ಹಲವು ಸಂದಿಗ್ಧಗಳು
'ಅಂತರಂಗ'ದಲ್ಲಿ ಹಾಗೂ-ಹೀಗೂ, ಅದೂ-ಇದನ್ನು ಬರೆದು ತುಂಬಿಸಿದ್ದಾಯಿತು, ಇವತ್ತಿಗೆ ಇದು ಐವತ್ತನೇ ಬರಹ, ಈ ಮೈಲಿಗಲ್ಲನ್ನು ತಲುಪಿದ್ದೇನೆಂದು ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುವ ಮುನ್ನ ಈ ಬರಹಗಳನ್ನು ಬರೆಯುವ ಪ್ರಕ್ರಿಯೆಯಲ್ಲಿ ನನ್ನಲ್ಲಿ ಮೂಡಿದ ಹಲವು ಸಂದಿಗ್ಧಗಳಲ್ಲಿಯೂ ಓದುಗರನ್ನು ಸಹಭಾಗಿಗಳನ್ನಾಗಿ ಮಾಡಿದರೆ ಹೇಗೆ ಎಂಬ ಕುಹಕ ಮನದಲ್ಲಿ ಮೂಡಿದ್ದೇ ತಡ ಹೀಗೆ ಕುಟ್ಟಲು ಮೊದಲು ಮಾಡಿಕೊಂಡೆ.
***
'ಅಂತರಂಗ'ದ ಬರಹಗಳಿಗೆ ಕೆಲವು ಖಾಯಂ ಓದುಗರೂ, ಇನ್ನು ಕೆಲವು ವೀಕ್ಷಕರು, ಹಾಗೂ ಕೆಲವರು ಹಿತೈಷಿಗಳು ಸಮಯದಿಂದ ಸಮಯಕ್ಕೆ ಭೇಟಿಕೊಡುತ್ತಲೆ ಇದ್ದಾರೆ. ಇವರಲ್ಲಿ ಕೆಲವರು ತಮ್ಮ ನಿಜನಾಮದಲ್ಲಿ ಅನಿಸಿಕೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡರೆ, ಇನ್ನು ಕೆಲವರು ಅನಾಮಿಕರಾಗಿ ಉಳಿದರು, ಮತ್ತೂ ಕೆಲವರು ತಮ್ಮ ನಿಜನಾಮದಲ್ಲಿ ಬರೀ ಇ-ಮೇಲ್‌ಗಳ ಮೂಲಕ ಮಾತ್ರ ನನಗೆ ಬರೆಯುತ್ತಾರಾದ್ದರಿಂದ ಪ್ರತಿಯೊಂದಕ್ಕೂ ಒಂದು ಸರ್ಕಲ್ ಹುಟ್ಟುವ ಹಾಗೆ ಈ ಬರಹಗಳಿಗೂ ಅದರದ್ದೆ ಆದ ಒಂದು ಬೇಸ್ ಹುಟ್ಟಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ, ಹೆಚ್ಚುಗಾರಿಕೆಯೂ ಇಲ್ಲ.
ಆದರೆ, ನಾನು ಈ ಬರಹಗಳಿಗೆ ಎಷ್ಟು ಸಮಯವನ್ನು ವ್ಯಯಿಸುತ್ತೇನೆ, ಅವುಗಳನ್ನು ಯಾವಾಗ ಕುಟ್ಟುತ್ತೇನೆ, ಈ ಬರಹಗಳಲ್ಲಿ ಏನೇನನ್ನು ಬರೆಯಬಹುದು, ಬರೆದಿದ್ದೇನೆ, ಬರೆಯಬಲ್ಲೆ ಎಂದು ಆಲೋಚಿಸಿಕೊಂಡಂತೆಲ್ಲಾ ದೊಡ್ಡ ಕಂಪದ ಭೂಮಿಯಲ್ಲಿ ಸ್ವಲ್ಪಸ್ವಲ್ಪವೇ ಹುದುಗಿದ ಅನುಭವವಾಗತೊಡಗುತ್ತದೆ. ಸದ್ಯಕ್ಕೆ ನನ್ನ ಮುಂದಿರುವ ಸಂಕಷ್ಟಗಳು ಇವು:
೧) ನಾನು ಈವರೆಗಿನ ಬರಹಗಳಲ್ಲಿ ನನ್ನ ವೈಯುಕ್ತಿಕ ವಿಷಯಗಳನ್ನು ಪ್ರಥಮ ವ್ಯಕ್ತಿಯ ಮೂಲಕ ಸಾರ್ವಜನಿಕಗೊಳಿಸುತ್ತಿರುವುದು ಓದುಗರಲ್ಲಿ ಕೆಲವರಿಗೆ ಮೆಚ್ಚುಗೆಯಾದರೂ ನನ್ನ ಮನೆಯವರಿಗೆ (ನನ್ನ ಹೆಂಡತಿ ಹಾಗೂ ಇನ್ನು ನಾಲ್ಕು ದಿನಗಳಲ್ಲಿ ಭಾರತಕ್ಕೆ ಹಿಂತಿರುಗುತ್ತಿರುವ ನನ್ನ ಅತ್ತೆಯವರಿಗೆ) ಅದು ಖಂಡಿತವಾಗಿ ಇಷ್ಟವಿಲ್ಲದ ಮಾತು. ನಾನೇನಾದರೂ ಹಾಗೆ ಬರೆಯುತ್ತಾ ಹೋದರೆ 'ಎಲ್ಲರೂ ನನ್ನ ಹಲ್ಲುಗಳನ್ನು ಎಣಿಸಿಕೊಂಡುಬಿಡುತ್ತಾರೆ' ಎಂಬುದು ಅವರ ವಾದ ಹಾಗೂ ನಮ್ಮ-ನಮ್ಮ ವಿಷಯಗಳು ನಮ್ಮಲ್ಲೇ ಇರಲಿ ಎಂಬುದು ಅವರ ತತ್ವ. ಹಾಗೇನಾದರೂ ನನಗೆ ನನ್ನ ಬಗ್ಗೆ ಬರೆಯಲೇ ಬೇಕಾಯಿತೆನ್ನಿಸಿದರೆ 'ಮೊದಲು ದೊಡ್ಡ ಮನುಷ್ಯನಾಗಿ ಐವತ್ತು ವರ್ಷ ಆದ ಮೇಲೆ ಆತ್ಮ ಚರಿತ್ರೆ ಬರೆ' ಎನ್ನುವುದು ಅವರ ಕಿವಿಮಾತು.
