Sunday, May 07, 2006

ನೆನಪಿರಲಿ...

ನಿನ್ನೆ ನೆನಪಿರಲಿ ಸಿನಿಮಾವನ್ನು ನೋಡಿದೆ - ೨೦೦೫ ರಲ್ಲಿ ಬಿಡುಗಡೆಯಾದರೂ ನನ್ನ ಅದೃಷ್ಟಕ್ಕೆ ಹಲವು ತಿಂಗಳು ಅಥವಾ ವರ್ಷದ ನಂತರ ನೋಡುವ ಅವಕಾಶ ಸಿಕ್ಕಿದ್ದೇ ಹೆಚ್ಚು. ಶುಕ್ರವಾರ ರಾತ್ರಿ ತಡವಾಗಿ ಮಲಗಿದ್ದಕ್ಕೋ ಏನೋ ಶನಿವಾರ ಬೆಳಗ್ಗೆ ಎದ್ದು ಸೂರ್ಯನ ಮುಖ ನೋಡೋ ಹೊತ್ತಿಗೆ ಅವನು ಹೈಸ್ಕೂಲು ಮುಗಿಸಿ ಕಾಲೇಜು ಮೆಟ್ಟಿಲು ಹತ್ತೋ ಹುಡುಗರ ಥರಾ ಆಗಿ ಹೋಗಿದ್ದ. ವಾರದ ದಿನಗಳಲ್ಲಿ ಮನೆಯಲ್ಲಿ ಬೆಳಕು ಬಿದ್ದು ಪ್ರತಿಫಲಿಸುವುದನ್ನು ನೋಡದ ನನಗೆ ಶನಿವಾರ ಮುಂಜಾನೆ ಕಣ್ಣು ಬಿಟ್ಟೊಡನೆ ಮನೆಯ ಗೋಡೆಗಳೆಲ್ಲ ಬೆಳಕಿನಲ್ಲಿ ಹೊಳೆದು ವಾರಾಂತ್ಯ ಬಂತು ಎಂದು ಸಂತಸ ಸೂಚಿಸುತ್ತಿದ್ದವು. ಈ ಸಿನಿಮಾವನ್ನು ನೋಡಬೇಕು ಎಂದು ಯಾಹೂ ಕ್ಯಾಲೆಂಡರಿನಲ್ಲಿ ರಿಮೈಂಡರ್ ಹಾಕಿಕೊಂಡಿದ್ದರೂ ಇರುವ ಹಲವಾರು ಇ-ಮೇಲ್, ಮೆಸ್ಸೇಜಿಂಗ್ ಅಕೌಂಟುಗಳು, ಕ್ಯಾಲೆಂಡರುಗಳು, ಆಫೀಸಿನ ಲೋಟಸ್ ನೋಟ್ಸೂ, ಕೈಯಲ್ಲಿನ ಪಾಮ್ ಪೈಲೆಟ್ಟೂ, ಸೆಲ್ ಫೋನಿನಲ್ಲಿರೋ ಹಲವಾರು ರಿಮೈಂಡರುಗಳು, ಪುಸ್ತಕದಲ್ಲಿ ಅಲ್ಲಲ್ಲಿ ಬರೆದ ನೋಟ್ಸೂ ಅಲ್ಲದೆ ಏನಾದರೊಂದನ್ನು ನೆನಪಿಸಿ ಆವಾಗಾವಾಗ ತಿವಿಯೋ ಮನೆಯವರ ಮಧ್ಯೆ ಎಲ್ಲವೂ ಕಲಸು ಮೇಲೋಗರವಾದಂತಾಗಿ 'ಅಂತರಂಗ'ವನ್ನು ಪ್ರತಿಬಿಂಬಿಸುತ್ತಿದ್ದವು.

ಸಿನಿಮಾ ಆಯೋಜಕರು ಥಿಯೇಟರ್ ಬದಲಾವಣೆ ಕುರಿತು ತಮ್ಮ ಇ-ಮೇಲ್‌ನಲ್ಲಿ ಬರೆದಿದ್ದರೂ ಚಿತ್ರದ ಹೆಸರು, ದಿನಾಂಕ ಮತ್ತು ಸಮಯವನ್ನು ಬಿಟ್ಟು ಬೇರೇನನ್ನೂ ನೋಡದೆ ಎಂದಿನಂತೆ ಸಮಯಕ್ಕೆ ಸರಿಯಾಗಿ ಹಳೆಯ ಥಿಯೇಟರ್‌ಗೆ ಹೋದವನಿಗೆ ಆಶ್ಚರ್ಯ ಕಾದಿತ್ತು, ಥಿಯೇಟರ್ ಸ್ಥಳಾಂತರವಾದ ಬಗ್ಗೆ ಮನಸ್ಸಿನ್ನಲ್ಲೇ ಹಿಡಿಶಾಪ ಹಾಕುತ್ತಾ ಸ್ಟಿಯರಿಂಗ್ ವ್ಹೀಲ್ ಮೇಲೆ ಕುಟ್ಟಿ, ಶನಿವಾರ ಶಾಪ್ಪಿಂಗ್ ತರಾತುರಿಯ ನಡುವೆ ಸಂಭ್ರಮದಲ್ಲಿರುವವರನ್ನೆಲ್ಲ ಹಳಿಯುತ್ತಾ ಅಂತೂ-ಇಂತೂ ಹೊಸ ಥಿಯೇಟರ್ ಇರುವಲ್ಲಿ ಬರುವ ಹೊತ್ತಿಗೆ ಹದಿನೈದು ನಿಮಿಷ ತಡವಾಗಿತ್ತು. 'ಥೂ, ಒಂದ್ ಸಿನಿಮಾನ್ನು ನೆಟ್ಟಗೆ ನೋಡೋಕಾಗಲ್ಲಪ್ಪಾ' ಎಂದು ಸ್ವಯಂ ಶಾಪ ಹಾಕಿಕೊಳ್ಳುತ್ತಿದ್ದವನನ್ನು ನನ್ನ ಹೆಂಡತಿ ಸಮಾಧಾನ ಪಡಿಸುವ ಗೋಜಿಗೂ ಹೋಗದೇ 'ದಿನಾ ಸಾಯೋರಿಗೆ ಆಳೋರ್‍ಯಾರು' ಎಂಬಂತೆ ನಿರ್ಲಿಪ್ತ ಮುಖವನ್ನು ತೋರಿಸಿಕೊಂಡಿದ್ದಳು.

