Tuesday, February 20, 2007

What have you gained from all this?

ಜನವರಿ ೧೭ ರಂದು ಭಾರತದ ಪ್ರವಾಸದ ಬಗ್ಗೆ ಕಿರಿದಾಗಿ ಬರೆದಾಗ 'ದಿನದಿನಕ್ಕೂ ಮೋಸ ಹೋಗುವವರಲ್ಲಿ, ಮೋಸ ಮಾಡುವವರಲ್ಲಿ ಕಾಣಿಸಿದ ಹೆಚ್ಚಳ' ಎಂದು ಬರೆದಿದ್ದೆ. ಈ ದಿನ ಅದರ ಮೇಲೆ ಸ್ವಲ್ಪ ಬೆಳಕು ಚೆಲ್ಲಿದರೆ ಹೇಗೆ ಎನ್ನಿಸಿತು.

ಎಷ್ಟೋ ವರ್ಷಗಳ ಹಿಂದೆ ಶಿವಮೊಗ್ಗ ಮಾರ್ಕೆಟ್‌ನಲ್ಲಿ ಸೇಬು ಹಣ್ಣುಗಳನ್ನು ಕೊಂಡಾಗ ನಮ್ಮನ್ನು ಬೇಸ್ತು ಬೀಳಿಸಿ ಒಳ್ಳೆಯ ಹಣ್ಣುಗಳ ಜೊತೆಗೆ ಸಾಧಾರಣ ಹಣ್ಣುಗಳನ್ನು ದಾಟಿಸಿ ತನ್ನ 'ಕೈಚಳಕ' ತೋರಿದ ವ್ಯಾಪಾರಿಯೊಬ್ಬನನ್ನು ಇಂದಿಗೂ ನೆನೆಸಿಕೊಳ್ಳುತ್ತೇನೆ. ನೀವು ಭಾರತದಲ್ಲಿ ವ್ಯವಹಾರ ಮಾಡುವಾಗ ಸೂಕ್ಷ್ಮವಾಗಿರದಿದ್ದರೆ ನಿಮ್ಮನ್ನು ಏಮಾರಿಸಿ ನೀವು ತೆರೆಳಿದ ಬಳಿಕ ಮೀಸೆ ಮೇಲೆ ಕೈ ಆಡಿಸುವವರೇ ಹೆಚ್ಚು. ಇನ್ನು ನೀವು ಎನ್.ಆರ್.ಐ. ಎಂದು ಗೊತ್ತಾದರಂತೂ ಮುಗಿದೇ ಹೋಯಿತು, ಒಂದಕ್ಕೆರಡು ಬೆಲೆ ಹಾಕುವುದು ಇರಲಿ, 'ಬೆಪ್ಪು ಮುಂಡೇವು, ಏನೂ ಗೊತ್ತಾಗೋದಿಲ್ಲ!' ಎಂಬ ಅಸಡ್ಡೆಯ ಪ್ರದರ್ಶನವೂ ರಾಜಾರೋಷವಾಗಿ ನಡೆಯುತ್ತದೆ, ಇಷ್ಟೆಲ್ಲಾ ಆದಮೇಲೂ ನನ್ನಂತಹವರು ಮುಗುಳು ನಗುತ್ತಾ 'ಥ್ಯಾಂಕ್ಯೂ' ಎಂದು ಬೇರೆ ಹೇಳುತ್ತೇವಲ್ಲ, ನಮ್ಮ ಪ್ರಾರಬ್ಧಕ್ಕೆ ಬೈದುಕೊಳ್ಳಬೇಕೇ ವಿನಾ ಮತ್ತೇನೂ ಮಾಡೋಕಾಗೋದಿಲ್ಲ.

ಒಂದು ಲೆಕ್ಕದಲ್ಲಿ ಈ ದಿನನಿತ್ಯದ ವ್ಯವಹಾರದಲ್ಲಿ ಸತ್ಯ-ಪ್ರಾಮಾಣಿಕತೆ ಅನ್ನೋದು ಸತ್ತೇ ಹೋಗಿದೆ ಎಂದೇ ಹೇಳಬೇಕು, ಸ್ಪರ್ಧಾತ್ಮಕವಾಗಿ ಬದುಕೋದು ಎಂದರೆ ಅದನ್ನು ಮೋಸ ಮಾಡಿ ಬದುಕುವುದು ಎಂದು ಬದಲಾಯಿಸಿಕೊಂಡ ಹಾಗೆ ತೋರೋದು ಕೇವಲ ನನ್ನ ಭ್ರಮೆ ಆದರೆ ಎಷ್ಟೋ ಚೆನ್ನಾಗಿತ್ತು. ಮೊದಲೇ ಹೆಚ್ಚು ಜನರಿರುವ, ಎಲ್ಲಿ ಹೋದರೂ 'ನೆಕ್ ಟು ನೆಕ್' ಸ್ಪರ್ಧೆಯನ್ನು ಜೊತೆಯಲ್ಲಿ ತರುವ ವಾತಾವರಣ, ಅದರ ಜೊತೆಯಲ್ಲಿ ಮೋಸ ಮಾಡುವವರಿಂದ ನಿಮ್ಮನ್ನು ನೀವು ರಕ್ಷಿಸಿಕೊಂಡು ಬದುಕಿ ಬರಬೇಕು ಎಂದರೆ ಅದು ದಿನನಿತ್ಯದ ಚಕ್ರವ್ಯೂಹವೇ ಸರಿ. ಈ ಕೆಳಗಿನ ಉದಾಹರಣೆಗಳನ್ನು ನೋಡಿ:

