Showing posts with label ಆನವಟ್ಟಿ. Show all posts
Showing posts with label ಆನವಟ್ಟಿ. Show all posts

Sunday, February 04, 2024

ಸ್ಥಳಾಂತರ

ಒಂದು ಶುಭ್ರವಾದ ಮಧ್ಯಾಹ್ನ ಎಲ್ಲರೂ ಸುಧಾ ಹೋಟ್ಲು ಸರ್ಕಲ್ ಹತ್ರ ಸೇರಿದ್ರು. ಅದು ಸರ್ಕಲ್ ಅಂದ್ರೆ ನಾಲ್ಕು ರಸ್ತೆ ಕೂಡೋ ಜಾಗಾನೇ ಅಂತ ಆಗಬೇಕಿಲ್ಲ.  ಅದೊಂದು ಸಣ್ಣ ವ್ಯಾಪಾರದ ಸ್ಥಳ. ಒಂದು ಮುಖ್ಯ ರಸ್ತೆ, ಅದಕ್ಕೆ ಲಂಭವಾಗಿ ಹೊರಟಿರೋ ಮತ್ತೊಂದು ರಸ್ತೆ ಅನ್ನಬೇಕು ಅಷ್ಟೇ. ಈ ಊರಿನ ಮುಖ್ಯವಾದ ಸ್ಥಳಕ್ಕೆ ಯಾವ ಒಬ್ಬ ಮಹಾತ್ಮರ ಹೆಸರೂ ಇನ್ನೂ ಯಾರೂ ಏಕೆ ಇಟ್ಟಿಲ್ಲ ಅನ್ನೋದು ಒಳ್ಳೆಯ ಪ್ರಶ್ನೆ.

ಹೀಗಿರೋ ಸ್ಥಳ, ಬೆಳಿಗ್ಗೆ ಮತ್ತು ಸಂಜೆ ಹೂವು ತರಕಾರಿ ಮಾರೋ ಜನರಿಂದ ಮತ್ತು ಅವನ್ನು ಖರೀದಿ ಮಾಡೋ ಗ್ರಾಹಕರಿಂದ ಒಂದು ರೀತಿ ಗಿಜುಗುಟ್ಟುತ್ತಾ ಇರೋದನ್ನ ಬಿಟ್ರೆ, ಮಧ್ಯಾಹ್ನ ಊಟದ ಸಮಯವೊಂದನ್ನು ಬಿಟ್ಟು ಉಳಿದೆಲ್ಲ ಸಮಯ ತಣ್ಣಗೇ ಇರೋದು ಅಂತ ಹೇಳ್‌ಬಹುದು.

ಈ ಮೂರು ರಸ್ತೆಗಳು ಕೂಡುವಂತ ಸ್ಥಳದಲ್ಲಿ ಇರೋದು ಸುಧಾ ಹೋಟ್ಲು. ಘಟ್ಟದ ಕೆಳಗಿಂದ ದಶಕಗಳ ಹಿಂದೆ ಬಂದು, ಈ ಊರಿನಲ್ಲಿ ನೆಲೆನಿಂತ ಒಂದು ಸಣ್ಣ ಭಟ್ಟರ ಹೋಟೆಲ್. ಅಂದು ಅವರ ಹಿರಿಯ ಮಗಳ ಹೆಸರಿನಿಂದ ಆರಂಭವಾಗಿದ್ದು, ಇವತ್ತಿಗೂ ಇನ್ನೂ ಮುಂದುವರೆಯುತ್ತಿದೆ. ಭಟ್ಟರು ಕಾಲವಾಗಿ ಅದೆಷ್ಟೋ ವರ್ಷಗಳು ಸಂದಿವೆ. ಅವರ ಹೆಂಡತಿ ಇನ್ನೂ ತಮ್ಮ ಎಂಬತ್ತರ ಪ್ರಾಯದಲ್ಲಿ ಇದ್ದರೂ, ಆಗಾಗ್ಗೆ ಹೋಟೆಲ್ ಹಿಂದೆ ಮುಂದೆ ಸುಳಿಯುತ್ತಾರಾದರೂ, ಅವರು ಹಾಕಿಕೊಟ್ಟ ರೆಸಿಪಿ ಅಲ್ಲಿನ ಜನರ ಬಾಯಿ ರುಚಿಯಲ್ಲಿ ಗಾಢವಾಗಿ ನಿಂತು ಬಿಟ್ಟಿದೆ.