ಬೆಳ್ಳಂ ಬೆಳಕಿನ, ಬಿಸಿಲಿನ ವಾತಾವರಣದಿಂದ ಕತ್ತಲಿನಲ್ಲಿ ಕಥೆಯೊಂದನ್ನು ಹೇಳುತ್ತೇವೆಂದು ಸೆಡ್ಡು ಹೊಡೆದು ನಿಂತ ಥಿಯೇಟರ್ ಅನ್ನು ಹೊಕ್ಕಾಗ ಕಥೆಯನ್ನು ಕೇಳುವ ಕುತೂಹಲವನ್ನು ಅಭಿವ್ಯಕ್ತ ಪಡಿಸುವಂತೆ ಕಣ್ಣುಗಳು ಕಿರಿದಾದವು. ನನ್ನ ಅದೃಷ್ಟಕ್ಕೆ ಸಿನಿಮಾ ಅದೇ ತಾನೆ ಶುರುವಾಗಿ ಹೆಸರುಗಳನ್ನು ತೋರಿಸುತ್ತಿದ್ದರು. ಹೆಸರುಗಳನ್ನು ನೋಡುವಾಗ ಕಣ್ಣಿಗೆ ಕಂಡ ಅಂಶಗಳು ಇಷ್ಟು:

೧) 'ಸಂಗೀತ ಸಾಗರ - ಸಾಹಿತ್ಯ ಸರೋವರ' (ಯಾರಿಟ್ಟರೀ ಬಿರುದು?) ಹಂಸಲೇಖಾರ ಸಾಹಿತ್ಯ ಹಾಗೂ ಸಂಗೀತ 'ನೆನಪಿರಲಿ'ಯನ್ನು ಹಾಡುಗಳ ಗುಚ್ಛವನ್ನಾಗಿ ಪರಿಚಯಿಸಿತು.
೨) ಕೈಯ ಬೆರಳುಗಳಲ್ಲಿ ಎಣಿಸುವುದಕ್ಕೂ ಹೆಚ್ಚಾಗಿದ್ದ ಹಿನ್ನೆಲೆ ಗಾಯಕರ ಪಟ್ಟಿಯೂ ಮೇಲಿನ ಅಂಶಕ್ಕೆ ಪೂರಕವಾಗಿತ್ತು.

ಹೆಸರು ತೋರಿಸುವ ಹೊತ್ತಿಗೆಲ್ಲಾ ಚಿತ್ರದಲ್ಲಿ ಸಂಭಾಷಣೆ ಆರಂಭವಾಗಿರುತ್ತದೆ. ಮೊದಲ ಅರ್ಧದ ನಾಯಕಿ ತನ್ನ ಪ್ರಿಯತಮನ ಜೊತೆಯಲ್ಲಿ ಫೋನಿನಲ್ಲಿ ಮಾತನಾಡುತ್ತಾ ಆತನ ಹುಟ್ಟುಹಬ್ಬವನ್ನು ನೆನಪಿಸುವುದು ಬೆಂಗಳೂರಿನಲ್ಲಿ ವ್ಯವಹಾರದಲ್ಲಿ ವ್ಯಸ್ತನಾದ ಎಕ್ಸಿಕ್ಯೂಟೀವ್ ಒಬ್ಬನ ಬಗ್ಗೆ ಹಿಂಟ್ ನೀಡುತ್ತದೆ.