'ಅಂತರಂಗಿ'ಯನ್ನು ಎಷ್ಟು ಸಾಧ್ಯವೋ ಅಷ್ಟು ಗೋಪ್ಯವಾಗಿ ಇಡೋಣವೆಂದುಕೊಂಡರೆ ನನ್ನ ಬರವಣಿಗೆಯ ಶೈಲಿ, ಅದರಲ್ಲಿ ಬರುವ ವಿಷಯಗಳು ಹಾಗೂ 'ಅಂತರಂಗ' ನಿನ್ನದಾ ಎಂದು ಕೇಳಿದವರಿಗೆ ನಾನು ಸುಳ್ಳು ಹೇಳದೇ ಇದ್ದುದು ಎಲ್ಲವೂ ಸೇರಿಕೊಂಡು ಒಬ್ಬರಿಂದ ಇಬ್ಬರಿಗೆ, ಇಬ್ಬರಿಂದ ನಾಲ್ವರಿಗೆ ಗೊತ್ತಾಗಿ ಈಗ ಕೊನೇ ಪಕ್ಷ ಏನಿಲ್ಲವೆಂದರೂ ಒಂದು ಹತ್ತು-ಹದಿನೈದು ಜನರಿಗೆ ನಾನ್ಯಾರೆಂದು ಗೊತ್ತಾಗಿ ಬಿಟ್ಟಿದೆ!
೨) ಎರಡನೆಯದಾಗಿ ಆಫೀಸಿನ ಸಮಯದಲ್ಲಿ ವೈಯುಕ್ತಿಕ ಕೆಲಸಗಳನ್ನು ಮಾಡಬಾರದೆಂಬ ನನ್ನ ನಿಯಮ, ಕಂಪನಿಯ ಪಾಲಿಸಿ ಹಾಗೂ ನನಗೆ ಕೊಡುವ ಸಂಬಳಕ್ಕೆ ತಕ್ಕನಾಗಿ ದುಡಿಯಬೇಕೆಂದು ಸದಾ ಗೊಣಗುವ ಅಂತರಾತ್ಮ. ಈಗ ಉದಾಹರಣೆಗೆ (ಸುಮ್ಮನೇ ಲೆಕ್ಕಕ್ಕೆಂದು ಹೇಳುತ್ತಿದ್ದೇನೆ, ಎನ್.ಆರ್.ಐ. ಒಬ್ಬ ಇಷ್ಟು ದುಡಿಯುತ್ತಿದ್ದಾನೆಂದು ದಿಢೀರನೆ ನಿರ್ಣಯಕ್ಕೆ ಬರಬೇಡಿ) ನನ್ನ ಕೆಲಸಕ್ಕೆ ನಮ್ಮ ಕಂಪನಿಯವರು ಘಂಟೆಗೆ ಅರವತ್ತು ಡಾಲರ್‌ನ್ನು ಕೊಡುತ್ತಾರೆ ಎಂದುಕೊಳ್ಳೋಣ, ಹಾಗಿದ್ದ ಪಕ್ಷದಲ್ಲಿ ನಿಮಿಷಕ್ಕೆ ಒಂದು ಡಾಲರ್ ಆಯಿತಲ್ಲವೇ? ನಿನ್ನೆ (ಶುಕ್ರವಾರ) ನಾನು ಆಫೀಸಿನಲ್ಲಿ 'ಅಂತರಂಗ'ದ ಸಲುವಾಗಿ, ಅದರಲ್ಲಿ ಬರೆದಿರುವ ಕಾಮೆಂಟನ್ನು ಓದುವುದಕ್ಕೆ, ಅದಕ್ಕೆ ಉತ್ತರಕೊಡುವುದಕ್ಕೆ, ಅಲ್ಲಿ ಬಳಸಿದ ವಿಷಯ ವಸ್ತುಗಳ ಕುರಿತು ಚಾಟ್ ಮಾಡುವುದಕ್ಕೆ ಏನಿಲ್ಲವೆಂದರೂ ಒಂದು ಘಂಟೆಯನ್ನಾದರೂ ವ್ಯಯಿಸಿದ್ದೇನೆ. ದಿನದಲ್ಲಿ ಎಂಟು ಘಂಟೆ ಕೆಲಸ ಮಾಡಬೇಕಾದ ಅಗತ್ಯವಿರುವ ನನಗೆ ನಾನು ಕೊನೇಪಕ್ಷ ಏನಿಲ್ಲವೆಂದರೂ (ಮಧ್ಯಾಹ್ನ ಊಟ, ಇತರ ಬ್ರೇಕ್‌ಗಳನ್ನೂ ಸೇರಿ) ಕೊನೇ ಪಕ್ಷ ಹತ್ತು ಘಂಟೆಗಳಾದರೂ ಕೆಲಸ ಮಾಡುತ್ತೇನೆ. ಆದರೂ ಸಹ, ಕಂಪನಿಯ ಸಂಪನ್ಮೂಲಗಳನ್ನು ವ್ಯವಹಾರಕ್ಕೆ ಸಂಬಂಧಿಸದ ಕಾರ್ಯಗಳಲ್ಲಿ ಬಳಸುವುದು ತಪ್ಪು ಹಾಗು ಅದು ನೀತಿ, ನಿಯಮಗಳಿಗೆ ವಿರುದ್ಧವಾದುದು ಎಂದು ನನಗೆ ಚೆನ್ನಾಗಿ ಗೊತ್ತಿರುವುದರಿಂದ ಇಲ್ಲಿ ಸಂದಿಗ್ಧ ಹುಟ್ಟುತ್ತದೆ.
ಅಲ್ಲದೇ ಪ್ರತೀ ಪೋಸ್ಟ್ ಹಾಗೂ ಅದರ ಫಾಲ್ಲೋ ಅಪ್ ಎಲ್ಲವೂ ಸೇರಿ ದಿನಕ್ಕೆ ಒಂದೆರಡು ಘಂಟೆ ವ್ಯಯಿಸುವ ನಾನು, (ಬೇರೆ ಯಾರೂ ಹಾಗೆ ಮಾಡುತ್ತಿಲ್ಲವಾದ್ದರಿಂದ, ಅಥವಾ ಹಾಗೆ ಮಾಡುವವರು ಕಡಿಮೆ ಇರುವುದರಿಂದ), ಮನೆ, ಮಕ್ಕಳು, ಸಂಸಾರ, ಕೆಲಸ, ಕಮ್ಮ್ಯೂಟು ಇವುಗಳು ಬೇಡುವ ಅಟೆನ್ಷನ್ ಕೊಟ್ಟು ನ್ಯಾಯ ಒದಗಿಸಬಲ್ಲೆನೇ? ಹಾಗೆ ಮಾಡಿದರೂ ಮುಂದಿನ ವಾರ ನಮ್ಮ ಅತ್ತೆಯವರು ಭಾರತಕ್ಕೆ ಹಿಂತಿರುಗಿದ ಮೇಲೆ ಉಪವಾಸವಂತೂ ಕೂರಲು ಸಾಧ್ಯವಿಲ್ಲ, ಅಡುಗೆ ಯಾವಾಗ ಮಾಡುವುದು, ಊಟ ಯಾವಾಗ ಮಾಡುವುದು, ನಿದ್ರೆ ಯಾವಾಗ ಮಾಡುವುದು, ಒಂದೋ ಎರಡೋ...
ಅನಿವಾಸಿಗಳ ಸಂಕಷ್ಟ ಭಾರತದಲ್ಲಿ ಕುಳಿತವರಿಗೋ, ಭಾರತದಿಂದ ಆರು ತಿಂಗಳ ಪ್ರವಾಸೀ ವೀಸಾದಲ್ಲಿ ಬರುವಂತಹವರಿಗೋ ಗೊತ್ತಾಗೋಲ್ಲ, ಸುಮ್ಮನೇ ಅವರಿಗನ್ನಿಸಿದ್ದನ್ನು ಗೊಣಗುತ್ತಾರಷ್ಟೇ - ನನ್ನ ಅತ್ತೆಯವರು ನಮ್ಮ ಬಗ್ಗೆ ಮರುಕಪಡುತ್ತಾರೆ, ಇಲ್ಲಿ ಬಂದು ನಮ್ಮನ್ನು 'ನೋಡಿದ' ಮೇಲೆ ನೀವು 'ಹೀಗೆ' ಬದುಕುತ್ತಿದ್ದೀರಿ ಎಂದು ಗೊತ್ತಿರಲಿಲ್ಲ ಎನ್ನುತ್ತಾರೆ. ಅವರು ನನ್ನ ತರಹ ಪುಸ್ತಕ ಬರೆಯೋದಿಲ್ಲವಾದರೂ ಇದ್ದದ್ದನ್ನ ಇದ್ದ ಹಾಗೇ ಹೇಳುವ ಕರುಣಾಮಯಿ!
