Showing posts with label ಬರಹ. Show all posts
Showing posts with label ಬರಹ. Show all posts

Thursday, November 08, 2007

ನಾನೊಬ್ಬ ಬ್ಲಾಗಿಷ್ಟು!

ಫುಡ್ ನೆಟ್‌ವರ್ಕ್‌ನಲ್ಲಿ ರೇಚಲ್ ರೇ ನಡೆಸಿಕೊಡುವ ಮುವತ್ತು ನಿಮಿಷಗಳ ಕಾರ್ಯಕ್ರಮದ ಬಗ್ಗೆ ನಿಮಗೆ ಗೊತ್ತಿರಬಹುದು (30 Minute Meals with Rachael Ray). ಅಡುಗೆಗೆ ಬೇಕಾದ ಹೆಚ್ಚಿನ ತಯಾರಿಗಳನ್ನು ಮೊದಲೇ ಮಾಡಿಕೊಂಡು ಒಂದು ಕ್ಲೀನ್ ಕಿಚನ್ ನಿಂದ ಆರಂಭವಾಗುವ ಕಾರ್ಯಕ್ರಮ ಮುವತ್ತು ನಿಮಿಷಗಳ ತರುವಾಯ ಏನಿಲ್ಲವೆಂದರೂ ಥ್ರೀ ಕೋರ್ಸ್ ಮೀಲ್ ಒಂದನ್ನು ಫ್ಯಾಮಿಲಿಯ ಮಟ್ಟದಲ್ಲಿ ತಯಾರು ಮಾಡುತ್ತದೆ. ಅಡುಗೆ ಮಾಡುವುದು ಸುಲಭ ಹಾಗೂ ಅದು ಹೆಚ್ಚು ಸಮಯವನ್ನು ತೆಗೆದುಕೊಳ್ಳಬೇಕು ಎನ್ನುವುದೇನೂ ಇಲ್ಲ ಎನ್ನುವುದು ಕಾರ್ಯಕ್ರಮದ ಮೂಲ ಮಂತ್ರ.

ನಾನು ಬ್ಲಾಗ್ ಬರೆಯುವ ವಿಚಾರಗಳು ಬಂದಾಗಲೆಲ್ಲ ’ಅಂತರಂಗ’ದ ಅವತರಣಿಕೆಗಳನ್ನು ರೇಚಲ್ ರೇ ನಡೆಸುವ ಮುವತ್ತು ನಿಮಿಷದ ಕಾರ್ಯಕ್ರಮಕ್ಕೆ ಹೋಲಿಸಿಕೊಂಡಿದ್ದೇನೆ. ಆದರೆ ರೇಚಲ್ ಮುವತ್ತು ನಿಮಿಷಗಳ ತರುವಾಯ dazzling dishes ಅನ್ನು ಪ್ರಸ್ತುತ ಪಡಿಸಿದರೆ ಈ ಲೇಖನಗಳು ಹೊರ ಬರುವಾಗ, ಬಂದ ಮೇಲೆ ಬೋರ್ ಹೊಡೆಸುವುದೇ ಹೆಚ್ಚು. ಲೇಖನಗಳನ್ನು ಬರೆಯುವುದಕ್ಕೂ ನಾನು ಅಡುಗೆಯ ಪದಾರ್ಥಗಳನ್ನು ಮುಂಚಿತವಾಗಿ ತಯಾರು ಮಾಡಿಟ್ಟುಕೊಳ್ಳುವಂತೆ ವಿಚಾರಗಳನ್ನು ’ಪ್ರಿ-ಕುಕ್’ ಮಾಡಿಕೊಂಡಿರುತ್ತೇನೆ, ಅವಕಾಶ ಸಿಕ್ಕಾಗ ಮುವತ್ತು ನಿಮಿಷಗಳಲ್ಲಿ ಕುಟ್ಟಿ ಬಿಸಾಕುತ್ತೇನೆ.