- ಬೆಂಗಳೂರಿನಲ್ಲಿ ಸಂತೋಷ್ ಚಿತ್ರಮಂದಿರಕ್ಕೆ ಹೋಗಿ 'ಕಲ್ಲರಳಿ ಹೂವಾಗಿ' ಚಿತ್ರಕ್ಕೆ ಟಿಕೇಟು ತೆಗೆದುಕೊಂಡರೆ, ಕೌಂಟರಿನ ಹಿಂದಿರುವ ವ್ಯಕ್ತಿ ಕೇಳಿದ ಹೊರತೂ ಚಿಲ್ಲರೆಯನ್ನು ಕೊಡಲಿಲ್ಲ - ಟಿಕೇಟು ಕೊಟ್ಟವನಿಗೆ ಟಿಪ್ ಕೊಡಬೇಕು ಎಂದು ನಿಯಮೇನಾದರೂ ಇದೆಯೇ?
- ಆಟೋ ರಿಕ್ಷಾ ಡ್ರೈವರ್‌ಗೆ ಐವತ್ತು ರೂಪಾಯಿಯ ನೋಟೊಂದನ್ನು ಕೊಟ್ಟು, ಉಳಿದ ಚಿಲ್ಲರೆಯನ್ನು ಕೊಡಲು ದುಡ್ಡು ಎಣಿಸುತ್ತಿರುವಾಗ ಮೊದಲು ಕೊಟ್ಟ ಐವತ್ತು ರೂಪಾಯಿಯ ನೋಟನ್ನು 'ನೀವು ಕೊಟ್ಟೇ ಇಲ್ಲಾ ಸಾರ್' ಎಂದು ಸಾಧಿಸಿ ವಾದ ಮಾಡಿದರೆ ಹಾಡ ಹಗಲೇ ಸುಳ್ಳು ಹೇಳುವ ಅವನನ್ನು ನನ್ನಂತಹವರು ಏನು ಮಾಡೋದು?
- ಒಂದು ಮಸಾಲೆ ದೋಸೆ ೨೫ ರೂಪಾಯಿ ಚಾರ್ಚ್ ಮಾಡಿಯೂ ಅದರ ಜೊತೆಯಲ್ಲಿ ಕೊಟ್ಟಿರುವ ಚಟ್ನಿ ಹಳಸಿದೆ ಎಂದು ದೂರು ಕೊಟ್ಟರೆ ನಾನು all of a sudden ಶಿಲಾಯುಗದ ಮನುಷ್ಯನಂತೆ ಆಗಿ ಹೋದೆ ಎಂದು ಸಪ್ಲೈಯರ್‌ನಿಂದ ಹಿಡಿದು ನನ್ನ ಜೊತೆಯಲ್ಲಿದ್ದವರ ಅಂಬೋಣ - ಹಳಸಿದ ಚಟ್ನಿಯನ್ನು ತಿನ್ನೋದು ನನ್ನ ಕರ್ಮವಲ್ಲ, ಆ ಭಾಗ್ಯಕ್ಕೆ ಇಪ್ಪತ್ತೈದು ರೂಪಾಯಿಗಳನ್ನು ಬೇರೆ ಕೊಡಬೇಕೇಕೆ?
- ಮನೆ ಕಟ್ಟಿಸಿಕೊಳ್ಳಬೇಕು ಎಂದು ಒಂದು ಸೈಟು ತೆಗೆದುಕೊಂಡರೆ ಅದನ್ನು 'ರಕ್ಷಣೆ' ಮಾಡಿಕೊಳ್ಳಬೇಕಂತೆ: ರಾತ್ರೋರಾತ್ರಿ ಮಂದಿರ-ಮಸೀದಿಯನ್ನು ಕಟ್ಟುವುದರಿಂದ ಹಿಡಿದು, ನಿಮ್ಮ ಸೈಟುಗಳನ್ನು ಎರಡು ಮೂರು ಜನರಿಗೆ ಮಾರಿ ನೀವು ಯಾವ ಕೋರ್ಟಿಗೆ ಎಷ್ಟು ವರ್ಷ ಅಲೆದರೂ ನಿಮ್ಮ ಸೈಟು ನಿಮಗಿಲ್ಲವಾಗಿಸುವ ವ್ಯವಸ್ಥೆ, ಉದಾಹರಣೆಗಳು ಬೇಕಾದಷ್ಟಿವೆ.

ಪ್ರಾಮಾಣಿಕತೆ ಇಲ್ಲ, ಅಥವಾ ಮೊದಲಿಗಿಂತಲೂ ಪರಿಸ್ಥಿತಿ ಬದಲಾಗಿದೆ ಎಂದೋ ನಾನು ಜೆನರಲೈಸ್ ಮಾಡಿದರೆ ತಪ್ಪಾದೀತು. ಈ ವ್ಯವಸ್ಥೆಯಲ್ಲೇ ನಾನೂ ಹುಟ್ಟಿ ಬೆಳೆದವನೇ. ನನ್ನ ರಕ್ತ ಹೀರುವ ಸೊಳ್ಳೆಗಳನ್ನು - ನನಗೆ ಏಟು ಬಿದ್ದರೂ ಪರವಾಗಿಲ್ಲ ಆದರೂ ನನ್ನ ರಕ್ತ ಹೀರಿದ ಇದನ್ನು ಸುಮ್ಮನೇ ಬಿಡಬಾರದು - ಎಂದು ಬಲವಾಗಿಯೇ ಬಾರಿಸಿ ನಿಷ್ಕರುಣೆಯಿಂದ ಹೊಸಕಿ ಹಾಕುವ ಕ್ರೂರತೆ ನನ್ನಲ್ಲಿ ಎಂದೂ ಮಾಸಲಾರದು. ಆದರೆ ಇಂತಹ ಕ್ರೌರ್ಯವನ್ನೇ ಬದುಕಾಗಿ ಮಾಡಿಕೊಂಡಿರುವುದಾದರೆ ಹೇಗೆ ಎಂದೆನಿಸದಿರಲಿಲ್ಲ. ಭಾರತದಲ್ಲಿನ ವ್ಯವಸ್ಥೆಯಲ್ಲಿ ಸೊಳ್ಳೆಗಳು ಸಮಾಜದ ಒಂದು ಭಾಗ - ನಾವು, ನಮ್ಮ ಮನೆ, ನಮ್ಮ ನೆರೆಹೊರೆ ಇರುವ ಬಗೆ, ಮುಂದೆಯೂ ಹಾಗೆ ಇರುವ ಸೂಚನೆಗಳು ಇಂದು ನಿನ್ನೆಯವಲ್ಲ. ಹಲವು ದಿನಗಳ ಕಾಲ ಅಲ್ಲಿಗೆ ರಜೆಯಲ್ಲಿ ಹೋದ ನನಗೆ ರಕ್ತ ಹೀರುವ ಸೊಳ್ಳೆಗಳಿಂದ ಮುಕ್ತಿ ಸಿಗಲಿ ಎಂದುಕೊಂಡರೆ ಅದು ಅಪಹಾಸ್ಯವಾದೀತು. ಆದರೆ ಇಂದಿನ ಸೊಳ್ಳೆಗಳು ಕಾಲನ ಸವಾಲಿನಲ್ಲಿ ಬದಲಾಗಿವೆ, ನನಗೆ ಗೊತ್ತಿರುವ ಡಿಡಿಟಿ ಅಂತಹ ಔಷಧಗಳು, ಕೀಟನಾಶಕಗಳು ಇಂದು ಯಾವ ಕೆಲಸವನ್ನೂ ಮಾಡಲಾರವು - ಬದಲಿಗೆ ಟಾನಿಕ್ ಆಗಿ ಪರಿವರ್ತಿತಗೊಳ್ಳದಿದ್ದರೆ ಸಾಕು. ಇಂದಿನ ಸೊಳ್ಳೆಗಳು ಪ್ರದರ್ಶಿಸುವ ಹೊಸಹೊಸ ಚಾಲಾಕುಗಳಿಗೆ ನನ್ನ ಉತ್ತರಗಳು ಅಷ್ಟೇ ಮಾರ್ಪಾಡು ಹೊಂದಿಲ್ಲವಾದ್ದರಿಂದ ಅಲ್ಲಿನ ಮಾರುಕಟ್ಟೆಯಲ್ಲಿ ನನ್ನನ್ನು ಒಬ್ಬನೇ ಬಿಟ್ಟು ಬಂದಿದ್ದಾದರೆ ಒಮ್ಮೆ ತಡವರಿಸುವುದಂತೂ ಗ್ಯಾರಂಟಿ.

