Showing posts with label ಕನ್ನಡ. Show all posts
Showing posts with label ಕನ್ನಡ. Show all posts

Thursday, April 16, 2020

God is great!

ದಿನವಿಡೀ ಕಂಪ್ಯೂಟರ್ ಬಳಸುವ ನಮ್ಮಂತಹವರಿಗೆ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಆಗುವ ಬೆಳವಣಿಗೆಗಳು ಕೆಲವೊಮ್ಮೆ ತಲೆನೋವಾಗಿ ಪರಿಣಮಿಸುತ್ತವೆ.  ಸೆಕ್ಯೂರಿಟಿಯ ಹೆಸರಿನಲ್ಲಿ ಅಥವಾ ಹೊಸದಾಗಿ ಹುಟ್ಟಿರುವ ತಂತ್ರಜ್ಞಾನದ ಹೆಸರಿನಲ್ಲಿ ಆಗುವ ಒಂದಲ್ಲಾ ಒಂದು ಆವಿಷ್ಕಾರಗಳು ನಮ್ಮ ಲರ್ನಿಂಗ್ ಕರ್ವ್ ಅನ್ನು ಟೆಸ್ಟ್ ಮಾಡುತ್ತವೆ; ಕೆಲವೊಮ್ಮೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತವೆ.  ಇಂತಹದರ ಉದಾಹರಣೆಗಳಲ್ಲಿ ನಮ್ಮ ಕಂಪನಿಯ ಕಂಪ್ಯೂಟರ್ ಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಲವಂತವಾಗಿ ಬದಲಾಯಿಸುವ ಪಾಸ್ವರ್ಡ್ ನಿಯಮಗಳನ್ನು ಹೆಸರಿಸಲೇ ಬೇಕು.  ಮೊದಮೊದಲು ಸಹಜ ಎನ್ನುವಂತಿದ್ದ ಪಾಸ್ವರ್ಡ್ ಪಾಲಿಸಿಗಳು ಈಗ ತಲೆನೋವುಗಳಾಗುತ್ತಿವೆ (ಅಥವಾ ಈ ಒಂದು ಭಾವನೆ ನಮಲ್ಲರಿಗೂ ವಯಸ್ಸಾಗುತ್ತಿದೆ ಎಂಬುದರ ಸೂಚಕವೂ ಇರಬಹುದು!).

ಅಯ್ಯೋ ಪಾಸ್ವರ್ಡ್ ಅಂದರೆ ಅದೇನು ದೊಡ್ಡ ವಿಷಯ ಎಂದು ಮೂಗೆಳೆದುಬಿಟ್ಟೀರಾ - ಪ್ರತಿ ಐದು-ಹತ್ತು ನಿಮಿಷಗಳಿಗೊಮ್ಮೆ ಆಕ್ಟಿವಿಟಿ ಇಲ್ಲದಿದ್ದರೆ ತಮ್ಮಷ್ಟಕ್ಕೆ ತಾವೇ ಲಾಕ್ ಆಗುವ ಕಂಪ್ಯೂಟರುಗಳಿಗೆ ಪಾಸ್ವರ್ಡ್ ಪದೇಪದೇ ಹಾಕುತ್ತಲೇ ಇರಬೇಕು.  ಅಷ್ಟೇ ಅಲ್ಲ, ಒಮ್ಮೆ ಲಾಗಿನ್ ಆದ ಮೇಲೆ, ಮತ್ತೆ ನಾವು ಬಳಸುವ ಪ್ರತಿಯೊಂದು ಸಿಸ್ಟಮ್ಗೂ ಕೂಡ ಈ ಪಾಸ್ವರ್ಡ್ ಅನ್ನು ಹಾಕುತ್ತಲೇ ಇರಬೇಕು.  ಒಟ್ಟಿನಲ್ಲಿ, ದಿನಕ್ಕೆ ಏನಿಲ್ಲವೆಂದರೂ ಒಂದು ಇಪ್ಪತ್ತೈದು ಬಾರಿಯಾದರೂ ಬಳಸುವ ಈ ಪಾಸ್ವರ್ಡ್ ಬಹಳ ದುಬಾರಿಯಾದ ಕಮಾಡಿಟಿ ಎಂದರೆ ತಪ್ಪಿಲ್ಲ.  ಅಕಸ್ಮಾತ್, ಎಲ್ಲಾದರೂ ಮರೆತು ಬಿಟ್ಟರೆ, ಅಂತಹ ದೊಡ್ಡ ಉಪಟಳ ಇನ್ನೊಂದಿಲ್ಲ!  ಒಟ್ಟಿನಲ್ಲಿ, ನಾವು-ನಮ್ಮ ಕೆಲಸದ ನಡುವೆ ಅವಿನಾಭಾವ ಸಂಬಂಧವನ್ನು ಬೆರೆಸುವ ಈ ಪಾಸ್ವರ್ಡ್ ಗಳಿಗೆ ದೊಡ್ಡ ಸ್ಥಾನವನ್ನು ಕೊಡಲೇಬೇಕಾಗುತ್ತದೆ!

ಪ್ರತಿ ಮೂರು ತಿಂಗಳಿಗೊಮ್ಮೆ ಪಾಸ್ವರ್ಡ್ ಅನ್ನು ಕಡ್ಡಾಯವಾಗಿ ಬದಲಾಯಿಸುವುದು ಬಹಳ ವರ್ಷಗಳಿಂದ ನಡೆದುಬಂದಿದೆ, ಅದರಲ್ಲೇನೂ ವಿಶೇಷವಿಲ್ಲ.  ಆದರೆ ಮೊದಲೆಲ್ಲಾ, ಪಾಸ್ವರ್ಡ್ ಪಾಲಿಸಿಗಳು ನಮ್ಮ ಉಗ್ರಾಣದೊಳಗಿರುವ ನಾಲ್ಕೈದು ಪಾಸ್ವರ್ಡ್ಗಳನ್ನು ಒಂದಾದನಂತರ ಒಂದನ್ನಾಗಿ ಬಳಸಲು ಬಿಡುತ್ತಿದ್ದವು.  ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಪಾಸ್ವರ್ಡ್ನಂತೆ ವರ್ಷಕ್ಕೆ ನಾಲ್ಕು ಪಾಸ್ವರ್ಡ್ಗಳಿದ್ದರೆ ಆಯಿತು.  ಮತ್ತೆ ಅದನ್ನೇ ರೀಸೈಕಲ್ ಮಾಡಿದ್ದರೆ ರಗಳೆ ಇರುತ್ತಿರಲಿಲ್ಲ.  ಆದರೆ, ಇತ್ತೀಚೆಗೆ ಮತ್ತೊಂದು ಪಾಲಿಸಿಯನ್ನು ಸೇರಿಸಿಬಿಟ್ಟರು - ಒಮ್ಮೆ ಬಳಸಿದ ಪಾಸ್ವರ್ಡ್ ಅನ್ನು ಮತ್ತೆ ಹನ್ನೆರಡು ಸಲ ಪಾಸ್ವರ್ಡ್ ಬದಲಾಯಿಸುವವರೆಗೂ ಬಳಸುವಂತಿಲ್ಲ!  ಅಂದರೆ, ಇಂದು ಬಳಸುವ ಪಾಸ್ವರ್ಡ್ ಇನ್ನು ಮೂವತ್ತಾರು ತಿಂಗಳ ನಂತರವೇ ಬಳಸಲು ಸಾಧ್ಯ!  ಅಂದರೆ ಮೂರು ವರ್ಷಗಳ ನಂತರ... ಇದನ್ನು ನೋಡಿ God is great! ಎನ್ನುವ ಉದ್ಗಾರ ತನ್ನಷ್ಟಕ್ಕೆ ತಾನೇ ಹೊರಗೆ ಬಂತು.  ನಾನೇ ಹನ್ನೆರಡು ಬಾರಿ ಪಾಸ್ವರ್ಡ್ ಅನ್ನು ಒಂದೇ ದಿನದಲ್ಲಿ ಬದಲಾಯಿಸಿ ಮತ್ತೆ ಅದೇ ಪಾಸ್ವರ್ಡ್ ಅನ್ನು ಉಪಯೋಗಿಸಿದರೆ ಹೇಗೆ ಎನ್ನುವ ಯೋಚನೆ ತಕ್ಷಣಕ್ಕೆ ಬಂತಾದರೂ, ಅದು ಸೆಕ್ಯೂರಿಟಿಯ ಉದ್ದೇಶವನ್ನು ಡಿಫೀಟ್ ಮಾಡುತ್ತದೆ ಎನ್ನುವ ಕಾರಣಕ್ಕೆ ಹಾಗೆ ಮಾಡಲಿಲ್ಲ, ಅದರ   ಬದಲಿಗೆ ’God is great! ಎನ್ನುವ ಪಾಸ್ವರ್ಡ್ ಅನ್ನೇ ಬಳಸಿದರೆ ಹೇಗೆ ಎನ್ನುವ ನಿರ್ಧಾರಕ್ಕೆ ಬಂದೆ.  ಆದರೆ, ನಮ್ಮ ಪಾಸ್ವರ್ಡ್ನಲ್ಲಿ  upper case ಅಕ್ಷರಗಳಿರಬೇಕು, ಅಂಕಿಗಳಿರಬೇಕು ಎಂದೆಲ್ಲ ನಿಯಮಗಳಿವೆ.  ಅದನ್ನೆಲ್ಲ ಸೇರಿಸಿ, God is great! ಅನ್ನು ಬಳಸಿ ಒಂದು ಹೊಸ ಪಾಸ್ವರ್ಡ್ ಸೃಷ್ಟಿಸಿದೆ.  ಆದರೆ, ಈ ಪಾಪ್ಯುಲರ್ ಹೇಳಿಕೆಯಂಥ ಪಾಸ್ವರ್ಡ್ ಅನ್ನು ಪದೇಪದೇ ಟೈಪ್ ಮಾಡುವಾಗಲೂ ಒಂದಲ್ಲ ಒಂದು ಸಂವೇದನೆಗಳು ನನ್ನ ಮನಪಟಲದಲ್ಲಿ ಹಾದು ಹೋಗುತ್ತಿದ್ದವು.  God is great! ಅನ್ನುವುದನ್ನು ಅನೇಕ ಭಾವನೆಗಳಲ್ಲಿ ಈ ಮೂರು ತಿಂಗಳಲ್ಲಿ ಹೇಳಿಕೊಂಡಿದ್ದೇನೆ!

***
ಕನ್ನಡ ವ್ಯಾಕರಣ ತರಗತಿಯಲ್ಲಿ ನನಗೆ ಇಷ್ಟವಾಗುವ ವಿಷಯ ವಸ್ತುಗಳಲ್ಲಿ ವಿಭಕ್ತಿ-ಪ್ರತ್ಯಯಗಳೂ ಒಂದು.  ಪ್ರಥಮ-ಉ, ದ್ವಿತೀಯ-ಅನ್ನು, ತೃತೀಯ-ಇಂದ, ಚತುರ್ಥಿ-ಗೆ, ಇಗೆ, ಅಕ್ಕೆ, ಪಂಚಮಿ-ದೆಸೆಯಿಂದ, ಷಷ್ಟಿ-ನನ್ನ, ನಮ್ಮ, ಸಪ್ತಮಿ-ಲ್ಲಿ, ಒಳಗೆ, ಇತ್ಯಾದಿ...

ಇಂಗ್ಲೀಷ್ ನಲ್ಲಿ ಅನೇಕ ಪದಗಳಿವೆ ನಿಜ.  ಆದರೆ, ಈ ವಿಭಕ್ತಿ-ಪ್ರತ್ಯಯಗಳ ದೆಸೆಯಿಂದ ಭಾರತೀಯ ಭಾಷೆಗಳ ಪದಗಳು ಅನೇಕ ರೀತಿಯಲ್ಲಿ ಉಲ್ಭಣಗೊಳ್ಳುತ್ತವೆ, ಬದಲಾವಣೆಗೊಳಗಾಗುತ್ತವೆ ಮತ್ತು ಭಾಷೆಯನ್ನು ಶ್ರೀಮಂತಗೊಳಿಸುತ್ತವೆ.