ದಿನ ಬೆಳಗ್ಗೆ ತಿಂಡಿಗೆ ಜನ ಅಷ್ಟೊಂದು ಬರ್ತಿರಲಿಲ್ಲ, ಆದ್ರೆ, ಮಧ್ಯಾಹ್ನ ಊಟದ ಹೊತ್ತಿಗೆ ಮಾತ್ರ ಜನ ದಂಡಿಯಾಗಿ ಅದೆಲ್ಲೆಲ್ಲಿಂದಲೋ ಬರೋರು. ಅಮ್ಮನ ಕೈ ರುಚಿ - ಅಂತಲೇ ಫ಼ೇಮಸ್ಸಾಗಿರೋ ಘಮಘಮಿಸೋ ಉಪ್ಪಿಟ್ಟು, ಚಿತ್ರಾನ್ನ, ಪುಳಿಯೋಗರೆ, ಅನ್ನ-ಸಾಂಬಾರ್ ಜೊತೆ ಜೊತೆಗೆ ಕೀರು-ಪಾಯಸ ಅಂತಾ ಏನಾದ್ರೂ ಸಿಹಿ ಪ್ರತಿದಿನ ಸಿಕ್ಕೇ ಸಿಗೋದು. ಈ ಬೆಲೆ ಏರಿಕೆ ದಿನಗಳಲ್ಲಿ ಕಡಿಮೆ ಬೆಲೆಗೆ ಪುಷ್ಕಳ ಭೋಜನ ಅನ್ನೋ ಮನೆ ಮಾತಿನ ಹಿನ್ನೆಲೆಯಲ್ಲಿ ನಮ್ಮೂರಿಗೆ ಬಂದೋರೆಲ್ಲ ಸುಧಾ ಹೋಟ್ಲಲ್ಲೇ ಊಟ ಮಾಡೋದಕ್ಕೆ ಖಾಯಸ್ ಮಾಡ್ತಿದ್ರು ಅನ್ನಬಹುದು.

ಎಲ್ಲರ ಬಾಯಲ್ಲಿ "ಸುಧಾ ಹೋಟ್ಲು" ಅಂತ ಇದ್ದುದ್ದಕ್ಕೆ, ಭಟ್ಟರ ಮಗ "ಹೋಟೇಲ್ ಸುಧಾ" ಎಂದು ಇಂಗ್ಲೀಷಿನಲ್ಲಿ ಬರೆಸಿ ದಪ್ಪ ಅಕ್ಷರಗಳಲ್ಲಿ ಬೋರ್ಡು ಹಾಕಿದ ದಿನವೇ ನಮ್ಮೂರಿಗೆ ಆಧುನಿಕತೆ ಬಂದಿದ್ದೂ ಅಂತ ಅನ್ಸುತ್ತೆ. ಯಾರು ಏನ್ ಬೇಕಾದ್ರೂ ಬೋರ್ಡ್ ಹಾಕ್ಕೊಳ್ಳಿ, ಜನ್ರ ಬಾಯಲ್ಲಿ ಅದು ಸುಧಾ ಹೋಟ್ಲು, ಕೆಲವೊಮ್ಮೆ ಓಟ್ಲು ಆಗಿದ್ದು, ಮತ್ತೆ ಹಾಗೇ ಎಲ್ಲ ಕಡೆಗೂ ಹೇಳಿ-ಕೇಳೀ ಬರ್ತಾ ಇದ್ದದ್ದು ನಮ್ಮೂರಿನ ಒಂದು ಅಂಗವಾಗಿದ್ದಂತೂ ನಿಜ.

ಕಾಲ ಕ್ರಮೇಣ ಎಲ್ಲರೂ ಎಲ್ಲ ಕಡೆಗಳಲ್ಲಿ ವಲಸೆ ಹೋಗಿ ನೆಲೆ ನಿಂತ ಮೇಲೆ, ಭಟ್ಟರ ಕೊನೇ ಮಗ ಕೊಟ್ರೇಶಿ ಹೋಟ್ಲನ್ನ ಇನ್ನೂ ನಡೆಸಿಕೊಂಡು ಬರ್ತಾ ಇರೋದನ್ನ ಎಂಬತ್ತರ ಗಡಿ ದಾಟಿ ನಿಂತು, ಟೊಂಕ ಬಗ್ಗಿದ್ದರೂ ಮೈ ಬಗ್ಗದೇ ಇನ್ನೂ ಗಟ್ಟಿಯಾಗೇ ಇರೋ ಅಮ್ಮ, ಇವತ್ತಿಗೂ ತನ್ನ ಕೈ ರುಚಿ ಹೋಟೆಲಿನ ಗ್ರಾಹಕರಿಗೆ ತಪ್ಪದಂತೆ ಜತನದಿಂದ ನೋಡಿಕೊಂಡಿರುವುದು ನಮ್ಮೂರಿನ ಮೂರು ತಲೆಮಾರುಗಳ ಬಾಯಿ ರುಚಿ ಆಗಿ ಹೋಗಿದೆ ಎನ್ನಬಹುದು.

***

ಬಾಯಲ್ಲಿ ಮುಂಡು ಬೀಡಿ ಇಟ್ಟುಕೊಂಡು, ಮುಂಡಾಸ ಕಟ್ಟಿಕೊಂಡು ಅಡ್ಡಪಂಚೆಯನ್ನು ಗಂಟು ಹಾಕಿ ಗಟ್ಟಿಗೊಳಿಸಿದ ದಾಂಡಿಗರು ಓಡಾಡುವ ನಮ್ಮೂರಿನ ಬೀದಿಗಳಲ್ಲಿ ಕ್ರಮೇಣ ಪ್ಯಾಂಟು-ಶರಟುಗಳು ಓಡಾಡಲಾರಂಭಿಸಿದವು. ಅದೆಲ್ಲೋ ಒಂದು ಫ಼್ಯಾಕ್ಟರಿ ತೆಗೆದರು ಎನ್ನುವ ಹೆಸರಿನಲ್ಲಿಯೋ, ಅಥವಾ ನಮ್ಮೂರಿನಿಂದ ಕೆಲವೇ ಮೈಲುಗಳ ದೂರದಲ್ಲಿ ಹಾದು ಹೋಗುವ ಹೆದ್ದಾರಿಯ ದೆಸೆಯಿಂದ ನಮ್ಮೂರಿನಲ್ಲಿ ಆಗಂತುಕರ ಮತ್ತು ಅಪರಿಚಿತರ ಲವಲವಿಕೆಗಳು ಜೋರಾಗತೊಡಗಿದವು. ಊರಿಗೆ ನಾಲ್ಕು ಲ್ಯಾಂಡ್ ಲೈನುಗಳ ದೂರವಾಣಿ ಇದ್ದಂತಹ ಊರಿನಲ್ಲಿ ದಿಢೀರನೆ ಎಲ್ಲೆಂದರಲ್ಲಿ ಜಂಗಮವಾಣಿಗಳು ಬಂದವೆಂದರೆ? ಅವೇ ರಸ್ತೆಗಳು, ಅವು-ಅವೇ ಊರುಗಳು. ಆದರೆ, ಜನರು ನಿಂತಲ್ಲಿ ನಿಲ್ಲಲಾರರಾದರು. ಹೆಚ್ಚು ಹೆಚ್ಚು ಓಡಾಡುವುದೇ ಉದ್ದೇಶವೆಂಬಂತೆ ಎಲ್ಲರೂ ಎಲ್ಲ ಕಡೆಗೂ ಎಲ್ಲ ಕಾಲಗಳಲ್ಲಿ ಹರಡಿಕೊಳ್ಳುತ್ತಾ ಹೋದರು. ಒಂದು ಕಾಲದಲ್ಲಿ ದುಡ್ಡು ತೆಗೆದುಕೊಂಡು ಊಟ ಕೊಡುವ ಹೋಟೆಲಿನವರೂ ಸಹ, ತಮ್ಮಲ್ಲಿ ಬಂದು ತಿಂದು ಹೋಗುತ್ತಿದ್ದವರನ್ನು ತಮ್ಮ ಮನೆಯವರಂತೆಯೇ ವಿಚಾರಿಸಿಕೊಂಡು, ಅವರ ಹಿಂದು-ಮುಂದುಗಳನ್ನು ಅರಿತುಕೊಂಡಿರುತ್ತಿದ್ದರು. ಸುಧಾ ಹೋಟ್ಲು ಎನ್ನುವ ವೇದಿಕೆಯೊಂದರಲ್ಲೇ ಅನೇಕ ಆಗು-ಹೋಗುಗಳ ಬಗ್ಗೆ ವ್ಯಾಖ್ಯಾನಿಸಲಾಗುತ್ತಿತ್ತು. ಇನ್ನು ಊರಿನಲ್ಲಿದ್ದ ಸೆಲೂನುಗಳೂ, ಬೀಡಾ ಅಂಗಡಿಗಳೂ, ಕಿರಾಣಿ ಗುರಾಣಗಳೂ, ಹಿಟ್ಟಿನ ಮಿಲ್ಲುಗಳೂ ಇನ್ನೆಲ್ಲವನ್ನೂ ಒಟ್ಟು ಹಾಕಿ ನೋಡಿದರೆ, ಯಾವೊಂದು ಸಂವಹನದ ಸಮರ್ಪಕ ವ್ಯವಸ್ಥೆಯಿಲ್ಲದಿದ್ದರೂ ಎಲ್ಲವೂ ಸಮರ್ಪಕವಾಗೇ ನಡೆದುಕೊಂಡು ಹೋಗುತ್ತಿತ್ತು. ಊರಿರುವಲ್ಲಿ ಪೋಸ್ಟ್ ಆಫ಼ೀಸು ಇರುವಷ್ಟೇ ಸಹಜವಾಗಿ ಒಮ್ಮೊಮ್ಮೆ ಹೊಡೆದಾಟಗಳೂ, ರೋಧನಗಳೂ, ಒ.ಸಿ. ನಂಬರುಗಳ ಎಕ್ಸ್ ಚೇಂಜುಗಳೂ, ಚುನಾವಣಾ ಪ್ರಣಾಳಿಕೆ ಮತ್ತು ಷಡ್ಯಂತ್ರಗಳೂ ಮೊದಲಾಗಿ ಎಲ್ಲವೂ ಇಂತಹ ಪಬ್ಲಿಕ್ ಸ್ಥಳಗಳಲ್ಲೇ ನಡೆಯುತ್ತಿದ್ದವೆಂದರೆ?

ಈ ಸಂಬಂಧವಾಗೇ ನಮ್ಮ ಹಿರಿಯರು ಹೇಳಿದ್ದಿರಬಹುದು - ನಾಲ್ಕು ಜನ ನಂಬುವಂತೆ ಬದುಕು ಮಗಾ! ಎಂಬುದಾಗಿ.

