Showing posts with label ಪ್ರಯಾಣ. Show all posts
Showing posts with label ಪ್ರಯಾಣ. Show all posts

Wednesday, January 16, 2008

ರಸ್ತೆಗಳೆಂಬ ಮಟ್ಟಗಾರರು

ಬಡವರೂ-ಬಲ್ಲಿದರೂ ಎಲ್ಲರೂ ಪ್ರಯಾಣ ಮಾಡೋ ದಾರಿ, ಮೆಟ್ಟಿ ಮುನ್ನಡೆಯುವ ನೆಲದ ಮೇಲಿನ ಡಾಂಬರಿನ ಹೊದಿಕೆ, ಅಥವಾ ನಾವುಗಳು ನಮ್ಮ ನಮ್ಮ ವಾಹನದ ಮೇಲೆ ಸವರಿಕೊಂಡು ಹೋಗುವ ಅಂಕುಡೊಂಕಾಗಿದ್ದೂ ಹಿಡಿದ ಗುರಿಯನ್ನು ತಲುಪಿಸುತ್ತೇವೆ ಎಂಬ ವಾಗ್ದಾನವನ್ನು ಎಂದೂ ನೀಡಿಕೊಂಡಿರುವ ಸಂಗಾತಿಗಳ ಮೇಲೆ ಇಂದು ಹೊಸದಾಗಿ ಯೋಚಿಸುವಂತಾಯ್ತು. ಪಂಚಭೂತಗಳಾಗಲೀ, ಸಾವಾಗಲೀ ಪ್ರತಿಯೊಂದು ಸಮುದಾಯಕ್ಕೆ ಒಂದು ಸಮಮಟ್ಟವನ್ನು ಕಾಯ್ದುಕೊಂಡು ಬಂದಿದ್ದರೆ ನಾವು ದಿನವೂ ಬಳಸುವ ರಸ್ತೆಗಳು ಮಹಾ ದೊಡ್ಡ ಮಟ್ಟಗಾರರು (ಲೆವೆಲರ್ಸ್) ಎಂದು ಈ ದಿನ ವಿಶೇಷವಾಗಿ ಅನ್ನಿಸಿದ್ದಂತೂ ನಿಜ.

ಸಂಜೆ ಸುಮಾರು ಆರು ಘಂಟೆಯ ಹೊತ್ತಿಗೆಲ್ಲಾ ಮಹಾ ಕತ್ತಲೆ ಆವರಿಸಿಕೊಂಡು ಎಲ್ಲಾ ಕಡೆ ಸೂರ್ಯನನ್ನು ಅಡಗಿಸಿ ಅಟ್ಟಹಾಸವನ್ನು ತೋರಿಸುತ್ತಿತ್ತು. ಅದರ ಜೊತೆಗೆ ಛಳಿ-ಗಾಳಿಯೂ ಸೇರಿಕೊಂಡು ನಾಳೆ ಸೂರ್ಯ ಹುಟ್ಟುತ್ತಾನೋ ಇಲ್ಲವೋ ಎಂದು ಅನುಮಾನ ಮೂಡಿಸುವಷ್ಟರ ಮಟ್ಟಿಗೆ ಸೊನ್ನೆಗಿಂತ ಕೆಳಗಿನ ಛಳಿಯಿಂದ ಒಂದು ಒಣ ವಾತಾವರಣ ಸೃಷ್ಟಿಯಾಗಿತ್ತು. ನಾನು ಅದೆಷ್ಟೋ ಕಾರುಗಳ ಹಿಂದೆ, ಒಂದೇ ಒಂದು ಲೇನ್ ಇರುವ ಯಾವುದೋ ಗ್ರಾಮೀಣ ರಸ್ತೆಯೊಂದರಲ್ಲಿ ತೆವಳುತ್ತಿದ್ದವನು ಯಾವುದೋ ತಿರುವೊಂದರಲ್ಲಿ ದೂರದವರೆಗೆ ದೃಷ್ಟಿ ಹಾಯಿಸಿದ್ದಕ್ಕೆ ಸುಮಾರು ದೂರದವರೆಗೆ ಮುಂದಿರುವ ಕಾರಿನ ಟೇಲ್‌ಲೈಟುಗಳು ಕಂಡುಬಂದವು. ಇಷ್ಟು ಹೊತ್ತಿಗೆ ಅಲ್ಲಲ್ಲಿ ಪೋಲೀಸರು ಇದ್ದು ಅತಿವೇಗದಲ್ಲಿ ಹೋಗುವವರನ್ನು ಗುರುತಿಸಿ ದಂಡವಿಧಿಸುವುದು ಈ ರಸ್ತೆಗಳಲ್ಲಿ ಮಾಮಾಲಿಯಂತೂ ಅಲ್ಲ, ಆದರೂ ಮುಂದಿನ ಕಾರುಗಳೆಲ್ಲ ರಸ್ತೆಯ ಸ್ಪೀಡ್‌ಲಿಮಿಟ್‌ಗಿಂತಲೂ ಕಡಿಮೆ ವೇಗದಲ್ಲೇ ಚಲಿಸುತ್ತಿದ್ದವು ಅಥವಾ ತೆವಳುತ್ತಿದ್ದವು ಎಂದೇ ಹೇಳಬೇಕು. ಕಾರಿನ ಸ್ಟೇರಿಂಗ್ ವ್ಹೀಲ್‌ನ ಹಿಂದಿರ ಬಹುದಾದ ಹಲವಾರು ಮನಸ್ಥಿತಿಗಳು ಕಣ್ಣ ಮುಂದೆ ಸುಳಿದು ಹೋದವು: ದೂರದ ಡೇ ಕೇರ್ ಸೆಂಟರುಗಳಲ್ಲಿ ಕಾದುಕೊಂಡಿರುವ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಬರಬಹುದಾದ ತಂದೆ-ತಾಯಿಯರಿದ್ದರಬಹುದು, ವಾರದ ಮತ್ತೊಂದು ದಿನದ ಕೆಲಸವನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿರುವವರಿರಬಹುದು, ದೂರದ ಬಾರು-ರೆಸ್ಟೋರೆಂಟಿನಲ್ಲಿ ಕಾದುಕೊಂಡಿರುವ ಪ್ರೇಮಿಯನ್ನು ಭೇಟಿ ಮಾಡುವ ತವಕದವರಿದ್ದಿರಬಹುದು, ಇಂದಿನ ಹಾಗೇ ನಾಳೆ ಎಂದು ಲೆಕ್ಕ ಹಾಕಿಕೊಂಡು ಅಗತ್ಯ ವಸ್ತುಗಳ ಶಾಪ್ಪಿಂಗ್‌ಗೆ ಹೋಗುತ್ತಿರುವ ವೃದ್ಧರಿರಬಹುದು, ಹೀಗೆ ಅನೇಕಾನೇಕ ಮುಖಗಳು ಮನಸ್ಥಿತಿಗಳು ಕಣ್ಣ ಮುಂದೆ ಹಾದು ಹೋದವು. ಇವೆಲ್ಲಕ್ಕೂ ಇಂಬುಕೊಡುವ ಹಾಗೆ ಘಂಟೆಗೆ ನಲವತ್ತೈದು ಮೈಲು ವೇಗದ ಮಿತಿಯಲ್ಲಿನ ರಸ್ತೆಯಲ್ಲಿ ಇಪ್ಪತ್ತೈದಕ್ಕಿಂತಲೂ ಕಡಿಮೆ ವೇಗದಲ್ಲಿ ತೆವಳುತ್ತಿರುವ ನನ್ನ ಹಿಂದುಮುಂದಿನ ವಾಹನಗಳ ಸಾಲು ಅದ್ಯಾವುದೋ ಯುದ್ಧಭೂಮಿಯಲ್ಲಿ ಸಾವರಿಸಿಕೊಂಡು ಹೋಗುತ್ತಿರುವ ಕಾನ್‌ವಾಯ್‌ಯಂತೆ ಕಂಡುಬಂತು. ಈ ಆಮೆ ವೇಗಕ್ಕೆಲ್ಲಾ ಕಾರಣ ಒಬ್ಬನೇ, ಅದೇ ಮುಂದಿನ ವ್ಯಕ್ತಿ, ಎಲ್ಲರಿಗಿಂತ ಮೊದಲು ಈ ಸಾಲಿನಲ್ಲಿ ತೆವಳಿಕೊಂಡು ಹೋಗುತ್ತಿರುವವನು/ಳು. ಛೇ, ಇಂಥ ಒಬ್ಬ ನಿಧಾನವಾದ ಡ್ರೈವರಿನಿಂದ ಎಷ್ಟೊಂದು ಜನರು ಹೀಗೆ ತೆವಳಬೇಕಾಯಿತಲ್ಲ ಎಂದು ಒಮ್ಮೆಲೇ ಕೋಪ ಬಂತು, ಆ ಕೋಪದ ಬೆನ್ನ ಹಿಂದೆ, ಆ ಮುಂದಿನ ವ್ಯಕ್ತಿಯೇ ನಮ್ಮ ನಾಯಕ (ಲೀಡರ್), ಅವನ/ಳ ವೇಗವೇ ನಮಗೆಲ್ಲರಿಗೂ ಮಾದರಿ, ನಾವು ಹಿಡಿದ ದಾರಿ ಒಂದೇ ಒಂದು ಲೇನ್ ಇರುವ ವ್ಯವಸ್ಥೆ ಆದ್ದರಿಂದ ಇನ್ನು ಮುಂದೆ ಅದೆಷ್ಟೋ ದೂರದವರೆಗೆ ಈ ನಿಧಾನವಾದ ವ್ಯಕ್ತಿಯನ್ನು ಅನುಸರಿಸಿಕೊಂಡಿರಬೇಕಲ್ಲ, ಆ ವ್ಯಕ್ತಿ ಯಾರೂ ಏನೂ ಎನ್ನುವುದು ಗೊತ್ತಿರದಿದ್ದರೂ ಆ ಲೀಡರ್‌ಶಿಪ್‌ನಿಂದ ಎಷ್ಟೊಂದು ಜನರಿಗೆ ಅದೇನೇನೋ ಪರಿಣಾಮ ಬೀರುತ್ತಲ್ಲಾ ಎನ್ನಿಸಿ ಸದಾ ವೇಗಕ್ಕೆ ಹೊಂದಿಕೊಂಡ ನನ್ನ ವಸಡುಗಳು ಯೋಚನೆಯ ಭಾರಕ್ಕೆ ಕುಸಿದು ಹೋದವು.

