Showing posts with label Social. Show all posts
Showing posts with label Social. Show all posts

Saturday, April 25, 2020

ಎಲ್ಲಾ ಕಸಮಯವೋ!

ಕೊರೋನಾ ವೈರಸ್‌ಗೆ ಸಂಬಂಧಿಸಿದ ಬಿಕ್ಕಟ್ಟನ್ನು ನಾವೆಲ್ಲ ಎದುರಿಸುತ್ತಿರುವಾಗ ಒಂದು ವಿಷಯವನ್ನು ನಮ್ಮ ಅನುಕೂಲಕ್ಕೋಸ್ಕರ ಮರೆತುಬಿಡುತ್ತಿದ್ದೇವೆಂದರೆ ಅದು ನಮ್ಮ ಕಸ ಸಂಸ್ಕರಣೆಯ ವೈಫಲ್ಯ.  ನಮ್ಮ ತಂತ್ರಜ್ಞಾನಗಳು ಅದೆಷ್ಟೇ ಮುಂದುವರೆದರೂ, ಬಾಲ್ಟಿಮೋರ್‌ನಿಂದ ಬೆಂಗಳೂರಿನವರೆಗೆ ನಾವು ಕಸವನ್ನು ಪರಿಷ್ಕರಿಸುವ ರೀತಿಯನ್ನು ನೋಡಿದರೆ ತಿರಸ್ಕಾರ ಮೂಡುತ್ತದೆ.  ಇತ್ತೀಚೆಗೆ I-95ನಲ್ಲಿ ಡ್ರೈವ್ ಮಾಡುತ್ತಾ ಇನ್ನೇನು ಬಾಲ್ಟಿಮೋರ್ ನಗರವನ್ನು ಹೊಕ್ಕುತ್ತಿರುವಂತೆ (ಕಸವನ್ನು ಸುಟ್ಟು) ಗಗನಕ್ಕೆ  ಹೊಗೆಯನ್ನು ಉಗುಳುವ ಹೊಗೆ ಕೊಳವೆಗಳು ನಾವು ಇನ್ನೂ ಜೀವಂತವಿದ್ದೇವೆ ಎಂದು ನೆನಪಿಸಿದವು.  ಅದೇ ರೀತಿ ನೀವು ಭಾರತದ ಯಾವುದೇ ಮಹಾನಗರಕ್ಕೆ ಹೋದರೂ ಕಸದ ಪ್ರಮಾಣ ಮತ್ತು ಸಂಸ್ಕರಣಾ ವಿಧಾನ ಎರಡೂ ನಿಮ್ಮನ್ನು ಹೈರಾಣಾಗಿಸುತ್ತವೆ ಎಂದರೆ ತಪ್ಪೇನಿಲ್ಲ.



ದಿನೇ-ದಿನೇ ಬೃಹದಾಕಾರವಾಗಿ ಬೆಳೆಯುವ ಕಸದ ಪ್ರಮಾಣ ಒಂದು ದಿನ ಇಡೀ ಪ್ರಪಂಚದ ಪ್ರಗತಿಗೇ ಮಾರಕವಾಗಬಹುದೇ ಎಂಬ ಕೊರಗು ಇತ್ತೀಚೆಗೆ ಬಲವಾಗಿ ಕಾಡುತ್ತಿದೆ.

***
ನಮ್ಮ ಆಧುನಿಕ ಬದುಕಿನಲ್ಲಿ ನಾವೇ ಉತ್ಪಾದಿಸಿದ ಸಮಸ್ಯೆಗಳಲ್ಲಿ ಈ ಕಸವೂ ಒಂದು.  ಇದನ್ನ ಕಸ ಅನ್ನಿ, ಟ್ರ್ಯಾಶ್ ಅನ್ನಿ, ಅಥವಾ ರಬ್ಬಿಶ್ ಅನ್ನಿ, ತ್ಯಾಜ್ಯ ಅನ್ನಿ, ಕಲ್ಮಷ ಅನ್ನಿ - ಎಲ್ಲವೂ ಒಂದೇ.   ಎಲ್ಲ ದೇಶಗಳಲ್ಲೂ ಈ ಸಮಸ್ಯೆ ಇದ್ದೇ ಇದೆ, ಆದರೆ ಭಾರತದಲ್ಲಿ ಇದು ಅತಿ ಹೆಚ್ಚು ಎನ್ನಬಹುದು.  ಈಗಿನ ಎಲ್ಲೆಲ್ಲೂ ಕಸವೇ ಕಸ ಎನ್ನುವ ಅಂತಿಮ ಹಂತವನ್ನು ತಲುಪುವಲ್ಲಿ ಸಹಾಯ ಹಸ್ತ ನೀಡಿದ ಪೆಡಂಭೂತಗಳಲ್ಲಿ ಮುಖ್ಯವಾದುವು: ಯದ್ವಾತದ್ವಾ ಬೆಳೆದ ಜನಸಂಖ್ಯೆ, ಎಂಥ ಸಮಸ್ಯೆಗಳನ್ನೂ ಉಲ್ಬಣಗೊಳಿಸಬಲ್ಲ ಜನಸಾಂದ್ರಂತೆ, ಇವೆಲ್ಲಕ್ಕೂ ಮೂಲಭೂತ ಕಾರಣವಾದ ಪ್ಲಾನಿಂಗ್ (ಅಥವಾ ಪ್ಲಾನಿಂಗ್ ಇರದೇ ಇರುವ ಸ್ಥಿತಿ), ಎಂಥ ಸಂದರ್ಭವನ್ನೂ ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳುವ ರಾಜಕೀಯ ಮುತ್ಸದ್ದಿತನ ಹಾಗೂ ಲಂಚ ಲಂಪಟತನ.

ಭಾರತದವೆಂದರೆ ಬೆಂಗಳೂರೊಂದೇ ಅಲ್ಲ, ಆದರೆ ನಮ್ಮ ಬೆಂಗಳೂರಿಗೆ ಈ ಗತಿ ಬಂದಿರುವಾಗ ಇನ್ನುಳಿದ ನಗರಗಳ ಪಾಲು ಹೇಗಿರಬೇಡ.  ಏಳು (೨೦೧೧) ವರ್ಷಗಳ ಹಿಂದೆ ೮೫ ಲಕ್ಷ ಜನಸಂಖ್ಯೆ ಇದ್ದ ಬೆಂಗಳೂರು ಇಂದು ೧೨೫ ಲಕ್ಷ (೨೦೧೭) ತಲುಪಿದೆ. ಇಲ್ಲಿ ನೂರಕ್ಕೆ ತೊಂಭತ್ತು ಜನ ಅಕ್ಷರಕುಕ್ಷಿಗಳಿದ್ದರೂ ಸಹ, ಇಡೀ ನಗರ ಅನಾಗರೀಕರ ಬೀಡಾಗಿದೆ.  ತಮ್ಮ ಮನೆಯ ಒಳಗನ್ನು ಬೆಳಗಿಕೊಳ್ಳುವ ಜನ, ಹೊರಗನ್ನು ಅದೆಷ್ಟು ಕೊಳಕಾಗಿಟ್ಟುಕೊಂಡಿದ್ದಾರೆಂದರೆ ಅದರ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ, ಆದ್ದರಿಂದ ಎಲ್ಲರಿಗೂ ಅದು ’ಒಪ್ಪಿಕೊಂಡ’ ಅಥವಾ ’ಒಗ್ಗಿಕೊಂಡ" ವಿಷಯವಾಗಿದೆ.

ಒಂದು ನಗರ ನಿರ್ಮಲೀಕರಣಗೊಳ್ಳ ಬೇಕಾದರೆ ಅಲ್ಲಿನ ಒಳಚರಂಡಿ ವ್ಯವಸ್ಥೆ ಚೆನ್ನಾಗಿರಬೇಕು.  ಅಲ್ಲಿ ಬಳಕೆಯಾಗುವ ನೀರನ್ನು ಪರಿಷ್ಕರಿಸಿ ತ್ಯಾಜ್ಯ ಪದಾರ್ಥಗಳನ್ನು ಬೇರ್ಪಡಿಸಿಬೇಕು.  ಇದೇ ರೀತಿ ಕಸವನ್ನು ಸಹ ಪರಿಷ್ಕರಿಸಿ, ರಿಸೈಕಲ್ ಮಾಡಬಹುದಾದವುಗಳನ್ನು ಬೇರ್ಪಡಿಸಿ ರಿಸೈಕಲ್ ಮಾಡಬೇಕು.  ಇವೆಲ್ಲಕ್ಕೂ ವ್ಯವಸ್ಥಿತವಾದ ಸಾಮಾಜಿಕ ಕಾಳಜಿ ಇರಬೇಕು.  ನಗರೀಕರಣ, ಅತಿ ಜನಸಾಂದ್ರತೆಯಿಂದ ನಮ್ಮ ಸಮಸ್ಯೆಗಳು ಹೆಚ್ಚಿ ನಮ್ಮ ಪರಿಸ್ಥಿತಿ ಹೀಗಾಗಿದೆ ಎಂದು ತಳ್ಳಿ ಹಾಕುವಂತಿಲ್ಲ.  ಉದಾಹರಣೆಗೆ, ೯೦ ಲಕ್ಷ ಜನಸಂಖ್ಯೆ ಇರುವ ನ್ಯೂ ಯಾರ್ಕ್ ನಗರ, ಇದಕ್ಕಿಂತಲೂ ನಾಲ್ಕು ಪಟ್ಟು ಜನಸಾಂದ್ರತೆ ಇರುವ ಟೋಕ್ಯೋದಲ್ಲಿ ಜನರು ಬದುಕುತ್ತಿಲ್ಲವೇ? ಅಲ್ಲಿಯೂ ಕಸದ ಸಮಸ್ಯೆ ಇದೆಯೇ ಎಂದು ಯೋಚಿಸಬೇಕಾಗುತ್ತದೆ.

ನಮ್ಮ ಕಸದ ಸಮಸ್ಯೆಗೆ ನಾವು ಏನು ಮಾಡಬೇಕು? ಈ ಹಿಂದೆ ವ್ಯವಸ್ಥಿತವಾದ ಪ್ಲಾನ್ ಇಲ್ಲದೇ ಅಡ್ಡಾದಿಡ್ಡಿಯಾಗಿ ಬೆಳೆದ ನಗರಗಳ ಕನಿಷ್ಠ ಇನ್‌ಫ್ರಾಸ್ಟ್ರಕ್ಚರ್ ಅನ್ನು ಬೆಳೆಸುವುದರ ಜೊತೆಗೆ, ಅಲ್ಲಿ ಎಲ್ಲೆಲ್ಲಿಂದಲೋ ವಲಸೆ ಬಂದು ಸೇರಿಕೊಂಡ ಜನರ ತಿಳುವಳಿಕೆಯನ್ನು ಹೆಚ್ಚಿಸಬೇಕು.  ಜೊತೆಗೆ ತಿರಸ್ಕೃತ ತ್ಯಾಜ್ಯವನ್ನು ಬೇರ್ಪಡಿಸಿ ಅದನ್ನು ಸರಿಯಾಗಿ "ವಿನಿಯೋಗಿಸುವ" ಉದ್ಯಮಗಳು ಹಾಗೂ ಅದಕ್ಕೆ ಸೂಕ್ತವಾದ ಟೆಕ್ನಾಲಜಿ ಮತ್ತು ಮಷೀನುಗಳ ಸಹಾಯದಿಂದ ಕಸದ ಪೆಡಂಭೂತವನ್ನು ನಿಯಂತ್ರಿಸಬಹುದು.   ನಾನು ನೋಡಿದಂತೆ ಬೆಂಗಳೂರಿನ ಬಹುಭಾಗದಲ್ಲಿ ಈಗ      ಚಾಲ್ತಿಯಲ್ಲಿರುವ ವ್ಯವಸ್ಥೆ ಕಲೆಕ್ಟ್ ಎಂಡ್ ಡಂಪ್.  ಇದು ಹೀಗೇ ಮುಂದುವರೆದರೆ ಇಡೀ ನಗರವೇ ತಿಪ್ಪೇಗುಂಡಿಯಾಗುವುದು ಗ್ಯಾರಂಟಿ.

ಕಸವನ್ನು ಕಲೆಕ್ಟ್ ಮಾಡಿ, ಅದನ್ನು ಸರಿಯಾಗಿ ಬೇರ್ಪಡಿಸಿ, ರಿಸೈಕಲ್ ಮಾಡುವವನ್ನು ಸರಿಯಾದ ಜಾಗಕ್ಕೆ ತಲುಪಿಸಿ, ಕೊಳೆಯುವುದನ್ನು ಕಾಂಪೋಸ್ಟ್ ಆಗಿ ಪರಿವರ್ತಿಸಿ ಮತ್ತೆ ಅವೇ ರಿಸೋರ್ಸುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆ ಆಗುವಂತೆ ನೋಡಿಕೊಳ್ಳುವುದು ತ್ಯಾಜ್ಯವನ್ನು ಪರಿಷ್ಕರಿಸಲು ಇರುವ ಒಂದು ಸಾಲಿನ ಸೂತ್ರ.  ಮೊದಲೆಲ್ಲ ನಮ್ಮಲ್ಲಿ ಪ್ಲಾಸ್ಟಿಕ್ಕುಗಳು ಬಳಕೆಯಾಗುತ್ತಿರಲಿಲ್ಲ.  ಮನೆಗೊಂದು ತಿಪ್ಪೇಗುಂಡಿ ಇರುತ್ತಿತ್ತು, ಅಲ್ಲಿ ದಿನಬಳಕೆಯ ತ್ಯಾಜ್ಯ ಕೊಳೆತು ಗೊಬ್ಬರವಾಗುತ್ತಿತ್ತು. ಹಳೆಯ ಟೂತ್‌ಪೇಸ್ಟ್ ಟ್ಯೂಬುಗಳಿಂದ ಹಿಡಿದು, ಒಡೆದ ಪ್ಲಾಸ್ಟಿಕ್ ಕೊಡಪಾನಗಳ ತುಂಡುಗಳನ್ನು, ಖಾಲಿ ಬಾಟಲುಗಳನ್ನು, ರದ್ದಿ ಪೇಪರುಗಳನ್ನು ದುಡ್ಡು ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದರು. ಇದಿಷ್ಟೇ ಅಲ್ಲ, ಹಳೆಯ ಪಾತ್ರೆಗಳನ್ನೂ, ರೇಷ್ಮೆ ಬಟ್ಟೆ ಮೊದಲಾದವುಗಳನ್ನೂ ಸಹ ನಮಗೆ ಗೊತ್ತಾದ ರೀತಿಯಲ್ಲಿ ’ರಿಸೈಕಲ್’ ಮಾಡುತ್ತಿದ್ದೆವು.
ಇಂದಿನ ಆಧುನಿಕ ಜನತೆಗೆ ತಮ್ಮ ತ್ಯಾಜ್ಯವನ್ನು ವಿನಿಯೋಗಿಸಲು ತಾವು ಹಣವನ್ನೇಕೆ ಖರ್ಚು ಮಾಡಬೇಕು ಎಂಬ ಸರಳ ಸತ್ಯ ತಿಳಿಯುತ್ತಿಲ್ಲ?  ನಿಮ್ಮ ಮನೆಯ ಮುಸುರೆಯನ್ನು ತೊಳೆಯುವವರಿಗೆ ದುಡ್ಡು ಕೊಡುವುದಿಲ್ಲವೇ? ಹಾಗೇ ತ್ಯಾಜ್ಯ ತೆಗೆದು ಪರಿಷ್ಕರಿಸಲು ಕೂಡ ಹಣ ತೆರಬೇಕಾಗುತ್ತದೆ.  ಅಲ್ಲದೇ ತ್ಯಾಜ್ಯವನ್ನು ಪರಿಷ್ಕರಿಸುವ ಉದ್ಯಮ/ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಅವರನ್ನು ಒಂದು ವ್ಯವಸ್ಥೆಯ ಮುಖ್ಯ ಅಂಗವನ್ನಾಗಿ ಪರಿಗಣಿಸಬೇಕಾಗುತ್ತದೆ.  ನನ್ನ ಅನಿಸಿಕೆಯ ಪ್ರಕಾರ, ನಾವು ಸೇವಿಸುವ ಆಹಾರಕ್ಕೆಷ್ಟು ಪ್ರಾಮುಖ್ಯತೆ ನೀಡುತ್ತೇವೆ ಅದರ ಕಾಲು ಪಟ್ಟಾದರೂ ತ್ಯಾಜ್ಯ ಸಂಸ್ಕರಣೆಗೆ ಮನ್ನಣೆ ನೀಡಬೇಕಾಗುತ್ತದೆ.  ಇಲ್ಲವೆಂದಾದಲ್ಲಿ ಇಂದು ನಾವು ಬೆಲೆ ತೆರದೆಯೇ ಕಸವನ್ನು ಎಲ್ಲಿ ಬೇಕಂದಲ್ಲಿ ಎಸೆದು ಮುಂದೆ ಅದು ಎಲ್ಲವನ್ನು ಮೀರಿ ಬೆಳೆತು ಅನೇಕ ಅನಾಹುತಗಳು, ಹಾನಿಗಳೂ ಸಂಭವಿಸುವಾಗ ತುಂಬಾ ನಿಧಾನವಾಗಿರುತ್ತದೆ.