***

ಇತ್ತೀಚೆಗಂತೂ ನಮ್ಮೂರಿನ ರಸ್ತೆಗಳಲ್ಲಿ ಹೊರಗಿನವರದೇ ಆಟಾಟೋಪ. ಮಿರಿಮಿರಿ ಮಿಂಚುವ ಕಾರಿನಿಂದ ಇಳಿದು ರಸ್ತೆಗೆ ಓಡುವ ಮಕ್ಕಳಿಗೆ ಅವರ ಹಿಂದೆ ಮುಂದೆ ಯಾವ ವಾಹನಗಳು ಬಂದರೂ ಕಾಣವು. ಇಂತಹ ಮಕ್ಕಳನ್ನೇ ತಮ್ಮ ವೃತ್ತದ ಕೇಂದ್ರದಲ್ಲಿಟ್ಟುಕೊಂಡು ಸುತ್ತುವ ಪೋಷಕರಿಗೆ ಯಾವಾಗಲೂ ಅವುಗಳ ಸುತ್ತ ಸುತ್ತುವುದೇ ಕಾಯಕವಾಗಿ ಪರಿಣಮಿಸಿದೆ. ಗ್ರಾಹಕರ ಸಂತುಷ್ಟಿಯೇ ನಮ್ಮ ಖುಷಿ, ಎಂದು, ಒಂದಕ್ಕೆರಡು ರೇಟ್ ಹಾಕಿ ಸಾಮಾನ್ಯ ಗೃಹಬಳಕೆ ವಸ್ತುಗಳನ್ನೇ ಬಿಂಕ ಬಿನ್ನಾಣದಿಂದ ಮಾರಾಟ ಮಾಡುವ ಅಂಗಡಿಯ ಹುಡುಗಿಯರು ಊರಿನ ಸೇಲ್ಸ್ ಅನ್ನು ಅದ್ಯಾವಾಗಲೋ ಹೆಚ್ಚಿಸಿಯಾಗಿದೆ. ಅದೇನೇ ಆಗಲಿ, ಬಿಡಲಿ ಇವತ್ತಿಗೂ ಸುಧಾ ಹೋಟ್ಲಿಗೆ ಹೋಗುವ ಗ್ರಾಹಕರ ಸಂಖ್ಯೆಯಲ್ಲಾಗಲೀ, ಆ ಹೋಟೆಲಿನ ಆಯ-ವ್ಯಯದಲ್ಲಾಗಲೀ ಯಾವ ವ್ಯತ್ಯಾಸವೂ ಆದಂತಿಲ್ಲ... ಎಂದುಕೊಳ್ಳುವ ಹೊತ್ತಿಗೆ...

ಒಂದು ದಿನ ಒಳ್ಳೆಯ ನಾಜೂಕಾದ ಬಟ್ಟೆ ಧರಿಸಿದ ಯುವಕರು ದಿಢೀರನೇ ಕಾರಿನಲ್ಲಿ ಬಂದರು. ಆ ಮೂರು ರಸ್ತೆಗಳು ಕೂಡುವ ಕೇಂದ್ರದಲ್ಲಿ, ಸುಧಾ ಹೋಟ್ಲು ಇರುವ ಮೂಲೆಯಲ್ಲಿ ಹೊಸ ಬೈಕ್ ಶೋ ರೂಮ್ ಒಂದು ಆರಂಭವಾಗುವ ಸೂಚನೆಗಳನ್ನು ನೀಡಿ, ತಣ್ಣಗಿದ್ದ ಊರಿನಲ್ಲಿ, ಹೊಸ ಕಲರವವನ್ನು ಹುಟ್ಟು ಹಾಕುವ ಹಾಗೆ, ನೀರಿನಲ್ಲಿ ಕಲ್ಲು ಎಸೆದು ಹೋದಂತೆ ಮಾಡಿ ಹೋದರು.

ಶೋ ರೂಮ್ ತೆರೆದ ಮೊದಲ ವಾರ ಬೈಕ್ ಶೋ ರೂಮಿಗೆ ಬರುವ ಗ್ರಾಹಕರನ್ನು, ಲಲನೆಯರು ಹೂವಿನ ಪಕಳೆಗಳನ್ನು ಅವರು ನಡೆದು ಬರುವ ದಾರಿಯಲ್ಲಿ ಎರಚಿ ಸ್ವಾಗತಿಸುತ್ತಾರಂತೆ ಎನ್ನುವ ಸುದ್ದಿ ನಮ್ಮೂರಿನಲ್ಲಿ ಸದ್ದು ಮಾಡತೊಡಗಿತು. ಆದರೆ, ಒಂದು ಕಡೆ ಚಂಬಣ್ಣನವರ ಕಿರಾಣಿ ಅಂಗಡಿ, ಅದರ ಪಕ್ಕ ರಾಜೂ ಇಟ್ಟಿರುವ ಇಸ್ತ್ರಿ ಅಂಗಡಿ, ಅದರ ಪಕ್ಕದಲ್ಲಿ ಸೇಟ್ ಇಟ್ಟುಕೊಂಡ ಸೆಲೂನನ್ನು ಬಿಟ್ಟರೆ,. ಆ ಸರ್ಕಲ್‌ನಲ್ಲಿ ಇದ್ದದ್ದು ಸುಧಾ ಹೋಟ್ಲು ಮಾತ್ರವೇ! ಈ ಬೈಕ್ ಶೋ ರೋಮ್ ಅನ್ನು ಕಟ್ಟಲು, ಬೆಳೆಸಲು ಯಾವುದನ್ನ ಆಹುತಿ ತೆಗೆದುಕೊಳ್ಳುತ್ತಾರೋ ಎಂದು ಎಲ್ಲರೂ ಮಾತನಾಡಿಕೊಳ್ಳುವಂತಾಯಿತು.

