ ಪ್ರಕ್ರಿಯೆ ಹಾಗಿರಲಿ, ಪ್ರಪಂಚದಾದ್ಯಂತ ಯಾರು ಯಾರು ಏನೇನು ಮಾಡುತ್ತಿದ್ದಾರೆ ಎನ್ನೋದನ್ನ ತಿಳಿದುಕೊಳ್ಳೋ ಸವಾಲೇ ಇತ್ತೀಚೆಗೆ ದೊಡ್ಡದಾಗಿ ಕಾಣಿಸ್ತಾ ಇದೆ. ಅಂತಾದ್ದರಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಯಾರ ಹೆಸರು ಹೆಚ್ಚು ಚರ್ಚೆಗೆ ಒಳಪಡುತ್ತೋ, ನಾವು ದಶಕಗಳಿಂದ ಯಾರನ್ನು ಓದಿ/ನೋಡಿ ಬಲ್ಲೆವೋ ಅವರ ಹೆಸರೇ ಮನಸ್ಸಿನಲ್ಲಿ ಉಳಿಯೋದು ಸಹಜ ಎನಿಸಿಬಿಟ್ಟಿದೆ.

ಹೀಗಿರುವಾಗ, ನನಗಾದ ಇತ್ತೀಚಿನ ಎರಡು ಮಹತ್ತರ ನಿರಾಶೆಗಳನ್ನು ಇಲ್ಲಿ ದಾಖಲು ಮಾಡಬೇಕಾಯಿತು: ಒಂದು ಅಜ್ಞಾತವಾಸದಿಂದ ಹಿಂತಿರುಗಿದ ಬೆನಝೀರ್ ಭುಟ್ಟೋರನ್ನು ವ್ಯವಸ್ಥೆ ಬಲಿ ತೆಗೆದುಕೊಂಡದ್ದು, ಮತ್ತೊಂದು ನಿನ್ನೆ ಹೊರಬಂದ ನ್ಯೂ ಯಾರ್ಕ್ ಗವರ್ನರ್ ಎಲಿಯಟ್ ಸ್ಪಿಟ್ಝರ್ (Eliot Spitzer) ಸುದ್ದಿಯ ಪ್ರಕಾರ ಆತ ವೇಷ್ಯಾವಾಟಿಕೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು. ಅಂದಿನ ನ್ಯೂ ಜೆರ್ಸಿಯ ಗವರ್ನರ್ ಜಿಮ್ ಮಕ್‌ಗ್ರೀವೀ (Jim McGreevey) ಆಗಷ್ಟ್ ೨೦೦೪ ರಲ್ಲಿ ತನ್ನ ಹೋಮೋ ಸೆಕ್ಸ್ಯವಲ್ ಜೀವನ ಶೈಲಿಯನ್ನು ಬಹಿರಂಗ ಪಡಿಸಿ ರಾಜೀನಾಮೆ ಕೊಟ್ಟಿದ್ದರೆ, ನಾಲ್ಕು ವರ್ಷಗಳ ಬಳಿಕ ಎಲಿಯಟ್ ಸ್ಪಿಟ್ಝರ್ ವೇಷ್ಯಾವಾಟಿಕೆಯ ಸುಳಿಗೆ ಸಿಕ್ಕು ರಾಜೀನಾಮೆ ಕೊಡುವ ಸಂದರ್ಭ ಬರುತ್ತದೆ ಎಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ.

ಡಲ್ಲಾಸ್ ನ್ಯೂಸ್ ನಲ್ಲಿ ಪ್ರಕಟವಾಗಿರುವ ಈ ಎರಡು ಚಿತ್ರಗಳನ್ನು ನೋಡಿದರೆ ಇದೇನು ಅವರಿಬ್ಬರ ಜೋಡಿಯೂ ಮಾತನಾಡಿಕೊಂಡು ಈ ರೀತಿಯ ಪ್ರೆಸ್ ಕಾನ್‌ಫರೆನ್ಸ್ ಕೊಡುತ್ತಿದ್ದಾರೇನೋ ಅನ್ನಿಸುವುದು ನಿಜ.



***

ಭುಟ್ಟೋ ಬಗ್ಗೆ ಬರೆದೆ, ಆಕೆಯನ್ನು ಸಮಾಜ ಆಪೋಷನ ತೆಗೆದುಕೊಂಡಿತು, ಸ್ಪಿಟ್ಝರ್ ಬಗ್ಗೆ ಬರೆದು ಆತ ವಾಲ್ ಸ್ಟ್ರೀಟ್ ದೊರೆಗಳನ್ನು ಕಾಡಿಸಿದ್ದರ ಬಗ್ಗೆ ಬರೆದು ನಿಜವಾಗಿಯೂ ಉತ್ತಮ ಅಡ್ಮಿನಿಷ್ಟ್ರೇಟರ್ ಎಂದು ಹಾಡಿ ಹೊಗಳಿದರೆ ಆತನಿಗೆ ಈ ಸ್ಥಿತಿ ಬಂದಿತು.

