Parenthesis Phobia ಅರ್ಥಾಥ್ ಆವರಣ (ಬಳಸುವ) ರೋಗ
ಬರೆಯುವವರಿಗೆ ಗೊತ್ತು, ತುಮುಲಗಳನ್ನು ಹತೋಟಿಯಲ್ಲಿಟ್ಟುಕೊಂಡು ಅತಿವೇಗವಾಗಿ ಓಡುವ ಮನಸ್ಸನ್ನೂ, ಅಷ್ಟೇ ನಿಧಾನವಾಗಿ ಓಡುವ ಕೈ ಬೆರಳುಗಳನ್ನೂ, ಒಂದನ್ನು ಹಿಂದಿಕ್ಕಿ ಮತ್ತೊಂದು ಎಂಬಂತೆ ಮುನ್ನುಗ್ಗುತ್ತಿರುವ ಹಲವು ಆಲೋಚನೆಗಳನ್ನೂ ಹಾಗೂ ಭಾಷೆಯೆಂಬ ಮಿತಿ ಇರಬಹುದಾದ, ಬರೀ ಹಲವು ಶಬ್ದಗಳಿಗೇ ಸೀಮಿತಗೊಳ್ಳುವ ಶಬ್ದಕೋಶವನ್ನೂ ಸೇರಿಸಿ ಈ ಎಲ್ಲವನ್ನೂ ಕಲೆಹಾಕಿ ಕೊನೆಯಲ್ಲಿ ಬರಹವೊಂದು ತಯಾರಾಗುತ್ತದೆ. ಹಾಗೆಯೇ ಬರೆಯುವವರ ಮನಸ್ಥಿತಿ ಅಥವಾ ಗೊಂದಲದಲ್ಲಿ ಅದೇ ಸಮಯಕ್ಕೆ ಓದುವವನ ಮನಸ್ಥಿತಿಯೂ ಸೇರಿ ಬರೆಯಬೇಕೆನ್ನುವ ವಸ್ತು ಕಲಸು ಮೇಲೋಗರವಾಗಲಿಕ್ಕೂ ಸಾಕು. ಅಲ್ಲದೇ ಒಂದೇ ಬರಹ ಅಥವಾ ವಾಕ್ಯದಲ್ಲಿ ಹಲವಾರು ಟೋನ್‌ಗಳು ಪ್ರತಿಬಿಂಬಿತವಾಗಬಹುದು, ಹಾಸ್ಯ, ಗಂಭೀರ ಎರಡೂ ಮಿಳಿತವಾಗಿರಬಹುದು - ಅಥವಾ ಬಳಸಿದ ಒಂದೇ ವಾಕ್ಯ, ಪದಕ್ಕೆ ಹಲವಾರು context sensitive ಅರ್ಥಗಳು ಹುಟ್ಟಿಕೊಳ್ಳಬಹುದು. ಇವೆಲ್ಲಕ್ಕೂ ನಾನು ಕಂಡುಹಿಡಿದುಕೊಂಡ ಅಥವಾ ಅಳವಡಿಸಿಕೊಂಡ ಸುಲಭ ಪರಿಹಾರವೆಂದರೆ ಆವರಣಗಳ (parenthesis) ಬಳಕೆ (ಅಥವಾ ಅದು ನನಗೆ ಅಂಟಿಕೊಂಡ irrational ರೋಗ).