ನೀವು ಇಲ್ಲಿಯವರೆಗೆ 'ನೆನಪಿರಲಿ'ಯನ್ನು ನೋಡಿಲ್ಲವಾದರೆ - ಇದೊಂದು ಮಾಮೂಲಿ ಲವ್ ಸ್ಟೋರಿ, ಅಥವಾ ತ್ರಿಕೋನ ಪ್ರೇಮ ಕಥೆ ಎಂದು ರೀಲಿಗಿಂತಲೂ ವೇಗವಾಗಿ ಓಡುವ ಮನಸ್ಸಿನವರನ್ನು ಅಲ್ಲಲ್ಲಿ ನಿಲ್ಲಿಸುವಂತೆ ಚಿತ್ರದ ಉದ್ದಕ್ಕೂ ಶಾಕ್ ಕೊಡಲಾಗಿದೆಯಾದ್ದರಿಂದ ಚಿತ್ರವನ್ನು ಅವರು ತೋರಿಸಿದ ಹಾಗೆ ನೋಡಿಕೊಂಡು ನಿಮ್ಮ ಆಲೋಚನೆಗಳನ್ನೆಲ್ಲಾ ಕೊನೆಯಲ್ಲಿ ಇಟ್ಟುಕೊಳ್ಳುವಂತೆ ಕೇಳಿಕೊಳ್ಳುತ್ತೇನೆ.

ಈ ಚಿತ್ರದಲ್ಲಿ ಹಾಡುಗಳು ಚೆನ್ನಾಗಿ ಮಿಳಿತಗೊಂಡಿವೆ. ಹಾಡುಗಳು ದಿಢೀರನೆ ಆರಂಭವಾಗಿ, ಎಲ್ಲೋ ಮುಕ್ತಾಯವಾಗಿ ತೊಂದರೆ ನೀಡುವುದರ ಬದಲಿಗೆ, ಚಿತ್ರದ ಕಥೆಗೆ ಪೂರಕವಾಗಿವೆ. ಹಾಡುಗಳು ಅಲ್ಲಲ್ಲಿ ನಿಂತು, ಮಧ್ಯೆ ಸಂಭಾಷಣೆಗಳು ಬಂದು, ಮತ್ತೆ ಹಾಡಿನಲ್ಲಿ ಕೊನೆಯಾಗುವ ಸನ್ನಿವೇಶಗಳು ಅನಗತ್ಯವೆನಿಸುವುದಿಲ್ಲ.

'ಕೂರಕ್ ಕುಕ್ರಳ್ಳಿಕೆರೆ' ಬಹಳ ಚೆನ್ನಾಗಿದೆ, ಚಿತ್ರದುದ್ದಕ್ಕೂ ಮೈಸೂರನ್ನು ನಾನಾ ಕೋನಗಳಲ್ಲಿ ಸೆರೆಹಿಡಿಯುತ್ತೇವೆಂದು ಹಠ ತೊಟ್ಟ ನಿರ್ದೇಶಕರ ಪ್ರಯತ್ನ ಸಫಲವಾಗಿದೆ:
...ಬನ್ರೀ, ನೋಡ್ರೀ, ನಾನು ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ...
ಎಂದು ಆರಂಭವಾಗೋ ಹಾಡು, ಕೋರಸ್ ಇವುಗಳು ಮುಂಬರುವ ಅದ್ದೂರಿ ಗ್ರೂಪ್ ಸಾಂಗ್ ಹಿಂಟ್ ಕೊಡುತ್ತವೆ.
ಕಾಳಿದಾಸನೇ ಇಲ್ಲಿ ರಸ್ತೆ ಆಗವ್ನೇ, ಪ್ರೀತಿ ಮಾಡೋರ್‍ಗೆ ಸರಿ ದಾರಿ ತೋರ್‌ತವ್ನೇ
ದುಡ್ಡಿದ್ರೆ ಲಲಿತ ಮಹಲ್, ಇಲ್ದಿದ್ರೆ ಒಂಟಿಕೊಪ್ಪಲ್ ಈ ಲವ್ವಿಗೇ... ಎಂಬ ಪಂಕ್ತಿಗಳು ಜನರಿಂದ ಮೆಚ್ಚುಗೆ ಗಳಿಸುತ್ತವೆ. 'ಈ ಭಯಾ ಬಿಸಾಕಿ ಲವ್ ಮಾಡಿ, ಈ ದಿಗಿಲ್ ದಬಾಕಿ ಲವ್ ಮಾಡಿ' ಅನ್ನೋ ಪಂಕ್ತಿಗಳು ಈ ಹಿಂದೆ ಎಲ್ಲೋ ಕೇಳಿದ್ದೇನೆ ಎನಿಸಿದರೂ ಮೇಕ್ ಅಪ್ ಚಿತ್ರದ ರಾಜೇಶ ಹಾಡಿದ 'ಬೋಲ್ ರಾಜಾ' ಹಾಡನಲ್ಲಿರುವ ಸಂಭ್ರಮವನ್ನು ನೆನಪಿಸಿತು. ಪದಗಳು, ವಾಕ್ಯಗಳ ವಿಶೇಷಗಳನ್ನು ಹೊರತುಪಡಿಸಿ, ನಟನಿಗೆ ತಕ್ಕಂತೆ ಬದಲಾಗುವ ಎಸ್.ಪಿ.ಬಿ ಧ್ವನಿ ಮುದನೀಡಿತು. 'ನರಸಿಂಹ ಸ್ವಾಮಿ ಪದ್ಯ ಇದೆ, ಅನಂತ್ ಸ್ವಾಮಿ ವಾದ್ಯ ಇದೆ ಲವ್ವಿಗೇ, ಈ ಲವ್ವಿಗೇ' ಅನ್ನೋದು sure laugh.