ಸ್ಪಿಟ್ಝರ್ ವೇಷ್ಯಾವಾಟಿಕೆಯ ಸುದ್ದಿಗಳ ಹಿಂದೆ ಅದೇನು ಅಡಗಿದೆಯೋ ಆದರೆ ಆತ ಸಾರ್ವಜನಿಕ ಕ್ಷಮೆ ಕೋರಿದ್ದಂತೂ ನಿಜ. ಅಲ್ಲಿಗೆ ಕಥೆ ಮುಗಿದಂತೆಯೇ, ಯಾವೊಬ್ಬ ಪ್ರಸಿದ್ಧ ಹಾಗೂ ಪವರ್‌ಫುಲ್ ರಾಜಕಾರಣಿ ಹಾಗೂ ವ್ಯಕ್ತಿ ದೇಶದ ರಾಜಕಾರಣದಲ್ಲಿ ಮಿಂಚುತ್ತಾನೆ ಎಂದು ಸಮಾಜ ಕನಸು ಕಂಡಿತ್ತೋ ಅದೆಲ್ಲವೂ ನೀರಿನಲ್ಲಿ ತೊಳೆದ ಹೋಮವಾಗಿ ಹೋಯಿತು. ಈ ಸ್ಕ್ಯಾಂಡಲ್ಲನ್ನು ಗೆದ್ದು ಸ್ಪಿಟ್ಝರ್ ಹೊರಬರದೇ ಇರುತ್ತಾನೆಯೇ, ಅಥವಾ ಹಾಗೆ ಹೊರಬಂದರೂ ಸಮಾಜಕ್ಕೆ ಯಾವ ಮುಖವನ್ನು ತೋರಿಸಬಲ್ಲ ಎನ್ನುವುದು ನಿಜವಾಗಿ ಇನ್ನು ಕಾಲ ನಿರ್ಣಯಿಸಬೇಕಾದ ವಿಚಾರ.

***

ಪ್ರೆಸಿಡೆಂಟ್ ಆಗಿದ್ದಾಗ ಬಿಲ್ ಕ್ಲಿಂಟನ್ ಅದೇನೇನನ್ನೋ ಮಾಡಲಿಲ್ಲವೇ ಎಂದು ಪ್ರಶ್ನೆಗಳು ಏಳುವುದು ಸಹಜ - "What I think is what I say, what I say is what I do!" ಎಂದು ಕೆಲವು ತಿಂಗಳುಗಳ ಹಿಂದೆ ಎದೆ ತಟ್ಟಿಕೊಂಡು ನ್ಯೂ ಯಾರ್ಕ್ ಗವರ್ನರ್ ಪಟ್ಟ ಏರಿ ಮುಂದೆ ಮೇಲೆ ಬರಬೇಕಾಗಿದ್ದ ಸ್ಪಿಟ್ಝರ್ ಗೂ ಅಂದಿನ ಪ್ರೆಸಿಡೆಂಟ್ ಕ್ಲಿಂಟನ್ನ್ ಗೂ ಇರೋ ಸವಾಲುಗಳು ಬೇರೆಯವೇ ಅನ್ನೋದು ನನ್ನ ಅಭಿಮತ.

ಒಟ್ಟಿನಲ್ಲಿ ನ್ಯೂ ಯಾರ್ಕ್ ರಾಜ್ಯ, ಹಾಗೂ ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತೊಬ್ಬ ಮುಖಂಡ/ಮುಂದಾಳುವನ್ನು ಕಳೆದುಕೊಂಡಿದೆ. ದಶಕಗಳ ಛಲ, ಮುಂಬರುವ ಪ್ರವೃತ್ತಿ, ಆಶಾವಾದ ಹಾಗೂ ಹಾವರ್ಡ್ ಶಿಕ್ಷಣ ಇವೆಲ್ಲವೂ ಒಂದೇ ಒಂದು ಸುದ್ದಿಯಲ್ಲಿ ತೊಳೆದು ಹೋದ ಹಾಗಿದೆ. ದೇಶದ ರಾಜಕಾರಣ ಒಬ್ಬ ಪ್ರಬುದ್ಧ ಲೀಡರ್‌ನನ್ನು ಇಲ್ಲದಂತಾಗಿಸಿಕೊಂಡಿದೆ.

ಅಮೇರಿಕದಲ್ಲಿ ಜನ ಇತ್ತೀಚೆಗೆ ಸ್ಟಾಕ್ ಮಾರ್ಕೆಟ್ ಸ್ಕ್ಯಾಂಡಲ್ಲುಗಳಲ್ಲಿ (ಎನ್ರಾನ್, ಎಮ್‌ಸಿಐ, ಇತ್ಯಾದಿ) ಬಳಲಿ ತಮ್ಮ ಮುಖಂಡರಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ Integrity (Truthfulness, Honest and Trust worthiness) ಯನ್ನು ನಿರೀಕ್ಷಿಸುವುದು ಸಹಜವೇ. ಇರಾಕ್ ಯುದ್ಧದಲ್ಲಿ ಹಲವಾರು ಸುಳ್ಳನ್ನು ಹೇಳಿದ ಅಡ್ಮಿನಿಷ್ಟ್ರೇಷನ್ನ್ ಬಗ್ಗೆ ಹಲವಾರ ಅಸಮಧಾನವೂ ಇರಬಹುದು. ಇವೆಲ್ಲ ಹಿನ್ನೆಲೆಯಲ್ಲಿ ಸ್ಪಿಟ್ಝರ್ ಭವಿಷ್ಯವನ್ನು ಒರೆ ಹಾಕಿ ನೋಡಿದರೆ ನನಗಂತೂ ಮೂಸೆಯಲ್ಲಿ ಕರಗಿ ಹೊಳೆಯುವ ಬಂಗಾರದ ಬದಲು ಸುಟ್ಟು ಕರಕಲಾದ ಕಟ್ಟಿಗೆಯ ಅವಶೇಷವೇ ಕಾಣುತ್ತದೆ.

ಇನ್ನು ಸ್ಪಿಟ್ಝರ್ ಅನ್ನು ಆತನ ದೇವರೇ ಕಾಪಾಡಬೇಕು!