***

ನಮ್ಮಲ್ಲಿ ತಂತ್ರಜ್ಞಾನ, ಅವಿಷ್ಕಾರ ಬೇರೆ ಎಲ್ಲ ದೇಶಗಳಿಗೆ ಸೆಡ್ಡು ಹೊಡೆಯುವಂತೆ ಬೆಳೆಯುತ್ತಿದೆ ಎಂದು ಎದೆತಟ್ಟಿ ಹೇಳಿಕೊಳ್ಳಲು ಸಂತೋಷವಾಗುತ್ತದೆ.  ವಿಶ್ವದ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತ ಆರನೇ ಸಾಲಿನಲ್ಲಿದೆ ಎಂದು ಓದಿದಾಗ ಖುಷಿಯಾಗುತ್ತದೆ.  ನಮ್ಮಲ್ಲಿ ಅನೇಕ ಉದ್ಯಮಗಳು ಬೆಳೆಯುತ್ತಿವೆ, ನಾವು ಅತಿ ಹೆಚ್ಚು ಇಂಜಿನಿಯರುಗಳನ್ನು ಹೊರತರುತ್ತೇವೆ ಎಂದು ಜಂಭ ಕೊಚ್ಚಿಕೊಳ್ಳುತ್ತೇವೆ. ಆದರೆ, ಈವರೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿರುವುದನ್ನು ನೋಡಿಯೂ ನೋಡದೇ ಇರುವಂತಿರುವುದು ಏಕೆ? ಎಂದು ಯೋಚಿಸಿದರೆ ಉತ್ತರ ದೊರೆಯುವುದಿಲ್ಲ.

ಅಮೇರಿಕದಲ್ಲಿ ವೇಷ್ಟ್ ಮ್ಯಾನೇಜ್‌ಮೆಂಟ್ ಕಂಪನಿಯಂಥವುಗಳು ಪಬ್ಲಿಕ್ ಟ್ರೇಡಿಂಗ್ ಕಂಪನಿಗಳಾಗಿ ಬೆಳೆದು ತಮ್ಮ ಗ್ರಾಹಕರಿಗೆ, ಬಳಕೆದಾರರಿಗೆ ಸೇವೆಯನ್ನು ಸಲ್ಲಿಸುತ್ತಿಲ್ಲವೇ? ಹಾಗೆಯೇ ನಮ್ಮಲ್ಲೂ ಸಹ ಈ ಸಮಸ್ಯೆಗೆ ಇದುವರೆಗೆ ಯಾರೂ ಉತ್ತರವನ್ನೇ ಕಂಡು ಹಿಡಿಯದಂಥ ಅಸಹಾಯಕ ಪರಿಸ್ಥಿತಿ ಬಂದಿದೆಯೇ?

ಮುಂದೆ ಇದೇ ಬೆಂಗಳೂರಿನ ಜನಸಂಖ್ಯೆ ದ್ವಿಗುಣವಾದಾಗ, ಈ ಕಸದ ಮಹಾತ್ಮೆ ಏನಾಗಿರಬೇಡ? ಮನೆಯ ದಿನನಿತ್ಯದ ಕಸದ ಜೊತೆಗೆ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಉತ್ಪನ್ನಗಳೂ, ಲಿಥಿಯಂ ಬ್ಯಾಟರಿಗಳೂ ಸೇರಿಕೊಂಡು, ನೀರು-ಮಣ್ಣು ಎರಡೂ ಪಾದರಸ, ಆರ್ಸೆನಿಕ್, ಮೊದಲಾದ ವಿಷ ಪದಾರ್ಥಗಳಿಂದ ಕೂಡಿಕೊಂಡರೆ ಯಾರಿಗೆ ಹಾನಿ ಎಂದು ಎಲ್ಲರೂ ಯೋಚಿಸಬೇಕಾದ ವಿಚಾರ.  ಎಲ್ಲಾ ಕಡೆ ಕಸಮಯವಾಗಿದೆ.  ಇನ್ನೂ ನಾವು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗದಿದ್ದರೆ, ನಿಸರ್ಗ ಎಂದಿನಂತೆ ತನ್ನನ್ನು ತಾನು ನೋಡಿಕೊಳ್ಳುತ್ತದೆ, ಅದಕ್ಕೆಲ್ಲ ಬೆಲೆ ತೆರಬೇಕಾದವರು ನಾವೇ!

Sunday, July 28, 2019

ರಾಜಕೀಯ ಪ್ರಹಸನ

ವರ್ಷದ ಮೇ ತಿಂಗಳ ಲೋಕಸಭಾ ಚುನಾವಣೆಯಲ್ಲಿ ಎರಡು ಮಹತ್ವದ ಅಂಶಗಳು ಗಮನ ಸೆಳೆದವು: ಒಂದು, ದೇಶದಾದ್ಯಂತ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಜನರು ನಂಬಿಕೆ ಇಟ್ಟು ಇನ್ನೈದು ವರ್ಷಗಳ ಸ್ಥಿರ ಆಡಳಿತಕ್ಕೆ ಬುನಾದಿ ಹಾಕಿರುವ ವಿಷಯ, ಅದರ ಜೊತೆಗೆ ಉಳಿದ ಪಕ್ಷಗಳ ಪ್ರಣಾಳಿಕೆಗಳ ಸಾರಾಸಗಟು ತಿರಸ್ಕಾರ.  ಮೇಲ್ನೋಟಕ್ಕೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಕಂಡು ಬಂದರೂ, ಈ ಚುನಾವಣೆಯಲ್ಲಿ ಹಿರಿಯ ಮುತ್ಸದ್ದಿ ಇಲ್ಲದ ಉಳಿದ ರಾಷ್ಟ್ರೀಯ ಪಕ್ಷಗಳಿಗೆ ಬೆಲೆ ಸಿಕ್ಕಿಲ್ಲದಿರುವುದು ಎದ್ದು ಕಾಣುತ್ತದೆ.  ಹೀಗಾಗಿ ಒಂದು ಪಕ್ಷ ಅಥವಾ ಬಣಕ್ಕೆ ಅವುಗಳ ಧ್ಯೇಯೋದ್ದೇಶಗಳು ಎಷ್ಟು ಮುಖ್ಯವೋ ಅಷ್ಟೇ ಅವುಗಳನ್ನು ಪ್ರತಿಬಿಂಬಿಸಿ ಜನಮನಗಳಿಗೆ ತಲುಪಿಸುವ ಒಂದು ಹಿರಿಯ ಧ್ವನಿಯೂ ಕೂಡ ಅಷ್ಟೇ ಮುಖ್ಯವಾಗಿ ಕಂಡುಬರುತ್ತದೆ.  ಇದು ಯಾವತ್ತಿಗೂ ಸತ್ಯ.  ಹಿಂದಿನ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಮ್ಮ ವರ್ಚಸ್ವಿ ಜನನಾಯಕರುಗಳ ಕರೆಗೆ ಓಗೊಟ್ಟು ಲಕ್ಷಾಂತರ ಜನ ತಮ್ಮ ಮನೆಮಠಗಳನ್ನು ತೊರೆದು ಚಳವಳಿಯಲ್ಲಿ ಧುಮುಕಲಿಲ್ಲವೇ? ಹಾಗೇ, ಇಂದಿನ ಪ್ರಜಾಸತ್ತೆಯಲ್ಲಿಯೂ ಸಹ ಹಿರಿಯ ನಾಯಕರ ಕರೆಗೆ ಬೆಲೆ ಇದೆ, ಆದರೆ ಅಂತಹ ವರ್ಚಸ್ಸಿನ ಹಿರಿಯ ನಾಯಕರುಗಳ ಕೊರತೆ ಬಹಳ ಎದ್ದು ಕಾಣುತ್ತದೆ.  ದೇಶದ ಉದ್ದಗಲಕ್ಕೆ ಎಣಿಸಿದರೆ ನೂರಾರು ಪಕ್ಷಗಳು ತಲೆ ಎತ್ತಿರುವ ನಮ್ಮ ದೇಶದಲ್ಲಿ ಅಷ್ಟೇ ಪ್ರಭಾವಿಗಳಾಗಿ ಜನಾಕರ್ಷಣೆಯನ್ನು ಹೊಂದಿರುವ ಮೂರು ಜನ ಮುಖಂಡರುಗಳಿಲ್ಲ ಎಂದು ಹೇಳಲು ಖೇದವಾಗುತ್ತದೆ.  ಪ್ರಾದೇಶಿಕ ಮಟ್ಟದಲ್ಲಿ ಅನೇಕ ಜನಸ್ಪಂದನದ ವ್ಯಕ್ತಿತ್ವಗಳು ಗೋಚರಿಸಬಹುದು, ಆದರೆ ಅಂತಹ ಮುಂದಾಳುಗಳ ಧ್ವನಿಗಳು ತಮ್ಮ ತಮ್ಮ ಸ್ಥಳೀಯ ಜಂಜಾಟಗಳಲ್ಲಿ ಕಳೆದುಕೊಳ್ಳುತ್ತವೆಯೇ ವಿನಾ ದೇಶವನ್ನು ಬೆಳೆಸುವ ಮಟ್ಟಿಗೆ ಬೆಳೆಯುವುದು ಅಪರೂಪ.  ಈ ನಿಟ್ಟಿನಲ್ಲಿ, ಗುಜರಾತ್ ಮೂಲದಲ್ಲಿ ಉದ್ಭವಿಸಿ ರಾಷ್ಟ್ರವ್ಯಾಪಿ ಬೆಳೆದು ನಿಂತಿರುವ ಹೆಮ್ಮರ ಮೋದಿ ಎನ್ನಬಹುದು.

***
ನಮ್ಮ ಜನ ಸಾಮಾನ್ಯರಲ್ಲಿ ಒಂದು ಸಹಜವಾದ ಪ್ರಶ್ನೆ ಆಗಾಗ್ಗೆ ಏಳುತ್ತಿರುತ್ತದೆ: ಈ ರಾಜಕಾರಣಿಗಳಿಗೆ ಎಷ್ಟು ದುಡ್ಡು ಮಾಡಿದರೂ (ತಿಂದರೂ) ತೃಪ್ತಿಯಾಗುವುದಿಲ್ಲವಲ್ಲ, ಏಕೆ?  ಈ ಪ್ರಶ್ನೆಯ ಆಳಕ್ಕೆ ಹೋದಂತೆಲ್ಲ, ಹುಲಿ ಸವಾರಿ ಮಾಡಿಕೊಂಡು ಅಟ್ಟಹಾಸ ಮಾಡುತ್ತಿರುವ ಅನೇಕ ಜನನಾಯಕರ ಮುಖ ಗೋಚರಿಸಬಹುದು. ಇವರೆಲ್ಲ ದಾಹದ ಕೂಪವೆನ್ನುವ ಆಳವಾದ ಕೊರಕಲಿನಲ್ಲಿ ಭ್ರಷ್ಟಾಚಾರವೆನ್ನುವ ಹುಲಿ ಸವಾರಿಯನ್ನು ಮಾಡಿಕೊಂಡು ಗುಟುರು ಹಾಕಿಕೊಂಡಿರುತ್ತಾರೆ.  ಆದರೆ, ಪಾಪ, ಇವರ ಜೀವಮಾನದಲ್ಲೆಲ್ಲೂ ಇವರು ಹುಲಿಯ ಬೆನ್ನಿನಿಂದ ಕೆಳಗಿಳಿಯಲು ಸಾಧ್ಯವೇ ಇಲ್ಲದೇ, ಈ ಹುಲಿ ಸವಾರಿ ಮಾಡುತ್ತಲೇ ನಿವೃತ್ತಿ, ಮೋಕ್ಷ ಮತ್ತಿನ್ನೆಲ್ಲವನ್ನೂ ಕಂಡುಕೊಳ್ಳುತ್ತಾರೆ.  ನಮ್ಮ ರಾಜಕಾರಣಿಗಳು ಯಾವ ಸ್ಥರದಲ್ಲೇ ಇರಲಿ, ಮನೆಗೆ ಬಂದು ಮೂಟೆಗಟ್ಟಲೆ, ಸೂಟ್‌ಕೇಸುಗಟ್ಟಲೆ ಕೋಟ್ಯಾಂತರ ರೂಪಾಯಿ "ಅನುದಾನ"ವನ್ನು ತಂದು ಕೊಡುವವರಿರುವಾಗ ಹುಲಿ ಸವಾರರು ಒಲ್ಲೆ ಎಂದು ಹೇಳಲು ಸಾಧ್ಯವಿದೆಯೇ? ಉದಾಹರಣೆಗೆ, ಪ್ರತಿವರ್ಷ ಪ್ರತಿ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ಐವತ್ತು ಕೋಟಿ ಅನುದಾನ ಬರುತ್ತದೆ ಎಂದುಕೊಂಡರೆ, ಅದರ ಹತ್ತು ಪರ್ಸೆಂಟ್, ಅಂದರೆ ಐದು ಕೋಟಿ ನಮ್ಮ ಎಂ.ಪಿ.ಗಳ ಮನೆಗೆ ಬಂದು ಸೇರಿತೆಂದುಕೊಳ್ಳಿ.  ಅದನ್ನು ಬೇಡವೆಂದರೆ, ಇವರ ಹುಲಿ ಸವಾರಿಯ ವ್ಯವಸ್ಥೆಯೇ ಅಸ್ತವ್ಯಸ್ತವಾಗಿ ಕೊನೆಗೆ ಆ ಹುಲಿಯೇ ಇವರನ್ನು ಬಲಿತೆಗೆದುಕೊಳ್ಳುತ್ತದೆ.  ಅದನ್ನು ಇಟ್ಟುಕೊಂಡರೆ, ಅದು ಕಪ್ಪು ಹಣದ ಲೆಕ್ಕಕ್ಕೆ ಸೇರಿಕೊಂಡು ಮುಂದಿನ ಚುನಾವಣೆಯವರೆಗೆ ಎಲ್ಲೋ ಮೂಲೆಯಲ್ಲಿ ಕೊಳೆಯುತ್ತದೆ!  ಈ ಹುಲಿ ಸವಾರಿ ಒಂದು ಉದಾಹರಣೆ ಅಷ್ಟೇ.  ತಮ್ಮ ತಮ್ಮ ತಾಕತ್ತಿಗೆ ತಕ್ಕಂತೆ, ತಮ್ಮ ತಮ್ಮ ಪರಿಸರಕ್ಕೆ ತಕ್ಕಂತೆ, ಬೇರೆಬೇರೆ ಪ್ರಾಣಿಗಳ ಸವಾರಿ ಮಾಡಿ ತಮ್ಮ ರಾಜಕೀಯ ಬದುಕನ್ನು ಕಟ್ಟಿಕೊಳ್ಳುವವರು ಇದ್ದಾರೆ.