ಉದಾಹರಣೆಗೆ: "ಬಾಳೇ ಪ್ರೇಮಗೀತೆ", "ಬಾಳೂ ಬೆಳಕಾಯಿತು", "ಬಾಳಿನ ದಾರಿಯಲಿ", "ಬಾಳಿನಿಂದ ಬಾಳಿಗೆ", "ಬಾಳಿನ ದೆಸೆಯಿಂದ", "ಬಾಳನ್ನು ಬದುಕಿ", "ಬಾಳೇ ಹಾಳಾಯಿತು"... ಹೀಗೆ ’ಬಾಳು’ ಎನ್ನುವ ಪದ ಅನೇಕ ಬೆಳವಣಿಗೆಗಳನ್ನು ಪಡೆಯುತ್ತದೆ. ಇವೆಲ್ಲವನ್ನೂ ಇಂಗ್ಲೀಷಿಗೆ ಅಷ್ಟು ಸುಲಭವಾಗಿ ತರ್ಜುಮೆ ಮಾಡಲಾಗದು.

ಹೀಗೆ ಯೋಚಿಸುತ್ತಿರುವಾಗ, ನನ್ನ ಪಾಸ್ವರ್ಡ್ "God is great!" ಅನ್ನು ತೆಗೆದುಕೊಂಡು ಈ ಮೂರು ಪದಗಳಲ್ಲಿ ಎಷ್ಟೊಂದು ಕಾಂಬಿನೇಷನ್ ಮಾಡಬಹುದು ಎಂದು ಯೋಚಿಸಿದಾಗ ನನಗೆ ಈ ಕೆಳಗಿನ ವಾಕ್ಯಗಳು ಹೊಳೆದವು ಆಷ್ಟೇ!

God is great
Is God great
Great is God

God is great! ಅನ್ನು ಕನ್ನಡಕ್ಕೆ ತರ್ಜುಮೆ ಮಾಡಿದಾಗ "ದೇವರು ದೊಡ್ಡವನು" ಎಂದು ಯೋಚಿಸಿದೆ... ಈ ಎರಡೇ ಪದಗಳನ್ನು ಎಷ್ಟು ರೀತಿಯಲ್ಲಿ ಬದಲಾವಣೆ ಮಾಡಿ ಹೊಸ ಹೊಸ ಅರ್ಥಗಳನ್ನು ಹುಡುಕಬಹುದು ಎಂದು ಯೋಚಿಸಿದಾಗ ಈ ಕೆಳಗಿನ ಸಾಲುಗಳು ಹೊಳೆದವು:

ದೇವರು ದೊಡ್ಡವನು
ದೊಡ್ಡವನು ದೇವರು
ದೇವರೇ ದೊಡ್ಡವನು
ದೊಡ್ಡವನೇ ದೇವರು
ದೇವರು ದೊಡ್ಡವನೇ
ದೊಡ್ಡವನು ದೇವರೇ
ದೇವರೇ ದೊಡ್ಡವನೇ
ದೊಡ್ಡವನೇ ದೇವರೇ
ದೇವರೂ ದೊಡ್ಡವನು
ದೊಡ್ಡವನೂ ದೇವರು

ಈ ಮೇಲಿನವನ್ನು ಹೇಳುವಾಗಿನ ಇಂಟೋನೇಷನ್, ಅದಕ್ಕೆ ಸಂಬಂಧಿಸಿದ ಸಂದರ್ಭ ಹಾಗೂ ಅವುಗಳಿಗೆ ಜೋಡಿಸುವ ಭಾವನೆಗಳನ್ನು ಬಳಸಿ ಅನೇಕ ಕಾಂಬಿನೇಷನ್ನುಗಳನ್ನು ಮಾಡಬಹುದು.  ಇವುಗಳನ್ನು ಅಷ್ಟು ಸುಲಭವಾಗಿ ಇಂಗ್ಲೀಷಿಗೆ ತರ್ಜುಮೆ ಮಾಡಲಾಗುವುದಿಲ್ಲ.  ಕೇವಲ ಎರಡೇ ಪದಗಳಲ್ಲಿ ಈ ಲಾಲಿತ್ಯವಿರುವ ನಮ್ಮ ಭಾಷೆಯನ್ನು ಒಂದು ದೇಶೀಯ (native) ಪರಿಸರದಲ್ಲಿ ಇದ್ದು ಕಲಿಯದಿದ್ದರೆ, ಅಷ್ಟು ಸಹಜವಾಗಿ ಮನಮುಟ್ಟುವುದಿಲ್ಲ.  ಉತ್ತರ ಅಮೇರಿಕದಲ್ಲಿ ನಾವು ಮಕ್ಕಳಿಗೆ ಕನ್ನಡ ಹೇಳಿಕೊಡುವಾಗ ಈ ಸೂಕ್ಷ್ಮಗಳನ್ನು ಹೇಳಿಕೊಡಲಾಗದು.  ಎಲ್ಲರೂ ವ್ಯಾಕರಣವನ್ನು ಕಲಿಯದಿದ್ದರೂ ದಿನನಿತ್ಯದ ನಮ್ಮ ಮಾತುಕತೆ, ಬರವಣಿಗೆಗಳಲ್ಲಿ ನಾವು ಅದೆಷ್ಟು ರೀತಿಯಲ್ಲಿ ಈ ವಿಭಕ್ತಿ-ಪ್ರತ್ಯಯಗಳನ್ನು ಬಳಸುತ್ತೇವೆ ಎಂದು ಯೋಚಿಸಿದಾಗ ಆಶ್ಚರ್ಯವೆನಿಸುತ್ತದೆ.
ನೋಡಿ, ಹೀಗೆ ಈ ಪಾಸ್ವರ್ಡ್ ಬದಲಾಯಿಸುವ ದೆಸೆಯಿಂದ ನಮ್ಮ ಕನ್ನಡ ಭಾಷೆಯ ಹಿರಿಮೆಯನ್ನು ಕೊಂಡಾಡುವಂತಾಯ್ತು!

Sunday, April 03, 2016

...ಸಂಡಾಸ್ ರೂಮ್ ನೋಡೀರೇನು?

ನಾವು ದೋಡ್ಡೋರ್ ಆದ ಮ್ಯಾಲೆ ನಮ್ಮನಿ ಚಿಕ್ಕ್ ಮಕ್ಕಳಿಗೆ "ಹಂಗ್ ಮ್ಯಾಡಬ್ಯಾಡs", "ಹಿಂಗ್ ಮಾಡ್‌ಬ್ಯಾಡಾs" ಅಂತ ಭಾರೀ ಉಪದೇಶ ಏನೋ ಮಾಡ್ತೀವಿ.  ಆದ್ರ, ನಾವು ಚಿಕ್ಕೋರಾಗಿದ್ದಾಗ ಮಾಡಿದ ಚ್ಯಾಷ್ಟೇ-ಕುಚೇಷ್ಟೇಗಳಿಗೆ ಲೆಕ್ಕ ಇಟ್ಟೋರಾರು ಅಂತ ಒಂದ್ ಸರ್ತೀನಾರ್ದೂ ಯೋಚ್ನೇ ಮಾಡೇವೇನು?

"ಹಂಗ್ ಮಾಡಬ್ಯಾಡೋ ತಮ್ಮಾ..." ಅಂತ ನಮ್ಮನಿ ಮಕ್ಕಳಿಗೆ ಈಗ ಹೇಳೋದೇನೋ ಭಾಳ ಐತ್ರಿ, ಆದ್ರ ನಾವ್ ಆಗಿನ್ ಕಾಲದಾಗ ಮಾಡಿದ್ದು ಒಂದೊಂದ್ ಅಲ್ಲ, ಅವನ್ನೆಲ್ಲ ನೆನೆಸಿಕೊಂಡ್ರೆ ಈಗ್ಲೂ ನಗೂ ಬರ್ತತ್ ನೋಡ್ರಿ.
ನಮ್ ಪಾಳ್ಯಾದೊಳಗ ಗಿರಿ ನಮ್ ಲೀಡರ್ರು. ಅವನ ಹಿಂಬಾಲಕರಾಗಿ ನಾವು ನಾಲ್ಕು ಮಂದಿ: ಸುನೀಲ, ರಮೇಶ, ಸುರೇಶ ಮತ್ತ ಹಸುವಿನ ಪ್ರತಿರೂಪ ಅನ್ನೋ ಹಂಗs ನಾನೂ, ಒಂಥರ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾರಲ್ಲ ಹಂಗs.  ಗಿರಿ ಆಗಿನ ಕಾಲದ ಬ್ರೇಕ್ ಥ್ರೂ ಮನುಷ್ಯಾ ರೀ.  ಬ್ರೇಕ್ ಥ್ರೂ ಅಂದ್ರ ಬ್ರೇಕೂ ಹೌದು ಥ್ರೂ ನೂ ಹೌದು!  ಅವನ್ದೆಲ್ಲಾ ಕಪಿಚೇಷ್ಟೆಗಿಂತ ಅದರ ಅಪ್ಪನ್ನದ್ದು ಅಂತಾರಲ್ಲ ಹಂಗs.  ಅವನ ಚೇಷ್ಟಿ ಒಳಗ ಕೆಲವೊಂದಿಷ್ಟು ಫಸ್ಟ್ ಕ್ಲಾಸು, ಇನ್ನು ಕೆಲವೊಂದು ಥರ್ಡ್ ಕ್ಲಾಸು.  ಮಂಗ್ಯಾನಂಗ್ ಆಡಬ್ಯಾಡ ಅಂಥಾ ನೀವ್ ಏನ್ ಕರೀತಿರಿ ಅವೆಲ್ಲ ಫಸ್ಟ್ ಕ್ಲಾಸು, ಅವನ ಚೇಷ್ಟೀ ಇಂದ ಯಾವನಾರಾs ಅಳಂಗ್ ಆದ್ರೆ, ಅದು ಥರ್ಡ್ ಕ್ಲಾಸು.  ಇನ್ನು ನಾವಂತೂ ಎಂದೂ ಸೆಕೆಂಡ್ ಕ್ಲಾಸ್ ಚೇಷ್ಟೇ ಅಂದ್ರ ಏನು ಅಂತ ಯಾವತ್ತೂ ಯಾರ್‌ನೂ ಕೇಳಿದ್ದಿಲ್ಲ!

ಗಿರಿ ಮತ್ತು ಅವನ ಗ್ಯಾಂಗಿನ ಕುತಂತ್ರಗಳಿಗೆ ಬಲಿ ಬೀಳದ ನಮ್ಮೂರಿನಾಗ ಜನರೇ ಇಲ್ಲ ಅನ್ನಬಕು. ನೀವು ನಮ್ ಬಂಡ್ ಭಾಳ್ವಿಗಿ ಸಾಕ್ಷಿ ಆಗಿಲ್ಲ ಅಂದ್ರs ಒಂಥರಾ ನಮ್ಮೂರಿನ ಸಿಟಿಜನ್‌ಶಿಪ್ ಪರೀಕ್ಷಾದಾಗ ಫೇಲ್ ಆದಂಗ್ ನೋಡ್ರಿ!  ಒಂದ್ ಊರು ಅಂದ್ರ ಎಲ್ಲಾ ಥರದ ಮಂದಿ ಇರ್ತಾರ, ಆದ್ರ ನಮ್ ಗಿರಿ ಅಂಥಾ ಮನ್ಶ್ಯಾರು ಬಾಳ್ ಮಂದಿ ಇದ್ದಂಗಿಲ್ಲ ಅನ್ನೋದು ನಮ್ ಅಂಬೋಣ.