***

ಯಾವುದೋ ಒಂದು ವಿಷಯದ ಬಗ್ಗೆ ಓದುಗರ ಗಮನವನ್ನಾಗಲೀ ಬರೆಯುವವರ ಚಿಂತನೆಯನ್ನಾಗಲೀ ಹೆಚ್ಚು ಹೊತ್ತು ಇಟ್ಟುಕೊಳ್ಳದಿರುವ ಬ್ಲಾಗಿನ ಸ್ವಭಾವದ ಮಿತಿಯಲ್ಲಿ ಗಹನವಾದ ವಿಷಯವನ್ನು ಕೇವಲ ಅರ್ಧ ಘಂಟೆಗೆ ಸೀಮಿತವಾಗಿಸಿ ಆ ವಿಷಯದ ನಾಜೂಕುತನವನ್ನು ನಾನು ಮೊಟಕುಗೊಳಿಸಲು ಸಿದ್ಧನಿಲ್ಲದಿದ್ದರೂ ಎಷ್ಟೋ ಸಾರಿ ಲೇಖನಗಳು ಇನ್ನೂ ಬೆಳೆಯಬಹುದಿತ್ತು ಎನ್ನಿಸುತ್ತದೆ. ಬರವಣಿಗೆಯ ಉಳಿದ ಪ್ರಾಕಾರಗಳಲ್ಲಿ ಸೃಷ್ಟಿಯಾಗುವ ಪಾತ್ರಗಳು ಇಲ್ಲಿಲ್ಲ, ಪಾತ್ರಗಳ ಹಿಂದಿನ ಮನಸ್ಥಿತಿಯ ತಲ್ಲಣಗಳ ಮೇಲೆ ಬೆಳಕು ಬೀರುವ ವ್ಯವಧಾನವಿಲ್ಲ. ನಾನು ಬ್ಲಾಗ್ ಪೋಷ್ಟ್ ಒಂದನ್ನು ಬರೆಯಬಲ್ಲೆ ಎನ್ನುವ ಹೆಮ್ಮೆಯ ಹಿಂದೆ ಅದು ಕೇವಲ ಅರ್ಧ ಘಂಟೆ ನನಗೊದಗಿಸುವ ಸವಾಲಿನ ಬಗ್ಗೆ ಒಮ್ಮೊಮ್ಮೆ ಹೆದರಿಕೆಯಾಗುತ್ತದೆ, ಮತ್ತೊಮ್ಮೆ ಹಿಂಸೆಯಾಗುತ್ತದೆ. ಅದೇ ರೀತಿ ದಿನೇದಿನೇ ಉಕ್ಕಿ ಬರುವ ಭಾವನೆಗಳನ್ನು ಒಂದು ಕಡೆ ಕೂಡಿಟ್ಟು ಮತ್ಯಾವುದೋ ಒಂದು ರೀತಿಯಲ್ಲಿ ತೊಡಗಿಕೊಳ್ಳುತ್ತೇನೆ ಮುಂದೊಂದು ದಿನ ಎನ್ನುವುದೂ ಕಷ್ಟದ ಮಾತಾಗುತ್ತದೆ. ಒಂದು ಕಾಲದಲ್ಲಿ ಬರವಣಿಗೆಯ ಶಿಸ್ತನ್ನು ರೂಪಿಸಿಕೊಳ್ಳುವುದಕ್ಕಾಗಿ ಹುಟ್ಟಿ ಬಂದ ಬ್ಲಾಗ್ ಬರಹಗಳು ಇಂದು ಅವೇ ಅನಿವಾರ್ಯವೇನೋ ಎನ್ನುವಂತಾಗಿದ್ದು ನಿಜವೂ ಹೌದು.

ಬ್ಲಾಗಿನ ಅನುಕೂಲವೆಂದರೆ - ಡೆಸ್ಕ್‌ಟಾಪ್ ಪಬ್ಲಿಷಿಂಗ್. ನಿಮ್ಮ ಲೇಖನಗಳು ಬೇರೆ ಯಾರ ಅವಗಾಹನೆಗೂ ಸಿಕ್ಕಬೇಕಾಗಿಲ್ಲ, ಅವು ಪ್ರಕಟವಾಗುವವರೆಗೂ ಕಾಯಬೇಕಾಗಿಲ್ಲ, ಯಾರಿಗೂ ’ದಯವಿಟ್ಟು ಪ್ರಕಟಿಸಿ’ ಎಂದು ಹಲ್ಲುಗಿಂಜಬೇಕಾದುದಿಲ್ಲ. ಆದರೆ ನಿಮ್ಮ ಲೇಖನಗಳಿಗೆ ನೀವು ಹಾಗೂ ನೀವು ತೊಡಗಿಸುವ ಸಮಯವೇ ಮಿತಿ. ನಾನಂತೂ ಒಮ್ಮೆ ಬರೆದುಕೊಂಡ ಹೋದ ಲೇಖನಗಳನ್ನು ಮತ್ತೆ ತಿದ್ದುವುದೂ ಇಲ್ಲ, ಅಲ್ಲಲ್ಲಿ ಕಾಗುಣಿತವನ್ನು ಸರಿಪಡಿಸುವುದು ಬಿಟ್ಟರೆ. ಅಲ್ಲದೇ, ಹೆಚ್ಚಿನ ಲೇಖನಗಳು ಲೇಟ್ ನೈಟ್ ಅಥವಾ ಅರ್ಲಿ ಮಾರ್ನಿಂಗ್ ಮನಸ್ಥಿತಿಯಲ್ಲೇ ಹುಟ್ಟಿ ಬಂದವುಗಳಾದ್ದರಿಂದ ಅವುಗಳಿಗೆ ಬೇಕಾದಷ್ಟು ಮಿತಿಗಳಿವೆ. ಮುನ್ನೂರಕ್ಕೂ ಮೇಲ್ಪಟ್ಟು ಲೇಖನಗಳನ್ನು ಬರೆದ ಮೇಲೆ ಬ್ಲಾಗ್ ಬರಹಗಳಷ್ಟು ಸುಲಭವಾದುದು ಇನ್ನೊಂದಿಲ್ಲವೆನ್ನಿಸಿದ್ದು ನಿಜ, ಆದರೆ ಎಲ್ಲರೂ ಬ್ಲಾಗ್ ಮಾಧ್ಯಮಕ್ಕೆ ಬಂದು ಬಿಟ್ಟಾರೇನೋ ಎಂಬ ಹೆದರಿಕೆಯೂ ಅದರ ಹಿಂದಿರುವುದು ಸ್ಪಷ್ಟ.