***
ಹುಲಿ ಸವಾರಿಯ ಬಯಕೆಯ ಮೂಲವೇನು? ಅದೆಲ್ಲಿಂದ ಉತ್ಪನ್ನವಾಯಿತು ಎಂದು ಶೋಧಿಸಿ ನೋಡಿದಾಗ ನಮ್ಮ ಚುನಾವಣಾ ಪ್ರಕ್ರಿಯೆ ಕಣ್ಣಿಗೆ ಬಿತ್ತು.  ನೀವು ಹಣಕಾಸು ವಿಲೇವಾರಿಯ ಯಾವುದೇ ಶಾಸನವನ್ನು ಬರೆಯಿಸಿ.  ಪ್ರಪಂಚದ ಪೋಲೀಸರನ್ನೆಲ್ಲ ತಂದು ನಮ್ಮ ನಮ್ಮ ಜಿಲ್ಲೆಯಲ್ಲಿ ಎಲೆಕ್ಷನ್ ಉಸ್ತುವಾರಿಕೆಗೆ ಬಿಡಿ, ತಪ್ಪಿತಸ್ತರಿಗೆ ಎಂತಹ ಕಠಿಣ ಶಿಕ್ಷೆಯನ್ನಾದರೂ ಕೊಡಿಸಿ... ನೀವು ಅದೇನೇ ತಿಪ್ಪರಲಾಗ ಹಾಕಿದರೂ, ಹಣ-ಹೆಂಡ ಮತ್ತಿತರ ವಸ್ತುಗಳನ್ನು ಹಂಚಿ ಚುನಾವಣೆ ಗೆಲ್ಲುವ ಶಕ್ತಿಗಳಿಗೆ ಕಡಿವಾಣ ಹಾಕಲಾರಿರಿ.  ಇತ್ತೀಚೆಗೆ ನಾನು ಕೇಳಿದ ಒಂದೆರಡು "ಕೊಟ್ಟು-ತೆಗೆದುಕೊಳ್ಳುವ" ಉದಾಹರಣೆಗಳಲ್ಲಿ, ಒಬ್ಬ ಮಲ್ಟಿ ಅಪಾರ್ಟ್‌ಮೆಂಟ್ ಮಾಲಿಕ ತನ್ನ ಒಂದು ವರ್ಷದ ಎಲೆಕ್ಟ್ರಿಸಿಟಿ ಬಿಲ್ ಅನ್ನು ಕೊಡದೇ ಉಳಿಸಿಕೊಂಡಿರುತ್ತಾನೆ.  ತನ್ನ ಹತ್ತಿರ ಓಟು ಕೇಳಲು ಹೋದವರಿಗೆ, ’ಈ ಬಿಲ್ ಅನ್ನು ಕಟ್ಟಿ ಬಾ...’ ಎಂದು ಬಿಲ್ ಕೊಟ್ಟು ಕಳುಹಿಸುತ್ತಾನೆ.  ಒಂದು ಪಕ್ಷದವರಿಗೆ ಕರೆಂಟ್ ಬಿಲ್, ಮತ್ತೊಂದು ಪಕ್ಷದವರಿಗೆ ನೀರಿನ ಬಿಲ್ ಕೊಟ್ಟರೆ, ಈ ರೀತಿಯ ಲೇವಾದೇವಿಯನ್ನು ಯಾರು ಹೇಗೆ ಕಂಡು ಹಿಡಿಯಲು ಸಾಧ್ಯ?  ನಮ್ಮ ಜನಗಳ ದುಡ್ಡೇ ಈ ರೀತಿ ತಿರುತಿರುಗಿ ಬೇನಾಮಿ ಖರ್ಚಾದಂತೆ ಕಂಡು ಬರುತ್ತಿದೆ ಎಂದು ಯಾರಿಗೆ ಹೇಳೋದು, ಯಾರಿಗೆ ಕೇಳೋದು?  ಒಂದು ಲೋಕಸಭಾ ಚುನಾವಣೆಯಲ್ಲಿ ಎಷ್ಟು ದುಡ್ಡು ಹೇಗೆ ಖರ್ಚು ಆಗುತ್ತದೆ ಎಂದು ನಿಮಗೆ ನಿಜವಾಗಿಯೂ ಕುತೂಹಲವಿದ್ದರೆ, ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ವರ್ಷದ ಅವಧಿಯಲ್ಲಿ ಎರಡು ಬಾರಿ ಸೋತ ಮಧು ಬಂಗಾರಪ್ಪ ಅವರನ್ನು ಕೇಳಿ ನೋಡಿ!

ಒಂದು ಸಮೀಕ್ಷೆಯ ಪ್ರಕಾರ ಒಂದು ಜಿಲ್ಲೆಯ ಚುನಾವಣೆಯ ಖರ್ಚು ಕಡಿಮೆ ಎಂದರೆ ನೂರು ಕೋಟಿ ರುಪಾಯಿಗಳು!  ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ ನೀರಿನಂತೆ ಹಣ ಹರಿದು ಇನ್ನೂ ಹೆಚ್ಚು ಖರ್ಚಾಗಿರುವ ಉದಾಹರಣೆಗಳು ಕೂಡಾ ಇವೆ.  ಈ ನೂರು ಕೋಟಿಯನ್ನು ಒಬ್ಬ ಅಭ್ಯರ್ಥಿ ಅನೇಕ ಮೂಲಗಳಲ್ಲಿ "ಸಂಪಾದಿಸ"ಬಹುದು.  ಪಾರ್ಟಿ ಫಂಡಿನಿಂದ ದುಡ್ಡು ಹರಿಯಬಹುದು, ಉಳ್ಳವರ ಕಿಸೆಯಿಂದ ಹರಿದು ಬಂದಿರಬಹುದು, ತಾವೇ (ವಾಮಮಾರ್ಗದಲ್ಲಿ) ಕೂಡಿ ಹಾಕಿದ ಫಂಡ್ ಇರಬಹುದು, ಅಥವಾ ಇತರರ "ದೇಣಿಗೆ" ಇರಬಹುದು... ಇಷ್ಟೆಲ್ಲಾ ಖರ್ಚು ಮಾಡಿ, ಗೆಲ್ಲುವ, ಗೆದ್ದು ಮುನ್ನುಗ್ಗುವ ಛಲದ ಮೂಲ - ಈ (ಬಂಡವಾಳ) ದುಡ್ಡಿನ ನೂರು ಪಟ್ಟು ದುಡ್ಡು ಮಾಡುವುದು.  ಹೀಗೆ ದುಡ್ಡು ಮಾಡುತ್ತಾ ಮಾಡುತ್ತಾ, ಇವರುಗಳು ಬಿದ್ದ ಕೂಪದ ಆಳ ಹೆಚ್ಚಾದಂತೆಲ್ಲ, ಇವರುಗಳು ಏರುವ ಹುಲಿಯ ಕೊಬ್ಬು ಏರುತ್ತಲೇ ಹೋಗುತ್ತದೆ.

ಇನ್ನೈದು ವರ್ಷ ಕೇಂದ್ರದಲ್ಲಿ ಸ್ಥಿರ ಸರ್ಕಾರ, ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಧೂಳೀಪಟ - ಇವೆರಡರ ಮೊತ್ತ, ಕರ್ನಾಟಕದ ಅಸ್ಥಿರ ರಾಜಕಾರಣ, ಅಥವಾ "ಪ್ರಬಲ"ವಾದ ಪಕ್ಷದ ಆಡಳಿತ.  ಒಮ್ಮೆ ಪ್ರಬಲ ಸರ್ಕಾರದ ಆಡಳಿತವೆಂದರೆ ಅದು ಮೂರು, ಐದು, ಹತ್ತುವರ್ಷಗಳ ವರೆಗೆ ನಿರಂತರವಾಗಿ ಮುಂದೆ ಹೋಗುತ್ತಲೇ ಇರಬಹುದು.  ಈ ಹಂತದಲ್ಲಿಯೇ ತಮ್ಮ ತಮ್ಮ ಪಕ್ಷದ ನಿಷ್ಠತೆಯನ್ನು ಒರೆಗಲ್ಲಿಗೆ ಹಚ್ಚಿ ನೋಡುವ ಕೆಲವರು, ಅವಕಾಶ ಸಿಕ್ಕಿದ್ದೇ ತಡ ಜಿಗಿದರು.  ಇನ್ನು ಕೆಲವರು, ನೀತಿ, ನಿಯಮ, ಸತ್ಯಸಂಧತೆಯ ಹಿನ್ನೆಲೆಯಲ್ಲಿ ರಾಜೀನಾಮೆ ಬಿಸಾಡಿದರು.  ಇನ್ನು ಕೆಲವರು ಗೆದ್ದೆತ್ತಿನ ಬಾಲ ಹಿಡಿದರು.

***
ಗೆದ್ದು ಶಾಸಕ, ಸಂಸದನಾಗಿ ಆರಿಸಿ ಬಂದ ವ್ಯಕ್ತಿಗೆ ಮುಖ್ಯ ಎರಡು ಗುರಿಗಳಿವೆ: ತಮ್ಮ ಮೂಲ ಬಂಡವಾಳವನ್ನು ದ್ವಿಗುಣ-ತ್ರಿಗುಣ (ಉಲ್ಬಣ) ಗೊಳಿಸುವುದು, ತಮ್ಮ ಕಾರ್ಯಕರ್ತ-ಹಿತೈಷಿ-ಸಂತಾಪಕರ ನಡುವೆ ತಮ್ಮ ಪಾರಮ್ಯವನ್ನು ಮೆರೆಯುವುದು.  ಇವೆರಡೂ ಒಂದಕ್ಕೊಂದು ಪೂರಕವಾಗಲು ಸಾಧ್ಯವಾಗುವ ಸುಲಭ ವಿಧಾನವೇ - ಮಂತ್ರಿಯಾಗುವುದು!  ಈ ಸುಲಭ ಫಾರ್ಮುಲಾವನ್ನು ಮನದಟ್ಟು ಮಾಡಿಕೊಂಡ ರಾಜಕಾರಣಿಗಳೆಲ್ಲ ರಾತ್ರೋರಾತ್ರಿ ಮುತ್ಸದ್ದಿಗಳಾಗಿ, ಹಿರಿಯ ಹೋರಾಟಗಾರರಾಗಿ ವಿಜೃಂಭಿಸುವುದು.  ಮೊದಲೆಲ್ಲ ಐದು ಬಾರಿ ಗೆದ್ದು ಶಾಸಕರಾದರೂ ಮಂತ್ರಿ ಪದವಿಯನ್ನು ಕೇಳದೇ ತಮ್ಮ ಪಾಲಿಗೆ ಬಂದದ್ದನ್ನು ಪಾಲಿಸುವ ಪಕ್ಷನಿಷ್ಠರಿದ್ದರು. ಆದರೆ ಇಂದು, ಕೇವಲ ಎರಡು ಸಾರಿ ಶಾಸಕರಾಗಿ ಒಂದು ಕ್ಷೇತ್ರದಿಂದ ಆರಿಸಿ ಬಂದವರೆಲ್ಲ ಮಂತ್ರಿಗಳಾಗುವ ಕನಸು ಕಾಣುವವರಾಗಿದ್ದಾರೆ.  ಇರುವ ಇನ್ನೂರು ಚಿಲ್ಲರೆ ಶಾಸಕರೆಲ್ಲರಿಗೂ ಒಂದೊಂದು ಪದವಿ ಬೇಕು - ಅವರು ಪರ-ವಿರೋಧ ಯಾವುದೇ ಪಕ್ಷದಲ್ಲಿರಲಿ!

***
ಈ ಎಲ್ಲ ಗೊಂದಲಗಳ ನಡುವೆ ತಮ್ಮ ತಮ್ಮ ಕ್ಷೇತ್ರಗಳ ಬೆಳವಣಿಗೆಯನ್ನು ನೋಡುವವರು ಯಾರು? ತಮ್ಮ ತಮ್ಮ ಊರು, ಜಿಲ್ಲೆ, ರಾಜ್ಯಗಳನ್ನು ಬೆಳೆಸುವವರಾರು? ಎಲ್ಲರೂ ದುಡ್ಡು ಮಾಡಿಕೊಂಡಿದ್ದರೆ, ಅದಕ್ಕೆ ಮಿತಿಯೆಂಬುದೇ ಇಲ್ಲವೇ? ಇವರೆಲ್ಲ ಈ ರೀತಿ ದುಡ್ಡು ಮಾಡಿ ಕೊನೆಗೆ ಏನನ್ನು ಸಾಧಿಸುತ್ತಾರೆ? ಈ ರೀತಿ ಯಶಸ್ಸನ್ನು ಕಲ್ಪಿಸಿಕೊಳ್ಳುವ ನಮ್ಮ ನಡುವೆ, ದಶಕಗಳ ನಿರಂತರ ಶೋಧನೆ-ಸಂಶೋಧನೆ ಮಾಡಿ, ಮನುಕುಲದ ನಾಶಕ್ಕೆ ಟೊಂಕಕಟ್ಟಿ ನಿಂತ ಕಣ್ಣಿಗೆ ಕಾಣದ ವೈರಸ್ಸಿಗೆ ವಿರುದ್ಧವಾಗಿ ಹೋರಾಡಿ ಔಷಧಿ ಕಂಡು ಹಿಡಿಯಲು ತಮ್ಮ ಜೀವನವನ್ನೇ ಮುಡಿಪಾಗಿಡುವ ವಿಜ್ಞಾನಿಗಳು ಈ ಸಮಾಜದಲ್ಲಿ ಹುಟ್ಟುವುದು ಹೇಗೆ ಸಾಧ್ಯ?