ನಿಮಗೂ ನಮ್ಮ ತಂಡಕ್ಕೂ ಯಾವತ್ತಾದ್ರೂ ಮುನಿಸಾತು ಅಂದ್ರ, ನಿಮ್ಮ ಮನ್ಯಾಗ ಸೈಕಲ್ಲೋ ಲೂನಾನೋ ಟಿವಿಎಸ್ಸೋ ಇದ್ರs, ಅದ್ರ ಚಕ್ರದಾಗಿನ ಹವಾ ಟುಸ್ಸ್ ಅಂದಂಗs ಅಂಥ ತಿಳಕೊಳ್ರಿ.  ಅದ್ಯಾವ ಮಾಯದಾಗ ಗಿರಿ ಬರ್ತಿದ್ನೋ... ನಿಮ್ಮನಿ ಮುಂದ ನಿಲ್ಸಿರೋ ಟೂ ವ್ಹೀಲರಿನ ಹವಾ ಇದ್ದಕ್ಕಿದ್ದಂಗ ನಾಪತ್ತೆ ನೋಡ್ರಿ!  ಈ ಟೂ ವ್ಹೀಲರ್ ಹವಾ ಕಳೆದುಕೊಂಡ ಮ್ಯಾಲೆ ಅದನ್ನ ತಳ್ಳೋದು ಎಷ್ಟು ಕಷ್ಟ ಅಂಥ ನಿಮಗ ಗೊತ್ತಿರಲಿಕ್ಕಿಲ್ಲ, ಯಾವತ್ತರ ಟ್ರೈ ಮಾಡಿ ನೋಡ್ರಿ.  ಹವಾ ಕಳಕೊಂಡ ಅದರ ಟ್ಯೂಬಿನೊಳಗೆ ವಾಷರ್ ಒಡೆದು ಹೋಗಿರೋ ಸೈಕಲ್ ಪಂಪ್ ಬಳಸಿ, ಪೆಚ್ಚ್ ಮೋರೇ ಹಾಕ್ಕೊಂಡು, ಹವಾ ತುಂಬೋದು ಅಂದ್ರs ಅದರ ಪಜೀತಿ ಯಾವ ವೈರಿಗೂ ಬ್ಯಾಡ.  ಹವಾ ಹೊಡ್ದೂ ಹೊಡ್ದೂ ಕೈ ಮೈ ನೋವ್ ಬಂದಂಗs.
ಯಾರ್ದಾರೂ ಮನಿ ಹಿತ್ಲಾಗ ಬಾಳೆ ಗೊನಿ ಇನ್ನೇನು ಕಟಾವಿಗೆ ಬಂತೂ ಅಂದ್ರ, ಅದು ಅದರ ಹಿಂದಿನ್ ದಿನಾ ಅದು ಮಂಗ್ ಮಾಯಾ ನೋಡ್ರಿ! ನಮ್ ಗಿರಿ ಹತ್ರ ಯಾರ್ ಹಿತ್ಲಾಗ್ ಯಾವ್ ಫಲ ಎಷ್ಟು ದಿನದಾಗ ಕಟಾವಿಗೆ ಬರ್ತತಿ ಅನ್ನೋದರ ಮಾಹಿತಿ ಭಾಳ್ ಛೊಲೋ ಇತ್ ನೋಡ್ರಿ. ಅವನ ತಲೀ ಒಡೋದೇ ಹಂಗs.  ಮಾವಿನ್ ತೋಪ್‌ನ್ಯಾಗೆ ಕಾಯೋರು ನಮ್ಮನ್ನ ನೋಡ್ರಿದ್ರೆ ದೇವ್ರು ಬಂದೋರಂಗ ಆಡೋರು!  ಎಲ್ಲಾರೂ ಗುರಿ ಇಟ್ಟ್ ಕಲ್ ಹೋಡ್ದು ಒಂದು ಫಲ ಉದುರಿಸಿದ್ರೆ, ನಮ್ಮ್ ತಂಡ ಇಡೀ ಮರಾನೇ ಖಾಲೀ ಮಾಡೋದು... ಮರಾ ಒಂದೇ ಅಲ್ಲ್ ಇರ್ತಿತ್ತು, ಯಾಕಂದ್ರ ಮತ್ತ್ ಮುಂದಿನ ವರ್ಷಕ್ಕ್ ಬೇಕ್ ಅಲ?
ಅಷ್ಟೂ ಮಾಡಿ ನಮಗೆಲ್ಲಾ ಅವಾಗ ಛಾಟೀ ಬಿಲ್ಲಿನ ಹುಚ್ಚು ರೀ.  ಅದರೊಳಗ ಪರಿಣಿತ ಅಂದ್ರ ನಮ್ ಗಿರಿ.  ಅವನ ಗುರಿ ಭಾಳಾ ನಿಖರ.  ನಮ್ ಶಾಲೀ ಕಟ್ಟೀ ಮುಂದ ಧ್ವಜಾ ಹಾರ್ಸೋ ಕಂಬಕ್ಕ ಸುಮಾರು ಐವತ್ತ್ ಏನು, ನೂರ್ ಅಡೀ ದೂರ್ದಿಂದ ಗುರಿ ಇಡೋನ್ ರೀ. ಅದು ಒಂದಿನಾನು ತಪ್ಪಿದ್ದು ನಾ ನೋಡಿಲ್ಲ.  ಅಷ್ಟೂ ಮಾಡಿ ನಿಮಗ ಏನಾರಾ ಗಿರಿ ಕಂಡ್ರ ಆಗಂಗಿಲ್ಲ ಅಂದ್ರ, ನಿಮಗೂ ಛಾಟೀ ಬಿಲ್ಲಿನ ಕಲ್ಲಿನ ಏಟು ಕುಂಡೀ ಮ್ಯಾಲ ಬಿತ್ತೂ ಅಂತಾನs ಲೆಕ್ಕ.

ಎಲ್ರೂ ಊಟಕ್ಕೆ ಕುತ್ವಿ ಅಂದ್ರ ಇವ ನಿಂತೇ ಇರ್ತೀನಿ ಅನ್ನೋವ.  ಅವನೇನಾರ ಲಿಂಬಿ ಹಣ್ಣು, ಟೊಮೇಟೋ, ಮುಸಂಬಿ ಹಣ್ಣು ತಿಂತಾನೇ ಅಂದ್ರ ಅವನ ಅಕ್ಕಾ-ಪಕ್ಕಾ ಯಾರೂ ಇರಂಗಿಲ್ಲ ನೋಡ್ರಿ.  ಅವರ ಪಾಡು ದೇವ್ರಿಗೆ ಪ್ರೀತಿ.  ಅವರ ಕಣ್ಣಿನಾಗೆ ಗ್ಯಾರಂಟಿ ಲಿಂಬೀ ಹಣ್ಣಿನ್ ರಸಾ ಬೀಳೋದೆ.  ಈ ಹಣ್ಣಿನ್ ರಸಾ ಎಲ್ಲಾ ಕಡೆ ಒಸರೋ ಹಂಗ, ಹಣ್ಣನ್ನ ಹಿಚುಕಿ-ಹಿಚುಕಿ ಎಲ್ಲಾ ರಸಾ ಮಾಡ್‌ಕ್ಯಂಡ್ ಒಂದ್ ಕಡೆ ತೂತ್ ಮಾಡಿ ಅದನ್ನ ತನ್ನ ಗುರಿಗೆ ಹಿಡಿದು ಮುಖ ಮಾಡಿ ತಿನ್ನೋದರಲ್ಲಿ ನಮ್ ಗಿರಿ ನಿಸ್ಸೀಮ ರೀ.

ಯಾರ್ದಾರ ಮದ್ವೀ ನಡದ್ರ ನಮಗ್ಯಾರೂ ಬರ್ರೀ ಅಂತ ಕರೀದಿದ್ರೂ ನಾವಾs ಹೋಗ್ತಿದ್ವಿ.  ನಮ್ಮೂರಿನಾಗೆ ಮದ್ವಿ ಮುಂಜೀ ಅಂದ್ರ ಒಂಥರ ನಮ್ಮೂರಿನ ಹಬ್ಬಗಳು ಇದ್ದಂಗ, ಅದಕ್ಯಾರು ಬರಬ್ಯಾಡಾ ಹೋಗಬ್ಯಾಡ ಅನ್ನೋರು?  ಅಲ್ಲಿ ವಾಲಗಾ ಊದೋರ ಮುಂದ ನಾವು ಎಳೇ ಹುಣಸೀ ಕಾಯಿ ತಿಂತಿದ್ವಿ, ಅವರು ನಮ್ಮುನ್ನ ಓಡಿಸಿಕ್ಯಂಡ್ ಬರೋರು.  ಹಿಂಗs, ನಮ್ ಮಜಾ ನಡೀತಿತ್ತ್ ನೋಡ್ರಿ.

ಮದ್ವಿ ಅಂದ ಮ್ಯಾಲ ನೆನಪಾತು. ನಮ್ಮೂರಿನ ನಡುಮನಿ ಈರಪ್ಪನ ಮಗಳ ಮದವ್ಯಾಗ ನಮ್ ಗಿರಿ ಮಾಡಿದ ಪರಾಕ್ರಮ ನೆನಸಿಕೊಂಡ್ ಇವತ್ತಿಗೂ ನಗು ಬರ್ತತಿ ನೋಡ್ರಿ.  ನಡುಮನಿ ಈರಪ್ಪ ಅಂಥ ಸಾವ್ಕಾರ ಏನಲ್ಲ, ಆದ್ರೂ ಇದ್ದೊಬ್ಬ ಮಗಳ ಲಗ್ನಾನ ಅಚ್ಚುಕಟ್ಟಾಗಿ ಮಾಡಬಕು ಅಂತ ಮನಿ ಮುಂದ ಬ್ಯಾಡ,
ಊರಿನ ಛತ್ರದಾಗ ಇಟ್ಟುಗೊಣೂನು ಅಂತ, ಅಲ್ಲೇ ಎಲ್ಲಾ ಫಿಕ್ಸ್ ಮಾಡಿದ್ದ ರೀ.  ಹಿರೇಕೇರೂರು ಸಂಬಂಧ, ಅಂಥಾ ದೂರೇನೂ ಇಲ್ಲ, ಆದ್ರ ಮುಂಜಾನೆ ಬೇಗ ಲಗ್ನ ಮಹೂರ್ತ ಐತಿ ಅಂತ ಎಲ್ರೂ ಹಿಂದಿನ್ ದಿನಾನೇ ಬಂದು ಚೌಳ್ಟ್ರಿ ಸೇರಿಕೊಂಡಿದ್ರು ರೀ.  ನಾವು ನಮ್ಮ ತಂಡದ ಸಮೇತ ಈ ಅತಿಥಿಗಳನ್ನ ಮುಗುಳ್ನಕ್ಕು ಬರಮಾಡಿಕೊಂಡಿದ್ವಿ.  ಯಾರು, ಹೆಂಗಾs ಅಂಥ ಗೊತ್ತಾಗಬೇಕಲ? ಅದಕ್ಕಾ.  ರಾತ್ರೀ ಎಲ್ಲಾರು ಸೇರಿ ಸಮಾ ಹರಟಿ ಹೊಡದ್ವಿ...ಅದು ಯಾವಾಗ ಮಲಗಿದ್ವೋ ಅದು ಯಾವನಿಗ್ ಗೊತ್ತು!