ಈ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯಬಹುದಾದರೂ ಇಲ್ಲಿ ಒಂದೆರಡು ಸಾಲುಗಳನ್ನು ಹಾಕುವುದು ಪ್ರಸ್ತುತವೆನಿಸಿತು - ಅಮೇರಿಕದ ಬದುಕು ನನ್ನಲ್ಲಿ ಚಾಲಾಕಿತನವನ್ನು ಹೆಚ್ಚಿಸಿಲ್ಲ, ಇಲ್ಲಿ ಬಂದಮೇಲೆ ರಕ್ತ ಹೀರುವ ಸೊಳ್ಳೆಗಳಿಂದ ಇನ್ನೂ ಕಚ್ಚಿಸಿಕೊಂಡಿಲ್ಲ - ಸೊಳ್ಳೆಗಳಿವೆ, ಅವುಗಳು ಇರುವಲ್ಲಿ ನಾನು ಹೋಗಿ ಮಾಡಬೇಕಾದೇನೂ ಇಲ್ಲ. ಇಲ್ಲಿ ದುಡಿದ ಹಣ, ಅದರ ಮಹತ್ವವನ್ನು ತಿಳಿಸಿಕೊಟ್ಟಿದ್ದೂ ಅಲ್ಲದೇ ನಾನು ಖರ್ಚು ಮಾಡಬಹುದಾದ ಹಣಕ್ಕೆ ಅದಕ್ಕೆ ತಕ್ಕನಾಗಿ ಸೇವೆಯನ್ನು ಅಪೇಕ್ಷಿಸುವ ಮನಸ್ಥಿತಿಯನ್ನೂ ನಿರ್ಮಿಸಿಕೊಟ್ಟಿವೆ. ಮನೆ ಕೆಲಸದಿಂದ ಹಿಡಿದು ಉಳಿದೆಲ್ಲವನ್ನೂ ನಾವು-ನಾವೇ ಮಾಡಿಕೊಂಡು ಸ್ವತಂತ್ರವಾಗಿ ಬದುಕಬಹುದಾದ ತಾಕತ್ತನ್ನೂ ಅದಕ್ಕೆ ಊರುಗೋಲಾಗಬಹುದಾದ ಮೈಂಡ್‌ಸೆಟ್ ಅನ್ನೂ ಹುಟ್ಟುಹಾಕಿವೆ. ಎಲ್ಲಿಯಾದರೂ ಸಾದುತನ ಕಂಡರೆ ನಾನು ಎಂದೂ ಮೋಸ ಮಾಡಲು ತಕ್ಕದಾದ ಪ್ರಾಣಿಯೊಂದು ಸಿಕ್ಕಿತು ಎಂದು ಯೋಚಿಸಿಕೊಳ್ಳದೇ ಅದರ ಬದಲಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಲು ಮನಸ್ಸು ಮಾಡುತ್ತೇನೆ. ಹನಿಹನಿಗೂಡಿ ಹಳ್ಳವಾದರೂ ಅಂತಹ ಹಳ್ಳ ಹುಟ್ಟಿ ಹೆಚ್ಚುಕಾಲ ನಿಲ್ಲುವಂತೆ ಶ್ರಮವಹಿಸುತ್ತೇನೆ. ಒಂದು ಡಾಲರಿಗೆ ಎರಡು ಸಿಗುವ ಕೊತ್ತಂಬರಿ ಸೊಪ್ಪಿನಿಂದ ಹಿಡಿದು ಸಾವಿರಾರು ಡಾಲರಿಗೆ ಯಾವುದೇ ವಸ್ತುಕೊಂಡರೂ 'ಎದುರಿನ ವ್ಯಕ್ತಿ ಮಾಸ ಮಾಡುತ್ತಿರಬಹುದೇ' ಎಂದು ಒಮ್ಮೆಯೂ ಯೋಚಿಸುವುದಿಲ್ಲ...

ಹೀಗಿನ ನನ್ನ ವರ್ತನೆ ಭೋಳೇತನವಾಗಿ ಕಂಡುಬರಬಹುದು, 'ಬಿತ್ತು ಗಿರಾಕಿ'ಯಾಗಬಹುದು, ರಕ್ತ ಹೀರುವ ಸೊಳ್ಳೆಗಳಿಗೆ ಆಶ್ರಯವಾಗಬಹುದು... ನನಗೆ ಮೋಸವಾಗುತ್ತಿರುವುದು ಗೊತ್ತಾಗಿಯೂ ಅದನ್ನು ಸಹಿಸಿಕೊಂಡು ಏನೂ ಆಗೇ ಇಲ್ಲವೆನ್ನುವ ಮನಸ್ಥಿತಿಯಂತೂ ಇನ್ನೂ ಬಂದಿಲ್ಲ...ಹೀಗೆ ಮೋಸ ಮಾಡಿದವರನ್ನು ದುರುಗುಟ್ಟಿ ನೋಡಿಯೂ ಬಾಯಿಬಿಟ್ಟು ಕೇಳಿದರೆ ಅಂತಹವರ ಅಂತಃಕರಣವನ್ನೋದೇನಾದರೂ ಇದ್ದರೂ ಅವರು ಬದಲಾಗೋದಿಲ್ಲ. ಮೋಸ ಮಾಡುವುದು ಅವರವರ ಬದುಕಿನ ಒಂದು ಅಂಗವಾಗಿಹೋಗಿದೆ ಎನ್ನಿಸದಿರಲಿಲ್ಲ.