ಇವರುಗಳು ಹೊಕ್ಕಿನಿಂತ ಆಳವಾದ ಬಾವಿಯ ದಾಹ ಇನ್ನೂ ಆಳಕ್ಕಿಳಿಸುತ್ತದೆ, ಅದು ಬತ್ತುವುದೂ ಇಲ್ಲ ಹಾಗೂ ತುಂಬುವುದೂ ಇಲ್ಲ ಎನ್ನುವ ಜಾಯಮಾನದ್ದು.  ಈ ವ್ಯವಸ್ಥೆಯೇ ನಮ್ಮ ನಡುವೆ ಭ್ರಷ್ಟಾಚಾರಕ್ಕೆ ಇಂಬುಕೊಡುವುದು.  ಒಬ್ಬ ಹಸಿದ ನಿರಕ್ಷರ ಬಡವನಿಗೆ ಸಾವಿರ ರೂಪಾಯಿ ತೋರಿಸಿ ಚುನಾವಣೆಯಲ್ಲಿ ಮತಹಾಕುವಂತೆ ಅಂಗಲಾಚಿ ಗೆಲ್ಲುವುದರಲ್ಲಿ ಏನು ದೊಡ್ಡತನವಡಗಿದೆ ಎಂದು ನಾವೆಲ್ಲ ಸಹಿಸಿಕೊಂಡು ಬಂದಿದ್ದೇವೋ ಎಂದು ಬೇಸರವಾಗುತ್ತದೆ.  ಇಂತವರೆಲ್ಲ ನಮ್ಮನ್ನು (ಏನೂ ಕೆಲಸ ಮಾಡದೆ) ಆಳುವವರು, ಇಂತವರನ್ನು ಸಹಿಸಿಕೊಳ್ಳುವ ನಾವು (ಕೈಲಾಗದ) ಪ್ರಜೆಗಳು!

ಇದು ಇಂದು ನಿನ್ನೆಯದಲ್ಲ - ಹಿಂದೆ ಆಗಿದೆ, ಇಂದು ಆಗುತ್ತಿದೆ, ಮುಂದೆ ಎಂದೆಂದೂ ಆಗುತ್ತದೆ, ಆಗುತ್ತಲೇ ಇರುತ್ತದೆ!

Saturday, April 12, 2014

... ಎನ್ನಾರೈ ಗಳು ಒಂಥರಾ ಸಪ್ಪೆ ನಾಯ್‌‍ಗಳು...

ಬಹಳ ದಿನಗಳ ನಂತರ ಫೋನ್‌ನಲ್ಲಿ ಮಾತಾಡಕ್ ಸಿಕ್ಕಿದ್ದು ನನ್ನ ಹಳೆಯ ಸ್ನೇಹಿತ ಸುಬ್ಬ.

"ಏನೋ, ಸಮಾಚಾರ? ಹ್ಯಾಗಿದೀಯಾ? ಏನ್ ಕಥೆ?" ಅಂತ ಲೋಕೋಭಿರಾಮವಾಗಿ ಕೇಳಿದೆ,

"ಏನಿಲ್ಲ, ಚೆನ್ನಾಗಿದ್ದೀನಿ, ಬೆಳೆ, ಕೊಯ್ಲು, ಎಲೆಕ್ಷನ್ನು ಅಂತೆಲ್ಲಾ ಸ್ವಲ್ಪ ಬ್ಯುಸಿ ಅಷ್ಟೇ...ನೀನ್ ಹೆಂಗಿದಿ? ಅದೆಷ್ಟು ದಿನಾ ಆಯ್ತ್ ಮಾರಾಯ ನಿನ್ ಹತ್ರ ಮಾತಾಡೀ, ಬಾಳಾ ಖುಷಿ ಆಯ್ತು ನೋಡ್"

"ನಮಿಗೇನ್ ಆಗತ್ತೆ, ನಾವೆಲ್ಲಾ ಚೆನ್ನಾಗೇ ಇದ್ದೀವಿ, ಆರಕ್ಕೇರಲ್ಲ ಮೂರಕ್ಕಿಳಿಯಲ್ಲ" ಅಂದೆ.

"ಹೌದು, ಅದೇನೋ ಮಾರ್ಕೆಟ್ಟುಗಳು ಬೀಳ್ತಾ ಇದಾವೇ ಅಂತ ಕೇಳ್ದೆ, ಏನ್ ನಡೀತಾ ಇದೆ?" ಎಂದು ಕಾಳಜಿ ತೋರಿಸಿದ.

"ಅದೇನಿಲ್ಲ, ಲಾಸ್ಟ್ ಈಯರ್ ಮಾರ್ಕೆಟ್ಟುಗಳೆಲ್ಲ ಮೇಲ್ ಹೋಯ್ತಲ್ಲಾ, ಈ ವರ್ಷ ಒಂದಲ್ಲಾ ಒಂದು ಕಾರ್ಣ ಹಿಡಕೊಂಡು ಅವಕಾಶ ಸಿಕ್ಕಾಗೆಲ್ಲ ಕೆಳಗಡೆ ಬೀಳ್ತಾನೇ ಇವೆ. ಒಂದ್ಸರ್ತಿ ಚೈನಾದಲ್ಲಿ ಪ್ರಾಬ್ಲಮ್ಮು ಅಂತ ಬಿತ್ತು, ಇನ್ನೊಂದ್ಸರ್ತಿ ಎಮರ್ಜಿಂಗ್ ಮಾರ್ಕೇಟ್ಟಲ್ಲಿ ಪ್ರಾಬ್ಲಂ ಅಂತ ಬಿತ್ತು, ಮತ್ತೊಂದ್ ಸರ್ತಿ ರಷ್ಯಾದ ಪೂಟಿನ್ನ್ ದೆಸೆಯಿಂದ ಬಿತ್ತು...ಇನ್ನೂ ವರ್ಷ ಶುರುವಾಗಿ ಮೂರು ತಿಂಗಳು ಮುಗ್ದು ನಾಕಕ್ಕೆ ಬಿತ್ತು - ಆಗ್ಲೆ ನಾಕ್ ಸರ್ತಿ ಮಗುಚಿಕೊಂತು ನೋಡು..." ಎಂದು ಸಿಎನ್‌ಬಿಸಿ ಡಾಮಿನಿಕ್ ಚು ಥರ ನನ್ನ ಸ್ಟಾಕ್ ಮಾರ್ಕೆಟ್ ತತ್ವವನ್ನು ಅರುಹಿದೆ.

ನನ್ನ ಮಾತನ್ನ ಅರ್ಧದಲ್ಲೇ ತುಂಡು ಮಾಡಿ, "ಅಲ್ಲಾ ಮಾರಾಯಾ, ಆ ಪುಟಿನ್ ನೋಡು, ಹೆಂಗ್ ಗೆದ್ಕೋಂಬಿಟ್ಟಾ, ಕ್ರಿಮಿಯಾ ಅಂತಾ ಅಲ್ಲಿಗೇ ನಿಲ್ಲುಸ್ತಾನೋ, ಅಥವಾ ಇನ್ನೂ ತನ್ನದೇ ದೊಡ್ಡು ಅಂತ ಮಂತ ಶುರು ಹಚ್ಗೊಂತಾನೋ?"
"ಅವ್ನು ಏನ್ ಮಾಡ್ತಾನೋ ಕಾಣೇ, ಆದ್ರೆ ನಮ್ ಕಡೆಯವ್ರು ಸ್ಯಾಂಕ್ಷನ್ನು, ಗೀಂಕ್ಷನ್ನು ಅಂತ ಫೋರ್ಸ್ ಹಾಕ್ತಾನೇ ಅವ್ರೆ" ಅನ್ನೋಷ್ಟರಲ್ಲಿ,

"ಏ ಸುಮ್ನಿರೋ, ನಿಮ್ ಸ್ಯಾಂಕ್ಷನ್ನುಗಳ ಮುಖಾ ನೋಡ್ಕೊಂಡು ಅದುಮಿಕ್ಯಂಡ್ ಇರೋಕೇ ಅವ್ನೇನು ಸದ್ದಾಮ್ ಹುಸೇನ್ ಕೆಟ್ಟೋದ್ನೇ? ಒಂದ್ಸರ್ತಿ ಕಮ್ಯುನಿಷ್ಟ್ ಆದ್ರೇ ಯಾವಾಗ್ಲೂ ಕಮ್ಮುನಿಷ್ಟೇ ತಿಳಕಾ" ಎಂದು ಅವನ ಪ್ರಪಂಚದ ಇತಿಹಾಸದ ಪ್ರಹಸನವನ್ನು ನಿವೇದಿಸಿದ.

ಇನ್ನು ಇವನ ಹತ್ರ ರಷ್ಯದ ವಿಚಾರ ಮಾತಾಡ್ಬಾರ್ದು ಅಂದುಕೊಂಡು, ನಿಧಾನವಾಗಿ ಟಾಪಿಕ್ ಬದಲಾಯಿಸಿದೆ, "ಹೌದು, ಅಡಿಕೆ ಬೆಳೆ ಬಂಪರ್ ಬಂದಿದೆ ಅಂತ ಕೇಳ್ದೆ, ಹೆಂಗಿದೆ ವ್ಯವಹಾರ?"

"ಕೆಂಪ್ ಅಡಿಕೆಗೆ ಸ್ವಲ್ಪ ಬೆಲೆ ಬಂದ್ ನಾವ್ ಬಚಾವಾದ್ವಿ, ಇಲ್ಲಾಂದ್ರೆ ಈ ವರ್ಷ ಬಾಳ ಕಷ್ಟ ಇತ್ತು. ಎಲ್ಲ ಕಡೆ ಬೆಲೆ ಜಾಸ್ತಿ, ದುಡ್ಡೀಗ್ ಬೆಲೇನೇ ಇಲ್ಲ, ಹೆಂಗ್ ನಮ್ ಜೀವ್ನ ನಡೀತಾ ಇದೆ ಅಂತ ಬಿಡಿಸಿ ಹೇಳೋದೇ ಕಷ್ಟಾ"

"ಬರೀ ಕೃಷಿ ಅಂತ ನಂಬ್ಕೊಳ್ಳೋದ್ ಬಿಟ್ಟು, ನೀನು ಒಂದಿಷ್ಟು ಎಲೆಕ್ಷನ್ನ್ ಟೈಮಲ್ಲಿ ಕಾಸ್ ಮಾಡ್ಕೊಳ್ಳೋದಪ್ಪಾ"

"ಏ ಸುಮ್ನಿರೋ ಮಾರಾಯಾ, ಇವರು ಕೊಡೋ ಎಂಜಲು ಕಾಸಿಗೆ ನಾವ್ ಕೈ ಚೆಲ್ಲಿಕೊಂಡು ಕೂತ್ರೆ ತೋಟದ ಕೆಲ್ಸಾ ಎಲ್ಲಾ ಮಠ ಹತ್ತ್ ಹೋಗುತ್ತೆ, ಅದರ ಸವಾಸ ಅಲ್ಲ..."


"ಏ ಯಾಕೋ ಹಂಗಂತಿ? ನಾನು ಎಲೆಕ್ಷನ್ನ್ ಕಮೀಷನ್ನ್ ವೆಬ್ ಸೈಟ್ ನೋಡಿದ್ನಪ್ಪಾ, ಒಂದೊಂದು ಕ್ಯಾಂಡಿಡೇಟ್‌ಗಳು ಫೈಲ್ ಮಾಡಿರೋ ಅಫಿಡೇವಿಟ್ಟ್ ನೋಡಿದ್ರೆ, ಎಲ್ಲೆಲ್ಲೂ ಕೋಟಿ ಕೋಟೀ, ಎಲ್ಲಿಂದ ಬಂತೋ ಇವುಗಳ್ ಹತ್ರ ಇಷ್ಟೊಂದು? ಒಬ್ಬೊಬ್ರ ಹತ್ರ ನೂರು, ಸಾವಿರ ಕೋಟಿ..." ಎಂದು ನಿಜವಾಗಿ ಆಶ್ಚರ್ಯ ವ್ಯಕ್ತಪಡಿಸಿದೆ.

"ಅದೇ ನಿಜವಾದ ಮರ್ಮ ನೋಡು. ಎಷ್ಟೋ ಜನ ನೆಟ್ಟಗೆ ಹೈಸ್ಕೂಲೂ ಪಾಸಾಗಿರಂಗಿಲ್ಲ, ಲೆಕ್ಕಕ್ಕೆ ತೋರಿಸಿರೋದೆ ಕೋಟಿಗಟ್ಟಲೆ ಅಂದ್ರೆ ಇನ್ನು ಒಳಗೆಷ್ಟು ಇಟ್ಟಿರಬಹುದು?"

"ಹಂಗಂದ್ರೆ ಇವುಗಳ ಮುಂದೆ ನಮ್ಮ ವಾರನ್ನ್ ಬಫೆಟ್ಟು, ಬಿಲ್ ಗೇಟ್ಸ್ ಇವ್ರೆಲ್ಲ ಲೆಕ್ಕಕ್ಕೇ ಇಲ್ಲ..." ಅಂತ ಲೇವಡಿ ಮಾಡಿದೆ, ಅವನು ಅದನ್ನು ನಿಜ ಅಂದುಕೊಂಡು,

"ಮತ್ತಿನ್ನೇನು, ಆ ಫೋರ್ಬ್ಸು, ಫಾರ್ಚೂನ್ ನವರಿಗೆಲ್ಲ ಇಂಡಿಯಾದ್ ಬಗ್ಗೆ ಒಂದು ವರದಿ ಮಾಡೋಕ್ ಹೇಳು, ನಮ್ಮಲ್ಲಿ ನಿಜವಾಗಿ ಎಷ್ಟು ದುಡ್ಡಿದೇ ಅಂತ ಗೊತ್ತಾಗುತ್ತೆ?"

"ಹಾಗಾದ್ರೆ, ನಮ್ ಅಮೇರಿಕದ ಬಿಲಿಯನ್ನುಗಳೆಲ್ಲ ಲೆಕ್ಕಕ್ಕೇ ಇಲ್ಲ ಅನ್ನು?" ಎಂದು ಮೂದಲಿಸಿದ್ದಕ್ಕೆ...