ಮರುದಿನ, ಮುಂಜಾನೆ ಒಂಭತ್ತ್ ಘಂಟಿ ಅಭಿಜಿನ್ ಮಹೂರ್ತ ಅಂಥಾ ಕಾಣ್ತತಿ.  ಮದ್ವೀ ಮನಿ ಅಂದ್ರ ಗಡಿಬಿಡಿ, ಗಿಜಿಬಿಜಿ ಇದ್ದದ್ದ.  ಎಲ್ರೂ ಹೊಸ ಬಟ್ಟಿ ಹಾಕ್ಕೊಂಡಾರ.  ಎಲ್ಲಾ ಕಡಿ ಹೂ ಹಣ್ಣು ಕಾಣ್ಸಕ್ ಹತ್ಯಾವ. ಆದ್ರ ಒಂದಾs ಒಂದ್ ಪ್ರಾಬ್ಲಮ್ಮ್ ರೀ.
ಸುಮಾರು ಎಂಟೂವರಿಯಿಂದ ಎಲ್ಲ್ ಹುಡುಕಿದ್ರೂ ಮದುವೀ ಗಂಡಾ ಕಾಣಸಂಗಿಲ್ಲ!  ಕೆಲವೊಂದಿಷ್ಟು ಮಂದಿ ಹುಡುಗಾ ಓಡಿ-ಗೀಡಿ ಹೋಗ್ಯಾನೇನೋ ಅಂತ ಸಂಶಯಾ ವ್ಯಕ್ತಪಡಿಸಿದ್ರು.  ಕೆಲವೊಂದಿಷ್ಟು ಮಂದಿ ಹುಡುಗನ್ ಅಪ್ಪ-ಅಮ್ಮನಿಗಿ ಜೋರ್ ಮಾಡಕ್ ಹಿಡುದ್ರು.  ಒಂದಿಷ್ಟು ಹೆಣ್ ಮಕ್ಳು ಒಂದ್ ಕಡಿ ಅಳಾಕ್ ಹತ್ಯಾವ!  ಒಂಥರಾ ಕಿಲಕಿಲಾ ಅಂಥ ನಕ್ಕೊಂಡಿದ್ ಛತ್ರ ಹೊಟ್ಟಿ ಬ್ಯಾನಿ ಬಂದ್ ರೋಧ್ನ ಮಾಡೋ ಮಗೂ ಹಂಗ ಅಳಾಕ್ ಹತ್ತೈತಿ! ಯಾರೂ ಪೋಲೀಸ್-ಗಿಲೀಸ್ ಅಂದಂಗಿದ್ದಿಲ್ಲ.  ನಡುಮನಿ ಈರಪ್ಪನ ಮರ್ಯಾದೆ ಪ್ರಶ್ನೆ ನೋಡ್ರಿ.  ಅವ ಏನ್ ಮಾಡ್ತಾನ? ಅತ್ಲಾಗಿಂದ್ ಇತ್ಲಾಗ, ಇತ್ಲಾಗಿಂದ್ ಅತ್ಲಾಗ್ ಒಂಥರಾ ಬೋನ್‌ನಾಗಿರೋ ಹುಲೀ ಮರೀ ಮಾಡ್ದಂಗ ಒಡಾಡ್‌ಕೊಂಡ್ ಬುಸುಗುಡಾಕ್ ಹತ್ತಿದ್ದ.  ವಾಲಗದೋರ್ ಅವರ ಕೆಲ್ಸಾ ನಡ್ಸ್ಯಾರ.  ಮೈಕ್ ಸೆಟ್ ರುದ್ರ, ಅದ್ಯಾವ್ದೋ ಬಭ್ರುವಾಹನ ಸಿನಿಮಾ ಹಾಡ್ ಜೋರಾಗ್ ಹಾಕ್ಯಾನ.  ಭೋಜನಶಾಲೆ ಅಡಿಗಿ ಮನೀ ಒಳಗಿಂದ ಶಾವ್ಗೀ ಪಾಯ್ಸದ ವಾಸ್ನಿ ಗಮ್ಮ್ ಅನ್ನಾಕ್ ಹತ್ತಿತ್ತು.  ಒಂದಿಷ್ಟು ಮಂದೀ ನಮಗೇನೂ ಗೊತ್ತೇ ಇಲ್ಲ ಅನ್ನೋ ಹಂಗ ಮದ್ವೀ ಮಂಟಪದ ಮುಂದ ಜಮಖಾನದ ಮ್ಯಾಲೆ ಕುಂತೂ ಹರಟೀ ಹೊಡ್ಯೋದ್ರಾಗ ತಲ್ಲೀನ ಆಗಿದ್ರು.  ಕೆಲವು ಕಡೆ ಒಂಥರ ಕುಮುಟು ಬೆವ್ರು ವಾಸ್ನಿ ಬೇರೆ!

ಇನ್ನೇನು ಲಗ್ನದ ಮಹೂರ್ತ ಬಂತು, ಹತ್ರಾ ಬಂದೇ ಬಿಡ್ತು, ಆದ್ರೂ ಎಲ್ಲಿ ನೋಡ್ರಿದ್ರೂ ಮದ್ವಿ ಗಂಡಿನ ಸುಳಿವೇ ಇಲ್ಲ!  ಹುಡುಗನ ಅಪ್ಪಾ ಅಮ್ಮಾ ಕಂಗಾಲು.  ಜೋಬ್ನಾಗೆ ಹತ್ತ್ ಪೈಸಾ ಇರದಿದ್ರು ನಮ್ಮ್ ಮಂದಿ ಮರ್ಯಾದೆಗೆ ಹೆದ್ರೋ ಜನಾ ನೋಡ್ರಿ.  ಅಷ್ಟೊತ್ತಿಗ್ ಆಗ್ಲೆ ಅವರ ಮುಖಾ ಕಪ್ಪ್ ಹಿಡದ ಕರಟಾ ಆಗಿತ್ತು.  ಹುಡುಗನ್ ಕಡಿ ಬಾಳ ಮಂದಿ ಇದ್ದಂಗಿರ್ಲಿಲ್ಲಾ ಆದ್ರೂ ಪಾಪ ಅವರಿಗೆ ಊರ್ ಹೊಸತು, ಏನ್ ಮಾಡ್ತಾರ, ಏನ್ ಬಿಡ್ತಾರ?

ನಮ್ ತಂಡ ಅಲ್ಲೇ ಇತ್ತು, ನಾವೂ ಹಂಗಾ ಚ್ಯಾಷ್ಟೀ ಮಾಡ್‌ಕೊಂಡು ಹಾಡ್ ಕೇಳ್ತಾ ನಿಂತಿದ್ವಿ.  ಅಷ್ಟ್ರಾಗ ಯಾರೋ ಒಬ್ರು "ಹೇ, ಗಿರಿ, ಸಾಯಾ ಮಾಡ್ರಪ್ಪಾ, ವರಾ ಎಲ್ಲೂ ಕಾಣಸ್ತಾನೇ ಇಲ್ಲ, ಮದ್ವೀ ನಿಂತ್ ಹೋಗೋ ಪರಿಸ್ಥಿತಿ ಬಂದೈತಿ!" ಅಂದ್ರು.  ನಮ್ ಗಿರಿ ಇದ್ದೋನು, "ಅಲ್ರೀ, ಎಲ್ಲಾ ಕಡೆ ನೋಡೀರೇನು? ಅತ್ಲಾಗ್ ಸಂಡಾಸ್ ರೂಮ್ ನೋಡೀರೇನು?" ಅಂದ.
"ಬಚ್ಚಲ್ ಮನಿ ನೋಡ್ರಿ, ಬಚ್ಚಲ್ ಮನಿ ನೋಡ್ರಿ" ಅಂತ ಯಾರ್ ಯಾರೋ ಕೂಗಿದ್ರು, ಕೊನೀಗ್ ನೋಡಿದ್ರ ಹೊಟ್ ಬ್ಯಾನೀನೋ, ಏನ್ ಕರ್ಮಾನೋ ಅಂದಂಗ ಮದ್ವಿ ಗಂಡ್ ಸಂಡಾಸ್ ರೂಮ್‌ನಾಗೆ ಬಾಗ್ಲ್ ಹಾಕ್ಕೊಂಡು ಕುಂತಾನಾ!  ಯಾರೂ ನೋಡೇ ಇಲ್ಲ!  ಕೊನೀಗೂ ಸಿಕ್ಕಿದಾ ಅಂತ ಎರ್ಲೂ ಸಮಾಧಾನ್ ಮಾಡ್‌ಕೊಂಡು ಅವನ್ನ ಎಷ್ಟು ಲಗೂನಾ ಅತೋ ಅಷ್ಟು ಲಗೂ ಕರ್ಕೊಂಡ್ ಬಂದ್, ಕೊನೀಗೆ ಮಹೂರ್ತ ಮೀರೋದ್ರೊಳಗ ತಾಳೀನೂ ಕಟ್ಸ್ ಬಿಟ್ರು ನೋಡ್ರಿ.  ಎಲ್ರೂ ಸಮಾಧಾನ ಪಟ್ರು, ನಡುಮನಿ ಕುಟುಂಬ ಒಂದ್ ದೀಡ್ ಕಡ್ದು ಹಾಕಿದ ಕೆಲ್ಸ ಮಾಡ್ದಂಗ್ ನಿಟ್ಟುಸಿರು ಬಿಡ್ತು.  ಈರಪ್ಪ ಅದ್ಯಾವ್ ದೇವ್ರಿಗೆ ಅದೇನೇನ್ ಹರಿಕಿ ಹೊತ್ತಾ ಅಂತಾ ಕೇಳಬಕು, ಆ ಸ್ಥಿತಿ!

ಅಷ್ಟೂ ಮಾಡಿ, ಮದ್ವಿ ಗಂಡು ಯಾಕ್ ಅಲ್ಲಿ ಹೊಕ್ಕೊಂಡು ಕುಂತಿದ್ದ ಅಂತ ಯಾರೋ ಕೇಳ್ಲಿಲ್ಲ, ಯಾರೂ ಹೇಳ್ಲಿಲ್ಲ! ನಮಗೊಂದಿಷ್ಟು ಮಂದಿಗೆ ಮಾತ್ರ ಗಿರಿ ಹೇಳಿದ ಮ್ಯಾಲೆ ಗೊತ್ತಾತು: ಮದ್ವಿ ಗಂಡು ಎಂಟ್ ಘಂಟಿ ಅಷ್ಟೊತ್ತಿಗೆ ಸಂಡಾಸ್ ರೂಮಿನ್ ಕಡೀಗೆ ಹೋಗೋದನ್ನ ನೋಡಿ, ಗಿರಿ ಅವನ ಫಾಲೋ ಮಾಡಿದ್ನಂತ.  ಆ ಹುಡುಗ, ತನ್ನ ಬಿಳೀ ಪಂಚಿ ಬಿಚ್ಚಿ, ಸಂಡಾಸ್ ರೂಮ್ ಬಾಗ್ಲ್ ಮ್ಯಾಲ ಇಟ್ಟು, ತನ್ನ ಕೆಲ್ಸ ಮುಂದುವರೆಸ್ಯಾನಂತ.  ಅಷ್ಟೊತ್ತಿಗೆ, ಗಿರಿ ಹೋಗಿ ಅವನ ವಸ್ತ್ರ ಅಪಹರಣ ಮಾಡಿ ಮತ್ತೊಂದು ರೂಮಿನಾಗೆ ಇಟ್ಟನಂತ.  ಯಾವ್ದೋ ಊರಿಂದ ಯಾವ್ದೋ ಊರಿಗೆ ಬಂದು, ಸಂಕೋಚದ ಅಪರಾವತರ ಅನ್ನೋ ಹಂಗ್ ಇದ್ದ ಹುಡುಗಾ ಕೂಗೋಕೂ ಆಗ್ದೇ ಹೊರಾಗ್ ಬರೋಕೂ ಅಗ್ದೇ ಅಲ್ಲೇ ಕುಂತಿದ್ನಂತೆ ನೋಡ್ರಿ!

ಇವೆಲ್ಲ ಆಗಿದ್ದು ನಮ್ ಗಿರಿ ಮತ್ತು ಅವರ ತಂಡದ ಕೃಪೆ ಅಂತ ಯಾರಿಗಾದ್ರೂ ಗೊತ್ತಾಗಿದ್ರ ನಮ್ ಪರಿಸ್ತಿತಿ ದಯನೀಯ ಆಗ್ ಹೋಗ್ತಿತ್ತು, ಆ ಸಂಕೋಚದ ಪ್ರವೃತ್ತಿ ಹುಡುಗನ ದೆಸೆಯಿಂದ ನಾವೆಲ್ಲ ಇವತ್ತು ಕೈಕಾಲು ನೆಟ್ಟಗೆ ಇಟಗೊಂಡಿರೋ ಹಂಗಾತು ಅಂತ ನೆನೆದು ಇವತ್ತೂ ನಾವ್ ನಗತೀವ್ ನೋಡ್ರಿ.  ನೀವೇನಾರಾ ನಮ್ಮೂರಿಗೆ ಹೋಗ್ತೀವಂದ್ರ ನಮ್ಮ್ ಗಿರಿ ಕಂಡು ಕುದ್ದ್ ಮಾತಾಕ್ಯಂಬರ್ರಿ, ಅವ ಹಿಂದ್ ಇದ್ದಂಗ್ ಈಗಿಲ್ಲ, ಆದ್ರೂ ಸ್ವಲ್ಪ ಹುಶಾರ್ ಇರ್ರಿ!


***
ಈ ಲೇಖನ ಮಾರ್ಚ್ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.

Friday, October 30, 2015

ಕನ್ನಡಿಗನೊಬ್ಬನ ಪಿರಿಪಿರಿ...