ಒಬ್ಬ ನಾಯಕನಿಗೆ ವೇಗವೆನ್ನುವುದು ಇರಲೇ ಬೇಕೆಂದೇನೂ ಇಲ್ಲ. ಪ್ರಪಂಚದ ಅದೆಷ್ಟೋ ದೇಶದ ನಾಯಕರುಗಳು ಸ್ಲೋ, ಅನೇಕ ಕಂಪನಿಯ ಲೀಡರುಗಳು ಟೈಪ್-ಬಿ ವ್ಯಕ್ತಿತ್ವದವರೇ ಸರಿ. ವೇಗವಾಗಿ ಹೋಗುವ ರಸ್ತೆಗಳಿದ್ದೂ ಅನುಕೂಲಗಳಿದ್ದೂ ಎಲ್ಲರಿಗಿಂತ ಮುಂದಿನ ವ್ಯಕ್ತಿ ನಿಧಾನವಾಗಿ ಹೋಗುತ್ತಿರುವ ಕಾರಣಕ್ಕೆ ಎಷ್ಟೊಂದು ಜನರ ಮೇಲೆ ಅದೇನೇನು ಪರಿಣಾಮಗಳು ಬೀರುತ್ತವೆ ಎಂದು ಒಮ್ಮೆ ಯೋಚಿಸಿಕೊಂಡೆ. ಯಾವುದು ಸಾಮಾನ್ಯ ಸಂಜೆಯಾಗಿ ಪರಿವರ್ತನೆಗೊಂಡು ಎಲ್ಲವೂ ಸುಗಮವಾಗಿ ನಡೆಯಬೇಕಿತ್ತೋ ಅಲ್ಲಿ ನಿಮಿಷ-ನಿಮಿಷಗಳನ್ನು ಆಧರಿಸಿಕೊಂಡಿರುವ ಎಷ್ಟೋ ಜನರಿಗೆ ವಿಳಂಬವಾಗಿ ಹೋಗಬಹುದು. ಒಮ್ಮೆ ವಿಳಂಬಗೊಂಡವರು ಗಲಿಬಿಲಿಯಿಂದ ಹೆಚ್ಚಿನ ವೇಗದಲ್ಲಿ ಓಡಿಸಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ಅಪಾರವಾದ ಸಮಯವಿದೆ ಎನ್ನುವ ಮಹಾಕಾಲದ ಮುಂದೆಯೂ ನಾವು ದಿನ, ಘಂಟೆ, ನಿಮಿಷ, ಕ್ಷಣಗಳನ್ನು ಗಣನೆಗೆ ತೆಗೆದುಕೊಂಡು ನಾವೇ ಸೃಷ್ಟಿಸಿಕೊಂಡಿರುವ ಗಡಿಯಾರವನ್ನಾಧರಿಸಿದ ವ್ಯವಸ್ಥೆಯಲ್ಲಿ ಅದೇನೇನು ಅವಾಂತರಗಳಾಗಬೇಡ. ಈಗಿನ ನಾಯಕ ಅಥವಾ ಮುಂದಾಳು ಬದಲಾಗುವವರೆಗೆ ಹಿಂದಿನವರು ಸಂಯಮದಿಂದ ಕಾಯಬೇಕೇ ಅಥವಾ ಈ ಮುಂದಾಳು ಬದಲಾಗಿ ಮತ್ತೊಬ್ಬ ಬಂದು ನಮ್ಮೆಲ್ಲರ ವೇಗದ ಗತಿಯ ನಿಧಾನವಾದ ಬದಲಾವಣೆಯ ಬಗ್ಗೆ ಚಿಂತಿಸಬೇಕೇ ಅಥವಾ ನಾವೇ ಮತ್ಯಾವುದೋ ಹೊಸ ರಸ್ತೆಯೊಂದನ್ನು ಹಿಡಿದು ನಮ್ಮದೇ ಆದ ಮಾರ್ಗವನ್ನು