ಎಲಿಯಟ್ ಸ್ಪಿಟ್‌ಝರ್ ಎನ್ನುವ ಅಟಾರ್ನಿ ಜನರಲ್
"We cannot afford to be cautious because you don't change the world by whispering.”
"You will not change the world by whispering. In order to make that change, you need to put your heart and soul into it, you need to talk back to authority, and you need to do it with passion and vigor and determination."
- Eliot Spitzer
ನ್ಯೂ ಯಾರ್ಕ್ ನಗರದಲ್ಲಿ ಕೆಲಸ ಮಾಡುವ ನನ್ನ ಸಹೋದ್ಯೋಗಿ ಒಬ್ಬಳು ಬ್ಯಾಂಕಿನವರು ಆಕೆಗೆ ಕೊಡಬೇಕಾದ ಬಡ್ಡಿಯನ್ನು ಸರಿಯಾಗಿ ಕೊಡುತ್ತಿಲ್ಲ, ಅವರು ಹೀಗೇ ಮಾಡಿದರೆ ನಾನು ನ್ಯೂ ಯಾರ್ಕ್ ಸ್ಟೇಟಿನ ಅಟಾರ್ನಿ ಜನರಲ್ ಆಫೀಸಿಗೆ ಕಂಪ್ಲೇಂಟು ಕೊಡುವುದಾಗಿ ಹೇಳಿದ್ದಳು. ಇದಾದ ಒಂದು ವಾರದ ಮೇಲೆ ಮಾತು ಎಲ್ಲಿಗೋ ಬಂದು ಆಕೆಗೆ ಬ್ಯಾಂಕಿನವರು ಕೊಡಬೇಕಾದ ಬಡ್ಡಿಯ ವಿಷಯವನ್ನು ಕೇಳಿದೆ, ಆಕೆಗೆ ಬ್ಯಾಂಕಿನವರು ಮತ್ತೆ ಸತಾಯಿಸಿದರೆಂದೂ ಅವರಿಗೆ ಬುದ್ಧಿ ಕಲಿಸುವುದಕ್ಕೋಸ್ಕರ ಒಂದು ಮಧ್ಯಾಹ್ನ ಈಕೆ ಬ್ಯಾಂಕಿಗೆ ಹೋಗಿ ಜಗಳವಾಡಿ ಬಂದಿದ್ದಳಂತೆ, ಅಲ್ಲದೇ ನನಗೆ ಬರಬೇಕಾದ ಹಣ ಬರದಿದ್ದರೆ ನಿಮ್ಮ ಕೆಟ್ಟ ಪ್ರಾಕ್ಟೀಸುಗಳನ್ನು ಅಟಾರ್ನಿ ಜನರಲ್ ಆಫೀಸಿಗೆ ತಿಳಿಸುವುದಾಗಿ ಹೇಳಿ ಬಂದಿದ್ದಳಂತೆ, ಆಕೆಗೆ ಆಶ್ಚರ್ಯವಾಗುವಂತೆ ಬ್ಯಾಂಕಿನ ಮೇಲಾಧಿಕಾರಿಗಳು ಆಕೆಯಲ್ಲಿ ತಪ್ಪು ಒಪ್ಪಿಕೊಂಡರೆಂದೂ ಆಕೆಗೆ ಬರಬೇಕಾದ ದುಡ್ಡನ್ನು ಕೊಡಲು ಒಪ್ಪಿಕೊಂಡರೆಂದೂ ಬಹಳ ಸಂತಸದಿಂದ ಹೇಳಿದಳು. ನಾನು 'ಈ ರೀತಿ ಅವರು ಅದೆಷ್ಟು ಜನರಿಗೆ ಕೆಟ್ಟ ಲೆಕ್ಕದಿಂದ ಮೋಸ ಮಾಡಿದ್ದಾರೋ, ಅಟಾರ್ನಿ ಜನರಲ್ ಆಫೀಸಿಗೆ ದೂರು ಕೊಟ್ಟಿದ್ದರೆ ಅವರು ವಿಚಾರಿಸಿಕೊಳ್ಳುತ್ತಿದ್ದರು' ಎಂದೆ, ಆಕೆ 'ಅಲ್ಲಿಗೆ ಒಂದು ಕಾಲ್ ಮಾಡುತ್ತೇನೆ' ಎಂದು ಹೇಳಿದ ನೆನಪು, ಮುಂದೆ ಏನಾಯಿತೋ ಗೊತ್ತಿಲ್ಲ.