ಅಮೇರಿಕಕ್ಕೆ ಬಂದ ಮೊದಲಲ್ಲಿ ಗೋಪಾಲಕೃಷ್ಣ ಅಡಿಗರ "ಅಳುವ ಕಡಲಲಿ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ" ಹಾಡನ್ನು ಕೇಳಿದಾಗಲೆಲ್ಲ ನನ್ನ ಮನದಲ್ಲಿ ಈ ಕ್ಯಾಪಿಟಲಿಸಮ್ ಅನ್ನೋ ದೊಡ್ಡೋ ಸಮುದ್ರದಲ್ಲಿ ನಮ್ಮತನವೆಂಬ ಚಿಕ್ಕ ಸೋಷಿಯಲಿಸ್ಟ್ ದೋಣಿಯನ್ನು ನಾವು ಹುಟ್ಟು ಹಾಕಿ ಚಲಿಸುತ್ತಿದ್ದೇವೆಯೇನೋ ಎಂಬ ಆಲೋಚನೆಗಳು ಬರುತ್ತಿದ್ದವು.  ನಮ್ಮ ಕನ್ನಡಿಗರ ಪರಂಪರೆಯೇ ಹಾಗೆ, ದೊಡ್ಡವರನ್ನು ಗೌರವಿಸಬೇಕು, ಯಾವತ್ತೂ ನೀನು ಎಷ್ಟು ಚಿಕ್ಕವನೆಂಬುದನ್ನು ಅರಿತುಕೊಂಡಿರು...ಇತ್ಯಾದಿ ಇತ್ಯಾದಿ ಮಾತುಗಳು ನಮ್ಮ ಮನದಾಳದಲ್ಲಿ "ಗೌರವ"ವನ್ನು ಉಲ್ಬಣಿಸುವುದರ ಬದಲು ಕೀಳರಿಮೆಯನ್ನು ಸೃಷ್ಟಿಸುತ್ತಿತ್ತೇನೋ ಎಂದು ಒಮ್ಮೊಮ್ಮೆ ಗಾಭರಿಯಾಗತ್ತದೆ.  ಉದಾಹರಣೆಗೆ ನಾವು ನಂಬಿಕೊಂಡ ಪದ್ಯಗಳನ್ನು ಈ ಕ್ಯಾಪಿಟಲಿಸಮ್ಮಿನ ದರ್ಬಾರಿನಲ್ಲಿ ದಿನನಿತ್ಯವೂ ನಡೆಯುವ ಆಫೀಸಿನ ರಾಜಕೀಯದ ಮುಂದೆ ಅನ್ವಯಿಸುವುದಾದರೂ ಹೇಗೆ?

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೇ
ಬೆಲ್ಲಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ|


ಈ ಮೇಲಿನ ಪದ್ಯವನ್ನು ಫಾಲೋ ಮಾಡುತ್ತಾ ಯಾವ ರೀತಿಯ ರಿಸ್ಕ್ ತೆಗೆದುಕೊಳ್ಳೋದು, ಯಾರನ್ನು ಎದುರು ಹಾಕಿಕೊಳ್ಳೋದು? ಅಥವಾ ಈ ವಚನವನ್ನು ನೋಡಿ:

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮ ದೇವನ ಒಲಿಸುವ ಪರಿ|


ಈ ವಾಕ್ಯಗಳನ್ನು ಫಾಲೋ ಮಾಡಿದ್ರೆ ನಮ್ಮ ಆಫೀಸಿನಲ್ಲಿ ನಿಮಗೆ ಪ್ರೊಮೋಷನ್ ಸಿಕ್ಕ ಹಾಗೇ ಅಂದುಕೊಳ್ಳಿ... ಸುಳ್ಳು ಮತ್ತು ಸತ್ಯದ ನಡುವೆ ತಿhiಣe ಟie ಅನ್ನೋದಿದೆಯಂತೆ ಅದಕ್ಕೆ ಕನ್ನಡದಲ್ಲಿ ಯಾವುದೇ ಪದಗಳು ಇದ್ದ ಹಾಗಿಲ್ಲ.  ಈ ಮೇಲಿನ ಮಾತುಗಳಿಗೆ ತದ್ವಿರುದ್ಧವಾಗೇ ನಮ್ಮ ಕಣ್ಣೆದೆರು ಎಷ್ಟೋ ಘಟನೆಗಳು ಆಫೀಸಿನಲ್ಲಿ ನಡೆಯುತ್ತವೆ.  ಕ್ಯಾಪಿಟಲಿಸಮ್ಮಿನ ಲೀಡರುಗಳು ಎತ್ತರದ ಆಳುಗಳು, ಗಟ್ಟಿಯಾಗಿ ಒದರುವ ಇವರುಗಳು "ನುಡಿದರೆ ಸ್ಪಟಿಕದ ಸಲಾಖೆಯಂತಿರಬೇಕು" ಎಂಬುದನ್ನು ಅಕ್ಷರಶಃ ಅರಿತು ಘಂಟೆ ಹೊಡೆದಂತೆ ಮಾತನಾಡುವವರು.  ಹಿರಿಯರು ಕಿರಿಯರು ಎನ್ನುವ ವಯೋ ಬೇಧಭಾವ ಇರೋದಿಲ್ಲ. ಹಿಡಿದ ಕೆಲಸದಲ್ಲಿ  ಕ್ವಾರ್ಟರ್ ಅಥವಾ ಅರ್ಧ ವರ್ಷ ಆದ ಮೇಲೆ ರಿಸಲ್ಟ್ ಅನ್ನು ತಂದು ತೋರಿಸಿಯೇ ಬಿಡುತ್ತಾರೆ.  ಯಾವುದೇ No ಅನ್ನುವ ಪದವನ್ನು ಸಹಿಸದವರು.  ಸದಾ ಕರ್ಮಠ ಸ್ವಭಾವದವರು.  ಅವರಿಂದ ಇವರಿಂದ ಕೆಲಸ ತೆಗೆಯುವವರು.  ರಾಜಕಾರಣಿಗಳು.  ಅಗತ್ಯ ಬಂದಾಗ ಗುಡುಗುವವರು ಮತ್ತು ನಿರ್ದಾಕ್ಷಿಣ್ಯವಾಗಿ ಹಿಂದೇಟನ್ನು ಹಾಕದೆ, "oh, it was a tough decision to make" ಎಂದು ನೂರಾರು ಕೆಲಸಗಾರರನ್ನು ಒಂದೇ ದಿನದಲ್ಲಿ ಮನೆಗಟ್ಟುವವರು, ಇತ್ಯಾದಿ, ಇತ್ಯಾದಿ.  "ನೀವು ಇಷ್ಟು ವರ್ಷ ಮಾಡಿದ್ದನ್ನ ಬಿಡಿ, ನಿಮ್ಮಿಂದ ಇನ್ನು ಮುಂದೆ ಏನೇನು ಮಾಡೋಕಾಗ್ತದೆ ಅನ್ನೋದನ್ನು ಒದರಿ ಹಾಗೂ ಸಾಬೀತು ಮಾಡಿ ತೋರಿಸಿ" ಅನ್ನೋ ಮಾತು ಯಾರು ಯಾವತ್ತು ಬೇಕಾದರೂ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ಹೇಳಬಹುದು ಹಾಗೂ ಕೇಳಬಹುದು.

ನಾವು ಡಾರ್ವಿನ್ನನ ಥಿಯರಿಯನ್ನು ಹಿಂದೆ ಓದುತ್ತಿದ್ದಾಗ struggle for existence ಅನ್ನೋದನ್ನ ಬೇರೆ ರೀತಿ ಅರ್ಥ ಮಾಡಿಕೊಳ್ತಿದ್ವಿ,  ಆದರೆ ಈಗ struggle ಮತ್ತು existence ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ.  ಒಂಥರಾ ಮೈಕ್ರೋ ಬಡ್ಡಿಯ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡ ಹಾಗೆ ಪ್ರತಿದಿನ ಪ್ರತಿಕ್ಷಣ ನಿಮ್ಮನ್ನ ನೀವು ಪ್ರೋವ್ ಮಾಡಿಕೊಳ್ತಲೇ ಇರಬೇಕು, ಅದೇ ನ್ಯಾಯ, ಅದೇ ನಿಯಮ.

ಇಂಥಾ ಕ್ಯಾಪಿಟಲಿಸಮ್ಮಿನ ಸಾಗರದಲ್ಲಿ, ನೀರಿನ ಗುಣವಿರುವ ನಾವು ಕನ್ನಡಿಗರು ನಮ್ಮ ಯಥೇಚ್ಛವಾದ ಸಾಹಿತ್ಯ, ಸಂಗೀತ ಹಾಗೂ ಸಂದೇಶಗಳ ಹಿನ್ನೆಲೆಯಿಂದ ಒಂದು ರೀತಿ ಬಡಪಾಯಿಗಳಾಗಿ ಬಿಟ್ಟೆವೆನೋ ಅನ್ನಿಸೋದಿಲ್ವಾ ನಿಮಗೆ? ಚಿಕ್ಕ ಚಿಕ್ಕ ರಾಜಕೀಯಗಳಲ್ಲಿ rat race ಹಾಗೂ ಮೈಕ್ರೋ ಮ್ಯಾನೇಜುಮೆಂಟುಗಳಲ್ಲಿ Ph. D., ಮಾಡಿರುವ ನಮಗೆ ನಮ್ಮ ಕಾರ್ಪೋರೇಟ್ ವಲಯದಲ್ಲಿ ಯಾರೂ ಯಾವತ್ತೂ ಕರೆದು ಲೀಡರ್‌ಶಿಪ್ ರೋಲ್ ಅನ್ನು ಕೊಟ್ಟಿದ್ದು ನೋಡಿಲ್ಲ ಬಿಡಿ.  ನಮ್ಮ ಕಣ್ಣೆದುರೇ ತೆಲುಗು, ತಮಿಳು ಹಾಗೂ ಉತ್ತರ ಭಾರತದವರು ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ಮುಂದೆ ಹೋದರೆ ನಾವು ಕನ್ನಡಿಗರು ಅವರಿಗೆ ಅಡಿಯಾಳುಗಳಾಗಿ ಕೆಲಸ ಮಾಡಿಕೊಂಡು ಅದನ್ನು "ಕಾಯಕವೇ ಕೈಲಾಸ" ಎಂದು ಕರೆದು ಹನ್ನೆರಡನೇ ಶತಮಾನದ ವಚನಕಾರರ ಜೊತೆ ಸಮನ್ವಯ ಬೆಳೆಸಿಕೊಂಡು ಬಿಡುತ್ತೇವೆ.  ಕನ್ನಡಿಗರು risk ತಗೊಳೋದಿಲ್ಲ ಬಿಡ್ರಿ.  ನೀವೆಲ್ಲ ಬರೀ ಪುಳಿಚಾರಿನ ಜನ ನಿಮ್ಮಿಂದೇನಾಗುತ್ತೇ? ಅನ್ನುವವರಿಗೆ ನಾವು ಏನು ಎಂಬುದನ್ನು ತೋರಿಸೋ ಕಾಲ ಬರೋದಾದ್ರೂ ಯಾವಾಗ?