ನನ್ನ ಹಳೆಯ ಪೋಸ್ಟ್‌ಗಳನ್ನ ನಾನೇ ಓದಿಕೊಂಡಾಗ ನನಗೇ ಒಮ್ಮೊಮ್ಮೆ ಅತಿಯಾಗಿ ಆವರಣಗಳನ್ನು ಬಳಸಿದ್ದೇನೇನೋ ಎಂದು ಮುಜುಗರವಾಗುತ್ತದೆ. ಆಫೀಸಿನ ಕೆಲಸಕ್ಕೆ ಸಂಬಂಧಿಸಿದ ಇ-ಮೇಲ್ ಹಾಗೂ ಇನ್ಸ್ಟಂಟ್ ಮೆಸ್ಸೇಜುಗಳಲ್ಲೂ ಈ ಆವರಣಗಳ ಕಾಟ ತಪ್ಪಿದ್ದಲ್ಲ - ಎಷ್ಟೋ ಬಾರಿ ಬೇರೆ-ಬೇರೆ ಸಂದೇಶವನ್ನೋ ಅಥವಾ ಅರ್ಥವನ್ನೋ ತಿಳಿಸಲು ನಾನು ಇವುಗಳ ಮೊರೆ ಹೋಗುವುದೇ ಹೆಚ್ಚು. ಅದೇ ರೀತಿ, ನನ್ನ ಎಲ್ಲ ಬರಹಗಳಲ್ಲೂ (ಕೆಲವೊಮ್ಮೆ ಕಣ್ಣಿಗೆ ಕಾಣದ) ಆವರಣಗಳು ದುತ್ತನೇ ಎದುರಾಗಿ ನಕ್ಕು ಬಿಡುತ್ತವೆ - 'ನಾವಿಲ್ಲದೇ ನಿನ್ನ ಬರಹ ಪೂರ್ಣವಾಗದು' ಎಂದು ಹಾಸ್ಯ ಮಾಡುತ್ತವೆ.
ನಾನೇಕೆ ಬರೆಯುತ್ತೇನೆ ಅನ್ನೋದು ಮತ್ತೊಂದು ದಿನದ (ವಾರದ, ತಿಂಗಳಿನ) ಮಾತಾಗಲಿ, ನಾನು ಹೇಗೆ ಬರೆಯುತ್ತೇನೆ ಅನ್ನೋದು ಇಲ್ಲಿ ಪ್ರಸ್ತುತ. ವಿಷಯ ಗಹನವಾಗಿದ್ದರೆ ಪೇಪರ್ರು-ಪೆನ್ನೂ ಹಿಡಿಯುತ್ತೇನೆ, ಇಲ್ಲವೆಂದಾದರೆ ಬರಹ ಪ್ಯಾಡ್ ಓಪನ್ ಮಾಡಿಕೊಂಡು, ಸುಮ್ಮನೇ ನೋಟ್‌ಪ್ಯಾಡ್‌ನಲ್ಲಿ ಬರೆದುಕೊಂಡು ಹೋಗುವ ಹಾಗೆ ಕುಟ್ಟಿಕೊಂಡು ಹೋಗುತ್ತೇನೆ (ಹೌದು, ನಾನು ಇತ್ತೀಚೆಗೆ ಹೆಚ್ಚು-ಹೆಚ್ಚು ಟೈಪ್ ಮಾಡುತ್ತಿರುವುದನ್ನು ನೋಡಿದ ನಮ್ಮ ಮನೆಯವರು ನಾನು ಬರೆಯುವ ಪ್ರಕ್ರಿಯೆಗೆ 'ಕುಟ್ಟುವಿಕೆ' ಎಂದು ಹೆಸರಿಟ್ಟಿದ್ದಾರೆ) - ಈ ಕುಟ್ಟುವಿಕೆಯ ಹಿಂದಿರೋ ಒಂದೇ ಹೆದರಿಕೆಯೆಂದರೆ ಇಲ್ಲಿ ಪ್ರತಿಯೊಂದು ಭಾವವೂ ಅಕ್ಷರ-ಅಕ್ಷರವಾಗಿ ತುಂಡು-ತುಂಡಾಗಿ ಬರುತ್ತದೆ, ಯಾವುದಾದರೂ ಗಹನವಾದ ವಿಷಯ ಇದ್ದರೆ - ಸರಿಯಾಗಿ ಮೂಡುವುದೇ ಇಲ್ಲ. ಅಲ್ಲದೇ ಈ ಕುಟ್ಟುವಿಕೆಯ ವೇಗಕ್ಕೆ ನನ್ನ ಆಲೋಚನೆಯ ವೇಗವೂ ಹೊಂದಿಕೊಂಡು ಬಿಟ್ಟಿದೆಯೇನೋ ಎಂದು ಒಮ್ಮೊಮ್ಮೆ ಹೆದರಿಕೆಯಾಗುತ್ತದೆ. ಕುಟ್ಟುವಿಕೆಯ ಅನುಕೂಲವೇನೆಂದರೆ ಬರೆದಿದ್ದನ್ನು ಸುಲಭವಾಗಿ maintain ಮಾಡಬಹುದು. ಒಂದೇ ಬರಹದಲ್ಲಿ ಹಲವು ಧ್ವನಿಗಳನ್ನು ಪ್ರತಿನಿಧಿಸಲು ಫಾಂಟುಗಳ ಬದಲಾವಣೆಗೆ ಮೊರೆ ಹೋಗಬಹುದು, ಅಕ್ಷರಗಳ ಗಾತ್ರ, ರಚನೆ, ಬಣ್ಣ ಹಾಗೂ ಮೋಡಿಯನ್ನು ಬದಲಾಯಿಸುವುದರಿಂದ ಹೇಳುವ ವಿಷಯದಲ್ಲಿ ವೈವಿಧ್ಯತೆಯನ್ನು ಮೂಡಿಸಬಹುದು ಆದರೆ ಇಲ್ಲಿರುವ ಹೆದರಿಕೆಯೆಂದರೆ ಇಂತಹ ಬಳಕೆ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ವಿಶ್ವಮಾನ್ಯವಾಗಿರಬೇಕು ಅಲ್ಲದೇ ಬಳಸಿದ ಸ್ಟ್ಯಾಂಡರ್ಡಿಗೇ ಕಟ್ಟಿ ಬಿದ್ದು, ಓದುಗರಿಗೆ ಒಂದು ರೀತಿಯ ಹವ್ಯಾಸ ಹುಟ್ಟಬೇಕು, ಎಲ್ಲರಿಗೂ ಹೆಚ್ಚು ಅನ್ವಯವಾಗುವಂಥ ಸ್ಟ್ಯಾಂಡರ್ಡ್ ಅಥವಾ ಶೈಲಿಯನ್ನು ಕಂಡುಹಿಡಿಕೊಂಡು ಅದನ್ನೇ ಮುಂದುವರೆಸುವ ಪರಿಪಾಠ ಸಾಮಾನ್ಯದ್ದಲ್ಲ - ಇವೆಲ್ಲದರ ಜಂಜಾಟ ಬೇಡವೆಂದೇ ನಾನು ಆವರಣಗಳ ಮೊರೆ ಹೊಕ್ಕರೆ ಮೈ ಮೇಲೆ ಬಿದ್ದು ನನ್ನನ್ನೇ ಹೆದರಿಸುತ್ತಾವೆಂದರೆ?
