ಹಾ, ಹ್ಞೂ ಅಂತಾ ಇದ್ದ ಹಾಗೇ ನೋಡಿ ಆರ್ ವರ್ಷಗಳು ಕಳೆದು ಹೋದ್ವು ಎಂದೆನಿಸಿದ್ದು ಇವತ್ತು ಪ್ರಿಂಟ್ ಔಟ್ ತೆಗೆಯೋಕ್ ಹೋದಾಗ ಪ್ರಿಂಟರಿನ ಸಣ್ಣ ಡಿಸ್‌ಪ್ಲೇನಲ್ಲಿ ಕಂಡ ಸೆಪ್ಟೆಂಬರ್ ೧೧ ನ್ನು ನೋಡಿ - ’ಅಯ್ಯೋ, ಅರು ವರ್ಷಗಳು ಕಳೆದು ಹೋದ್ವೇ’ ಅಂತ ಶಬ್ದವಿಲ್ಲದ ಉದ್ಗಾರವೊಂದು ನನ್ನಲ್ಲಿ ಹುಟ್ಟಿ ಅಲ್ಲೇ ಉಳಿದುಹೋಯಿತು. ಅಬ್ಬಾ, ಏನೇನೆಲ್ಲ ಆಗಿವೆ ಈ ಆರು ವರ್ಷದೊಳಗೆ ಎಂದು ಯೋಚಿಸಿದವನಿಗೆ ೨೦೦೧ ರ ತರುವಾಯದ ಘಟನೆಗಳೆಲ್ಲ ಡಿವಿಆರ್ ನಲ್ಲಿ ಪುಲ್ ಸ್ಪೀಡ್‌ನಲ್ಲಿ ನೋಡಿದ ಸಿನಿಮಾದ ಹಾಗೆ ಕಣ್ಣ ಮುಂದೆ ಮಿಂಚಿ ಮರೆಯಾದವು.
Is the world better place now? ಎನ್ನೋ ಪ್ರಶ್ನೆಯೂ ಸಹ ಅದರಷ್ಟಕ್ಕೆ ಅದೇ ಹೊರಗೆ ಬಂತು. ಪ್ರಪಂಚವನ್ನು ಯಾವಾಗ್ಲೂ ಉತ್ತಮವಾದದನ್ನಾಗಿ ಮಾಡೋದು ಮಾನವ ಜನ್ಮದ ಇನ್ನೂ ಎಲ್ಲೂ ಅಫಿಷಿಯಲ್ ಆಗಿ ಪಬ್ಲಿಷ್ ಆಗದಿರೋ ಅಜೆಂಡಾ, ಈ ಮಾನವ ಜನ್ಮದ ಹಲವು ಬಣ್ಣದ ಜನರು ಅದನ್ನು ಮ್ಯಾನಿಫೆಷ್ಟೋ ಮಾಡಿಕೊಂಡು ಅದನ್ನು ತಮ್ಮ ಕಾಯಕವನ್ನಾಗಿಸಿಕೊಂಡಿದ್ದಾರೆ, ಒಂದು ರೀತಿ ವಿಶ್ವ ಹಿಂದೂ ಪರಿಷತ್‌ನವರು ಹಿಂದೂ ಧರ್ಮವನ್ನು ಖರೀದಿಸಿಟ್ಟುಕೊಂಡ ಹಾಗೆ. ಪ್ರಪಂಚದ ಆಗು-ಹೋಗುಗಳಿಗೆಲ್ಲ ಉತ್ತರ ಹೇಳಬೇಕಾದ ಇನ್‌ಹೆರೆಂಟ್ ಕರ್ತವ್ಯವೊಂದು ಕೆಲವರಿಗೆ ಗುರಿಯಾದರೆ, ಇನ್ನು ಕೆಲವರಿಗೆ ಪ್ರಪಂಚದ ಕಣ್ಣೀರನ್ನೊರೆಸಲು ಬಟ್ಟೆ ತಯಾರು ಮಾಡುವ ಕಾಯಕ - ಕ್ಷಮಿಸಿ, ಬಟ್ಟೆಯಲ್ಲಿ ಒರೆಸಿ ಅದನ್ನು ತೊಳೆದು ಮತ್ತೆ ಬಳಸುವ ಕಷ್ಟ ಯಾರಿಗೆ ಬೇಕು, ಉಪಯೋಗಿಸಿ ಎಸೆದು ಬಿಸಾಡುವ ಟಿಷ್ಯೂಗಳಿರಲಿ.