***

ನಾನು ಕೆಲವು ವರ್ಷಗಳ ಹಿಂದೆ ಮಯೂರ ಮಾಸಪತ್ರಿಕೆಯನ್ನು ಒಂದೆರಡು ವರ್ಷಗಳ ಕಾಲ ಅಮೇರಿಕಕ್ಕೆ ತರಿಸುತ್ತಿದ್ದೆ. ಅದರಲ್ಲಿ ಪ್ರಕಟವಾಗುತ್ತಿದ್ದ ಸಣ್ಣ ಕಥೆಗಳು ವಿಶೇಷವಾಗಿ ನನಗೆ ಇಷ್ಟವಾಗುತ್ತಿದ್ದವು. ಮೊನ್ನೆ ಬೇಸ್‌ಮೆಂಟಿನಲ್ಲಿ ಏನನ್ನೋ ಹುಡುಕುತ್ತಿದ್ದವನಿಗೆ ಹಳೆಯ ಮಯೂರವೊಂದು ಸಿಕ್ಕಿತು, ಹಾಗೇ ಅದರಲ್ಲಿನ ಕಥೆಯೊಂದನ್ನು ಓದಿಕೊಂಡು ಹೋದೆ. ಆ ಬರಹದ ಮೋಹಕತೆ ನನ್ನನ್ನು ವಿಶೇಷವಾಗಿ ಆಕರ್ಷಿಸಿತು, ಒಂದು ಸಣ್ಣಕಥೆಯ ಹಂದರದಲ್ಲಿ ಪಾತ್ರಗಳಿದ್ದವು, ಚೆನ್ನಾಗಿ ಆಲೋಚಿಸಿ ಬರೆದ ಬರವಣಿಗೆ ಇತ್ತು, ಕೊನೆಯವರೆಗೂ ಓದಿಸಿಕೊಂಡು ಹೋಗುವ ರೋಚಕತೆ ಆ ಬರಹದಲ್ಲಿತ್ತು. ಹಾಗೇ ಕಾದಂಬರಿ, ನಾಟಕ, ಕವನ, ಮುಂತಾದವುಗಳಿಗಾಗಲೀ ಅಥವಾ ಲಘು ಪ್ರಬಂಧಗಳಿಗಾಗಲೀ ಅವುಗಳದ್ದೇ ಆದ ವಿಷಯ ಸೂಕ್ಷ್ಮತೆ ಇದೆ, ಆಳವಿದೆ. ಆದರೆ ನಾನು ಓದಿದ ಬ್ಲಾಗಿನ ಬರಹಗಳಲ್ಲಿ ವಿಷಯ ಸೂಕ್ಷ್ಮತೆ, ಅವುಗಳ ಬೆಳವಣಿಗೆಗಳು ಸದಾ ಅರ್ಜೆಂಟಿನಲ್ಲಿಯೇ ಹುಟ್ಟಿ ಬಂದವುಗಳಾಗಿ ಕಂಡುಬರುತ್ತಿವೆ. ’ಕಾಯದಿದ್ದರೆ ಕೆನೆ ಕಟ್ಟದು’ ಎನ್ನುವ ಆಡು ಮಾತಿನ ಹಿನ್ನೆಲೆಯಲ್ಲಿ ಈ ಬ್ಲಾಗ್ ಪೋಸ್ಟುಗಳಿಗೆ ಯಾರಿಗೂ ಕಾಯುವ ವ್ಯವಧಾನವಾಗಲೀ, ಯಾರಿಂದ ಯಾವ ಪ್ರತಿಕ್ರಿಯೆಯನ್ನು ನೀರೀಕ್ಷಿಸುವ ತಾಳ್ಮೆಯಾಗಲೀ ಇಲ್ಲವೇ ಇಲ್ಲವೇನೋ ಎನ್ನುವುದು ನನ್ನ ಅನಿಸಿಕೆ ಅಷ್ಟೇ.