ಈ ಆವರಣಗಳು ನನ್ನ ಕಣ್ಣಿಗೆ ಸರ್ಕಾರಿ ಅಧಿಕಾರಿಗಳ ಬಾಗಿಲ ಬಳಿ ಇರುವ ಕಾರಕೂನರಂತೆ ಕಂಡು ಬರುತ್ತವೆ, ಇವರನ್ನು ಮೆಚ್ಚಿಸದೇ ನಾನು ಕೈಗೊಂಡ ಯಾವ ಕಾರ್ಯವೂ ಸಂಪೂರ್ಣಗೊಳ್ಳದು. ದೇವರ ನಡುವಿನ ಸಂಭಾಷಣೆಗೆ ಸಹಾಯಮಾಡುವುದರಲ್ಲಿ ಸಿದ್ಧಹಸ್ತರಾದ ಇವುಗಳು ಸಮಯದಿಂದ ಸಮಯಕ್ಕೆ ತಮ್ಮದೇ ಆದ ವ್ಯಕ್ತಿತ್ವವೊಂದನ್ನು ಬೆಳೆಸಿಕೊಳ್ಳುವುದೂ ಅಲ್ಲದೇ ಕೂತಲ್ಲೇ ಕೂತು ಕಾರಕೂನಿಕೆ ಮಾಡೀ-ಮಾಡಿ ದೊಡ್ಡ ಹೊಟ್ಟೆಯನ್ನೂ ಬೆಳೆಸಿಕೊಳ್ಳುತ್ತವೆ. ಕೊನೆಕೊನೆಗೆ ಹೇಗಾಗುತ್ತದೆ ಎಂದರೆ ನಾನು ನೋಡಲು ಹೊರಟಿರುವ ಅಧಿಕಾರಿಗಿಂತಲೂ ಅವರ ಕಾರಕೂನ ಮುಖ್ಯವಾಗಿ ಕಂಡುಬರುತ್ತಾನೆ ಅಥವಾ ಹಾಗೆ ತೋರಿಸಿಕೊಳ್ಳುತ್ತಾನೆ. ಈ ಅರ್ಥದಲ್ಲಿಯೇ ನಾನು ಹಲವಾರು ಆವರಣಗಳನ್ನು ನಂಬಿಕೊಂಡಿರುವುದು - ನಂಬಿಕೆಟ್ಟವರಿಲ್ಲವೋ ಎಂದು ನನ್ನನ್ನು ಯಾವತ್ತೂ ಅವುಗಳು ಕೈ ಬಿಟ್ಟಿದ್ದಿಲ್ಲ. ಆವರಣಗಳಲ್ಲಿ ಹಲವಾರು ಬಗೆ ಇದ್ದು ( (), {}, [] ), ಕೊನೆಗೆ ನಾನು ಮೈನಸ್ ಅಥವಾ ಹೈಫನ್ ಎಂದು ಹಾಕಿಕೊಳ್ಳುತ್ತಿದ್ದ - ಒಂದು ಸಣ್ಣ ಗೆರೆಯೂ ರೇಖಾವರಣವಾಗಿ ಹೆದರಿಸಲು ಶುರುಮಾಡಿದೆ! ಈ ಹೆದರಿಕೆಯನ್ನೇ ನಾನು phobia ಎಂದಿದ್ದು, ಇದು ಒಂದು ರೀತಿಯ irrational ಹೆದರಿಕೆ, ಮನುಷ್ಯ ಸಂಬಂಧಿ (ಅಥವಾ ನನಗೆ ಗೊತ್ತಿರುವ) ಯಾವ ಮೌಲ್ಯಗಳಿಂದಲೂ ಅಳೆಯಲಾಗದಷ್ಟರ ಮಟ್ಟಿಗೆ ನನ್ನೊಳಗೊಂದಾಗಿದೆ.