ಸೃಷ್ಟಿಸಿಕೊಳ್ಳಬೇಕೆ? ಒಂದು ವೇಳೆ ಹಾಗೆ ಮಾಡಿದರೂ ಈ ರಸ್ತೆಗಳೆಂಬ ಮಟ್ಟಗಾರರೂ ಎಲ್ಲಿಯೂ ಎಲ್ಲಕಡೆಯೂ ಇರಬಹುದಲ್ಲವೇ? ಈ ಮುಂದಾಳುವನ್ನು ತೊರೆದು ಹೋದ ಮಟ್ಟಿಗೆ ಮತ್ತೊಬ್ಬ ಮುಂದಾಳು ಸಿಗುವವ ಹೇಗಿರುತ್ತಾನೋ ಏನೋ? ರಾಬರ್ಟ್ ಪ್ರಾಸ್ಟ್‌ನ ಕಾಲದ ಕಡಿಮೆ ಜನರು ಸಂಚರಿಸಿದ ಮಾರ್ಗಗಳು ಇನ್ನೂ ಇವೆಯೇ ಎಂದು ಬೇಕಾದಷ್ಟು ಪ್ರಶ್ನೆಗಳು ಹುಟ್ಟಿಕೊಂಡವು.

ರಸ್ತೆ ಎನ್ನುವುದು ಕೇವಲ ನಡೆದಾಡುವ ಹಾದಿ, ಹೆಚ್ಚು ಜನರು ಬಳಸುವ ವ್ಯವಸ್ಥೆ ಎಂದು ದೊಡ್ಡ ವ್ಯಾಖ್ಯಾನವನ್ನೇನೋ ಮಾಡಬಹುದು ಆದರೆ ಪ್ರತಿಯೊಬ್ಬರನ್ನೂ ಒಂದೇ ಮಟ್ಟಕ್ಕೆ ಎಳೆದು ತರುವ ಈ ಅವತರಣಿಕೆಯನ್ನು ಒಂದು ತತ್ವವನ್ನಾಗಿ ಅಥವಾ ಸಾಧನವನ್ನಾಗಿ ನೋಡಿದ್ದು ನಾನು ಇದೇ ಮೊದಲು. ಭೂಮಿಯ ಮೇಲಿನ ರಸ್ತೆಗಳು ಹಾಗೆಯೇ ಹೆಚ್ಚು ಜನರು ಬಳಸುವಲ್ಲಿ ಸಹಾಯವಾಗುವಂತೆ ಕಡಿಮೆ ಜನರು, ಮುತ್ಸದ್ದಿಗಳು, ಚಿಂತಕರು ಮೊದಲೇ ಯೋಚಿಸಿ ರೂಪಿಸಿರುವ ವ್ಯವಸ್ಥೆ. ನನ್ನ ಭೌತಿಕ ಅಸ್ತಿತ್ವದ ಮೊದಲೂ ನಂತರವೂ ನಾವು ಇರುತ್ತೇವೆ ಎಂಬ ಹಣೆಪಟ್ಟಿಯನ್ನು ಬರೆಸಿಕೊಂಡೇ ಹುಟ್ಟಿವೆ ಈ ಮಟ್ಟಗಾರರು. ಭೂಮಿಯ ಮೇಲಿನ ರಸ್ತೆಗಳನ್ನು ಒಮ್ಮೆ ತೋಡಿಕೊಂಡರೆ ಮತ್ತೆ ಮತ್ತೆ ಅದೇ ವ್ಯವಸ್ಥೆಗೆ ಬರುವಂತೆ ಮಾಡುವ ಕಟ್ಟಿ ಹಾಕುವ ನೆರೆಹೊರೆಗಳಿವೆ, ಅದೇ ನೀರಿನ ಮೇಲಾಗಲೀ ಗಾಳಿಯಲ್ಲಾಗಲೀ ತೇಲುವವರಿಗೆ ಈ ಜಿಜ್ಞಾಸೆಗಳಿರಲಿಕ್ಕಿಲ್ಲ. ಈ ಮಟ್ಟಗಾರ ರಸ್ತೆಗಳು ಬೇರೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲ ಎಂದು ಬೀಗುವುದನ್ನು ನೀವು ಗಮನಿಸಿರಬಹುದು, ಭೋಗೋಳದಲ್ಲಿ ಅಪರಿಮಿತವಾಗಿ ಗಾಳಿ-ನೀರಿದ್ದರೂ ನಾವು ಹೆಚ್ಚು ಹೆಚ್ಚು ಆಧರಿಸಿಕೊಂಡಿರುವುದು ನೆಲವನ್ನೇ. ಅದ್ಯಾವುದೋ ಸೈನ್ಸ್‌ಫಿಕ್ಷನ್ನ್ ಸಿನಿಮಾಗಳಲ್ಲಿ ತೋರಿಸೋ ಹಾಗೆ ನಾವೂ ಏಕೆ ಸ್ವತಂತ್ರರಾಗಿ ಕಡಿಮೆ ಖರ್ಚಿನಲ್ಲಿ ಅಂತರಿಕ್ಷದಲ್ಲಿ ತೇಲಬಾರದು? ನಮ್ಮ ಗುರಿಗಳಿಗೆ ಯಾವುದೇ ಅಡೆತಡೆಗಳಿಲ್ಲದೇ ನಮ್ಮ ನಮ್ಮ ದೂರಕ್ಕೆ ತಂತ್ರಕ್ಕೆ ಆಲೋಚನೆಗಳಿಗೆ ನಾವು ನಾವೇ ಏಕೆ ನಾಯಕರಾಗಬಾರದು? ಯಾರೊಬ್ಬರ ಹಿಂದೂ ಇಲ್ಲದೇ, ಯಾರ ಮುಂದೆ ತೆವಳಿಕೊಂಡು ಹೋಗಬಹುದಾದ ಹಂಗೂ ಇಲ್ಲದೇ ಪ್ರತಿಯೊಂದು ಸಾರಿ ತೇಲುವಾಗಲೂ ನಮ್ಮ ದಾರಿಯನ್ನು ನಾವೇ ಏಕೆ ಕೊರೆದುಕೊಳ್ಳುವ ಮುಂದಾಳುಗಳಾಗಬಾರದು? ಕಡಿಮೆ ಭೂಮಿಯಲ್ಲಿ ಹೆಚ್ಚು ಹೆಚ್ಚು ಜನರು ಕೊರೆದು ಅದೆಲ್ಲಿಂದ ಅದೆಲ್ಲಿಗೋ ಹೋಗುವ ನಿರ್ಣಾಯಕ ರಸ್ತೆಗಳನ್ನು ನಿರ್ಮಿಸಿದಂತೆಲ್ಲಾ ಇವುಗಳು ಹಠ ಮಾಡುವ ಮಕ್ಕಳಿಗೆ ಒಂದೇ ಒಂದು ಆಪ್ಷನ್ನನ್ನು ಕೊಡುವ ಪೋಷಕರ ಹಾಗೆ ಯಾವತ್ತೋ ಅದೇ ಹಾಡನ್ನು ಹಾಡಿಕೊಂಡಿರುವ ಮಟ್ಟಗಾರರಾಗುವುದೇಕೆ? ಯಾವನೋ ಒಬ್ಬ ತನ್ನ ಗೌಜು-ಗದ್ದಲಗಳ ನಡುವೆ ನಿಧಾನವಾಗಿ ತೆವಳಿಕೊಂಡು ಹೋಗುತ್ತಿರುವುದನ್ನು ನಾವು ಉಳಿದವರು ಅವನ ಮುಂದಾಳುತನವನ್ನಾಗಲೀ, ನಾಯಕತ್ವವನ್ನಾಗಲೀ ಅದೇಕೆ ಒಪ್ಪಿಕೊಳ್ಳಬೇಕು? ಒಮ್ಮೆ ಸರತಿ ಸಾಲಿನಲ್ಲಿ ಸಿಕ್ಕಿಕೊಂಡಾಕ್ಷಣ ಅದರಿಂದ ಮುಕ್ತಿಯೆಂಬುದೇ ಇಲ್ಲವೇನು?