ಅನಿಸಿಕೆಯ ವಿಚಾರಕ್ಕೆ ಬಂದಾಗ - ಹೆಚ್ಚಿನ ಬ್ಲಾಗ್ ಪೋಸ್ಟ್‌ಗಳು ಅನಿಸಿಕೆಗಳು ಅಥವಾ ಅನುಭವಗಳು. ಅದರಲ್ಲಿ ಕಲಾತ್ಮಕತೆ ಇದೆಯೇ ಎನ್ನುವುದು ಸೋಜಿಗದ ಪ್ರಶ್ನೆ. ಬ್ಲಾಗ್ ಪೋಸ್ಟ್‌ನ ವಾಕ್ಯಗಳು ತುಂಡು-ತುಂಡು ವಾಕ್ಯಗಳು. ಎಲ್ಲಾದರೂ ಒಂದೆರಡು ಉದ್ದುದ್ದ ವಾಕ್ಯಗಳನ್ನು ಬಳಸಿದರೂ ಓದುಗರನ್ನು ಕಳೆದುಕೊಳ್ಳುವ ಹೆದರಿಕೆ ಈ ಬರಹಗಳಿಗೆ. ಪ್ರತಿಯೊಂದು ಬರಹವೂ ರೋಚಕವಾಗಬೇಕು, ಹೆಚ್ಚು ಜನಪ್ರಿಯವಾಗಬೇಕು, ಎಲ್ಲರ ಹಾಗೆ ನಾವೂ ಒಂದು ಪುಸ್ತಕವಾಗಬೇಕು ಎನ್ನುವ ತುಡಿತ ಬರಹದ ಹೆಡ್ಡಿಂಗ್‌ನಿಂದ ಹಿಡಿದು ಕೊನೆಯವರೆಗೂ ’ರಾಜ್ಯ ಪ್ರಶಸ್ತಿಯನ್ನು ನಮಗೇ ಕೊಡಿ’ ಎಂದು ಲಾಬಿ ಎಬ್ಬಿಸುವ ಬರಹಗಾರರ ಹಿಂಡಿನ ಹಾಗೆ ಕಾಣಿಸುತ್ತವೆ. ಈ ಬರಹಗಳಲ್ಲಿ ಕಾಂಟ್ರವರ್ಸಿಯಿಂದ ಹೊರಗುಳಿಯುವುದು ಅನಿವಾರ್ಯವಾಗುತ್ತದೆ, ಏಕೆಂದರೆ ಇಲ್ಲಿನ ಓದುಗರ ಮನಸ್ಥಿತಿ ಮೊದಲೇ ಗೊತ್ತಿರುವುದರಿಂದ ಅವರಿಗೆ ಯಾವುದು ಇಷ್ಟ, ಯಾವುದು ಇಷ್ಟವಿಲ್ಲ ಎನ್ನುವುದರ ಬಗ್ಗೆ ಒತ್ತು ಕೊಡಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಯೋಚಿಸಿದಾಗ ಈ ಹಿಂದೆ ಒಂದಿಷ್ಟು ಬರಹಗಳನ್ನು ಬ್ಲಾಗ್ ಮೂಲಕ ಪ್ರಕಟಿಸಿ ಮರೆಗೆ ಸೇರಿದ ಎಷ್ಟೋ ಜನರ ಬಗ್ಗೆ ನನಗೆ ಗೌರವವಿದೆ, ಬ್ಲಾಗ್ ಬರಹಗಳು ಅವರಿಗೆ ಅಲ್ಟಿಮೇಟ್ ಸಂತೋಷವನ್ನು ತಂದುಕೊಡದೇ ಇರಬಹುದು, ಹಾಗೆ ಆಗದಿರಲಿ. ಅದರಿಂದಾಲಾದರೂ ಅವರು ತಮ್ಮ ಬರಹದ ಸೆಲೆಯನ್ನು ಮತ್ತಿನ್ನೆಲ್ಲಾದರೂ ಬೇರೆ ಮಾಧ್ಯಮದ ಮೂಲಕ ಉಕ್ಕಿಸಲಿ. ಎಲ್ಲೂ ಯಾವುದಕ್ಕೂ ತೊಡಗಿಕೊಳ್ಳದ ಎಷ್ಟೋ ಮಿತಿಗಳನ್ನು ಒಳಗೊಂಡ ಬ್ಲಾಗ್ ಬರಹಗಳು ನನ್ನಂತಹವರಿಗಿರಲಿ. ಒಂದಿಷ್ಟು ಲೇಖಕರಿಗೆ ನಾವೂ ಸೃಜನಶೀಲರಾಗ ಬೇಕು ಎನ್ನುವ ತುಡಿತವಿದೆ, ಮತ್ತಿನ್ನೊಂದಿಷ್ಟು ಲೇಖಕರಿಗೆ ದಿಢೀರ್ ಖ್ಯಾತಿಯನ್ನು ಪಡೆಯುವ ಅಭಿವ್ಯಕ್ತಿ ಇದೆ. ಅಮೇರಿಕದಲ್ಲಿ ದೊಡ್ಡ ಬರಹಗಾರರು ಎನ್ನುವ ಹಣೆಪಟ್ಟಿಯನ್ನು ಬಹಳ ಜನ ತಮ್ಮಷ್ಟಕ್ಕೆ ತಾವೇ ಅಂಟಿಸಿಕೊಂಡು ನಗೆಪಾಟಲಿಗೆ ಗುರಿಯಾಗಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಮತ್ತಿನ್ನೊಂದಿಷ್ಟು ಜನ ಹೇಳುವ ಹಾಗೆ ಅಮೇರಿಕದಲ್ಲೂ ಗಂಭೀರವಾದ ಕನ್ನಡ ಬರಹಗಾರರು ಇರುವುದು ಸಾಧ್ಯವೇ ಎನ್ನುವುದನ್ನು ಕುರಿತು ಆಲೋಚಿಸಿದ್ದೇನೆ.