'ದೇವರ ಭಯವೇ ಜ್ಞಾನದ ಆರಂಭ' ಎಂದು ಎಲ್ಲೋ ಓದಿದ್ದ ನೆನಪು, ಅದನ್ನು ಬದಲಾಯಿಸಿ 'ಆವರಣಗಳ ಭಯವೇ ಬರಹದ ಆರಂಭ' ಎಂದು ಬರೆದರೆ ಹೇಗೆ? ಮೊದಲೆಲ್ಲ ಸಂಭಾಷಣೆಗಳು ಮುಕ್ತವಾಗಿ ಹರಿದು ಹೇಳಬೇಕಾದ್ದನ್ನು ಹೇಳುವ ಅಗತ್ಯವಿತ್ತು ಆದರೆ ಈಗ ಆ ಸ್ಥಳವನ್ನು ಆವರಣಗಳು ಆಕ್ರಮಿಸಿಕೊಂಡಿವೆಯೆಂದರೆ ಅತಿಶಯೋಕ್ತಿಯಾಗುವುದೇ? ಸಂಭಾಷಣೆಗಳನ್ನು ಹೇಳಿಸಲು ಪಾತ್ರವನ್ನು ಸೃಷ್ಟಿ ಮಾಡಬೇಕಾಗುತ್ತದೆ, ಆದರೆ ಥರಾವರಿ ಆವರಣಗಳ ಸೃಷ್ಟಿಗೆ ಯಾವ ಜೀವದ ಹಂಗೂ ಬೇಕಿಲ್ಲ. ಆದರೆ... ಮೊದಮೊದಲು ವಾಕ್ಯದ ವಿಸ್ತಾರ ರೂಪವನ್ನು ತಾಳುತ್ತಿದ್ದ ಈ ಆವರಣಗಳು ಈಗೀಗ ತಮ್ಮಷ್ಟಕ್ಕೇ ತಾವೇ ಗೋಡೆಗಳಾಗಿಕೊಂಡು ತಮ್ಮೊಳಗಿನ ಅದೇನೋ ಅರ್ಥವನ್ನು ಓದುಗ ಕಂಡುಕೊಳ್ಳಲಿ ಎಂದು ಹಪಹಪಿಸುವ ವ್ಯಸ್ತ ಮನಸ್ಸಿನ ಏಕಾಂತವಾಸಿಗಳಾಗಿ ಕಂಡು ಬರುತ್ತಿವೆ, ಅಲ್ಲಲ್ಲ, 'ಕಂಸ, ಪುಷ್ಪ, ಚೌಕ, ಹಾಗೂ ರೇಖಾ'ವರಣಗಳೆಂದು ಹೆಸರಿಟ್ಟುಕೊಂಡ, ನನ್ನ ಸಹಪಾಠಿಗಳಂತೆ ನನ್ನ ಈ ಪ್ರಯಾಣದಲ್ಲಿ ಕೆಲಕಾಲವಾದರೂ ಜೊತೆಗಾರರಂತೆ ಮುಂದುವರೆಯುವ ಲಕ್ಷಣಗಳು ತೋರುತ್ತಿವೆ, ಅಲ್ಲಲ್ಲ, ಚದುರಂಗದ ಪಟ್ಟೆಯ ಮೇಲೆ ಯಾವುದೋ ಯುದ್ಧಕ್ಕೆ ಸನ್ನದ್ದರಾದಂತೆ ಕಂಡು ಬರುವ ಹಲವು ರೀತಿಯ ಕಾಯಿಗಳಾಗಿ ಕಂಡುಬರುತ್ತಿವೆ, ಎಂದರೆ ಸರಿ. ಆದರೆ ಒಂದಂತೂ ಗ್ಯಾರಂಟಿ, ಈ ಅಯೋಗ್ಯ ಹೆದರಿಕೆಯ ಹಿಂದೆ ಯಾವ ಕಾರಣಗಳೂ ಇಲ್ಲ, ಈ ಮಾತುಗಳನ್ನು ಬರೆಯುತ್ತಿದ್ದಂತೇ ಆವರಣಗಳು (ಇನ್ನೂ ಹತ್ತಿರ ಬಂದು) ನನ್ನ ಸ್ನೇಹಿತರಾಗತೊಡಗುತ್ತವೆ!
ಇಂದಿನ ಇನ್ಸ್ಟಂಟ್ ಮೆಸ್ಸೇಜುಗಳ ಯುಗದಲ್ಲಿ ನಗುವುದಕ್ಕೂ, ಅಳುವುದಕ್ಕೂ ಹಾಗೂ ಇತರ ಅದೆಷ್ಟೋ ಭಾವನೆಗಳನ್ನು ಬರೆಯಲು ಆವರಣಗಳನ್ನು ಬಳಸುವಂತೆ ಮೊದಲು ಶುರು ಮಾಡಿದ್ದು ನಾನಂತೂ ಅಲ್ಲ.