ಧರ್ಮ - ಈ ಎಲ್ಲ ಕಾಯಕ, ಕರ್ತವ್ಯ, ಅಜೆಂಡಾ, ಮ್ಯಾನಿಫೆಷ್ಟೋ ಮುಂತಾದವುಗಳಿಗೆ ಅಡಿಗೋಲು. ಈ ಮನುಷ್ಯ ಸಂತತಿ ಹುಟ್ಟಿಸಿಕೊಂಡ ಕೆಟ್ಟ ಪರಿಸರಗಳಲ್ಲೊಂದು ಧರ್ಮ. ಕ್ಷಮಿಸಿ - ಧರ್ಮವೆನ್ನುವ ಬದಲು ಮತ ಎಂದರೆ ಸರಿ. ಧರ್ಮಕ್ಕೆ ಅನೇಕ ಅರ್ಥಗಳಿದ್ದು, ಅದು ಎಂದೂ ಕೆಟ್ಟದನ್ನು ಬಯಸೋದಿಲ್ಲ, ಆದರೆ ಧರ್ಮವೆನ್ನುವುದರ ಬದಲಿಗೆ ಮತವನ್ನು ತೆಗೆದುಕೊಂಡರೆ ಅದು ಕೆಲವು ಕಡೆ ತನ್ನನ್ನು ಪಸರಿಸು, ಸಾರು ಎಂದು ಡಿಮ್ಯಾಂಡ್ ಮಾಡುತ್ತದೆಯಂತೆ, ಇನ್ನು ಕೆಲವು ಕಡೆ ಹೊಡಿ-ಬಡಿ-ಕಡಿ ಸಂಸ್ಕೃತಿಯನ್ನು ಹೇರುತ್ತದೆಯಂತೆ, ಮತ್ತಿನ್ನಷ್ಟು ಕಡೆ ಸ್ವರ್ಗಕ್ಕೆ ದಾರಿ ಮಾಡಿಕೊಡುತ್ತದೆಯಂತೆ. ನಮ್ಮ ಮತ ಬೆಳೀ ಬೇಕು, ಅದು ಹೆಚ್ಚಿನದು, ಅದೇ ಸರ್ವಸ್ವ ಎನ್ನೋದು ಬೇಕಾದಷ್ಟು ಸಮಸ್ಯೆಗಳಿಗೆ ರೂಟ್ ಕಾಸ್. ಅದನ್ನ ಕಿತ್ತು ಎಸೆಯೋದೇನೂ ಸುಲಭದ ಮಾತಲ್ಲವೇ ಅಲ್ಲ, ಈ ತುಲನೆ ಇದ್ದಲ್ಲಿ ಪ್ರಪಂಚ ಶಾಂತಿ ಇರೋದಾದರೂ ಹೇಗೆ?