ಹೀಗೆ ಶತಮಾನಗಳಿಂದ ಮೋಸ ಮಾಡಿ, ಮಾಡಿಸಿಕೊಂಡು, ಇಂತಹ ಹಲವಾರು ಬದುಕುಗಳನ್ನು ಬದುಕಿ, ಎಲ್ಲವನ್ನೂ ಮಾಡಿ, ನೋಡಿ, ಕಂಡಂತಹವರಿಗೆ ನನ್ನ ಒಂದೇ ಒಂದು ಪ್ರಶ್ನೆ - what have you gained from all this?

Monday, February 12, 2007

ರಾಜ್ ಸಮಾಧಿ

ಪ್ರತೀ ಸಾರಿ ರಾಜ್‌ಕುಮಾರ್ ಸಮಾಧಿ ಹತ್ತಿರ ಹೋಗಿ ಬರಬೇಕು, ಅವರು ಜೀವಂತವಾಗಿದ್ದಾಗಲಂತೂ ನನಗೆ ನೋಡುವ ಭಾಗ್ಯ ಸಿಗಲಿಲ್ಲ ಎಂದು ಅಂದುಕೊಂಡಾಗಲೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಕ್ರಮ ಬದಲಾಗಿ ಹೋಗೋದು. ಅದೂ ಅಲ್ಲದೆ ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗಾದರೂ ಹೋಗಿ ಬಂದರೆ ಕೊನೇ ಪಕ್ಷ ಅದಕ್ಕೋಸ್ಕರ ಒಂದರ್ಧ ದಿನವಾದರೂ ಹೋಗದೇ ಇರೋದಿಲ್ಲ. ನನ್ನ ಅದೃಷ್ಟಕ್ಕೆ ಜನವರಿ ಹನ್ನೆರಡರಂದು ಬೆಂಗಳೂರಿನಿಂದ ಕೆಜಿಎಫ್‌ಗೆ ಹೋಗೋದಕ್ಕೆ ಟಾಟಾ ಸುಮೋ ಬುಕ್ ಮಾಡಿದಾಗ ನಮಗೆ ಸಿಕ್ಕ ಡ್ರೈವರ್ ರಾಜ್‌ಕುಮಾರ್ ಮನೆಯಲ್ಲಿ ಬಟ್ಟೆ ಇಸ್ತ್ರಿ ಹಾಕಿಕೊಂಡಿದ್ದವನೆಂದು ಅವನಿಂದಲೇ ತಿಳಿಯಿತು. ಹಾಗೇ ಕೆಜಿಎಫ್‌ನಿಂದ ಹಿಂತಿರುಗುವಾಗ ಮಧ್ಯಾಹ್ನ ಪೀಣ್ಯಾದ ಹತ್ತಿರವಿರುವ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಸಿಕ್ಕ ಚಿತ್ರಗಳಿವು.

ಪ್ರತಿ ತಿಂಗಳು ಹನ್ನೆರಡರಂದು ರಾಜ್‌ಕುಮಾರ್ ಸಮಾಧಿ ಬಳಿ ವಿಶೇಷ ಪೂಜೆ ಇರುತ್ತಂತೆ, ಆದ್ದರಿಂದ ರಾಜ್ ಅವರ ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಿದ್ದರು. ರಿಂಗ್ ರೋಡಿಗೆ ಅಂಟಿಕೊಂಡೇ ಇರುವ ಆವರಣದಲ್ಲಿ ರಾಜ್ ಸಮಾಧಿ ಎದ್ದು ಕಾಣುತ್ತಿತ್ತು, ಸುತ್ತಲೂ ನಾನಾ ರೀತಿಯ ಬ್ಯಾನರ್‌ಗಳು ಮುಖ ಚಾಚಿಕೊಂಡಿದ್ದವು.

ಕಳೆದ ಏಪ್ರಿಲ್‌ನಲ್ಲಿ ನಡೆದ ಹಿಂಸಾಚಾರವನ್ನು ನೆನೆಸಿಕೊಂಡ ನನಗೆ ಈ ವರ್ಷ ಏಪ್ರಿಲ್ ಹನ್ನೆರಡರಂದು ಬೆಂಗಳೂರಿನಲ್ಲಿ ಗಲಾಟೆಗಳಾಗದಿದ್ದರೆ ಸಾಕು ಎಂದೆನಿಸಿತು.






Tuesday, February 06, 2007

ಒಂಟಿ ಮರದ ಹಾಡು




ಬಿದ್ದು ಹೋಗುವ ಸೂರ್ಯನನು ಆರಾಧಿಸುವುದಾದರೂ ಏಕೆ
ದಿನನಿತ್ಯ ದುಡಿಯುವ ಅವನಿಗಾದರೂ ಬೇಡವೆ ನಾಳೆ ಎಂಬ ಚಿಂತೆ
ಅಥವಾ ಕತ್ತಲು ತುಂಬಿದ ಮತ್ತರ್ಧ ಗೋಳವನು ಬೆಳಗ ಬೇಡವೆ ಬೇಕೆ
ಅಲ್ಲಿಗೆ ಹೋದರೆಷ್ಟು ಬಿಟ್ಟರೆಷ್ಟು ಎಂಬ ಯೋಚನೆಗಳ ಕಂತೆ.

ಇಂದು ನಾಳೆ ಬಿದ್ದು ಹೋಗುವ ಒಂಟಿ ಮರ ನಾನು
ನನ್ನ ಅಧಿಕಾರ, ದರ್ಪವೆಷ್ಟು ಎಂದು ಕೇಳಬಹುದು ನೀನು
ನನ್ನನ್ನು ಈ ಸ್ಥಿತಿಗೆ ತಂದವರನ್ನು ಬಿಡು
ಇಂದು ಬಾಳಿ ಬದುಕ ಬೇಕಾದವರ ಸೊಕ್ಕನ್ನು ನೋಡು.