6 comments:
ಹೌದು (ಯಸ್) ನೀವು ಬೊಗಳೆ(ಬ್ಲಾಗ್) ಬಿಟ್ಟದ್ದು ಸರಿ(ಖರೆ).
ಆದರೆ(ಬಟ್) ಕುಟ್ಟುವಾಗ (ಟೈಪ್ ಮಾಡುವಾಗ) ಸ್ವಲ್ಪ ನಿಧಾನವಾಗಿ(ಮೆಲ್ಲನೆ) ಕುಟ್ಟಿ(ಟೈಪಿಸಿ). ಇಲ್ಲದಿದ್ದರೆ ಕೀಲಿ(ಕೀ)ಗಳು ಹೊರಕ್ಕೆ ಹಾರಿಯಾವು(ನೆಗೆದಾವು). ಜೋಕೆ(ಎಚ್ಚರಿಕೆ)!
planet kannadadalli nOdi illi bande...sakhathaagide aavaraNagaLa bagge post'u! nanagU swalpa ee huchchu ide - but nange hyphenating rOganU jotenallE continue aagtide! - so neev nanaginta better statenallideera!:))
koneya saalinalli instant msgsnalli nagOdakke aLodakke aavaraNagaLa link ishTa aaytu:)
'ಅಂತರಂಗ'ಕ್ಕೆ ಅವರಣವೇ... ಛೆ..ಛೆ... ಅದು ರವಿ ಬೆಳಗೆರೆ ಹೇಳಿದಂತೆ ಮನಸ್ಸಿಗೆ ಫ್ರೇಮ್ ಹಾಕಿದ ಹಾಗೆ... ಹ್ಹ ಹ್ಹ ಹ್ಹಾ... ಸುಮ್ನೇ ಜೋಕು... ಈಗ ಸ್ವಲ್ಪ ಸೀರಿಯಸ್ಸು... ಆವರಣದ ಬಂಧವಿಲ್ಲದೆ ನಿಮ್ಮ ಅಂತರಂಗ ಬಹಿರಂಗವಾಗಲೀ... ;+D
sree ಅವರೇ,
hyphenating ಅನ್ನೂ ನಾನು 'ರೇಖಾವರಣ' ಎಂದೇ ಗುರುತಿಸಿಕೊಳ್ಳುತ್ತೇನೆ, ಆದ್ದರಿಂದ ಗೆರೆಯನ್ನು ಬಳಸಿದಾಕ್ಷಣ ಆವರಣದಿಂದ ಮುಕ್ತರೇನಾಗೋಲ್ಲ!
ಸಾರಥಿ ಅವರೇ,
ನೀವು ಬಹಳ ಕೆಟ್ಟ ಡಾಕ್ಟರಪ್ಪಾ, ಒಂದೇ ದಿನದಲ್ಲಿ ಹೇಗೆ ರೋಗ ಮುಕ್ತನಾಗಲಿಕ್ಕೆ ಸಾಧ್ಯ? ಔಷಧಿ ಇಲ್ಲದೇ ಬರೀ ಕೈ ಗುಣದಿಂದ ಹೋಗಬಹುದಾದ ರೋಗ ಅಲ್ಲಾ ಸಾರ್ ಇದು!
ಅನ್ವೇಷಿಗಳೇ,
ಈ ರೋಗದ ಹಿಂದಿರೋ 'ಅಸತ್ಯ'ವೇನಾದ್ರೂ ಗೊತ್ತಾದ್ರೇ ತಿಳಿಸಿ ಸ್ವಾಮಿ - ಹಿಂದಿನ ಕಾಲದಲ್ಲಿ ಭತ್ತ ಕುಟ್ಟ್‌ತಾ ಇದ್ರಂತೆ, ನಾನು ಇದನ್ನ ಕುಟ್ತೇನೆ!
Post a Comment