ಬೆಳೆಯುವ ಊರಿಗೆ ಬೈಕುಗಳು ಬೇಕು ನಿಜ... ಆದರೆ, ಕಿರಾಣಿ ಅಂಗಡಿ, ಇಸ್ತ್ರಿ ಅಂಗಡಿ, ಕಟಿಂಗ್ ಶಾಪು ಮತ್ತು ಎಲ್ಲರ ನೆಚ್ಚಿನ ಹೋಟೆಲ್ಲು... ಯಾರು ಯಾರಿಗೆ ಬೇಕು  ಯಾರು ಯಾರಿಗೆ ಬೇಡ? ಹೀಗಿರುವಾಗ ಆ ಒಂದು ಕರಾಳ ದಿನವೂ ಬಂದೇ ಬಿಟ್ಟಿತು.

ಸುಮಾರು ಐದಾರು ಕಾರುಗಳಲ್ಲಿ ಬಂದಿಳಿದ ದಾಂಡಿಗರು, ಹೊಟೇಲಿನ ಕಡೆಗೆ ಧಾವಿಸಿದರು. ಇವರೆಲ್ಲ ಗುಂಪಾಗಿ ಒಟ್ಟಿಗೆ ಬಂದ ರಭಸವನ್ನು ಕಂಡು, ಗಲ್ಲಾ ಪೆಟ್ಟಿಗೆ ಮುಂದೆ ಕುಳಿತಿದ್ದ ಕೊಟ್ರೇಶಿ, ’ಪರವಾಗಿಲ್ಲ ಇವತ್ತು ಜನ ಮುಂಜಾನೆ ಹನ್ನೊಂದೂವರೆಗೇ ಊಟಕ್ಕೆ ಬರೋಕೆ ಶುರು ಮಾಡಿದ್ದಾರೆ...’ ಎಂದು ಕಣ್ಣರಳಿಸಿ ನೋಡುತ್ತಿರುವ ಹೊತ್ತಿಗೆ ಅದೇನೇನೋ ಮಾತುಗಳು ಕೇಳ ತೊಡಗಿದವು. ಬಂದ ದಾಂಢಿಗರು ಗಡ್ಡ ಧಾರಿಗಳು, ಅದೆಲ್ಲೋ ದೂರದ ಪಂಜಾಬಿನ ಲೂಧಿಯಾನದವರಂತೆ... ಅವರಲ್ಲಿ ಕೆಲವರು ದಷ್ಟಪುಷ್ಟರೂ, ಕೈಗೆ ವಿಷ್ಣುವರ್ಧನ್ ಬಳೆ ಧರಿಸಿದವರೂ ಇದ್ದರು. ಇಂಗ್ಲೀಷು, ಹಿಂದಿಗಳಲ್ಲಿ ಮಾತನಾಡುತ್ತಿದ್ದ ಜನರು ಹೋಟೇಲಿನಲ್ಲಿ ಒಮ್ಮೆಲೇ ಕೋಲಾಹಲ ನಡೆಸತೊಡಗಿದರು. ಅವರ ಮಾತಿನ ಸಾರಾಂಶದಂತೆ ಸುಧಾ ಹೋಟ್ಲು ಜಾಗದ ಸಮೇತ ಮಾರಾಟವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಬೈಕ್ ಶೋ ರೂಮ್ ಆಗಿ ಪರಿವರ್ತನೆಗೊಳ್ಳಲಿದೆ. ಈ ಆಸ್ತಿಯ ವ್ಯಾಪಾರವನ್ನೆಲ್ಲ ಕೊಟ್ರೇಶಿಯ ಅಣ್ಣ, ಆನಂದನೇ ಬೆಂಗಳೂರಿನಲ್ಲಿ ಕುಳಿತು ಮಾಡಿದ್ದಾನಂತೆ. ಅವನ ಹೆಂಡತಿಗೂ ಕೊಟ್ರೇಶಿಗೂ ಅಷ್ಟಾಗಿ ಆಗಿ ಬರದಿದ್ದರಿಂದ ಅಣ್ಣ ತಮ್ಮಂದಿರಲ್ಲಿ ಯಾವೊಂದು ಬಾಂಧವ್ಯವೂ ಉಳಿಯದೇ, ಕೊಟ್ರೇಶಿ ಈ ರೀತಿ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವ ಸ್ಥಿತಿ ಬಂದೊದಗಿತಂತೆ.

ಈ ದಾಂಡಿಗರೆಲ್ಲ ಬಂದು ಬೆಂಚು-ಮೇಜುಗಳನ್ನು ಎಳೆದಾಡಿ ಒಂದು ಕಡೆಗೆ ಗುಂಪು ಹಾಕುವ ಹೊತ್ತಿಗೆ ಅಲ್ಲಿ ಕಣ್ಣೀರಿಡುವ ದೃಶ್ಯ ಭಟ್ಟರ ಹೆಂಡತಿಯದು...’ನಾನು ಸಾಯುವ ಮುಂಚೆ ಇಂತದ್ದನ್ನು ನೋಡಬೇಕಿತ್ತಾ? ದೇವರೇ, ನನ್ನನ್ಯಾಕೆ ಇನ್ನೂ ಜೀವಂತವಾಗಿಟ್ಟಿದ್ದೀಯ?’ ಎಂದು ಪ್ರಲಾಪಿಸಿ ಆರ್ತತೆಯಲ್ಲೂ ಇರುವಿಕೆಯನ್ನು ದೂರಿ, ಸುತ್ತಲಿನವರಿಂದ ಸಂತಾಪವನ್ನು ಗಳಿಸಿಕೊಳ್ಳುವುದರಲ್ಲೇನೋ ಶಕ್ತಳಾದ ಹೆಂಗಸು, ತನ್ನ ಹೋಟಲನ್ನು ಉಳಿಸಿಕೊಳ್ಳಲು ಅಸಹಾಯಕಳಾಗೇ ಕಂಡಳು.