ನಿನ್ನೆ ಎನ್.ಪಿ.ಆರ್.ನಲ್ಲಿ ಸಂಜೆ ಸುದ್ದಿ ಕೇಳುತ್ತಿರುವಾಗ ನ್ಯೂ ಯಾರ್ಕ್ ರಾಜ್ಯದಿಂದ ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಎಲಿಯಟ್ ಸ್ಪಿಟ್‌ಝರ್ ಅನ್ನು ನಿಲ್ಲಿಸಿದ್ದಾರೆಂದೂ ಹಾಗೂ ...you don't change the world by whispering... ಎನ್ನುವ ಅವರ ಭಾಷಣದ ತುಣುಕೂ ಕೇಳಿಸಿತು. ತಾನು ೨೦೦೬ ರ ಚುನಾವಣೆಯಲ್ಲಿ ಗವರ್ನರ್ ಆಗಿ ಸ್ವರ್ಧಿಸುತ್ತೇನೆಂದು ಈ ಮೊದಲೇ ಅನೌನ್ಸ್ ಮಾಡಿದ್ದರಿಂದ ಈ ಸುದ್ದಿಯಲ್ಲಿ ಯಾವುದೇ ವಿಶೇಷವಿರಲಿಲ್ಲ, ಆದರೆ ಈ ಸುದ್ದಿಯ ಹಿನ್ನೆಲೆಯಲ್ಲಿ ಸ್ಪಿಟ್‌ಝರ್ ಅಟಾರ್ನಿ ಜನರಲ್ ಆಗಿ ಇಲ್ಲಿಯವರೆಗೆ ನ್ಯೂ ಯಾರ್ಕ್ ರಾಜ್ಯ ಹಾಗೂ ದೇಶಕ್ಕೆ ನೀಡಿದ ಕೆಲವು ಕೊಡುಗೆಗಳನ್ನು ಮೆಲುಕು ಹಾಕುವಂತಾಯ್ತು. ೨೦೦೦-೨೦೦೧ರಲ್ಲಿ ಆದ ಕಾರ್ಪೋರೇಟ್ ಸ್ಕ್ಯಾಂಡಲ್ ಹಿನ್ನೆಲೆಯಲ್ಲಿ ಇತ್ತೀಚೆಗಂತೂ ವಾಲ್ ಸ್ಟ್ರೀಟಿನ ಎಷ್ಟೋ ಜನರಿಗೆ ಸ್ಪಿಟ್‌ಝರ್ ಹೆಸರು ಕೇಳಿದರೆ ನಡುಕ ಉಂಟಾಗುತ್ತಿದ್ದುದರಲ್ಲಿ ಅತಿಶಯವೇನಿಲ್ಲ.