ಆಫ್ರಿಕಾದ ಕಗ್ಗತ್ತಲ್ಲನ್ನು ಓಡಿಸುತ್ತೇವೆ ಎಂದು ಒಂದೆರಡು ಮತಗಳು ಪಂಥ ಕಟ್ಟಿ ಓಡಿದವು. ಕಂಡಕಂಡವರ ಸಂಸ್ಕೃತಿಯನ್ನು ಮಕ್ಕಳಿಂದ ಆಟಿಕೆಯನ್ನು ತೆಗೆದಿರಿಸುವಷ್ಟೇ ನಾಜೂಕಾಗಿ ಆ ಮೂಲ ಜನರಿಂದ ಕಿತ್ತುಕೊಳ್ಳಲಾಯಿತು. ಇವತ್ತಿಗೆ ಆ ಖಂಡದ ಜನರು ತಮ್ಮದನ್ನು ಮರೆತರು, ತಮ್ಮದಲ್ಲದ ಇನ್ನೊಬ್ಬರದನ್ನು ತೊಟ್ಟುಕೊಂಡರು. ಆದರೆ ಅವರ ಕಣ್ಣೀರನ್ನು ಒರೆಸಲು ಯಾವ ಟಿಷ್ಯೂ ಪೇಪರುಗಳೂ ಸಾಕಾಗಲೇ ಇಲ್ಲ. ಹಸಿದ, ನಿರ್ಗತಿಕ ಮಕ್ಕಳಿಗೆ ಸಹಾಯ ಮಾಡುವ ಹೆಸರಿನಲ್ಲಿ ಮತವನ್ನು ಹೇರಿದರು. ತಾವು ತಮ್ಮ ತಮ್ಮ ಮತದಿಂದ ಉದ್ದಾರವಾದದ್ದು ಎಷ್ಟಿದೆಯೋ ಪ್ರಪಂಚವೆಲ್ಲವೂ ಅವರವರ ಮತವನ್ನು ಎತ್ತಿ ಹಿಡಿಯಬೇಕು ಎನ್ನುವುದು ಇದರ ಹಿಂದಿನ ಘೋಷಣೆ. ಸರಿ, ಪ್ರಪಂಚವನ್ನೆಲ್ಲ ಪ್ರಜಾಪ್ರಭುತ್ವಗೊಳಿಸಿ ಬಿಡೋಣ, ಹೆಚ್ಚು ಜನ ಕೈ ಎತ್ತಿದ್ದೇ ಕಾನೂನಾಗಲಿ, ಇಡೀ ಪ್ರಪಂಚಕ್ಕೆ ಎರಡು ಮತಗಳೇಕೆ ಒಂದೇ ಮತವನ್ನು ಮಾಡೋಣ - ಆಗಲಾದರೂ ಜನರ ಕಣ್ಣೀರು ಕಡಿಮೆಯಾಗುತ್ತದೆಯೋ ನೋಡೋಣ.
ಯಾರದ್ದು ತಪ್ಪು, ಯಾರದ್ದು ಸರಿ? ಯಾರ ಹಾದಿ ದೊಡ್ಡದು, ಯಾರದ್ದು ಚಿಕ್ಕದು? ಒಂದು ತಪ್ಪನ್ನು ಮತ್ತೊಂದು ತಪ್ಪು ಮಾಡುವುದರ ಮೂಲಕ ಸರಿಗೊಳಿಸಲಾದೀತೆ? ನೂರು ಜನ ಕೊಂದವನನ್ನು ಸಂಹರಿಸಲು ಸಾವಿರ ಜನರನ್ನು ಬಲಿಕೊಡುವುದು ನ್ಯಾಯವೇ? ತಂದೆ ಮಾಡಿದ ತಪ್ಪಿಗೆ ಮಕ್ಕಳು, ಮೊಮ್ಮಕ್ಕಳಿಗೆ ಶಿಕ್ಷೆ ವಿಧಿಸುವುದು ಮತವೇ? ಅಮಾಯಕರ ಜೀವನ ಶೈಲಿಯನ್ನು ಕಿತ್ತೊಗೆದು ತಮ್ಮ ಬಾವುಟವನ್ನು ಪ್ರತಿಷ್ಠಾಪಿಸುವ ಹಕ್ಕನ್ನು ಯಾರು ಯಾರಿಗೆ ಕೊಟ್ಟರು? ಈ ಮತ ಪ್ರಚಾರಕರ ನೆರಳಿಗೆ ಸಿಕ್ಕು ಸತ್ತ, ಅನಾಥರಾದ, ನೊಂದವರ ಕಣ್ಣೀರನ್ನು ಯಾರು ಒರೆಸುವವರು? ತಪ್ಪು ಮಾಡಿದವರನ್ನು ಇಡೀ ಜಗತ್ತೇ ಬೆರಳಿಟ್ಟು ತೋರಿಸಿದರೂ ಅದನ್ನು ಒಪ್ಪಿಕೊಳ್ಳುವ ನೈತಿಕತೆಯನ್ನೂ ಕಳೆದುಕೊಂಡವರು ಅವರವರ ಹಣ ಐಶ್ವರ್ಯ ಮುಂತಾದವುಗಳು ಗಳಿಸಿಕೊಟ್ಟ ನ್ಯಾಯ ಹೇಳಲು ಯೋಗ್ಯರಾಗುವ ಅರ್ಹತೆಯನ್ನು ಪ್ರಶ್ನಿಸುವವರು ಯಾರು?