"ಗುರುವೇ, ನಿನಗೇನ್ ಗೊತ್ತಿದೆ ಹೇಳು, ಒಂಥರ ಇನ್ನೂ ಹೈಸ್ಕೂಲ್ ಹುಡುಗನಂಗೆ ಮಾತಾಡ್ತಿ ನೋಡು. ಕಳೆದ ವರ್ಷ ನಿನ್ನ ಅಮೇರಿಕದ ಇಂಡೆಕ್ಸ್‌ಗಳು ಅಬ್ಬಬ್ಬ ಅಂದ್ರೆ ಎಷ್ಟು ಪರ್ಸೆಂಟ್ ಮೇಲಕ್ಕ್ ಹೋದ್ವು ಹೇಳೂ, ಇಪ್ಪತ್ತೋ ಮೂವತ್ತೋ ಪರ್ಸೆಂಟ್ ತಾನೆ? ಕಳೆದ ಐದು ವರ್ಷದಲ್ಲಿ ಮಾರ್ಕೆಟ್ಟು ಕೆಳಗ್ ಬಿದ್ದದ್ದು ಡಬ್ಬಲ್ಲೋ ತ್ರಿಬ್ಬಲ್ಲೋ ಆಯ್ತಲ್ಲಾ? ಅದೇ ದೊಡ್ದು ತಾನೆ? ಹುಚ್ಚಪ್ಪಾ, ಕೇಳು...2009 ರಲ್ಲಿ ಹಾಕಿರೋ ಎಲೆಕ್ಷನ್ನ್ ಪೇಪರ್‌ಗಳನ್ನ 2014 ರಲ್ಲಿ ಹಾಕಿರೋ ಎಲೆಕ್ಷನ್ನ್ ಪೇಪರುಗಳಿಗೆ ಕಂಪೇರ್ ಮಾಡಿ ನೋಡು. ನಮ್ಮ ದೇಶದ ಒಬ್ಬೊಬ್ಬ ರಾಜಕೀಯ ನಾಯಕನ ಪರ್ಸನಲ್ಲ್ ಸ್ವತ್ತು ಅದೆಷ್ಟು ಸಾವಿರ ಪರ್ಸೆಂಟ್ ಬೆಳೆದಿದೆ ಅಂತ? ಒಂದ್ ಕೆಲ್ಸಿಲ್ಲ, ಉದ್ಯಮಾ ಇಲ್ಲಾ, ಹೇಳಿ-ಕೇಳಿ ಸಮಾಜ ಸೇವೆ ರಾಜಕೀಯದ ಕೆಲ್ಸ, ಎಲ್ಲಿ ನೋಡಿದ್ರೂ ಇನ್‌ಫ್ಲೇಷನ್ನ್ ಜಾಸ್ತಿ ಅಗಿರೋ ಹೊತ್ನಲ್ಲಿ ಅದ್‍ ಹೆಂಗೆ ಐದು ವರ್ಷದ ಹಿಂದೆ ಹತ್ತು ಕೋಟಿ ಡಿಕ್ಲೇರ್ ಮಾಡ್ದೋನು ಈ ಸರ್ತಿ ನೂರು ಕೋಟಿ ಡಿಕ್ಲೇರ್ ಮಾಡ್ತಾನೆ? ಅದನ್ನ್ ಯಾವ್ ಇಂಡೆಕ್ಸಿಗೆ ಹೋಲಿಸ್ತಿ?"

"ಹೌದೋ ಸುಬ್ಬಾ ಎಲ್ಲಿಂದ ಬರುತ್ತೆ ದುಡ್ಡು ಇವ್ರಿಗೆ? ಕೆಲವ್ರದ್ದಂತೂ 760, 800 ಕೋಟಿಗಳಷ್ಟು ಒಟ್ಟು ಮೊತ್ತ ಅಂತಲ್ಲಪ್ಪಾ?"

"ಏಳ್ನೂರು ಕೋಟಿ ಬಾಳಾ ಕಡಿಮೆ ಆಯ್ತು, ಇನ್ನೂ ಸಾವ್ರ ಸಾವ್ರ ಕೋಟಿಗಟ್ಟಲೇ ಇದ್ದೋರು ಇದಾರೆ, ತಿಳ್ಕಾ"

"ಮತ್ತೆ ಇವ್ರ ಹತ್ರ ಇಷ್ಟೊಂದು ದುಡ್ಡು ಇರೋರ್, ರಾಜಕೀಯಾನಾದ್ರೂ ಯಾಕ್ ಮಾಡ್ತಾರೆ, ಸುಮ್ನೆ ತಾವ್ ತಮ್ದು ಅಂತ ಇರಬಾರ್ದಾ?"

"ಅದೇ ವಿಶೇಷ ನೋಡು, ಅದು ನಿಮ್ಮಂತೋರಿಗೆ ಅರ್ಥ ಆಗಲ್ಲ, ಯಾರು ರಾಜಕೀಯಕ್ಕ್ ಬರ್ತಾರೆ ಅಂತ ತಿಳಕಂಡೀ? ದುಡ್ಡ್ ಇಲ್ದೋನ್ ದುಡ್ಡು ಮಾಡೋಕ್ ಬರ್ತಾನೆ, ದುಡ್ಡ್ ಮಾಡ್ದೋನ್ ಅದನ್ನ ಉಳಸ್ ಕೊಳೋಕ್ ಬರ್ತಾನೆ".

"ಅಲ್ಲಾ ಮಾರಾಯಾ, ನಾವ್ ಸುಮ್ನೇ ಊರೂ-ಕೇರೀ, ದೇಶ-ಮನೆ ಬಿಟ್ಟು ಅದನ್ನ ಇದನ್ನ ಓದಿ, ಇತ್ಲಾ ಕಡೇ ಬಂದಿದ್ದೆಲ್ಲಾ ವೇಷ್ಟ್ ಆಯ್ತು ಅನ್ನು, ಸುಮ್ನೇ ಯಾವ್ದಾರ ಪಾರ್ಟಿ ಪಕ್ಷದ ಹೆಸ್ರು ಹಿಡಕೊಂಡ್ ಒಂದಿಪ್ಪತ್ತ್ ವರ್ಷ ಓಡಾಡಿದ್ರೆ ನಾವೂ ಕೋಟಿ-ಕೋಟಿ ಎಣಿಸ್ಬೋದಿತ್ತು..." ಈ ಮಾತಿನಿಂದ ಸುಬ್ಬನಿಗೆ ಸ್ವಲ್ಪ ಸಿಟ್ಟು ಬಂತು ಅಂತ ಅನ್ಸುತ್ತೆ, ನನ್ನ ಮಾತಿನ್ನ ಮಧ್ಯೆ ಹೀಗನ್ನೋದೇ,

"ಅವಾಗ ಇದು ಎಲ್ಲಿಗೆ ಬರುತ್ತೆ ಗೊತ್ತೇನೋ? ನಿನ್ನಂಥಾ ಎನ್ನಾರೈಗಳು ಒಂಥರಾ ಸಪ್ಪೆ ನಾಯ್‌ಗಳು ಇದ್ದಂಗೆ, ಇತ್ಲಾಗ್ ಬೊಗೊಳೋದೂ ಇಲ್ಲ, ಅತ್ಲಾಗ್ ಕಚ್ಚೋದೂ ಇಲ್ಲ. ನಾಯಿ ಅಂದ್ರೆ ನಾಯಿ ಇದ್ದ ಹಾಗೆ ಇರ್‌ಬಕು, ಇವೆಲ್ಲ ನಮಿಗ್ ಬ್ಯಾಡಾ ಅಂತ ಬಿಟ್ಟ್ ವಿರಾಗಿಗಳಾಗ್ ಹೋದ್‌ಮೇಲೆ ಅವಾಗವಾಗ ಇಂಥಾ ಚಿಂತಿ ಯಾಕ್ ಹಚ್‌ಗಂತೀರ್ ಹೇಳು? ಅದರಿಂದ ಏನ್ ಉದ್ದಾರಾಗಿದೆ? ಒಂದ್ಸರ್ತಿ ಮೂಡ್ ಬಂದಾಗ ದುಡ್ಡೇನು ಸರ್ವಸ್ವ ಅಲ್ಲಾ ಅಂತಾ ಬಾಷ್ಣಾ ಬಿಗೀತಿ, ಈಗ ಇಲೆಕ್ಷನ್ನ್ ಅಂಕಿ-ಅಂಶ ನೋಡ್ಕೊಂಡು ದುಡ್ಡೇ ದುಡ್ಡೂ ಅಂತೀ, ನಿನಗೂ ಈ ರಾಜಕಾರ್ಣಿಗಳಿಗೂ ಏನರ ವ್ಯತ್ಯಾಸ ಐತಾ?" ಎಂದು ಎಲೆ-ಅಡಿಕೆ ಹಾಕ್ಕೊಂಡು ಚೆನ್ನಾಗ್ ಉಗದಾ... ಆದ್ರೆ ನಾನು ಬಿಟ್ಟು ಕೊಡ್ಲಿಲ್ಲಾ,

"ನಿಮ್ದು ದೊಡ್ಡ ವ್ಯಾಪಾರೀ ಮನೋಭಾವ್ನೆ ದೇಶ, ನಿನ್ನಂಥೋರ್ ಹತ್ರ ತಪ್ಪೂ-ಸರಿ ಅಂತ ಏನ್ ಮಾತಾಡೋದ್ ಹೇಳು? ಭ್ರಷ್ಟಾಚಾರ ವ್ಯವಸ್ಥೆನಲ್ಲಿ ಪ್ರತಿ ಓಟಿಗೆ ಎರಡೆರಡು ಸಾವ್ರ ಅಂತ ಮಾರ್ಕೋಳ್ಳೋರು ನೀವು" ಅಂತ ನಾನು ಧ್ವನಿ ಜೋರು ಮಾಡಿದೆ,

’ನೋಡು, ಸುಖಾ ಸುಮ್ನೇ ಅನ್ನಬ್ಯಾಡ. ಭ್ರಷ್ಟಾಚಾರ ವ್ಯವಸ್ಥೇ ಎಲ್ಲಾ ಕಡೆ ಇದೆ, ನಿಮ್ಮಲ್ಲಿ ನಾಜೂಕಾಗಿ ಸಗಣೀನ ಫೋರ್ಕ್ ತೊಗೊಂಡ್ ತಿಂತೀರಿ, ಆ ಚೈನಾದವ್ರು ಚಾಪ್ ಸ್ಟಿಕ್ಕ್‌ನಲ್ಲಿ ತಿಂತಾರೆ, ಮತ್ತೊಂದ್ ಕಡೆ ಚಮಚಾದಲ್ಲಿ ತಿಂತಾರೆ, ಆದ್ರೆ ನಮ್ ಕಡೆ ಅವಕಾಶ ಸಿಕ್ಕಾಗ ನೀಟಾಗಿ ಕೈ ಹಾಕಿ ಕಲಸಿಗೊಂಡು ತಿಂತಾರೆ. ಅಲ್ಟಿಮೇಟ್ಲಿ ಅಂತಾ ಏನ್ ವ್ಯತ್ಯಾಸ ಇಲ್ಲ, ಎಲ್ಲಾ ಒಂದೇ"

"ಏನ್ ಅಂತ ಮಾತಾಡ್ತಿಯೋ, ಏನೇ ಆದ್ರೂ ಅಮೇರಿಕದ ಜನ ನಿಮ್ ಥರ ದುಡ್ಡಿಗ್ ಓಟ್ ಹಾಕೋದಿಲ್ಲ, ತಿಳಕಾ..."

"ನೀ ಏನ್ ಮಾತಾಡ್ತಿದಿಯೋ, ಇಷ್ಟು ವರ್ಷ ಅಲ್ಲಿದೀ, ಇಷ್ಟೋ ಗೊತ್ತಾಗಂಗಿಲ್ಲ ಅಂದ್ರೆ ಹೆಂಗೆ? ಗುರುವೇ ಎಲೆಕ್ಷನ್ನ್ ಕ್ಯಾಂಫೇನ್ ಫಂಡು ಅಂಥ ಕಾರ್ಪೋರೇಷನ್ನುಗಳು ಪಕ್ಷಕ್ಕೆ ಕೊಡೋ ದುಡ್ಡೂ ಎಲ್ಲಿಂದ ಬರುತ್ತೆ ಎಲ್ಲೀಗ್ ಹೋಗುತ್ತೆ?"

"ಅದು ಲೀಗಲೈಜ್ಡ್ ವ್ಯವಸ್ಥೆ ಅಲ್ವಾ..."

"ನಿನ್ ತಲೆ, ಲೀಗಲ್ಲು... ನಾವು ನಿಮ್ಮನ್ನ ಸಪೋರ್ಟ್ ಮಾಡ್ತೀವಿ ಅಂತ ಪಾರ್ಟಿಗಳಿಗೆ ದೇಣಿಗೆ ಕೋಡೋದರಲ್ಲಿ ಕಂಪನಿಗಳ ಸ್ವ ಇಚ್ಚೆ ಸ್ವಾರ್ಥ ಒಂದಿಷ್ಟೂ ಇಲ್ಲಾ ಅಂದ್ರೆ ಅವರ್ಯಾಕೆ ಕೊಡ್ತಾರೆ?"

"ಅದು ಕಂಪನಿಗಳ ಲೆಕ್ಕ, ನಮ್ಮ ಜನಸಾಮಾನ್ಯರದ್ದೇನು ಅದ್ರಲ್ಲಿ ಪಾತ್ರ ಇಲ್ಲ"

"ಥೂ ನಿನ್ನ, ಅದೇ ತಪ್ಪು, ನೀನು ಕಂಪನೀನಲ್ಲಿ ಇನ್ವೆಷ್ಟ್ ಮಾಡ್ದಿ ಅಂದ್ರೆ, ಅದ್ರಲ್ಲಿ ನೀನೂ ಶಾಮೀಲೂ ಅಂತ ತಾನೇ ಅರ್ಥ. ನಿನಗೆ ಬೇಕೋ ಬೇಡ್ವೋ ನೀನಿರೋ ವ್ಯವಸ್ಥೆ ನಿನ್ ಸುತ್ಲೂ ಸುತ್ತ್ ಕೊಳ್ಳೋದೇ ಮಾಡರ್ನ್ ಸೋಷಿಯಲ್ಲಿಸ್ಸಮ್ಮು ನೋಡು, ಒಂಥರಾ ಡೊಕೋಮೋ ಅಂಥ ನೆಟ್‌ವರ್ಕ್ ಕರೀತಾನೇ ಇರುತ್ತೆ ಎಲ್ಲ್ ಹೋದ್ರೂ ಬಿಡಂಗಿಲ್ಲ" ಎಂದು "ಡೊಕೋಮೋ..." ಅಡ್ವರ್ಟೈಸ್‌ಮೆಂಟ್ ಇಮಿಟೇಟ್ ಮಾಡಿ ಜೋರಾಗಿ ನಕ್ಕ.

"ಹಂಗಂದ್ರೆ ಎಲೆಕ್ಷನ್ನು ಅಂದ್ರೆ ಬರೀ ರೊಕ್ಕ ಇರೋರ್ ಆಟ ಅನ್ನು, ಇನ್ನು ಸಾಮಾನ್ಯರ ಪಾಲು ನಾಯಿ ಪಾಲು ?"