ಹೋಟೆಲಿನ ನೈಋತ್ಯ ಮೂಲೆಯಲ್ಲಿ ಇನ್ನೂ ಈಗಷ್ಟೆ ಕತ್ತರಿಸಿಟ್ಟ ಕೊತ್ತುಬರಿ ಸೊಪ್ಪು ಮತ್ತು ಸಬ್ಸಿಗೆ ಸೊಪ್ಪುಗಳು ಚಟ್ಟಂಬಡೆಯಾಗಿ ಹೊರಬರುವ ಹುನ್ನಾರದಲ್ಲಿ ಕಲಿಸಿದ ಹಿಟ್ಟಿನೊಂದಿಗೆ ಒಡನಾಟವನ್ನು ಬೆಳೆಸುವ ಆಲೋಚನೆಯಲ್ಲಿದ್ದವು. ಗ್ಯಾಸ್ ಒಲೆಯ ಮೇಲೆ ದೊಡ್ಡ ಬಾಂಡಲೆಯೊಂದು ತನ್ನ ಹಿನ್ನೆಲೆಯನ್ನು ಕೆನ್ನಾಲಗೆಗಳಿಗೆ ಒಡ್ಡಿಕೊಂಡಿದ್ದರೂ ಶಾಂತ ಚಿತ್ತನಾಗಿ ತನ್ನೊಳಗೆ ಹುದುಕಿಕೊಂಡಿದ್ದ ಎಣ್ಣೆಯೊಳಗೆ ಒಂದು ಗುಳ್ಳೆಯೂ ಬಾರದಂತೆ ನೋಡಿಕೊಂಡಿತ್ತು. ಇನ್ನು ಕೆಲವೇ ನಿಮಿಷಗಳಲ್ಲಿ ಒಕ್ಕರಿಸುವ ಹಸಿದ ಗ್ರಾಹಕರ ದಣಿವಾರಿಸಲು ಎಲ್ಲ ಸ್ಟೀಲಿನ ನೀರಿನ ಜಗ್ಗುಗಳೂ ತಮ್ಮೊಳಗೆ ತುಂಬಿಕೊಂಡಿದ್ದ ನೀರಿನ ಅಂತರಂಗದ ಶಕ್ತಿಯ ಫಲದಿಂದ ತಮ್ಮ ಹೊರ ಮೇಲ್ಮೈಯಲ್ಲಿಯೂ ಸಣ್ಣ ನೀರಿನ ಹನಿಗಳನ್ನು ಪ್ರಚುರ ಪಡಿಸತೊಡಗಿದ್ದವು.  ಮೇಲೆ ಇದ್ದ ಕರಿ ಬಣ್ಣದ ಮಂಗಳೂರು ಹಂಚಿನ ಸೂರಿನ ನಡುವೆ ಒಂದೇ ಒಂದು ಅಡ್ಡ ಪಟ್ಟಿಯ ಸಹವಾಸಕ್ಕೆ ಅಂಟಿಕೊಂಡಿದ್ದ ಫ಼್ಯಾನು, ತಾನು ನಿಧಾನವಾಗಿ ತಿರುಗುತ್ತ, ಗಾಳಿ ಬೀಸುವುದಿರಲಿ, ತನ್ನ ಸುತ್ತಲಿನ ಜೇಡರ ಬಲೆಗಳಿಗೆ, ’ಹತ್ತಿರ ಬಂದೀರಿ ಜೋಕೆ!’ ಎಂದು ಸೂಚನೆ ನೀಡುತ್ತಿದ್ದಂತಿತ್ತು.

ಹೊಟ್ಟೆ, ಮೈ-ಕೈ ತುಂಬಿ ಕೊಂಡ ದಾಂಡಿಗರಿಗೆ ಹಸಿದವರ ಸಂಕಟಗಳು ಅರ್ಥವಾಗುವುದಾದರೂ ಹೇಗೆ? 'ಇವತ್ತಿನಿಂದ ಹೋಟೆಲ್ ಬಂದ್!' ಎಂದು ದೊಡ್ಡ ದರ್ಪದ ಧ್ವನಿಯಲ್ಲಿ ಹೇಳಿ ಬಿಟ್ಟರೆ ಸಾಕೆ? ಒಂದು ಊರಿನ ಹೃದಯ ಭಾಗದಲ್ಲಿ ಮೂರು ತಲೆಮಾರುಗಳಿಂದ ಜನರನ್ನು ಸಂತೈಸಿಕೊಂಡು ಬಂದ ಅನ್ನಪೂರ್ಣೇಶ್ವರಿಯ ಅಪರಾವತಾರ ಸುಧಾ ಹೋಟೇಲಿನ ಆಂತರ್ಯದ ಆಳ ಕೇವಲ ಇಷ್ಟೆಯೇ?