ಇದೆಲ್ಲ ಒಂದು ಕ್ಯಾಪಿಟಲಿಷ್ಟಿಕ್ ವ್ಯವಸ್ಥೆ. ಇಲ್ಲಿರುವವರ ಅರ್ಹತೆ ಬೇರೆ, ಇಲ್ಲಿ ಕಂಪೀಟ್ ಮಾಡುವ ವಿಧಾನವೇ ಬೇರೆ. ಇಲ್ಲಿನ ಪ್ರತಿಯೊಂದು ಕ್ಷಣವೂ ಒಂದು ವ್ಯವಸ್ಥೆ, ಕಂಪನಿ, ವ್ಯಕ್ತಿ ಗುಣಮಟ್ಟವನ್ನು ಅಳತೆ ಮಾಡುತ್ತಲೇ ಇರಲಾಗುತ್ತದೆ. ಒಮ್ಮೆ "ಒಳ್ಳೆಯವನು" ಎಂದು ಹೆಸರುಗಳಿಸಿದ್ದು ಕೇವಲ ಮೂರರಿಂದ ಆರು ತಿಂಗಳು ಮಾತ್ರ ಜೀವಂತವಿರುವ ಸತ್ಯವಾಗುತ್ತದೆ. ಈಗ ಯೋಗ್ಯನಾಗಿದ್ದವನು ಮುಂದೆ ಅಯೋಗ್ಯನಾಗಿ ಹೊರಹೊಮ್ಮಬಹುದು. ಇಲ್ಲಿ ಪ್ರತಿಯೊಂದು ಸಮಸ್ಯೆಗಳಿಗೂ ಸಾಂತ್ವನವಿದೆ, ಎಲ್ಲದಕ್ಕೂ ಹೆಚ್ಚಾಗಿ ನ್ಯಾಯವಿದೆ. ಕ್ಷಮಿಸಿ, ಎಲ್ಲವನ್ನೂ ನ್ಯಾಯದ ರೀತಿಯಲ್ಲಿ ಮಾಡಬಹುದಾದ ವಿಧಾನವಿದೆ. ಯಾವ ದೇಶದಲ್ಲಿ ಅರ್ಧಕ್ಕರ್ಧ ಇರುವ ಮಹಿಳೆಯರು ಹಿಂದುಳಿದವರೋ (minority), ಯಾವ ದೇಶದಲ್ಲಿ ಇನ್ನೂರೈವತ್ತು ವರ್ಷದ ಆಳ್ವಿಕೆಯಲ್ಲಿ ಒಬ್ಬ ಯೋಗ್ಯ ಮಹಿಳೆಯೂ ಆಳಲಿಕ್ಕೆ ಯೋಗ್ಯವಿರದೇ ಹುಟ್ಟಿ ಸತ್ತಳೋ ಅಂಥ ದೇಶದಲ್ಲಿದ್ದವರಿಗೆ ಪ್ರಪಂಚದ ವಿಷಯಗಳೇನು ಗೊತ್ತು? ಸುನ್ನಿ, ಶಿಯಾ, ಕುರ್ದಿಷ್ ಇವರ ಪರಂಪರಾನುಗತವಾದ ಸಂಬಂಧಗಳ ಬಗ್ಗೇನು