ಬಿದ್ದು ಹೋಗುವ ಸೂರ್ಯ ಎದ್ದು ಬರುತ್ತಿರುವ ಹಾಗೆ
ಹಲವರಿಗೆ ಕಂಡೀತು ಅದು ಕನಸೇನೂ ಅಲ್ಲ
ಬಿದ್ದು-ಎದ್ದು ಬರುವ ಸೂರ್ಯರ ಬಣ್ಣಗಳಲ್ಲೂ ಹಲವು ಬಗೆ
ಪಕ್ಕನೆ ವ್ಯತ್ಯಾಸ ಗುರುತು ಸಿಗುವುದಿಲ್ಲ.

ಸೂರ್ಯನನು ನಾನು ಮುಚ್ಚಿ ಮರೆಮಾಡುತಿಹೆ ಎಂದರೆ
ಕಿರಣಗಳ ಪ್ರಕೋಪಕ್ಕೆ ನೀನೇ ಹೋಗುತಿಹೆ ನನ್ನ ಮೊರೆ
ಇರುವಷ್ಟು ದಿನ ಇಲ್ಲಿ ನಾನು ಏನು ಬೇಕಾದರೂ ಮಾಡು
ಕೊನೆಗೆ ಬಾನು ಬರಿದಾಗುವುದರೊಳಗೊಮ್ಮೆ ಎದ್ದು ನೋಡು.

Friday, February 02, 2007

ಕೋಟಿಪುರ




ನಮ್ಮೂರು ಆನವಟ್ಟಿಯಿಂದ ಉತ್ತರಕ್ಕೆ ಹಾನಗಲ್ ಮಾರ್ಗದಲ್ಲಿ ಎರಡು ಕಿಲೋ ಮೀಟರ್ ದೂರದಲ್ಲಿ ಕೋಟಿಪುರವೆಂಬ ಹಳ್ಳಿಯಿದೆ, ಅಲ್ಲಿ ಸುಂದರವಾದ ಶಿವದೇವಾಲಯವೊಂದಿದೆ. ಇದು ಚಾಲುಕ್ಯರ ಕಾಲದ್ದು (೧೦ ನೇ ಶತಮಾನ). ಕೈಟಭೇಶ್ವರ ಎನ್ನುವುದು ಇಲ್ಲಿ ಶಿವನ ಹೆಸರು. ಹಿಂದೆ ಮಧು-ಕೈಟಭರೆಂಬ ಇಬ್ಬರು ರಾಕ್ಷಸ ಸಹೋದರರನ್ನು ಸಂಹಾರ ಮಾಡಿದ್ದರಿಂದ ಈ ಹೆಸರು ಬಂದಿತಂತೆ. ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವಿದೆ, ನೀವು ಬನವಾಸಿಗೆ ಹೋದರೆ ಅಲ್ಲಿಯ ಗೈಡ್‌ಗಳು ಇದರ ಬಗ್ಗೆ ಇನ್ನೂ ಚೆನ್ನಾಗಿ ವಿವರಿಸುತ್ತಾರೆ.

ದೂರದಿಂದ ಬಂದ ನನ್ನ ಸ್ನೇಹಿತರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋದಾಗಲೆಲ್ಲ ಅಲ್ಲಿಯ ಕೆತ್ತನೆಗಳನ್ನು, ಕಂಭಗಳ ನುಣುಪನ್ನು ನೋಡಿ ಬೆರಗಾಗಿ ಹೋಗುತ್ತಿದ್ದರು. ಈ ದೇವಸ್ಥಾನವನ್ನು ಕಾಪಾಡಿಕೊಂಡು ಹೋಗುವಲ್ಲಿ ಸರ್ಕಾರದ ಹಾಗೂ ಸ್ಥಳೀಯರ ಪ್ರಯತ್ನಗಳು ಶ್ಲಾಘನೀಯ. ದೇವಸ್ಥಾನದ ಒಳಗೆ ಹಾಗೂ ಹೊರಗೆ ತುಂಬಾ ತುಂಬಾ ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದಾರೆ. ಹಿಂದೆಲ್ಲಾ ಅಲ್ಲಲ್ಲಿ ಜೇಡರಬಲೆ ಕಾಣೀಸೋದು, ಈಗ ಹಾಗೇನೂ ಇರಲಿಲ್ಲ, ಸುತ್ತಲೂ ಹೂ ತೋಟವನ್ನು ಬೆಳೆಸಿ ನೋಡಲು ಬಹಳ ಚೆನ್ನಾಗಿ ಮಾಡಿದ್ದಾರೆ.

ನೀವು ಬನವಾಸಿಗೆ ಹೋದರೆ ಅಲ್ಲಿಂದ ಕೇವಲ ೨೦ ಕಿಮೀ ದೂರದಲ್ಲಿರುವ ಕೋಟಿಪುರಕ್ಕೂ ಹೋಗಿ ಬನ್ನಿ!

Thursday, February 01, 2007

ಸಲಿಂಗ ಕಾಮ ಬದುಕಾಗಬೇಕು ಎಂದರೆ...

ವಿಷಯದ ಬಗ್ಗೆ ಈವರೆಗೆ ಬರೆದೇ ಇಲ್ಲ ಅನ್ಸುತ್ತೆ...