ಸ್ಪಿಟ್‌ಝರ್‌ನ ಯಶೋಗಾಥೆಗಳನ್ನು ಬರೆಯುವ ಮುನ್ನ ಅಂತರ್ಜಾಲದಲ್ಲಿ ಈತ ಬೆಳೆದು ಬಂದ ಬಗೆಯನ್ನು ಓದಿದೆ - ಸ್ಪಿಟ್‌ಝರ್ ಹುಟ್ಟಿದಾಗಿನಿಂದ ಕಟ್ಟಾ ನ್ಯೂ ಯಾರ್ಕ್ ಮನುಷ್ಯ, ಬ್ರಾಂಕ್ಸ್‌ನ ರಿಯಲ್ ಎಸ್ಟೇಟ್‌ನಲ್ಲಿ ಸಾಕಷ್ಟು ಹೂಡಿದ್ದ ತಂದೆಯ ಮಗನಾಗಿ ಈತ ಓದಿದ್ದು ಪ್ರೈವೇಟು ಸ್ಕೂಲುಗಳಲ್ಲಿಯೇ. ಪ್ರಿನ್ಸ್‌ಟನ್ ಯೂನಿವರ್ಸಿಟಿ ಹಾಗೂ ಹಾರ್ವರ್ಡ್ ಲಾ ಸ್ಕೂಲಿನಲ್ಲಿ ಗ್ರಾಜುಯೇಷನ್ ಮುಗಿಸಿದ ತರುವಾಯ ಕೆಲವು ವರ್ಷ ಪ್ರವೇಟ್ ಪ್ರಾಕ್ಟೀಸು ಮಾಡಿಕೊಂಡು ರಾಜಕೀಯದ ಗಂಧಗಾಳಿ ಅಷ್ಟೊಂದು ಇಲ್ಲದಿದ್ದರೂ ೧೯೯೪ರಲ್ಲಿ ಅಟಾರ್ನಿ ಜನರಲ್ ಎಲೆಕ್ಷನ್‌ನಲ್ಲಿ ಸ್ಪರ್ಧಿಸಿ ಸೋತ ನಂತರ ಮತ್ತೆ ೧೯೯೮ ರಲ್ಲಿ ಅದೇ ಎಲೆಕ್ಷನ್‌ನಲ್ಲಿ ಗೆದ್ದ ವ್ಯಕ್ತಿ ಈವರೆಗೆ ಹಿಂತಿರುಗಿ ನೋಡಿಲ್ಲ. ೧೯೯೮ ರಲ್ಲಿ ಸ್ವಲ್ಪವೇ ಮಾರ್ಜಿನ್‌ನಲ್ಲಿ ಗೆದ್ದರೂ ನಾಲ್ಕು ವರ್ಷಗಳ ಕಾಲ ಜನರನ್ನು ಗೆದ್ದು ೨೦೦೨ರಲ್ಲಿ ಮತ್ತೆ ಅಟಾರ್ನಿ ಜನರಲ್ ಆಗಿ ಪುನಃ ಆಯ್ಕೆಯಾಗುವಂತಾಗಿದ್ದು ಸ್ಪಿಟ್‌ಝರ್‌ಗೆ ಹೆಚ್ಚಿನ ಶಕ್ತಿಯನ್ನು ತಂದುಕೊಟ್ಟಿತ್ತು.
ಸ್ಪಿಟ್‌ಝರ್‌ಗೆ ತಕ್ಕ ಮಟ್ಟಿನ ಕೀರ್ತಿಯನ್ನು ತಂದು ಕೊಟ್ಟಿದ್ದು ಮೇ, ೨೦೦೪ರಲ್ಲಿ ಆತ ನ್ಯೂ ಯಾರ್ಕ್ ಸ್ಟಾಕ್ ಎಕ್ಸ್‌ಚೇಂಜಿನ ಮುಖ್ಯಸ್ಥ ರಿಚರ್ಡ್ ಗ್ರಾಸ್ಸೋ ವನ್ನು ಥರಾಟೆಗೆ ತೆಗೆದುಕೊಂಡಾಗ, ವರ್ಷದಿಂದ ವರ್ಷಕ್ಕೆ 'I am blessed!' ಎಂದುಕೊಂಡು ಬಹಳ ಹೆಚ್ಚಿನ ಸಂಬಳ ಮತ್ತು ಬೋನಸ್ಸನ್ನು ಪಡೆದ ಗ್ರಾಸ್ಸೋ ಮೇಲೆ ಸ್ಪಿಟ್‌ಝರ್‌ನ ದೃಷ್ಟಿಗೆ ಬಿದ್ದಾಗ ವರ್ಷಕ್ಕೆ ಡಾಲರ್ ೧೮೭ ಮಿಲಿಯನ್ ಅನ್ನು ಪಡೆಯುತ್ತಿದ್ದ (ಸಂಬಳ, ಬೋನಸ್, ಅನುಕೂಲಗಳೆಲ್ಲ ಸೇರಿ), ಅದು ನಿಜವಾಗಿಯೂ ಬಹುದೊಡ್ಡ ಮೊತ್ತ, ಆ ಮೊತ್ತವನ್ನು ತೀರ್ಮಾನಿಸುವಲ್ಲಿ ಯಾವ ಲೆಕ್ಕವೂ ನ್ಯೂ ಯಾರ್ಕ್ ಸ್ಟಾಕ್ ಎಕ್ಸ್‌ಚೇಂಜಿನ ಬೋರ್ಡಿಗೆ ಇದ್ದಂತಿರಲಿಲ್ಲ, ಇದರಲ್ಲಿ ಗ್ರಾಸ್ಸೋ ತಪ್ಪಿದೆಯೋ ಇಲ್ಲವೋ, ಆ ಮೊತ್ತವಂತೂ ಅತಿ ಹೆಚ್ಚು, ಇಲ್ಲಿಯವರೆಗೆ ಬೇರೆ ಯಾರಿಗೂ ಈ ವಿಷಯ ಅದೇಕೆ ಹೊಳೆಯಲಿಲ್ಲ ಎಂದು ಹಲವಾರು ಕಡೆಗಳಲ್ಲಿ ಚರ್ಚೆ ನಡೆಯಿತು. ಸ್ಪಿಟ್‌ಝರ್‌ನ ಈ ಪ್ರಯತ್ನದಿಂದ ಬೇರೆ ಏನಾಗದಿದ್ದರೂ ಗ್ರಾಸ್ಸೋ ರಾಜೀನಾಮೆ ನೀಡಿ ಮುಂದೆ ಸ್ಟಾಕ್ ಎಕ್ಸ್‌ಚೇಂಜಿನ ಅಧಿಕಾರಿಗಳನ್ನು ಬದಲಾಯಿಸಿ, ಅವರುಗಳಲ್ಲಿ ಯಾರೂ ವರ್ಷಕ್ಕೆ ಇನ್ನೂರು ಮಿಲಿಯನ್ ಇರಲಿ ಅದರ ಅರ್ಧದಷ್ಟನ್ನೂ ಗಳಿಸುತ್ತಿಲ್ಲ.
ಹೀಗೆ ಎಲಿಯಟ್ ಸ್ಪಿಟ್‌ಝರ್ ಹಾಕಿದ ಕೇಸುಗಳು ಒಂದೇ ಎರಡೇ - ಇಂಟರ್‌ಮಿಕ್ಸ್ ಎನ್ನುವ ಕಂಪನಿಯ ಮೇಲೆ ಸ್ಪೈ ವೇರ್ ಕುರಿತಂತೆ, ಗ್ಲಾಕ್ಸೋ ಸ್ಮಿತ್ ಕ್ಲೈನ್ ಎನ್ನುವ ಕಂಪನಿಯ ಮೇಲೆ ಪ್ಯಾಕ್ಸಿಲ್ ಡ್ರಗ್‌ಗೆ ಸಂಬಂಧಿಸಿದಂತೆ, ಗೈಡಂಟ್ ಕಂಪನಿಯವರು ಕಾರ್ಡಿಯಾಕ್ ಡಿಫಿಬ್ರಿಲೇಟರ್‌ಗಳ ಮಾರಾಟದಲ್ಲಿ ಮೋಸ ಮಾಡುತ್ತಿರುವುದನ್ನು ಕುರಿತು, ಎಂಟೆರ್‌ಕಾಮ್ ರೇಡಿಯೋ ಸ್ಟೇಷನ್ ಕಂಪನಿಯ ಮೇಲೆ, ಎಚ್ ಎಂಡ್ ಆರ್ ಬ್ಲಾಕ್‌ನವರು ಇಂಡಿವಿಜುಯಲ್ ರಿಟೈರ್‌ಮೆಂಟ್ ಅಕೌಂಟುಗಳಲ್ಲಿ ತಪ್ಪು ಮಾಡಿದ್ದಾರೆಂದು, ಎಲ್ಲಕ್ಕಿಂತ ಮುಖ್ಯವಾಗಿ ಎ.ಐ.