'ನೆನಪಿರಲಿ' ಟೈಟಲ್ ಸಾಂಗ್ 'ಒಲವು ಒಂಟಿಲ್ಲ' ಎಂದು ಆರಂಭವಾಗಿ ಹಲವಾರು ಸಂದೇಶಗಳನ್ನು ಪದೇ-ಪದೇ 'ನೆನಪಿರಲಿ' ಎಂದು ಶೋತೃಗಳನ್ನು ಮರೆಯದಿರುವಂತೆ ಚುಚ್ಚುವ ಪ್ರಯತ್ನವನ್ನು ಮಾಡುತ್ತದೆ. ಆದರೆ ಸಿನಿಮಾಗಳಿಂದ ಏನನ್ನು ಕಲಿಯುವುದಿಲ್ಲ ಎಂದು ಸಿನಿಮಾ ಮುಗಿದ ಮೇಲೆ ಝಾಡಿಸಿಕೊಂಡು ಎದ್ದೇಳುವ ಪರಿಪಾಠವನ್ನು ಪ್ರೇಕ್ಷಕರು ಇ(ಲ್ಲೂ)ನ್ನೂ ಬಿಟ್ಟಿಲ್ಲ!
'ದ್ರೌಪದಿ, ಷಟ್ಪದಿ, ಚೌಪದಿ' ಹಾಡಿನಲ್ಲಿ ಬರುವ ಹಲವು ರೂಪಾಂತರಗಳು ಇಷ್ಟವಾದವು.

ಹೇ ಬೆಳದಿಂಗಳೇ ಹಾಡಿನ ಚಿತ್ರೀಕರಣ ಚೆನ್ನಾಗಿದೆ, ಹಾಡುಗಳನ್ನು ಸ್ವಾರಸ್ಯಕರವಾಗಿ ಬರೆದಿದ್ದು, ಮಧ್ಯೆ-ಮಧ್ಯೆ ಇಂಗ್ಲೀಷಿನ ನೋ, ಫೂಲ್ ಅನ್ನೋ ಪದಗಳು ಆಧುನಿಕ ನೆರೆಹೊರೆಯನ್ನು ಪ್ರತಿನಿಧಿಸುತ್ತವೆ. ಈ ಹಾಡಿನಲ್ಲಿ ಬೇರೆ ಯಾರೂ ಈ ಪಾತ್ರಗಳ ಸಮಸ್ಯೆಗೆ ಚಿತ್ರದುದ್ದಕ್ಕೂ ಸ್ಪಂದಿಸಿದರೂ ಫಲಕೊಡದ ಪ್ರಯತ್ನಗಳನ್ನು ಈ ಕೆಳಗಿನ ವಾಕ್ಯಗಳಲ್ಲಿ ಮನೋಜ್ಞವಾಗಿ ಸೆರೆ ಹಿಡಿಯಲಾಗಿದೆ:

ನಾವಾಗಲಿ
ನೀವಾಗಲಿ
ಗೆಳೆಯರಾಗಲಿ
ಬಳಗವಾಗಲಿ
ಗುರುಗಳಾಗಲಿ
ಋಷಿಗಳಾಗಲಿ
ದೇವರಾಗಲಿ
ದಿಂಡರಾಗಲಿ
ತಲೆ ತೂರಿಸೋ ಹಾಗಿಲ್ಲಾ!

because

ಇದು ಹೃದಯಗಳಾ ವಿಷಯಾ,
ಈ ವಿಷಯಾ ವಿಷ ವಿಷಯಾ.


ಈ ಚಿತ್ರದಲ್ಲಿ ನೀವು ಗಮನಿಸಬೇಕಾದ ಹಲವು ಅಂಶಗಳಲ್ಲಿ ಯುವ ನಿರ್ದೇಶಕ-ನಿರ್ಮಾಪಕರ ಜೋಡಿಯೂ ಒಂದು. ಮೈಸೂರಿನಲ್ಲಿ ಇಂಜಿನಿಯರಿಂಗ್ ಮಾಡಿಯೂ ಕೆ.ಎ.ಎಸ್. ಪರೀಕ್ಷೆಯಲ್ಲಿ ಸಫಲರಾಗಿಯೂ ಚಿತ್ರರಂಗಕ್ಕೆ ಬಂದು ಹಲವಾರು ಚಿತ್ರಗಳ ಸಹನಿರ್ದೇಶನವನ್ನು ಮಾಡಿ ತಮ್ಮ ಚೊಚಲ ನಿರ್ದೇಶನದಲ್ಲಿ ಈ ಚಿತ್ರವನ್ನು ನೀಡಿದ್ದು "ರತ್ನಜ" (ಪ್ರಕಾಶ್) ಅವರನ್ನು ಬಹಳ ಎತ್ತರದಲ್ಲಿ ನಿಲ್ಲಿಸುತ್ತದೆ. ತಮ್ಮ ಬಾಲ್ಯದ ಗೆಳೆಯನ ಮೇಲೆ ವಿಶ್ವಾಸವಿರಿಸಿ ಹಣ ಸುರಿದ ನಿರ್ಮಾಪಕ ಅಜಯ್ ಗೌಡ ಅವರ ಹೆಚ್ಚುಗಾರಿಕೆಯನ್ನು ಮೆಚ್ಚಲೇಬೇಕು.