ಊಟ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಟೀ ಕುಡುದ್ ಮೇಲೆ ಮತ್ತೆ ನಮ್ಮನ್ನು ನಾವೇ ಈ ಪ್ರಶ್ನೆ ಕೇಳಿಕೊಂಡು ಸಮಾಧಾನ ಮಾಡ್ಕೋಬಹುದು ಅಥವಾ ಮಾಡ್ಕೋತೀವಿ: in the grand schema of things, so what?  ನಮಗೆಲ್ಲಾ ಈಗ ಕಷ್ಟಾ ಆಗೋಲ್ಲ.  ಯಾವಾಗ ನಮ್ಮ ಮಕ್ಳು ಹೈ ಸ್ಕೂಲು ಮುಗಿಸಿ ಕಾಲೇಜು ಸೇರಿ ಮೊದಲ ಸಲ ಥ್ಯಾಂಕ್ಸ್ ಗಿವಿಂಗ್‌ಗೆ ಮನೆಗೆ ಬರ್ತಾರಲ್ಲ, ಅವಾಗ ನಮ್ಮ್ ಮುಸುಡಿ ನೋಡಿ ಕೇಳ್ತಾರ್ ನೋಡಿ, "ಓ, ನೀನು ಇನ್ನು ಅದೇ ಕೆಲ್ಸದಲ್ಲಿ, ಅದೇ ಲೆವಲ್‌ನಲ್ಲಿ ಇದಿಯಾ?" ಆಗ ನಿಜವಾಗ್ಲೂ ಗೊತ್ತಾಗುತ್ತೆ ನಾವು ಯಾರು ಅಂತ.  ಅಷ್ಟೊತ್ತಿಗೆ ಸುಮಾರು ತಲೆ ಕೂದ್ಲು ಹಣ್ಣಾಗಿರುತ್ತೆ, ಇಲ್ಲಾ ಉದುರಿರುತ್ತೆ.  ಉಪೇಂದ್ರ ಹೇಳಿದ ಹಾಗೆ ಮೀಲ್ ಬೆಗ್ಗರ್ ಸ್ಟೇಟಸ್‌ಗೆ ಹತ್ರಾ ಹತ್ರಾ ಹೋಗ್ತೀವಿ.   ಇಲ್ಲೇ ಹುಟ್ಟಿ ಬೆಳೆದ ನಮ್ ಅಮೇರಿಕನ್ ಮಕ್ಳಿಗೆ ನಾವು ಬೇಡವಾಗಿ ಹೋಗ್ತೀವಿ.  ಆಗ ನಾವು, ಇನ್ನೇನು ನಾಳೆ ಇಂದನೇ ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ, ಅದು ಮಾಡೋಣ, ಇದು ಮಾಡೋಣ ಅಂದುಕೊಂಡು ಕನಸು ಕಾಣೋ ಅಷ್ಟರಲ್ಲಿ ತೂಕಡಿಗೆ ಜೋರಾಗಿ, ನಿದ್ರೆ ಬಂದು ಹೋಗಿರುತ್ತೆ, ನೋಡ್ತಾ ಇರಿ!

Tuesday, September 20, 2011

ನಿಜವಾದ "ಅಂತರಂಗ"ದ ನಂಬಿಕೆ

ಕನ್ನಡ ಹಿರಿಮೆಗೆ ಮತ್ತೊಂದು ಪ್ರಶಸ್ತಿ, ಕನ್ನಡ ತಾಯಿಯ ಮಕುಟಕ್ಕೆ ಮತ್ತೊಂದು ಗರಿ. ಈ ದಿನ ವಿಶ್ವದಾದ್ಯಂತ ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾದ ದಿನ. ನಮ್ಮ ಗುರುಗಳಾಗಿ, ಅಧ್ಯಾಪಕರಾಗಿ, ನಾಟಕಕಾರರಾಗಿ, ನಿರ್ದೇಶಕ ಮೊದಲಾಗಿ ಕನ್ನಡ ಸಾಹಿತ್ಯ ಅನೇಕ ಮಜಲುಗಳಲ್ಲಿ ಪಳಗಿದ ಸುಮಾರು ನಾಲ್ಕು ದಶಕದ ಸಾಧನೆಯ ಪರಿಪೂರ್ಣತೆಯನ್ನು ಪಡೆದ ಚಂದ್ರಶೇಖರ ಕಂಬಾರರಿಗೆ ೮ ನೇ ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಬಹಳ ಸಂತೋಷದ ವಿಷಯ.

***
ನಾನು ಜ್ಞಾನಪೀಠ ಎಂದರೆ ಸುಮ್ಮನೆಯೇ? ಎಂದು ೨೦೦೬ (ಮೇ ೧೭, ೨೦೦೬) ರಲ್ಲಿ ಬರೆದದ್ದು ನಿಜವಾಯಿತು. "...ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು.". ಈ ಪ್ರಶಸ್ತಿಯನ್ನು ಪಡೆದ ಕನ್ನಡದ ದಿಗ್ಗಜರಲ್ಲಿ ನಾನು ಬಹಳ ಹತ್ತಿರದಿಂದ ನೋಡಿದವರೆಂದರೆ ಕಂಬಾರರು. ಈ ದಿನ ಅವರಿಗೆ ಈ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ಬಹಳ ಸಂತಸದ ವಿಚಾರ.

ಒಮ್ಮೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆಗೆ ಮತ್ತೆ ಅದೆಷ್ಟೋ (ಐದು ಇರಬೇಕು) ವರ್ಷಗಳ ನಂತರವೆ ಕನ್ಸಿಡರ್ ಮಾಡುತ್ತಾರೆಂತಲೂ, ಮೊದಲಿನ ಹಾಗೆ 'ನಾಕು-ತಂತಿ', 'ಚಿಕವೀರ ರಾಜೇಂದ್ರ' ಮುಂತಾದ ಏಕಕೃತಿಗಳ ಮೇಲೆ ಪ್ರಶಸ್ತಿಯನ್ನು ಕೊಡದೇ, ಕವಿ ಅಥವಾ ಬರಹಗಾರರ ಸಮಗ್ರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಯನ್ನು ಕೊಡುವಂತೆ ಕಟ್ಟಳೆಯನ್ನು ಬದಲಾಯಿಸಿದ್ದಾರೆಂತಲೂ ಕೇಳಿದ್ದೇನೆ. ಈ ಯಾವ ನಿಟ್ಟಿನಿಂದ ನೋಡಿದರೂ ಕನ್ನಡದಲ್ಲಿ ಅಗ್ರಮಾನ್ಯರಾಗಿ ನನ್ನ ಕಣ್ಣಿಗೆ ಕಂಡುಬರುವವರು ಕಂಬಾರರೇ, ಆದ್ದರಿಂದಲೇ ಮುಂದೆ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು. ಮೈಸೂರು-ಮಂಗಳೂರಿನವರಿಗೆ ಅವರ ಭಾಷೆ ಮೇಲ್ನೋಟಕ್ಕೆ ಸ್ವಲ್ಪ ಒರಟು, ಕಷ್ಟವೆಂದು ಕಂಡು ಬಂದರೂ ಒಮ್ಮೆ ಅವರ ಬರಹದ ಸವಿ ಹತ್ತಿತೆಂದರೆ ಒಂದು ರೀತಿ ಜೋನಿ ಬೆಲ್ಲವನ್ನು ತಿಂದರೆ ಇನ್ನೂ ತಿನ್ನಬೇಕು ಎಂಬಂತೆ ಆಗುವ ಹಾಗೆ ಆಗುತ್ತದೆ. ನಿಮಗೆ ನನ್ನ ಮೇಲೆ ನಂಬಿಕೆ ಇರದಿದ್ದರೆ ನಾನು ಹೇಳಿದೆನೆಂದು ಅವರ ಕಾಡುಕುದುರೆಯನ್ನು ಎರಡು ಸಾರಿ ಓದಿ ನೋಡಿ ನಿಮಗೇ ಗೊತ್ತಾಗುತ್ತದೆ. ಇನ್ನು ಕಂಬಾರರ ಹಾಡುಗಳನ್ನು ಅವರ ಬಾಯಿಂದಲೇ ಕೇಳುವ ಭಾಗ್ಯವೇನಾದರೂ ನಿಮಗೆ ಲಭಿಸಿದರೆ ಅದನ್ನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ - ಕಂಬಾರರ ಹಾಡುಗಳಲ್ಲಿನ ವಸ್ತುಗಳನ್ನು ಎಸ್.ಪಿ. ಬಾಲಸುಬ್ರಮಣ್ಯಂ (no offense) ಕಂಠದಲ್ಲಿ ಕೇಳಿದಾಗ ಪೇಟೇ ಹುಡುಗ ಹಳ್ಳಿಯಲ್ಲಿ ಕಳೆದುಕೊಂಡ ಹಾಗಾಗುತ್ತದೆ, ಬೇಕಾದರೆ ನೀವೇ 'ಕಾಡು ಕಾಡೆಂದರೆ' ಕೇಳಿ ನೋಡಿ.
***

ಕಂಬಾರರ ಭಾಷೆ ಬಹಳ ಚೆಲುವಾದುದು - ಬೆಳಗಾವಿಯ ಗ್ರಾಮೀಣ ಕನ್ನಡದ ಸೊಗಡನ್ನು ಸವಿಯ ಬೇಕಾದರೆ ಅವರ ಮಾತುಗಳನ್ನು ಆ ಭಾಷೆ ಬಲ್ಲವರಿಂದ ಗಟ್ಟಿಯಾಗಿ ಓದಿಸಿ ಕೇಳಬೇಕು, ಅಥವಾ ಅವರ ನಾಟಕಗಳನ್ನು ನುರಿತ ಕಲಾವಿದರು ಮಾಡಿದ್ದನ್ನು ನೋಡಿ ಸವಿಯ ಬೇಕು. ಇದೇ ಬೆಳಗಾವಿಯ ಕನ್ನಡದಲ್ಲಿಯೇ ಅವರು "ಮರತೇನಂದರ ಮರೆಯಲಿ ಹೆಂಗ..." ಬರೆದದ್ದು.
ಇದು ನಿಜವಾಗಿಯೂ ನಮಗೆಲ್ಲ ಸಂತೋಷದ ದಿನ.
ಜೈ ಕನ್ನಡ ಮಾತೆ!

Thursday, December 31, 2009

ಯಾರೂ ಇದರ ಬಗ್ಗೆ ಏಕೆ ಮಾತನಾಡಲ್ಲ?

ಸದ್ಯ, ಈ ದಿನ ಪ್ರಜಾವಾಣಿ ಮುಖಪುಟ ತೆರೆದು ನೋಡ್ತಾಗ ಮೃತ್ಯುದೇವತೆ ಕನ್ನಡದ ಅಭಿಮಾನಿಗಳ ಮೇಲೆ ಹ್ಯಾಟ್ರಿಕ್ ಹೊಡೆತವನ್ನೇನೂ ಕೊಟ್ಟಿರಲಿಲ್ಲ ಎಂದು ಸಮಾಧಾನ ಮೂಡಿತು.  ಕೊನೆಗೆ ಆದ ಘಟನೆಗಳ ಸಿಂಹಾವಲೋಕನ ಮಾಡಲಾಗಿ ಅಭಿಮಾನಿಗಳು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುತ್ತಿದ್ದುದನ್ನು ನೋಡಿ ಅವರ ತರ್ಕವೇನು ಎಂದು ಯೋಚಿಸಿ ಮನ ಹೆಣಗಿತು, ಇವೆಲ್ಲದರ ನಡುವೆ ವಿಷ್ಣುವರ್ಧನ್ ಕೇವಲ ೫೯ ವರ್ಷಕ್ಕೆ ಸಾಯಲು ಕಾರಣವೇನಿರಬಹುದು ಎಂದು ಆಶ್ಚರ್ಯವೂ ಆಯಿತು.

 

ನಮ್ಮ ನಂಬಿಕೆಯ ಪ್ರಕಾರ ಆಯಸ್ಸು ತೀರಿದವರು ಎಲ್ಲಿದ್ದರೂ ಮೃತ್ಯುದೇವತೆಯನ್ನು ವಂಚಿಸಲಾಗದು ಎನ್ನುವುದನ್ನು ತಲೆಯ ಒಂದು ಬದಿಯಲ್ಲಿಟ್ಟುಕೊಂಡೇ ಮತ್ತೊಂದು ಕಡೆ ವೈದ್ಯಕೀಯ ವಿಜ್ಞಾನ ಇಷ್ಟೊಂದು ಬೆಳೆದಿರುವಾಗ ವಿಕ್ರಂ ಆಸ್ತ್ಪತ್ರೆಯ ವೈದ್ಯರು ರಾತ್ರಿ ಕಾಡಿದ ಎದೆನೋವಿನ ಮೂಲಕಾರಣವನ್ನು ಪತ್ತೆಹಚ್ಚುವಲ್ಲಿ ವಿಫಲರಾದರೇನೋ ಎಂದು ಬಲವಾದ ಸಂಶಯ ಕೂಡ ಬಂತು.  ಒಬ್ಬ ೫೯ ವರ್ಷದ ಮನುಷ್ಯ, ಯಾರೇ ಇರಲಿ, ಎದೆ ನೋವು ಎಂದು ರಾತ್ರಿ ಹತ್ತು ಘಂಟೆಗೆ ಆಸ್ಪತ್ರೆಗೆ ಬಂದರೆ ಅಂಥವರನ್ನು ಅಡ್ಮಿಟ್ ಮಾಡಿಕೊಳ್ಳದೇ ಹೇಗೆ ಮನೆಗೆ ಕಳುಹಿಸುತ್ತೀರಿ?  ಮಾಡಬೇಕಾದ ಸ್ಕ್ಯಾನಿಂಗ್ ಎಲ್ಲವನ್ನೂ ಮಾಡಿದ್ದೀರೋ? ಅಥವಾ ಪೇಷೆಂಟ್ ತಮ್ಮ ಸ್ವ-ಇಚ್ಚೆಯಿಂದ ಸೈನ್-ಔಟ್ ಮಾಡಿ ಮನೆಗೆ ಹೋದರೋ?