ಈಗಾಗಲೇ ಮಧ್ಯಾಹ್ನದ ಊಟದ ಹೊತ್ತಾಗುತ್ತಿದ್ದರಿಂದ, ಕೊಟ್ರೇಶಿ ತನ್ನ ಹರುಕು ಮುರುಕು ಹಿಂದಿಯಲ್ಲಿ ಒಳ ನುಗ್ಗಿದ ದಾಂಡಿಗರಿಗೆ ಒಂದೆರಡು ಗಂಟೆ ಸಮಯಾವಕಾಶಕ್ಕಾಗಿ ಕಾಡಿ ಬೇಡಿದ ಮೇಲೆ, ಅವರು ಒಪ್ಪಿಕೊಂಡರು. ಬಂದ ಜನರೆಲ್ಲ ಮುಗಿ ಬಿದ್ದು ಊಟ ಮಾಡುವುದರ ಜೊತೆಗೆ, ಇನ್ನು ನಾಳೆಯಿಂದ ಎಲ್ಲಿಗೆ ಹೋಗೋದು ಎಂದು ಯೋಚಿಸ ತೊಡಗಿದರು. ಸರ್ಕಲ್ಲಿನಲ್ಲಿ ಹೊಸದಾಗಿ ಸಂಜೆಗೆ ಸೇರಿಕೊಂಡ ಪಾನೀಪೂರಿ ತಳ್ಳುಗಾಡಿಗಳಿಂದ ಎಂದಾದರೂ ಹೊಟ್ಟೆ ತುಂಬುವುದುಂಟೇ? ಒಂದು ವೇಳೆ ಹೊಟ್ಟೆ ತುಂಬಿದರೂ, ಅಮ್ಮನ ಕೈ ರುಚಿಯ ಅಡುಗೆ ಎಂದಾದರೂ ಸಿಗುವುದೇ? "ಛೇ, ಈ ಊರಿಗೆ ಈ ರೀತಿ ಕಲಿಗಾಲ ಬರಬಾರದಿತ್ತಪ್ಪಾ...’ ಎಂದು ಎಲ್ಲರೂ ಮಮ್ಮಲ ಮರುಗುವವರೇ!

***

ಇನ್ನೇನು ಮಧ್ಯಾಹ್ನದ ಊಟವಾದರೂ ಬಂದ ಜನ ಹೋಗಲೊಲ್ಲರು. ಇಷ್ಟರಲ್ಲೇ ಒಂದಿಷ್ಟು ಮಂದಿ ಊರಿನ ಹಿರಿಯರಾದ ಜರ್ಮಲೆ ಚಂದ್ರಣ್ಣನವರನ್ನು ಕರೆತಂದರು. ಕೊಟ್ರೇಶಿ ತನ್ನ ಪೋನಿನಿಂದ ತನ್ನ ಅಣ್ಣ ಆನಂದನಿಗೆ ಡಯಲ್ ಮಾಡಿ, ಚಂದ್ರಣ್ಣನಿಗೆ ಫೋನು ಕೊಟ್ಟ. ಚಂದ್ರಣ್ಣ ಅದ್ಯಾವ ಕಾರಣಕ್ಕೆ ಸ್ಫೀಕರಿನಲ್ಲಿ ಹಾಕಿದರೋ ಗೊತ್ತಿಲ್ಲ,... ಆ ಕಡೆಯಿಂದ ಆನಂದ, "ಚಂದ್ರಣ್ಣಾ... ನೀವು ಊರಿಗೆ ದೊಡ್ಡ ಮನುಷ್ಯರು... ನಾನು ನಿಮ್ಮ ಉಸಾಬರಿಗೆ ಬರಲ್ಲ... ನಿಮ್ಮ ಮೇಲಿನ ಗೌರವದಿಂದ ಹೇಳ್ತೀನಿ, ನಾನು ನನ್ನ ಹೆಸರಿನಲ್ಲಿರೋ ಪ್ರಾಪರ್ಟಿ ಯಾರಿಗಾದ್ರೂ ಮಾರ್ತೀನಿ, ಹೆಂಗಾದರೂ ಇರ್ತೀನಿ... ನಿಮ್ಮ ಕೆಲ್ಸ ನೀವ್ ನೋಡೋದು ಒಳ್ಳೇದು..." ಎಂದು, ಚಂದ್ರಣ್ಣನ ಮಾತೂ ಕೇಳದೇ ಆ ಕಡೆ ಫ಼ೋನು ಇಟ್ಟುಬಿಟ್ಟ. ಕೆಟ್ಟು ಪಟ್ಟಣ ಸೇರು ಅಂತಾರೆ ನಿಜ. ಆದರೆ, ಒಳ್ಳೆಯವನಾಗೇ ಇದ್ದ ಆನಂದನಿಗೆ ಈ ನಮನಿ ದಾರ್ಷ್ಯ ಬರಬಾರದಾಗಿತ್ತು... ಎಂದು ಎಲ್ಲರೂ ಅಂದುಕೊಳ್ಳುವ ಹೊತ್ತಿಗೆ, ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಂಡ ಮನಸ್ಥಿತಿ ಚಂದ್ರಣ್ಣನದಾಗಿತ್ತು. ಅವರ ಮುಂದೆ ಆಟಾಡಿಕೊಂಡು ಬೆಳೆದು, ದೂರದ ಬೆಂಗಳೂರಿನ ನೀರು ಕುಡಿದ ಆನಂದನೇ ಇಷ್ಟು ಮಾಡಿರುವಾಗ ಸುತ್ತಲಿನ ಹತ್ತು ಕೆರೆಗಳಿಂದ ನೀರು ಕುಡಿದ ಚಂದ್ರಣ್ಣ ಸುಮ್ಮನೆ ಇರುವುದಾದರೂ ಹೇಗೆ?!