ಜಿ. ಕಂಪನಿ ತಪ್ಪು ಮಾಡಿದೆಯೆಂದೂ ಹಾಗೂ ಅದರ ಮುಖ್ಯಸ್ಥನ ಮೇಲೆ ಹೂಡಿದ ಮೊಕದ್ದಮೆಗಳಲ್ಲಿ ಸ್ಪಿಟ್‌ಝರ್ ಸೋತಿದ್ದನ್ನು ನಾನು ಕೇಳಿಲ್ಲ. ಮೇಲೆ ತಿಳಿಸಿರುವುಗಳು ಬರೀ ಉದಾಹರಣೆಗಳಷ್ಟೇ, ಆತ ಮೊಕದ್ದಮೆ ಹೂಡಿದ ಕಂಪನಿಗಳ ಯಾದಿಯನ್ನೇ ಕೊಟ್ಟರೆ ಪಟ್ಟಿ ಬಹಳ ಉದ್ದವಾಗುತ್ತದೆ. ಹೆಚ್ಚಿನ ಕೇಸುಗಳಲ್ಲಿ ಕಂಪನಿಗಳು ಮೊಕದ್ದಮೆಗಳನ್ನು 'ಸೆಟಲ್' ಮಾಡಿಕೊಂಡು ಸರ್ಕಾರಕ್ಕೆ ಇಂತಿಷ್ಟು ಎಂದು (ಹೆಚ್ಚಿನ ಕೇಸುಗಳಲ್ಲಿ ಮಿಲಿಯನ್‌ಗಟ್ಟಲೆ) ದಂಡಕಟ್ಟಿ ಬದುಕಿಕೊಂಡರು. ಮೊದಮೊದಲು ಸ್ಪಿಟ್‌ಝರ್‌ನ್ನು 'ಇವನೇನು ಮಾಡುತ್ತಾನೆ ನೋಡೋಣ' ಎಂದು ಎದೆಯುಬ್ಬಿಸಿದ ಎಐಜಿ ಕಂಪನಿಯ ಗ್ರೀನ್‌ಬರ್ಗ್ ಅಂಥವರು ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟಿದ್ದೂ ಅಲ್ಲದೆ ಸಾಕಷ್ಟು ಹಣವನ್ನೂ ಕಳೆದುಕೊಂಡರು. ಇನ್ನು ಕೆಲವರು ಕೇಂದ್ರದಲ್ಲಿ ಆಡಳಿತದಲ್ಲಿರೋ ರಿಪಬ್ಲಿಕನ್ ಪಕ್ಷದ ಮೊರೆ ಹೋದರು, ಮತ್ತೆ ಕೆಲವರು 'ಸ್ಪಿಟ್‌ಝರ್ ತನ್ನ ರಾಜಕೀಯ ಅನುಕೂಲಕ್ಕೆ ಈ ರೀತಿ ಕಂಪನಿಗಳನ್ನು ಸತಾಯಿಸಿ ಹೆಸರು ಮಾಡಿಕೊಳ್ಳುತ್ತಿದ್ದಾನೆ' ಎಂದು ಆರೋಪಿಸಿದರು, ಇನ್ನು ಕೆಲವರು 'ಇವನು ಹೀಗೆಲ್ಲ ಮಾಡಿದ್ದರಿಂದ ಹಲವಾರು ಕೆಲಸಗಳನ್ನು ಜನರು ಕಳೆದುಕೊಳ್ಳುವಂತಾಯ್ತು, ಕಂಪನಿಗಳು ಮುಚ್ಚುವಂತಾಯ್ತು' ಎಂದು ದೂರಿದರು, ಅವನ ಮೇಲೆ ಹಲವಾರು ಆರೋಪಗಳನ್ನು ಹೊರಿಸಿ ಕೇಸು ಹಾಕಿದರು - ಇವೆಲ್ಲಕ್ಕೂ ಸ್ಪಿಟ್‌ಝರ್ ಈವರೆಗೆ ತಲೆಕೆಡಿಸಿಕೊಂಡಂತಿಲ್ಲ, ಎಲ್ಲೂ ತನ್ನ ಬೇಟೆಯನ್ನು ನಿಲ್ಲಿಸಿದ ಹಾಗೆ ಕಂಡುಬಂದಿಲ್ಲ.