 

ಅಮೇರಿಕದಲ್ಲಿ ಕುಳಿತ ನಮಗೆ ಈ ರೀತಿಯ ಒಣತರ್ಕ ಮಾಡಲು ಸುಲಭ, ಇಲ್ಲಿನ ಲಿಟಿಗೇಶನ್ ವ್ಯವಸ್ಥೆ ಏನೇನೋ ಅನಾನುಕೂಲಗಳನ್ನು ಕಲ್ಪಿಸಿದ್ದರೂ ಈ ರೀತಿ ಯೋಚಿಸುವ ಮನಸ್ಥಿತಿಯನ್ನಾದರೂ ಹುಟ್ಟಿಸಿದೆ ಎನ್ನುವುದು ದೊಡ್ಡ ವಿಷಯ.  ಯಾರಾದರೂ ವಿಕ್ರಂ ಆಸ್ಪತ್ರೆಯ ಚಾರ್ಟ್ ತೆಗೆದು ನೋಡಿದ್ದಾರಾ? ಅಂದು ರಾತ್ರಿ ಕಾಲ್‌ನಲ್ಲಿ ಇದ್ದ ಆಸ್ಪತ್ರೆ ಸಿಬ್ಬಂದಿ ಯಾರು? ಅವರು ಏನೇನು ಪರೀಕ್ಷೆಗಳನ್ನು ಮಾಡಿದ್ದಾರೆ, ರೋಗಿಯನ್ನು ಹೊರಹೋಗಲು ಬಿಡುವ ಮುನ್ನ ಯಾವ ಯಾವ ಎಚ್ಚರಿಕೆಗಳನ್ನು ಕೊಟ್ಟಿದ್ದಾರೆ?  ಏನಾದರೂ ಔಷಧಿ-ಮದ್ದನ್ನು ಕೊಟ್ಟಿದ್ದಾರೋ ಅಥವಾ ಮರುದಿನ ಮತ್ತೆ ಬರಲು ತಿಳಿಸಿದ್ದಾರೋ? ವಿಕ್ರಂ ಆಸ್ಪತ್ರೆ ಚಿಕ್ಕದ್ದಿದ್ದು ಅಲ್ಲಿ ರೋಗಿಯನ್ನು ಇಟ್ಟುಕೊಳ್ಳಲಾಗದಿದ್ದರೆ ಹತ್ತಿರದ ದೊಡ್ಡ ಆಸ್ಪತ್ರೆಗೇನಾದರೂ ವಿಷಯ ತಿಳಿಸಿದ್ದರೋ? ಇತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತವೆ, ಯಾರೂ ಇದರ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಲಿಲ್ಲ/ಕಾಣಲಿಲ್ಲ.

 

ಆದದ್ದು ಆಯ್ತು, ಎಂದು ಸುಮ್ಮನೆ ಬಿಟ್ಟು ಬಿಡಬಹುದಾದ ವಿಷಯ ಇದಲ್ಲ.  ರೋಗಿ/ವ್ಯಕ್ತಿ ಯಾರೇ ಆಗಿದ್ದರೂ ಆಸ್ಪತ್ರೆ/ವೈದ್ಯರು ತಮ್ಮ-ತಮ್ಮ ಕರ್ತವ್ಯವನ್ನು ಪಾಲಿಸಲೇಬೇಕು, ಕೊನೇಪಕ್ಷ ಈ ಘಟನಾವಳಿಗಳಲ್ಲಿ ತಪ್ಪೇನಾದರೂ ನಡೆದಿದ್ದು ಸಾಬೀತಾದರೆ ಇನ್ನು ಮುಂದೆ ಹೀಗಾಗದಂತೆ ನೋಡಬೇಕು.

 

ಅದೇ ರೀತಿ ಅಶ್ವಥ್ ಸಾವೂ ಕೂಡಾ ಅನಿರೀಕ್ಷಿತ ಎಂದೇ ಹೇಳಬೇಕು.  ವೈದ್ಯರು ಇನ್ನೇನು ಗುಣಮುಖರಾಗುತ್ತಾರೆ ಎಂದು ಹೇಳಿದ್ದರಂತೆ, ಏನು ತೊಂದರೆ ಆಯಿತೋ? ಕಿಡ್ನಿ-ಲಿವರ್ ತಮ್ಮ ಸಾಮರ್ಥ್ಯಗಳಲ್ಲಿ ಕ್ಷೀಣಿಸುತ್ತಾ ಬಂದಂತೆ ಅದನ್ನು ಮೊದಲೇ ಪತ್ತೆ ಹಚ್ಚಿ ಯಾವುದಾದರೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದರೋ ಇಲ್ಲವೋ.  ಕ್ಷಮಿಸಿ, ನಾನು ವೈದ್ಯನೇನಲ್ಲ, ಈ ರೀತಿ ಪ್ರಶ್ನೆಗಳನ್ನು ಹಾಕುತ್ತಿರುವುದು ಉದ್ಧಟತನದಿಂದಲ್ಲ, ಕೇವಲ ಕುತೂಹಲದಿಂದ ಮಾತ್ರ.  ಎಲ್ಲೋ ಕುಳಿತು ಇನ್ನೆಲ್ಲಿಯೋ ಸರ್ಜರಿ ಮಾಡುವು ಇಂದಿನ ವೈದ್ಯಕೀಯ ವ್ಯವಸ್ಥೆಯಲ್ಲಿ ಇಬ್ಬರು ಮಹಾಚೇತನಗಳನ್ನು ಎರಡು ದಿನಗಳಲ್ಲಿ ಕಳೆದುಕೊಂಡು ರೋಧಿಸುವ ಅಭಿಮಾನಿ ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಸಹಜವೆಂದುಕೊಂಡಿದ್ದೇನೆ.

 

ನಿಮಗೇನಾದರೂ ಹೆಚ್ಚು ತಿಳಿದಿದ್ದರೆ ನಮಗೂ ಸ್ಪಲ್ಪ ತಿಳಿಸಿ.

 

image

(ಕೃಪೆ: ಪ್ರಜಾವಾಣಿ)

Wednesday, December 30, 2009

ಶ್ರದ್ದಾಂಜಲಿ...ವಿಷ್ಣು, ಅಶ್ವಥ್ ಇನ್ನಿಲ್ಲ

೨೦೦೯ ಸುಮ್ನೇ ಹೋಗಲಿಲ್ಲ...ತನ್ನ ಕೊನೆಯ ದಿನಗಳಲ್ಲಿ ಎರಡು ಮಹಾನ್ ಚೇತನಗಳನ್ನ ತನ್ನ ಜೊತೆ ತೆಗೆದುಕೊಂಡು ಹೋಯ್ತು...ಇನ್ನೂ ಒಂದು ದಿನ ಬಾಕಿ ಇದೆ ವರ್ಷದ ಬಾಬ್ತು ಮುಗಿಯೋದಕ್ಕೆ ಅನ್ನೋದು ಹೆದರಿಕೆಯ ವಿಷಯವೇ, ಏನೇನು ಆಗಲಿಕ್ಕೆ ಇದೆಯೋ!

 

ಕೆಲವು ತಿಂಗಳುಗಳ ಹಿಂದೆ ಅಶ್ವಥ್ ಅಮೇರಿಕಕ್ಕೆ ತಮ್ಮ ತಂಡದವರೊಂದಿಗೆ ಬಂದು ನಮಗೆಲ್ಲ ಸುಗಮ ಸಂಗೀತದ ರಸದೌತಣವನ್ನು ನೀಡಿದ್ದರು, ಅವರು ಇನ್ನಿಲ್ಲ...ತಾನು ಹುಟ್ಟಿದ ದಿನವೇ ಸಾಯುವ ಕಾಕತಾಳೀಯವನ್ನು ಬಹಳ ಜನ ಕಾಣಲಾರರು, ಅಂಥವರಲ್ಲಿ ಅಶ್ವಥ್ ಅವರು ಒಬ್ಬರು, ಇಂದಿಗೆ ಅವರಿಗೆ ಬರೋಬ್ಬರಿ ಎಪ್ಪತ್ತು ವರ್ಷ.

 

ashwath241209_1

***

 

ವಿಷ್ಣುವರ್ಧನ್, ಕೇವಲ ೫೯ ವರ್ಷಕ್ಕೆ ಹೃದಯಾಘಾತಕ್ಕೆ ಈಡಾಗುತ್ತಾರೆ ಎಂದು ಯಾರೂ ಎಣಿಸಿರಲಿಕ್ಕಿಲ್ಲ.  ಇತ್ತೀಚೆಗಷ್ಟೇ ಯಾವುದೋ ಉದಯ ಟಿವಿ ಕಾರ್ಯಕ್ರಮವನ್ನು ತೋರಿಸಿ ’ಪರವಾಗಿಲ್ಲ, ವಿಷ್ಣು ತನ್ನ ಫಾರ್ಮ್ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ!’ ಎಂದು ಹೇಳಿದ್ದು ನನಗೆ ಚೆನ್ನಾಗಿ ನನಪಿದೆ.

 

vishnuvardhan-6677

***

ಈ ಇಬ್ಬರು ಕನ್ನಡದ ಚೇತನಗಳಿಗೆ "ಅಂತರಂಗ"ದ ನಮನ, ಅವರ ಆತ್ಮಗಳು ಶಾಂತಿಯಿಂದಿರಲಿ, ಹಾಗೂ ಮತ್ತೊಮ್ಮೆ ಕನ್ನಡ ನಾಡಲ್ಲೇ ಹುಟ್ಟಿ ಬರಲಿ.

 

picture source:

http://www.indiaglitz.com/channels/kannada/article/52939.html

http://entertainment.oneindia.in/tag/vishnuvardhan

Friday, March 07, 2008

ವಿಭಕ್ತಿಯ ಬಗೆಗಿನ ಭಕ್ತಿ

ನಿಮಗೆ ಗೊತ್ತಿರಬೇಕಲ್ಲ?

ಪ್ರಥಮಾ - ಉ
ದ್ವಿತೀಯಾ - ಅನ್ನು
ತೃತೀಯ - ಇಂದ
ಚತುರ್ಥಿ - ಗೆ, ಇಗೆ, ಅಕ್ಕೆ
ಪಂಚಮಿ - ದೆಸೆಯಿಂದ
ಷಷ್ಠಿ - ಅ
ಸಂಬೋಧನೆ - ?


ಇತ್ಯಾದಿ...ಅವೇ ಸ್ವಾಮಿ, ವಿಭಕ್ತಿ-ಪ್ರತ್ಯಯಗಳು, ಥ್ಯಾಂಕ್ಸ್ ಟು ನಮ್ಮ ಕನ್ನಡಾ ಟೀಚರ್ಸ್...ಓಂ ಗುರುಭ್ಯೋ ನಮಃ...ಮೇಷ್ಟ್ರೇ ನಿಮಗೇ ಜೋಡಿಸ್ತೀನಿ...

ಯಾಕೆ ಇದರ ಬಗ್ಗೇ ಯೋಚಿಸ್ತಾ ಹೋದೆ ಅಂತಂದ್ರೆ, ಇತ್ತೀಚೆಗೆ ನಮ್ ಹತ್ತಿರದ ಸಂಬಂಧಿಕರ ಮಗಳೊಬ್ಬಳು, ಬೆಂಗ್ಳೂರು ಕನ್ನಡತಿ, ಅವಳ ಜೊತೆ ಮಾತನಾಡ್ತಾ ಇರಬೇಕಾದ್ರೆ ಥಟ್ಟನೆ ಅವಳು ನಮ್ಮ ಕನ್ನಡದ ವಿಭಕ್ತಿ ಪ್ರತ್ಯಯಗಳನ್ನೆಲ್ಲ ಹದಿಹರೆಯದ ಹುಡುಗ್ರು ಹೊಸ ಕಾರಿನಲ್ಲಿ ಸ್ಟಾಪ್ ಸೈನ್‌ಗಳನ್ನು ಎಗುರಿಸಿಕೊಂಡು ಹೋಗೋ ಹಾಗೆ ಹಾರಿಸುತ್ತಿದ್ದಳು. ಅವಳ ಬಳಕೆಯ ಪ್ರಕಾರ, ’ನಮ್ಮ ಅಪ್ಪ ಹತ್ರ ಅದು ಇದೆ, ಅಮ್ಮ ಕಾರು ಹಾಗಿತ್ತು, ತಮ್ಮ ಕೇಳಿ ಹೇಳ್ತೀನಿ’, ಇತ್ಯಾದಿ.