೩) ಹೀಗೇ ನನ್ನ ಹಳವಂಡವನ್ನೆಲ್ಲ ಕೆದಕಿ ಆನವಟ್ಟಿಯಿಂದ ಇಲ್ಲಿಯವರೆಗೆ ಬರೆಯುತ್ತಾ ಹೋದರೆ ಸುಮಾರು ಐನೂರು ಪೋಸ್ಟ್‌ಗಳನ್ನು ಬರೆಯುವಷ್ಟು ಸರಕು ನನ್ನಲ್ಲಿದೆ - ಕೆಲವು ಕೆಟ್ಟವು, ಕೆಲವು ಒಳ್ಳೆಯವು, ಎಲ್ಲಾ ಥರದ ಅನುಭವಗಳನ್ನೂ ಹೀಗೆ ಬರೆಯಬಹುದು. ಆದರೆ ಹೀಗೆ ಬರೆಯುವುದರ ಗುರಿ ಏನು, ಯಾವ 'ಗುಡ್ಡಾ ಕಡಿಯೋದಕ್ಕೆ' ಹೀಗೆ ಬರೆಯಬೇಕು? ಒಂದು ಕಥೆಯನ್ನೋ ಕಾದಂಬರಿಯನ್ನೂ ವಿಮರ್ಶಿಸಿ ಬರೆದರೆ ಅದು ಒಂದು ಥರಾ, ಒಂದು ನನ್ನದೇ ಆದ ಕಥೆಯನ್ನೋ ಕಾವ್ಯವನ್ನೋ ಪ್ರಕಟಿಸಿದರೆ ಇನ್ನೊಂದು ಥರಾ, ಇಲ್ಲಾ ಹಾಸ್ಯದ ಶೈಲಿಯಲ್ಲಿ ಬರೆದು ಕೊನೆಗೆ ಏನೋ ಒಂದು ಸಂದೇಶವನ್ನು ಸಾರಿದರೆ ಮತ್ತೊಂದು ಥರಾ - ಚೂರುಪಾರು ಬರೆದಿದ್ದನ್ನೂ 'ಸಗಣೀ ತಿನ್ನೋರಿಗೆ ಮೀಸೆ ತಿಕ್ಕೋರ್ ಹದಿನಾರ್ ಜನ' ಅನ್ನೋ ಹಾಗೆ - ಬರೆದಿದ್ದನ್ನೆಲ್ಲ ಈ ಅಳಲು, ವಿಸ್ಮಯ, ನೋಟ, ವೈಯುಕ್ತಿಕ ಇತ್ಯಾದಿ ಮಣ್ಣೂ-ಮಸಿಗಳೆಂದು ವರ್ಗೀಕರಣ ಮಾಡಿ ತೆರೆದಿಟ್ಟದ್ದನ್ನ ಕೇಳುವವರು ಯಾರು, ಹೇಳುವವರು ಯಾರು? ಅಲ್ಲದೆ ನನ್ನಲ್ಲಿ ಹಳವಂಡ ಅಡಗಿದೆಯೆಂದಾಕ್ಷಣ ಪೂರ್ಣವಾಗಿ ಎಲ್ಲವನ್ನೂ ಬರೆಯಲು ಸಾಧ್ಯವಿದೆ ಎಂಬ ಮಾತು ಅಷ್ಟೊಂದು ನಿಜವಾದುದಲ್ಲ - ನನಗೆ ಬರೆಯಲು ಮುಖ್ಯವಾಗಿ ಮೂರು ರೀತಿಯಲ್ಲಿ ಪ್ರೇರಣೆ ಸಿಗುತ್ತದೆ - ನನಗೆ ಬೇಕಾದ ಆತ್ಮೀಯರಲ್ಲಿ ಒಂದೇ ದೂರವಾಣಿಯ ಮೂಲಕವೋ ಇಲ್ಲಾ ಮುಖತಃ ಭೇಟಿಯಲ್ಲೋ ಮಾತನಾಡಿ ವಿಚಾರ ವಿನಿಮಯ ಮಾಡಿಕೊಳ್ಳುವುದು, ನಾನು ಎಲ್ಲಾದರೂ ಪ್ರಯಾಣ ಮಾಡುವುದು, ಹಾಗೂ ಪುಸ್ತಕಗಳಲ್ಲೋ, ಅಂತರ್ಜಾಲದಲ್ಲೋ ಯಾವುದಾದರೊಂದು ವಿಷಯ, ವಸ್ತುವನ್ನು ಓದುವುದು. ನನ್ನೊಳಗಿನ ಹಳವಂಡಗಳಿಗೆ ರೂಪಕೊಡುವಂತೆ ಬರೆಯುವ ಒಂದೊಂದು ಸಾಲಿಗೂ ಕನಿಷ್ಟ ಹತ್ತು ಸಾಲುಗಳನ್ನಾದರೂ ಓದಬೇಕು, ಹತ್ತು ಪಟ್ಟು ಮಾತನಾಡಬೇಕು ಇಲ್ಲಾ ಹತ್ತು ಪಟ್ಟು ತಿರುಗಾಡಬೇಕು, ಇವೆಲ್ಲವೂ ಎಲ್ಲಿ ಸಾಧ್ಯ?