"ಇದು ಹೆಂಗೆ ಗೊತ್ತಾ, ಇದು ಬೈ ಡೆಫನಿಷನ್ ಯಾರು ಬೇಕಾದ್ರೂ ಭಾಗವಹಿಸೋ ಪ್ರಜಾಪ್ರಭುತ್ವ ವ್ಯವಸ್ಥೇನೇ, ಆದ್ರೆ ದುಡ್ಡಿರೋರು ದೊಡ್ಡಪ್ಪ ಅಷ್ಟೇ. ಒಂಥರಾ ಈ-ಟಿವಿ ಡ್ಯಾನ್ಸ್ ಪ್ರೋಗ್ರಾಂ ತಕಧಿಮಿತ ಬರುತ್ತಲ್ಲ ಹಂಗೆ, ಅವರ ಸ್ಲೋಗನ್ನ್ ಏನ್ ಹೇಳು? ’ಯಾರು ಬೇಕಾದ್ರು ಕುಣೀಬೋದು’ - ಆದ್ರೆ ನಾವು ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ಕೊಡ್ತೀವಿ ಅಂತ ಹಂಗೆ.

"ಸರಿ ಬಿಡು, ಇನ್ನೇನು ಎಲೆಕ್ಷನ್ನು ಮುಗಿಯುತ್ತೇ, ಅಮೇಲೇ ಕುದುರೆ ವ್ಯಾಪಾರ ಶುರು, ಒಬ್ಬೊಬ್ಬ ಎಮ್ಮೆಲ್ಲೆಗಳನ್ನ ಎಂಪಿಗಳನ್ನ ಕೊಡೊ-ಕೊಳ್ಳೋ ಆಟ ನಡೆಯುತ್ತೇ" ಅಂದೆ,

"ಈ ಎಮ್ಮೆಲ್ಲೆಗಳನ್ನ ಹೆಂಗೆ ಕೊಳ್ತಾರೆ ಅನ್ನೋದಕ್ಕೆ ತೆಲುಗಿನಲ್ಲಿ ಲೀಡರ್ ಅಂತ ಒಂದು ಸಿನಿಮಾ ಇದೆ ನೋಡು, ಅದ್ರಲ್ಲಿ ಒಂದು ಫ್ಯಾಟ್ ಕೀ ಕೊಟ್ಟು ಅದ್ರಲ್ಲಿರೋ ಎಲ್ಲಾ ಬೀರು ಅಲ್ಮೇರಾಗಳಲ್ಲಿ ನೋಟುಗಳನ್ನ ತುಂಬಿ ಇಟ್ಟಿರ್ತಾರೆ, ಅಂತದನ್ನ ಬ್ಯಾಡ ಅನ್ನೋದಕ್ಕೆ ಬಾಳಾ ಗಟ್ಟಿ ಎದೆ ಬೇಕು, ಸೋ ಐ ಡೋಂಟ್ ಬ್ಲೇಮ್ ದೆಮ್"

"ಸರಿ, ಟೈಮ್ ಆಯ್ತು...ಈ ಎಲೆಕ್ಷನ್ನಲ್ಲಿ ನಿನ್ ಪ್ರಿಡಿಕ್ಷನ್ನ್ ಏನು, ಕರ್ನಾಟಕದಲ್ಲಿ ಯಾರ್ ಬರ್ತಾರೆ, ದೇಶದ ಚುಕ್ಕಾಣೀ ಯಾರ್ ಹಿಡೀತಾರೆ?"


"ನನ್ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಕಷ್ಟ, ಗಣಿ ದೊರೆಗಳ ಸವಾಸದಿಂದ ಬಾಳ ಗಬ್ಬಿಟ್ಟ್ ಹೋಗವ್ರೆ ನಮ್ ನಾಯಕ್ರು. ಅಲ್ದೇ ಆಳೋ ಪಕ್ಷದ ಪರವಾಗಿ ಕಾಂಗ್ರೆಸ್ ಮೆಜಾರಿಟಿ ಬರ್ಬೋದು. ಆದ್ರೆ ದೇಶದಲ್ಲಿ ಸ್ವಲ್ಪ ಮೋದಿ ಅಲೆ ನಡೀತಾ ಇದೆ. ಏನಾಗತ್ತೋ ಗೊತ್ತಿಲ್ಲ"

"ಮತ್ತೇ, ಆಪೂ... ಪಾಪೂ, ಇವೆಲ್ಲ?"

"ಏ, ತೆಗಿ ತೆಗಿ, ಆಪ್ ಬರ್ಬೇಕು ಅಂದ್ರೆ, ಇನ್ನೊಂದು ಇಪ್ಪತ್ತೈದು ವರ್ಷಾನಾದ್ರೂ ಬೇಕು, ಒಬ್ಬ ಕಪಾಳ ಮೋಕ್ಷದ ನಾಯಕನಿಂದ ಇಡೀ ದೇಶದ ರಾಜ್‌ಕಾರ್ಣ ಬದಲಾಗೋಕ್ಕೆ ಸಾಧ್ಯವೇ?"

"ಯಾಕ್ ಆಗ್‌ಬಾರ್ದು?"

"ಅದೇ ನಿಂಗೊತ್ತಾಗೋಲ್ಲ ಅನ್ನೋದು. ದುಡ್ಡಿಗೆ ಓಟ್ ಮಾರ್ಕೊಳ್ಳೋ ಜನರಲ್ಲಿ ಒಂಥರ ಎನ್‌ಟೈಟಲ್ಲ್‌ಮೆಂಟ್ ಬರುತ್ತೆ. ಅದ್ಕೇ ನಮ್ ಜನ ಗಾದೆ ಮಾಡಿರೋದು - ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡಾ - ಅಂತ" ಎಂದು ದೊಡ್ಡದಾಗಿ ನಕ್ಕ.

"ಮತ್ತೇನಪ್ಪಾ ಸಮಾಚಾರ..."

"ಮತ್ತೇನಿಲ್ಲ ಗುರುವೇ, ಅಯ್ಯೋ ಅಡಿಕೇ ಮಂಡಿಗ್ ಹೋಗ್ಬೇಕು, ನಿನ್ ಹತ್ರ ಮಾತಾಡಿ ಹೊತ್ ಹೋಗಿದ್ದೇ ಗೊತ್ತಾಗಿಲ್ಲ, ಅವಾಗವಾಗ ಫೋನ್ ಮಾಡ್ತಾ ಇರು" ಎಂದು ನನ್ನ ಉತ್ತರಕ್ಕೂ ಕಾಯ್ದೆ ಫೋನ್ ಇಟ್ಟೇಬಿಟ್ಟ...ನಾನು ಒಂಥರಾ ಟಿ.ವಿ. ನೈನ್ ಬ್ರೇಕಿಂಗ್ ನ್ಯೂಸ್ ನೋಡಿದ ಶಾಕ್‌ನಲ್ಲಿ ಆಫೀಸಿನ ಕೆಲಸಕ್ಕೆ ತಿರುಗಿದೆ.

Wednesday, March 16, 2011

Facebook ಅನ್ನು ಎದುರಿಸಿ...

ಎಲ್ಲರ ಹಾಗೇ ನನ್ನದೂ ಅಂತ ಒಂದು ಫೇಸ್‌ಬುಕ್ ಅಕೌಂಟ್ ಅಂತ ಓಪನ್ನ್ ಮಾಡಿಕೊಂಡು ಅದರಲ್ಲಿ ಸುಮಾರು ನಾಲ್ಕು ವರ್ಷದಿಂದ ಒಂದಿಷ್ಟು ಗೀಚಿದ್ದು ಈಗ ಇತಿಹಾಸ... ಇ-ಮೇಲ್, ಬ್ಲಾಗು, ಕಮ್ಮ್ಯೂನಿಟಿ ಕೆಲಸ ಮೊದಲಾದ ಎಲ್ಲವಕ್ಕೂ ಆಶ್ರಯಕೊಟ್ಟು ಅವುಗಳನ್ನು ನೀರೆರೆದು ಪೋಷಿಸುವ ಅನೇಕ ಗೊಂದಲಗಳ ನಡುವೆ ಈ ಫೇಸ್‌ಬುಕ್ಕ್ ಮತ್ತು ಟ್ವಿಟ್ಟರ್ ಅಕೌಂಟುಗಳು ಸೊರಗುತ್ತಲೇ ಬಂದವು.

ಅದರಲ್ಲೂ ಇತ್ತೀಚೆಗೆ ತೆಗೆದು ನೋಡಿದಾಗ ಸುಮಾರು ೪೯ ಜನ ಫ್ರೆಂಡ್ ಲಿಸ್ಟಿನಲ್ಲಿ ಕಾಯ್ದು ಕುಳಿತಿದ್ದೂ ಕಂಡುಬಂತು, ಇವರ ಜೊತೆಯಲ್ಲಿ ಇದ್ದವರಲ್ಲಿ ನನ್ನ ಹೊಸ ಬಾಸ್ ಕೂಡ ಒಬ್ಬರು! ಈ ವರ್ಚುವಲ್ಲ್ ಪ್ರಪಂಚದ ಸಂಬಂಧಗಳೂ ಸಹ ನಮ್ಮ ಉಳಿವಿಗೆ ಅಗತ್ಯವಾಗಿರೋವಾಗ, ಅದರಲ್ಲಿನ ಪ್ರತಿಯೊಂದು ಎಳೆಗಳೂ ಕೂಡ ಪೋಷಣೆಯನ್ನು ಬೇಡುತ್ತಿರುವಾಗ ನಾನೊಬ್ಬನೇ ಕಣ್ಣು ಮುಚ್ಚಿ ಕುಳಿತುಕೊಂಡರೆ ಅದು ನನ್ನ ನಷ್ಟವಲ್ಲದೇ ಇನ್ನೇನು? ಹೀಗೆ, ಯೋಚಿಸಿಕೊಂಡಾಗೆಲ್ಲ ಫೇಸ್‌ಬುಕ್ ನಂತಹ ದೈತ್ಯ ಸಾಮಾಜಿಕ ಯೋಧನೊಬ್ಬನನ್ನು ಎಷ್ಟು ದಿನವಾದರೂ ಅಲಕ್ಷಿಸಲಾದೀತು?

Facebook - ಅನ್ನೋ ಪದದಲ್ಲಿ Face ಅಂದ್ರೆ ಮುಖವೋ ಅಥವಾ Face it! ಅನ್ನೋ ಹಾಗೆ ಎದುರಿಸೋದೋ? book ಅಂದ್ರೆ ನಮಗೆ ಗೊತ್ತಿರೋ ಪುಸ್ತಕ, ಹೊತ್ತಿಗೆಗಳೋ ಅಥವಾ book it! ಅನ್ನೋ ಹಾಗೆ ಕಾದಿರಿಸೋದೋ? Face ಮತ್ತು book ಎರಡೂ ಸೇರಿ ಆಗಿರೋ ಹೊಸ ಪದವೋ ಅಥವಾ ಕ್ರಾಂತಿಯೋ? ಇದಕ್ಕೆ ಪ್ರಪಂಚಾದಾದ್ಯಂತ 500 ಕ್ಕೂ ಹೆಚ್ಚು ಮಿಲಿಯನ್ನ್ ಬಳಕೆದಾರರಿದ್ದಾರಂತೆ, ಪ್ರತಿಯೊಬ್ಬ ಬಳಕೆದಾರನ ಹೆಸರಿನಲ್ಲಿ ಸುಮಾರು $2 ರಂತೆ ವರ್ಷಕ್ಕೆ ಒಂದು ಬಿಲಿಯನ್ನ್‌ಗಿಂತ ಹೆಚ್ಚು ರೆವಿನ್ಯೂ ಇದೆಯಂತೆ, ಕೆಲವರ $38 ರಿಂದ ಹಿಡಿದು ಮೈಕ್ರೋಸಾಫ್ಟಿನ $200 ಪ್ರತಿ ಬಳಕೆದಾರರಿಂದ ಹುಟ್ಟೋ ರೆವಿನ್ಯೂವರೆಗಿನ ಲೆಕ್ಕಗಳಲ್ಲಿ ಸುಮಾರು 50 ಬಿಲಿಯನ್ನ್ ವ್ಯಾಲ್ಯೂವೇಷನ್ನಿನ ಅಂದಾಜು ಮಾಡಿದ್ದಾರಂತೆ! ಗೂಗಲ್ಲ್ ಅಂಥಾ ಕಂಪನಿಗಳಲ್ಲಿ ಒಬ್ಬೊಬ್ಬ ಬಳಕೆದಾರನ ಮೇಲೆ ಸುಮಾರು $14 ರಂತೆ ಆದಾಯ ಹುಟ್ಟಿಸುತ್ತಾರಾದರೂ, Facebook ಅಂಥ ಕಂಪನಿಗಳು ತಮ್ಮ ಇರುವನ್ನು ಬಲಪಡಿಸಿಕೊಳ್ಳಲು ಅನೇಕಾನೇಕ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರಂತೆ, ಇರುವ ಬಳಕೆದಾರರ ಬೇಸ್ ಅನ್ನು ಕ್ಯಾಪಿಟಲೈಸ್ ಮಾಡಿಕೊಳ್ಳುವ ಒತ್ತಡದಲ್ಲಿದ್ದಾರಂತೆ...ಹೀಗೆ ಅನೇಕಾನೇಕ ವಿಶೇಷಗಳು Facebook ಅನ್ನು ಸುತ್ತಿಕೊಳ್ಳತೊಡಗಿದ್ದು ಗೊತ್ತಾಯಿತು.

ಅಂತರಂಗದಲ್ಲಿ ಉದ್ದುದ್ದವಾಗಿ ಬರೆದ ಹಾಗೆ ಅಲ್ಲಿ ನನಗೆ ಬರೆಯೋಕಾಗೋದಿಲ್ಲ, ಬರೆದರೂ ಚಿಕ್ಕ ಫೋನುಗಳಲ್ಲಿ ಫಾಲ್ಲೋ ಮಾಡುವವರಿಗೆ ಕಷ್ಟವಾಗುತ್ತೆ. ಆದರೂ ಸಹ, ಅಂತರಂಗ ಮತ್ತು ನನ್ನ Facebook ಅಕೌಂಟುಗಳನ್ನು ಎರಡೂ ಒಟ್ಟು ಸೇರಿಸಿ, ಇಷ್ಟು ದಿನ ಹಿಡಿದುಕೊಂಡಿದ್ದ ಸುಮಾರು ನಲವತ್ತು ಜನ ಕನ್ನಡಿಗರನ್ನು ಬರಮಾಡಿಕೊಂಡರಾಯಿತು, ಕನ್ನಡಿಗರಷ್ಟೇ ಏಕೆ ಉಳಿದವರೂ ನೋಡಲಿ - ಎಲ್ಲರೂ ಬರಲಿ, ನನ್ನ ಈಗಿನ ಬಾಸ್ ಒಬ್ಬರನ್ನು ಬಿಟ್ಟು! (ಇಲ್ಲಿ ಕನ್ನಡದಲ್ಲಿ ಬರೆಯೋಕೆ ಈತನಿಗೆ ಸಮಯವಿದೆ ಅಂಥ ಮತ್ತೊಂದಿಷ್ಟು ಕೆಲಸ ಹುಟ್ಟಿಕೊಂಡರೆ ಕಷ್ಟ, ಹಾಗಾಗಿ).