ಊರಿಗೆ ಹಿರೀ ಜನ ಅಂತ ಇರ್ತಾರಲ್ಲ, ಅವ್ರದ್ದೂ ಒಂದು ಮಾತು ಅಂತ ಇರತ್ತೆ ಊರಲ್ಲಿ. ತಕ್ಷಣ ಚಂದ್ರಣ್ಣ, ಹತ್ತಿರದ ಪೋಲೀಸ್ ಸ್ಟೇಷನ್ನಿಗೆ ಫ಼ೋನ್‌ ಮಾಡಿ, ದಫ಼ೇದಾರರ ಹತ್ರ ಅವರ ಸಾಹೇಬ್ರು ಜೊತೆ ತಕ್ಷಣ ಬರಬೇಕು ಎಂದು ತಾಕೀತು ಮಾಡಿದರು. ನಂತರ ಅಲ್ಲಿಗೆ ದೌಡಾಯಿಸಿದ ಪೋಲೀಸರಿಗೆ, ’ನಾನು ಹೇಳುವವರೆಗೂ ಇಲ್ಲೇನೂ ಕದಲದಂತೆ ನೋಡಿಕೊಳ್ಳಿ’ ಎಂದು ಹುಕುಂ ಹಾಕಿ ಹೊರಟು ಹೋದರು.

***

ಒಂದು ರೀತಿ ಚಲನ ಚಿತ್ರ ನೋಡಿದ ರೀತಿಯಲ್ಲಿ, ಬೈಕ್ ಶೋ ರೂಮ್ ಆರಂಭವಾಗುವ ಸೂಚನಾ ಫಲಕಗಳೂ, ಬ್ಯಾನರ್‌ಗಳೂ, ಕಲರ್ ಪೇಪರ್‌ಗಳೂ ಇದ್ದಕ್ಕಿದ್ದ ಹಾಗೆ ಸದ್ದಡಗಿದಂತೆ ನಿಶ್ಶಬ್ಧಗೊಂಡವು. ಊರಿನ ಮಂಡಲ ಪ್ರಧಾನರೂ, ಹಲವು ರಾಜಕೀಯ ಮುಖಂಡರೂ, ಹೋಟೇಲಿನ ಮುಂದೆ ನಿಂತು ಹಿಂದಿಯಲ್ಲಿ, ಬಂದಿದ್ದ ದಾಂಡಿಗರಿಗೆ ಹುಕುಂ ಕೊಡಲು, ಅವರೆಲ್ಲ ಯಾವುದೋ ದೊಡ್ಡ ಕೋರ್ಟಿನಿಂದ ಸ್ಟೇ ಆರ್ಡರು ಬಂದಂತೆ ಸ್ತಬ್ಧವಾಗಿ, ಬಂದ ದಾರಿಗೆ ಹಿಂತಿರುಗಿದರು. ಊರಿನ ಆಸ್ತಿಯ ಒಂದು ಭಾಗವಾಗಿರುವ ಸುಧಾ ಹೋಟಲ್ಲನ್ನು ಸ್ಥಳಾಂತರ ಮತ್ತು ಸ್ಥಳ ಪಲ್ಲಟಗೊಳಿಸಲು ಯಾರೂ ಅಕ್ಕಪಕ್ಕದವರು ಒಪ್ಪದಿದ್ದರಿಂದ ಈಗಾಗಲೇ ಕೊನೇ ಹಂತದವರೆಗೆ ಬಂದ ಆಸ್ತಿಯ ಲೇವಾದೇವಿಯನ್ನು ರದ್ದುಗೊಳಿಸಿದಂತೆ ಪಂಚಾಯತಿಯವರು ಪರವಾನಗಿ ಹೊಡಿಸಿದರು. ಯಾರು ಏನೇ ಅಂದರೂ ಪಟ್ಟಣ ಪಂಚಾಯಿತಿಯ ಅನುಮತಿ ಇಲ್ಲದೇ ಯಾವ ಮಾರಾಟವೂ ಇತ್ಯರ್ಥಗೊಳ್ಳದ್ದರಿಂದ ಎಲ್ಲರೂ ನಿರುಮ್ಮಳರಾಗುವಂತಾಯಿತು.

ಕೊಟ್ರೇಶಿ ತನ್ನ ಕಾಯಕವನ್ನು ಹಾಗೇ ಮುಂದುವರೆಸಿಕೊಂಡು ಹೋಗುತ್ತಿದ್ದಾನೆ... ಆದರೆ, ಇವತ್ತಿನವರೆಗೂ ಆನಂದನ ಪತ್ತೆ ಯಾರಿಗೂ ನಮ್ಮೂರಿನ ಸುತ್ತುಮುತ್ತಲೂ ಎಲ್ಲೂ ಆದಂತಿಲ್ಲ! ಅಮ್ಮ ಕಾಲದಲ್ಲಿ ಲೀನವಾಗೇನೋ ಇದ್ದಾರೆ, ಆದರೆ ಅಮ್ಮನ ಕೈ ರುಚಿ ಈಗ ಮುಂದಿನ ತಲೆಮಾರನ್ನೂ ತಬ್ಬಿಕೊಳ್ಳುತ್ತಿದೆಯಂತೆ.