***
ಸಾಧ್ಯವಾದಾಗ ಬರೆಯಬೇಕು ಎನ್ನುವುದಾಗಲೀ, ಎಷ್ಟು ಸಾಧ್ಯವೋ ಅಷ್ಟನ್ನು ಬರೆದು ಬದುಕುತ್ತಿರುವವರೆಲ್ಲರೂ ಬುದ್ಧಿವಂತರು. ಆದರೆ ನನಗೆ ಬರೆಯುವ ಚಟ ಬೆಳೆಯದೇ ಹೋದರೆ ನಾನು ಮತ್ತೆಂದೂ ಬರೆಯುವವನಲ್ಲ. ನಮ್ಮ ನಡುವೆ ಒಳ್ಳೆಯ ಪ್ರಕ್ರಿಯೆಗಳಿಗೆ ಕುಮ್ಮಕ್ಕು ಸಿಗುವುದಕ್ಕಿಂತಲೂ 'ಸೊಫಾಕ್ಕೆ ಅಂಟಿಕೊಂಡೇ ಇಡೀ ಸಂಜೆಯನ್ನು ಕಳೆಯುವ' ಪರಿಣಾಮ, ಅವಕಾಶಗಳೇ ಹೆಚ್ಚು. ಈ ನಿಟ್ಟಿನಲ್ಲಿ ಕೊನೇ ಪಕ್ಷ ದಿನಕ್ಕೊಂದಿಷ್ಟಾದರೂ ನಿಗದಿತ ಸಮಯದಲ್ಲಿ ಕೆಲವು ಸಾಲುಗಳನ್ನು ಗೀಚದಿದ್ದರೆ ಅದು ಒಂದು ಹವ್ಯಾಸವಾಗುವುದಾದರೂ ಹೇಗೆ? ಇನ್ನು ವಾರಕ್ಕೊಮ್ಮೆ ಬರೆಯಬಹುದಲ್ಲವೇ ಎಂಬ ಮಾತಿಗೆ ಅಮೇರಿಕದಲ್ಲಿ ಈಗಾಗಲೇ ಎಲ್ಲವೂ 'ವಾರಮಯ'ವಾಗಿರುವಾಗ ನನ್ನ ಬದುಕು-ಬರವಣಿಗೆಯಾದರೂ ವರ್ತಮಾನವೆಂಬ ಹೀಗೆ ಬಂದು ಹಾಗೆ ಹೋಗುವ ಜೀವವುಳ್ಳ ಸರಕಾಗಲೀ ಎಂದುಕೊಂಡೆ, ಬರೆಯಲು-ಓದಲು ಬೇಕಾದಷ್ಟಿರುವಾಗ ವಾರಕ್ಕೊಮ್ಮೆಯ ಸ್ಪಂದನ ಎಲ್ಲಿಯ ಲೆಕ್ಕ? ಆದರೆ... ಪ್ರಸಕ್ತ ವಿದ್ಯಮಾನಗಳ ಮೇಲಾಗಲೀ, ರಾಜಕೀಯ ಸ್ಥಿತಿಗತಿಗಳ ಕುರಿತಾಗಲೀ, ವ್ಯಾಪಾರ-ವಾಣಿಜ್ಯ-ವಿದ್ಯಮಾನಗಳ ಕುರಿತೋ ಬರೆದರೆ ಅದರಿಂದ ಲೋಕಕಲ್ಯಾಣವಾಗದಿದ್ದರೂ ಲೋಕದಲ್ಲಿರುವವರನ್ನು ನೇರವಾಗಿ ತಟ್ಟಬಹುದಾಗಿತ್ತು, ಇನ್ನು ಆಗುವಾಗ ಅನುಭವಿಸುವಾಗ ತಾಜಾ ಕಬ್ಬಿನಹಾಲಿನಂತಿದ್ದು ಮುಂದೆ ಕೊಳೆತು ಹುಳಿಹೆಂಡವಾದ ನನ್ನ ಸರಕುಗಳನ್ನು ಎಷ್ಟು ಜನರಿಗೆ ಹೇಗೆ ಉಣಬಡಿಸುವುದು ಅದರಿಂದ ಏನಾದೀತು ಎನ್ನುವ ಪ್ರಶ್ನೆಯೂ ಅಲ್ಲಲ್ಲಿ ಬಂದಿದೆ. ಸರೀ, ಈ ಬ್ಲಾಗುಗಳಲ್ಲಿ (ಬ್ಲಾಗಿಗೆ 'ತಾರಿ' ಎಂದು ನಾನೊಂದು ಹೊಸಪದವನ್ನು ಪರಿಚಯಿಸಿದರೆ ಹೇಗೆ? ತಾಣದಲ್ಲಿ ಬರೆದ ದಿನಚರಿ - ಎಂಬುದರ ಮೊದಲ ಹಾಗು ಕೊನೆಯ ಅಕ್ಷರ - ತಾರಿ), ಅಲ್ಲ ತಾರಿಗಳಲ್ಲಿ ಯಾರು ಯಾರು ಏನೇನು ಬರೆದಿದ್ದಾರೆ ಎಂದು ನೋಡಿಕೊಂಡು ಬಂದೆ, ಕನ್ನಡ-ಇಂಗ್ಲೀಷು ಭಾಷೆಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಓದಿದವನಿಗೆ ಕೆಲವರು ಇದ್ದದ್ದನ್ನು ತಮ್ಮ ನಿಲುವಿನಲ್ಲಿ ಬರೆದಂತೆಯೂ, ಇನ್ನು ಕೆಲವರು ಇದ್ದದ್ದನ್ನು ತಿರುಚಿ ಬರೆದಂತೆಯೂ, ಮತ್ತೆ ಕೆಲವರು ಶುದ್ಧ ಮನೋರಂಜನೆಯನ್ನೇ ಉದ್ದೇಶವಾಗಿಟ್ಟುಕೊಂಡು ಸೂಕ್ಷ್ಮವಾಗಿ ನೋಡಿದಾಗ 'ಸುತ್ತಿ ಹೊಡೆದವರಂತೆ' ಕಂಡು ಬಂದರು. ಇದ್ದದ್ದನ್ನ ಇದ್ದಹಾಗೇ ಬರೆಯುವ (ಕೊನೇಪಕ್ಷ ಆ ಉದ್ದೇಶವನ್ನು ಹೊಂದಿರುವ) ಹಲವಾರು ಮಾಧ್ಯಮಗಳಿರುವಾಗ, ತಮ್ಮ-ತಮ್ಮ ನಿಲುವುಗಳನ್ನು ತಮಗೆ ತೋಚಿದ ರೀತಿಯಲ್ಲಿ ಹೇಳುವ ಘಟಾನುಘಟಿಗಳಿರುವಾಗ, ಹಾಸ್ಯ-ಮನೋರಂಜನೆಗೆ ಪ್ರತಿಭಾವಂತ ದಿಗ್ಗಜರಿರುವಾಗ ಇವರೆಲ್ಲರ ನಡುವೆ ನನ್ನ ಹಳವಂಡದ ಬರಹಗಳು ಎಷ್ಟರ ಮಟ್ಟಿಗೆ ಎಲ್ಲಿ ಸಲ್ಲುತ್ತವೆ ಎಂದು ಒಮ್ಮೆ ಅವಲೋಕಿಸಬೇಕಾಗಿ ಬಂದಿತು - ಅದರ ಫಲಿತಾಂಶ ದಿಗಿಲನ್ನೂ ಹುಟ್ಟಿಸಿತು!
***
ಹೀಗೆ ಸಂದಿಗ್ಧಗಳ ಬಗೆಗೆ ಬರೆದರೆ ಅದೇ ಒಂದು ಬರಹವಾಯಿತು, ನೋಡು ನೋಡುತ್ತಿದ್ದಂತೇ ಪುಟ ತುಂಬಿತು. ನನ್ನ ಹಿಂದಿನ ಪೋಸ್ಟ್‌ಗಳಲ್ಲಿ ಹೇಳುವುದನ್ನೂ ಇನ್ನೂ ಮುಗಿಸದೇ 'ಭಾಗ-೧' ಎಂದು ಶೀರ್ಷಿಕೆಯಲ್ಲೇ ತೋರಿಸುವ ನೀಚ ಹಾಗೂ ಭಂಡತನಕ್ಕೆ ಇಳಿದುಬಿಟ್ಟಿದ್ದೇನೆ ಎನ್ನಿಸುತ್ತದೆ. 'ಅಂತರಂಗ'ವನ್ನು ಓದಿದವರು after all, 'ಅಂತರಂಗಿ' ಯಾವೊಬ್ಬ ದೊಡ್ಡ ಮಹಾತ್ಮನೂ ಅಲ್ಲ, ಒಬ್ಬ ಸಾಮಾನ್ಯ ಮನುಷ್ಯನೇ ಹೀಗೆ ಬರೆಯುತ್ತಾನಲ್ಲ, ತಾನೊಬ್ಬನೇ ಬದುಕನ್ನು ಅನುಭವಿಸಿದ ಹಾಗೆ ಆಡುತ್ತಾನಲ್ಲ, ಅಬ್ಬಾ ಇವನ ಸೊಕ್ಕೇ!' ಎಂದು ನನಗೆ ಹಿಡಿಶಾಪವನ್ನು ಹಾಕುತ್ತಾರೆಂದು ನನಗೆ ಚೆನ್ನಾಗಿ ಗೊತ್ತಿದೆ.