ಇನ್ನು ಪಾತ್ರವರ್ಗದಲ್ಲಿ ಎಲ್ಲರೂ ಚೆನ್ನಾಗಿ ತಮ್ಮ-ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅನಂತ್ ನಾಗ್, ಜೈಜಗದೀಶ್, ವಿಜಯಲಕ್ಷೀ ಅವರು ಎಂದಿನ ಲವಲವಿಕೆಯಲ್ಲಿದ್ದರೆ, ಪ್ರೇಮ್, ವರ್ಷಾ, ವಿದ್ಯಾ ಅವರು ಹೊಸಬರಾದರೂ ಬಹಳ ಕಾಲದಿಂದ ನೋಡಿರದ ಸ್ನೇಹಿತರ ಹಾಗೆ ತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಯುವ ಕಲಾವಿದರಲ್ಲಿನ ಲವಲವಿಕೆ, ಗತ್ತು, ಗಾಂಭೀರ್ಯ ಅವರನ್ನೆಲ್ಲ ಬಹಳ ಮುಂದೆ ಕೊಂಡುಯುತ್ತದೆ.

ಅಲ್ಲಲ್ಲಿ ಅಮೇರಿಕನ್ ಮಕ್ಕಳ ಗಲಾಟೆಯ ನಡುವೆ (ಆಗಾಗ್ಗೆ ಬೈದುಕೊಂಡು) ಈ ಚಿತ್ರವನ್ನು ನೋಡಿರುವೆನಾದರೂ ನನ್ನ 'ಅಂತರಂಗ'ದಲ್ಲಿ 'ನೆನಪಿರಲಿ' ಚಿತ್ರಕ್ಕೆ ಉತ್ತಮ ಚಿತ್ರವೆಂದು ಮೂರೂವರೆ ಸ್ಟಾರ್ ರೇಟಿಂಗ್ ಕೊಡುತ್ತೇನಾದರೂ ಈ ಕೆಳಗಿನ ಅಂಶಗಳನ್ನು ಕುರಿತು ಇನ್ನೂ ಯೋಚಿಸುವುದಕ್ಕಿದೆ:
೧) ಚಿತ್ರದುದ್ದಕ್ಕೂ ಗಹನವಾದ ಸಂಭಾಷಣೆಗಳು ಒಂದೇ ಹಿಲ್‌ಟಾಪ್, ಅಥವಾ ಬೆಟ್ಟ-ಗುಡ್ಡಗಳಲ್ಲಿನ ಅತಿ ಎತ್ತರವಾದ ಸ್ಥಳದಲ್ಲಿ ನಡೆಯೋದು ನಿರ್ದೇಶಕರ ಎತ್ತರವಾದ ನಿರೀಕ್ಷೆಯ ಧ್ಯೋತಕವಿರಬಹುದಾದರೂ, 'ತಾನು ಕುಂಚ ಕಲಾವಿದೆ' ಎಂದು ಚಾಮುಂಡಿ ಬೆಟ್ಟಕ್ಕೆ ಹೋಗೋ ಇಂದುವಿನ ನೆಪ ಬಿಂದುವಿಗೆ ಅನ್ವಯವಾಗದು.
೨) ಚಿತ್ರದುದ್ದಕ್ಕೂ ಅನವಶ್ಯಕವಾಗಿ 'ನೆನಪಿರಲಿ'ಯನ್ನು ತುರುಕಿಲ್ಲ, ಆದರೆ ಚಿತ್ರದ ಟೈಟಲ್‌ಗೂ, ಕಥೆಗೂ, ಬರುವ ಹಾಡುಗಳಿಗೂ ಹೋಲಿಸಿದಾಗ ಪ್ರೇಕ್ಷನಿಗೆ ಹಾಗನ್ನಿಸುವುದರಲ್ಲಿ ತಪ್ಪೇನೂ ಇಲ್ಲ.
೩) ಕನ್ನಡ ಸಿನಿಮಾಗಳಿಂದ ರಿಸರ್ಚ್ ಮಾಡಿ 'ಪ್ರೇಮಿಸೋದು' ಹೇಗೆ ಎಂದು ಕಲಿಯುವ ಸನ್ನಿವೇಶ ಇಷ್ಟವಾಯಿತು, ಆದರೆ ರಿಸರ್ಚ್‌ನಲ್ಲಿ ಬಂದದ್ದು ಜೋಡಿ ಹಾಡುಗಳು, ಆದರೆ ನಾಯಕ ಅನುಸರಿಸೋದು ಗ್ರೂಪ್ ಸಾಂಗ್. ಅದೂ ಅಲ್ಲದೇ ಅದೇ ತಾನೇ ಪ್ರೀತಿಸೋದನ್ನ ಕಲಿತ ಹುಡುಗ 'ಬನ್ರೀ, ನೋಡ್ರೀ, ನಾನು ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ' ಎಂದು ಹಾಡೋದು ಎಷ್ಟು ಸೂಕ್ತ?
೪) ಮೈಸೂರು, ಬೆಂಗಳೂರು ಹಾಗೂ ಮಂಗಳೂರಿನ ಬದುಕನ್ನು ನಾನು ಕಂಡ ನ್ಯೂ ಯಾರ್ಕ್ ನಗರದ ಬದುಕಿಗಿಂತಲು ಗಂಭೀರ ಹಾಗೂ ಗಹನವಾಗಿ ತೋರಿಸಿರುವುದು. ಆದರೆ ಚಿತ್ರದುದ್ದಕ್ಕೂ ಸಂಭಾಷಣೆ ಪ್ರಾಮುಖ್ಯ ಪಾತ್ರ ಪಡೆದು ಎಷ್ಟು ಬೇಕೋ ಅಷ್ಟಿರುವುದು.
೫) ತನ್ನ ಆತ್ಮೀಯ ಗೆಳೆಯನ ಸಾವಿನ ವಿಷಯ ಕೇಳಿದ ಕಿಶೋರನ ಮುಖವನ್ನು ಇನ್ನೂ ಚೆನ್ನಾಗಿ ತೋರಿಸಬೇಕಿತ್ತು. ಇಂಥ ದೃಶ್ಯಗಳನ್ನು ಸೆರೆಹಿಡಿಯುವುದಕ್ಕೆ ಮುಂಚೆ, ಅಭಿನಯಿಸುವುದಕ್ಕೆ ಮೊದಲು ಹಳೆಯ ರಾಜ್‌ಕುಮಾರ್ ಚಿತ್ರಗಳನ್ನು ಇನ್ನಷ್ಟು ನೋಡುವುದು ಒಳ್ಳೆಯದು.
೬) ತಂದೆಯಿಲ್ಲದೇ, ಕೆಲಸಕ್ಕೆ ಇನ್ನೂ ಸೇರಿರದ ಕಿಶೋರ್ ಮೊದಮೊದಲು ತೋರಿಸುವ ಐಶಾರಾಮಕ್ಕೆ ದುಡ್ಡೆಲ್ಲಿಂದ ಬಂತು ಎಂದು ಅನ್ನಿಸುವುದು.
೭) ಚಿತ್ರದ ಮಧ್ಯಂತರ ಮುಗಿಯುವವರೆಗೂ ದ್ವಿತೀಯಾರ್ಧದ ನಾಯಕಿಯ ಪರಿಚಯ ಮಾಡಿರದ ಹೊಸ ಪ್ರಯೋಗ.
೮) ಹಾಡುಗಳೆಲ್ಲ ಚೆನ್ನಾಗಿವೆ; ನಡು-ನಡುವೆ ಪ್ರಾಸಕ್ಕಾಗಿ ತಿಣುಕಿದಂತಿದೆ.
೯) ರಾಮಚಂದ್ರ ಅವರ ಛಾಯಾಗ್ರಹಣ ಬಹಳ ಚೆನ್ನಾಗಿದೆ, ಆದರೆ ಹಾಡಿನ ಚಿತ್ರೀಕರಣದ ನಡುವೆ ಅಲ್ಲಲ್ಲಿ ಬರುವ ಕ್ಯಾಮರಾ ಬದಲಾವಣೆಯಲ್ಲಿನ ಅವರ ಪ್ರಯೋಗ ಲೆನ್ಸ್ ಬದಲಾಯಿಸಲು ಮರೆತಿರುವಂತೆ ಕಂಡು ಬಂತು (ಅಥವಾ ಅದು ಈ ಥಿಯೇಟರ್‌ನ ಲಿಮಿಟೇಷನ್ ಇದ್ದರೂ ಇರಬಹುದು)
೧೦) ಚಿತ್ರದ ಅಂತ್ಯದಲ್ಲಿ ಬಳಸಿರುವ ತಂತ್ರದ ಬಗ್ಗೆ ಯೋಚಿಸಿದಾಗ ಬಹಳ ಸಮಯೋಚಿತವಾದ ನಿರ್ಧಾರವೆನಿಸಿತು.