ಈ ಸಾರಿ ಭಾರತಕ್ಕೆ ಹೋದಾಗ ಸುಮ್ನೆ 'ಲೂಸ್ ಟಾಕ್' ಅಂತಾರಲ್ಲ ಹಾಗೆ ಒಮ್ಮೆ ಆಗಿ ಹೋಯಿತು, ನಾವೆಲ್ಲ ನಮ್ಮ ಮನೆಯಲ್ಲಿ ಊಟಕ್ಕೆ ಕುಳಿತಿದ್ದೆವು, ನನ್ನ ಅಕ್ಕನ ಮಗ ಅರುಣ ನನ್ನ ಎದುರುಗಡೆ ಕುಳಿತಿದ್ದ, ದಿನವೂ ವ್ಯಾಯಾಮ ಮಾಡಿ ಚೆನ್ನಾಗಿ ಮೈಕಟ್ಟು ಬೆಳೆಸಿಕೊಂಡಿದ್ದಾನೆ ಎಂದು ಎಲ್ಲರ ನಡುವೆ ಒಂದು ಮಾತು ಬಂದಿತು. ನಾನು ಗಮನಿಸಿದಂತೆ ಅವನು ಹಾಕುತ್ತಿದ್ದ ಟೀ ಶರ್ಟ್ ಹಾಗೂ ಪ್ಯಾಂಟುಗಳು ಅವನಿಗೆ ಸ್ವಲ್ಪ ಬಿಗಿಯಾಗೇ ಇರುತ್ತಿದ್ದವು, ತೀರಾ ಮೈಗೆ ಹತ್ತಿಕೊಂಡು ಮೈಕಟ್ಟುಗಳನ್ನು ತೋರಿಸುವ ಹಾಗೆ. ನನಗೆ ಅದೆಲ್ಲಿಂದ ಹೊಳೆಯಿತೋ ಗೊತ್ತಿಲ್ಲ - 'ನಿನ್ನ ವೇಷ ಭೂಷಣ ನೋಡಿದ್ರೆ ಯಾವ್ ಥರ ಕಾಣ್ತೀಯಾ ಗೊತ್ತಾ?' ಎಂದು ಎಲ್ಲರ ಎದುರೇ ಕೇಳಿಬಿಟ್ಟೆ, ಎಲ್ಲರೂ ಗೊತ್ತಿಲ್ಲ ಅಥವಾ ನೀನೇ ಹೇಳು ಅನ್ನೋ ಹಾಗೆ ನನ್ನ ಮುಖ ನೋಡಿದ್ರು. ನಾನು ನನ್ನ ಹೆಂಡತಿಯ ಕಡೆಗೆ ನೋಡಿದೆ, ಆಕೆಯಾದರೂ ನನ್ನನ್ನು ಸುಮ್ಮನಿರಿಸಬಾರದಿತ್ತೇ ಎಂದು ಈಗ ಅನ್ನಿಸುತ್ತಿದೆ, ಒಂದು ಕ್ಷಣ ತಡೆದು 'ಒಳ್ಳೇ ನ್ಯೂ ಯಾರ್ಕ್ ಸಿಟಿಯಲ್ಲಿರೋ ಹೋಮೋಗಳ ಥರಾ ಕಾಣ್ತೀಯ ನೋಡು...' ಎಂದು ನಾನು ಏನೋ ಹೇಳಬಾರದ್ದನ್ನು ಹೇಳಿದವನ ಹಾಗೆ ತುಟಿಕಚ್ಚಿಕೊಂಡೆ, ಎಲ್ಲರೂ ಒಂದು ಸಲ ಗೊಳ್ಳನೆ ನಕ್ಕರೂ, ಅರುಣನನ್ನೂ ಸೇರಿಸಿಕೊಂಡು ಯಾರಿಗೂ ನಾನು ಹೇಳಿದ್ದು ಗೊತ್ತಾದಂತೆ ಕಂಡುಬರಲಿಲ್ಲ. ನಾನು ಏನೂ ಆಗಲಿಲ್ಲವೆನ್ನುವಂತೆ ಬೇರೆ ಟಾಪಿಕ್ ಅನ್ನು ಎತ್ತಿಕೊಂಡು ಮಾತು ಬದಲಿಸಿದೆ.

ಒಂದೆರಡು ವರ್ಷಗಳ ಹಿಂದೆ ನಮ್ಮ ಮನೆ ಜರ್ಸಿ ಸಿಟಿಯ ಡೌನ್ ಟೌನ್‌ಗೆ ಹತ್ತಿರದಲ್ಲಿತ್ತು. ಮ್ಯಾಸಚೂಸೆಟ್ಸ್‌ ರಾಜ್ಯದಲ್ಲಿ ಗೇ/ಲೆಸ್ಬಿಯನ್ ದಂಪತಿಗಳ ಮದುವೆಗೆ ಅನುಮತಿ ಕೊಟ್ಟಂದಿನಿಂದಲೋ, ಕ್ಯಾಲಿಫೋರ್ನಿಯಾದ ಕೆಲವು ನಗರಗಳಲ್ಲಿ ಮೇಯರುಗಳು ಗೇ/ಲೆಸ್ಬಿಯನ್‌ಗಳ ಮದುವೆಯನ್ನು ಕಾನೂನಿನ ವ್ಯಾಪ್ತಿಯಲ್ಲಿ ತಂದ ಸುದ್ದಿ ಹೊರಗೆ ಬಂದಂದಿನಿಂದಲೋ ಜರ್ಸಿ ಸಿಟಿಯ ಹಲವೆಡೆ ಹುಡುಗ-ಹುಡುಗರು ಸಾರ್ವಜನಿಕ ಸ್ಥಳಗಳಲ್ಲಿ ಮುದ್ದಿಸಿಕೊಳ್ಳುವುದು ನನ್ನ ಗಮನಕ್ಕೆ ಬರತೊಡಗಿತು. ಮೊದಲೆಲ್ಲ ಹೀಗೆ ಇರಲಿಲ್ಲ, ಆದರೆ ಒಂದೇ ಸಮನೆ ನಾಯಿಕೊಡೆಗಳು ರಾತ್ರೋ ರಾತ್ರಿ ಹುಟ್ಟಿಬಂದವೇನೋ ಎನ್ನುವಷ್ಟೇ ಸಹಜವಾಗಿತ್ತು ಈ ಬೆಳವಣಿಗೆ. ಮೊದಮೊದಲು ನನ್ನಂಥವರಿಗೆ ಇಂಥದ್ದನ್ನು ನೋಡಲು ಮುಜುಗರವಾಗುತ್ತಿತ್ತು, ನಂತರ ಅದು 'ಮಾಮೂಲಿ'ಯಾಗಿ ಹೋಯಿತು. ಏಕೆ ಈ ಬೆಳವಣಿಗೆ ಅಷ್ಟೊಂದು ದಿಢೀರ್ ಆಗಿತ್ತು ಎನ್ನುವುದು ನನಗೆ ಈಗಲೂ ತಿಳಿದಿಲ್ಲ. ಇಂಥ 'ಕಪಲ್'ಗಳೇ ನೋಡುವುದಕ್ಕೆ ಕಟ್ಟುಮಸ್ತಿನ ಯುವಕರು, ಒಂದೇ ಸ್ಯಾಲ್ಮನ್ ಬಣ್ಣದ ಅಂಗಿಯನ್ನು ಧರಿಸಿಯೋ, ಅಥವಾ ಬಾಳೆ ಎಲೆ ಬಣ್ಣದ ಪ್ಯಾಂಟನ್ನು ಧರಿಸಿಯೋ ಎಷ್ಟೋ ದೂರದಿಂದಲೂ ಗುರುತಿಸಲು ಸಿಗುವಂತ ಪ್ರತಿಮೆಯನ್ನು ನನ್ನ ಮನಸ್ಸಿನಲ್ಲಿ ಹುಟ್ಟುಹಾಕಿದ್ದರು. ನೋಡುವುದಕ್ಕೆ ಆಕರ್ಷಕವಾದ ಈ ಯುವಕರು ಏಕೆ ಹೀಗಾದರು? ಮೊದಲಿನಿಂದ ಹೀಗೆಯೇ ಇದ್ದರೋ ಅಥವಾ ಇಂದಿನ 'ಮುಂದುವರಿದ' ಸಾಮಾಜಿಕ ಸ್ಥಿತಿಯಲ್ಲಿ ತಮ್ಮ ನಿಲುವನ್ನು ಹರವಿಕೊಂಡಿದ್ದರೋ ಯಾರಿಗೆ ಗೊತ್ತು?