ಎಲಿಯಟ್ ಸ್ಪಿಟ್‌ಝರ್ ಹೆಸರೇನಾದರೂ ಸಮೂಹ ಮಾಧ್ಯಮದಲ್ಲಿ ಕಾಣಿಸಿಕೊಂಡರೆ ನಾನು ಆ ಸುದ್ದಿಗಳಿಗೆ ಕಿವಿಕೊಡುತ್ತೇನೆ. ಈ ವ್ಯಕ್ತಿ ಡೆಮೋಕ್ರಾಟಿಕ್ ಪಕ್ಷದಿಂದ ಗೆದ್ದು ನ್ಯೂ ಯಾರ್ಕ್ ರಾಜ್ಯದ ಗವರ್ನರ್ ಆಗಲಿ, ಜಾರ್ಜ್ ಪಟಾಕಿಯ ನಿಧಾನ ಆಡಳಿತಕ್ಕೆ ಬೇಸತ್ತ ಜನರಲ್ಲಿ ಸ್ವಲ್ಪ ಹುರುಪು ಹುಟ್ಟಿಸಲಿ ಎಂದು ಆಶಿಸುತ್ತೇನೆ. ನನಗೇನೂ ಡೆಮೋಕ್ರಾಟ್ ಅಥವಾ ರಿಪಬ್ಲಿಕನ್ ಎಂದು ಯಾವ ಪಕ್ಷದ ಮೇಲೂ ಒಲವಿಲ್ಲ - ಇನ್ನೊಮ್ಮೆ ಯಾವಾಗಲಾದರೂ ಹುಟ್ಟಾ ರಿಪಬ್ಲಿಕನ್ ನ್ಯೂ ಯಾರ್ಕ್ ನಗರದ ಮಾಜಿ ಮೇಯರ್ ರೂಡಿ ಜೂಲಿಯಾನಿಯ ಬಗ್ಗೆ ಬರೆಯುತ್ತೇನೆ.
***
ಅಮೇರಿಕದಲ್ಲಿ ಐವತ್ತು ರಾಜ್ಯಗಳಿವೆ, ಪ್ರತಿ ರಾಜ್ಯಕ್ಕೂ ಹೀಗೆ ರಾಜ್ಯದ ಅಟಾರ್ನಿ ಜನರಲ್ ಆಫೀಸರ್ ಎಂದು ಒಬ್ಬೊಬ್ಬರು ಇರುತ್ತಾರೆ, ಆದರೆ ನಾನು ಸ್ಪಿಟ್‌ಝರ್ ಬಗ್ಗೆ ಕೇಳಿದಷ್ಟು ಸುದ್ದಿಯಲ್ಲಿ ಬೇರೆ ಯಾರ ಬಗ್ಗೆಯೂ ಕೇಳಿಲ್ಲ, ಈತ ಮೊಕದ್ದಮೆಗಳನ್ನು ಹೂಡಿ ಗೆದ್ದಷ್ಟು ಮತ್ತಿನ್ಯಾರೂ ಗೆದ್ದಿಲ್ಲ. ೪೬ ವರ್ಷ ವಯಸ್ಸಾಗಿರುವ ಈತ ಗವರ್ನರ್ ಆಗಿ ಗೆದ್ದು ಇನ್ನೇನನ್ನು ಮಾಡುವುದಿದೆಯೋ, ಆರು ಅಡಿ ಎತ್ತರವಿರುವ, ನಿರರ್ಗಳವಾಗಿ ಮಾತನಾಡಿ ಗುಂಪನ್ನು ಗೆಲ್ಲಬಲ್ಲ ಹಾಗೂ ಪಾರ್ಟಿಗೆ ಬೇಕಾದ ಹಣವನ್ನು ಕೂಡಿಸಬಲ್ಲ ಚೈತನ್ಯವಿರುವ ಈ ವ್ಯಕ್ತಿ ಇದೇ ವರ್ಷ ನವೆಂಬರ್ ೭ ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲಬಲ್ಲನೇ ಎಂದು ಕಾದು ನೋಡಬೇಕಷ್ಟೇ.
No comments:
Post a Comment