ಈ ಚಿತ್ರವನ್ನು ನೋಡಿದರೆ ಬೆಂಗಳೂರು-ಮಂಗಳೂರಿಗಲ್ಲದಿದ್ದರೂ ಮೈಸೂರಿಗಂತೂ ಖಂಡಿತವಾಗಿ ಹೋಗಿಬಂದಂತಾಗುತ್ತದೆ. ಚಾಮುಂಡೀ ಬೆಟ್ಟವನ್ನು ಬಹಳ ಹತ್ತಿರದಿಂದ ತೋರಿಸಿಯೂ ಪಾತ್ರಗಳ ಮುಖಭಾವಕ್ಕೆ ಒತ್ತುಕೊಟ್ಟ ನಿರ್ದೇಶಕರ ಬಗ್ಗೆ ಮೆಚ್ಚುಗೆ ಬರುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ 'ನೆನಪಿರಲಿ' ಸಿನಿಮಾವನ್ನು ಸಹೃದಯ ಕನ್ನಡಿಗರು ನೋಡಬೇಕು, ನಾನು "ರತ್ನಜ" ಅವರ ಇನ್ನಷ್ಟು ಇಂತಹ ಚಿತ್ರಗಳನ್ನು ನಿರೀಕ್ಷಿಸುತ್ತೇನೆ.

11 comments:

Anonymous said...

postಗಳನ್ನ cut ಮಾಡಿ ಹಾಕಿದ್ರೆ ಚೆನ್ನಾಗಿರತ್ತೆ :)
ಮುಖ ಪುಟದಲ್ಲಿ ಬರೇ Teasers ಇರಬೇಕು.

Satish said...

ಮುಖಪುಟದಲ್ಲಿ ಬರೀ ಹೈ ಲೈಟ್ಸ್ ಹಾಕೋ ತಂತ್ರ'ಜ್ಞಾನ'ವನ್ನ ಹುಡುಕ್ತಾ ಇದ್ದೀನಿ, ಸಿಕ್ಕಿದ ಕೂಡ್ಲೇ ಪ್ರಯತ್ನಿಸ್ತೀನಿ.

ಜೊತೆಯಲ್ಲಿ ಒಂದು ಪೋಸ್ಟ್‌ನ್ನು 'ಎಷ್ಟು ಬಾರಿ ಓದಲಾಗಿದೆ' ಅನ್ನೋ ಕೊಂಡಿ ಇದ್ರೆ ಇನ್ನೂ ಚೆನ್ನಾಗಿರುತ್ತೆ ಅಲ್ವಾ?

ನನಗೂ ಮುಖಪುಟ 'ಅಂತರಂಗ'ದ ಭಾರದಿಂದ ಕುಸೀತಾ ಇದೆ ಅನ್ನಿಸ್ತು!

Anonymous said...

ನೆನಪಿರಲಿ - ನಿಮ್ಮೂರಿಗೆ ಆಗಲೇ ಬಂದಿತೇ? ನಾನು ಈ ಸಿನಿಮಾ ಇಲ್ಲಿ ಪ್ರದರ್ಶನವಾಗುವ ದಿನಕ್ಕಾಗಿ ಕಾಯುತ್ತಿದ್ದೇನೆ. ಸಿನಿಮಾ ನೋಡಿಲ್ಲವಾದ್ದರಿಂದ ಆ ಬಗ್ಗೆ ಏನೂ ಬರೆಯಲಾರೆ. ಹಾಡುಗಳನ್ನು ಟೀವಿಯಲ್ಲಿ ನೋಡಿದ್ದೆ. ಎಲ್ಲಾ ತುಂಬಾ ಚೆನ್ನಾಗಿವೆ. ದ್ರೌಪದಿ... ಹಾಡು ಬಹಳ ಬಾರಿ ಇಷ್ಟಪಟ್ಟು ಕೇಳಿದ್ದೆ. ಆ ಹಾಡಿನಲ್ಲಿ "ಐತೆ" ಎಂದು ಬರುತ್ತದೆಯೇ? ಕೇಳಿದ ಹಾಗಿಲ್ಲವಲ್ಲಾ? ಎಲ್ಲಿ ಎಂದು ತಿಳಿಸುತ್ತೀರಾ? "ಅಜಂತ ಎಲ್ಲೋರಾ" "ಇಂದು ಬಾನಿಗೆಲ್ಲ ಹಬ್ಬ" - "ಹೇ ಬೆಳದಿಂಗಳೇ" "ಕುಕ್ಕರಹಳ್ಳಿ ಕೆರೆ" - ಎಲ್ಲಾ ಹಾಡುಗಳು ತುಂಬಾ ಇಷ್ಟವಾದವು.

Anveshi said...

ಅಬ್ಬ... ಪಿಕ್ಚರ್ ನೋಡಿ ಟೈಟಲನ್ನು ಅಕ್ಷರಶಃ ಪಾಲಿಸಿದಂತಿದೆಯಲ್ಲ....! ಎಲ್ಲವನ್ನು ನೆನಪಿನಲ್ಲಿಟ್ಟುಕೊಂಡು ಬ್ಲಾಗಿಗೆ ಇಳಿಸಿಬಿಟ್ರಲ್ಲಾ....!

:)
:D
:-)
ಇದು ಹೃದಯಗಳ ವಿಷ-ಯಾ
ಅಂತರಂಗಕ್ಕೆ ಇಳಿದುಕೊಂಡಿದ್ಹೇಗೆ?

Satish said...

sritri ಅವರೇ,

ನಾನು ಹಾಡನ್ನು ಸರಿಯಾಗಿ ಕೇಳಿಸಿಕೊಳ್ಳದೆಯೂ ಇರಬಹುದು - I see ಎನ್ನುವುದು 'ಐತೆ' ಎಂದು ಕೇಳಿರಲಿಕ್ಕೂ ಸಾಕು!

ಪೋಸ್ಟ್‌ನಲ್ಲಿ ಆವರಣದೊಳಗೆ I see ಎಂದು ಬರೆದವನು ಸುಮ್ಮನೆ ಬಿಟ್ಟೆ, ನೀವು ತಿದ್ದು ಎಂದರೆ ತಿದ್ದುತ್ತೇನೆ :-)

Satish said...

ಅನ್ವೇಷಿಗಳೇ,

ಏನು ಮಾಡೋದು ಹೇಳಿ ದುಡ್ಡು ಕೊಟ್ಟು ನೋಡಿದ ತಪ್ಪಿಗೆ ಬರೆಯಲೇ ಬೇಕಲ್ಲ!