'ವಾರಕ್ಕೆ ಮೂರು ಬಾರಿಯಾದರೂ ಜಿಮ್‌ಗೆ ಹೋಗಿ' ಎನ್ನುವ ನನ್ನ ಡಾಕ್ಟರರ ಧ್ವನಿಯೂ, 'ಇವೆಲ್ಲಾ ಬರೆಯೋದರಿಂದ ಏನೂ ಪ್ರಯೋಜನ ಇಲ್ಲಾರೀ...' ಎನ್ನುವ ನಮ್ಮ ಅತ್ತೆಯವರ ಮಾತೂ, ಆಫೀಸಿನ ಸಂಪನ್ಮೂಲಗಳನ್ನು ವೈಯುಕ್ತಿಕ ಪ್ರಯೋಜನಕ್ಕೆ ಬಳಸಬಾರದೆಂಬ ನನ್ನ ನೀತಿಯೂ, ನನ್ನ ಬರಹಗಳಿಗೆ ಉತ್ತರಕೊಟ್ಟ, ಪ್ರೈವೇಟ್ ಆಗಿ ಇ-ಮೇಲ್ ಮಾಡಿದ ವರ್ಚುವಲ್ ಪ್ರಪಂಚದ ಮುಖಗಳೂ ನನ್ನನ್ನು ಸುತ್ತುವರಿಯತೊಡಗುತ್ತವೆ. ಸ್ವಾಗತ ದಲ್ಲಿ ಬರೆದಂತೆ ಡಜನ್‌ಗಟ್ಟಲೆ ವಿಷಯಗಳು ಮುತ್ತಿ ನನ್ನ ಸುತ್ತಲೂ ನರ್ತನವಾಡತೊಡಗುತ್ತವೆ, ಇಷ್ಟು ದಿನ ಹತ್ತಿರದಿಂದ ಕೇಳಿ ಬರುತ್ತಿದ್ದ 'ನೋಡೋಣ ಇದು ಎಲ್ಲೀವರೆಗೆ ಬರುತ್ತೋ ಅಂತ' ಎನ್ನುವ ಧ್ವನಿ ಈಗ ಅದೆಲ್ಲೋ ದೂರದಿಂದ ಕೇಳಿಬರುತ್ತಿರುವಂತೆ ಕ್ಷೀಣವಾಗುತ್ತದೆ - ನನ್ನೊಳಗಿನ ನಾನನ್ನು ಇನ್ನೂ ಸಂಪೂರ್ಣವಾಗಿ ಬಿಚ್ಚಿಕೊಂಡೇ ಇಲ್ಲ, ಆಗಲೇ ಬಾಗಿಲುಗಳು ಮುಚ್ಚಿಕೊಂಡಂತೆ ಅನ್ನಿಸಿ, ನನಗೇನಾದರೂ 'ಖಾಯಿಲೆ' ಬಂದು ಬಿಟ್ಟಿದೆಯೇ ಎಂದು ಒಮ್ಮೆಲೇ ಭಯವಾಗತೊಡಗುತ್ತದೆ.
7 comments:
ಅಂತರಂಗಿಗಳೇ,ನಿಮ್ಮ ಅಳಲಿಗೆಲ್ಲಿ ಕೊನೆ?:-)
ನಿಮ್ಮತೀರ್ಮಾನ ಏನು ಈಗ? ಮುಂದೆ ಬರೆಯುತ್ತೀರೋ? ಇದೇ ನಿಮ್ಮ ಕೊನೆಯ ಬರಹವೋ? ತಿಳಿಯಲಿಲ್ಲ.
ಕ್ಷಮಿಸಿ ಮರೆತಿದ್ದೆ. ನಿಮ್ಮ ಬರಹ "ಐವತ್ತರ" ಗಡಿ ದಾಟಿದ್ದಕ್ಕೆ ಅಭಿನಂದನೆಗಳು!
i was just about to say what triveni said. congrats on 50th post; I like ur consistency, i know it's not easy to write a post everyday..
Regarding ur dilemma, i feel u better keep writing, getting time to write may be an issue, but write whenever u can… ur thoughts abt doing things on weekends reminded me of a scene in “America America” where the heroine says “BhaavanegaLu weekendnalli maathra barOdilla”..
afterthoughts:
1. somehow u seem to be calling for sympathy that u r NRI (which i dont like). Remember 'life isn't fair', it isn't fair anywhere. do u think life of a techie in blr is beter than urs?
2. Write for urself, write only if u feel like (that's the basic idea of blogs). I feel u've got carried away a bit by the thought of writing to be read.
ನೀವು ಬ್ಲಾಗಿಸುವುದನ್ನು ಮುಂದುವರೆಸಿ. ನಿಮ್ಮ ಬ್ಲಾಗ್‌ನಿಂದಾಗಿಯೇ ಅಲ್ಲವೆ ನೆಟ್‌ಗಳ್ಳನೊಬ್ಬ ನೆಟ್‌ನೊಳಗೆ ಸಿಕ್ಕಿಬಿದ್ದದ್ದು? ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿನೋಡಿಕೊಂಡದ್ದು?
ಕಾಕತಾಳೀಯವೊ ಎಂಬಂತೆ ಮರುದಿನವೆ ನೀವು "ಅವಕಾಶವಾದಿ ಹಾಡುಹಗಲೇ ಸಿಕ್ಕಿಬಿದ್ದ ಘಳಿಗೆ " ಎಂಬ ಶೀರ್ಷಿಕೆಯ ಬರೆಹವನ್ನು ಬ್ಲಾಗ್‌ಗೆ ಸೇರಿಸಿದ್ದು! ಎಲ್ಲ ಚೆನ್ನಾಗಿಯೇ ಸಾಗಿದೆ, ನೀವು ಮುಂದುವರೆಸಿ.
ಅಂತರಂಗಿ,
೫೦ ಬರಹಗಳ ಗಡಿ ಮುಟ್ಟಿದ್ದಕ್ಕೆ ಶುಭಾಶಯಗಳು. ಕನ್ನಡ ಬ್ಲಾಗ್ ಪರಿಧಿಯಲ್ಲಿ ತೆರೆದುಕೊಳ್ಳುತ್ತಿರುವ phenomeon ನೋಡುವುದಕ್ಕೆ ಖುಷಿ ಮತ್ತು ಹೆಮ್ಮೆಯಾಗುತ್ತಿದೆ. ರಾತ್ರೋರಾತ್ರಿ ಎಷ್ಟೊಂದು ಜನ ಗುಣಮಟ್ಟದ ಬರಹಗಾರರು ಕನ್ನಡದಲ್ಲಿ ಹುಟ್ಟಿಬಿಟ್ಟರಲ್ಲ, ಅವರನ್ನು ಸುಲಭವಾಗಿ ಓದುವುದು ಸಾಧ್ಯವಾಗುತ್ತಿದೆಯಲ್ಲ ಎನ್ನುವುದು ನಿಜಕ್ಕೂ ಸಂತೋಷದ ವಿಷಯ.