ಅಮೇರಿಕದಲ್ಲಿ ರಾಜಾರೋಷವಾಗಿ ಇರುವ ಇಂತಹ ಸಾಮಾಜಿಕ ಸ್ಥಿತಿ ಭಾರತದಲ್ಲಿ ಇಲ್ಲವೇ ಎಂದು ಕೇಳಿದವರಿಗೆ ನಾನು 'ಅಲ್ಲೂ ಇದೆ, ಆದರೆ ಸಮಾಜದ ಬಾಜೂಕಟ್ಟೆಯಲ್ಲಿ ಒಂದು ಹಂಬಲವಾಗಿ ಹಬ್ಬಿಕೊಂಡಿದೆಯೇ ವಿನಾ ಇನ್ನೂ ವೈಯಕ್ತಿಕ ನಿಲುವಾಗಿ ಅದೇ ಬದುಕಾಗಿ ರೂಪುಗೊಂಡಿಲ್ಲ' ಎಂದು ಉತ್ತರಿಸುತ್ತೇನೆ. ನಾನು ಸಾಗರದಲ್ಲಿ ಓದುತ್ತಿರುವಾಗ ನನ್ನ ರೂಮಿನ ಪಕ್ಕದಲ್ಲಿ ಗುಡವಿಯ ರಾಮು ಎನ್ನುವ ಹುಡುಗನೂ ಒಬ್ಬ ಇದ್ದ. ಎದುರಿನ ರೂಮಿನಲ್ಲಿ ಪಿ.ಡಬ್ಲು.ಡಿ.ಯಲ್ಲಿ ಗ್ಯಾಂಗ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಕಾರ್ಗಲ್‌ನ ತಿಮ್ಮಪ್ಪನೂ ಇದ್ದ. ಈ ತಿಮ್ಮಪ್ಪನ ರೂಮಿಗೆ ಪಿ.ಡಬ್ಲ್ಯು.ಡಿ. ಲಾರಿ ಡ್ರೈವರ್ ಕೃಷ್ಣಪ್ಪ ಆಗಾಗ್ಗೆ ಭೇಟಿಕೊಡುತ್ತಿದ್ದರು. ನಮ್ಮೆಲ್ಲರಿಗಿಂತಲೂ ವಯಸ್ಸಿನಲ್ಲಿ ಹಿರಿಯರಾದ ಕೃಷ್ಣಪ್ಪ ಆಗಾಗ್ಗೆ ಅದೂ ಇದೂ ಜೋಕ್ ಹೇಳಿಕೊಂಡು ನಕ್ಕು ನಗಿಸಿಕೊಂಡಿರುತ್ತಿದ್ದರು. ತಿಮ್ಮಪ್ಪ ಕೃಷ್ಣಪ್ಪನ ಜೊತೆಯಲ್ಲಿ ಆಗಾಗ್ಗೆ ಡ್ಯೂಟಿಗೆ ಹೋಗುವುದು ಇರುತ್ತಿತ್ತು, ಕೆಲವೊಮ್ಮೆ ರಾತ್ರಿ ಪಾಳಿಯೂ ಇರುತ್ತಿತ್ತು. ಹೀಗೇ ಒಂದು ದಿನ ಯಾವುದೋ ರಜಾ ದಿನದಲ್ಲಿ ರಾಮು ಕೃಷ್ಣಪ್ಪನ ಜೊತೆಯಲ್ಲಿ ಹೋಗಿದ್ದನಂತೆ, ರಾತ್ರಿ ಪ್ರವಾಸಿ ಮಂದಿರದಲ್ಲಿ ತಂಗಬೇಕಾಗಿ ಬಂತಂತೆ, ರಾತ್ರಿ ರಾಮು ಮಲಗಿದ ಹೊತ್ತಿನಲ್ಲಿ...ಅವನೇ ಹೇಳಿದ ಹಾಗೆ 'ಈ ಕೃಷ್ಣಪ್ಪ ಏನೇನೋ ಮಾಡ್ತಾನೆ, ಎಲ್ಲೆಲ್ಲೋ ಕೈ ಹಾಕ್ತಾನೆ!' ಎಂದಿದ್ದನ್ನು ನಾವು ಬೇಕಾದಷ್ಟು ಸಾರಿ ನೆನೆಸಿಕೊಂಡು ತಮಾಷೆ ಮಾಡಿದ್ದಿದೆ. ಕೃಷ್ಣಪ್ಪನಿಗೆ ಮದುವೆಯಾಗಿ ಎರಡು ಮೂರು ಮಕ್ಕಳಿದ್ದರೂ ತಿಮ್ಮಪ್ಪ, ರಾಮುವಿನಂತಹ ಯುವಕರ ಒಡನಾಟ ಆತನ ಮನದಾಳದಲ್ಲಿನ ಹಂಬಲವನ್ನು ಜಾಗೃತಗೊಳಿಸುತ್ತಿದ್ದಿರಬಹುದು, ಮೈನ್ ಸ್ಟ್ರೀಮ್ ಹೋಮೋ ಸೆಕ್ಸ್ಯುಯಲ್ ಅಲ್ಲದಿದ್ದರೂ ಆಗಾಗ್ಗೆ ಆ ಅವತಾರವನ್ನು ಎತ್ತುತ್ತಿದ್ದಿರಬಹುದು.