***

ಯಾರು ಕಿವಿ ಮುಚ್ಚಿದರೂ ಎನಗಿಲ್ಲ ಚಿಂತೆ ಎನ್ನುವ ಬ್ಲಾಗ್ ಪರಿಧಿ ಇಷ್ಟೇ. ಹಾಗೆ ಹಾಡುವ ಸಂಗೀತಗಾರ ಸಭೆಯಲ್ಲಿ ಎಷ್ಟು ಹೊತ್ತು ಹಾಡಬಲ್ಲ? ನನಗೆ ಬೇಕಾದುದನ್ನು ನನಗೆ ಬೇಕಾದ ರೀತಿಯಲ್ಲಿ ಹಾಡುತ್ತೇನೆ, ಕೇಳೋರಿದ್ದರೆ ಕೇಳಿ ಇಲ್ಲದಿದ್ದರೆ ಇಲ್ಲ ಎನ್ನುವ ಕಾರ್ಯಕ್ರಮಕ್ಕೆ ಟಿಕೇಟ್ ಹಣ ಕೊಟ್ಟು ಯಾರು ಯಾಕಾದರೂ ಬರುತ್ತಾರೆ? ಬ್ಲಾಗ್ ಬರಹಗಳು ಗೊಂದಲಗಳನ್ನು ಹೊರಹಾಕಬಲ್ಲವೇ ವಿನಾ ಅವು ಇನ್ಯಾವ ಮಹಾನ್ ಸಾಧನೆಯನ್ನು ಮಾಡಿವೆ, ಕೆಲವರ ಲೇಖನಗಳು ಪ್ರವಾಸಾನುಭವ, ತಮ್ಮ ಹಳೆಯ ಲೇಖನಗಳನ್ನು ಹೊತ್ತುಕೊಳ್ಳುವ ಆಗರವಾಗಿ ಕಂಡುಬಂದರೂ ಮತ್ತಿನೊಂದಿಷ್ಟಕ್ಕೆ ಯಾವುದೇ ರೂಪುರೇಶೆಯೆಂದೇನೂ ಇಲ್ಲ. ಹಾಗೆ ಇರದಿರುವುದೇ ಬ್ಲಾಗಿನ ಲಕ್ಷಣ!