Sunday, January 13, 2008

ಪ್ರಯಾಣ ಮಾಡುವ ಅಗತ್ಯಗಳು ಆಗಾಗ್ಗೆ ಬರುತ್ತಿರಲಿ

ಸದಾ ಗಿಜಿಗುಡುತ್ತಿರೋ ರಸ್ತೇ ಮೇಲೆ ಒಂದಲ್ಲ ಒಂದು ವಾಹನ ಹೋಗ್ತಲೇ ಇರುತ್ತೆ, ಎಲ್ಲಿಂದ ಎಲ್ಲಿಗೋ ಪ್ರಯಾಣ ಮಾಡುವಾಗ ಕಾರಿನ ವಿಂಡ್‌ಶೀಲ್ಡ್ ಮೂಲಕ ಮುಂದೆ ಹೋಗೋ ವಾಹನವನ್ನ ಹಿಂಬಾಲಿಸಿಕೊಂಡು ಹೋಗೋದು ಸುಲಭ ಅನ್ಸುತ್ತೆ. ರಸ್ತೆಯ ಪಕ್ಕದಲ್ಲಿ ಎಷ್ಟೊಂದು ವಾಹನಗಳು ನಮ್ಮ ಜೊತೆ ಸಹ ಪ್ರಯಾಣದಲ್ಲಿ ತೊಡಗಿ ಒಂದು ಕಮ್ಮ್ಯೂನಿಟಿ ಅಥವಾ ಒಂದು ಸಮೂಹ ಇದು ಅನ್ನೋ ಭಾವನೆಗಳ ಹಿಂದೇನೇ ನಾವೆಲ್ಲಿ ಹೋಗ್ತೀವೋ ಅವರೆಲ್ಲೋ ಅನ್ನೋ ಭಿನ್ನತೆ ಕೂಡಾ ಮನದಲ್ಲಿ ಹುಟ್ಟಿ ಬರುತ್ತೆ. ಘಂಟೆಗಟ್ಟಲೆ ಪ್ರಯಾಣ ಮಾಡ್ತಿರುವಾಗ ಒಂದಲ್ಲ ಒಂದು ರೀತಿಯ ಆಲೋಚನೆಗಳು ಮನದಲ್ಲಿ ಹುಟ್ತಾನೇ ಇರುತ್ವೆ, ಆ ಆಲೋಚನೆಗಳು ನಮ್ಮನ್ನು ಅವುಗಳ ಲೋಕಕ್ಕೆ ಸಂಪೂರ್ಣವಾಗಿ ಕರೆದೊಯ್ಯದಂತೆ ವಾಸ್ತವ ಆಗಾಗ್ಗೆ ಹಿಡಿದು ಎಳೆಯುತ್ತಲೇ ಇರುತ್ತೆ.

ಹೀಗೆ ಪ್ರಯಾಣದ ಹಳೆಯ ಹೊಸ ಮುಖಗಳು ಮನಸ್ಸಿಗೆ ಬಂದದ್ದು ಈ ಒಂದು ವಾರದಲ್ಲಿ ಅದೆಷ್ಟೋ ದೂರವನ್ನು ಕ್ರಮಿಸಿ ರಸ್ತೆಯ ಮೇಲೆ ನಮ್ಮದೇ ಆದ ಒಂದು ಪ್ರಪಂಚವನ್ನು ತೆರೆದಿಟ್ಟುಕೊಂಡಾಗಲೇ. ನನ್ನ ಪ್ರಕಾರ ಪ್ರಯಾಣ ಅನ್ನೋದು ಒಂದು ರೀತಿ ಧ್ಯಾನ ಇದ್ದ ಹಾಗೆ, ರಸ್ತೆಯ ಮೇಲೆ ಡ್ರೈವ್ ಮಾಡ್ತಿರೋ ವ್ಯಕ್ತಿ ಭೌತಿಕವಾಗಿ ಅದೆಷ್ಟು ಕೆಲಸಗಳಲ್ಲಿ ತೊಡಗಿದ್ರೂ ಮನಸ್ಸು ಒಂದು ರೀತಿ ಹರಳು ಕಟ್ಟುತಾ ಇರುತ್ತೆ ಅನ್ನೋದು ನನ್ನ ಭಾವನೆ. ಆದ್ರಿಂದ್ಲೇ ಪ್ರಯಾಣ ಅನ್ನೋದು ನಮ್ಮೊಳಗಿರೋ ಆಲೋಚನೆಗಳಿಗೆ ಒಂದು ವೇದಿಕೆ ಕೊಟ್ಟು ಅವುಗಳ ಧ್ವನಿಯನ್ನು ಆಲಿಸೋದಕ್ಕೆ ನಾವು ಕಲ್ಪಿಸಿಕೊಡೋ ಒಂದು ಅವಕಾಶ ಅನ್ನೋದು ನನ್ನ ವಾದ. ನಾವು ಕ್ರಮಿಸೋ ದೂರ, ನಾವೇ ವಾಹನವನ್ನು ಚಲಾಯಿಸುತ್ತಿದ್ದೇವೋ ಇಲ್ಲವೋ ಎನ್ನೋದು, ನಮ್ಮ ಜೊತೆ ಯಾರು ಯಾರು ಇದ್ದಾರೆ ಇರೋಲ್ಲ ಮುಂತಾದವುಗಳು ನಮ್ಮನ್ನು ಒಂದು