ಗೊತ್ತು? ಯಾವುದೋ ನಯವಂಚಕ ಮುಂಗೋಪಿ ಮಾತುಕೊಟ್ಟು ಯುದ್ಧದ ಆಳ-ಅಂತರವನ್ನು ಅರಿಯದೇ ಸೇನಾಪಡೆಯನ್ನು ಮುನ್ನುಗ್ಗಿಸಿದ ತಪ್ಪಿಗೆ ಇಂದು ನಾಳೆ ಹುಟ್ಟುವ ಹಸುಕಂದಮ್ಮಗಳೇಕೆ ಅಳಬೇಕು? ಒಂದು ಸಂಪೂರ್ಣ ಕ್ಷೇತ್ರದ (region) ಆರೋಗ್ಯವನ್ನೇ ಹದಗೆಡಿಸಿ ಅಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ದಿಕ್ಕು ತಪ್ಪಿಸಿದವರಿಗೆ ನೈತಿಕತೆ ಎನ್ನುವುದು ಎಲ್ಲಿ ಹೋಯಿತು? ಒಂದು ಕಡೆ ಕಮ್ಮ್ಯೂನಿಸಮ್ಮ್ ಅನ್ನು ಹಾಡಿ ಹೊಗಳುವ ಸ್ನೇಹಿತರು, ಮತ್ತೊಂದು ಕಡೆ ಕಮ್ಮೂನಿಸಮ್ಮೇ ಇವರ ವೈರಿ. ಒಂದು ಕಡೆ ಭಿನ್ನಾಭಿಪ್ರಾಯಗಳನ್ನು ಹುಟ್ಟಿ ಹಾಕುವ ಸರದಾರರು, ಮತ್ತೊಂದು ಕಡೆಯಲ್ಲಿ ಅಳುವ ಮಕ್ಕಳ ಕಣ್ಣೀರನ್ನು ಒರೆಸುವವರು. ಈ ರೀತಿಯ ವಿರುದ್ಧ ದಿಕ್ಕಿನ ಪಯಣಗಳನ್ನು ಫಾರಿನ್ ಪಾಲಿಸಿ ಎಂದು ಕರೆಯುವ ಗತ್ತು ಬೇರೆ ಕೇಡಿಗೆ. ಇಂಥಾ ಗತ್ತನ್ನು ಎದುರಿಸಿ ಕೇಳಲಾರದ ಹಿಜಡಾ ವ್ಯವಸ್ಥೆ ಹಾಗೂ ನೆರೆಹೊರೆ. ಅದಿಲ್ಲವೆಂದರೆ, ಯಾವನಾದರೂ ಒಬ್ಬ ಕತ್ತಿನ ಪಟ್ಟಿ ಹಿಡಿದು ಕೇಳಿದ್ದರೆ ಎಷ್ಟೋ ಚೆನ್ನಿತ್ತು - ಹಾಗಾಗೋದಿಲ್ಲ ಬಿಡಿ.