ನಾನು ಏನೂ ಹೇಳೋಕ್ ಹೋಗ್ಲಿಲ್ಲ, ಮತ್ತೇನಾದ್ರೂ ಅವಳು ಬೆಂಗ್ಳೂರು ಕನ್ನಡದಲ್ಲಿ ಬೈದ್ಲೂ ಅಂತಂದ್ರೆ? ಜೊತೆಗೆ ನಾನ್ ಕೇಳೋ ರ್ಯಾಪ್ ರೀತಿಯ ಇಂಗ್ಲೀಷೋ, ದೇವ್ರೇ ನನ್ನನ್ ಕಾಪಾಡ್‌ಬೇಕು. ನನ್ನ ಕಷ್ಟಾ ಏನೂ ಅಂತ ಹೇಳ್ಲೀ ಸ್ವಾಮೀ, ಇತ್ಲಾಗೆ ಈ ಕರಿಯರ (ಆಫ್ರಿಕನ್ ಅಮೇರಿಕನ್ನರ) ರ್ಯಾಪೂ ಅರ್ಥ ಆಗೋಲ್ಲ, ಆ ಕಡೆ ನಮ್ಮ್ ಕನ್ನಡಾ ಹಾಡ್‌ಗಳಲ್ಲಿ ಬರೋ ಇಂಗ್ಲೀಷ್ ಶಬ್ದ, ಸಾಲಿನ ಉಚ್ಛಾರಣೆಗಳೂ ಕೈಗೆ ಸಿಗೋಲ್ಲ!

ವಿಭಕ್ತಿ ವಿಷಯಕ್ಕೆ ಬರೋಣ - ನಮ್ಮ ಕನ್ನಡ ಬಹಳ ಸೊಗಸಾಗಿರೋದು ಇದ್ರಲ್ಲೇ ಅನ್ಸುತ್ತೆ. ನಾವು, ’ಅಪ್ಪನ, ಅಮ್ಮನ, ತಮ್ಮನ...’ ಅಂತೀವಿ, ಆದ್ರೆ ತಂಗಿ ವಿಷಯಕ್ಕೆ ಬಂದಾಗ ’ತಂಗಿಯ’ ಅಂತೀವಿ. (ಅಮ್ಮಂದಿರು, ಅಮ್ಮಗಳ ಬಗ್ಗೆ ಹಿಂದೊಮ್ಮೆ ಬರ್ದಿದ್ದೆ, ಅದು ಬೇರೆ ವಿಷಯ). ’ಅಪ್ಪನ ಹತ್ರ ಕೇಳಿ ನೋಡ್ತೀನಿ’ ಅನ್ನೋದು ಸರಿಯಾದ ಬಳಕೆ, ಅದನ್ನು ಬಿಟ್ಟು ಯಾರಾದ್ರೂ ’ಅಪ್ಪ ಹತ್ರ ಕೇಳ್ತೀನಿ’ ಅಂತಂದ್ರೆ ತಪರಾಕಿ ಹೊಡೀದೇ ಇರೋದಾದ್ರೂ ಹೇಗೆ? ’ತಂಗಿಯ’ ಅನ್ನೋ ಬದಲಿಗೆ ’ತಂಗೀ’ (ದೀರ್ಘ ಗಮನಿಸಿ) ಅನ್ನೋದು ಆಡು ಭಾಷೆಯಲ್ಲಿ ಬರುತ್ತೆ ಅನ್ನಬಹುದು. ಅದಕ್ಕೆ ತಕ್ಕಂತೆ, ’ಅಪ್ಪಾ’, ’ತಮ್ಮಾ’, ’ಅಮ್ಮಾ’ (ದೀರ್ಘ ಸ್ವರದ ಬಳಕೆಗಳು) ಅನ್ನೋದು ಎಷ್ಟರ ಮಟ್ಟಿಗೆ ಸರಿ?

ನಾವು ಇಂಗ್ಲೀಷೋ ಮತ್ತೊಂದು ಭಾಷೆಯನ್ನು ಕಲಿತಾದ ಮಾತ್ರಕ್ಕೆ ನಮ್ಮಲ್ಲಿರುವ ಕೆಲವೊಂದು ವಿಶೇಷವಾದ ಬಳಕೆಗಳನ್ನು ಬಿಡೋದಕ್ಕೆ ಹೇಗೆ ಸಾಧ್ಯ ನೀವೇ ಹೇಳಿ. ನಾವು ಆಫೀಸಿನಲ್ಲಿ ಸುಮ್ಮನೇ ಲೋಕಾಭಿರಾಮವಾಗಿ ಹರಟುತ್ತಿದ್ದಾಗ ನಾನು ’co-brother' ಅನ್ನೋ ಪದವನ್ನು ಬಳಸಿದೆ, ಎಲ್ಲರೂ ’what is that?' ಅನ್ನೋ ಹಾಗೆ ನನ್ನ ಮುಖವನ್ನು ನೋಡಿದ್ರು, ನಾನು ’ನನ್ನ ಹೆಂಡತಿಯ ತಂಗಿಯ ಗಂಡ’ ಎಂದು ಉತ್ತರ ಕೊಟ್ಟೆ (ಷಡ್ಡುಕ, ಷಡ್ಕ, ಸಡ್ಕ ಅನ್ನೋ ಅರ್ಥದಲ್ಲಿ). ಮತ್ತೆ ಹೋಗಿ ಆನ್‌ಲೈನ್ ಡಿಕ್ಷನರಿಗಳನ್ನು ನೋಡಲಾಗಿ ’ಅದು ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಬಳಸೋ ಇಂಗ್ಲೀಷಿನ ಪದ’ವೆಂಬುದಾಗಿ ತಿಳಿಯಿತು. ಹೌದು, ಎಲ್ಲರಿಗೂ ’brother-in-law' ಎಂದು ಕರೆದೋ ’sister-in-law' ಎಂದು ಸಂಬೋಧಿಸಿಯೋ ನಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳಬಹುದು, ಆದರೆ ಷಡ್ಡುಕನೇ ಬೇರೆ, ಬಾವನೆಂಟನೇ ಬೇರೆ, ಸೋದರ ಮಾವನೇ ಬೇರೆ, ದೊಡ್ಡಪ್ಪ-ಚಿಕ್ಕಪ್ಪನೇ ಬೇರೆ, ಇವರೆನ್ನೆಲ್ಲ ಒಂದೋ ಎರಡೋ ಪದಗಳನ್ನು ಬಳಸಿ ತೂಗಲಾದೀತೆ? ಅದಕ್ಕೆ ಬೆಂಗ್ಳೂರಿನ ಕನ್ನಡಿಗರು ’my ಚಿಕ್ಕಪ್ಪಾ is doing this...' ಎಂದು ಕನ್ನಡವನ್ನು ಬಳಸಿದ್ರೆ ನನಗೆ ಖುಷಿ ಆಗುತ್ತೆ ಅಂತ್ಲೇ ನಾನು ಹೇಳೋದು! (ಕೊನೇಪಕ್ಷ ಅವರ ’uncle' ಯಾರು ಅಂತ ಗೊತ್ತಾಯ್ತಲ್ಲ, ಅದಕ್ಕೆ).

***

’ಏನ್ ಸಾರ್ ನಿಮ್ ರಾಮಾಯಣ? ನೀವೇನು ಕನ್ನಡ ಕೊಂಡ್‌ಕೊಂಡೋರ್ ಹಾಗ್ ಆಡ್ತೀರಲ್ಲ? ನಿಮ್ದೊಳ್ಳೇ ರಾಮ ಜನ್ಮ ಭೂಮೀ ಜನ ಹಿಂದೂ ಧರ್ಮವನ್ನು ಕೊಂಡು ಕೊಂಡೋರ ಹಾಗಿನ ಕಥೆ ಆಯ್ತು, ತೆಗೀರಿ ಮತ್ತೆ!’ ಅಂತ ನೀವು ನನಗೆ ತಮಾಷೆ ಮಾಡ್ತೀರಿ ಅಂತ ಗೊತ್ತು. ನಾನು ಯಾವ ವೇದಿಕೆಯನ್ನು ಸೇರ್ತಾ ಇಲ್ಲ, ಕಟ್ತಾ ಇಲ್ಲ, ಏನೋ ನನ್ ಕಣ್ಣಿಗೆ ಕಂಡಿದ್ದನ್ನ ಕಂಡ ಹಾಗೆ ಹೇಳ್ದೆ ಅಷ್ಟೇ.

ನೀವ್ ಬೆಂಗ್ಳೂರ್ ಕನ್ನಡಿಗರಾದ್ರೆ ಓದಿ ನಕ್ಕ್ ಬಿಡಿ, ಇಲ್ಲಾ ನನ್ನ ಹಾಗೆ ಕನ್ನಡ ಮಾಧ್ಯಮದಲ್ಲೇ ಓದಿ ಬೆಳೆದೋರಾದ್ರೆ ಬೇಸ್ರ ಮಾಡ್ಕೋಳ್ ಬೇಡಿ, ಅದೇ ಬದ್ಕು ಅಂದ್ಕೊಂಡು ಸುಮ್ನಾಗಿ ಅಷ್ಟೇ!

ಅಂದ ಹಾಗೆ ನಮ್ಮನೇಲೂ ಒಬ್ರು ಬೆಂಗ್ಳೂರ್ ಕನ್ನಡಿಗರಿದ್ದಾರೆ, ಅವ್ರ ಬಗ್ಗೆ ಇನ್ನೊಮ್ಮೆ ಬರೆದ್ರಾಯ್ತು!

Thursday, January 17, 2008

ಕನ್ನಡ ಬ್ಲಾಗ್ ಮಂಡಲ - ಭಾಷಣದ ಅವತರಣಿಕೆ

ಬಹಳ ಜನರ ಬೇಡಿಕೆ ಮೇರೆಗೆ ದಟ್ಸ್‌ಕನ್ನಡ ವರದಿಯಲ್ಲಿ ಪ್ರಕಟವಾದಂತೆ ಭಾಷಣದ ಆಡಿಯೋ ಹಾಗೂ ಬ್ಲಾಗ್ ಲಿಸ್ಟ್ ಅನ್ನು ಇಲ್ಲಿ ಕೊಡಲಾಗಿದೆ:

ಸತೀಶ್ ಕುಮಾರ್ ಕಂಡಂತೆ ಕನ್ನಡ ಬ್ಲಾಗ್‌ಮಂಡಲ


ಜನವರಿ ೧೩ ರಂದು ಭೂಮಿಕಾದಲ್ಲಿ ನಡೆದ ಭಾಷಣದ ಅವತರಣಿಕೆಗೆ ಇಲ್ಲಿ ಕ್ಲಿಕ್ ಮಾಡಿ (~40 MB, WAV file)

ಜೊತೆಗೆ ಈ ಕೆಳಗಿನ ಫೈಲ್‌ನಲ್ಲಿ 50 ಬ್ಲಾಗ್‌ಗಳ ಪಟ್ಟಿಯನ್ನೂ ಇಲ್ಲಿ ಕೊಡಲಾಗಿದೆ.

***
ಮೊದಲು ಪ್ರಕಟಿಸಿದ್ದ ೩೯ ಬ್ಲಾಗ್‌ಗಳ ಪಟ್ಟಿಯನ್ನು ಬದಲಾಯಿಸಿ ೫೦ ಬ್ಲಾಗ್‌ಗಳಿರುವ ಈ ಹೊಸಪಟ್ಟಿಯನ್ನು ಫೆಬ್ರುವರಿ ೩ ರಂದು ಸೇರಿಸಿದ್ದೇನೆ.