ಈ ಅಂತರ್ಜಾಲ ಯುಗದ ಸಂಬಂಧಗಳು ಬಹಳ ಸಡಿಲವಾದದ್ದು - ಉದಾಹರಣೆಗೆ ಈ ಫೇಸ್‌ಬುಕ್ಕಿನ ಮಿಲಿಯನ್ನುಗಟ್ಟಲೆ ಬಳಕೆದಾರರಿಗೆ ಮತ್ತೊಂದೇನಾದರೂ ಆಕರ್ಷಕವಾಗಿ ಕಂಡುಬಂದರೆ ಅವರೆಲ್ಲರೂ ಅಲ್ಲಿಗೆ ಒಂದೇ ನೆಗೆತದಲ್ಲಿ ಹೋಗದಂತೆ ತಡೆಯುವುದು ಕಷ್ಟ. ಹಗಲೂ ರಾತ್ರಿ ಈ ಸರ್ವರುಗಳಿಗೆ ಜನ ಮುಗಿ ಬಿದ್ದ ಹಾಗೆ, ಪ್ರಸಿದ್ಧಿ ಅಥವಾ ಪ್ರಾಬಲ್ಯದ ಉತ್ತುಂಗದಲ್ಲಿರುವುದು ಬಹಳ ಕಷ್ಟದ ಕೆಲಸ - ಸುತ್ತಲಿನ ಆಗುಹೋಗುಗಳಿಗೆ ತತ್ಕಾಲದಲ್ಲಿ ಸ್ಪಂದಿಸಿ ನಿರಂತರವಾಗಿ ಬದಲಾಗುವುದರ ಜೊತೆಗೆ ಸದಾಕಾಲ ತಮ್ಮನ್ನು ತಾವು ರಿಫೈನ್ ಮಾಡಿಕೊಳ್ಳುವ ಕರ್ಮಠತನ ಬೇಕಾಗುತ್ತದೆ. ಬರೀ ಬಳಕೆದಾರರ ಸಂಬಂಧಗಳನ್ನಷ್ಟೇ ಅಲ್ಲ, ಹಣತೊಡಗಿಸಿದವರನ್ನು ಎದುರಿಸಬೇಕಾಗುತ್ತದೆ, ಪೈಪೋಟಿ ಒಡ್ಡುವವರನ್ನು ಹಿಂದಿಕ್ಕಬೇಕಾಗುತ್ತದೆ...ಹೀಗೆ ಅನೇಕಾನೇಕ ಸವಾಲುಗಳು ಯಾವಾಗಲೂ ಇದ್ದೇ ಇರುತ್ತವೆ. ಈ ಸವಾಲುಗಳು ಹೊಸತೇನಲ್ಲ - ಆನೆಗೆ ಆನೆಯ ಭಾರ, ಇರುವೆಗೆ ಇರುವೆಯ ಭಾರ ಅಷ್ಟೇ.

ಈ ಮೂಲಕ ಅಂತರಂಗದ ಓದುಗರಿಗೂ ಫೇಸ್‌ಬುಕ್ಕ್‌ನಲ್ಲಿ ಲಿಂಕ್ ಒದಗಿಸುತ್ತಿದ್ದೇನೆ. ನಮ್ಮ ಸಂವಹನ, ಸಂಘಟನೆ ಹಾಗೂ ಸಂಘರ್ಷಗಳು ನಿರಂತರವಾಗಿರಲಿ. ನಮ್ಮ ಜಗಳಗಳಲ್ಲೂ ಸೊಗಸಿರಲಿ, ಭಾಷೆಯಲ್ಲಿ ಶುದ್ಧಿ ಇರಲಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸು ಸದಾ ಊರ್ಧ್ವಮುಖಿಯಾಗಿರಲಿ!

Sunday, September 24, 2006

ಸಿರಿತನ-ಬಡತನ

ಮಾನವ ಸಂಸ್ಕೃತಿಯಷ್ಟೇ ಹಳೆಯದಾದರೂ ಸಿರಿತನ-ಬಡತನವೆಂಬ ಮಾನಸಿಕ ಸ್ಥಿತಿ ಅಥವಾ ಸಾಮಾಜಿಕ ಸ್ಥಿತಿಯ ಬಗ್ಗೆ ನಾನು ಓದಿದ ಕಡೆಯೆಲ್ಲ ನನಗೆ ಈ ವಿಷಯಗಳನ್ನು ಕುರಿತು ಹಲವಾರು ನೆರಳುಗಳು ಕಂಡುಬರುತ್ತವೆ, ಅವು ಆಯಾ ಆಕೃತಿಯ ಮಾನಸಿಕ ಸ್ಥಿತಿಗತಿಯ ದ್ಯೋತಕವಾಗಿರಬಹುದು ಅಥವಾ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಭೌತಿಕ ವಿಷಯ ವಸ್ತುಗಳೇ ಇಲ್ಲದೇ ಬರೀ ನೆರಳೇ ನನಗೆ ಗೋಚರಿಸಿರಬಹುದು.

ಸಿರಿತನ-ಬಡತನಗಳನ್ನು ಬರೀ ಸಾಮಾಜಿಕ ನೆಲೆಗಟ್ಟಿನಲ್ಲಿ ಉಳ್ಳವರು, ದಿಕ್ಕುಗೆಟ್ಟವರು ಎಂದಷ್ಟೇ ನಾನು ಎಂದೂ ಪರಿಗಣಿಸಿದ್ದಿಲ್ಲ, ಉದಾಹರಣೆಗೆ ಹೃದಯವಂತಿಕೆಯ ಬಡತನ-ಸಿರಿತನಗಳನ್ನೂ ಸಹ ನಾನು ಗುರುತಿಸುತ್ತೇನೆ, ಒಬ್ಬ ವ್ಯಕ್ತಿಯ ಹೃದಯವಂತಿಕೆ ಆತನ/ಆಕೆಯ ಸಾಮಾಜಿಕ ಸ್ಥಿತಿಗತಿಯ ಮೇಲೆ ನೇರವಾಗಿ ಅವಲಂಭಿತವಾಗಿದೆಯೋ ಅಥವಾ ಅವೆರಡೂ ಬೇರೆ ಬೇರೆಯೋ ಎನ್ನುವುದನ್ನು ನಿಮ್ಮ ತರ್ಕಕ್ಕೆ ಬಿಡುತ್ತೇನೆ.

ಈ ಎರಡು ವಸ್ತುಗಳನ್ನು ಕುರಿತು ಈ ಸಮಯದಲ್ಲಿ ನನಗನ್ನಿಸಿದ ಟಿಪ್ಪಣಿಗಳನ್ನು ಹೀಗೆ ಪೋಣಿಸಿಕೊಂಡು ಹೋಗುತ್ತಿದ್ದೇನೆ.

***

ಸಿರಿತನ ಎನ್ನೋದು ಕೆಲವರಿಗೆ born with a sliver spoon ಅನ್ನೋ ತರಹ ಹುಟ್ಟಿದಂದಿನಿಂದ ಸಹಜವಾಗಿದ್ದಿರಬಹುದು, ಅಥವಾ ಜೀವಿತಾವಧಿಯ ಮಧ್ಯೆ ಲಭಿಸಿದ ಸ್ಥಿತಿಯಾಗಿರಬಹುದು, ಇವೆರಡನ್ನೂ ಗಮನದಲ್ಲಿಟ್ಟುಕೊಂಡು ಯೋಚಿಸಿದರೆ ಹುಟ್ಟಾ ಆಗರ್ಭ ಶ್ರೀಮಂತರಾಗಿದ್ದವರ ಆಲೋಚನೆಗಳಿಗೂ ಜೀವನ ಪರ್ಯಂತ ಹಣ ಕೂಡಿಟ್ಟು ಶ್ರೀಮಂತಿಕೆಯ ಮಟ್ಟವನ್ನು ಮುಟ್ಟಿದವರಿಗೂ ಬಹಳಷ್ಟು ವ್ಯತ್ಯಾಸಗಳನ್ನು ಗಮನಿಸಬಹುದು. ಅದರಲ್ಲೂ ತಾವೇ ಗಳಿಸಿ ಉಳಿಸಿ ಬೆಳೆಸಿದ ಹಣಕ್ಕೆ ಜನರು ಕೊಡುವ ಮರ್ಯಾದೆಗಿಂತಲೂ ದಿಢೀರನೆ ಲಾಟರಿ ತಾಗಿಯೋ ಮತ್ತಿನ್ಯಾವುದೋ ರೂಪದಲ್ಲೋ ಹಣಗಳಿಸಿದವರು ಕೊಡುವ ಮರ್ಯಾದೆ ಬೇರೆಯಾದುದು. ಹೀಗೆ ಹಲವಾರು ರೀತಿಯಲ್ಲಿ ಜನರಿಗೆ ಒಂದೊಂದು ರೂಪಾಯಿಯ ಮೌಲ್ಯ ಕಂಡು ಬರುತ್ತದೆ.

ನಮ್ಮಲ್ಲಿ ವಿವಾಹ ಮತ್ತೊಂದನ್ನು ಮಾಡುವಾಗ ಜಾತಿಯ ಜೊತೆಗೆ ಅಂತಸ್ತನ್ನೂ ಸಹ ವಿಶೇಷವಾಗಿ ಗಮನಿಸಲಾಗುತ್ತದೆ, ಮೊದಮೊದಲು ಜಾತಿ, ಗೋತ್ರ ಸರಿಯಾಗಿ ಕೂಡಿ ಬಂದರೆ ಆಯಿತು, ಅಂತಸ್ತಿನಲ್ಲೇನಿದೆ ವಿಶೇಷ ಎಂದು ಯೋಚಿಸುತ್ತಿದ್ದವನಿಗೆ ಇತ್ತೀಚೆಗೆ ನಮ್ಮ ನೆರೆಹೊರೆಯಲ್ಲಿ ಕೇಳಿದ ಒಂದು ಸಂಗತಿ ಇನ್ನಷ್ಟು ಯೋಚಿಸುವಂತೆ ಮಾಡಿತು. ಹುಡುಗಿಯ ಕಡೆಯವರು ಆಗರ್ಭ ಶ್ರೀಮಂತರು, ಊರನ್ನೇ ಕೊಳ್ಳುವಷ್ಟು ಹಣವಿದೆ ಅವರಲ್ಲಿ, ಜನಬಲವಿದೆ, ಹುಡುಗನ ಕಡೆಯವರು ಮಧ್ಯಮ ವರ್ಗದವರು, ಹುಡುಗ ದೆಹಲಿಯಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡಿದ್ದಾನೆ, ಆದರೆ ಈ ಎರಡೂ ಕಡೆಯವರ ಒಟ್ಟು 'ಅಂತಸ್ತನ್ನು' ತಕ್ಕಡಿಯಲ್ಲಿಟ್ಟು ತೂಗಿ ನೋಡಿದರೆ ಬಹಳಷ್ಟು ವ್ಯತ್ಯಾಸ ಕಂಡುಬರುತ್ತದೆ.

ಹೀಗಿರುವಾಗ ಹುಡುಗಿಯ ಮನೆಯವರು ಹುಡುಗಿಗೆ ಮದುವೆಗೆ ಮೊದಲು ಒಂದು ಕ್ರ್ಯಾಷ್‌ಕೋರ್ಸ್‌ನಲ್ಲಿ ಅಡುಗೆ ಮಾಡುವುದನ್ನು ಹೇಳಿಕೊಟ್ಟಿದ್ದರೇ ವಿನಾ ಒಂದು ಚಹಾ ಮಾಡುವುದನ್ನು ಕಲಿಯುವ ಅಗತ್ಯವೂ ಆ ಹುಡುಗಿಗೆ ಆ ವರೆಗೆ ಇರಲಿಲ್ಲ. ಆದರೆ ಹುಡುಗನ ಮನೆಯವರು ಆ ಹುಡುಗನನ್ನು ಬೆಳೆಸಿದ ಬಗೆ ನಾಳೆಯ ಬಗ್ಗೆ ಚಿಂತಿಸುವ ಸ್ವಭಾವವನ್ನೂ, ಒಂದೊಂದು ರೂಪಾಯಿಯ ಬಗ್ಗೆ ಆತ ಯೋಚಿಸುವ ಸ್ವಭಾವವನ್ನೂ ಗಳಿಸಿಕೊಟ್ಟಿತ್ತು. ಸಂಸಾರವೆಂದರೆ ಸಂಘರ್ಷಗಳಿಗೆ ಕೊನೆಮೊದಲೆನ್ನುವುದಿದೆಯೇ, ಹೀಗಿರುವಾಗ ಈ ಸಂಬಂಧದಲ್ಲೂ ವ್ಯತ್ಯಾಸಗಳು ಬರತೊಡಗಿದವು - ಹುಡುಗನ ಮಾವನವರು, ಅಂದರೆ ಹುಡುಗಿಯ ತಂದೆ ದೆಹಲಿಯಲ್ಲಿ ಹೊಸದಾಗಿ ಮದುವೆಯಾದವರ ಹೆಸರಿನಲ್ಲಿ ಒಂದು ಒಳ್ಳೆಯ ಫ್ಲ್ಯಾಟ್ ಒಂದನ್ನು ಖರೀದಿಸಿಕೊಟ್ಟರು - ಹುಡುಗನಿಗೆ ಅದನ್ನು ವರದಕ್ಷಿಣೆಯ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದೇನಲ್ಲ ಎನ್ನುವ ಸ್ವಯಂ ಆಲೋಚನೆಯ ಇರುಸುಮುರುಸಿನ ಜೊತೆಗೆ ತನ್ನ ಕೈಯಲ್ಲಿ ಇನ್ನು ಹತ್ತು ವರ್ಷಗಳಲ್ಲೂ ಆ ರೀತಿ ಹಣ ಸುರಿದು ಒಂದು ಫ್ಲ್ಯಾಟ್ ಕೊಳ್ಳುವುದಕ್ಕೆ ಆಗುವುದಿಲ್ಲ ಎನ್ನುವ ನೈಜ ಸ್ಥಿತಿಯ ಅರಿವು ಹುಟ್ಟಿಸುವ ಕೈಕೈ ಹಿಸುಕಿಕೊಳ್ಳುವ ಸಂದರ್ಭ. ಹುಡುಗಿಯ ಹೆಸರಿನಲ್ಲಿ ಬಳುವಳಿ ಸಾಮಾನುಗಳ ಜೊತೆಗೆ ಕೆಲಸಗಾರರೂ ಈ ಮದುಮಕ್ಕಳ ಬೆನ್ನು ಹತ್ತಿ ದೆಹಲಿ ಮುಟ್ಟಿದರೂ ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲೇ ದೆಹಲಿಯ ಹವೆ ಆ ಕೆಲಸಗಾರರನ್ನು ಮತ್ತೆಲ್ಲೋ ಹೋಗುವಂತೆ ಮಾಡಿ, ಕೊನೆಗೆ ಸ್ವಲ್ಪ ದಿನಗಳ ಕಾಲ ಮನೆಯಲ್ಲಿ ಇವರಿಬ್ಬರೇ ಅಡುಗೆ ಮಾಡಿ ಊಟ ಮಾಡುವ ಸ್ಥಿತಿ ತಲುಪಿತು. ಈ ಮಧ್ಯೆ ಹೊರಗಿನಿಂದ ತರಿಸಿದ ಊಟವೂ, ಹಣ್ಣುಹಂಪಲುಗಳನ್ನು ತಿನ್ನುವುದೂ ನಡೆಯಿತು. ಇವರಿಬ್ಬರಿಗೆ ಸಹಾಯ ಮಾಡಲೆಂದು ದೆಹಲಿ ಸೇರಿದ ಹುಡುಗನ ತಾಯಿಯಿಂದ ಸಂಬಂಧಗಳು ಹದಗೆಟ್ಟವೇ ವಿನಾ ಅದರಿಂದ ಸಹಾಯವೇನೂ ಆದಂತೆ ತೋರಲಿಲ್ಲ. ಮನೆಯಲ್ಲಿ ಒಳ್ಳೆಯ ಊಟ ಸಿಗುತ್ತದೆ ಎನ್ನುವುದೊಂದನ್ನು ಬಿಟ್ಟರೆ ಒಂದು ಕಡೆ ಆಫೀಸಿನ ಕೆಲಸದೊತ್ತಡಗಳು, ಮನೆಗೆ ಬಂದರೆ ಅಮ್ಮ-ಹೆಂಡತಿಯರಿಬ್ಬರ ನಡುವೆ ಒಬ್ಬರ ಪರ ವಹಿಸಲೇ ಬೇಕಾದ ಅನಿವಾರ್ಯತೆಯ ನಡುವೆ ಹುಡುಗ ಬಳಲಿ ಹೋದ. ಬೆಳಿಗ್ಗೆ ಘಂಟೆ ಎಂಟಾದರೂ ಎದ್ದು ಮುಖಕ್ಕೆ ನೀರು ಕಾಣಿಸದ ಸೊಸೆಯನ್ನು ಕಂಡರೆ ಅತ್ತೆಗೆ ಆಗದು, ನನ್ನ ಸ್ವಾತಂತ್ರ್ಯಕ್ಕೆ ಇವರೇಕೆ ಧಕ್ಕೆ ತರುತ್ತಿದ್ದಾರೆ ಎನ್ನುವುದು ಸೊಸೆಯ ಬಗೆ ಹರಿಯಲಾರದ ಸಮಸ್ಯೆ - ಕೊನೆಗೆ ನಾನಿರುವುದು ನಮ್ಮ ಅಪ್ಪ ಕೊಟ್ಟ ಮನೆಯಲ್ಲಿ ಎನ್ನುವ ಗರ್ವ ಬೇರೆ. ಗಂಡನಿಗೆ ಒಂದು ಲೋಟಾ ಕಾಫಿಯನ್ನು ಮಾಡಿಕೊಡದ ಹೆಂಡತಿ ಎಂದು ಅತ್ತೆ ಅಂದುಕೊಂಡರೆ, ನಾನೇನು ಈ ಮನೆಯ ಕೆಲಸದವಳಲ್ಲ ಎನ್ನುವುದು ಸೊಸೆಯ ಜವಾಬು.