ಅಂದ ಹಾಗೆ ನೀವಿರೋ ಮದ್ರಾಸ್‌ನಲ್ಲಿ ಇಂಥ ಹೃದಯಗಳ ವಿಷಯ ಬರುತ್ತದೆಯೋ? ಅಥವಾ ನೀವೂ ಕೂಡ ನನ್ನ ಹಾಗೆ ಪರ'ದೇಶಿ'ಗಳಾಗಿದ್ದೀರೋ?

'ಅಂತರಂಗದ'ಲ್ಲಿ ಬರೀ ವಿಷಯಗಳಿಗೆ ಮಾತ್ರ ಸ್ಥಾನ, 'ವಿಷ'ಕ್ಕೆ ಯಾವ ಆಸ್ಪದವೂ ಇಲ್ಲ.

Anonymous said...

ತಿದ್ದಿ, ತಿದ್ದದೆ ಬೇರೆ ವಿಧಿ ಇಲ್ಲ ನಿಮಗೆ :) ಯಾಕೆಂದರೆ ಒಂದು ತಪ್ಪಿನ ಜೊತೆ ಇನ್ನೊಂದು ಈಗ ಇನ್ನೊಂದು ತಪ್ಪು! ಐತೆ, I see ಯಾವುದೂ ಇಲ್ಲ ಈ ಹಾಡಿನಲ್ಲಿ .

ಈ ಹಾಡಿನ ಪೂರ್ಣ ಸಾಹಿತ್ಯ ಈಗ ತುಳಸಿವನದಲ್ಲಿದೆ ನೋಡಿ. ಬಹುಶ: "ಆಯ್ಕೆ ಮಹಾ ಸಂಕಟ" ನಿಮಗೆ ಆ ರೀತಿ ಕೇಳಿಸಿರಬಹುದು.

"ಸುಖದ ಬಹುಮಾನ ಉಚಿತ ಕೊಡುವಂತ
ಪಂಚಭೂತಗಳ ಜರಿವುದೆಂತೋ" ಮುಂತಾದ ಮೋಡಿ ಮಾಡುವ ಸಾಲುಗಳಿರುವ ಈ ಹಾಡು ನನಗೆ ಬಾಯಿಪಾಠ :)

Satish said...

sritri ಅವರೇ,

ಮಹಾ ಪ್ರಚಂಡರಪ್ಪಾ ನೀವು!

ತಪ್ಪನ್ನ ತಿದ್ದಿದ್ದಕ್ಕೆ ನಾನು ಅಭಾರಿ...ಇನ್ನು ಮುಂದೆ ಇಂತಹ ತಪ್ಪುಗಳಾಗಲಿ, ಆದರಿಂದಲಾದರೂ ತುಳಸೀವನದಲ್ಲಿ ಪೂರ್ಣ ಸಾಹಿತ್ಯ ಸಿಗಲಿ ಅನ್ನೋ ಆಶಯದಿಂದ...

ನೀವಂದುಕೊಂಡಿರಬಹುದು ನಾನು ಅನ್ವೇಷಿಗಳಂತಾಗಿ ಬಿಟ್ಟ್ನೇ ಎಂದು, ಇಲ್ಲ - ಆದರೆ, ಅನ್ವೇಷಿಗಳ ಪ್ರಭಾವ ಯಾರ ಮೇಲಾಗೋದಿಲ್ಲ, ನೀವೇ ಹೇಳಿ!

Anonymous said...

ಬಹುಶಃ ಕನ್ನಡದಲ್ಲಿ ಇತ್ತಿತ್ತಲಾಗಿ ಮಚ್ಚಿನ ಮತ್ತು ಲಾಂಗಿನ ಚಿತ್ರಗಳು ಬರುತ್ತಿರುವುದರಿಂದಲೋ ಏನೋ... ನಮ್ಮೂರಿಗೆ ಕನ್ನಡ ಚಿತ್ರಗಳು ಇಣುಕಿಯೂ ನೋಡುವ ಧೈರ್ಯ ಮಾಡುತ್ತಿಲ್ಲ.

ಈ ಕಾರಣಕ್ಕಾಗಿ ಅಲ್ಲಲ್ಲಿ ನಕ್ಷತ್ರಗಳಂತೆ ಕಾಣಿಸಿ ದಿಢೀರ್ ಮಾಯವಾಗಿಬಿಡುವ ಇಂಥ ಚಿತ್ರಗಳೂ ಕೂಡ ಮಿಸ್ ಆಗ್ಬಿಡತ್ವೆ.

ಆಮೇಲೆ.... ಆ....ಮೇಲೆ.... ಆಮೇಲೇ.....
ನೀವೂ.... ತಪ್ ಮಾಡ್ಬಿಟ್ಟೂ.... ನಿಮ್ಮ Cboxನಲ್ಲಿರುವ ಕಿಟಕಿಯಲ್ಲಿ ಕೆನ್ನಾಲಿಗೆ ಹೊರಹಾಕಿದ ಅನ್ವೇಷಿಯತ್ತಾ.... ಕಿರುಬೆರಳೂ... ತೋರಿಸೋದ್ಯಾಕೆ?
:-D
:-))

Anonymous said...

I really enjoyed looking at your site, I found it very helpful indeed, keep up the good work.
»

Anonymous said...

What a great site, how do you build such a cool site, its excellent.
»