ನಮ್ಮಲ್ಲಿ ಬಾಂಬೆ, ಡೆಲ್ಲಿ ಮುಂತಾದ ನಗರಗಳಲ್ಲಿನ ಘಟನೆಗಳನ್ನು ಬಿಟ್ಟರೆ ಓಪನ್ ಆಗಿ ಹುಡುಗನೊಬ್ಬ ಮತ್ತೊಬ್ಬ ಹುಡುಗನನ್ನು ಮದುವೆಯಾಗಿ ರಾಜಾರೋಷವಾಗಿ ಬದುಕುವ ಕಾಲ ಇನ್ನೂ ಬಂದಿಲ್ಲವೆಂದೇ ಹೇಳಬೇಕು. ಭಾರತದಲ್ಲಿ ನಮ್ಮ ಹಾಗೂ ನಮ್ಮ ಸಮಾಜದ ನಡುವಿನ ಸಂಬಂಧ ಬಹಳ ಹತ್ತಿರವಾದದ್ದು, 'ಯಾರು ಏನು ಅಂದುಕೊಂಡಾರೋ' ಎನ್ನುವಲ್ಲಿಂದ ಹಿಡಿದು ನಮ್ಮ ಬದುಕನ್ನೇ ಎಲ್ಲರಿಗೋಸ್ಕರ ಬದುಕಬೇಕಾದ ಪರಿಸ್ಥಿತಿ ಇನ್ನೂ ಇದೆ, ಒಬ್ಬ ವ್ಯಕ್ತಿ ಸಮಾಜದ ಮೇಲೆ ಹೆಚ್ಚು ಅವಲಂಭಿತನಾಗಿದ್ದಾನೆ ಎನ್ನುವ ಪರಿಸ್ಥಿತಿಯಲ್ಲಿ 'ನನಗೆ ಹೇಗೆ ಬೇಕೋ ಹಾಗೆ ಬದುಕುತ್ತೇನೆ' ಎನ್ನುವುದು ಸ್ವಲ್ಪ ದೂರವೇ ಉಳಿದ ಮಾತು. ಹೊಮೋಸೆಕ್ಸ್ಯುಯಲ್ ಎನ್ನುವುದು 'ಹಂಬಲ'ಕ್ಕಿಂತ ಮುಂದುವರಿದು 'ಜೀವನಶೈಲಿ' ಅಥವಾ 'ಮನಸ್ಥಿತಿ'ಯಾಗಿಲ್ಲ ಎನ್ನುವುದು ನನ್ನ ಅಭಿಮತ ಅಥವ ತಿಳುವಳಿಕೆ, ಆದರೂ ಹತ್ತು ವರ್ಷ ಅಲ್ಲಿನ ಆಗುಹೋಗುಗಳಿಂದ ದೂರ ಉಳಿದ ನನಗೆ ನನ್ನ ತಿಳುವಳಿಕೆ ಕೆಲವೊಮ್ಮೆ ಓಲ್ಡ್ ಸ್ಕೂಲ್ ಆಗಿ ಕಂಡುಬಂದಿದ್ದೂ ಇದೆ.

ಹೋಮೋಸೆಕ್ಸ್ಯುಯಲ್ ಅಂದರೆ ಸಲಿಂಗಕಾಮ ಎನ್ನುವುದಷ್ಟೇ ಎಲ್ಲರಿಗೆ ಕಂಡುಬರುತ್ತದೆ, ಆದರೆ ಸಮಾಜದ ಮಾರ್ಜಿನ್‌ನಲ್ಲಿ ಬೆಳೆದು ಮುಖ್ಯವಾಹಿನಿಗೆ ಎದುರಾಗಿ ಈಜಬಹುದಾದ ಶಕ್ತಿಯಾಗಿ, ಅದೊಂದು ಬದುಕಾಗಿ ಕಂಡುಬರಬೇಕಾದರೆ ಭಾರತದಲ್ಲಿ ಬಹಳ ಕಷ್ಟವಿದೆ. ಜಾತಿ-ಧರ್ಮಗಳ ಸಂಕೀರ್ಣತೆಯಲ್ಲೇ ಒದ್ದಾಡುತ್ತಿರುವ ಭಾರತದ ಜೀವನ ಶೈಲಿಗೆ ಹೊಸ ಯುಗದ ಕೊಡುಗೆಯಾಗಿ ಸಲಿಂಗ ಕಾಮ, ಮಿಗಿಲಾಗಿ ಅದನ್ನು ಆವರಿಸಿಕೊಂಡ ಬದುಕು ಯಾವ ಆಯಾಮವನ್ನು ಕೊಡಬಲ್ಲುದು ಎನ್ನುವ ಜಿಜ್ಞಾಸೆ ನನ್ನನ್ನು ಬಲವಾಗಿ ಕಾಡಿಸಿದೆ.

ನನ್ನ ಸೋದರಳಿಯ ಅರುಣನಿಗೆ ತಮಾಷೆಗೇನೋ ಅಂದೆ, ಆದರೆ ಭಾರತದಲ್ಲಿ ಇಂತಹದ್ದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ನನ್ನ ಊಹೆಗೆ ನಿಲುಕದು, ಫೈರ್ ಅಂತಹ ಚಲನಚಿತ್ರಗಳ ಹಿಂದೆ ಯಾವ ಸ್ಪೂರ್ತಿ ಇದೆಯೋ ಗೊತ್ತಿಲ್ಲ, ಆದರೆ ಅದು ಮುಖ್ಯವಾಹಿನಿಯ ಒಂದು ಭಾಗವಾಗುವಾಗ ಭಾರತದಲ್ಲಿ ಇನ್ನು ಏನೇನೆಲ್ಲ ಬದಲಾವಣೆಗಳಾಗಿರಬಹುದು, ಹಾಗಾಗಲು ಇನ್ನೆಷ್ಟು ವರ್ಷ ತೆಗೆದುಕೊಳ್ಳಬಹುದು ಎನ್ನುವುದು ಒಂದು ಚಿಂತೆ ಅಥವಾ ಚಿಂತನೆ ಅಷ್ಟೇ.