ಹೀಗೇ ಎಣಿಸ್ತಾ ಎಣಿಸ್ತಾ ಆರು ವರ್ಷಗಳು ಕಳೆದು ಹೋದುವು, ಇನ್ನು ಅರವತ್ತು ವರ್ಷಗಳು ಬಂದರೂ ಇಂದಿನ ಪರಿಸ್ಥಿತಿ ಹೀಗೇ ಉಲ್ಬಣಗೊಂಡು ಹದಗೆಡುವ ಸಾಧ್ಯತೆಗಳೇ ಹೆಚ್ಚೇನೋ ಎಂದು ನಾನು ಎಂದುಕೊಳ್ಳುತ್ತಿರುವಾಗ ನನ್ನ ಆಶಾವಾದ ಎಲ್ಲೋ ಕಳೆದು ಹೋದ ಹಾಗೆ ಕಾಣಿಸತೊಡಗುತ್ತದೆ. ಇವತ್ತಲ್ಲ ನಾಳೆ ಹೊರಗೆ ಬರೋ ವರದಿಗಳಲ್ಲಿ ಇರುವ ಸತ್ಯದ ಅರಿವು ಎಲ್ಲರಿಗೂ ಇದೆ. ನಾನು ಮಾಡಿದ್ದು ತಪ್ಪು, ಅದಕ್ಕೋಸ್ಕರ ನನ್ನ ರಾಜೀನಾಮೆಯನ್ನು ಅಂಗೀಕರಿಸಿ ಎಂದು ಯಾವುದೊಂದು ಧ್ವನಿಯೂ ಹುಟ್ಟಿಬರೋದಿಲ್ಲ. ಯುದ್ಧಕ್ಕೆ ಹೋಗಿ ಈ ವ್ಯವಸ್ಥೆಯನ್ನು ಹುಟ್ಟಿಸಿ ಈಗ ಅರಾಮಾಗಿ ನಿದ್ರಿಸುತ್ತಿರುವ ಮುಂಗೋಪಿಗಳನ್ನು ಯಾರೂ ಪ್ರಶ್ನಿಸೋದೇ ಇಲ್ಲ. ಈಗಿರುವ ದೊರೆಗಳು ಇನ್ನೊಂದು ವರ್ಷದಲ್ಲಿ ಹೊರಗೆ ಹೋಗುತ್ತಾರೆ, ಅವರ ಹೆಸರು ಎಂದೆಂದಿಗೂ ರಾರಾಜಿಸುವಂತೆ ಬರೆಯುವ ಇತಿಹಾಸಕಾರರನ್ನು ಸಾಕಿ ಸಲಹುತ್ತಿರುವುದು ಅಲ್ಲಿ ಉಪಯೋಗಕ್ಕೆ ಬರುತ್ತದೆ. ಈ ದೊರೆಗಳ ಹೆಸರು ಅಜರಾಮರರಾಗುವಲ್ಲಿ ದಿನೇ ದಿನೇ ಸತ್ತು ತಮ್ಮ ನೆತ್ತರದಿಂದ ಗಲ್ಲಿಗಲ್ಲಿಗಳಲ್ಲಿ ಅವರದ್ದೇ ಆದ ಭಾಷೆಯಲ್ಲಿ ಮಣ್ಣಿನಲ್ಲಿ ಬರೆದು ಗಾಳಿಯಲ್ಲಿ ಕಲೆತು ಹೋಗುತ್ತದೆ. ನಾವೂ-ನೀವೂ ನೋಡುತ್ತ ನೋಡುತ್ತಲೇ ಇನ್ನೂ ಏನೇನೋ ಅವಘಡಗಳು ಆಗುವ ಎಲ್ಲಾ ಸಾಧ್ಯತೆಗಳೂ ಕಾಣುತ್ತವೆ, ಏಕೆಂದರೆ ನಮ್ಮ ಮತ ದೊಡ್ಡದು, ಅದು ಬೆಳೆಯಬೇಕು, ಬದುಕಬೇಕು, ಪಸರಿಸಬೇಕು ಎನ್ನುವ ಘೋಷಣೆ ಎಂದಿಗಿಂತಲೂ ಪ್ರಭಲವಾಗಿ ಮುಗಿಲು ಮುಟ್ಟುತ್ತಿರುವುದನ್ನು ನೀವೂ ನೋಡಿರಬಹುದಲ್ಲವೇ?