ಹೀಗೇ ಹಲವು ತಿಂಗಳುಗಳು ನಡೆದು ಒಂದು ದಿನ ಹುಡುಗಿಯ ತಂದೆಯ ಕಿವಿಗೆ ತಮ್ಮ ಮಗಳು ಫೋನಿನಲ್ಲಿ ಅತ್ತು ಸುದ್ದಿಯನ್ನು ಆಕೆಯ ಚೌಕಟ್ಟಿನಲ್ಲಿ ವರದಿಯನ್ನು ಒಪ್ಪಸಿದ್ದೇ ತಡ ಅವರು ಕೆಂಡಾಮಂಡಲವಾದರು - ಗಿಳಿಯನ್ನು ಸಾಕಿ ಗಿಡುಗನ ಕೈಗೆ ಕೊಟ್ಟೆ ಎಂದುಕೊಂಡರು, ನಮ್ಮ ಮಗಳು ಒಂದು ದಿನವೂ ಅತ್ತಿದ್ದಿಲ್ಲ, ನೀರು ಕುಡಿದ ಲೋಟವನ್ನು ಎತ್ತಿ ಇಟ್ಟವಳಲ್ಲ ಅಂತಹವಳನ್ನು ನೀವು ಅಡುಗೆ ಮಾಡು, ಬಾಗಿಲು ಸಾರಿಸು, ಮನೆ ಕಸ ಹೊಡಿ ಎನ್ನಲು ನಿಮಗೇನು ಹಕ್ಕಿದೆ ಎಂದವರು ಬೊಬ್ಬೆ ಹಾಕಿದರೆ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು, ಆಕೆ ನಮ್ಮ ಮನೆಯ ಸೊಸೆ, ನಮ್ಮ ಮನೆಯಲ್ಲಿ ಈ ರೀತಿ ಸಂಪ್ರದಾಯ ಎಂದಿನಿಂದಲೂ ನಡೆದು ಬಂದಿದೆ ಅದಕ್ಕೆ ಆಕೆಯೇನೂ ಇಂದು ಹೊರತಲ್ಲ ಎಂದು ಹುಡುಗನ ತಂದೆಯವರು ಸಮಾಧಾನವಾಗಿಯೇ ಉತ್ತರಕೊಟ್ಟರು...ಎರಡೂ ಕಡೆಯವರ ಸಮಾಧಾನ-ಅಬ್ಬರ ಇವುಗಳ ನಡುವೆ ಹುಡುಗ-ಹುಡುಗಿಯ ಸಂಬಂಧವೂ ಬಾಡುತ್ತಾ ಹೋಗಿ ಕೊನೆಗೆ ಮದುವೆಯಾಗಿ ಒಂದು ವರುಷದ ಒಳಗೇ ಸಂಬಂಧ ಕಡಿದು ಹೋಗುವ ಸ್ಥಿತಿಗೆ ಬಂದಿದೆಯೆಂದು ತಿಳಿಯಿತು.

ಹಾಗಾದರೆ, ಈ ರೀತಿ ಅಂತಸ್ತಿನಲ್ಲಿ ವ್ಯತ್ಯಾಸವಿರುವ ಸಂಬಂಧಗಳು ಹೇಗೆ ನೆಲೆ ನಿಲ್ಲುತ್ತವೆ? ಒಂದು ವೇಳೆ ಇಬ್ಬರ ಅಂತಸ್ತು ಒಂದೇ ಆಗಿದ್ದರೂ ಅವರವರ ಸಂಪ್ರದಾಯ, ಆಚಾರ-ವಿಚಾರಗಳಲ್ಲಿ ಬದಲಾವಣೆ ಇರುವಾಗ ಯಾರು ಯಾರಿಗೆ ತಗ್ಗಿಬಗ್ಗಿ ನಡೆಯಬೇಕು, ಹೊಂದಿಕೊಂಡು ಹೋಗಬೇಕು? ಅಕಸ್ಮಾತ್ ಹುಡುಗನ ಮನೆಯವರು ಹುಡುಗನ ಜೊತೆಯಲ್ಲೇ ಇದ್ದರೆ, ಸೊಸೆ ಹುಡುಗನ ತಂದೆತಾಯಿಗಳ ಸೇವೆ ಮಾಡುವುದನ್ನು ಸಂಸಾರದ ಕಾನೂನು ಎನ್ನಲಾದೀತೇ? ಮುಂಜಾನೆದ್ದು ಮುಂಬಾಗಿಲ ಹೊಸ್ತಿಲಿಗೆ ನೀರು ಹಾಕಿ ರಂಗೋಲಿ ಹಾಕುವ ಶುದ್ಧ ಹಳೆಯ ಸಂಪ್ರದಾಯದಿಂದ ಹಿಡಿದು ಇಂದಿನ ಬೆಡ್‌ಕಾಫಿ ವ್ಯವಸ್ಥೆಯಲ್ಲಿ ಎಲ್ಲಿ ನಡುವೆ ಗೆರೆಯನ್ನು ಯಾರು ಎಳೆಯಬೇಕು? ಈಗಿನ ಕಾಲದಲ್ಲಿ ಒಂದು ಮನೆಯನ್ನು ಹೊಕ್ಕ ಸೊಸೆಯ ಜವಾಬ್ದಾರಿ ಹೆಚ್ಚೋ ಅಥವಾ ಮನೆಗೆ ಬಂದವಳಿಗೆ ಸಾಧ್ಯವಾದಷ್ಟು ಆದರವನ್ನು ತೋರಿ ಎಲ್ಲರೊಳಗೊಂದಾಗಿಸಿಕೊಳ್ಳಬೇಕೆನ್ನುವ ಮಾತು ಹೆಚ್ಚೋ?

ಅಂತಸ್ತು ಹುಟ್ಟಿಸುವ ಸಂಘರ್ಷ ಈ ಬಗೆಯದಾದರೆ ಕಷ್ಟ ಪಟ್ಟು ಸಂಪಾದಿಸಿದ ಹಣದ ಹೊರೆ ಇನ್ನೊಂದು ಥರ - ಎಷ್ಟು ಗಳಿಸಿದರೂ ಸಾಲದು ಎನ್ನುವ ಸಾಮಾನ್ಯ ರೋಗದ ಜೊತೆಗೆ ಗಳಿಸಿದ್ದನ್ನು ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡುವ ಮನಸ್ಸೂ ಬಹಳಷ್ಟು ಜನರಿಗೆ ಸಿದ್ಧಿಸೋದಿಲ್ಲ. ಸುಮಾರು ಐವತ್ತು ವರ್ಷಗಳವರೆಗೆ ಸಾಕಷ್ಟು ಹಣವನ್ನು ಕೂಡಿಸಿ ತಾವು ಕೂಡಿಟ್ಟ ಮೊತ್ತವನ್ನು ತಮ್ಮ ಜೀವನದ ಉಳಿದ ಅವಧಿಯಲ್ಲಿ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಅನುಭವಿಸಿ ಹೋಗುವವರು ಬಹಳ ವಿರಳ. ಜೊತೆಗೆ ತಾವೇ ಕೂಡಿ ಹಾಕಿಟ್ಟ ಸಂಪತ್ತನ್ನು ತಮ್ಮ ಮಕ್ಕಳು ಉಡಾಫೆಯಿಂದ ಹಾರಿಸಿ ತೆಗೆಯುತ್ತಿದ್ದರೆ ಇನ್ನೂ ಸಂಕಟ; ತಾವು ದುಡಿಯದ ಹಣದ ಬೆಲೆಯಿರದ ಮಕ್ಕಳು, ತಮ್ಮ ದುಡ್ಡಿನ ಅರಿವಿನ ಹೊರೆ ಹೊತ್ತ ಪೋಷಕರು ಹೀಗೆ ಮಕ್ಕಳು-ತಂದೆತಾಯಿಯರ ನಡುವೆ ಮತ್ತೊಂದು ರೀತಿಯ ಸಂಘರ್ಷವೇರ್ಪಟ್ಟಿದ್ದನ್ನು ನಾವು ನೋಡಬಹುದು.

ಒಂದು ಕಡೆ ತಮ್ಮ ಲೈಟ್‌ಬಿಲ್, ಹಾಲಿನ ಬಿಲ್‌, ತರಕಾರಿ ಬಿಲ್‌ನಲ್ಲಿ ಪ್ರತಿ ತಿಂಗಳು ಒಂದು ರೂಪಾಯಿಯೂ ಹಿಂದೆ-ಮುಂದೆ ಹೋಗದಂತೆ ಜಾಗರೂಕತೆಯಿಂದ ನೋಡಿಕೊಂಡು ಬರುವ ತಂದೆ, ಮತ್ತೊಂದು ಕಡೆ ದಿನಕ್ಕೆರಡು ಬಾರಿ ಹತ್ತತ್ತು ರೂಪಾಯಿ ಕೊಟ್ಟು ಕೋಕ್ ಅಥವಾ ಮತ್ತಿನ್ನೇನನ್ನೋ ಕುಡಿಯುವ, ಐಸ್ ಕ್ರೀಮ್ ತಿಂದು ಮಜಾ ಉಡಾಯಿಸುವ ಮಕ್ಕಳು. ಒಂದು ಕಡೆ ಒಂದು ಅಗಳು ಅನ್ನವನ್ನಾಗಲೀ, ಒಂದು ಕಾಳು ಅಕ್ಕಿಯನ್ನಾಗಲೀ ಚೆಲ್ಲಬಾರದೆಂದು ಅಚ್ಚುಕಟ್ಟಾಗಿ ಯೋಚಿಸುವ ಪೋಷಕರು, ಮತ್ತೊಂದು ಕಡೆ ತಾವು ಉರಿಸುವ ಪೆಟ್ರೋಲ್ ಮೇಲೆಯೇ ನಿಗಾ ಇರಿಸದ ಮಕ್ಕಳು. ಒಂದು ಕಡೆ ಹಳೆಯ ಮೈಂಡ್ ಸೆಟ್‌ನಲ್ಲೇ ಜೀವನ ನಡೆಸುವ ಪೋಷಕರು, ಮತ್ತೊಂದು ಕಡೆ ಹೊಸ ತಂತ್ರಜ್ಞಾನದ ಪರಿಚಯವಿರುವ ಮಕ್ಕಳು - ಹೀಗೆ ಹಲವಾರು ಏರುಪೇರುಗಳ ನಡುವೆಯೂ ಒಂದು ರೀತಿಯ ಸಮತೆ (equilibrium) ನಮಗೆ ಕಂಡುಬರುತ್ತದೆ. ಹಳೆ ಬೇರು ಹೊಸ ಚಿಗುರುಗಳ ನಡುವಿನ ಭಿನ್ನ ನಿಲುವನ್ನ ಸ್ವಲ್ಪ ಮಟ್ಟಿಗಾದರೂ ಸಾಧಿಸಿಕೊಳ್ಳಬಹುದು, ಆದರೆ ಇದ್ದೂ ಇಲ್ಲದಂತಿರುವವರ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ.

***

ಹಣಕಾಸಿನ ವಿಚಾರವಷ್ಟೇ ಅಲ್ಲ ಮತ್ತೆಲ್ಲಾ ರೀತಿಯಲ್ಲಿ ಸಿರಿತನ-ಬಡತನಗಳ ಆಯಾಮಗಳನ್ನು ಕಲ್ಪಿಸಿಕೊಂಡಾಗ ಈ ರೀತಿ ವಯಸ್ಸಿನ, ಇದ್ದು-ಇಲ್ಲದವರ, ಇಲ್ಲದೆ-ಇದ್ದವರ ಸಮೀಕರಣಗಳಲ್ಲಿ ಬಹಳಷ್ಟು ಪ್ಯಾರಾಮೀಟರುಗಳನ್ನು ನೋಡಬಹುದು. ಹಣ ಎನ್ನುವುದು ನಮಗಿರುವ ಹಲವಾರು ಸಾಧನಗಳಲ್ಲಿ ಒಂದು ಎಂಬುದನ್ನು ಹೆಚ್ಚು ಜನರು ಅರಿತಿರಲಾರರು, ಅಲ್ಲಿಯವರೆಗೆ ಹಣವೇ ಅಂತಹವರನ್ನು ಆಳತೊಡಗುತ್ತದೆ, ಎಲ್ಲವೂ 'ಇದ್ದವರ' ಸುತ್ತಮುತ್ತಲು ಗಿರಕಿ ಹೊಡೆಯತೊಡಗುತ್ತದೆ.