(ನೆನ್ನೆ ರಾತ್ರಿ ಬಹಳಷ್ಟು ಟೈಪ್ ಮಾಡಿ ಇಟ್ಟಿದ್ದೆ. ಅಪ್‍ಲೋಡ್ ಮಾಡುವ ಸಮಯಕ್ಕೆ ಸರಿಯಾಗಿ ಬೇರೇ ಏನೋ ಆಗಿ ಅದನ್ನೆಲ್ಲ ಕಳೆದುಕೊಳ್ಳಬೇಕಾಯಿತು. ಹಾಗಾಗಿ ಮತ್ತೊಮ್ಮೆ ಎಂದಾದರೂ ವಿರಾಮದಲ್ಲಿ ಬರೆಯುತ್ತೇನೆ.)
ಹಲ್ಲು ಎಣಿಸುವುದು ಸುಲಭವಲ್ಲ ಮತ್ತು ನೀವು ಅವಕ್ಕೆಲ್ಲ ಹೆದರುವುದಿಲ್ಲ ಎಂದು ಬರವಣಿಗೆಗಳಲ್ಲೆ ತೋರಿಸಿದ್ದೀರ. ಬರೆಯುತ್ತಾ ಹೋಗಿ. ನಮ್ಮ ಸ್ವವಾವಲೋಕನಕ್ಕೆ ನಿಮ್ಮ ಬರವಣಿಗೆ ಸಹಾಯ ಮಾಡುತ್ತಿದೆ ಎನ್ನುವುದರಿಂದ ನನ್ನಂತಹವರ ಧನ್ಯವಾದ ಮತ್ತು ಕೃತಜ್ಞತೆಗೆ ನೀವು ಸಕಾರಣವಾಗಿಯೇ ಭಾಧ್ಯರು.
ನಮಸ್ಕಾರ,
ರವಿ...
ನಿಮ್ಮೆಲ್ಲರಿಗೂ ದೊಡ್ಡ ಥ್ಯಾಂಕ್ಸ್. ಸದ್ಯ, ಮತ್ತೆ ಬರೆಯಲು ಬಿಡುವು ಸಿಕ್ಕಿತಲ್ಲ ಅಷ್ಟೇ ಸಾಕು!
sritri ಅವರೇ, ನಿಮ್ಮ ಪ್ರಶ್ನೆಗಳಿಗೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ! ನೋಡ್ತಾ ಇರಿ 'ಅಳಲು' ಒಂದಲ್ಲ ಒಂದು ದಿನ ನಿಲ್ಲುತ್ತದೆ!
ಶ್ರೀಲತಾ ಅವರೇ, ನಿಮ್ಮ ಅಮೂಲ್ಯ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ, ಇಂಥದ್ದನ್ನು 'ಒಪ್ಪುತ್ತೇನೆ', ಇಂಥದ್ದನ್ನು 'ಒಪ್ಪುವುದಿಲ್ಲ' ಎಂದು ನಿರ್ಭಿಡೆಯಿಂದ ಬರೆಯುವವರಲ್ಲಿ ನೀವೂ ಒಬ್ಬರು, ಇದೇ ರೀತಿ ಯಾವ ಮುಲಾಜೂ ಇಲ್ಲದೆ ಬರೆಯುತ್ತಿರಿ.
ಜೋಶಿಯವರೇ, kanlit ಗೆ ಹೆಗಲಿದೆಯೋ ಇಲ್ಲವೋ, ಮುಖವಂತೂ ಇದ್ದ ಹಾಗಿಲ್ಲ, ಇಲ್ಲವಾಗಿದ್ದರೆ ನನ್ನ ಪ್ರಶ್ನೆಗಳನ್ನು ಉತ್ತರಿಸುತ್ತಿರಲಿಲ್ಲವೇ?
ರವಿಯವರೇ, ನನ್ನ ಧೈರ್ಯದ ಮೇಲೆ ನಿಮ್ಮ ನಂಬಿಕೆ ಬಹಳ ದೊಡ್ಡದು, 'ಅಂತರಂಗ' ನನ್ನನ್ನು ನಾನು ಹುಡುಕಿಕೊಳ್ಳುವಲ್ಲಿ ಸಹಾಯ ಮಾಡುತ್ತಿದೆ ಎನ್ನುವುದು ನಿಜವಾದ ಮಾತು. 'ವಿರಾಮದಲ್ಲಿ ಬರೆದು' ದಯವಿಟ್ಟು ಕಳಿಸಿ, ನಿಮ್ಮ ಅಮೂಲ್ಯ ಫೀಡ್‌ಬ್ಯಾಕಿಗೆ ನನ್ನ ಅಡ್ವಾನ್ಸ್ ಕೃತಜ್ಞತೆಗಳು!
Post a Comment