ಹೊಸ ವ್ಯಕ್ತಿಯನ್ನಾಗಿ ಮಾಡಿಬಿಡಬಲ್ಲವು ಅನ್ನೋದು ನನ್ನ ನಂಬಿಕೆ. ಬೇರೆ ಯಾರೋ ಗಾಡಿ ಚಲಾಯಿಸಿ ಅದರಲ್ಲಿ ಕೂತಿರೋ ನೀವು ಕಣ್ಣು ಮುಚ್ಚಿಕೊಂಡು ಹಾಗೇ ನಿದ್ರೆಯ ಮೋಡಿಗೆ ಜಾರಿ ಹೋಗಿ ಲೋಕವನ್ನು ಆ ಮಟ್ಟಿಗೆ ಸೊಗಸಿಲ್ಲಾ ಅಂತ ನಾನು ಹೇಳ್ತಾ ಇಲ್ಲ, ನಾವೇ ನಮ್ಮ ಗತಿಯನ್ನು ಬೇಕಾದ ಹಾಗೆ ಬದಲಾಯಿಸಿಕೊಂಡು ಎಲ್ಲೆಲ್ಲಿಗೆ ಎಷ್ಟೆಷ್ಟು ಹೊತ್ತಿಗೆ ಹೋಗಬೇಕು, ಹೋಗಬಾರದು ಎಂದು ನಿರ್ಧರಿಸಿಕೊಂಡು ಹೋಗೋದ್ರಲ್ಲಿ ಬೇಕಾದಷ್ಟು ಸವಾಲುಗಳಿವೆ ಆ ಸವಾಲುಗಳ ನಡುವೆಯೂ ನಮ್ಮತನವನ್ನು ಕುರಿತು ಯೋಚಿಸೋದಕ್ಕೆ ಬೇಕಾದಷ್ಟು ಆಸ್ಪದ ಸಿಕ್ಕು ಪ್ರತಿಯೊಂದು ಪ್ರಯಾಣದ ನಂತರ ನಾನಂತೂ ಒಂದು ಹೊಸದೊಂದು ಲೋಕದಲ್ಲಿ ಮುಳುಗೆದ್ದ ಹಾಗಿರ್ತೀನಿ ಅನ್ನೋದು ನಿಜ.

ಧ್ಯಾನದ ಹಲವಾರು ವಿಧಾನಗಳಲ್ಲಿ ನಿಮ್ಮ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳೋದಕ್ಕೆ ಸಹಾಯ ಮಾಡುವ ಪ್ರಯಾಣವೂ ಒಂದು. ಸೆಲ್ಫ್ ಆಕ್ಚುವಲೈಜೇಷನ್ನಿಗೆ ಬೇಕಾದಷ್ಟು ಒತ್ತುಕೊಟ್ಟು ಎಷ್ಟೋ ಪುಸ್ತಕಗಳನ್ನು ಹೊರತಂದಿದ್ದಾರೆ. ಆದರೆ ಒಂದು ಪ್ರಯಾಣದ ನಡುವೆಯೂ ನಮಗೆ ನಮ್ಮ ಬಗ್ಗೆ ತಿಳಿದುಕೊಳ್ಳೋದಕ್ಕೆ ಸಹಾಯವಾಗುತ್ತಾ ಅನ್ನೋದು ಸುಲಭವಾಗಿ ಉತ್ತರಿಸಬಹುದಾದ ಪ್ರಶ್ನೆ. ಉದಾಹರಣೆಗೆ, ನಿಮ್ಮ ಎದಿರು ಮುಕ್ತವಾಗಿ ತೆರೆದ ರಸ್ತೆಯ ಲೇನ್‌ಗಳು ಅದೇನೇ ಇದ್ದರೂ ನೀವು ಯಾವುದೋ ಒಂದು ಗತಿಯಲ್ಲಿ ನಿಮ್ಮ ವಾಹನವನ್ನು ಚಲಾಯಿಸಿಕೊಂಡು ಮುಂದೆ ಹೋಗುತ್ತಿರುವ ವಾಹನದಿಂದ ಇಂತಿಷ್ಟೇ ದೂರದಲ್ಲಿದ್ದುಕೊಂಡು ಸುರಕ್ಷಿತವಾಗಿ ಗಾಡಿಯನ್ನು ಚಲಾಯಿಸಿಕೊಂಡಿರುತ್ತೀರಿ ನೋಡಿ ಆ ಸಂದರ್ಭದಲ್ಲಿ ಬೇಕಾದಷ್ಟು ನಿರ್ಣಯಗಳನ್ನು ಪುನರ್‌ವಿಮರ್ಶಿಸಿಕೊಳ್ಳುವ ನಿಮ್ಮ ಮನಸ್ಸು ಸುಲಭವಾದ ಮಾರ್ಗವನ್ನೇ ಹುಡುಕಿಕೊಂಡಿರುತ್ತದೆ. ನಿಮ್ಮ ಜೊತೆ ಸ್ಪರ್ಧೆಯಲ್ಲಿ ತೊಡಗುವ ಅಕ್ಕ ಪಕ್ಕದ ಡ್ರೈವರುಗಳು ನಿಮ್ಮ ತಾಳ್ಮೆಯನ್ನು ಕೆದಕಬಹುದು, ನಿಮ್ಮನ್ನೇ ಹಿಂಬಾಲಿಸಿಕೊಂಡೇ ಸಾಕಷ್ಟು ದೂರವನ್ನು ಕ್ರಮಿಸುವ ಇತರ ಡ್ರೈವರುಗಳು ನಿಮ್ಮಲ್ಲಿ ಸಂಶಯವನ್ನು ಹುಟ್ಟಿಸಬಹುದು. ನೀವು ಪದೇಪದೇ ಲೇನ್ ಬದಲಾಯಿಸಿಕೊಂಡು ವ್ಯಸ್ತರಾಗಿ ಹೋಗುತ್ತೀರೋ ಅಥವಾ ದೂರಕ್ಕೆ ಹೋಗೋದು ಇದ್ದೇ ಇದೆ ಎಂದು ಸಮಾಧಾನ ಚಿತ್ತರಾಗಿರುತ್ತೀರೋ ಎನ್ನುವುದೂ ನಿಮಗೇ ಬಿಟ್ಟಿದ್ದು. ಹೀಗೆ ಹಲವಾರು ತೆರೆದ ಆಪ್ಷನ್ನುಗಳ ನಡುವೆ ಅವರವರು ತಮ್ಮದೇ ಆದ ದಾರಿ ಗತಿ ರೀತಿಯನ್ನು ಆಧರಿಸಿ ಅದನ್ನು ಪಾಲಿಸುತ್ತಾರೆ ಅನ್ನೋದರಲ್ಲೇ ಬದುಕಿನ ಒಂದು ಮುಖವಿದೆ. ಆ ಮುಖದ ದರ್ಶನವನ್ನೇ ನಾನು ಸೆಲ್ಫ್ ಆಕ್ಚವಲೈಜೇಷನ್ನಿಗೆ ಹೋಲಿಸಿ ಹೇಳಿದ್ದು.

ಪ್ರಯಾಣ ಒಳ್ಳೆಯದು, ನಿಂತಲ್ಲೇ ನಿಂತ ಹಾಗಿರುವುದಕ್ಕಿಂತ ಯಾವಾಗಲೂ ಓಡುತ್ತಿರುವುದು ಆ ಮಟ್ಟಿಗೆ ಮನಸ್ಸಿಗೆ ಮುದ ನೀಡುತ್ತದೆ, ಬೇಕಾದಷ್ಟು ಹೊಸತನ್ನು ತೋರಿಸುತ್ತದೆ. ಅನೇಕ ಸವಾಲುಗಳನ್ನು ಎದುರಿಸಿಕೊಂಡು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುತ್ತದೆ. ಪ್ರಯಾಣ ಗೋಳದ ಮೇಲಿನ ಸುತ್ತಿನಿಂದ ಹಿಡಿದು ನಾವು ದಿನ ನಿತ್ಯ ಅಲ್ಲಿಂದಿಲ್ಲಿಗೆ ಹೋಗಿ ಬರುವ ಸಣ್ಣ ಕಾಯಕವಿರಬಹುದು, ಆದರೆ ಅದರ ಆಳ ದೊಡ್ಡದು. ಅಲ್ಲಿಂದಿಲ್ಲಿಗೆ ಹೋಗಬೇಕು ಎನ್ನೋ ಉದ್ದೇಶಪೂರ್ವಕ ಪ್ರಯಾಣವಿದ್ದಿರಬಹುದು, ಸಮಯವಿದೆ ಹೀಗೇ ಸುತ್ತಿ ಬರೋಣ ಎನ್ನುವ ಅಭಿಯಾನವಿರಬಹುದು - ನಾವು ಬೆಳೆಸುವ ಹಾದಿ ಚಿಕ್ಕದೋ ದೊಡ್ಡದೋ ನಮ್ಮ ಪ್ರಯಾಣದಲ್ಲಿ ಯಾರು ಯಾರು ಸಿಗುತ್ತಾರೋ ಬಿಡುತ್ತಾರೋ, ಪ್ರತಿಯೊಬ್ಬರೂ ಪ್ರಯಾಣ ಮಾಡುವ ಅಗತ್ಯಗಳು ಆಗಾಗ್ಗೆ ಬರುತ್ತಿರಲಿ, ಎಲ್ಲರೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಲೇ ಇರಲಿ!

***

ಕಳೆದೆರಡು ವಾರಗಳಲ್ಲಿ ನಾರ್ಥ್ ಕ್ಯಾರೋಲೈನಾದಿಂದ ನ್ಯೂ ಜೆರ್ಸಿಗೆ ಡ್ರೈವ್ ಮಾಡಿಕೊಂಡು ಹೋಗಿ ಬಂದಾಗ ಪ್ರಯಾಣದ ಬಗ್ಗೆ ಆಲೋಚಿಸಿಕೊಂಡು ಬರೆದ ಲೇಖನ.